Saturday, 9 May 2020

ದಲಿತ ಕ್ರಿಸ್ತ


- ಅಜಯ್ ರಾಜ್

 ಮುಟ್ಟಾಗಿದ್ದು ತಿಳ್ದು ತಿಳ್ದು ಈ ದರಿದ್ರ ಮುಂಡೆ ಚರ್ಚಿಗೋಗವ್ಳಲ್ಲ... ಇವಳಿಗೆ ಏನಾದ್ರೂ ಗ್ಯಾನ ಅಯ್ತ? ಹಿಂಗ್ ಮಾಡಿ ಮಾಡಿನೇ ನಮ್ ಮನೆಗೆ ದರಿದ್ರ ಬಡ್ದಿರೋದು, ಥೂ...” ಎಂದವಳೇ ಮಗ್ದಲೇನಮ್ಮ ತನ್ನ ಸೊಸೆಯನ್ನು ಶಪಿಸುತ್ತಾ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳತೊಡಗಿದಳು. ಅದ್ಯಾವುದ್ಯಾವುದೋ ಪುಸ್ತಕಗಳನ್ನೆಲ್ಲಾ ತಂದು ಮನೆಯಲ್ಲಿ ಗುಡ್ಡೆಹಾಕಿಕೊಂಡು ಈ ಹಳ್ಳಿಯಲ್ಲಿ ಬದಲಾವಣೆ ತರ್ತೀನಿ ಅಂತ ಓಡಾಡ್ಕೊಂಡು ಇದ್ದ ತನ್ನ ಮಗ ಕೈಕಾಲು ಮುರ್ಕೊಂಡು ಆಸ್ಪತ್ರೆಯಲ್ಲಿರುವುದು ಅವಳ ಕರುಳನ್ನು ಹಿಂಡುತ್ತಿತ್ತು. ತನ್ನ ಈ ಸಂಕಟವನ್ನೆಲ್ಲಾ ಅವಳನ್ನು ಮಾತಾಡಿಸಲು ಬರುತ್ತಿದ್ದ ಎಲ್ಲರ ಬಳಿಯೂ ಹೇಳಿಕೊಳ್ಳುತ್ತಿದ್ದಳು. ಇಂದು ಬೆಳಿಗ್ಗೆ ಅವಳ ಎರಡನೇ ಮಗ ಪ್ರವೀಣ “ಇನ್ನೂ ಊರ್ಗೆಲ್ಲಾ ಹೇಳ್ಕೊಂಡು ಬಾ ಇದನ್ನೆಲ್ಲಾ... ಈ ಊರು ಬಿಟ್ಟು ಎಲ್ಲಾದ್ರು ದೂರ ಹೋಗನ ಅಂದ್ರೆ ಕೇಳಲ್ಲ ಮುದುಕಿ ನೀನು,” ಎಂದು ಬೈದಾಗಿನಿಂದ ಮಗನ ಮೇಲಿನ ಕೋಪವನ್ನು ತನ್ನ ಸೊಸೆಗೆ ವರ್ಗಾಯಿಸಿದ್ದಳು. ಆದರೆ ಪ್ರವೀಣ ಮಾತ್ರ ಹಲವು        ದಿನಗಳಿಂದ ನಡೆಯುತ್ತಿರುವ ಘಟನೆಗಳ ಕುರಿತು ಸುಮಾರು ಹೊತ್ತಿನಿಂದ ತೀವ್ರವಾಗಿ ಯೋಚಿಸುತ್ತಿದ್ದ. ಸದಾ ಹುಡುಗರ ಜೊತೆ ಕ್ರಿಕೆಟ್ಟು, ಸಿನಿಮಾ ಹಾಗೂ ಈಜು ಎಂದೆಲ್ಲಾ ಅಲೆಯುತ್ತಿದ್ದವನ ಮುಖ ಇಂದು ಸತ್ವವನ್ನು ಕಳೆದುಕೊಂಡು ಮಂಕಾಗಿತ್ತು.

****

ಬೆಟ್ಟದಪುರ ಸುಮಾರು 500 ವರ್ಷಗಳ ಇತಿಹಾಸವಿರುವ ಒಂದು ಪುಟ್ಟಹಳ್ಳಿ. ಕ್ರಿ.ಶ. 1600ರ ಆಸುಪಾಸಿನಲ್ಲಿ ಫ್ರಾನ್ಸ್ ದೇಶದಿಂದ ಬಂದ ಫ್ರೆಂಚ್ ಮಿಶನರಿಗಳು ಈ ಹಳ್ಳಿಯಲ್ಲಿ ನೆಲೆಸಿದ್ದ ಎಲ್ಲಾ ಜಾತಿ ವರ್ಗಗಳ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದರು. ಮತಾಂತರಗೊಂಡ ಈ ಹಳ್ಳಿಯ ಬಹುತೇಕ ಹಿಂದೂಗಳು ಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದು ಕ್ರಮೇಣ ಈ ಹಳ್ಳಿ ಶೇ 99 ರಷ್ಟು ಕ್ರೈಸ್ತರೇ ವಾಸಿಸುವ ಕ್ರೈಸ್ತ ಪ್ರಧಾನ ಹಳ್ಳಿಯಾಯಿತು. ಪಕ್ಕದ ಹಳ್ಳಿಗಳಲ್ಲಿ ಪುರೋಹಿತ ವರ್ಗದವರ ಹಾಗೂ ಇತರೆ ಮೇಲ್ಜಾತಿ ಜನರ ಕೈಕೆಳಗಿ ಸಿಕ್ಕಿ ನಲುಗಿಹೋದ ದಲಿತರು ಸ್ವಯಂಪ್ರೇರಿತರಾಗಿ ಕ್ರೈಸ್ತರಾಗಿ ಮತಾಂತರಹೊಂದಿ ಸಮಾನತೆಯ ಹಾಗೂ ಘನತೆಯ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಈ ಹಳ್ಳಿಗೆ ವಲಸೆ ಬಂದಿದ್ದರು. ದಶಕಗಳು ಕಳೆದಂತೆ ಮತಾಂತರಗೊಂಡ ದಲಿತ ಕ್ರೈಸ್ತರೂ ಸಹ ಹೆಚ್ಚುಕಮ್ಮಿ ಬೆಟ್ಟದಪುರದ ಕ್ರೈಸ್ತರ ಸಂಖ್ಯೆಗೆ ಸಮನಾಗಿ ವೃಧ್ದಿಯಾಗಿದ್ದರು. ಆದರೆ ಬೆಟ್ಟದಪುರ ಕ್ರೈಸ್ತರಲ್ಲಿ ಅಘೋಷಿತ ಎರಡು ವಿಭಾಗಗಳಿದ್ದವು. ಒಂದು ಸಾಮನ್ಯ ಕ್ರೈಸ್ತರ ಕೇರಿ, ಮತ್ತೊಂದು ದಲಿತ ಕ್ರೈಸ್ತರ ಕೇರಿ. ಇಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಆ ಊರಿಗೆ ಬಂದ ಅನೇಕ ಪಾದ್ರಿಗಳಿಂದಲೂ ಸಾಧ್ಯವಾಗಲಿಲ್ಲ. ಪಾದ್ರಿಗಳೇಕೆ ಸ್ವತಃ ಬಿಷಪ್ಪರುಗಳಿಂದಲೂ ಸಾಧ್ಯವಾಗಲಿಲ್ಲ. ಬಂದವರೆಲ್ಲರೂ ತಮ್ಮ ಎಂದಿನ ಪ್ರಭೋದನೆಯನ್ನು ಕೊಟ್ಟುಹೊಗುತ್ತಿದ್ದರೇ ವಿನಃ ಇಲ್ಲಿನ ಸಮಸ್ಯೆಗಳು ಯಾವುದೇ ರೀತಿಯ ತಾರ್ಕಿಕ ಅಂತ್ಯ  ಕಾಣುತ್ತಿರಲಿಲ್ಲ. ಇಲ್ಲಿನ ದಲಿತ ಕ್ರೈಸ್ತರು ಮೇಲ್ಜಾತಿಯವರ ಮದುವೆಗಳಿಗೆ ಹೋದರೆ ಎಲ್ಲಿ ಅವರಿಗೆಂದೇ ಪ್ರತ್ಯೇಕವಾದ ಊಟದ ಸ್ಥಳವನ್ನು ಮೀಸಲಿಡುತ್ತಿದ್ದರು. ಇಲ್ಲಿನ ಮೇಲ್ಜಾತಿ ಕ್ರೈಸ್ತರಿಗೆ ಊರಿನಲ್ಲಿ ಮೂರ್ನಾಲ್ಕು ಕ್ಷೌರದಂಗಡಿಗಳಿದ್ದರೂ ದಲಿತ ಕ್ರೈಸ್ತರು ಅಲ್ಲಿಗೆ ಹೋಗುವಂತಿರಲಿಲ್ಲ. ಅವರಿಗೆಂದೇ ಒಂದು ಪ್ರತ್ಯೇಕ ಕ್ಷೌರದಂಗಡಿಯಿತ್ತು. ಕೊನೆಗೆ ಚರ್ಚಿನಲ್ಲಿಯೂ ಸಹ ಮೇಲ್ಜಾತಿಯವರು ಇವರೊಡನೆ ಬೆರೆಯುತ್ತಿರಲಿಲ್ಲ. ಹೀಗೆ ಹಲವು ತೆರನಾದ ಅಸಮಾನತೆ ಹಾಗೂ ಅವಮಾನಗಳಿಗೆ ಇಲ್ಲಿನ ದಲಿತ ಕ್ರೈಸ್ತರು ನಿರಂತರವಾಗಿ ಮೈಮನಸ್ಸುಗಳನ್ನೊಡ್ಡಿದ್ದರು.

***

ಮಗ್ದಲೇನಮ್ಮಳ ಮಗ ಕಿರಣನೂ ಸಹ ದಲಿತ ಕ್ರೈಸ್ತ. ತನ್ನ ತಲೆಮಾರಿನ ಅನೇಕ ವಿದ್ಯಾವಂತ ಹುಡುಗರಲ್ಲಿ ಈತನೂ ಒಬ್ಬ. ಇಲ್ಲಿನ ದಲಿತ ಕ್ರೈಸ್ತರ ಮಕ್ಕಳೂ ಸಹ ಚೆನ್ನಾಗಿ ಓದಿ, ಮೇಲ್ಜಾತಿಯವರಿಗೇನು ಕಮ್ಮಿಯಿಲ್ಲದಂತೆ ಸುಶಿಕ್ಷಿತರಾಗಿ ಇಂಜಿನಿಯರ್, ಟೀಚರ್, ಕಾಲೇಜು ಪ್ರೊಫೆಸರ್ ಅಲ್ಲದೆ ಸರ್ಕಾರಿ ಉದ್ಯೋಗಗಳನ್ನೂ ಸಹ ಗಿಟ್ಟಿಸಿಕೊಂಡಿದ್ದರು. ಇವರು ಆರ್ಥಿಕವಾಗಿ ಸಾಕಷ್ಟು ಸ್ಥಿತಿವಂತರಾಗಿದ್ದರೂ ಸಹ ಸಾಮಾಜಿಕವಾಗಿ ತಾವು ದಲಿತರೆನ್ನುವುದು ಹಾಗೂ ಊರಿನ ಮೇಲ್ಜಾತಿ ಕ್ರೈಸ್ತರ ನಿರಂತರ ಮಾನಸಿಕ ಕಿರುಕುಳದಿಂದ ಕನಲಿಹೋಗಿದ್ದರು. ಆದರೆ ಇವರ್ಯಾರೂ ಸಹ ಊರಿನ ಈ ತಾರತಮ್ಯವನ್ನು ಪ್ರಶ್ನಿಸಲು ಧೈರ್ಯಮಾಡಿರಲಿಲ್ಲ. ಆದರೆ ಕಿರಣ ಬಾಲ್ಯದಿಂದಲೇ ಓದುವುದನ್ನು ಗೀಳಾಗಿಸಿಕೊಂಡಿದ್ದ. ತನ್ನ ದೊಡ್ಡಪ್ಪನ ಮಗ ಡೇವಿಡನ ಸಹಾಯದಿಂದ ಹಲವಾರು ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದ. ಇದೇ ಸಮುದಾಯಕ್ಕೆ ಸೇರಿದ್ದ ಪಾದ್ರಿಯೊಬ್ಬರು ಇವನ ಉತ್ಸಾಹ ನೋಡಿ ಇವನನ್ನು ಬೆಂಗಳೂರಿನಲ್ಲಿರಿಸಿ ಅಲ್ಲಿಯೇ ಓದಿಸುತ್ತಿದ್ದರು. ತನ್ನ ಕಾಲೇಜು ದಿನಗಳಲ್ಲಿ ಪ್ರಖ್ಯಾತ ದಲಿತ ಕ್ರೈಸ್ತ ಚಿಂತಕ ಹಾಗೂ ಬರಹಗಾರ ಡಾ. ಡೋಮಿನಿಕ್ ರಾಯಪ್ಪ ಅವರ ಸಾಂಗತ್ಯ ಬೆಳೆಸಿಕೊಂಡ ಕಿರಣ ದಲಿತಪರ ಚಿಂತನೆಗಳಿಗೆ ಮಾರಿಹೋಗಿ, ಆ ಕುರಿತು ಹಲವಾರು ಪುಸ್ತಕಗಳು ಹಾಗೂ ಲೇಖನಗಳನ್ನು ಓದುತ್ತಿದ್ದ. ಡಾ. ಡೋಮಿನಿಕ್ ರಾಯಪ್ಪರ ಚಿಂತನೆಗಳು ಹಾಗೂ ಅವರ ದಲಿತಪರ ಕಾರ್ಯಗಳಿಗೆ ಮಾರುಹೋಗಿದ್ದ ಕಿರಣ, ತನ್ನ ಊರಿಗೆ ಅವರನ್ನು ಕರೆಸಿ ಒಂದು ಉಪನ್ಯಾಸ ಕೊಡಿಸುವ  ಯೋಜನೆಯನ್ನು ಹಾಕಿಕೊಂಡಿದ್ದ. ತಮ್ಮ ಯೋಜನೆಯ ಕುರಿತು ಪ್ರೊಫೆಸರ್ ಡೋಮಿನಿಕರ ಹತ್ತಿರ ಅನೇಕ ಬಾರಿ ಪ್ರಸ್ತಾಪಿಸಿದರೂ ಸಹ ಅವರು ಬಿಝಿಯಾಗಿದ್ದರಿಂದ ಕಿರಣನ ಯೋಜನೆಗೆ ಕಾಲ ಕೂಡಿ ಬಂದಿರಲಿಲ್ಲ. ತಿಂಗಳ ಹಿಂದೆ ಪ್ರೊಫೆಸರ್ ಡೋಮಿನಿಕರೇ ಖುದ್ದು ಕಿರಣನಿಗೆ ಕರೆ ಮಾಡಿ ಸಂಜೆ ಮನೆಗೆ ಬರುವಂತೆ ಹೇಳಿದ್ದರು. ಕಿರಣ ಮತ್ತು ಆತನ ಸ್ನೇಹಿತ ಪ್ರಶಾಂತ್ ಪ್ರೊಫೆಸರರ ಮನೆಗೆ ತಲುಪುವುದರಲ್ಲಿ ರಾತ್ರಿ ಎಂಟು ಗಂಟೆಯಾಗಿತ್ತು. ತಡವಾಗಿದ್ದಕ್ಕೆ ಪ್ರೊಫೆಸರ್ ಬಯ್ಯುತ್ತಾರೆ ಎಂಬ ಅಳುಕಿನಿಂದಲೇ ಅವರ ಮನೆಯ     ಕಾಲಿಂಗ್ ಬೆಲ್ ಒತ್ತಿದ ಕಿರಣನಿಗೆ ಹಿತ್ತಲಲ್ಲಿ ಕಟ್ಟಿದ್ದ ನಾಯಿ ಬೊಗಳುವ ಸದ್ದು ಕೇಳಿಸಿತು. ಮನೆಗೆಲಸದಾಕೆ ಗೌರಮ್ಮ ಅರ್ಧ ಊಟಕ್ಕೆ ಎದ್ದು ಬಂದು ಬಾಗಿಲನ್ನು ತೆರೆದಾಗ ಅವಳ ಕೈ ಎಂಜಲಾಗಿರುವುದನ್ನು ಗಮನಿಸಿದ ಕಿರಣ “ಸಾರಿ. ಸರ್ ನಮ್ಮನ್ನ ಬರೋಕೆ ಹೇಳಿದ್ರು. ಅವರು ಇದ್ದಾರಾ?” ಎಂದು ಕೇಳುವ ಮೊದಲೇ ಗೌರಮ್ಮ ಮೇಲಿದ್ದಾರೆ ಹೋಗಿ ನೋಡಿ ಎಂದು ಬಾಗಿಲನ್ನು ಮುಚ್ಚಿದಳು. ಮೆಟ್ಟಿಲು ಹತ್ತಿ ಮೇಲೆ ಹೋದ ಕಿರಣ ಹಾಗೂ ಪ್ರಶಾಂತನಿಗೆ ಮಂದ ಬೆಳಕಿನಲ್ಲಿ, ಚಂದ್ರನನ್ನೇ ದಿಟ್ಟಿಸುತ್ತಾ ಸಿಗರೇಟು ಸೇದುತ್ತಿದ್ದ ಪ್ರೊಫೆಸರ್ ಕಂಡರು. ಕೊಂಚ ದಣಿದವರಂತೆ ಕಂಡರೂ ತಮ್ಮ ಎಂದಿನ ಧಾಟಿಯಲ್ಲಿ “ಬನ್ರಯ್ಯಾ... ಯಾಕಿಷ್ಟು ಲೇಟು? ಊಟ ಮಾಡ್ತೀರೇನಯ್ಯಾ? ಎಂದು ಕೇಳಿದಾಗ ಕಿರಣನಿಗೆ ಇದ್ದ ಅಳುಕು ಮಾಯವಾಗಿ ಕೊಂಚ ಹಾಯೆನಿಸಿತು. ಸುಮಾರು   ದಿನಗಳ ನಂತರ ಬಿಡುವಾಗಿದ್ದ ಪ್ರೊಫೆಸರ್ ಹುಡುಗರ ಓದು, ಕಾರ್ಯ ಚಟುವಟಿಕೆಗಳ ಕುರಿತು ವಿಚಾರಿಸಿ, ತಮ್ಮ ಅನುಭವಗಳು, ಮುಂದೆ ಮಾಡಬೇಕಾದ ಚಳುವಳಿ, ಕಾರ್ಯಾಗಾರಗಳ ವಿಷಯವನ್ನು ಅವರೊಂದಿಗೆ ಹಂಚಿಕೊಂಡರು. ಅಂಬೆಡ್ಕರ್ ಮತ್ತು ಸಂವಿದಾನ, ಪ್ರಸ್ತುತ ರಾಜಕೀಯ, ಧಾರ್ಮಿಕ ಯಜಮಾನಿಕೆ ಹೀಗೆ ಹತ್ತು ಹಲವು ಸಂಗತಿಗಳ ಕುರಿತು ಮಾತಾನಾಡಿದ ಪ್ರೊಫೆಸರ್ ತಮ್ಮ ವಾಚನ್ನು ನೋಡಿಕೊಂಡಾಗ ರಾತ್ರಿ ಮಧ್ಯರಾತ್ರಿ ಹನ್ನೆರಡೂವರೆಯಗಿತ್ತು. ಹುಡುಗರನ್ನು ಇಂದು ಇಲ್ಲಿಯೇ ಉಳಿದುಕೊಳ್ಳಿ ಎಂದಾಗ ಅವರು ಮರು ಮಾತನಾಡದೆ ಒಪ್ಪಿಕೊಂಡರು. ಮೆಟ್ಟಿಲಿಳಿದು ತಮ್ಮ ರೂಮಿನತ್ತ ನಡೆದು ಹೋಗುತ್ತಿದ್ದವರನ್ನು ಒಂದು ಕ್ಷಣ ತಡೆದ ಕಿರಣ ತನ್ನ ಊರಿನಲ್ಲಿ ಒಂದು ಉಪನ್ಯಾಸ ನೀಡಬೇಕೆಂದು ಕೇಳಿಕೊಂಡ. ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡ ಅವರು “ನೀವು ಒಂದು ಟೈಮ್ ಫಿಕ್ಸ್ ಮಾಡಿ, ಎಲ್ಲಾ ಏರ್ಪಾಡು ಮಾಡೋಳ್ರಯ್ಯಾ... ಅದೆಲ್ಲಾ ಆದ್ಮೇಲೆ ಹೇಳಿ. ಖಂಡಿತ ನಾನು ಬರ್ತೀನಿ” ಎಂದು ಹೇಳಿದಾಗ ಕಿರಣನಿಗೆ ಪರಮಾನಂದವಾಯಿತು. ಅದೇ ಸಮಯಕ್ಕೆ ಕಾಲೇಜಿನ ಬೇಸಿಗೆ ರಜೆ ಬಂತು. ಕಿರಣ ಪ್ರಶಾಂತನನ್ನು ತನ್ನೂರು ಬೆಟ್ಟದಪುರಕ್ಕೆ ಡೋಮಿನಿಕ್ ರಾಯಪ್ಪರ ಉಪನ್ಯಾಸಕ್ಕಾಗಿ ಸಿದ್ಧತೆಮಾಡಿಕೊಳ್ಳುವುದಕ್ಕಾಗಿ ಕರೆದಾಗ ಪ್ರಶಾಂತ್ ಬರಲು ಒಪ್ಪಿಕೊಂಡ. ಅಂದು ಶನಿವಾರದ ಇಳಿಸಂಜೆ ಮೆಜೆಸ್ಟಿಕ್ಕಿನಿಂದ ಹೊರಡುವ ಕೆಂಪು ಬಸ್ಸನ್ನು ಹತ್ತಿದ ಈ ಹುಡುಗರಿಗೆ ಮತ್ತೆ ಎಚ್ಚರವಾಗಿದ್ದು ಕಂಡಕ್ಟರ್ “ಬೆಟ್ಟದಪುರ ಬಂತು ಇಳ್ಕೊಳ್ರಯ್ಯಾ” ಎಂದು ಹೇಳಿದಾಗಲೇ.

***

ಸುತ್ತಲು ಹಸಿರ ಶಾಲನ್ನು ಹೊದ್ದುಕೊಂಡ ಬೆಟ್ಟಗಳು, ರಸ್ತೆಯ ಇಕ್ಕೆಲಗಳ ಗದ್ದೆಗಳಲ್ಲಿ ಜಾನಪದ ಹಾಡುಗಳನ್ನಾಡಿಕೊಂಡು ನಾಟಿ ಮಾಡುತ್ತಿರುವ ಹಳ್ಳಿಯ ಹೆಂಗಸರು, ಕಿರಣ ಮತ್ತು ಪ್ರಶಾಂತ ನಡೆದುಹೋಗುತ್ತಿದ್ದ  ದಾರಿಯುದ್ದಕ್ಕೂ ಬರುವ ತಿಂಗಳು ನಡೆಯುವ ಊರ ಹಬ್ಬದ ಕುರಿತ ವಿಶೇಷ ಫ್ಲೆಕ್ಸು ಮತ್ತು ಬ್ಯಾನರುಗಳೇ ತುಂಬಿ ಹೋಗಿದ್ದವು. ಪ್ರಶಾಂತನು ಹುಟ್ಟಿ ಬೆಳೆದದ್ದೆಲ್ಲಾ ನಗರ ಪ್ರದೇಶವಾಗಿದ್ದರಿಂದ ಹಾಗೂ ಅವನ ಅಜ್ಜಿ ತಾತನೂ ಸಹ ನಗರದವರೇ ಆಗಿದ್ದರಿಂದ ಬೆಟ್ಟದಪುರದ ಪರಿಸರವನ್ನು ನೋಡಿ ಉಲ್ಲಸಿತಗೊಂಡಿದ್ದ.

ಹೇಯ್ ಕಿರಣ, ಏನೋ ಮಾರಾಯ ನಿಮ್ಮ ಊರು ಇಷ್ಟು ಚೆನ್ನಾಗಿದೆ. ಇಲ್ಲಿರೋ ಬೆಟ್ಟಗಳು, ತೋಪುಗಳು, ಪಕ್ಕದಲ್ಲಿ ಹರಿಯೋ ನದಿ... ಅಬ್ಬಾ,,, ಸ್ವರ್ಗ ಮಗಾ... ಚಾನ್ಸ್ ಸಿಕ್ದ್ರೆ ನಾನು ಇಲ್ಲೇ ಸೆಟಲ್ ಆಗಿಬಿಡ್ತೀನಿ.”

ಕಿರಣ “ಹೂಂ. ಇಲ್ಲೆ ಯಾವ್ದಾದ್ರೂ ಹುಡ್ಗೀನ ಪಟಾಯ್ಸಿ ಮದ್ವೆ ಆಗ್ಬಿಡು. ನಮ್ಮೂರ್ ಅಳಿಯ ಆಗ್ಬಿಡ್ತೀಯಾ,” ಎಂದಾಗ ಇಬ್ಬರು ಗೊಳ್ ಎಂದು ನಕ್ಕರು.

ಊರಿನ ಮುಖ್ಯಬೀದಿಯನ್ನು ತಲುಪುತ್ತಿದ್ದಂತೆ ಕಿರಣ ಪ್ರಶಾಂತನಿಗೆ ಒಂದು ನಿಮಿಷ ಚರ್ಚಿನಲ್ಲಿ ಪ್ರಾರ್ಥನೆ ಮಾಡಿಕೊಂಡು ಬರುವುದಾಗಿ ಹೇಳಿದಾಗ ಪ್ರಶಾಂತ್ ತಾನೂ ಬರುವುದಾಗಿ ಹೇಳಿ ಅವನನ್ನು ಹಿಂಬಾಲಿಸಿದ. ಕಿರಣ ಒಳಗಡೆ ಪ್ರಾರ್ಥನೆಗೆ ಹೋದಾಗ ಪ್ರಶಾಂತ ಚರ್ಚಿನ ಆವರಣದಲ್ಲಿ ನಿಂತು ಚರ್ಚಿನ ವಾಸ್ತುಶಿಲ್ಪ, ಅಲ್ಲಿದ್ದ ಯೇಸು, ಮರಿಯಾ ಹಾಗೂ ಸಂತರುಗಳ ಪ್ರತಿಮೆಗಳನ್ನು ಕುತೂಹಲದಿಂದ      ದಿಟ್ಟಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ಚರ್ಚಿನ ಪಕ್ಕದ ಮೈದಾನದಿಂದ ಚಿಕ್ಕ ಹುಡುಗಿ ಜೋರಾಗಿ ಅಳುತ್ತಿರುವುದು ಪ್ರಶಾಂತನಿಗೆ ಕೇಳಿಸಿತು. ಮೊದಲಿಗೆ ಮೆಲ್ಲಗೆ ಕೇಳಿಸುತ್ತಿದ್ದ ಹುಡುಗಿಯ ಅಳುವ ಶಬ್ದ ಕ್ರಮೇಣ ಜೋರಾಗಿ, ಅವಳು ಬಿಕ್ಕಳಿಸುತ್ತಿದ್ದಳು. ಏನಾಗಿದೆ ಎಂದು ನೋಡಲು ಮೈದಾನಕ್ಕೆ ಧಾವಿಸಿದ ಪ್ರಶಾಂತನಿಗೆ ಅಲ್ಲಿನ ದೃಶ್ಯ ಮನಕಲಕುವಂತಿತ್ತು.

ಎಪ್ಪತ್ತರ ಆಸುಪಾಸಿನ ಒಬ್ಬ ವೃದ್ದನನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಮನಬಂದಂತೆ ಥಳಿಸುತ್ತಿದ್ದ. ಆ ಮುದುಕನ ಮೊಮ್ಮಗಳು “ತಾತನನ್ನು ಹೊಡೆಯಬೇಡಿ, ಪ್ಲೀಸ್ ಬಿಟ್ಟುಬಿಡಿ” ಎಂದು ಅಂಗಲಾಚುತ್ತಿದ್ದರೂ ಕೇಳದೆ ಆ ವ್ಯಕ್ತಿ ಮುದುಕನ್ನು ವಾಮಾಗೋಚರವಾಗಿ ಬೈದು ಥಳಿಸುತ್ತಿದ್ದ. ಈ ದೃಶ್ಯವನ್ನು ನೋಡಿದ ಪ್ರಶಾಂತನಿಗೆ ಕರುಳು ಕಿವುಚಿದಂತಾಗಿ ಮುದಕನನ್ನು ಥಳಿಸುತ್ತಿದ್ದ ಆ ವ್ಯಕ್ತಿಯನ್ನು ಹಿಡಿದು ಜೋರಾಗಿ ತಳ್ಳಿ ಮುದುಕನ್ನು ಎಬ್ಬಿಸಿ, ಅವನನ್ನು ಕಲ್ಲುಬೆಂಚಿನ ಮೇಲೆ ಕೂರಿಸಿ, ಕೊಂಚ ನೀರು ಕುಡಿಸಿದ. ಇತ್ತ ಪ್ರಶಾಂತನು ತಳ್ಳಿದ ವೇಗಕ್ಕೆ ಅಷ್ಟು ದೂರ ಹೋಗಿ ಬಿದ್ದಿದ್ದ ವ್ಯಕ್ತಿ ಎದ್ದು ಬಂದು ಪ್ರಶಾಂತನ ಮೇಲೆ ದಾಳಿ ಮಾಡಿದ. ಕಟ್ಟುಮಸ್ತಾಗಿದ್ದ ಪ್ರಶಾಂತ ತನ್ನನ್ನು ಹೊಡೆಯಲು ಬಂದ ಆ ವ್ಯಕ್ತಿಯ ಪಕ್ಕೆಗೆ ಜಾಡಿಸಿ ಒದ್ದಾಗ ಅವನು ಕಿರುಚಿಕೊಂಡು ಕೌಂಪಡಿನ ಗೋಡೆಗೆ ಗುದ್ದಿಕೊಂಡು ಬಿದ್ದ.

ಇದೆಲ್ಲವನ್ನು ದೂರದಿಂದಲೇ ಗಮನಿಸಿದ ಕಿರಣ ಓಡಿ ಬಂದು ಪ್ರಶಾಂತನನ್ನು ಸಮಾಧಾನ ಪಡಿಸಿ, ನಡೆದುದ್ದೇನೆಂದು ಕೇಳಿದಾಗ ಆ ಮುದುಕನ ಮೊಮ್ಮಗಳು ತನ್ನ ತಾತನಿಗೆ ಹಸಿವಾಗಿ ಪಕ್ಕದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಮೇಲ್ಜಾತಿಯವರ ಊಟದ ಪಂಕ್ತಿಯಲ್ಲಿ ಕುಳಿತಿದ್ದಾಗಿಯೂ, ಇದನ್ನು ಕಂಡ ಆ ವ್ಯಕ್ತಿ ತಾತನನ್ನು ಅಲ್ಲಿಂದ ಹೊರಗೆಳೆದುಕೊಂಡು ಬಂದು ಥಳಿಸಿದ್ದಾಗಿಯೂ ಹಾಗೂ ಕಿರಣ ಥಳಿಸುತ್ತಿದ್ದ ಮೇಲ್ಜಾತಿಯವನನ್ನು ಹೊಡೆದು ತನ್ನ ತಾತನನ್ನು ರಕ್ಷಿಸಿದ್ದಾಗಿಯೂ ಎಲ್ಲವನ್ನು ಒಂದೇ ಉಸಿರಿನಲ್ಲಿ ಕಿರಣನಿಗೆ ಒಪ್ಪಿಸಿದಳು. ಪ್ರಶಾಂತನ ಈ ಕೃತ್ಯದಿಂದ ಆಗಬಹುದಾದ ಅನಾಹುತವನ್ನು ಒಮ್ಮೆಲೆ ಗ್ರಹಿಸಿದ ಕಿರಣ ಅವನನ್ನು ವೇಗವಾಗಿ ಕರೆದುಕೊಂಡು ತನ್ನ ಮನೆಯೆಡೆಗೆ ಹೊರಟುಬಿಟ್ಟ.

***

ಅಲ್ವೋ, ಇದೆಲ್ಲಾ ಯಾಕೋ ಬೇಕಿತ್ತು ನಿಂಗೆ? ಈ ಊರಿನ ಸಮಾಚಾರ ನಿನಗೆ ಗೊತ್ತಿಲ್ಲ. ಅವರೇನಾದ್ರೂ ಮಾಡ್ಕೊಳ್ಳಿ ಎಂತ ಸುಮ್ನೆ ಇರ್ಬೇಕಿತ್ತು ನೀನು,” ಎಂದಾಗ ಕಿರಣ ಮುಖದಲ್ಲಿ ಭಯ ಮಿಶ್ರಿತ ಅಸಹನೆಯೊಂದು ಸುಳಿದು ಮಾಯವಾಯಿತು.

ಲೇಯ್, ಆ ಗಡವ ನನ್ಮಗ ಪಾಪ ಆ ಮುದುಕನ್ನ ಒಳ್ಳೆ ನಾಯಿಗೊಡ್ದಂಗ್ ಹೊಡಿತಿದ್ರೆ ನಾನು ನೋಡ್ಕೊಂಡು ಸುಮ್ನಿರ್ಬೇಕಿತ್ತಾ? ನೀನು ಇನ್ನೊಂದ್ ಸ್ವಲ್ಪ ಲೇಟಾಗಿ ಬರ್ಬೇಕಿತ್ತು, ಆ ಬೋಳಿಮಗನ್ ಕೈಕಾಲು ಮುರಿತಿದ್ದೆ.” ಪ್ರಶಾಂತನ ಮುಖ ಕೋಪದಿಂದ ಕಡುಗೆಂಪಾಗಿತ್ತು. ಪ್ರಶಾಂತನ ಈ ಮಾತುಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಕಿರಣ ಮೌನವಾಗಿದ್ದ. ತನ್ನ ಮಾತುಗಳಿಗೆ ಕಿರಣನ ಉತ್ತರವನ್ನು ನಿರೀಕ್ಷಿಸಿದ್ದ ಪ್ರಶಾಂತನಿಗೆ ನಿರಾಸೆಯಾಯಿತು. ತಾನೇ ಮೌನವನ್ನು ಮುರಿದ ಪ್ರಶಾಂತ್ “ಕಿರಣ್, ನಿಮ್ಮ ಕ್ರೈಸ್ತಧರ್ಮದಲ್ಲೂ ಜಾತಿ ತಾರತಮ್ಯವಿದೆ ಅಂತ ಇವತ್ತೇ ಕಣೋ ನಂಗೆ ಗೊತ್ತಾಗಿದ್ದು. ಇಲ್ಲಿಯವರೆಗೂ ನಮ್ಮ ಹಿಂದೂ ಧರ್ಮದಲ್ಲೇ ಈ ರೀತಿಯ ಜಾತಿ ವ್ಯವಸ್ಥೆ ಇದೆ ಅನ್ಕೊಂಡಿದ್ದೆ. ಆದ್ರೆ ಇಲ್ಲೂ ಕೂಡ ಅದೇ ಕತೆ” ಎಂದು ಹೇಳಿ ನಿಟ್ಟುಸಿರು ಬಿಟ್ಟ.

ಸ್ವಲ್ಪ ಸಮಯದ ಹಿಂದೆ ಚರ್ಚಿನ ಮೈದಾನದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ತನ್ನ ಬದುಕನ್ನು ಮೌನದ ಪರಿಧಿಯಲ್ಲಿ ವಿಮರ್ಶಿಸುತ್ತಿದ್ದ ಕಿರಣನ ಮನದ ಸ್ಮøತಿ ಪಟಲದ ಮೇಲೆ ದಲಿತ ಕ್ರೈಸ್ತನಾಗಿ ತಾನು ತನ್ನ ಬಾಲ್ಯದಿಂದ ಅನುಭವಿಸಿದ ನೋವು ಅವಮಾನಗಳು ಒಂದು ಕ್ಷಣ ಮೂಡಿಬಂದು ಮರೆಯಾದವು. ಈಗ ಪ್ರಶಾಂತನ ಮೌನವನ್ನು ಭಂಗಗೊಳಿಸಲು ಕಿರಣ ಮಾತಿಗಿಳಿದ.

ಪ್ರಶಾಂತ್, ನಮ್ಮ ಪೂರ್ವಜರು ಮೂಲತಃ ಹಿಂದೂಗಳು, ಅದರಲ್ಲೂ ದಲಿತರು. ನಮ್ಮ ಮೂಲ ಧರ್ಮದಲ್ಲಿ ಶತಮಾನಗಳಷ್ಟು ಶೋಷಣೆ ಅನುಭವಿಸಿದ ಅವರು, ಘನತೆ, ಸ್ವಾಭಿಮಾನದ ಬದುಕು ನಮ್ಮದಾಗುತ್ತದೆ ಎಂದು ಕ್ರೈಸ್ತಧರ್ಮಕ್ಕೆ ಮತಾಂತರವಾದರು. ಆದರೆ ಇಲ್ಲೂ ಸಹ ಶತಮಾನಗಳ ಹಿಂದೆ ಕ್ರೈಸ್ತಧರ್ಮಕ್ಕೆ ಮತಾಂತರವಾದ ಮೇಲ್ಜಾತಿಯವರೇ ಇದ್ದಾರೆ. ಅವರ ಆಚರಣೆಗಳು, ಭಕ್ತಿ, ಆರಾಧನೆಗಳು ವಿಭಿನ್ನವಾಗಿದ್ದರೂ ಮನಸ್ಸಿನಲ್ಲಿನ ಜಾತಿ ವ್ಯಸನ ಎಳ್ಳಷ್ಟೂ ಕಡಿಮೆಯಾಗಿಲ್ಲ ಕಣೊ.” ಕಿರಣ ತನ್ನ ಒಡಲಾಳದ ವೇದನೆಗಳನ್ನು ಪ್ರಶಾಂತನಲ್ಲಿ ನಿವೇದಿಸಿಕೊಂಡ.

ಅಲ್ವೋ, ಕ್ರಿಸ್ತ ಹುಟ್ಟಿದ್ದು ಒಂದು ದನದ ಕೊಟ್ಟಿಗೆಯಲ್ಲಿ. ಬೆರೆತಿದ್ದು ಬಡವರೊಡನೆ ದಲಿತರೊಡನೆ. ನಾನು ಬೈಬಲಿನಲ್ಲಿ ಓದಿದ ಹಾಗೆ ಯೇಸುಕ್ರಿಸ್ತ ದಲಿತರು, ಬಡವರು, ಸಮಾಜದಿಂದ ತಿರಸ್ಕøತರಾಗಿದ್ದವರ ಜೊತೆ ಬೆರೆತರು. ಅದರಲ್ಲೂ ಅವರ ಶಿಷ್ಯರೆಲ್ಲ ಬಹುತೇಕ ದಲಿತರೇ ಆಗಿದ್ದರು. ಈಗಿರೋವಾಗ ಅವನ ಹಿಂಬಾಲಕರು ಅನ್ನಿಸಿಕೊಳ್ಳೋ ಇವರಲ್ಲೇಕೋ ಈ ಭೇಧಭಾವ? ಎಲ್ಲರಲ್ಲೂ ಹರಿಯೋದು ಒಂದೇ ರಕ್ತ ತಾನೇ?”

ಅದು ನನಗೂ ನಿನಗೂ ಅರ್ಥ ಆಗುತ್ತೆ ಆದ್ರೆ ಈ ಜನಕ್ಕೆ. ನಮ್ಮ ಪಾಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರು ಇರದೆ ಹೋಗಿದ್ದರೆ ಈಗಲೂ ಸಹ ನಾವು ಜೀತಧಾಳುಗಳಾಗಿರಬೇಕಿತ್ತು. ನಮ್ಮ ಪಾಲಿಗೆ ವಿದ್ಯೆ, ಘನತೆಯ - ಸ್ವಾಭಿಮಾನದ ಬದುಕು ಕನಸಾಗಿಯೇ ಉಳಿಯುತ್ತಿತ್ತು. ನಮ್ಮ ದೇಶದಲ್ಲಿ ಸಂವಿಧಾನ ಇದ್ದರೂ, ನಾವು ನಮ್ಮ ಜೀವನ ಸಾಕಷ್ಟು ಸುಧಾರಣೆಯಾದರೂ ಸಹ ಇವತ್ತಿಗೂ ದಲಿತರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೀತಾನೆ ಇದೆ. ತನ್ನ ಸಮಾಜದಲ್ಲಿ ಬಡವರ ಶೋಷಿತರ, ದಮನಿತರ ಪರ ದನಿಯೆತ್ತಿದ. ಪ್ರಭುತ್ವವನ್ನು ಧಿಕ್ಕರಿಸಿ, ಜನರಿಗೆ ಕಬ್ಬಿಣದ ಕಡಲೆಯಂತಿದ್ದ ಧಾರ್ಮಿಕ ಕಟ್ಟಳೆಗಳನ್ನು ಸರಳಗೊಳಿಸಿ ತನ್ನ ಸಾಮತಿಗಳ ಮೂಲಕ ‘ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು,’ ಎಂದು ಸಾರಿದ. ಕ್ರಿಸ್ತ ದಲಿತರಲ್ಲಿ ದಲಿತನಾಗಿ ಅವರ ಬವಣೆಗಳನ್ನು ಅರ್ಥಮಾಡಿಕೊಂಡ. ಶತಮಾನಗಳುದ್ದಕ್ಕೂ ದಲಿತರು, ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಎಂಬ ಹಣೆಪಟ್ಟಿಯನ್ನೊತ್ತಿಕೊಂಡು ನಿರಂತರ ಶೋಷಣೆಯನ್ನನುಭವಿಸಿದವರಿಗೆ ಕ್ರಿಸ್ತನ ಸಾಂಗತ್ಯ ಬದುಕಿಗೆ ಸಾಂತ್ವನವನ್ನು ನೀಡಿತು. ಆತನ ಭರವಸೆಯ ಮಾತುಗಳಿಂದ ಅವರ ಹೃನ್ಮನಗಳ ಬಾರ ಹಗುರವಾಯಿತು. ಆದರೆ ಇಂದು ಆತನನ್ನು ಹಿಂಬಾಲಿಸುತ್ತಿದೇವೆ ಎಂಬುವವರ ನಡವಳಿಕೆಗಳು ಆತನ ಬೋಧನೆಗಳಿಗೆ ವಿರುಧ್ಧವಾಗಿದೆ. ಕ್ರಿಸ್ತೀಯ ಬದುಕಿನ ಮೂಲ ಆಶಯವನ್ನೇ ಇವರು ಮರೆತಿದ್ದಾರೆ,” ಹೀಗೆ ಕಿರಣ ಭಾವಾವೇಷದಿಂದ ಮಾತನಾಡುತ್ತಿರುವಾಗಲೇ ಅವನ ಚಿಕ್ಕಪ್ಪ ಕ್ವಾಟ್ರು ಇನ್ನೇಶಿ ಓಡಿಬಂದವನೇ ಒಂದೇ ಉಸಿರಿನಲ್ಲಿ “ಲೋ, ಕಿರಿಣ, ಮಧ್ಯಾಹ್ನ ನೀನು ನಿನ್ ಪ್ರೆಂಡು ದೊಡ್ಮನೆ ಚಿನ್ನಪ್ಪನ ತಾವ ಜಗ್ಳ ಮಾಡ್ಕಂಡು ಅವನ್ನ ಹೊಡ್ದ್ ಬಂದ್ರಂತೆ! ಅದ್ಕೆ ಮೇಲ್ನೋರು ನಿಮ್ಮನ್ನ ಹುಡ್ಕೊಂಡ್ ಬತ್ತಾವ್ರೆ. ಈಗಿಂದೀಗ್ಲೆ ಊರ್ ಬಿಡ್ರೋ,” ಎಂದವನೇ ಊರಿನ ತೋಪಿಗಳ ಕಡೆ ಓಡಿಹೋದ.

ಇದನ್ನು ಕೇಳಿಸಿಕೊಂಡ ಕಿರಣನ ಅಣ್ಣ ಪ್ರವೀಣ “ಕಿರಣ, ಈ ಊರಿನ ಬುದ್ಧಿ ನಿನಗೆ ಗೊತ್ತೆ ಇದೆ. ಅವ್ರು ಸರಿಯಿಲ್ಲ. ನಿನ್ನ ಜೀವಕ್ಕೆ ಅಪಾಯ ಬಂದ್ರೂ ಬರ್ಬೋದು. ಗೊತ್ತಿಲ್ದೆ ನಿನ್ ಸ್ನೇಹಿತ ದೊಡ್ಮನೆ ಚಿನ್ನಪ್ಪನ ಮೇಲೆ ಕೈಮಾಡ್ಬಿಟ್ಟವ್ನೆ. ಪರಿಸ್ಥಿತಿ ಕೆಟ್ಟೋಗಿದೆ ಕಣ್ರೋ. ನೀವು ಈಗಿಂದೀಗ್ಲೆ ಊರ್ ಬಿಡಿ,” ಎಂದು ಹೇಳಿ ಅವರನ್ನೆಳೆದು ಕೊಂಡು ಹಿಂಬಾಗಿಲಿನಿಂದ ಸಾಗಹಾಕಲು ಹೋಗುತ್ತಿದ್ದಂತೆ ಹಿಂಬಾಗಿಲಿನಿಂದ ಬಂದ ಚಿನ್ನಪ್ಪನ ಅಣ್ಣನ ಮಕ್ಕಳು ಮನಸ್ಸೋ ಇಚ್ಛೆ ಕಿರಣನನ್ನೂ ಹಾಗೂ ಪ್ರಶಾಂತನನ್ನು ಥಳಿಸಿದರು. ಇದನ್ನು ತಡೆಯಲು ಬಂದ ಪ್ರವೀಣನಿಗೆ ಹಾಗೂ ಮಗ್ದಲೇನಮ್ಮಳಿಗೂ ಹೊಡೆತಗಳು ಬಿದ್ದವು. ಮನಬಂದಂತೆ ನಿಂದಿಸಿದ ದೊಡ್ಮನೆ ಚಿನ್ನಪ್ಪನ ಮಕ್ಕಳು ಹೊಡೆದ ಹೊಡೆತವನ್ನು ತಾಳಲಾರದೆ ಪ್ರಶಾಂತನ ಪ್ರಜ್ಞೆ ತಪ್ಪಿತು. ಇದೇ ವೇಳೆ ಊರಿನವರ್ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೋಲೀಸರ ಆಗಮನವಾಗುತ್ತಿದ್ದಂತೆ ಚಿನ್ನಪ್ಪನ ಮಕ್ಕಳು ಅಲ್ಲಿಂದ ಪರಾರಿಯಾದರು. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಕಿರಣನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವನ ಕಾಲಿನ ಮೂಳೆಗಳು ಮುರಿದು ತಲೆ, ಕೈ, ಮತ್ತು ಹೊಟ್ಟೆಯ ಭಾಗಗಳಿಗೆ ಗಾಯಗಳಾಗಿದ್ದವು. ಮಗ್ದಲೇನಮ್ಮಳು ತನ್ನ ಮಗನ ಸ್ಥಿತಿಗೆ ಕಾರಣರಾದವರನ್ನೆಲ್ಲಾ ಶಪಿಸುತ್ತಾ, ಪದೇ ಪದೇ ಕಣ್ಣೀರಾಕುತ್ತಿದ್ದಳು. ತನ್ನ ಮಗ ಆಸ್ಪತ್ರೆಯಲ್ಲಿ ಮಲಗಿರುವುದನ್ನು ನೆನೆದಾಗಲೆಲ್ಲಾ ಅವಳ ಹೊಟ್ಟೆ ಹುರಿಯುತ್ತಿತ್ತು. ತನ್ನ ಈ ಆಕ್ರೋಶವನ್ನೆಲ್ಲಾ ಆಗಾಗ್ಗೆ ತನ್ನ ಸೊಸೆಗೆ ವರ್ಗಾಯಿಸುತ್ತಿದ್ದಳು. ಆಗಲೇ “ಈ ಮುಂಡೆ ಮುಟ್ಟಾದಾಗ ಚರ್ಚಿಗೋಗವ್ಳೆ” ಎಂದು ಬೈದದ್ದು. ಆದರೆ ಪ್ರವೀಣ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ಬಹಳ ಹೊತ್ತಿನಿಂದ ಮನೆಯ ಮುಂದಣ ಜಗುಲಿಯ ಮೇಲೆ ಕುಳಿತುಕೊಂಡು ದೂರದ        ದಿಗಂತವನ್ನೇ ದಿಟ್ಟಿಸುತ್ತಿದ್ದನು.

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...