Monday, 8 October 2018

ನೆನಪಿನ ಮಾಲೆ - 2


ಅದಾಗಲೇ ನಮ್ಮೂರು ಆಧುನೀಕರಣದ ತೆಕ್ಕೆಗೆ ಸಿಲುಕಿಕೊಂಡು ಬಹಳ ಕಾಲವಾಗಿತ್ತು. ನಮ್ಮ ತಾತ, ಅಪ್ಪ-ಅಮ್ಮ ವ್ಯವಸಾಯ ಮಾಡಿ ಪಳಗಿದವರಾಗಿದ್ದರೂ, ನಾವು ಹುಟ್ಟಿದ ನಂತರ ನಮ್ಮೂರಿನಲಿ ಕೃಷಿ ಚಟುವಟಿಕೆಗಳು ಬಹುತೇಕ ಅಳಿದು ಹೋಗಿದ್ದವು. ಹಾಗಾಗಿ ನನಗೆ ಬೇಸಾಯದ ಆಗು-ಹೋಗುಗಳನ್ನು ಅನುಭವಿಸುವ ಸದಾವಕಾಶ ಸಿಗಲಿಲ್ಲ. ಕಾಂಕ್ರೀಟು ರಸ್ತೆಗಳು, ಗಗನಚುಂಬಿಯಾಗಿ ರೂಪುಗೊಳ್ಳುತ್ತಿದ್ದ ಕಟ್ಟಡಗಳು ಮನೆಯ ಮುಂದೆ ಸಸಿ ನೆಟ್ಟು, ಅದಕ್ಕೆ ನೀರೆರೆದು ಪೋಷಿಸುವ ನಮ್ಮ ಕೊನೆಯ ಅವಕಾಶಕ್ಕೂ ತಣ್ಣೀರೆರಚಿದ್ದವು. ನಾವು ತೋಟಗಳನ್ನು ನೋಡುತ್ತಿದ್ದೆವಾದರೂ ಅವು ನಮ್ಮದಾಗಿರಲಿಲ್ಲ. ಶಾಲೆಯಲ್ಲಿ, ನಮ್ಮೂರಿನ ಕಾನ್ವೆಂಟುಗಳಲ್ಲಿ ಕೈತೋಟಗಳಿದ್ದರೂ ನಾವು ಅದರೊಳಗೆ ಹೋಗುವ ಹಾಗಿರಲಿಲ್ಲ. ಅಂತಹ ವಿಷಮ ಕಾಲಘಟ್ಟದಲ್ಲಿ ಆಡಿ ಬೆಳೆದ ನಮಗೆ ಪರಿಸರವೆಂದರೇನು? ತೋಟ ಮಾಡುವುದು ಹೇಗೆ, ಸಸಿ ನೆಟ್ಟು ಅದನ್ನು ಪೋಷಿಸುವ ಬಗ್ಗೆಯನ್ನು ಕಲಿಸಿದ್ದು ನನ್ನ ಸೆಮಿನರಿ!
*************
ನೀವು ಯಾವುದೇ ಕ್ರೈಸ್ತ ಭವನಗಳು ಅಥವ ಕಟ್ಟಡಗಳನ್ನು ನೋಡಿ, ಅದು ಚರ್ಚ್ ಆಗಿರ ಬಹುದು, ಕಾನ್ವೆಂಟ್ ಅಥವ ಸೆಮಿನರಿಯಾಗಿರ ಬಹುದು ಮೊದಲಿಗೆ ಅವುಗಳೊಳಗೆ ಪ್ರವೇಶಿಸುವ ಮುನ್ನ ನಿಮ್ಮ ಕಣ್ಣುಗಳಿಗೆ ಕಾಣುವುದು ಸುಂದರ ಹೂದೋಟಗಳು. ಹಲವು ಬಗೆಯ ಸಸ್ಯ ಸಮೋಸ್ತಮಗಳಿಂದ ಈ ಹೂದೋಟಗಳು ಕಂಗೊಳಿಸುತ್ತಿರುತ್ತವೆ. ಅದೇ ರೀತಿ ನಾನಿದ್ದ ಸೆಮಿನರಿಯ ಹೂದೋಟವೂ ಕೂಡ ಹಲವು ರೀತಿಯ ಸಸ್ಯ ಪ್ರಭೇದಗಳಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು. ನಾನು ಸೆಮಿನರಿ ಸೇರಿಕೊಂಡಾಗ ಫಾದರ್ ಆ್ಯಂಟನಿ ಕೊರೆಯ ಸೆಮಿನರಿಯ ನಿರ್ದೇಶಕರಾಗಿದ್ದದು ನಾನೆಷ್ಟೋ ವಿಷಯಗಳನ್ನು ಅವರಿಂದ ಕಲಿತುಕೊಳ್ಳಲು ಪೂರಕವಾಯಿತು.
*************************
ದಿವಂಗತ ಫಾದರ್ ಕೊರೆಯ ಬಹಳ ಅನುಭವಿ. ಯುವಕನಾಗಿದ್ದ ದಿನಗಳಿಂದಲೇ ಛತ್ತೀಸಘಡ ಹಾಗೂ ಒರಿಸ್ಸಾದ ಕಾಡುಗಳಲ್ಲಿ ಕೆಲಸ ಮಾಡಿ ಅನುಭವವಿದ್ದ ಅವರಿಗೆ ಸಸ್ಯ ಸಂಪತ್ತಿನ ಬಗ್ಗೆ ಅಗಾಧ ಜ್ಞಾನವಿತ್ತು. ಅರವತ್ತರ ಆಸುಪಾಸಿನಲ್ಲಿದ್ದ ಅವರಲ್ಲಿ ಬಹಳಷ್ಟು ವಿಚಾರಗಳ ಅಪರಿಮಿತ ಅನುಭವ ವಿಜೃಂಭಿಸುತ್ತಿತ್ತು. ಆ ಇಳಿ ವಯಸ್ಸಿನಲ್ಲಿಯೂ ತೋಟ ಮಾಡುವುದರಲ್ಲಿ, ಸಸಿ ನೆಡುವುದರಲ್ಲಿ ಅವರಿಗಿದ್ದ ಉತ್ಸಾಹವನ್ನು ಕಂಡು ನಾವೆಷ್ಟೋ ಬಾರಿ ಬೆರಗಾಗುತ್ತಿದ್ದೆವು! ನಮ್ಮ ಪರಿಸರ ಸೃಷ್ಟಿಕರ್ತನ ಒಂದು ಅದಮ್ಯ ಸೃಷ್ಟಿ. ತನ್ನೊಳಗೆ ಸಾವಿರಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡು, ಸದಾ ಮನುಷ್ಯನನ್ನು ಒಂದಲ್ಲಾ ಒಂದು ರೀತಿ ಆಕರ್ಷಿಸುತ್ತಿರುತ್ತದೆ. ಬಳಲಿ ಬಂದವನಿಗೆ ಇದು ಮಮತೆಯ ಮಡಿಲಾಗ ಬಲ್ಲದು, ಆಶ್ರಯವನ್ನರಸಿ ಬಂದವನ ಭರವಸೆಯ ಸೂರಾಗ ಬಲ್ಲದು. ಆದರೆ ಇದೇ ಪರಿಸರವೆಂಬ ಸೃಷ್ಟಿಕರ್ತನ ವರದಾನ, ತನ್ನೊಡಲನ್ನು ಮನುಷ್ಯ ವಿಪರೀತ ಬಗೆದಾಗ ವಿರಾಟ ಪರ್ವವಾಗುವುದರಲ್ಲಿ ಎಳ್ಳಷ್ಟು ಸಂಶಯವೂ ಬೇಡ.
***************************
ನೀವು ಒಮ್ಮೆಯಾದರೂ ಗೋವಕ್ಕೆ ಮಳೆಗಾಲದಲ್ಲಿ ಭೇಟಿ ನೀಡಬೇಕು. ಆ ಗೋವಾದ ಮಳೆಯಲ್ಲಿ ಒಮ್ಮೆ ನೆಂದರಂತೂ ಅಂದೊಂಥರ ಲೈಫ್ ಎಕ್ಸಪೀರಿಯನ್ಸ್. ಅಲ್ಲಿಯವರೆಗೂ ನಾನು ಅಂತಹ ಮಳೆಯನ್ನು ಕಂಡಿರಲಿಲ್ಲ. ಅತ್ತ ಸಮುದ್ರದ ಭವ್ಯ ಭೋರ್ಗರೆತ ಇತ್ತ ಜಿಟಿಜಿಟಿ ಮಳೆಯ ಆರ್ತನಾದ. ಇವೆಲ್ಲವೂ ಸೇರಿ ನಮ್ಮನ್ನು ಒಂದು ರೀತಿಯ ಭ್ರಮಾಲೋಕಕ್ಕೆ ತಳ್ಳಿಬಿಡುತ್ತಿತ್ತು. ಮಳೆಗಾಲದ ರಭಸ ಎಷ್ಟಿರುತ್ತಿತ್ತೆಂದರೆ ನಾವು ಹೊರಗಡೆ ಬರಲಾಗುತ್ತಿರಲಿಲ್ಲ. ಪ್ರತಿದಿನ ಮಾಡುವ ಒಂದು ಗಂಟೆ ಕೆಲಸವೂ ಇರುತ್ತಿರಲಿಲ್ಲ. ಇದಕ್ಕೆ ಪ್ರತಿಯಾಗಿ ಮಳೆಗಾಲ ಮುಗಿಯುವವರೆಗೂ ನಮ್ಮ ಎರಡು ಬಿಲ್ಡಿಂಗುಗಳನ್ನು ಸ್ವಚ್ಛ ಮಾಡುವುದೇ ನಮ್ಮ ನಿತ್ಯದ ಕಾಯಕವಾಗಿರುತ್ತಿತ್ತು. ಒಳಗೆ ಇರುತ್ತಿದ್ದ ಪಾಟುಗಳ ಆರೈಕೆ ಮಾತ್ರ ಆಗ್ಗಿಂದಾಗ್ಗೆ ನಡೆಯುತ್ತಿತ್ತು. ಪ್ರತಿ ಪಾಟಿಗೂ ಎರಡು ಲೋಟ ಮಾತ್ರ ನೀರು ಹಾಕ ಬೇಕೆಂದು ನಮ್ಮ ಬಾಸ್ ಫಾದರ್ ಕೊರೆಯ ಫರ್ಮಾನು ಹೊರಡಿಸಿದ್ದರು.
***************************
ಫಾದರ್ ಕೊರೆಯ ನಮ್ಮ ಸೆಮಿನರಿಯ ಹೂದೋಟದಲ್ಲಿ ಬಗೆ ಬಗೆಯ ಎಕ್ಸಪರಿಮೆಂಟುಗಳನ್ನು ಮಾಡುತ್ತಿದ್ದರು. ಒಂದು ಪ್ರಭೇದದ ತಳಿಗೆ ಮತ್ತೊಂದು ಪ್ರಭೇದದ ತಳಿಯನ್ನು ಬಿಗಿಯಾಗಿ ಕಟ್ಟಿ ಅದು ಯಾವ ರೀತಿಯ ಸಸ್ಯವಾಗಿ ಮಾರ್ಪಡುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರ ಸಲಹೆ, ಸೂಚನೆಗಳ ಮೇರೆಗೆ ನಾವು ಕಾರ್ಯ ನಿರ್ವಹಿಸ ಬೇಕಿತ್ತು. ತಾವು ಕೈಗೆತ್ತಿಕೊಂಡ ಕೆಲಸವನ್ನು ಬಹಳ ಶ್ರಧ್ಧೆಯಿಂದ ಮಾಡುತ್ತಿದ್ದ ಫಾದರ್ ಕೊರೆಯ ಅಸಾಧ್ಯವಾದುದನ್ನು ಸಾದ್ಯವೆನಿಸಿ ಬಿಡುವಂತಹ ಇಚ್ಛಾಶಕ್ತಿಯನ್ನು ಹೊಂದಿದ್ದರು. ಕೆಲವೊಮ್ಮೆ ಇವರ ಎಕ್ಸಪರಿಮೆಂಟ್ ಹುಚ್ಚು ತೀರಾ ಅತಿರೇಕಕ್ಕೆ ಹೋದಾಗ ಒಮ್ಮೊಮ್ಮೆ ನಮಗೆ ಕಸಿವಿಸಿಯಾಗುತ್ತಿತ್ತು. ಅದನ್ನು ಬಿಟ್ಟರೆ ಫಾದರ್ ಕೊರೆಯ ಒಂದು ನಿರುಮ್ಮಳ ಜೀವಿ. ತಮ್ಮ ಪಾಡಿಗೆ ತಮ್ಮ ಕೆಲಸಗಳನ್ನು ಮಾಡಿಕೊಂಡು, ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ತೊಡಗಿಕೊಳ್ಳುತ್ತಿದ್ದರು. ಉತ್ತಮ ಹಾಸ್ಯಪ್ರಜ್ಞೆ ಹೊಂದಿದ್ದ ಅವರು ನಮ್ಮೆಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಪರಿಸರದ ಪ್ರಾಮುಖ್ಯತೆ, ಗಿಡ ನೆಡುವ ಹವ್ಯಾಸ, ಅವುಗಳಿಗೆ ನೀರೆರೆದು ಪೋಷಿಸುವುದನ್ನು ಕಲಿಸಿ ಕೊಟ್ಟಿದ್ದೇ ಫಾದರ್ ಕೊರೆಯ. ಕಾಡಿಲ್ಲದೆ ನಾಡಿಲ್ಲ, ಮರ ಗಿಡಗಳಿಲ್ಲದೆ ಬದುಕಿಲ್ಲ ಎಂಬ ಮರೆಯಲಾಗದ ಪಾಠವನ್ನು ಕಲಿಸಿಕೊಟ್ಟ ನನ್ನ ಗುರು ಫಾದರ್ ಕೊರೆಯ ಕೆಲವು ತಿಂಗಳುಗಳ ಹಿಂದೆಯಷ್ಟೇ ಧೈವಾದೀನರಾದದ್ದು ಅಘಾತಕಾರಿಯೇ ಸರಿ. ಇರುವಷ್ಟು ದಿನವೂ ಸಾರ್ಥಕ ಜೀವನ ಸಾಗಿಸ ಬೇಕೆಂದು ಹೇಳಿಕೊಟ್ಟ ಜೀವ ತನ್ನ ಸಾರ್ಥಕ ಜೀವನವನ್ನು ಮುಗಿಸಿ ಕಾಣದ ಲೋಕಕ್ಕೆ ಪಯಣಿಸಿತು.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...