Monday, 8 October 2018

ಆಧ್ಯಾತ್ಮಿಕ ಅನುಭಾವದ ಬೆಳವಣಿಗೆಯ ಹಂತಗಳು



- ಫಾದರ್ ವಿಜಯ್ ಕುಮಾರ್, ಬಳ್ಳಾರಿ

ಈ ಜಗತ್ತು ಬಹು ಸುಂದರವಾದುದು. ಇಲ್ಲಿರುವುದೆಲ್ಲವೂ ತ್ರೈಏಕ ದೇವರ ಸೃಷ್ಟಿಯೇ. "ತಾವು ಸೃಷ್ಟಿಸಿದ ಎಲ್ಲವನ್ನೂ ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು" (ಆದಿ ೧:೩೧). ತ್ರೈಏಕ ದೇವರು ಪರಿಪೂರ್ಣರೂ, ಪ್ರೀತಿಸ್ವರೂಪಿಯೂ, ದಯಾವಂತರೂ ಆಗಿದ್ದಾರೆ. ಅವರು ಸರ್ವ ಸೃಷ್ಟಿಯನ್ನೂ ಪ್ರೀತಿಸುತ್ತಾರೆ. ಆ ಅನಂತ ಅಚಲ ಪ್ರೀತಿಯಿಂದಲೇ ಅವರು ಮಾನವಕುಲವನ್ನು ತಮ್ಮ ರೂಪದಲ್ಲಿ ಹಾಗೂ ಹೋಲಿಕೆಯಲ್ಲಿ ಸೃಷ್ಟಿಸಿ ತಮ್ಮ ಉಸಿರನ್ನು ಊದಿ ನಿರಂತರವೂ ಜೀವಿಸುವಂತೆ ಮಾಡಿದರು. "ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ, ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ, ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ (ಆದಿ ೧:೨೭). ಈ ಕಾರಣ ಮಾನವರು ಸಾಧಾರಣ ಜೀವಿಗಳಲ್ಲ, ಅವರು ಅಸಾಧಾರಣ ಅನನ್ಯ ಜೀವಿಗಳು ಹಾಗೂ ಅವರು ಶರೀರಾತ್ಮಗಳಿಂದ ಕೂಡಿದ ಜೀವಿಗಳು. ಆ ಕಾರಣ ಈ ಜೀವಕ್ಕೆ ಅಂತ್ಯವೇ ಇಲ್ಲ. ಶರೀರ ನಶ್ವರ ಆತ್ಮ ಚಿರಾಯು.
ಮಾನವಕುಲ ಇತರ ಜೀವಿಗಳಂತೆ ಅಲ್ಲ. ತ್ರೈಏಕ ದೇವರ "ಅನಂತ ಪ್ರೀತಿಯ ಪ್ರತಿರೂಪವೇ ಮಾನವಕುಲ". ಮಾನವರೆಲ್ಲರೂ ಸದಾ ಸಂತೋಷದಲ್ಲಿ ತ್ರೈಏಕ ದೇವರೊಡನೆ ಸತ್ಸಂಬಂಧ ಇಟ್ಟುಕೊಳ್ಳಬೇಕೆಂಬುದು ಅವರ ಅನಂತ ಬಯಕೆ. ಯಾರು ತ್ರೈಏಕ ದೇವರಲ್ಲಿ ಸ್ಥಿರವಾದ ಸತ್ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೋ ಮತ್ತು ಆ ಸತ್ಸಂಬಂಧವನ್ನು ಉಳಿಸಿಕೊಳ್ಳುತ್ತಾರೋ ಅಂಥವರು ದೇವರೊಡನೆ ಅನಂತವಾಗಿ ಜೀವಿಸುವ ಸೌಭಾಗ್ಯವನ್ನು ಹೊಂದುತ್ತಾರೆ. ಸಂತ ಯೋವಾನ್ನ ಆ ಸತ್ಸಂಬಂಧವನ್ನು "ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲೆಸದವನನ್ನು ಕವಲು ಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿ ಹೋಗುವನು ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು" (ಯೊವಾನ್ನ ೧೫: ೫-೬) ಎಂದು ಎಚ್ಚರಿಸುತ್ತಾನೆ. ತ್ರೈಏಕ ದೇವರ ವರ್ಣಿಸಲಸದಳವಾದ ಅನಂತ ಸೌಭಾಗ್ಯವನ್ನು ಉಳಿಸಿಕೊಳ್ಳುತ್ತಾ ಅವರಾಶ್ರಯದಲ್ಲಿ ಪ್ರಗತಿಯತ್ತ ಸಾಗುವುದೇ ಆಧಾತ್ಮದ ಪರಮ ಗುರಿ.
ಅಧ್ಯಾತ್ಮವೆಂದರೆ "ತ್ರೈಏಕ ದೇವರು ಉಚಿತವಾಗಿ ನಮಗಿತ್ತಿರುವ ಅನಂತವಾದ ಸತ್ಸಂಬಂಧವನ್ನು ವಿಧೇಯತೆ ಮತ್ತು ಅತಿವಿನಯದಿಂದ ಸದೃಢಪಡಿಸಿಕೊಳ್ಳುತ್ತಾ ವಿಶ್ವಾಸದ ಪ್ರಗತಿಯಲ್ಲಿ ಬರುವ ಅಡೆತಡೆಗಳಿಗೆ ಕುಗ್ಗದೆ, ಸೈತಾನನ ಕುತಂತ್ರಕ್ಕೆ ಮರುಳಾಗಿ ಬಲಿಯಾಗದೆ ನಿತ್ಯವೂ ದೇವರೆಡೆಗೆ ಸಾಗುವುದೇ ಅಧ್ಯಾತ್ಮ". ಇದು ನಿರಂತರವಾಗಿ ಸಾಗುವ ಒಂದು ಅದ್ಭುತ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ನಿರಂತರವಾಗಿ ಮುಂದೆ ಸಾಗಲು ಪ್ರಪ್ರಥಮವಾಗಿ ನಮಗೆ ತ್ರೈಏಕ ದೇವರ ಅನುಗ್ರಹ ಬೇಕೇಬೇಕು. ಅದಿಲ್ಲದಿದ್ದರೆ ನಮ್ಮ ಎಲ್ಲಾ ಪ್ರಯತ್ನಗಳು ಶೂನ್ಯವೇ ಸರಿ. ಇದನ್ನು ನಮ್ಮ ಜ್ಞಾನಬಲದಿಂದಾಗಲಿ, ದೈಹಿಕ ಬಲದಿಂದಾಲಿ, ಯಾವ ವೈಜ್ಞಾನಿಕ ಪ್ರಗತಿಯ ಶಕ್ತಿಯಿಂದಾಗಲಿ ಅಥವ ಲೋಕದ ಯಾವ ಶಕ್ತಿಯಿಂದಾಗಲಿ ಸಾಧಿಸಲು ಸಾಧ್ಯವೇ ಇಲ್ಲ. ಈ ಪ್ರಾಥಮಿಕ ಅರಿವು ನಮಗಿರಲೇಬೇಕು. ಯಾಕೆಂದರೆ "ದೈವ ಭಯವೆ ಸುಜ್ಞಾನದ ಆರಂಭ" (ಜ್ಞಾನೋಕ್ತಿಗಳು ೯:೧೦).
ಆಧ್ಯಾತ್ಮಿಕ ಅನುಬಂಧ ಪ್ರಗತಿಯಾಗುವುದು ದೈವಿಕ ಅನುಬಂಧದಿಂದ ಮಾತ್ರ. ಅದು ಜ್ಞಾನ, ವಿಜ್ಞಾನ ಮತ್ತು ಸುಜ್ಞಾನಗಳನ್ನು ಮೀರಿದ್ದು. ಅದೊಂದು ಅನಂತ ಅನುಭಾವವೇ ಹೊರತು ಅನುಭವ ಮಾತ್ರವಲ್ಲ! ಅದೊಂದು ದೇವ ಮಾನವರ ಅನಂತ ಸಂಗಮ! ಪರಮಾನಂದದ ಅತ್ಯುನ್ನತ ಶಿಖರ! ಅದು ವರ್ಣನಾತೀತವಾದುದು, ಮಾತಿಗೆ ನಿಲುಕದ್ದು. ಅದು ನಮ್ಮ ಊಹೆಗೂ ನಿಲುಕದ್ದು. ಅದು ಎಲ್ಲ ಅರಿವಿನ ಎಲ್ಲೆಗಳನ್ನೂ ಮೀರಿದ್ದು. ಅದನ್ನು ಅರಿತುಕೊಳ್ಳಲು ದೈವ ಜ್ಞಾನದಿಂದ ಮಾತ್ರವೇ ಸಾಧ್ಯ! "ಬಲ್ಲವನೇ ಬಲ್ಲ ಬೆಲ್ಲದ ರುಚಿಯ". ಅದನ್ನು ಸವಿದವನಿಗೆ ಮಾತ್ರ ಅದು ವೇದ್ಯವಾಗುತ್ತದೆ. ಆದುದರಿಂದಲೇ ಬೈಬಲ್ ಗ್ರಂಥದಲ್ಲಿ ಕೀರ್ತನೆಕಾರ ಹೀಗೆ ಹೇಳುತ್ತಾನೆ "ಸವಿದು ನೋಡು ಪ್ರಭುವಿನ ಮಾಧುರ್ಯವನು, ಆತನನು ಆಶ್ರಯಿಸಿಕೊಂಡವನು ಧನ್ಯನು" (ಕೀರ್ತನೆ ೩೪: ೮). ಹಾಗೆಯೇ ಮುಂದುವರಿದು "ಮನುಜರಲಿ ಭರವಸೆಯಿಡುವುದಕ್ಕಿಂತ ಪ್ರಭುವನ್ನು ಆಶ್ರಯಿಸಿಕೊಳ್ಳುವುದು ಹಿತ" (ಕೀರ್ತನೆ ೧೧೮: ೯) ಎನ್ನುತ್ತಾನೆ.
ಈ ಆಧ್ಯಾತ್ಮಿಕ ಅನುಭಾವದ ಅತ್ಯುನ್ನತ ಶಿಖರವನ್ನು ದೈವೀ ಅನುಗ್ರಹದಿಂದ ಹಲವರು ತಲುಪಿದ್ದಾರೆ. ಉದಾಹರಣೆಗೆ ಶಿಲುಬೆಯ ಸಂತ ಜಾನರು, ಅವಿಲ್ಲಾದ ಸಂತ ತೆರೇಸ ಮುಂತಾದವರು. ಅವರ ಆಧ್ಯಾತ್ಮಿಕ ಜೀವನದ ರೀತಿನೀತಿಗಳು ನಮಗೆ ಆದರ್ಶವಾಗಿವೆ. ಇದರಿಂದ ಪ್ರೇರಿತರಾದ ಹಲವರು ಆ ದಿಸೆಯೆಡೆಗೆ ಅಭಿಮುಖರಾಗಿದ್ದಾರೆ. ಈ ಅನುಭಾವದ ಅನುಬಂಧ ಯಾರೊಬ್ಬರ ಸ್ವತ್ತೂ ಅಲ್ಲ ಎಂದು ಎರಡನೆ ವ್ಯಾಟಿಕನ್ ಸಮ್ಮೇಳನವು ಸ್ಪಷ್ಟಪಡಿಸುತ್ತದೆ. ಇದು ಯಾಜಕರ ಹಾಗೂ ಧಾರ್ಮಿಕ ಸಹೋದರ ಸಹೋದರಿಯರಿಗೆ ಮಾತ್ರ ಸಾಧ್ಯ, ಯಾಕೆಂದರೆ ಅವರು ದೇವರಿಂದ ವಿಶೇಷವಾಗಿ ಇಂತಹ ಜೀವನಕ್ಕೆ ಕರೆ ಹೊಂದಿದವರು ಎಂಬ ತಪ್ಪು ಪರಿಕಲ್ಪನೆ ಹಲವರಲ್ಲಿದೆ. ಆ ಅತ್ಯುನ್ನತ ಶಿಖರವನ್ನು ಹತ್ತಲು ಬಯಸುವ ಸರ್ವರಿಗೂ ದೈವೀ ಅನುಭಾವದ ದ್ವಾರ ಮುಕ್ತವಾಗಿ ತೆರೆಯಲಾಗಿದೆ. ಇದಕ್ಕೆ ಬಡವ-ಬಲ್ಲಿದ, ಜ್ಞಾನಿ-ಅಜ್ಞಾನಿ, ಶ್ರೇಷ್ಠ-ಕನಿಷ್ಠ, ಪಾಪಿಷ್ಟ-ಪುಣ್ಯವಂತ ಎಂಬ ಯಾವ ಭಿನ್ನ ಬೇಧವೂ ಇಲ್ಲ. ಯಾರಿಗೆ ದೈವಾನುಭಾವದ ಸುಧೀರ್ಘ ಹಾದಿಯಲ್ಲಿ ಪ್ರಭುವಿನೊಡನೆ ಪಯಣಿಸಲು ಮುಕ್ತ ಮನಸ್ಸಿದೆಯೋ ಅವರೆಲ್ಲರೂ ನಿರ್ಭಯವಾಗಿ ಪಯಣಿಸಬಹುದು. ಪ್ರಭುವೇ ಅವರನ್ನು ಖುದ್ದಾಗಿ ಕೈಹಿಡಿದು ನೆಡೆಸಲು ಸನ್ನದ್ದರಾಗಿದ್ದಾರೆ.
ಈ ಪಯಣ ವಿಶಿಷ್ಟ ಹಾಗೂ ಅದ್ಭುತವಾದುದು. ಇಲ್ಲಿ ಏರು-ಪೇರುಗಳು, ಕತ್ತಲೆಯ ಕಮರಿಗಳು, ವೇದನೆಯ ಶಿಲುಬೆಗಳು ಅಪಾರ. ಗೆಲುವಿಗಿಂತ ಸೋಲೇ ಅಧಿಕವೆಂದು ಭಾಸವಾಗುತ್ತದೆ. ನಮ್ಮಿಂದ ಅಸಾಧ್ಯವೆಂಬ ಸಂಶಯಗಳು ಪಯಣಿಗರನ್ನು ನಿರಂತರವಾಗಿ ಕಾಡುತ್ತವೆ. ಹತಾಶೆ ತಲೆದೋರುತ್ತದೆ, ಒಂಟಿತನ ಕಾಡುತ್ತದೆ, ಎಲ್ಲವೂ ಶೂನ್ಯವೆಂದು ನಿರಾಶೆ ಆವರಿಸುತ್ತದೆ. ಇದು ಸೈತಾನನಿಗೆ ಒಳ್ಳೆಯ ಅವಕಾಶ, ಆತ ಅಸೂಯೆಯಿಂದ ಅಂತಹ ಸಾಧನೆಯ ಹಾದಿಯಲ್ಲಿರುವ ಸದ್ಭಕ್ತರನ್ನು ಕಾಲೆಳೆದು ತನ್ನ ಕಂದಕಕ್ಕೆ ಬೀಳಿಸಲು ಸತತವಾಗಿ ಪ್ರಯತ್ತಿಸುತ್ತಾನೆ. ಈ ಪರಿ ಸಂಕಷ್ಟಗಳನ್ನು ಅನುಭವಿಸುವುದರಿಂದ ಯಾವ ಪ್ರಯೋಜನವೂ ಇಲ್ಲ ನಿನ್ನ ಜೀವನವನ್ನು ನಿರರ್ಥಕಗೊಳಿಸಿಕೊಳ್ಳಬೇಡ ಎಂದು ನಯವಂಚನೆಯ ಮಾತುಗಳಿಂದ ನಿರಾಶೆ ಬಲವಾಗುವಂತೆ ಪ್ರೇರೇಪಿಸುತ್ತಾನೆ. ಬೈಬಲಿನ ಪ್ರಥಮ ಗ್ರಂಥ ಆದಿಕಾಂಡದ ಮೂರನೇಯ ಅಧ್ಯಾಯದಲ್ಲಿ ಸೈತಾನ ಆದಾಮ ಮತ್ತು ಏವಳನ್ನು "ಆಗ ಆ ಸರ್ಪ, ಆ ಮಾತು ನಿಜವಲ್ಲ ನೀವು ಸಾಯುವುದು ಸುಳ್ಳು, ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು" (ಆದಿಕಾಂಡ ೩: ೪-೫). ಎಂದು ವಂಚಿಸುತ್ತದೆ ಆಗ ಅವರು ಸೈತಾನನ ನಯವಾದ ಮಾತುಗಳಿಗೆ ಮರುಳಾಗಿ ಬಲಿಯಾಗುತ್ತಾರೆ. ದೇವರ ಅನಂತ ಸತ್ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ಶೋಧನೆಯ ಸಮಯದಲ್ಲಿ ಸೈರಣೆಯಿಂದಿದ್ದು ಪ್ರಭುವಿನಲ್ಲಿ ಭರವಸೆ ಕಳೆದುಕೊಳ್ಳದೆ, ನೋವ (ಆದಿಕಾಂಡ ೬ ಮತ್ತು ೭), ಅಬ್ರಹಾಮರಂತೆ (ಆದಿಕಾಂಡ ೨೨), ತಾಳ್ಮೆಯಿಂದ, ವಿಶ್ವಾಸದಿಂದ, ಹಾಗೂ ಭರವಸೆಯಿಂದ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನೋವನ್ನು ಲೆಕ್ಕಿಸದೆ ಪ್ರಾರ್ಥನೆಯಲ್ಲಿ ತಲ್ಲಿನರಾಗಿ ಪ್ರಾಮಾಣಿಕತೆಯಿಂದ ಮುನ್ನೆಡೆಯುತ್ತಾರೋ ಅವರು ಎಲ್ಲಾ ಅಡೆತಡೆಗಳ ಎಲ್ಲೆಯನ್ನೂ ಮೀರಿ ದೈವಾನುಗ್ರಹದಿಂದ ಪರಿಪೂರ್ಣ ದೈವಾನುಭಾವಕ್ಕೆ ಭಾಜನರಾಗುವುದರಲ್ಲಿ ಸಂಶಯವಿಲ್ಲ.
೧. ಶುದ್ಧೀಕರಣ (ಪರ್ಗೆಷನ್)
ಈ ದೈವಾನುಭಾವದ ಉನ್ನತ ಶಿಖರವನ್ನು ಹತ್ತಲು ಪ್ರಪ್ರಥಮವಾಗಿ ತ್ರೈಏಕ ದೇವರಲ್ಲಿ ಪೂರ್ಣ ವಿಶ್ವಾಸವಿರಬೇಕು, ಅವರೊಬ್ಬರೇ ದೇವರೆಂಬ ನಂಬಿಕೆ ಮನದಲ್ಲಿ ಮನೆಮಾಡಬೇಕು. ಇದನ್ನು ಧರ್ಮೋಪದೇಶಕಾಂಡವು "ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು. ನಿನ್ನ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು" (೬: ೪-೫) ಎಂದು ತಿಳಿಸುತ್ತದೆ. ಎರಡನೇಯದಾಗಿ ತ್ರೈಏಕ ದೇವರು ನಮ್ಮ ತಂದೆ, ಅವರು ನಮ್ಮನ್ನು ನಿರಂತರವೂ ಕಾದು ರಕ್ಷಿಸುವವರು, ಅವರೆಂದಿಗೂ ಕೈಬಿಡುವುದಿಲ್ಲ ಎಂಬ ದೃಢನಂಬಿಕೆ ಬೆಳೆಸಿಕೊಳ್ಳಬೇಕು. ಮೂರನೇಯದಾಗಿ ಪ್ರಾರ್ಥನೆ, ದೀನತೆ ಮತ್ತು ಪಾಪರಹಿತ ಜೀವನವನ್ನು ರೂಢಿಸಿಕೊಳ್ಳುತ್ತಾ ಸಾಗಬೇಕು. "ಕೃಪಾಳು, ದೇವಾ, ಕರುಣಿಸೆನ್ನನು. ಕರುಣಾನಿಧಿ, ಅಳಿಸೆನ್ನ ದೋಷವನು. ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು ದೋಷಪರಿಹರಿಸಿ ಶುದ್ಧಗೊಳಿಸೆನ್ನನು" (ಕೀರ್ತನೆ ೫೧: ೧-೨) ಎಂದು ಎಡಬಿಡದೆ ದೀನ ಮನದಿಂದ ಪ್ರಾರ್ಥಿಸುತ್ತಿರಬೇಕು. ಇದು ನಿರಂತರವಾಗಿ ಸಾಗುವ ಪ್ರಕ್ರಿಯೆ. ದೈವಾನುಭಾವ ದೇವರ ಅನುಗ್ರಹದಿಂದ ಮಾತ್ರ ಸಾಧ್ಯ. ಮಾನವರಿಗೆ ಅಸಾಧ್ಯವಾದುದು ದೇವರಿಗೆ ಸಾಧ್ಯ, "ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ" (ಲೂಕ ೧: ೩೭) ಎಂಬ ನಂಬಿಕೆಯ ಬೇರುಗಳು ಸ್ಥಿರವಾಗುತ್ತಿರಬೇಕು. ಪಾಪರಹಿತನಾಗಿ ಬಾಳಲು ಬಯಸುವವರಿಗೆ ತ್ರೈಏಕ ದೇವರು ನಿರಂತರವೂ ಆಶ್ರಯವಾಗಿದ್ದಾರೆ.
ಪಾಪವು ದೈವ ಮತ್ತು ಪರಪ್ರೀತಿಗೆ ತಡೆಗೋಡೆ. ಇದು ಮಾನವ-ಮಾನವರ ನಡುವೆ ದ್ವೇಷ, ಅಸೂಯೆ, ಕೋಪತಾಪಗಳನ್ನು ಉಂಟುಮಾಡಿ, ಮಾನವನನ್ನು ದೇವರಿಂದಲೂ, ಮಾನವರಿಂದಲೂ ದೂರವಿಡುತ್ತದೆ. ಪಾಪದಿಂದ ಅಶಾಂತಿಯ ಮನಸ್ಸು, ಜಿಗುಪ್ಸೆ, ಹತಾಶೆ, ಆಳವಾದ ಕಂದಕಗಳುಂಟಾಗಿ, ಜೀವನ ಜರ್ಝರಿತವಾಗಿ ಸೈತಾನನ ಗೂಡಾಗುತ್ತದೆ. ಅಲ್ಲಿ ದೈವಾನುಭವಕ್ಕೆ ಕಿಂಚಿತ್ತೂ ಅವಕಾಶವೇ ಇರುವುದಿಲ್ಲ. ಆದ್ದರಿಂದ ದೈವಾನುಭಾವಕ್ಕೆ ನಿತ್ಯ ಶುದ್ಧೀಕರಣ ಹಾಗೂ ಪ್ರಾರ್ಥನೆ ಬಹು ಅವಶ್ಯಕ. "ದೇವಾ ಆಲಿಸೆನ್ನ ಮೊರೆಯನು ಕಿವಿಗೊಟ್ಟು ಕೇಳೆನ್ನ ಜಪವನು. ಎದೆಗುಂದಿ ಮೊರೆಯಿಡುತ್ತಿರುವೆ, ಜಗದೆಲ್ಲೆಯಿಂದ ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ" (ಕೀರ್ತನೆ ೬೧: ೧-೨) ಎನ್ನುತ್ತಿರಬೇಕು. ಹಾಗೆಯೇ "ಎನ್ನ ಮನಕ್ಕೆ ಶಾಂತಿ ದೇವನಿಂದಲೆ. ನನ್ನ ಜೀವೋದ್ಧಾರ ಆತನಿಂದಲೆ. ಆತನೆನಗೆ ದುರ್ಗ, ರಕ್ಷಕ, ಶರಣು. ನಾನೆಂದಿಗೂ ಕದಲಿ ಬೀಳೆನು" (ಕೀರ್ತನೆ ೬೨: ೧-೨) ಎಂಬ ಅಚಲ ನಂಬಿಕೆಯಲ್ಲಿ ಸ್ಥಿರವಾಗುತ್ತ ದೇವರ ಪ್ರೀತಿಯನ್ನು ಸವಿಯುತ್ತ ಅವರನ್ನು ಸ್ತುತಿಸುತ್ತಿರಬೇಕು. "ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ ಎಡಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ. ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ ಕೈಮುಗಿವೆ ನಿನ್ನ ನಾಮದ ಸ್ಮರಣಾರ್ಥ. ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತಿ ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ. ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ" (ಕೀರ್ತನೆ ೬೩: ೩-೬). ಈ ಪರಿಯ ನಿರಂತರ ನಿವೇದನೆ ಹಾಗೂ ನಂಬಿಕೆ ಸದ್ಭಕ್ತನ ಲೋಪದೋಷಗಳನ್ನು ಸರಿಪಡಿಸಿ, ಪಾಪದ ಸೆಳೆತದಿಂದ ದೂರವಿದ್ದು ಸನ್ಮಾರ್ಗದಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ಆದರೆ ಇದೇ ಅಂತ್ಯವಲ್ಲ ಪ್ರಾರಂಭವಷ್ಟೆ!
ಈ ಶುದ್ಧೀಕರಣ ಪ್ರಕ್ರಿಯೆಯು ನಿರಂತರವೂ ಸಾಗುತ್ತಿರಬೇಕು. ಇದು ಜೀವನದ ಅಂತ್ಯದವರೆಗೂ ಸಾಗುತ್ತಲೇ ಇರಬೇಕು. ಏಕೆಂದರೆ ಸೈತಾನನ ಕುಟಿಲ ತಂತ್ರೋಪಾಯಗಳಿಗೆ ಅಂತ್ಯವೇ ಇಲ್ಲ. ಮಾತ್ರವಲ್ಲದೆ ನಮ್ಮ ಪುಟ್ಟ ಆತ್ಮದಲ್ಲಿ ಸರ್ವ ಸೃಷ್ಟಿಗಳ ಪ್ರಭುವೂ, ಪರಿಪಾಲಕನೂ, ಪರಿಶುದ್ಧನೂ, ಪರಿಪೂರ್ಣನೂ ಆದ ತ್ರೈಏಕ ದೇವರು ಬಂದು ನೆಲೆಸುವುದೆಂದರೆ ಸಾಮಾನ್ಯವೆ! "ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು. ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ. ಅವನ ಸಂಗಡ ಊಟಮಾಡುತ್ತೇನೆ ಮತ್ತು ಅವನೂ ನನ್ನ ಸಂಗಡ ಊಟಮಾಡುತ್ತಾನೆ" ಎನ್ನುತ್ತದೆ ದೇವರ ವಾಕ್ಯ (ಪ್ರಕಟನೆ ೩: ೧೯-೨೦). ನಾವು ಪರಿಶುದ್ಧ ದೇವರನ್ನು ಸ್ವೀಕರಿಸಲು ಅಪಾತ್ರರು, ಇದನ್ನು ಮತ್ತಾಯನ ಸುವಾರ್ತೆಯಲ್ಲಿ ಹೀಗೆ ಓದುತ್ತೇವೆ: 'ಶತಾಧಿಪತಿಯು ಪ್ರಭುವನ್ನು ನೋಡಿ "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ..." (ಮತ್ತಾಯ ೮: ೮) ಎನ್ನುವಂತೆ ನಾವು ನಿರಂತರವೂ ನಮ್ಮ ಅಯೋಗ್ಯತೆಯನ್ನು ಅಂಗೀಕರಿಸಿ, ದೀನತೆಯಿಂದ, ಪ್ರೀತಿ ತುಂಬಿದ ಹೃದಯದಿಂದ ದೇವರೆಡೆಗೆ ಸಾಗುತ್ತಿರಬೇಕು. ಈ ನಿರಂತರ ಪ್ರಕ್ರಿಯೆಯನ್ನು ಆಂಗ್ಲ ಭಾಷೆಯಲ್ಲಿ ಪರ್ಗೆಷನ್ ಎಂದು ಕರೆಯುತ್ತಾರೆ. ತನು ಮನ ಶುದ್ಧಿಗೊಂಡಾಗ ಆತ್ಮವೂ ಶುದ್ಧಿಗೊಂಡು ದೈವ ಪ್ರಸನ್ನತೆಗೆ ಅನುವಾಗುತ್ತದೆ.
೨. ಜ್ಞಾನ ಬೆಳಕು (ಇಲುಮಿನೆಟಿವ್)
ಎರಡನೆಯದಾಗಿ ಶುದ್ಧೀಕರಣದಿಂದ ಆತ್ಮಶುದ್ದಗೊಂಡ ಅನುಭಾವಿಗೆ (ಸದ್ಭಕ್ತನಿಗೆ) ದೈವೀ ಸ್ಫರ್ಶವಾಗಿ ಸುಜ್ಞಾನ ವಿಕಾಸಗೊಂಡು, ದೀನತೆ ಪರಿಪಕ್ವವಾಗಿ, ಆತ್ಮಾನಂದವು ಪ್ರಾಪ್ತವಾಗಿ ಇತರನ್ನು ಸನ್ಮಾರ್ಗದಲ್ಲಿ ನಡೆಸಲು ಬೇಕಾದ ಸನ್ಮತಿಯು, ಜ್ಞಾನಬೆಳಕು ಉದಯವಾಗುತ್ತದೆ. ಅಷ್ಟು ಮಾತ್ರವಲ್ಲ ಇತರರ ಅಂತರಾಳದ ಭಾವನೆಗಳನ್ನು ಅರಿತುಕೊಳ್ಳುವ ಸುಜ್ಞಾನವೂ ಸಹ ತೆರೆದುಕೊಳ್ಳುತ್ತದೆ ಹಾಗೂ ಪುಟ್ಟ ಪುಟ್ಟ ಅದ್ಭುತಗಳನ್ನು ಸಹ ಮಾಡಬಹುದಾದ ಅದ್ಭುತಶಕ್ತಿಯು ಲಭಿಸುತ್ತದೆ. ಇದು ಪ್ರಾರಂಭವೇ ಹೊರತು ಪರಿಪೂರ್ಣವಲ್ಲ. ಇಂತಹ ಸಮಯದಲ್ಲಿ ದೈವಾನುಭಾವವನ್ನು ಹೊಂದಲು ಹವಣಿಸುತ್ತಿರುವ ಆತ್ಮ ಬಹು ಜಾಗ್ರತೆಯಿಂದ ಮುಂದುವರಿಯಬೇಕು. ಏಕೆಂದರೆ ಸ್ವಾರ್ಥ ನುಸುಳಿ ಈ ಎಲ್ಲಾ ಸಾಧನೆಗೆ ತಾನೇ ಕಾರಣವೆಂದು ತಿಳಿದು ಅಹಂಕಾರದಿಂದ ತ್ರೈಏಕ ದೇವರನ್ನು ಕಡೆಗಣಿಸಲೂಬಹುದು. ಆಗ ಆಧ್ಯಾತ್ಮಿಕ ಪ್ರಗತಿ ಕುಂಠಿತವಾಗಿ ಸಾಧನೆಯ ಹಾದಿ ಮೊಟಕಾಗಲೂಬಹುದು. ಆ ಕಾರಣ ಈ ಎಲ್ಲಾ ದೈವ ಫಲಗಳು ಪರಸೇವೆಗಾಗಿ, ದೈವೀ ರಾಜ್ಯದ ಬೆಳವಣಿಗೆಗಾಗಿ, ದೇವರು ನೀಡಿರುವ ವಿಶೇಷ ವರದಾನವೆಂದು ತಿಳಿದು ತಾಳ್ಮೆಯಿಂದಲೂ, ದೀನತೆಯಿಂದಲೂ, ಕೃತಜ್ಞತಾ ಮನೋಭಾವದಿಂದಲೂ ಭಕ್ತಿಭಾವದಿಂದಲೂ, ವಿಶ್ವಾಸದಿಂದಲೂ ಮುನ್ನಡೆಯಬೇಕು. "ನಾನೇನೂ ಅಲ್ಲ. ನನ್ನ ದೇವನೇ ಎಲ್ಲಾ" ಎಂದು ಮಾತೆ ಮರಿಯಳು ದೇವ ದೂತನ ಸಂದೇಶಕ್ಕೆ ಶರಣಾದಂತೆ "ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ" (ಲೂಕ ೧:೩೮) ಎಂಬ ಅಂತರಂಗದ ಅರಿವು ದೈವಾನುಭವಿಯಲ್ಲಿ ಸತತವು ತುಂಬಿ ತುಳುಕುತ್ತಿರಬೇಕು. ಏಕೆಂದರೆ ಸೈತಾನ ದೈವಾನುಭಾವಕ್ಕೆ ಅಡ್ಡಿ ಮಾಡಲು ನಿರಂತರವೂ ಹೊಂಚುಹಾಕುತ್ತಿರುತ್ತಾನೆ. ಇದನ್ನು ಪೇತ್ರನು ತನ್ನ ಪ್ರಥಮ ಪತ್ರಿಕೆಯಲ್ಲಿ "ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು" (೫:೮) ಎಂದು ಎಚ್ಚರಿಸುತ್ತಾನೆ.
೩. ಆತ್ಮಸಂಗಮ (ಯುನಿಟೀವ್)
ದೈವಾನುಭಾವದ ಅಂತಿಮ ಘಟ್ಟವೇ ತ್ರೈಏಕ ದೇವನಲ್ಲಿ ಆತ್ಮ ಸಂಗಮ. ಇಲ್ಲಿ ದೈವಾನುಭವಿಯ ಆತ್ಮವು ತ್ರೈಏಕ ದೇವರ ಅನುಗ್ರಹದಿಂದ ಪರಿಪೂರ್ಣ ಆನಂದದ ಅತ್ಯುನ್ನತ ಶಿಖರವನ್ನು ತಲುಪುತ್ತದೆ. ಅಂತಹ ಆತ್ಮವು ದೈವಾನುಗ್ರಹದಿಂದ ತುಂಬಿ ಹೊರಸೂಸುತ್ತದೆ. ಆದ್ದರಿಂದ ಸೈತಾನ ಅಂತಹ ಆತ್ಮದ ಬಳಿ ಸುಳಿಯಲು ಭಯಪಡುತ್ತಾನೆ, ಏಕೆಂದರೆ ಆ ಆತ್ಮವು ಶುದ್ಧಗೊಂಡು ದೇವರನ್ನು ಅಪ್ಪಿಕೊಂಡಿರುತ್ತದೆ. ತಾಯಿಯ ಮಡಿಲಲ್ಲಿ ಪುಟ್ಟ ಮಗುವು ಆನಂದದಿಂದ ನಗುವಿನ ಹೊನಲನ್ನು ಹರಿಸುವಂತೆ ಪರಿಪೂರ್ಣಗೊಂಡ ಆತ್ಮವು ದೇವರ ಪ್ರಸನ್ನತೆಯಲ್ಲಿ ಸಂಪೂರ್ಣ ಆನಂದದಲ್ಲಿ ತೇಲುತ್ತಿರುತ್ತದೆ. ಆಗ ಆತ್ಮಕ್ಕೆ ಯಾವ ಲೌಕಿಕ ಆಸೆ ಆಕಾಂಕ್ಷೆಗಳು ಇರುವುದಿಲ್ಲ. ಎಲ್ಲವನ್ನು ತ್ಯಜಿಸಿ ದೈವಾನುಭಾವದಲ್ಲಿ ನೆಲೆನಿಲ್ಲುತ್ತದೆ. ಈ ಹಂತದಲ್ಲಿ ಆತ್ಮಕ್ಕೆ ದೇವರ ಪ್ರಸನ್ನತೆಯಲ್ಲಿರುವುದೇ ಪರಮಾನಂದವೆಂಬ ಪೂರ್ಣ ಅರಿವು ಹಾಗೂ ದೇವರೊಬ್ಬರೇ ಶಾಶ್ವತ ಮಿಕ್ಕೆಲ್ಲವೂ ನಶ್ವರ ಎಂಬ ಆತ್ಮದ ಅರಿವು ಉದಯವಾಗಿರುತ್ತದೆ. ಶುದ್ದಗೊಂಡ ಆಧ್ಯಾತ್ಮದ ಅನುಭಾವಿಯ ಅಂತರಾಳದಲ್ಲಿ ದೈವೀ ಕಾರಂಜಿಗಳು ಉದ್ಭವಿಸಿ ಪರರ ಬಾಳಿಗೆ ಬೆಳಕಾಗಲು ಪ್ರಾರಂಭಿಸುತ್ತವೆ. ಸ್ವಾರ್ಥ ಅಳಿದು ನಿಸ್ವಾರ್ಥ ಮನೆ ಮಾಡುತ್ತದೆ. ಲೌಕಿಕ ಆಶೆ ಆಕಾಂಕ್ಷೆಗಳು ದೂರ ಸರಿಯಲಾರಂಭಿಸುತ್ತವೆ. ದೈವರಾಜ್ಯದ ಭಯಕೆ ಚಿಗುರೊಡೆಯುತ್ತದೆ. ಈ ಅಂತರಾಳದ ಅರಿವು ಬಯಸುವ ಎಲ್ಲರಿಗೂ ಲಭ್ಯವಾಗುತ್ತದೆ. ಅದಕ್ಕೆ ತ್ರೈಏಕ ದೇವರಲ್ಲಿ ಆಳವಾದ, ಅಚಲವಾದ ವಿಶ್ವಾಸ, ನಂಬಿಕೆ, ಶ್ರದ್ಧೆ, ಪ್ರಾಮಾಣಿಕತೆ, ನಿರ್ಮಲ ಮನಸ್ಸು, ಪಾವಿತ್ರ್ಯ ಅವಶ್ಯವಾಗಿ ಬೇಕು ಹಾಗೂ ನಿಶ್ಚಯವಾಗಿ ಪಾಪ ಪ್ರವೃತ್ತಿಗಳಿಂದ ದೂರವಿದ್ದು ದೈವೀರಾಜ್ಯದೆಡೆಗೆ ಅಭಿಮುಖರಾಗಿ ಪ್ರಗತಿಯತ್ತ ಸಾಗುತ್ತಿರಬೇಕು. ನಿರ್ಮಲ ಮನಸ್ಸಿಗೆ ಬೇಕು ಪ್ರಾರ್ಥನೆ ಹಾಗೂ ಪ್ರಾಯಶ್ಚಿತ್ತ. ಪ್ರಾರ್ಥನೆಯ ಪ್ರಗತಿಗೆ ಬೇಕು ದೇವರ ವಾಕ್ಯ. ದೈವಾನುಭಾವ ಹೊಂದಿದಲು ಪ್ರಾರಂಭಿಸಿದವರ ಪ್ರಥಮ ಫಲ ಪರಪ್ರೀತಿ. ಅಂದರೆ ಪರರಿಗಾಗಿ ತಮ್ಮನ್ನೇ ಸಮರ್ಪಿಸಿಕೊಳ್ಳುವ ಮನೋಭಾವ ಹಾಗೂ ಸರ್ವರೂ ಸಹ ದೇವರ ರಾಜ್ಯದೆಡೆಗೆ ಸಾಗುವಂತೆ ಅವರಿಗೆ ಅನುವು ಮಾಡಿಕೊಡುವುದು ಹಾಗೂ ಅದಕ್ಕಾಗಿ ಜೀವನ ಪರಿಯಂತರ ಶ್ರಮಿಸುವುದು. ಅಂತವರ ಅಂತರಾಳದಲ್ಲಿ ಪವಿತ್ರಾತ್ಮರ ಸತ್ಫಲಗಳಾದ: ಪ್ರೀತಿ, ಆನಂದ, ಶಾಂತಿ ಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಜನ್ಯ ಸಂಯಮ ಮನೆ ಮಾಡುತ್ತವೆ (ಗಲಾತ್ಯ ೫:೨೨). ಈ ಸತ್ಫಲಗಳು ದೈವಾನುಭಾವದ ಹೊನಲಾಗಿ ಹರಿಯಲು ನಾಂದಿಯಾಗುತ್ತವೆ. ಯಾರು ದೇವರ ಪ್ರಸನ್ನತೆಯಲ್ಲಿ ನಿರಂತರವೂ ನೆಲೆಸಲು ತಮ್ಮನ್ನು ರೂಢಿಸಿಕೊಳ್ಳುತ್ತಾರೋ ಅಂತಹವರು ಆತ್ಮಾನುಭಾವದ ಪಯಣವನ್ನು ದೈವೀ ಕೃಪೆಯಿಂದ ಪ್ರಾರಂಭಿಸಿ ಸಫಲರಾಗಬಹುದು. ದೈವಾನುಭಾವಿಗಳು ಈ ಲೋಕದಲ್ಲಿರುವಾಗಲೇ ಸ್ವರ್ಗಾನಂದದ ಸವಿಯನ್ನು ಸವಿಯಬಹುದು.












No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...