Saturday, 9 May 2020

ಸರ್ಕಾರಗಳ ಚಿತ್ತ`ಗಮನಗಾರಿಕೆ’ಯಿಂದ `ಬೇಹುಗಾರಿಕೆ’ಯತ್ತ

ಎಫ್.ಎಂ.ನಂದಗಾವ್

ನಾವು ಇಂದು ಕಂಪೂಟ್ಯರ್ ಯುಗ ದಾಟಿ ಮೊಬೈಲ್ ಯುಗದಲ್ಲಿದ್ದೇವೆ. ಮೊದಮೊದಲು ಲ್ಯಾಂಡ್‍ಲೈನ್ ಟೆಲಿಫೋನ್ (ಸ್ಥಿರ ದೂರವಾಣಿ)ನಂತೆ ಕೇವಲ ಹತ್ತಿರದಲ್ಲಿರದ   ವ್ಯಕ್ತಿಗಳೊಂದಿಗೆ ಮಾತನಾಡುವ ಸೌಕರ್ಯ ಒದಗಿಸುವ ಕಾರ್ಯ ನಿರ್ವಹಿಸುತ್ತಿದ್ದ ಈ ಮೊಬೈಲ್ (ಚರದೂರವಾಣಿ ಅಥವಾ ಜಂಗಮ ವಾಣಿ)ಎಂಬ ಪುಟಾಣಿ ಎಲೆಕ್ಟ್ರಾನಿಕ್ ಸಾಧನ, ಅಲ್ಪ ಕಾಲದಲ್ಲಿಯೇ, ಖಚಿತವಾಗಿ ಹೇಳುವುದಾದರೆ ಕೆಲವು ದಶಕಗಳಲ್ಲೇ ತನ್ನ ಕಾರ್ಯ ಚಟುವಟಿಕೆಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ.

ಅವನ್ನು ಮೊದಲ ತಲೆಮಾರಿನ, ಎರಡನೇ ತಲೆಮಾರಿನ ಮೋಬೈಲ್‍ಗಳು ಎಂದು ಗುರುತಿಸಲಾಗಿದೆ. ಹಲವಾರು ಜಾಣ್ಮೆಯ ಕಾರ್ಯ ನಿರ್ವಹಿಸುವ ಸ್ಮಾರ್ಟ್‍ಪೋನ್ (ಜಾಣ ಜಂಗಮವಾಣಿ)ನನ್ನು ಏರುಗತಿಯಲ್ಲಿನ ಸದ್ಯದ ಅಂತಿಮ ಮಟ್ಟದ್ದು ಎಂದು ಹೇಳಲಾಗುತ್ತದೆ. ಬರಿ ಮೊಬೈಲ್‍ಗಳು ತನ್ನ ಸಂಖ್ಯೆಗಳ, ಅಕ್ಷರಮಾಲೆಯ ಬಟನ್ ಸ್ಥಿತಿಯಿಂದ, ಪರದೆಯ ಮಟ್ಟಕ್ಕೆ ಹೋಗಿ, ದೂರದಲ್ಲಿದ್ದವರು ಎದುರು ಬದುರು ಮುಖ ನೋಡಿಕೊಂಡು (ವಿಡಿಯೋ ಕಾಲ್) ಮಾತನಾಡುವಂತೆ ಆಗಿದೆ. ಹಲವು ಜನ ಏಕ ಕಾಲದಲ್ಲಿ ಪರಸ್ಪರ ಸಂವಾದ ನಡೆಸುವ ಕಾನ್ಫರನ್ಸ್ ಕಾಲ್‍ಗಳನ್ನು ಮಾಡಬಹುದಾಗಿದೆ.

ಈ ಮುಂಚೆ ಕೇವಲ ಪುಟಾಣಿ ಎಲೆಕ್ಟ್ರಾನಿಕ ಸಂಪರ್ಕ ಸಾಧನವಾಗಿದ್ದ ಮೊಬೈಲು, ಇಂದು ಹಲವಾರು ಚಟುವಟಿಕೆಗಳನ್ನು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಹತ್ತು ಹಲವು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಅದರ ಪರಿಯನ್ನು ನೋಡುತ್ತಿದ್ದರೆ, ದ್ವಾಪರ ಯುಗದ ತುಂಟ ಬಾಲಕೃಷ್ಣನ ಬಾಯಲ್ಲಿ ಭ್ರಮ್ಮಾಂಡವನ್ನು ಕಂಡ ಯಶೋದೆಯಂತೆ ಮೊಬೈಲ್‍ನಲ್ಲಿ ಭ್ರಮ್ಮಾಂಡ ಕಂಡು ವಿಸ್ಮಯಗೊಳ್ಳುವ ಸ್ಥಿತಿ ನಮ್ಮದಾಗಿದೆ.

ಅವು ಹಿಂದಿನ ನಮ್ಮ ಹಿರಿಯರ ಕಾಲದಲ್ಲಿನ ಗ್ರಾಮೋಫೋನ್ ಗಳಂತೆ, ಟೇಪ್ ರೆಕಾರ್ಡರ್‍ಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಮತ್ತು ರೇಡಿಯೊ (ಆಕಾಶವಾಣಿ) ವನ್ನು ಅದರಲ್ಲಿ ಕೇಳಬಹುದು. ಸಿನಿಮಾ ನೋಡಬಹುದು. ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಅಂತರ್ ಜಾಲವನ್ನು ಜಾಲಾಡಬಹುದು. ಮೊದಲು ಕೂಡುವ ಕಳೆಯುವ ಯಂತ್ರವಾಗಿ ಬಂದು, ಹಲವಾರು ಕೆಲಸಗಳನ್ನು ನಿರ್ವಹಿಸುವ ಕಂಪ್ಯೂಟರ್ ಗಿಂತ ನಾಲ್ಕಾರು ಹೆಜ್ಜೆ ಮುಂದಿವೆ ಈ ಮೊಬೈಲುಗಳು.

ತಂತಿ ಆಧಾರದ, ನಂತರದಲ್ಲಿ ತಂತಿರಹಿತ (ವೈಯರ್ ಲೆಸ್) ತಂತಿ ಸುದ್ದಿ ವಾಹಕ ಟೆಲಿಗ್ರಾಮ್, ಹ್ಯಾಮ್ ವ್ಯವಸ್ಥೆ ದಾಟಿ ಟೆಲಿಫೋನ್ (ದೂರವಾಣಿ)ಗಳು ಬಂದವು. ನಂತರ ಕೆಲವು ಪದಗಳ ಬಿತ್ತರಣೆಗಾಗಿ ಪೇಜರ್‍ಗಳು ಬಂದವು. ಅಂತರೀಕ್ಷಕ್ಕೆ ಹಾರಿದ ಉಪಗ್ರಹಗಳ ದೆಸೆಯಿಂದ ನಿಸ್ತಂತು ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡ ನಂತರ ಸಂಪರ್ಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾದವು.

ಬ್ಲೂ ಟೂತ್, ವೈ ಫೈ, ಜಿ. ಪಿ ಎಸ್, ವ್ಯವಸ್ಥೆಗಳು ಬಂದಾದ ಮೇಲೆ ಮೊಬೈಲ್ ಬಳಕೆದಾರ ಇರುವ ತಾಣ ಪತ್ತೆ ಹಚ್ಚಲು (ಮಕ್ಕಳ ಮೇಲೆ ನೀಗಾ ಇಡಲು), ಹೋಗಬೇಕಾದ ಜಾಗ ಹುಡುಕುವ ಕೆಲಸ ಸರಳಗೊಳಿಸಿದವು. ಥ್ರಿ ಲೆಟರ್ ವರ್ಡ ಆ್ಯಪ್ ನಿಂದ ಕೂತಲ್ಲೇ ಜಗದ ಮೂಲೆಯ ಜಾಗವನ್ನು ಗುರುತಿಸುವ, ಗೂಗಲ್ ಮ್ಯಾಪ್ (ನಕ್ಷೆ), ಸ್ಟ್ರಾವಾ ಆ್ಯಪ್ ನಿಂದ ಬಳಕೆದಾರ ಓಡುವುದನ್ನು, ನಡೆಯುವುದನ್ನು ದಾಖಲಿಸುವುದು, ಬರಹವನ್ನು ರವಾನಿಸುವುದು (ಟೆಕ್ಸ್ಟ್) ಸಾಧ್ಯವಾಗಿದೆ. ಸಾಂಪ್ರದಾಯಿಕ ಕ್ಯಾಮರಾಗಳು ಮಾಡುವ ಕೆಲಸಗಳಾದ ಫೋಟೊ ತೆಗೆಯೋದು, ವಿಡಿಯೋ ಚಿತ್ರಣಗೈಯುವುದು, ಅವನ್ನು ಅಂತರ್ಜಾಲದಲ್ಲಿ ಹಾಕುವುದು ಮೊದಲಾದವುಗಳನ್ನು ಮೊಬೈಲ್‍ಗಳು ಮಾಡಬಲ್ಲವು, ಮೊಬೈಲ್‍ನಲ್ಲಿ ಆಟ ಆಡಬಹುದು (ಗೇಮ್ಸ್). ಖರೀದಿ ವ್ಯವಹಾರ ನಡೆಸುವುದು (ಶಾಪಿಂಗ್), ಬ್ಯಾಂಕ್‍ಗಳಿಗೆ ಹೋಗದೇ ಬ್ಯಾಂಕ್ ವ್ಯವಹಾರಗಳನ್ನು ನಡೆಸುವುದು,, ವಿವಿಧ ಇಲಾಖೆಗಳ ತೆರಿಗೆ ಮತ್ತು ಬಿಲ್‍ಗಳನ್ನು ಕಟ್ಟುವುದು ಎಲ್ಲವೂ ಮೊಬೈಲ್ ಮೂಲಕ ಸಾಧ್ಯವಾಗಿದೆ. ಈ ಮೊಬೈಲ್‍ಗಳು ದೂರವಾಣಿ, ಕಂಪ್ಯೂಟರ್, ಟಿವಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಮಾಡಿಕೊಡುತ್ತಿವೆ.

ನಮ್ಮ ಇಂದಿನ ಮೊಬೈಲ್ ಯುಗದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ, ಅಕ್ಷರ ಜಗತ್ತಿನಲ್ಲಿ ಕಾಲಮಾನವನ್ನು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ನಂತರ ಎಂದು ಗುರುತಿಸುವಂತೆ, ಸರ್ಕಾರವು ತನ್ನ ಪ್ರಜೆಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಕೊರೊನಾ ಮುಂಚಿನ ನಿಗಾ ವ್ಯವಸ್ಥೆ ಮತ್ತು ಕೊರೊನಾ ನಂತರದ ನಿಗಾ ವ್ಯವಸ್ಥೆ ಎಂದು ಗುರುತಿಸಬಹುದಾಗಿದೆ. ಈ ನಿಗಾ ವ್ಯವಸ್ಥೆ-ಗಮನಗಾರಿಕೆ ನಿಧಾನವಾಗಿ ಗೂಢಚಾರಿಕೆ (ಬೇಹುಗಾರಿಕೆ)ಯತ್ತ ತಿರುಗುತ್ತಿದೆ.

ಪ್ರಜೆಗಳ ತೆರಿಗೆ ಹಣದಿಂದಲೇ ಅಸ್ತಿತ್ವದಲ್ಲಿರುವ ಸರ್ಕಾರಗಳು- ಅವು ಪ್ರಜಾಪ್ರಭುತ್ವದ ಮಾದರಿ ಇರಲಿ, ಅರಸೊತ್ತಿಗೆಗಳಿರಲಿ, ಕಮ್ಯೂನಿಸ್ಟ್ ವ್ಯವಸ್ಥೆ ಅಳವಡಿಸಿಕೊಂಡಿರಲಿ, ನಿರಂಕುಶ ಸರ್ವಾಧಿಕಾರಿಯದ್ದಿರಲಿ- ಪ್ರಜೆಗಳ ಕ್ಷೇಮಕ್ಕಾಗಿ ಶ್ರಮಿಸಬೇಕಾಗಿರುವ ಅವು ಪ್ರಜೆಗಳ ಚಲನವಲನಗಳನ್ನು ಗಮನಿಸುವುದು ತಮ್ನ ಹಕ್ಕು ಎಂದುಕೊಂಡಿವೆ. ನಮ್ಮ ನಾಡಿನಲ್ಲಿ ಟೆಲಿಫೋನ್ ಕದ್ದಾಲಿಕೆಯ ಪ್ರಕರಣಗಳು ಆಗಾಗ ಸದ್ದು ಮಾಡುತ್ತಿರುವುದನ್ನು ನಾವು ನೋಡಿದ್ದೇವೆ.

ಒಂದೂವರೆ ಶತಮಾನದ ಹಿಂದೆ, ಕ್ರಿಸ್ತ ಶಕ 1854 ಏಪ್ರಿಲ್ 27 ರಂದು ತಂತಿ (ಟೆಲಿಗ್ರಾಮ್) ಸೇವೆ ಜನರ ಬಳಕೆಗೆ ಲಭ್ಯವಾದಾಗ ಭಾರತವು ದೂರಸಂಪರ್ಕ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇರಿಸಿತೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂದು ಸ್ವಹಿತಾಸಕ್ತಿಯ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಪ್ರಾಯೋಗಿಕವಾಗಿ 1850ರಲ್ಲಿ ಕೋಲ್ಕತ್ತಾ (ಅಂದಿನ ಕಲ್ಕತ್ತಾ) ಮತ್ತು ಡೈಮಂಡ್ ಹಾರ್ಬರ್ (ಬಂದರು) ನಡುವೆ ಮೊದಲು ಬಾರಿ ಸೇವೆ ಆರಂಭವಾಗಿತ್ತು. ತನ್ನ ಆಡಳಿತಕ್ಕೆ ಇದು ಅನುಕೂಲಕರ ಎಂದುಕೊಂಡ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸರ್ಕಾರ 1851ರಲ್ಲಿ ಅದರ ಬಳಕೆಯನ್ನು ಆರಂಭಿಸಿತು. ಅದಕ್ಕಾಗಿ 1854ರ ತನಕ ದೇಶದ ವಿವಿಧೆಡೆ ತಂತಿಗಳನ್ನು ಎಳೆಯಲಾಯಿತು. ಮುಂದೆ 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತಕ್ಷಣ ಮಾಹಿತಿ ಪಡೆದು ತನ್ನ ಪಡೆಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿ ದಂಗೆ ಎದ್ದಿದ್ದ ಸಿಪಾಯಿಗಳನ್ನು ಹತ್ತಿಕ್ಕಲು ಅದು ಸಹಕಾರಿಯಾಗಿತ್ತು. ಮೊಬೈಲ್, ನೆಟ್, ಇ- ಮೇಲ್ ಸೇವೆಗಳ ಭರಾಟೆಯಲ್ಲಿ ಈ ತಂತಿ ಸೇವೆ ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ 2013ರ ಜುಲೈ 15ರಂದು ಅದಕ್ಕೆ ಮಂಗಳ ಹಾಡಲಾಯಿತು. ತಂತಿ ಸೇವೆಯಂತೆಯೇ, 1882ರಲ್ಲಿ ದೇಶದಲ್ಲಿ ಸ್ಥಿರ ಟೆಲಿಫೋನ್ (ಲ್ಯಾಂಡ್ ಲೈನ್) ಸೇವೆ ಆರಂಭವಾಗಿತ್ತು. ಇಂದು ಎಲ್ಲರ ಜೇಬುಗಳಲ್ಲಿ ಸ್ಥಾನ ಪಡೆದಿರುವ ಮೊಬೈಲ್ ದೂರಸಂಪರ್ಕ ವ್ಯವಸ್ಥೆಗೆ 1995ರ ಆಗಸ್ಟ್ ತಿಂಗಳಲ್ಲಿ ನಾಂದಿಹಾಡಲಾಗಿದೆ.

ನಮ್ಮ ನಾಡಿನಲ್ಲಿ ನೆಲೆ, ಮೂಲ ಎಂಬ ಅರ್ಥದ `ಆಧಾರ್’ ಹೆಸರಿನ 12 ಅಂಕೆಗಳ ವಿಶೇಷ ಗುರುತಿನ ಕಾರ್ಡ್(ಬಿಲ್ಲೆ)ಅನ್ನು, ಭಾರತದ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ)ದ ಮೂಲಕ ಸರ್ಕಾರವು ತನ್ನ ಪ್ರಜೆಗಳಿಗೆ ಗುರುತಿನ ವಿತರಿಸಿದೆ. ಅದರಲ್ಲಿ ಬೆರಳಚ್ಚು ಮತ್ತು ಕಣ್ಣು ಪಾಪೆಗಳ ಪಡಿಯಚ್ಚುಗಳನ್ನು ದಾಖಲಿಸಲಾಗಿದೆ. ಮೊದಲು ಇಂಥ ಗುರುತಿನ ಬಿಲ್ಲೆ ಬೇಡ ಎಂದು ವಾದಿಸುತ್ತಿದ್ದವರು, ಇಂದು ಪ್ರಜೆಯೊಬ್ಬ ಸರ್ಕಾರದಿಂದ ಪಡೆಯುವ ಎಲ್ಲಾ ಸವಲತ್ತುಗಳಿಗೂ ಅದೇ ಆಧಾರ ಎನ್ನುವಂತೆ ರೂಢಿಸಿಬಿಟ್ಟಿದ್ದಾರೆ.

ಅದಕ್ಕೂ ಮೊದಲು, ದಶಕಗಳ ಮುಂಚೆಯಿಂದಲೇ ಪ್ರಜೆಗಳ ಆರ್ಥಿಕ ವ್ಯವಹಾರದ ಮೇಲೆ ನಿಗಾ ಇರಿಸಲು, ಆದಾಯ ತೆರಿಗೆ ಇಲಾಖೆಯು, ಪ್ರತಿಯೊಬ್ಬ ಪ್ರಜೆಗಳಿಗೆ ಅಕ್ಷರ ಮತ್ತು ಅಂಕೆಗಳು ಸೇರಿ ಒಟ್ಟು 10 ಅಕ್ಷರಸಂಖ್ಯೆಗಳ ಪ್ಯಾನ್ (ಪರ್ಮನಂಟ್ ಅಕೌಂಟ್ ನಂಬರ್) ಕಾರ್ಡ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದದ್ದು ಎಲ್ಲರಿಗೂ ತಿಳಿದ ವಿಷಯ.

ಜ್ವರ, ನೆಗಡಿ, ನ್ಯೂಮೊನಿಯಾ ಕಾಯಿಲೆಗಳ  ಲಕ್ಷಣಗಳೊಂದಿಗೆ ಉಸಿರಾಟಕ್ಕೆ ತೊಂದರೆಕೊಡುತ್ತಾ ಅಂತಿಮವಾಗಿ ಮಾನವರ ಜೀವಕ್ಕೆ ಕಂಟಕಕಾರಿ ಆಗಿರುವ ಕೋವಿಡ್-19 ಹೆಸರಿನ ಹೊಸಬಗೆಯ ರೋಗ ತರುವ ಕೊರೊನಾ ವೈರಸ್ ವೈರಾಣು, ವಿಶ್ವದಾದ್ಯಂತ ಹರಡುತ್ತಾ ಹೊರಟಿದ್ದು ಜಗತ್ತನ್ನು ತಲ್ಲಣಗೊಳಿಸಿದೆ. ಅದು, ಮಾನವರಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಾಂಕ್ರಾಮಿಕವಾಗಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಗತ್ತಿನ ಬಹುತೇಕ ದೇಶಗಳು ಲಾಕ್‍ಡೌನ್ ಘೋಷಿಸಿದ್ದು, ಪ್ರಜೆಗಳ ಗೃಹ ಬಂಧನ ಅನಿವಾರ್ಯವಾಗಿದೆ. ಅಗತ್ಯ ವಸ್ತುಗಳಿಗಾಗಿ ಮನೆಬಿಟ್ಟು ಹೊರಬರುವವರು ಒಬ್ಬೊಬ್ಬರೂ ಒಂದು ಮೀಟರ್ ದೂರ ನಿಂತು ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟನ್ಸಿಂಗ್) ಕಾಯ್ದುಕೊಂಡು ವ್ಯವಹಾರ ನಡೆಸಬೇಕಾಗಿ ಬಂದಿದೆ. ಮನೆಮನೆಗಳಲ್ಲಿನ ಕುಟುಂಬ ಪ್ರಾರ್ಥನೆಗಳನ್ನು ಉತ್ತೇಜಿಸುವ `ದಿ ಫ್ಯಾಮಿಲಿ ದೆಟ್ ಪ್ರೇಸ್ ಟುಗೆದರ್ ಸ್ಟೇಜ್ ಟುಗೆದರ್’ ಎಂಬಂಥ ನಾಣ್ಣುಡಿಗಳು ಸವಕಲು ನಾಣ್ಯಗಳಾಗಬಹುದು.

`ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾತಿದೆ. ಜೀವನದಲ್ಲಿ ಸಂಕಟ ಬಂದಾಗ `ಅಪ್ಪಾ ದೇವರೇ, ಈ ಸಂಕಟದಿಂದ ಕಾಪಾಡು’ ಎಂದು ದೇವರಲ್ಲಿ ಮೊರೆ ಹೋಗುವುದು ಆಸ್ತಿಕ ಮನೋಭಾವದ ಮಾನವನ ಸಹಜ ನಡವಳಿಕೆ, ಇಂದು ಕೊರೊನಾ ಸಂಕಟ ಮಾನವ ಕುಲವನ್ನು ಕಾಡತೊಡಗಿದೆ. ಈ ಕೊರೊನಾ ಸಂಕಟದಿಂದ ಪಾರಾಗಲು ವೆಂಕಟರಮಣ ದೇವರು ನೆಲೆಸಿರುವ ತಿರುಪತಿಗೆ ಹೋಗಬೇಕೆಂದರೆ, ಅಲ್ಲಿಗೆ ತಲುಪಲು ಸಾಧ್ಯವಾಗುವ ಎಲ್ಲಾ ಸಂಪರ್ಕ ಸಾಧನಗಳಿಗೆ ದಿಗ್ಬಂಧನ ಹೇರಲಾಗಿದೆ, ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ. ಮನೆ ಬಿಟ್ಟು ಹೊರಗೆ ಹೋಗಲೂ ಆಗದು. ಇದು ನಮ್ಮ ಹುಲುಮಾನವರ ಪಾಡು. ಈ ಪಾಡುಗಳಿಂದ ಪಾರಾಗಿ ತಿರಪತಿಯನ್ನು ಮುಟ್ಟಿದರೂ ವೆಂಕಟರಮಣನ ದರ್ಶನ ಆದೀತು ಎಂಬ ಆಸೆಗೂ ಮಣ್ಣೆರಚಿದೆ ಸರ್ಕಾರ. ಹುಲುಮಾನವರನ್ನು ಸರ್ಕಾರ ಅವರವರ ಮನೆಗಳಲ್ಲಿ ಗೃಹಬಂದಿಗಳನ್ನಾಗಿ ಮಾಡಿದ್ದರೆ, ದೇವರ ಮನೆಗಳಾದ ದೇವಸ್ಥಾನಗಳಿಗೆ ಯಾರೂ ಹೋಗದಂತೆ ಸರ್ಪಕಾವಲು ಹಾಕಿದೆ. ಪೂಜಾರಿ ಮಾತ್ರ ಎಂದಿನಂತೆ ತಪ್ಪದೇ ದೇವರಿಗೆ ಪೂಜೆ ಸಲ್ಲಿಸಬಹುದು.

ಸಾವಿನ ಗಂಟೆಗಳನ್ನು ಬಾರಿಸುತ್ತಾ ಸಾಗಿರುವ ಕೊರೊನಾ ಜಾಗತಿಕ ಮಟ್ಟದಲ್ಲಿ, ದೇಶದೇಶಗಳಲ್ಲಿ, ರಾಜ್ಯಗಳಲ್ಲಿ ಆಂತರಿಕವಾಗಿ ಉಂಟು ಮಾಡುತ್ತಿರುವ ತಲ್ಲಣಗಳಿಗೆ ಹೆದರಿರುವ ಸರ್ಕಾರಗಳು, ಆ ಮಾರಿಗೆ ಮುಗುದಾಣ ಹಾಕುವ    ಉದ್ದೇಶದಿಂದ ಪ್ರಜೆಗಳು ತಮ್ಮ ಪಾಡಿಗೆ ತಾವು      ಮನೆಗಳಲ್ಲಿರುವಂತೆ ಮಾಡಿವೆ. ಈ ಸ್ಥಿತಿಯಿಂದ ಭಕ್ತಾದಿಗಳು ದೇವರುಗಳಿರುವ ಪವಿತ್ರ ತಾಣಗಳಿಗೆ ಹೋಗಿ ಖುದ್ದು ಮೊರೆಯಿಡದಂತಾಗಿದೆ. ದೇವರು ಕೈ ಬಿಡುವುದಲ್ಲ ಮನುಷ್ಯನೇ ದೇವರ ಕೈಬಿಟ್ಟಿದ್ದಾನೆ. ಕಾಮಣ್ಣನನ್ನು ಸುಡುವ ಹೋಳಿ ಹುಣ್ಣಿಮೆಯ ಬಣ್ಣದ ಆಟದ ಮೋಜು ನಡೆಯಲಿಲ್ಲ, ಹೊಸ ವರ್ಷದ ಯುಗಾದಿ ಹಬ್ಬದ ಆಚರಣೆ ಮನೆಗಳಿಗೆ ಸೀಮಿತಗೊಂಡಿತ್ತು.

ಮಾನವ ಕುಲವಿಂದು ಜಾಗತಿಕ ಸಂದಿಗ್ಧದ ಪರಿಸ್ಥಿತಿಯಲ್ಲಿದೆ, ದೊಡ್ಡ ಮಟ್ಟದ ಆತಂಕವೊಂದನ್ನು ಎದುರಿಸುತ್ತಿದೆ. ನಮ್ಮ ಕಾಲದ ತಲೆಮಾರಿನ ಅತಿದೊಡ್ಡ ಆತಂಕ ಎಂದರೂ ತಪ್ಪಾಗದು. ಈಗ ಜನರು ಮತ್ತು ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳು ಜಗತ್ತಿನ ಮುಂಬರುವ ದಿನಗಳನ್ನು ರೂಪಿಸಲೂಬಹುದು. ಅವು ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯನ್ನು, ನಮ್ಮ ಆರ್ಥಿಕ ದಿಕ್ಕುದೆಸೆಗಳನ್ನು, ನಮ್ಮ ರಾಜಕಾರಣದ ಪರಿಯನ್ನು ಮತ್ತೆ ಮತ್ತೆ ನಾವು ಶತಮಾನಗಳಿಂದ ರೂಢಿಸಿಕೊಂಡ ರೀತಿರಿವಾಜುಗಳನ್ನು ನಮ್ಮ ಸಂಸ್ಕøತಿಯ ಚಹರೆಯನ್ನೂ ಬದಲಿಸಬಹುದು.

ಈಗ ನಾವು ಸಾರಾಸಾರ ವಿಚಾರ ಮಾಡದೇ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಇಂದಿನ ನಿರ್ಧಾರಗಳು ಮತ್ತು ಚಟುವಟಿಕೆಗಳು ತಂದೊಡ್ಡುವ ದೀರ್ಘಕಾಲೀನ ಪರಿಣಾಮಗಳನ್ನು -ಒಳ್ಳೆಯದೋ, ಕೆಟ್ಟದ್ದೋ - ಕಾಲವೇ ಪರಾಮರ್ಶಿಸಬೇಕಿದೆ. ಹಲವಾರು ಪರ್ಯಾಯಗಳ ನಡುವೆ, ನಮ್ಮ ಮುಂದೆ ನಿಂತಿರುವ ಈ ಸಂಕಟದ ಪರಿಸ್ಥಿತಿಯಿಂದ ತಕ್ಷಣ ಹೇಗೆ ಪಾರಾಗಬೇಕು? ಎಂಬುದರ ಜೊತೆ ಜೊತೆಗೆ ಈಗ ಅನಿರೀಕ್ಷಿತವಾಗಿ ಬಂದೆರಗಿದ ಚಂಡಮಾರುತ ಬೀಸಿ ಹೋದ ನಂತರ, ನಾವು ಯಾವ ಬಗೆಯ ಜಗತ್ತಿನಲ್ಲಿ ಜೀವನ ಕಳೆಯಬೇಕಾಗುತ್ತದೆ? ಎಂಬುದರ ಬಗ್ಗೆಯೂ ಚಿಂತಿಸಬೇಕಿದೆ.

ಹೌದು, ನಕಾರಾತ್ಮಕವಾಗಿ ಅಲ್ಲ ಸಕಾರಾತ್ಮಕವಾಗಿ     ಯೋಚಿಸೋಣ. ಈಗ ಎದ್ದಿರುವ ಹತ್ತು ಹಲವು ಸುಂಟರಗಾಳಿ ಸುಳಿಗಳಿಂದ ಕೂಡಿರುವ ಈ ಚಂಡಮಾರುತ ತನ್ನ ಸಮಯ ಮುಗಿದಾಗ ತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತದೆ. ಮಾನವ ಕುಲ ಬದುಕುಳಿಯುತ್ತದೆ. ನಾವೆಲ್ಲಾ ಬಹತೇಕರು ಬದುಕಿರುತ್ತೇವೆ- ಆದರೆ, ನಾವು ನಮ್ಮ ಮುಂದಿನ ಬದುಕು ಕಳೆಯಬೇಕಾಗಿರುವ ಜಗತ್ತು ಸಾಕಷ್ಟು ಬದಲಾವಣೆಯನ್ನು ಕಂಡಿರುತ್ತದೆ ಎನ್ನಲಾಗುತ್ತಿದೆ.

ಈಗ, ಸದ್ಯಕ್ಕಷ್ಟೇ, ತಾತ್ಕಾಲಿಕ ಎಂದು ಅಂದುಕೊಂಡು ಕೈಗೊಂಡಿರುವ ನಿರ್ಧಾರಗಳು, ನಿಲುವುಗಳು, ಈ ಚಂಡ ಮಾರುತದ ನಂತರ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಬಹುದು. ಅದು, ಅನಿವಾರ್ಯ ಸ್ಥಿತಿಯ ಸಹಜ ನಡವಳಿಕೆ. ಬದುಕುಳಿದವರ ಕಾಲದ ಐತಿಹಾಸದ ಚಲನೆ ತ್ವರಿತಗೊಳ್ಳಬಹುದು. ಸಾಮಾನ್ಯವಾಗಿ ಹಲವಾರು ವರ್ಷಗಳ ಕಾಲ ಚಿಂತನ ಮಂಥನ ನಡೆಸಿ ಕೈಗೊಳ್ಳಬೇಕಾದ ನಿರ್ಧಾರಗಳನ್ನು ಕೆಲವೇ ಗಂಟೆಗಳಲ್ಲಿ, ನಿಮಿಷಗಳಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆಗಳು ಮುಂದೆ ಕಾಣಿಸಿಕೊಳ್ಳಲೂಬಹುದು. ಏನನ್ನೂ ಮಾಡದೇ ಸುಮ್ಮನೇ ಕುಳಿತುಕೊಳ್ಳುವುದು ಎಂದರೆ ಅದು ಅಪಾಯಕಾರಿ ಆತ್ಮಘಾತುಕ ನಡೆಯಾದೀತು. ಅಂಥದು ಆಗುವುದಕ್ಕಿಂತ ಅಪ್ರಬುದ್ಧ ನಿರ್ಧಾರಗಳೇ ನಮ್ಮ ಕೈ ಹಿಡಿದಾವು, ಹಾಗೂ ಸುಲಭವಾಗಿ ಕೈಗೆಟುಕುವ ಗಂಡಾಂತರಕಾರಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯ, ಅನಿವಾರ್ಯತೆ ಮೂಡಬಹುದು.

ಯಾವುದಾದರೊಂದು ದೇಶದ ನಾಯಕ, ದೊಡ್ಡ ಮಟ್ಟದ ಸಾಮಾಜಿಕ ಪ್ರಯೋಗ ಪರೀಕ್ಷೆಗಳನ್ನು ಕೈಗೊಂಡಾಗ, ದೇಶದ ಸಮಗ್ರ ಪ್ರಜೆಗಳು ಪ್ರಯೋಗ ಪಶುಗಳಾಗಬಹುದು. ಎಲ್ಲರೂ ಮನೆಯಲ್ಲಿ ಕುಳಿತು ಕೆಲಸ ಮಾಡುವುದನ್ನು ಮುಂದುವರಿಸಿದಾಗ, ಸಾಮಾಜಿಕ ಅಂತರ ಕಾಯ್ದುಕೊಂಡೇ ಜೀವನದ ಸಕಲೆಂಟು ವ್ಯವಹಾರಗಳನ್ನು ನಡೆಸುವುದನ್ನೇ ಎಲ್ಲರೂ ಸರಿಯಾದ ಕ್ರಮವೆಂದು ಬಗೆದಾಗ ಎಂಥ ಪರಿಸ್ಥಿತಿ ಉಂಟಾಗಬಹುದು?

ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳ ಬೋಧನೆ, ಪರೀಕ್ಷೆಗಳೆಲ್ಲಾ ಅಂತರ್ಜಾಲದಿಂದಲೇ ನಡೆಯತೊಡಗಿದರೆ ನಮ್ಮ ಇಂದಿನ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಗತಿ ಏನಾದೀತು? ಸದ್ಯಕ್ಕಂತೂ ಕೆಲವು ಕಾಲೇಜುಗಳು ಈ ದಿಕ್ಕಿನತ್ತ ಪ್ರಾಥಮಿಕ ಹೆಜ್ಜೆಗಳನ್ನಿರಿಸಿವೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಸರ್ಕಾರವಾಗಲಿ, ವಾಣಿಜ್ಯ ವ್ಯವಹಾರ ನಡೆಸುವ ಸಂಸ್ಥೆಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ಈ ಬಗೆಯ ಚಟುವಟಿಕೆಗಳನ್ನು ಒಪ್ಪಿಕೊಳ್ಳಲಾರವು, ಆದರೆ ವಿಶೇಷ ಸಂದರ್ಭಗಳಲ್ಲಿ ಅದು ಅನಿವಾರ್ಯ.

ಮುಂದೊಂದು ಕಾಲದಲ್ಲಿ, ಕೋವಿಡ್-19 ನಂಥ ಸಾಂಕ್ರಾಮಿಕವಾಗಿ, ವಿಶ್ವವ್ಯಾಪಿ ಮಹಾಮಾರಿಗಳಾಗಿ ಹರಡುವ ರೋಗಗಳನ್ನು ತಡೆಯಲು, ಸರ್ಕಾರಗಳು ಮತ್ತು ಜನತೆಯ ನಡವಳಿಕೆಗಳ ಮೇಲೆ ನಿಗಾ ಇಡುವುದು ಅನಿವಾರ್ಯ ಸಂಗತಿಯಾದೀತು. ಲಕ್ಷ್ಮಣ ರೇಖೆ ಹಾಕುವ ಸರ್ಕಾರ, ಅದು ಹಾಕಿದ ಗೆರೆ ದಾಟಿದ ಪ್ರಜೆಗಳ ಮೇಲೆ ಕಠಿಣ ಕ್ರಮ ಜರುಗಿಸಬಹುದು. ಇಂದು ಮಾನವ ಕುಲದ     ಇತಿಹಾಸದಲ್ಲಿಯೇ ಮೊದಲ ಬಾರಿ, ಸರ್ಕಾರಿ ವ್ಯವಸ್ಥೆಗೆ ಲಭ್ಯವಾಗಿರುವ ತಂತ್ರಜ್ಞಾನ ಎಲ್ಲರ ಮೇಲೂ ಸದಾಕಾಲ ನಿಗಾ ಇಡುವುದನ್ನು ಸುಲಭ ಸಾಧ್ಯಗೊಳಿಸಿದೆ.

ಸುಮಾರು ಐವತ್ತು ವರ್ಷಗಳ ಹಿಂದೆ ರಷ್ಯದ ರಾಜ್ಯ ಭದ್ರತಾ ಪಡೆ- ಕೆಜಿಬಿಗೆ 24 ಗಂಟೆಗಳ ಕಾಲ 240 ಮಿಲಿಯನ್ ಜನರ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೆಲ್ಲಾ ಜನರ ಮಾಹಿತಿಗಳನ್ನು ಸಂಗ್ರಹಿಸಿದ ಮೇಲೂ ಅವನ್ನು ಪರಿಣಾಮಕಾರಿಯಾಗಿ ಪರಾಮರ್ಶೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಜಿಬಿ ನೂರಾರು ಗುಪ್ತಚಾರರ ಸೇವೆಯನ್ನು ನಚ್ಚಿಕೊಳ್ಳಬೇಕಾಗಿತ್ತು. ಪ್ರತಿ ಪ್ರಜೆಯ ಮೇಲೂ ಒಬ್ಬೊಬ್ಬ ಗೂಢಚಾರರರನ್ನು ಇರಿಸುವುದು ವ್ಯವಹಾರಿಕವಾಗಿರಲಿಲ್ಲ.

ಆದರೆ, ಇಂದು ರಹಸ್ಯವಾಗಿ ಗೂಢಚಾರಣೆಯನ್ನು ನಡೆಸಲು, ಸರ್ಕಾರಗಳು ಆಗಾಗ ಮನಸ್ಸು ಬದಲಿಸುವ ಯಾವ ಗೂಢಚಾರರನ್ನೂ, ಬಾತ್ಮೀದಾರರನ್ನು ನೇಮಿಸಿಕೊಳ್ಳಬೇಕಾಗಿಲ್ಲ, ಸರ್ವತ್ರ ವ್ಯಾಪಕತೆ ಹೊಂದಿರುವ ಸಂವೇದನಾ ವಾಹಕಗಳು ಮತ್ತು ಶಕ್ತಿಶಾಲಿ ಕರಾರುವಾಕ್ಕು ಲೆಕ್ಕಾಚಾರದ ಮಾಹಿತಿಗಳನ್ನು ತಂತ್ರಜ್ಞಾನದ ನೂತನ ಸಾಧನಗಳು ಎಲ್ಲವನ್ನೂ ಬೆರಳ ತುದಿಯಲ್ಲಿ ಒದಗಿಸಿಕೊಡುತ್ತಿವೆ.

ವಿಶ್ವದಾದ್ಯಂತ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವಾರು ಸರ್ಕಾರಗಳು ತಮ್ಮ ತಮ್ಮ ದೇಶಗಳಲ್ಲಿ ಇಂಥ ಸಂವೇದನಾ ವಾಹಕಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿ ಚೀನಾ ದೇಶವನ್ನು ಗಮನಿಸಬಹುದು.

ಇದುವರೆಗೂ ನಮ್ಮಲ್ಲಿನ ಕೆಲವು ಮಾಲ್‍ಗಳಲ್ಲಿ ಮೊಬೈಲ್ ಹೊಂದಿಲ್ಲದ ಗ್ರಾಹಕ ಅಲ್ಲಿ ವ್ಯಾಪಾರ ನಡೆಸದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ನಮ್ಮ ಪಟ್ಟಣ, ನಗರ, ಮಹಾನಗರಗಳಲ್ಲಿನ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳನ್ನು ಪ್ರವೇಶಿಸುವ ಗ್ರಾಹಕರ ಹಣೆಗೆ ಉಷ್ಣಮಾಪಕ ಯಂತ್ರ ಇರಿಸಿ, ಅವರ ದೇಹದ ಉಷ್ಣಾಂಶವನ್ನು ಅಳೆಯಲಾಗುತ್ತಿದೆ. ಹೆಚ್ಚಿನ ಉಷ್ಣಾಂಶವು ದಾಖಲಾದರೆ, ಆ ಗ್ರಾಹಕರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ.

ಕೊರೊನಾ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ಚೀನಾ ದೇಶದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಚಲನವಲನವನ್ನು ಗಮನಿಸಲಾಗುತ್ತಿತ್ತು. ಭೌಗೋಳಿಕ ಜಾಗಗಳನ್ನು ದಾಖಲಿಸುವ ಸಂವೇದನಾಶೀಲ ಸ್ಮಾರ್ಟ್ ಫೋನ್ ಮೊಬೈಲ್‍ನಲ್ಲಿನ ದತ್ತಾಂಶಗಳನ್ನು, ಅದರಲ್ಲಿನ ಚಟುವಟಿಕೆಗಳನ್ನು ಆಧರಿಸಿ, ಪ್ರತಿಯೊಬ್ಬ ವ್ಯಕ್ತಿಯ ಮುಖ ಲಕ್ಷಣಗಳನ್ನು ದಾಖಲಿಸಿ, ಸಹಸ್ರಾರು ಕ್ಯಾಮರಾಗಳ ಚಿತ್ರಣಗಳನ್ನು ಬಳಸಿ, ಆಯಾ ವ್ಯಕ್ತಿಯ ದೇಹದ ಉಷ್ಣಾಂಶ ಮತ್ತು ದೈಹಿಕ ಆರೋಗ್ಯ ಸ್ಥಿತಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ತಲುಪುವಂತೆ ನೋಡಿಕೊಳ್ಳಲಾಗುತ್ತಿತ್ತು.

ಚೀನಾ ದೇಶದ ಅಧಿಕಾರಿಗಳು, ಕೊರೊನಾ ವೈರಾಣು ಹರಡುವದರ ಮೇಲೆ ನಿಗಾ ಇರಿಸುವ ಸಲುವಾಗಿ, ಪ್ರತಿಯೊಬ್ಬ ವ್ಯಕ್ತಿಯ ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಶಂಕಿತ ಕೊವಿಡ್-19 ಪೀಡಿತರನ್ನು ಸುಲಭವಾಗಿ ಗುರುತಿಸಿ ಪ್ರತ್ಯೇಕಿಸುತ್ತಿದ್ದರು. ಅವರ ಚಲನವಲನದ ಮೇಲೆ ನಿಗಾ ಇರಿಸಿ ಅವರೊಂದಿಗೆ ಸಂಪರ್ಕದಲ್ಲಿ ಬರುತ್ತಿದ್ದವರ ಮೇಲೂ ಕಣ್ಣಿಡುತ್ತಿದ್ದರು. ಹಲವಾರು ಮೊಬೈಲ್ ಆ್ಯಪ್‍ಗಳು ಕೊವಿಡ್-19 ರೋಗ ಪೀಡಿತರನ್ನು ದೂರದಿಂದಲೇ ಗುರುತಿಸಿ ನಾಗರಿಕರಿಗೆ ಹತ್ತಿರದ ನಾಗರಿಕರಿಗೆ ಸೂಕ್ತ ಎಚ್ಚರಿಕೆಯನ್ನೂ ರವಾನಿಸುತ್ತಿದ್ದವಂತೆ! ಅವರು ಆ ಮಾಹಿತಿಗಳನ್ನು ಸಾಮಾಜಿಕ ಬೇಹುಗಾರಿಕೆ ಹೆಸರಲ್ಲಿ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರಂತೆ.

ಹಿಂದೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಭುತ್ವಕ್ಕೆ ಅನುಕೂಲ ಒದಗಿಸಿದ ಅಂದಿನ ತಂತಿ ದೂರಸಂಪರ್ಕ ವ್ಯವಸ್ಥೆಯಂತೆಯೇ, ಇಂದಿನ ಮೊಬೈಲ್ ಸ್ಮಾರ್ಟ್ ಫೋನ್ ದೂರಸಂಪರ್ಕ ವ್ಯವಸ್ಥೆ, ಕೊರೊನಾ ಹಾವಳಿಯಿಂದ ಚೀನಾ ತತ್ತರಿಸಿದ್ದಾಗ ಅಲ್ಲಿನ ಪ್ರಭುತ್ವಕ್ಕೆ ಅದೇ ತರಹ ಕಾರ್ಯ ನಿರ್ವಹಿಸಿದಂತಾಗಿದೆ.

ಈ ಬಗೆಯ ನಿಗಾ ತಂತ್ರಜ್ಞಾನದ ಬಳಕೆ ಕೇವಲ ಏಷ್ಯ ಖಂಡದ ಪೂರ್ವ ದಿಕ್ಕಿಗೆ ಮಾತ್ರ ಸೀಮಿತವಾಗಿಲ್ಲ. ಈಚೆಗೆ ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಾಮಿನ್ ನೆತನ್ಯಾಹು, ಸಹಜ ಸ್ಥಿತಿಯಲ್ಲಿ ಮುಖ್ಯವಾಗಿ ಉಗ್ರಗಾಮಿಗಳ ಚಲನವಲನದ ಮೇಲೆ ನಿಗಾ ಇರಿಸಲು, ಅವರ ವಿರುದ್ಧ ಹೋರಾಡಲು     ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಕೊವಿಡ್ -19 ರೋಗ ಪೀಡಿತರ ಪತ್ತೆಗೆ ಬಳಸಲು ಅನುಮತಿ ನೀಡಿದ್ದಾರೆ.      ಸಂಸದೀಯ ಉಪಸಮಿತಿಯು ಈ ರೀತಿಯಲ್ಲಿ ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸಲು ಆಕ್ಷೇಪ ವ್ಯಕ್ತಪಡಿಸಿದಾಗ, ತುರ್ತು ಪರಿಸ್ಥಿತಿ ಆದೇಶ ಹೊರಡಿಸಿ ಅದನ್ನು ಜಾರಿಗೊಳಿಸಿದ ಸಂಗತಿ ನಮ್ಮ ಕಣ್ಣೆದುರೇ ಇದೆ.

ಇದರಲ್ಲಿ ಹೊಸದೇನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಖಾಸಗಿ ಉದ್ಯಮ ಸಂಸ್ಥೆಗಳು ಜನರ ಭಾವನೆಗಳನ್ನು, ಅಂದರೆ ಅವರ ಆಸಕ್ತಿ ಮತ್ತು ನಿರಾಸಕ್ತಿ ವಿಷಯಗಳ ಬಗೆಗಿನ ಮಾಹಿತಿ ಕಲೆಹಾಕಲು, ತಮ್ಮ ಉತ್ಪನ್ನಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಲು, ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಮಾಡಲು, ತಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಲು, ಈ ಬಗೆಯ ತಂತ್ರಜ್ಞಾನವನ್ನು ಬಳಸುತ್ತಲೇ ಬಂದಿವೆ. ಜನರ ಜನ್ಮ ಜಾತಕದ ವಿವರಗಳನ್ನು ತಮ್ಮ ದತ್ತಾಂಶ ಸಂಗ್ರಹದಲ್ಲಿ ಇರಿಸಿಕೊಳ್ಳುವ ಫೇಸ್ ಬುಕ್ ಮೊದಲಾದ ಸಂಸ್ಥೆಗಳು ಆ ಮಾಹಿತಿಗಳನ್ನು ಆಧರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಲ್ಲವು ಕೂಡ.

ಅಂತರ್ ಜಾಲದಲ್ಲಿ (ನೆಟ್) ಪದೆ ಪದೇ ಕೆಲವು ವಿಷಯಗಳನ್ನಷ್ಟೇ ಹುಡುಕಾಡುವ (ಬ್ರೌಸ್ ಮಾಡುವ) ವ್ಯಕ್ತಿಯ ಆಸಕ್ತಿಗಳನ್ನು ಕ್ರೋಢಿಕರಿಸಿ ಅಂಥದೆ ವಿಷಯಗಳ ಜಾಹಿರಾತುಗಳನ್ನು ಅವರಿಗೆ ತಲುಪಿಸುವ ಕೆಲಸವಂತೂ ನಡದೇ ಇದೆ. ಮಾಹಿತಿ ತಂತ್ರಜ್ಞಾನದ ನಮ್ಮ ಯುಗದಲ್ಲಿ ಇದೆಲ್ಲಾ ಸರಿ, ಎಂದುಕೊಂಡು, ಈಗ ನಾವು ಎಚ್ಚರಿಕೆಯಿಂದ ಇಲ್ಲದೇ ಹೋದರೂ, ಸದ್ಯದ ವಿಶ್ವವ್ಯಾಪಿ ಕಾಯಿಲೆ, ಮಹಾಮಾರಿ ಎಂಬ ಅಪಖ್ಯಾತಿ ಹೊಂದಿರುವ ಕೊವಿಡ್-19, ನಾಗರಿಕರ ಬೇಹುಗಾರಿಕೆಯ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆಗುರುತನ್ನಂತೂ ದಾಖಲಿಸುತ್ತಿದೆ ಎಂಬುದನ್ನು ಮರೆಯಲಾಗದು,

ತುರ್ತು ಪರಿಸ್ಥಿತಿಯ ಇಂದಿನ ಈ ನಡೆಯು, ಪ್ರಜೆಗಳ (ನಾಗರಿಕರ) ಮೇಲೆ ಸಾಮೂಹಿಕವಾಗಿ ನಿಗಾ ಇರಿಸುವ, ಬೇಹುಗಾರಿಕೆ ಮಾಡುವ ತಂತ್ರಜ್ಞಾನದ ಬಳಕೆಯನ್ನು  ವಿರೋಧಿಸುತ್ತ ಬಂದಿದ್ದ ದೇಶಗಳಲ್ಲೂ ಸಾಮಾನ್ಯವೆಂಬಂತೆ ಅದು ಬಳಕೆಗೆ ಬರಬಹುದು. ಅಲ್ಲಿ ಇದುವರೆಗೂ ಹೇಳಿ ಕೇಳಿ ಮಾಡುತ್ತಿದ್ದ ನಿಗಾ ವ್ಯವಸ್ಥೆ, ಹೇಳದೇ ಕೇಳದೆ ಮಾಡುವ ನಾಟಕೀಯ ಬೆಳವಣಿಗೆಗಳು ನಡೆದು, ಜನರ ನಡವಳಿಕೆಯ ಬೇಹುಗಾರಿಕೆ ಯಾವ ಅಡ್ಡಿ ಆತಂಕಗಳು ಇಲ್ಲದೇ ರಾಜಾರೋಷವಾಗಿ ನಡೆಯಲೂಬಹುದು.

ಇದುವರೆಗೂ ನಮ್ಮ ಶರೀರ ಮೂಲದ ಅಂದರೆ ದೈಹಿಕವಾಗಿ ಮಾಡುವ ವ್ಯವಹಾರಗಳ ನಿಗಾ ಸಾಧ್ಯವಾಗಿತ್ತು, ಇನ್ನು ಮುಂದೆ ನಾವು ಜಾಲಾಡುವ ಜಾಲತಾಣಗಳ ನಮ್ಮ ಭೇಟಿಯನ್ನು ಆಧರಿಸಿ, ನಮ್ಮ ಆಸಕ್ತಿಗಳ ಆಧಾರದ ಮೇಲೆ ನಮ್ಮ ಮಿದುಳಿಗೇ ಕೈ ಹಾಕಿ, ನಮ್ಮ ವೈಚಾರಿಕ ಒಲವು ನಿಲುವುಗಳ ಬೇಹುಗಾರಿಕೆಯೂ ಸಾಧ್ಯವಾಗಲಿದೆ!

ಇಲ್ಲಿಯವರೆಗೆ ನಿಮ್ಮ ಬೆರಳು ನಿಮ್ಮ ಸ್ಮಾರ್ಟ ಮೊಬೈಲ್‍ಫೋನ್ (ಜಾಣ ಜಂಗಮವಾಣಿ) ಪರದೆಯ ಮೇಲಿನ ಯಾವುದೋ ಸಂಪರ್ಕ(ಲಿಂಕ್) ದ ಮೇಲೆ ನಿಮ್ಮ ಬೆರಳು ತಾಗಿದಾಗ, ಸರ್ಕಾರ ನಿಮ್ಮ ಬೆರಳು ಯಾವುದನ್ನು ಮುಟ್ಟುತ್ತಿದೆ ಎಂಬುದನ್ನು ಅರಿಯಲು ಪ್ರಯತ್ನಿಸುತ್ತಿತ್ತು. ಆದರೆ, ಇಂದಿನ ಕೊರೊನಾ ವೈರಾಣು ತಡೆಯುವ ಯುದ್ಧದ ಮಾದರಿಯ ಸನ್ನಿವೇಶದಲ್ಲಿ, ಅದರ ಆಸಕ್ತಿಯಲ್ಲಿ ಬದಲಾವಣೆ ತಂದಿದೆ. ಇಂದು ಸರ್ಕಾರಕ್ಕೆ ನಿಮ್ಮ ಬೆರಳು ಜಾಣ ಜಂಗಮವಾಣಿಯನ್ನು ಮುಟ್ಟಿದಾಗ, ಹೊರಗಿನಿಂದ ಗೋಚರವಾಗುವ ನಿಮ್ಮ ದೇಹದ ಉಷ್ಣಾಂಶ ಮತ್ತು ಶರೀರದೊಳಗಿನ ಹೃದಯದ ಬಡಿತವನ್ನು ಗುರುತಿಸುವ ನಾಡಿ ಬಡಿತವನ್ನು ಅಂದರೆ ರಕ್ತದೊತ್ತಡವನ್ನು ಅರಿಯಬೇಕಾಗಿದೆ.

ಇಂದು ನಾವು ಯಾವ ಬಗೆಯ ನಿಗಾದಲ್ಲಿ ಇದ್ದೇವೆ ಎಂಬುದೇ ನಮಗೆ ಗೊತ್ತಿಲ್ಲ. ಹೇಗೆ ನಿಗಾ ಮಾಡಲಾಗುತ್ತಿದೆ? ಮುಂದೆ ಏನಾಗುವುದೋ? ನಮಗೆ ಗೊತ್ತಿಲ್ಲ. ಆದರೆ, ಹೊಸ ಹೊಸ ಬಗೆಯ ನಿಗಾ ವ್ಯವಸ್ಥೆಯ ಸಾಧನಗಳು ಅತ್ಯಂತ ಗರಿಷ್ಠ ವೇಗದಲ್ಲಿ ಅಭಿವೃದ್ಧಿಯಾಗುತ್ತಿರುವುದಂತೂ ಸತ್ಯ. ಹತ್ತುವರ್ಷಗಳ ಹಿಂದಿನ ಭವಿಷತ್ಕಾಲದ ವೈಜ್ಞಾನಿಕ ಕಾಲ್ಪನಿಕ ಕತೆಗಳು ಇಂದು ಹಳೆಯ ಸುದ್ದಿಗಳಂತೆ ಕಾಣತೊಡಗಬಹುದು.

ಕೊರೊನಾ ಕಾಣಿಸಿಕೊಂಡ ನಂತರದ ಅವಧಿಯಲ್ಲಿ ಬೆಂಗಳೂರು ಮೂಲದ `ವಿಜ್ಞಾ ಲ್ಯಾಬ್’ ಕಂಪೆನಿಯು, `ಹೋಮ್ ಕ್ವಾರಂಟೈನ್ ಟ್ರ್ಯಾಕಿಂಗ್ ಸಿಸ್ಟಮ್ (ಎಚ್ ಕ್ಯೂ ಟಿ ಎಸ್) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಲ್ಲಿ ಸೆಲ್ಫಿ ಆಧರಿಸಿ ಆಯಾ ವ್ಯಕ್ತಿಗಳ ನಡೆ, ಇರುವ ಸ್ಥಳ ಪತ್ತೆ ಮಾಡಬಹುದಾಗಿದೆ. ಅಂತರ್ಜಾಲ ಸಂಪರ್ಕ ಸಾಧಿಸುವ ವ್ಯವಸ್ಥೆಯ ಸ್ಮಾರ್ಟ್ ಮೊಬೈಲ್ ಫೋನ್ ಒಂದು ಬಗೆಯಲ್ಲಿ ಬುದ್ಧಿವಂತ, ಜಾಣ್ಮೆಯ ಫೋನು.

ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕೊವಿಡ್-19 ರೋಗ ಹೊಂದಿರುವ ಶಂಕೆಯಿಂದ ಪ್ರತ್ಯೇಕವಾಸ (ಹೋಮ್ ಕ್ವಾರೆಂಟೈನ್)ದಲ್ಲಿರುವವರ ಚಲನವಲನದ ಮೇಲೆ ನಿಗಾ ಇರಿಸಲು ಬ್ಲೂ ಟೂಥ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯ ಕೈ ಗೆ ಕಟ್ಟುವ ಸ್ಮಾರ್ಟ್ ಬ್ಯಾಂಡ್        ಅಭಿವೃದ್ಧಿಪಡಿಸಿದ್ದಾರಂತೆ. ಈ ಬ್ಯಾಂಡ್ (ಕಂಕಣ) ತೊಟ್ಟ ವ್ಯಕ್ತಿಯ ದೇಹದ ಉಷ್ಣಾಂಶ ಹೆಚ್ಚಾದರೆ, ಉಸಿರಾಟದ ತೊಂದರೆ ಉಂಟಾದರೆ, ಅದು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸುವುದಂತೆ. ಅದನ್ನು ತೊಡಿಸಿದವರೇ ಬಂದು ಉಚ್ಚುವವರೆಗೂ ಅದನ್ನು ಬಿಚ್ಚುವುದು ಅಸಾಧ್ಯವಂತೆ.

ಮಂಗಳವಾರ ಏಪ್ರಿಲ್ 14ರಂದು ಮೂರು ವಾರಗಳ ಲಾಕ್ ಡೌನ್ ಮುಗಿಯುತ್ತಿದ್ದಂತೆ, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರರ ಜನ್ಮದಿನಾಚರಣೆಯೆಂದು ದೇಶದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಎರಡನೇ ಹಂತದ ದೇಶವ್ಯಾಪಿ ಲಾಕ್‍ಡೌನ್ ಅನ್ನು ಮೇ 3 ರವರೆಗೆ ವಿಸ್ತರಣೆಯ ಘೋಷಣೆ ಮಾಡಿದರು. ಅದೇ ಸಂದರ್ಭದಲ್ಲಿ ಕೊರೊನಾ ಮೂಲೋತ್ಪಾಟನೆ ಮಾಡುವುದಕ್ಕಾಗಿ, ಸರ್ಕಾರವು    ಅಭಿವೃದ್ಧಿಪಡಿಸಿದ ಬ್ಲೂ ಟೂತ್, ವೈ ಫೈ ಮತ್ತು ಜಿಪಿಎಸ್ ಆಧಾರಿತ `ಆರೋಗ್ಯ ಸೇತು’ ಆ್ಯಪ್ ಅನ್ನು ಜನ ತಮ್ಮ ಮೊಬೈಲ್ ಫೋನ್‍ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದಿದ್ದಾರೆ.

`ಆರೋಗ್ಯ ಸೇತು’ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ನಂತರ, ಮೊಬೈಲ್ ಹೊಂದಿರುವ ಮೊಬೈಲ್ ನಲ್ಲಿ ಕೊರೊನಾ ಕುರಿತಂತೆ ಮಾಹಿತಿ ಬಿತ್ತರಗೊಳ್ಳುತ್ತಿರುತ್ತದೆ. ಅದರಲ್ಲಿ ಆ ಮೊಬೈಲ್ ಹೊಂದಿರುವವರು ಇರುವ ಸುತ್ತಲಿನ ಪ್ರದೇಶದಲ್ಲಿನ ಕೊರೊನಾ ವೈರಾಣು ಹಾವಳಿಯು ಯಾವ ಹಂತದ್ದು ಎಂಬುದರ ಕುರಿತು ಮಾಹಿತಿ ಒದಗಿಸುತ್ತದೆ. ಆಗ ಆ ಮಾಹಿತಿ ಆಧರಿಸಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕೊರೊನಾದ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಅದರಿಂದ ಹೆಚ್ಚಿನ ಅಪಾಯದಲ್ಲಿರುವವರಿಗೆ ಪ್ರತ್ಯೇಕ ವಾಸದ ಕುರಿತು ಮಾಹಿತಿ ನೀಡುತ್ತದೆ.

ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ಇ.ಎ.ಆರ್.ಎನ್ ಐ ಟಿ (ಅರ್ನ್ ಇಟ್- ಎಲಿಮಿನೇಟಿಂಗ್ ಅಬ್ಯುಸಿವ್ ಆ್ಯಂಡ್ ರ್ಯಾಂಪೆಂಟ್ ನೆಗ್ಲೆಟ್ ಆಫ್ ಇಂಟರ್ಯಾಕ್ಟಿವ್ ಟೆಕ್ನಾಲಜೀಸ್ ಆ್ಯಕ್ಟ್ ಆಫ್ 2020) ಹೆಸರಿನ ಮಸೂದೆಯೊಂದನ್ನು    ಕಾಯ್ದೆಯನ್ನಾಗಿಸುವ ತೆರೆಯಮರೆಯ ಪ್ರಯತ್ನಗಳು ಆರಂಭವಾಗಿವೆ. ಈ ಕಾನೂನು ಒಂದು ಮೊಬೈಲ್ ನಿಂದ ಇನ್ನೊಂದು ಮೊಬೈಲ್‍ಗೆ ಸಂದೇಶ ರವಾನೆ ಆಗುವ ಹಂತದಲ್ಲೇ ಸರ್ಕಾರ ಅದನ್ನು ಗಮನಿಸುವ ಅವಕಾಶ ಒದಗಿಸಿಕೊಡುತ್ತದೆ. ವ್ಯಕ್ತಿಯ ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಸರ್ಕಾರಕ್ಕೆ ಪಾರದರ್ಶಕವಾಗಿಬಿಡುತ್ತದೆ.

ಈ ಉದ್ದೇಶಿತ ಕಾನೂನು ಜಾರಿಗೆ ಬಂದರೆ, ವ್ಯಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಸಂದೇಶ, ಅದು ಮುಟ್ಟಬೇಕಾದವರಿಗೆ ಮುಟ್ಟುವ ಮೊದಲೇ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸದ್ಯದ ತಂತ್ರಜ್ಞಾನದಲ್ಲಿ ಸಂದೇಶಗಳು ಗೂಢಲಿಪೀಕರಣಗೊಂಡು ಸಾಗಿ ಮುಟ್ಟಬೇಕಾದವರಿಗೆ ಮುಟ್ಟುವಾಗ ಗೂಢಲಿಪಿಯಿಂದ ಲಿಪ್ಯಂತರಗೊಂಡು ಅವರಿಗೆ ಕಾಣುವಂತಾಗುತ್ತದೆ. ಈ ವ್ಯವಸ್ಥೆಯನ್ನು ತಪ್ಪಿಸಿ, ಇಲ್ಲವೇ ಅವುಗಳನ್ನು ಗಮನಿಸುವಂಥ ಹಿಂಬಾಗಿಲಿನ ವ್ಯವಸ್ಥೆ ಕಲ್ಪಿಸಿಕೊಡಿ ಎನ್ನುವುದು ಸರ್ಕಾರದ ಒತ್ತಡ. ಇದು ಪ್ರಜೆಗಳ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಆಕ್ಷೇಪಿಸಲಾಗುತ್ತಿದೆ.

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶ ಹೊಂದಿರುವ ಸರ್ಕಾರಗಳಿಗೆ ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ಬ್ಲೂ ಟೂತ್ ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಮಾಹಿತಿ ತಂತ್ರಜ್ಞಾನ ಸೇವಾ ಜಗತ್ತಿನ ದೈತ್ಯರಾದ ಆ್ಯಪಲ್ ಮತ್ತು ಗೂಗಲ್ ಸಂಸ್ಥೆಗಳು ತಾವು ಕೈ ಜೋಡಿಸುವುದಾಗಿ ಏಪ್ರಿಲ್ ತಿಂಗಳ ಎರಡನೇ ವಾರದ    ಆದಿಯಲ್ಲಿ ಹೇಳಿಕೊಂಡಿವೆ.

ಒಂದು ದೇಶವನ್ನು ಕಲ್ಪಿಸಿಕೊಳ್ಳೋಣ. ಅಲ್ಲಿನ ಸರ್ಕಾರ ತನ್ನ ಪ್ರಜೆಗಳೆಲ್ಲರೂ ಒಂದು ಮೈಗುರುತು/ಆಳಚ್ಚು (ದೇಹ ಸಂವೇದಿ) ಕಂಕಣವನ್ನು ತೊಡಬೇಕೆಂದು ಆದೇಶಿಸುತ್ತದೆ.    ದಿನದ 24 ಗಂಟೆಗಳ ಕಾಲ ಆಯಾ ವ್ಯಕ್ತಿಗಳ ದೇಹದ ಉóಷ್ಣಾಂಶ ಮತ್ತು ಹೃದಯದ ಬಡಿತಗಳ ಮೇಲೆ ನಿಗಾ ಇರಿಸುವುದು ಕಂಕಣದ ಕೆಲಸ. ಆಯಾ ವ್ಯಕ್ತಿಗಳಿಗೆ    ಸಂಬಂಧಿಸಿದ ಈ ಮಾಹಿತಿಗಳನ್ನು ಒಂದು ಕಡೆ ಕ್ರೋಢಿಕರಿಸುವ ಸರ್ಕಾರ, ಅದನ್ನು ವಿಶ್ಲೇಷಿಸುತ್ತದೆ. ನಿಮಗೆ ಅನಾರೋಗ್ಯವಾಗಿದೆ ಎಂಬುದು ನಿಮಗೆ ಗೊತ್ತಾಗುವ ಮೊದಲೇ, ಕಂಕಣ ನೀಡುವ ಮಾಹಿತಿ ಪಡೆದ ಸರ್ಕಾರಕ್ಕೆ ಆ ಮಾಹಿತಿ ಲಭ್ಯವಾಗಿರುತ್ತದೆ. ಇದಲ್ಲದೇ, ನೀವು ಎಲ್ಲೆಲ್ಲಿ ಹೋಗಿದ್ದಿರಿ? ಯಾರ್ಯಾರನ್ನು ಭೇಟಿ ಮಾಡಿದ್ದಿರಿ? ಎಂಬ ಮಾಹಿತಿಯೂ ಸರ್ಕಾರದೊಂದಿಗೆ ಇರುತ್ತದೆ.

ಇಲ್ಲಿ, ಪ್ರಾಥಮಿಕ ಆಸಕ್ತಿಯಂತೆ, ಸಾಂಕ್ರಾಮಿಕವಾಗಿ ರೋಗ ಉಂಟುಮಾಡುವ ಸೊಂಕು ಹರಡುವ ಸಂಬಂಧದ ಸರಪಳಿಯ ಉದ್ದ ಕನಿಷ್ಠಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬಹುದಾಗಿದೆ, ಇಲ್ಲ ಸರಪಳಿಯನ್ನು ತುಂಡು ಮಾಡುವುದೂ ಸುಲಭದ ಸಂಗತಿ. ಇಂಥ ವ್ಯವಸ್ಥೆಯಲ್ಲಿ ಸಾಂಕ್ರಾಮಿಕವಾಗಿ, ವಿಶ್ವವ್ಯಾಪಿಯಾಗಿ ರೋಗಗಳನ್ನು ಹರಡಬಹುದಾದ ಸೊಂಕುಗಳ ವಾಹಕರನ್ನು ಕೆಲವೇ ದಿನಗಳಲ್ಲಿ ಗುರುತಿಸಿ, ಸೊಂಕು ಹರಡುವುದಕ್ಕೆ ಕಡಿವಾಣ ಹಾಕಬಹುದು. ಎಂಥಾ ಒಳ್ಳೆಯ ಆಲೋಚನೆಯಲ್ಲವೇ?

ಇದು, ವ್ಯಕ್ತಿಯೊಬ್ಬನ ವ್ಯಯಕ್ತಿಕ ಸಂಗತಿಗಳ ಬಗೆಗಿನ ವಂಚನೆಯ ಬೇಹುಗಾರಿಕೆಯ ಈ ಆಘಾತಕಾರಿಯಾದ ನಿಗಾ ವ್ಯವಸ್ಥೆಗೆ ಅಧಿಕೃತ ಮುದ್ರೆಯೊತ್ತುವ ಅನಿವಾರ್ಯತೆ ಮೂಡಿಸುತ್ತದೆ. ಇಂದಿನ ಸ್ಮಾರ್ಟ್ ಮೊಬೈಲ್ ಮೂಲಕ ವ್ಯಕ್ತಿಯೊಬ್ಬ ಸರ್ಕಾರಿ ಸ್ವಾಮ್ಯದ ದೂರದರ್ಶನದ ಸುದ್ದಿ ಕೇಳಿದಾಗ ಅಥವಾ ಖಾಸಗಿ ಸುದ್ದಿ ವಾಹಿನಿಗಳ ಸುದ್ದಿ ಕೇಳಿದಾಗ ಅವನ ರಾಜಕೀಯ ನಿಲುವುಗಳ ಅರಿವಾಗುತ್ತದೆ, ಜೊತೆಗೆ ಅವನ ವ್ಯಕ್ತಿತ್ವವನ್ನೂ ಅರಿಯಬಹುದಾಗಿದೆ. ಆದರೆ, ಯಾವುದೋ ವಿಡಿಯೋ ತುಣುಕು ನೋಡುವಾಗ, ಆ ವ್ಯಕ್ತಿಯ ದೇಹದ ಉಷ್ಣಾಂಶ, ಹೃದಯದ ಬಡಿತ, ರಕ್ತದೊತ್ತಡ ಗಮನಿಸಬಹುದಾದರೆ, ಇವಷ್ಟಲ್ಲದೇ ಆ ವ್ಯಕ್ತಿಯು ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾನೆ? ಏನು ಕಂಡರೆ ನಗು ಬರುತ್ತದೆ? ಯಾಕೆ ಅಳುತ್ತಾನೆ? ಯಾವಾಗ, ಯಾಕೆ, ಹೇಗೆ ರೇಗುತ್ತಾನೆ? ಇತ್ಯಾದಿಗಳನ್ನೂ ಗಮನಿಸಬಹುದಲ್ಲವೇ?

ಪ್ರೀತಿ, ಸಂತೋಷ, ದುಃಖ, ಸಿಟ್ಟುಸೆಡುವು ಮೊದಲಾದವು ಜ್ವರ ಮತ್ತು ಕೆಮ್ಮಿನಂತೆಯೇ ಆ ವ್ಯಕ್ತಿಯ ದೇಹದ ಪ್ರಕೃತಿಗೆ ಸೇರಿದ ಸಂಗತಿಗಳು. ವ್ಯಕ್ತಿಯ ಕೆಮ್ಮು, ಜ್ವರವನ್ನು ಗುರುತಿಸುವ ತಂತ್ರಜ್ಞಾನವು ಆ ವ್ಯಕ್ತಿಯು ನಗುವುದನ್ನೂ ಗುರುತಿಸಬಹುದಲ್ಲವೇ? ವಾಣಿಜ್ಯ ವ್ಯವಹಾರದಲ್ಲಿ ತೊಡಗಿರುವ ಬೃಹತ್ ಸಂಸ್ಥೆಗಳು ಮತ್ತು ಸರ್ಕಾರಗಳು ಮೈಗುರುತು /ಆಳಚ್ಚು (ದೇಹ ಸಂವೇದಿ) ಆಧಾರಿತ ಕ್ರೋಢಿಕರಣಗೊಂಡ ದತ್ತಾಂಶಗಳ ಆಧಾರದ ಮೇಲೆ, ಆಯಾ ವ್ಯಕ್ತಿಗಳೇ ತಮ್ಮ ಆಸಕ್ತಿಗಳನ್ನು, ಬೇಕು ಬೇಡಗಳನ್ನು ಅರಿತುಕೊಳ್ಳುವ ಮೊದಲೇ ಆ ವ್ಯಕ್ತಿಗಳ ಆಸಕ್ತಿಗಳನ್ನು, ಬೇಕು ಬೇಡುಗಳನ್ನು ತಿಳಿದುಕೊಳ್ಳಬಲ್ಲವು, ವ್ಯಕ್ತಿಯ ನಿಲುವನ್ನು ಅರಿತುಕೊಳ್ಳಬಲ್ಲವು, ಇಲ್ಲವೇ ತಮಗೆ ಬೇಕಾದಂತೆ ಆ ವ್ಯಕ್ತಿಯ ಯೋಚನಾ ಲಹರಿಯನ್ನು ಬದಲಿಸಲೂಬಹುದು. ಅವರಿಗೆ ಅಗತ್ಯವಿರುವ ವಸ್ತುಗಳನ್ನೇ ಪೂರೈಸಲು ಮುಂದಾಗಬಹುದು, ಅಥವಾ ಇಂದಿನ ಜಾಹಿರಾತುಗಳ ಮಾದರಿಯಲ್ಲಿ ತಾವು ಉತ್ಪಾದಿಸುವ ವಸ್ತುಗಳನ್ನೇ ಖರೀದಿಸುವಂತೆ ಪ್ರಚೋದಿಸಲೂಬಹುದು.

ಇದು, ರಾಜಕೀಯದ ಅಂಗಳಕ್ಕೂ ಬಾರದು ಎಂದು ಅಂದುಕೊಳ್ಳುವುದಾದರೂ ಹೇಗೆ? ಒಂದು ನಿರಂಕುಶ ಪ್ರಭುತ್ವದ ದೇಶದಲ್ಲಿ ಶಿಲಾಯುಗದಂಥ ಘಟನೆಗಳು ನಡೆಯವಂತಿಲ್ಲ ಎನ್ನಲಾಗದು. ದೇಶದ ಚುಕ್ಕಾಣಿ ಹಿಡಿದ ನಾಯಕ ಭಾಷಣ ಮಾಡುತ್ತಿರುವಾಗ, ಯಾರಾದರೊಬ್ಬರು `ನಾಯಕ ಬುರುಡೆ ಬಿಡುತ್ತಿದ್ದಾನೆ’ ಅಂದರು ಅನ್ನಿ, ಆ ವ್ಯಕ್ತಿ ತೊಟ್ಟಿದ್ದ ಭಾವನೆಗಳನ್ನು ರವಾನಿಸುವ ಭಾವಸಂವೇದಿ ಕಂಕಣ, ಅವನ ಪ್ರಭುತ್ವದ (ಆಡಳಿತಾರೂಢ ಪಕ್ಷದ) ವಿರೋಧಿ ನಿಲುವಿನ ಬಗೆಗೆ ಮಾಹಿತಿ ಕೊಡುತ್ತಿದ್ದಂತೆ, ಅಲ್ಲಿಗೆ ಧಾವಿಸುವ ಸರ್ಕಾರಿ ಸಿಬ್ಬಂದಿ ಆ ವ್ಯಕ್ತಿಯ ಅಸ್ತಿತ್ವವೇ ಇರದಂತೆ ಮಾಡಿಬಿಡಬಹುದು.

ಈ ನಡುವೆ ದೇಶಕ್ಕೊದಗಿದ ಗಂಡಾಂತರದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿಯಾದರೂ ಮೈಗುರುತು ನಿಗಾ ಇರಲೇಬೇಕು ಎಂಬ ವಾದವನ್ನು ಕೆಲವರು ಮುಂದಿಡಬಹುದು. ತುರ್ತು ಪರಿಸ್ಥಿತಿ ಹೋದ ಮೇಲೆ ತಾತ್ಕಾಲಿಕವಾಗಿ ಜಾರಿಗೆ ತಂದ ಮೈಗುರುತು ನಿಗಾ (ಬಯೋ ಮೆಟ್ರಿಕ್ ಸರ್ವೆಲೆನ್ಸ್)ವನ್ನು ಕೈ ಬಿಡಬಹುದು.

ಆದರೆ, ತಾತ್ಕಾಲಿಕ ಅಂದುಕೊಂಡ ಕ್ರಮಗಳು ತಾತ್ಕಾಲಿಕ ಎಂಬ ಪರಿಭಾಷೆಯ ವ್ಯಾಪ್ತಿಯನ್ನು ದಾಟುವುದೇ ಹೆಚ್ಚು. ಉದಾಹರಣೆಗೆ ಸುಧಾರಿತ ರಸ್ತೆಯೊಂದನ್ನು ಬಳಕೆಗೆ ಮುಕ್ತವಾಗಿಸುವ ಮೊದಲು, ಕಾಮಗಾರಿಯ ಹೆಚ್ಚುವರಿ ವೆಚ್ಚವನ್ನು ಭರಿಸುವ ಉದ್ದೇಶದಿಂದ ನಿಗದಿತ ಅವಧಿಗೆ ಶುಲ್ಕ ವಸೂಲಿ ಎಂದು ನಿರ್ಧರಿಸಿದ್ದರೂ, ಕೆಲವೊಮ್ಮೆ ಆ ಅವಧಿ ಮುಗಿದರೂ ಶುಲ್ಕ ವಸೂಲಿ ಕ್ರಮ ಹಾಗೆಯೇ ಮುಂದುವರೆದಿರುವುದನ್ನು ನಾವು ಕಂಡಿದ್ದೇವೆ.

ಒಂದು ತುರ್ತುಪರಿಸ್ಥಿತಿ ಮುಗಿಯಿತು ಎನ್ನುವಷ್ಟರಲ್ಲಿ ಇನ್ನೊಂದು ತುರ್ತು ಪರಿಸ್ಥಿತಿ ಬಾರದು ಎಂದು ಹೇಳುವಂತಿಲ್ಲವಲ್ಲ್ಲ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...