- ಸಿಎಂಜೆ
“ನಾನು ನಿಮಗೆ ವಿಶ್ರಾಂತಿ ಕೊಡುವೆನು” (ಮತ್ತಾಯ 11: 28) ಎಂದು ಯೇಸು ನುಡಿದ ಹಾಗೆ, ಮರಣಾವಸ್ಥೆಯಲ್ಲಿರುವವರ ಹಾಗೂ ತೀವ್ರ ರೋಗದಿಂದ ನರಳುತ್ತಿರುವವರನ್ನು ಗಮನದಲ್ಲಿರಿಸಿಕೊಂಡು ಅವರ ಯಾತನೆಯನ್ನು ಕ್ರಿಸ್ತನ ಯಾತನೆಯೊಂದಿಗೆ ಸಮೀಕರಿಸಿ ಈ ಸಂಸ್ಕಾರವನ್ನು ನೀಡಲಾಗುತ್ತದೆ. “ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯಂಗಿಸಲಿ.” (ಯಕೋಬ 5:14). ಗುರುಗಳು ಪ್ರಾರ್ಥನೆಯನ್ನು ಹೇಳುತ್ತಾ ರೋಗಿಯ ಕೈಗಳ ಮೇಲೆ ಮತ್ತು ಹಣೆಯ ಮೇಲೆ ಪವಿತ್ರತೈಲವನ್ನು ಲೇಪಿಸುತ್ತಾ (ಮಾರ್ಕ 6: 13) ಅವರಿಗೆ ಕೆಲ ಸಾಂತ್ವನದ ನುಡಿಗಳನ್ನಾಡುತ್ತಾ ಸ್ವರ್ಗ ಜೀವನದಲ್ಲಿ ದೇವರ ದೇವದೂತರ ಮತ್ತು ಸಂತ ಸತ್ಪುರುಷರ ಸಾಂಗತ್ಯದ ಬಗ್ಗೆ ವಿವರಿಸುತ್ತಿದ್ದರೆ ರೋಗಿಯು ಮಾನಸಿಕವಾಗಿ ಬಲಗೊಂಡು ಪಾಪನಿವೇದನೆ ಮಾಡಿ (ಕ್ಯಾನನ್ 959) ಸಂತೋಷದಿಂದ ಸಾಯಲು ಸಿದ್ಧನಾಗುತ್ತಾನೆ. ಯುದ್ಧಭೂಮಿ, ಭೂಕಂಪ ಸುನಾಮಿ ಮುಂತಾದ ಪ್ರಕೃತಿ ವಿಕೋಪಗಳ ತಾಣಗಳು, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗಳು ಮುಂತಾದೆಡೆಗಳಲ್ಲಿ ಈ ಸಂಸ್ಕಾರವನ್ನು ಸಾಮೂಹಿಕವಾಗಿ ನೀಡಲಾಗುತ್ತದೆ. ಅದು ಹೊರತು, ಸಾಮಾನ್ಯವಾಗಿ ಈ ಸಂಸ್ಕಾರವನ್ನು ದೇವಾಲಯದಲ್ಲೇ ನೀಡಲಾಗುತ್ತದೆ. ರೋಗ ಉಲ್ಪಣಗೊಂಡ ರೋಗಿಯನ್ನು ಶುಚಿಗೊಳಿಸಿ ಶುಭ್ರವಸ್ತ್ರಗಳನ್ನು ತೊಡಿಸಿ ದೇವಾಲಯಕ್ಕೆ ಕರೆತಂದು ಎಲ್ಲರೂ ಸೇರಿ ಪ್ರಾರ್ಥನೆ ಹಾಡುಗಳ ಮೂಲಕ ವಾತಾವರಣವನ್ನು ಪವಿತ್ರಗೊಳಿಸಬೇಕು ಹಾಗೂ ಗುರುಗಳ ಪ್ರಭೋಧನೆಗೆ ಕಿವಿಗೊಡಬೇಕು. ರೋಗಿಯನ್ನು ದೇವಾಲಯಕ್ಕೆ ತರಲಾಗದಂತಹ ಸಂದರ್ಭಗಳಲ್ಲಿ ಅವರು ಮಲಗಿರುವ ಸ್ಥಳ ಹಾಗೂ ಕೋಣೆಯ ಮೈಲಿಗೆಯನ್ನು ಶುಚಿಗೊಳಿಸಿ ರೋಗಿಗೆ ಶುಭ್ರವಸ್ತ್ರ ತೊಡಿಸಿ ಮೇಣದಬತ್ತಿಗಳನ್ನು ಉರಿಸಬೇಕು. ಹಾಡು ಕೀರ್ತನೆ ಪ್ರಾರ್ಥನೆಗಳ ನಡುವೆ ಗುರುಗಳ ಆಶೀರ್ವಾದವೂ ಸೇರಿ ಸಾವಿನಂಚಿನಲ್ಲಿರುವವರು ಪ್ರಶಾಂತರಾಗುವಂತೆ ಮಾಡಬೇಕು. ಏಕೆಂದರೆ ಕೆಲ ರೋಗಿಗಳು, ಈ ಸಂಸ್ಕಾರ ಪಡೆದ ಕೂಡಲೇ ಸಾಯುತ್ತೇವೆಂದು ಭಾವಿಸುವುದರಿಂದ, ಅವರು ಈ ಸಂಸ್ಕಾರವನ್ನು ನಿರಾಕರಿಸುವ ಸಾಧ್ಯತೆಯೂ ಇರುತ್ತದೆ. ಈ ಸಂಸ್ಕಾರವು ದೇಹ ಮತ್ತು ಮನಸ್ಸು ಎರಡಕ್ಕೂ ಬಲ ತುಂಬುವುದರಿಂದ ಕೆಲವು ಸಂದರ್ಭಗಳಲ್ಲಿ ರೋಗಿಗಳು ಈ ಸಂಸ್ಕಾರ ಪಡೆದ ನಂತರ ಆತ್ಮವಿಶ್ವಾಸದಿಂದ ಚೇತರಿಸಿಕೊಂಡು ಎದ್ದು ಲವಲವಿಕೆಯಿಂದ ಇನ್ನಷ್ಟು ದಿನ ಬದುಕಿದ ಉದಾಹರಣೆಗಳೂ ಇವೆ. ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ. ಅವನು ಪಾಪ ಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ. (ಯಕೋಬ 5:15). ಆದ್ದರಿಂದ ಈ ಸಂಸ್ಕಾರವನ್ನು ಒಬ್ಬರಿಗೆ ಎಷ್ಟು ಸಲ ಬೇಕಾದರೂ ಕೊಡಬಹುದಾಗಿದೆ.
ಪರಿಸಮಾಪ್ತಿ
ಎಲ್ಲ ಏಳು ಸಂಸ್ಕಾರಗಳನ್ನು
ಗಮನಿಸಿದಾಗ ಸ್ನಾನದೀಕ್ಷೆ, ದೃಢೀಕರಣ ಮತ್ತು
ಯಾಜಕಾಭಿಷೇಕಗಳನ್ನು ಜೀವನದಲ್ಲಿ ಒಮ್ಮೆ ಮಾತ್ರ ಕೊಡಲಾಗುತ್ತದೆ ಎಂದು ತಿಳಿಯುತ್ತೇವೆ.
ಕ್ರೈಸ್ತರಾದ ನಮ್ಮ ಬದುಕಿನಲ್ಲಿ ಸಂಸ್ಕಾರಗಳು ಮಹತ್ತರ ತಿರುವುಗಳನ್ನು ನೀಡುತ್ತವೆ ಹಾಗೂ
ನಮ್ಮನ್ನು ನಿಜ ಕ್ರಿಸ್ತೀಯ ಜೀವನದಲ್ಲಿ ದೃಢವಾಗಿ ನೆಲೆಗೊಳಿಸುತ್ತವೆ. ಅವುಗಳ ಜೊತೆಗೆ
ನಾವು ಪ್ರತಿದಿನದ ಪ್ರಾರ್ಥನೆ ಮಾಡುತ್ತಾ
ಸಾಧ್ಯವಾದರೆ ಪ್ರತಿದಿನದ ಪೂಜೆಗಳಲ್ಲಿ ಪಾಲುಗೊಳ್ಳಬೇಕು. ಶ್ರೀಗ್ರಂಥ ಪವಿತ್ರಬೈಬಲ್, ಪ್ರಾರ್ಥನಾ ಕೈಪಿಡಿ, ಜಪಸರ ಮತ್ತು ಶಿಲುಬೆಗಳು ಸದಾ
ನಮ್ಮ ಜೊತೆಯಲ್ಲಿರಬೇಕು. ಯಾರಾದರೂ ಸಂಸ್ಕಾರಗಳನ್ನು ಹಗುರವಾಗಿ ಭಾವಿಸುತ್ತಿದ್ದರೆ, ಅಥವಾ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದರೆ, ಅಂಥವರ ಮನ ಪರಿವರ್ತನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು
ಒಳ್ಳೆಯದು. ಅದೇ ರೀತಿ ನಮ್ಮ ನಡವಳಿಕೆಗಳು ಇತರರಿಗೆ ಮಾದರಿಯಾಗಬೇಕು.
**********
No comments:
Post a Comment