ಫಾ. ವಿಜಯ ಕುಮಾರ್ ಪಿ, ಬಳ್ಳಾರಿ
ಮಾನವ ಜನಾಂಗದ ಸುದೀರ್ಘ
ಇತಿಹಾಸದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಬಂದು ಸಾವುನೋವುಗಳನ್ನು ಹಾಗೂ ಮಾನವ ಜನಾಂಗಕ್ಕೆ
ತುಂಬಲಾರದ ನಷ್ಟವನ್ನೂ ಉಂಟು ಮಾಡಿವೆ. ಅವುಗಳನ್ನು ಮಾನವನು
ದೈವಬಲದಿಂದಲೂ, ವೈಜ್ಞಾನಿಕ ಆವಿಷ್ಕಾರಗಳಿಂದಲೂ
ಹಿಮ್ಮೆಟ್ಟಿಸಿದ್ದಾನೆ. ಆದರೆ ಇಂದು ಕೊರೊನಾ ಎಂಬ ವಿಚಿತ್ರ ಹಾಗೂ ಭಯಾನಕ ವೈರಸ್‍ನಿಂದ ಮತ್ತೆ ಮಾನವ ಜನಾಂಗ ವಿಶ್ವದಾದ್ಯಂತ ಸಂಕಷ್ಟದಲ್ಲಿ
ಸಿಲುಕಿ ಪರಿತಪಿಸುತ್ತಿದೆ. ಇದೊಂದು
ಕಣ್ಣಿಗೆ ಕಾಣದ ವೈರಸ್. ಈ ದುಷ್ಟ ವೈರಸ್ ಮಾನವ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ
ಭಯವನ್ನು ಸೃಷ್ಟಿಸಿ ಮಾನವರೆಲ್ಲರನ್ನು
ಅವರವರ ಮನೆಗಳಲ್ಲಿ ಕೂಡಿಹಾಕಿದೆ (ಲಾಕ್ಡೌನ್). ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಅಯೋಮಯವಾಗಿದೆ.
ಮಂದಿರ, ಮಸೀದಿ, ಚರ್ಚು ಮತ್ತಿತರ ಎಲ್ಲಾ ಆರಾಧನಾ ಮಂದಿರಗಳೂ ಸಹ ಲಾಕ್ ಡೌನ್‍ಗೆ
ತುತ್ತಾಗಿವೆ. ಹಲವರಲ್ಲಿ ರೋಗದ ತೀವ್ರತೆಯ ಆತಂಕವಿದ್ದರೆ, ಹಲವರು ಒಂದೊತ್ತಿನ
ಊಟವೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಮಾನವ ಜನಾಂಗಕ್ಕೆ ಇದು ಅತಿ ದೊಡ್ಡ ಗಂಡಾಂತರವೇ ಸರಿ. ಆದರೆ ಪ್ರಾಣಿ-ಪಕ್ಷಿಗಳು ಮಾತ್ರ ಸ್ವಚ್ಛಂದವಾಗಿವೆ.
ಪ್ರಸ್ತುತ ಕೇಂದ್ರ ಹಾಗೂ
ರಾಜ್ಯ ಸರಕಾರಗಳು ಈ ಅನಿಶ್ಚಿತ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಬಹಳ ಹರಸಾಹಸ
ಮಾಡುತ್ತಿವೆ. ಆರೋಗ್ಯ, ಆರಕ್ಷಕ ಹಾಗೂ ಇತರ ಹಲವು
ಇಲಾಖೆಗಳು ತಮ್ಮ ಶಕ್ತಿಮೀರಿ ಮಾನವ ಜನಾಂಗದ ಉಳಿವಿಗಾಗಿ ಹಗಲಿರುಳೂ ಸೇವೆ
ಸಲ್ಲಿಸುತ್ತಿವೆ. ಹಲವಾರು ಸೇವಾಹೃದಯಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸ್ವಇಚ್ಚೆಯಿಂದ
ಜನಹಿತ ಕಾರ್ಯದಲ್ಲಿ ತೊಡಗಿಸಿಕೊಂಡು ನಿಸ್ವಾರ್ಥತೆಯಿಂದ ಹಗಲಿರುಳೂ ಶ್ರಮಿಸುತ್ತಿವೆ (ಮತ್ತಾಯ 25:31-46). ಹಾಗೆಯೇ ಹಲವರು, ತಳಮಳಗೊಂಡಿರುವ ಮಾನವರಲ್ಲಿ
ಭರವಸೆಯ ಬೆಳಕು ತುಂಬಲು ಶ್ರಮಿಸುತ್ತಿರುವುದು ಶ್ಲಾಘನೀಯ. ಆದರೆ ಇಂಥಹ ವಿಚಿತ್ರವೂ, ಸಂದಿಗ್ಧವೂ ಆದ ಪರಿಸ್ಥಿತಿಗೆ ಮೂಲ ಕಾರಣವೇನು ಎಂದು ಮಾನವರೆಲ್ಲರೂ ಕೂಲಂಕುಷವಾಗಿ
ಅಂತರವಲೋಕನ ಮಾಡಿಕೊಳ್ಳುವುದು ಸೂಕ್ತ.
ಈ ಸುಂದರ ವಿಶ್ವ ಭಗವಂತನ
ಸೃಷ್ಟಿ (ಆದಿ 1:1). ಯಾವುದೂ ಸಹ ಭಗವಂತನ ಇಚ್ಛೆಯಿಲ್ಲದೆ ಉಂಟಾದುದಲ್ಲ
(ಯೊವಾನ್ನ 1:3). ಸರ್ವ ಒಳಿತಿಗೂ ಭಗವಂತನೇ
ಮೂಲ. ಭಗವಂತನೊಬ್ಬನೇ ಈ ವಿಶ್ವದ ಒಡೆಯ. ಬೇರಾರೂ ಈ ವಿಶ್ವದ ಒಡೆಯರಾಗಲೂ
ಸಾಧ್ಯವಿಲ್ಲ. ಆದರೆ ಇಂದು ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಸವಾರಿ ಮಾಡಲು ವಾಮ ಮಾರ್ಗಗಳನ್ನು
ಅನುಸರಿಸಲು ಮುಂದಾಗುತ್ತಿವೆ. ಇದು ಬಹು ಅಪಾಯಕಾರಿ ಬೆಳವಣಿಗೆ. ಭಗವಂತನ ಅನುಗ್ರಹವಿಲ್ಲದೆ ಮಾನವ
ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ
ನಿತ್ಯಸತ್ಯವನ್ನು ಈ 21ನೇ ಶತಮಾನದಲ್ಲಿಯೂ
ಅರಿತುಕೊಳ್ಳದಿರುವುದು ಮಾನವನ ಅe್ಞÁನಕ್ಕೂ, ಆಧ್ಯಾತ್ಮಿಕ ದಿವಾಳಿತನಕ್ಕೂ
ಹಿಡಿದ ಕನ್ನಡಿಯಾಗಿದೆ. ಈ ಕಾರಣ ಇಂದು ಸೃಷ್ಟಿಯಾಗಿರುವ ಈ ವಿಚಿತ್ರ ವಿಷಮ ಪರಿಸ್ಥಿತಿಗೆ ಮಾನವನ ಅತಿಯಾದ ಸ್ವಾರ್ಥವೇ ಮೂಲ ಕಾರಣ ಎಂದರೆ ತಪ್ಪಾಗಲಾರದು.
ಸ್ವಾರ್ಥವು ದುರ್ಗುಣಗಳ ಅತಿ ಎತ್ತರದ
ಶಿಖರ. ಇದು ಮಾನವನನ್ನು ದೇವರಿಂದ ಬೇರ್ಪಡಿಸುತ್ತದೆ. ಹಾಗೆಯೇ ಇದು ಬಹು ಬೇಗ ಬೃಹದಾಕಾರವಾಗಿ
ಬೆಳೆಯುತ್ತ ಮಾನವರನ್ನು ಮಾನವರಿಂದಲೂ ಬೇರ್ಪಡಿಸುತ್ತದೆ. ಅಂತಿಮವಾಗಿ ಮಾನವ ಸ್ವಾರ್ಥದ ಹಿಡಿತದಲ್ಲಿ ಸಿಲುಕಿ ತನ್ನ ವಿನಾಶಕ್ಕೆ ತಾನೇ
ಪ್ರಥಮ ಕಾರಣನಾಗುತ್ತಿದ್ದಾನೆ. ಈ ಕಾರಣ ಮಾನವ ವಿನಾಶÀವಾಗುವÀ ಮುನ್ನ ಎಚ್ಚೆತ್ತುಕೊಂಡು ತನ್ನ ಸ್ವಾರ್ಥದ ಸುಭದ್ರಕೋಟೆಯಿಂದ ಹೊರಬರಲು
ಸತತವಾಗಿ ಭರವಸೆಯಿಂದ, ದೃತಿಗೆಡದೆ ಪ್ರಯತ್ನಿಸಬೇಕು.
ನಿಸ್ವಾರ್ಥಿಯಾದ ಭಗವಂತನತ್ತ ನಿಷ್ಠೆಯಿಂದ ತಿರುಗಿಕೊಳ್ಳುವುದಾದರೆ ಪ್ರೀತಿಸ್ವರೂಪಿಯೂ, ಕರುಣಾಮಯನೂ ಆದ ದೇವರು ಮಾನವನ ಹೃದಯದಲ್ಲಿ ಆಳವಾಗಿ ಬೇರುಬಿಟ್ಟಿರುವ ಸ್ವಾರ್ಥವನ್ನು ಅದರ
ಬೇರು ಸಮೇತವಾಗಿ ಕಿತ್ತುಹಾಕಬಲ್ಲರು. ಆದರೆ ಮಾನವ ಅಷ್ಟು ಸುಲಭವಾಗಿ ಸ್ವಾರ್ಥದಿಂದ ಹೊರಬರಲು
ಬಯಸುವನೇ ಎಂಬುದು ಯಕ್ಷ ಪ್ರಶ್ನೆ! ಏಕೆಂದರೆ ಅದೊಂದು ಆಳವಾದ ಹಾಗೂ ತಳವಿಲ್ಲದ
ಪ್ರಪಾತ.
ಮಾನವನ ಅಪಾರವಾದ ದುರಾಸೆ
ಅವನನ್ನು ಸ್ವಾರ್ಥಿಯನ್ನಾಗಿ ಮಾಡುತ್ತದೆ. ಸ್ವಾರ್ಥ ಬಹಳ ಬಲಿಷ್ಟವಾದ ದುರ್ಗುಣ. ಅದು
ಸದ್ಗುಣಗಳನ್ನು ಅಡಗಿಸಿ ತಾನೇ ಸರ್ವ ಶ್ರೇಷ್ಠ ಎಂಬ ಮದದಲ್ಲಿ ಮುಳುಗಿ ಕೊಬ್ಬಿಹೋಗುತ್ತದೆ. ಈ ಲೋಕದ ಹಣ, ಅಂತಸ್ತು, ಅಧಿಕಾರ, ತಾನೇ ಸರ್ವಶ್ರೇಷ್ಠ ಹಾಗೂ
ಪ್ರಥಮ ಎಂಬ ವ್ಯಾಮೋಹ ಮಾನವನ ನೈಜ ಕಣ್ಣುಗಳನ್ನು ಮುಚ್ಚಿ ಸ್ವಾರ್ಥವೆಂಬ ಸಾವಿನ ಸುಳಿಯಲ್ಲಿ
ಸಿಲುಕಿಸುತ್ತದೆ. “ಒಬ್ಬನು ಪ್ರಪಂಚವನ್ನೆಲ್ಲಾ
ಗೆದ್ದು, ಪ್ರಾಣವನ್ನು ಕಳೆದುಕೊಂಡರೆ
ಅದರಿಂದ ಬರುವ ಲಾಭವಾದರೂ ಏನು?” (ಮಾರ್ಕ 8:36, ಮತ್ತಾಯ 16:26) ಎಂಬ ಪವಿತ್ರ ಗ್ರಂಥದ
ವಾಕ್ಯವನ್ನು ಮಾನವ ಸ್ವಲ್ಪ ಅರ್ಥೈಸಿಕೊಂಡು ಧ್ಯಾನಿಸಿದರೆ ಸ್ವಾರ್ಥದ ಬಲೆಯಿಂದ ಬಿಡಿಸಿಕೊಳ್ಳಲು
ಸಾಧ್ಯ. ಏಕೆಂದರೆ ಈ ನಮ್ಮ ದೇಹ ನಶ್ವರ, ಆತ್ಮ ಚಿರಾಯು.
ಸ್ವಾರ್ಥದಿಂದ ದೇಹವನ್ನು ತೃಪ್ತಿಪಡಿಸಬಹುದೇ ಹೊರತು ಆತ್ಮವನ್ನಲ್ಲ. ದೇಹಾತ್ಮಗಳ
ಸಮ್ಮಿಲನವಾದ ಈ ಮಾನವ ಆತ್ಮವನ್ನು ಬಿಟ್ಟು ಈ ದೇಹವನ್ನು ಮಾತ್ರ ಪೋಷಿಸಿದರೆ ಅದರಿಂದೇನು ಪ್ರಯೋಜನ?
ದೇಹಾತ್ಮಗಳು ಒಂದನ್ನು
ಬಿಟ್ಟು ಮತ್ತೊಂದಿರಲು ಸಾಧ್ಯವಿಲ್ಲ. ಇವೆರಡರ ಪೋಷಣೆ ಸರಿಸಮವಾಗಿ ಸಾಗಬೇಕು. ಈ ದೇಹದಿಂದಲೇ ಆತ್ಮದ ಸಾಕ್ಷಾತ್ಕಾರ. ದೇಹಾತ್ಮಗಳೆರಡೂ ಪ್ರಮುಖವೇ ಈ ಕಾರಣ ಯಾವುದರ ಪೋಷಣೆ ಅಧಿಕವಾದರೂ
ಅಸಮತೊಲನ ಉಂಟಾಗಿ ಮಾನವ ಜೀವನ ದಾರಿ ತಪ್ಪುತ್ತದೆ. ಇದರಿಂದ ಹೊರಬರಬೇಕಾದರೆ ಮಾನವ ಆದಷ್ಟು ಬೇಗ
ಜಾಗೃತನಾಗಬೇಕು. ದುರಾಸೆಯಿಂದ ದೂರವಿದ್ದು ಸಮತೋಲನ ಕಾಪಾಡಿಕೊಳ್ಳಬೇಕು. ಇತಿಮಿತಿಯಲ್ಲಿ
ಬದುಕುವುದನ್ನು ರೂಡಿಸಿಕೊಳ್ಳಬೇಕು. ಅತಿಯಾದರೆ ಅಮೃತವೂ ಸಹ ವಿಷವಾಗುತ್ತದೆ. ಸ್ವ-ನಿಯಂತ್ರಣದಿಂದ ಬದುಕುವ ಕಲೆ
ಕರಗತವಾದರೆ ದುರಾಸೆಗಳು ದೂರವಾಗುತ್ತವೆ. ಆಗ ಸ್ವಾರ್ಥ ಕರಗಿ “ಸರ್ವೇಶ್ವರನ
ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟ
ದಃಖ” (ಜ್ಞಾನೋಕ್ತಿಗಳು10:22) ಎಂಬ ಸುಜ್ಞಾನದ ಬೆಳಕು ಉದಯಿಸುತ್ತದೆ.
ಆಗ ಮಾನವ ಜೀವನ ಸಮತೋಲನಗೊಂಡು, ಈ ಜೀವನ ಈ ಲೋಕಕ್ಕೆ ಮಾತ್ರ ಸೀಮಿತವಲ್ಲ. ಈ ಜೀವನದ
ಈ ಮಾನವ ಜೀವನ ಅರ್ಥಭರಿತವಾಗಿ
ಫಲಧಾಯಕವಾಗಬೇಕಾದರೆ ಪರಹಿತ ಕಾರ್ಯಗಳು ಪ್ರಧಾನವಾಗಬೇಕು. ಮಾನವÀ ತನ್ನ ಸ್ವಾರ್ಥದ ಭದ್ರಕೊಟೆಯಿಂದ ಹೊರಬಂದು ಯಾವ ಭಿನ್ನಭೇದÀಕ್ಕೂ ಎಡೆಮಾಡಿಕೊಡದೆ ವಿವಿಧ ವೈರಸ್‍ನಿಂದ ಬಳಲುತ್ತಿರುವ ನಮ್ಮ
ಸಹೋದರ-ಸಹೋದರಿಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ನೆರವಾಗಬೇಕು. ಹಸಿವಿನಿಂದ ಕಂಗಾಲಾಗಿರುವವರಿಗೆ
ಯಾವುದೇ ಫಲಾಪೇಕ್ಷೆ ಇಲ್ಲದೆ ಸಹಾಯ ಹಸ್ತ ಚಾಚಬೇಕು. “ನಿಮ್ಮೆಲ್ಲರಲ್ಲಿ ಒಂದೇ
ಮನಸ್ಸು, ಒಂದೇ ಪ್ರೀತಿ ಇರಲಿ, ನಿಮ್ಮ ಗುರಿಧ್ಯೇಯಗಳು ಒಂದೇ ಆಗಿರಲಿ ಆಗ ನನ್ನ ಸಂತೋಷವು
ಸಂಪೂರ್ಣಗೊಳ್ಳುವುದು. ಸ್ವಾರ್ಥ ಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ
ಮಾಡಬೇಡಿ, ಪರಸ್ಪರ ನಮ್ರತೆಯಿಂದ
ನಡೆದುಕೊಳ್ಳಿ; ಇತರರು ನಿಮಗಿಂತಲೂ
ಶ್ರೇಷ್ಠರೆಂದು ಪರಿಗಣಿಸಿರಿ” (ಫಿಲಿಪ್ಪಿ 2:2-3) ಎಂಬ ಸಂತ ಪೌಲನ ನುಡಿ ಮಾನವರ ಅಂತರಂಗಗಳಲ್ಲಿ ನಿತ್ಯವೂ
ರಿಂಗಣವಾಗುತ್ತಿರಬೇಕು. ಹಾಗೆಯೆ ಪ್ರತಿಯೊಬ್ಬನೂ “ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ
ಬಯಸಿರಿ” ಎಂಬ ಸಂತ ಪೌಲನ ಬಯಕೆ
ಈಡೇರಬೇಕು. ಮಾನವರಲ್ಲಿ ಈ ಬಯಕೆ ನಿರಂತರವಾಗಿ ಸಾಗಿದರೆ ಸಮಾಜವನ್ನು ಆವರಿಸಿರುವ ಎಲ್ಲಾ ರೀತಿಯ
ವೈರಸ್‍ಗಳನ್ನು ಬಡಿದೋಡಿಸಿ ನವ ಸಮಾಜವನ್ನು ನಿರ್ಮಿಸಿ ಸ್ವಾರ್ಥವನ್ನು ಬೇರುಸಹಿತ
ಕಿತ್ತೊಗೆಯಬಹುದು. ಯಾವ ರಾಷ್ಟ್ರ ಅಥವ ಮಾನವ ತನ್ನ ಸ್ವಾರ್ಥದಿಂದ ನಿಸ್ವಾರ್ಥತೆಯೆಡೆಗ ತಿರುಗಿಕೊಳ್ಳುವುದಿಲ್ಲವೋ ಅಂತಹ ಮಾನವ ಅಥವ ರಾಷ್ಟ್ರ ಪತನವಾಗುವುದು ಖಚಿತ. ಸ್ವಾರ್ಥ ಅಳಿಸುತ್ತದೆ, ನಿಸ್ವಾರ್ಥ
ಬೆಳೆಸುತ್ತದೆ.

No comments:
Post a Comment