ಒಂದು ಸಿಂಹ ಇತ್ತು. ತನ್ನ ಗತ್ತು, ಶೌರ್ಯ, ಗಾಂಭೀರ್ಯಗಳಿಂದ
ಇಡೀ ಕಾಡನ್ನು ಹತೋಟಿಯಲ್ಲಿಟ್ಟುಕೊಂಡು ಮೃಗರಾಜನಾಗಿ ಮೆರೆಯುತ್ತಿತ್ತು. ಇಂಥ ಧೀರ ಸಿಂಹ ಒಮ್ಮೆ
ಅಪರೂಪದ ಸುಂದರಿಯೊಬ್ಬಳನ್ನು ಕಂಡು ಮನಸೋತುಬಿಟ್ಟಿತು. ಆ ಸುಂದರಿ ತನಗೆ ಬೇಕೇ ಬೇಕು. ಆದರೆ ಹೋಗಿ
ಕೇಳದೆ ಅವಳಾಗಿ ಬರುವುದುಂಟೇ? ಸರಿ, ಸಿಂಹ ಸುಂದರಿಯ ಹತ್ತಿರ ಹೋಗಿ 'ನನಗೆ ನೀನು
ಬೇಕು' ಅಂತು.
ಸುಂದರಿ ಅಷ್ಟು ಸುಲಭಕ್ಕೆ ಮಣಿಯುವವಳಲ್ಲ "ನನಗೆ ನಿನ್ನ ಆಕಾರ, ಉಗುರು ಹಲ್ಲು
ನೋಡಿದರೆ ಭಯವಾಗುತ್ತೆ. ನೀನು ನಿನ್ನ ಹಲ್ಲು, ಉಗುರುಗಳನ್ನೆಲ್ಲ ಕಿತ್ತು ಬಂದರೆ ನಾನು
ಒಲಿಯಬಹುದು" ಅಂದಳು. ಸರಿ, ಸಿಂಹ ಉಗುರು ಹಲ್ಲು ಎಲ್ಲ ಕಿತ್ತುಕೊಂಡು ಸುಂದರಿಯ ಹತ್ತಿರ ಬಂತು.
ಸುಂದರಿ ಆಗಲೂ ಪ್ರಸನ್ನಳಾಗಲಿಲ್ಲ "ನಿನ್ನ ಕೇಸರ ನೋಡಿದರೂ ನನಗೆ ಹೆದರಿಕೆ. ಅದನ್ನೂ
ಬೋಳಿಸಿಕೊಂಡು ಬಾ" ಎಂದು ತಾಕೀತು ಮಾಡಿದಳು. ಇಷ್ಟೇ ಮಾಡಿಯಾಗಿದೆ, ಇನ್ನು ಕೇಶ
ಒಂದಕ್ಕೆ ಚೌಕಾಶಿಯೇ? ಸಿಂಹ ಅದನ್ನೂ ಬೋಳಿಸಿಕೊಂಡು ಸುಂದರಿಯ ಬಳಿ ಬಂತು.
ಆದರೆ ಈಗ ಸುಂದರಿ 'ಪ್ಲೇಟ್ ಚೇಂಜ್' ಮಾಡಿಬಿಟ್ಟಳು! ನನಗೂ ನಿನಗೂ ಎಲ್ಲಿಯ ಹೊಂದಾಣಿಕೆ? ನೀನು ನನಗೆ
ಬೇಡವೇ ಬೇಡ ಅಂದುಬಿಟ್ಟಳು! ಸಿಂಹ ತಬ್ಬಿಬ್ಬಾಯಿತು. ಪರಿಪರಿಯಾಗಿ ಬೇಡಿಕೊಂಡಿತು. ಅವಳು
ಒಪ್ಪಲಿಲ್ಲ. ಕಡೆಗೆ ಸಿಂಹ ಕೇಳಿತು - "ನಾನು ನಿನಗೆ ನಿಜಕ್ಕೂ ಬೇಡವಾಗಿದ್ದರೆ ಮೊದಲೇ
ಹೇಳಬಹುದಿತ್ತಲ್ಲ? ಆಗ ನನ್ನ ಹಲ್ಲು ಉಗುರುಗಳಾದರೂ ಉಳಿಯುತ್ತಿದ್ದವು?" ಆಗ ಸುಂದರಿ
ಹೇಳುತ್ತಾಳೆ-"ಹೌದು, ಮೊದಲೇ ನಾನು ನಿರಾಕರಿಸಿದ್ದರೆ ನೀನು ನನ್ನನ್ನು ಕೊಂದು
ಹಾಕುತ್ತಿದ್ದೆ. ಅದಕ್ಕೇ ಹಲ್ಲು ಉಗುರು ಕೀಳಲು ಹೇಳಿದ್ದು. ಈಗ ನೀನೇನೂ ಮಾಡಲಾರೆ..."
ಅಧಿಕಾರ ರಾಜಕಾರಣದ ಸುಂದರಿ, ಜನಾಂದೋಲನವೆಂಬ ಸಿಂಹವನ್ನು ಆಕರ್ಷಿಸುತ್ತದೆ. ಆದರೆ ಹತ್ತಿರ
ಬಂದೊಡನೆ ಸಿಂಹದ ಶಕ್ತಿ, ಸ್ವರೂಪಗಳನ್ನೇ ಕಿತ್ತುಕೊಂಡು ಬೀದಿಪಾಲು (ಕಾಡುಪಾಲು?) ಮಾಡುತ್ತದೆ.
ಹೀಗೆ ಅಧಿಕಾರ ಕೇಂದ್ರದ ಹತ್ತಿರ ಬಂದಾಗಲೆಲ್ಲ ಚಳುವಳಿಯ ನಿರ್ದಾಕ್ಷಿಣ್ಯ ಸ್ವಾತಂತ್ರ್ಯಕ್ಕೆ ಮಸಿ
ಹಿಡಿಯುತ್ತಲೇ ಇರುತ್ತದೆ.
***********************
No comments:
Post a Comment