ಡಾ. ದಿನೇಶ್ ನಾಯಕ್
ನಮ್ಮಲ್ಲಿ ದೇಶಭಕ್ತಿ ಅಥವಾ
ದೇಶಪ್ರೇಮ ಮತ್ತು ರಾಷ್ಟ್ರವಾದ ಎಂಬ ಎರಡು ಪದಗಳಿವೆ. ನಾವು ಅದನ್ನು ಒಂದೇ ಅಂತ ಭಾವಿಸಿದ್ದೇವೆ
ಮತ್ತು ಅದೇ ಅರ್ಥಗಳಲ್ಲಿ ಬಳಸುತ್ತಿದ್ದೇವೆ. ಆದರೆ ದೇಶಭಕ್ತಿ ಬೇರೆ, ರಾಷ್ಟ್ರವಾದ ಬೇರೆ. ಈಗ ನಾವು ಯಾವ ದೇಶದಲ್ಲಿ ಬದುಕುತ್ತಿದ್ದೇವೆಯೋ ಆ
ದೇಶವನ್ನು ಪ್ರೀತಿಸಬೇಕಾದ್ದು ಬಹಳ ಮುಖ್ಯ. ಇದನ್ನು ಯಾರೂ ಅಲ್ಲ ಅಂತ ಹೇಳೋದಿಲ್ಲ. ನಾವೆಲ್ಲರೂ
ದೇಶವನ್ನು ಪ್ರೀತಿಸ್ತೇವೆ. ಹಾಗಾಗಿ
ದೇಶಭಕ್ತಿಯಲ್ಲಿ ತೀವ್ರ ಭಾವನಾತ್ಮಕತೆ ಇರುತ್ತದೆ.
ತತ್ತ್ವಜ್ಞಾನಿ ರಸೆಲ್ ಹೇಳ್ತಾನೆ: “ದೇಶಭಕ್ತರು ನಾಡಿಗಾಗಿ ಬಲಿದಾನದ ಮಾತನಾಡುತ್ತಾರೆ.
ಆದರೆ ಕೊಲ್ಲುವ ಮಾತನ್ನಲ್ಲ” ಅಂತ. ಅಂದರೆ ದೇಶಪ್ರೇಮವೆಂದರೆ ದೇಶವನ್ನು ಪ್ರೀತಿಸುವುದು ಮತ್ತು
ಅದಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವುದು. ಆದರೆ ಆಧುನಿಕ ರಾಷ್ಟ್ರಿಯತೆ, ರಾಷ್ಟ್ರವಾದ ಬೇರೆ.
ಇಲ್ಲಿ ಅಧಿಕಾರಶಾಹಿ ದರ್ಪ ಇದೆ. ಇಲ್ಲಿ ತನ್ನ ರಾಷ್ಟ್ರಕ್ಕಾಗಿ ತನ್ನದೇ ರಾಷ್ಟ್ರದ
ಇನ್ನೊಬ್ಬನನ್ನು ಕೊಂದು ಮುಗಿಸುವ ಕ್ರೌರ್ಯ ಇದೆ. ದೇಶಪ್ರೇಮ ಅನ್ನೋದು ವಿಶಾಲಾರ್ಥದಲ್ಲಿ ಒಂದು
ಬಗೆಯ ಸಹಜೀವನ. ಆದರೆ ರಾಷ್ಟ್ರವಾದ ಎನ್ನುವುದು ಒಂದು
ನಿರ್ದಿಷ್ಟವಾದ ರಾಜಕಾರಣ. ದೇಶಪ್ರೇಮದಲ್ಲಿ ಸ್ಥಳೀಯ ಸಂಸ್ಕೃತಿ ಇದೆ, ಸಾಂಸ್ಕೃತಿಕ ಒಡನಾಟವಿದೆ,
ಒಲವಿದೆ. ಆದರೆ ರಾಷ್ಟ್ರವಾದ ಎಲ್ಲ ಕಿರಿ ಅಸ್ಮಿತೆಗಳನ್ನು ಹೊಸಕಿ, ಹಿರಿ ಅಸ್ಮಿತೆಗಳನ್ನು ಸೃಷ್ಟಿಸಿ, ಬೆಳೆಸಿ
ಅಬ್ಬರಿಸುತ್ತದೆ.
ಗಾಂಧಿಗೆ ಆಧುನಿಕ
ರಾಷ್ಟ್ರಪ್ರಭುತ್ವ ಬಗ್ಗೆ ಅಷ್ಟು ಅಸಕ್ತಿ ಇಲ್ಲ. ಅವರ ಒಟ್ಟು ಬರಹಗಳಲ್ಲಿ, ಮಾತುಕತೆಗಳಲ್ಲಿ, ಭಾಷಣಗಳಲ್ಲಿ ಈ ರಾಷ್ಟ್ರವಾದದ
ಬಗ್ಗೆ ಅಷ್ಟೇನೂ ಮಾತನಾಡಲಿಲ್ಲ, ಹೇಳಲಿಲ್ಲ. ಅವರು ತಮ್ಮ ಭಾಷಣಗಳಲ್ಲಿ ಮತ್ತು ಬರಹಗಲಲ್ಲಿ ಅತ್ಯಂತ
ಕಡಿಮೆ ಬಳಸಿದ 2 ಪದಗಳೆಂದ್ರೆ ಒಂದು
ರಾಷ್ಟ್ರವಾದ, ಇನ್ನೊಂದು ಚರಿತ್ರೆ. ಬದಲಾಗಿ
ಅವರು ಮತ್ತೆ ಮತ್ತೆ ಬಳಸಿದ ಪದ ಅಂದ್ರೆ ನಾಗರಿಕತೆ,
ಪಶ್ಚಿಮದ ನಾಗರಿಕತೆ, ಯಂತ್ರ ನಾಗರಿಕತೆ, ಆಧುನಿಕ ನಾಗರಿಕತೆ. ಗಾಂಧೀಜಿಗೆ ಭಾರತೀಯ ನಾಗರಿಕತೆಯ ಬಗ್ಗೆ ವಿಶೇಷ ಒಲವು.
ಯಾಕೆಂದರೆ ನಮ್ಮ ನಾಗರಿಕತೆಯಲ್ಲಿ ನೀತಿಯೇ ಪ್ರಧಾನ. ಇಲ್ಲಿ ನೀತಿಯೇ ಧರ್ಮ. ಪಾಶ್ವಿಮಾತ್ಯ
ನಾಗರಿಕತೆಯಲ್ಲಿ ಕಾನೂನು ಮುಖ್ಯ. ಎಲ್ಲಿ ಕಾನೂನು
ಮುಖ್ಯವಾಗುತ್ತೋ ಅಲ್ಲಿ ಕಟ್ಟುಕಟ್ಟಳೆ ಪ್ರಧಾನವಾಗುತ್ತದೆ. ಕಟ್ಟು ಕಟ್ಟಳೆ ಪ್ರಧಾನ ಆದಾಗ ಒತ್ತಡ, ಒತ್ತಾಯ ಹೆಚ್ಚಾಗಿರುತ್ತದೆ. ಒತ್ತಾಯದಿಂದ ಹಿಂಸೆ
ತಲೆದೋರುತ್ತೆ. ಗಾಂಧಿ ಅರ್ಥದಲ್ಲಿ ನೀತಿ ಅಂದ್ರೆ
ಬಹಳ ಸರಳ. ದಾರಿಯಲ್ಲಿ ಹೋಗುವಾಗ ಯಾರೋ ಒಬ್ಬ ಬಿದ್ದವನನ್ನು ನೋಡ್ತೇವೆ, ಆಗ ನಾವು ಅವನನ್ನು ಅಲ್ಲಿ ಹಾಗೆಯೇ ಬಿಟ್ಟು ಹೋಗೋದಿಲ್ಲ. ಎತ್ತುತ್ತೇವೆ, ಉಪಚರಿಸುತ್ತೇವೆ. ಅದು ಮಾನವೀಯತೆ. ಕಾನೂನು ಕಟ್ಟಳೆಯ ಪ್ರಕಾರ ಹಾಗೆ
ಮಾಡ ಬೇಕಾಗಿಲ್ಲ. ಗಾಂಧಿ ಪ್ರಕಾರ ಇಂಥಾ ಭಾರತೀಯ ನಾಗರಿಕತೆ ಶ್ರೇಷ್ಠವಾದುದು.
ಗಾಂಧಿ ಪ್ರಕಾರ ಆಧುನಿಕ
ನಾಗರಿಕತೆ:
ಆಧುನಿಕ ಪಾಶ್ಚಿಮಾತ್ಯ
ನಾಗರಿಕತೆಯಲ್ಲಿ ಬದುಕುವ ಜನರಿಗೆ ಶರೀರ ಸುಖವೇ ಬಾಳಿನ ಗುರಿ. ಇಲ್ಲಿ ಕೆಲವರು ಸುಖವನ್ನು ಅನುಭವಿಸಲು ಮಿಕ್ಕವರು
ದುಡಿಯಬೇಕು. ಹಾಗಾಗಿ ಈ ನಾಗರೀಕತೆ ಅಸಮಾನತೆಯನ್ನು ಹುಟ್ಟುಹಾಕುತ್ತದೆ. ಇಲ್ಲಿ ಪ್ರಾಪಂಚಿಕ
ಆಕಾಂಕ್ಷೆಗಳಿಗೆ ಮಿತಿಯನ್ನು ಹಾಕುವ ತತ್ತ್ವಗಳಿಲ್ಲ. ಮತ್ತು ಮನುಷ್ಯನ ಕರ್ತವ್ಯಗಳನ್ನು ತಿಳಿಸುವ
ನೈತಿಕ ತತ್ತ್ವಗಳು ಇಲ್ಲಿ ಇಲ್ಲ. ಹಾಗಾಗಿ ಗಾಂಧಿ ಇದನ್ನು ಅನೈತಿಕ, ಅಧರ್ಮ ಅಂತ ಕರೆದ್ರು. ಅವ್ರು ಯೂರೋಪಿನ ಆಧುನಿಕ ನಾಗರಿಕತೆಯನ್ನು
ನಾಗರಿಕತೆ ಅಂತ ಒಪೆÇ್ಪೀದೇ ಇಲ್ಲ. ಆಧುನಿಕ ನಾಗರಿಕತೆ ಮನುಷ್ಯನನ್ನು ಎಲ್ಲಿಗೆ
ಕರೆದುಕೊಂಡು ಹೋಗ್ತದೆ ಅಂತಾಂದ್ರೆ ಮನುಷ್ಯನ ಸರ್ವನಾಶಕ್ಕೆ ಅದು ಕಾರಣ ಆಗುತ್ತೆ. ಯಾಕೆಂದ್ರೆ ಸುಖದ ಸ್ಪರ್ಧೆಗೆ ಬಿದ್ದಾಗ ಸ್ಪರ್ಧೆಯಲ್ಲಿ
ಹಿಂಸೆ ಖಚಿತ. ಈ ಹಿಂಸೆಯಿಂದ ಮನುಷ್ಯ ಮನುಷ್ಯನನ್ನು ಮಾತ್ರ ಕೊಲ್ಲೋದಲ್ಲ. ಪ್ರಕೃತಿಯ ಮೇಲೆ ಆಕ್ರಮಣ ಮಾಡ್ತಾನೆ, ದೇಶಗಳ ಮೇಲೆ ಆಕ್ರಮಣ ನಡೆಸುತ್ತಾನೆ. ಅಷ್ಟೇ ಅಲ್ಲದೆ ಆಧುನಿಕ
ನಾಗರಿಕತೆಯಲ್ಲಿ ಸಮಾಜವನ್ನು ನಿಯಂತ್ರಿಸಲು ಹೊರಗಿನಿಂದ ವ್ಯವಸ್ಥೆ ಮಾಡಲಾಗುತ್ತದೆ(ಮೊಡರ್ನ್
ಸ್ಟೇಟ್). ಆ ವ್ಯವಸ್ಥೆ ನಮ್ಮ
ನಿಯಂತ್ರಣದಲ್ಲಿರುವುದಿಲ್ಲ. ಇಲ್ಲಿ
ಅಧಿಕಾರದ ಮೂಲಕ, ಕಾನೂನಿನ ಮೂಲಕ ಎಲ್ಲವನ್ನೂ
ಕಂಟ್ರೋಲ್ ಮಾಡುವ ಅಧಿಕಾರ ಇದೆ. ಇಂಥಾ ಅಧಿಕಾರ
ಅಪಾಯಕಾರಿ, ಅದರಿಂದ ವ್ಯಕ್ತಿ
ಸರ್ವಾಧಿಕಾರಿಯಾಗಬಲ್ಲ. ಈ ನಾಗರಿಕತೆಯಲ್ಲಿ ಆಸೆ ಹೆಚ್ಚುತ್ತಾ ಹೋಗಿ ಮನುಷ್ಯನಲ್ಲಿ ದುರಾಸೆ
ಹುಟ್ಟುತ್ತೆ. ಮತ್ತಷ್ಟು ಸುಖ, ಮಗದಷ್ಟು ಸುಖ, ಮಿತಿ ಇಲ್ಲದ ಸುಖಕ್ಕಾಗಿ ಮನುಷ್ಯ ಹಾತೊರೆಯುತ್ತಾನೆ. ಸುಖದ ಹಿಂದೆ
ಬಿದ್ದವ ಆಸೆಬುರುಕನಾಗ್ತಾನೆ. ನಮ್ಮ ಶೋಕಿಗೆ, ಮಜಾಕ್ಕೆ, ನಮ್ಮ ಚಪಲಕ್ಕೆ ಇಂಬು ಕೊಡುವಂಥಾದ್ದು ಈ ಆಸೆಗಳು. ಆದ್ದರಿಂದ
ಆಸೆಗಳನ್ನು ಕಂಟ್ರೋಲ್ ಮಾಡದ ಹೊರತು ನಾವು ಉಳಿದುಕೊಳ್ಳಲು ಸಾಧ್ಯವಿಲ್ಲ ಅಂತ ಗಾಂಧಿ ಹೇಳ್ತಾರೆ.
ಗಾಂಧಿಯ ಪ್ರಕಾರ ಅದೇ ಸ್ವರಾಜ್, ಅದುವೇ ಸ್ವಾತಂತ್ರ್ಯ.
ಸ್ವರಾಜ್ಯ
ಸ್ವರಾಜ್ಯ ಅಂದ್ರೆ ಭಾರತೀಯರು
ಭಾರತೀಯರನ್ನು ಆಳುವುದು ಅಲ್ಲ. ಇದೊಂದು ತಾತ್ತ್ವಿಕ ಪರಿಕಲ್ಪನೆ. ವ್ಯಕ್ತಿ ತನ್ನ ಮೇಲೆ ತಾನು
ಸಾಧಿಸುವ ನಿಯಂತ್ರಣ. ಒಬ್ಬ ವ್ಯಕ್ತಿ ತನ್ನನ್ನು
ತಾನು ಆಂತರಿಕವಾಗಿ ನಿಯಂತ್ರಿಸುವುದು. ಆತ್ಮ
ಸಂಯಮಿಯಾಗುವುದು. ವ್ಯಕ್ತಿ ತನ್ನೊಳಗೆ ಒಂದು
ರಾಜ್ಯವನ್ನು ಸ್ಥಾಪಿಸಬೇಕು ಅಂತ ಅರ್ಥ. ಸಮಾಜದಲ್ಲಿ ಪ್ರತಿಯೊಬ್ಬನೂ ಹಾಗೆ ಮಾಡಿದರೆ ಆಗ ಸಮಾಜ ನಿಯಂತ್ರಣದಲ್ಲಿರುತ್ತದೆ.
ಗಾಂಧೀಜಿ ಅವರ ಈ ಸ್ವರಾಜ್ಯದ ಫಿಲಾಸಫಿ ಭಾರತೀಯ ಚಿಂತನಾ ಪರಂಪರೆಯಿಂದಲೇ ಬಂದಿದೆ. ಉದಾ:
ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ವಿಜಯಶಾಲಿಯಾದ ಧರ್ಮರಾಯ ಶರಶಯ್ಯೆಯಲ್ಲಿರುವ
ಭೀಷ್ಮರ ಹತ್ತಿರ ಆಡಳಿತ ನಡೆಸುವ ಬಗ್ಗೆ ಮಾರ್ಗದರ್ಶನ ಕೇಳಲು ಹೋಗ್ತಾನಂತೆ. ಆಗ ಭೀಷ್ಮ
ಹೇಳ್ತಾನೆ: “ನೀನು ಯಾವ ರೀತಿ ಆಡಳಿತ ನಡೆಸಬೇಕೆಂದರೆ ನೀನು ಆಡಳಿತ ನಡೆಸುವ ಅಗತ್ಯವೇ ಇಲ್ಲ, ಆ ರೀತಿಯಲ್ಲಿ ಆಡಳಿತ ನಡೆಸಬೇಕು” ಅಂದನಂತೆ. ಅಂದ್ರೆ ಗಾಂಧಿ ಹೇಳುವ ಹಾಗೆ, ನಿನ್ನ ಪ್ರಜೆಗಳು ಹೇಗಿರಬೇಕಂದ್ರೆ ನಿನ್ನ ಪ್ರಜೆಗಳನ್ನು
ನಿಯಂತ್ರಿಸಲು ಬೇರೆ ಯಾರೂ ಬೇಕಾಗಿಯೇ ಇಲ್ಲ. ಹೊರಗಿನ ವ್ಯವಸ್ಥೆಯೊಂದರ ಅಗತ್ಯವೇ ಇರಬಾರದು. ಈ
ರೀತಿಯ ಮನ:ಸ್ಥಿತಿ ರೂಪುಗೊಳ್ಳಬೇಕು. ಇದು ಗಾಂಧಿಯ ಸ್ವರಾಜ್ಯದ ಆಡಳಿತ ಮಾದರಿ. ಹಾಗಾಗಿ ಗಾಂಧಿಗೆ
ಅಧುನಿಕ ನಾಗರಿಕತೆಯ ಭಾಗವಾದ ಈ ರಾಷ್ಟ್ರ ಕಲ್ಪನೆಯೂ ಅಸಂಗತವಾಗಿ ಕಾಣುತ್ತದೆ. ಯೂರೋಪಿನ ಈ
ಪರಿಕಲ್ಪನೆ ಸರಿಯಾದ ಮಾರ್ಗದಲ್ಲಿ ಬದುಕುವ ಧರ್ಮಮಾರ್ಗದಲ್ಲಿ ಸದಾ ನಡೆಯುವ ಭಾರತೀಯ ನಾಗರಿಕತೆಗೆ
ಸರಿ ಹೋಗದ್ದು ಎಂಬ ಭಾವನೆ ಗಾಂಧಿಯಲ್ಲಿ ಇದೆ. ಯಾಕೆಂದ್ರೆ ಗಾಂಧಿ ದಕ್ಷಿಣ ಆಫ್ರಿಕದಲ್ಲಿ ಬೇರೆ
ಭಾರತವನ್ನು ಕಂಡಿದ್ರು. ಅಲ್ಲಿ ಗುಜರಾತಿಗಳು, ಮುಸಲ್ಮಾನರು, ತಮಿಳರು, ಕೂಲಿ ಕಾರ್ಮಿಕರು, ಬಾಲಕಾರ್ಮಿಕರು - ಹೀಗೆ ಎಲ್ಲರೂ ಜೊತೆಯಾಗಿದ್ದ ಬಹುಮುಖಿಯಾದ, ಬಹುಸಮುದಾಯದ, ಎಲ್ಲರೂ ಸೇರಿ ಸಮಾನ
ನಾಗರಿಕರಾಗಿ ಬದುಕುವ ಭಾರತ ಇತ್ತು. ಅನೇಕ ಧರ್ಮಗಳ,
ಅನೇಕ ಭಾಷೆಗಳ
ಸಂಸ್ಕೃತಿಗಳ ಸಮ್ಮಿಶ್ರಣದ ಮತ್ತು ಕೊಟ್ಟು, ಕೊಂಡು ಬದುಕುವ ಭಾರತವನ್ನು
ಗಾಂಧಿ ಅಲ್ಲಿ ಕಂಡಿದ್ರು. ಅವರಿಗೆ ಹಿಂದು - ಮುಸ್ಲಿಂ ಐಕ್ಯತೆ ಅಂತೂ ತುಂಬಾ ಮುಖ್ಯವಾಗಿತ್ತು.
ಆದ್ರೆ ಆಧುನಿಕ ರಾಷ್ಟ್ರ ಪರಿಕಲ್ಪನೆ ಬಹುರೂಪೀ ಸಂಸ್ಕೃತಿಯನ್ನು ಕರಗಿಸಿ ಏಕಾಕಾರಗೊಳಿಸುವ
ಪ್ರಕ್ರಿಯೆ. ಆಧುನಿಕ ಬಲಿಷ್ಠ ರಾಷ್ಟ್ರವನ್ನು ಕಟ್ಟುವಾಗ ಬಡವರ, ದುರ್ಬಲರ, ಅಲ್ಪಸಂಖ್ಯಾತರ, ಅಸಹಾಯಕರನ್ನು ಬದಿಗೊತ್ತಿ ಎಸೆಯುವ ಅಥವಾ ಹೊಸಕಿ ಹಾಕುವ ಧಾರ್ಷ್ಟ್ಯ
ಇದೆ. ಇಲ್ಲಿ ಬಲಪ್ರಯೋಗವಿದೆ. ಇದರಿಂದ ಹಿಂಸೆ ಹುಟ್ಟುತ್ತೆ. ಇದರಿಂದ ಜನ ಇಲ್ಲಿ ನರಳುತ್ತಾರೆ.
ಮಾತ್ರವಲ್ಲದೆ ಆಧುನಿಕರಾಷ್ಟ್ರದಲ್ಲಿ ಯಂತ್ರ ನಾಗರಿಕತೆ ಬರುತ್ತೆ, ಇಂಗ್ಲಿಶ್ ಶಿಕ್ಷಣ ಇರುತ್ತೆ, ನಗರೀಕರಣ ಇದ್ದೇ
ಇರುತ್ತೆ. ತಂತ್ರಜ್ಞಾನ ಬರುತ್ತೆ. ಗಾಂಧಿ ತಂತ್ರಜ್ಞಾನ ಎಂಬುದು ವಸಾಹತುಶಾಹಿಯ ಉಪಕರಣ ಅಂತ
ಹೇಳಿದ್ರು. ಹಾಗಾಗಿ ಗಾಂಧಿಗೆ ಯಂತ್ರ ನಾಗರಿಕತೆ ಬೇಡವಾಗಿತ್ತು. ಗಾಂಧಿಗೆ ಅಹಿಂಸೆ ಮುಖ್ಯ
ಮೌಲ್ಯ. ಹಿಂಸಿಸುವುದು, ಹೊಡೆದಾಟ ಮಾಡೋದು ಅಂತ ಅಲ್ಲ.
ಅಹಿಂಸೆ ಅಂದ್ರೆ ಪ್ರೀತಿ ಪ್ರೇಮ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ಅಹಿಂಸೆ. ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ ತೋರುವುದು ನಿಜವಾದ
ಅಹಿಂಸೆ. ಅದು ಧೀರರ ದಾರಿ, ಹೇಡಿಗಳದ್ದಲ್ಲ. ಗಾಂಧೀಜಿಗೆ ಸತ್ಯ ಮತ್ತು ಅಹಿಂಸೆ ಒಂದೇ ನಾಣ್ಯದ
ಎರಡು ಮುಖಗಳು. ಗಾಂಧಿಯ ಸ್ವರಾಜ್ಯ ಅಹಿಂಸೆಯ ಮೇಲೆ ನಿಂತಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಒಟ್ಟಿನಲ್ಲಿ
ಗಾಂಧೀಜಿಯವರು ಬಲಿಷ್ಠ ಆಧುನಿಕ ರಾಷ್ಟ್ರದ ನಿರ್ಮಾಣಕ್ಕಿಂತ ಹೆಚ್ಚಾಗಿ ಅಹಿಂಸೆ ಮತ್ತು ಧರ್ಮದ
ಗಟ್ಟಿ ಬುನಾದಿಯ ಮೇಲೆ ನಿಲ್ಲಬೇಕಾದ ಬಹುರೂಪೀ ಸಮಾಜಗಳಿಗೆ ಮಾನ್ಯತೆಯಿರುವ ಸ್ವರಾಜ್ಯದ ಕಡೆಗೆ
ತಮ್ಮ ಒಲವನ್ನು ಹೊಂದಿದ್ದರು ಎಂಬುದನ್ನು ನಾವು ಗಮನಿಸಬೇಕಾಗಿದೆ.
No comments:
Post a Comment