Saturday, 9 May 2020

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು


ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಬದುಕು ಹಾಗು ಬರವಣಿಗೆಯ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಅವರ ಸಾಹಿತ್ಯಿಕ ಸೇವಾ ವಿಚಾರಗಳನ್ನು ತಿಳಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.

ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

ಏ) ಕನ್ನಡ ಕ್ರೈಸ್ತ ಸಾಹಿತ್ಯ ಮತ್ತು ಸಂಘ

ಫಾದರ್ ಅಂತಪ್ಪ ಧರ್ಮಗುರುವಾಗಿ ಮೊದಲು ಕಂಡುಕೊಂಡ ಮಹತ್ತರವಾದ ಅಗತ್ಯವೆಂದರೆ ಕನ್ನಡ ಕ್ರೈಸ್ತ ಸಾಹಿತ್ಯ ಸಂಘವನ್ನು ಪ್ರಾರಂಭಿಸುವ ಮೂಲಕ ಸಾಹಿತ್ಯಕ್ಕೆ ಹೆಚ್ಚು ಒತ್ತನ್ನು ನೀಡಿದ್ದು. ಅಂದಿನ ಸಂದರ್ಭದಲ್ಲಿ ಬಹಳ ಕೊರತೆ ಇದ್ದ ಕನ್ನಡ ಕ್ರೈಸ್ತ ಸಾಹಿತ್ಯಕ್ಕೆ ಒಂದು ಸಂಘಟನಾತ್ಮಕ ಮತ್ತು ರಚನಾತ್ಮಕ ಬೆಳವಣಿಗೆ ಬೇಕಾಗಿತ್ತು. ಆದ್ದರಿಂದಲೇ ಕೆಲವು ಪದವೀಧರ ಕನ್ನಡಿಗರನ್ನು ಒಂದು ಕಡೆ ಸೇರಿಸಿ ಸಾಹಿತ್ಯ ಕೃಷಿಗೆ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದವರು ಫಾದರ್ ಅಂತಪ್ಪ. ಇವರು ಇದರ ಕೇಂದ್ರ ಬಿಂದುವಾಗಿದ್ದು ಇವರೊಂದಿಗೆ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್, ಫಾದರ್ ಚಿನ್ನಪ್ಪ, ಐ.ಅಂತೋಣಿಸ್ವಾಮಿ, ಆರ್ಯದೇವರಾಜ್, ಪ್ರಮೀಳಾ, ಪ್ರಮೋದ್, ಬರ್ನಾಡ್, ಜೋಸೆಫ್ ಮತ್ತು ಎ. ರಾಯಪ್ಪ ಈ ಸಂಘಟನೆಯ ಆರಂಭಿಕ ಸದಸ್ಯರಾಗಿ ಕೈಜೋಡಿಸಿದಲ್ಲದೆ ಇನ್ನೂ ಹತ್ತಾರು ಸಮಾನ ಮನಸ್ಸಿನ ಗೆಳೆಯರು ಒಂದಾಗಿ ಅನೇಕ ಧಾರ್ಮಿಕ ಪುಸ್ತಕಗಳನ್ನು ಹೊರತಂದರು. ಇವರೆಲ್ಲರ ಆಸಕ್ತಿಯ ಫಲವಾಗಿ ಹುಟ್ಟಿಕೊಂಡದ್ದೇ ಕನ್ನಡ ಕ್ರೈಸ್ತ ಸಾಹಿತ್ಯ ಸಂಘ.

ಈ ಸಂಘವು ಜರ್ಮನಿಯ ‘ಒಬರೆಗಾಂ’ ನಾಟಕದ ಭಾಷಾಂತರ ಒಳಗೊಂಡಂತೆ ಹತ್ತಾರು ಪುಸ್ತಕಗಳನ್ನು ಬಿಡುಗಡೆ ಮಾಡಿತು. ಆಗಷ್ಟೇ ಆಮೆ ವೇಗದಲ್ಲಿ ಪ್ರಾರಂಭವಾಗಿದ್ದ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಸೆಮಿನರಿಯಲ್ಲಿ ನಡೆಯುತ್ತಿತ್ತು. ಆ ಕೆಲಸಕ್ಕೆ ತಮ್ಮ ಬದ್ಧತೆಯನ್ನು ಮೆರೆದವರು ಕನ್ನಡ ಸಾಹಿತ್ಯ ಸಂಘದವರು ಅಲ್ಲದೆ ಕನ್ನಡ ಸಾಹಿತ್ಯ ಸಂಘವು ಚರ್ಚಾ ಸ್ಪರ್ಧೆ, ಭಾಷಣಗಳು, ಕೂಟಗಳು ಮುಂತಾದ ಚಟುವಟಿಕೆಗಳಿಂದ ಕ್ರೈಸ್ತರಲ್ಲಿ ಕನ್ನಡವನ್ನು ಎಬ್ಬಿಸಿ ನಿಲ್ಲಿಸುವ ಕಾರ್ಯ ನಡೆಸಿತ್ತು.  ಕನ್ನಡದ ಖ್ಯಾತನಾಮರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಮತ್ತು ಹಂಪನಾಗರಾಜಯ್ಯ ಮುಂತಾದವರ ಸಂಪರ್ಕವನ್ನು ಈ ಸಂಘಟನೆ ಶ್ರೀಸಾಮಾನ್ಯರಿಗೆ ಒದಗಿಸಿಕೊಡುತ್ತಿತ್ತು.   ಅಂದು ಕ್ರೈಸ್ತರಲ್ಲಿ ಕರಗಿಹೋಗುತ್ತಿದ್ದ ಕನ್ನಡತನಕ್ಕೆ ಒಂದು ಅಲರಾಂ ಇದಾಗಿತ್ತು ಎಂದರೆ ತಪ್ಪಾಗಲಾರದು. ಈ ಸಂಘದ ಮುಖ್ಯ ಉದ್ದೇಶವೇನೆಂದರೆ:-

ಕಥೋಲಿಕ ಕ್ರೈಸ್ತ ಧರ್ಮಕ್ಕೆ   ಸಂಬಂಧಿಸಿದ ಸಾಹಿತ್ಯವನ್ನು ಕನ್ನಡ ಭಾಷೆಗೆ ಭಾಷಾಂತರಿಸುವುದು, ಹೊಸ ಪುಸ್ತಕಗಳನ್ನು ರಚಿಸುವುದು, ಹಳಗನ್ನಡ       ಭಾಷೆಯಲ್ಲಿರುವಂತಹ ಕಥೋಲಿಕ ಪುಸ್ತಕಗಳನ್ನು ಈಗಿನ ಶೈಲಿಯಲ್ಲಿ ಹೊಸದಾಗಿಸುವುದು, ಧರ್ಮಕ್ಕೆ ಸಂಬಂಧವಾಗಿದ್ದ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಪಡಿಸುವುದು.

ಕನ್ನಡ ಕಥೋಲಿಕ ಜನತೆಯ ಜ್ಞಾನಾಭಿವೃದ್ಧಿಗೆ ಯೋಗ್ಯವಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದು ಮತ್ತು           ಧರ್ಮಾಧಿüಕಾರಿಗಳೊಂದಿಗೆ ಸಹಕರಿಸುವುದು. ಈ ಎಲ್ಲಾ ಉದ್ಧೇಶಗಳನ್ನು ಕನ್ನಡ ಸಾಹಿತ್ಯ ಸಂಘ ಹೊಂದಿತ್ತು.

ಕನ್ನಡ ಕ್ರೈಸ್ತರ ಇತಿಹಾಸ ಶೋಧಿಸಿ ಒಂದು ಪರಂಪರೆ ಕಟ್ಟಿಕೊಡುವ ಕಾಯಕದಲ್ಲೂ ಫಾದರ್ ಅಂತಪ್ಪ ಸೈ ಎನಿಸಿಕೊಂಡಿದ್ದಾರೆ. ಅವರು ಕನ್ನಡ ಕ್ರೈಸ್ತ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಪ್ರಮುಖವಾದುದು. ಒಬ್ಬ ಕ್ರೈಸ್ತ ಗುರುವಾಗಿ ನಿರ್ಭೀತಿಯಿಂದ ಕನ್ನಡ ಸಾಹಿತ್ಯಕ್ಕೆ ತಮ್ಮ ಅಳಿಲು ಸೇವೆಯನ್ನು ಮಾಡಿರುವುದು ಗಮನಾರ್ಹವಾದುದಾಗಿದೆ. 1962ರ ವ್ಯಾಟಿಕನ್ ಸಮ್ಮೇಳನದ ನಂತರ ಪೂಜಾವಿಧಿಗಳಲ್ಲಿ ಆಯಾ ಪ್ರದೇಶದ ಭಾಷೆಗಳನ್ನು ಬಳಸಬೇಕೆನ್ನುವ ರೋಮ್ ನಿರ್ಧಾರ ಎಲ್ಲರಿಗೂ ತಿಳಿದಿರುವುದೇ. ಕ್ರಿಸ್ತನ ಸಂದೇಶ ವಿಶ್ವದ ಮೂಲೆ ಮೂಲೆಗೂ ಹರಡಬೇಕಾದರೆ ಜನರ ಭಾಷೆಗಳಲ್ಲೇ ತಿಳಿಸಿ ಹೇಳಬೇಕಾದ ಅಗತ್ಯವನ್ನು ರೋಮ್ ಮನಗಂಡಿತ್ತು.

ಅಲ್ಲಿಯವರೆಗೂ ರೋಮ್‍ನ ಪ್ರಭುತ್ವ ಭಾಷೆಯಾದ ಲ್ಯಾಟಿನ್ ಚರ್ಚ್‍ನ ವಿಧಿ ವಿಧಾನಗಳಲ್ಲಿ ಪ್ರಾದೇಶಿಕ ಭಿನ್ನತೆ ಮೀರಿ ಸಮರೂಪದಲ್ಲಿ ಬಳಸಲಾಗುತ್ತಿತ್ತು. ಈ ವ್ಯಾಟಿಕನ್ ಮಹಾ ಸಮ್ಮೇಳನಕ್ಕೆ ಮೊದಲು ಜನರು ಕ್ರೈಸ್ತ ಧರ್ಮವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಿದ್ದರು? ಅವರಿಗೆ ಲ್ಯಾಟಿನ್ ಬರುತ್ತಿತ್ತೇ? ಅಥವಾ ಚರ್ಚ್‍ಗಳಲ್ಲಿ ಲ್ಯಾಟಿನ್ ಕಲಿಸುತ್ತಿದ್ದರೆ? ಮುಂತಾದ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಎದ್ದರೆ ಆಶ್ಚರ್ಯವಿಲ್ಲ. ಲ್ಯಾಟಿನ್ ಪೂಜಾ ಭಾಷೆಯಾಗಿದ್ದರೂ ಗುರುಗಳು ಪ್ರಬೋಧನೆಯನ್ನು ಆಯಾ ಸ್ಥಳೀಯ ಭಾಷೆಗಳಲ್ಲೇ ಮಾಡುತ್ತಿದ್ದರು. ಆ ಸಮಯದಲ್ಲಿ ಇತರೆ ಭಾಷೆಗಳಲ್ಲಿ ಬೈಬಲ್ ಲಭ್ಯವಾಗುತ್ತಿತ್ತು ಜೊತೆಗೆ ಧರ್ಮೋಪದೇಶ ಮತ್ತು ಪ್ರಾರ್ಥನೆಯ ಪುಸ್ತಕಗಳು ಪ್ರಮುಖವಾಗಿ ತಯಾರಾದವು. ವಿಪರ್ಯಾಸವೆಂದರೆ ಕನ್ನಡ ಧಾರ್ಮಿಕ ಪುಸ್ತಕಗಳು ಮಾತ್ರ ಲಭ್ಯವಿರಲಿಲ್ಲ.

 ಕನ್ನಡ ಕ್ರೈಸ್ತ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಮಾತಾಡುವಾಗ ದಕ್ಷಿಣ ಭಾರತದ ಭಾಷೆಗಳಾದ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳನ್ನು ಹೋಲಿಕೆಗೆ ತೆಗೆದುಕೊಂಡರೆ, ಈ ಭಾಷೆಗಳಲ್ಲಿ ಕ್ರೈಸ್ತಸಾಹಿತ್ಯ ಬಾಲ್ಯಾವಸ್ಥೆಯಲ್ಲಿದ್ದರೆ, ಕನ್ನಡ ಕ್ರೈಸ್ತ ಸಾಹಿತ್ಯ ಆಗಷ್ಟೇ ಗರ್ಭತಳೆಯುತ್ತಿತ್ತು. ಇತರ ಭಾಷಾ ಸಾಹಿತ್ಯ ಯೌವನಕ್ಕೆ ಕಾಲಿಟ್ಟಾಗ, ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯ ಭ್ರೂಣಾವಸ್ಥೆಯಲ್ಲಿತ್ತು. ಹಾಗಾಗಿ ಕನ್ನಡ ಕ್ರೈಸ್ತ ಸಾಹಿತ್ಯ ಆರಂಭದಿಂದ ಕುಂಟುತ್ತಲೇ ಬೆಳೆಯತೊಡಗಿತು. ಬೆಳೆಯಲು ಹೆಣಗುತ್ತಿದ್ದ ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಕೈ ನೀಡಿ, ಶ್ರಮವಹಿಸಿ ಅದರ ಜೊತೆಗೆ ನಡೆಯಲು ಮತ್ತು ನಡೆಸಲು ಮುಂದಾದವರು ಫಾದರ್ ಅಂತಪ್ಪ. ಜಪದ ಪುಸ್ತಕದಿಂದ ಆರಂಭಿಸಿ ಬೈಬಲ್‍ವರೆಗೆ ಸಾಗಿತು ಅವರ ಕನ್ನಡ ಬರವಣಿಗೆ.

ಫಾದರ್ ಅಂತಪ್ಪ ಒಬ್ಬ ಸಾಹಿತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರ ಬದುಕಿನುದ್ದಕ್ಕೂ ಪರಿಸ್ಥಿತಿಗಳು ತನ್ನೆದೆಯೊಳಗೆ ಹಚ್ಚಿಕೊಂಡಿದ್ದ ಕನ್ನಡದ ಕಿಡಿಗೆ ಗಾಳಿ ಹಾಕಿದವು. ಹೀಗೆ ಕಿಡಿ ಹೊತ್ತಿಕೊಂಡು ಬರವಣಿಗೆಯ ರೂಪದಲ್ಲಿ ಅವರ ಮನಸ್ಸಿನ ಇಂಗಿತಗಳು ಹೊರಹೊಮ್ಮಿದವು.  ಮಿಶನರಿಗಳ ನಿರ್ಗಮನದಿಂದ ಕ್ರೈಸ್ತ ಸಾಹಿತ್ಯ ಲೋಕದಲ್ಲಿ ಬಹಳ ವರ್ಷಗಳ ಕಾಲ ಇದ್ದ ಶೂನ್ಯಕ್ಕೆ ತೆರೆ ಹಾಕಿದವರು ಇವರೇ. ಬೈಬಲ್ ಭಾಷಾಂತರದ ಕೆಲಸ ಬಹಳ ಹಿಂದೆಯೇ ಆರಂಭವಾಗಿತ್ತು. ಬೇರೆ ಬೇರೆ ಹಂತಗಳಲ್ಲಿ ಈ ಕಾರ್ಯ ಚಾಲನೆ ಪಡೆದಿತ್ತು. ಹೊಸ ಒಡಂಬಡಿಕೆಯ ನಾಲ್ಕು ಪುಸ್ತಕಗಳು ಭಾಷಾಂತರಕ್ಕೆ ಮೊದಲ     ಆಯ್ಕೆಯಾದವು. ಆಗಲೇ ಬರ್ನಾಡ್ ಮತ್ತು ಜೋಸೆಫ್ ಎಂಬ ಇಬ್ಬರು ಬ್ರಾಹ್ಮಣ ಕ್ರೈಸ್ತರು ತಮಿಳು ಭಾಷೆಯಿಂದ ಕನ್ನಡಕ್ಕೆ ಬೈಬಲ್ ತರ್ಜುಮೆ ಮಾಡಿದ್ದ ಹಸ್ತ ಪ್ರತಿಗಳು ಇದ್ದವು. ಆದರೆ ಆ ಹಸ್ತ ಪ್ರತಿಗಳು ಇವರ ಕೈ ಸೇರಲಿಲ್ಲ. ಫಾದರ್ ಪೆನ್ವಿನ್ ತಮ್ಮ ಬಳಿ ಇದ್ದ ಫ್ರೆಂಚ್ ವ್ಯಾಖ್ಯಾನವನ್ನು ಆಧರಿಸಿ ಭಾಷಾಂತರಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಈ ಮಾರ್ಗದರ್ಶನದಲ್ಲಿ ಮತ್ತಾಯನ ಶುಭಸಂದೇಶ ತರ್ಜುಮೆಯಾಯಿತು. ಈ ಭಾಷಾಂತರ ಕಾರ್ಯದಲ್ಲಿ ಫಾದರ್ ಅಂತಪ್ಪ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಸೆಮಿನರಿಯ ವಿದ್ಯಾರ್ಥಿಯಾಗಿದ್ದಾಗಲೇ ಕನ್ನಡದಲ್ಲಿ ತೀವ್ರ ಅಭಾವ ಎದುರಿಸುತ್ತಿದ್ದ ಕ್ರೈಸ್ತ ಸಾಹಿತ್ಯದ ಕೊರತೆಯನ್ನು ತಿಳಿದುಕೊಂಡಿದ್ದರು ಅಲ್ಲದೆ ಆ ಸಮಯದಲ್ಲಿ ಕ್ರೈಸ್ತ ಸಮುದಾಯದ ಧಾರ್ಮಿಕ ಬದುಕಿಗೆ ಇದ್ದದ್ದು ಕೇವಲ ಬೆರಳೆಣಿಸುವಷ್ಟು ಪುಸ್ತಕಗಳು ಮಾತ್ರ. ಅವುಗಳೆಂದರೆ ದೊಡ್ಡ ಜಪದ ಪುಸ್ತಕ, ಜ್ಞಾನೋಪದೇಶ ಸಂಕ್ಷೇಪ, ಜ್ಞಾನೋಪದೇಶ ವಿವರಗಳು ಮತ್ತು ಆದಿತ್ಯವಾರದ ಅದ್ಭುತಗಳು ಈ ಎಲ್ಲವೂ ಫ್ರೆಂಚ್ ಪಾದ್ರಿಗಳಿಂದ ರಚಿತವಾಗಿದ್ದರಿಂದ ಕನ್ನಡ ಭಾಷೆಯಲ್ಲಿ ಶಿಷ್ಠತೆಯ ಕೊರತೆ ಎದ್ದುಕಾಣುತ್ತಿತ್ತು. ಇಂತಹ ಭಾಷಾದೋಷ ಪುಸ್ತಕಗಳನ್ನು ಇತರೆ ಧರ್ಮಿಯರಿಗೆ ಕೊಡಲು ನಾಚಿಕೆಯಾಗುತ್ತಿತ್ತು ಎನ್ನುತ್ತಿದ್ದರಂತೆ ಫಾದರ್ ಅಂತಪ್ಪರವರು.

ಕರ್ನಾಟಕದಲ್ಲಿ 1648ರಷ್ಟು ಹಿಂದೆಯೇ ಜೆಸ್ವಿಟ್ ಮಿಶನರಿಗಳಿಂದ ಮೈಸೂರು ಮಿಶನ್ ಆರಂಭವಾಗಿತ್ತು. ಆದರೆ 1773ರಲ್ಲಿ ಯೇಸು ಸಭೆಯನ್ನು ರೋಮ್ ಹತ್ತಿಕ್ಕಿದ್ದಾಗ ಅವರು ಕೈಗೊಂಡಿದ್ದ ಮಿಶನರಿ ಕಾರ್ಯಗಳನ್ನು ಫ್ರೆಂಚ್ ಪಾದ್ರಿಗಳಿಗೆ ಹಸ್ತಾಂತರಿಸಲಾಯಿತು. ಹಾಗೆ ಮೈಸೂರು ಮಿಶನ್ ಕೂಡ ಎಂ.ಇ.ಪಿ ಗುರುಗಳ ಪಾಲಿಗೆ ಸೇರಿತು. ಈ ಹಂತದಲ್ಲಿ ಫ್ರೆಂಚ್ ಮಿಶನರಿಗಳು ತಮ್ಮ ವಸಾಹತು ಆಗಿದ್ದ ಪಾಂಡಿಚೇರಿಯ ಪ್ರಭಾವದ ಕಾರಣ ತಮಿಳು ಕಲಿಕೆಗೆ ಹೆಚ್ಚು ಮನಸೋತರು. ಕನ್ನಡ ಕಲಿಯುವ ಉತ್ಸಾಹವಿಲ್ಲದೆ ಅದನ್ನು ಕಡೆಗಣಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಕ್ರೈಸ್ತ ಲೋಕ ಪೋಷಕರಿಲ್ಲದೆ ಸೊರಗತೊಡಗಿತು.

ಆ ಸಮಯದಲ್ಲಿ ಹಾರೋಬಲೆಯಂತಹ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ತನ್ನ ಭಾಷೆಗೆ, ಮಣ್ಣಿಗೆ ಆಪ್ತವಾಗಿದ್ದ ಫಾದರ್ ಅಂತಪ್ಪರಿಗೆ ಈ ಕೊರತೆಯ ಚಿಂತೆ ಹತ್ತದೆ ಇರಲು ಸಾಧ್ಯವೇ ಇರಲಿಲ್ಲ. ಕಿರು ಸೆಮಿನರಿಯಲ್ಲಿ ಓದುತ್ತಿದ್ದಾಗ ಜಪದ ಪುಸ್ತಕ, ಜ್ಞಾನೋಪದೇಶ ಸಂಕ್ಷೇಪ, ಆದಿತ್ಯವಾರದ ಅದ್ಭುತಗಳು ಇನ್ನೂ ಮುಂತಾದ ಪುಸ್ತಕಗಳನ್ನು ತಿದ್ದುಪಡಿ ಮಾಡಲು ಇವರಿಗೆ ಕೊಡಲಾಗುತ್ತಿತ್ತು, ಕರಡು ತಿದ್ದುಪಡಿ ಮಾಡುವಾಗಲೇ ಸಾಕಷ್ಟು ಬದಲಾವಣೆಗಳನ್ನು ಸೇರಿಸುತ್ತಿದ್ದರು. ಫಾದರ್ ಅಂತಪ್ಪರವರು ತಾವು ವಿದ್ಯಾರ್ಥಿಯಾದಾಗಿನಿಂದಲೂ ಓದು, ಬರೆಯುವ ಯಾವೊಂದು ವಿಷಯವು ಕರ್ನಾಟಕ ಮತ್ತು ಕನ್ನಡಕ್ಕೆ ಸಂಬಂಧಿಸಿದ್ದಾಗಿರಬೇಕು ಎನ್ನುವ ಕಾಳಜಿ ಹೊಂದಿದ್ದವರಾಗಿದ್ದು ಕರ್ನಾಟಕದ ಜನಸಂಖ್ಯೆಯ ಸುಮಾರು ಮೂರನೆ ಒಂದು ಭಾಗದ ಜನರ ಧರ್ಮವಾಗಿರುವ ಲಿಂಗಾಯುತ ಧರ್ಮ ಕುರಿತು ಅಧ್ಯಯನ ಮಾಡಲು ಬಯಸಿದರಾದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಖeಜಿeಡಿeಟಿಛಿe ಪುಸ್ತಕಗಳು ಇಂಗ್ಲೀಷ್ ಭಾಷೆಯಲ್ಲೂ ದೊರಕದ ಕಾರಣ ಅವರ ಅನ್ವೇಷಣಾ ಕಾರ್ಯ ಮನಸ್ಸಿಗೆ ತಣ್ಣೀರೆರೆಚಿದಂತಾಯಿತು. ಇವರು ತಮ್ಮ ಡಾಕ್ಟರೇಟ್ ಪದವಿಗೆ ‘ರಾಮಕೃಷ್ಣಪರಮಹಂಸ’ರವರ ಅಧ್ಯಯನವನ್ನು ಒಲ್ಲದ ಮನಸ್ಸಿನಿಂದ ಒತ್ತಾಯ ಪೂರ್ವಕವಾಗಿ ಆರಿಸಿಕೊಳ್ಳಬೇಕಾಯಿತು. ‘ಹೊರಗಿದ್ದು ನನ್ನ ನಾಡಿನ ಬಗ್ಗೆ ನೋಡುವಾಗ, ಇಲ್ಲೇ ಇರುವಾಗ ಕಾಣದ ಎಷ್ಟೋ ವಿಚಾರಗಳು ಗೋಚರಿಸುತ್ತವೆ’ ಎಂಬ ನಿಲುವನ್ನು ಹೊಂದಿದ್ದ ಫಾದರ್‍ರವರು ಏನೇ ಅಧ್ಯಯನ ಮಾಡಿದರೂ ಅದರಲ್ಲಿ ಕರ್ನಾಟಕಕ್ಕೆ ಇರುವ ಉಪಯುಕ್ತತೆ ಬಗ್ಗೆ ಚಿಂತಿಸುತ್ತಿದ್ದೆ ಎಂದು ಹೇಳುವುದನ್ನು ಅವರನ್ನು ಸಂದರ್ಶಿಸಿದಾಗ ಅವರಿಂದಲೇ ತಿಳಿದ ಸಂಗತಿಯಾಗಿದೆ.

ಐ) ಕರ್ನಾಟಕ ತಾರೆ:

ಕರ್ನಾಟಕ ತಾರೆ ಪತ್ರಿಕೆಯ ಸಂಪಾದಕತ್ವವನ್ನು ಫಾದರ್ ಅಂತಪ್ಪ ಸುಮಾರು 20 ವರ್ಷಗಳ ಕಾಲ ನಿರ್ವಹಿಸಿದರು. ಸುಮಾರು 56-57ನೇ ಇಸವಿಯಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರದಲ್ಲಿ ಫಾದರ್ ಮೈಕಲ್ ಸದಾನಂದ ‘ಜ್ಯೋತಿ’ ಪತ್ರಿಕೆಯ ಸಂಪಾದಕರಾಗಿದ್ದರು. ಸುಮಾರು 3000 ಪ್ರತಿಗಳಷ್ಟು ಪ್ರಸಾರ ಇದ್ದ ಈ ಪತ್ರಿಕೆಗೆ ಸರ್ಕಾರಿ ಜಾಹಿರಾತು ಕೂಡ ಸಿಗುತ್ತಿತ್ತು. ಕೆಲವು ಅನಿರೀಕ್ಷಿತ ಕಾರಣಗಳಿಗಾಗಿ ‘ಜ್ಯೋತಿ’ ಪತ್ರಿಕೆ ಆರಿಹೋಯಿತು. ಆ ದಿನಗಳಲ್ಲಿ ಒಂದು ಪತ್ರಿಕೆ ನಿಂತುಹೋಗುವುದೆಂದರೆ ಬಹಳ ಗಂಭೀರವಾದ ವಿಷಯವಾಗಿತ್ತು. ಇಂಥಾ ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಷಪ್ ರಾಜಪ್ಪ ಮತ್ತು ಫಾದರ್ ಕೊಲಾಸೋ ನಿರಂತರ ಪತ್ರ ವ್ಯವಹಾರದ ಮೂಲಕ ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಂಡರು. ಜ್ಯೋತಿ ಪತ್ರಿಕೆ ಆರಿಹೋಯಿತು. ಹೊಸ ಪತ್ರಿಕೆಯ ಉದಯಕ್ಕೆ ನಾಂದಿ ಹಾಡಿತು. ಹೊಸ ಪತ್ರಿಕೆಯನ್ನು ಬಿಷಪ್ ರಾಜಪ್ಪ “ಕರ್ನಾಟಕ ತಾರೆ” ಎಂದು ಹೆಸರಿಸಿದರು. ಕ್ರಿ.ಶ. 1960ರಲ್ಲಿ ಕರ್ನಾಟಕದ ಕನ್ನಡ ಕ್ರೈಸ್ತ ಲೋಕಕ್ಕೆ ಒಂದು ಹೊಸ ಸಾಹಿತ್ಯ ತಾರೆ ಉದಯಿಸಿತ್ತು. ಧರ್ಮಕ್ಷೇತ್ರದ ಪತ್ರಿಕೆಯಾದರೂ ಸಕಾಲಕ್ಕೆ ಹಣ ನೀಡುತ್ತಿರಲಿಲ್ಲ. ಫಾದರ್ ಅಂತಪ್ಪ ಸ್ವತಃ ಇದರ ಚಂದಾ ಸಂಗ್ರಹಿಸಲು ಹೋಗುತ್ತಿರುವಾಗ ಹಲವಾರು ಸಮಸ್ಯೆಗಳು ಇವರನ್ನು ಎದುರಾಗಿದ್ದವು ಎಂಬುದನ್ನು ‘ಫಾದರ್ ಅಂತಪ್ಪ ಕನ್ನಡದ ಸ್ಮøತಿ ಶಿಲಿ’್ಪ ಎಂಬ ಆತ್ಮಚರಿತ್ರೆ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ. ಕರ್ನಾಟಕ ತಾರೆ ಪತ್ರಿಕೆಯ ಸಂಪಾದಕತ್ವವನ್ನು 20 ವರ್ಷ ನಿರ್ವಹಿಸಿದ ಈ ಅವಧಿಯಲ್ಲಿ ಅವರು ಅನುಭವಿಸಿದ ಹತ್ತಾರು ಅವಮಾನಗಳನ್ನು ಅವರ ಆತ್ಮಚರಿತ್ರೆ ಪುಸ್ತಕದಲ್ಲಿ ಕಾಣಬಹುದಾಗಿದೆ. ಧರ್ಮಕ್ಷೇತ್ರ ಪುನ: ಹಣ ನೀಡಿ ಅದನ್ನು ಉಳಿಸಿಕೊಳ್ಳುವಲ್ಲಿ ಹಿಂದೇಟಾಕಿತ್ತು. ಪ್ರಸಾರ ಕುಗ್ಗಿ ಹೋಗಿ ವೆಚ್ಚ ಹೆಚ್ಚು, ಹಣವಿಲ್ಲ ಎಂಬ ಕಾರಣ ನೀಡಿ ಪತ್ರಿಕೆಯನ್ನು ನಿಲ್ಲಿಸುವಂತೆ ಆದೇಶಿಸಿದರು. ಹೀಗೆ      ದೀರ್ಘಕಾಲ ಕನ್ನಡ ಕ್ರೈಸ್ತ ಲೋಕದಲ್ಲಿ ಸೊಗಡು ಹರಡಿದ್ದ, ಮುಖ್ಯವಾಹಿನಿ ಲೇಖಕರೊಂದಿಗೆ ಕನ್ನಡ ಕ್ರೈಸ್ತರನ್ನು ಬೆಸೆದಿದ್ದ ಒಂದು ತಾರೆ ಕರ್ನಾಟಕದ ಪಾಲಿಗೆ ಕಣ್ಮರೆಯಾಯಿತು. ಫಾದರ್ ಅಂತಪ್ಪರ ಅಂತಃಕರಣ ಆ ತಾರೆಗಾಗಿ ಕಣ್ಣೀರು ಮಿಡಿಯಿತು.

------------------------------

ಮುಂದಿನ ಸಂಚಿಕೆಯಲ್ಲಿ ರೆವರೆಂಡ್ ಫಾದರ್ ಐ. ಅಂತಪ್ಪರವರ ಮುಂದುವರೆದ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ತಿಳಿಸಲಾಗುವುದು.

-----------------

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...