ಶೇಕ್ಸ್ಪೀಯರನ ದುರಂತ ನಾಟಕಗಳಲ್ಲಿ “ಮ್ಯಾಕ್ಬೆತ್” ಕೂಡ ಒಂದು. ಇದು ಮನುಷ್ಯನ ದೌರ್ಬಲ್ಯಗಳನ್ನು ಅನಾವರಣಗೊಳಿಸುವಂತಹ ಸಾರ್ವಕಾಲಿಕ ನಾಟಕ. ಅಧಿಕಾರದಾಹ ಹಾಗೂ ಅದಕ್ಕಾಗಿ ಹಿಡಿಯುವ ಹಿಂಸಾಮಾರ್ಗ ಮತ್ತು ಅದರಿಂದಾಗುವ ಸರ್ವನಾಶವನ್ನು ದೃಶ್ಯರೂಪದಲ್ಲಿ ಈ ನಾಟಕ ಕಟ್ಟಿಕೊಡುತ್ತದೆ. ಮೂವರು ಮಾಯಗಾತಿಯರು ಸೇನಾಧಿಪತಿ ಮ್ಯಾಕ್ಬೆತ್ಗೆ “ನೀನು ರಾಜನಾಗುತ್ತೀಯ” ಎಂದು ಭವಿಷ್ಯ ನುಡಿಯುತ್ತಾರೆ. ರಾಜನಾಗುವ ಆಸೆಗೆ ಜೋತುಬಿದ್ದ ಮ್ಯಾಕ್ಬೆತ್, ಹೆಂಡತಿ ಲೇಡಿ ಮ್ಯಾಕ್ಬೆತಳ ಒತ್ತಾಸೆಯಂತೆ ರಾಜನನ್ನು ಕೊಲೆ ಮಾಡುತ್ತಾನೆ. ತದನಂತರ ಪಶ್ಚಾತ್ತಾಪದಿಂದ ಹುಚ್ಚನಂತಾಗುತ್ತಾನೆ. ಲೇಡಿ ಮ್ಯಾಕ್ಬೆತ್ ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕೊನೆಗೆ ಮ್ಯಾಕ್ಡಫ್ ನಿಂದ ಮ್ಯಾಕ್ಬೆತ್ ನ ಹತ್ಯೆಯಾಗುತ್ತದೆ. ಇಲ್ಲಿಗೆ ಹಿಂಸೆಗೆ ಹಿಂಸೆ - ರಕ್ತಕ್ಕೆ ರಕ್ತ ಎನ್ನುವ ಆಶಯದ ಮ್ಯಾಕ್ಬೆತ್ನ ಅಧಿಕಾರ ದಾಹದ ನಾಟಕ ಅಂತ್ಯವಾಗುತ್ತದೆ. ಅಧಿಕಾರಕ್ಕೆ ಮನುಷ್ಯ ಎಂತಹ ಹೀನ ಕೆಲಸಕ್ಕೂ ಕೈಹಾಕಲು ಸಿದ್ಧನಿರುತ್ತಾನೆ ಎಂದು ಸೂಕ್ಷ್ಮವಾಗಿ ಈ ನಾಟಕ ಕಟ್ಟಕೊಡುತ್ತದೆ. ಏನೇ ಇರಲಿ ಮನುಷ್ಯನಿಗೆ ಗುರಿ ಮತ್ತು ದಾರಿ ಎರಡೂ ಮುಖ್ಯ.
ಕರ್ನಾಟಕ ರಾಜಕೀಯ ಪಡಸಾಲೆ ಮೇಲೆ ಕುಳಿತು ಈಗಿನ ಪರಿಸ್ಥಿತಿಯ ಕಡೆ ಕಣ್ಣಾಯಿಸಿದರೆ ಮನಸ್ಸು ರೋಸಿ ಹೋಗುವುದಂತೂ ಗ್ಯಾರಂಟಿ. ಜಗ್ಲಿಯ ಒಂದು ಕಡೆ, ಆಡಳಿತ ಪಕ್ಷದವರು ಸರ್ಕಾರವನ್ನು ಉಳಿಸಿಕೊಳ್ಳಲು ಶಕ್ತಿಮೀರಿ ಕೆಲಸ ಮಾಡಿದರೆ, ದೋಸ್ತಿ ಸರ್ಕಾರವನ್ನು ಏನಾದರೂ ಮಾಡಿ ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟು ಹಲವಾರು ರೀತಿಯ ಕಸರತ್ತುಗಳನ್ನು ಮಾಡುತ್ತಿರುವ ವಿರೋಧ ಪಕ್ಷ ದೃಶ್ಯ ಜಗ್ಲಿಯ ಇನ್ನೊಂದು ಕಡೆ. ಇದಕ್ಕೆ ಇನ್ನಷ್ಟು ಎಂಬಂತೆ ಮೀಡಿಯಾ ಮಂದಿಗಳು ಕಾಗಕ್ಕ-ಗುಬ್ಬಕ್ಕ ಕಥೆಗಳನ್ನು ಹೇಳಿಕೊಂಡು ಪರಿಸ್ಥಿತಿಯ ಗಂಭೀರತೆಯ ಬೆಂಕಿಗೆ ಬೇಕಾದಷ್ಟು ಎಣ್ಣೆ ಸುರಿದಿದ್ದು. ಇವೊತ್ತೋ ನಾಳೆಯೋ ಸರ್ಕಾರ ಉರುಳುತ್ತದೆ; ಹೊಸ ಸರ್ಕಾರ ರಚೆಯಾಗಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ, ಈಗಾಗಲೇ ೧೫-೧೮ ಅತೃಪ್ತ ಕೈ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯ ಪಾಳೆಯಲ್ಲಿದ್ದಾರೆ, ಮುಂಬಾಯಿನ ಒಂದು ರೆಸಾರ್ಟ್ನಲ್ಲಿ ಇದ್ದಾರೆ, ಯಾವ ಕ್ಷಣದಲ್ಲಾದರೂ ಅವರನ್ನು ಕರೆತಂದು ರಾಜೀನಾಮೆ ಕೊಡಿಸಿ, ಸರ್ಕಾರವನ್ನು ಬೀಳಿಸಬಹುದು; ಇನ್ನೂ ಇಬ್ಬರು ಶಾಸಕರು ಚೆನ್ನೈ ಮೂಲಕ ಮುಂಬಾಯಿ ಸೇರಲಿದ್ದಾರೆ; ಆಪರೇಷನ್ ಕಮಲ ಪ್ರಾರಂಭವಾಗಿದೆ, ಶಾಸಕರಿಗೆ ಕೋಟಿಗಟ್ಟಲೇ ಹಣ ಜತೆಗೆ ಸಚಿವಸ್ಥಾನದ ಆಮಿಷವನ್ನು ಬಿಜೆಪಿ ಒಡ್ಡಿದೆ. ಕೆಲ ಶಾಸಕರಂತೂ ಮುಂಗಡ ಹಣ ಪಡೆದುಕೊಂಡಿದ್ದಾರೆ… ಹೀಗೆ ಇದೇ ರೀತಿಯ ಸುದ್ಧಿಗಳು ಸುಮಾರು ಒಂದೂವರೆ ವಾರದ ಮಟ್ಟಿಗೆ ನಮ್ಮ ನ್ಯೂಸ್ ಚಾನೆಲ್ಗಳಲ್ಲಿ ಬ್ರೇಕಿಂಗ್ ಸುದ್ದಿಗಳಾಗಿ ಬಿತ್ತರಗೊಂಡವು.
ಇಷ್ಟೇ ಅಲ್ಲ, ಹಿಂದಿನ ಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ವಿರೋಧ ಪಕ್ಷ ಹವಣಿಸುತ್ತಿದೆ, ವಿರೋಧ ಪಕ್ಷದ ಸವಾಲನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಪಕ್ಷಗಳು ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ರಂಗಪ್ರವೇಶ ಮಾಡಿವೆ, ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿದರೆ ಆಗ ತಿರುಗೇಟು ಕೊಡೋಣ, ವೈಯಕ್ತಿಕ ಪ್ರತಿಷ್ಠೆ ಮರೆತು ಮೈತ್ರಿ ಸರ್ಕಾರ ರಕ್ಷಿಸಿ ಎಂಬ ವರಿಷ್ಠರ ಮಾತು; ಸಂವಿಧಾನ ಬದ್ದವಾಗಿ ರಚನೆಯಾದ ಸರ್ಕಾರವನ್ನು ವಾಮ ಮಾರ್ಗದಿಂದ ಉರುಳಿಸುವ ಹಕ್ಕು ಯಾರಿಗೂ ಇಲ್ಲ. ಅದು ಸಂವಿಧಾನ ವಿರೋಧಿ ಕೃತ್ಯ. ಶಾಸಕರಿಗೆ ಪ್ರಲೋಭನೆ ಒಡ್ಡುವುದು ಕಾನೂನುಬಾಹಿರ ಕೆಲಸ. ಇಂತಹ ಕೆಲಸಕ್ಕೆ ಕೈಹಾಕಿದರೆ ಜನರು ದಂಗೆ ಏಳುತ್ತಾರೆ… ಹೀಗೆ ಆಡಳಿತ ಪಕ್ಷಗಳ ಪ್ರತಿಕ್ರಿಯೆಗಳನ್ನು ಸಹ ಅಷ್ಟೇ ಪರಿಣಾಮಕಾರಿಯಾಗಿ ಮಾಧ್ಯಮದವರು ಬಿತ್ತರಿಸಿದರು.
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ! ವಿರೋಧ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದು, ಅದಕ್ಕಾಗಿ ಅಪರೇಷನ್ ಕಮಲಕ್ಕೆ ಕೈ ಹಾಕಿದ್ದು, ಕಾಂಗ್ರೆಸ್ನ ಒಳಜಗಳದ ಲಾಭವನ್ನು ಪಡೆಯಲು ಹವಣಿಸಿದ್ದು, ಅತೃಪ್ತ ಶಾಸಕರು ಪ್ರಲೋಭನೆಗಳಿಗೆ ಕಿವಿಗೊಟ್ಟಿದ್ದು ನೂರಕ್ಕೆ ನೂರರಷ್ಟು ನಿಜವಿಲ್ಲದಿರಬಹುದು; ಆದರೆ, ಪಕ್ಷಗಳಲ್ಲಿ ಕೈಗೊಂಡ ಕ್ಷಿಪ್ರದಾಳಿ ತಂತ್ರ ಪ್ರತಿತಂತ್ರಗಳು, ಗುಪ್ತಸಭೆಗಳು, ವರಿಷ್ಠರ ಹೇಳಿಕೆಗಳು ರಾಜ್ಯದ ರಾಜಕೀಯದಲ್ಲಿ ತಲೆದೋರಿದ ಅತಂತ್ರದ ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮವಾಗಿ ಖಚಿತಪಡಿಸುತ್ತವೆ. ಈ ಎಲ್ಲಾ ಗಲಾಟೆ, ಕಿತ್ತಾಟಗಳಲ್ಲಿ ನನ್ನ ಮನಸ್ಸಿಗೆ ಬಂದಿದ್ದು ಇವಿಷ್ಟು: ಅಧಿಕಾರದ ಆಸೆಗೆ ಮನುಷ್ಯ ಎಂತಹ ಹೀನ ಕೆಲಸ ಮಾಡಲಿಕ್ಕೂ ಸಿದ್ಧ, ನಾಯಕರಲ್ಲಿ ಬದ್ಧತೆ ಎಂಬುವುದು ಮರೀಚಿಕೆ, ಪ್ರತಿನಿಧಿಗಳು ಮಾರಾಟಕ್ಕಿರುವ ಸರಕುಗಳಾಗಿರುವುದು, ನಮ್ಮ ಪ್ರತಿನಿಧಿಗಳಿಗೆ ಮುಖ್ಯವಾಗುವುದು ತತ್ವ ಸಿದ್ಧಾಂತಗಳಿಗಿಂತ ಹಣ ಅಧಿಕಾರ, ಸಚಿವನಾಗಬೇಕಾದವನಿಗೆ ಇರಬೇಕಾದ ಆರ್ಹತೆಯ ಬಗ್ಗೆ ಅಸ್ಪಷ್ಟತೆ, ಸರ್ಕಾರದ ಬುಡ ಅಲ್ಲಾಡಲು ಪ್ರಾಂಭಿಸುತ್ತಿದ್ದಂತೆ, ಆಡಳಿತ ಕಳಪೆಯಾಗುತ್ತದೆ, ಒಡನೆ ಮಾಡಬೇಕಾದ ಕೆಲಸಕಾರ್ಯಗಳು ವೇಗ ಕಳೆದುಕೊಂಡು ಮಂದಗತಿಯಲ್ಲಿ ಸಾಗುತ್ತವೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಮಾಧ್ಯಮಗಳು ರಾಜಕೀಯ ಪ್ರಕ್ಷಗಳ ಪರವಹಿಸಿ ತಮ್ಮ ಜವಬ್ಧಾರಿಯಲ್ಲಿ ಸೋಲು.
ಹೀಗೆ ಪಟ್ಟಿ ಮಾಡ ಹೊರಟರೆ ಹನುಮಂತನ ಬಾಲದಂತೆ ಬೆಳೆದು ಹೋಗಬಹುದು. ಆದರೆ ಈ ರೀತಿಯ ಅರಾಜಕತೆ, ಅಸ್ತವ್ಯಸ್ಥೆಯಿಂದ ತುಂಬ ನಷ್ಟ ಅನುಭವಿಸುವವರು ಜನಸಾಮಾನ್ಯರು, ಬಡವರು. ಈಗಲಾದರೂ ನಮ್ಮ ವಿರೋಧ ಪಕ್ಷದವರು ತಮ್ಮ ಜವಾಬ್ದಾರಿಯನ್ನು ತಿಳಿದು ಕಾರ್ಯ ನಿರ್ವಹಿಸಲಿ ಮತ್ತು ಮೈತ್ರಿ ಸರ್ಕಾರವು ಎಲ್ಲರನ್ನೂ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಭಿವೃದ್ಧಿಯ ಕಡೆ ಗಮನ ಹರಿಸಲಿ…
ಸಮಾಜಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಮ್ಯಾಕ್ಸ್ ವೆಬರ್ ಮೂರು ವಿಧದ ಅಧಿಕಾರ ಬಗ್ಗೆ ಮಾತನಾಡುತ್ತಾನೆ: ಒಂದು, ಮನುಷ್ಯ ತನ್ನ ವರ್ಚಸ್ಸಿನಿಂದ ಗಳಿಸಿಕೊಳ್ಳುವ ಅಧಿಕಾರ, ಎರಡನೆಯದು ಸಾಂಪ್ರದಾಯಿಕವಾಗಿ ಒಬ್ಬನಿಗೆ ಸಿಗುವ ಅಧಿಕಾರ, ಕೊನೆಯದಾಗಿ ಕಾನೂನಾತ್ಮಕವಾಗಿ ಗಳಿಸಿಕೊಳ್ಳುವ ಮತ್ತೊಂದು ರೀತಿಯ ಅಧಿಕಾರ. ಸಾಂಪ್ರದಾಯಿಕವಾಗಿ ಬರುವಂತಹ ಅಧಿಕಾರಕ್ಕೆ ಒಂದು ಉತ್ತಮ ಉದಾಹರಣೆ ಬ್ರಿಟನ್ನಿನ ರಾಣಿ ಎಲಿಜಬೇತಳಿಗೆ ದೊರೆತ ಅಧಿಕಾರ. ಇನ್ನೊಂದು ಕಡೆ, ನಮ್ಮ ರಾಜಕೀಯ ಪ್ರತಿನಿಧಿಗಳಿಗೆ ದೊರೆತ ಅಧಿಕಾರ ಕಾನೂನಾತ್ಮಕವಾದುದ್ದು. ಆದರೆ ತನ್ನ ವರ್ಚಿಸಿನಿಂದ ಗಳಿಸಿಕೊಳ್ಳುವ ಅಧಿಕಾರ ತುಂಬಾ ಮುಖ್ಯವಾದುದ್ದು. ಅಂತಹ ನಾಯಕರ ಒಂದು ಕೂಗಿಗೆ ಸಾವಿರಾರು ಜನರು ಪ್ರತಿಕ್ರಿಯಿಸುತ್ತಾರೆ. ಜನರ ಪ್ರತಿಕ್ರಿಯೆಗೆ ಎಂದೂ ಒತ್ತಾಯವಿರುವುದಿಲ್ಲ, ಅಧಿಕಾರ ಕಳೆದುಕೊಳ್ಳುವ ಭಯ ಅವರಿಗಿರುವುದಿಲ್ಲ. ಹಿಂಬಾಲಕರು ಹಿಂಸೆ ಸಂಕಷ್ಟಕ್ಕೆ ಹೆದರದೇ ನಾಯಕನನ್ನು ಹಿಂಬಾಲಿಸುತ್ತಾರೆ. ಎಂದಿಗೂ ನಾಯಕನನ್ನು ನಡು ನೀರಿನಲ್ಲಿ ಬಿಟ್ಟು ಹೋಗುವುದಿಲ್ಲ. ಇಂತಹ ಅಧಿಕಾರ ಬರುವುದು ನಾಯಕನ ವ್ಯಕ್ತಿತ್ವದಿಂದ, ತಾನು ಪ್ರತಿವಾದಿಸುವ ತತ್ವ ಸಿದ್ಧಾಂತಗಳಿಂದ. ಈ ರೀತಿಯ ಅಧಿಕಾರಕ್ಕೆ ಒಂದು ಉತ್ತಮ ಉದಾಹರಣೆ ಮಹಾತ್ಮಗಾಂಧಿ. ಮೊಗಳ್ಳಿ ತಮ್ಮ ಒಂದು ಲೇಖನದಲ್ಲಿ ಗಾಂಧಿಯ ಬಗ್ಗೆ ಹೀಗೆ ಬರೆಯುತ್ತಾರೆ
….“ಗಾಂಧೀಜಿಯ ಇಡೀ ಚಳವಳಿಗೆ ಮಾತೃತ್ವದ ಹಂಗಿದೆ. ಸ್ತ್ರೀ ಸಂವೇದನೆಯ ಬಲವಿದೆ. ದಿಕ್ಕೆಟ್ಟ ಮಹಿಳೆಯರ ಅಸಹಾಯಕತೆಯ, ಅಹಿಂಸೆಯ, ಶಾಂತಿಯ ಆತ್ಯಂತಿಕ ಗುಣವಿದೆ. ಮಾತೃ ಮಮಕಾರದ ಜಾತ್ಯತೀತ ಭಾರತವನ್ನು ಗಾಂಧೀಜಿ ಬಹಳ ಆರ್ದ್ರವಾಗಿ ಭಾವಿಸಿದ್ದರು. ಜಾತಿ, ಧರ್ಮ, ಸ್ವಾತಂತ್ರ್ಯ ಇವು ಮೂರೂ ಕೂಡ ರಾಜಕಾರಣದಲ್ಲಿ ಹೇಗೆ ಜಾತ್ಯತೀತಗೊಳ್ಳಬೇಕು ಎಂಬುದನ್ನು ಗಾಂಧೀಜಿ ವಿಶಾಲವಾಗಿ ಭಾವಿಸಿದ್ದರು.
ಗಾಂಧೀಜಿಯ ವ್ಯಕ್ತಿತ್ವ ರೂಪುಗೊಂಡಿರುವುದು ಭಾರತದ ಹಳ್ಳಿಗಾಡಿನ ತಾಯಂದಿರ ವೇದನೆಯ ಮೂಲಕ, ಹೀಗಾಗಿಯೇ ನಾನು ನನ್ನ ತಾಯಿಯ ಮೂಲಕ ಗಾಂಧಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದು. ಹಿಂಸೆಗೆ ಪ್ರತಿಹಿಂಸೆಯನ್ನು ಭಾಗಶಃ ಜಗತ್ತಿನ ಯಾವ ಮಹಿಳೆಯರೂ ರೂಪಿಸಲಿಲ್ಲ. ಹಿಂಸೆಗೆ ಅಹಿಂಸೆಯೇ ಪರಮೋಚ್ಛ ಪ್ರತಿಭಟನೆ ಎಂಬುದನ್ನು ದಮನಿತ ಮಹಿಳೆಯರು ವಿಶೇಷವಾಗಿ ತೋರಿದ್ದಾರೆ… ಇಂಥಾ ಭಾರತವನ್ನು ಕಾಣಲು ಗಾಂಧೀಜಿಗಿಂತ ಮಿಗಿಲಾದವರು ಬೇರೆ ಯಾರೂ ಇಲ್ಲ ಎನಿಸುತ್ತದೆ. ಗಾಂಧೀಜಿಯ ಬಳಿ ಇದ್ದದ್ದು ತಾಯಂದಿರ ಇಂತಹ ಆಯುಧಗಳೇ. ಮೌನವೂ ಒಂದು ದೊಡ್ಡ ಪ್ರತಿಭಟನೆ. ಉಪವಾಸವೂ ಒಂದು ಪ್ರತಿಭಟನೆ. ಶಾಂತಿಯೂ ಒಂದು ಪ್ರತಿಭಟನೆ. ಅಸಹಕಾರವೂ ಒಂದು ದಿವ್ಯ ಪ್ರತಿರೋಧ. ಕ್ರಾಂತಿಗಳನ್ನು ಹತ್ತಿಕ್ಕುವ ಯಾವ ಯಾವ ಕ್ರಮಗಳು ಬ್ರಿಟಿಷ್ ಸಾಮ್ರಾಜ್ಯದ ಮುಂದೆ ಇದ್ದವೋ ಅವಕ್ಕೆಲ್ಲ ಗಾಂಧೀಜಿ ಅವಕಾಶವನ್ನೇ ಕೊಡಲಿಲ್ಲ…..
ನಮ್ಮೂರ ತಾಯಂದಿರ ಮೂಲಕ ಈ ಬರಹವನ್ನು ಆರಂಭಿಸಿದ್ದೆ. ನಮ್ಮ ತಾಯಂದಿರು ಅವರವರ ಕೇರಿಗಳಲ್ಲಿ ಅಹಿಂಸೆಯ ತೊಟ್ಟಿಲು ಕಟ್ಟಿಯೇ ನಮ್ಮನ್ನೆಲ್ಲ ಬೆಳೆಸಿರುವುದು. ಆ ಅಹಿಂಸೆಯ ಜೋಗುಳವನ್ನು ನಾವು ಮರೆಯಬಹುದೇ? ಜಗತ್ತಿಗೆ ಆ ಜೋಗುಳವನ್ನು ನಾವೇ ಸಾರಬೇಕಲ್ಲವೇ? ಇಪ್ಪತ್ತನೇ ಶತಮಾನದ ಭಾರತೀಯ ಜನಪದಗಳಿಗೆ ದಕ್ಕಿದ ಜಾತ್ಯತೀತ ‘ಅಹಿಂಸಾ ಜಾನಪದ’ ಎಂದರೆ ಅದು ‘ಗಾಂಧಿ ಜಾನಪದ’. ನಮ್ಮ ರಾಷ್ಟ್ರೀಯ ಜಾನಪದವೂ ಇದೇ ಆಗಬೇಕು. ಹಾಗೆಯೇ ವಿಶ್ವದ ಜಾನಪದವೂ ಇದೇ ಆಗಬೇಕು.” (ಗಾಂಧೀಜಿಯಲ್ಲಿ ಕಂಡ ನಮ್ಮೂರ ತಾಯಂದಿರು / ಡಾ. ಮೊಗಳ್ಳಿ ಗಣೇಶ್ / 2 Oct, 2016) ಇಂತಹ ನಾಯಕನನ್ನು ಈಗಿನ ರಾಜಕೀಯ ನಾಯಕರಲ್ಲಿ ಕಾಣಲು ಸಾಧ್ಯವೇ??
No comments:
Post a Comment