ನಡೆದುದು ಇತರರಿಗೆ ಜೀವನಾದರ್ಶ.
ಸಂತ ಅಂತೋಣಿಯವರ ಪೂರ್ವಾಶ್ರಮದ ಹೆಸರು ಫರ್ಡಿನಾಂಡ್. ಅವರು ಸನ್ಯಾಸಿ ಸಭೆಗೆ ಸೇರಿದಾಗ, ಅವರಿಗೆ
ಅಂತೋಣಿ ಎಂದು ನಾಮಕರಣ ಮಾಡಲಾಗಿದೆ. ಅವರು ಕ್ರಿ. ಶ 1195ರಲ್ಲಿ ಆಗಸ್ಟ್
15ರಂದು ಪೋರ್ಚುಗಲ್ ದೇಶದ ಲಿಸ್ಬನ್ ನಗರದಲ್ಲಿ ಜನಸಿದ್ದರು. ಅವರ ತಂದೆ ಮಾರ್ಟಿನ್ ತಿಬಿಯೋ
ಅವರು ಲಿಸ್ಬನ್ ನಗರದಲ್ಲಿ ಉನ್ನತ ಅಧಿಕಾರಿ ಆಗಿದ್ದರು. ಅವರ ತಾಯಿಯ ಹೆಸರು ದೋನಾ ಮರಿಯಾ.
ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದರು.
ಕುಲೀನ ಮನೆತನದ ಈ ಕುಟುಂಬವು ದೇವ
ಭಕ್ತಿಯಲ್ಲಿ ಸದಾ ಮಿಂದೇಳುತ್ತಿತ್ತು. ಅದರ ಪರಿಣಾಮವಾಗಿ, ಬಾಲ್ಯದಿಂದಲೇ
ಸಂತ ಅಂತೋಣಿಯವರಲ್ಲಿ ದೈವಭಕ್ತಿ ಆಳವಾಗಿ ಬೇರೂರತೊಡಗಿತ್ತು. ಆಧ್ಯಾತ್ಮದತ್ತ ಒಲವು ಹೆಚ್ಚಾದಾಗ, ಅವರು
ಮನೆಯನ್ನು ತೊರೆದು ಸಂತ ವಿನ್ಸೆಸ್ಸಿ ಅವರ ಸನ್ಯಾಸಿ ಮಠ ಸೇರಿದರು. ಏಕಾಂತ ವಾಸಕ್ಕೆ, ಜಪತಪಗಳಿಗೆ
ಭಂಗ ಉಂಟುಮಾಡುತ್ತಿದ್ದ ಕುಟುಂಬಸ್ಥರ ಮತ್ತು ಬಂಧು ಬಳಗದವರ ಹೆಚ್ಚಿನ ಒಡನಾಟದಿಂದ ಬೇಸತ್ತ ಸಂತ
ಅಂತೋಣಿ ಅವರು, ದೂರದ ಕೊಯಿಂಬ್ರ ದೇಶದ ಪವಿತ್ರ ಶಿಲುಬೆಯ ಮಠ ಸೇರಿದರು. ಅಲ್ಲಿ ಸಂಪೂರ್ಣವಾಗಿ ಅಧ್ಯಯನ, ಜಪತಪಗಳಲ್ಲಿ
ತೊಡಗಿ ಆಧ್ಯಾತ್ಮಿಕ ಸಾಧನೆಗೈದರು.
ಮೊರೊಕ್ಕೊ ದೇಶದಲ್ಲಿ ಸುವಾರ್ತೆ ಸಾರಲು
ಹೋದ ಅಸಿಸ್ಸಿಯ ಸಂತ ಫ್ರಾನ್ಸಿಸ್ ರ ಮಠದ ಐವರು ಸನ್ಯಾಸಿಗಳು ರಕ್ತಸಾಕ್ಷಿಗಳಾಗಿ
ಮಡಿದಿರುತ್ತಾರೆ. ತಾವೂ ಅವರಂತೆ ಆಗ ಬಯಸಿದ ಸಂತ ಅಂತೋಣಿ ಅವರು, ಆ
ಫ್ರಾನ್ಸಿಸ್ಕನ್ ಸಭೆಯ ಸನ್ಯಾಸಿ ಮಠವನ್ನು ಸೇರುತ್ತಾರೆ. ಮೊರೊಕ್ಕೊ ದೇಶದಲ್ಲಿ ಸುವಾರ್ತೆ ಸಾರುವ
ಉದ್ದೇಶದಿಂದ ಪ್ರಯಾಣ ಆರಂಭಿಸುತ್ತಾರೆ. ಮಾರ್ಗಮಧ್ಯದಲ್ಲಿ ಅಸ್ವಸ್ಥರಾದ ಅವರು ಸ್ವದೇಶಕ್ಕೆ
ಹಿಂದಿರುಗಲು ಹಡಗೊಂದರಲ್ಲಿ ಪ್ರಯಾಣಿಸುತ್ತಾರೆ. ಬಿರುಗಾಳಿಯ ದೆಸೆಯಿಂದ ಅವರ ಹಡಗು ಇಟಲಿಗೆ
ಸೇರಿದ ಸಿಸಿಲಿ ನಡುಗಡ್ಡೆಯನ್ನು ಮುಟ್ಟುತ್ತದೆ. ಆರೋಗ್ಯ ಸುಧಾರಿಸಿದ ನಂತರ ಅವರು, ಮಧ್ಯ ಇಟಲಿಯ
ಟಸ್ಕನಿ ಪ್ರದೇಶವನ್ನು ತಲುಪುತ್ತಾರೆ.
ಅಲ್ಲಿಂದ ಅವರು ರೊಮಗ್ನಾ ಪ್ರದೇಶದ
ಫೊರ್ಲಿ ಪಟ್ಟಣದ ಸನಿಹದ ಸಾನ್ ಪಾಲೊದಲ್ಲಿನ ಸನ್ಯಾಸಿಮಠವನ್ನು ಸೇರುತ್ತಾರೆ. ಒಂದು ದಿನ
ಯಾಜಕದೀಕ್ಷೆಯ ಸಂದರ್ಭದಲ್ಲಿ ಫ್ರಾನ್ಸಿಸ್ಕನ್ ಮತ್ತು ಡೊಮಿನಿಕನ್ ಸಭೆಗಳ ಸನ್ಯಾಸಿಗಳಲ್ಲಿ ಯಾರು
ಪ್ರಬೋಧನೆ ಮಾಡಬೇಕೆಂಬ ಗೊಂದಲ ಮೂಡಿದಾಗ, ಮಠದ ಪ್ರಧಾನರು -ಗುರುಶ್ರೇಷ್ಠರು, ಸಂತ
ಅಂತೋಣಿಯವರಿಗೆ ಪ್ರಭೋಧನೆ ನೀಡಲು ಆದೇಶಿಸುತ್ತಾರೆ. `ಪವಿತ್ರಾತ್ಮರು
ನುಡಿಸಿದಂತೆ ನುಡಿ’ ಎನ್ನುತ್ತಾರೆ. ಅನಿರೀಕ್ಷಿತವಾದ ಈ ಬೆಳವಣಿಗೆಯಿಂದ ವಿಚಲಿತರಾದರೂ ಸಂತ
ಅಂತೋಣಿಯವರು ನೀಡಿದ ಮನದುಂಬುವ ಪ್ರೌಢ ಪ್ರಬೋಧನೆ, ಅಲ್ಲಿ
ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅನಂತರ ಅವರು ಫ್ರಾನ್ಸಿಸ್ಕನ ಸಭೆಯ
ಸ್ಥಾಪಕ ಅಸ್ಸಿಸಿಯ ಫ್ರಾನ್ಸಿಸ್ ಅವರ ನೇರ ಸಂಪರ್ಕಕ್ಕೆ ಬರುತ್ತಾರೆ. ಅಲ್ಲಿಂದ ಅವರು ಪೂರ್ಣ
ಪ್ರಮಾಣದಲ್ಲಿ ಸುವಾರ್ತಾ ಪ್ರಸಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಮುಂದೆ ಸಂತ ಅಂತೋಣಿ ಅವರು, ಸನ್ಯಾಸಿ ಮಠದ
ಆಶಯದಂತೆಯೇ ಬಡತನದ ಜೀವನ ನಡೆಸುತ್ತಾ ಪ್ರಭಾವಿ ಪ್ರಬೋಧನೆಗಳಿಂದ ಮತ್ತು ಹಲವಾರು ಪವಾಡಗಳಿಂದ
ಜನಾನುರಾಗಿಯಾಗಿ ಗುರುತಿಸಿಕೊಳ್ಳುತ್ತಾರೆ. ಪಾದ್ವದಲ್ಲಿ ನೆಲೆಸಿ ತಮ್ಮ ಕೆಲಸವನ್ನು ಸಾಗಿಸುವ
ಅವರು, 1231ರ ಜೂನ್ 13 ರಂದು ಅಸುನೀಗುತ್ತಾರೆ. ಅವರು ಮೃತರಾಗಿ ಒಂದು ವರ್ಷ
ಕಳೆಯುವಷ್ಟರಲ್ಲಿ, ಅಂದಿನ ಪಾಪುಸ್ವಾಮಿ (ಜಗದ್ಗುರು)ಗಳಾಗಿದ್ದ ಒಂಬತ್ತನೇ ಗ್ರೆಗೋರಿ ಅವರು 1232ರ ಮೇ ಮಾಸದ 30ರಂದು ಅವರನ್ನು
ಸಂತರ ಪಟ್ಟಿಗೆ ಸೇರಿಸುತ್ತಾರೆ. ಇದು ಸಂತ ಅಂತೋಣಿ ಅವರ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ.
ಸಂತ ಅಂತೋಣಿ ಪವಾಡಗಳು:
ವಿಭೂತಿ ಪುರುಷರ ಜೀವನ ಚರಿತ್ರೆಗಳು
ಪವಾಡಗಳಿಲ್ಲದಿದ್ದರೆ, ಅದು ಅಪೂರ್ಣ ಎಂಬ ಭಾವನೆ ಇದೆ. ಏಕೆಂದರೆ, ಎಲ್ಲಾ ವಿಭೂತಿ
ಪುರುಷರು ಸಾಮಾನ್ಯರ ಮಟ್ಟಿಗೆ ಪವಾಡ ಪುರುಷರು. ಪವಾಡಗಳಿಲ್ಲದಿದ್ದರೆ ಅವರು ವಿಭೂತಿ ಪುರುಷರಲ್ಲ, ಸಂತರಲ್ಲ ಎಂದೇ
ಸಾಮಾನ್ಯ ಜನರು ಭಾವಿಸುತ್ತಾರೆ. ಅದರಂತೆ ಸಂತ ಅಂತೋಣಿ ಅವರ ಜೀವನ ಚರಿತ್ರೆಯೂ ಪವಾಡಗಳಿಂದ
ಹೊರತಾಗಿಲ್ಲ. ಕೆಲವು ಪವಾಡಗಳ ಹಿನ್ನೆಲೆಯಲ್ಲಿ ಒಂದಿಷ್ಟು ಬಗೆಯ ವಿಶ್ವಾಸಗಳು ಮತ್ತು ಆಚರಣೆಗಳು
ಸಂತ ಅಂತೋಣಿಯವರನ್ನು ಸುತ್ತಿಕೊಂಡಿವೆ. ಇರಲಿ, ಸಂತ ಅಂತೋಣಿ ಅವರು, ಜೀವಿಸಿರುವಾಗಲೇ
ಹಲವಾರು ಪವಾಡಗಳನ್ನು ಮಾಡಿದರೆಂದು ವಿಶ್ವಾಸಿಸಲಾಗುತ್ತಿದೆ. ಜಲಚರಗಳಾದ ಮೀನುಗಳಿಗೆ ಅವರು
ಪ್ರಬೋಧನೆ ನೀಡಿದರು, ಮೂಕ ಪ್ರಾಣಿ ಹೇಸರಗತ್ತೆಯು ಪರಮ ಪ್ರಸಾದಕ್ಕೆ ಗೌರವ ಕೊಡುವಂತೆ
ಮಾಡಿದರು ಎಂಬ ಹಲವಾರು ಪವಾಡಗಳು ಅವರ ಹೆಸರನಲ್ಲಿವೆ. ಭಕ್ತರು ಕೋರಿಕೆ ಸಲ್ಲಿಸಿದರೆ, ಕಳುವಾದ
ವಸ್ತುಗಳನ್ನು ದೊರಕಿಸಿಕೊಡುವ ಸಂತರು ಎಂಬ ಖ್ಯಾತಿ ಅವರದು. ಇವುಗಳ ಜೊತೆಗೆ ಸಂತ ಅಂತೋಣಿ ಅವರು, ಬದುಕಿದ್ದಾಗ, ಬದುಕಿದ
ನಂತರವೂ ಮೃತರಿಗೆ ಜೀವದಾನ ಕೊಡುತ್ತಿದ್ದರು, ಸತ್ತವರು ಎದ್ದು ಬರುವಂತೆ ಮಾಡಿ ಅವರಿಂದ ಸಾಕ್ಷಿ
ಹೇಳಿಸಿದರು ಎಂಬ ಪವಾಡಗಳು ಇವೆ.
ಕಳೆದ ವಸ್ತುಗಳ ದೊರಕಿಸಿಕೊಡುವ ಸಂತ:
ಸಂತ ಅಂತೋಣಿ ಅವರು, ಕಳೆದ ಅಥವಾ
ಕಳುವಾದ ವಸ್ತುಗಳನ್ನು ದೊರಕಿಸಿಕೊಡುವ ಮಹಿಮೆಯ ಸಂತರು ಎಂದು ಹೆಸರುವಾಸಿಯಾಗಿದ್ದಾರೆ. ಅದಕ್ಕೂ
ಒಂದು ಕತೆ ಇದೆ. ಅಂತೋಣಿ ಅವರು ಒಂದು ಕೀರ್ತನೆಗಳ ಪುಸ್ತಕವನ್ನು ಹೊಂದಿದ್ದರು. ಆಗ ಇನ್ನೂ
ಮುದ್ರಣ ಯಂತ್ರಗಳ ಆವಿಷ್ಕಾರವಾಗಿರಲಿಲ್ಲ. ಹೀಗಾಗಿ ಅದನ್ನು ಅವರು ಬಹುವಾಗಿ ಆಪ್ತವಾಗಿ
ಕಾಣುತ್ತಿದ್ದರು. ಸನ್ಯಾಸಿ ಮಠ ಬಿಟ್ಟು ಬಿಡುವ ಉದ್ದೇಶ ಹೊಂದಿದ್ದ ಒಬ್ಬ ಕಿರಿಯ ಸನ್ಯಾಸಿ, ಅವರ
ಕೀರ್ತನೆಗಳ ಪುಸ್ತಕವನ್ನು ಕದ್ದುಕೊಂಡು ಹೋಗಿದ್ದ. ತಮ್ಮ ಕೀರ್ತನೆಗಳ ಪುಸ್ತಕ ತಮ್ಮೊಂದಿಗಿಲ್ಲದಿರುವುದು
ಗೊತ್ತಾದ ತಕ್ಷಣ ಅವರು, ಅದನ್ನು ದೊರಕಿಸಿಕೊಡುವಂತೆ ದೇವರಲ್ಲಿ ಕೋರಿಕೆ ಸಲ್ಲಿಸಿದರು.
ಪಶ್ಚಾತ್ತಾಪ ಪಟ್ಟ ಪುಸ್ತಕ ಕದ್ದ ಕಿರಿಯ ಸನ್ಯಾಸಿ ಅಂತೋಣಿ ಅವರು ಇಟ್ಟುಕೊಂಡಿದ್ದ ಕೀರ್ತನೆಗಳ
ಪುಸ್ತಕವನ್ನು ಹಿಂದಿರುಗಿಸಿದ. ಸನ್ಯಾಸಿ ಮಠವನ್ನು ಬಿಡುವ ಮನಸ್ಸು ಬದಲಿಸಿ ಮತ್ತೆ ಮಠವನ್ನು
ಸೇರಿಕೊಂಡ.
ಮುಳುಗಿ ಸತ್ತವಳು ಜೀವಂತಳಾದದ್ದು:
ಪಾದ್ವದ ಯರಿಲಿಯ ಎಂಬ ಬಾಲಕಿ ತನ್ನ
ತಾಯಿಯೊಂದಿಗೆ ಸಂಬಂಧಿ ವೃದ್ಧಳೊಬ್ಬಳನ್ನು ನೋಡಲು ಹೋದಾಗ, ಅಲ್ಲಿಯೇ ಮನೆಯ
ಹತ್ತಿರದಲ್ಲಿ ಉರುವಲಿಗಾಗಿ ಕೆಳಗೆ ಬಿದ್ದಿದ್ದ ಮರಗಿಡದ ಒಣಗಿದ ತುಂಡುಗಳನ್ನು ಆರಿಸಿಕೊಳ್ಳುವಾಗ
ನೀರ ಹೊಂಡದಲ್ಲಿ ಬೀಳುತ್ತಾಳೆ. ಮೇಲ್ಮುಖವಾಗಿ ನೀರಲ್ಲಿದ್ದ ಮಗಳನ್ನು ಕಂಡ ತಾಯಿ ಧಾವಿಸಿ
ಬರುವಷ್ಟರಲ್ಲಿ, ಯುರಿಲಿಯ ನೀರಲ್ಲಿ ಮುಳುಗುತ್ತಾಳೆ. ಹೇಗೊ ನೀರಿನಿಂದ ಮಗುವನ್ನು ಎತ್ತಿಕೊಂಡು ಬದಿಯ
ರಸ್ತೆಯಲ್ಲಿ ಮಲಗಿಸುತ್ತಾಳೆ. ಅಲ್ಲಿ ಕೂಡಿದ ಜನರಲ್ಲೊಬ್ಬ ಮಗುವಿನ ತಣ್ಣಗಿನ ದೇಹವನ್ನು ಗಮನಿಸಿ
ಮಗು ಸತ್ತಿದೆ ಎಂದು ಹೇಳುತ್ತಾನೆ. ದುಃಖದಲ್ಲಿದ್ದ ತಾಯಿ ಸಂತ ಅಂತೋಣಿಯವರೆ, `ಪ್ರಭು
ಕ್ರಿಸ್ತರಲ್ಲಿ ಪ್ರಾರ್ಥಿಸಿ ನನ್ನ ಮಗುವನ್ನು ಬದುಕಿಸಿಕೊಡಿ’ ಎಂದು ಕೋರಿಕೊಳ್ಳುತ್ತಾಳೆ. ಈ ಸರಳ
ಪದಗಳ ಕೋರಿಕೆಯ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ, ಮಗುವಿನ
ತುಟಿಗಳು ಅಲುಗತೊಡಗುತ್ತವೆ. ಹೊಂಡದಲ್ಲಿ ಮುಳುಗುವಾಗ ಕುಡಿದ ನೀರು ಬಾಯಿಯಿಂದ ಹೊರಗೆ
ಚಿಮ್ಮತೊಡಗುತ್ತದೆ. ಯುರಿಲಿಯ ಬದುಕುತ್ತಾಳೆ. ಪಾದ್ವದಲ್ಲಿರುವ ಸಂತ ಅಂತೋಣಿ ಅವರ
ಪುಣ್ಯಕ್ಷೇತ್ರದ ಮಹಾದೇವಾಲಯದಲ್ಲಿ ಈ ಘಟನೆಯ ಉಬ್ಬುಚಿತ್ರವಿದೆ. ಇದು ಅಂತೋಣಿ ಅವರ ಜೀವಿತ
ಅವಧಿಯಲ್ಲಿ ಜರುಗಿದ ಸಂಗತಿಯಲ್ಲ ಎಂದು ಹೇಳಲಾಗುತ್ತದೆ.
ಸುಳ್ಳು ಹೇಳಿದ ರೈತ:
ಸಂತ ಅಂತೋಣಿ ಅವರು ಬದುಕಿದ್ದಾಗ ಇಟಲಿ ದೇಶದ ಜೆಮೋನ್ ಪಟ್ಟಣದಲ್ಲೊಂದು ಘಟನೆ ನಡೆದಿದೆ.
ಅಲ್ಲಿ ಪ್ರಬೋಧನೆ ಮಾಡುತ್ತಿದ್ದ ಸಂತ ಅಂತೋಣಿ ಅವರು, ಕ್ರೈಸ್ತ
ವಿಶ್ವಾಸಿಗಳ ಅನುಕೂಲಕ್ಕಾಗಿ ದೇವಮಾತೆಯ ಗೌರವಾರ್ಥ ದೇವಾಲಯ ಹಾಗೂ ಸನ್ಯಾಸಿ ಮಠವನ್ನು ಕಟ್ಟಲು
ಬೇಕಾದ ಸಾಮಾನು ಸರಂಜಾಮುಗಳನ್ನು ತರಲು ಎರಡೆತ್ತಿನ ಚಕ್ಕಡಿ ಓಡಿಸುತ್ತಿದ್ದ ರೈತನ ಸಹಾಯ
ಕೇಳುತ್ತಾರೆ. ಚಕ್ಕಡಿ ಗಾಡಿಯಲ್ಲಿ ಯುವಕನೊಬ್ಬನು ಮಲಗಿರುತ್ತಾನೆ. ಸಂತ ಅಂತೋಣಿಯವರಿಗೆ ಸಹಾಯ
ಮಾಡಲು ಹಿಂದೇಟು ಹಾಕುವ ರೈತ, ಗಾಡಿಯಲ್ಲಿ ಯುವಕನೊಬ್ಬನ ಶವವಿದೆ ಎಂದು ಸುಳ್ಳು ಹೇಳಿ ಮುಂದೆ
ಹೋಗುತ್ತಾನೆ.
ಮುಂದೆ ಹೋಗಿ ನೋಡಿದಾಗ ನಿಜವಾಗಿಯೂ ಆ
ಯುವಕ ಮೃತಪಟ್ಟಿರುತ್ತಾನೆ. ತನ್ನ ತಪ್ಪಿನ ಅರಿವಾದಾಗ, ರೈತ
ಹಿಂದಿರುಗಿ ಬಂದು ಸಂತ ಅಂತೋಣಿ ಅವರ ಹತ್ತಿರ ಕ್ಷಮೆ ಯಾಚಿಸಿ, ಯುವಕನನ್ನು
ಬದುಕಿಸುವಂತೆ ಕೋರಿಕೊಳ್ಳುತ್ತಾನೆ. ಮನ ಕರಗಿದ ಸಂತ ಅಂತೋಣಿ ಅವರು, ಹೆಣದ ಮೇಲೆ
ಶಿಲುಬೆ ಗುರುತು ಹಾಕಿ ದೇವರ ಕೃಪೆ ಕೋರುತ್ತಾರೆ. ಆಗ ಯುವಕ ಜೀವವನ್ನು ಪಡೆದು ಎದ್ದು
ಕುಳಿತುಕೊಳ್ಳುತ್ತಾನೆ. ಈ ಪವಾಡದಿಂದ ಪ್ರಭಾವಿತರಾದ ಊರ ಜನ ಕಟ್ಟಡದ ಕೆಲಸಕ್ಕೆ ನೆರವು ನೀಡಿ
ಕೊನೆಗೆ ಕ್ರೈಸ್ತ ವಿಶ್ವಾಸಿಗಳೂ ಆಗುತ್ತಾರೆ.
ಸತ್ತ ವ್ಯಕ್ತಿ ಸಾಕ್ಷಿ ಹೇಳಿದ ಪ್ರಸಂಗ:
ಸಂತ ಅಂತೋಣಿ ಅವರ ಸ್ವಂತ ಊರು ಲಿಸ್ಬನ್.
ಅಲ್ಲಿನ ನಿವಾಸಿಗಳಾದ ಎರಡು ಕುಟಂಬಗಳಲ್ಲಿ ವೈಮನಸ್ಸು ಇತ್ತು. ಒಂದು ಸಂಜೆ ಒಂದು ಕುಟುಂಬದ ಯುವಕ
ತನ್ನ ವೈರಿ ಕುಟುಂಬದ ಯುವಕನನ್ನು ಯಾರಿಗೂ ಗೊತ್ತಾಗದಂತೆ ಸಾಯಿಸಿ, ಹೆಣವನ್ನು ಸಂತ
ಅಂತೋಣಿ ಅವರ ತಂದೆ ಮಾರ್ಟಿನ್ ಅವರಿಗೆ ಸೇರಿದ ಹೊಲದಲ್ಲಿ ಹೂಳುತ್ತಾನೆ. ಆ ಯುವಕನನ್ನು ಸಾಯಿಸಿದ
ಅಪವಾದಹೊತ್ತ ಮಾರ್ಟಿನ್ ತಮ್ಮ ನಿರಪರಾಧಿತ್ವವನ್ನು ಸಾಧಿಸಲು ಆಗುವುದಿಲ್ಲ. ಈ ಸಮಯದಲ್ಲಿ ಅಂತೋಣಿ
ಅವರು ಅಲ್ಲಿಂದ 1200 ಕಿ. ಮೀ ದೂರದ ಇಟಲಿಯ ಪಾದ್ವದಲ್ಲಿ ಇರುತ್ತಾರೆ.
ದೇವರು ಈ ವಿಷಯವನ್ನು ಸಂತ ಅಂತೋಣಿಯವರಿಗೆ ತಿಳಿಸಿ ಅಲ್ಲಿಗೆ ತೆರಳಲು ಸೂಚಿಸುತ್ತಾರೆ.
ದೈವ ಬಲದಿಂದ ಲಿಸ್ಬನ್ ಗೆ ಬರುವ ಸಂತ ಅಂತೋಣಿ ಅವರು, ನ್ಯಾಯಾಲಯದ
ಆವರಣಕ್ಕೆ ಸತ್ತ ವ್ಯಕ್ತಿಯ ಶವವನ್ನು ತರಿಸಿ, ಅದರಿಂದಲೇ ಕೊಲೆಗಾರನ ಹೆಸರು ಹೇಳಿಸುತ್ತಾರೆ.
ಅಂತೋಣಿ ಅವರ ತಂದೆ ನಿರಪರಾಧಿ ಎಂಬುದು ಸ್ಪಷ್ಟವಾಗುತ್ತದೆ. ಜೀವಂತವಾಗಿದ್ದ ಶವ ಅಂತೋಣಿಯವರತ್ತ
ತಿರುಗಿ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟು ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಮತ್ತೆ
ನಿರ್ಜೀವವಾಗುತ್ತದೆ. ಈ ಘಟನೆಯ ಮರುದಿನವೇ ಸಂತ ಅಂತೋಣಿ ಅವರು ಮತ್ತೆ ಪಾದ್ವದಲ್ಲಿ
ಕಾಣಿಸಿಕೊಳ್ಳುತ್ತಾರೆ.
**********