- ವಿಮರ್ಶೆಯ ವಿಮರ್ಶೆ ಕೃತಿಯಿಂದ
ಭಾರತದಲ್ಲಿನ ಆಸ್ತಿಕ - ನಾಸ್ತಿಕವಾದಿ ರಾಜಕಾರಣ ಮತ್ತು ಮಹಾತ್ಮ ಗಾಂಧೀಯವರ “ಗುರಿ ಮತ್ತು ದಾರಿ" ನಿಯಮದ ಕುರಿತಾಗಿ ತೇಜಸ್ವಿಯವರು ಹೇಳಿದ್ದು "ಭಾರತದ ಸಮಕಾಲೀನ ರಾಜಕಾರಣದಲ್ಲಿ ಎರಡು ಬಗೆಯ ಮಾದರಿಗಳಿಂದ ಪ್ರಭಾವಿತರಾದ ಪಕ್ಷಗಳನ್ನು ಕಾಣಬಹುದು. ಆರೆಸ್ಸೆಸ್, ಭಜರಂಗದಳ, ವಿಶ್ವಹಿಂದೂ ಪರಿಷತ್, ಶಿವಸೈನಿಕರು, ಭಾರತೀಯ ಜನತಾ ಪಕ್ಷ ಮೊದಲಾದವರೆಲ್ಲ ಮೊದಲನೇ ಬಣದ ಅಂದರೆ ಆಸ್ತಿಕ ಸಿದ್ಧಾಂತಿಗಳು. ಇವರಿಗೆ ವಿರುದ್ಧವಾಗಿರುವ ಮಾರ್ಕ್ಸ್ ವಾದಿಗಳು, ಮಾವೊವಾದಿಗಳು, ಲೆನಿನಿಸ್ಟರು ಮೊದಲಾದವರೆಲ್ಲ ಎರಡನೇ ಬಣದ ಸಿದ್ಧಾಂತಿಗಳು. ಒಬ್ಬರು ದೇವರು ಧರ್ಮ ಕರ್ಮ ಸ್ವರ್ಗ-ನರಕಗಳನ್ನು ನಂಬುವ ಆಸ್ತಿಕರು. ಇನ್ನೊಬ್ಬರು ದೇವರು ಧರ್ಮಗಳನ್ನು ತಿರಸ್ಕರಿಸುವ ವಿಜ್ಞಾನದಲ್ಲಿ ನಂಬಿಕೆಯುಳ್ಳ ನಾಸ್ತಿಕರು.
ಇವರಿಬ್ಬರು ದಿನನಿತ್ಯದ ರಾಜಕಾರಣದಲ್ಲಿ ಪರಸ್ಪರ ವೈರಿಗಳಾಗಿ ನಮಗೆ ತೋರಿದರೂ ಇವರ ಆಲೋಚನಾ ಕ್ರಮದಲ್ಲಿ ಮಾತ್ರ ಅಚ್ಚರಿ ಹುಟ್ಟಿಸುವಂತಹ ಸಾದೃಶ್ಯಗಳಿರುವುದು ಕಾಣುತ್ತದೆ. ಇವರಿಬ್ಬರೂ ತಮ್ಮ ಕ್ರಿಯೆಯ ಅಂತಿಮ ಗುರಿಯನ್ನು ವರ್ತಮಾನಕ್ಕೆ ಸಂಬಂಧವಿಲ್ಲದ ಅಮೂರ್ತ ಪಾರಮಾರ್ಥಿಕ ಪ್ರಪಂಚದಲ್ಲೋ ಇಲ್ಲವೇ ಅಷ್ಟೇ ಅಮೂರ್ತವಾದ ಭವಿಷ್ಯತ್ತಿನಲ್ಲೋ ಕಾಣುತ್ತಾರೆ. ವರ್ತಮಾನದ ವಾಸ್ತವವನ್ನು ಒಬ್ಬರು ಜನ್ಮಾಂತರಗಳ ಅನಿವಾರ್ಯ ಬೆಳವಣಿಗೆಯೆಂದೂ ಇನ್ನೊಬ್ಬರು ಚಾರಿತ್ರಿಕ ಬೆಳವಣಿಗೆಯ ಅನಿವಾರ್ಯ ಬೆಳವಣಿಗೆ ಎಂದೂ ಪ್ರತಿಪಾದಿಸುತ್ತಾರೆ. ಇಬ್ಬರೂ ವಾಸ್ತವ ಅಸಹನೀಯವಾದಷ್ಟೂ ತಮ್ಮ ಬಿಡುಗಡೆಯ ದಿನ ಹತ್ತಿರವಾಗುತ್ತಿದೆ ಎಂದು ಭಾವಿಸುತ್ತಾರೆ. ಧಾರ್ಮಿಕ ಸಿದ್ಧಾಂತಿಗಳು ದುರುಳರು, ದುಷ್ಟರು ಹೆಚ್ಚಾದಷ್ಟೂ ಪಾಪದ ಕೊಡ ತುಂಬಿದಷ್ಟೂ, ಭಗವಂತ ಅವತರಿಸಿ ದುಷ್ಟಶಿಕ್ಷಣೆ ಮತ್ತು ಶಿಷ್ಟರ ರಕ್ಷಣೆಗೆ ಬರುವ ದಿನ ಹತ್ತಿರವಾಗುತ್ತಿದೆ ಎಂದು ಭಾವಿಸುತ್ತಾರೆ. ನಾಸ್ತಿಕವಾದಿಗಳು ಶೋಷಣೆ ಬಡತನ ಎಷ್ಟು ಬಡವರೆಲ್ಲಾ ಒಟ್ಟಾಗಿ ಸಂಭವಿಸುವ ಜಾಗತಿಕ ಕ್ರಾಂತಿ ಮತ್ತು ನಿಸ್ವಾರ್ಥಿ ಮನುಷ್ಯನ ಉಗಮ ಹತ್ತಿರಾಗುತ್ತಿದೆಯೆಂದು ಹೇಳುತ್ತಾರೆ. ಎಂದರೆ ಸಮಕಾಲೀನ ಸಮಸ್ಯೆಗಳನ್ನು ಎದುರಿಸಿ ಬಗೆಹರಿಸಬೇಕಾದ ತುರ್ತು ಇಬ್ಬರಿಗೂ ಅಷ್ಟು ಮುಖ್ಯವಾದುದೇ ಅಲ್ಲ. ಏಕೆಂದರೆ ಉಲ್ಬಣಿಸಿದ ಸಮಸ್ಯೆ ತಂತಾನೇ ಪರಿಹಾರವಾಗುವ ಘಳಿಗೆ ಹತ್ತಿರವಾಗುತ್ತದೆ !
ಗಾಂಧೀಯವರು ಹೇಳಿದ ಅತೀ ಸ್ಪಷ್ಟ ಸರಳ ನಿಯಮ "ದಾರಿ ಮತ್ತು ಗುರಿ" (End and Means) ಸೈದ್ಧಾಂತಿಕತೆಯ ಅಗತ್ಯವನ್ನೇ ನಿರಾಕರಿಸುತ್ತದೆ. ದಿನನಿತ್ಯದ ರಾಜಕಾರಣದಲ್ಲಿ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸಲು ನೂರಾರು ವರ್ಷಗಳ ಚಾರಿತ್ರಿಕ ಹಿನ್ನೆಲೆಯಾಗಲೀ ಜನ್ಮ ಜನ್ಮಾಂತರಗಳ ಆಧ್ಯಾತ್ಮಿಕ ಹಿನ್ನೆಲೆಯಾಗಲೀ ಪರಿಗಣಿಸಿ ಲೆಕ್ಕಾಚಾರ ಹಾಕುವ ಅಗತ್ಯವೇ ಇಲ್ಲ. ಅದೇ ರೀತಿ ಇದು ಭವಿಷ್ಯತ್ತಿನಲ್ಲಿ ಪರಲೋಕದ ಪುಣ್ಯಾರ್ಜನೆಗೆ ಸಹಕಾರಿಯೇ ಎಂದಾಗಲೀ, ಜಾಗತಿಕ ಕ್ರಾಂತಿಯ ನವಸಮಾಜ ನಿರ್ಮಾಣದ ಹೆಜ್ಜೆ ಎಂದಾಗಲೀ ಪರಿಗಣಿಸಬೇಕಾಗಿಲ್ಲ. ಭೂತ ಭವಿಷ್ಯತ್ತುಗಳೊಂದಿಗೆ ವರ್ತಮಾನವನ್ನು ಸಿಕ್ಕಿಸುವ ಕೊಂಡಿಯನ್ನು ಗಾಂಧೀಯವರ "ದಾರಿ ಮತ್ತು ಗುರಿ ನಿಯಮ" ಕತ್ತರಿಸಿ ಹಾಕುತ್ತದೆ. ನಿಮ್ಮಲ್ಲಿ ಒಳ್ಳೆಯವನಾಗಬೇಕೆಂಬ, ಎಲ್ಲರಿಗೂ ಒಳ್ಳೆಯದಾಗಬೇಕೆಂದು ಸರಳ ಮಾನವೀಯ ಸಜ್ಜನಿಕೆಯೊಂದು ಇದ್ದರೆ ಸಾಕು ಸೈದ್ಧಾಂತಿಕ ವಿಶ್ಲೇಷಣೆಯ ಅಗತ್ಯವೇ ಇಲ್ಲ. ಇದು ಮನುಷ್ಯಪ್ರಜ್ಞೆಯ ಸಹಜ ಸ್ಥಿತಿ ಎಂದೆನಿಸುತ್ತದೆ. ಮನುಷ್ಯ ದೈನಂದಿನ ಜೀವನದಲ್ಲಿ ತಂದೆತಾಯಿ ಹೆಂಡತಿ ಮಕ್ಕಳ ಕುಟುಂಬ ನಿರ್ವಹಣೆಯಲ್ಲಿ ಬಳಸದ ಸೈದ್ಧಾಂತಿಕ ವಿಶ್ಲೇಷಣೆಯನ್ನು ರಾಜಕಾರಣಕ್ಕೆ ಮಾತ್ರ ಅನ್ವಯಿಸುವುದು ಅಪ್ರಸ್ತುತ.
ನಾನು ಮೊದಲೇ ವಿವರಿಸಿದ ಆಸ್ತಿಕವಾದಿ ಮತ್ತು ನಾಸ್ತಿಕವಾದಿ ಎರಡು ರೀತಿಯ ಸಿದ್ಧಾಂತಗಳು, ಪರಸ್ಪರ ವಿರೋಧಿಗಳಂತೆ ಬದ್ಧದ್ವೇಷಿಗಳಂತೆ ನಟಿಸುತ್ತಾ ಬೆಳೆಯುತ್ತಿರುವ, ಆದರೆ ಆಳದಲ್ಲಿ ಒಂದೇ ಆಗಿರುವ ಚಿತ್ತವೃತ್ತಿಗಳು. ಆದ್ದರಿಂದಲೇ ಗಾಂಧೀಯವರನ್ನು ಜಿಹಾದಿಗಳೂ, ಸನಾತನ ಹಿಂದೂವಾದಿಗಳೂ, ಮಾರ್ಕ್ಸ್ ವಾದಿಗಳೂ ಒಟ್ಟಾಗಿ ದ್ವೇಷಿಸಿ, ತಮ್ಮ ನಿಜವಾದ ವಿರೋಧಿ "ದಾರಿ ಮತ್ತು ಗುರಿ" ನಿಯಮ ಹೇಳುತ್ತಿರುವ ಗಾಂಧೀ ಎಂದು ಸರಿಯಾಗಿಯೆ ಗುರುತಿಸಿದರು. ಆದರೆ ಈ ತಾತ್ವಿಕ ಸಂಘರ್ಷವನ್ನು ಗಾಂಧೀಯವರನ್ನು ತೀರಿಸಿಯೇ ಬಿಡುವ ಮಟ್ಟಕ್ಕೆ ಹಿಂದುತ್ವವಾದಿಗಳು ಒಯ್ದದ್ದು ಅದು ಕಳೆದ ಶತಮಾನದ ಅತಿ ಕ್ರೂರ ವ್ಯಂಗ್ಯ.
No comments:
Post a Comment