Saturday, 9 May 2020

ಸೃಷ್ಟಿಯ ಕತೆ - 10 - ಕೋರಿಯಾದ `ಚೊಂಜಿವಾಂಗ್’ ಚರಿತೆ

- ಎಫ್ ಎಂ ಎನ್

(ಕೋರಿಯಾದೇಶದಲ್ಲಿ ಪ್ರಚಲಿತದಲ್ಲಿರುವ ಸೃಷ್ಟಿಯ ಕತೆ )

 ಆದಿಕಾಲದಲ್ಲಿ ಭೂಮಿ ಮತ್ತು ಆಗಸಗಳು ಕೂಡಿಯೇ ಇದ್ದವು. ಆಗ, ಭೂಮಿಯೂಇರಲಿಲ್ಲ, ಆಗಸವೂ ಇರಲಿಲ್ಲ. ಆ ಸಮಯದಲ್ಲಿಎಲ್ಲವೂ ಖಾಲಿ ಖಾಲಿ ಬರಿದಾಗಿಯೇಇತ್ತು. ಒಂದು ಬಾರಿ ಈ ಶೂನ್ಯಜಾಗದಲ್ಲಿಯೇ ಸ್ವಲ್ಪ ಬಿರುಕು ಕಾಣಿಸಿಕೊಂಡಿತು. ಆ ಬಿರುಕಿನ ನಂತರ ಹಗುರವಾದುದು ನಿಧಾನವಾಗಿ ಮೇಲಕ್ಕೆ ಏರಿ ಆಗಸವು ಅಸ್ತಿತ್ವದಲ್ಲಿ ಬಂದಿತು. ಅದರಂತೆಯೇ ಬಿರುಕಿನಲ್ಲಿ ಭಾರವಾದದು ಕೆಳಗೆ ಇಳಿಯುತ್ತಾ ಬಂದು ಭೂಮಿಯಾಯಿತು.

    ಕಾಲ ಸರಿದಂತೆ, ಆಗಸದಿಂದ ಸ್ಫಟಿಕ ನೀಲಿ ವರ್ಣದ ಇಬ್ಬನಿ ಕೆಳಗೆ ಬಿದ್ದಿತು. ಅದೇ ಬಗೆಯಲ್ಲಿ ಭೂಮಿಯ ಮೇಲೆ ಉಂಟಾದ ಕಡುಕಪ್ಪಾದ ಇಬ್ಬನಿ ಮೇಲೆ ಏರತೊಡಗಿತು. ಅವೆರಡೂ ಇಬ್ಬನಿ ಹನಿಗಳು ಕೂಡಿದಾಗ ದೇವರುಗಳು ಮತ್ತು ಮಾನವರು ಸೃಷ್ಟಿಯಾದರು.

ಒಂದು ದಿನ, ಮೂರು ಹುಂಜಗಳ ಕೂಗಿನಿಂದ, ದೇವರುಗಳ ನಾಯಕ ಚೆಂಜಿವಾಂಗ್‍ನಿಗೆ ನಿದ್ರಾಭಂಗವಾಗುತ್ತದೆ. ಅವು, ಆಗಸದ ಮಹಾ ಹುಂಜ, ಭೂಮಿಯ ಮಹಾ ಹುಂಜ ಮತ್ತು ಮಾನವರ ಮಹಾ ಹುಂಜಗಳು, ಚಿಂತಿತನಾದ ಚೆಂಜಿವಾಂಗ್ ವಿಚಾರ ಮಾಡಿದಾಗ, ಸೂರ್ಯನ ಅನುಪಸ್ಥಿತಿಯ ಕಾರಣ ಈ ಹುಂಜಗಳು ಇಷ್ಟೊಂದುಕೂಗಾಡುತ್ತಿವೆ ಎಂಬುದು ಗೊತ್ತಾಗುತ್ತದೆ.

  ಅವುಗಳ ಸ್ಥಿತಿಗೆ ಮರುಕಪಟ್ಟು, ಅವು ಸಂತೋಷದಿಂದ ಇರಲೆಂಬ ಆಶಯದಿಂದ ಚೆಂಜಿವಾಂಗ್, ಇಬ್ಬಿಬ್ಬರು ಸೂರ್ಯರು ಮತ್ತುಚಂದಿರರನ್ನು ಸೃಷ್ಟಿಸುತ್ತಾನೆ. ಪ್ರತಿದಿನ ಈ ಸೂರ್ಯರು ಬೆಳಿಗ್ಗೆ ಉಗಮಿಸಿ ಸಂಜೆ ಅಸ್ತಮಿಸುವಂತೆ ಮಾಡುತ್ತಾನೆ. ಅದೇ ಬಗೆಯಲ್ಲಿ ಆ ಇಬ್ಬರು ಚಂದಿರರು ಪ್ರತಿದಿನ ಸಂಜೆ ಉಗಮಿಸಿ ಬೆಳಿಗ್ಗೆ ಅಸ್ತಮಿಸುವಂತೆ ಮಾಡುತ್ತಾನೆ.

  `ಸುಮಯುನ್‍ಜಿಂಜಾ’ ಭೂಮಿಯ ಒಡೆಯನಾಗಿರುತ್ತಾನೆ. ಮೊತ್ತಮೊದಲು ಕಾಡುಪ್ರಾಣಿಗಳನ್ನು ಪಳಗಿಸಿದ ಖ್ಯಾತಿ ಅವನದಾಗಿರುತ್ತದೆ. ತನ್ನ ಒಂಬತ್ತು ಕುದುರೆಗಳು, ಒಂಬತ್ತು ಎತ್ತುಗಳು ಮತ್ತು ಒಂಬತ್ತು ಪಳಗಿದ ಬೇಟೆ ನಾಯಿಗಳನ್ನು ಇಟ್ಟುಕೊಂಡು ಮಾನವರ ಮೇಲೆ ದಬ್ಬಾಳಿಕೆ ಮಾಡಿಕೊಂಡಿರುತ್ತಾನೆ. ಹಸಿವಿನಿಂದ ಸಾಯದಷ್ಟು ಬೆಳೆಯನ್ನು ಬಿಟ್ಟುಎಲ್ಲವನ್ನೂ ಅವನು ದೋಚುತ್ತಿರುತ್ತಾನೆ. ಭಯಂಕರ ನಾಯಿಗಳನ್ನು ತನ್ನ ಸುತ್ತಮುತ್ತ ಇರಿಸಿಕೊಂಡು, ಕುದುರೆಗಳು ಎಳೆಯುವ ರಥದ ಮೇಲೆ ಕುಳಿತುಕೊಂಡು ಓಡಾಡುತ್ತಿದ್ದ  ಸುಮಯುನ್‍ಜಿಂಜಾ, `ನನ್ನನ್ನು ಮುಟ್ಟುವವರು ಯಾರೂ ಇಲ್ಲ, ತಡೆಯುವವರೂ ಇಲ್ಲ. ನಾನು ಅಜೇಯ’ ಎಂದು ಕೊಚ್ಚಿಕೊಳ್ಳುತ್ತಿರುತ್ತಾನೆ. ಒಂದು ದಿನ ಆಗಸದತ್ತ ಮುಖಮಾಡಿ, `ನನ್ನನ್ನು ಸೋಲಿಸುವವರು ಯಾರಾದರೂ ಇದ್ದಿರಾ?’ ಎಂದು ಕೂಗಿ ಕೇಳುತ್ತಾನೆ.

  ಸುಮಯುನ್‍ಜಿಂಜಾನ ದುರಭಿಮಾನದಕೆಚ್ಚಿನ ಮಾತುಗಳು, ಚೆಂಜಿವಾಂಗ್‍ನ ಕಿವಿಗೆ ಬೀಳುತ್ತವೆ. ಅವನ ಮಾತುಗಳನ್ನು ಕೇಳಿ ಮೈ ಉರಿದಂತಾಗಿ ಚೆಂಜಿವಾಂಗ್ ಸಿಟ್ಟಿನಿಂದ ಬುಸಗುಡತೊಡಗುತ್ತಾನೆ. ಅವನು, ಐದು ಪೆಡಂಭೂತಗಳು ಎಳೆಯುವ ಬಂಗಾರದ ರಥವನ್ನು ಹತ್ತಿ, ಸುಮಯನ್‍ಜಿಂಜಾನ ನಾಡಿನ ಮೇಲೆ ದಾಳಿ ಮಾಡುತ್ತಾನೆ.

ಚೆಂಜಿವಾಂಗ್ ತನ್ನ ಸೇನಾಧಿಪತಿಗಳಾದ ಉಳಿದ ದೇವರುಗಳಿಗೆ ತನ್ನೊಂದಿಗೆ ಸುಮಯನ್ ಜಿಂಜಾನ ನಾಡಿಗೆ ಬರುವಂತೆ ಆದೇಶಿಸುತ್ತಾನೆ. ಸಿಡಿಲು ದೇವತೆ `ಬಯೊರಿಕ್‍ಜಂಗುನ್’, ಮಾರುತದೇವರು `ಹಾವಡೋಕ್‍ಜಂಗುನ್’, ಮಳೆ ದೇವರು ‘ಪುಂಗು ದೋಸಾ’ ಚೆಂಜಿವಾಂಗ್ ನ ಜತೆ ಹೊರಡುತ್ತಾರೆ. ಈ ಮೂವರು ಸೇನಾಪತಿಗಳು, ದೇವರುಗಳ ಹತ್ತು ಸಾವಿರ ಸಂಖ್ಯೆಯ ಸೈನಿಕರನ್ನು ಹೊಂದಿರುತ್ತಾರೆ.

ಚೆಂಜಿವಾಂಗ್‍ನ ಸೇನೆ, ಸುಮಯನ್‍ಜಿಂಜಾನ ನಾಡನ್ನು ತಲುಪಿ, ಅವನ ಅರಮನೆಯನ್ನು ಮುತ್ತುತ್ತದೆ. ಆಗ, ಚೆಂಜಿವಾಂಗ್‍ಅರಮನೆ ಹತ್ತಿರದ ಮರವನ್ನೇರಿ ಕುಳಿತು `ಎಲೆ, ಹುಚ್ಚು ಮಾನವ, ನನ್ನ ಮುಂದೆ ಬಂದು ಮಂಡಿಯೂರು’ ಎಂದು ಕೂಗಿ ಕರೆಯುತ್ತಾನೆ.

 ಆಗ, ದೃತಗೆಡೆದ ಸುಮಯೂನ್‍ಜಿಂಜಾ, ತನ್ನಲ್ಲಿದ್ದ  ಕುದುರೆಗಳಿಗೆ, ಎತ್ತುಗಳಿಗೆ ಮತ್ತು ಬೇಟೆ ನಾಯಿಗಳಿಗೆ, ಚೆಂಜಿವಾಂಗ್‍ನ ಮೇಲೆ ದಾಳಿ ಮಾಡುವಂತೆ ಆದೇಶಿಸಿ ಕಳುಹಿಸುತ್ತಾನೆ. ಆದರೆ, ಅವು ತನ್ನ ಮೇಲೆ ಏರಿ ಬರುವ ಮೊದಲೇ, ಚೆಂಜಿವಾಂಗ್ ತಾರಮ್ಮಯ್ಯ ಕೈ ಆಡಿಸಿದಾಗ, ಆ ಎಲ್ಲಾ ಪ್ರಾಣಿಗಳು ಹಾರಿಹೋಗಿ ಸುಮಯುನ್‍ಜಿಂಜಾನ ಅರಮನೆಯ ಮಾಳಿಗೆ ಮೇಲೆ ಬೀಳುತ್ತವೆ. ಚೆಂಜಿವಾಂಗ್ ಮತ್ತೊಮ್ಮೆ ಕೈ ಆಡಿಸಿದಾಗ, ಸುಮಯೂನ್‍ಜಿಂಜಾನ ಅರಮನೆಯ ಅಡುಗೆ ಮನೆಯಲ್ಲಿದ್ದಎಲ್ಲಾ ಪಾತ್ರೆಪಗಡೆಗಳು ಅರಮನೆಯ ಮುಂದಿನ ಹೂವಿನ ತೋಟದಲ್ಲಿ ಬಂದು ಬೀಳುತ್ತವೆ.

 ಸುಮಯೂನ್‍ಜಿಂಜಾ, ದೇವರುಗಳ ಸೇನಾ ಬಲಕ್ಕೆ ತೀವ್ರತಡೆ ಒಡ್ಡುತ್ತಾನೆ. ಅವನು ಎಷ್ಟೇ ಹೋರಾಡಿದರೂ ಕೊನೆಗೆ ಚೆಂಜಿವಾಂಗ್‍ನ ಮುಂದೆ ಮಂಡಿಯೂರಬೇಕಾಗುತ್ತದೆ. ಚೆಂಜಿವಾಂಗ್, ಸೋತ ಸುಮಯೂನ್‍ಜಿಂಜಾನ ತಲೆಗೆ ಕಬ್ಬಿಣದ ಬಳೆಯನ್ನು ತೊಡಿಸುತ್ತಾನೆ. ಆ ಬಳೆಯ ಹಿಡಿತದಿಂದ ಅವನ ತಲೆ ಸಿಡಿದುಹೋದಂತೆ ಭಾಸವಾಗುತ್ತದೆ. ಅತ್ಯಂತ ನೋವಿನಿಂದ ನರಳಿದ ಸುಮಯೂನ್‍ಜಿಂಜಾ, ತನ್ನಗುಲಾಮನನ್ನುಕರೆದುತನ್ನತಲೆಯನ್ನುಕಡಿದುಹಾಕುವಂತೆ ಕೋರಿಕೊಳ್ಳುತ್ತಾನೆ. ಆದರೆ, ಆ ಮಾತುಗಳನ್ನು ಕೇಳಿದ ಚೆಂಜಿವಾಂಗ್‍ಗೆ ಅಚ್ಚರಿಯಾಗುತ್ತದೆ. ಆ ಬೆಳವಣಿಗೆಗಳನ್ನು ಕಂಡು `ಅದ್ಭುತವಾದ ಪ್ರಸಂಗ’ ಎಂದುಉಸುರಿದಚೆಂಜಿವಾಂಗ್, ಸುಮಯೂನ್‍ಜಿಂಜಾನ ತಲೆಗೆ ಸುತ್ತಿದ್ದಕಬ್ಬಿಣದಉಂಗುರವನ್ನು ಬಿಚ್ಚಿ ಹಾಕುತ್ತಾನೆ. ಇಷ್ಟು ಮಾಡಿ, ಚೆಂಜಿವಾಂಗ್ ಮುಂದೆ ಸಾಗುತ್ತಾನೆ.

  ಬಂದ ಕೆಲಸವಾಯಿತಲ್ಲ ಎಂದು ತಕ್ಷಣಕ್ಕೆ ಸ್ವರ್ಗಲೋಕಕ್ಕೆ ಹಿಂದಿರುಗದ ಚೆಂಜಿವಾಂಗ್, ಒಂದು ರಾತ್ರಿ ಮುತ್ತಜ್ಜಿ ಬೆಕ್ಜುಳ ಮನೆಯಲ್ಲಿ ಕಳೆಯುತ್ತಾನೆ, ಚುರುಕುಕಿವಿಯನ್ನು ಹೊಂದಿದ್ದ ಚೆಂಜಿವಾಂಗ್‍ದೇವನಿಗೆ ಪಕ್ಕದಕೊಠಡಿಯಲ್ಲಿಯಾರೊಒಬ್ಬರು ಬಾಚಣಿಗೆಗಳಿಂದ ತಮ್ಮ ಕೂದಲುಗಳನ್ನು ಬಾಚಿಕೊಳ್ಳುತ್ತಿರುವುದು ಕೇಳಿಸುತ್ತದೆ. ಚೆಂಜಿವಾಂಗ್, ಮುತ್ತಜ್ಜಿ ಬೆಕ್ಜುಳನ್ನು ಕರೆದು `ಅವಳು ಯಾರು?’ ಎಂದು ಕೇಳುತ್ತಾನೆ. ಆಗ ಮುತ್ತಜ್ಜಿ, ಅವಳು, ಆಕೆಯು ತನ್ನ ಏಕೈಕ ಮಗಳು `ಚಂಗ್ಮಿಯೊಂಗ ಅಗಿ’ ಎಂದು ತಿಳಿಸುತ್ತಾಳೆ.

ಚಂಗ್ಮಿಯೊಂಗ, ಪೂರ್ವದಿಕ್ಕಿನ ಸ್ವರ್ಗದಲ್ಲಿರುವ ಸೆನ್ನೊಯಿ ಮಹಿಳೆಯರಿಗಿಂತ ಬೆಳ್ಳಗಿದ್ದು ಸುಂದರಿಯಾಗಿ ಕಾಣುತ್ತಿರುತ್ತಾಳೆ. ಚೆಂಜಿವಾಂಗ್‍ನಿಗೆ ಚಂಗ್ಮಿಯೊಂಗಳ ಮೇಲೆ ಮನಸ್ಸಾಗುತ್ತದೆ. ಅದನ್ನು ಅವನು, ಅವರಿಬ್ಬರ ಮುಂದೆ ಬಾಯಿಬಿಟ್ಟು ಹೇಳಿಕೊಳ್ಳುತ್ತಾನೆ. ಅವನ ಆಸೆಯನ್ನು ಮನ್ನಿಸಿದ ಮುತ್ತಜ್ಜಿ ಆ ರಾತ್ರಿ ಚಂಗ್ಮಿಯೊಂಗಳನ್ನು, ಚೆಂಜಿವಾಂಗ್‍ನಿಗೆ ಒಪ್ಪಿಸುತ್ತಾಳೆ. ಹೀಗಾಗಿ ಆ ರಾತ್ರಿಯೇಚಂಗ್ಮಿಯೊಂಗಚೆಂಜಿವಾಂಗ್ ನ ಹೆಂಡತಿ ಆಗುತ್ತಾಳೆ.

ಚೆಂಜಿವಾಂಗ್ ತನ್ನ ನೂತನ ಹೆಂಡತಿಯೊಂದಿಗೆ ನಾಲ್ಕು ದಿನ ಕಳೆಯುತ್ತಾನೆ. ನಂತರ ಅವಳನ್ನು ಬಿಟ್ಟು ಹೊರಟುನಿಂತಾಗ ಚಂಗ್ಮಿಯೊಂಗಳ ಕೈಗೆ ಸೋರೆಕಾಯಿಯ ಎರಡು ಬೀಜಗಳನ್ನು ಕೊಡುತ್ತಾನೆ. ತಮ್ಮಬ್ಬರಿಗೂ ಹುಟ್ಟುವ ಮಕ್ಕಳಿಗೆ ಡಬೋಲ್ ಮತ್ತು ಸೊಬೋಲ್ ಎಂದು ಹೆಸರಿಡಬೇಕೆಂದು ಕೋರಿಕೊಳ್ಳುತ್ತಾನೆ. ನಂತರ ಚೆಂಜಿವಾಂಗ್ ತನ್ನ ಪೆಡಂಭೂತಗಳು ಎಳೆಯುವ ಬಂಗಾರದರಥವನ್ನು ಏರಿ ಹೊರಟುಬಿಡುತ್ತಾನೆ.

ನವಮಾಸಗಳ ನಂತರ ಚಂಗ್ಮಿಯೊಂಗ, ಇಬ್ಬರು ಅವಳಿಜವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಚೆಂಜಿವಾಂಗ್ ಕೋರಿಕೊಂಡಂತೆ ಆ ಮಕ್ಕಳಿಗೆ `ಡಬೋಲ್’ ಮತ್ತು `ಸೊಬೋಲ್’ ಎಂಬ ಹೆಸರುಗಳನ್ನು ಇಡುತ್ತಾಳೆ. ಒಂದು ದಿನ, ಆ ಇಬ್ಬರು ಗಂಡು ಮಕ್ಕಳು ಪ್ರೌಢಾವಸ್ಥೆ ಮುಟ್ಟಿದಾಗ, ಅವರು `ನಮ್ಮ ತಂದೆ ಯಾರು?’ ಎಂದು ವಿಚಾರಿಸುತ್ತಾರೆ. ಚಂಗ್ಮಿಯೊಂಗ, ‘ದೇವಲೋಕದ ಅಂದರೆ ಸ್ವರ್ಗದ ಚೆಂಜಿವಾಂಗ್ ನಿಮ್ಮತಂದೆ’ ಎಂದು ಅವರಿಗೆ ತಿಳಿಸುತ್ತಾಳೆ.

  ಆ ಇಬ್ಬರು ಅವಳಿಜವಳಿ ಮಕ್ಕಳು ತಂದೆಯತ್ತ ಸಾಗುವುದು ಹೇಗೆ? ಎಂದು ವಿಚಾರ ಮಾಡುವಾಗ, ಅವರ ತಂದೆ ಮನೆಯಿಂದ ಹೊರಡುವಾಗ ಅವರ ತಾಯಿಗೆ ಕೊಟ್ಟಿದ್ದ ಬೀಜಗಳ ನೆನಪಾಗುತ್ತದೆ. ಅವರಿಬ್ಬರೂ ತಾಯಿಯನ್ನು ಕೇಳಿ ಅವರತಂದೆಕೊಟ್ಟಿದ್ದ ಸೋರೆಕಾಯಿ ಬೀಜಗಳನ್ನು ಪಡೆದು ಅವನ್ನು ನೆಡುತ್ತಾರೆ.

ತಕ್ಷಣವೇ ಮೊಳಕೆಯೊಡೆದ ಆ ಎರಡೂ ಸೋರೆಕಾಯಿ ಬಳ್ಳಿಗಳು ಸರಸರ ಮೇಲೆ ಬೆಳೆಯುತ್ತಾ ಸಾಗುತ್ತವೆ. ಬೆಳೆದು ಬೆಳೆದು, ಆಗಸದಲ್ಲಿದ್ದ ಸ್ವರ್ಗವನ್ನು ತಲುಪಿ ಚೆಂಜಿವಾಂಗ್ ನ ಅರಮನೆಯೊಳಗೆ ತೂರಿಕೊಳ್ಳುತ್ತವೆ. ಅಲ್ಲಿ, ಚೆಂಜಿವಾಂಗ್‍ನ ಸಿಂಹಾಸನದ ಎಡಗೈಯನ್ನು ಸುತ್ತಿಕೊಳ್ಳುತ್ತವೆ. ಆ ಎರಡು ಬಳ್ಳಿಗಳನ್ನು ಹಿಡಿದುಕೊಂಡ ಆ ಇಬ್ಬರು ಸೋದರರು, ತಂದೆಚೆಂಜಿವಾಂಗ್‍ನ ಅರಮನೆಯನ್ನು ತಲುಪುತ್ತಾರೆ.

ಅಷ್ಟರಲ್ಲಿಅವರು ಆಗಸವನ್ನು ಹತ್ತುತ್ತಿರುವಾಗ ಅವರ ಭಾರ ಹೊತ್ತಿದ್ದ ಬಳ್ಳಿಗಳಿಗೆ ಅವರ ಭಾರವನ್ನು ತಡೆದುಕೊಳ್ಳಲು ಆಗುವುದಿಲ್ಲ. ಆಗ ಅವು ಹಿಡಿದುಕೊಂಡಿದ್ದ ಸಿಂಹಾಸನದ ಎಡಗೈ ಮುರಿದು ಬಿಡುತ್ತದೆ. ಆದ್ದರಿಂದಲೇ, ಅಂದಿನಿಂದ ಇಂದಿನವರೆಗೂ ಸಿಂಹಾಸನಗಳಿಗೆ ಎಡಗೈಗಳೇ ಇಲ್ಲ.

ಚೆಂಜಿವಾಂಗ್‍ನ ಎದುರು ಅವನ ಇಬ್ಬರು ಮಕ್ಕಳು ಬಂದು ನಿಂತಾಗ, ಆತ ಅವರನ್ನು ಗುರುತಿಸುತ್ತಾನೆ. ಅವರಿಬ್ಬರನ್ನೂ ತನ್ನ ಮಕ್ಕಳೆಂದು ಒಪ್ಪಿಕೊಳ್ಳುತ್ತಾನೆ. ಅವರು ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸುವ, ಚೆಂಜಿವಾಂಗ,  `ನನಗೆ ಏಕಾಂಗಿಯಾಗಿ ಸ್ವರ್ಗಲೋಕ, ಭೂಲೋಕ, ಮತ್ರ್ಯಲೋಕ ಮತ್ತು ಮೃತರ ಪಾತಾಳಲೋಕಗಳನ್ನು  ನಿಭಾಯಿಸುವುದು ಕಷ್ಟವಾಗುತ್ತಿದೆ’ ಎಂದು ತನಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳುತ್ತಾನೆ. `ನೀವಿಬ್ಬರೂ ನನಗೆ ಸಹಾಯ ಮಾಡಬಹುದು, ಅದಕ್ಕಾಗಿ ಕೆಲವು ಸ್ಪರ್ಧೆಗಳನ್ನು ಇಡುತ್ತೇನೆ. ನೀವಿಬ್ಬರೂ ಅದರಲ್ಲಿ ಯಶಸ್ಸು ಸಾಧಿಸಬೇಕು’ ಎಂದುಕೋರುತ್ತಾನೆ.

  ಮೊದಲ ಸ್ಪರ್ಧೆಒಗಟಿನದಾಗಿರುತ್ತದೆ. `ಡಬೋಲ್‍ಒಗಟನ್ನು ಕೇಳಿದಾಗ ಸೊಬೋಲ್ ಆ ಒಗಟನ್ನು ಬಿಡಿಸಬೇಕು. ಸೊಬೋಲ್ ಸರಿಯಾಗಿಒಗಟನ್ನು ಬಿಡಿಸಿದರೆ, ಅವನು ಮತ್ರ್ಯರ ಲೋಕವನ್ನು, ಅವನ ಸೋದರ ಮೃತರ ಪಾತಾಳಲೋಕವನ್ನು ಆಳಬಹುದು. ಒಂದು ವೇಳೆ ಸೊಬೋಲ್‍ಒಗಟು ಬಿಡಿಸಲಾಗದೇ ಸೋತರೆ, ಅವನ ಸೋದರ ಮತ್ರ್ಯರ ಲೋಕವನ್ನು, ಸೊಬೋಲ್ ಮೃತರ ಪಾತಾಳಲೋಕವನ್ನು ನೋಡಿಕೊಳ್ಳಬಹುದು’ ಎಂದು ನಿರ್ಧರಿಸಲಾಗಿತ್ತು.

`ಕೆಲವು ಮರಗಳ ಎಲೆಗಳು ಉದರುತ್ತವೆ ಮತ್ತೆ ಕೆಲವು ಮರಗಳು ಉದುರುವುದಿಲ್ಲ ಏಕೆ?’ ಎಂಬುದು ಡಬೋಲ್ ಕೇಳಿದ ಮೊದಲ ಪ್ರಶ್ನೆಯಾಗಿತ್ತು. `ಒಳಗೆ ಪೊಳ್ಳಾಗಿರುವ ಎಲೆಗಳನ್ನು ಹೊಂದಿರುವ ಗಿಡಮರಗಳ ಎಲೆಗಳು ಉದರುತ್ತವೆ. ಆದರೆ, ಗಟ್ಟಿ ಎಲೆಗಳನ್ನು ಹೊಂದಿರುವ ಮರಗಳ ಎಲೆಗಳು ಉದುರುವುದಿಲ್ಲ’ ಎಂಬುದು ಸೊಬೋಲ್‍ನ ಉತ್ತರವಾಗಿತ್ತು. ಆದರೆ ಡಬೋಲ್, ಜೊಂಡು ಹುಲ್ಲನ್ನು ಪ್ರಸ್ತಾಪಿಸಿ, `ಜೊಂಡು ಹುಲ್ಲಿನ ಕಾಂಡ ಜೊಳ್ಳಾಗಿದ್ದರೂ ಅದು ಎಲೆಗಳನ್ನು ಉದುರಿಸುವುದಿಲ್ಲ’ ಎಂದು ತಿಳಿಸುತ್ತಾನೆ.

`ಎತ್ತರದ ಪ್ರದೇಶದಲ್ಲಿ ಬೆಳೆಗಳು ಬೇಗ ಬೆಳೆಯುತ್ತವೆಯೋ? ಕೆಳಗಿನ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳು ಬೇಗ ಬೆಳೆಯುತ್ತವೆಯೋ?’ ಎಂದು ಸಹೋದರನಿಗೆ ಡಬೋಲ್ ಮತ್ತೊಂದು ಸವಾಲಿನ ಪ್ರಶ್ನೆ ಹಾಕುತ್ತಾನೆ. ಆಗ ಸೊಬೋಲ್, `ಕೆಳಗಿನ ಪ್ರದೇಶದಲ್ಲಿರುವ ಬೆಳೆಗಳು ಬೇಗ ಬೆಳೆಯುತ್ತವೆ’ ಎಂದು ಉತ್ತರಿಸುತ್ತಾನೆ.

ಅದು ತಪ್ಪೆಂದು ತಿಳಿಸುವಂತೆ ಡಬೋಲ್, `ಎತ್ತರದ ಪ್ರದೇಶತಲೆಯ ಮೇಲೆ ಕೂದಲುಗಳು ಹುಲುಸಾಗಿ ಬೆಳೆಯುತ್ತವೆ, ಆದರೆ ಕೆಳಗಿನ ಪಾದದಲ್ಲಿಅಷ್ಟೊಂದು ಕೂದಲುಗಳು ಬೆಳೆಯುವುದೇ ಇಲ್ಲ’ ಎಂದು ಸೋದರನ ಗಮನ ಸೆಳೆಯುತ್ತಾನೆ.

ಎರಡನೇ ಬಾರಿಯು ಒಗಟು ಬಿಡಿಸುವಲ್ಲಿಯಶಸ್ಸು ಸಾಧಿಸುವ ಡಬೋಲ್, ಮತ್ರ್ಯಲೋಕದ ಆಡಳಿತ ನಡೆಸುವ ಹಕ್ಕು ಹೊಂದುತ್ತಾನೆ. ಆದರೆ, ಮೃತರ ಪಾತಾಳ ಲೋಕವನ್ನು ಆಳಲು ಒಪ್ಪದ ಸೊಬೋಲ್, `ಇನ್ನೊಂದು ಬಗೆಯಲ್ಲಿ ಸ್ಪರ್ಧೆಏರ್ಪಾಡು ಮಾಡಬೇಕು’ ಎಂದು ಒತ್ತಾಯಿಸುತ್ತಾನೆ.

 ದಯಾಳುವೂ, ಮೃದು ಹೃದಯಿಯೂ ಆದ ಚೆಂಜಿವಾಂಗ್, ಹೊಸ ರೀತಿಯ ಇನ್ನೊಂದು ಬಗೆಯ ಸ್ಪರ್ಧೆ ನಡೆಸುವುದಕ್ಕೆ ತನ್ನ ಸಮ್ಮತಿ ಸೂಚಿಸುತ್ತಾನೆ.

 ನೂರು ದಿನಗಳವರೆಗೆ ಹೂವಿನ ಗಿಡವೊಂದನ್ನು ಬೆಳೆಸುವ ಸ್ಪರ್ಧೆಏರ್ಪಡಿಸಲಾಗುತ್ತದೆ. `ನೂರು ದಿನಗಳಲ್ಲಿ ಯಾವನು ಬೆಳೆದ ಹೂವಿನ ಗಿಡವು ಹೂವುಗಳಿಂದ ನಳನಳಿಸುತ್ತಾ ಇರುವುದೋ, ಅವನಿಗೆ ಮತ್ರ್ಯಲೋಕದ ಆಡಳಿತವನ್ನು ಒಪ್ಪಿಸಬೇಕು ಮತ್ತು ಸರಿಯಾಗಿ ಹೂವಿನ ಗಿಡ ಬೆಳೆಸದವನು ಮೃತರ ಪಾತಾಳಲೋಕವನ್ನು ಆಳಬೇಕು’ಎಂದು ನಿರ್ಧರಿಸಲಾಗುತ್ತದೆ. ಚೆಂಜಿವಾಂಗ್ ಇಬ್ಬರಿಗೂ ತಲಾ ಒಂದೊಂದು ಕುಂಡವನ್ನು ಮತ್ತು ತಲಾ ಒಂದೊಂದು ಬೀಜವನ್ನು ಕೊಡುತ್ತಾನೆ. ಹೂವು ಬೆಳೆಯಿರಿ ಎಂದು ಹೇಳುತ್ತಾನೆ.

ದಿನಗಳು ಉರುಳುತ್ತವೆ. ಎಂದಿನಂತೆಯೇ ಡಬೋಲ್ ಈ ಸ್ಪರ್ಧೆಯಲ್ಲೂ ಗೆಲವಿನ ಹಾದಿಯಲ್ಲಿರುತ್ತಾನೆ. ಡಬೋಲ್ ತನಗೆ ಸಿಕ್ಕ ಕುಂಡದಲ್ಲಿ ಬೆಳೆದ ಹೂವಿನ ಗಿಡ, ಹೂವುಗಳಿಂದ ನಳನಳಿಸುತ್ತಿರುತ್ತದೆ. ಆದರೆ ಸೊಬೋಲ್ ಬೆಳೆದ ಹೂವಿನ ಗಿಡಕುಂಡದಲ್ಲಿ ನೀರಿಲ್ಲದೇ ಒಣಗಿ ನಿಂತಿರುತ್ತದೆ. ಕೊನೆಯ ಗಳಿಗೆಯವರೆಗೂ ಎಲ್ಲವೂ ಸರಿಯಾಗಿರುತ್ತದೆ. ತೊಂಬತೊಂಬತ್ತನೇ ದಿನದರಾತ್ರಿತನಗೆ ನಿದ್ರೆ ಬಂದಂತೆ ನಟಿಸಿದ ಸೊಬೋಲ್, ಎಲ್ಲರೂ ಮಲಗಿದ್ದಾಗ ಗುಟ್ಟಾಗಿ ಎದ್ದುಹೋಗಿ, ಡಬೋಲ್‍ನ ಹೂವಿನ ಕುಂಡದಲ್ಲಿತನ್ನ ಹೂವಿನ ಕುಂಡದಲ್ಲಿದ್ದ ಒಣಗಿದ ಹೂವಿನ ಗಿಡವನ್ನು ನೆಡುತ್ತಾನೆ. ತನ್ನ ಹೂವಿನ ಕುಂಡದಲ್ಲಿ ಡಬೋಲ್‍ಕುಂಡದಲ್ಲಿ ಹೂವುಗಳಿಂದ ತುಂಬಿದ ಗಿಡವನ್ನು ನೆಡುತ್ತಾನೆ. ಮರುದಿನ, ಸೊಬೋಲ್ `ನಾನು ಗೆದ್ದೆ’ ಎಂದು ಕೂಗಿಕೊಳ್ಳುತ್ತಾನೆ. ಹಾಗಾಗಿ, ಸೊಬೋಲ್ ಮತ್ರ್ಯಲೋಕವನ್ನು ಆಳುವಂತಾಗುತ್ತದೆ. ಮತ್ತುಡಬೋಲ್ ಮೃತರ ಪಾತಾಳಲೋಕವನ್ನು ಆಳಬೇಕಾಗುತ್ತದೆ.

  ಸೊಬೋಲ್, ಮತ್ರ್ಯಲೋಕದ ಉಸ್ತುವಾರಿ ವಹಿಸಿಕೊಂಡ ಕೂಡಲೇ, ಅಲ್ಲಿನ ಅರಸ ಸುಮಯೂನ್‍ಜಿಂಜಾನನ್ನು ಸಾಯಿಸಿಬಿಡುತ್ತಾನೆ. ಸುಮಯೂನ್‍ಜಿಂಜಾನ ಎಲ್ಲಾ ಪ್ರಾಣಿಗಳನ್ನು ಸದೆಬಡಿದು ಅವನನ್ನು ವೈಯಕ್ತಿಕವಾಗಿ ಸೆರೆಹಿಡಿಯುತ್ತಾನೆ. ಅವನು ತನ್ನ ಎದುರು ಮಂಡಿಗಾಲುಊರುವಂತೆ ಮಾಡುತ್ತಾನೆ. ತನ್ನ ಸೈನಿಕರಿಗೆ ಹೇಳಿ ಅವನನ್ನು ಸಾಯಿಸಿ, ಅವನ ದೇಹವನ್ನು ನಾಲ್ಕು ತುಂಡು ಮಾಡಿ, ಅವನ ಮಾಂಸಖಂಡಗಳನ್ನು ಮತ್ತು ಮೂಳೆಗಳನ್ನು ಗಾಳಿಯಲ್ಲಿ ತೂರುವಂತೆ ಆದೇಶಿಸುತ್ತಾನೆ. ಅವನ ಶವದಿಂದ ಅಸಂಖ್ಯಾತ ನೊಣಗಳು, ಸೊಳ್ಳೆಗಳು, ತಿಗಣೆಗಳು ಹುಟ್ಟಿಕೊಳ್ಳುತ್ತವೆ. ಅವು, ಇದುವರೆಗೂ ಮತ್ರ್ಯಲೋಕದ ಜೀವಿಗಳಿಗೆ ಸಂಕಷ್ಟವನ್ನು ತಂದುಕೊಡುತ್ತಲೇ ಇವೆ.

ಸೊಬೋಲ್ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವನು, ಸುಮಯೂನ್‍ಜಿಂಜಾನ ಮಕ್ಕಳನ್ನು ಬಿಡಲಿಲ್ಲ. ಅವರನ್ನು ಹುಡುಕಿಸಿ ಸಾಯಿಸಿದ. ಸುಮಯೂನ್‍ನ ಮಗಳ ಶವ, ಹುರುಳಿ ಜೀರುಂಡೆಯ ಆಕಾರ ತಾಳಿತು. ಸುಮಯೂನ್ ನ ಮಗನ ಶವ ಬಾವಲಿಯಾಯಿತು. ಕೊನೆಗೆ, ಸುಮಯೂನ್ ನ ಅರಮನೆಯನ್ನು ಸುಟ್ಟು ಭಸ್ಮ ಮಾಡಿದ ನಂತರವೇ, ಸೊಬೋಲ್‍ನಿಗೆ ಸಮಾಧಾನವಾಗಿತ್ತು.

ಆದರೆ, ಸೊಬೋಲ್‍ನ ಆ ಸಮಾಧಾನ ಬಹಳ ಕಾಲ ಉಳಿಯಲಿಲ್ಲ. ಸುಮಯೂನ್‍ನ ಮಕ್ಕಳು ಮರಿಗಳನ್ನು, ಸಂಸಾರವನ್ನು ಸಂಹಾರ ಮಾಡಿ ಬಂದ ನಂತರ, ಮತ್ರ್ಯಲೋಕವನ್ನು ನೋಡಿದಾಗ ಸೊಬೋಲ್‍ನಿಗೆ ದೊಡ್ಡ ಆಘಾತ ಕಾದಿರುತ್ತದೆ.

 ಮತ್ರ್ಯಲೋಕದ ಅವಸ್ಥೆ ಅವನನ್ನು ದಂಗುಬಡಿಸುತ್ತದೆ. ಎಲೆಲ್ಲೂ ಗೊಂದಲದ ಪರಿಸ್ಥಿತಿ ಇರುತ್ತದೆ. ಹುಲ್ಲು, ಗಿಡಮರಗಳಿಗೆ, ಮೀನುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಮಾನವರಿಗೆ ಮಾತನಾಡುವ ಶಕ್ತಿ ಇರುತ್ತದೆ. ಇಡೀ ಮತ್ರ್ಯಲೋಕ, ಎಲ್ಲರ ಮಾತುಕತೆಗಳ ಶಬ್ದಗಳಿಂದ ಜಗತ್ತು ಗದ್ದಲದ ಗೂಡಾಗಿರುತ್ತದೆ.

 ಮಾನವರು ಪರಸ್ಪರ ಮಾತನಾಡಲು  ಸಾಧ್ಯವಾಗುತ್ತಿರುವುದಿಲ್ಲ.ಅವರೇನಾದರು ಮಾತನಾಡ ತೊಡಗಿದರೆ, ಅವರ ಮಾತುಗಳಿಗೆ ಮಾನವರಲ್ಲ ದೆವ್ವಗಳು ಅವರಿಗೆ ಉತ್ತರಿಸುತ್ತಾ ಗೊಂದಲ ಮೂಡಿಸುತ್ತಿದ್ದವು.

ಇದೆಲ್ಲದರ ಜೊತೆಗೆ ಆಕಾಶದಲ್ಲಿದ್ದಇಬ್ಬಿಬ್ಬರು ಸೂರ್ಯರು ಮತ್ತುಚಂದಿರರಕಾಟ ತಡೆದುಕೊಳ್ಳಲು ಸಾಧ್ಯವಾಗದಂತಿತ್ತು. ಪ್ರತಿದಿನವೂ ಸಾವಿರಾರು ಜನ, ಇಬ್ಬರು ಸೂರ್ಯರ ಬಿಸಿಲಿನ ಶಾಖಕ್ಕೆ ಸಿಲುಕಿ ಸುಟ್ಟು ಹೋಗುತ್ತಿದ್ದರು. ಮತ್ತೆ ರಾತ್ರಿ ಭಯಂಕರ ತಣ್ಣಗಿನ ಚಳಿಯಲ್ಲಿ ಗಡಗಡ ನಡಗುತ್ತಿದ್ದ ಸಾವಿರಾರು ಮಂದಿ ಹಿಮವು ಹೆಪ್ಪುಗಟ್ಟಿದಂತಾಗಿ ಮಲಗಿದಲ್ಲಿಯೇ ಸಾಯುತ್ತಿದ್ದರು. ಮತ್ತೆ ಉಳಿದ ಮಾನವರೋ, ಅನ್ಯಾಯ ಅನೀತಿಗಳಲ್ಲಿ ತೊಡಗಿದ್ದರು. ಸುಳ್ಳು, ವಂಚನೆ, ದಗಾಕೋರತನ, ಪರಸ್ಪರ ಆಕ್ರಮಣಕಾರಿಯಾಗಿ ಏರಿಹೋಗುವ ಸ್ವಭಾವಗಳನ್ನು ತುಂಬಿಕೊಂಡಿದ್ದರು.

   ಸೊಬೋಲ್ ತನ್ನ ಸಹೋದರ ಡಬೋಲ್‍ನನ್ನು ಕಂಡು, `ಮತ್ರ್ಯಲೋಕದಲ್ಲಿನ ಗೊಂದಲದ ಸಿಕ್ಕುಗಳನ್ನು ಬಿಡಿಸಲು ಸಹಾಯ ಮಾಡಲು ಬಾ’ ಎಂದು ಕೋರಿಕೊಳ್ಳುತ್ತಾನೆ. ಸಹೋದರ ಸೊಬೋಲ್‍ನ ಸಹಾಯಕ್ಕೆ ಬರುವ ಡಬೋಲ್, ಕಲಬೆರಕೆ ಇಲ್ಲದ ಕಬ್ಬಿಣದಿಂದ ಎರಡು ಭಾರಿಗಾತ್ರದ ಬಾಣಗಳನ್ನು ಸಿದ್ಧಪಡಿಸುತ್ತಾನೆ. ಒಂದೊಂದು ಬಾಣವೂ ತಲಾ 600 ಕಿಲೋ ಭಾರವಿರುತ್ತದೆ. ಜೊತೆಗೆ ಪೈನ್ ಮರದ ಹೊಟ್ಟನ್ನುಐದು ಚೀಲಗಳಲ್ಲಿ ತುಂಬಿಟ್ಟುಕೊಳ್ಳುತ್ತಾನೆ. ಮೊದಲ ಬಾಣವನ್ನುತನ್ನ ಬಿಲ್ಲಿಗೆ ಹೂಡಿಕೊಳ್ಳುವ ಡಬೋಲ್, ಗುರಿಯಿಟ್ಟು ಒಬ್ಬ ಸೂರ್ಯನನ್ನು ಹೊಡೆದು ಉರುಳಿಸಿಬಿಡುತ್ತಾನೆ. ಡಬೋಲ್‍ನ ಬಾಣದ ಏಟಿಗೆ ನುಚ್ಚುನೂರಾದ ಸೂರ್ಯನ ತುಂಡುಗಳು, ಪೂರ್ವದ ದಿಕ್ಕಿನ ಆಕಾಶದಲ್ಲಿ ತಾರೆಗಳಾಗಿ ಬಿಡುತ್ತವೆ. ಮರುದಿನ ಸಂಜೆ, ಡಬೋಲ್ ತನ್ನ ಎರಡನೇ ಬಾಣವನ್ನು ಒಬ್ಬ ಚಂದಿರನಿಗೆ ಗುರಿಯಿಟ್ಟು ಹೊಡೆಯುತ್ತಾನೆ. ನುಚ್ಚುನೂರಾದ ಚಂದಿರನ ತುಂಡುಗಳು ಪಶ್ಚಿಮ ಆಕಾಶದಲ್ಲಿ ತಾರೆಗಳಾಗಿಬಿಡುತ್ತವೆ.

  ಅಂದಿನಿಂದ ಇಂದಿನವರೆಗೂ ಆಗಸದಲ್ಲಿ ಕೇವಲ ಒಬ್ಬನೇ ಒಬ್ಬ ಸೂರ್ಯ ಮತ್ತು ಒಬ್ಬನೇ ಒಬ್ಬ ಚಂದಿರ ಉಳಿದುಕೊಳ್ಳುತ್ತಾರೆ. ಅದರಂತೆಯೇ ಆಗಸದಲ್ಲಿಅಗಣಿತ ತಾರೆಗಳು ಮಿನುಗುತ್ತಿವೆ.

  ಆ ನಂತರ ಡಬೋಲ್ ತಾನು ತಂದಿದ್ದ ಪೈನ್ ಮರದ ಹೊಟ್ಟನ್ನು ಜಗತ್ತಿನ ಮೇಲೆ ಸಿಡಿಸುತ್ತಾ ಹೋಗುತ್ತಾನೆ. ಆ ಮರದ ಹೊಟ್ಟು ಹುಲ್ಲು, ಗಿಡಮರಗಳು, ಮೀನುಗಳು ಮತ್ತು ಪ್ರಾಣಿಪಕ್ಷಿಗಳ ಮೇಲೆ ಬಿದ್ದಾಗ, ಅವು ತಮ್ಮ ಮಾತನಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ತದನಂತರ ಡಬೋಲ್ ಮಾನವರ ಮತ್ತು ದೆವ್ವಗಳ ನಡುವಿನ ಮಾತಿನ ಗೊಂದಲವನ್ನು ನಿವಾರಿಸಲು ಮುಂದಾಗುತ್ತಾನೆ. ದೆವ್ವಗಳು ಹಗುರವಾದ ಭೂತಗಳಾಗುತ್ತವೆ. ಭಾರವಾದ ದೇಹದ ಮಾನವರು ಭೂಮಿಯ ಮೇಲೆ  ಉಳಿದುಕೊಳ್ಳುತ್ತಾರೆ. ಇಷ್ಟಾದ ಮೇಲೆ ಡಬೋಲ್ ತನ್ನ ಮೃತರ ಪಾತಾಳಲೋಕಕ್ಕೆ ತೆರಳುತ್ತಾನೆ.

ಆದರೆ, ಸೊಬೋಲ್, ಮತ್ರ್ಯಲೋಕದ ಮಾನವರ ಕೆಟ್ಟ ಚಾಳಿಗಳ ಕುರಿತು ಸಹೋದರ ಸಬೋಲ್‍ನಿಗೆ ತಿಳಿಸಲು ಮರೆತಿರುತ್ತಾನೆ. ಹೀಗಾಗಿ ಮಾನವರು, ಅನ್ಯಾಯ ಅನೀತಿಗಳಲ್ಲಿ ತೊಡಗಿದ್ದವರು ಹಾಗೆ ಉಳಿದುಕೊಳ್ಳುತ್ತಾರೆ. ಸುಳ್ಳು, ವಂಚನೆ, ದಗಾಕೋರತನ, ಪರಸ್ಪರ ಆಕ್ರಮಣಕಾರಿಯಾಗಿ ಏರಿಹೋಗುವ ಸ್ವಭಾವಗಳನ್ನು ತುಂಬಿಕೊಂಡಿದ್ದವರು ಬದಲಾಗುವುದೇ ಇಲ್ಲ. ಏಕೆಂದರೆ, ಮತ್ರ್ಯಲೋಕದ ಜವಾಬ್ದಾರಿ ಹೊತ್ತಿರುವ ಸೊಬೋಲ್‍ನಿಗೆ ಮಾನವರ ಸ್ವಭಾವವನ್ನು ಬದಲಿಸುವ ಶಕ್ತಿ ಇರುವುದಿಲ್ಲ. ಅಷ್ಟರಲ್ಲಿ, ಅಂಥ ಶಕ್ತಿ ಹೊಂದಿದ್ದ ಸೊಬೋಲ್‍ನ ಸಹೋದರ ಡಬೋಲ್, `ನಾನು ಬಂದ ಕೆಲಸವಾಯಿತು’ ಅಂದುಕೊಂಡು ಮೃತರ ಪಾತಾಳ ಲೋಕಕ್ಕೆ ಹಿಂದಿರುಗಿ ಹೋಗಿರುತ್ತಾನೆ.

  ಈ ನಡುವೆ, ಸೊಬೋಲ್ ಮತ್ತು ಡಬೋಲ್, ಅವರ ತಾಯಿ ಚಂಗ್ಮಿಯೊಂಗಳಿಗೆ ಭೂಲೋಕದ ಜವಾಬ್ದಾರಿ ವಹಿಸಿಕೊಡಲಾಗಿರುತ್ತದೆ. ಅಲ್ಲಿಗೆ, ಸ್ವರ್ಗಲೋಕ, ಭೂಲೋಕ, ಮತ್ರ್ಯಲೋಕ ಮತ್ತು ಮೃತರ ಪಾತಾಳಲೋಕಗಳಿಗೆ ಅವುಗಳ ದೇವರುಗಳು (ಒಡೆಯರರು) ಸಿಕ್ಕಂತಾಗಿರುತ್ತದೆ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...