Saturday, 20 June 2020

ಸೃಷ್ಟಿಯ ಕತೆ - 10 - ಈ ಜಗತ್ತು ಸೋದರಳಿಯನ ಸೃಷ್ಟಿ

- ಎಫ್ ಎಂ ಎನ್

ಆದಿ ಕಾಲದಲ್ಲಿ ಜಗತು ್ತಕೊನೆ ಕಾಣದ ಸ್ಥಳವಾಗಿತ್ತು. ಅದರಲ್ಲಿ ಒಬ್ಬರೇ ಒಬ್ಬರು ಇದ್ದರು. ಅವರು ಸೃಷ್ಟಿಕರ್ತರು - ಸೃಷ್ಟಿದಾತರು. ಅವರ ಹೆಸರು `ತೈಓವಾ’. ಆ ಜಗತ್ತು ಯಾವ ಆಕಾರವನ್ನೂ ಹೊಂದಿರಲಿಲ್ಲ. ಅದರಲ್ಲಿ ಯಾವ ಜೀವರಾಶಿಯೂ ಇರಲಿಲ್ಲ. ಅಲ್ಲಿ ಇದ್ದುದು ಒಂದೇ ಒಂದು, ಅದು ಸೃಷ್ಟಿಕರ್ತನ ಮನಸ್ಸು. ಕಟ್ಟಕಡೆಗೆ, ಅನಂತ ಸ್ವರೂಪದ ಸೃಷ್ಟಿಕರ್ತ ತೈಓವಾ, ಪರಿಮಿತ ವ್ಯಾಪ್ತಿಯ `ಸೊತುಕ್ನಾಗ’ ಎಂಬವನನ್ನು ಸೃಷ್ಟಿಸುತ್ತಾರೆ. ಆತನನ್ನು ಸೃಷ್ಟಿಕರ್ತ ತೈಓವಾ ತನ್ನ ಸೋದರಳಿಯ - ಭಾಗಿನೇಯ ಎಂದು ಗುರುತಿಸಿದರು. ಅವನನ್ನು ತಮ್ಮ ಒಂಬತ್ತು ವಿಶ್ವಗಳ ಸೃಷ್ಟಿಕಾರ್ಯದಲ್ಲಿ ತಮ್ಮ ಸಹಾಯಕನಾಗಿ, ತಮ್ಮ ಕಾರ್ಯಭಾರ (ನಿಯೋಗಿ) ಕಾರ್ಯನಿರ್ವಹಿಸಲು ಅವನನ್ನು ನಿಯೋಜಿಸುತ್ತಾರೆ.

 ಸೃಷ್ಟಿಕರ್ತ ತೈಓವಾರ ಆದೇಶದಂತೆ `ಸೊತುಕ್ನಾಗ’, ಒಂಬತ್ತು ಗಟ್ಟಿಯಾದ ಜಗತ್ತುಗಳನ್ನು ಸೃಷ್ಟಿಸಲು, ಅನಂತ ಜಾಗದಲ್ಲಿ ಹರಡಿದ್ದ ವಸ್ತುವನ್ನು ಒಟ್ಟು ಕೂಡಿಸಿದ. ಸೃಷ್ಟಿಕರ್ತ ತೈಓವಾ, ಅದೇ ಬಗೆಯಲ್ಲಿ ಅನಂತ ಜಾಗದಲ್ಲಿ ಹರಡಿರುವ ನೀರನ್ನು ಕೂಡಿಸಿಟ್ಟು, ಈ ಜಗತ್ತುಗಳ ಮೇಲೆ ಸುರಿದು ಭೂಮಿ ಮತ್ತು ಸಮುದ್ರಗಳನ್ನು ನಿರ್ಮಿಸಲು `ಸೊತುಕ್ನಾಗ’ನಿಗೆ ಸೂಚಿಸಿದ. ಸೃಷ್ಟಿಕರ್ತ ತೈಓವಾ ಹೇಳಿದಂತೆ ಸೋತುಕ್ನಾಗ ಮಾಡಿ ಮುಗಿಸಿದ ಮೇಲೆ ಸೃಷ್ಟಿಕರ್ತ ತೈಓವಾ, ಅನಂತ ಜಾಗದಲ್ಲಿ ಹರಡಿದ ಅನಿಲವನ್ನು ಕೂಡಿಸಲು ಸೂಚನೆಕೊಟ್ಟ. ಆ ಅನಿಲದಿಂದ ಸೃಷ್ಟಿಕರ್ತ ತೈಓವಾ, ಆ ಒಂಬತ್ತು ಜಗತ್ತುಗಳಲ್ಲಿ ಗಾಳಿ ಸುಳಿಗಾಳಿಗಳು ಹರಿದಾಡುವಂತೆ ಮಾಡಿದರು.

  ನಾಲ್ಕನೆಯ ಸೃಷ್ಟಿ ಜೀವರಾಶಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸಹ ಸೃಷ್ಟಿಕರ್ತ       ತೈಓವಾ, ಸೋದರಳಿಯ ಸೊತುಕ್ನಾಗ್‍ಗೆ ವಹಿಸಿಕೊಟ್ಟಿರುತ್ತಾರೆ. ಜೀವರಾಶಿಯನ್ನು ಹೊತ್ತುಕೊಳ್ಳಬೇಕಾಗಿದ್ದ ಮೊದಲನೆಯ ಜಗತ್ತಿಗೆ ಹೋಗಿದ್ದ ಸೊತುಕ್ನಾಗ, ಅಲ್ಲಿ ಜೇಡಮಹಿಳೆಯನ್ನು ಸೃಷ್ಟಿಸುತ್ತಾನೆ. ಅವಳಿಗೆ ಜೀವರಾಶಿಗಳನ್ನು ಸೃಷ್ಟಿಸುವ ಅಧಿಕಾರವನ್ನು ದಯಪಾಲಿಸುತ್ತಾನೆ.

  ಆ ಜೇಡ ಮಹಿಳೆ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತನ್ನ ಜೊಲ್ಲನ್ನು ಸೇರಿಸಿ, ನಾದಿ, ಮಣ್ಣನ್ನು ಹದ ಮಾಡಿ ಇಬ್ಬರು ಜೀವಿಗಳ ಬೊಂಬೆಗಳನ್ನು ಸಿದ್ಧಪಡಿಸುತ್ತಾಳೆ. ಆ ಎರಡು ಗೊಂಬೆಗಳು ಸಿದ್ಧವಾದ ಮೇಲೆ ಅವುಗಳನ್ನು ಮುಂದೆ ಕೂರಿಸಿಕೊಂಡು ಸೃಷ್ಟಿಯ ಹಾಡನ್ನು ಹಾಡುತ್ತಾಳೆ.

 ಆ ಹಾಡು ಕೇಳುತ್ತಿದ್ದಂತೆಯೇ ಆ ಗೊಂಬೆಗಳಿಗೆ ಜೀವ ಬರುತ್ತದೆ. ಒಂದು ಜೀವದ ಹೆಸರು `ಪಕಂಘೊಯ’ ಇದ್ದರೆ ಇನ್ನೊಂದು ಜೀವಿಯ ಹೆಸರು `ಪಲಂಗ್ಹೋಯ’ ಎಂದು ಇರುತ್ತದೆ. ಪಕಂಘೊಯನನ್ನು ಕರೆದ ಜೇಡ ಮಹಿಳೆ ಭೂಮಿಯಲ್ಲಿ ಸುತ್ತಾಡಿ ಅದನ್ನು ಗಟ್ಟಿ ಮಾಡುವಂತೆ ನಿರ್ದೇಶಿಸುತ್ತಾಳೆ. ಇನ್ನೊಂದು ಜೀವಿ ಪಲಂಘೊಯನನ್ನು ಕರೆದು ಭೂಮಿಯಲ್ಲೆಲ್ಲಾ ಶಬ್ದವು ಅನುರಣಿಸುವಂತೆ ಮಾಡು ಎಂದು ನಿರ್ದೇಶಿಸುತ್ತಾಳೆ. ಶಬ್ದವು ಅನುರಣಿಸಿದಾಗ, ಸೃಷ್ಟಿಕರ್ತನ             ಚೈತನ್ಯದಿಂದ ಭೂಮಿಯು ರೋಮಾಂಚನವನ್ನು ಅನುಭವಿಸುತ್ತಿರುತ್ತದೆ.

  ನಂತರ, ಪಕಂಘೊಯ ಮತ್ತು ಪಲಂಗ್ಹೋಯರನ್ನು ಭೂಮಿಯ ಧೃವ ಪ್ರದೇಶದ ಕಡೆ ಕಳುಹಿಸಲಾಗುತ್ತದೆ. ಅವರಿಬ್ಬರಿಗೆ ಭೂಮಿಯು ಸರಿಯಾಗಿ ಸುತ್ತುವುದನ್ನು ಖಾತರಿ ಪಡಿಸಿಕೊಳ್ಳುವ ಜವಾಬ್ದಾರಿ ಒಪ್ಪಿಸಲಾಗುತ್ತದೆ.

  ನಂತರ ಜೇಡ ಮಹಿಳೆಯು, ಮಣ್ಣಿಗೆ ತನ್ನ ಜೊಲ್ಲನ್ನು ಸೇರಿಸಿ ಹದಮಾಡಿ ಅದರಿಂದ ಸಕಲ ಸಸ್ಯಗಳನ್ನು, ಗಿಡಗಂಟಿಗಳನ್ನು, ಮರಗಳನ್ನು ಸಿದ್ಧಪಡಿಸುತ್ತಾಳೆ. ಅದೇ ರೀತಿಯಲ್ಲಿ ಆಗಸದಲ್ಲಿ ಹಾರುವ ಹಕ್ಕಿಗಳನ್ನು, ಭೂಮಿಯ ಮೇಲೆ ಓಡಾಡುವ ಪ್ರಾಣಿಗಳನ್ನು ಹುಳು ಹುಪ್ಪಡಿಗಳನ್ನು ಅದೇ ಹದಮಾಡಿದ ಮಣ್ಣಿನಿಂದ ಸಿದ್ಧಪಡಿಸುತ್ತಾಳೆ. ಸೃಷ್ಟಿಯ ಹಾಡನ್ನು ಹಾಡಿ ಅವುಗಳಿಗೆ ಜೀವ ಬರಿಸುತ್ತಾಳೆ.

  ಈ ಸೃಷ್ಟಿಯ ಕೆಲಸ ಮುಗಿದ ಮೇಲೆ ಜೇಡ ಮಹಿಳೆ, ಮಾನವರನ್ನು ಸೃಷ್ಟಿಸಲು ತೊಡಗುತ್ತಾಳೆ. ಮತ್ತೆ ಮಣ್ಣಿಗೆ ತನ್ನ ಜೊಲ್ಲನ್ನು ಸುರಿಸಿ ನಾದಿ ಹದ ಮಾಡಿಕೊಳ್ಳುತ್ತಾಳೆ. ಆದರೆ, ಅವಳು ಈ ಬಾರಿ ಮಾನವರ ಸೃಷ್ಟಿಗಾಗಿ ಹಳದಿ, ಕೆಂಪು, ಬಿಳಿ ಮತ್ತು ಕಪ್ಪು ಮಣ್ಣುಗಳನ್ನು ಸಜ್ಜುಮಾಡಿಟ್ಟು ಕೊಂಡಿರುತ್ತಾಳೆ. ನಾಲ್ವರು ಪುರುಷ ಗೊಂಬೆಗಳನ್ನು ಮತ್ತು ತನ್ನಂತಿರುವ ನಾಲ್ವರು ಮಹಿಳೆಯರ ಗೊಂಬೆಗಳನ್ನು ಸಿದ್ಧಪಡಿಸುತ್ತಾಳೆ. ಕೊನೆಗೆ ಅವುಗಳನ್ನು ಮುಂದೆ ಕೂರಿಸಿಕೊಂಡು ಸೃಷ್ಟಿಯ ಹಾಡನ್ನು ಹಾಡುತ್ತಾಳೆ. ಆಗ ಆ ಮಾನವ ಗೊಂಬೆಗಳಿಗೆ ಜೀವ ಬರುತ್ತದೆ. ಮಾನವರ ಸೃಷ್ಟಿ ಸಂಪನ್ನವಾಗುತ್ತದೆ.

  ಮೊದಮೊದಲು ಆ ಮಾನವರ ಹಣೆ ಅಂದರೆ ನೊಸಲಿನ ಭಾಗ ಮೆತ್ತಗಿರುತ್ತದೆ. ನಂತರ ಅದನ್ನು ಗಟ್ಟಿ ಮಾಡಲಾಗುತ್ತದೆ. ಆದರೂ ಸ್ವಲ್ಪಜಾಗ ಬಿಟ್ಟಿರುವುದರಿಂದ ಅವರು ತಮ್ಮ ಸೃಷ್ಟಿಕರ್ತನ ಮತ್ತು ಸೊತುಕ್ನಾಗ ಅವರ ಮಾತುಗಳನ್ನು ಕೇಳಿಸಿಕೊಳ್ಳಬಲ್ಲವರಾಗಿದ್ದರು. ಆದರೆ, ಅವರಿಗೆ ಮಾತನಾಡಲು ಬರುತ್ತಿರಲಿಲ್ಲ. ಅದನ್ನು ಗಮನಿಸಿದ ಜೇಡ ಮಹಿಳೆ, ಸೊತುಕ್ನಾಗ್‍ನಿಗೆ ವಿಷಯ ತಿಳಿಸುತ್ತಾಳೆ. ಸೊತುಕ್ನಾಗ್ ಅವರಿಗೆ ನಾಲ್ಕು ಭಾಷೆಗಳನ್ನು ಕೊಡಮಾಡುತ್ತಾನೆ. ನಂತರ ಅವರಿಗೆ ‘ನಿಮ್ಮ ಸೃಷ್ಟಿಕರ್ತರನ್ನು ಗೌರವಿಸಿ ಮತ್ತು ಅವನೊಂದಿಗೆ ಸೌಹಾರ್ದತೆಯಿಂದ ಇರಿ’ ಎಂದು ಅವನು ನಿರ್ದೇಶಿಸುತ್ತಾನೆ.

  ಆ ಮಾನವರ ಸಂಖ್ಯೆ ದ್ವಿಗುಣ, ತ್ರಿಗುಣ ಲೆಕ್ಕಾಚಾರದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಅವರು ನಾಲ್ಕು ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದರೂ ಪರಸ್ಪರರಿಗೆ ಅವರವರ ಭಾವನೆಗಳು ಗೊತ್ತಾಗುತ್ತಿತ್ತು. ನೂರಾರು ವರ್ಷಗಳ ಕಾಲ ಅವರು ಪ್ರಾಣಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ನಡೆಸುತ್ತಲೇ ಇದ್ದರು.

  ಕೊನೆ ಕೊನೆಗೆ ವ್ಯತ್ಯಾಸಗಳು ಹುಟ್ಟಿಕೊಳ್ಳತೊಡಗಿದವು. ಮಾನವರು ಮತ್ತು ಪ್ರಾಣಿಗಳ ನಡುವೆ, ಮಾನವರು ಮಾನವರ ನಡುವೆ ಭಿನ್ನಾಭಿಪ್ರಾಯಗಳು ಮೂಡತೊಡಗಿದವು. ಆ ಭಿನ್ನಾಭಿಪ್ರಾಯಗಳೊಂದಿಗೆ ಅವರವರ ನಡುವೆ ಭಿನ್ನ ಭಿನ್ನ ಗುಂಪುಗಳು ಅಸ್ತಿತ್ವಕ್ಕೆ ಬರತೊಡಗಿದ್ದವು, ಮಾನವರು ಪ್ರಾಣಿಗಳು ತಮ್ಮತಮ್ಮಲ್ಲಿನ ಭಿನ್ನತೆಯ ಬಗ್ಗೆ ಯೋಚಿಸತೊಡಗಿದರೇ ಹೊರತು, ತಮ್ಮತಮ್ಮಲ್ಲಿನ ಸಾಮ್ಯತೆಗಳನ್ನು ಮರೆಯತೊಡಗಿದರು. 

  ಭಿನ್ನ ಭಿನ್ನ ಗುಂಪುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದರಂತೆಯೇ ಪರಸ್ಪರ ಅಪನಂಬಿಕೆಯೂ ಹೆಚ್ಚಾಗತೊಡಗಿತು. ನಾಲ್ಕು ಪ್ರಧಾನ ಗುಂಪುಗಳಲ್ಲಿನ ಕೆಲವೇ ಕೆಲವು ಜನರು ತಮ್ಮ ಸೃಷ್ಟಿಕರ್ತರನ್ನು ನೆನೆಸುತ್ತಿದ್ದರು.

  ಆ ಸಮಯದಲ್ಲಿ ಸೊತುಕ್ನಾಗ್ ಅವರಿಗೆ ದರ್ಶನ ನೀಡಿ, `ಈಗ ನಾನು ಮತ್ತು ಸೃಷ್ಟಿಕರ್ತ ತೈಓವಾ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈಗ ಜಗತ್ತನ್ನು ನಾಶ ಮಾಡುವ ಸಮಯ ಸನ್ನಿಹಿತವಾಗುತ್ತಿದೆ’ ಎಂದು ಎಚ್ಚರಿಸಿದ. ಜೊತೆಗೆ, `ಸೃಷ್ಟಿಕರ್ತರನ್ನು ಸ್ಮರಿಸುವ ನೀವಷ್ಟೇ ಕೆಲವು ಜನ ಭೂಮಿಯ ಪರ್ಯಟನ ನಡೆಸಬೇಕು. ಅದಕ್ಕಾಗಿ ಮೋಡ ಮತ್ತು ನಕ್ಷತ್ರದ ಸಹಾಯದಿಂದ ಮುಂಬರುವ ಅಪಾಯದಿಂದ ತಪ್ಪಿಸಿಕೊಳ್ಳಲು ಒಂದು ಒಳ್ಳೆಯ ಆಶ್ರಯತಾಣವನ್ನು ಹುಡುಕಿಕೊಳ್ಳಿ’ ಎಂದು ಸೂಚನೆಯನ್ನು ನೀಡಿದ.

  ಸೃಷ್ಟಿಕರ್ತ ತೈಓವಾನನ್ನು ಸದಾ ಸ್ಮರಿಸುತ್ತಿದ್ದ ಆ ಕೆಲವೇ ಕೆಲವು ಜನರು ತಾವು ಒಂದು ಒಳ್ಳೆಯ ಆಶ್ರಯ ತಾಣಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಅವರೆಲ್ಲಾ ಒಂದುಕಡೆ ಕಲೆತಾಗ, ಅವರಿಗೆ ಮತ್ತೆ ಸೊತುಕ್ನಾಗ್ ದರ್ಶನ ಕೊಡುತ್ತಾನೆ. ಅವರ ಎದುರು ಒಂದು ಭಾರಿಗಾತ್ರದ ಇರುವೆ ಗುದ್ದಿನ ಬಾಗಿಲನ್ನು ತೆರೆದು ಒಳಗೆ ಸಾಗುವಂತೆ ಅವರಿಗೆ ಸೂಚಿಸುತ್ತಾನೆ. `ನಾನು ಜಗತ್ತಿಗೆ ಕೊಳ್ಳಿಯಿಟ್ಟು ಸುಡುವಾಗ, ನೀವು ಈ ಇರುವೆಗಳ ಜೊತೆಗೆ ಜೀವಿಸುತ್ತಾ, ಅವು ಹೇಗೆ ಬದುಕುತ್ತವೆ ಎಂಬುದನ್ನು ನೋಡಿ ಕಲಿಯಿರಿ’ ಎಂದು ಅವರಿಗೆ ಸೂಚನೆ ಕೊಡುತ್ತಾನೆ.

   ಆ ಕೆಲವೇ ಕೆಲವು ಜನರು, ಭೂಮಿಯ ಆಳದಲ್ಲಿರುವ ಇರುವೆಯ ಗುದ್ದಿನೊಳಗೆ ಇಳಿದು ಅವರೊಂದಿಗೆ ಬದುಕು ಸಾಗಿಸುತ್ತಾರೆ. ಇರುವೆಗಳ ಗುದ್ದುಗಳಲ್ಲಿ ದಾಸ್ತಾನು ಕೊಠಡಿಗಳು ಇರುತ್ತವೆ. ಅದರಲ್ಲಿ ಬೇಸಿಗೆಯ ಕಾಲದಲ್ಲಿ ಆಹಾರವನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದನ್ನು ನೋಡಿದ ಆ ಒಳ್ಳೆಯ ಜನ ಆಹಾರವನ್ನು ಜತನದಿಂದ ಕಾಪಾಡಿಕೊಳ್ಳುವ ಪಾಠವನ್ನು ಕಲಿಯುತ್ತಾರೆ. ಜೊತೆಗೆ, ಅಧಿಕ ಸಂಖ್ಯೆಯಲ್ಲಿ ಜನರು ಇರಲು ಅನುಕೂಲವಾಗುವಂತೆ ಇನ್ನೂ ಬೇರೆ ಬೇರೆ ಕೊಠಡಿಗಳೂ ಇರುವುದನ್ನು ಕಂಡು ಅವರಿಗೆ ಅಚ್ಚರಿ ಮೂಡುತ್ತದೆ.

ಅವರು ಬಹಳಷ್ಟು ಕಾಲ ನೆಲದಾಳದಲ್ಲಿರುವ ಇರುವೆಯ ಗುದ್ದಿನಲ್ಲಿಯೇ ಜೀವನ ಕಳೆಯಬೇಕಾಗುತ್ತದೆ. ಏಕೆಂದರೆ, ಭೂಮಿಯ ಮೇಲೆ ಜಗತ್ತನ್ನು ಸ್ವಚ್ಛಗೊಳಿಸುವ ಭರದಲ್ಲಿ ಅಪಾರ ಪ್ರಮಾಣದಲ್ಲಿ ಬೆಂಕಿ ಇಡಲಾಗಿರುತ್ತದೆ. ಬೆಂಕಿ ನಂದಿ, ಭೂಮಿ ತಣ್ಣಗಾಗಲು ಬಹಳಷ್ಟು ಸಮಯ ಬೇಕಾಗುತ್ತದೆ. ಅಲ್ಲಿ ಕೆಳಗೆ ಇರುವೆಗಳ ಗುದ್ದಿನಲ್ಲಿ ಆಹಾರದ ದಾಸ್ತಾನು ಕಡಿಮೆಯಾಗುತ್ತಾ ಆಹಾರ ಸಾಲದಾಗಿರುತ್ತದೆ.

ಅಲ್ಲಿದ್ದ ಒಳ್ಳೆಯ ಜನ ಆಹಾರವನ್ನು ನಿರಾಕರಿಸುತ್ತಿರುತ್ತಾರೆ. ಆದರೆ, ಇರುವೆಗಳು ಸೊಂಟ ಬಿಗಿ ಮಾಡಿಕೊಂಡು ಜನರಿಗೆ ಆಹಾರವನ್ನು ಕೊಡುತ್ತಲೇ ಇರುತ್ತವೆ. ಹೀಗಾಗಿಯೇ, ಅಂದು ಸೊಂಟ ಬಿಗಿದುಕೊಳ್ಳುತ್ತಿದ್ದುದರಿಂದ ಈಗಲೂ ಇರುವೆಗಳ ಸೊಂಟಕಿರಿದಾಗಿಯೇ ಇದೆ.

ಎಲ್ಲವೂ ತಣ್ಣಗಾದ ಮೇಲೆ ಸೊತುಕ್ನಾಗ್, ಎರಡನೆಯ ಬಾರಿ ಜಗತ್ತನ್ನು ಸೃಷ್ಟಿ ಮಾಡುತ್ತಾನೆ. ಆದರೆ ಈ ಎರಡನೆಯ ಬಾರಿಯ ಹೊಸ ಜಗತ್ತು, ಮೊದಲಿನ ಜಗತ್ತಿನಷ್ಟು ಸುಂದರವಾಗಿರಲಿಲ್ಲ. ಇರುವೆಯ ಗುದ್ದಿನೊಳಗಿದ್ದ ಸೃಷ್ಟಿಕರ್ತ ತೈಓವಾರನ್ನು ನೆನೆಯುತ್ತಿದ್ದ ಒಳ್ಳೆಯ ಜನ ಭೂಮಿಯ ಮೇಲೆ ಬರುತ್ತಾರೆ. ಈಗ ಮತ್ತೆ ಸೊತುಕ್ನಾಗ್, `ಸೃಷ್ಟಿಕರ್ತ ತೈಓವಾ ಅವರನ್ನು ಸದಾ ನೆನೆಯುತ್ತಿರಿ’ ಎಂದು ಜನಕ್ಕೆ ಎಚ್ಚರಿಕೆ ನೀಡುತ್ತಾನೆ. ಆ ಜನರು ಮತ್ತು ಇರುವೆಗಳು ಭೂಮಿಯ ಎಲ್ಲೆಡೆ ಹರಡಿಕೊಳ್ಳುತ್ತಾರೆ.

ಜನರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಅವರು ಇಡೀ ಜಗತ್ತನ್ನು ಆವರಿಸಿಕೊಂಡು ಬಿಡುತ್ತಾರೆ. ಈಗ ಅವರು ಪ್ರಾಣಿಗಳೊಂದಿಗೆ ಸಹಬಾಳುವೆ ನಡೆಸುತ್ತಿರುವುದಿಲ್ಲ. ಏಕೆಂದರೆ, ಹೊಸ ಜಗತ್ತಿನಲ್ಲಿ ಪ್ರಾಣಿಗಳು ಒರಟುತನ ರೂಢಿಸಿಕೊಂಡಿರುತ್ತವೆ. ಅವು ಈಗ ಕಾಡುಪ್ರಾಣಿಗಳು. ಅವು ಮಾನವರೊಂದಿಗಿನ ಸ್ನೇಹವನ್ನು ಮರೆತುಬಿಟ್ಟಿರುತ್ತವೆ.

  ಅವು ಕಾಡಿನಲ್ಲಿ ತಮ್ಮ ನಿವಾಸಗಳನ್ನು ನೋಡಿಕೊಂಡಿದ್ದರೆ, ಮಾನವರು ಗುಂಪು ಗುಂಪಾಗಿ ಹಳ್ಳಿಗಳಲ್ಲಿ ವಾಸಿಸತೊಡಗಿರುತ್ತಾರೆ. ಮತ್ತು ಅವುಗಳ ನಡುವೆ ಸಂಪರ್ಕಕ್ಕಾಗಿ ರಸ್ತೆಗಳು ಬಂದಿರುತ್ತವೆ. ರಸ್ತೆಗಳ ಕಾರಣವಾಗಿ ವ್ಯಾಪಾರ ವ್ಯವಹಾರ ಹೆಚ್ಚುತ್ತಾ ಸಾಗಿರುತ್ತದೆ. ಅವರು ಸಾಮಾನುಗಳನ್ನು ದಾಸ್ತಾನು ಮಾಡತೊಡಗುತ್ತಾರೆ. ತಮ್ಮಲ್ಲಿನ ಸಾಮಾನುಗಳನ್ನು ಬೇರೆಕಡೆ ಸಾಗಿಸಿ, ಬೇರೆಕಡೆಯಿಂದ ಸಾಮಾನಗಳನ್ನು ತರಿಸಿ ವ್ಯಾಪಾರ ಮಾಡತೊಡಗಿರುತ್ತಾರೆ. ತಮಗೆ ಬೇಡವಾದ ವಸ್ತುಗಳನ್ನು ಅನಗತ್ಯವಾಗಿ ಖರೀದಿಸತೊಡಗುತ್ತಾರೆ.

ಅವರಲ್ಲಿ ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಸಂಗ್ರಹಿಸಿ ಇಟ್ಟುಕೊಳ್ಳುವ ಚಾಳಿ ಹೆಚ್ಚುತ್ತಲೇ ಹೋಗುತ್ತದೆ. ಆಗ, ಮಾನವರು ತಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತ ತೈಓವಾ ಅವರನ್ನು ನೆನೆಯುವುದನ್ನೇ ಬಿಟ್ಟಿರುತ್ತಾರೆ.

  ಆಗ ವ್ಯಾಪಾರಕ್ಕಾಗಿ, ಸಂಪನ್ಮೂಲಗಳಿಗಾಗಿ ಪರಸ್ಪರರ ಮೇಲೆ ಯುದ್ಧಗಳು ನಡೆಯಲು ಆರಂಭಿಸಿರುತ್ತವೆ. ಕೊನೆಗೆ ಸೊತುಕ್ನಾಗ್ ಮತ್ತೆ ಬರುತ್ತಾನೆ. ಸೃಷ್ಟಿಕರ್ತನನ್ನು ನೆನೆಯುತ್ತಿದ್ದ ಕೆಲವೇ ಕೆಲವು ಒಳ್ಳೆಯ ಜನಕ್ಕೆ ದರ್ಶನ ಕೊಡುತ್ತಾನೆ. ಅವರನ್ನು ಮತ್ತೆ ಹಿಂದಿನಂತೆಯೇ ಭೂಮಿಯ ಆಳದಲ್ಲಿರುವ ಇರುವೆಗಳ ಗುದ್ದಿನಲ್ಲಿ ಆಶ್ರಯ ಪಡೆಯುವಂತೆ ಮಾಡುತ್ತಾನೆ.

  ಮತ್ತೆ ಭೂಮಿಯ ಮೇಲಿನ ಭ್ರಷ್ಟ ಜಗತ್ತನ್ನು ನಾಶ ಪಡಿಸುತ್ತಾನೆ. ಈ ಬಾರಿ, ಧೃವ ಪ್ರದೇಶದಲ್ಲಿದ್ದು ಭೂಮಿಯ ಪ್ರದಕ್ಷಿಣೆಯನ್ನು ನಿಯಂತ್ರಿಸುತ್ತಿದ್ದ ಪಕಂಘೊಯ ಮತ್ತು ಪಲಂಗ್ಹೋಯ ಅವರಿಗೆ ತಮ್ಮ ಕೆಲಸದಿಂದ ದೂರ ಸರಿಯುವಂತೆ ಸೂಚಿಸಲಾಗುತ್ತದೆ.

  ಆಗ, ಭೂಮಿ ಎರ್ರಾಬಿರ್ರಿ ಸುತ್ತತೊಡಗುತ್ತದೆ. ಕೆಲವು ಪರ್ವತಗಳು ಜಾರಿದರೆ, ಮತ್ತೆ ಕೆಲವು ಕೆಳಗೆ ಬಿದ್ದುಬಿಡುತ್ತವೆ. ಸರೋವರಗಳಲ್ಲಿನ ನೀರು ಚೆಲ್ಲಾಪಿಲ್ಲಿಯಾಗುತ್ತದೆ, ಹಾಗೂ ಹಳ್ಳ ನದಿಗಳಲ್ಲಿನ ನೀರು ತಮ್ಮತಮ್ಮ ಮಾಮೂಲಿ ಪಥ ಬಿಟ್ಟು ಬೇರೆ ಬೇರೆ ಹೊಸದಾದ ಪಥಗಳಲ್ಲಿ ಹರಿಯತೊಡಗುತ್ತವೆ. ಭೂಮಿಯಲ್ಲಿ ಅಲ್ಲೋಲಕಲ್ಲೋಲವೇ ಸಂಭವಿಸುತ್ತದೆ. ಕೊನೆಗೆ ಭೂಮಿಯ ಮೇಲಿನ ನೀರೆಲ್ಲಾ ಹೆಪ್ಪುಗಟ್ಟಿದಂತಾಗಿ ಎಲ್ಲೆಲ್ಲೂ ಹಿಮವೇ ತುಂಬಿಕೊಳ್ಳುತ್ತದೆ.

   ಸುಮಾರು ವರ್ಷಗಳ ಕಾಲ ಭೂಮಿಯ ಪರಿಸ್ಥಿತಿ ಹೀಗೆಯೇ ಇತ್ತು. ಕೊನೆಗೊಂದು ದಿನ ಪಕಂಘೊಯ ಮತ್ತು ಪಲಂಗ್ಹೋಯ ಅವರನ್ನು ಕರೆಯಿಸಿದ ಸೊತುಕ್ನಾಗ್, ಅವರನ್ನು ಅವರವರ ಧೃವ ಪ್ರದೇಶಗಳಿಗೆ ಹಿಂದಿರುಗಿ ತಮ್ಮ ಕರ್ತವ್ಯಗಳನ್ನು ಪಾಲಿಸುವಂತೆ ನಿರ್ದೇಶಿಸುತ್ತಾನೆ. ಭೂಮಿಯ ಪರಿಭ್ರಮಣದ ಲಯ ಮತ್ತೆ ಮಾಮೂಲು ಸ್ಥಿತಿಗೆ ಮರಳುತ್ತದೆ. ಹಿಮ ಕರಗತೊಡಗುತ್ತದೆ. ನಿಧಾನವಾಗಿ ಭೂಮಿಯ ಮೇಲೆ ಜೀವಕಳೆ ಮೂಡತೊಡಗುತ್ತದೆ.

  ಸೊತುಕ್ನಾಗ್, ನೆಲದಾಳದ ಇರುವೆ ಗುದ್ದುಗಳಲ್ಲಿ ಆಶ್ರಯ ಪಡೆದಿದ್ದ ಒಳ್ಳೆಯ ಜನರನ್ನು ಕರೆದು, ಅವರಿಗೆ ತಾನು ಆಗ ಸಜ್ಜುಗೊಳಿಸಿದ್ದ ಮೂರನೆಯ ಜಗತ್ತನ್ನು ಪರಿಚಯಿಸುತ್ತಾನೆ. ಭೂಮಿಯ ಮೇಲೆ ನೆಲೆ ನಿಲ್ಲತೊಡಗಿದ ಆ ಜನಕ್ಕೆ ಸೊತುಕ್ನಾಗ್, `ಸೃಷ್ಟಿಕರ್ತ ತೈಓವಾ ಅವರನ್ನು ಮರೆಯಬಾರದು, ಸದಾ ನೆನೆಸುತ್ತಿರಬೇಕು’ ಎಂದು ತಾಕೀತು ಮಾಡುತ್ತಾನೆ.

  ಆ ಜನರಿಗೆ ಮಕ್ಕಳು ಮರಿಮಕ್ಕಳು ಹುಟ್ಟಿ ಅವರ ಸಂಖ್ಯೆ ವಿಪರೀತವಾಗಿ ಬೆಳೆಯುತ್ತದೆ. ಅವರ ಬೆಳವಣಿಗೆಯ ಪ್ರಮಾಣ ಹಿಂದಿನ ಜಗತ್ತಿನಲ್ಲಿ ನಡೆದದ್ದಕ್ಕಿಂತ ಹತ್ತಾರು ಪಟ್ಟು ತೀವ್ರಗತಿಯನ್ನು ಪಡೆದಿರುತ್ತದೆ. ಈಗ ಜನರೆಲ್ಲಾ ದೊಡ್ಡ ಪಟ್ಟಣಗಳಲ್ಲಿ ವಾಸಿಸತೊಡಗಿರುತ್ತಾರೆ. ಮತ್ತು ಅವರು ದೊಡ್ಡದೊಡ್ಡ ದೇಶಗಳನ್ನು ಕಟ್ಟಿಕೊಂಡಿರುತ್ತಾರೆ. ಅಪಾರ ಸಂಖ್ಯೆಯ ಜನರು ಮತ್ತು ಅಧಿಕ ಸಂಖ್ಯೆಯ ದೇಶಗಳು ಯುದ್ಧಗಳಿಗೆ ದಾರಿಮಾಡಿಕೊಡುತ್ತವೆ.

  ಕೆಲವು ದೇಶಗಳು ಭಾರಿ ಗಾತ್ರದ ಲೋಹದ ಫಲಕಗಳನ್ನು ಸಿದ್ಧಪಡಿಸಿರುತ್ತವೆ. ಆ ಫಲಕಗಳು ದೂರದೂರ ಹಾರಬಲ್ಲವಾಗಿರುತ್ತವೆ. ಈ ಹಾರುವ ಫಲಕಗಳನ್ನು ಒಂದು ದೇಶದವರು ಇನ್ನೊಂದು ದೇಶದ ಮೇಲೆ ದಾಳಿ ಮಾಡಿ ಹಾಳುಗೆಡವಲು, ನಗರಗಳ ಮೇಲೆ ಲಗ್ಗೆ ಹಾಕಿ ನಾಶಪಡಿಸಲು ಬಳಸಲಾಗುತ್ತಿರುತ್ತದೆ.

ಯುದ್ಧ ಮತ್ತು ವಿನಾಶಕಾರಿ ವಿಪರೀತಗಳನ್ನು ಕಂಡ ಸೊತುಕ್ನಾಗ್, `ಇಂಥ ಭ್ರಷ್ಟ ಜಗತ್ತು ಒಂದು ಕ್ಷಣವೂ ಅಸ್ತಿತ್ವದಲ್ಲಿ ಇರಬಾರದು. ಇಲ್ಲದಿದ್ದರೆ, ಸೃಷ್ಟಿಕರ್ತ ತೈ ಓವಾ ಅವರನ್ನು ಸ್ಮರಿಸಿ ಅವರನ್ನು ಆದರಿಸುವ ಕೆಲವೇ ಕೆಲವು ಜನರೂ ಸಹ ಭ್ರಷ್ಟರಾದಾರು’ ಎಂದು ಆತಂಕಪಡುತ್ತಾನೆ.

ಜೇಡ ಮಹಿಳೆಯನ್ನು ಕರೆದು, `ಸೃಷ್ಟಿಕರ್ತನನ್ನು ಆದರಿಸುವ ಆ ಕೆಲವೇ ಕೆಲವು ಜನರನ್ನು ಒಂದೆಡೆ ಸೇರಿಸು, ಅವರನ್ನು ಸಮುದ್ರತೀರಕ್ಕೆ ಕರೆದುಕೊಂಡು ಬಾ’ ಎಂದು ತಿಳಿಸುತ್ತಾನೆ. ಜೇಡ ಮಹಿಳೆ, ಪ್ರತಿಯೊಬ್ಬರನ್ನು ಆಹಾರ ಸಾಮಗ್ರಿಗಳೊಂದಿಗೆ ಜೊಂಡಿನ ಪೊಳ್ಳಾದ ಕಾಂಡಗಳಲ್ಲಿ ಕೂಡಿಸುತ್ತಾಳೆ. ಅವಳು ಸೃಷ್ಟಿಕರ್ತರನ್ನು ಆದರಿಸುವ ಎಲ್ಲಾ ಜನರನ್ನು ಕಣ್ಣುಕಟ್ಟಿ ಜೊಂಡಿನ ಕಾಂಡಗಳಲ್ಲಿ ಕೂರಿಸಿದ ನಂತರ, ಸೊತುಕ್ನಾಗ್, ಪರಸ್ಪರ ಯುದ್ಧಗಳಲ್ಲಿ ತೊಡಗಿದ್ದ ದೇಶಗಳು, ಪಟ್ಟಣಗಳು ಸಂಪೂರ್ಣವಾಗಿ ನಾಶ ಹೊಂದುವಂತಹ ಮಹಾ ಪ್ರಳಯವನ್ನು ಉಂಟುಮಾಡುತ್ತಾನೆ. ಆ ಜನರು ವಾಸಿಸುತ್ತಿದ್ದ ಜಗತ್ತು ಇನ್ನಿಲ್ಲದಂತಾಗುತ್ತದೆ.

    ಉಕ್ಕಿ ಬರುತಿದ್ದ ಸಮುದ್ರದ ಅಲೆಗಳು ಶಾಂತವಾದ ನಂತರ, ಜೇಡ ಮಹಿಳೆ, ಜೊಂಡಿನ ಪೊಳ್ಳಾದ ಕಾಂಡಗಳಲ್ಲಿ ಕುಳಿತಿದ್ದ ಜನರ ಕಣ್ಣಿಗೆ ಕಟ್ಟಿದ್ದ ಅರಿವೆಯನ್ನು ತೆಗೆಯುತ್ತಾಳೆ. ಅವರು ಸುಮಾರು ದಿನಗಳವರೆಗೆ ಜೊಂಡಿನಲ್ಲಿ ತೇಲಿಕೊಂಡಿರುತ್ತಾರೆ. ಕೊನೆಗೆ ಆ ಜನರಿದ್ದ ಪೊಳ್ಳಾಗಿದ್ದ ಜೊಂಡು ಒಂದು ನಡುಗಡ್ಡೆಯ ಹತ್ತಿರ ತೇಲಿಹೋಗುತ್ತದೆ.

  ಆ ನಡುಗಡ್ಡೆಯನ್ನು ತಲುಪಿದ ಆ ಜನರು, ಜೊಂಡಿನಿಂದ ದೋಣಿಗಳನ್ನು ಸಿದ್ಧಪಡಿಸುತ್ತಾರೆ. ಅವುಗಳಲ್ಲಿ ಕುಳಿತು ಅವರು ಮತ್ತೆ ಪೂರ್ವ ದಿಕ್ಕಿನತ್ತ ತಮ್ಮ ಪ್ರಯಾಣವನ್ನು ಆರಂಭಿಸುತ್ತಾರೆ. ಹಲವಾರು ದಿನಗಳ ನಂತರ ಅವರು ಒಂದು ದೊಡ್ಡ ನಡುಗಡ್ಡೆಯನ್ನು ತಲುಪುತ್ತಾರೆ, ನಂತರ ಮತ್ತಷ್ಟು ದಿನಗಳ ಸಮುದ್ರ ಪ್ರಯಾಣದ ನಂತರ ಮತ್ತಷ್ಟು ದೊಡ್ಡದಾದ ನಡುಗಡ್ಡೆಯನ್ನು ತಲುಪುತ್ತಾರೆ.

 `ಸೊತುಕ್ನಾಗ್, ತಮಗಾಗಿ ಈ ನಾಲ್ಕನೇ ಜಗತ್ತನ್ನು ಸೃಷ್ಟಿಸಿದ್ದಾನೆ’ ಎಂದುಕೊಂಡ ಜನ, ಅಲ್ಲಿ ನೆಲೆ ನಿಲ್ಲಲು ನೋಡುತ್ತಾರೆ. ಆದರೆ, ಜೇಡ ಮಹಿಳೆ, `ಅಲ್ಲಿ ತಂಗಬೇಡಿ, ಇನ್ನೂ ಮುಂದೆ ಸಾಗಿ. ಮುಂದೆ ಇನ್ನೂ ಕಠಿಣವಾದ ದಾರಿ ಕ್ರಮಿಸಬೇಕು’ ಎಂದು ತಿಳಿಸುತ್ತಾಳೆ.

  ಆಗ, ಆ ದೊಡ್ಡ ನಡುಗಡ್ಡೆಯಲ್ಲಿ ಸುತ್ತಾಡಿ ಒಳ್ಳೆಯ ಮರಗಳನ್ನು ಬೀಳಿಸಿ, ಆಚೆ ದಡದಲ್ಲಿ ದೃಢವಾದ ದೋಣಿಗಳನ್ನು ಸಿದ್ಧಪಡಿಸಿಕೊಂಡು ಪೂರ್ವದ ದಿಕ್ಕಿಗೆ ಮತ್ತೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಆಗ ಅವರು ನಾಲ್ಕನೇ ದೊಡ್ಡ ನಡುಗಡ್ಡೆಯನ್ನು ಮುಟ್ಟುತ್ತಾರೆ. ಅಲ್ಲಿ ಮತ್ತೆ ಆ ನಡುಗಡ್ಡೆಯಲ್ಲಿ ಒಂದು ದಿಕ್ಕಿನಿಂದ ದೂರದ ಇನ್ನೊಂದು ದಿಕ್ಕಿನತ್ತ ನಡೆದು ತಲುಪುತ್ತಾರೆ. ಅಲ್ಲಿ ಮತ್ತೆ ದೊಡ್ಡ ಮರದ ದಿಮ್ಮಿಗಳನ್ನು ಬಳಸಿ ದೋಣಿಗಳನ್ನು ಸಿದ್ಧಪಡಿಸಿಕೊಂಡು ಪೂರ್ವ ದಿಕ್ಕಿನತ್ತ ತಮ್ಮ ಸಮುದ್ರಯಾನವನ್ನು ಮುಂದುವರಿಸುತ್ತಾರೆ.

  ಹಲವಾರು ದಿನಗಳ ಯಾನದ ನಂತರ ಅವರು ಭಾರಿಗಾತ್ರದ ನಡುಗಡ್ಡೆಯನ್ನು ತಲುಪುತ್ತಾರೆ. ಆದರೆ, ಅಲ್ಲಿ ತೀರದಲ್ಲಿ ಅವರು ಇಳಿಯಲು ಆಗುವುದೇ ಇಲ್ಲ. ಅವು ಆ ದೊಡ್ಡ ನಡುಗಡ್ಡೆಯು ಬಂಡೆಯ ಮೇಲೆ ನಿಂತಂತಿರುತ್ತದೆ. ಅವರಿಗೆ ದಾರಿಯೇ ತಿಳಿಯದಂತಾಗುತ್ತದೆ.

ಕೊನೆಗೊಮ್ಮೆ ಅವರು ತೀರವನ್ನು ಪತ್ತೆ ಹಚ್ಚಿ ಅಲ್ಲಿ ದೋಣಿಗಳನ್ನು ಇಳಿದು ನೆಲದ ಮೇಲೆ ಕಾಲಿರಿಸುತ್ತಿದ್ದಂತೆ, ಅವರಿಗೆ ಸೊತುಕ್ನಾಗ್ ಅವರಿಗಾಗಿ ಕಾಯುತ್ತಿರುವುದು ಕಾಣಿಸುತ್ತದೆ. ಅವರು ತಾವು ಸಾಗಿ ಬಂದ ಪಶ್ಚಿಮ ದಿಕ್ಕಿನತ್ತ ನೋಡಿದಾಗ, ತಮ್ಮನ್ನು ಅಲ್ಲಿಗೆ ಬರಲು ಚಿಮ್ಮ ಹಲಗೆಯಂತೆ ಕಾರ್ಯನಿರ್ವಹಿಸಿದ್ದ ನಡುಗಡ್ಡೆಗಳು ಸಾಗರದಲ್ಲಿ ಕಣ್ಮರೆಯಾದುದನ್ನು ಗಮನಿಸುತ್ತಾರೆ.

  ಸೊತುಕ್ನಾಗ್, ಅವರನ್ನು ಆತ್ಮೀಯವಾಗಿ ತನ್ನ ನಾಲ್ಕನೆಯ ಜಗತ್ತಿಗೆ ಬರಮಾಡಿಕೊಳ್ಳುತ್ತಾನೆ. `ಈ ಜಗತ್ತು ತಾವು ಹಿಂದಿದ್ದ ಜಗತ್ತಿನಷ್ಟು ಸುಂದರವಾಗಿಲ್ಲ’ ಎಂದು ತಿಳಿಸುತ್ತಾನೆ. `ಇಲ್ಲಿನ ಬದುಕು ಹಿಂದಿನ ಜಗತ್ತಿನಲ್ಲಿದ್ದುದಕ್ಕಿಂತ ಕಷ್ಟದಾಯಕ ಏಕೆಂದರೆ, ಇಲ್ಲಿ ವಿಪರೀತ ಚಳಿ ಮತ್ತು ವಿಪರೀತ ಬಿಸಿ ಇರುತ್ತದೆ. ಎತ್ತರದ ಪರ್ವತಗಳಿವೆ, ಆಳದ ಕೊಳ್ಳಗಳಿವೆ’ ಎಂದು ಅಲ್ಲಿ ಅವರು ಎದುರಿಸಬೇಕಾದ ಪರಿಸ್ಥಿತಿಯನ್ನು ವಿವರಿಸುತ್ತಾನೆ.

  ಆ ಜನರು `ತಮ್ಮ ನಾಡುಗಳನ್ನು ತಾವೇ ಹುಡುಕಿಕೊಳ್ಳಬೇಕು’ ಎಂದು ಹೇಳುತ್ತಾನೆ. ಅವನ ಹೇಳಿಕೆಯಂತೆ ಆ ಜನರು, ಆ ಅಪರಿಚಿತವಾದ ಕಾಡು ಪ್ರದೇಶದಲ್ಲಿ ತಾವು ನೆಲೆಗೊಳ್ಳುವ ತಮ್ಮತಮ್ಮ ನಾಡುಗಳನ್ನು ಅರಸಿಕೊಂಡು ಹೊರಡುತ್ತಾರೆ.

ವಿವಿಧ ಬುಡಕಟ್ಟಿನ ಜನರು ತಮಗೆ ಅನುಕೂಲ ಕಂಡ ಪರಿಸರದ ಜಾಗಗಳಲ್ಲಿ ನೆಲೆಗೊಳ್ಳುತ್ತಾರೆ. ಹೋಪಿ ಬುಡಕಟ್ಟಿನ ಜನರು ಬಹುದೂರ ಸಾಗಿ, ಕಡುಚಳಿಯ ಹಿಮಪ್ರದೇಶವನ್ನು ದಾಟಿ ಕೊಲೆರಾಡೊ ಮತ್ತು ರಿಯೊ ಮಹಾ ನದಿಗಳ ಮಧ್ಯದ ಸ್ಥಳವನ್ನು ಆಯ್ಕೆಮಾಡಿಕೊಳ್ಳುತ್ತಾರೆ.

ಅಲ್ಲಿ ಬದುಕು ಬಹಳ ಕಷ್ಟದಾಯಕ. ಆದರೆ ಆ ಕಷ್ಟದಾಯಕ ಜೀವನ ಪರಸ್ಪರ ಒಬ್ಬರ ಮೇಲೆ ಇನೊಬ್ಬರ ಅವಲಂಬನೆಯನ್ನು ಅನಿವಾರ್ಯವಾಗಿಸುವ ಪರಿಸ್ಥಿತಿ ಅವರಿಗೆ ಆಪ್ತವಾಗುತ್ತದೆ, ಶಾಂತಿ ನೆಲೆಸಿರುತ್ತದೆ ಮತ್ತು ಅವರು ಮತ್ತು ಅವರ ಸೃಷ್ಟಿಕರ್ತರ ನಡುವಿನ ಸಂಬಂಧವು ಗಾಢವಾಗುತ್ತದೆ ಎಂಬುದು ಅವರ ಬಲವಾದ ನಂಬುಗೆಯಾಗಿದೆ.

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...