ಸುಮಾರು ಹತ್ತೋ ಹದಿನೈದೋ ದಿನಗಳ ಹಿಂದೆ, ಇಂಗ್ಲೀಷ್ ನ್ಯೂಸ್ ಚಾನೆಲ್‍ನಲ್ಲಿ ಗುಂಪುಹತ್ಯೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಚರ್ಚೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಎಂದಿನಂತೆ ಗುಂಪುಹತ್ಯೆಯ ಬಗ್ಗೆ ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಕೆಲವರು ತಮ್ಮ ಮೂಗಿನ ನೇರಕ್ಕೆ ಗುಂಪುಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಚರ್ಚೆಯನ್ನು ನಿಭಾಯಿಸುತ್ತಿದ್ದ ಚಾನೆಲ್ಲಿನ ನಿರೂಪಕಿ ತಕ್ಷಣ ಗುಂಪುಹತ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ ಲಾಯರನ್ನು ಮುಖಾಮುಖಿಯಾಗಿ “ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುತ್ತಿರುವುದನ್ನು ಕಂಡು ನಿಮಗೆ ರಾತ್ರಿ ನಿಶ್ಚಿಂತೆಯಿಂದ ಮಲಗಲು ಸಾಧ್ಯನಾ? ನಿಮಗೆ ಇಂತಹ ಅಮಾನವೀಯ ಕೃತ್ಯದ ಬಗ್ಗೆ ಏನು ಅನಿಸುವುದೇ ಇಲ್ವ?” ಹೀಗೆ ಕೇಳಿದ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಲಾಯರ್ Cause and effect ಬಗ್ಗೆ ಮಾತನಾಡಲಾರಂಭಿಸಿದ.
ಭಾರತದಲ್ಲಿ ಗುಂಪುಹತ್ಯೆಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಅದರಲ್ಲೂ ಕೆಲವೊಂದು ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಂತೂ ಗುಂಪುಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿವೆ. ಈ ಗುಂಪುಹತ್ಯೆಗಳು ಯಾವ ಕಾರಣಗಳಿಗಾಗಿ ನಡೆಯುತ್ತಿವೆ ಎಂಬ ಪ್ರಶ್ನೆಯ ಬೆನ್ನಟ್ಟಿ ಹೋದರೆ ಅನೇಕ ಕಾರಣಗಳು ನಮಗೆ ಕಾಣಸಿಗುತ್ತವೆ. ಧರ್ಮ, ಜಾತಿ ರಾಷ್ಟ್ರವಾದ, ಸಂಸ್ಕೃತಿಯ ರಕ್ಷಣೆಯ ನೆಪದಲ್ಲಿ ಗುಂಪುಹತ್ಯೆಗಳು ನಡೆಯುತ್ತಿವೆ. ಅದರಲ್ಲೂ ಒಂದು ಕೋಮಿಗೆ ಸೇರಿದ ಜನರ ಹತ್ಯೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಇನ್ನೊಂದು ಕಡೆ ಹತ್ಯೆಗಳಲ್ಲಿ ಭಾಗಿಯಾದ ಜನರಿಗೆ ನಮ್ಮ ಪ್ರತಿನಿಧಿಗಳು ಶಹಬಾಸ್ ಹೇಳಿ ಅವರನ್ನು ಸನ್ಮಾನಿಸುತ್ತಿದ್ದಾರೆ. ಮೇಲಾಗಿ ಗುಂಪುಹತ್ಯೆ ಮಾಡಿದವರಿಗೆ ಸಹಾಯ ನೀಡಲು ನಮ್ಮ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕೆಲವರಂತೂ ಗುಂಪುಹತ್ಯೆಗಳನ್ನು ಖಂಡಿಸುವುದನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೆಲ ರಾಜಕೀಯ ಪಕ್ಷದವರು ಗುಂಪುಹತ್ಯೆ ಮಾಡಲು ಜನರನ್ನು ಉತ್ತೇಜಿಸುತ್ತಿದ್ದಾರೆ. ಇಂಥ ಹೀನ ರಾಜಕೀಯದಿಂದ ಮುಗ್ಧ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮಾಜ ಹೋಳಾಗುತ್ತಿದೆ. ಜನರು ಭಯದಿಂದ ಜೀವಿಸುತ್ತಿರುವ ಚಿತ್ರಣ ನಮಗೆ ಕಾಣಸಿಗುತ್ತಿದೆ. ಈ ಕಾರಣದಿಂದ ನಾವು ಅಂದರೆ ಮಾನವೀಯತೆಯಲ್ಲಿ ನಂಬಿಕೆ ಇರುವವರು ಗುಂಪುಹತ್ಯೆಯ ವಿರುದ್ಧ ಹೋರಾಡಬೇಕಾಗಿದೆ.
ಭಾರತದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಗುಂಪುಹತ್ಯೆಗಳ ಬಗ್ಗೆ ಕೆಳಗಿನಂತೆ ಸಂಕ್ಷಿಪ್ತವಾಗಿ ಹೇಳಬಹುದು:
೧. ಭಾರತದಲ್ಲಿ ಬಹುಜನ ಹಸುಗಳನ್ನು ಪೂಜಿಸುವುದರಿಂದ ಅನೇಕ ಗುಂಪುಹತ್ಯೆಗಳು ಗೋರಕ್ಷಣೆಯ ನೆಪದಲ್ಲಿ ಗೋರಕ್ಷಕರಿಂದ ನಡೆಯುತ್ತಿವೆ
೨. ಹಸುಗಳ ಹತ್ಯೆ ಅಥವಾ ಕಳ್ಳತನದ ಆರೋಪಗಳ ಮೇಲೆ ಬಹುತೇಕವಾಗಿ ಮುಸ್ಲಿಮರನ್ನು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ಈ ಹತ್ಯೆಗಳು ನಡೆಯುತ್ತಿವೆ
೩. ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ರಚನೆಯಾದ ದಿನಗಳಿಂದ ಗುಂಪುಹತ್ಯೆಗಳು ಉಲ್ಬಣಗೊಂಡಿದೆ ಎಂದು ಅಂಕಿ ಅಂಶಗಳ ಸಾಕ್ಷಿ ಅಧಾರಿಸಿ ಕೆಲವರು ಅಭಿಪ್ರಾಯ ಪಡುತ್ತಾರೆ
೪. ಅನೇಕ ಗೋರಕ್ಷಣೆಯ ಗುಂಪುಗಳಿಗೆ ಬಿಜೆಪಿಯ ಗೆಲುವಿನಿಂದ ಆನೆಬಲ ಬಂದಾಂತಾಗಿದೆ
೫. ಪೊಲೀಸರಿಂದ ಗೋರಕ್ಷಣೆಯು ಸಾಧ್ಯವಾಗುತ್ತಿಲ್ಲವಾದ್ದರಿಂದ ಗೋರಕ್ಷಣೆ ತಮ್ಮ ಕರ್ತವ್ಯವೆಂದು ಗೋರಕ್ಷಕರು ಕಾನೂನನ್ನು ಕೈಗೆತ್ತಿಕೊಂಡು ಹತ್ಯೆಮಾಡುತ್ತಿದ್ದಾರೆ.
೬. ಗೋರಕ್ಷಣೆಯ ನೆಪದಲ್ಲಿ ನಡೆಯುತ್ತಿರುವ ಹಿಂಸಾಚಾರವು ಹೊಸದೇನಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರವು ಹಿಂದೆಯೂ ಸಂಭವಿಸಿದೆ. ಆದರೆ ಹಸುವಿನ ಸಂಬಂಧಿತ ಹಿಂಸಾಚಾರದ ಪ್ರಮಾಣದಲ್ಲಿ ನಿರ್ಭೀತವಾಗಿ ನಡೆಯುತ್ತಿರುವ ರೀತಿಯಲ್ಲಿ ವ್ಯತ್ಯಾಸವಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.
೭. ಜಾನುವಾರುಗಳನ್ನು ಸಾಗಿಸುವ ವಾಹನಗಳ ಮೇಲೆ ದಾಳಿಗಳು ಹೆಚ್ಚಾಗಿದೆ ಮತ್ತು ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸಿ ಹಣಕ್ಕಾಗಿ ಬಲಾತ್ಕರಿಸಿ ಬೆಲೆಬಾಳುವ ಜಾನುವಾರಗಳನ್ನು ಕದಿಯುತ್ತಿದ್ದಾರೆ ಎಂಬ ವರದಿಗಳನ್ನು ಸಹ ಕಾಣಬಹುದು
೮. ಚುನಾವಣೆಗಳ ಸಂದರ್ಭಗಳಲ್ಲಿ ಗೋರಕ್ಷಣೆಗೆ ಸಂಬಂಧಿಸಿದ ಹಿಂಸಾಚಾರ ಹೆಚ್ಚಾಗುವ ಪ್ರವೃತಿಯನ್ನು ಸಹ ಗಮನಿಸಬಹುದು
೯. ಚುನಾವಣೆಗಳನ್ನು ಗೋಮಾಂಸವನ್ನು ತಿನ್ನುವವರು ಹಾಗೂ ಹಸುವಿನ ಹತ್ಯೆಯನ್ನು ವಿರೋಧಿಸುವವರ ನಡುವಿನ ಕಾಳಗ ಎಂದು ಹೇಳಲಾಗುತ್ತಿದೆ
೧೦. ಗೋರಕ್ಷಣೆಯು ಕೂಡ ಒಂದು ಲಾಭದಾಯಕ ವ್ಯವಹಾರವಾಗಿದೆ. ಕೆಲವೊಂದು ಕಡೆ ಗೋರಕ್ಷಕರು ಜಾನುವಾರು ಸಾಗಾಣಿಕೆದಾರರಿಂದ ಪ್ರತಿ ಹಸುವಿನ ಸಾಗಾಣಿಕೆಗೆ ೨೦೦ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ವಿಷಯ ತನಿಖೆಗಳಿಂದ ಬೆಳಕಿಗೆ ಬಂದಿದೆ.
೧೧. ಗೋರಕ್ಷಣೆಯ ಗುಂಪುಗಳು/ ಗೋರಕ್ಷ ದಳಗಳು ಯಥೇಚ್ಛವಾಗಿ ಬೆಳೆಯುತ್ತಿವೆ. ಅಂಕಿ ಅಂಶಗಳ ಪ್ರಕಾರ ರಾಜಧಾನಿ ದೆಹಲಿಯಲ್ಲೇ ಸುಮಾರು ೨೦೦ ಗುಂಪುಗಳು ಇರುವುದಾಗಿ ಅಂದಾಜಿಸಲಾಗಿದೆ
೧೨. ಸಾಮಾನ್ಯವಾಗಿ ಯುವ ಬಡ ಕಾರ್ಮಿಕರು ಈ ಗುಂಪುಗಳ ಸದಸ್ಯರು. ಹಸುಹತ್ಯೆಗಳ ಸಂಬಂಧಿಸಿದ ವಿಡಿಯೋಗಳನ್ನು ತೋರಿಸಿ ಯುವಕರನ್ನು ಆಕರ್ಷಿಸಲಾಗುತ್ತಿದೆ. ಚಮ್ಮಾರರು, ಆಟೋರಿಕ್ಷಾ ಚಾಲಕರು, ತರಕಾರಿ ವ್ಯಾಪಾರಿಗಳು ಗೋಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಗುಂಪುಗಳಿಗೆ ನೀಡುವುದಾಗಿ ವರದಿ ಮಾಡಲಾಗಿದೆ
ನಾನು ಇತ್ತೀಚೆಗೆ ಓದಿದ ಕಮಲಾ ದಾಸ್ ರವರ ‘ಬಾಲಕ, ಹಸು ಮತ್ತು ಸನ್ಯಾಸಿಗಳು’ ಎಂಬ ಕಿರುಗತೆಯನ್ನುಅನುವಾದಕರ ಕ್ಷಮೆ ಕೇಳುತ್ತಾ ನಿಮ್ಮ ಓದಿಗಾಗಿ ನೀಡುತ್ತಿದ್ದೇನೆ:
ಒಂದು ದಿನ ಒಬ್ಬ ಚಿಕ್ಕ ಬಾಲಕ ರಸ್ತೆ ಬದಿಯಲ್ಲಿದ್ದ ಕಸದ ತೊಟ್ಟಿಯಿಂದ ಒಂದು ಬಾಳೆಹಣ್ಣು ಸಿಪ್ಪೆಯನ್ನು ಹೆಕ್ಕಿದ. ಇನ್ನೇನು ತಿನ್ನಬೇಕು, ಒಂದು ಹಸು ಬಂದು ಅದನ್ನು ಅವನ ಕೈಯಿಂದ ಕಿತ್ತುಕೊಂಡಿತು.
ಹುಡುಗನಿಗೆ ಬೇಸರವಾಯ್ತು, ಅವನು ಹಸುವನ್ನು ತಳ್ಳಿದ. ಹಸು ಅಂಬಾ ಎನ್ನುತ್ತ ರಸ್ತೆಯಲ್ಲಿ ಓಡಲಾರಂಭಿಸಿತು.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಕೆಲವು ಸನ್ಯಾಸಿಗಳು ಕಾಣಿಸಿಕೊಂಡರು.
“ಆ ಪವಿತ್ರ ಹಸುವಿಗೆ ತೊಂದರೆ ಕೊಟ್ಟೆಯೇನು?”-ಅವರು ಹುಡುಗನನ್ನು ಕೇಳಿದರು.
“ಇಲ್ಲ. ಅದನ್ನು ಓಡಿಸಿದೆ, ಅಷ್ಟೇ. ಅದು ನಾನು ತಿನ್ನುತ್ತಿದ್ದ ಬಾಳೆಹಣ್ಣು ಸಿಪ್ಪೆಯನ್ನು ಕಸಿಯಿತು, ಅದಕ್ಕೇ. ”
“ನಿನ್ನ ಧರ್ಮ ಯಾವುದು?” - ಸನ್ಯಾಸಿಗಳು ಕೇಳಿದರು.
“ಧರ್ಮ? ಏನು ಹಾಗಂದ್ರೆ?” - ಹುಡುಗ ಕೇಳಿದ.
“ನೀನು ಹಿಂದೂವೊ ಅಥವಾ ಮುಸಲ್ಮಾನನೋ? ಅಥವಾ ಕ್ರಿಶ್ಚಿಯನ್ನೋ? ನೀನು ದೇವಸ್ಥಾನಕ್ಕೆ ಹೋಗ್ತೀಯಾ ಅಥವಾ ಮಸೀದಿಗೋ?”
“ನಾನು ಅಲ್ಲಿಗೆ ಎಲ್ಲಿಗೂ ಹೋಗೂದಿಲ್ಲ” - ಹುಡುಗ ಉತ್ತರಿಸಿದ.
“ಅಂದರೆ ನಿನಗೆ ಪೂಜೆಪ್ರಾರ್ಥನೆಯಲ್ಲಿ ನಂಬಿಕೆ ಇಲ್ಲ?”
“ನಾನು ಎಲ್ಲಿಗೂ ಹೋಗೂದಿಲ್ಲ. ನನ್ನತ್ರ ಶರ್ಟಿಲ್ಲ, ನನ್ನ ಚಡ್ಡಿ ಹಿಂಬದಿಯಲ್ಲಿ ಹರಿದಿದೆ ”
ಸನ್ಯಾಸಿಗಳು ತಮ್ಮ-ತಮ್ಮೊಳಗೇ ಏನೋ ಗುಸುಗುಸು ಎಂದರು, ನಂತರ ಹುಡುಗನತ್ತ ತಿರುಗಿ “ನೀನು ಮುಸಲ್ಮಾನನೇ ಇರಬೇಕು. ಹಸುವಿಗೆ ನೋವುಂಟು ಮಾಡಿದ್ದೀಯಾ”
“ಆ ಹಸು ನಿಮ್ಮದೇನು?”
ಆ ಸನ್ಯಾಸಿಗಳು ಹುಡುಗನ ಕುತ್ತಿಗೆ ತಿರುಚಿದರು, ಕಸದ ತೊಟ್ಟಿಗೆ ಎಸೆದರು.
ನಂತರ ಒಟ್ಟಿಗೇ ಸ್ತುತಿಸಿದರು - “ಓಂ ನಮಃ ಶಿವಾಯ, ಓಂ ನಮಃ ಶಿವಾಯ”
****
ಸ್ಟ್ರೇಂಜ್ ಫ್ರೂಟ್ ಎನ್ನುವುದು ಅಬೆಲ್ ಮೀರೋಪೋಲ್ ನವರು ಬರೆದ ಕವಿತೆ. ದಕ್ಷಿಣ ಅಮೇರಿಕಾದಲ್ಲಿ ನಡೆದ ಅಮಾನವೀಯ ಕೃತ್ಯವನ್ನು ಖಂಡಿಸಿ ಬರೆದಂತಹ ಪದ್ಯ. ಈ ಕವಿತೆ ಲಿನ್ಚಿಂಗ್ ಅಥವಾ ಗುಂಪುಹತ್ಯೆಯ ಬಗ್ಗೆ ಹೇಳುತ್ತದೆ. ದಕ್ಷಣ ಅಮೇರಿಕಾದಲ್ಲಿ ಲಿನ್ಚಿಂಗ್ ಅಥವಾ ಗುಂಪುಹತ್ಯೆಯನ್ನು ಹಿಂಸಾತ್ಮಕ ಶಿಕ್ಷೆಯಾಗಿ ಬಳಸಲಾಗುತ್ತಿದ್ದ ಸಂದರ್ಭ. ಆಫ್ರಿಕಾ ಮೂಲದ ಅಮೇರಿಕನ್ನರನ್ನು, ಗುಲಾಮರನ್ನು ಮತ್ತು ಹೋರಾಟಗಾರರನ್ನು ಗುಂಪುಹತ್ಯೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕಾಗಿ ಪಾಪ್ಲರ್ ಮರಕ್ಕೆ ನೇತು ಹಾಕುವುದರ ಬಗ್ಗೆ ಧ್ವನಿಸುತ್ತದೆ ಈ ಕವಿತೆ. ಆಶ್ಚರ್ಯವೆಂದರೆ, ಅಬೆಲ್ ಮೀರೋಪೂಲ್ ಕೂಡ ಒಬ್ಬ ಬಿಳಿಯ. ಆದರೂ ಗುಂಪುಹತ್ಯೆಯನ್ನು ಬಲವಾಗಿ ವಿರೋಧಿಸಿದ ಕವಿ. ಕವಿತೆಯ ಉದ್ದಗಲಕ್ಕೂ ಗುಂಪುಹತ್ಯೆಯ ಭೀಕರತೆಯನ್ನು ಹೇಳಲು ಅನೇಕ ಉಪಮೆಗಳನ್ನು ಬಳಸಿಕೊಳ್ಳಲಾಗಿದೆ.
ದಕ್ಷಿಣ ಮರವು ಬೆಳೆದಿದೆ ಒಂದು ವಿಚಿತ್ರ ಹಣ್ಣನ್ನು
ಎಲೆಗಳೆಲ್ಲವೂ ರಕ್ತಮಯವಾಗಿದೆ ಬುಡದಲ್ಲೂ ರಕ್ತ
ಕಪ್ಪು ದೇಹಗಳು ದಕ್ಷಿಣದ ತಂಗಾಳಿಗೆ ತೂಗಾಡುತ್ತಿವೆ…
ಹೌದು ವಿಚಿತ್ರ ಹಣ್ಣುಗಳು ನೇತಾಡುತ್ತಿವೆ ಪಾಪ್ಲರ್ ಮರಗಳಲ್ಲಿ
ಧೀರ ದಕ್ಷಿಣದ ಈ ಗ್ರಾಮೀಣ ದೃಶ್ಯ
ಉಬ್ಬಿದ ಕಣ್ಣುಗಳು ತಿರುಚಿದ ಬಾಯಿಗಳು
ಮ್ಯಾಗ್ನೋಲಿಯಾಸ್‍ನ ಸಿಹಿ ಮತ್ತು ತಾಜಾ ಸುವಾಸನೆ
ತಕ್ಷಣ ಸುಟ್ಟ ಮಾಂಸದ ವಾಸನೆಯಾಗುವುದು
ಇಲ್ಲಿದೆ ಹಣ್ಣು. .
ಕಾಗೆಗಳಿಗೆ ಕೀಳಲು
ಮಳೆಗೆ ಕ್ರೋಢೀಕರಿಸಲು
ಗಾಳಿಗೆ ಹೀರಲು
ಸೂರ್ಯನಿಗೆ ಕೊಳೆಸಲು
ಮರಕ್ಕೆ ಬೀಳಿಸಲು
ಇಲ್ಲಿದೆ ವಿಚಿತ್ರ ಮತ್ತು ಕಹಿ ಹಣ್ಣು…
ಏನೇ ಇರಲಿ, ಗೋರಕ್ಷಣೆಯ ನೆಪದಲ್ಲಿ ಕಾರ್ಯಾಚರಿಸುತ್ತಿರುವ ಗೋರಕ್ಷಣ ದಳದಂತಹ ತಂಡಗಳು ಎಲ್ಲ ರೀತಿಯಲ್ಲೂ ನಿಷೇಧಕ್ಕೆ ಅರ್ಹವಾಗಿವೆ. ಅಕ್ರಮ ಚಟುವಟಿಕೆಯನ್ನು ತಡೆಯಬೇಕಾದುದು ಸರಕಾರವೇ ಹೊರತು ಇಂತಹ ಖಾಸಗಿ ತಂಡಗಳಲ್ಲ ಎಂಬುವುದು ನಮ್ಮ ನಿಮ್ಮ ನಿಲುವು ಆಗಬೇಕಾಗಿದೆ.