ಗರಿಗಳ ಭಾನುವಾರದಂದು ಇಟಲಿಯ ದಕ್ಷಿಣ ಭಾಗದಲ್ಲಿರುವ ಗಾರ್ಗನೊ ಎಂಬ ಊರಿನಲ್ಲಿ, ಅಲ್ಲಿನ ಸ್ಥಳೀಯ ಕಥೋಲಿಕ ಚರ್ಚಿನ ಪಾದ್ರಿಗಳು ಮತ್ತು ಊರಿನ ಮೇಯರ್ ಮೊದಲಾದವರು ಜಗತ್ತನ್ನು ತಲ್ಲಣಗೊಳಿಸರುವ ಕೊರೊನಾ ವೈರಾಣುವಿಗೆ ದಿಗ್ಬಂಧನ ಹಾಕುವಂತೆ ಆಗ್ರಹಿಸಿ ಸಂತ ಮಿಖೇಲಪ್ಪ ಅವರನ್ನು ಪ್ರಾರ್ಥಿಸಿದ್ದಾರೆ. ಅದೇ ಸಂದರ್ಭದಲ್ಲಿ ಸಂತ ಮಿಖೇಲಪ್ಪ ಅವರ ಸ್ವರೂಪದಲ್ಲಿ ಅವರ ಕೈಯಲ್ಲಿದ್ದ ಕತ್ತಿಯನ್ನು ಕೆಳಗಿಳಿಸಿಕೊಂಡು ಮೆರವಣಿಗೆ ಮಾಡಲಾಗಿದೆ, ಆಶೀರ್ವದಿತ ಪರಮಪ್ರಸಾದ ಮತ್ತು ಪುರಾತನ ಕಾಲದ (1228)ಲ್ಲಿ ಅಲ್ಲಿಗೆ ತಂದಿರಿಸಿದ್ದ ಪವಿತ್ರ ಶಿಲುಬೆಯ ಅವಶೇಷಗಳ (ಪಳೆಯುಳಿಕೆಯ) ಚೂರೊಂದು ಮೆರವಣಿಗೆಯಲ್ಲಿದ್ದವು.
ಸಾಮಾನ್ಯವಾಗಿ ಪ್ರತಿವರ್ಷ
ಸೆಪ್ಟೆಂಬರ್ 29ರಂದು ಪ್ರಧಾನ ದೇವದೂತರಾದ
ಸಂತ ಮಿಖೇಲಪ್ಪರ ಹಬ್ಬದ ದಿನ ಅವರ ಸ್ವರೂಪದಲ್ಲಿರುವ ಕತ್ತಿಯನ್ನು ಕೆಳಗಿಳಿಸಿ ಮೆರವಣಿಗೆ
ಮಾಡುವುದು ಸಂಪ್ರದಾಯ. ಶತಮಾನಗಳ ಹಿಂದೆ, 1656ರಲ್ಲಿ ಪ್ಲೇಗ್
ಕಾಣಿಸಿಕೊಂಡಾಗಲೂ ಸ್ಥಳೀಯ ಚರ್ಚಿನ ಪಾದ್ರಿಗಳು, ಪ್ಲೇಗ್ ನಿವಾರಣೆಗೆ
ಆಗ್ರಹಿಸಿ ಇಂಥ ಮೆರವಣಿಗೆ ನಡೆಸಿದ್ದರು. ಆಗ ಮಾನವಕುಲವನ್ನು ರಕ್ಷಿಸಿದಂತೆ, ಸಂತ ಮಿಖೇಲಪ್ಪ ಅವರು, ಈಗ ಕೊರೊನಾ ಮಹಾಮಾರಿಯಿಂದ
ಜಗತ್ತನ್ನು ಪಾರುಮಾಡುತ್ತಾರೆ ಎಂದು ವಿಶ್ವಾಸಿಸಲಾಗುತ್ತದೆ.
ಚೀನಾ, ಮತ್ತು ಅಮೆರಿಕ ದೇಶಗಳ ನಂತರ ಅತ್ಯಂತ ಸಂಖ್ಯೆಯಲ್ಲಿ ಕೋವಿಡ್-19 ಕಾಯಿಲೆಗೆ ಬಲಿಯಾದವರ ದೇಶವಾದ ಯುರೋಪ ಖಂಡದ ಇಟಲಿ ದೇಶವು ಕೊರೊನಾ
ವೈರಾಣುವಿನ ತಾಂಡವ ನೃತ್ಯದಿಂದ ತತ್ತರಿಸುತ್ತಿದ್ದರೆ,
ಅದೇ ನಾಡಿನ ಅಂಜು
ಎಂಬ ಪಟ್ಟಣದಲ್ಲಿರುವ ಬಸಿಲಿಕಾದಲ್ಲಿ (ಪುಣ್ಯಕ್ಷೇತ್ರ) ಸಂತ ಕೊರೊನಾ ಮತ್ತು ಸಂತ ವಿಕ್ಟರ್
ಹೆಸರಿನ ಸಂತರ ಅವಶೇಷಗಳನ್ನು ಒಂಬತ್ತನೇ ಶತಮಾನದಿಂದ ಕಾಪಿಡಲಾಗಿದೆ. ಈ ಸಂಗತಿ ಇಂದು ಆಸ್ತಿಕರ
ವಿಶೇಷ ಗಮನ ಸೆಳೆಯುತ್ತಿದೆ. ಪ್ಲೇಗ ಹಾವಳಿಯಿಂದ ತತ್ತಿರಿಸಿದಾಗ ನಮ್ಮ ನಾಡಿನಲ್ಲಿ ಪ್ಲೇಗಮ್ಮ
ದೇವತೆಯಾದಂತೆಯೇ, ಸಂತ ಕೊರೊನಾ, ಕೋವಿಡ್ ರೋಗದ ವಿರುದ್ಧದ ಹೋರಾಟದಲ್ಲಿ ಕ್ರೈಸ್ತ ವಿಶ್ವಾಸಿಕರಿಗೆ ಬಲ
ತುಂಬುವ ಪಾಲಕ ಸಂತಳಾಗಿಬಿಟ್ಟಿದ್ದಾಳೆ,
ಪ್ರಚಲಿತ ಐತಿಹ್ಯಗಳ ಪ್ರಕಾರ, ಕ್ರೈಸ್ತ ಧರ್ಮವನ್ನು ಕಡುವೈರಿಯಂತೆ ಕಂಡು ವಿರೋಧಿಸುತ್ತಿದ್ದ
ರೋಮನ್ನರ ಆಡಳಿತವಿದ್ದಾಗ, ರಾಷ್ಟ್ರದ್ರೋಹದ ಆರೋಪಹೊರೆಸಿ, ಕ್ರೈಸ್ತಧಮವನ್ನು ಅಪ್ಪಿಕೊಂಡಿದ್ದ ವಿಕ್ಟರ್ ಹೆಸರಿನ ಯೋಧನೊಬ್ಬನಿಗೆ ರೋಮನ್ ನ್ಯಾಯಾಧೀಶ
ಸೆಬೆಸ್ಟಿಯನ್ ಮರಣದಂಡನೆ ವಿಧಿಸಿರುತ್ತಾನೆ. ಕಣ್ಣು ಗುಡ್ಡೆಗಳನ್ನು ಕಿತ್ತು ಅವನನ್ನು ಕಂಬಕ್ಕೆ
ಕಟ್ಟಿ ಚರ್ಮ ಕಿತ್ತು ಬರುವಂತೆ ಚಾಟಿಯಿಂದ ಹೊಡೆಸಿದರೂ ಆತ ಕ್ರೈಸ್ತಧರ್ಮವನ್ನು ಬಿಟ್ಟು ದೂರ
ಸರಿಯುವುದಿಲ್ಲ.
ಇದನ್ನು ಕಂಡ ರೋಮನ್ ಸೈನಿಕನ
ಹೆಂಡತಿ 16 ವರ್ಷದ ತರುಣಿ ಕೊರೊನಾ ಅವನ
ನೆರವಿಗೆ ಧಾವಿಸಿ, ಕ್ರೈಸ್ತಳಾದ ನಾನೂ ನಿನ್ನ
ಜೊತೆಗೆ ಇರುವೆ ಎಂದು ಅವನ ಕ್ಷೇಮಕ್ಕಾಗಿ ಮಂಡಿಯೂರಿ ಪ್ರಾರ್ಥಿಸುತ್ತಾಳೆ. ಅವಳು
ಕ್ರೈಸ್ತಳಾಗಿರುವ ಸಂಗತಿ ಆಕೆಯ ಗಂಡನಿಗೆ ತಿಳಿದಿರುವುದಿಲ್ಲ. ವಿಕ್ಟರನ ನೆರವಿಗೆ ಬಂದವಳನ್ನು
ಸೈನಿಕರು ನ್ಯಾಯಾಧೀಶ ಸೆಬೆಸ್ಟಿಯನ್‍ನ ಮುಂದೆ ತಂದು ನಿಲ್ಲಿಸುತ್ತಾರೆ. ರಾಜಶಾಸನಕ್ಕೆ ಮರ್ಯಾದೆ
ನೀಡದ ಕೊರೊನಾಳನ್ನು ಜೈಲಿಗೆ ತಳ್ಳಿ, ಹಿಂಸಿಸುತ್ತಾನೆ. ನೇರವಾಗಿ
ನಿಂತಿದ್ದ ಎರಡು ತಾಳೆಮರಗಳನ್ನು ಬಗ್ಗಿಸಿ ತಡೆದು ನಿಲ್ಲಿಸಿ, ಅವುಗಳ ತುದಿಗೆ
ಅವಳನ್ನು ಹಗ್ಗದಿಂದ ಕಟ್ಟಿಹಾಕಿಸುತ್ತಾನೆ. ನಂತರ ಆ ಮರಗಳ ಬಾಗಿದ ತುದಿಗಳಿಗೆ ಕಟ್ಟಿದ
ಹಗ್ಗಗಳನ್ನು ಕತ್ತಿಸಿದಾಗ, ಮರಗಳು ಮರಳಿ ತಮ್ಮ ಮುಂಚಿನ
ನೇರಕ್ಕೆ ಹೋಗಿ ನಿಲ್ಲುತ್ತವೆ. ಅವು ತಮ್ಮ ಪೂರ್ವದ ನೇರಕ್ಕೆ ಹಿಂದಿರುಗುವ ರಭಸದಲ್ಲಿ ಕೊರೊನಾ
ದೇಹ ಹರಿದು ಎರಡು ಹೋಳಾಗಿರುತ್ತದೆ. ಇಷ್ಟಾದ ಮೇಲೆ,
ನ್ಯಾಯಾಧೀಶ
ವಿಕ್ಟರನ ತಲೆ ಕಡಿಸುತ್ತಾನೆ.
ಈ ಘಟನೆ ನಡೆದದ್ದು ಸಿರಿಯಾ
ದೇಶದಲ್ಲಿ ಎಂದು ಹೇಳಲಾಗುತ್ತದೆ. ಮತ್ತೆ ಕೆಲವರು ಅದು ನಡೆದದ್ದು ದಮಾಸ್ಕಸ್ ನಲ್ಲಿ ಎಂದರೆ, ಇನ್ನೊಂದಿಷ್ಟು ಜನ ಅದು ಆಂಟಿಯೋಕ್‍ನಲ್ಲಿ ನಡೆಯಿತು ಎಂದು
ಪ್ರತಿಪಾದಿಸುತ್ತಾರೆ. ಮಾರ್ಕಸ್ ಅವ್ರೇಲಿಯಸ್‍ನ ಕಾಲದಲ್ಲಿ ಕ್ರಿಸ್ತ ಶಕ 170 ವರ್ಷದಲ್ಲಿ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗುತ್ತದೆ.
ರೋಮನ್ ಕಥೋಲಿಕ ಚರ್ಚು
ಅಧಿಕೃತವಾಗಿ ಯೋಗ್ಯ ವ್ಯಕ್ತಿಗಳನ್ನು ಸಂತರೆಂದು ಘೋಷಣೆ ಮಾಡುವ ಪ್ರಕ್ರಿಯೆಯ ಆರಂಭದ ಪೂರ್ವದಿಂದಲೇ, ಜನರು ಇವರಿಬ್ಬರನ್ನು ಸಂತರೆಂದು ಆದರಿಸುತ್ತಿದ್ದಾರೆ. ಹದಿಮೂರನೇ
ಶತಮಾನದಲ್ಲಿದ್ದ ಒಂಬತ್ತನೇ ಪೋಪ್ ಗ್ರೆಗೋರಿ (1227-41)
ಅವರ ಕಾಲದಿಂದ
ಕಥೋಲಿಕ ಧರ್ಮಸಭೆಯು ಅಧಿಕೃತವಾಗಿ ಸಂತರನ್ನು ಘೋಷಿಸುವ ಪ್ರಕ್ರಿಯೆ ಆರಂಭಿಸಿದೆ. ಸಂತ ಕೊರೊನಾ
ಹಳದಿ ಮೇಲಂಗಿ, ನೀಲು ಮೇಲುವಸ್ತ್ರ ತೊಟ್ಟು, ಕೈಯಲ್ಲಿ ಎರಡು ಗರಿಗಳನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ.
ಅವಳನ್ನು ಸ್ಟಿಫನ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಅವಳನ್ನು ಸಂಪತ್ತನ್ನು ಹುಡುಕಿ ಹೊರಟವರ
ಪಾಲಕ ಸಂತಳು ಎಂದು ಗುರುತಿಸಲಾಗುತ್ತದೆ.
ರಕ್ತಸಾಕ್ಷಿಗಳಾದ ಸಂತ
ಕೊರೊನಾ ಮತ್ತು ಸಂತ ವಿಕ್ಟರ್ ಅವರ ಹಬ್ಬದ ದಿನವನ್ನು ಮೇ 14ರಂದು
ಆಚರಿಸಲಾಗುತ್ತದೆ. ಸಾಂಕ್ರಾಮಿಕ ರೋಗ ಹರಡಿದಾಗ, ಅದರಿಂದ ಕಾಪಾಡುವಂತೆ
ಅವರಲ್ಲಿ ಮೊರೆ ಇಡಲಾಗುತ್ತದೆ. ನವೆಂಬರ್ 24 ಅವರ ಸ್ಮರಣೆಯ ದಿನ. ಕೆಲವು
ಕ್ರೈಸ್ತರು ಅದನ್ನು ನವೆಂಬರ್ 11 ರಂದೂ ಆಚರಿಸುವುದುಂಟು.
ಇಟಲಿಯ ಜೊತೆಗೆ ಆಸ್ಟ್ರಿಯಾ ಮತ್ತು ಜರ್ಮನ್ ದೇಶಗಳಲ್ಲಿ ಈ ಸಂತರಿಬ್ಬರನ್ನೂ ಆದರಿಸಲಾಗುತ್ತದೆ.
ರಕ್ತಸಾಕ್ಷಿ ಸಂತ ಕೊರೊನಾಳ
ಹೆಸರಿನ ಅರ್ಥ ಕಿರೀಟ. ಅವಳ ತಲೆಗೆ ಹುತಾತ್ಮರ ಕಿರೀಟ ತೊಟ್ಟವಳು. ವಿಶ್ವವ್ಯಾಪಿ ಕಥೋಲಿಕ
ಧರ್ಮಸಭೆಯ ಸಂತರ ಪಾಲನೆಯಲ್ಲಿ, ಜವಾಬ್ದಾರಿಗಳಲ್ಲಿ ದೇಶ
ದೇಶಗಳ ನಡುವೆ ವ್ಯತ್ಯಾಸಗಳಿರುವುದು ಸಹಜ ಸಂಗತಿಯಾಗಿದೆ. ಇಂಗ್ಲಿಷ್ ಬಲ್ಲ ಬಹುತೇಕ ದೇಶಗಳಲ್ಲಿ
ಅಸಿಸ್ಸಿಯ ಸಂತ ಫ್ರಾನ್ಸಿಸ್ ರು ಪ್ರಾಣಿಪಕ್ಷಿಗಳ ಪಾಲಕ ಸಂತರು. ಇಟಲಿ ಮತ್ತು ಸ್ಪೇನ್
ದೇಶಗಳಲ್ಲಿ ಮಠದ ಸಂತ ಅಂತೋನಿ ಅವರು ಪ್ರಾಣಿಪಕ್ಷಿಗಳ ಪಾಲಕ ಸಂತರಾಗಿದ್ದಾರೆ.
ಈ ಮುಂಚೆ ಸಂತ ಎಡ್ಮಂಡ್
ಮತ್ತು ಸಂತ ರಾಕ್ (ಆರೋಗ್ಯನಾಥ) ಅವರು ಪ್ಲೇಗ ಮಹಾಮಾರಿಯಿಂದ ರಕ್ಷಿಸುವ ಪಾಲಕ ಸಂತರಾಗುವ
ಹೊತ್ತಿಗೆ ಅವರು ಮರಣಿಸಿ ಬಹಳಷ್ಟು ಸಮಯ ಕಳೆದಿತ್ತು. ಸದ್ಯದ ಕೊರೊನಾ ಹಾವಳಿಯ ಪರಿಸ್ಥಿತಿಯಲ್ಲಿ
ಸಂತ ಕೊರೊನಾ, ಜಗತ್ತಿಗೆಲ್ಲಾ ಕೋವಿಡ್-19 ರೋಗದ ಬಗೆಗೆ ಎಚ್ಚರ ವಹಿಸುವ ಮುಂಜಾಗೃತೆ ತೋರುವ ಪಾಲಕ
ಸಂತಳಾಗಿದ್ದಾಳೆ. ಅಮೆರಿಕದ ಮಿಚಿಗನ್ ಪ್ರಾಂತ್ಯದ ಲನ್ಸಿಂಗ್ ಧರ್ಮಕ್ಷೇತ್ರವು ಸಂತ ಕೊರೊನಾ, ಮಹಾಮಾರಿ ರೋಗಗಳ ನಿರೋಧದ ಪಾಲಕ ಸಂತಳೆಂದು ಹೇಳಿಕೊಂಡಿದೆ. ಸದ್ಯದ
ಕೊರೊನಾ ಹಾವಳಿ ಕೊನೆಗೊಂಡಾಗ, ಈ ಸಂತಳ ಅವಶೇಷಗಳನ್ನು
ಆದರಿಸುವ ಕೆಲವು ವಿಶ್ವಾಸಿಕರಿಂದ ಆರಂಭವಾಗಲೂ ಬಹುದು. ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟದ
ಸಂದರ್ಭದಲ್ಲಿ ಸಂತ ಕೊರೊನಾಳ ಸಹಾಯ ಕೋರುವುದು ತಪ್ಪಾಗದು, ಏಕೆಂದರೆ ಆರ್ಥಿಕ
ಹಿಂಜರಿತದಿಂದ ಮೇಲೇಳಲು ಜಗತ್ತಿನ ಎಲ್ಲಾ ದೇಶಗಳಿಂದಲೂ ಯಾವುದಾದರೂ ಮೂಲದ ಸಂಪತ್ತಿನ ಹುಡುಕಾಟ
ನಡೆಯಲೇ ಬೇಕು ಅಲ್ಲವೇ?
ಎಫ್.ಎಂ.ಎನ್
No comments:
Post a Comment