Monday, 8 October 2018

ನಡುಗಡ್ಡೆಗಳ ದೇಶದಲ್ಲಿ ಗುಡ್ಡ ಹತ್ತುವ ‘ಮೋಕ್ಷದ ರಾಣಿ’

¨ ಎಫ್. ಎಂ. ನಂದಗಾವ


ನಡುಗಡ್ಡೆಗಳ ದೇಶ ಫಿಲಿಪ್ಪೈನ್ಸಿನ ಪ್ರಮುಖ ನಡುಗಡ್ಡೆ ಲುಝೋನ್ ನಡುಗಡ್ಡೆಯ ಆಗ್ನೇಯ ಭಾಗದ ಅಲ್ಬೆ ಜಿಲ್ಲೆಯ ಟಿವಿ ಪಟ್ಟಣದ ಸಮೀಪದಲ್ಲಿನ ಗುಡ್ಡದ ಜರೋನ್ ಊರಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೋಕ್ಷದ ರಾಣಿ ಮಾತೆ ಮರಿಯಳನ್ನು ದೀಪದ ರಾಣಿ ಎಂದೂ ಭಕ್ತರು ಕರೆಯುತ್ತಾರೆ. ಅಲ್ಬೆ ಜಿಲ್ಲೆಯ ಟಿವಿ ಪಟ್ಟಣದ ಸನಿಹದ ಜರೋನ್ ನದಿ ಕೊಳ್ಳದ ದಂಡೆಯ ಗುಡ್ಡದ ಮೇಲಿರುವ ಜರೋನ್ ಗ್ರಾಮದಲ್ಲಿಯೇ, ಶತಮಾನಗಳ ಹಿಂದೆಯೇ ಮೊಟ್ಟ ಮೊದಲು ಮೋಕ್ಷದ ರಾಣಿ ಮಾತೆ ಮರಿಯಳ ಗೌರವ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ಆರಾಧನೆಗೆ ಪುಟ ಕೊಟ್ಟಿದ್ದು ಅಲ್ಲಿನ ಶತಮಾನಗಳ ಪುರಾತನ ಕಾಷ್ಠದ ಸ್ವರೂಪವೆಂದು ಎಂದು ಅಲ್ಲಿನ ಸ್ಥಳೀಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಕಳೆದ ಶತಮಾನದ 1976ರಲ್ಲಿಯೇ ಕಥೋಲಿಕ ಧರ್ಮಸಭೆಯು, ಪುಣ್ಯಕ್ಷೇತ್ರ ಜರೋನಿನ ಮೋಕ್ಷದ ರಾಣಿ ಮಾತೆ ಮರಿಯಳನ್ನು ಅಲ್ಬೆ ಜಿಲ್ಲೆಯ ಸ್ವರ್ಗೀಯ ಪಾಲಕ ಸಂತಳೆಂದು ಘೋಷಿಸಿದೆ.
ನಯನ ಮನೋಹರ ಕಾಷ್ಠದ ಸ್ವರೂಪ:
ಕಥೋಲಿಕ ಧಾರ್ಮಿಕ ವಿಶ್ವಾಸದ ಪ್ರಕಾರ ರಕ್ಷಕ ಯೇಸುಸ್ವಾಮಿಯ ರಕ್ಷಣಾ ಕಾರ್ಯದಲ್ಲಿ ಕನ್ಯಾಮಾತೆ ಮರಿಯಳು ಜೊತೆಯಾಗಿ ನಿಂತವಳು, ಅವಳು ಮಾನವರಿಗೆ ರಕ್ಷಣಾ ಕವಚವನ್ನಿತ್ತ ಮಾತೆ ಎಂದು ಗೌರವಿಸಲಾಗುತ್ತದೆ.
ಈ ಕಾಷ್ಠದ ಸ್ವರೂಪದಲ್ಲಿ ಮಾತೆ ಮರಿಯಳು ಎಡ ತೋಳಿನಲ್ಲಿ ಬಾಲಯೇಸುವನ್ನು ಎದೆಗೆ ಹಚ್ಚಿಕೊಂಡು ತಬ್ಬಿಕೊಂಡಿದ್ದರೆ, ಬಲಗಡೆಯ ತೋಳನ್ನು ಚಾಚಿ ಅಭಯ ನೀಡುತ್ತಾ ನರಕದ ಬಾಯಿಗೆ ಬೀಳುತ್ತಿರುವ ಮಾನವನ ಎಡಗೈ ಮುಂಗೈಯನ್ನು ಹಿಡಿದು ತಡೆದಿದ್ದಾಳೆ. ಕಾಲ ಬುಡದಲ್ಲಿ ಮೊಣಕಾಲೂರಿ ಕುಳಿತಿರುವ ದೇವದೂತಳೊಬ್ಬಳು ಉರಿಯುತ್ತಿರುವ ಹೃದಯಗಳಿರುವ ಬುಟ್ಟಿಯನ್ನು ಬಾಲ ಯೇಸುವಿಗೆ ಸಮರ್ಪಿಸುತ್ತಿದ್ದಾಳೆ.
ಬಾಲ ಯೇಸುಸ್ವಾಮಿ ಬಲಗೈಯಲ್ಲಿ ಉರಿಯುವ ಹೃದಯವನ್ನು ಹಿಡಿಕೊಂಡಿದ್ದರೆ, ಎಡಗೈಯನ್ನು ಮುಂದೆ ಚಾಚಿ ತನಗೆ ಅರ್ಪಿಸಲಾಗುತ್ತಿರುವ ಉರಿಯುತ್ತಿರುವ ಹೃದಯಗಳ ಬುಟ್ಟಿಯನ್ನು ಸ್ವೀಕರಿಸುವಂತೆ ಕಾಣುತ್ತದೆ.
ಸೆಪ್ಟೆಂಬರ್ 8ರ ಸಾಂಪ್ರದಾಯಿಕ ಹಬ್ಬ:
ಜರೋನ್ ನದಿ ಕೊಳ್ಳದ ದಂಡೆಯ ಮೇಲಿರುವ ಜರೋನ್ ಊರಿನ ಬಲಕ್ಕೆ ಲಗೋನ್ಯ ಕೊಲ್ಲಿ ಇದೆ. ಕಪ್ಪು ಮರಳಿನ ಸಮುದ್ರ ತೀರದ ಹತ್ತಿರದ ಈ ಊರಿನಲ್ಲಿ ಆಗಸ್ಟ ತಿಂಗಳಿನಿಂದ ಸೆಪ್ಟೆಂಬರ 8ರವರಗೆ ಸಾಂಪ್ರದಾಯಿಕ ಹಬ್ಬ ಜರಗುತ್ತದೆ.
ಆಗಸ್ಟ್ ತಿಂಗಳ ಕೊನೆಯ ಶನಿವಾರವು, ಬೈಕುಲ್ ಭಾಷಿಕರಿರುವ ಈ ಪ್ರದೇಶದ ಕಥೋಲಿಕ ಕ್ರೈಸ್ತ ವಿಶ್ವಾಸಿಕರಿಗೆ ಒಂದು ವಿಶೇಷವಾದ ದಿನ. ಅಂದು ಭಕ್ತರು ಟಿವಿ ಪಟ್ಟಣಲ್ಲಿನ ಸಂತ ಲಾರೆನ್ಸ್ ಚರ್ಚಿನಿಂದ 9 ಕಿ. ಮೀ ದೂರದ ಜರೋನಿನ ಮಾತೆ ಮರಿಯಳ ಪವಿತ್ರ ಕ್ಷೇತ್ರದ ತನಕ ನಡೆಯುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ. ಆಗ, ಮೋಕ್ಷದ ರಾಣಿಯ ಸ್ವರೂಪವನ್ನು ಸಮುದ್ರ ತೀರದಿಂದ ಬೆಟ್ಟದ ಮೇಲಿನ ಪುಣ್ಯಕ್ಷೇತ್ರಕ್ಕೆ ಸಡಗರದ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.
ಬಿದ್ದರೂ ಬಾಡದ ಹಸುರೆಲೆಗಳ ಕಾಂಡ:
ಬುಹಿ ಹೆಸರಿನ ಸರೋವರದ ದೆಸೆಯಿಂದ ಬುಹಿ ಹೆಸರು ಪಡೆದ ಪಟ್ಟಣದಲ್ಲಿ ನೆಲೆಸಿದ್ದ ಸ್ಪೇನ್ ಮೂಲದ ಶ್ರೀಮಂತ ಸಿಲ್ವೆರೋ ಅರ್ಸಿಲ್ಲಾ ಎಂಬಾತ ಜರೋನ್ ಆಸುಪಾಸಿನಲ್ಲಿ ಭೂಮಿ ಕಾಣಿಯ ಭಾರಿ ಆಸ್ತಿಪಾಸ್ತಿ ಹೊಂದಿದ್ದ. ಎಕರೆಗಟ್ಟಲೇ ಜಮೀನು ಹೊಂದಿದ್ದ ಆ ಜಮೀನುದಾರ, ತನ್ನ ಒಡೆತನದ ತೋಟಪಟ್ಟಿ, ಹೊಲಗದ್ದೆ, ಪಶುಸಂಗೋಪನೆ ಮುಂತಾದ ವ್ಯವಹಾರಗಳನ್ನು ನೋಡಿಕೊಳ್ಳಲು ಮರಿಯಾನೋ ಡಕೊಬಾ ಎಂಬ ರೈತನಿಗೆ ಗುತ್ತಿಗೆ ಆಧಾರದಲ್ಲಿ ಒಪ್ಪಿಸಿದ್ದ.
ಒಡೆಯನಿಗೆ ಸೇರಿದ್ದ ಕಾಡು ಪ್ರದೇಶದಲ್ಲಿನ ಮರಮಟ್ಟು ಕಡಿದು ಸಾಗಿಸುವಾಗ ಸ್ಥಳೀಯ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಬಾಳುವ ಕಲ್ಪಿ ಹೆಸರಿನ ಜಾತಿಯ ದೊಡ್ಡ ಬೊಡ್ಡೆ ಹೊಂದಿದ್ದ ಮರವನ್ನು ಕಡಿದಾಗ ವಿಶೇಷವೊಂದು ಜರುಗಿತು. ಭಾರಿ ಕಾಂಡದ ಆ ಮರವನ್ನು ಬೇರು ಸಮೇತ ಕಡಿದು ಉರುಳಿಸಿ ಬಹಳ ದಿನಗಳು ಕಳೆದರೂ, ಆ ಕಾಂಡದ ಟೊಂಗೆಗಳಲ್ಲಿನ ಹಸಿರೆಲೆಗಳು ಬಾಡಿ ಮುದುಡಿ ಉದುರಿ ಬೀಳದೆ, ಹಸಿರು ತುಂಬಿಕೊಂಡು ನಳನಳಿಸುತ್ತಲೇ ಇದ್ದವು.
ಈ ವಿಸ್ಮಯದ ಸಮಾಚಾರವನ್ನು ಡಕೋಬಾ ಬುಹಿಯಲ್ಲಿದ್ದ ತನ್ನ ಯಜಮಾನ ಅರ್ಸಿಲ್ಲಾರ ಗಮನಕ್ಕೆ ತಂದ. ಧರ್ಮಭೀರು ಆಗಿದ್ದ ಅರ್ಸಿಲ್ಲಾ, ತನ್ನ ಎಸ್ಟೇಟಿನಲ್ಲಿನ ಕಡಿದ ಮರದ ಎಲೆಗಳು ಹಸಿರಿನಿಂದ ಕಂಗೊಳಿಸುತ್ತಿರುವ ವಿಸ್ಮಯಕಾರಿ ಅಪರೂಪದ ಸಂಗತಿಯನ್ನು ಬುಹಿಯಲ್ಲಿನ ಪಾದ್ರಿಗಳ ಕಿವಿಗೆ ಮುಟ್ಟಿಸಿದ.
ವಿಸ್ಮಯಕಾರಿ ಗುಣದ ಮರದ ಸ್ವರೂಪಗಳು:
ವಿಶೇಷ ಗುಣದ ವಿಸ್ಮಯಕಾರಿ ಲಕ್ಷಣದ ಕಲ್ಪಿ ಮರದ ಕಾಂಡವನ್ನು ಕಂಡು ಪ್ರಭಾವಿತರಾದ ಆ ಸ್ವಾಮಿಯವರು, ಅಂದಿನ ಒಬ್ಬ ಹೆಸರುವಾಸಿ ಆಚಾರಿ ಬಗಕುಂಬಾ ಎಂಬ ಬಡಿಗನನ್ನು ಕರೆಯಿಸಿ, ಭಾರಿ ಗಾತ್ರದ ಆ ಮರದ ಕಾಂಡದಿಂದ ಮೋಕ್ಷದ ರಾಣಿ ಮಾತೆ ಮರಿಯಳ, ವಿರಕ್ತಳಾದ ಕನ್ನಿಕೆ ಮಾತೆ ಮರಿಯಳ ಮತ್ತು ಪಾದ್ವದ ಸಂತ ಅಂತೋನಿ ಅವರ ಸ್ವರೂಪಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ.
ಇದೆಲ್ಲಾ ನಡೆದದ್ದು 1770ರ ಸುಮಾರಿನಲ್ಲಿ. ಮುಂದೆ 1776ರ ಆಗಸ್ಟ್ ತಿಂಗಳ 25ರಂದು ಮೋಕ್ಷದ ರಾಣಿ ಮಾತೆ ಮರಿಯಳ ಸ್ವರೂಪದ ಕೆತ್ತನೆಯ ಕೆಲಸ ಮುಗಿದಾಗ, ಊರಲ್ಲಿ ಆ ಸ್ವರೂಪವನ್ನು ಸ್ಥಾಪಿಸಲು ಒಂದು ಪುಟಾಣಿ ಚರ್ಚ್ ಕಟ್ಟಬೇಕು ಎಂಬ ಕರಾರಿನೊಂದಿಗೆ, ಅದನ್ನು ಜರೋನ್ ಗ್ರಾಮಸ್ಥರಿಗೆ ಕೊಡಲಾಯಿತು.
ಸ್ವರೂಪದ ಒಡೆತನದ ವಿವಾದ:
ಮೋಕ್ಷ ರಾಣಿ ಮಾತೆ ಮರಿಯಳ ಸ್ವರೂಪವನ್ನು ಸಿದ್ಧಪಡಿಸಲು ಬೇಕಾದ ಮರ ದೊರಕಿದ್ದು ಅರ್ಸಿಲ್ಲಾ ಅವರ ಜಮೀನನಲ್ಲಿ, ಹೀಗಾಗಿ ಅರ್ಸಿಲ್ಲಾ ಸ್ವರೂಪದ ಮೂಲ ಹಕ್ಕುದಾರ. ಬುಹಿಯಲ್ಲಿನ ಸ್ವಾಮಿಯವರು ಆ ಸ್ವರೂಪದ ಕೆತ್ತನೆಯ ಕೆಲಸ ಆರಂಭವಾಗಲು ಕಾರಣರಾಗಿದ್ದರು. ಮತ್ತೆ ಆ ಕೊಡ್ಡದಲ್ಲಿ ಸ್ವರೂಪವನ್ನು ಕೆತ್ತಿದ ಆಚಾರಿ ಬುಹಿ ಪಟ್ಟಣದ ನಿವಾಸಿಯಾಗಿದ್ದ.
ಈ ಹಿನ್ನೆಲೆಯಲ್ಲಿ 1853ರಲ್ಲಿ ಬುಹಿ ಮತ್ತು ಜರೋನ್ ನಿವಾಸಿಗಳ ನಡುವೆ ಆ ಸ್ವರೂಪದ ಒಡೆತನದ ಬಗ್ಗೆ ವಿವಾದ ಉಂಟಾಯಿತು. ಜರೋನಿನ ನಿವಾಸಿಗಳಿಂದ ಐವತ್ತು ಪೆಸೋ (ರೂಪಾಯಿ)ಗಳನ್ನು, ಜೊತೆಗೆ ತಮ್ಮೂರಿನ ಚರ್ಚಿಗೆ ಹೊಸ ಗಂಟೆ ಕೊಳ್ಳಲು ಮತ್ತೆ25 ಪೆಸೋ (ರೂಪಾಯಿ) ಇಸಿದುಕೊಂಡ ಬುಹಿ ಊರಿನ ನಿವಾಸಿಗಳು, ಆ ಮೋಕ್ಷದರಾಣಿ ಮಾತೆ ಮರಿಯಳ ಸ್ವರೂಪದ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಡುತ್ತಾರೆ. ಆ ಪವಾಡದ ಸ್ವರೂಪದ ದೆಸೆಯಿಂದ ಈಗ ಜರೋನ್ ಊರು ಪುಣ್ಯಕ್ಷೇತ್ರದ ಆದರದ ಪಟ್ಟವನ್ನು ಗಳಿಸಿಕೊಂಡಿದೆ.
ಸ್ಥಳೀಯ ಕಥೋಲಿಕ ಭಕ್ತರಲ್ಲಿ ಮೋಕ್ಷದ ರಾಣಿ ಮಾತೆ ಮರಿಯಳ ಕುರಿತಂತೆ ಹಲವಾರು ಪವಾಡದ ಕತೆಗಳು, ಐತಿಹ್ಯಗಳು ಕಂಡುಬರುತ್ತವೆ.
ಯಶಸ್ಸು ಕಾಣದ ಕೊಳ್ಳಿಯಿಡುವ ಪ್ರಯತ್ನ:
ಶತಮಾನಗಳ ಹಿಂದೆ ಸಮುದ್ರಕ್ಕೆ ಹತ್ತಿರದ ಜರೋನ್ ಊರು ಆಗಾಗ ಸಮುದ್ರಗಳ್ಳರ ದಾಳಿಗೆ ಬಲಿಯಾಗುತ್ತಿತ್ತು. ಮಹಮ್ಮದೀಯ ಸಮುದ್ರಗಳ್ಳರ ಹಾವಳಿ ಕಾಣಿಸಿಕೊಂಡಾಗಲೆಲ್ಲಾ ಊರವರು, ಮೋಕ್ಷದ ರಾಣಿ ಮಾತೆ ಮರಿಯಳ ಸ್ವರೂಪದ ಮುಂದೆ ನಿಂತು ತಮ್ಮನ್ನು ರಕ್ಷಣೆ ಮಾಡುವಂತೆ ಕೋರಿಕೊಳ್ಳುತ್ತಿದ್ದರು. ಮೋಕ್ಷದ ರಾಣಿ ಮಾತೆ ಮರಿಯಳ ಪ್ರಭಾವವೋ ಏನೋ ಪ್ರತಿ ಬಾರಿ ಊರಿಗೆ ದಾಳಿಯಿಟ್ಟ ಸಂದರ್ಭಗಳಲ್ಲಿ ಮನೆಗಳಿಗೆ ಕೊಳ್ಳಿ ಇಡುವ ಅವರ ಪ್ರಯತ್ನ ಯಶಸ್ಸು ಕಾಣುತ್ತಿರಲಿಲ್ಲ.
ಅದೆ ಅವಧಿಯಲ್ಲಿ ನಡೆದ ಮುಸ್ಲಿಂ ದಾಳಿಕೋರರ ಬಂಧನಕ್ಕೆ ಒಳಗಾಗಿ ದಕ್ಷಿಣಕ್ಕಿರುವ ದೂರದ ಸುಲು ನಡುಗಡ್ಡೆಗೆ ಸಾಗಿಸಲಾದ ಮಹಿಳೆ ತಿರಾಯಳ ಕತೆ ರೋಚಕವಾಗಿದೆ. ಅವಳು ನಿದ್ರೆಯಿಂದ ಎದ್ದಾಗ ಅವಳು ಅಪರಿಚಿತ ಕಾಡಿನಲ್ಲಿದ್ದಳು. ಬಿಳಿ ಬಣ್ಣದ ಜಿಂಕೆಯೊಂದು ಕಾಣಿಸಿದಾಗ, ಕುತೂಹಲದಿಂದ ಅದನ್ನು ಬೆನ್ನಟ್ಟಿ ಹೋದವಳು ಬೆಟ್ಟದಲ್ಲಿ ತನ್ನನ್ನು ತಾನು ಕಳೆದುಕೊಂಡುಬಿಟ್ಟಳು.
ಅವಳು ಸುಲು ನಡುಗಡ್ಡೆಯಿಂದ ಲೆಪಾಜ್ಪಿ ಪ್ರದೇಶದ ಹತ್ತಿರ ಬಂದು ಬಿಟ್ಟಿದ್ದಳು. ಅದು ಜರೋನ್ ಊರಿಗೆ ತೀರ ಹತ್ತಿರದ ಪ್ರದೇಶವಾಗಿತ್ತು. ಅವಳ ಬಂಧನದಿಂದ ಬಿಡುಗಡೆಯ ಕತೆ ಕೇಳಿದ ಊರ ಜನರು, ಪ್ರಭಾವಿತರಾಗಿ ಸಮುದ್ರ ಸಮೀಪದಲ್ಲಿದ್ದ ಪುಟಾಣಿ ಚರ್ಚ್ ಕಟ್ಟಡವನ್ನು ದೂರದ ಬೆಟ್ಟದ ಪ್ರದೇಶಕ್ಕೆ ಸ್ಥಳಾಂತರಿಸಿದರು.
ಸ್ವರೂಪದ ಬುಡ ಮುಟ್ಟಿದ ಮೇಣದ ಬತ್ತಿ:
ಇನ್ನೊಂದು ಪ್ರಕರಣ ಜರೋನಿನಿಂದ ಪೂರ್ವದ ಕಡೆಗಿರುವ ಕಟಂಡುನೆಸ್ ನಡುಗಡ್ಡೆಯ ನಾಲ್ವರು ಯಾತ್ರಾರ್ಥಿಗಳದ್ದು. ಜರೋನ್ ಗೆ ತೀರ್ಥಯಾತ್ರೆಗೆ ಬಂದಿದ್ದ ಈ ನಾಲ್ವರು, ಮೋಕ್ಷದ ರಾಣಿ ಮಾತೆ ಮರಿಯಳಿಗೆ ಸಲ್ಲಿಸುವ ಸಲುವಾಗಿ ಜತನದಿಂದ ಜೇನುಗೂಡಿನ ಮೇಣದಿಂದ ಸಿದ್ಧಪಡಿಸಿದ ಮೇಣದ ಬತ್ತಿಗಳನ್ನು ತಂದಿದ್ದರು. ತೀರವನ್ನು ಮುಟ್ಟಿದ ನಂತರ ಅವರು ಬುಹಿಯಲ್ಲಿರುವ ಸಂತ ಅಂತೋನಿಯವರ ಕ್ಷೇತ್ರಕ್ಕೆ ತೆರಳಿದ್ದರು. ನಾಲ್ವರಲ್ಲಿ ಮೂವರು ಅಂತೋನಿಯವರ ಕ್ಷೇತ್ರದತ್ತ ಸಾಗಿದರೆ, ಉಳಿದವನೊಬ್ಬ ಸಮುದ್ರ ತೀರದಲ್ಲಿದ್ದ ದೋಣಿಯನ್ನು ಕಾಯತೊಡಗಿದ್ದ.
ಸಂಜೆಯ ಕಾವಳದಲ್ಲಿ ಸಮುದ್ರ ತೀರದಲ್ಲಿ ಅಡ್ಡಾಡುವಾಗ ಮಗುವನ್ನು ಹೊತ್ತ ಮಹಿಳೆಯೊಬ್ಬಳು ಅವನನ್ನು ಕಂಡು, ತಾನು ಬೆಟ್ಟದ ಮೇಲಿರುವುದು, ಕತ್ತಲಾಗುತ್ತಿದೆ. ಸದ್ಯಕ್ಕೆ ನಿನ್ನಲ್ಲಿರುವ ಮೇಣದ ಬತ್ತಿಗಳನ್ನು ಕೊಡು ಎನ್ನುತ್ತಾಳೆ. ಅವು ನನ್ನವಲ್ಲ ನನ್ನ ಸ್ನೇಹಿತರದ್ದು ಹೇಗೆ ಕೊಡಲಿ? ಎಂದಾಗ ಮಗುವನ್ನು ಹೊತ್ತುಕೊಂಡಿದ್ದ ಆ ಮಹಿಳೆ, ಮೇಣದ ಬತ್ತಿಗಳನ್ನು ನಾಳೆ ನಿನಗೆ ತಪ್ಪದೇ ವಾಪಸು ಮಾಡುವೆ. ಬೆಳಿಗ್ಗೆ ನೀನು ಬೆಟ್ಟ ಹತ್ತಿ ಬಂದಾಗ, ಯಾರಲ್ಲಾದರೂ ನನ್ನನ್ನು ವಿಚಾರಿಸು ನನ್ನ ಮನೆ ತೋರಿಸುತ್ತಾರೆ ಎಂದು ಹೇಳುತ್ತಾಳೆ. ಮಹಿಳೆಯ ಕೋರಿಕೆಯಂತೆ ಮೇಣದ ಬತ್ತಿಯನ್ನು ಕೊಡುವ ಆ ಯಾತ್ರಿಕ ತನ್ನ ಸಹ ಯಾತ್ರಿಕರೊಂದಿಗೆ ಬೆಟ್ಟ ಹತ್ತಿ ಅಲ್ಲೆಲ್ಲಾ ಚಿಕ್ಕಮಗುವನ್ನು ಹೊತ್ತಿದ್ದ ಮಹಿಳೆಯ ಕುರಿತು ವಿಚಾರಿಸುತ್ತಾನೆ. ಆದರೆ, ಯಾರಿಗೂ ಆ ಮಹಿಳೆಯ ಬಗ್ಗೆ ಗೊತ್ತಾಗುವುದಿಲ್ಲ.
ಕೊನೆಗೆ ಮಾತೆ ಮರಿಯಳ ಪುಟಾಣಿ ಚರ್ಚಿಗೆ ಹೋಗಿ ಮಾತೆ ಮರಿಯಳಲ್ಲಿ, ಪ್ರಾರ್ಥನೆ ಸಲ್ಲಿಸುತ್ತಾ ನಾನು ಒಬ್ಬ ಮಗುವನ್ನು ಹೊತ್ತ ಮಹಿಳೆಗೆ ಮೇಣದ ಬತ್ತಿಕೊಟ್ಟೆ ನಿನಗೆ ಉರಿಸಲು ನನ್ನಲ್ಲಿ ಈಗ ಒಂದೂ ಮೇಣದ ಬತ್ತಿ ಇಲ್ಲದಂತಾಗಿದೆ, ಕ್ಷಮಿಸು ಎನ್ನುತ್ತಾ ಕತ್ತೆತ್ತಿದರೆ, ಅವನು ಮಹಿಳೆಗೆ ಕೊಟ್ಟಿದ್ದ ಮೇಣದ ಬತ್ತಿಗಳನ್ನು ಹೋಲುವ, ಜೇನುಮೇಣದ ಬತ್ತಿಗಳನ್ನು ಉರಿಸದೇ ಮೋಕ್ಷದ ರಾಣಿ ಮಾತೆ ಮರಿಯಳ ಪದತಲದಲ್ಲಿ ಇರಿಸಿರುವುದು ಕಾಣಿಸುತ್ತವೆ ! ದಿಗ್ಮೂಢನಾದ ಆ ಯಾತ್ರಿಕ ತೋಬಾ ತೋಬಾ ಎಂದು ಗಲ್ಲ ಬಡಿದುಕೊಂಡು ತನ್ನನ್ನು ಕ್ಷಮಿಸೆಂದು ಕೋರಿಕೊಂಡು ಸಾಷ್ಟಾಂಗವೆರಗುತ್ತಾನೆ.
ತತ್ತರಿಸಿದ ಮುಸ್ಲಿಂ ದಾಳಿಕೋರರು:
ದಾಳಿಕೋರ ಮುಸ್ಲಿಂ ಸಮುದ್ರಗಳ್ಳರ ಹಾವಳಿ ನಿರಂತರವಾಗಿರುತ್ತದೆ. ಒಂದು ಬಾರಿ ಮುಸ್ಲಿಂ ದಾಳಿಕೋರರು ಬಂದಾಗ, ಅವರಿಗೆ ತಮ್ಮನ್ನು ಎದುರಿಸಲು ದೊಡ್ಡ ಸೇನೆಯ ದಂಡೇ ಬಂದಂತೆ ಭಾಸವಾಗುತ್ತದೆ. ಅವರು ಹಿಂತಿರುಗಿ ನೋಡದೆ ಪಲಾಯನಗೈಯುತ್ತಾರೆ. ಈ ಘಟನೆಯಿಂದ ತತ್ತರಿಸಿದ ಮುಸ್ಲಿಂ ಸಮುದ್ರಗಳ್ಳರು ನಂತರ ಈ ಪ್ರದೇಶದತ್ತ ಮುಖ ಮಾಡುವುದಿಲ್ಲ. ಹೀಗಾಗಲು ಕಾರಣ ಮಾತೆ ಮರಿಯಳು ಎಂದು ಜರೋನ್ ಜನ ಹೇಳುತ್ತಾರೆ.
ಕಳೆದ ಶತಮಾನದಲ್ಲಿ 1884ರ ಮೋಕ್ಷದ ರಾಣಿಯ ವಾರ್ಷಿಕ ಹಬ್ಬದಲ್ಲಿ ಭಾಗವಹಿಸಲು ಪರ್ಟಿಡೊ ಪ್ರದೇಶದಿಂದ ಬಂದಿದ್ದ ಯಾತ್ರಾರ್ಥಿಗಳ ದೋಣಿಯು ಬಿರುಗಾಳಿ, ಅದರೊಂದಿಗೆ ಎದ್ದ ಭಾರಿ ಗಾತ್ರದ ಅಲೆಗಳ ಹೊಡೆತದಿಂದ ಬುಡಮೇಲಾಗುತ್ತದೆ. ಆದರೂ, ಬದುಕುಳಿಯುವ ಆ ಯಾತ್ರಾರ್ಥಿಗಳು ತೀರದಲ್ಲಿ ಹೆಜ್ಜೆ ಇಟ್ಟಾಗ ಅವರ ಬಟ್ಟೆಗಳು ಅದೇ ತಾನೆ ಮಡಿ ಮಾಡಿ ಇಸ್ತ್ರೀ ಮಾಡಿಸಿದಂತಿದ್ದವಂತೆ!
ಅಭಿವೃದ್ಧಿಯತ್ತ ಮೋಕ್ಷದ ರಾಣಿ ಕ್ಷೇತ್ರ:
ಹತ್ತೊಂಬತ್ತನೇ ಸಾಲಿನ ಉತ್ತರಾರ್ಧದಲ್ಲಿ ಪವಿತ್ರ ಕ್ಷೇತ್ರ ಜರೋನ್ ಬುಹಿ ಪ್ರದೇಶದ ಆಡಳಿತಕ್ಕೆ ಸೇರಬೇಕೋ ಅಥವಾ ಅಲ್ಬೆಯ ಟಿವಿ ಪ್ರದೇಶದ ಆಡಳಿತಕ್ಕೆ ಒಳಪಡಬೇಕೋ ಎಂಬ ವಿವಾದ ಉಂಟಾದಾಗ, ಅದು ಟಿವಿ ಪ್ರದೇಶಕ್ಕೆ ಸನಿಹವಿರುವುದರಿಂದ ಅದನ್ನು ಟಿವಿಯ ಆಡಳಿತಕ್ಕೆ ಒಪ್ಪಿಸಲಾಯಿತು. 1890ರ ಸಮಯಕ್ಕೆ ಜರೋನ್ ಊರು ಯಾರಿಗೆ ಸೇರಬೇಕು? ಎಂಬ ವಿವಾದ ಬಗೆಹರಿದಿತ್ತು, ದಾಳಿಕೋರ ಮುಸ್ಲಿಂ ಸಮುದ್ರಗಳ್ಳರ ಹಾವಳಿಯು ನಿಂತಿತ್ತು. ಶಾಂತಿ ಸಮಾಧಾನದ ಆ ದಿನಗಳಲ್ಲಿ ಮೋಕ್ಷದ ರಾಣಿಯ ಕ್ಷೇತ್ರವು ಅಭಿವೃದ್ದಿಗೊಳ್ಳತೊಡಗಿತ್ತು.
ಶ್ರೀಮಂತ ಮಹಿಳೆಯೊಬ್ಬಳು, ಮೋಕ್ಷದ ರಾಣಿಯ ಸ್ವರೂಪಕ್ಕೆ ಬೆಳ್ಳಿ ಬಂಗಾರದ ಲೇಪನಕ್ಕೆ ಧನಸಹಾಯ ಮಾಡಿದಳು. ನಂತರ ಜರೋನ್ ಊರಿನ ಮಧ್ಯಭಾಗದಲ್ಲಿ ನೂತನ ಚರ್ಚ್ ಕಟ್ಟಲು ಸಿದ್ಧತೆ ನಡೆಸಿದಳು. ಹಲವಾರು ಶ್ರೀಮಂತರು ಅವಳ ಬೆಂಬಲಕ್ಕೆ ನಿಂತರು. ಕಾಸಾ ಎಂಬ ವಾಸ್ತುಶಿಲ್ಪಯನ್ನು ನಿಯಮಿಸಲಾಯಿತು. ದೀರ್ಘ ಪ್ರಯಾಣದಿಂದ ಅನಾರೋಗ್ಯಕ್ಕೀಡಾದ ಆತ ಆಶ್ಚರ್ಯಕರ ರೀತಿಯಲ್ಲಿ ಒಂಬತ್ತನೇ ದಿನ ಗುಣಹೊಂದಿ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಂಡ.
ಜಾರಿಗೆ ಬಂದ ಅವರೋಹಣದ ಸಂಪ್ರದಾಯ:
ಕೆಳಗಿನ ಬಯಲಲ್ಲಿ ಹೊಸ ಚರ್ಚ್ ಕಟ್ಟಿದಾಗ, ಬೆಟ್ಟದ ಮೇಲಿನ ಪುಟ್ಟದಾದ ಕಿರಿಯ ಚರ್ಚಿನಲ್ಲಿದ್ದ ಮೋಕ್ಷದ ರಾಣಿಯ ಸ್ವರೂಪವನ್ನು ಬಯಲಿನ ಚರ್ಚಿಗೆ ತರುವ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು.
ಜರೋನಿನ ಮೋಕ್ಷದ ರಾಣಿಯ ಸ್ವರೂಪವನ್ನು ಆದರದಿಂದ ಕಾಣುತ್ತಿದ್ದ ಟಿವಿ ಪಟ್ಟಣದ ಜನರ ಭಕ್ತಿಯ ದೆಸೆಯಿಂದ ಕೆಳಗಿನ ಬಯಲಿನ ಚರ್ಚಿನಲ್ಲಿ ಹಬ್ಬಗಳು ಜರುಗಿದಾಗ, ಬೆಟ್ಟದ ಮೇಲಿನಿಂದ ಮಾತೆಯ ಸ್ವರೂಪವನ್ನು ಮೆರವಣಿಗೆಯಲ್ಲಿ ಕೆಳಗೆ ತರಲಾಗುತ್ತಿತ್ತು. ಮಾತೆಯ ಪುರಪ್ರವೇಶಕ್ಕೆ ಟಿವಿ ಪಟ್ಟಣ ಶೃಂಗಾರದಿಂದ ಅಲಂಕೃತಗೊಳ್ಳುತ್ತಿತ್ತು.
ಮುಂದೆ 1895ರಲ್ಲಿ ಭಯಂಕರ ಬಿರುಗಾಳಿ ಮಳೆಗಾಳಿಗೆ ಜರೋನಿನಲ್ಲಿ ಮನೆಗಳು ಕುಸಿದವು, ಚರ್ಚು ಜಖಂಗೊಂಡಿತು. ಆದರೆ, ಪವಾಡಸದೃಶ ರೀತಿಯಲ್ಲಿ ಮೋಕ್ಷದ ರಾಣಿಯ ಸ್ವರೂಪವು ಎಳ್ಳಷ್ಟೂ ಮುಕ್ಕಾಗದೇ ಪೀಠದಲ್ಲಿ ಗಟ್ಟಿಯಾಗಿ ಕುಳಿತಿತ್ತು. ಪುಟಾಣಿ ಚರ್ಚನ್ನು ಕಟ್ಟಿದರೂ ಅದು ನಿಲ್ಲಲಿಲ್ಲ.
ಆರೋಹಣದ ಹೊಸಪರಿಪಾಠಕ್ಕೆ ನಾಂದಿ:
ಜರೋನ್ ಮೇಲೆ ಅಧಿಕಾರ ಹೊಂದಿದ್ದ ಟಿವಿಯ ಜನರು, ಹೊಸದಾಗಿ ಚರ್ಚ ಕಟ್ಟುವ ವರೆಗೆ ನಮ್ಮಲ್ಲಿರಲಿ ಎಂದು ಮೋಕ್ಷದ ರಾಣಿಯ ಸ್ವರೂಪವನ್ನು ತಮ್ಮ ಊರಲ್ಲಿಯೇ ಇರಿಸಿಕೊಂಡರು. ಇದಾದ ನಂತರ, ಇಲ್ಲಿಯವರೆಗೆ ಜರೋನ್ ಬೆಟ್ಟದ ಪುಣ್ಯಕ್ಷೇತ್ರದಿಂದ ಅವರೋಹಣ ಮಾಡುತ್ತಿದ್ದ ಮೋಕ್ಷದ ರಾಣಿ ಮಾತೆ ಮರಿಯಳ ಸ್ವರೂಪವು, ಈಗ ಟಿವಿ ಪಟ್ಟಣದಿಂದ ಜರೋನ್ ಬೆಟ್ಟದ ಪುಣ್ಯಕ್ಷೇತ್ರಕ್ಕೆ ಆರೋಹಣ ಮಾಡುವ ಪರಿಪಾಠ ಆರಂಭವಾಯಿತು.
ಮುಂದೆ, 1917ರಲ್ಲಿ ಹಬ್ಬದ ನವೇನಾ ಪ್ರಾರ್ಥನೆಗಳು ಮುಗಿದ ನಂತರವೂ ಮತ್ತಷ್ಟು ದಿನಗಳ ಕಾಲ ಸ್ವರೂಪವನ್ನು ತಮ್ಮಲ್ಲಿ ಇರಿಸಬೇಕೆಂದು ಜರೋನಿನ ಜನ ಪಟ್ಟು ಹಿಡಿದರು. ಅದಕ್ಕೆ ಟಿವಿಯ ಜನ ಒಪ್ಪಲಿಲ್ಲ. ವಿವಾದ ನ್ಯಾಯಾಲಯದ ಕಟ್ಟೆ ಹತ್ತಿತು. ನ್ಯಾಯಾಲಯ ಇದು ಧರ್ಮಸಭೆಗೆ ಸೇರಿದ ವಿಷಯ ಎಂದು ಕೈ ಎತ್ತಿದಾಗ ವಿವಾದವು ಬಿಷಪರ ಕಚೇರಿಯನ್ನು ತಲುಪಿತು.
ಬೆಳಕಿಗೆ ಬಂದ ಹೊಸ ಸಂಗತಿ:
ಈ ನಡುವೆ ಜನಸಂಖ್ಯೆಯೂ ಹೆಚ್ಚಾಗಿತ್ತು. ಕೆಲವು ಸಮೀಪದ ಊರುಗಳನ್ನು ಸೇರಿಸಿ 1919ರಲ್ಲಿ ಜರೋನ್ ಊರಿಗೆ ಹೊಸ ಧರ್ಮಕೇಂದ್ರದ (ಪ್ಯಾರಿಶ್) ಸ್ಥಾನಮಾನ ನೀಡಿ ಒಂದು ಚರ್ಚು ಕಟ್ಟಿಕೊಳ್ಳಲು ಅನುಮತಿ ನೀಡಲಾಯಿತು. ಹಿಂದಾದ ಒಂದು ಒಪ್ಪಂದದಂತೆ ಆರಾಧನೆಯ ಸಂದರ್ಭದಲ್ಲಿ ಟಿವಿಯ ಸಂತ ಲಾರೆನ್ಸ್ ಚರ್ಚಿನಲ್ಲಿ ಹದಿನೈದು ದಿನಗಳ ಕಾಲ ಮೋಕ್ಷದ ರಾಣಿಯ ಸ್ವರೂಪ ಇರಬಹುದಾಗಿತ್ತು. ಹದಿನೈದು ದಿನಗಳಾದರೂ ಟಿವಿಯ ಜನ ಮೋಕ್ಷದ ರಾಣಿಯ ಸ್ವರೂಪವನ್ನು ಹಿಂದಿರುಗಿಸಲಿಲ್ಲ. ಅಂತಿಮವಾಗಿ ಜರೋನಿನ ಜನ ದೊಡ್ಡ ದೋಣಿಯಲ್ಲಿ ಟಿವಿಗೆ ಹೋಗಿ ಸ್ವರೂಪವನ್ನು ಹಿಂದಿರುಗಿಸುವಂತೆ ಕೋರಿಕೊಂಡರು. ಸ್ವರೂಪವನ್ನು ಹಸ್ತಾಂತರಿಸುವ ಸಮಯದಲ್ಲಿ ಗದ್ದಲವಾಯಿತು. ಆಗ ಹೊಸ ಸಂಗತಿಯೊಂದು ಬೆಳಕಿಗೆ ಬಂದಿತು.
ಸ್ವರೂಪದ ಮೇಲಿನ ಹಕ್ಕು ಸಾಧನೆಯ ಹಗ್ಗ ಜಗ್ಗಾಟದಲ್ಲಿ, ಹಿರಿಯರು ಯುವಜನತೆಗೆ ತಿಳಿಯದ ಮಾಹಿತಿಯನ್ನು ಬಹಿರಂಗಪಡಿಸಿದರು. ಟಿವಿಯ ಜನರಲ್ಲಿರುವ ಸ್ವರೂಪವು ಜರೋನ್ ಪುಣ್ಯಕ್ಷೇತ್ರದಲ್ಲಿನ ಸ್ವರೂಪದ ಪ್ರತಿಕೃತಿ. ಜರೋನಿನಲ್ಲಿ ಮುಂಚಿನಿಂದಲೂ ಮೋಕ್ಷದ ರಾಣಿಯ ಸ್ವರೂಪವಿತ್ತು. ಹಬ್ಬದ ಸಂದರ್ಭದಲ್ಲಿ ಅದನ್ನು ಬೆಟ್ಟದಿಂದ ಕೆಳಗೆ ಟಿವಿ ಪಟ್ಟಣಕ್ಕೆ ಕರೆತರಲಾಗುತ್ತಿತ್ತು. ಆದರೆ, ಆ ಪುರಾತನ ಸ್ವರೂಪವು ಕಾಲ ಕಳೆದಂತೆ ಮಾಸಿ, ಲಡ್ಡುಹಿಡಿದು ಹಾಳಾಯಿತು. ಒಂದು ಸಮಯದಲ್ಲಿ, ಅದನ್ನು ಜರೋನಿನ ಜನ ಪೂಜಾ ಅಂಕಣದಿಂದ ತೆರವುಗೊಳಿಸಿದ್ದರು.
ಮುಂದುವರಿದ ಆರೋಹಣದ ಪದ್ಧತಿ:
ಅಂತೂ ಇಂತೂ ಕೊನೆಗೆ ಟಿವಿಯಲ್ಲಿನ ಸ್ವರೂಪವನ್ನು ಜರೋನ್ ಊರಿನ ಪುಣ್ಯಕ್ಷೇತ್ರಕ್ಕೆ ಸ್ಥಳಾಂತರಿಸಲಾಯಿತು. ಜೊತೆಗೆ ಟಿವಿಯ ಜನರು, ಮೋಕ್ಷದ ರಾಣಿ ಮಾತೆ ಮರಿಯಳ ಮೂಲ ಸ್ವರೂಪದ ಇನ್ನೊಂದು ಪ್ರತಿಕೃತಿಯನ್ನು ಹೊಂದುವಂತೆ ಕೋರಲಾಯಿತು.
ಆದರೆ, ಈಗಲೂ ಹಿಂದಿನ ಕಾಲದ ಸಂಪ್ರದಾಯವನ್ನು ಮರೆಯದೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ ತಿಂಗಳ ಕೊನೆಯ ಶನಿವಾರದಂದು ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಟಿವಿ ಸಂತ ಲಾರೆನ್ಸ್ ಚರ್ಚಿನಲ್ಲಿರುವ ಸ್ವರೂಪವನ್ನು ಮೆರವಣಿಗೆಯಲ್ಲಿ ಜರೋನ್ ಊರಲ್ಲಿರುವ ಮೋಕ್ಷದ ರಾಣಿ ಮಾತೆ ಮರಿಯಳ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ನಡುಗಡ್ಡೆಗಳ ದೇಶ ಫಿಲಿಪ್ಪೈನ್ಸಿನ ನಡುಗಡ್ಡೆಯೊಂದರಲ್ಲಿ ಆಗಸ್ಟ್ ತಿಂಗಳ ಹಬ್ಬದ ಸಂದರ್ಭದಲ್ಲಿ ಮೋಕ್ಷದ ರಾಣಿ ಮಾತೆ ಮರಿಯಳಿಗೆ ಗುಡ್ಡ ಹತ್ತುವ ಸಂಭ್ರಮ.



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...