Saturday, 20 June 2020

ಕೊನೇ ಮಾತು - “ ಅವರಿಗಿರುವ ಬದ್ಧತೆ, ನೈತಿಕತೆಯು ಇತರರಿಗೂ ನಮಗೂ ಅರ್ಥವಾಗಲಿ ಮತ್ತು ಪ್ರೇರಣೆಯಾಗಲಿ”



ಪ್ರೀತಿಯ ಅನು, ಪೌರಕಾರ್ಮಿಕರ ಬಗೆಗಿನ ಒಂದು ಕಥೆಯ ಬಗ್ಗೆ ಮತ್ತು ಸೋಂಕು ರೋಗವು ಊರೂರಿಗೆ ಹರಡುವಂತಹ ಈ ಸಂದರ್ಭದಲ್ಲಿ ನಮ್ಮ ಪೌರಕಾರ್ಮಿಕರು ವಹಿಸುವ ಪಾತ್ರವನ್ನು ನಾನು ನಿನಗೆ ಹೇಳುತ್ತಿದ್ದೇನೆ.
ಪ್ಲೇಗ್ ಮತ್ತು ಕ್ವಾರೆಂಟೈನ್ ಎಂಬುವುದರ ಕುರಿತು ರಾಜಿಂದರ್ ಸಿಂಗ್ ಬೇಡಿಯವರು (1915 -1984) ಉರ್ದು ಭಾಷೆಯಲ್ಲಿ ಬರೆದ ಒಂದು ಸಣ್ಣ ಕಥೆ. ಈ ಕಥೆಯ ಕೇಂದ್ರ ಪಾತ್ರ ವಿಲಿಯಂ ಭಾಗು ಬಕ್ರುದ್; ಅವನೊಬ್ಬ ಬಡಾವಣೆಯ ನೈರ್ಮಲ್ಯ (ಶುಚೀಕರಣ) ಕೆಲಸದಾಳು. ಅಂದರೆ ಒಂದು ಬಡಾವಣೆಯನ್ನು ಶುಚಿಯಾಗಿಡುವ ಕೆಲಸಗಾರ, ಪೌರ ಕಾರ್ಮಿಕ. ಈ ಕಥೆಯ ನಿರೂಪಕ ಬಕ್ಷಿ ಎಂಬ ವೈದ್ಯ. ಕ್ವಾರೆಂಟೈನಿನ ಮೇಲ್ಪಿಚಾರಣೆಗಾಗಿ ನೇಮಿಸಲಾದ ಪ್ರಧಾನ ವೈದ್ಯ. ಮಹಾಮಾರಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗವು ನಗರದಲ್ಲಿ ಹರಡದಂತೆ ನೋಡಿಕೊಳ್ಳುವ ಮುಖ್ಯ ಜವಾಬ್ದಾರಿ ಅವರದು. ಹೌದು, ಪ್ಲೇಗ್ ಎಂಬ ಮಹಾಮಾರಿ ಹರಡುತ್ತಿರುವಂತಹ ಸಂದರ್ಭದಲ್ಲಿ ಮತ್ತು ಹರಡುವಿಕೆಯನ್ನು ತಡೆಗಟ್ಟಲು ವಿಧಿಸಿರುವ ಕ್ವಾರೆಂಟೈನ್ ಹಿನ್ನೆಲೆಯಲ್ಲಿ ಡಾ. ಬಕ್ಷಿ ಮತ್ತು ಭಾಗು ಇವರ ಮಧ್ಯೆ ನಡೆಯುವ ಸಂಭಾಷಣೆಯೇ ಈ ಕಥೆ.
ಪ್ಲೇಗ್ ಅಥವಾ ಬೇರೆ ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ಸೋಂಕಿತರನ್ನು ಇತರರಿಂದ ಆಂದರೆ ಸೋಂಕ್ ರಹಿತರಿಂದ ಬೇರ್ಪಡಿಸುವುದು, ಪ್ರತ್ಯೇಕಿಸುವುದು ಪ್ರಪಂಚದಾದ್ಯಂತ ಕೈಗೊಳ್ಳುವ ಒಂದು ಪ್ರಾಚೀನ ರೂಢಿ. ಮಧ್ಯಕಾಲೀನ ಅವಧಿಯಲ್ಲಿ ಸೋಂಕಿತ ಪ್ರದೇಶದಿಂದ ಬರುವ ಹಡಗುಗಳನ್ನು ಸುಮಾರು 30-40 ದಿನಗಳವರೆಗೆ ಕ್ವಾರೆಂಟೈನ್ ಮಾಡಿ ನಂತರ ಪ್ರಯಾಣಿಕರನ್ನು ಹಡುಗಿನಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತಿದ್ದರಂತೆ. ಹೌದು ಕ್ವಾರೆಂಟೈನ್ ವಿಧಿಸುವ ಸಮಯ ಅಥವಾ ಸಂದರ್ಭಗಳಲ್ಲಿ ಬದಲಾವಣೆಯಿರಬಹುದು ಆದರೆ ಬಲಾತ್ಕಾರದಿಂದ ಅಥವಾ ಒತ್ತಾಯದಿಂದ ಕ್ಯಾರೆಂಟೈನ್ ಜಾರಿಗೊಳಿಸುವ ಪ್ರವೃತ್ತಿ ಇಂದಿಗೂ ಜಾರಿಯಲ್ಲಿದೆ. ಕ್ಯಾರೆಂಟೈನ್ ಸಂದರ್ಭದಲ್ಲಿ ಮನುಷ್ಯರಲ್ಲಿ ಉಂಟಾಗುವ ಭೀತಿ ಮತ್ತು ಇಂತಹ ದುಸ್ಥಿತಿಯಲ್ಲಿ ಪೌರಕಾರ್ಮಿಕರು ವಹಿಸುವ ಪಾತ್ರ ಕೂಡ ಬದಲಾಗಿಲ್ಲ ಮತ್ತು ಬದಲಾಗುವುದಿಲ್ಲ.
ಈ ಒಂದು ಸಣ್ಣ ಕಥೆಯಲ್ಲಿ ಕ್ಯಾರೆಂಟೈನ್ನಿಂದಾಗಿ ಸಂಭವಿಸುವ ಒಟ್ಟು ಸಾವಿನ ಸಂಖ್ಯೆ ಪ್ಲೇಗ್ ರೋಗದಿಂದ ಉಂಟಾದ ಸಾವುಗಳಿಗಿಂತ ಹೆಚ್ಚು ಎಂದು ರಾಜಿಂದರ್ ಸಿಂಗ್ ಬೇಡಿ ಬರೆಯುತ್ತಾರೆ. ಅಂದರೆ ಹೆಚ್ಚು ಹೆಚ್ಚು ಜನ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗಕ್ಕಿಂತ ಕ್ಯಾರೆಂಟೈನ್ ಭೀತಿಯಿಂದಲೇ ಸಾಯುತ್ತಿದ್ದರು ಎಂದರ್ಥ. ಜನರು ಕ್ಯಾರೆಂಟೈನ್ ಬಗ್ಗೆ ತುಂಬಾ ಭೀತಿಗೊಳ್ಳುತ್ತಿದ್ದರು. ಕುಟುಂಬದಲ್ಲೂ ಯಾರಿಗಾದರೂ ಪ್ಲೇಗ್ ರೋಗದ ಲಕ್ಷಣಗಳು ಕಂಡು ಬಂದರೂ ನೆರೆಯವರಿಂದ ವೈದ್ಯರಿಂದ ಮುಚ್ಚಿಡುತ್ತಿದ್ದರು. ಪ್ಲೇಗ್ನಿಂದ ಸೋಂಕಿತರಾಗಿದ್ದಾರೆ ಎಂದು ತಿಳಿಯುತ್ತಿದ್ದುದು ಶವವನ್ನು ಶವ ಸಂಸ್ಕಾರಕ್ಕಾಗಿ ಮನೆಯ ಹೊಸ್ತಿಲಲ್ಲಿ ಇಟ್ಟಾಗ ಮಾತ್ರ. ಎಂದು ಬೇಡಿಯವರು ಕಥೆಯಲ್ಲಿ ಹೇಳುತ್ತಾರೆ. ಕಥೆಯಲ್ಲಿ ಹೇಳುವಂತೆ ವೈದ್ಯಕೀಯ ಕಾರ್ಯಕರ್ತರು ಕೂಡ ರೋಗಿಗಳಿಗೆ ಹೆದರುತ್ತಿದ್ದರು. ಅವರು ರೋಗಿಗಳಿಂದ ಆದಷ್ಟೂ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರು. ಇದಕ್ಕೆಲ್ಲಾ ತದ್ವಿರುದ್ಧ ಎಂಬಂತೆ, ಈ ಕಥೆಯ ಮುಖ್ಯ ಪಾತ್ರಧಾರಿಗೆ ಕ್ಯಾರೆಂಟೈನ್ಗೆ ಒಳಗಾಗಿದ್ದ ರೋಗಿಗಳ ಬಗ್ಗೆ ಯಾವುದೇ ರೀತಿಯ ಭಯಭೀತಿ ಎಂಬುವುದೇ ಇರುವುದಿಲ್ಲ. ಅವನು ಸೋಂಕಿತರಿಂದ ಕಿಂಚಷ್ಟು ಅಂತರವನ್ನು ಕಾಯ್ದುಕೊಳ್ಳುವುದಿಲ್ಲ. ಅವನೇ ಪೌರಕಾರ್ಮಿಕ ಭಾಗು. ಹೊಸದಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಒಬ್ಬ್ಬ ದಲಿತ. ಸ್ವಚ್ಛತೆಯ ಬಗ್ಗೆ ಬಡಾವಣೆಯವರಿಗೆ ನಾಜುಕಾಗಿ ಸಲಹೆಸೂಚನೆಗಳನ್ನು ನೀಡುವ ಸಂಪನ್ಮೂಲ ವ್ಯಕ್ತಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ, ಜೌಷದಿ ಸಿಂಪಡಿಸುವ ಬಗ್ಗೆ ಮತ್ತು ಜನರು ತಮ್ಮ ಮನೆಗಳಿಂದ ಹೊರ ಬರದಂತೆ ಎಚ್ಚರಿಕೆ ವಹಿಸುವ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದ ಭಾಗು.
ಭಾಗು ಪ್ರತಿದಿನ ಬೆಳಿಗ್ಗೆ ಮೂರು ಗಂಟೆಗೆ ಏಳುತ್ತಿದ್ದ. ಅರ್ಧ ಬಾಟಲ್ ಮದ್ಯ ಸೇವಿಸಿದ ನಂತರ ಬಡವಾಣೆಯನ್ನು ಸ್ವಚ್ಛಗೊಳಿಸಿ, ಬೀದಿಗಳಲ್ಲಿ ಬಿದ್ದಿದ್ದ ಸತ್ತ ದೇಹಗಳನ್ನು ತೆಗೆದು ಬೀದಿ ಬೀದಿಗಳಿಗೆ ಜೌಷದಿ ಸಿಂಪಡಿಸುತ್ತಿದ್ದ. ಇತರರು ಮನೆಯಿಂದ ಹೊರಬರಲು ಭಯಪಟ್ಟು ಮನೆ ಸೇರಿಕೊಂಡಿದ್ದರಿಂದ ಅವರ ಎಲ್ಲಾ ಕೆಲಸಗಳನ್ನು ಭಾಗೇ ಪ್ರಮಾಣಿಕತೆಯಿಂದ ಪೂರ್ಣಗೊಳಿಸುತ್ತಿದ್ದ.
ಒಂದು ದಿನ ಭಾಗು ಮೃತ ದೇಹಗಳನ್ನು ಸುಡುವಾಗ ಸತ್ತನೆಂದು ಭಾವಿಸಿದ ವ್ಯಕ್ತಿಗೆ ಪ್ರಜ್ಞೆ ಬಂದುದನ್ನು ಕಂಡು, ಬೆಂಕಿಯ ಜ್ವಾಲಗೆ ಹಾರಿ ಅ ವ್ಯಕ್ತಿಯನ್ನು ಬೆಂಕಿಯಿಂದ ಹೊರತೆಗೆಯುತ್ತಾನೆ. ಆಷ್ಟೊತ್ತಿಗಾಗಲೆ ಆ ವ್ಯಕ್ತಿಯÀ ದೇಹದ ಬಹು ಭಾಗ ಸುಟ್ಟಿದ್ದರಿಂದ ತುಂಬಾ ನೋವನ್ನು ಅನುಭವಿಸುತ್ತ ಸಾಯುತ್ತಾನೆ. ಮುಗ್ದ ಭಾಗು ಆ ವ್ಯಕ್ತಿಯ ಸಾವಿಗೆ ತನ್ನನ್ನೇ ದೂಷಿಸಿಕೊಳ್ಳುತ್ತಾನೆ.
ಭಾಗು ರೋಗಿಗಳನ್ನು ಮುಟ್ಟುತ್ತಿದ್ದ, ತಬ್ಬಿಕೊಳ್ಳುತ್ತಿದ್ದ. ರೋಗಿಗಳನ್ನು ಮುಟ್ಟಲು ಇತರರಲ್ಲಿದ್ದ ಯಾವುದೇ ರೀತಿಯ ಹಿಂಜರಿಕೆ ಇವನಲ್ಲಿ ಇರುತ್ತಿರಲಿಲ್ಲ. ಅವನು ಸೋಂಕಿತರೊಂದಿಗೆ ಹರಟೆ ಹೊಡೆಯುತ್ತಿದ್ದ. ಸೋಂಕಿತರು ಇವನನ್ನು ಗೆಳೆಯನೆಂದೇ ಭಾವಿಸುತ್ತಿದ್ದರು. ಕ್ಯಾರೆಂಟೈನ್ಗೆ ಒಳಪಟ್ಟ ವ್ಯಕ್ತಿ ಸತ್ತರೆ, ಭಾಗು ಅವರ ಸಾವಿಗೆ ಕಣ್ಣೀರು ಸುರಿಸಿ ಅಳುತ್ತಿದ್ದ. ಅವರ ನೋವನ್ನು ತಾನು ಅನುಭವಿಸುತ್ತಿದ್ದ. ರೋಗಿಗಳ ಅಸಹಾಯಕತೆ ಕಂಡು ಮರುಗುತ್ತಿದ್ದ.
ಭಾಗುವಿನ ವೃತ್ತಿ ಬದ್ದತೆ ಮತ್ತು ಸಮಾಜದೆಡೆಗೆ ಅವನಿಗಿದ್ದ ಜವಾಬ್ದಾರಿ ಡಾ. ಬಕ್ಷಿಯನ್ನು ಪ್ರೇರಪಿಸುತಿತ್ತು. ಆದರೆ ಭಾಗುವಿನಂತೆ ವೃತ್ತಿಬದ್ಧತೆ, ಧೈರ್ಯವನ್ನು ಮತ್ತು ಅಂತಕರಣವನ್ನು ತನ್ನ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಡಾ. ಬಕ್ಷಿಯವರಿಗೆ ಸಾಧ್ಯವಾಗುತ್ತಿರಲಿಲ್ಲ, ಅಳವಡಿಸಿಕೊಳ್ಳಲು ಪ್ರಯ್ನತಿಸಿದರೂ ಸೋಲುತ್ತಿದ್ದರು. ವೈದ್ಯರಾದರೋ ರೋಗಿಗಳಿಂದ ಸಾಕಷ್ಟು ಅಂತರವನ್ನು ಇಟ್ಟು ಅವರನ್ನು ಕಾಯ್ದುಕೊಳ್ಳುತ್ತಿದ್ದರು.
ವೈದಕೀಯ ಸಿಬ್ಬಂದಿಗಳ ಕೆಲಸದ ಅಥವಾ ವೃತ್ತಿಯ ನೈತಿಕತೆಯನ್ನು ಮೌನವಾಗಿ ಪ್ರಶ್ನಿಸುವ ಒಬ್ಬ ನಾಯಕನಂತೆ ಕಥೆಯಲ್ಲಿ ಭಾಗು ಕಂಡುಬರುತ್ತಾನೆ. ಈ ಮೂಲಕ ರೋಗಿಗಳನ್ನು ಕೇವಲ ನಿರ್ಜೀವ ದೇಹಗಳಂತೆ ಕಾಣದಂತೆ ಡಾ. ಬಕ್ಷಿರವರನ್ನು ಪ್ರೇರಪಿಸುತ್ತಾನೆ. ತಮ್ಮ ವೃತ್ತಿ ನೈತಿಕತೆಯ ಬಗ್ಗೆ ತಮ್ಮನ್ನೇ ಪ್ರಶ್ನಿಸಿಕೊಳ್ಳಲು ಭಾಗು ಎಂಬ ಪಾತ್ರ ಡಾ. ಬಕ್ಷಿಯವರನ್ನು ಒತ್ತಾಯಿಸುತ್ತದೆ.
ಇಂತಹ ದುಸ್ಥಿತಿಯಲ್ಲಿ ಜನರ ಆರೈಕೆ ಮಾಡಿ ಸಫಲಗೊಳ್ಳಲು ಮತ್ತು ತನ್ನ ಗಮನವನ್ನು ಜನರ ಮೇಲೆ ಕೇಂದ್ರಿಕರಿಸಲು ಭಾಗು ಡಾ. ಬಕ್ಷಿಯವರಿಗೆ ಸಹಾಯ ಮಾಡುತ್ತಾನೆ ಮತ್ತು ಪ್ರೇರಪಿಸುತ್ತಾನೆ. ಭಾಗು ತನ್ನ ವೃತ್ತಿಗೆ ಎಷ್ಟು ಬದ್ದತೆ ಇತ್ತೆಂದರೆ ಅವನ ಪತ್ನಿಯು ಸಾವಿನ ಅಂಚಿನಲ್ಲಿದ್ದರೂ ಕ್ಯಾರೆಂಟೈನ್ಗೆ ಒಳಪಟ್ಟಿದ್ದ ರೋಗಿಗಳ ಸೇವೆಯನ್ನು ಪ್ರಮಾಣಿಕತೆಯಿಂದ ಮುಂದುವರಿಸುತ್ತಾನೆ. ಭಾಗು ತನ್ನ ಹೆಂಡತಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಡಾ. ಬಕ್ಷಿಯವರು ಭಾಗುವಿನ ಬಗ್ಗೆ ಅಸಮಾಧಾನಗೊಂಡರೂ ಸಮಾಜದ ಸೇವೆಗೆ ಅವನಲ್ಲಿದ್ದ ಬದ್ಧತೆಯಿಂದ ಪ್ರಭಾವಿತರಾಗುತ್ತಾರೆ. ಪತ್ನಿ ತೀರಿಕೊಂಡ ಮರುದಿನವೇ ಭಾಗು ತನ್ನ ಕೆಲಸಕ್ಕೆ ಹಾಜರಾಗುವುದನ್ನು ಕಂಡು ಡಾ. ಬಕ್ಷಿಯವರು ದಿಗ್ಭ್ರಮೆಗೊಳ್ಳುತ್ತಾರೆ. ಈ ಒಂದು ವಿಷಯ ಕೇವಲ ವೃತ್ತಿಪರ ಜವಾಬ್ದಾರಿಕ್ಕಿಂತ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆಸಲ್ಲಿಸಲು ಡಾ. ಬಕ್ಷಿರವರನ್ನು ಪ್ರೇರಪಿಸುತ್ತದೆ.
ಭಾಗುವಿನಿಂದ ಪ್ರೇರಿತಗೊಂಡ ವೈದಕೀಯ ತಂಡವು ಕೊಳಗೇರಿಗಳಿಗೆ ಹೋಗಿ ಪ್ರೀತಿ ಸಹಾನುಭೂತಿ ಮತ್ತು ಬದ್ಧತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪ್ರಾರಂಭಿಸುತ್ತಾರೆ. ಇದ್ದರಿಂದ ಡಾ. ಬಕ್ಷಿಯವರ ಜವಾಬ್ದಾರಿಗೆ ಒಳಪಟ್ಟಿದ್ದ ವೈದಕೀಯ ಸಿಬ್ಬಂದಿಗಳನ್ನು ಸನ್ಮಾನಿಸಲಾಗುತ್ತದೆ. ವೈದ್ಯರ ನಿಸ್ವಾರ್ಥ ಸೇವೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುತ್ತದೆ. ಈ ಸನ್ಮಾನ, ಪ್ರಶಂಸೆ ಎಂಬ ವ್ಯಾಪಾರದಲ್ಲಿ ಆರ್ಹ ಭಾಗುಗೆ ಯಾವುದೇ ರೀತಿಯ ಮನ್ನಣೆ ಸಿಗುವುದಿಲ್ಲ.
ಹೌದು, ನಮ್ಮ ಪೌರಕಾರ್ಮಿಕರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಅಗತ್ಯವಾದ ರಕ್ಷಣ ಕಿಟ್ಗಳಿಲ್ಲದೆ ತಮ್ಮ ಜವಾಬ್ದಾರಿಯನ್ನು ನಿರ್ಭೀತಿಯಿಂದ ನಿರ್ವಹಿಸುತ್ತಿರುವ ಈ ಯೋಧರಿಗೆ ನಮ್ಮದೊಂದು ಅಭಿವಂದನೆ ಹೇಳಲೇ ಬೇಕು, ಕೆಲವೊಂದು ರಾಜ್ಯಗಳಲ್ಲಿ ಪೌರಕಾರ್ಮಿಕರನ್ನು ಸಹೃದಯಿಗಳು ಹೂಮಾಲೆಗಳನ್ನು ಹಾಕಿ ಗೌರವಿಸಿದ್ದಾರೆ. ದೆಹಲಿ ಸರ್ಕಾರವು ಪೌರಕಾರ್ಮಿಕರಿಗೆ ಒಂದು ಕೋಟಿ ಮೊತ್ತದ ವಿಮೆಯನ್ನು ಮಾಡಿಸಿದೆ. ಭಾರತದಲ್ಲಿ ಹೆಚ್ಚಿನ ಪೌರ ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೌದು ಸಿ.ಎಂ ರಿಲೀಫ್ ಪಂಡ್ಗೆ ಎರಡು ತಿಂಗಳ ಸಂಬಳದ ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡಿದ ತೆಲಂಗಾಣದ ಆದಿವಾಸಿ ಪೌರಕಾರ್ಮಿಕರ ಸುದ್ದಿ ತಮ್ಮ ವೃತ್ತಿ ಬಗ್ಗೆ ಪೌರಕಾರ್ಮಿಕರಿಗಿರುವ ಬದ್ಧತೆ, ನೈತಿಕತೆಯು ಇತರರಿಗೂ ನಮಗೂ ಅರ್ಥವಾಗಲಿ ಮತ್ತು ಪ್ರೇರಣೆಯಾಗಲಿ.
ಇಂತಿ ನಿನ್ನ
ಆನಂದ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...