ಇದೀಗ
ಊರ ಮೈ ತುಂಬಾ
ಅಣುರೇಣು-ವೈರಾಣುಗಳ ಸಹಸ್ರಾಕ್ಷ ವಕ್ರನೋಟ
ಮಹಾಮಾರಿಯ ಅಟ್ಟಲು
ನರ-ನಾರಾಯಣರ ಅಹರ್ನಿಶಿ ಹೋರಾಟ
ಉರುಳುತ್ತಿವೆ ಚಕ್ರಾಧಿಪತ್ಯಗಳು
ಅಗ್ಗವಾಗಿವೆ ಝಳಪಿಸುವ ಶಸ್ತ್ರಾಸ್ತ್ರಗಳು
ಹಾರಿ ಹೋಗಿವೆ ಮನುಷ್ಯ ಸತ್ತೆಗಳು
ಮೌನವಾಗಿವೆ ಪ್ರಾರ್ಥನಾ ಮಂದಿರಗಳು
ಕಾಣೆಯಾಗಿವೆ ಜನರ ಮುಖಗಳು
ಕಳಚಿಬಿದ್ದಿವೆ ಮುಖವಾಡಗಳು
ಸತ್ತವನಿಗೊಂದು ಮಸಣವಿಲ್ಲ
ಹೆಸರ ಬರೆಸಲು ಕೊನೆಪಕ್ಷ ಕಲ್ಲು ಇಲ್ಲ
ದೀಪ-ಧೂಪದ ವಾಸನೆ ಇಲ್ಲ
ಜಗದ ಸುಖದ ವಿಲಾಸವಿಲ್ಲ
ಬಣ್ಣದ ಕೆಸರೆರಚಾಟಕ್ಕೆ ಕೊನೆಯಿಲ್ಲ
ಶಂಖ- ಜಾಗಟೆ ಕರತಾಡನದ ಗದ್ದಲಕ್ಕೆ
ನಾಲಿಗೆ ಮಲಿನಗೊಂಡ ಕಾಲಕ್ಕೆ
ಹುಸಿ ಆಧ್ಯಾತ್ಮದ ಹೊಲಸಿಗೆ ರೋಸಿ
ಮೈಯೆಲ್ಲ ಪರಚಿಕೊಂಡು
ಭವ ಚಕ್ರದಲ್ಲಿ
ಅರ್ಥ ಹುಡುಕ ಹೊರಟ
ಇವನೀಗ ಶೂನ್ಯನು
ತೊಳೆಯಲು ಬಣ್ಣವ
ಕಳೆಯಲು ವ್ಯಾಧಿಯ
ಹುಡುಕುತ್ತಿದ್ದಾನೆ ಇವನು ಗಂಗೆಯ
ಸ್ವಸ್ಥವಾಗಲು
ಆತ್ಮ-ಜ್ಞಾನಯೋಗದಲ್ಲಿ
ಬೆತ್ತಲಾಗಲು
ಉತ್ತುಬಿತ್ತಲು ಸೂರ-ಊರ ಕಟ್ಟಲು
- ಡಾ. ದಿನೇಶ್
ನಾಯಕ್
***********************
No comments:
Post a Comment