Monday, 8 October 2018

ಬೈಬಲ್ಲಿನ ವಿಶಿಷ್ಟ ವ್ಯಕ್ತಿಗಳು - 2 : ಅಮೋಸ

- ಡಾ. ಲೀಲಾವತಿ ದೇವದಾಸ್


ಕ್ರಿಸ್ತಪೂರ್ವ ಎಂಟನೇ ಶತಮಾನ. ಯೂದಾಯದ ಅರಸ ಉಜ್ಜೀಯನ ಕಾಲ. ಅದು ನಮ್ಮ ಕಿರಿಯ ಪ್ರವಾದಿಗಳಲ್ಲಿ ಒಬ್ಬನಾದ ಆಮೋಸನ ಕಾಲವೂ ಹೌದು. ಬೆತ್ಲೆಹೇಮಿನ ದಕ್ಷಿಣದಲ್ಲಿ, ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿನ ತೆಕೋವ, ಈತನ ಹುಟ್ಟೂರು.  ಆಮೋಸನು, ಮಿಕ್ಕ ಪ್ರವಾದಿಗಳಂತೆ ಪಂಡಿತನಲ್ಲ. ಆತನು, ಕುರಿ, ದನಕರುಗಳ ಸಂಗೋಪನೆಯೊಡನೆ ಅತ್ತಿಹಣ್ಣು ಕೀಳುವ ಕಾಯಕವನ್ನೂ ಮಾಡುತ್ತಿದ್ದ. (ಅತ್ತಿಹಣ್ಣುಗಳು ತಿನ್ನಲು ಯೋಗ್ಯವಾಗಲು, ಅವುಗಳನ್ನು ಸ್ವಲ್ಪ ಸೀಳುತ್ತಿದ್ದರು. ಆಮೋಸನೇನೂ ಬಡವನಲ್ಲ. ಆತನಿಗೆ ಜಮೀನಿದ್ದು, ಅದರಲ್ಲಿ ಅತ್ತಿಮರಗಳನ್ನು ಬೆಳೆದಿರಬೇಕು. ತನ್ನ ಗ್ರಾಮೀಣ ಹಿನ್ನೆಲೆಯ ಕಾರಣ, ಆತನು ಗ್ರಾಮೀಣ ರೂಪಕಗಳನ್ನೇ ಬಳಸುತ್ತಾನೆ.  ಯೂದಾಯ,ಉಚ್ಛ್ರಾಯ ಸ್ಥ್ಹಿತಿಯಲ್ಲಿದ್ದ ಕಾಲವದು. ಆದರೆ, ಜೊತೆಜೊತೆಗೇ ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ, ಅಲ್ಲಿನವರು ಅತ್ಯಂತ ಕೀಳುಮಟ್ಟದಲ್ಲಿದ್ದರು. ಇಂಥಾ ಸಂದಿಗ್ಧ ಸಮಯದಲ್ಲಿ, ಆಮೋಸನಿಗೆ ಕರ್ತನ ಕರೆ ಬಂದಿತು.  "ಕರ್ತನು ನನ್ನನ್ನು ಮಂದೆ ಕಾಯುವುದರಿಂದ ತಪ್ಪಿಸಿ, 'ನೀನು ಹೋಗಿ, ಇಸ್ರಾಯೇಲ್ಯರಿಗೆ ಪ್ರವಾದನೆಮಾಡು' ಎಂದು ನನಗೆ ಅಪ್ಪಣೆಕೊಟ್ಟನು' (ಆಮೋಸ ೭: ೧೫) ಹಾಗಾಗಿ, ಉತ್ತರದ ಇಸ್ರಾಯೇಲ್ ಪ್ರಾಂತಕ್ಕೆ ಹೋಗಿ, ಅಲ್ಲಿನ ಭೀಕರ ಪರಿಸ್ಥಿತಿಯನ್ನು ಗಮನಿಸಿ, ಆ ಜನ, ಬಡವರನ್ನು ಹೇಗೆ ಹಿಂಸಿಸುತ್ತಿದ್ದರೆಂದು ಕಣ್ಣಾರೆ ಕಂಡು, ಅವರನ್ನು ಕಟುವಾಗಿ ಟೀಕಿಸುತ್ತಾನೆ.  "ತಮ್ಮ ಉಪ್ಪರಿಗೆಗಳಲ್ಲಿ ಬಾಧೆ, ಕೊಳ್ಳೆಗಳಿಂದ ಸಂಪಾದಿಸಿದ್ದನ್ನು ಕೂಡಿಸಿಕೊಂಡಿರುವವರ. ನ್ಯಾಯವಾಗಿ ನಡೆಯಲು ಅರಿಯರು" (೩: ೧೦) ಎಂದು ನೊಂದುಕೊಂಡು ಹೇಳುತ್ತಾನೆ. ನಂತರ, "ನಿಮ್ಮ ದಂತಮಂದಿರಗಳು ಹಾಳಾಗುವವು. ಮಹಾಸೌಧಗಳು ಕೊನೆಗಾಣುವವು" ಎಂದು ಕಾಲಜ್ಞಾನವನ್ನು ನುಡಿಯುತ್ತಾನೆ. ವಿಗ್ರಹಾರಾಧನೆ, ಅನ್ಯದೇವಾರಾಧನೆಗಳು ಮುಂತಾದ ದೇವವಿರೋಧೀ ಕಾರ್ಯಗಳಿಂದ ಹಾಳಾಗುತ್ತಿದ್ದ ಆ ಜನಾಂಗಕ್ಕೆ, ದೇವರು, ತನಗೆ ಹೇಳಿದ ಮಾತುಗಳನ್ನು ಧೈರ್ಯವಾಗಿ ಸಾರುತ್ತಾನೆ. ಹಣ, ಆಸ್ತಿಗಳಿಂದ ಕೊಬ್ಬಿಹೋಗಿದ್ದ ಅಲ್ಲಿನ ಸ್ತ್ರೀಯರನ್ನು ಕಂಡು, ಅವರಿಗೆ ಹಿಡಿಶಾಪ ಹಾಕುತ್ತಾನೆ (ಓದಿ ೪: ೧-೩.) ಕೊನೆಗೆ, ದೇವರ ಬುದ್ಧಿಮಾತುಗಳನ್ನೂ ಸೇರಿಸುತ್ತಾನೆ. "ನನ್ನನ್ನೇ ಆಶ್ರಯಿಸಿ ಬದುಕಿಕೊಳ್ಳಿ. ಅಲ್ಲಿಇಲ್ಲಿ ಯಾತ್ರೆ ಹೋಗಬೇಡಿರಿ. ನನ್ನ ಕಡೆಗೆ ತಿರುಗಿಕೊಳ್ಳಿರಿ. "ಅಲ್ಲಿಇಲ್ಲಿ ತಿರುಗಿ ತೀರ್ಥಯಾತ್ರೆ ಮಾಡುವ ಕ್ರೈಸ್ತರಿಗೆ ಇದೊಳ್ಳೇ ಪಾಠ, ಅಲ್ಲವೇ? ಅಲ್ಲಿ, ಜರುಗುತ್ತಿದ್ದ ಅನ್ಯಾಯಗಳನ್ನು ಕಂಡು, ಕುದಿಯುತ್ತಾನೆ:
"ನ್ಯಾಯವನ್ನು ಕಹಿ ಮಾಡುವವರೇ, ಧರ್ಮವನ್ನು ಕೆಡಹಿ ಬಿಡುವವರೇ, ನೀವು ಬಡವರನ್ನು ತುಳಿದು, ಅವರಿಂದ ಗೋಧಿಯನ್ನು ಬಿಟ್ಟಿ ತೆಗೆದುಕೊಳ್ಳುವಿರಿ. "
“ಶಿಷ್ಟಹಿಂಸಕರೇ, ಲಂಚಕೋರರೇ, ದರಿದ್ರರ ನ್ಯಾಯವನ್ನು ತಪ್ಪಿಸಿದವರೇ," ಎಂದು ಸಂಬೋಧಿಸಿ, ಕೊನೆಗೆ, 
"ನ್ಯಾಯವು ಹೊಳೆಯಂತೆ ಹರಿಯಲಿ. ಧರ್ಮವು ಮಹಾನದಿಯಂತೆ ಪ್ರವಹಿಸಲಿ"
ಎಂದು, ಇಂದಿಗೂ ಅನ್ವಯಿಸುವ ಅಮರವಾಕ್ಯಗಳನ್ನು ನುಡಿಯುತ್ತಾನೆ. 
"ನಿಮ್ಮ ಸೌಧಗಳನ್ನು ಹಗೆಮಾಡುತ್ತೇನೆ, ದೇವರ ಕೈಯ ನೂಲುಗುಂಡು (plumbline)ನಿಮ್ಮ ಅಂಕುಡೊಂಕುಗಳನ್ನು ಎತ್ತಿ ತೋರಿಸುತ್ತಿವೆ" ಇಸ್ರಾಯೇಲ್ ಅಧಿಕಾರಿಗಳಿಗೆ ಈ ಮಾತುಗಳು ಪಥ್ಯವಾಗಲಿಲ್ಲ. ಅವರು, ಆಮೋಸನನ್ನು ದ್ವೇಷಿಸಿ, ಆತನನ್ನು ಓಡಿಸಲು ಪ್ರಯತ್ನಿಸುತ್ತಾರೆ. "ನಿನ್ನ ಊರಿಗೆ ಹೋಗಿ ಅಲ್ಲೇ ಹೊಟ್ಟೆ ಹೊರಕೋ" ಎಂದು ಕೂಗುತ್ತಾರೆ. ಆದರೆ, ಅದಕ್ಕೆಲ್ಲಾ ಆಮೋಸನು ಕಿವಿಗೊಡುವುದಿಲ್ಲ. ಎಷ್ಟಾದರೂ ದೇವರು ಆಯ್ಕೆಮಾಡಿದ ಪ್ರವಾದಿಯಲ್ಲವೇ ಆತ ?
ಅಲ್ಲಿನ ಧನಿಕರ ಲೌಕಿಕತೆ, ಅನ್ಯಾಯ, ಮೋಸಗಳನ್ನು ಕಂಡು, ಅವನ ಮನಸ್ಸು ಕದಡುತ್ತದೆ. “ಕೊಳಗವನ್ನು ಕಿರಿದುಮಾಡಿ, ಸುಳ್ಳು ತಕ್ಕಡಿಗಳಿಂದ ಮೋಸಮಾಡುತ್ತಿದ್ದರು ಅವರು, ಬಡವರಿಗೆ ನುಚ್ಚು ನುಸಿಯನ್ನು ಮಾರುತ್ತಿದ್ದರು. ದಿಕ್ಕಿಲ್ಲದವರನ್ನು ತುಳಿಯುತ್ತಿದ್ದರು” ಅಂಥವರಿಗೆ, ಸರ್ವೇಶ್ವರರು, ಆಮೋಸನ ಮೂಲಕ, 
“ನಾನು ದೇಶಕ್ಕೆ ಕ್ಷಾಮವನ್ನು ತರುವ ದಿನಗಳು ಬರುತ್ತಿವೆ. ಅದು, ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಸರ್ವೇಶ್ವರರ ವಾಕ್ಯಗಳ ಕ್ಷಾಮ. ಅವರು ನನ್ನ ವಾಕ್ಯಗಳನ್ನು ಎಲ್ಲೆಲ್ಲಿಯೂ ಹುಡುಕುವರು, ಓಡಾಡುವರು. ಆದರೂ ಅವರಿಗೆ ಅದು ಸಿಕ್ಕದು” ಎಂಬ ಭೀಕರ ವಾಕ್ಯಗಳನ್ನು ಹೇಳಿಸುತ್ತಾರೆ. ಮುಂದೆ ಬರುವ ಇಸ್ರಾಯೇಲಿನ ಸೌಭಾಗ್ಯವನ್ನು ನುಡಿದು ಈ ಅನನ್ಯ ಗ್ರಂಥ ಮುಕ್ತಾಯವಾಗುತ್ತದೆ. 
“ಹಾಳಾದದ್ದನ್ನು ನಾನು ನಿಲ್ಲಿಸುತ್ತೇನೆ. ಆ ದಿನಗಳಲ್ಲಿ ಬೆಟ್ಟಗಳು ದ್ರಾಕ್ಷಾರಸವನ್ನು ಸುರಿಸುವವು. ಫಲವೃಕ್ಷಗಳನ್ನು ಬೆಳೆಯಿಸುವರು. ಆಗ ಸಮೃದ್ಧಿ ಇರುವದು. ಇನ್ನು ಮುಂದೆ ಯಾರೂ ಅವನ್ನು ಕಿತ್ತುಹಾಕರು” ಎಂಬ ಸಂತೋಷ ತರುವ ದೇವರ ಮಾತುಗಳಿಂದ ಮುಗಿಸುತ್ತಾನೆ. ವಿಶೇಷವೆಂದರೆ, ಈ ಮಾತುಗಳು, ನಮ್ಮ ಇಂದಿನ ಜೀವನಶೈಲಿಯನ್ನು ಬಿಂಬಿಸುತ್ತಿವೆ. ಅದರಿಂದ, ಅಲ್ಲಿನ ಎಚ್ಚರಿಕೆಗಳು, ನಮಗೂ ಅನ್ವಯಿಸುತ್ತವೆ. ಹಾಗಾಗಿ, ಈ ಪುಟ್ಟ ಗ್ರಂಥ, ಸಮಕಾಲೀನವಾಗಿಯೇ ಇದೆ!




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...