Saturday, 20 June 2020

ಅಪೇಕ್ಷೆ

- ಫಾ. ವಿಜಯ ಕುಮಾರ್ ಪಿ, ಬಳ್ಳಾರಿ

ಮಾನವನ ಅಪೇಕ್ಷೆಗಳು ಅಪಾರ. ಅಪೇಕ್ಷೆಗಳಿಗೆ ಅಂತ್ಯವೂ ಇಲ್ಲ, ಅಳಿವೂ ಇಲ್ಲ ಎಂದರೆ ಆಶ್ಚರ್ಯವೇನೂ ಇಲ್ಲ. ಅವುಗಳು ಮಾನವನನ್ನು ನಿರಂತರವೂ ಕಾಡುತ್ತಿರುತ್ತವೆ. ಮಾನವನ ಸಮತೋಲನ ಬೆಳವಣಿಗೆಗೆ ಅಪೇಕ್ಷೆಗಳು ಬೇಕು ಆದರೆ ಅವು ಸ್ವಕೇಂದ್ರಿತವಾಗಿರುವ ಬದಲು ಸಮಾಜಮುಖಿಯಾಗಿಯೂ ವ್ಯಕ್ತಿಯ ಸಕಾರಾತ್ಮಕ ಬೆಳವಣಿಗೆಗಾಗಿಯೂ ಪೂರಕವಾಗಿರಬೇಕೇ ಹೊರತು, ಅವು ಅವನನ್ನು ಅಧೋಗತಿಗೆ ತಳ್ಳುವಂತಿರಬಾರದು.

ಸಕಾರಾತ್ಮಕ ಅಪೇಕ್ಷೆಗಳು ನಿರಂತರವಾಗಿ ಬೆಳೆಯುತ್ತಿರಬೇಕು ಹಾಗೆಯೇ ನಕಾರಾತ್ಮಕ ಅಪೇಕ್ಷೆಗಳು ನಿರಂತರವಾಗಿ ಅಳಿಯುತ್ತಿರಬೇಕು. ನಕಾರಾತ್ಮಕ ಅಪೇಕ್ಷೆಗಳು ಹಂತಹಂತವಾಗಿ, ಸಂಪೂರ್ಣವಾಗಿ ಅಳಿದಾಗ ಮಾನವನ ಅಂತರಂಗ ಬರಿದಾಗಿ ಶೂನ್ಯವನ್ನು ತಲಪುತ್ತದೆ. ಆ ಶೂನ್ಯದ ತಲಸ್ಪರ್ಶದಲ್ಲಿ ದೈವೀಸ್ಪರ್ಶವಾಗಿ ಮಾನವ ಪುನೀತನಾಗುತ್ತಾನೆ. ಆಗ ನಿತ್ಯೋತ್ಸವದ, ಆನಂದದ ಕಾರಂಜಿಗಳು ಚಿಮ್ಮಲಾರಂಭಿಸುತ್ತವೆ. ಇದು ಮಾನವನ ಆತ್ಮಸಾಕ್ಷಾತ್ಕಾರದ ಅತ್ಯುನ್ನತ ಸ್ಥಿತಿ.

ಆಧ್ಯಾತ್ಮಿಕ ಶಿಖರವನ್ನು ತಲಪಲು ಮಾನವ ನಕಾರಾತ್ಮಕ ಅಪೇಕ್ಷೆಗಳಿಂದ ಸತತವಾಗಿ ವಿಮುಖನಾಗಿ ಸಕಾರಾತ್ಮಕ ಹಾಗೂ ಸಮಾಜಮುಖಿ ಅಪೇಕ್ಷೆಗಳತ್ತ ತಿರುಗಿಕೊಳ್ಳಬೇಕು. ಇದೊಂದು ಸುಧೀರ್ಘವಾದ ಹಾಗೂ ಏಳು-ಬೀಳಿನ ಪಯಣ. ಇದು ಹುಲುಮಾನವನಿಗೆ ಅಸಾಧ್ಯ ನಿಜ! ಆದರೆ ಮಾನವ ಭಗವಂತನ ಸೃಷ್ಟಿ. ಆತನಿಗೆ ಸಂಪೂರ್ಣವಾಗಿ ಶರಣಾದರೆ ಎಂಥಹ ಎತ್ತರದ ಪರ್ವತವೂ ಕೂಡ ಕರಗಿ ಸಮತಟ್ಟಾದ ಹಾದಿಯಾಗಬಲ್ಲದು. ಇದನ್ನೇ ಸಂತ ಪೌಲನು "ಮಾನವರಿಂದ ಜಯಿಸಲಾಗದ ಶೋಧನೆಗಳೇನೂ ನಿಮಗೆ ಬಂದಿಲ್ಲ. ದೇವರು ಕೊಟ್ಟಮಾತಿಗೆ ತಪ್ಪಲಾರರು, ಗೆಲ್ಲಲಾಗದ ಶೋಧನೆಗಳಿಗೆ ನಿಮ್ಮನ್ನೆಂದೂ ಗುರಿಪಡಿಸಲಾರರು. ಶೋಧನೆಗಳು ಬಂದಾಗ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಅವರೇ ಒದಗಿಸುತ್ತಾರೆ" (1ನೇ ಕೊರಿಂಥಿ 10:13) ಎನ್ನುತ್ತಾನೆ. ಯಾಕೆಂದರೆ "ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ" (ಲೂಕ 1:37).

ಸುದೀರ್ಘ ಹಾಗೂ ದುರ್ಗಮವಾದ ಪಯಣದಲ್ಲಿ ಮಾನವ ಸತತವಾಗಿ ಭಗವಂತನಿಗೆ ಅಭಿಮುಖನಾಗಿ ಸಾಗುತ್ತಿರಬೇಕು. ಹಲವು ಬಾರಿ ನಿರಾಶೆಗಳು, ಅಪನಂಬಿಕೆಗಳು ಅವನನ್ನು ಕಾಡುತ್ತವೆ, ಆದರೆ ಧೃತಿಗೆಡಬಾರದು. ದೃಢನಂಬಿಕೆ ಹಾಗೂ ಅಚಲವಿಶ್ವಾಸದಿಂದ ನೋವ, ಅಬ್ರಹಾಮ, ಮೋಶೆಯಂತೆ ಸಮಸ್ಯೆಗಳನ್ನು ಲೆಕ್ಕಿಸದೆ ಪ್ರಗತಿಯತ್ತ ಮುನ್ನಡÉಯಬೇಕು. ನಿರಾಕಾರನು, ನಿಗುರ್ಣನು, ಪ್ರೀತಿಸ್ವರೂಪನು ಹಾಗೂ ಕ್ಷಮಾಶೀಲನು ಆದ ಭಗವಂತನಲ್ಲಿ ಯಾವ ಅಪೇಕ್ಷೆಯೂ ಇರುವುದಿಲ್ಲ. ಆತ ಉಚಿತವಾಗಿ ಹಾಗೂ ಧಾರಾಳವಾಗಿ ಮುಗಿವಿಲ್ಲದೆ ತುಂಬಿ ತುಳುಕುವಂತೆ ಕೊಡುವವನೇ ಹೊರತು, ಕಿಂಚಿತ್ತನ್ನೂ ಪಡೆದುಕೊಳ್ಳುವವನಲ್ಲ.

ಸುಂದರ ಸೃಷ್ಟಿ ಹಾಗೂ ಅದರಲ್ಲಿರುವ ಎಲ್ಲವನ್ನೂ ಮಾನವನ ಉಪಯೋಗಕ್ಕೆ ಭಗವಂತ ನೀಡಿದ್ದಾನೆ. ಈ ತಂಗಾಳಿ, ಈ ಬೆಳಕು, ಈ ನೀರು ಹಾಗೂ ಈ ಪ್ರಕೃತಿಯ ಅನಂತ ಸೊಬಗಿಗೆ ಬೆಲೆಕಟ್ಟಲಾದೀತೆ! ಆದರೆ ಇಂದು ಮಾನವ ಇವುಗಳನ್ನೂ ಸಹ ತನ್ನದೆಂದೇ ಭಾವಿಸಿ ಸೃಷ್ಟಿಯ ಪ್ರಭುವನ್ನು ಮರೆತು ಬೆಳೆಯಲು ಯತ್ನಿಸುತ್ತಿದ್ದಾನೆ. ಏಕೆಂದರೆ ಆತನ ಆಂತರಂಗ ಅಳಿದು ಹೋಗುವ ಅಪೇಕ್ಷೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳಿಂದ ತುಂಬಿ ತುಳುಕುತ್ತಿದೆ, ಹಾಗೂ ದಿನದಿಂದ ದಿನಕ್ಕೆ ಈ ಷಡ್ವೈರಿಗಳು ಹೆಮ್ಮರವಾಗುತ್ತಲೇ ಸಾಗಿವೆ. ಈ ಕಾರಣ ಭಗವಂತನ ಅನಂತ ನಿವಾಸವಾಗಿರುವ ಮಾನವನ ಅಂತರಂಗ ಸ್ವಚ್ಛಗೊಳಿಸಲಾಗದಷ್ಟು ದುರಾಪೇಕ್ಷೆಗಳಿಂದ ತುಂಬಿ ನಾರುತ್ತಿದೆ ಹಾಗೂ ಇತರರಿಗೂ ಅದರ ಸೋಂಕನ್ನು ಮಾನವ ಸತತವಾಗಿ ತಲುಪಿಸುತ್ತಲೇಇದ್ದಾನೆ.

ಎಲ್ಲಿಯವರೆಗೆ ಈ ಸೋಂಕನ್ನು ತಡೆಗಟ್ಟಿ ಮಾನವ ತನ್ನಂತರಂಗವನ್ನು ಭಗವಂತನ ನಿವಾಸವಾಗಿ ಪರಿವರ್ತಿಸುವುದಿಲ್ಲವೋ ಅಲ್ಲಿ ತನಕ ದುರಾಪೇಕ್ಷೆಗಳು ಅವನನ್ನು ಕಟ್ಟಿಹಾಕಿ ರಣಕೇಕೆ ಹಾಕುತ್ತಲೇ ಇರುತ್ತವೆ. ಈ ಕಾರಣ ಅವನು ತನ್ನ ನೈಜ ಘನತೆ-ಗೌರವಗಳನ್ನು ಕಳೆದುಕೊಳ್ಳುತ್ತಲೇ ಹೋಗುತ್ತಾನೆ. ಹಾಗಾದರೆ ಇವುಗಳಿಗೆ ಕಡಿವಾಣ ಹಾಕಲು ಸಾಧ್ಯವೇ? ಈ ಒಲ್ಲದ ಅಪೇಕ್ಷೆಗಳ ಕಟ್ಟುಗಳಿಂದ ಬಿಡುಗಡೆ ಹೊಂದಲು ಏನುಮಾಡಬೇಕು?

ನೀರು ತುಂಬಿದ ಕೊಡವನ್ನು ಸುಲಭವಾಗಿ ಬರಿದು ಮಾಡಲು ಸಾಧ್ಯ; ಆದರೆ ದುರಾಪೇಕ್ಷೆಗಳಿಂದ ತುಂಬಿದ ಮಾನವನ ಅಂತರಂಗವನ್ನು ಬರಿದು ಮಾಡಲು ಸಾಧ್ಯವೇ? ಬರಿದು ಮಾಡುವುದೆಂದರೇನು? ಬರಿದು ಮಾಡುವುದೆಂದರೆ ಮಾನವನ ನಕಾರಾತ್ಮಕ ಅಪೇಕ್ಷೆಗಳನ್ನು ಹಂತಹಂತವಾಗಿ ದೂರಮಾಡಿ ಶೂನ್ಯದ ತಳಸ್ತರವನ್ನು ತಲಪುವುದು. ಅಂದರೆ ಮಾನವ ತನ್ನ ಆತ್ಮಸಾಕ್ಷಾತ್ಕಾರಕ್ಕೆ ಅಡ್ಡಿಯಾಗುವ ಎಲ್ಲಾ ದುರಾಪೇಕ್ಷೆಗಳನ್ನೂ ಸಂಪೂರ್ಣವಾಗಿ ಭಗವಂತನ ಕೃಪೆಯಿಂದ ದಮನಗೊಳಿಸಿ, ಈ ಲೋಕದ ದುರಾಪೇಕ್ಷೆಗಳನ್ನು ಮೀರಿ ತನ್ನನ್ನುತಾನೇ ವಿನಯದಿದ ತಗ್ಗಿಸಿಕೊಂಡು ಸೃಷ್ಟಿಯ ಪ್ರಭುವಿಗೆ ಸಂಪೂರ್ಣವಾಗಿ ಶರಣಾಗಿ "ಕಾಪಾಡೆನ್ನನು, ಬೇಕು ಬೇಕೆಂದು ಪಾಪ ಮಾಡದಂತೆ. ಕಾದಿಡು, ಅಂಥ ಪಾಪಕ್ಕೆ ನಾ ದಾಸನಾಗದಂತೆ. ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ. ನಿನಗೊಪ್ಪಿಗೆಯಾಗಲಿ ನನ್ನ ಬಾಯಿಮಾತು, ಹೃದಯಧ್ಯಾನ ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ ಧಾಮ" (ಕೀರ್ತನೆ 19:13-14) ಎಂದು ಅಂಗಲಾಚಿದಾಗ ನಕಾರಾತ್ಮಕ ಅಪೇಕ್ಷೆಗಳ ಬಲವಾದ ಕಟ್ಟುಗಳಿಂದ ಬಿಡುಗಡೆ ಹೊಂದಲು ಸಾಧ್ಯ. ಆದರೆ ಇಂತಹ ಸ್ಥಿತಿಯನ್ನು ತಲಪಲು ನಿರಂತರ ಪ್ರಯತ್ನ, ಶ್ರಮ ಹಾಗೂ ತ್ಯಾಗ ಅಗತ್ಯ. ಹಾಗಾದರೆ ಇದು ಮಾನವನಿಗೆ ಸಾಧ್ಯವೇ! "ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ" ಎನ್ನುತ್ತಾರೆ ಸಂತ ಮತ್ತಾಯ (ಮತ್ತಾಯ 19:26)

ಹುಲು ಮಾನವರಾಗಿ ಜನ್ಮ ತಳೆದ ಹಲವು ಸಾಮಾನ್ಯರು ಹಾಗೂ ಸಾಧು, ಸಂತರು ತಮ್ಮ ಅಂತರಂಗದಲ್ಲಿ ನೆಲೆಯೂರಿದ್ದ ದುರಾಪೇಕ್ಷೆಗಳನ್ನು ಭಗವಂತನ ಕೃಪೆಯಿಂದ ಕಿತ್ತೊಗೆದು, ಭಾರವಾಗಿದ್ದ ಹೃದಯ ಹಗುರವಾಗಿ ಪ್ರಶಾಂತತೆಯ ಹಾಗೂ ಸಂತೃಪ್ತಿಯ ಸ್ಥಿತಿಯನ್ನು ತಲುಪಿ ಧನ್ಯರಾಗಿದ್ದಾರೆ. ಈ ಅತ್ಯುನ್ನತ ಸ್ಥಿತಿಯನ್ನು ತಲಪಲು ಅವರು ಸೃಷ್ಟಿಯ ಪ್ರಭುವನ್ನು ಸಂಪೂರ್ಣವಾಗಿ ತಮ್ಮ ಜೀವನದ ಕೇಂದ್ರಬಿಂದುವಾಗಿಸಿಕೊಂಡು "ತಿಳಿದುಕೋ ದೇವಾ, ನನ್ನ ಹೃದಯವನು ಪರೀಕ್ಷಿಸಿ. ಅರಿತುಕೋ ನನ್ನ ಆಲೋಚನೆಗಳನು ಪರಿಶೋಧಿಸಿ. ಕೇಡಿದೆಯೇ ನೋಡು ನನ್ನ ಮಾರ್ಗದಲಿ ನಡೆಸೆನ್ನನು ಆ ಸನಾತನ ಪಥದಲಿ" (ಕೀರ್ತನೆ 139:23-24) ಎಂದು ಅವರಿಗೆ ಶರಣಾದರು ಹಾಗೂ ತಮ್ಮ ಅಧೋಗತಿಗೆ ಕಾರಣವಾಗಿದ್ದ ದುರಾಪೇಕ್ಷೆಗಳನ್ನು ತೊರೆದು ಸೃಷ್ಟಿಯ ಪ್ರಭುವನ್ನು ತಮ್ಮ ಜೀವನಕ್ಕೆ ಆಹ್ವಾನಿಸಿದರು. ಆಗ ಅವರ ಅಂತರಂಗ, ಸೃಷ್ಟಿಯ ಪ್ರಭುವಿನ ತಂಗುಧಾಮವಾಯಿತು. ಅವರು "ಇರುವುದರಲ್ಲೇ ಸಂತೃಪ್ತನಾಗಿರುವವನು ಭಕ್ತಿಯಲ್ಲಿ ನಿಜಕ್ಕೂ ಶ್ರೀಮಂತನಾಗಿರುತ್ತಾನೆ. ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡು ಒಯ್ಯುವುದಿಲ್ಲ. ನಮಗೆ ಊಟ ಬಟ್ಚೆ ಇದ್ದರೆ ಅಷ್ಟೇ ಸಾಕು. ಐಶ್ವರ್ಯವಂತರಾಗಬೇಕೆಂದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕಾರಕವೂ ಆದ ಆಶಾಪಾಶಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ ವಿನಾಶಕ್ಕೂ ಒಯ್ಯತ್ತವೆ" (1ನೆ ತಿಮೋಥಿ 6:6-9) ಎಂದು ಅರಿತುಕೊಂಡರು. ಹಾಗೆಯೇ ಇಂದು ಮಾನವ ತನ್ನ ದುರಾಪೇಕ್ಷೆಯ ವಿಷವರ್ತುಲದಿಂದ ಹೊರಬರಲು ಭಗವಂತನನ್ನು ಅಪ್ಪಿಕೊಂಡರೆ ಆತನ ಅಂತರಂಗದ ಕಗ್ಗತ್ತಲು ನಿಧಾನವಾಗಿ ದೂರಸರಿದು ಪ್ರಭುವಿನ ಅನಂತ ಬೆಳಕು ಅವನ ಅಂತರಂಗದಲ್ಲಿ ಬೆಳಗಲಾರಂಭಿಸುತ್ತದೆ. ಆಗ ಆತನ ಅಂತರಂಗದ ಕಣ್ಣುಗಳು ಪ್ರಜ್ವಲಿಸಿ ದುರಾಪೇಕ್ಷೆಯ ಬಂಧನದಿಂದ ಹೊರಬರಲು ಸಾಧ್ಯವಾಗುತ್ತದೆ. ಅಂಥವರ ಬದುಕು ಸಮಾಜಮುಖಿಯಾಗುತ್ತದೆ ಹಾಗೂ ದುರಾಪೇಕ್ಷೆಗಳಿಂದ ಕೂಡಿದ ಬಾಳು ಬಾಳಲ್ಲ ಎಂಬ ಅರಿವು ಅವರಲ್ಲಿ ಜಾಗೃತವಾಗುತ್ತದೆ.

***********************


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...