Saturday, 20 June 2020

ಹತ್ತು ಪೈಸೆಯ ಮಾನ, ಸುಳ್ಳು ಮತ್ತು ಶಾಂತಿಯ ಮಾರ್ಗ

- ಯೊಗೇಶ್ ಮಾಸ್ಟರ್

ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು ಆರೋಪಿಸಿತ್ತು ಮತ್ತು ಶಾಂತಿಯ ಮಾರ್ಗವನ್ನು ತೋರಿತ್ತು.
ಮಾನದ ಕತೆ
ಆ ದಿನ ನಾನು ನನ್ನ ಅಮ್ಮ ಅದೆಲ್ಲಿಗೆ ಹೋಗಿದ್ದೆವೆಂದು ನೆನಪಿಲ್ಲ. ಎಲ್ಲಿಗೆ ಹೋಗುವುದು, ಏಕೆ ಹೋಗುವುದು, ಹೋಗಿ ಅಲ್ಲೇನು ಮಾಡುವುದು, ಅಲ್ಲಿಂದ ಯಾವಾಗ ಬರುವುದು ಎಂದು ನಾನು ಎಂದೂ ಕೇಳಿದ ನೆನಪಿಲ್ಲ. ನಮ್ಮಮ್ಮ ಎಲ್ಲಿಗೇ ಕರೆದುಕೊಂಡು ಹೋದರೂ ಹೋಗುತ್ತಿದ್ದೆ. ಹಸಿವು ಎನ್ನುವ ಮುಂಚೆಯೇ ಏನಾದರೂ ಒದಗಿಸುತ್ತಿದ್ದರು. ಒಂದು ವೇಳೆ ಅವರ ಲೆಕ್ಕಾಚಾರದ ಮುಂಚೆಯೇ ನನಗೆ ಹಸಿವಾದರೂ ಅಂಗಡಿಯಿಂದ ಬಿಸ್ಕತ್ ಅಥವಾ ಬನ್ ಆದರೂ ಸಿಕ್ಕೇ ಸಿಗುತ್ತಿತ್ತು. ಹಾಗೆಯೇ ಹೋಗುವ ಬರುವ ಜವಾಬ್ದಾರಿ ನನ್ನದೇನಾಗಿರಲಿಲ್ಲವಲ್ಲ. ಕರೆದುಕೊಂಡು ಹೋಗುತ್ತಿದ್ದರು. ಕರೆದುಕೊಂಡು ಬರುತ್ತಿದ್ದರು. ಬಿಟಿಎಸ್ ಕೆಂಪು ಬಸ್ಸಿನಲ್ಲಿ. ಬಸ್ಸಿನಲ್ಲಿ ಅಲ್ಲದೇ ನಡೆದು ಹೋಗುವುದಾಗಿದ್ದರೆ ನಡೆಯುತ್ತಿದ್ದೆವು. ಒಂದು ವೇಳೆ ನನ್ನ ಎಳೆಯ ಕಾಲುಗಳು ನೋಯುವಷ್ಟು ದೂರವನ್ನು ಕ್ರಮಿಸಬೇಕಾಗಿದ್ದರೆ ತಮ್ಮ ಸೊಂಟವೇರಿಸಿಕೊಂಡು ಅವರು ನಡೆಯುತ್ತಿದ್ದರು. ಬಿಸಿಲಿದ್ದರೆ ಅವರ ಸೆರಗು ನನ್ನ ತಲೆಯ ಮೇಲಿರುತ್ತಿತ್ತು. ಭುಜದ ಮೇಲೆಯೇ ತಲೆಯಿಟ್ಟುಕೊಂಡು ನಿದ್ರೆ ಮಾಡಿರುವ ನೆನಪುಗಳೂ ಇವೆ. ಹಾಗಿರುವಾಗ ಹೋಗುವ ಮತ್ತು ಬರುವ ಗುರಿ ಮತ್ತು ದಾರಿಗಳ ಬಗ್ಗೆ ನಾನು ಎಂದೂ ತಲೆ ಕೆಡಿಸಿಕೊಳ್ಳುವ ಸಂದರ್ಭ ಒದಗಿರಲೇ ಇಲ್ಲ.
ಆದರೆ ಆ ದಿನ ಅಮ್ಮನ ಜೊತೆಗಿನ ಪ್ರಯಾಣ ಕೊಂಚ ಆತಂಕವನ್ನು ಹುಟ್ಟಿಸಿತ್ತು. ಏಕೆಂದರೆ, ಅದೆಲ್ಲಿಗೋ ಹೋಗಿದ್ದೆವಲ್ಲ, ವಾಪಸ್ಸು ಬರಲು ಬಸ್ ಚಾರ್ಜಿಗೆ ಕೊರತೆಯಾಗಿತ್ತು. ಮನೆ ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿ. ಅಲ್ಲಿಗೆ ಹೋಗಲು ಇಬ್ಬರಿಗಿರಲಿ, ಒಬ್ಬರಿಗೂ ಸಾಧ್ಯವಿರಲಿಲ್ಲ. ಹಾಗಂತ ನಡೆದುಕೊಂಡು ಬರುವಷ್ಟು ಹತ್ತಿರದ ದಾರಿಯೇನಲ್ಲ. ನಾವಿದ್ದ ಜಾಗದಿಂದ ಕೆ.ಆರ್ ಮಾರ್ಕೆಟ್ಟಿಗೆ ಬರಲು ದೊಡ್ಡವರಿಗೆ ಇಪ್ಪತ್ತು ಪೈಸೆ. ಸಣ್ಣವರಿಗೆ ಹತ್ತು ಪೈಸೆ. ನಮ್ಮಮ್ಮನ ಹತ್ತಿರ ಇದ್ದದ್ದು ಬರೀ ಇಪ್ಪತ್ತು ಪೈಸೆ ಮಾತ್ರ. ಈಗ ನನಗಿಲ್ಲ.
ನನ್ನಷ್ಟು ಚಿಕ್ಕ ಹುಡುಗನಿಗೆ ಟಿಕೆಟ್ ತೆಗೆದುಕೊಳ್ಳಬೇಕೆಂದು ಆಯಾ ಬಸ್ಸಿನ ನಿರ್ವಾಹಕನ ಔದಾರ್ಯ ಅಥವಾ ನಿಷ್ಟುರತೆಯ ಮೇಲೆ ಅವಲಂಬಿತವಾಗಿತ್ತೇ ಹೊರತು, ಕಟ್ಟುನಿಟ್ಟಿನ ಚಂಡಶಾಸನವನ್ನು ಎಲ್ಲರೂ ಅನುಸರಿಸುತ್ತಿದ್ದದ್ದು ನಾ ಕಾಣೆ. ಎಷ್ಟೋ ಸಲ ‘ಈ ಹತ್ತು ಪೈಸೆ ಇಟ್ಟುಕೊಳ್ಳಿ’ ಎಂದು ಎಷ್ಟೋ ಬೆಲೆಯ ಟಿಕೆಟ್ಟಿನ ದೂರವನ್ನು ಚೀಟಿ ಪಡೆಯದೇ ಪರಸ್ಪರ ಅಂಡರ್ಸ್ಟ್ಯಾಂಡಿಂಗಲ್ಲಿ ಪ್ರಯಾಣ ಮಾಡುತ್ತಿದ್ದ ಜನರೂ ಉಂಟು. ಇಷ್ಟೆಲ್ಲಾ ಸಡಿಲಿಕೆಯ ಸ್ವಕಲ್ಪಿತ ಆಶ್ವಾಸನೆ ಮತ್ತು ಭರವಸೆ ಇದ್ದುದರಿಂದ ಅಮ್ಮ ಧೈರ್ಯ ಮಾಡಿ, ‘ನಡಿ ಹೋಗಿಬಿಡೋಣ’ ಎಂದು ಬಸ್ ಹತ್ತಿದರು.
ಆದರೆ ಆ ಬಸ್ ಕಂಡಕ್ಟರ್ ಬಹಳ ಪ್ರಾಮಾಣಿಕ ಮತ್ತು ನಿಷ್ಟುರಿ. ನಮ್ಮ ಅಮ್ಮನಿಗೆ ಇಪ್ಪತ್ತು ಪೈಸೆ ಟಿಕೆಟ್ ಕೊಟ್ಟು, ‘ಹುಡುಗನಿಗೆ?’ ಎಂದು ಕೇಳಿದರು. ನಮ್ಮಮ್ಮ, ‘ಚಿಕ್ಕವನು’ ಅಂದರು.
‘ಚಿಕ್ಕವನಾದರೆ ಆಫ್ ಟಿಕೆಟ್ ತಗೋಬೇಕು. ಹತ್ತು ಪೈಸೆ ತೆಗಿ’ ಅಂದರು.
ನಮ್ಮಮ್ಮ ‘ಇಲ್ಲ’ ಎಂದರು.
‘ಇಲ್ಲ ಅಂದರೆ ತಗೊಬೇಕು’ ಎಂದು ಆ ಕಂಡಕ್ಟರ್ ಇತರರಿಗೆ ಟಿಕೆಟ್ ಕೊಡುವುದರಲ್ಲಿ ಮಗ್ನರಾದರು.
ನನಗೆ ಆತಂಕ ಈಗ ಏನು ಮಾಡುವುದು ಅಂತ. ನಮ್ಮಮ್ಮನ ಹತ್ತಿರ ಇಲ್ಲವೆಂದು ನನಗೆ ಗೊತ್ತು. ಅವನು ಕೊಡದಿದ್ದರೆ ಬಿಡುವುದಿಲ್ಲ ಅಂತ ಅನ್ನಿಸುತ್ತಿದೆ. ಅಳು ಬರುತ್ತಿದೆ. ‘ಅಮ್ಮಾ ಏನು ಮಾಡೋದು?’ ಎನ್ನುತ್ತಿದ್ದೆ ಪದೇಪದೇ.
‘ಸುಮ್ಮನಿರು. ಅವನು ಬೇರೆಯವರಿಗೆಲ್ಲಾ ಟಿಕೆಟ್ ಕೊಟ್ಕೊಂಡು ಮರೆತು ಹೋಗ್ತಾನೆ’ ಎಂದು ಭರವಸೆ ನೀಡಿದರು. ಸಾಮಾನ್ಯವಾಗಿ ನಾನು ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೇ ನಿರುಮ್ಮಳವಾಗಿ ಇರುವಂತೆ ಅವತ್ತು ಇರಲು ಆಗುತ್ತಿಲ್ಲ. ಕಂಡಕ್ಟರ್ ಮರೆತು ಹೋಗುತ್ತಾರೋ ಅಥವಾ ನೆನಪಿನಲ್ಲಿಟ್ಟುಕೊಂಡು ಕೇಳುತ್ತಾರೋ ಎಂಬ ಭಯದಿಂದ ಆ ಕಂಡಕ್ಟರ್ ಹೋಗುವ ಕಡೆಯಲ್ಲೆಲ್ಲಾ ನೋಡುತ್ತಿದ್ದೆ. ಅವರು ಮರೆತಿರಲಿಲ್ಲ. ನಮ್ಮ ಕಡೆ ಬಂದಾಗ, ‘ಎಲ್ಲಮ್ಮಾ?’ ಎಂದು ಕೇಳುತ್ತಾ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದರು.
ಕೊನೆಗೂ ಕೆ.ಆರ್ ಮಾರ್ಕೆಟ್ ಬಂದಿತು. ಎಲ್ಲರೂ ಇಳಿಯುವಾಗ ನಾವೂ ಇಳಿಯಲು ಹೋದೆವು. ಕಂಡಕ್ಟರ್ ನಮ್ಮನ್ನು ತಡೆದರು. ‘ಎಲ್ಲಿ ಹತ್ತು ಪೈಸೆ?’
‘ಇಲ್ಲ.’
‘ಕಾಸಿಲ್ದೇ ಬಸ್ ಯಾಕೆ ಹತ್ತಿದೆ? ಹತ್ತು ಪೈಸೆ ಕೊಡು. ಬಸ್ ಇಳಿ’ ಎಂದು ತಾನೂ ಬಸ್ ಇಳಿದು ಪ್ರಯಾಣಿಕರಿಗೆ ಚಿಲ್ಲರೆ ಕೊಡುವ ಕೆಲಸದಲ್ಲಿ ಮಗ್ನರಾಗಿದ್ದರು. ಕಂಡಕ್ಟರ್ ನಮ್ಮನ್ನು ಕೊನೆಯ ಬಾರಿ ಎಚ್ಚರಿಸುವಾಗ ಡ್ರೈವರ್ ನಮ್ಮನ್ನು ನೋಡಿದರು. ಮತ್ತೆ ಅವರಿಗೂ ಮತ್ತು ಈ ಹಗರಣಕ್ಕೂ ಸಂಬಂಧವಿಲ್ಲವೆಂದು ಇಳಿದು ಹೋದರು. ಇಡೀ ಬಸ್ಸಿನಲ್ಲಿ ನಾನು ಮತ್ತು ನಮ್ಮಮ್ಮ; ಇಬ್ಬರೇ. ನಾನು ನಮ್ಮ ಅಮ್ಮನ ಮುಂದಿನ ನಡೆಗಾಗಿ ಕಾದಿದ್ದೆ. ಭಯವಾಗಿತ್ತು. ಅಳುಬರುವುದು ಹೆಚ್ಚಾಯಿತು. ತಲೆ ಎತ್ತಿ ಅಮ್ಮನ ನೋಡಿದರೆ ಅವರೂ ಹೆದರಿದಂತೆಯೇ ಕಾಣಿಸಿ ನನ್ನ ಹೆದರಿಕೆ ಇನ್ನೂ ಜಾಸ್ತಿ ಆಯ್ತು. ಮುಂದಿನ ದ್ವಾರದಲ್ಲಿ ಕಂಡಕ್ಟರ್ ಕಾಣಿಸುತ್ತಿದ್ದಾರೆ.
‘ಬಾ’ ಎಂದು ಅಮ್ಮ ನನ್ನ ಕರೆದುಕೊಂಡು ಹಿಂದಿನ ದ್ವಾರದಿಂದ ಇಳಿಯಲು ಹೋದರು. ಬಹುಶಃ ಹಿಂದೆ ಇಳಿದು ಕಂಡಕ್ಟರ್ ನಮ್ಮ ಕಡೆ ನೋಡುವಷ್ಟರಲ್ಲಿ ಬಸ್ಸಿನ ಹಿಂದಿನಿಂದ ಹೊರಟು ಹೋಗುವುದು ಅವರ ಉದ್ದೇಶವಾಗಿತ್ತೆಂದು ನಾನು ಇವತ್ತು ಊಹಿಸುತ್ತೇನೆ. ನಾನೂ ಆದಷ್ಟು ಸದ್ದು ಮಾಡದಂತೆ ನಮ್ಮಮ್ಮನ ಉದ್ದೇಶವನ್ನು ಯಶಸ್ವಿಗೊಳಿಸಲು ನಡೆದೆ. ಹಿಂದಿನ ದ್ವಾರದಿಂದ ಇಳಿಯುತ್ತಿದ್ದಂತೆ ಆ ಕಂಡಕ್ಟರ್ ನಮ್ಮನ್ನು ಕಂಡೇ ತೀರಿದರು. ಜೋರಾಗಿ ಕೂಗುತ್ತಾ ಬಂದರು.
‘ಏನಮ್ಮಾ, ಮಾನ ಇರೋ ಹೆಂಗಸಾ ನೀನು? ಹತ್ತು ಪೈಸೆಗೆ ನೀನು ಕದ್ದು ಓಡೋಗ್ತಿದ್ದೀಯಲ್ಲಾ?’ ಎಂದು ಜೋರುಜೋರಾಗಿಯೇ ಕೂಗಾಡತೊಡಗಿದ್ದರು. ನಮ್ಮಮ್ಮ ಏನು ಹೇಳಿದಂತೆ ನನಗೆ ನೆನಪಿಲ್ಲ. ಬೆವರುತ್ತಿರುವ ಮುಖದಲ್ಲಿ ಅವರಿವರ ಮುಖ ನೋಡಿಕೊಂಡು ನಿಂತಿದ್ದರೆಂದು ಕಾಣುತ್ತದೆ. ನಾನು ಪೂರ್ತಿ ಅಮ್ಮನ ಸೊಂಟವನ್ನು ಹಿಡಿದುಕೊಂಡು ಮುಖವನ್ನು ಅವರ ಹೊಟ್ಟೆಯ ಭಾಗಕ್ಕೆ ಒತ್ತಿ ಹಿಡಿದಿದ್ದೆ ನಾನು ಜೋರಾಗಿ ಅಳಬಾರದೆಂದು. ನನ್ನ ಮುಖದ ಮೇಲೆ ನಮ್ಮಮ್ಮನ ಸೀರೆಯ ಸೆರಗು ಮುಸುಕಾಗಿದ್ದು ಬಿಸಿಲು ಬೀಳುತ್ತಿರಲಿಲ್ಲ. ಸೀರೆಯ ಕೆಂಪನೆಯ ಬೆಳಕು ನಾನು ಕಣ್ಣು ಬಿಟ್ಟಾಗ ಕಾಣುತ್ತಿತ್ತು.
ಪ್ರಾಮಾಣಿಕ ಮತ್ತು ನಿಷ್ಟುರಿ ಕಂಡಕ್ಟರ್ ಎಷ್ಟೊಂದು ಮಾತುಗಳನ್ನು ಆಡುತ್ತಿದ್ದು ಕಿವಿಗಳಿಗೆ ಅಪ್ಪಳಿಸುತ್ತಿತ್ತು. ಇದ್ದಕ್ಕಿದ್ದಂತೆ ಇನ್ನೊಂದು ಗಂಡು ಮತ್ತು ಗಡಸು ಧ್ವನಿ ಕಂಡಕ್ಟರ್ ಮಾತುಗಳನ್ನು ತುಂಡರಿಸಿ ಕೇಳಿಸಿತು.
‘ಸಾಕು ನಿಲ್ಲಿಸಯ್ಯಾ ನಿನಗೆ ಮಾನ ಇಲ್ಲವಾ? ಹತ್ತು ಪೈಸೆಗೆ ಒಂದು ಹೆಂಗಸನ್ನ ಬೀದಿಯಲ್ಲಿ ನಿಲ್ಲಿಸಿಕೊಂಡು ಇಷ್ಟು ಮಾತಾಡ್ತಿದ್ದೀಯಲ್ಲಾ? ತಗೋ’ ಎಂದು ಅವರು ಎತ್ತಿ ಒಗೆದ ನಾಣ್ಯದ ಸದ್ದು ಕೇಳಿಸಿತು. ತಕ್ಷಣ ಸದ್ದಿನ ಕಡೆಗೆ ಕಣ್ಬಿಟ್ಟು ನೋಡಿದೆ. ಹತ್ತು ಪೈಸೆಯ ನಿಕ್ಕಲ್ಲಿನ ಟೊಣಪ ನಾಣ್ಯ.
ಅಲ್ಲಿಗೆ ನೆಮ್ಮದಿ. ಇನ್ನು ಈ ಕಂಡಕ್ಟರ್ ನಮ್ಮನ್ನು ಏನೂ ಮಾಡಲಾರ. ಬೈಯುವುದನ್ನು ನಿಲ್ಲಿಸಲೇ ಬೇಕು. ಸೆರಗಿನಿಂದ ಮುಖವನ್ನು ಹೊರಗೆ ತೆಗೆದೆ. ಅಮ್ಮನ ಕಡೆ ನೋಡಿದೆ. ಬೆವರು ಕಣ್ಣೀರು ಎಲ್ಲಾ ಬೆರೆತು ಆಗತಾನೇ ಮುಖ ತೊಳೆದುಕೊಂಡಿರುವಂತೆ ಕೆಂಪಗಾಗಿತ್ತು.
ನಾಣ್ಯ ಎಸೆದುಕೊಟ್ಟವರ ಕಡೆಗೆ ನೋಡಿದೆ. ಅಲ್ಲಿ ಎಷ್ಟೊಂದು ಜನ ಗಂಡಸರಿದ್ದರು. ಯಾರೆಂದು ಗುರುತು ಹಿಡಿಯಲಾಗಲಿಲ್ಲ. ನಂತರ ಅವರ್ಯಾರೂ ಏನೂ ಮಾತಾಡಲಿಲ್ಲ. ಅಮ್ಮ ಅವರನ್ನು ನೋಡಿದ್ದಿರಬಹುದು. ಆದರೆ ಅವರೂ ಏನೂ ಮಾತಾಡಲಿಲ್ಲ. ನನ್ನ ಕೈ ಹಿಡಿದುಕೊಂಡು ಮುಂದೆ ನಡೆದರು. ಇನ್ನೂ ಒಂದಷ್ಟು ದೂರ ನಾವು ನಡೆದು ಸಾಗಬೇಕಿತ್ತು. ಅಮ್ಮನ ಮುಖದಲ್ಲಿ ಮಾನ ಕಳೆದುಕೊಂಡಿರುವ ಕಳೆಯೇ ಇತ್ತು. ಒಂದು ವೇಳೆ ಸಂತೋಷ ಕಂಡಿದ್ದರೆ ನಾನು ಕೇಳುತ್ತಿದ್ದೆನೋ ಏನೋ, ‘ಅಮ್ಮಾ, ಯಾರು ಹತ್ತು ಪೈಸೆ ಕೊಟ್ಟಿದ್ದು?’ ಇತ್ಯಾದಿಗಳನ್ನೆಲ್ಲಾ ಮಾತಾಡಿಕೊಂಡು ಮನೆಯ ದಾರಿಯ ಶ್ರಮ ಮರೆಯಬಹುದಿತ್ತು. ಆದರೆ ಅವರ ಧುಮುಧುಮುಗುಟ್ಟುವ ಮುಖದಿಂದ ಯಾವ ಮಾತುಗಳೂ ಹೊರಡುವುದಿಲ್ಲ ಎಂದು ಸುಮ್ಮನೆ ನಡೆಯುತ್ತಿದ್ದೆ. ಹೊಟ್ಟೆ ಹಸಿಯುತ್ತಿತ್ತು. ಸುಸ್ತಾಗಿತ್ತು. ಕಾಲು ನೋವು ಎನ್ನಲಿಲ್ಲ. ಎತ್ತಿಕೋ ಎಂದೂ ಹೇಳಲಿಲ್ಲ.

ಸುಳ್ಳಿನ ಕತೆ
ನಾನು ಆಗ ನರ್ಸರಿ ಅಥವಾ ಒಂದನೇ ತರಗತಿ ಇದ್ದಿರಬಹುದು. ಏಕೆಂದರೆ ಚಾಮರಾಜಪೇಟೆ ಹಿಂದಿ ಸೇವಾ ಸಮಿತಿಯಲ್ಲಿ ನಾನು ಓದಿದ್ದು ಈ ಎರಡೇ ತರಗತಿಗಳು. ಆಗಲೇ ಯಾವಾಗಲೋ ಇದು ಆದದ್ದು. ಒಂದೇ ಶಾಲೆಗೆ ಹೋಗುವ ಬೇರೆ ಬೇರೆ ಮನೆಯ ಮಕ್ಕಳನ್ನು ಒಟ್ಟು ಮಾಡಿಕೊಂಡು ಕರೆದುಕೊಂಡು ಹೋಗುವ ಮತ್ತು ಕರೆದುಕೊಂಡು ಬರುವ ಕೆಲಸ ಕೌಸಲ್ಯಕ್ಕನದು. ಅವರಿಗೆ ತಿಂಗಳಿಗಿಷ್ಟು ಎಂದು ಕೊಡುವಷ್ಟು ಉತ್ಪತ್ತಿ ನಮ್ಮನೆಗೆ ಇಲ್ಲದಿದ್ದ ಕಾರಣದಿಂದ ಅಜ್ಜಿಯೋ ಅಮ್ಮನೋ ಶಾಲೆಗೆ ನನ್ನ ಕರೆದುಕೊಂಡು ಹೋಗುತ್ತಿದ್ದರು.
ಅಂದು ಶಾಲೆಗೆ ಅಮ್ಮ ಕರೆದುಕೊಂಡು ಹೋಗಲು ಸಿದ್ಧವಾಗುತ್ತಿದ್ದಾಗ ಶಿವಪೂಜೆ ಮಣೆಯ ಮೇಲೆ ಹತ್ತು ಪೈಸೆಯ ನಿಕ್ಕಲ್ ನಾಣ್ಯ ಕಾಣಿಸಿತು. ಎತ್ತಿ ಜೇಬಿಗೆ ಹಾಕಿಕೊಂಡೆ. ಅಲ್ಲಿ ಶಾಲೆಯ ಹೊರಗೆ ಅಜ್ಜಿಯೊಬ್ಬರು ಕಿತ್ತಳೆ ಹಣ್ಣುಗಳನ್ನು, ಚೇಪೇಕಾಯಿಗಳನ್ನು ಮಾರುತ್ತಾರೆ. ಕಿತ್ತಳೆ ಹಣ್ಣನ್ನು ನಡು ಮಧ್ಯೆ ಸೀಳಿ ಅದರಲ್ಲಿ ಉಪ್ಪುಕಾರ ಹಾಕಿ ಕೊಡುತ್ತಾರೆ. ಒಂದಕ್ಕೆ ಐದು ಪೈಸೆ. ಇವತ್ತು ಒಂದು ತಿನ್ನುತ್ತೇನೆ. ನಾಳೆ ಒಂದು ತಿನ್ನುವೆನು; ಇದು ನನ್ನ ಲೆಕ್ಕಾಚಾರ. ಸುಮಾರು ದಿನಗಳಿಂದ ಬಾಯಲ್ಲಿ ನೀರೂರಿಸುತ್ತಿದ್ದ ಕಿತ್ತಳೆಯ ಆಸೆಯನ್ನು ಅವತ್ತು ತೃಪ್ತಿಪಡಿಸಲು ದೃಢ ಸಂಕಲ್ಪ ಮಾಡಿದ್ದೆ. ಅದಕ್ಕೆ ಎಂದು ಹಣ ಕೇಳಿದರೆ ಖಂಡಿತ ಕೊಡುತ್ತಿರಲಿಲ್ಲ. ಮೊದಲನೆಯದಾಗಿ ಹಣದ ಕೊರತೆ. ಎರಡನೆಯದಾಗಿ ಬೀದಿಯಲ್ಲಿ ಮಾರುವ ತಿಂಡಿಗಳನ್ನು ಕೊಂಡು ತಿನ್ನುವುದನ್ನು ಎಂದೆಂದಿಗೂ ನಮ್ಮನೆಯಲ್ಲಿ ಪೆÇ್ರತ್ಸಾಹಿಸಿರಲಿಲ್ಲ.
ಅಮ್ಮ ನನ್ನನ್ನು ಶಾಲೆಯ ಆವರಣದಲ್ಲಿ ಬಿಟ್ಟರು. ಆಗಲೇ ಕೌಸಲ್ಯಕ್ಕನ್ನೂ ಮಕ್ಕಳನ್ನು ಬಿಟ್ಟಿದ್ದು, ಇಬ್ಬರೂ ಮಾತಾಡಿಕೊಂಡು ಹಿಂದಕ್ಕೆ ನಡೆದರು. ಅವರು ದಿಕ್ಕು ಬದಲಿಸುವುದನ್ನೇ ಕಾದಿದ್ದ ನಾನು ಕಿತ್ತಳೆ ಹಣ್ಣು ಮಾರುವ ಅಜ್ಜಿಯ ಬಳಿಗೆ ಓಡಿದೆ. ಅದೇ ಮೊಟ್ಟ ಮೊದಲು ನಾನು ಸ್ವತಂತ್ರವಾಗಿ ಹಣ ಕೊಟ್ಟು ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು. ಎಷ್ಟೋ ದಿನಗಳಿಂದ ಬರೀ ನೋಡಿಕೊಂಡೇ ಹೋಗುತ್ತಿದ್ದವನು ಕೊಂಡುಕೊಳ್ಳಲು ಸಂಪೂರ್ಣ ಸನ್ನದ್ಧನಾಗಿ, ಅರ್ಹನಾಗಿ ಬಂದಿರುವುದು.
ಗೋಣಿ ಚೀಲ ಹಾಸಿಕೊಂಡು ಕುಳಿತುಕೊಂಡಿದ್ದ ಅಜ್ಜಿಯ ಸುತ್ತಲೂ ಬಹಳ ಮಕ್ಕಳು ನೆರೆದಿದ್ದರು. ಸರಸರ ‘ನಿಂಗೇನು ಬೇಕು, ನಿಂಗೇನು ಬೇಕು?’ ಎಂದು ಕೇಳುತ್ತಾ ಎಲ್ಲರ ಬಳಿಯೂ ವ್ಯವಹರಿಸುತ್ತಿದ್ದ ಅಜ್ಜಿ ಅದೇ ಚುರುಕುತನದಲ್ಲಿ ಚಾಚಿದ್ದ ನನ್ನ ಕೈಯಿಂದ ಹತ್ತು ಪೈಸೆಯನ್ನು ಇಸಿದುಕೊಂಡು ತಾವು ಕುಳಿತುಕೊಂಡಿದ್ದ ಗೋಣೀ ಚೀಲದ ಮಡಿಕೆಯ ಕೆಳಗೆ ಹಾಕಿಕೊಂಡರು. ಮತ್ತೆ ಅವರಿವರಿಗೆ ಕೊಡುತ್ತಿದ್ದರು. ನಾನೂ ಕೇಳುತ್ತಿದ್ದೆ. ‘ಅಜ್ಜಿ, ನಂಗೆ ಒಂದು ಕಿತ್ತಳೆ ಹಣ್ಣು’ ಎಂದು ಪದೇ ಪದೇ ಕೇಳುತ್ತಿದ್ದೆ.
ನೆರೆದಿದ್ದ ಗುಂಪಿನ ಸಾಂದ್ರತೆ ಕಡಿಮೆಯಾದ ಮೇಲೆ ಅಜ್ಜಿಯ ಗಮನ ನನ್ನ ಕಡೆ ಹರಿಯಿತು.
‘ಅಜ್ಜಿ, ನನಗೆ ಒಂದು ಕಿತ್ತಳೆ ಹಣ್ಣು’ ಎಂದೆ.
ಅಜ್ಜಿ ಹಣ್ಣನ್ನು ಕೊಯ್ದು ಕೊಯ್ದು ತೇವವಾಗಿರುವ ಮತ್ತು ತೆಳುವಾಗಿರುವ, ಹಣ್ಣನ್ನು ಕುಯ್ಯುವಂತಹ ನಡುಭಾಗದಲ್ಲಿ ಕೊಂಚ ಬೆಳ್ಳಗಾಗಿರುವ ಆ ಕಬ್ಬಿಣದ ಚಾಕುವಿನಿಂದ ಕಿತ್ತಳೆ ಹಣ್ಣನ್ನು ಕೊಯ್ದು ಅದೇ ಚಾಕುವಿನ ತುದಿಯಿಂದ ಉಪ್ಪು ಮತ್ತು ಖಾರದ ಮಿಶ್ರಣವನ್ನು ಹಾಕಿ, ಸೀಳಿದ್ದ ಹಣ್ಣಿನ ಭಾಗಗಳನ್ನು ಮುಚ್ಚಿ ನನ್ನ ಕೈಗಿತ್ತರು.
‘ಕಾಸು ಕೊಡು’ ಎಂದರು ಅಜ್ಜಿ.
‘ಕೊಟ್ಟೆ’ ಎಂದೆ.
‘ಯಾವಾಗ ಕೊಟ್ಟೆ’ ಸರ್ರನೆ ಅಜ್ಜಿಯ ದನಿ ಮೇಲೇರಿತ್ತು.
‘ಆಗಲೇ ಕೊಟ್ಟೆ. ಹತ್ತು ಪೈಸೆ ಕೊಟ್ಟೆ’ ಎಂದೆ.
‘ಮೂತಿಗಾಗ್ತೀನಿ’ ಎಂದು ತಟ್ಟನೆ ಕಿತ್ತಳೆಹಣ್ಣನ್ನು ನನ್ನ ಕೈಯಿಂದ ಕಿತ್ತುಕೊಂಡು ‘ಆಗಲೇ ಕೊಟ್ಟನಂತೆ. ನಡೆಯೋ ಆ ಕಡೆ’ ಎಂದು ಆ ಕೊಯ್ದ ಹಣ್ಣನ್ನು ಬೇರೊಬ್ಬರಿಗೆ ಕೊಟ್ಟರು. ಆ ಹುಡುಗ ನನ್ನ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡವನ್ನು ನೋಡುವಂತೆ ಅಥವಾ ಸುಳ್ಳು ಹೇಳಿ ಸಿಕ್ಕಿಕೊಂಡವರನ್ನು ನೋಡುವಂತೆ ನೋಡುತ್ತಿದ್ದ. ಅವನ ನೋಟದಲ್ಲಿ ಎಂತಹ ತಾತ್ಸಾರ!
‘ಆ ಕಡೆ ಹೋಗು’ ಎಂದ ಅಜ್ಜಿಯ ದನಿ ಎಷ್ಟು ಕಠೋರ!
ಅದೆಷ್ಟು ಅದೃಷ್ಟಶಾಲಿಗಳು ಅರ್ಧ ಕತ್ತರಿಸಿದ ಕಿತ್ತಳೆಹಣ್ಣಿನ ಮೇಲೆ ಸವರಿರುವ ಉಪ್ಪು, ಕಾರ ಮಿಶ್ರಿತ ಹುಳಿಯನ್ನು ನೆಕ್ಕುತ್ತಾ ಹೋಗುತ್ತಿದ್ದರು.
ಅಜ್ಜಿಯ ತೀರಾ ಹತ್ತಿರ ಇದ್ದ ಕೆಲವರಷ್ಟೇ ನಾನು ಬೈಸಿಕೊಂಡು ಬಂದಿದ್ದನ್ನು ನೋಡಿದ್ದು. ಇನ್ನು ಜೋರಾಗಿ ಅತ್ತರೆ ಉಳಿದವರಿಗೂ ಗೊತ್ತಾಗತ್ತೆ. ತುಟಿಗಳನ್ನು ಬಿಗಿಯಾಗಿ ಹಿಡಿದುಕೊಂಡು ಅಳು ಹೊರಗೆ ಬರದಂತೆ ಬರುತ್ತಿದ್ದರೆ, ಸದ್ದೇನೋ ಬರುತ್ತಿಲ್ಲ ಆದರೆ ಕಣ್ಣಲ್ಲಿ ನೀರು ಬರುತ್ತಿದೆ. ಆದರೂ ಬೇಗ ಬೇಗನೆ ಶಾಲೆಯ ಆವರಣದೊಳಗೆ ಹೊರಟು ಹೋದೆ.
ಗೇಟಿನ ಬಳಿ ನಿಂತುಕೊಂಡಿರುವ ವಾಚ್ ಮ್ಯಾನ್ ‘ಯಾಕಪ್ಪಾ ಅಳ್ತಿದ್ದೀಯಾ?’ ಎಂದು ಕೇಳಿದ್ದರು. ನಾನೇನೂ ಹೇಳಲಿಲ್ಲ. ಏಕೆಂದರೆ ಹೇಳಲು ಅಲ್ಲೇನೂ ಇರಲಿಲ್ಲ. ಏನೇ ಹೇಳಲು ಬಾಯ್ತೆರೆದರೂ ಮಾತಿನ ಬದಲು ಅಳುವೇ ಜೋರಾಗಿ ಬಂದಿರುತ್ತಿತ್ತು. ಉಳಿದವರೆಲ್ಲರ ಮುಂದೆ ನಾನೊಬ್ಬ ಕಿತ್ತಳೆಹಣ್ಣಿಗಾಗಿ ಸುಳ್ಳು ಹೇಳಿದವನಾಗಬೇಕಿತ್ತು. ಅವರೆಲ್ಲಾ ದೊಡ್ಡವರನ್ನೇ ನಂಬುವುದು. ನನ್ನ ಹಿಂದೆ ಬರುತ್ತಿದ್ದ ಹುಡುಗ, ಅದೇ; ಅಜ್ಜಿ ನನ್ನ ಕೈಯಿಂದ ಹಣ್ಣನ್ನು ಕಿತ್ತು ಇನ್ನೊಬ್ಬ ಹುಡುಗನಿಗೆ ಕೊಟ್ಟರಲ್ಲಾ, ಆ ಹುಡುಗ ಬರುತ್ತಿದ್ದ. ಅವನು ವಾಚ್ಮ್ಯಾನ್ ನನ್ನ ‘ಯಾಕಳ್ತಿದ್ದೀಯಾ?’ ಎಂದು ಕೇಳಿದ್ದನ್ನು ಕೇಳಿಸಿಕೊಂಡಿರದಿದ್ದರೆ ಸಾಕು. ಆಗಲೇ ನನ್ನ ತಾತ್ಸಾರವಾಗಿ ಕಂಡವನು ಖಂಡಿತ ನನ್ನ ಸುಳ್ಳಿನ ಕತೆ ಹೇಳ್ತಾನೆ. ತರಗತಿಯಲ್ಲಿ ಎಷ್ಟು ಬೇಗಬೇಗ ಕಣ್ಣೀರನ್ನು ಒರೆಸಿಕೊಂಡು ಮುಖ ಒಣಗುವಂತೆ ಮಾಡಿಕೊಂಡರೂ ಮತ್ತೆ ಮತ್ತೆ ಬಳಬಳನೆ ಕಣ್ಣಿಂದ ಬಿಸಿಬಿಸಿ ನೀರು ಸುರಿಸುರಿದು ಕೆನ್ನೆಗಳನ್ನು ಒದ್ದೆ ಮಾಡಿಬಿಡುತ್ತಿತ್ತು. ಅಂತೂ ಇಂತೂ ಟೀಚರ್ಗೆ ಮತ್ತು ಇತರರಿಗೆ ನನ್ನ ಅತ್ತಿರುವ ಮುಖ ಕಾಣದಿರುವಂತೆ ಹೇಗೋ ನಿಭಾಯಿಸುತ್ತಿದ್ದೆ. ಸ್ಲೇಟಿನ ಮೇಲೆ ಅದೇನೋ ತಿದ್ದಲು ಕೊಟ್ಟಿದ್ದರು. ತಿದ್ದುತ್ತಿದ್ದೆ.
ತರಗತಿಯ ಬಾಗಿಲಲ್ಲಿ ಯಾರೋ ದೊಡ್ಡವರು ಬಂದು ಟೀಚರ್ ಜೊತೆ ಮಾತಾಡುತ್ತಿದ್ದರು. ನೆರಳು ಯಾರದ್ದೋ ಅನ್ನಿಸಿತು. ಆದರೆ ಧ್ವನಿ ನಮ್ಮಮ್ಮನದು ಅನ್ನಿಸಿತು. ನೋಡಿದೆ. ಅಮ್ಮನೇ.
ಟೀಚರ್ ನನ್ನ ಕಡೆ ನೋಡಿ ‘ಬಾ’ ಎಂದರು. ಸ್ಲೇಟು ಮತ್ತು ಬಳಪ ಹಿಡಿದುಕೊಂಡೇ ಹೋದೆ. ಅವೆರಡನ್ನೂ ನನ್ನ ಕೈಯಿಂದ ಇಸಿದುಕೊಂಡ ಟೀಚರ್ ‘ಹೋಗು, ಅಮ್ಮ ಏನೋ ಹೇಳಕ್ಕೆ ಬಂದಿದ್ದಾರೆ’ ಎಂದು ತರಗತಿಯಲ್ಲಿ ಇತರ ಮಕ್ಕಳ ಕಡೆಗೆ ತಿರುಗಿದರು.
ಅದು ಹೇಳಕ್ಕಲ್ಲ ಬಂದಿದ್ದಿದ್ದು, ಕೇಳಕ್ಕೆ. ಉದಾಪ್ರ
‘ಮನೇಲಿ ಶಿವಪೂಜೆ ಮಣೆ ಮೇಲೆ ಇಟ್ಟಿದ್ದ ಹತ್ತು ಪೈಸೆ ತಗೊಂಡಾ?’
ಏನೂ ಹೇಳಲಿಲ್ಲ. ತಲೆ ಎತ್ತಿ ಅಮ್ಮನ ಮುಖವನ್ನೇ ನೋಡುತ್ತಿದ್ದೆ.
‘ತಗೊಂಡಾ? ಇಲ್ವಾ?’
ಹೌದು ಎಂಬಂತೆ ತಲೆಯಾಡಿಸಿದೆ.
‘ಕೊಡು’ ಎಂದು ಕೈ ಚಾಚಿದರು ಅಮ್ಮ.
ಇಲ್ಲವೆಂಬಂತೆ ತಲೆಯಾಡಿಸಿದೆ.
‘ಕೊಡಲ್ವಾ?’ ಎಂದ ಅಮ್ಮನಲ್ಲಿ ಸ್ವಲ್ಪ ಕೋಪ ಬಂದಿರುವ ಚಹರೆ ಕಾಣಿಸತೊಡಗಿತು.
‘ಇಲ್ಲ’ ಎನ್ನುವಷ್ಟರಲ್ಲಿ ಅಳು ಬಂದುಬಿಟ್ಟಿತ್ತು.
‘ತಿಂದುಬಿಟ್ಟಾ?’ ಎಂದು ಕೇಳಿದರು ಅಮ್ಮ.
ಇಲ್ಲವೆಂಬಂತೆ ತಲೆಯಾಡಿಸಿದೆ.
‘ಮತ್ತೆ ಎಲ್ಲಿ ಕಾಸು?’
‘ಅಜ್ಜಿ ಹತ್ತಿರ ಇದೆ.’
‘ಯಾವ ಅಜ್ಜಿ?’
‘ಕಿತ್ತಳೆಹಣ್ಣು ಮಾರೋ ಅಜ್ಜಿ.’
‘ನೀನು ಕಿತ್ತಳೆಹಣ್ಣು ತಿನ್ನಲಿಲ್ಲವಾ?’
‘ಇಲ್ಲ.’
‘ಮತ್ತೆ? ಆ ಅಜ್ಜಿಯ ಹತ್ತಿರ ಕಾಸು ಕೊಟ್ಟು ಇಟ್ಟಿದ್ದೀಯಾ?’ ಎಂದ ಅಮ್ಮ ಟೀಚರ್ ಹತ್ತಿರ ಅಪ್ಪಣೆ ಪಡೆದುಕೊಂಡು ನನ್ನ ಅಜ್ಜಿಯ ಹತ್ತಿರ ಕರೆದುಕೊಂಡು ಹೋದರು.
‘ನಾನು ಅಜ್ಜಿಗೆ ಕಾಸು ಕೊಟ್ಟೆ. ಅಜ್ಜಿ ಕಿತ್ತಳೆ ಹಣ್ಣು ಕೊಡಲಿಲ್ಲ’ ಎಂದೆ.
‘ಅಜ್ಜಿ, ನಿಮಗೆ ಇವನು ಹತ್ತು ಪೈಸೆ ಕೊಟ್ಟನಂತೆ?’ ಎಂದರು ಅಮ್ಮ.
‘ಅವನು ಯಾವುದೂ ಕೊಡಲಿಲ್ಲ’ ಎಂದ ಅಜ್ಜಿ ಬೇರೆಯವರ ಜೊತೆ ವ್ಯಾಪಾರದಲ್ಲಿ ತೊಡಗಿದ್ದರು.
‘ಇವನು ನಿಮಗೆ ಕಾಸು ಕೊಟ್ಟನಂತೆ. ನೀವು ಅವನಿಗೆ ಕಿತ್ತಳೆಹಣ್ಣು ಕೊಡಲಿಲ್ಲವಂತೆ. ಈಗ ನಮಗೆ ಕಿತ್ತಳೆ ಹಣ್ಣು ಬೇಡ. ಕಾಸು ವಾಪಸ್ಸು ಕೊಡಿ’ ಎಂದು ಅಮ್ಮ ಅಜ್ಜಿಗೆ ಹೇಳಿದರು.
‘ಹಾಕು ಅವನ ಮೂತಿಗೆ. ಆಗಲೇನೂ ಹೀಗೇ ನನ್ನ ಹತ್ತಿರ ಸುಳ್ಳು ಹೇಳಿದ. ಇವತ್ತು ಹತ್ತು ಪೈಸಕ್ಕೆ ಇಷ್ಟು ಸುಳ್ಳು ಹೇಳೋನು ನಾಳೆ ಇನ್ನೇನೇನಿಕ್ಕಲ್ಲಾ ಸುಳ್ಳು ಹೇಳ್ತಾನೆ. ಮೂತಿಗೆ ಬರೆ ಹಾಕಿ ಆ ಚಾಳಿ ಬಿಡಿಸು’ ಎಂದರು ಅಜ್ಜಿ.
ಅಲ್ಲಿಯೇ ತಲೆಗೆರಡು ಮೊಟಕಿದರು ಅಮ್ಮ. ಶಾಲೆಗೆ ವಾಪಸ್ಸು ಕರೆದುಕೊಂಡು ಬರುತ್ತಾ ‘ಏನು ಮಾಡಿದೆ ಆ ಕಾಸ್ನಾ? ಏನು ತಿಂದೆ? ನಾನು ಒಂದೊಂದು ಪೈಸ ಪೈಸಕ್ಕೂ ಒದ್ದಾಡಿಕೊಂಡು ಏನೇನಿಕ್ಕೋ ಇಟ್ಕೊಂಡಿರ್ತೀನಿ. ಹೇಳ್ದೇ ಕೇಳ್ದೇ ಎತ್ತಿಕೊಂಡು ಬಂದು ಹಾಳು ಮಾಡಿಬಿಡು.’
‘ನಾನು ಅಜ್ಜಿಗೆ ಕೊಟ್ಟೆ.’ ಎಂದೆ ಅಳುತ್ತಾ.
‘ಹೂ ಕೊಟ್ಟೆ. ನಿನ್ನ ಹತ್ತು ಪೈಸೆಗೆ ಆ ಅಜ್ಜಿ ಸುಳ್ಳು ಹೇಳ್ತಾರೆ ಅಲ್ವಾ?’ ಎಂದು ಬೈದುಕೊಂಡೇ ತೋಳು ಹಿಡಿದುಕೊಂಡು ತರಗತಿಯವರೆಗೂ ಬಂದರು. ಅದು ಬರೀ ತೋಳು ಹಿಡಿದುಕೊಳ್ಳುವುದಲ್ಲ. ಅವರ ಬಿಗಿಮುಷ್ಟಿಯಲ್ಲಿ ನನ್ನ ತೋಳು ಹಿಂಡಿಹೋಗಿ, ಬೆರಳುಗಳ ತುದಿಯಲ್ಲಿ ಗಿಲ್ಲುವುದು, ಶುಂಟಿ ಕೊಡುವುದು. ತರಗತಿಯ ಮುಂದೆ ನನ್ನ ಬಿಟ್ಟು ಬಿಡದ ಬಾಯಿಯ, ಕಚ್ಚಿದ್ದ ಹಲ್ಲುಗಳ ಸಂದಿಯಿಂದ ನನಗೆ ಮಾತ್ರ ಕೇಳಿಸಿದ್ದರು, ‘ಬಾ ಸಾಯಂಕಾಲ ಮಾಡ್ತೀನಿ.’
ಶಾಲೆಯಲ್ಲಿ ಸಂಜೆ ಹೋದ ಮೇಲೆ ಎದುರಿಸಬೇಕಾದ ದೌರ್ಭಾಗ್ಯವನ್ನೇ ಯೋಚಿಸಿಕೊಂಡು ದಿನವಿಡೀ ಹೇಗೆ ಕಳೆದೆನೋ. ನೆನಪಿಲ್ಲ.

ಶಾಂತಿಯ ಮಾರ್ಗದ ಕತೆ

ಹಾದಿ ಬೀದಿಯಲ್ಲಿ ಮಾರುವುದನ್ನು ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದ ಅಜ್ಜಿ ನಿಯಮವನ್ನು ಸಡಿಲ ಮಾಡುತ್ತಿದ್ದದ್ದು ‘ಹಾಲಿನ ಐಸ್ ಕ್ರೀಂ’ ಕೊಳ್ಳುವುದಕ್ಕೆ ಮಾತ್ರ. ಪುಟ್ಟಪುಟ್ಟ ಮೂರು ಚಕ್ರದ ಐಸ್ ಡಬ್ಬದಲ್ಲಿ ಬಣ್ಣ ಬಣ್ಣದ ಐಸ್ ಕ್ಯಾಂಡಿಗಳನ್ನು ಮಾರುತ್ತಾ ಬರುತ್ತಿದ್ದರು. ಡಬ್ಬವನ್ನು ಹಿಡುಕೊಂಡು ತಳ್ಳುವ ಮರದ ಹಿಡಿಕೆಗಳಿಗೆ ಚಿಕ್ಕ ಗಂಟೆಯನ್ನು ಕಟ್ಟಿದ್ದು, ಅದರ ನಾಲಿಗೆಗೆ ದಾರ ಕಟ್ಟಿ ಎಳೆದು ಸದ್ದು ಮಾಡುತ್ತಾ ಐಸ್ ಕ್ಯಾಂಡಿಯವರು ಬರುತ್ತಿದ್ದರು. ‘ಐಸ್ ಕಿರೀಮ್’ ಅಥವಾ ‘ಐಸ್ ಐಸ್’ ಎಂದೂ ಮೊಳಗುವ ಗಂಟೆಯ ಜೊತೆಗೆ ಕೂಗುತ್ತಿದ್ದರು.
ನಾಲಿಗೆಗೆ ಬಣ್ಣ ಮೆತ್ತಿಕೊಳ್ಳುವಂತಹ ಕಿತ್ತಳೆ, ಮಾವಿನ, ದ್ರಾಕ್ಷಿಯ ಯಾವುದೇ ಐಸ್ಕ್ಯಾಂಡಿ ನಿಷಿದ್ಧವಾಗಿತ್ತು. ಬೆಳ್ಳಗಿನ ಹಾಲಿನ ಐಸ್ ಕ್ರೀಂ ನನಗೇನೂ ಇಷ್ಟವಿಲ್ಲದಿದ್ದರೂ, ಅದೊಂದನ್ನೇ ಕೊಳ್ಳುವ ಅನುಮತಿ ಇದ್ದುದರಿಂದ ಅದನ್ನಾದರೂ ಕೊಳ್ಳುವ ಇಷ್ಟಪಡುತ್ತಿದ್ದೆ. ಹಾಗೆಂದು ಸದಾ ಸಿಕ್ಕುಬಿಡುವ ವಸ್ತುವೂ ಅದಾಗಿರಲಿಲ್ಲ. ಅದನ್ನು ಕೊಳ್ಳುವ ಕಾಲ ಬೇಸಿಗೆಯೇ ಆಗಿರಬೇಕು. ಒಮ್ಮೆ ಕೊಂಡಿದ್ದರೆ ಕನಿಷ್ಟ ಪಕ್ಷ ಒಂದು ವಾರದ ಅಂತರವಾದರೂ ಇರಬೇಕು. ಆ ಕಾಲಾಂತರಕ್ಕೆ ಸರಿಯಾಗಿ ಅಂದು, ಐಸ್ ಕ್ರೀಂ ಗಾಡಿಯ ಗಂಟೆಯ ಸದ್ದು ಕೇಳಿದ ಸಮಯಕ್ಕೆ ಕಾಸಿರಬೇಕು. ಆಗ ಹಾಲೈಸ್ ಲಭ್ಯ.
ಅದೊಂದು ಬೇಸಿಗೆಯ ಶುಕ್ರವಾರದ ರಾತ್ರಿ. ರೇಡಿಯೋದಲ್ಲಿ, ಬೋಲೆ ಬಿಸ್ರೇ ಗೀತ್ ವಿವಿಧ ಭಾರತಿಯಲ್ಲಿ ಬರುತ್ತಿದ್ದ ಸಮಯ. ಹೊರಗೆ ‘ಐಸ್ ಐಸ್’ ಎಂದು ಕೂಗುತ್ತಾ ಗಂಟೆ ಬಾರಿಸಿಕೊಂಡು ಹೋಗುವುದು ಕೇಳಿಸಿತು.
‘ಅಮ್ಮಾ, ಹಾಲೈಸ್ ತಗೋತೀನಿ’ ಎಂದೆ.
‘ಬೇಡ. ರಾತ್ರಿ ಆಗಿದೆ. ಇಷ್ಟು ಹೊತ್ತಲ್ಲಿ ಬೇಡ. ಯಾವಾಗಾದ್ರೂ ಮಧ್ಯಾಹ್ನ ಕೊಡಿಸ್ತೀನಿ’ ಎಂದು ಅಜ್ಜಿ ಹೇಳಿದರು.
‘ಬೇಡ. ನಾನು ಈಗಲೇ ಕೊಡ್ಸು’ ಎಂದು ನಾನು ಹೊರಗೆ ಓಡಿದೆ, ಏನೋ ಅವರು ನನ್ನ ಹಿಂದೆಯೇ ಬಂದು, ಹಣ ತಂದು ಕೊಟ್ಟು ಬೇಕಾದ್ದನ್ನು ಕೊಡಿಸಿರುವ ಅನುಭವವಿದ್ದಂತೆ.
ನಾನೂ ಹಾಗೆ ಓಡಿರಲಿಲ್ಲ. ನನ್ನ ಹಿಂದೆ ಅಜ್ಜಿಯೂ ಹಣ ತೆಗೆದುಕೊಂಡು ಬರಲಿಲ್ಲ.
‘ಹಾಲೈಸು ಎಷ್ಟು?’ ಎಂದು ಕೇಳಿದೆ.
‘ಹತ್ತು ಪೈಸ’ ಐಸ್ ಕ್ಯಾಂಡಿ ಗಾಡಿಯವರು ತಮ್ಮ ವ್ಯಾಪಾರದಲ್ಲಿ ನಿರತರಾಗಿದ್ದರು. ಒಂದೆರಡು ಸಲ ಮನೆಯ ಕಡೆ ನೋಡಿದೆ. ಯಾರೂ ಬರುವ ಸೂಚನೆ ಕಾಣಲಿಲ್ಲ. ನಾನೇ ಮನೆಗೆ ಓಡಿದೆ.
‘ಬರೀ ಹತ್ತೇ ಪೈಸ. ಕೊಡು ತಗೊಳ್ತೀನಿ’ ಎಂದು ದುಂಬಾಲು ಬಿದ್ದವನಿಗೆ ಪಟ್ಟನೆ ಒಂದು ಕೊಟ್ಟ ಅಜ್ಜಿ, ‘ಸುಮ್ಮನೆ ಊಟ ಮಾಡಿ ಮಲಗು. ಜಾಸ್ತಿ ಹಟ ಮಾಡಿದರೆ ಏಟು ಬೀಳತ್ತೆ’ ಎಂದು ಕಣ್ಣಗಲಿಸಿ ದುರುಗುಟ್ಟಿ ನೋಡಿದರು.
ಮೌನವಾಗಿಯೇ ಊಟ ಮಾಡುತ್ತಿದ್ದ ನನಗೆ ‘ಐಸ್ ಐಸ್’ ಎಂದು ಕೂಗುತ್ತಿದ್ದ ದನಿಯೂ, ಮಧ್ಯೆ ಮಧ್ಯೆ ಮೊಳಗುತ್ತಿದ್ದ ಗಂಟೆಯೂ ದೂರದೂರ ಹೋಗುತ್ತಿತ್ತು. ಅದೆಷ್ಟೇ ದೂರ ಹೋಗಿದ್ದರೂ ನಮ್ಮನೆಯ ಸುತ್ತಮುತ್ತಲೇ ಅಲ್ಲೆಲ್ಲೋ ಇದ್ದುದ್ದಂತೂ ನಿಜ. ಆಗಲೂ ಕಾಸು ಕೊಟ್ಟಿದ್ದರೆ ಹೊರಗೆ ಓಡಿ ಹೋಗಿ ತರಬಹುದಾಗಿರುವಷ್ಟೇ ದೂರದಲ್ಲೇ ಅವರು ಓಡಾಡುತ್ತಿದ್ದರು ಎಂದು ಧ್ವನಿ ಪೂರ್ತಿ ಮಾಸಿಲ್ಲದಿರುವುದರಿಂದ ಗೊತ್ತಾಗುತ್ತಿತ್ತು.
ಪಕ್ಕಕ್ಕೆ ತಿರುಗಿ ಮಲಗಿದ್ದವನ ಮೇಲೆ ಹೊದಿಕೆಯನ್ನು ಸರಿಪಡಿಸಲು ಬಂದ ಅಜ್ಜಿ ನಾನಿನ್ನೂ ಎದ್ದಿರುವುದೂ, ಮತ್ತು ಕಣ್ಣುಗಳಿಂದ ನೀರು ಸುರಿಯುತ್ತಿರುವುದನ್ನೂ ನೋಡಿದರು.
‘ಯಾಕೆ?’
ನಾನು ಉತ್ತರಿಸಲಿಲ್ಲ.
‘ಹಾಲೈಸಾ?’
ಅವರಿಗೆ ಗೊತ್ತು. ಆದರೂ ಕೇಳುತ್ತಾರೆ. ನಾನೇಕೆ ಹೇಳಬೇಕು? ನಾನೇನೂ ಹೇಳಲಿಲ್ಲ. ಅಳು ಮುಂದುವರಿಯಿತು. ಅಜ್ಜಿ ಹೊರಟು ಹೋದರು. ಮತ್ತೆ ಕೆಲವೇ ಸೆಕೆಂಡುಗಳಲ್ಲಿ ವಾಪಸ್ಸು ಬಂದರು.
‘ತಗೋ’ ಹತ್ತು ಪೈಸೆಯ ಟೊಣಪ ನಿಕ್ಕಲ್ ನಾಣ್ಯವನ್ನು ನನ್ನ ಕೈಗಿಟ್ಟರು ಅಜ್ಜಿ.
‘ನಾಳೆ ಬಂದಾಗ ತಗೋ’ ಕಣ್ಣೀರೊರೆಸಿ, ಹಣೆಗೆ ಮುತ್ತನ್ನು ಕೊಟ್ಟು, ಹೊದಿಕೆಯನ್ನು ಮುಖದವರೆಗೂ ಎಳೆದು ನಾನು ನಿದ್ರಿಸಲು ಅನುವಾಗುವಂತೆ ಬೆಚ್ಚಗೆ ತಟ್ಟುತ್ತಾ ಸ್ವಲ್ಪ ಹೊತ್ತು ಹಾಗೆಯೇ ಪಕ್ಕದಲ್ಲಿ ಕುಳಿತಿದ್ದರು.
ಮರುದಿನ ಹಾಲೈಸ್ ತಿನ್ನಲು ರಾತ್ರಿ ಯಾವಾಗ ನಿದ್ರೆ ಬಂದಿತೋ ನೆನಪಿಲ್ಲ.
ಶನಿವಾರ ‘ಮಾರ್ನಿಂಗ್ ಕ್ಲಾಸು.’ ಬೆಳಗ್ಗೆಯೇ ಶಾಲೆಗೆ ಹೋಗಬೇಕು. ಮಧ್ಯಾಹ್ನ ಹನ್ನೆರಡು ಗಂಟೆಗೆಲ್ಲಾ ಮನೆಗೆ ವಾಪಸ್ಸಾಗುವುದು.
ಸೋದರ ಮಾವನೂ ಕೆಲಸಕ್ಕೆ ಹೋಗುವ ಸಮಯವೂ ಅದಾದ್ದರಿಂದ ‘ಬೇಗ ಬಾ ಬೇಗ ಬಾ’ ಎಂದು ಆತುರಿಸುತ್ತಿದ್ದ. ಓಡಿದ್ದೆ, ಹತ್ತು ಪೈಸೆ ರಾತ್ರಿ ಹಾಕಿಕೊಂಡಿದ್ದ ಚೆಡ್ಡಿಯಲ್ಲಿಯೇ ಬಿಟ್ಟು.
ತರಗತಿಯಲ್ಲಿ ಮನೆಯಲ್ಲಿ ಬಿಟ್ಟು ಬಂದ ಹತ್ತು ಪೈಸೆ ಮತ್ತು ಹಾಲೈಸಿನದೇ ಯೋಚನೆ. ದೊಡ್ಡ ಬೇಸರದ ವಿಷಯವೆಂದರೆ ಶಾಲೆ ಬಿಟ್ಟ ಮೇಲೆ ಖಂಡಿತವಾಗಿ ಐಸ್ ಗಾಡಿಗಳು ಶಾಲೆಯ ಮುಂದಿರುತ್ತವೆ. ಆದರೆ ನನ್ನ ಬಳಿ ಕಾಸಿರುವುದಿಲ್ಲ. ಮನೆಗೆ ಹೋದ ಮೇಲೆ ನನ್ನ ಹತ್ತಿರ ಕಾಸಿರುತ್ತದೆ. ಆದರೆ ಐಸ್ ಗಾಡಿ ಬರುತ್ತದೋ ಇಲ್ಲವೋ ಗ್ಯಾರಂಟಿ ಇಲ್ಲ.
‘ಥೂ, ಎಲ್ಲಾ ಅವನಿಂದಲೇ ಆಗಿದ್ದು’ ನನ್ನ ಮಾವ ಬೇಗ ಬಾ ಬೇಗ ಬಾ ಎಂದು ಆತುರಿಸಿರದಿದ್ದರೆ ನಾನು ಖಂಡಿತ ಹತ್ತು ಪೈಸೆ ಜೇಬಿನಲ್ಲಿಟ್ಟುಕೊಂಡು ಬರುತ್ತಿದ್ದೆ.
ಹೌದು, ನಾನೆಂದುಕೊಂಡಂತೆ ಐಸ್ ಕ್ರೀಂ ಗಾಡಿಗಳು ಶಾಲೆಯ ಮುಂದೆ ಇದ್ದವು. ನನ್ನ ಕರೆದುಕೊಂಡು ಹೋಗಲು ಬಂದಿದ್ದ ಅಮ್ಮನನ್ನು ಕೇಳಿದೆ. ‘ಅಜ್ಜಿ ಹಾಲೈಸ್ ತಗೊಳಕ್ಕೆ ಕಾಸು ಕೊಡ್ತಾ?’
‘ಇಲ್ಲ.’
‘ನಿನ್ನ ಹತ್ತಿರ ಇಲ್ವಾ?’
‘ಇಲ್ಲ.’
‘ಯಾವಾಗ್ಲೂ ಇಲ್ಲ ಇಲ್ಲ ಅನ್ನೋರ ಮನೆಯಲ್ಲಿ ಹುಟ್ಟಬಾರದು. ಥೂ’ ಹಾಗಂತ ಹೊರಗೆ ಹೇಳೋ ಧೈರ್ಯ ಇರಲಿಲ್ಲ. ಆದರೆ ಒಳಗೆ ಅದೆಷ್ಟು ಸಲ ಹೇಳಿಕೊಂಡಿದ್ದೆನೋ.
ಮನೆಗೆ ಹೋದ ಮೇಲೆ ರಾತ್ರಿ ಬಿಚ್ಚಿ ಹಾಕಿದ್ದ ಚಡ್ಡಿಗಾಗಿ ನೋಡಿದೆ. ಅದು ಅಲ್ಲಿರಲಿಲ್ಲ. ಒಗೆಯಲು ತೆಗೆದುಕೊಂಡಿದ್ದರು.
‘ಅಮ್ಮಾ, ನನ್ನ ಹತ್ತು ಪೈಸೆ ಎಲ್ಲಿ?’ ಎಂದು ಅಜ್ಜಿಯನ್ನು ಕೇಳಿದೆ.
‘ಅಲ್ಲೇ ಗೂಡಲ್ಲಿ ಇಟ್ಟಿದ್ದೀನಿ. ತಗೋ’ ಎಂದರು ಅಜ್ಜಿ.
ಗೂಡಿನಲ್ಲಿಟ್ಟಿದ್ದ ಹತ್ತು ಪೈಸೆ ಮತ್ತೆ ನನ್ನ ಚೆಡ್ಡಿ ಜೇಬು ಸೇರಿತು.
ಆದರೆ ಐಸ್ ಗಾಡಿ ಬರ್ತಾನೇ ಇಲ್ಲ. ‘ಐಸ್ ಐಸ್’ ಅನ್ನೋ ಕೂಗೂ ಇಲ್ಲ. ಗಂಟೆಯ ಸದ್ದೂ ಇಲ್ಲ. ಹೊರಗೆ ಹೋಗಿ ವಠಾರದ ಆಚೆ ಒಂದಿಷ್ಟು ಓಡಾಡಿಕೊಂಡೂ ಬಂದೆ. ಯಾರಾದರೂ ಐಸ್ ಗಾಡಿಯವರು ಸದ್ದಿಲ್ಲದೇ ಬಂದು ಹೋಗಿಬಿಟ್ಟರೆ? ಅಥವಾ ಅವರು ಬಂದು ಕೂಗಿದ್ದರೂ, ಗಂಟೆ ಬಾರಿಸಿದ್ದರೂ ಬಸ್ಸು ಅಥವಾ ಲಾರಿ ಓಡಾಡುವ ಸದ್ದಿನಲ್ಲಿ ನನಗೆ ಕೇಳಿಸದೇ ಹೋಗಿದ್ದರೆ?
ಇಲ್ಲ, ಬರಲಿಲ್ಲ. ಗಂಟೆ ನಾಲ್ಕಾಯಿತು. ಅಯ್ಯೋ, ಈ ಐಸ್ ಗಾಡಿ ರಾತ್ರಿ ಆಗೋ ಮುಂಚೆ ಬರಲಿ. ಇಲ್ಲಾಂದ್ರೆ ರಾತ್ರಿ ಆಯ್ತು. ಇಷ್ಟು ಹೊತ್ತಲ್ಲಿ ಐಸ್ ಬೇಡಾಂತ ಅದು ಮತ್ತೆ ನಾಳೆಗೆ ತಳ್ಳುತ್ತಾರೆ ಅಂತ ನನ್ನ ಒದ್ದಾಟ.
ನಾಲ್ಕೂವರೆಯಾಯ್ತು ಐಸ್ ಗಾಡಿಯ ಸುಳಿವಿಲ್ಲ. ಸುಮಾರು ಐದು ಗಂಟೆಯ ಹೊತ್ತಿಗೆ ಮನೆಯ ಮುಂದೆ ಇಬ್ಬರು ಮಧ್ಯವಯಸ್ಸಿನ ಹೆಂಗಸರು ಬಂದು ನಿಂತಿದ್ದರು. ತುಂಬಾ ಅಚ್ಚುಕಟ್ಟಾಗಿ ಸೀರೆಯನ್ನುಟ್ಟುಕೊಂಡು ಬಹಳ ಶುಭ್ರವಾಗಿ ನಿಂತಿದ್ದ ಅವರು ನಮಗೆ ಬಹುಕಾಲದ ಪರಿಚಯಸ್ಥರಂತೆ ನಗೆಯನ್ನೂ ಬೀರುತ್ತಿದ್ದರು.
‘ನಮಸ್ಕಾರ ಅಮ್ಮಾ’ ನಡುಕೋಣೆಯಲ್ಲಿ ಅಕ್ಕಿ ಜರಡಿ ಹಿಡಿಯುತ್ತಿದ್ದ ಅಜ್ಜಿಗೆ ಅವರು ವಂದಿಸಿ ಹೇಳಿದರು, ‘ನಾವು ಸತ್ಯವೇದ ಶಾಲೆಯಿಂದ ಬಂದಿದ್ದೇವೆ.’
‘ಏನದು?’ ಅಜ್ಜಿ ಕೇಳಿದರು.
‘ಬೈಬಲ್ ಸೊಸೈಟಿ ಆಫ್ ಇಂಡಿಯಾ. ಮಹಾತ್ಮ ಗಾಂಧಿ ರಸ್ತೆಯಲ್ಲಿದೆ. ನಾನು ಯೇಸುಕ್ರಿಸ್ತನ ಜೀವನ ಮತ್ತು ಬೋಧನೆಯನ್ನು ತಿಳಿಯದವರಿಗೆ ತಿಳಿಸುತ್ತಿದ್ದೇವೆ’ ಎನ್ನುತ್ತಾ ತಮ್ಮ ಕೈಯಲ್ಲಿರುವ ಪುಸ್ತಕದ ಕಟ್ಟುಗಳಲ್ಲಿ ಒಂದು ಪುಸ್ತಕ ತೆಗೆದರು, ‘ಇದು ಶಾಂತಿಯ ಮಾರ್ಗ ಅಂತ. ದೇವರ ಪುತ್ರರಾಗಿರುವ ಯೇಸುಸ್ವಾಮಿ ನಮಗೆ ಬೆಳಕಾಗಿದ್ದಾರೆ. ಶಾಂತಿಯ ಮಾರ್ಗವಾಗಿದ್ದಾರೆ. ಇದರಲ್ಲಿ ಎಲ್ಲಾ ಕತೆಗಳು, ಬೋಧನೆಗಳು ಇವೆ. ತಗೊಳ್ಳಿ.’ ಸುಮಾರು ನೂರೈವತ್ತರಿಂದ ಇನ್ನೂರು ಪುಟಗಳಿರಬಹುದಾದ ಆ ಪುಸ್ತಕ ಮೇಲೆ ಗುಲಾಬಿಯ ಚಿತ್ರವೂ, ಶಾಂತಿಯ ಮಾರ್ಗ ಎಂದೂ ಮುದ್ರಿತವಾಗಿತ್ತು.
ಅಜ್ಜಿ ತಮ್ಮ ಎರಡೂ ಕೈಗಳನ್ನು ಒದರಿಕೊಂಡು, ‘ಒಳಗೆ ಬನ್ನಿ’ ಎಂದು ಕರೆಯುತ್ತಾ ಅವರು ಕೊಟ್ಟ ಪುಸ್ತಕವನ್ನು ಎರಡೂ ಕೈಗಳಿಂದ ಪಡೆದುಕೊಂಡು ಕಣ್ಣಿಗೊತ್ತಿಕೊಂಡರು.
‘ಇದರ ಬೆಲೆ?’
‘ಹತ್ತು ಪೈಸೆ’ ಎಂದ ಆಕೆ ನಸುನಗುತ್ತಾ, ನವಿರಾಗಿ ತಲೆದೂಗುತ್ತಾ ಹಣ ನಿರೀಕ್ಷೆ ಮಾಡಿದರು.
ಅಜ್ಜಿ ನನ್ನ ಕಡೆ ತಿರುಗಿದ ತಕ್ಷಣವೇ ನನಗರ್ಥವಾಗಿ ಹೋಗಿತ್ತು.
ಜೇಬಿಗೆ ಕೈ ಹಾಕಿದೆ.
*********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...