- ಎಫ್.ಎಂ.ನಂದಗಾವ್
ಸಾಕ್ಷರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಮ್ಯಾಲ, ನನಗ ಸ್ವಂತ ಜಿಲ್ಲೆಯ ಭೌಗೋಳಿಕ ಜ್ಞಾನದ ಜೋಡಿ ಮತ್ತೊಂದು ನಾಲ್ಕು ಜಿಲ್ಲೆಗಳ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಜಾನಪದ ಆಚರಣೆಗಳ ತಿಳುವಳಿಕೆ ಸಿಕ್ತು. ಮತ್ತ ಮತ ಮತ್ತ ನನ್ನ ಜ್ಞಾನ ಭಂಡಾರ ಹೆಚ್ಚಾಗೇದ ಅಂದ್ರ ತಪ್ಪೇನೂ ಆಗೂದಿಲ್ಲ.
ಹಿಂದಿನ ಜಿಲ್ಲಾಧಿಕಾರಿಗಳದ್ದು ಈ ದ ಮ್ಯಾಲ ಭಾಳ ಕಾಳಜಿ. ಹಿಂಗಾಗಿ, ಹಿಡಸ್ಲಿ ಬಿಡ್ಲಿ ಈ ಸಾಕ್ಷರ ಕಾರ್‍ಯಕ್ರಮದ ಮಿಟಿಂಗ್ ಗಳಿಗೆ ಕರೆದಾಗ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳೂ ಸೇರಿದಂಗ, ಸಮಾಜ ಸೇವಕರು, ಆಸಕ್ತರು ತಪ್ಪದ ಹಾಜರಾಗತಿದ್ರು. ಈಗಿನ ಜಿಲ್ಲಾಧಿಕಾರಿಗಳೂ ಹಂಗ ಅದಾರು. ಆದ್ರ ಮೊದ್ಲ ಮೊದ್ಲ. ಹೊಸಾ ಕಾರ್‍ಯಕ್ರ ಅಂದಾಗ, ಹತ್ತಾರು ಎಡರು ತೊಡರೂ ಇದ್ದ ಇರತಿದ್ದವು. ಅವನ್ನೆಲ್ಲಾ ಸಾವರಿಸಿಕೊಂಡ ಈ ಸಾಕ್ಷ ಕಾರ್‍ಯಕ್ರಮ ಮುಂದುವರಿಸಿಕೊಂಡ ಹೋಗ್ಬೇಕಾಗಿತ್ತು.
ಮುಂಜಾನೆ ಕಾಲೇಜಿನಲ್ಲಿ ಎಲ್ಲಾ ಕ್ಲಾಸ್ ಮುಗಿಸಿಕೊಂಡು ಮಧ್ಯಾನ್ನದಿಂದ ಸಂಜಿಮಟ ಸಾಕ್ಷರ ಕಾರ್‍ಯಕ್ರಮ ಜಾರಿ ಕಚೇರಿಯೊಳಗ ಏಳ ಎಂಟ ತಿಂಗಳ ಕೆಲಸಾ ಮಾಡಿದೆ. ಮುಂದ ಕಲಿಕಾ ಕೇಂದ್ರಗಳ ದೇಖಬಾಲ್ ಅಂದ ಅದ ಉಸ್ತುವಾರಿ ನೋಡಿಕೊಂಡೆ. ಹಂಗ ಸಂಪನ್ಮೂಲ ವ್ಯಕ್ತಿ ಮಾಡಿದ್ರು. ನಮ್ಮ ಜಿಲ್ಲೆ ಅಲ್ಲದ ಬ್ಯಾರೆ ಬ್ಯಾರೆ ಜಿಲ್ಲೆಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಮ್ಮಟ ಅಂತ ಅಲ್ಲಿಲ್ಲೆ ಹೋಗತಿದ್ದೆ. ಮೈಸೂರು, ಮಂಗಳೂರು ಇತ್ಯಾದಿ ದೂರದ ಊರಗೋಳಲ್ಲಿ ನಡೆಯೂ ಕಮ್ಮಟಗಳಿಗೂ ಹಾಜರಾಗೂ ಕೆಲಸಾನೂ ನನ್ ಕೊಳ್ಳಿಗೆ ಬಿದ್ದಿತ್ತು.
ಬಿಜಾಪೂರದಿಂದ (ಈಗ ಅದು ವಿಜಯಪುರ ಆಗಿದೆ) ದೂರದ ಮೈಸೂರಿಗೆ ಈ ಕಮ್ಮಟ, ವಿಚಾರ ಸಂಕಿರಣ ಮುಂತಾದವಕ್ಕ ಹೋಗಾಕ ಒಬ್ಬರೂ ತಯ್ಯಾರ ಇರ್ತಿರಲಿಲ್ಲ. ಜಿಲ್ಲಾಧಿಕಾರಿಗಳು ನನ್ನ ಕರೆಸಿ, `ಮಿಸ್ಟರ್ ದೇಶಪಾಂಡೆ, ನೀವ ಹೋಗ ಬರ್ರಿ' ಅಂದಾಗ, `ಒಲ್ಲರಿ' ಅಂತನ್ನೂದ ಆಗ್ತಿರಲಿಲ್ಲ. ಭೀಡೇಕ ಬಿದ್ದ ಹೂಂ ಅಂತ ಅಂದಂಗಾಗಿತ್ತು. ದಸರಾ ಟೈಮ್ ಬ್ಯಾರೆ.
ನಂದು ಮಾತಿಗಿಂತ ಉಗಳ ಜಾಸ್ತಿ ಆಯ್ತೇನೋ? ನಾನು ಈಗ ಒಂದ ಕತಿ ಹೇಳುದುಕ್ಕ ಹೊಂಟೀನಿ. ನೀವದಕ್ಕ ಕತಿ ಅಂತಿರೋ ಇಲ್ಲೋ ಗೊತ್ತಿಲ್ಲ ಮತ್ತ. ನನ್ನ ಓಡಾಟದ ಕಂಡುಂಡ ಒಂದು ಊರಾಗೀನ ಪ್ರಸಂಗದ ವರದಿ ಅಂತ ಕೆಲವರಿಗೆ ಅನ್ನಿಸಬಹುದು. ನಾನು ಕಂಡದ್ದನ್ನ ಕಂಡಂಗ, ಕೇಳಿದ್ದನ್ನ ಕೇಳಿದಂಗ ನಿಮ್ಮ ಮುಂದ ಇಡ್ತೀನಿ. ಯಾಕಂದ್ರ ಆ ದಿನಗಳು ನನ್ನ ಮ್ಯಾಲ ಭಾಳ ಪರಿಣಾಮ ಬೀರ್ಯಾವು
ಕಳೆದ ನಾಲ್ಕರು ವರ್ಷದಾಗ ಮೈಸೂರಿಗೆ ಹತ್ತಾರಸಾರಿ ಹೋಗಿದ್ದೆ. ಸುಮಾರಾಗಿ ಮನಗಂಡ ಗೆಳ್ಯಾರನ್ನ ಮಾಡಕೊಂಡಿದ್ದೆ. ಬ್ಯಾರೆ ಬ್ಯಾರೆ ಊರಗಳ ಕಾರುಕ್ರಮ ಜಾರಿ, ಮೌಲ್ಯ ಮಾಪನ, ವಗೈರೆ ವಗೈರೆ ನಡೆಯುವಾಗ ಒಮ್ಮೆ ರಾಯಚೂರಿಗೆ ಹೋಗಿದ್ದೆ. ಮತ್ತೊಮ್ಮೆ ಮಂಡ್ಯಕ್ಕೆ ಹೋದಾಗ ಒಂದ ಗ್ರಾಮದಾಗ ಅದ ಹಳ್ಯಾಗಿನ ಅಂದ್ರ ಊರಾಗಿನ ಮಂದಿಯ ನಡವಳಿಕೆ ನನ್ನ ಲಕ್ಷ ಸೆಳೆದಿತ್ತು. ಬಾಳ ವಿಚಿತ್ರವಾಗಿ ಕಂಡಿತ್ತು.
ಪ್ರಾಥಮಿಕ ಶಾಲಾ ಶಿಕ್ಷಕ ಪರ್ವತೇಗೌಡ ಅನ್ನಾವರನ್ನ ಜೋಡಿಮಾಡಕೊಂಡ, ಮಂಡ್ಯ ಜಿಲ್ಲೆಯೊಳಗ ಸುತ್ತಾಡುವಾಗ ಚಿಕ್ಕರಿಸಿನಕೆರೆ ಅನ್ನೂ ಊರಿಗೆ ಹೋಗಿದ್ದೆ.
ಊರು ಅಂದ್ರ, ಅದೊಂದ ಸಣ್ಣ ಹಳ್ಳಿ. ವಿಚಿತ್ರ ಅನ್ನುವಂಗ ಆ ಊರಾಗಿನ ಒಂದ ಬ್ಯಾರೆ ನಮೂನಿ ಗುಡಿ, ಮತ್ತ ಮುಂದಿನ ಆಲದ ಮರಕ್ಕ ಪಾಟಿಗಳನ್ನ ಜೋತಹಾಕಿದ್ರು.
ಆ ಗುಡಿ ಆಕಾರ ಬ್ಯಾರೇನ ಇತ್ತು. ಗುಡಿ ಗುಡಿ ಹಂಗ ಇರದ, ಮನಿ ಕಂಡಂಗ ಕಾಣ್ತಿತ್ತು. ಆದರ ಮ್ಯಾಲ ಅಧಿಕ ಚಿನ್ಹಿ ಇತ್ತು. ಅದರ ಉದ್ದ ಕೋಲ ಮಾತ್ರ ಅಡ್ಡಗಿದ್ದ ಕೋಲಗಿಂತ ಭಾಳ ಉದ್ದ ಇತ್ತು. ಅಲ್ಲೆ ಮಗ್ಗಲದಾಗ ಢಾಳಾಗಿ ಕಾಣುವ ಒಂದ ಸಮಾಧಿ. ಅದು ಸಿದ್ಧರ ಸಮಾಧಿ ಇರಬೇಕು. ಅದರ ಮ್ಯಾಲೂ ಒಂದ ಗಣಿತದ ಅಧಿಕ ಚಿನ್ಹಿ ಇತ್ತು. ಅದರ ಮುಂದಿನ ಮರದ ಟೊಂಗಿಗಳಿಂದ ಪಾಟಿಗಳು ಜೋತಾಡತ್ತಿದ್ವು.
ಭಕ್ತರು ಮಕ್ಕಳಿಗಾಗಿ ಹರಕಿ ಹೊತ್ತವರು ಕೆಲವು ಗುಡಿಗಳ ಮುಂದಿನ ಗಿಡಗೋಳಿಗೆ ತೊಟ್ಟಲಾ ಕಟ್ಟೂದು, ಮದವಿ ಬಯಸಿದವ್ರು ಹಸಿರ ಬಳಿಗಳನ್ನ ಗಿಡಕ್ಕೆ ಕಟ್ಟೂದ ನೋಡಿದ್ದೆ. ಆದ್ರ ಇಲ್ಲಿ ಪಾಟಿ ಕಟ್ಟಿದ್ರು!
``ಏನ್ ಗೌಡರ ಇದು?''
``ಅದು ಒಂದ ದೊಡ್ಡ ಕತಿ ಅದರಿ''.
ನನ್ನ ಜೋಡಿ ಅಡ್ಡಾಡಿ ಅಡ್ಡಾಡಿ ಪರ್ವತೇಗೌಡನ ನಾಲಗಿ `ರಿ' ಹಾಕುವುದನ್ನ ರೂಢಿಸಿಕೊಂಡಬಿಟ್ಟಿತ್ತು. ಸಂಗತಿ ದೋಷ ನೋಡ್ರಿ. ನಾನು ಅಂವ್ಙಾ ಮಾತಾಡೂ ಧಾಟಿ ಕಲಿಬೇಕಿತ್ತು. ಇಲ್ಲಾ ಅಂವ್ಙಾ ನಾ ಮಾತಾಡೂ ಧಾಟಿ ಕಲ್ಕೋಬೇಕಾಗಿತ್ತು. ನಾನ ಅವನಿಗಿಂತಾ ಹಿರ್‍ಯಾ ಅಲ್ಲೇನ್? ಅದಕ್ಕ ನನ್ನಂಗ ಮಾತಾಡುವಂಗ ಅವನನ್ನ ಮಾಡಬಿಟ್ಟಿದೆ.
``ಏನ್ರಿ ಕತೆ ಸಾಕ್ಷರ ಕಾರ್‍ಯಕ್ರಮ ಎಲ್ಲಾ ಪಾಟಿಗಳು ಇಲ್ಲೇ ಬಂದಾವೇನು?'' ನನ್ನ ಅನುಮಾನದ ತೆಲಿ ಚುರುಕಾತು.
``ಅದೇನಲ್ಲ ಬಿಡ್ರಿ, ಇಲ್ಲಿ ಪರಂಗಿ ಪಾದ್ರಿ ದೇವರಾಗಿ ಕೂತಾನ್ರಿ''.
ನನ್ನ ಟೂಬ್ಲೈಟ್ ತೆಲಿ ಫಕ್ಕನ ಹತ್ತಗೋತು. ಅವು ಗಣಿತದ ಅಧಿಕ ಚಿನ್ನಿ ಅಲ್ಲ. ಅವರು ಕಿರಿಸ್ತಾನರ ಶಿಲುಬಿ ಗುರ್ತುಗಳು.
ಮಂಡ್ಯ ಈ ಕುಗ್ರಾಮದಾಗ ಈ ಪಾದ್ರಿ? ನನಗ್ಯಾಕೋ ಅನುಮಾನ ಕಾಡಿತು. ಪರ್ವತೇಗೌಡನ ಮಾತು ವಿಚಿತ್ರ ಅನ್ನಿಸಿತು.
``ಪರಂಗಿ ಪಾದ್ರಿ ಇಲ್ಲೇನ್ ಮಾಡ್ಲಿಕ್ಕೆ ಬಂದಿದ್ದ?''
``ಅದರಿ ಸರ್, ಧಾರವಾಡದಾಗ, ಮಡಿಕೇರ್‍ಯಾಗ ಇದ್ರಂತಲಾ ಕಿಟ್ಟೆಲ್ ಪಾದ್ರಿಗಳಂಗ ಈ ಪರಂಗಿ ಪಾದ್ರಿ ಇಲ್ಲಿಗೆ ಬಂದಿದ್ರು''.
ಮಸಾಲೆ ಪದಾರ್ಥಗಳಿಗಾಗಿ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ಯುರೋಪಿಯನ್ನರು ಬೇರೆ ಬೇರೆ ತಂಡಗಳಲ್ಲಿ ಬಂದು ವ್ಯಾಪಾರ ಮಾಡತೊಡಗಿದರು. ಅವರ ಜೋಡಿ ವಿವಿಧ ಪಂಥಗಳಿಗೆ ಸೇರಿದ ಕ್ರೈಸ್ತ ಮಿಷನರಿಗಳು- ಧರ್ಮ ಪ್ರಚಾರಕ ಪಾದ್ರಿಗಳು ಭಾರತ ಉಪಖಂಡದಲ್ಲಿ ಯೇಸುಕ್ರಿಸ್ತರ ತತ್ವ ಪ್ರಚಾರ ಮಾಡಲು ಬಂದರು. ಮತಾಂತರ ಪ್ರಾಥಮಿಕ ಗುರಿ ಆಗಿದ್ರೂ, ಆ ಮಿಷನರಿ ಪಾದ್ರಿಗಳು ತಾವು ನೆಲೆನಿಂತ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಗುಡಿ ಕೈಗಾರಿಕೆ ಮುಂತಾದವನ್ನು ತೆರೆದು ಜನರ ಏಳಿಗೆಗೆ ದುಡಿದರು. ಕೆಲವರು ಭಾಷಾ ಪಾಂಡಿತ್ಯವನ್ನೂ ಗಳಿಸಿದರು. ಅಂಥ ಸಂದರ್ಭದಲ್ಲೇ ಕಿಟ್ಟೆಲ್ ಅವರು ಕನ್ನಡ ನಾಡಿಗೆ ಸಿಕ್ಕರು. ಕ್ರೈಸ್ತ ಧರ್ಮ ಬೋಧನೆಯ ಜೊತೆಗೆ ಜಡಗಟ್ಟಿದ ಸಮಾಜದಲ್ಲಿ ಸಂಚಲನೆ ತಂದುಕೊಟ್ಟರು ಅಂತ ಇತಿಹಾಸದ ಪುಟಗಳು ಹೇಳುತ್ತವೆ.
ಈ ಪಾದ್ರಿಯೂ ಹಾಗೆಯೇ ಇಲ್ಲಿಗೆ ಬಂದಿರಬೇಕು.
ಸುಮಾರು ನೂರೈವತ್ತು ವರ್ಷಗಳ ಹಿಂದೆ ಪ್ಲಾಟೆ ಹೆಸರಿನ ಈ ಪಾದ್ರಿ ಅಂದರೆ ಮಿಷನರಿ ಈ ಪ್ರದೇಶಕ್ಕೆ ಬಂದಿದ್ದರು. ಅವರು, ಶ್ರೀರಂಗಪಟ್ಟಣದಲ್ಲಿ ಇದ್ದುಕೊಂಡು, ಅದರ ಆಸುಪಾಸಿನ ಗ್ರಾಮಗಳಲ್ಲಿ ಕ್ರೈಸ್ತ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದರು.
``ಅವರು ಥೇಟ್ ನಮ್ಮ ಸನ್ಯಾಸಿಗಳಂಗ ಉದ್ದನ ಕಾವಿ ನಿಲುವಂಗಿ ತೊಡತಿದ್ರು. ಕೊಲು, ಕಮಂಡಲು, ಜೋಳಿಗೆ ಜೋಡಿ ಇರತಿದ್ದವು ಅಂತ ನಮ್ಮ ಮುತ್ತಜ್ಜ ಹೇಳತಿದ್ದನಂತ'' ಎಂದು ಪರ್ವತೇಗೌಡ ಕತಿ ಶುರು ಮಾಡಿದಾಗ, ನನಗ ಪೂರ್ತಿ ಕತಿ ಕೇಳಬೇಕು ಅನ್ನಿಸಿತು.
``ಈ ಪರಂಗಿ ಸ್ವಾಮಿ, ಚಿಕ್ಕ ಚಿಕ್ಕ ಮಕ್ಕಳನ್ನ ಕೂಡಿಸಿಕೊಂಡ ಅವರಿಗೆ ಅ, ಆ, ಇ, ಈ ಕಲಿಸ್ತಿದ್ದ. ದೊಡ್ಡವರಿಗೆ ಸತ್ಯವೇದ ಅಂದ್ರ ಅದರೀ ಬೈಬಲ್ಲಿನಲ್ಲಿರುವ ಕತಿಗಳ್ನ ಹೇಳತಿದ್ರಂತ. ಬ್ಯಾರೆ ಬ್ಯಾರೆ ಜಪ ಹೇಳಕೊಡ್ತಿದ್ದರಂತ, ಜಪಮಾಲಿ ಹೇಳಸ್ತಿದ್ದರಂತ'' ಎಂದು ಪರ್ವತೇಗೌಡ ತಾನು ಕೇಳಿದ್ದ ಸಂಗತಿಗಳನ್ನ ಹೇಳಾಕಹತ್ತಿದ.
``ಕಾಯಲೆ ಕಸಾಲೆ ಬಂದ್ರ, ಔಷಧಿ ಮಾಡಿಕೊಟ್ಟು ವಾಸಿ ಮಾಡಸ್ತಿದ್ದರು''.
ಅಲ್ಲಲ್ಲೇ ಧಾರವಾಡ, ಗದಗ್ ನಲ್ಲಿರುವ ಕ್ರೈಸ್ತ ಮಿಷನರಿಗಳು ನಡೆಸುವ `ಜರ್ಮನ್ ದವಾಖಾನಿಗಳು' ಅಂತ ಜನಗಳ ಮನದಲ್ಲಿ ನೆಲೆಯೂರಿದ ದವಾಖಾನಿಗಳು ಮತ್ತ ಮಂಗಳೂರು ಬೆಂಗಳೂರನೊಳಗಿರುವ ಕ್ರೈಸ್ತರ ಆಡಳಿತದಲ್ಲಿರುವ ಈಗಿನ ಹೈಟೆಕ್ ದವಾಖಾನಿಗಳು ನನ್ನ ಕಣ್ಮುಂದ ಮೂಡಿ ಮಾಯವಾದ್ವು. ಈ ಪ್ಲಾಟೆ ಸ್ವಾಮಿ ಔಷಧಿ ಕೊಡುವ ಗೀಳು ಬಹುಶಃ ಇಂದಿನ ದವಾಖಾನಿಗಳ ಬೀಜ ಸ್ವರೂಪ ಅನ್ನಿಸ್ತು.
``ಸರಳ ಸೌಜನ್ಯದ ನಡವಳಿಕೆಯಿಂದ ಪರಂಗಿ ಸ್ವಾಮಿ ಸುತ್ತಮುತ್ತ ನಾಲ್ಕಾರು ಗ್ರಾಮಗಳೊಳಗಿನ ಗ್ರಾಮಸ್ಥರ ಮನಸ್ಸು ಗೆದ್ದರು. ಅವರ ಪ್ರಭಾವಕ್ಕೆ ಒಳಗಾಗಿ, ಈ ಗ್ರಾಮಗಳೊಳಗಿನ ನೂರಿನ್ನೂರು ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಸೇರಿಕೊಂಡವು. ಅವರು ಹೊಸ ಕ್ರೈಸ್ತ ವಿಶ್ವಾಸಿಗಳಾದರು'' ಪರ್ವತೇಗೌಡ ಕತಿ ಮುಂದವರಿಸಿದ್ದ.
``ಈ ವಿಷಯ ತಿಳಿದ ನಾಲ್ಕೂರ ಒಡೆಯ ನಾಯಕನಿಗೆ ಗೊತ್ತಾದಾಗ, ಅವನಿಗೆ ಸಿಟ್ಟ ಬಂದಿತ್ತಂತ. ಆ ಕಾಲದಾಗ ಇನ್ನೂ ಬ್ರಿಟಿಷ್ ಪೊಲೀಸ್ ಆಡಳಿತ ವ್ಯವಸ್ಥೆ ಬಂದಿರಲಿಲ್ಲ. ಮೈಸೂರು ಅರಸರ ಆಡಳಿ ಇದ್ದರೂ, ದಳವಾಯಿಗಳ ದರ್ಬಾರು ನಡಿತಿತ್ತು. ಅವರು ನಾಲ್ಕಾರು ಊರುಗಳಿಗೆ ಒಬ್ಬೊಬ್ಬು ನಾಯಕರಿಗೆ ದೇಖರೇಕಿ ಮಾಡಪಾ ಅಂತ ಒಪ್ಪಿಸಿರ್ತಿದ್ದರು''.
``ತನ್ನ ಸಿಟ್ಟಿನ ಭರದಲ್ಲಿ ನಾಲ್ಕೂರು ಒಡೆಯ-ಅದೇ ನಾಯಕ, ಆ ಪರಂಗಿ ಸ್ವಾಮೀನ್ನ ಹಿಡದು ಹೆಡಮುರಿಗೆ ಕಟ್ಟಿ, ತುರಂಗಕ್ಕೆ ತುರುಕಿದ''.
``ಮೂರ್ನಾಲ್ಕು ತಿಂಗಳು ಕೂಡಿ ಹಾಕಿದ. ಆದು ಮಳೆಗಾಲದ ಸಮಯ. ಆ ಮೂರ್‍ನಾಲ್ಕು ತಿಂಗಳು ನಾಲ್ಕೂರು ಸೀಮೆಯಲ್ಲಿ ಮಳೆ ಬರಲಿಲ್ಲ. ಮಳೆ ಇಲ್ಲ ಬೆಳೆ ಇಲ್ಲ. ನೀರಿಲ್ಲ ನಿಡಿ ಇಲ್ಲ. ದನಕರುಗಳಿಗೆ ಮೇವಿಗೆ, ನೀರಿಗೆ ತ್ರಾಸಾಯ್ತು. ರೈತರು ಕಂಗೆಟ್ಟರು. ನಾಲ್ಕೂರು ನಾಯಕ ಅಂದ್ರೆ ಅದೇ ಆ ಪಾಳೆಗಾರನಿಗೂ ಹೊಟ್ಟಿಬ್ಯಾನಿ ಶುರುವಾಗಿತ್ತು. ಅವನಿಗೆ ಏನು ಮಾಡಬೇಕೆಂದು ಗೊತ್ತಾಗದೇ ಸಂದಿಗ್ಧದಲ್ಲಿದ್ದ''.
``ಸುತ್ತಲಿನ ಮುಗ್ಧ ಗ್ರಾಮಸ್ಥರು, - ಆ ಪರಂಗಿ ಸ್ವಾಮಿ, ಸಾಧವನ್ನ ತುರಂಗಕ್ಕೆ ಹಾಕಿದ್ರಿಂದ ಹಿಂಗ ಆಗೇದ. ಮಳೆರಾಯ ಮುನಿಸಿಕೊಂಡಾನ- ಅಂತ ಮಾತಾಡ್ಲಿಕ್ಕೆ ಹತ್ತಿದರು. ನಾಲ್ಕೂರ ನಾಯಕನಿಗೆ ಒಳಗೊಳಗೆ ಅಂಜಿಕಿ ಆಗಾಕಹತ್ತಿತ್ತು. ಅಂವಾ ಅಂಜಿಕೊಂಡ. ಏನಾರ ಆಗ್ಲಿ ಅಂತಂದು ಅವರನ್ನ ಬಿಟ್ಟ ಬಿಟ್ಟ''.
``ಪವಾಡ ಅನ್ನೂಹಂಗ, ಅವರು ಅದ ಪರಂಗಿ ಸ್ವಾಮಿ ಅದೇ ಪಾದ್ರಿ ತುರಂಗವಾಸದಿಂದ ಹೊರಗೆ ಬಂದು ತಮ್ಮ ಮನಿ ಸೇರ್‍ಕೊಳ್ಳುದುಕ್ಕೂ, ಅತ್ತ ಮಳೆ ಬರೂದಕ್ಕೂ ಸರಿಹೋಯ್ತು ಅಂತ ಹೇಳ್ತಾರ ಮಂದಿ''.
``ಆ ಪರಂಗಿ ಪಾದ್ರಿ- ಸ್ವಾಮಿ ಪವಾಡ ಪುರುಷ ಆಗಿ ಬಿಟ್ಟ''.
``... ... ...''
ಪರ್ವತೇಗೌಡನ ಈ ಕತಿ ನಂಬಲೋ ಬ್ಯಾಡೋ ಅನ್ನೊ ಗೊಂದಲದಲ್ಲಿದ್ದ ನಾ ದಂಗ ಹೊಡದ ನಿಂತಿದ್ದೆ. ಏನೂ ಪ್ರತಿಕ್ರಿಯೆ ತೋರಿಸಲಿಲ್ಲ.
ನಾನು ಮಾತಾಡದೇ ಇದ್ದುದನ್ನು ನೋಡಿ, ಆ ಕತಿ ನನ್ನ ಮೇಲೆ ಏನೂ ಪರಿಣಾಮ ಮಾಡಿರಾಕಿಲ್ಲ ಎಂಬ ಭಾವನೆ ಪರ್ವತೇಗೌಡನಲ್ಲಿ ಮೂಡಿರಬೇಕು. ಅಂವಾ ತಾನು ಕೇಳಿದ್ದ ಆ ಪಾದ್ರಿಯ ಇನ್ನೊಂದು ಪವಾಡದ ಕತಿ ಹೇಳ್ಳಿಕ್ಕೆ ಶುರು ಮಾಡಿದ.
``ಈ ಪರಂಗಿ ಪಾದ್ರಿ ಪ್ಲಾಟೆ ಸ್ವಾಮಿ ತೀರಿಕೊಂಡರು. ಆಗಲೂ ಒಂದು ಪವಾಡ ನಡೀತು. ಅಲ್ಲಿನ ಕಿರಿಸ್ತಾನರು ಪಾದ್ರಿಗಳ ಅಂತಿಮ ಇಚ್ಛೆಗೆ ಅನುಸಾರ, ಅವರು ನಿತ್ಯ ಪೂಜೆ ಪುನಸ್ಕಾರ ಮಾಡುತ್ತಿದ್ದ ಆ ಪುಟ್ಟ ಗುಡಿಯಲ್ಲೇ, ಅಂದ್ರೆ ಗುಡಿ ಅಂಗಳದಲ್ಲಿ ಸಮಾಧಿ ಮಾಡಿದ್ರು''.
``ಆಗ ಮಳೆಗಾಲ. ತಿಂಗಳೊಪ್ಪತ್ತು ಮಳೆ ಬಂದಿರಲಿಲ್ಲ. ಹಿಂದಿನ ಸಿಟ್ಟನ್ನು ಮನಸ್ಸಲ್ಲೇ ಇಟ್ಟುಕೊಂಡಿದ್ದ ನಾಲ್ಕೂರ ಒಡೆಯ ತನ್ನ ಜೊತೆಗೆ ಒಂದಿಷ್ಟು ಜನ ಸೇರಿಸಿಕೊಂಡು ಗುಡಿ ಬಗ್ಗೆ ಕತಿ ಕಟ್ಟಿದರು. ಮಳೆ ಬಾರದ್ದಕ್ಕೆ ಊರಲ್ಲಿ ಹೆಣ ಹೂತ್ತಿದ್ದೇ ಕಾರಣ. ಇದು ಘನಘೋರ ತಪ್ಪು. ಹಂಗಂತ ಸುದ್ದಿ ಹಬ್ಬಿಸಿದ್ರು. ಹೂತ ಹೆಣ ಹೊರಗ ತಗದು ಬ್ಯಾರೆ ಕಡೆ ಹೂಳಾಕ ಗಂಟ ಬಿದ್ರು. ಅದು ಸಾಧ್ಯ ಆಗದು ಅಂದಾಗ, ರಾತ್ರೊ ರಾತ್ರಿ ಹೆಣಾ ಹೊರಗ ತಗದು ಬ್ಯಾರೆ ಕಡೆ ಹೂಳಾಕ ಹೊಂಚ ಹಾಕಿದ್ರು''.
``ಊರಲ್ಲಿ ಹೆಣಾ ಹೂಳಿದ್ರಿಂದ ಮಳೆ ಬಂದಿಲ್ಲ. ಊರು ಮುಡಚಟ್ಟೆ ಆಗೇದ. ಹೆಣಾ ಹೊರಗ ತಗದು ನಾಲ್ಕ ತುಕಡಿ ಮಾಡಿ ನಾಲ್ಕೂ ದಿಕ್ಕಿಗೆ ಹಾಕಿದರ ಮಳಿ ಬರ್ತದೆ- ಎಂದು ಪುಕಾರು ಹಬ್ಬಿಸಿದರು. ಒಂದ ದಿನಾ ಮಟಮಟ ಮಧ್ಯಾನ್ನ ಗುದ್ದಲಿ ಸಲಕಿ ಜೋಡಿ ಇಪ್ಪತ್ತ ಮೂವತ್ತ ಜನ ಗಂಡಾಳುಗಳು ಗುಡಿಯ ಅಂಗಳಕ್ಕೆ ನುಗ್ಗಿದರು. ಇನ್ನೇನು ಸಮಾಧಿಕಲ್ಲು ಕೀಳಬೇಕು, ಅಷ್ಟರಾಗ ಕಪ್ಪು ಮೋಡ ಸೇರಿದವು. ಅದರ ಹಿಂದ ಧಾರಾಕಾರ ಮಳಿ ಸುರೀತಂತ್ರಿ'' ಎಂದು ಪರ್ವತೇಗೌಡ ಹೇಳಿದ.
ನಾನು ಆಗಾಗ ಹೂಂ ಹೂಂ ಅಂತಿದ್ದೆ.
ಕತಿ ಮುಂದವರಿದಿತ್ತು.
``ಗುದ್ದಲಿ ಸಲಿಕಿ ಜೋಡಿ ಬಂದ ಜನರನ್ನ ನೋಡಿ, ಅಲ್ಲೇ ದೂರದಲ್ಲಿ ಗಡಾಗಡಾ ನಡಗಿಕೋತ ನಿಂತಿದ್ದ ಕಿರಿಸ್ತಾನರು ದೇವರಿಗೆ ಕೃತಜ್ಞತೆ, ಸ್ತೋತ್ರ ಸಲ್ಲಿಸತೊಡಗಿದರು. ಗುಡ್ಯಾಗ ಸೇರಿ ಕೃತಜ್ಞಾತಾ ಭಾವದಿಂದ ಪ್ರಾರ್ಥನೆ ಮಾಡಿದ್ರು. ಅವರೊಂದಿಗೆ ಹೆಣಾ ಹೊರಗ ತೆಗ್ಯಾಕ ಬಂದಿದ್ದವರೂ ಪ್ರಾರ್ಥನಾ ಸಲ್ಲಿಸಿದ್ರು. ಎಲ್ಲರೂ ಸೇರಿ ಖುಷಿ ಬಂದ ಕರ್ತನ ಶ್ಲೋಕ ಪಠಿಸಿದರು. ನಿರಂಬಳ ಮನಸ್ಸಿನಿಂದ ಬಂದವರು ತಮ್ಮ ತಮ್ಮ ಮನಿಗಳಿಗೆ ಹಿಂದಕ್ಕ ಹ್ವಾದರು.''.
``ಈ ಪವಾಡ ಸದೃಶ ಪ್ರಸಂಗ ಮಂದಿ ಮನಸ್ಸಿನ್ಯಾಗ ಗ್ವಾಡ್ಯಾಗ ಮಳಿ ಹೊಡದವರಂಗ ಗಟ್ಟಿ ಕೂತಿತು. ಈ ಗುಡ್ಯಾಗಿ ಸಮಾಧಿ ಮಾಡಿದ್ದ ಸ್ವಾಮಿ ಪವಾಡ ಪುರುಷ ಆದ''.
``ಈಗಲೂ ಮಳೆ ಬರದಿದ್ರ ಈ ಊರವರ ಜೋಡಿ ಸುತ್ತಮುತ್ತ ಇರೂ ಊರವರು ಸೇರ್ಕೊಂಡ ಇಲ್ಲಿಗೆ ಬಂದ ಪ್ರಾರ್ಥನಾ ಸಲ್ಲಿಸ್ತಾರ''.
ಪರ್ವತೇಗೌಡನ ಈ ಐತಿಹ್ಯದ ರೋಚಕ ಕತಿ ಮುಗಿಯುವ ಹಂತಕ್ಕ ಬಂದಿತ್ತು.
ಪರಂಗಿ ಪಾದ್ರಿಯೊಬ್ಬ ನೂರು ವರ್ಷ ಕಳಿಯೂದರಾಗ ಮಳೆ ತರುವ ದೈವ ಆಗಿದ್ದ, ಮತ್ತ ಈ ಪಾಟಿಗಳು?
ನನ್ನ ಮುಖಭಾವದಿಂದ ಪ್ರಶ್ನೆ ತಿಳಕೊಂಡ ಪರ್ವತೇಗೌಡ, ``ಈ ಊರಾಗ ನಮ್ಮ ಅಕ್ಷರ ಕಲಿಕಾ ಕೇಂದ್ರಗಳು ಇಲ್ಲ. ಆದರೆ ಸುತ್ತಲ ಊರಾಗ ಇರುವ ಕಲಿಕಾ ಕೇಂದ್ರಗಳಲ್ಲಿ ಕೆಲಸ ಮಾಡೂ ಸ್ವಯಂ ಸೇವಕರು ಇಲ್ಲಿಯವರು'' ಎಂದ.
ಪರ್ವತೇಗೌಡನ ವಿವರಣೆ ನನ್ನ ಮನಸ್ಸಿನ್ಯಾಗ ಮೂಡಿದ್ದ ಪ್ರಶ್ನೆಗೆ ಸೂಕ್ತ ಸಮಜಾಯಿಷಿ ನೀಡುವ ಉತ್ತರ ಅಂತ ಅನ್ನಿಸಲಿಲ್ಲ.
ಅಷ್ಟರಾಗ, ಪರ್ವತೇಗೌಡ ಮಾತ ಮುಂದುವರಿಸಿದ್ದ ...
``ಈ ಪ್ಲಾಟೆ ಪಾದ್ರಿ, ಹಿಂದ ಮಕ್ಕಳನ್ನ ಕೂಡಿಸಿಕೊಂಡ, ಅ, ಆ, ಇ, ಈ ಹೇಳಿಕೊಡ್ತಿದ್ದ. ದೊಡ್ಡವರು ಮಕ್ಕಳ ಜೋಡಿ ಬಂದ ಅಕ್ಷರ ತೀಡತಿದ್ದರು. ಅವರ ಕಲಿಸುವ ಪದ್ಧತಿ ಬಾಳ ಸರಳ ಇತ್ತಂತ''.
``ಅದಲ್ಲದ, ಕಾಯಿಲೆ ಕಸಾಲೆಗೆ ಔಷಧಿ ಕೊಡತ್ತಿದ್ದ ಆ ಸ್ವಾಮಿ, ಗೋಮಾಳದಾಗ ಅಲ್ಲಲ್ಲಿ ಆಲದ ಮರಗಳಿದ್ವು. ಈ ಪರಂಗಿ ಸ್ವಾಮೊ- ಪಾದ್ರಿ ಸಂತೆ ನಡೆವ ಮೈದಾನದಾಗ, ಗೋಮಾಳದ ದಂಡಿಗೆ ನೆರಳಿಗೆ ಮರಗಳನ್ನ ನೆಡಸಿದ್ರಂತ. ಅವು ಈಗಲೂ ಅದಾವಂತ. ಗುಡಿಯ ಮಗ್ಗಲದ ಆಲದ ಮರ ಅವರೇ ನೆಟ್ಟಿದ್ದು ಅಂತ ಹೇಳ್ತಾರ''.
ಪರ್ವತೇಗೌಡನ ಕತಿ, ಪಾದ್ರಿಯ ನಡವಳಿಕೆ ಒಂದ ರೀತಿಯೊಳಗ ಶತಮಾನದ ಹಿಂದಿನ ಸಮಾಜಸೇವಕನ ಗಾಂವಟಿ ಶಾಲೆಯೊಂದರ ಚಿತ್ರ ನನ್ನ ತೆಲ್ಯಾಗ ಮೂಡಿಸತೊಡಗಿತ್ತು.
``ಆ ಪರಂಗಿ ಪಾದ್ರಿ ತಮ್ಮೊಂದಿಗೆ ತಂದಿದ್ದ ಬೈಬಲ್ ಪುಸ್ತಕದ ವಿವರಗಳ್ನ ಕನ್ನಡಕ್ಕೆ ತರ್ಜುಮೆ ಮಾಡಿ, ಅವನ್ನ ಅವರೆದುರು ಓದುತ್ತಿದ್ರು. ಕೆಲವು ದೇವರ ಸ್ತೋತ್ರದ ಹಾಡುಗಳ್ನ ಸ್ಥಳೀಯ ಜಾನಪದ ಹಾಡುಗಳ ಮೆಟ್ಟುಗಳ ಧಾಟಿಯಲ್ಲಿ ಹಾಡತಿದ್ರು, ಹಾಡಸ್ತಿದ್ರು. ಆ ಪಾದ್ರಿಯ ಸ್ಮರಣೆ ಎಂಬಂತೆ, ಗ್ರಾಮದ ಪ್ರತಿಯೊಂದು ಕುಟುಂಬದವರು, ತಮ್ಮ ಮನ್ಯಾಗಿನ ಮಕ್ಕಳು ಮೊದಲಸಾರಿ ಶಾಲೆಗೆ ಕಳಿಸುವಾಗ ಇಲ್ಲಿಗೆ ಬಂದು ಬೇಡಿಕೊಳ್ತಾರ. ಈ ಮರಕ್ಕೊಂದು ಪಾಟಿ ಕಟ್ಟಿ ಆಶೀರ್ವಾದ ಕೇಳಿಕೊಳ್ತಾರ'' ಎಂದ ಪರ್ವತೇಗೌಡ, ``ಇದು ಉಳ್ಳವರ, ಸ್ಥಿತಿವಂತರ ಮಾತು'' ಅಂತಂದು ಅದಕ್ಕೊಂದು ಬಾಲ ಸೇರಿಸಿದ್ದ.
``ಇನ್ನು ಬಡವರ ಮಕ್ಕಳು, ಪ್ಲಾಟೆ ಸ್ವಾಮಿಗಳ ಕೃಪೆ ಅಂತ ಹೇಳಿಕೊಂಡು ಆ ಮರಕ್ಕೆ ತೂಗು ಹಾಕಿದ್ದ ಪಾಟಿಗಳನ್ನ ಇಳಿಸಿಕೊಂಡು ಶಾಲೆಗೆ ಹೋಗ್ತಾವ್ರಿ''.
``ಈ ನಾಲ್ಕೂರಾಗಿನ ಕಿರಿಸ್ತಾನರು ಸೇರಿದಂಗೆ ಉಳಿದ ಕೋಮಿನ ಜನರಿಗೆ ಸಾಕಷ್ಟು ಅಕ್ಷರ ಜ್ಞಾನ ಇದೆ. ಪ್ರಾಥಮಿಕ, ಪ್ರೌಢ ಶಾಲೆ ಓದು ಪೂರ್ತಿ ಮುಗಿಸದೇ ಇದ್ರೂ, ಓದು ಬರಹ ತಿಳಿದವರು. ಹೀಗಾಗಿ ಅಕ್ಷರ ಕಲಿಕಾ ಕೇಂದ್ರಗಳು ಇಲ್ಲಿಲ್ರಿ.''
ಈ ಮಾತಿಗೆ ಪರ್ವತೇಗೌಡನ ಕತಿ ಮುಗಿದಿತ್ತು.
ಈಗ ಬಹುತೇಕ ಎಲ್ಲಾ ಊರಾಗೂ ಸರ್ಕಾರಿ ಸಾಲಿ ಅದಾವು. ಮತ್ತ ದೊಡ್ಡ ದೊಡ್ಡ ಊರಾಗ ಇಂಗ್ಲಿಷ್ ಮಾಧ್ಯಮದ ಸಾಲಿಗಳಂತೂ ಮನಾರ ತುಂಬ್ಯಾವ.
ಬಾಳ ಹಿಂದ ನಮ್ಮ ಕಡಿ ಸರ್ಕಾರಿ ಸಾಲಿಗಳು ಇರಲಿಲ್ಲ. ದೊಡ್ಡ ದೊಡ್ಡ ಊರಾಗ ಒಂದೂ ಎರಡೋ ಇದ್ದವಂತ. ಅಲ್ಲಿ ಇಲ್ಲಿ ನಾಲ್ಕಾರು ಮಠಗಳಲ್ಲಿನ ಐನೋರು ಅಕ್ಷರ ಕಲಸ್ತಿದ್ರಂತ. ಪಾಟಿ ಇಲ್ಲ ಬಳಪಾ ಇಲ್ಲ. ಉಸುಕಿನ ರಂಗೋಲಿ ಹಾಕ್ಕೋತ, ಬೆರಳಿಂದ ಮೂಡಿಸಿಗೋತ - ರ ಠ ಈ ಕ ಕಲಸ್ತಿದ್ರಂತ. ಮುಂದ ಪಾಟಿ ಬಳಪ ಬಂದವು.
ಆಮ್ಯಾಲ ಒಬೊಬ್ಬರ ಗಾಂವಟಿ ಸಾಲಿ ನಡಸ್ತಿದ್ರಂತ. ತಾವೇ ಸಾಲಿ ನಡಸೂದು ಸರ್ಕಾರ ಅದಕ್ಕ ಪರವಾನಿಗಿ ಕೊಡೂದ ನಡಿತ್ತಿತ್ತು. ಏನ ಆದ್ರೂ, ಸರ್ಕಾರಿ ಸಾಲಿಗಳಂಗ ಆಗ್ತಿರಲಿಲ್ಲ. ದೊಡ್ಡ ದೊಡ್ಡ ಮಂದಿ ಮಕ್ಕಳಿಗೆ ಅಕ್ಷರ ಜ್ಞಾನ ಸಿಗ್ತಿತ್ತು. ಸರ್ಕಾರಿ ಸಾಲಿಗಳು ಬಂದ ಮ್ಯಾಲ ಎಲ್ಲಾರೂ ಕಲಿವಂಗಾಯ್ತು.
ಆದರ, ಇದನ್ನ ಈ ಪರಂಗಿ ಸ್ವಾಮಿ ನೂರೈವತ್ತ ವರ್ಷಗಳ ಹಿಂದ ಮಾಡಿ ತೋರಿಸಿದ್ದ!
ಈ ಸ್ವಾಮಿ ವಿದೇಶಿಯನಾದರೇನು? ನೂರೈವತ್ತು ವರ್ಷಗಳ ಹಿಂದ ಸಾಮಾಜಿಕ ಕಳಕಳಿ ಹೊಂದಿದ್ದನ್ನ ಮರೆಯುಹಂಗಿಲ್ಲ.
ನೆರಳಿಗೆ ಅನುಕೂಲವಾಗ್ಲಿ ಅಂತ ಮರ ನೆಟ್ಟಿದ್ದು, ಮಕ್ಕಳು ಮರಿಗಳಿಗೆ ಅಕ್ಷರ ಜ್ಞಾನ ಕೊಡಾಕ ಮುಂದಾದದ್ದು, ಎಲ್ಲಾ ಆಸಕ್ತಿ ಮೂಡಿಸುವ ಸಂಗತಿಗಳು. ಆ ಕಾಲಕ್ಕೆ ಬಹಳ ಹೊಸತನ ಎನ್ನುವ ಇಂಥ ವಿಚಾರಗಳನ್ನ ಅಂದಿನ ಜನ ಹ್ಯಾಂಗ ನೋಡಿದ್ರೋ? ಸ್ವೀಕರಿಸಿದ್ರೋ? ಗೊತ್ತಿಲ್ಲ. ಅಧ್ಯಯನಕ್ಕೆ ಒಂದು ವಸ್ತು ಆಗುವಂಥದ್ದು ಇದು.
ಈ ಸ್ವಾಮಿಗಳಂಥವರ ಮುಂದ `ಕಾಮಾ ಪುರ್ತೆ ಮಾಮಾ' ಅನಕೋತ ಕಾಟಾಚಾರದಿಂದ ಕೆಲಸ ಮಾಡಕೋತ ಕೂಡು ಕಾಮಚೋರ ಮಂದೀನ್ನ ಏನ ಮಾಡಬೇಕು? ಆ ದೇವರಿಗೆ ಗೊತ್ತು. ನಂಗಂತೂ ಅಕ್ಷರ ಕಲಿಕೆ, ವಯಸ್ಕರ ಶಿಕ್ಷಣ ಕಾರ್‍ಯಕ್ರಮ ಜಾರಿ ಹೆಸರಲ್ಲೇ, ಕೆಲಸ ಮಾಡದ ಸರ್ಕಾರಿ ರೊಕ್ಕ ಖರ್ಚ ಮಾಡಕೋತ ಚೈನಿ ಹೊಡಿಯುವ ಮಂದೀನ್ನ ನಿವಾಳಿಸಿ ಒಗೀಬೇಕು ಅನ್ನಿಸ್ತು.
ಪರ್ವತೇಗೌಡ, ಗೌರವಾದರಗಳೊಂದಿಗೆ ಆ ಪುನೀತ ಸ್ವಾಮಿಯ ಸಮಾಧಿಗೆ ನಮಸ್ಕಾರ ಮಾಡಿ ಅಲ್ಲಿನ ಮಣ್ಣನ್ನ ತನ್ನ ಹಣೀಗೆ ಹಂಚಿಕೊಂಡ.
ನನಗೂ ಆ ಸ್ವಾಮಿ ಮಾಡಿದ ಕೆಲಸ ಹಿಡಿಸ್ತು. ಸರ್ಕಾರ ಮಾಡೂ ಕೆಲಸ ತಾನ ಮಾಡಿದ್ದ. ನೂರೈವತ್ತು ವರ್ಷಗಳ ಹಿಂದ ಅಕ್ಷರ ಕಲಿಸಾಕ ಮುಂದಾಗಿದ್ದ ಆ ಮಹಾಚೇತನದ ಸಮಾಧಿಗೆ ನಾನೂ ಅಡ್ಡಬಿದ್ದೆ.
ಸಾಕ್ಷರ ಕಾರ್‍ಯಕ್ರಮದ ಮುಂದ ಸಾಕ್ಷರೋತ್ತರ ಕಾರ್‍ಯಕ್ರಮ ಇತ್ತು. ಅದು ಬಂತು ಹೋಯ್ತು. ಹೊಸ ಜಿಲ್ಲಾಧಿಕಾರಿ ಬಂದ ಮ್ಯಾಲ ನಾನು ಆ ಕಾರ್‍ಯಕ್ರಮದಿಂದ ದೂರ ಉಳಿದೆ. ಆದ್ರ ಸಾಕ್ಷರ ಕಾರ್‍ಯಕ್ರಮದಾಗ ಇದ್ದಾಗ ಮಂಡ್ಯದ ಜಿಲ್ಲೆಯ ಆ ಹಳ್ಳಿಗೆ ಭೆಟ್ಟಿ ಕೊಟ್ಟಿದ್ದು, ಆ ಸ್ವಾಮಿಯ ಸಮಾಧಿಗೆ ಭೆಟ್ಟಿ ಕೊಟ್ಟದ್ದು ಮರಿಲಿಕ್ಕೆ ಆಗವಲ್ತು.
(2006ರಲ್ಲಿ ಪ್ರಕಟವಾದ `ಗಂಟಿಗುಡಿಗೆ ಹ್ವಾದವರ ಶುದ್ಧೀಕರಣ' ಕಥಾ ಸಂಕಲನದಲ್ಲಿನ ಕತೆ. ಇದೇ ಕತೆ, `ಪಾಟಿ ಗಿಡ' ಹೆಸರಲ್ಲಿ ಸುಧಾ ವಾರ ಪತ್ರಿಕೆ (28 ಡಿಸೆಂಬರ್ 2006ರಲ್ಲಿ ಪ್ರಕಟಗೊಂಡಿದೆ.)
*******