Saturday, 9 May 2020

ಸ್ವರ್ಗವೆಂದರೇನು?


ಪ್ರೀತಿಯ ಅನುಗೆ

ಶುಭಹಾರೈಕೆಗಳು. ಸ್ವರ್ಗ ಎಂದರೇನು? ಸ್ವರ್ಗಕ್ಕೆ ಯಾರು ಆರ್ಹರು? ಹೀಗೆ ಅನೇಕ ಪ್ರಶ್ನೆಗಳು ಶತಮಾನಗಳಿಂದ ಜನರನ್ನು ಕಾಡುತ್ತಾ ಬಂದಿವೆ. ಬಸವಣ್ಣವರು “ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ! ಸತ್ಯವ ನುಡಿವುದೇ ದೇವಲೋಕ. ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೇ ಸ್ವರ್ಗ, ಅನಾಚಾರವೇ ನರಕ. ಕೂಡಲಸಂಗಮದೇವಾ, ನೀವೇ ಪ್ರಮಾಣು” ಎಂದು ಹೇಳುತ್ತಾನೆ. ಎಲ್ಲಿ ಆಚಾರ ವಿಚಾರಗಳು ನಡೆಯುತ್ತವೋ, ಎಲ್ಲಿ ಆಚಾರವಂತರು ಇದ್ದಾರೋ, ಎಲ್ಲಿ ವಿನಯವಂತರು ಇದ್ದಾರೋ ಅದಕ್ಕಿಂತ ಸ್ವರ್ಗ ಬೇರೆ ಇಲ್ಲ, ಇಂಥ ಪರಿಸರವೇ ಸ್ವರ್ಗ ಲೋಕ ಎಂದು ಭಾವಿಸುವ ಮಾತಿದು. ಎಲ್ಲಿ ಆದರ, ಅನಾಚಾರ, ಮೋಸ, ಲಂಚ ಇವೆಲ್ಲಾ ಇರುತ್ತದೋ ಅದೇ ನರಕ. ಅದಕ್ಕಿಂತ ಕೆಟ್ಟ ನರಕ ಬೇರೆ ಇಲ್ಲ ಎಂದು ಹೇಳುತ್ತಾ ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮ ದೇವನಲ್ಲಿ ಬೇಡಿಕೊಳ್ಳುತ್ತಾರೆ.

ಇಲ್ಲಿ ಒಂದು ಘಟನೆ ಬಗ್ಗೆ ನಿನಗೆ ಹೇಳಲು ಬಯಸುತ್ತೇನೆ. ಮುಗ್ಧ ಮಕ್ಕಳು ಪೋಪ್ ಫ್ರಾನ್ಸಿಸ್‍ರವನ್ನು ಪ್ರಶ್ನಿಸುವ ಒಂದು ಕಾರ್ಯಕ್ರಮ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಪೋಪ್ ಫ್ರಾನ್ಸಿಸ್ ಉತ್ತರಿಸುತ್ತಿದ್ದರು. ಇಮ್ಯಾನುವೆಲ್‍ಗೆ ಪ್ರಶ್ನೆ ಕೇಳುವ ಸರದಿ. ಪ್ರಶ್ನೆ ಕೇಳಲು ಮೈಕ್ ಮುಂದೆ ಬರುವ ಇಮ್ಯಾನ್ಯುವೆಲ್ ಪ್ರಶ್ನೆ ಕೇಳಲಾಗದೆ ಹೆಪ್ಪುಗಟ್ಟಿದ ದುಃಖದಿಂದ ಅಳಲು ಪ್ರಾರಂಭಿಸಿ, ‘ನನಗೆ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ’ ಎಂದು ರೋಧಿಸುತ್ತಾನೆ. ಪರಿಸ್ಥಿತಿಯನ್ನು ಆರ್ಥಮಾಡಿಕೊಂಡ ಪೋಪ್ರವರ ಸಹಾಯಕನು ಬಾಲಕನ ಹತ್ತಿರ ಬಂದು ಹುಡುಗನನ್ನು ಸಮಾಧಾನ ಪಡಿಸಿ, ಪ್ರಶ್ನೆ ಕೇಳಲು ಹುರಿದುಂಬಿಸಿದರೂ, ಇಮ್ಯಾನ್ಯುವೆಲ್‍ಗೆ ಪ್ರಶ್ನೆ ಕೇಳಲು ಸಾಧ್ಯವಾಗಲಿಲ್ಲ. ಹೆಪ್ಪುಗಟ್ಟಿದ ದು:ಖದಿಂದ ಅವನ ನಾಲಿಗೆ ಕಟ್ಟಿದಂತಾಗಿದೆ. ತಕ್ಷಣಪೋಪ್ರವರು “ಪ್ರಶ್ನೆಯನ್ನು ನನ್ನ ಕಿವಿಯಲ್ಲಿ ಪಿಸುಗಟ್ಟಿ ಹೇಳು” ಆದರದಿಂದ ಬಾಲಕನನ್ನು ತನ್ನ ಬಳಿಗೆ ಕರೆದು ಹೇಳುತ್ತಾರೆ. ಸಹಾಯಕನ ಒತ್ತಾಸೆಯಿಂದ ಬಾಲಕ ಪೋಪ್ಬಳಿಗೆ ಬರುತ್ತಾನೆ. ಪೋಪ್ ಅವನನ್ನು ಅಪ್ಪಿಕೊಂಡುಪೋಪ್ ಮತ್ತು ಬಾಲಕ ಪರಸ್ಪರ ಪಿಸುಗುಟ್ಟುತ್ತಾ ಮಾತನಾಡಿಕೊಳ್ಳುತ್ತಾರೆ. ತದನಂತರ ತನ್ನ ಆಸನಕ್ಕೆ ಹುಡುಗ ವಾಪಸ್ಸಾಗುತ್ತಾನೆ. “ನಮ್ಮ ಹೃದಯ ನೊಂದಂತಹ ಸಮಯದಲ್ಲಿ ನಾವು ಕೂಡ ಇಮ್ಯಾನ್ಯುವೆಲ್‍ನಂತೆ ಅಳುತ್ತಾ ನಮ್ಮ ನೋವನ್ನು ಹೊರಹಾಕಬೇಕು” ಎಂದು ಮುಂದುವರಿಸುತ್ತಾ “ಇಮ್ಯಾನ್ಯುವೆಲ್ ತನ್ನ ತಂದೆಗೋಸ್ಕರÀ ದುಃಖಿಸುತ್ತಿದ್ದಾನೆ. ತನ್ನ ತಂದೆಯ ಮೇಲಿರುವ ಅತೀವ ಪ್ರೀತಿಯಿಂದ ತಂದೆಯನ್ನು ನೆನಪಿಕೊಂಡು ನಮ್ಮೆಲ್ಲರ ಮುಂದೆ ಧೈರ್ಯದಿಂದ ಅಳುತ್ತಿದ್ದಾನೆ” ಎಂದು ಪೋಪ್ ಪ್ರಾನ್ಸಿಸ್‍ರವರು ಸಭೆಯನ್ನು ಉದ್ದೇಶಿಸಿ ಹೇಳುತ್ತಾರೆ. ಹುಡುಗನ ಅಪ್ಪಣೆ ಪಡೆದು, ಹುಡುಗನು ಪೋಪ್ರವರನ್ನು ಕೇಳಿದ ಪ್ರಶ್ನೆಯನ್ನು ಸಭೆಯ ಮುಂದೆ ಬಹಿರಂಗಪಡಿಸುತ್ತಾರೆ; “ಸ್ವಲ್ಪ ಸಮಯ ಹಿಂದೆ, ನನ್ನ ತಂದೆ ತೀರಿಕೊಂಡರು. ಅವರು ನಾಸ್ತಿಕರಾಗಿದ್ದರು. ಆದರೂ ನನಗೂ ಮತ್ತು ನನ್ನ ಸಹೋದರನಿಗೂ ದೀಕ್ಷೆಸ್ನಾನ ಕೊಡಿಸಲು ಹಿಂಜರಿಯಲಿಲ್ಲ. ಅವರು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬದುಕಿದರು. ಈಗ ನನ್ನ ತಂದೆ ಸ್ವರ್ಗದಲ್ಲಿದ್ದಾರೆಯೇ?” ಇದು ಹುಡುಗನ ಪ್ರಶ್ನೆಯಾಗಿತ್ತು. “ಹೌದು, ಮಗ ತನ್ನ ತಂದೆಯ ಬಗ್ಗೆ ಇಂತಹ ಒಳ್ಳೆಯ ಮಾತುಗಳಾವುದೆಂದರೆ, ತಂದೆಯು ಕೆಟ್ಟವನಾಗಿರಲು ಸಾಧ್ಯವೇ? ತನ್ನ ತಂದೆಗೊಸ್ಕರ ಸಭೆಯ ಮುಂದೆ ಅಳುವ  ಧೈರ್ಯವನ್ನು ತನ್ನ ತಂದೆಯಿಂದಲೇ    ಪಡೆದಿದ್ದಾನೆ. ಆದ್ದರಿಂದ ಆತನ ತಂದೆಯು ಒಳ್ಳೆಯ ವ್ಯಕ್ತಿಯಾಗಿರಲೇ ಬೇಕು” ಎಂದು ಪೋಪ್ ಸ್ಪಷ್ಟಪಡಿಸುತ್ತಾರೆ. “ಸ್ವರ್ಗಕ್ಕೆ ಯಾರ್ಯಾರು ಹೋಗಲು ಆರ್ಹರೆಂದು ದೇವರು ಮಾತ್ರ ಹೇಳಲು ಸಾಧ್ಯ. ದೇವರಿಗೆ ತಂದೆಯಂತಹ ಹೃದಯವಂತಿಕೆ ಇದೆ. ಮಕ್ಕಳಿಗೆ ಜ್ಞಾನದೀಕ್ಷೆ ಕೊಡಿಸಿ ಒಳ್ಳೆತನದಲ್ಲಿ ಬೆಳೆಸಿರುವ ವ್ಯಕ್ತಿಯಿಂದ ದೇವರು ದೂರ ಸರಿಯಲು ಸಾಧ್ಯವೇ? ಅಂತಹ ಮಗನನ್ನು ಅನಾಥ ಮಾಡುವರೇ?” ಎಂದು ಪ್ರಶ್ನಿಸಿದ್ದಾಗ, ನೆರೆದಿದ್ದ ಮಕ್ಕಳೆಲ್ಲರು “ಇಲ್ಲ” ಎಂದು ಉತ್ತರಿಸುತ್ತಾರೆ. ಮಕ್ಕಳ ಉತ್ತರವನ್ನು ಆಧಾರಿಸಿ “ಇದು ನನ್ನ ಉತ್ತರವೂ ಹೌದು” ಎಂದು ಹುಡುಗನಿಗೆ ಉತ್ತರಿಸುತ್ತಾರೆ. ದೇವರಿಗೆ ಖಂಡಿತವಾಗಿಯೂ ನಿಮ್ಮ ತಂದೆಯ ಬಗ್ಗೆ ಹೆಮ್ಮೆ ಇದೆ, ನಿನ್ನ ತಂದೆಯೊಂದಿಗೆ ಮಾತನಾಡು, ನಿಮ್ಮ ತಂದೆಯ ಬಳಿ ಪ್ರಾರ್ಥಿಸು” ಎಂದು ಹುಡುಗನನ್ನು ಉತ್ತೇಜಿಸುತ್ತಾರೆ.

ಸ್ವರ್ಗವೆಂದರೇನು? ಅದನ್ನು ಹೇಗೆ ವ್ಯಾಖ್ಯಾನಿಸುವುದು? ರೊಮಿಯ ಈ ಮಾತನ್ನು ಕೇಳು:

Out beyond ideas of wrongdoing and right-doing,

There is a field. I’ll meet you there.

When the soul lies down in that grass,

The world is too full to talk about.

Ideas, language, even the phrase ‘each other’ doesn’t make any sense.

 

ಇಂತಿ ನಿನ್ನವ

ಆನಂದ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...