Saturday, 20 June 2020

ಜಾಕೋಬ ಜೀವನ; ಮೌಲ್ಯಗಳೊಂದಿನ ಅನುಸಂಧಾನ

- ಫ್ರಾನ್ಸಿಸ್ ನಂದಗಾವ

ಹಿರಿಯ ಪತ್ರಕರ್ತಸಾಹಿತಿಬೆಂಗಳೂರು


ಕಲ್ಯಾಣ ಕರ್ನಾಟಕ ಎಂದರೆ ಹಿಂದಿನ ಹೈದರಾಬಾದ ಕರ್ನಾಟಕದ ಇಂದಿನ ಉತ್ತರ ಕರ್ನಾಟಕದ ಕಲ್ಬುರ್ಗಿ ಸೀಮೆಯ ಖ್ಯಾತ ಜಾನಪದ ಸಾಹಿತಿ, ಕನ್ನಡ ಪ್ರಾಧ್ಯಾಪಕ ಡಾ. ಚೆನ್ನಣ್ಣ ವಾಲಿಕಾರ ಅವರು, ಶ್ರೀ ಜಾಕೋಬ್ ಲೋಬೊ ಅವರನ್ನು `ಅಣ್ಣ’ ಎಂದು ಸಂಬೋಧಿಸಿ ಗೌರವಿಸುತ್ತಿದ್ದರು. ದಕ್ಷಿಣ ಕರ್ನಾಟಕದ ಸೀಮೆಯ ಕುಟುಂಬಗಳಲ್ಲಿ `ಅಣ್ಣ’ ಎಂದರೆ `ತಂದೆ’ ಎಂಬ ಅರ್ಥ ಬಳಕೆಯಲ್ಲಿದೆ.

  ಬಡವರ, ದಲಿತರ, ದನಿ ಇಲ್ಲದವರ, ನಿಮ್ನ ವರ್ಗ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ, ಬಡ ಅಲ್ಪಸಂಖ್ಯಾತರ ಒಳಿತಿಗಾಗಿ ಯಾರ ಶಿಫಾರಸ್ಸುಗಳಿಗೂ ಕಾಯದೆ ಮಾನವೀಯತೆಯ ನೆಲೆಯಲ್ಲಿ, ಸಂವಿಧಾನದ ಚೌಕಟ್ಟಿನಲ್ಲಿ ತಮ್ಮ ಇಲಾಖೆಯ ಕಡೆಯಿಂದ ಸಾಧ್ಯವಾದ ಎಲ್ಲ ಬಗೆಯ ನೆರವನ್ನೂ ಒದಗಿಸುತ್ತಿದ್ದ ಲೋಬೊ ಅವರು, ಸಮಾರು ಮೂರು ದಶಕಗಳ ಕಾಲ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

 ಅವರ ನಿಸ್ಪøಹ ಅಧಿಕಾರದ ಚಲಾವಣೆ ಎಷ್ಟೋ ಜನ ಬಡ ದಲಿತರು ಮತ್ತು ನಿಮ್ನ ವರ್ಗಕ್ಕೆ ಸೇರಿದವರಿಗೆ ಬದುಕು ಕಟ್ಟಿಕೊಟ್ಟಿದ್ದನ್ನು ನೆನೆಸಿಕೊಂಡು, ದಲಿತ ಸಮುದಾಯವೊಂದಕ್ಕೆ ಸೇರಿದ ವಾಲಿಕಾರ್ ಅವರು ಲೋಬೊ ಅವರನ್ನು ಆದರದಿಂದ ಹಿರಿಯ ಸಹೋದರ- `ಅಣ್ಣ’ ಎಂದು ಕರೆದಿದ್ದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಈಗ ಚೆನ್ನಣ್ಣ ವಾಲಿಕಾರ್ ಅವರು ನಮ್ಮೊಂದಿಗಿಲ್ಲ.

  `ಇವನಾರವ ಇವನಾರವ ಎನ್ನದೆ’, `ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂಬ ಶರಣರ ಮತ್ತು `ನಿನ್ನಂತೆಯೇ ನಿನ್ನ ನೆರೆಹೊರೆಯವರನ್ನು ಪ್ರೀತಿಸು’ ಎಂಬ ಪ್ರಭು ಯೇಸುಕ್ರಿಸ್ತರ ವಾಣಿಯಂತೆಯೇ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಅಭಿವ್ಯಕ್ತಿ ಹಾಗೂ ಆರಾಧನೆಯ ಸ್ವಾತಂತ್ರ್ಯ, ಬದುಕಿನ ಸಮಾನ ಅವಕಾಶಗಳನ್ನೊದಗಿಸುವ, ವೈಯಕ್ತಿಕ ಘನತೆಯನ್ನು ಎತ್ತಿ ಹಿಡಿಯುವ ಸಹೋದರತೆಯನ್ನು ಸಾರುವ ನಮ್ಮ ಸಂವಿಧಾನದ ಆಶಯದಂತೆ ಅವರು ನಡೆದುದು ಇತರರಿಗೆ ಜೀವನಾದರ್ಶ.

   ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದುಕೊಂಡು ಇಲಾಖೆಯ ಅಧಿಕೃತ ದಾಖಲೆಗಳಲ್ಲಿ ಕನ್ನಡ ಸಹಿಯನ್ನು ಬಳಕೆ ಮಾಡಿ ಕನ್ನಡವನ್ನು ನಿಜದ ಅರ್ಥದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಕ್ಕೆ ತಂದ ಕನ್ನಡದ ಕಟ್ಟಾ ಅಭಿಮಾನಿಯಾದ ಶ್ರೀ ಜಾಕೋಬ್ ಲೋಬೊ ಅವರು, ಹಿಂದಿ ವಸಾಹತುಶಾಹಿಗೆ ತಮ್ಮ ಅಳವಿನಲ್ಲಿ ಸಾತ್ವಿಕ ಪ್ರತಿರೋಧ ಒಡ್ಡಿದವರು. `ಚಿಕ್ಕಮಗಳೂರಿನಲ್ಲಿ ಸೂಜಿಗಲ್ಲಿನ ನೀರು ಕುಡಿದವರು ಕನ್ನಡವನ್ನೇ ಮಾತನಾಡುತ್ತಾರೆ’ ಎಂಬ ಉಕ್ತಿಯನ್ನು ಉದ್ಧರಿಸುವ ಅವರು, `ಮಲೆನಾಡಿನ ಕನ್ನಡ ಬೆಂಗಳೂರಿನಂಥ ವಿವಿಧ ಭಾಷೆಗಳ ಕಲಸುಮೇಲೋಗರದ ಚೌ ಚೌ ಕನ್ನಡವಲ್ಲ, ಅದು ಪರಿಶುದ್ಧವಾದ ಕನ್ನಡ’ ಎನ್ನುತ್ತಾರೆ.

 ಅದರಂತೆಯೇ ತಮ್ಮ ಹೆಸರನ್ನು ಜಾಕೋಬ್ ಲೋಬೊ ಎಂದೇ ಹೇಳಿಕೊಳ್ಳುತ್ತಾರೆ. `ಬದಲಿ’ ಎಂಬ ಅರ್ಥ ಹೊರಡುವ ಬೈಬಲ್ ಮೂಲದ ಜಾಕೋಬ್ ಹೆಸರು ತೆಲುಗು ಭಾಷೆಯಲ್ಲಿ ಜಾಕಬ್ ಆಗಿದ್ದರೆ, ಮಲೆಯಾಳಂ ನಲ್ಲಿ ಅದು ಚಾಕೊ, ಯಾಕೋಬ್ ಮತ್ತು ಜೇಕಬ್ ಎಂದು ಪ್ರಚಲಿತದಲ್ಲಿದೆ. ಅದೇ ಹೆಸರನ್ನು ಮಹಮ್ಮದಿಯರು ಯಾಕುಬ್, ಯಾಕೂಬ್ ಎಂದೆಲ್ಲಾ ಬಳಸುತ್ತಾರೆ. ದಶಕಗಳ ಹಿಂದೆ ಮೂಲ ಹಿಬ್ರೂ ಭಾಷೆಯಿಂದ ಕನ್ನಡಕ್ಕೆ ತರ್ಜುಮೆಯಾದ `ಪವಿತ್ರ ಬೈಬಲ್’ನಲ್ಲಿ ಹಲವಾರು ಕಡೆಗಳಲ್ಲಿ ಈ ಹೆಸರನ್ನು ಯಕೋಬ ಎಂಬ ಬಳಸಲಾಗಿದೆ. ಹನ್ನೆರಡು ಜನ ಪ್ರೇಷಿತ ಶಿಷ್ಯರಲ್ಲ್ಲಿ ಇಬ್ಬರು ಯಕೋಬ ಹೆಸರಿನವರಿದ್ದಾರೆ. ಆಂಗ್ಲ ಭಾಷೆಯ `ಬೈಬಲ್’ ತರ್ಜುಮೆಗಳಲ್ಲಿ ಈ ಹೆಸರು ಜೇಮ್ಸ್ ಎಂದಾಗಿದೆ. ಬಳಕೆಯಲ್ಲಿ ಯಾಕೋಬ ಎಂಬ ಹೆಸರೂ ಚಾಲ್ತಿಯಲ್ಲಿದೆ.

 ಅಪ್ಪಿತಪ್ಪಿ ಯಾರಾದರೂ ಅವರನ್ನು `ರೀ ಜೇಕಬ್ ಲೋಬೊ ಅವರೇ’ ಎಂದು ಕರೆದಾಗ, ತಕ್ಷಣ ಅವರು `ನನ್ನ ಹೆಸರು ಕೇರಳದ ಜೇಕಬ್ ಅಲ್ಲ, ಕನ್ನಡ ಜಾಯಮಾನಕ್ಕೆ ಒಗ್ಗಿರುವ ಜಾಕಬ್ ಲೋಬೊ’ ಎಂದು ಹೇಳಿಕೊಳ್ಳುತ್ತಿದ್ದರು. ಪೋರ್ಚುಗೀಸ್ ಭಾಷೆಯಲ್ಲಿ `ಲೋಬೊ’ ಎಂದರೆ `ತೋಳ’ ಎಂಬ ಅರ್ಥ ಹೊಮ್ಮುತ್ತದೆ. ಅದೂ, ಒಂದು ಬಗೆಯಲ್ಲಿ ಕನ್ನಡದ ನೆಲದ ಮಾದರಿಯದ್ದೇ ಹೆಸರು. ನಮ್ಮ ಕನ್ನಡ ನಾಡಿನ ಉತ್ತರದ ಜಿಲ್ಲೆಗಳಲ್ಲಿ `ಕುರಿ’, `ಆಡೀನ್’, `ಕರಡಿ’, `ಕುದುರೆ’, `ಒಣಕುದುರೆ’ ಮೊದಲಾದ ಹೆಸರಿನ ಮನೆತನಗಳಿವೆ.

 ಶ್ರೀ ಜಾಕೋಬ್ ಲೋಬೊ ಅವರು, ತಮ್ಮ ಹೆಸರಿನೊಂದಿಗೆ ಉಪಾಧಿ ಮಾದರಿಯಲ್ಲಿ `ತುಕ್ಕಡಿ’ ಎಂಬ ಪದವನ್ನು ಸೇರಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಸೇನಾ ತುಕಡಿಯೊಂದು ನೆಲೆ ನಿಂತಂಥ ಜಾಗವನ್ನು ತುಕ್ಕಡಿ ಎಂದು ಗುರುತಿಸಲಾಗುತ್ತದೆ. ಹಿಂದೊಂದು ಕಾಲದಲ್ಲಿ ಲೋಬೊ ಅವರ ಪೂರ್ವಜರು ಸೇನೆಯಲ್ಲಿದ್ದಿರಬಹುದು, ಹೀಗಾಗಿ ಅವರ ಮನೆತನವನ್ನು ತುಕ್ಕಡಿಗಾರರು, ತುಕ್ಕಡಿ ಮನೆತನದವರು ಎಂದು ಗುರುತಿಸಲಾಗುತ್ತಿದೆಯಂತೆ. ಲೋಬೊ ಅವರು ಬೆಂಗಳೂರಿನ ಹೊಸಕೆರೆ ಹಳ್ಳಿ ಬಡಾವಣೆಯಲ್ಲಿ ಕಟ್ಟಿದ ತಮ್ಮ ಮನೆಗೆ `ತುಕ್ಕಡಿ ನಿವಾಸ’ ಎಂದು ಹೆಸರಿಟ್ಟಿದ್ದಾರೆ.

  ಇವರ ಮನೆತನದ ತುಕ್ಕಡಿಯ ಹೆಸರಿನ ಪ್ರಭಾವವೋ, ಸೇನೆಗೆ ಅಪಾರ ಕೊಡುಗೆ ಕೊಟ್ಟಿರುವ ಕೊಡಗಿನ ನೆಲದ ಗುಣವೋ, ಇವರು ಸ್ವಲ್ಪ ಸಮಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಮಾನವ ಪ್ರೇಮದ ಅಭಿವ್ಯಕ್ತಿಗೆ ಪೂರಕವಾಗುವಂತೆ ತಾಯ್ನಾಡಿನ ಸೆಳೆತದ ಫಲವಾಗಿ, ಅವರು ಕನ್ನಡ ನಾಡಿಗೆ ಹಿಂದಿರುಗಿ ಬಂದು ಬಡವರ, ದೀನ ದಲಿತರ, ನಿಮ್ನ ವರ್ಗದವರ ಏಳಿಗೆಗೆ ಮೀಸಲಾಗಿರುವ ರಾಜ್ಯ ಸರ್ಕಾರದ ಇಲಾಖೆಯೊಂದರ ಅಧಿಕಾರಿಯಾದದ್ದು ದೈವ ನಿರ್ಣಯ.

  ಕೊಡಗು, ಚಿಕ್ಕಮಗಳೂರು, ಮಂಗಳೂರು, ಗುಜರಾತಿನ ಜಾಮನಗರಗಳಲ್ಲಿ ಅವರು ವಾಸ್ತವ್ಯ ಹೂಡಿದ್ದರೂ, ಅವರ ಜೀವನದ ಬಹುತೇಕ ವಸಂತಗಳು ಬೆಂಗಳೂರಿನಲ್ಲಿಯೇ ಕಳೆದಿವೆ. ನಿವೃತ್ತರ ಸ್ವರ್ಗವಾಗಿದ್ದ ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿ ರೂಪತಾಳುವವರೆಗಿನ ಎಲ್ಲ ಹಂತಗಳನ್ನು, ಬಿಳಿ ಚರ್ಮದ ಬ್ರಿಟಿಷ್ ಜನರ ವಾಸ್ತವ್ಯಕ್ಕೆ ಮೀಸಲಾಗಿದ್ದ ಬೆಂಗಳೂರಿನ ದಂಡು ಪ್ರದೇಶ ನಿಧಾನವಾಗಿ ಬದಲಾಗಿದ್ದನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ. ಬ್ರಿಟಿಷರ ಕಾಲದ ಹದಿನಾರಾಣೆಯ ಬೆಳ್ಳಿಯ ರೂಪಾಯಿ, ತೂತಿನ ದುಡ್ಡು, ತಾಮ್ರದ ಒಂದು ಪೈಸೆ, ಆಣೆ, ಎರಡಾಣೆ, ನಾಲ್ಕಾಣೆ, ಎಂಟಾಣೆ ಮುಂತಾದ ಹಳೆಯ ನಾಣ್ಯಗಳನ್ನು ಕಂಡಿರುವ ಅವರು, ಹಳೆಯ ಬೆಂಗಳೂರಿನ ಯಾವುದೇ ಬೀದಿಗೆ ಹೋದರೂ ಅಲ್ಲಿನ ಕಟ್ಟಡಗಳ ಹಿಂದಿನ ಕತೆ ಅವರ ಮಾತುಗಳಲ್ಲಿ ಅನಾವರಣಗೊಳ್ಳುತ್ತ ಸಾಗುತ್ತದೆ. ಜಗತ್ತಿನ ಎಲ್ಲ ದೇಶಗಳ ನಾಗರಿಕರು ನಡೆದಾಡುವ ಮಹಾತ್ಮ ಗಾಂಧಿ ರಸ್ತೆಯಲ್ಲಿ ಈಗ ಕಾಲಗರ್ಭಕ್ಕೆ ಸೇರಿರುವ ಕಾಫಿ ಹೌಸ್ ಹೋಟೆಲ್ ಅವರ ನೆಚ್ಚಿನ ಸ್ನೇಹಿತರ ಬಳಗ ಸೇರುವ ತಾಣಗಳಲ್ಲೊಂದಾಗಿತ್ತು. ಇಂದಿನ ಪಡ್ಡೆ ಹುಡುಗರ ಭಾಷೆಯಲಿ,್ಲ ಅದನ್ನು `ಅಡ್ಡಾ’ ಎಂದು ಗುರುತಿಸಬಹುದು.

  ಒಬ್ಬ ಸತ್ಪ್ರಜೆಯಾಗಿ ದಿನನಿತ್ಯದ ನಾಡಿನ, ದೇಶದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಸಮಾಜವಾದ, ಜಾತ್ಯತೀತತೆಗಳ ಬಗೆಗೆ, ಶೋಷಣೆರಹಿತ ಸಮಾಜ ನಿರ್ಮಾಣದ ಕುರಿತು ಚಿಂತಿಸುತ್ತಿದ್ದ ಲೋಬೊ ಅವರು, ಅಂಬೇಡ್ಕರರ ಬದುಕು ಬರೆಹಗಳಿಂದ ತೀವ್ರ ಪ್ರಭಾವಿತರಾಗಿದ್ದರು. ಹೀಗಾಗಿ ತಮಗೆ ಅರ್ಥವಾದ ಅಂಬೇಡ್ಕರರನ್ನು ಇತರರಿಗೆ ಪರಿಚಯಿಸಲು ಸಾಹಿತ್ಯದ ಹಾದಿ ಹಿಡಿದರು. ಅವರ ಕುರಿತು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಪುಸ್ತಕಗಳನ್ನು ರಚಿಸಿದರು.

 ವಿವಿಧ ವಿಷಯಗಳಲ್ಲಿನ ಆಸಕ್ತಿಯ ಹಿನ್ನೆಲೆಯಲ್ಲಿ ನೂರಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಬರಹಗಾರರನ್ನು ಉತ್ತೇಜಿಸಿದ್ದಾರೆ. ಮತ್ತು ಕನ್ನಡ ಸಾಹಿತಿಗಳ ಸಾಹಿತ್ಯ ಶಿಬಿರಗಳನ್ನು ಆಯೋಜಿಸಿದ್ದು ಅವರ ಜೀವನದ ಒಂದು ದೊಡ್ಡ ಹೆಗ್ಗಳಿಕೆ.

   ಎರಡನೇ ಬಾರಿ 1993ರಲ್ಲಿ ಬೆಂಗಳೂರಿನ `ಆಶೀರ್ವಾದ’ ಸಂಸ್ಥೆಯ ಆಶ್ರಯದಲ್ಲಿ ನಡೆದ `ಅಖಿಲ ಕರ್ನಾಟಕ ಕ್ರೈಸ್ತ ಕನ್ನಡ ಸಾಹಿತಿಗಳ ಶಿಬಿರ’ದಲ್ಲಿ ನಾನು ಮೊದಲು ಬಾರಿ ಅವರನ್ನು ನೋಡಿದ್ದೆ, ಆದರೆ ಪರಿಚಯವಿರಲಿಲ್ಲ. ಅಂದಿನ ಶಿಬಿರಕ್ಕೆ ಮೈಸೂರು ಧರ್ಮಕ್ಷೇತ್ರದ ಮೇತ್ರಾಣಿ (ಬಿಷಪ್) ಆಗಿದ್ದ ಅತಿ ವಂದನೀಯ ಡಾ. ಮಿಖೇಲಪ್ಪ ಅವರು ಬಂದಿದ್ದರು. ಚಿಕ್ಕಮಗಳೂರಿನ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆದುಕೊಡುತ್ತಿದ್ದ, ಮುಂದೆ `ಜನವಾಹಿನಿ’ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಜಾನ್ ಮಥಾಯಿಸ್ ಅವರು, ಬಲವಂತದಿಂದ ನನ್ನನ್ನು ಚಿಕ್ಕಮಗಳೂರಿನಿಂದ ಈ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು. ಆಗ, ಆ ಶಿಬಿರಕ್ಕಾಗಿ ಲೋಬೊ ಅವರೊಂದಿಗೆ ಶ್ರಮಿಸುತ್ತಿದ್ದ ಎಚ್.ಎ.ಎಲ್ ನಲ್ಲಿ ಉದ್ಯೋಗಿಯಾಗಿದ್ದ ಮರಿಜೋಸೆಫ್ ಅವರ ಪರಿಚಯ ನನಗಿರಲಿಲ್ಲ. ಈ ಶಿಬಿರದ ದೆಸೆಯಿಂದ ಸಿಕ್ಕ ವಿಳಾಸದ ಕಾರಣ ಅವರು, ಪ್ರತಿವರ್ಷವೂ ಕ್ರಿಸ್ಮಸ್ ಹಬ್ಬದ ಸಂದರ್ಭಗಳಲ್ಲಿ ಶುಭಾಶಯಗಳನ್ನು ಕಳುಹಿಸುತ್ತಿದ್ದರು. ಆ ಸಮಯದಲ್ಲಿ ನಾನು ಚಿಕ್ಕಮಗಳೂರಿನಲ್ಲಿ `ಪ್ರಜಾವಾಣಿ’ ದಿನ ಪತ್ರಿಕೆಯ ಜಿಲ್ಲಾ ವರದಿಗಾರನಾಗಿ ನೌಕರಿ’ ಮಾಡುತ್ತಿದ್ದೆ. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ `ಪ್ರಜಾವಾಣಿ’ ಪತ್ರಿಕೆಯ ಪ್ರಧಾನ ಕಚೇರಿಗೆ ವರ್ಗಾವಣೆಯಾದ ನಂತರದಲ್ಲೊಂದು ದಿನ ಮರಿಜೋಸೆಫ್ ಅವರ ಪರಿಚಯವಾಯಿತು. ತದನಂತರ, ಅವರು ನನ್ನನ್ನು ಜಾಕೋಬ್ ಲೋಬೊ ಅವರಿಗೆ ಪರಿಚಯಿಸಿದರು. ಚಿಕ್ಕಮಗಳೂರಿನ ನಂಟಿನ ಲೋಬೊ ಅವರು, ನನ್ನನ್ನು ಚಿಕ್ಕಮಗಳೂರಿನ ನಿವಾಸಿ ಎಂದುಕೊಂಡು ಆಸ್ಥೆಯಿಂದ ನನ್ನನ್ನು ತಮ್ಮ ಆಪ್ತ ವಲಯಕ್ಕೆ ಸೇರಿಸಿಕೊಂಡರು. ಹಲವಾರು ಲೇಖನಗಳನ್ನು ಬರೆಸಿಸಿದರು. `ಅನ್ನಮ್ಮ ಬೆಟ’್ಟ ದ ಕುರಿತು ಪುಸ್ತಕಗಳನ್ನು ಬರೆಯಲು ನನಗೆ ಪ್ರೇರಣೆಯನ್ನೂ ನೀಡಿದರು.

  ಶ್ರೀಯುತರಾದ ಜಾಕೋಬ್ ಲೋಬೊ ಅವರು, ಕನ್ನಡ ನಾಡಿನ ಕ್ರೈಸ್ತರು. ಲಿಂಗಾಯಿತರ ಪ್ರಮುಖ ಸಮುದಾಯಗಳಲ್ಲಿ ಪಂಚಮಸಾಲಿ ಮೇಲು, ಅಲ್ಲಲ್ಲ ಸಾದರ ಮೇಲು ಮತ್ತು ಅಲ್ಲವೇ ಅಲ್ಲ ಬಣಿಜಿಗ ಮೇಲು ಎಂಬಂಥ ಮೇಲಾಟವೂ, ಅಲ್ಪಸಂಖ್ಯಾತರಾದರೂ ಕ್ರೈಸ್ತರಲ್ಲೂ ಇದ್ದುದನ್ನು ಕಂಡು ಕೆಲವೊಮ್ಮೆ ರೋಸಿಹೋದದ್ದು ಉಂಟು. ಕೊಂಕಣಿ ಕ್ರೈಸ್ತರಲ್ಲಿ ಕರಾವಳಿ ಕ್ರೈಸ್ತರು, ಘಟ್ಟದ ಮೇಲಿನ ಕ್ರೈಸ್ತರು, ಘಟ್ಟದ ಕೆಳಗಿನ ಕ್ರೈಸ್ತರು ಎಂಬ ಸ್ಥೂಲ ವ್ಯತ್ಯಾಸಗಳಿದ್ದರೆ, ಉಳಿದಂತೆ ಕ್ರೈಸ್ತರು ವಿವಿಧ ಭಾಷೆಗಳ ಹೆಸರುಗಳಲ್ಲಿ, ಕಥೋಲಿಕ ಮತ್ತು ಪ್ರಾಟೆಸ್ಟಂಟ್ ಸಭೆಗಳ ಗುಂಪುಗಳಲ್ಲಿ ಹರಿದು ಹಂಚಿಹೋಗಿದ್ದಾರೆ.

   ಕ್ರೈಸ್ತ ಧರ್ಮ ಕರ್ನಾಟಕಕ್ಕೆ ಬಂದದ್ದು ಹದಿನಾರನೇ (1500-1600) ಶತಮಾನದಲ್ಲಿ ಎಂಬುದು ಸಾಮಾನ್ಯವಾದ ಗ್ರಹಿಕೆ. ಹಾಗೆ ನೋಡಿದರೆ, ಕ್ರೈಸ್ತ ಧರ್ಮವೂ ಭಾರತದ ಪ್ರಾಚೀನ ಧರ್ಮಗಳಲ್ಲೊಂದು ಎಂದೇ ಹೇಳಬಹುದು. ಮೊದಲನೇ ಶತಮಾನದ ಪ್ರಭು ಯೇಸುಕ್ರಿಸ್ತರ ಹನ್ನೆರಡು ಶಿಷ್ಯರ ಗುಂಪಿನಲ್ಲಿದ್ದ ಸಂತ ಥಾಮಸ್ (ಕೆಲವರು, ತೋಮ, ಥೋಮಾಸ್ ಎಂದೂ ಕರೆಯುತ್ತಾರೆ.) ಮತ್ತು ಬಾರ್ತೊಲೊಮಾಯ (ಬರ್ತಲೋಮಿಯೋ) ಅವರು ಭಾರತದ ಅಪೋಸ್ತಲರು (ಧರ್ಮದೂತರು/ ಪ್ರೇಷಿತರು) ಎಂದೇ ಪ್ರಸಿದ್ಧರಾಗಿದ್ದಾರೆ.

 ಸಂತ ಥಾಮಸ್, ಗುಡ್ನಫಾರ್ ಎಂಬ ಅರಸನ ರಾಜ್ಯದಲ್ಲಿ ಮತಪ್ರಚಾರ ನಡೆಸಿದ್ದ. ಗುಡ್ನಫಾರ್ ಎಂದರೆ ಮೈಸೂರಿನ ಕಟ್ನಾಫಾರ್ ಅಥವಾ ಕಂದಪ್ಪ ರಾಜನಿರಬಹುದು. ಅವನ ರಾಜ್ಯ ಮಜ್ಜಾಯ್ (ಮೈಸೂರು) ಇರಬಹುದು ಎಂಬುದು ಗೋವಿಂದ ಪೈ ಮೊದಲಾದ ತಜ್ಞರ ಅಭಿಪ್ರಾಯ. ಇನ್ನೊಂದು ಸಂಪ್ರದಾಯದಂತೆ ಆತ ಮಲಬಾರಿನಲ್ಲಿ (ಇಂದಿನ ಕೇರಳ) ಮತ ಪ್ರಚಾರ ಮಾಡಿದ್ದ. ಇಂದಿನ ಚೆನೈ ಸಮೀಪದ ಮೈಲಾಪುರದಲ್ಲಿ ಅವನ ಸಮಾಧಿಯೂ ಇದೆ. ಅದೇ ಬಗೆಯಲ್ಲಿ ಭಾರತಕ್ಕೆ ಬಂದ ಬಾರ್ತೊಲೊಮಾಯ ಮುಂಬೈ ಸಮೀಪದ ಕಲ್ಯಾಣದಲ್ಲಿ ಧರ್ಮ ಪ್ರಚಾರ ಮಾಡಿದ ಎನ್ನಲಾಗುತ್ತದೆ. ಇನ್ನೂ ಕೆಲವರು, ಆತ ಕನ್ನಡ ನಾಡಿನ ಇಂದಿನ ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ ಕ್ರೈಸ್ತ ಮತ ಬೋಧಿಸಿದ ಎಂದೂ ಹೇಳುತ್ತಾರೆ.

 ಮುಂದೆ, ಕ್ರಿಸ್ತ ಶಕ 1324ರಲ್ಲಿ ಐದು ಮಂದಿ ಡಾಮಿನಿಕನ್ ಕ್ರೈಸ್ತ ಮಿಷನರಿಗಳು, ಕನ್ನಡ ನೆಲದಲ್ಲಿ ಪ್ರಚಾರ ಕೈಗೊಂಡರು. ಕ್ರಿಸ್ತ ಶಕ 1445ರಲ್ಲಿ ವಿಜಯನಗರ ಅರಸರ ಬಳಿ ಒಬ್ಬ ಕ್ರೈಸ್ತ ದಿವಾನ ಇದ್ದನೆಂದು ಇತಿಹಾಸಕಾರರು ದಾಖಲಿಸಿದ್ದಾರೆ. ಇದೇ ಶತಮಾನದ ಕೊನೆಯಲ್ಲಿ 1499ರಲ್ಲಿ ಯುರೋಪಿಯನ್ನರ ಪ್ರಭಾವ ಕಾಣಿಸಲಾರಂಭಿಸಿತು. ವ್ಯಾಪಾರದ ಉದ್ದೇಶದಿಂದ ಬಂದ ಪೋರ್ಚುಗೀಜರು ಭಾರತದ ಕರಾವಳಿಯ ಮೇಲೆ ಹಿಡಿತ ಸಾಧಿಸಿದರು. ಗೋವೆಯಲ್ಲಿ ನೆಲೆ ನಿಂತು, ಅಲ್ಲಿನ ಪ್ರಭುಗಳಾದರು. ಆಗ, ಅವರಿಂದ ಕಥೋಲಿಕ ಪಂಥದ ಕ್ರೈಸ್ತ ಧರ್ಮ ಪ್ರಚಾರಕ್ಕೆ ಹೆಚ್ಚಿನ ಒತ್ತಾಸೆ ದೊರೆಯತೊಡಗಿತು.

  ಈ ವಿಷಯದ ವಿವರಗಳಿಗೆ, 1986ರಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಭಾರತದ ಗ್ಯಾಸೆಟಿಯರ್‍ನ ಮೊದಲನೇ ಸಂಪುಟ 1, 1992ರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ `ಕರ್ನಾಟಕ ಪರಂಪರೆ’ಯ ಎರಡನೇ ಸಂಪುಟ, ಮತ್ತು ಅದೇ ಇಲಾಖೆ 1985ರಲ್ಲಿ ಹೊರತಂದಿದ್ದ `ಅವಲೋಕನ’ ಮತ್ತು 1998ರಲ್ಲಿ ಪ್ರಕಟಗೊಂಡ ಡಾ. ಬಿ.ಎಸ್.ತಲ್ವಾಡಿ ಅವರ `ಕರ್ನಾಟಕದ ಕ್ರೈಸ್ತರು’ ಹೊತ್ತಿಗೆಗಳನ್ನು ಗಮನಿಸಬಹುದು.

  ಪೋರ್ಚುಗೀಜರು ಗೋವೆಯಲ್ಲಿ ಬಲಾತ್ಕಾರದ ಮತಾಂತರಗಳನ್ನು ನಡೆಸಿದರು. ಅಲ್ಲದೆ, ಆಲ್ಫಾನ್ಸೊ ಡಿ ಅಲ್ಬುಕರ್ಕ ಎಂಬ ಹೆಸರಿನ ಆಡಳಿತಗಾರ, ಗೋವೆಯಲ್ಲಿ ಕೆಲಸ ಮಾಡಲು, ಸೈನಿಕರಾಗಲು ತಾಯ್ನಾಡು ಬಿಟ್ಟು ಬಂದಿದ್ದ ಪೋರ್ಚುಗೀಜ್ ಗಂಡಸರಿಗೆ ಸ್ಥಳೀಯ ಹೆಂಗಸರೊಂದಿಗೆ ಮದುವೆ ಜರುಗಿಸಿ, ಗೋವೆಯನ್ನು ಎಂದೆಂದಿಗೂ ನಿಷ್ಠಾವಂತ ಪ್ರಜೆಗಳ ಪೋರ್ಚುಗೀಜ್ ವಸಾಹತು ಮಾಡುವ ಮಹಾದಾಸೆ ಹೊಂದಿದ್ದ. ಕ್ರೈಸ್ತರಾಗಿ ಮತಾಂತರಗೊಂಡ ನಂತರವೂ ಕದ್ದುಮುಚ್ಚಿ ಮುಂಚಿನ ತಮ್ಮ ದೈವಗಳಿಗೆ ನಡೆದುಕೊಳ್ಳತ್ತಿದ್ದ ಗೋವೆಯ ಜನರನ್ನು ಮತೀಯ ವಿಚಾರಣೆ ನಡೆಸಿ ಚಿತ್ರಹಿಂಸೆ ನೀಡಿದಾಗ, ಬರಗಾಲದ ಜೊತೆಗೆ ಬಿಜಾಪುರದ ಸುಲ್ತಾನ ಮತ್ತು ಮರಾಠರ ದಾಳಿಗಳು ಮೂಡಿಸಿದ ಅರಾಜಕ ಸ್ಥಿತಿಯಲ್ಲಿ, ಅವರಲ್ಲಿನ ಬಹತೇಕರು ಓಡಿ ಬಂದು ಕನ್ನಡ ನಾಡಿನ (ಕರ್ನಾಟಕದ) ಕರಾವಳಿ ಮತ್ತು ಘಟ್ಟದ ಪ್ರದೇಶಗಳಲ್ಲಿ ನೆಲೆ ನಿಂತರು. ಅವರಿಗೆ ಕೆಳದಿ ಅರಸರು ಅಭಯ ಹಸ್ತ ನೀಡಿ ನೆಲೆ ಒದಗಿಸಿದರು. ಓಡಿ ಬಂದವರನ್ನು ಹಿಂಬಾಲಿಸಿ ಬಂದ ಪೋರ್ಚುಗೀಜ್ ಮೂಲದ ಪಾದ್ರಿಗಳು ಅವರಿಗೆಲ್ಲಾ ಪೋರ್ಚುಗೀಜ್ ಹೆಸರನ್ನಿಟ್ಟು ಸಲುಹಿದರು. ದಂಡನೆಯಿಂದ ಸಾಧ್ಯವಾಗದ್ದನ್ನು ಈ ಪಾದ್ರಿಗಳು ಶತಮಾನಗಳ ಕಾಲ ಸಂಯಮದಿಂದ ದುಡಿದು ಸಾಧ್ಯವಾಗಿಸಿದರು.

  ಇತ್ತ, ಒಳನಾಡಿನಲ್ಲಿ 1587ರಲ್ಲಿ ಪ್ರಾನ್ಸಿಸ್ಕನ್ ಪಾದ್ರಿಗಳು ಗೋವೆಯಿಂದ ಬಂದು ಮೈಸೂರು ರಾಜ್ಯದಲ್ಲಿ ಕ್ರೈಸ್ತ ಮತ ಪ್ರಚಾರ ಕೈಗೊಂಡಿದ್ದರು. 1684ರಲ್ಲಿ ಮೈಸೂರಿಗೆ ಬಂದ ಯೇಸುಸಭೆಯ ಗುರುಗಳಿಂದ ವ್ಯವಸ್ಥಿತ ಮತ ಪ್ರಚಾರ ಆರಂಭವಾಯಿತು. ಫ್ರಾನ್ಸಿಸ್ಕನ್, ಯೇಸುಸಭೆಯ ಗುರುಗಳ ಜೊತೆ ಜೊತೆಗೆ ಆಗಸ್ಟೀನಿಯನ್ ಗುರುಗಳು, ಫ್ರೆಂಚ್ ಮಿಷನರಿಗಳು ಕನ್ನಡ ನಾಡಿನ ವ್ಯಾಪ್ತಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿವರಗಳಿಗೆ ಸಿ ಹಯವದನರಾವ್ ಸಂಪಾದಿಸಿರುವ 1927ರಲ್ಲಿ ಪ್ರಕಟಗೊಂಡ `ಮೈಸೂರು ಗೆಸೆಟೀಯರ್’ ನ ಮೊದಲ ಸಂಪುಟ ಮತ್ತು ಸ್ವಾಮಿ. ಐ ಅಂತಪ್ಪ ಅವರು 1994ರಲ್ಲಿ ರಚಿಸಿ ಪ್ರಕಟಿಸಿದ `ಶ್ರೀರಂಗಪಟ್ಟಣ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ’ ಹೊತ್ತಿಗೆಗಳನ್ನು ಪರಾಂಬರಿಸಬಹುದು

ರೋಸಾರಿಯೋ ಚರ್ಚ ಎಂದೇ ಖ್ಯಾತಿಯಾಗಿರುವ, 1568ರಲ್ಲಿ ಮಂಗಳೂರಿನಲ್ಲಿ ನಿರ್ಮಿಸಲಾದ ಜಪಮಾಲೆ ರಾಣಿಯ ಮಹಾದೇವಾಲಯವನ್ನು ರಾಜ್ಯದ ಅತ್ಯಂತ ಪುರಾತನ ಚರ್ಚ ಎಂದು ಹೇಳಲಾಗುತ್ತದೆ. ಆದರೆ, ಅದಕ್ಕಿಂತ ಪುರಾತನವಾದ ಕಥೋಲಿಕ ಕ್ರೈಸ್ತರ ಚರ್ಚು ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲಿ ಇದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಮರೇಶ ಯತಗಲ್ ಅವರು ತಮ್ಮ `ಇತಿಹಾಸ ಇಂಚರ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

  ಮುದಗಲ್ಲಿನಲ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಚರ್ಚ ಇದೆ. ಇದು ಕ್ರಿಸ್ತ ಶಕ 1502ರಲ್ಲಿ ನಿರ್ಮಾಣವಾಗಿದೆ. ಬಿಜಾಪುರದ (ಇಂದಿನ ವಿಜಯಪುರ ಜಿಲ್ಲಾ ಕೇಂದ್ರ) ಇಬ್ರಾಹಿಂ ಆದಿಲಶಹಾನ ಕಾಲದಲ್ಲಿ ಮುದಗಲ್ಲಿನಲ್ಲಿ ಕ್ರಿಶ್ಚಿಯನ್ನರಿದ್ದು, ಕ್ರಿಸ್ತ ಶಕ 1557ರಲ್ಲಿ ಅವನು ಇಲ್ಲಿಯ ಚರ್ಚಿನ ಅಭಿವೃದ್ಧಿಗಾಗಿ ಇನಾಂ ಭೂಮಿಯನ್ನು ನೀಡಿದ್ದನೆಂದು ರಾಯಚೂರು ಜಿಲ್ಲಾ ಗೆಸೆಟಿಯರ್ (1970)ನಲ್ಲೂ ನಮೂದಿಸಲಾಗಿದೆ.

  ಈಗ ಶ್ರೀ ಜಾಕೋಬ್ ಲೋಬೊ ಅವರ ಕುಟುಂಬದ ಕೊಡಗಿನ ಇತಿಹಾಸದತ್ತ ಬರೋಣ. ಇಸ್ಲಾಂ ಮತಾವಲಂಬಿಗಳು ಲೂಟಿಕೋರರಾಗಿ ಏಳನೇ ಶತಮಾನದಿಂದ ವಾಯುವ್ಯ ದಿಕ್ಕಿನಿಂದ ಭಾರತಕ್ಕೆ ಲಗ್ಗೆ ಇಡಲು ಪ್ರಾರಂಭಿಸುವ ಮೊದಲೇ, ನಮ್ಮ ನಾಡಿನ ಪಶ್ಚಿಮದಲ್ಲಿರುವ ಅರಬ್ಬಿ ಸಮುದ್ರಕ್ಕೆ ಆ ಹೆಸರು ಬರಲು ಕಾರಣಕರ್ತರಾದ, ಅರಬ್ ವ್ಯಾಪಾರಿಗಳು ಶತ ಶತಮಾನಗಳಿಂದ ಭಾರತದ ಪಶ್ಚಿಮ ಕರಾವಳಿಯ ಊರುಗಳೊಂದಿಗೆ ಸಂಪರ್ಕ ಹೊಂದಿದ್ದರು. ಮುನ್ನೂರು, ನಾನೂರು ವರ್ಷಗಳ ನಂತರ ಈ ಲೂಟಿಕೋರರಂತೆ ಬಂದವರು ಭಾರತದ ನೆಲದಲ್ಲಿ ನೆಲೆ ನಿಂತು, ಈ ನೆಲದವರೇ ಆಗಿ ಅರಸೊತ್ತಿಗೆಗಳನ್ನು ರೂಢಿಸಿಕೊಂಡರು. ವಿಜಯನಗರ ಅರಸರ ಕಾಲದ ಹೊತ್ತಿಗೆ, ಹದಿನೈದನೇ ಶತಮಾನಕ್ಕಾಗಲೇ ಇಸ್ಲಾಂ ಮತದ ಮಹಮ್ಮದೀಯರು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿಬಿಟ್ಟಿದ್ದರು.

ರಕ್ಕಸಗಿ ತಂಗಡಗಿ ನಿರ್ಣಾಯಕ ಯುದ್ಧದ ನಂತರ ವಿಜಯನಗರ ಅರಸರು ನಗಣ್ಯರಾದಾಗ, ಮೈಸೂರಿನ ಒಡೆಯರರು ಪ್ರವರ್ಧಮಾನಕ್ಕೆ ಬರುತ್ತಾರೆ. ಅಲ್ಲಿ ಊಳಿಗದಲ್ಲಿದ್ದ ಹೈದರ್ ಅಲಿ ಕ್ರಮೇಣ ಪ್ರಭಾವ ಬೆಳೆಸಿಕೊಂಡು ಒಡೆಯರರನ್ನು ಹೆಸರಿಗೆ ಮುಂದೆ ಮಾಡಿ ಸರ್ವಾಧಿಕಾರಿಯಾಗಿ ಮೈಸೂರು ಸೀಮೆಯನ್ನು ಆಳತೊಡಗಿದ್ದ. ಆಗಲೇ ಮೈಸೂರು ಸೀಮೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸ್ಥಳೀಯ ಕ್ರೈಸ್ತ ಸಮುದಾಯದೊಂದಿಗೆ ಹೈದರ್ ಅಲಿ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಕೆಳದಿ ಸಾಮ್ರಾಜ್ಯವನ್ನು ವಶಪಡಿಸಿಕೊಂಡಾಗ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡದ ಕರಾವಳಿ ಪ್ರದೇಶದಲ್ಲಿದ್ದ ಕ್ರೈಸ್ತ ಸಮುದಾಯದವರನ್ನು ಆದರದಿಂದಲೇ ನಡೆಸಿಕೊಂಡಿದ್ದ.

  ಹೈದರ್ ಅಲಿ 1782ರಲ್ಲಿ ನಿಧನಗೊಂಡ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಅವನ ಮಗ  ಟಿಪ್ಪು ಸುಲ್ತಾನ, ತಾನು ವೈರಿ ಎಂದು ಗುರುತಿಸಿದ್ದ ಕ್ರೈಸ್ತ ಮತಾವಲಂಬಿ ಬ್ರಿಟಿಷರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದ, ಅವರ ಸೇನಾ ತುಕಡಿಗಳಿಗೆ ಆಹಾರ ಸಾಮ ಗ್ರಿಗಳನ್ನು ಒದಗಿಸುತ್ತಿದ್ದ ಕರಾವಳಿ ಕ್ರೈಸ್ತರು ಸ್ವ-ಧರ್ಮ ಪ್ರೇಮದಿಂದ ತನಗೆ ದ್ರೋಹವೆಸಗುತ್ತಿದ್ದಾರೆ ಎಂದು ಬಗೆದಿದ್ದ, ಬ್ರಿಟಿಷರೊಂದಿಗಿನ ಮೊದಲ ಮತ್ತು ಎರಡನೇ ಯುದ್ಧಗಳ ನಂತರ, ದಂಡನೆಯ ರೂಪವಾಗಿ 1785-1787ರ ಅವಧಿಯಲ್ಲಿ ಸುಮಾರು 30,000 ಕರಾವಳಿಯ ಕೊಂಕಣಿ ಭಾಷಿಕ ಕ್ರೈಸ್ತರನ್ನು ಕುಟುಂಬ ಸಮೇತ ಶ್ರೀರಂಗಪಟ್ಟಣ ಮತ್ತು ಗಂಜಾಂ ಗೆ ಕರೆದುಕೊಂಡು ಹೋಗಿದ್ದ ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಬೇರೆ ಬೇರೆ ಮೂಲಗಳಲ್ಲಿ ಹಾಗೆ ಕರೆದುಕೊಂಡು ಹೋದವರ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ.

  ಬಂಧಿತರಲ್ಲಿ ಕ್ಷಮಾಪಣೆ ಬಯಸಿದ ಕೆಲವು ಅಳ್ಳೆದೆಯವರು ಇಸ್ಲಾಂ ಮತಕ್ಕೆ ಮತಾಂತರ ಆಗಿರಲೂಬಹುದು. ಕ್ರಿಸ್ತ ಶಕ 1792ರಲ್ಲಿ ನಡೆದ ಬ್ರಿಟಿಷರೊಂದಿಗಿನ ಮೂರನೇ ಯುದ್ಧದಲ್ಲಿ ಟಿಪ್ಪುವಿಗೆ ಸೋಲುಂಟಾದ ಸಂದರ್ಭದಲ್ಲಿ ಅವನ ಬಂಧನದಲ್ಲಿದ್ದ ಬಹುತೇಕ ಕ್ರೈಸ್ತರು ಕೊಡಗು, ಚಿಕ್ಕಮಗಳೂರು, ಅರ್ಕಾಟ್ ಮುಂತಾದ ಕಡೆಗಳಿಗೆ ಓಡಿ ಹೋದರೆ, ಕೆಲವಷ್ಟು ಜನ ಕಷ್ಟಪಟ್ಟು ಕರಾವಳಿಯ ತಮ್ಮ ಮೂಲ ನೆಲೆ ಹುಡುಕಿಕೊಂಡು ಹೋಗುತ್ತಾರೆ. ಕೊಡಗಿನ ಅರಸ ದೊಡ್ಡ ವೀರರಾಜೇಂದ್ರ, ತನ್ನ ನಾಡಿಗೆ ಬಂದ ಈ ಕೊಂಕಣಿ ಭಾಷಿಕ ಕ್ರೈಸ್ತರಿಗೆ ನೆಲೆ ಒದಗಿಸುತ್ತಾನೆ.

  ಇನ್ನು ಹತ್ತೊಂಬತ್ತನೇ ಶತಮಾನದಲ್ಲಿ ಕೊಡಗಿಗೆ ಬರುವ ಅದೇ ಕ್ರೈಸ್ತ ಸಮುದಾಯದ ಇನ್ನೊಂದು ರೆಂಬೆಯಾದ ಪ್ರಾಟೆಸ್ಟಂಟ್ ಕ್ರೈಸ್ತರ ಇತಿಹಾಸದಲಿ,್ಲ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ’ವನ್ನು ಆರಂಭಿಸಿದ್ದ ಡಾ. ಹರ್ಮನ್ ಮೊಗ್ಲಿಂಗ್, ಕನ್ನಡ ಕನ್ನಡ – ಇಂಗಿಷ್ ಶಬ್ದಕೋಶವನ್ನು ಕನ್ನಡಿಗರಿಗೆ ಕೊಡಮಾಡಿದ ರೆ. ಎಫ್ ಕಿಟ್ಟೆಲ್ ಅವರ ಇರುವಿಕೆ ದಾಖಲಾಗಿದೆ.

  ವಸಾಹತುಶಾಹಿ ಬ್ರಿಟಿಷರ ವಶದಲ್ಲಿದ್ದ ಭಾರತ ಉಪಖಂಡದಲ್ಲಿ ಬ್ರಿಟಿಷರ ಅಗತ್ಯಕ್ಕೆ ಅನುಗುಣವಾಗಿ ಆರಂಭವಾದ ಶಾಲೆಗಳು, ಭಾರತೀಯ ಸಮಾಜದ ಸಕಲ ಸಮುದಾಯಗಳಿಗೂ ಅಕ್ಷರ ಲೋಕವನ್ನು ತೆರೆದಿರಿಸಿದವು. ಶೋಷಿತ ಸಮುದಾಯದಿಂದ ಬಂದ ಅಂಬೇಡ್ಕರರು ಆ ಸಮುದಾಯದ ಮುಂಚೂಣಿ ನಾಯಕರಾದುದು, ಭಾರತ ಗಣರಾಜ್ಯದ ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ಒದಗಿಸಿಕೊಟ್ಟದುದು ಅವರಿಗೆ ಲಭಿಸಿದ ಶಿಕ್ಷಣ ಎಂಬುದರಲ್ಲಿ ಎರಡು ಮಾತಿಲ್ಲ. ಅಂಬೇಡ್ಕರರ ಆಶಯದಂತೆ `ದಲಿತರಿಗೆ ಶಿಕ್ಷಣದಿಂದಲೇ ಮುಕ್ತಿ’ ಎಂಬುದನ್ನು ಮನಗಂಡಿದ್ದ ಜಾಕೋಬ್ ಲೋಬೊ ಅವರು, ಅಧಿಕಾರಿಯಾಗಿದ್ದಾಗ ಸಮಾಜದ ಶೋಷಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಲು ತಮ್ಮ ಅಳವಿನಲ್ಲಿ ಸಾಧ್ಯವಾದ ಅನುಕೂಲಗಳನ್ನು ಕಲ್ಪಿಸುವಲ್ಲಿ, ಪ್ರೋತ್ಸಾಹ ನೀಡುವಲ್ಲಿ ಎಂದೂ ಹಿಂದೆ ಸರಿದವರಲ್ಲ. ಆದರೆ, ಇಂದು ಅಂಬೇಡ್ಕರರ ಆಶಯದಂತೆ ಶೋಷಿತರಲ್ಲಿ ಜಾಗೃತಿ ಮೂಡಿಸುವವರ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿರುವುದು ನಮ್ಮ ಕಾಲದ ದೌರ್ಭಾಗ್ಯ.

  ತಮ್ಮ ಚಿಂತನೆಗಳ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಪ್ರಸ್ತಾಪಿಸುತ್ತಾ, ಸಾಮಾಜಿಕ ನ್ಯಾಯದ ಚಿಂತನೆಯ ಪರಿಧಿಯನ್ನು ವಿಸ್ತರಿಸಿದ, ಬಡ ಬಾಬಾಸಾಹೇಬರಂತೆಯೇ ಬದುಕು ರೂಪಿಸಿಕೊಂಡ ಬಹುಮುಖ ಪ್ರತಿಭೆಯ ವಿದ್ವಾಂಸ, ಸಮಾಜ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ.ತೇಲ್ತುಂಬ್ಡೆ ಅವರನ್ನು ಭೀಮಾ ಕೋರೇಗಾವ್ ಪ್ರಕರಣದಲ್ಲಿ ಬಂಧಿಸಿ ಈಗ ಒಂದು ತಿಂಗಳು ಕಳೆದಿದೆ.

  ಸಹಸ್ರಾರು ಜನ ಪ್ರಜ್ಞಾವಂತ ನಾಗರಿಕರು, ಕೋರೊನಾ ವೈರಸ್ ತಂದಿತ್ತ ಲಾಕ್ ಡೌನ್ ಸಂದರ್ಭದಲ್ಲಿ ಲಭ್ಯ ಅಂತರ್ಜಾಲ ಸೌಲಭ್ಯಗಳ ವೇದಿಕೆಗಳಲ್ಲಿ, ನಮ್ಮ ಸಂವಿಧಾನದ ಮೌಲ್ಯಗಳನ್ನು ಸಮರ್ಥಿಸಿಕೊಂಡು, ಅದು ಪ್ರಜೆಗಳ ಕರ್ತವ್ಯವೆಂದು ಬಗೆದು ಮೇ ತಿಂಗಳ 16ರಂದು `ನ್ಯಾಯ ದಿನ’ವನ್ನು ಆಚರಿಸಿದರು.

  ಡಾ.ತೇಲ್ತುಂಬ್ಡೆ ಅವರು ಮದುವೆಯಾಗಿದ್ದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ ಅವರ ಮೊಮ್ಮಗಳನ್ನು. ಅವರು ಬಂಧಿತರಾದದ್ದು ಬಾಬಾಸಾಹೇಬರ ಹುಟ್ಟು ಹಬ್ಬದ ದಿನದಂದು. ದಲಿತರ ಪರ ನಿಲುವಿನ ಲೋಬೊ ಅವರ ಜೀವನ ಕಥನದ ಪ್ರಕಟಣೆಯ ಸಂದರ್ಭದಲ್ಲಿಯೇ ಇಂಥ ಘಟನೆ ನಡೆದದ್ದು ಕಾಲದ ವ್ಯಂಗ್ಯ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ದನಿ ಇಲ್ಲದವರ, ದಲಿತರ ಶೋಷಿತರ ಪ್ರಗತಿಪರ ಚಿಂತಕರಿಗೆ, ಅನ್ಯಾಯ ಶೋಷಣೆಗಳನ್ನು ವಿರೋಧಿಸುವವರಿಗೆ `ನಗರ ನಕ್ಸಲರು’ ಎಂದು ಹಣೆಪಟ್ಟಿ ಕಟ್ಟುವ ಕೆಟ್ಟ ಚಾಳಿ ಆರಂಭವಾಗಿದೆ.

  ಕಳೆದ ಎರಡು ಮೂರು ತಿಂಗಳುಗಳಿಂದ ಹೊಸದಾಗಿ ಮಾನವರನ್ನು ಕಾಡುತ್ತಿರುವ ಕೋರೊನಾ ವೈರಾಣು ಕಾರಣದಿಂದ ಬರುವ ಸದ್ಯಕ್ಕೆ ಸೂಕ್ತ ಔಷಧಿ ಮತ್ತು ಬರದಂತೆ ತಡೆಯುವ ಲಸಿಕೆ ಇಲ್ಲದ ಕೋವಿಡ್ 19 ರೋಗ ತಡೆಗೆ, ಸಾಮಾಜಿಕ ಅಂತರವೂ ಒಂದು ಸಾಧನವೆಂದು ಕಂಡುಕೊಂಡ ಜಗತ್ತಿನ ಸಕಲ ದೇಶಗಳ ಆಡಳಿತಾರೂಢರು ತಮ್ಮ ತಮ್ಮ ದೇಶಗಳಲ್ಲಿ ಅದನ್ನು ಜಾರಿಗೆ ತರಬೇಕಾಯಿತು. ಸಾಮಾಜಿಕ ಅಂತರ ಪರಿಕಲ್ಪನೆ ಮುಂಚೆಯೇ ನಮ್ಮ ಭರತ ಖಂಡದಲ್ಲಿ ಇನ್ನೊಂದು ಬಗೆಯಲ್ಲಿ ಪ್ರಚಲಿತದಲ್ಲಿತ್ತು ಎಂದು ಇಂದು ಸಂವಿಧಾನದ ಆಶಯದಂತೆ ಅಪರಾಧವಾದ ಅಸ್ಪøಶ್ಯತೆಯನ್ನು ಹೆಮ್ಮೆಯಿಂದ ಕೆಲವರು ಪ್ರಸ್ತಾಪಿಸಿದ ಪ್ರಹಸನಗಳೂ ನಡೆದವು.

  ಸ್ವಾತಂತ್ರ್ಯ ಗಳಿಸಿ ಎಪ್ಪತ್ತು ದಶಕಗಳು ಕಳೆದರೂ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದ ಆಡಳಿತಾರೂಢ ಪಕ್ಷಗಳ ಸೊಗಲಾಡಿತನಗಳಿಂದ ಸಂವಿಧಾನದ ಆಶಯಗಳನ್ನು ಇಡಿಯಾಗಿ ಪೂರೈಸಲಾಗುತ್ತಿಲ್ಲ. ಸಂಪತ್ತಿನ ಸಮಾನ ಹಂಚಿಕೆ ಗಗನ ಕುಸುಮವಾಗಿದೆ. ಖಾಸಗೀಕರಣದ ಭರಾಟೆಯಲ್ಲಿ ಜನ ಸಾಮಾನ್ಯರ ಜೀವನ ನಲುಗತೊಡಗಿದೆ. ಜೀತ ಪದ್ಧತಿ ಬೇರೆ ಬೇರೆ ಮುಖಗಳಲ್ಲಿ ಇನ್ನೂ ಉಳಿದುಕೊಂಡಿದೆ. ಮಲ ಹೊರುವ ಪದ್ಧತಿಯನ್ನು ದಶಕಗಳ ಹಿಂದೆಯೇ ಶಿರ್ಹ ಅಪರಾಧವಾದರೂ ಅದು ಇನ್ನೂ ನಿಂತಿಲ್ಲ. `ಈಚೆಗೆ ಆರಂಭವಾಗಿರುವ ಸ್ವಚ್ಛ ಭಾರತ ಅಭಿಯಾನದಿಂದ ಮಲ ಹೊರುವ ಪದ್ಧತಿ ನಿರ್ಮೂಲನೆ ಆಗುವುದಿಲ್ಲ. ಬದಲು, ಈ ಯೋಜನೆಯಲ್ಲಿ ನಿರ್ಮಿಸಲಾಗುವ ಶೌಚ ಗುಂಡಿಗಳು ಹೆಚ್ಚು ಜನರ ಬಲಿ ಪಡೆಯಲಿವೆ’ ಎಂಬುದು ಸಫಾಯಿ ಕರ್ಮಚಾರಿ ಆಂದೋಲನದ ನಾಯಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕøತ ಬೆಜವಾಡ ವಿಲ್ಸನ್ ಅವರ ಅಭಿಪ್ರಾಯ.

 ಸ್ವಾತಂತ್ರ್ಯ ಪೂರ್ವದಲ್ಲಿ ಶತ ಶತಮಾನಗಳಿಂದ ಶೋಷಣೆಗೊಳಗಾಗುತ್ತಿದ್ದ ಊರಾಚೆ ಸವರ್ಣೀಯರಿಂದ ಅಸ್ಪøಶ್ಯತೆಯ ದೆಸೆಯಿಂದ ದೂರ ಇರುತ್ತಿದ್ದ ಹೊಲೆಮಾದಿಗ ಮೊದಲಾದ ನಿಮ್ನ ವರ್ಗದ ಸಮುದಾಯಗಳನ್ನು, ಗಾಂಧೀಜಿ ಅವರು `ಹರಿ’ಯ (ದೇವ) ಜನ `ಹರಿಜನ’ ಎಂದು ಕರೆದಿದ್ದರು. ಬಾಬಾ ಸಾಹೇಬ ಅಂಬೇಡ್ಕರರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಸ್ವತಂತ್ರ ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಪದಗಳು ಬಳಕೆಯಲ್ಲಿ ಬಂದವು. ನಂತರ `ದಲಿತರು’ ಎಂಬ ಪದ ಮುಂಚೂಣಿಗೆ ಬಂದಿತು. ಈಗ ರಾಜಕೀಯ ಮತ್ತು ಸಾಮುದಾಯಿಕ ಅಸ್ಮಿತೆಯ ಹೆಗ್ಗುರುತಿನ `ದಲಿತ’ ಪದ ಬಳಕೆಗೆ ಆಡಳಿತಾರೂಢರಿಂದ ಆಕ್ಷೇಪಗಳು ಬರತೊಡಗಿವೆ. ಅಳಿಯ ಅಲ್ಲ ಮಗಳ ಗಂಡ ಎಂಬ ಮಾತು ವ್ಯಕ್ತಿಯ ಸ್ಥಾನಮಾನವನ್ನು ಬದಲಿಸದು. ಅಂತೆಯೇ, ಹೆಸರು ಬದಲಾದರೂ ನಿಮ್ನ ವರ್ಗದವರ ಬದುಕು ಏನೂ ಬದಲಾಗದು. ಸ್ವತಂತ್ರ ಭಾರತದಲ್ಲಿ ಅವರ ಬದುಕು ಸುಧಾರಿಸಲು ಸರ್ಕಾರಗಳ ಹಲವಾರು ಇಲಾಖೆಗಳು ಶ್ರಮಿಸುತ್ತಿವೆ. ಜಾಕೋಬ್ ಲೋಬೊ ಅವರು ಸಹ ಅಂಥ ಒಂದು ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು. ಅಲ್ಲಿ ಹಲವಾರು ನೇರ್ಪುಗಳನ್ನು ರೂಢಿಸಿದವರು.

 ಇಂದು ಅಪರೋಕ್ಷವಾಗಿ ಬಹುಜನರ ಆಹಾರ ಸಂಸ್ಕøತಿಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅಂಗನವಾಡಿಯ ಮಕ್ಕಳಿಗೆ ಮೊಟ್ಟೆ ಕೊಡುವುದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಪ್ರತಿರೋಧಗಳ ನಡವೆಯೂ ಶಾಲಾ ಮಕ್ಕಳಿಗೆ `ಸಾತ್ವಿಕ ಆಹಾರ’ ಪೂರೈಸಲಾಗುತ್ತಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಲಭ್ಯವಿದ್ದ ಸಂಪನ್ಮೂಲವನ್ನು ಬಳಸಿಕೊಂಡು ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ವಾರದಲ್ಲೊಂದು ದಿನ ಮಾಂಸಾಹರದ ಊಟ ಒದಗಿಸಿದ ಶ್ರೇಯಸ್ಸು ಅವರದು. ಎಂದೂ ಗಂಡು ಹೆಣ್ಣು ಎಂದು ಭೇದಭಾವ ಮಾಡದ ಅವರು, ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸೇರಿದಂತೆ ಹಲವಾರು ಮಹಿಳಾಪರ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತಂದಾಗ ಅವರು ಸಂಭ್ರಮಿಸಿದ್ದರು.

  ಶ್ರೀ ಜಾಕೋಬ ಲೋಬೊ ಅವರ ಜೀವನ ಕಥನದ ಈ ಹೊತ್ತಿಗೆಯಲ್ಲಿ, ವಿವಿಧ ಸಂದರ್ಭಗಳನ್ನು ನೆನಪಿಸುವ ಛಾಯಾ ಚಿತ್ರಗಳ ಮೊಗಸಾಲೆ (ಫೋಟೊ ಗ್ಯಾಲರಿ)ಯ ಜೊತೆಗೆ ಪ್ರಶಸ್ತಿಗಳು ಮತ್ತು ಗೌರವಗಳು ಸೇರಿದಂತೆ, ಒಟ್ಟು ಹದಿನೈದು ಅಧ್ಯಾಯಗಳಿದ್ದು, ಅವು ನಮಗೆ ಲೋಬೋ ಅವರ ಜೀವನದ, ಆದರ್ಶಗಳ ದರ್ಶನ ಮಾಡಿಕೊಡುತ್ತವೆ.

 ಈಗ ಜೂನ್ 19ರಂದು ತೊಂಬತ್ತರ ವಸಂತದಲ್ಲಿ ಕಾಲಿರಿಸುತ್ತಿರುವ ಹದಿಹರೆಯದ ಹುಮ್ಮಸ್ಸಿನ ಮನಸ್ಸಿನ ಜಾಕೋಬ್ ಲೋಬೋ ಅವರು, ತಮ್ಮ ಎಳೆಯ ವಯಸ್ಸಿನಲ್ಲಿ ಪ್ರೌಢಶಾಲೆಯಲ್ಲಿ ಇದ್ದಾಗಲೇ ಅಂದಿನ ಸಾಹಿತಿಗಳ, ಜಾನಪದ ಹಾಡುಗಾರರ ಸಾಂಗತ್ಯವಲ್ಲದೆ, ಮೈಸೂರು ಸಂಸ್ಥಾನವು ಭಾರತದ ಒಕ್ಕೂಟವನ್ನು ಸೇರಬೇಕೆಂಬ ಪ್ರಾದೇಶಿಕ ಮಟ್ಟದ ಸ್ವಾತಂತ್ರ್ಯದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅಪರೂಪದ ವ್ಯಕ್ತಿ. ಅಂದಿನ ಹಿರಿಯ ರಾಜಕಾರಣಿಗಳ ಒಡನಾಟವಿದ್ದರೂ ಸಲಿಗೆಯ ದುರುಪಯೋಗ ಮಾಡಿಕೊಂಡವರಲ್ಲ, ಅಧಿಕಾರದಲ್ಲಿ ರಾಜಕಾರಣ ತೂರುವುದಕ್ಕೆ ಅವಕಾಶ ಮಾಡಿಕೊಟ್ಟವರಲ್ಲ. ಲೋಬೊ ಅವರು, ಅಹಿಂಸೆಯ ಹೋರಾಟದಿಂದ ಸೂರ್ಯ ಮುಳುಗದ ವಸಾಹತು ಸಾಮ್ರಾಜ್ಯದ ಬ್ರಿಟಿಷ್ ದಣಿಗಳನ್ನು ಮಣಿಸಿ ಸ್ರ್ಯಾತಂತ್ರ್ಯ ದೊರಕಿಸಿಕೊಟ್ಟ ಸರಳ ಬದುಕು ಸಾಗಿಸಿದ, ಉದಾತ್ತ ಚಿಂತನೆಯ, ಸದಾಚಾರದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಸಹೋದರತೆಯನ್ನು ಸಾರುವ ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರುಗಳ ಆದರ್ಶಗಳ ಮೂರ್ತಸ್ವರೂಪ.

  ನಮ್ಮೊಂದಿಗಿಲ್ಲದ ಸರಳತೆಯೇ ಮೈವೆತ್ತಂತಿದ್ದ ಕಡಿದಾಳ ಮಂಜಪ್ಪ, ಶಾಂತವೇರಿ ಗೋಪಾಲಗೌಡರು, ಎಸ್ ಕೆ ಕರೀಂಖಾನ್, ಟಿ ಸಿದ್ದಲಿಂಗಯ್ಯ, ಲಕ್ಷ್ಮೀಸಾಗರ ಮೊದಲಾದ ರಾಜಕಾರಿಣಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ಸಾಹಿತಿಗಳಾದ ಜಾನಪದ ವಿದ್ವಾಂಸ ಡಿ.ಆರ್. ಲಿಂಗಯ್ಯ, `ತಾಯಿ ನಿನಗೆ ನಿತ್ಯೋತ್ಸವ’, `ನಿಮ್ಮಡನಿದ್ದೂ ನಿಮ್ಮಂತಾಗದ..’ ಹಾಡುಗಳ ಖ್ಯಾತಿಯ ಕವಿ ಪ್ರೊ. ಕೆ. ಎಸ್. ನಿಸ್ಸಾರ್ ಅಹಮದ್, ಒಂದು ಕಾಲದಲ್ಲಿ ಸರ್ಕಾರದಲ್ಲಿ ಅಪಾರ ಪ್ರಭಾವ ಹೊಂದಿದ್ದ ಖ್ಯಾತ ಪತ್ರಕರ್ತರಾಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಧಾನ ವರದಿಗಾರ ದಿ. ಎಸ್.ಜಿ.ಮೈಸೂರ್ ಮಠ ಮತ್ತು ಮಿ. ಸಿಟಿಜನ್ ಖ್ಯಾತಿಯ ದಿ. ಮೈಸೂರ್ ಪ್ರಿಂಟರ್ಸ ಸಂಸ್ಥೆಯ `ಪ್ರಜಾವಾಣಿ’, `ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದಲ್ಲಿದ್ದ ವ್ಯಂಗ್ಯ ಚಿತ್ರಕಾರ ದಿ. ಬಿ.ವಿ.ರಾಮಮೂರ್ತಿ, ಈಗ ನಮ್ಮೊಂದಿಗಿರುವ ಯಾವುದಕ್ಕೂ ರಾಜಿಮಾಡಿಕೊಳ್ಳದ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಕಟು ಮಾತಿನ ಸಾಹಿತಿ ಚಂದ್ರಶೇಖರ ಪಾಟೀಲ, ಜಾತ್ಯತೀತ ನಿಲುವಿನ ಚಿಂತಕ ನಿಡುಮಾಮಿಡಿ ಮಠದ ಶ್ರೀ ಚನ್ನಮಲ್ಲವೀರಭದ್ರ ಸ್ವಾಮೀಜಿ ಮೊದಲಾದ ದಿಗ್ಗಜರ ಆತ್ಮೀಯ ಸ್ನೇಹದ ಒಡನಾಟದ ಜಾಕೋಬ್ ಲೋಬೊ ಅವರು ನೇರ, ಸರಳ, ಸಜ್ಜನಿಕೆಯ ವ್ಯಕ್ತಿತ್ವದವರು.

 ಸ್ವಾತಂತ್ರ್ಯದ ನಂತರದ ಜೀವನದ ಜೋಕಾಲಿಯಲ್ಲಿ ಮೇಲೇರಿ ಕೆಳಗಿಳಿದು ಮತ್ತೆ ಮೇಲೇರಿ ತುಂಬು ಸಂಸಾರದ ನೊಗಹೊತ್ತು, ಒಡಹುಟ್ಟಿದವರನ್ನು ದಡ ಮುಟ್ಟಿಸಿ ಸಾತ್ವಿಕ ಜೀವನ ನಡೆಸಿ, ತನಗೆ ಘನತೆಯ, ಗೌರವದ ಜೀವನ ಕಲ್ಪಿಸಿಕೊಟ್ಟ ಸಮಾಜದ ಋಣವನ್ನು ಪೈಸೆ ಪೈಸೆ ಲೆಕ್ಕಹಾಕಿ ತೀರಿಸಿದ ಅಪರೂಪದ ವ್ಯಕ್ತಿ, ಮಹಾನುಭಾವ.

 ಸ್ವಾತಂತ್ರ್ಯೋತ್ತರದಲ್ಲಿ ಹುಟ್ಟಿ, ಬಡತನದ ಬೇಗೆಗೆ ತುತ್ತಾಗದೇ, ಸ್ವಾತಂತ್ರ್ಯದ ಸಕಲ ಸೌಲತ್ತುಗಳನ್ನು ಅನಾಯಾಸವಾಗಿ ಅನುಭವಿಸುತ್ತಿರುವ ಸದ್ಯದ ಇಂದಿನ ಸುಶಿಕ್ಷಿತ ಪೀಳಿಗೆಗೆ ಅವರು ಅಪರಿಚಿತರಿರಬಹುದು. ಅವರಷ್ಟೇ ಏಕೆ, ಅವರಂತೆಯೇ ಬದುಕಿದ `ಗಾಂಧಿ ಯುಗ’ದ ನೂರಾರು ಜನರ ಬದುಕಿನ ಚಿತ್ರಣ ಇಂದಿನ ಸ್ವಾರ್ಥದ ಸ್ವಯಂಕೇಂದ್ರಿತ ಮತ್ತು ಕೊಳ್ಳುಬಾಕು ಸಂಸ್ಕøತಿಯ ವಾಣಿಜ್ಯಮುಖಿ ಜೀವನದ ಇಂದಿನ ಪೀಳಿಗೆಗೆ ಅಪರಿಚಿತವಾಗಿಯೇ ಇದೆ ಎಂದರೆ ತಪ್ಪಾಗದು.

 ಈಗ ಇಂದಿನ ಪೀಳಿಗೆಯ ಜನರಿಗೆ ಗಾಂಧಿ ಯುಗದ ಅಂಥವರ ‘ಅಂದರೆ ನೇರ ನಡೆ ನುಡಿಯ’ ಉದಾತ್ತ ಸ್ವಭಾವದ ಜನರ ಪರಿಚಯ ಸ್ವಲ್ಪವಾದರೂ ಆಗಬೇಕು. ಅಂಥವರಲ್ಲೊಬ್ಬರಾದ ಜಾಕೋಬ ಲೋಬೋ ಅವರ ಜೀವನ ಕಥನ ಅಂಥ ಪ್ರಯತ್ನದಲ್ಲೊಂದು ಪುಟಾಣಿ ಹೆಜ್ಜೆ ಎಂಬುದು ನನ್ನ ಭಾವನೆ. ಕಾಲ ಎಂಥದೇ ಕಷ್ಟದ್ದಾಗಿದ್ದರೂ, ಮುಂದೆ ಒಳ್ಳೆಯ ದಿನಗಳು ಬಂದಾವೆಂಬ ನಿರೀಕ್ಷೆಯೇ ಬದುಕಿಗೆ ಬಣ್ಣ ತುಂಬುವ ಕೆಲಸಮಾಡುತ್ತದೆ. ಪುಟಾಣಿ ದೀಪವೇ ಗಾಡಾಂಧಕಾರವನ್ನು ದೂರ ಮಾಡಬಲ್ಲುದು.

   ಸ್ವಾತಂತ್ರ್ಯ ಹೋರಾಟದ ದಿನಗಳಿಂದ ತೆರೆದುಕೊಳ್ಳುವ ಅಪ್ಪಟ ಅಪರಂಜಿಯಂತಿರುವ ಶ್ರೀ ಜಾಕೋಬ್ ಲೋಬೋ ಅವರ ಜೀವನ ಕಥನದ ಆಯಾ ಕಾಲದ ಘಟನೆಗಳನ್ನು ಒಂದೊಂದೇ ಪುಟಗಳಲ್ಲಿ ಅನಾವರಣಗೊಳಿಸುತ್ತಾ ಸಾಗುವ ಈ ಪುಸ್ತಕದ ಲೇಖಕ ಶ್ರೀನಿವಾಸ್ ಕೌಶಿಕ್ ಅವರು, ವಯೋ ಸಹಜವಾಗಿ ನೆನಪಿನ ಶಕ್ತಿ ಮಾಸುತ್ತಿರುವ ಲೋಬೊ ಅವರ ನೆನಪಿನ ಅಂಗಳಕ್ಕೆ ಲಗ್ಗೆ ಇಟ್ಟು, ಸಿಕ್ಕಷ್ಟು ಮೊಗೆಮೊಗೆದು, ಲೋಬೋ ಅವರ ಕುಟುಂಬದ ಸದಸ್ಯರು, ಅವರ ಸಂಪರ್ಕಕಕ್ಕೆ ಬಂದ, ಅವರೊಂದಿಗೆ ಒಡನಾಡಿದ ಸಹೋದ್ಯೋಗಿಗಳು, ಹಿರಿ ಕಿರಿಯ ಸ್ನೇಹಿತರು- ಮೊದಲಾದವರ ಮಾತುಗಳಲ್ಲೇ ಎಲ್ಲವನ್ನು ಒಪ್ಪ ಓರಣದಿಂದ ಹೆಣೆದುಕೊಟ್ಟಿದ್ದಾರೆ. ಮೊದಲು ಪತ್ರಿಕಾಲಯವೊಂದರಿಂದ ಬದುಕು ಆರಂಭಿಸಿ, ನಂತರ ಕನ್ನಡ ಧಾರಾವಾಹಿ, ಚಲನಚಿತ್ರ ಕ್ಷೇತ್ರದಲ್ಲಿ ಚಿತ್ರಕಥೆ, ಸಂಭಾಷಣೆ ಬರಹದ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಕೌಶಿಕ್ ಅವರಿಗೆ, ಈ ಕಾರ್ಯದಲ್ಲಿ ಅವರ ಸ್ನೇಹಿತರಾದ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ಸಂಸ್ಥೆಯೊಂದನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿರುವ ಶ್ರೀನಿವಾಸ್ (ಗ್ರಾಫ್) ಅವರು ಸೂಕ್ತ ಸಹಕಾರ ನೀಡಿದ್ದಾರೆ. ಇಂಥವರಿಂದ ರೂಪ ತಳೆದಿರುವ ಇದು, ಅಪರೂಪದಲ್ಲೊಂದು ಅಪರೂಪದ ಹೊತ್ತಿಗೆ ಎನ್ನಬಹುದೇನೋ.

  `ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು’ ಎಂಬ ನಾಣ್ಣುಡಿಯೊಂದಿದೆ. `ನಾನು, ನಾನು ಮಾಡಿದ್ದು’ ಎಂಬ ಅಹಂ ಇರಕೂಡದು ಎನ್ನುವುದು ಕ್ರೈಸ್ತ ನಡೆ.

  ಅಂದಿನ ಆಂಗ್ಲ ಸರ್ಕಾರದ ಒತ್ತಾಸೆಯಿಂದ ರೆ. ಎಫ್.ಕಿಟ್ಟೆಲ್ ಅವರು ಸಮಗ್ರವಾದ ಕನ್ನಡ ಕನ್ನಡ ಇಂಗ್ಲಿಷ್ ಶಬ್ದಕೋಶವನ್ನು  1894ರಲ್ಲಿ ಸಿದ್ಧಪಡಿಸುವ ಮೊದಲೇ, ಕಥೋಲಿಕ ಪಾದ್ರಿಗಳು ತಮ್ಮ ಗುರುಮಠಗಳ (ಸೆಮಿನರಿ) ಅನುಕೂಲಕ್ಕಾಗಿ, ಕ್ರೈಸ್ತರ ಧಾರ್ಮಿಕ ಆಡಳಿತ ಭಾಷೆ ಎಂದು ಗುರುತಿಸಲಾಗುವ ಲಾಟಿನ್ ಭಾಷೆಗೆ ಪೂರಕವಾಗಿ, 1855ರಲ್ಲಿ `ಕನ್ನಡ ಲತೀನು ಪದನೆರಕೆ’ ಮತ್ತು 1861ರಲ್ಲಿ `ಲತೀನ್ ಕನ್ನಡ ನಿಘಂಟು’ಗಳನ್ನು ಹೊರತಂದಿದ್ದರು. ಆದರೆ ಈ ನಿಘಂಟುಗಳಲ್ಲಿ ಅವನ್ನು ಸಿದ್ಧಪಡಿಸಿದವರ ಹೆಸರೇ ಇರಲಿಲ್ಲ! ಅವುಗಳ ರಚನಕಾರರು ಅನಾಮಿಕರಾಗಿಯೇ ಉಳಿದಿದ್ದಾರೆ. ಈಚೆಗೆ, ಅವುಗಳ ಮರುಮುದ್ರಣದ ಸಮಯದಲ್ಲಿ ಅವರನ್ನು ಹುಡುಕಿ ಗುರುತಿಸುವ ಪ್ರಯತ್ನ ನಡೆಯಿತು. ಆದರೂ, ಇದೇ ಕೊನೆಯ ಸತ್ಯ ಎಂದು ಕಾಲಗರ್ಭದಲ್ಲಿ ಹೂತಿರುವುದರ ಕುರಿತು ಖಚಿತವಾಗಿ ಹೇಳುವಂತಿಲ್ಲ.

 ಇಂಥದೇ ಮನೋಭಾವದ ಜಾಕೋಬ್ ಲೋಬೋ ಅವರು, ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ, ರಾಜ್ಯದ ವಿವಿಧ ಕಡೆಗಳಲ್ಲಿ ಬಡವರ, ದೀನ ದಲಿತರ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಯ ಏಳಿಗೆಗಾಗಿ ಉದ್ಧಾರಕ್ಕಾಗಿ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದು ಕರ್ತವ್ಯ ನಿಷ್ಠೆಯಿಂದ ಕೈಗೊಂಡಿದ್ದ ಕೆಲಸ ಕಾರ್ಯಗಳನ್ನು ಅಷ್ಟಾಗಿ ಹೇಳಿಕೊಂಡವರೇ ಅಲ್ಲ. ತುಂಬಿದ ಕೊಡ ತುಳುಕುವುದಿಲ್ಲವಲ್ಲ.

 ಕೆಲವೊಮ್ಮೆ ನಿಯಮಾವಳಿಗಳನ್ನು ಮೀರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿ ಮಾನಸಿಕ ಹಿಂಸೆ ಅನುಭವಿಸಿದ್ದರೂ ತಾವು ಇಟ್ಟ ನ್ಯಾಯ ನಿಷ್ಠೆಯ ಹೆಜ್ಜೆಯಿಂದ ಹಿಂದೆ ಸರಿದವರಲ್ಲ. ನ್ಯಾಯ ಸಮ್ಮತವಲ್ಲದ ಶಿಕ್ಷೆಯ ರೂಪದ ವರ್ಗಾವಣೆಗಳಿಂದ ಬೇಸರ ಪಟ್ಟುಕೊಂಡವರೂ ಅಲ್ಲ. ಅಧಿಕಾರದಲ್ಲಿದ್ದಾಗ ಆಗಲಿ (1965-1988), ನಿವೃತ್ತಿ ನಂತರವೂ ಆಗಲಿ ತಮ್ಮ ಪ್ರಾಮಾಣಿಕ ನಡೆನುಡಿಗಳ ಬಗ್ಗೆ ಜನರೆದುರು ಹೇಳಿಕೊಂಡವರಲ್ಲ, ಡಂಗುರ ಸಾರಿದವರಲ್ಲ.

 ಅವರು ನಿವೃತ್ತರಾಗಿ ಈಗ ಬರೊಬ್ಬರಿ 30 ವರ್ಷಗಳೇ ಕಳೆದಿವೆ. ಒಂದು ತಲೆಮಾರಿನ ಹಿರಿಯನ ಜೀವನ ಕಥನ ತಮ್ಮವರಿಗೆ ಸ್ಪೂರ್ತಿಯ ಸೆಲೆಯಾಗಲಿ ಎಂಬ ಮನೆಯವರ ಆಸೆ, ಸ್ನೇಹಿತರ ಒತ್ತಾಸೆ ಮುಂತಾದವು ಮುಪ್ಪುರಿಗೊಂಡು ಸಿ.ಎಚ್. ಜಾಕೋಬ್ ಲೋಬೋ ಅವರ `ಜೀವನ ಗಾಥೆ’ ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ಒಂದು ಸಂತೋಷದ ಸಂಗತಿ. ಭ್ರಷ್ಟಾಚಾರದ ಆರೋಪದಿಂದ ಜೈಲು ಪಾಲಾಗಿದ್ದ ರಾಜಕಾರಣಿಯೊಬ್ಬರನ್ನು ಕಾಣಲು ಮಠಾಧೀಶರೊಬ್ಬರು ಯಾವ ಮುಜಗರವಿಲ್ಲದೆ ಜೈಲಿಗೆ ಹೋಗಿಬಂದ ದಿನಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನೈತಿಕ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ, ಸರ್ಕಾರಿ ವ್ಯವಸ್ಥೆಯಲ್ಲಿ ಹೆಜ್ಜೆ ಹೆಜ್ಜೆಗೂ  ಭ್ರಷ್ಟಾಚಾರ ತಾಂಡವವಾಡುತ್ತಿರುವ ಇಂದಿನ ದಿನಮಾನಗಳಲ್ಲಿ, ಇಂಥವರೊಬ್ಬ ಪ್ರಾಮಾಣಿಕ ಅಧಿಕಾರಿಯೊಬ್ಬರಿದ್ದರು ಎಂಬ ಸಂಗತಿಯೇ ಓದುಗರನ್ನು ಪುಳಕಿತರನ್ನಾಗಿಸುತ್ತದೆ.

 ಗಾಂಧಿ ಅವರು ತಾವೇ ಬರೆದ, ತಮ್ಮ `ಜೀವನದ ಚರಿತ್ರೆ’- `ಸತ್ಯ ಶೋಧನೆ’ ಆಗಿದ್ದರೆ, ಕೌಶಿಕ್ ಅವರ ಲೇಖನಿಯಿಂದ ಮೂಡಿಬಂದಿರುವ, ದರ್ಪದ ನಡೆನುಡಿಯ, ಬಡವರ ಶೋಷಣೆಗೆ ಕಾರಣವಾಗಿದ್ದ ತಂದೆಯ ಶ್ರೀಮಂತಿಕೆಯನ್ನು ಧಿಕ್ಕರಿಸಿ ಸ್ವಾಭಿಮಾನದ ಬಡತನದಲ್ಲಿ ಕಾಯಕದ ಜೀವನ ಸಾಗಿಸಿದವನ ಹಿರಿಯ ಮಗನಾಗಿ, ತಾಯಿಯ ಒತ್ತಾಸೆಯಿಂದ ಶಾಲೆಯ ಮೆಟ್ಟಿಲೇರಿ ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದ ಈ ಜಾಕೋಬ್ ಲೋಬೊ ಎಂಬ ಸಾಮಾನ್ಯ ವ್ಯಕ್ತಿಯ, ನಾಡ ಭಾಷೆ ಕನ್ನಡಕ್ಕಾಗಿ ಸದಾ ತುಡಿಯುತ್ತಿರುವ ಆತ್ಮಾಭಿಮಾನಿ ಕನ್ನಡಿಗನ, ಎಲ್ಲರ ಕಷ್ಟಕ್ಕೆ ಆಗುತ್ತಿದ್ದ ಇಲಾಖೆಯೊಂದರ ಹಿರಿಯ ಅಧಿಕಾರಿಯ ಬದುಕಿನ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತಿರುವ ಈ `ಜೀವನ ಚರಿತ್ರೆ’ಯು, ಸತ್ಯಸಂಧತೆ, ಪ್ರಾಮಾಣಿಕತೆ, ನೈತಿಕತೆ ಮೊದಲಾದ ಸಾತ್ವಿಕ ಮೌಲ್ಯಗಳೊಂದಿಗಿನ ಅನುಸಂಧಾನವೇ ಆಗಿದೆ. 

 

***********************


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...