¨ ಸಿ ಮರಿಜೋಸೆಫ್
ಜಿ ಪಿ ರಾಜರತ್ನಂ ಅವರು ತಮ್ಮ ಬಾನುಲಿ ಚಿಂತನದಲ್ಲಿ ಒಮ್ಮೆ ಇಂಗ್ಲಿಷಿನ ವಾಚ್ ಬಗ್ಗೆ ವ್ಯಾಖ್ಯಾನ ನೀಡಿದ್ದರು. Watch ಎಂಬುದು ಕೇವಲ ಕೈಗಡಿಯಾರವಾಗಿರದೇ, ನಮ್ಮ ಅಂತರಾತ್ಮಕ್ಕೆ ಕೊಡಬಹುದಾದ ಎಚ್ಚರಿಕೆಯ ಗಂಟೆ ಎಂದು ಅವರು ಹೇಳಿದ್ದರು. ವಾಚ್ ಪದದ ಮೊದಲಕ್ಷರಗಳನ್ನು ತೆಗೆದುಕೊಂಡರೆ ಅವು ವರ್ಡ್, ಆಕ್ಷನ್, ಥಾಟ್, ಕ್ಯಾರೆಕ್ಟರ್ ಮತ್ತು ಹಾರ್ಟ್ ಎಂಬುದನ್ನು ಪ್ರತಿನಿಧಿಸುತ್ತವೆ. ವಾಚ್ ಯುವರ್ ವರ್ಡ್, ವಾಚ್ ಯುವರ್ ಆಕ್ಷನ್, ವಾಚ್ ಯುವರ್ ಥಾಟ್, ವಾಚ್ ಯುವರ್ ಕ್ಯಾರೆಕ್ಟರ್ ಮತ್ತು ವಾಚ್ ಯುವರ್ ಹಾರ್ಟ್ ಎಂಬ ಅವರ ವಿವರಣೆಯಲ್ಲಿ ನಿನ್ನ ಮಾತಿನ ಬಗ್ಗೆ ಎಚ್ಚರವಹಿಸು, ನಿನ್ನ ಕ್ರಿಯೆಗಳ ಕುರಿತು ಎಚ್ಚರ ವಹಿಸು, ನಿನ್ನ ಆಲೋಚನೆಗಳ ಬಗ್ಗೆ ಎಚ್ಚರ ವಹಿಸು, ನಿನ್ನ ಶೀಲದ ಬಗ್ಗೆ ಎಚ್ಚರ ವಹಿಸು, ಹಾಗೆಯೇ ನಿನ್ನ ಅಂತರಾಳದ ಬಗ್ಗೆಯೂ ಎಚ್ಚರ ವಹಿಸು ಎಂಬ ಮಾತುಗಳಿದ್ದವು. ನಮ್ಮ ಸಂಪದ್ಭರಿತ ದೇಶೀ ಸಂಪ್ರದಾಯದಲ್ಲಿ ಶೀಲವನ್ನು ಕಾಪಾಡಿಕೊಳ್ಳುವ ಕುರಿತು ನಾವು ಅಪ್ರತಿಮ ಎಚ್ಚರವನ್ನು ಕಾಯ್ದುಕೊಳ್ಳುತ್ತೇವೆ.
ತುಂಬಿದ ಸಭೆಯಲ್ಲಿ ದ್ರೌಪದಿಯ ಶೀಲವನ್ನು ಜಂಕಿಸುವ ಪ್ರಯತ್ನಗಳು ನಡೆದ ಫಲವೇ ಮಹಾಭಾರತ ಯುದ್ದಕ್ಕೆ ನಾಂದಿಯಾಯಿತೆಂದು ತಿಳಿದಿದ್ದೇವೆ. ಶೀಲಕ್ಕೆ ಹೆದರಿಯೇ ಕುಂತಿಯು ತನಗೆ ಮದುವೆಗೆ ಮೊದಲೇ ಜನಿಸಿದ ಕರ್ಣ ಎಂಬ ಮಗುವನ್ನು ತ್ಯಜಿಸಿಬಿಟ್ಟಳು ಎಂಬುದನ್ನು ತಿಳಿದಿದ್ದೇವೆ. ಶೀಲಹರಣಕ್ಕೆ ಹೆದರಿ ಸತೀ ಸಹಗಮನಗಳು ನಡೆದಿರುವುದನ್ನು ಕೇಳಿದ್ದೇವೆ. ಮಾನಿನಿಯ ಮಾನರಕ್ಷಣೆಗಾಗಿ ಆತ್ಮಾಹುತಿ ಹೊಂದಿದವನ ನೆನಪಿಗೆ ವೀರಗಲ್ಲು ಸ್ಥಾಪಿಸಿರುವುದನ್ನು ಕಂಡಿದ್ದೇವೆ. ಶೀಲಗೆಟ್ಟವಳನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಕಟ್ಟಳೆ ಹೇಳುತ್ತದೆ. ನೀನೇನು ಹೇಳುವೆ ಎಂದು ಒಬ್ಬಾಕೆಯನ್ನು ಯೇಸುವಿನ ಬಳಿ ಕರೆತಂದಾಗ ಯೇಸು, ಆಕೆ ಶೀಲಗೆಡಲು ಗಂಡಸರೂ ಕಾರಣವಲ್ಲವೇ, ಶೀಲವೆಂಬುದು ಹೆಂಗಸಿಗಷ್ಟೇ ಅಲ್ಲ ಗಂಡಸಿಗೂ ಮುಖ್ಯ ಎಂದು ಸೂಚ್ಯವಾಗಿ ತಿಳಿಹೇಳುತ್ತಾರೆ.
ವಿಶ್ವವಿಖ್ಯಾತ ಬಾದಾಮಿ ಗುಹೆಯ ಬಳಿ ಕೆರೆಯಾಚೆಗೆ ಎತ್ತರದ ಬಂಡೆಯ ಮೇಲೆ ಕೆಲ ಅಕ್ಷರಸಾಲುಗಳನ್ನು ಕೆತ್ತಲಾಗಿದೆ. ಸುಮಾರು ಎಂಟನೇ ಶತಮಾನದಲ್ಲಿ ಅಂದರೆ ಇಂದಿಗೆ ೧೨೦೦ ವರ್ಷಗಳ ಹಿಂದೆ ಕನ್ನಡದಲ್ಲಿ ಬರೆಯಲಾಗಿರುವ ಈ ಶಿಲಾಶಾಸನದಲ್ಲಿ ಒಂದು ಸಂಸ್ಕೃತದ ಮಾತು ಬರುತ್ತದೆ. "ವರನ್ತೇಜಸ್ವಿನೋ ಮೃತ್ಯುರ್ನತು ಮಾನಾವಖಣ್ಡನಮ್, ಮೃತ್ಯುಸ್ತತ್ ಕ್ಷಣಿಕೋ ದುಃಖಮ್ ಮಾನಭಂಗನ್ ದಿನೇ ದಿನೇ" ಅಂದರೆ ಮರ್ಯಾದಸ್ತನಿಗೆ ಅಪಮಾನಕ್ಕಿಂತ ಸಾವೇ ಹಿತವೆನಿಸುತ್ತದೆ, ಮರಣದ ದುಃಖ ಕ್ಷಣಿಕವಾದುದು ಆದರೆ ಮಾನಭಂಗದ ನೋವು ಅನುದಿನವೂ ಹಿಂಸಿಸುತ್ತದೆ. ಆದ್ದರಿಂದಲೇ ಜನರು ಮಾನಮರ್ಯಾದೆಗಳಿಗೆ ಅಂಜುತ್ತಾರೆ, ಎಲ್ಲೂ ತಮಗೆ ಅಪಮಾನವಾಗದ ಹಾಗೆ ಜೀವಿಸುತ್ತಾರೆ.
ಇನ್ನು ಹೆಣ್ಣು, ಆಕೆ ನರನ ದೇಹದ ಭಾಗವಾಗಿರುವುದರಿಂದ ನಾರಿ, ಆಕೆ ಅಬಲೆ, ಅವಳನ್ನು ಅನೂಚಾನವಾಗಿ ರಕ್ಷಿಸಬೇಕಾದವನು ಪುರುಷ. ಪುರುಷನ ಎದಿರಲ್ಲೇ ಆತನ ಅಮ್ಮ, ಅಕ್ಕ, ತಂಗಿ ಅಥವಾ ಹೆಂಡತಿಯ ಉಡಿಯನ್ನು ಅನ್ಯಪುರುಷನೊಬ್ಬ ಮುಟ್ಟಿದರೆ ಸಾಕು ಅದು ಪುರುಷನಿಗಾದ ಅವಮಾನ ಎಂದು ಜನಪದರು ಭಾವಿಸುತ್ತಿದ್ದರು. ಹೆಣ್ಣಿಗೆ ಅವಮಾನವಾಗುತ್ತಿದ್ದರೆ ಎಂತಹ ಬಲಹೀನನೂ ಸಿಡಿದೇಳುತ್ತಾನೆ. ಏಕೆಂದರೆ ತನ್ನ ಪ್ರಾಣ ಒತ್ತೆಯಿಟ್ಟು ಹೆಣ್ಣಿನ ಮಾನ ಪ್ರಾಣಗಳನ್ನು ರಕ್ಷಿಸುವುದು ಮಾನವಧರ್ಮ. ಅದರಿಂದಲೇ ಮದುವೆ ಮುಂತಾದ ನಮ್ಮ ಸಾಮಾಜಿಕ ಕಟ್ಟುಪಾಡುಗಳು ರೂಪುಗೊಂಡಿವೆ. ಹೆಂಗಸಿನ ಒಪ್ಪಿಗೆಯಿಲ್ಲದೇ ಆಕೆಯನ್ನು ಮುಟ್ಟುವುದು, ಆಕೆಯ ದೇಹದ ಖಾಸಗಿ ಭಾಗಗಳನ್ನು ಕಾಮುಕ ದೃಷ್ಟಿಯಿಂದ ನೋಡುವುದು, ಪ್ರಲೋಭನೆಯೊಡ್ಡಿ ಒಲಿಸಿಕೊಳ್ಳುವುದು, ಹೆದರಿಸಿ ಭೋಗಿಸುವುದು, ಆಕೆಯ ನಗ್ನತೆಯನ್ನು ಜಾಹೀರುಗೊಳಿಸುವುದು ಇವೆಲ್ಲ ಅತ್ಯಾಚಾರದ ವ್ಯಾಪ್ತಿಗೆ ಬರುತ್ತದೆಂದು ನಮ್ಮ ದೇಶದ ಕಾನೂನು ಹೇಳುತ್ತದೆ.
ಇತ್ತೀಚಿನ ದಿನಗಳಲ್ಲಿ ಶೀಲದ ಪ್ರತಿಪಾದಕರಾಗಿರಬೇಕಾದ ಬೋಧಕರು, ಸಾಧುಗಳು, ಗುರುವರ್ಯರು ತಾವೇ ಲಂಪಟರಾಗಿ ತಮ್ಮ ಶೀಲವನ್ನು ಹರಾಜು ಹಾಕಿಕೊಂಡು ಜೈಲುಪಾಲಾಗುತ್ತಿರುವ ಸುದ್ದಿಗಳನ್ನು ಓದುತ್ತಿದ್ದೇವೆ. ಅನೈತಿಕ ಸಂಬಂಧವೊಂದರ ಕುರಿತು ಪಾಪನಿವೇದನೆಯಲ್ಲಿ ಪ್ರಸ್ತಾಪಿಸಿ ಪಶ್ಚಾತ್ತಾಪ ಪಟ್ಟ ಹೆಂಗಸೊಬ್ಬಳನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಐವರು ಕ್ರೈಸ್ತ ಗುರುಗಳ ಮೇಲೆ ಕೇಳಿಬಂದಿತ್ತು. ಆದರೆ ತೀರಾ ಇತ್ತೀಚಿನ ಪ್ರಕರಣದಲ್ಲಿ ಬಿಷಪ್ ಒಬ್ಬರು ತಮ್ಮನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡರೆಂದು ಸಂನ್ಯಾಸಿನಿಯೊಬ್ಬರು ಆರೋಪ ಮಾಡಿ, ಈಗ ಅದು ದಾವಾನಲವಾಗಿ ಉರಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
೨೦೧೪ರಿಂದ ೨೦೧೬ರವರೆಗೆ ಬಿಷಪ್ ಮುಲಕ್ಕಲ್ ಅವರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರೆಂದು ಕೇರಳದ ಸಂನ್ಯಾಸಿನಿಯೊಬ್ಬರು ದೂರಿದ್ದರು. ಪೊಲೀಸರು ಮೊದಲ ಮಾಹಿತಿ ವರದಿಯನ್ನು ನೋಂದಾಯಿಸಿಕೊಂಡು ಸಂನ್ಯಾಸಿನಿಯಿಂದ ೧೧೪ ಪುಟಗಳಷ್ಟು ದೀರ್ಘವಾದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಬಿಷಪರು ಇದು ಅಪ್ಪಟ ಸುಳ್ಳು ಮತ್ತು ಕುತಂತ್ರ ಎಂದಿದ್ದಾರೆ. ಅಲ್ಲದೆ ಜಲಂಧರ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುಗಳು ಹೇಳಿಕೆ ನೀಡಿ ಸಿಸ್ಟರ್ ನವರಿಗೆ ಬೇರೆ ಅನೈತಿಕ ಸಂಬಂಧವಿತ್ತು, ಬಿಷಪರ ಹೆಸರಿಗೆ ಮಸಿಬಳಿಯಲು ಬೇಕೆಂದೇ ಈ ಕತೆ ಕಟ್ಟಿದ್ದಾರೆ, ಬಿಷಪರು ಅಮಾಯಕರು ಎಂದಿದ್ದಾರೆ.
ಈ ನಡುವೆ ಅತ್ಯಾಚಾರ ಆರೋಪ ಮಾಡಿ ದೇಶವೆಲ್ಲ ಗುಲ್ಲಾಗಿದ್ದರೂ ಪೊಲೀಸರು ಮೊಕದ್ದಮೆ ದಾಖಲಿಸಿಲ್ಲ, ಬಿಷಪರನ್ನು ಬಂಧಿಸಿಲ್ಲ, ದೂರನ್ನು ಹಿಂಪಡೆಯುವಂತೆ ತಮಗೆ ಒತ್ತಡ ಹೇರಲಾಗುತ್ತಿದೆ, ಇದರಲ್ಲಿ ಉನ್ನತ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿ ಸಿಸ್ಟರ್ ನವರು ಸಾರ್ವಜನಿಕ ಸ್ಥಳದಲ್ಲಿ ಸತ್ಯಾಗ್ರಹ ಕುಳಿತರು. ಅದೇ ಕನ್ಯಾಮಠದ ಇನ್ನೂ ಐವರು ಸಂನ್ಯಾಸಿನಿಯರು ಆಕೆಯ ಬೆಂಬಲವಾಗಿ ನಿಂತರು.
ಧರ್ಮಸಭೆಯ ನೇತಾರರಿಗೂ, ಕ್ರೈಸ್ತ ಸಮುದಾಯಕ್ಕೂ ಈ ಘಟನೆ ಇರುಸುಮುರುಸು ಉಂಟುಮಾಡಿದ್ದು ನಿಜ. ಕೆಲ ಎನ್ ಜಿ ಓ ಗಳೂ ಸಿಸ್ಟರುಗಳ ಪರ ನಿಂತರು. ಪತ್ರಿಕೆಗಳು ಬರೆದೇ ಬರೆದವು. ಟಿವಿ ಮಾಧ್ಯಮಗಳು ಸಾರಿಯೇ ಸಾರಿದವು. ಆದರೆ ಬಿಷಪರು ತುಂಬಾ ಪ್ರಭಾವಶಾಲಿ ಮನುಷ್ಯ, ಅದಕ್ಕೇ ಕೇರಳದ ಆಡಳಿತ ಮತ್ತು ವಿರೋಧಪಕ್ಷಗಳೆರಡೂ ಮೌನವಾಗಿ ತಟಸ್ಠಭಾವ ತಳೆದಿವೆ, ಮಠದೊಳಗೇ ಇರಬೇಕಾದ ಸಿಸ್ಟರುಗಳು ಬೀದಿಗೆ ಬಂದು ಪ್ರತಿಭಟಿಸುತ್ತಿದ್ದಾರೆ ಎಂದರೆ ಅಂಥದು ಏನೋ ನಡೆದಿರಲೇಬೇಕು, ಇದು ನಮ್ಮ ಧರ್ಮಕ್ಕೇ ಒಂದು ಕಪ್ಪುಚುಕ್ಕೆ ಎಂದು ಕೇರಳಿಗರು ಮಾತಾಡುತ್ತಿದ್ದಾರೆ.
ಕರ್ನಾಟಕದಲ್ಲಿ ರಾಮಕತಾ ಗಾಯಕಿಯಾಗಿ ಪ್ರಸಿದ್ಧಿ ಹೊಂದಿದ್ದ ಪ್ರೇಮಲತಾ ಎಂಬಾಕೆ ರಾಮಚಂದ್ರಾಪುರ ಮಠದ ಸ್ವಾಮಿಗಳು ತನ್ನನ್ನು ೨೦೧೧ರಿಂದ ೨೦೧೪ರವರೆಗೆ ತನ್ನನ್ನು ಯಾಮಾರಿಸಿ ೧೬೯ ಸಲ ಅನುಭವಿಸಿದರೆಂದು ಕೋರ್ಟಿನ ಮೆಟ್ಟಿಲೇರಿದ್ದರು. ತಾನು ದೇವರ ಪ್ರತಿರೂಪ ತನ್ನನ್ನು ಮೆಚ್ಚಿಸುವುದು ನಿನ್ನ ಕರ್ತವ್ಯ ಎಂಬುದಾಗಿ ಸ್ವಾಮಿಗಳು ಆಕೆಯನ್ನು ಬಳಸಿಕೊಂಡಿದ್ದರಂತೆ. ವಾದ ಪ್ರತಿವಾದಗಳನ್ನೂ ಸಾಕ್ಷ್ಯಾಧಾರಗಳನ್ನೂ ಗಮನಿಸಿದ ಕೋರ್ಟು ಆ ಹೆಂಗಸಿಗೆ ಇದು ಕೆಟ್ಟದು ಎನಿಸಿದ್ದರೆ ಮೊದಲ ಘಟನೆಯ ನಂತರ ನೀನು ಮಠದಿಂದ ದೂರವಿರಬೇಕಿತ್ತು, ವಿದ್ಯಾವಂತಳಾಗಿ, ಗಾಯನಕ್ಕಾಗಿ ದೇಶವಿದೇಶಗಳನ್ನು ಸುತ್ತಿ, ಮಠದ ಸ್ವಾಮಿಗಳ ಫೋಟೋವನ್ನು ನಿತ್ಯ ಪೂಜಿಸುತ್ತಾ, ಮಠಕ್ಕೆ ಸಾಲಂಕೃತಳಾಗಿ ಸಂಭ್ರಮದಿಂದ ಹೋಗಿ ಬರುತ್ತಿರುವ ಚಿತ್ರಗಳನ್ನು ನೋಡಿದರೆ ನಿಮ್ಮ ಲೈಂಗಿಕ ಸಂಪರ್ಕಗಳು ಪರಸ್ಪರ ಒಪ್ಪಿಗೆಯಂತೆಯೇ ನಡೆದಿವೆ, ಏಕೆಂದರೆ ಇಲ್ಲಿ ಪುರುಷ-ಸ್ತ್ರೀಯರ ಅನೈತಿಕ ಒಲವುಗಳು ಎದ್ದುಕಾಣುತ್ತವೆ ಎಂದು ಅಭಿಪ್ರಾಯಪಟ್ಟು ಕೇಸನ್ನು ವಜಾಗೊಳಿಸಿತು. ಆದರೆ ಕೇಸಿನ ಪರಿಣಾಮವಾಗಿ ಮಠದ ಮಾನಮರ್ಯಾದೆ ಮೂರಾಬಟ್ಟೆಯಾದುದು ಮಾತ್ರ ನಿಜ.
ಇದೀಗ ಬಿಷಪ್ ಮತ್ತು ಸಂನ್ಯಾಸಿನಿಯ ನಡುವೆ ವ್ಯಭಿಚಾರದ ಸಮರ ನಡೆದಿದೆ. ಇಬ್ಬರೂ ಧಾರ್ಮಿಕ ವಿಚಾರಗಳನ್ನೂ, ನೆಲದ ಸಂಸ್ಕೃತಿಯನ್ನೂ ಚೆನ್ನಾಗಿ ಅರಿತುಕೊಂಡ ವಿದ್ಯಾವಂತರು. ಸಾತ್ವಿಕ ಬದುಕಿಗಾಗಿ ದೀಕ್ಷೆ ಪಡೆದು ಸಂನ್ಯಾಸ ಜೀವನ ನಡೆಸುವವರು, ಭಕ್ತಾದಿಗಳಿಗೆ ಮಾದರಿಯಾಗಿ ನಿಲ್ಲಬೇಕಾದವರು. ಆದರೆ ಇಂದು ಒಬ್ಬರ ಮೇಲೊಬ್ಬರು ಕೆಸರು ಎರಚುತ್ತಿರುವುದು ಧರ್ಮದ ನೆಲೆಗೆ ಶೋಭೆ ತರುವುದಿಲ್ಲ.
ಈ ಘಟನೆಗಳನ್ನು ವೈದ್ಯಕೀಯ ಪರಿಭಾಷೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸೋಣ. ಸಾಮಾನ್ಯವಾಗಿ ನಲವತ್ತು ದಾಟಿದ ಮನುಷ್ಯನಿಗೆ ಕಣ್ಣಿನ ಮಸೂರ ಹಿಗ್ಗಲು ಕುಗ್ಗಲು ಸಾಧ್ಯವಾಗದ ಹಾಗೆ ಮೂತ್ರವನ್ನು ಪೂರ್ತಿಯಾಗಿ ಹೊರದೂಡುವುದೂ ಅಸಾಧ್ಯವಾಗುತ್ತದೆ. ಮೂತ್ರಚೀಲದಲ್ಲಿನ ಅಷ್ಟೂ ದ್ರವ ಪೂರ್ತಿಯಾಗಿ ಬಸಿದುಹೋಗದೆ ಮೂತ್ರಕೊಳವೆಯಲ್ಲಿ ಒಂದಷ್ಟು ಉಳಿದುಹೋಗಿ ಕುಳಿತಾಗ ಬಗ್ಗಿದಾಗ ಒಂದೆರಡು ಹನಿ ಹೊರಗೆ ಬಂದಂತೆ ಭಾಸವಾಗುತ್ತದೆ. ವೈದ್ಯಶಾಸ್ತ್ರದ ಪ್ರಕಾರ ಇದು ಬಿಪಿಎಚ್ ಎಂಬ ರೋಗಲಕ್ಷಣ. ಬಿನೈನ್ ಪ್ರಾಸ್ಟೇಟಿಕ್ ಹೈಪರ್ ಪ್ಲೇಸಿಯಾ (Benign Prostatic Hyperplacia) ಅನ್ನೋದು ಭಯಂಕರ ರೋಗವೇನಲ್ಲ. ವಯಸ್ಸಾಗುತ್ತಿದ್ದ ಹಾಗೇ, ಮೂತ್ರಕೊಳವೆಯನ್ನು ತಬ್ಬಿಕೊಂಡಿರುವ ಪ್ರಾಸ್ಟೇಟ್ ಗ್ರಂಥಿಯು ಗಾತ್ರ ಹೆಚ್ಚಿಸಿಕೊಳ್ಳುತ್ತದೆ. ಮೂತ್ರಚೀಲ ಮತ್ತು ಪ್ರಾಸ್ಟೇಟ್ ಗ್ರಂಥಿಗಳು ಪಕ್ಕಪಕ್ಕದಲ್ಲೇ ಇರುವುದರಿಂದ ಮೂತ್ರಚೀಲ ತುಂಬಿದಾಗ ಗ್ರಂಥಿಯ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ ಮೂತ್ರಕೊಳವೆಯೂ ಒತ್ತಿದಂತಾಗಿ ಮೂತ್ರವು ತಡೆದೂ ತಡೆದೂ ಹೊರಬರುತ್ತದೆ. ವೀರ್ಯ ಹರಿದುಬರುವ ನಾಳವೂ ಇದೇ ಆಗಿರುವುದರಿಂದ ರಾತ್ರಿ ಮಲಗಿರುವಾಗ ಈ ದ್ವಿಮುಖ ಒತ್ತಡಗಳಿಂದ ಅಲ್ಲೊಂದು ರೀತಿಯ ಪ್ರಚೋದನೆ ಉಂಟಾಗಿ ಮೂತ್ರಾಂಗವು ನಿಮಿರುತ್ತದೆ. ವಯಸ್ಸಾದ ಕೆಲವರಿಗೆ ಈ ನಿಮಿರುವಿಕೆಯು ಸಮಯ ಸಂದರ್ಭ ನೋಡದೆ ಕಾಟ ಕೊಡುತ್ತದೆ. ಬಸ್ಸು ರೈಲುಗಳ ನೂಕುನುಗ್ಗಲಿನಲ್ಲಿ ಕೆಲ ಪುರುಷರು ತಮ್ಮ ಒಳಾಂಗವನ್ನು ಮಹಿಳೆಯರಿಗೆ ಉಜ್ಜಿ ಸುಖಿಸಲೆತ್ನಿಸಿ ಗೂಸಾ ತಿನ್ನುತ್ತಾರೆಂದು ಪತ್ರಿಕೆಗಳಲ್ಲಿ ಓದಿರುತ್ತೇವೆ. ಆ ಉಜ್ಜುವಿಕೆಯ ತೆವಲು ಉಂಟಾಗುವುದೇ ಬಿಪಿಎಚ್ ರೋಗದಿಂದ. ರಾಮಚಂದ್ರಾಪುರ ಗೋಸ್ವಾಮಿಗಳ ರಾಮಕತೆಯ ಆಟಗಳು, ಆಸಾರಾಮರ ಲೀಲೆಗಳು, ಎನ್ ಡಿ ತಿವಾರಿ ಯಜಮಾನರ ಕ್ರೀಡೆಗಳು ಈ ರೋಗಕ್ಕೆ ಉದಾಹರಣೆಗಳು. ಅಂಗನೆಯರು ಇವರ ಬಲೆಗೆ ಅರಿಯದೇ ಬೀಳುತ್ತಾರೋ ಅಥವಾ ತಾವಾಗಿಯೇ ಸೋಲುತ್ತಾರೋ ಗೊತ್ತಿಲ್ಲ, ಆದರೆ ಎರಡೂ ಕೈಗಳಿಲ್ಲದೆ ಚಪ್ಪಾಳೆ ಸಾಧ್ಯವಿಲ್ಲ.
ಹಾಗಿದ್ದರೆ ಈ ರೋಗಕ್ಕೆ ಪರಿಹಾರವೇನು? ಸಂಸ್ಕಾರವಂತ ಹೃದಯಗಳು ಈ ರೋಗವನ್ನು ತಮಗೆ ತಾವೇ ನಿವಾರಿಸಿಕೊಳ್ಳಬಲ್ಲವು. ಚಿಕ್ಕಂದಿನ ನೀತಿಪಾಠಗಳು, ಪವಿತ್ರಗ್ರಂಥಗಳ ವಾಚನ, ಒಳ್ಳೇ ಪುಸ್ತಕಗಳ ಓದು, ಒಳ್ಳೇಜನರ ಸಹವಾಸ, ನಿಷ್ಕಲ್ಮಶ ಹರಟೆ ನಗು ಮಾತು, ಒಳ್ಳೇ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಮನೋನಿಗ್ರಹ, ಸಂತರ ಜೀವನಚರಿತ್ರೆ ಧ್ಯಾನ ಪ್ರಾರ್ಥನೆ ಭಜನೆ ಸಂಗೀತಗಳ ಮೂಲಕ ಮನಸ್ಸನ್ನು ಸರಿಯಾದ ದಿಕ್ಕಿನೆಡೆಗೆ ತಿರುಗಿಸಿಕೊಳ್ಳುವುದೇ ಉತ್ತಮವಾದ ದಾರಿ.
No comments:
Post a Comment