- ಜೋವಿ
![]() |
ಏಕೋ ಏನೋ ಇವತ್ತು ತುಂಬ ದುಃಖವಾಗುತ್ತಿದೆ. ಮಹೇಂದ್ರ ಕುಮಾರು ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಬ್ರಮೆಯಾಗಿದೆ. ಕೈಯಲ್ಲಿದ್ದ ಪ್ರಜಾವಾಣಿ ಪತ್ರಿಕೆಯನ್ನು ಓದಲಾಗದೆ ಸುಮ್ನೆ ಮೇಜಿನ ಮೇಲೆ ಬಿಸಾಡಿ ಸುಮಾರು ಒಂದು ಗಂಟೆಗಳ ಕಾಲ ಏನು ಮಾಡಲಾಗದೆ ಸುಮ್ನೆ ಕೂತು ಬಿಟ್ಟೆ. ಏನೋ ಒಂದು ರೀತಿಯ ನೋವು, ಬೇಸರ. ಛೇ ಛೇ ಅಂತನೇ ಮನಸ್ಸು ಕೊರಗುತ್ತಿತ್ತು. ದೂರದ ಪಾಟ್ನಾದಲ್ಲಿರುವ ನನ್ನ ಅಣ್ಣನ ಮೊಬೈಲ್‍ಕಾಲ್ ಬಂತು. ಅಣ್ಣನಿಗೆ ಮಹೇಂದ್ರರವರ ಸಾವಿನ ಸುದ್ದಿ ತಿಳಿಸಿ ಬೇರೇನು ಹೇಳಲಾಗದೆ ಪೋನ್ ಕಾಲನ್ನು ಕಟ್ ಮಾಡಿದೆ. ಯಾಕೋ ತುಂಬಾ ಅತ್ಮೀಯರನ್ನು ಕಳೆದುಕೊಂಡಂತೆ ಮನಸ್ಸು ರೋಧಿಸಿ ಹೆಪ್ಪುಗಟ್ಟಿದೆ. ನನ್ನ ನೆರೆಯ ಗೆಳೆಯನಿಗೆ ಈ ಅಘಾತಕಾರಿ ಸುದ್ದಿಯನ್ನು ನೋವಿನ ದನಿಯಲ್ಲೇ ಮುಟ್ಟಿಸಿದೆ. ಅವನು ಕೂಡ ಬೇಸರದ ಮಾತುಗಳನಾಡಿ ಸುಮ್ಮನಾದ. ಹೌದು, ಮಹೇಂದ್ರ ಕುಮಾರ್‍ರವರ ಸಾವಿನ ಸುದ್ದಿ ಕೇಳಿ ನಾನಾ ರೀತಿಯ ನೆನಪುಗಳು ನನ್ನನ್ನು ಆವರಿಸಿಕೊಂಡಿವೆ.
ವರ್ಷ 2008. ನಾನು ಮಂಗಳೂರಿನ ಒಂದು ಪ್ರತಿಷ್ಠಿತ ಕಾಲೇಜೊಂದರಲ್ಲಿ
ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದೆ. ಭಾರತದ ಹಿಂದೂ ಯುವ ಸಂಘಟನೆಯಾದ ಭಜರಂಗದಳದ ಶಾಖೆಯ
ಭಾರತದ ಕರ್ನಾಟಕ ವಿಭಾಗದ ಕನ್ವೀನರ್ ಆಗಿದ್ದ ಮಹೇಂದ್ರ ಕುಮಾರು ಚಚರ್Àುಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿಸಿ ಸುದ್ದಿಯಲ್ಲಿದ್ದ ಕಾಲವದು. ಆ ಸಂದರ್ಭದಲ್ಲಿ
ಕ್ರೈಸ್ತರೆಲ್ಲಾ ಸೇರಿ ರಸ್ತೆಗಿಳಿದುದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ನಾನು ಕೂಡ
ಎಲ್ಲರ ಜೊತೆಸೇರಿ ರಸ್ತೆ ಮೇಲೆ ಕುಳಿತು ಮಹೇಂದ್ರನನ್ನು ಮತ್ತು ಅವನ ಸಹಚರರನ್ನು ಬಂಧಿಸಬೇಕೆಂದು
ಒಕ್ಕೊರಲಿನಿಂದ ಆಗಿನ ಸರ್ಕಾರವನ್ನು ಒತ್ತಾಯಿಸಿದ ನೆನಪು. ಆಗ ನಮಗೆಲ್ಲಾ ಅವನೊಬ್ಬ ಕಳ್ಳನಾಯಕ, ಮತಾಂಧ, ದಾಳಿಕೋರನಂತೆ ಕಂಡರೂ ಬಹುತೇಕ
ಜನರಿಗೆ ಮುಖ್ಯವಾಗಿ ಸಂಘಪರಿವಾರದ ತತ್ವಗಳನ್ನು ಮೆಚ್ಚಿಕೊಂಡವರ ಕಣ್ಣುಗಳಲ್ಲಿ ಅವನೊಬ್ಬ ಹೀರೋ
ಆಗಿದ್ದ. ನಂತರ ರಾಜ್ಯದಲ್ಲಿ ಚರ್ಚಿನ ಮೇಲೆ ಸರಣಿ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ ಬಂಧಿತನಾದ
ಅವನು ಸುಮಾರು 42 ದಿನಗಳ ಕಾಲ ಕಾರಾಗೃಹವನ್ನು
ಅನುಭವಿಸಿ ನಂತರ ಜಾಮೀನು ಮೇಲೆ ಬಿಡುಗಡೆ ಹೊಂದಿದ. ನಂತg ಅವನ ಬದುಕಿನಲ್ಲಿ
ನಡೆದಿದ್ದು ಶುದ್ಧೀಕರಣದ ಪ್ರಕ್ರಿಯೆ; ಸಂಘಪರಿವಾರದ
ಷಡ್ಯಂತ್ರಗಳನ್ನು ನಾಯಕರ ಆತ್ಮವಂಚನೆಯ ನಡುವಳಿಕೆಗಳನ್ನು ಅರಿತು, ಭಜರಂಗದಳದಿಂದ ಹೊರಬಂದು ಜೆಡಿಎಸ್ ಪಕ್ಷವನ್ನು ಸೇರುವುದರ ಮೂಲಕ
ರಾಜಕೀಯ ರಂಗಕ್ಕೆ ದುಮುಕ್ಕಿದರು. ಜೆಡಿಎಸ್ ಪಕ್ಷದಲ್ಲೂ ಬಹು ದಿನ ಉಳಿಯಲಿಲ್ಲ. ಕೊನೆಗೆ ಸಮಾಜಿಕ
ಕಾರ್ಯಕರ್ತರಾಗಿ ಕೋಮುವಾದಿಗಳ ವಿರುದ್ಧ ಸೆಟೆದು ಹೋರಾಡಲು ಪ್ರಾರಂಭಿಸಿದನು. ಚರ್ಚೆಯ ನೆಪದಲ್ಲಿ
ಟಿವಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದನು. ನಂತರ ದಿನಗಳಲ್ಲಿ ಅವರ ಕಡೆಗಿನ ನನ್ನ ಗಮನ
ಆಷ್ಟಕಷ್ಟೆ. ನಾನು ಕೂಡ ಮಂಗಳೂರು ಬಿಟ್ಟು ನನ್ನ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು, ಪೂನೆ ಅಂತ ಅಲೆಮಾರಿಯಾಗಿದೆ.
ಹತ್ತು ವರ್ಷಗಳ ನಂತರ ಪುನಃ
ಮಂಗಳೂರನ್ನು ಕೂಡಿಕೊಂಡೆ. ‘ಜನನುಡಿ’ ಎಂಬ ಕಾರ್ಯಕ್ರಮಕ್ಕೆ ಹೋಗಿ ಮೊದಲನೆಯ ಬಾರಿಗೆ
ಮಹೇಂದ್ರರವರನ್ನು ನೇರವಾಗಿ ಅಂದರೆ ದೂರದಿಂದ ಕಂಡೆ. ಆತ್ಮೀಯ ಗೆಳೆಯರಾದ ಬಸೂರವರು ದೂರದ
ಗದಗಿನಿಂದ ಈ ಕಾರ್ಯಕ್ರಮದ ಸಲುವಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿಗೆ ಕಾಲಿಡುವ ಮುಂಚೆ ಈ
ಕಾರ್ಯಕ್ರಮದ ಬಗ್ಗೆ ಪೀಠಿಕೆ ಕೊಟ್ಟು ನನ್ನನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು
ಆಹ್ವಾನಿಸಿದ್ದರು. ಇದು ಜನಪರ ಕಾರ್ಯಕ್ರಮವಾಗಿದ್ದರಿಂದ ಉತ್ಸಾಹದಿಂದಲ್ಲೇ ಈ ಕಾರ್ಯಕ್ರಮಕ್ಕೆ
ಹೋಗಿದ್ದೆ. ಕಾರ್ಯಕ್ರಮದ ಹಲವಾರು ಭಾಷಣಕಾರರಲ್ಲಿ
ಮಹೇಂದ್ರ ಕುಮಾರು ಕೂಡ ಒಬ್ಬರಾಗಿದ್ದರು. ಆ ಭಾಷಣದಲ್ಲಿ ಕೆಲವೊಂದು ಸಂಘಟನೆಗಳ ಜೊತೆಗೆ ಅವಗಿದ್ದ
ಭೂತಕಾಲದ ನಂಟು, ಆ ಸಂಘಟನೆಯ ದುರುದ್ದೇಶಗಳು, ಮುಖಂಡರಿಂದ ಅವರಿಗಾದ ಅನ್ಯಾಯ, ಮುಖಂಡರ ಹಿಪೋಕ್ರಸಿ ಹೀಗೆ ಎಲ್ಲಾವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅವರ
ಮಾತಿನಲ್ಲಿ ಪ್ರಮಾಣಿಕತೆಯಿತ್ತು, ದೇಶಪ್ರೇಮವಿತ್ತು.
ಮುಖ್ಯವಾಗಿ ಕೆಳಸ್ತರ ಯುವಕರನ್ನು ಎಚ್ಚರಿಸುವ ಧ್ವನಿಯಿತ್ತು. ಅವರಾಡಿದ ದೃಢ ಮತ್ತು ತೀಕ್ಷ್ಣ
ಮಾತುಗಳು ನನ್ನನ್ನು ಆಕರ್ಷಿಸಿತ್ತು. ಆ ಕಾರ್ಯಕ್ರಮದಲ್ಲಿ ಕೇಳಿದ ಅವರ ಮಾತುಗಳು ಕೆಲವು
ದಿನಗಳುವರೆಗೆ ನನ್ನಲ್ಲೇ ಸಂಭಾಷಿಸಲು ಪ್ರಾರಂಭಿಸಿತ್ತು. ಮತ್ತೆ ಈ ಮನುಷ್ಯನನ್ನು ಸಾಮಾಜಿಕ
ಜಾಲತಾಣಗಳಲ್ಲಿ ಹಿಂಬಾಲಿಸಲು ಪ್ರಾರಂಭಿಸಿದೆ. ಜಾಗೃತಿ ಮೂಡಿಸುವಂತಹ ಅವರ ವಿಡಿಯೋಗಳನ್ನು ಆಲಿಸಲು
ಆರಂಭಿಸಿದೆ. ಈಗೆ ಒಂದು ದಿನ ಸಂತ ಪೌಲರ ಬಗ್ಗೆ ಪ್ರಬೋಧನೆ ಮಾಡುವಾಗ ಮಹೇಂದ್ರ ಕುಮಾರ್ರವರ
ಪರಿವರ್ತನೆಯ ಬಗ್ಗೆ ಹೇಳಿದಾಗ, ಕೆಲ ಸಿಸ್ಟರ್ಗಳು
ಮಹೇಂದ್ರರವರ ‘ನಮ್ಮ ಧ್ವನಿ’ ಎಂಬ ಯುಟ್ಯೂಬ್ ಚಾನೆಲ್ ಬಗ್ಗೆ ಮಾಹಿತಿಯನ್ನು ಕೇಳಿದಾಗ
ಮಾಹಿತಿಯನ್ನು ಸಂತೋಷದಿಂದ ಹಂಚಿಕೊಂಡ ನೆನಪು.
ಮಹೇಂದ್ರ ಕುಮಾರ್ ಮತ್ತಷ್ಟು
ನನಗೆ ಆತ್ಮೀಯರಾಗಿದ್ದು ಸಿಎಎ ವಿರುದ್ಧ ಹೋರಾಟದ ಸಂದರ್ಭದಲ್ಲಿ. ಕಾಲಿಗೆ ಚಕ್ರಕಟ್ಟಿಕೊಂqವರಂತೆ ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಸಿಎಎ ವಿರುದ್ಧ ಜನರನ್ನು
ಸಂಘಟಿಸುತ್ತಿದ್ದರು. ಜಾತಿ ಧರ್ಮ ವರ್ಗಗಳ ಆಧಾರದ ಮೇಲೆ ತುಂಡು ತುಂಡಾಗಿರುವ ಈ ಸಮಾಜವನ್ನು
ಶಾಂತಿ, ಸಹಬಾಳೆÉ್ವ, ಸಾಮರಸ್ಯದಿಂದ ಕಟ್ಟಬೇಕು.
ಎಲ್ಲರಲ್ಲೂ ಭ್ರಾತೃತ್ವತೆಯನ್ನು ಮೂಡಿಸಿ ಏಕತೆಯನ್ನು ಸಾರಬೇಕು. ಬಹುತ್ವದ ಭಾರತ ನನ್ನದಾಗಬೇಕು
ಎನ್ನುವ ಕನಸಿನೊಂದಿಗೆ ‘ನಮ್ಮ ಧ್ವನಿ’ ಎನ್ನುವ ಒಂದು ದೊಡ್ಡ ಅಭಿಮಾನವನ್ನೇ ಶುರುಮಾಡಿದ್ದರು.
ಪ್ರಶ್ನಾತೀತ ನಾಯಕರ ತಪ್ಪುಗಳನ್ನು ಯಾವುದೇ ರೀತಿಯ ಮುಲಾಜಿಲ್ಲದೆ ಟೀಕಿಸಿದರು. ಸಂಘಪರಿವಾರದ
ಹುಳುಕು ಇತಿಮಿತಿಗಳನ್ನು ಒಳಸಂಚುಗಳನ್ನು ಅಮೂಲಾಗ್ರವಾಗಿ ವಿವರಿಸಿ ಹೇಳುತ್ತಿದ್ದರು. ಈ
ಕಾರಣಕ್ಕಾಗಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸಿ ತಿಳುವಳಿಕೆ ಮೂಡಿಸುವ ವಿಡಿಯೋಗಳನ್ನು ಮಾಡಿ
ಸಾಮಾಜಿಕ ಜಾಲತಾಣಗಳಲಿ ಹಂಚಿಕೊಳ್ಳುತ್ತಿದ್ದರು. ಇದ್ದರಿಂದ ಅವರಿಗೆ ನೂರಾರು ಶತ್ರುಗಳು ಹುಟ್ಟಿಕೊಂಡಿದ್ದರು. ಅವರ ಜೀವಕ್ಕೆ ಅಪಾಯವೂ
ಸಹ ಇತ್ತು. ಆದರೂ ಎಲ್ಲಾ ರೀತಿಯ ಒತ್ತ್ತಡಗಳಲ್ಲೂ ಅವರು ಸಮಾಜದ ಸ್ವಾಸ್ಥಕ್ಕಾಗಿ ಹಗಲಿರುಳು
ಎನ್ನದೆ ದುಡಿಯತೊಡಗಿದರು.
ಮಹೇಂದ್ರ ಕುಮಾರುರವರು ನನಗೆ
ಇಷ್ಟವಾಗಿದ್ದು ಅವರ ಪ್ರಾಮಾಣಿಕತೆಯ ಮಾತುಗಳಿಂದ. ಹಿಂದೆ ತಾನು ಅಜ್ಞಾನದಿಂದ ಮಾಡಿದ ತಪ್ಪನ್ನು
ವಿನಯವಾಗಿ ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟು, ತನ್ನನ್ನು ಮತ್ತು ಸಾವಿರಾರು
ಯುವಕರನ್ನು ತಪ್ಪುದಾರಿಗೆ ನೂಕಿ ತಮಾಸೆ ನೋಡಿದ ಸಂಘಟನೆಯ ವಿರುದ್ಧ ತೀವ್ರವಾಗಿ ಜೀವ ಇರುವತನಕ
ಹೋರಾಡಿದ್ದು ನಿಜವಾಗಿಯೂ ಆದರ್ಶಮಯ. ಅವರು ಯಾವುದೇ ರಾಜಕೀಯ ಸ್ಥಾನಮಾನಕ್ಕೆ ಆಸೆಪಟ್ಟವರಲ್ಲ.
ಆಸೆಪಟ್ಟರೂ ಆ ರಾಜಕೀಯ ಅಧಿಕಾರವನ್ನು ದಕ್ಕಿಸಿಕೊಳ್ಳಲು ತಪ್ಪುದಾರಿ ಹಿಡಿದವರಲ್ಲ. ವೈಯಕ್ತಿಕ
ಲಾಭಕ್ಕಾಗಿ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ. ತಮ್ಮದೊಂದು ಸಂದರ್ಶನದಲ್ಲಿ ಅವರು ಗಾಂಧೀಯವರ
ಉನ್ನತ ಆದರ್ಶಗಳನ್ನು ಉಲ್ಲೇಖಿಸುತ್ತಾ, “ಒಬ್ಬ ರಾಜಕೀಯ ವ್ಯಕ್ತಿ
ಮಂತ್ರಿಯಾಗಿ, ಸಂಸದನಾದರೆ ಅದು ಸಮಾಜದ
ಅತ್ಯುನ್ನತ ಹುದ್ದೆ ಅಲ್ಲ. ಜನರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳುವುದು ಅತ್ಯುನ್ನತ ಹುದ್ದೆ.
ಗಾಂಧಿಜೀ ಏನು ಆಗಿಲ್ಲ. ನಾನು ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಆದರೆ ಗಾಂಧಿಜೀಯ ಮೇಲೆ ಅವರು
ಎಷ್ಟೇ ಧಾಳಿಮಾಡಿದರೂ ಸೂರ್ಯಚಂದ್ರ ಇರುವ ತನಕ ಅವರನ್ನು ಮರೆಯುವುದಕ್ಕಾಗುವುದಿಲ್ಲ. ಆವರನ್ನು
ತೆಗೆದು ಹಾಕಲಿಕ್ಕೆ ಯಾರ ಕೈಗೂ ಸಾಧ್ಯವಾಗಲಿಲ್ಲ. ಈ ಮಿನಿಷ್ಟರ್ ಎಂಎಲ್‍ಎಗಳು ಬರ್ತಾರೆ, ಹೋಗ್ತಾರೆ. ಅವು ಯಾವ ಚಿಲ್ರೆ ಪೋಸ್ಟಗಳು. ಅದನ್ನು
ಯಾವ ಲೆಕ್ಕಚಾರದಲ್ಲಿ ಮಹತ್ವ ಎಂದು ಹೇಳಲಾಗುತ್ತೇ?
ಇವತ್ತು ನಾನು ಏನು
ಇದ್ದೀನಿ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಅದರ ಬಗ್ಗೆ ಸಂತೋಷವಿದೆ. ಯಾಕಂತ ಹೇಳಿದ್ರೆ ನನ್ನಷ್ಟು
ಸತ್ಯ ಮಾತನಾಡುವ ಧೈರ್ಯ ಮತ್ತೊಬ್ಬರಿಗೆ ಇದೆ ಅಂತ ನನಗನಿಸಲ್ಲ. ನನಗೆ ಆ ಧೈರ್ಯವನ್ನು ಭಗವಂತ
ಕೊಟ್ಟಿರೋದು. ನಾನು ಅದ್ನ ಹೇಳ್ತದ್ದೀನಿ, ನಾನು ಜೀವಂತವಾಗಿ ಇರುವಾಗ
ಜನರಿಗೆ ಅದು ಅರ್ಥವಾಗದೆ ಇರಬಹುದು. ಆದರೆ ನಾನು ಸತ್ತ ನಂತರವಾದರೂ ಜನರಿಗೆ ಅದು
ಅರ್ಥವಾಗುತ್ತದೆ. ನಾನು ಏನು ಹೇಳ್ತ ಇದ್ದೀನಿ, ಯಾವ ವಿಚಾರಗಳನ್ನು ಹೇಳ್ತಾ
ಇದ್ದೀನಿ, ಯಾವುದರ ಬಗ್ಗೆ ನಾನು ಕೂಗ್ತ
ಇದ್ದೀನಿ ಅಂತ ಭವಿಷ್ಯದಲ್ಲಿ ಅರ್ಥವಾಗುತ್ತೆ.” ಎಂದು ಹೇಳುತ್ತಾರೆ.
ಹೌದು ಪ್ರಪಂಚದಾದ್ಯಂತ
ಮಹೇಂದ್ರ ಕುಮಾರ್ ಅವರನ್ನು ಪ್ರೀತಿಸುತ್ತಿದ್ದ ಹಾಗು ಅವರ ಹೋರಾಟವನ್ನು ಗೌರವಿಸುತ್ತಿದ್ದ ಅಪಾರ
ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರೆಲ್ಲರು ಮಹೇಂದ್ರರವರ ಸಾವಿಗೆ ಮರುಗಿ ಏಪ್ರಿಲ್ 27ನೇ ತಾರೀಖು ರಾತ್ರಿ 8 ಗಂಟೆಗೆ ದೀಪ ಬೆಳಗುವುದರ
ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದರು. ಕೆಲವರು ದೀಪ ಹಚ್ಚುವುದರ ಜೊತೆಗೆ ಪ್ರಾರ್ಥನೆ ಸಲ್ಲಿಸಿದ ಪೋಟೋಗಳನ್ನು ಫೆಸ್ಬುಕ್, ವಾಟ್ಸಾಪ್, ಟ್ವಿಟರ್‍ಗಳಲ್ಲಿ
ಹಂಚಿಕೊಂಡರು. ಹೌದು ಮಹೇಂದ್ರಕುಮಾರರಿಗೆ ಶ್ರದ್ಧಾಂಜಲಿ ಅರ್ಪಿಸಿ ದೀಪವನ್ನು ಬೆಳೆಗಿಸಿದ್ದೇವೆ.
ಆದರೆ ನಮ್ಮ ಹೃದಯಗಳಲ್ಲಿ ಅವರು ಬೆಳಗಿದ ಮಾನವೀಯತೆಯ ದೀಪ ಎಂದೂ ಆರದಂತೆ ನಾವು ನೀವೆಲ್ಲಾ
ಕಾಪಾಡಿಕೊಳ್ಳಬೇಕಾದ ತುರ್ತು ನಮಗಿದೆ. ದೀಪ ಹಚ್ಚಿ ವಿಚಾರ ದೀಪವ ಬೆಳಗೋಣ. ಸ್ವಸ್ಥ ಸಮಾಜದ ಕನಸಿನ
ಸಾಕಾರ ನಮ್ಮಿಂದ ಆರಂಭಿಸೋಣ.
ಕೊನೆಗೆ, ಮಹೇಂದ್ರರವರ ಪರಿವರ್ತನೆಗೆ ಮೂಲವಾದ ಅನೇಕ ಘಟನೆಗಳಲ್ಲಿ, ಇದು ಒಂದು - ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು
ನಿರ್ಧರಿಸಿದ - ಆದರೆ ಕ್ರಿಶ್ಚಿಯನ್ ಮಿಷನರಿಗಳಿಂದ ರಕ್ಷಿಸಲ್ಪಟ್ಟ ಹಿಂದೂ ಮಹಿಳೆಯೊಬ್ಬಳನ್ನು
ನೋಡಿದ ಕುಮಾರ್ 2008ರ ಅಕ್ಟೋಬರ್ 1 ರಂದು ಭಜರಂಗದಳಕ್ಕೆ ರಾಜೀನಾಮೆ ನೀಡಿದರು. "ಧರ್ಮ ಕ್ಕಿಂತ
ಜೀವನವು ಮುಖ್ಯವಾದುದು ಎಂದು ನಾನು ಅರಿತುಕೊಂಡ ಸಮಯ ಅದು. ಜೀವನದ ಸುಧಾರಣೆಗಾಗಿ ಬಹಳಷ್ಟು
ಮಾಡಬೇಕಾಗಿದೆ. ಧರ್ಮಕ್ಕಿಂತ ಜೀವನವನ್ನು ಹೆಚ್ಚು ಗೌರವಿಸುವ ಸಮಾಜವನ್ನು ನಿರ್ಮಿಸುವುದು ನನ್ನ
ಕನಸು.” ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಮರೆಯದಿರೋಣ.
No comments:
Post a Comment