-------------------------
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಸಾಹಿತ್ಯಿಕ ವಿಚಾರಗಳ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಬೈಬಲ್ ಭಾಷಾಂತರಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.
-------------------
ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
ಒ) ಫಾದರ್ ಅಂತಪ್ಪ ಮತ್ತು ಬೈಬಲ್:
ಕ್ರೈಸ್ತರಿಗೆ ಬೈಬಲ್ ಒಂದು ಪವಿತ್ರ ಗ್ರಂಥ. ವಿಶಿಷ್ಟವಾದ ಸಾಹಿತ್ಯಿಕ ಮೌಲ್ಯವಿರುವ ಅಪರೂಪದ ಗ್ರಂಥ. ಬೈಬಲಿನ ಕನ್ನಡ ಭಾಷಾಂತರಕ್ಕೆ ಸಂಬಂಧಿಸಿದಂತೆ ಫಾದರ್ ಅಂತಪ್ಪ ಮತ್ತು ದಿವಂಗತ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಈ ಎರಡು ಹೆಸರುಗಳು ಚಿರಸ್ಥಾಯಿಯಾಗಿರುತ್ತವೆ, ಜೊತೆಗೆ ಹಲವಾರು ಗುರುಗಳು ಈ ಕೆಲಸದಲ್ಲಿ ಕೈಜೋಡಿಸಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಜನತೆ ವರ್ಷಾನುಗಟ್ಟಲೆ ಸ್ಮರಿಸಬಹುದಾದ ಕನ್ನಡ ಬೈಬಲ್ ತರ್ಜುಮೆ ಮಾಡಿ ಮುಗಿಸಿರುವ ಕೆಲಸ ನಿಜಕ್ಕೂ ಒಂದು ಸಾಹಸದ ಕೆಲಸವಾಗಿದೆ. ರಾತ್ರಿ ಹಗಲೆನ್ನದೆ, ಊಟ, ವಿಶ್ರಾಂತಿ ಇಲ್ಲದೆ ತಮ್ಮ ರಜೆಯನ್ನು ಈ ಕೆಲಸಕ್ಕಾಗಿ ಉಪಯೋಗಿಸಿ, ಈ ಮಹತ್ತರವಾದ ಕೆಲಸವನ್ನು ಮುಗಿಸಲು ಶ್ರಮಿಸಿದವರು ಫಾದರ್ ಅಂತಪ್ಪರವರು. ಬೈಬಲ್ ಮುದ್ರಣಕ್ಕೂ ಕೈಯಲ್ಲಿ ಕಾಸಿಲ್ಲದೆ ಒದ್ದಾಡಿರುವಂತಹ ಕ್ಷಣಗಳು ಮತ್ತು ಅಂದಿನ ಧರ್ಮಾಧ್ಯಕ್ಷರುಗಳ ಅಸಹಕಾರಗಳು ಎದುರಾಗಿದ್ದರೂ ಹೇಗಾದರೂ ಮಾಡಿ ಕಥೋಲಿಕ ಬೈಬಲ್ ಭಾಷಾಂತರದ ಕೆಲಸ ಮುಗಿಸಲೇಬೇಕು ಎಂಬ ಉತ್ಸಾಹದಿಂದ ದುಡಿದ ಹೃದಯ ಅವರದು. ಆ ಕ್ಷಣಕ್ಕೆ ಧರ್ಮಾಧ್ಯಕ್ಷರುಗಳ ಧೋರಣೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಬೈಬಲ್ ಭಾಷಾಂತರಕ್ಕೆ ಕ್ರೈಸ್ತರು ಮತ್ತು ಪ್ರಾಟಸ್ಟೆಂಟರು ಒಟ್ಟಿಗೆ ಕೆಲಸ ಮಾಡುವ ವಿಚಾರಕ್ಕೆ ಒತ್ತು ನೀಡಲಾಗಿತ್ತು ಆದರೆ ಎಲ್ಲವೂ ಸಮಾಧಾನದಲ್ಲಿ ನಡೆಯುತ್ತಿದೆ ಎನ್ನುವಾಗ ಪ್ರಾಟಸ್ಟಂಟರಿಂದಲೇ ಅಪಸ್ವರ ಎದ್ದಿತಂತೆ. ಈ ಜಂಟಿ ಕಾರ್ಯಾಚರಣೆ ಬೇಡ ಎಂದು ಅವರು ಪ್ರತಿಭಟಿಸಿದ್ದರು. ಒಂದು ಹಂತದಲ್ಲಂತೂ ಬೈಬಲ್ ಭಾಷಾಂತರ ಮುಂದುವರಿಯುವುದೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಅಂದಿನ ಸಿ.ಎಸ್.ಐ. ಬಿಷಪ್ ವಸಂತ್ ಕುಮಾರ್ ಮತ್ತು ಕೆಲವು ಸಮಾನ ಮನಸ್ಕರ ಮಧ್ಯಪ್ರವೇಶದಿಂದ ಈ ಸಮಸ್ಯೆ ಬಗೆ ಹರಿಯಿತು ಎಂಬುದಾಗಿ ಫಾದರವರನ್ನು ಸಂದರ್ಶಿಸಿದಾಗ ಅವರ ಹೃದಯಂತರಾಳದಿಂದ ಹೊರಬಂದ ಹೃದಯಸ್ಪರ್ಶಿ ಮಾತುಗಳಿವು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಥೋಲಿಕ, ಪ್ರಾಟೆಸ್ಟಂಟರ ನಡುವೆ ಸೌಹಾರ್ದ ಸಂಗಮಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದವು. ಈ ಸೌಹಾರ್ದತೆಯನ್ನು ಸಾಧಿಸುವ ಮೊದಲ ಹಂತದಲ್ಲಿ ಬೈಬಲ್ ಭಾಷಾಂತರಕ್ಕೆ ಎರಡು ಪಂಗಡಗಳವರು ಒಟ್ಟಿಗೆ ಕೆಲಸ ಮಾಡುವ ವಿಚಾರಕ್ಕೆ ಮತ್ತೊಮ್ಮೆ ಒತ್ತು ನೀಡಲಾಯಿತು. ಹಾಗಾಗಿ ವಿವಿಧ ಭಾಷೆಗಳಲ್ಲಿ ಬೈಬಲ್ ಭಾಷಾಂತರ ಮತ್ತು ಪರಿಷ್ಕರಣೆಗೆ ಎರಡು ಪಂಥಗಳವರನ್ನು ಒಳಗೊಂಡ ಒಂದು ಸಮಿತಿ ರಚನೆಯಾಯಿತು. ಹಾಗೆ ಕನ್ನಡ ಬೈಬಲ್ ಭಾಷಾಂತರಕ್ಕೂ ಕಥೋಲಿಕರ ಒಂದು ಸಮಿತಿ ರಚನೆಗೊಂಡು ಅದಕ್ಕೆ ಮೈಸೂರಿನ ಧರ್ಮಾಧ್ಯಕ್ಷರು ಅಧ್ಯಕ್ಷರಾಗಿದ್ದರು. ಈ ಸಂಗಮದ ಅಲೆಯಲ್ಲಿ ಕನ್ನಡ ಕಥೋಲಿಕ ಬೈಬಲ್ ರೂಪ ಪಡೆಯಿತು. ಎರಡು ಪಂಗಡಗಳವರು ಬಳಸುವ Ecumenical Bible ಸಿದ್ಧವಾಯಿತು. ಅದು ಕೇವಲ ಒಂದು ದಶಕದ ಹಿಂದೆ!
ಬೈಬಲ್ ಭಾಷಾಂತರ ಫಾದರ್ ಅಂತಪ್ಪರ ಬದುಕಿನ ಮಹತ್ವಾಕಾಂಕ್ಷೆಯಾಗಿತ್ತು ಎಂಬುದಕ್ಕೆ ಒಂದು ನಿದರ್ಶನ........ ಫಾದರ್ ನಿಮಗೆ ಒಂದು ಶ್ರೀಮಂತ ಧರ್ಮಕೇಂದ್ರದ ಅಧಿಕಾರ ಅಥವಾ ಬೈಬಲ್ ಭಾಷಾಂತರದ ಆಯ್ಕೆ ಕೊಟ್ಟಿದ್ದರೆ ನೀವು ಯಾವುದನ್ನು ಆರಿಸಿಕೊಳ್ಳುತ್ತಿದ್ದೀರಿ ಎಂದು ಯಾರಾದರೂ ಅವರನ್ನು ಅಂದು ಕೇಳಿದ್ದರೆ ‘of course Bible, I would have given my life for it’ ಎಂದು ಸ್ಪಷ್ಟ ಪದಗಳಲ್ಲಿ ಹೇಳುತಿದ್ದರಂತೆ ಮತ್ತು ಬೈಬಲ್ ಭಾಷಾಂತರ ನನ್ನೊಬ್ಬನದೇ ಕೆಲಸ ಅಲ್ಲ ಇದನ್ನು ಒಂದು ದೊಡ್ಡ ತಂಡವೇ ನಿರ್ವಹಿಸಿತು ಎಂದು ಸ್ಮರಿಸುತ್ತಾರೆ. ಬೈಬಲ್ ಭಾಷಾಂತರ ಒಬ್ಬನಿಂದಾಗುವ ಕೆಲಸವಲ್ಲ ಎಂದು ಡಾ.ಶ್ರೀನಿವಾಸ ಹಾವನೂರರ ಮಾತುಗಳಲ್ಲಿ ಹೇಳುತ್ತಾರೆ….... ಹಿಂದೊಮ್ಮೆ ಶ್ರೀನಿವಾಸ ಹಾವನೂರು, ಅರುಣೋದಯ ಪುಸ್ತಕ ಬರೆಯುತ್ತಿದ್ದ ಸಮಯ, ಬೈಬಲನ್ನು ಭಾಷಾಂತರಿಸುವ ಯಾರಾದರೂ ನಿಮ್ಮ ಗಮನದಲ್ಲಿದ್ದರೆ ನನಗೆ ಹೇಳಿ ಎಂದು ಹಾವನೂರರನ್ನು ಫಾದರ್ ಅಂತಪ್ಪ ಕೇಳಿದಕ್ಕೆ ಡಾ. ಶ್ರೀನಿವಾಸ ಹಾವನೂರರು, ‘No where in the history of the world, one man has translated the whole Bible ಎಂದರಂತೆ. (ಪ್ರಪಂಚದ ಇತಿಹಾಸದಲ್ಲಿ ಬೈಬಲನ್ನು ಒಬ್ಬ ವ್ಯಕ್ತಿ ಭಾಷಾಂತರಿಸಿರುವ ಉದಾಹರಣೆಗಳಿಲ್ಲ) ಹಾಗೆ ಕನ್ನಡ ಕಥೋಲಿಕ ಬೈಬಲ್ ಭಾಷಾಂತರಕ್ಕೆ ಒಂದು ದೊಡ್ಡ ತಂಡವೇ ಇತ್ತು. ಆ ತಂಡದ ನೇತೃತ್ವ ವಹಿಸಿದ್ದವರು ಫಾದರ್ ಅಂತಪ್ಪ. ಬೈಬಲ್ಗಾಗಿ ತಮ್ಮ ಅವಿರತ ಶ್ರಮದ ದಾರಿಯಲ್ಲಿ ಆ ತಂಡವನ್ನು ಗುರಿಯತ್ತ ಕರೆದೊಯ್ದಿದ್ದರು.
ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಕಥೋಲಿಕ ಬೈಬಲ್ ಮುದ್ರಣಗೊಂಡು ಒಂದು ಶತಮಾನ ಪೂರೈಸಿದ ನಂತರ ಅಂದರೆ ಕ್ರಿ.ಶ 1966ರಲ್ಲಿ ಕನ್ನಡದಲ್ಲಿ ಕಥೋಲಿಕ ಬೈಬಲ್ ಹೊರಬಂದದನ್ನು ನಾವು ಸ್ಮರಿಸಬಹುದು.
ಈ ಹಿಂದೆ ಕಥೋಲಿಕ ಬೈಬಲ್ ಭಾಷಾಂತರಕ್ಕೆ ಪ್ರಯತ್ನಗಳು ನಡೆದಿರಲಿಲ್ಲ ಎಂದಲ್ಲ. ಆದರೆ ಕಾರಣಾಂತರಗಳಿಂದ ಭಾಷಾಂತರ ಪ್ರಯತ್ನಗಳು ಕೈಗೂಡಲಿಲ್ಲ. ಧರ್ಮಾಧ್ಯಕ್ಷರಾಗಿ ಮಿಖೇಲಪ್ಪ ತಮ್ಮ ಧರ್ಮಕ್ಷೇತ್ರದ ಕೆಲಸಗಳಿಗೆ ತೊಡಗಬೇಕಿದ್ದರಿಂದ, ಬೈಬಲ್ ಭಾಷಾಂತರ ಸಮಿತಿಯ ನೇತೃತ್ವವನ್ನು ಅಕ್ಷರಶಃ ವಹಿಸಿದ್ದವರು ಫಾದರ್ ಅಂತಪ್ಪ. ಬೈಬಲ್ಗಾಗಿ ಅವರು ಪಡುತ್ತಿದ್ದ ಶ್ರಮವನ್ನು ಅವರ ಒಡನಾಡಿಯಾಗಿದ್ದ ದೀರ್ಘಕಾಲದ ಸ್ನೇಹಿತರೂ ಹಾಗು ಹಿತೈಷಿಗಳೂ ಆದ ಎ. ರಾಯಪ್ಪ ಹೀಗೆ ವಿವರಿಸಿದ್ದಾರೆ ‘.....Father Anthappa was incharge of the translation for long years. He was further in charge of Ecumenical translation of the Old Testament for a further period of long years. One could find him in the midst of hundreds of books for comparison and translating even in late hours of the night. He would weigh and measure each word and phrase to bring out the best translation possible.’
ಓ) ಸಂಶೋಧಕರಾಗಿ ಫಾದರ್ ಅಂತಪ್ಪ:
ಫಾದರ್ ಅಂತಪ್ಪರವರನ್ನು ಬಾಲ್ಯದಿಂದಲೂ ಸಂಶೋಧಕ ಗುಣ ಹಿಂಬಾಲಿಸಿರುವುದನ್ನು ನಾವು ಗಮನಿಸಬಹುದು. ಅವರು ಗುರುಮಠದಲ್ಲಿ ತರಬೇತಿ ಪಡೆಯುವಾಗಲೇ ‘ಖಿhe ಎesuiಣs iಟಿ ಒಥಿsoಡಿe’ಎಂಬ ಪುಸ್ತಕವನ್ನು ಅಧ್ಯಯಿಸಿದ್ದರಂತೆ. ಕರ್ನಾಟಕದ ವಿವಿಧ ಊರುಗಳಲ್ಲಿ ಕ್ರೈಸ್ತ ಧರ್ಮ ಕ್ರಿ.ಶ 1622ರಲ್ಲೆ ಕಾಲಿಟ್ಟಿತ್ತು ಎಂದು ಅದರಲ್ಲಿ ಓದಿದ್ದರಿಂದ ಕ್ರೈಸ್ತ ಧರ್ಮದ ಉಗಮದ ಬಗ್ಗೆ ಸಂಶೋಧನೆಗೆ ಚಾಲನೆ ದೊರೆತಿದ್ದುದರ ಬಗ್ಗೆ ಫಾದರ್ ತಿಳಿಸುತ್ತಾರೆ. ಸುಪ್ತವಾಗಿದ್ದ ಅವರ ಸಂಶೋಧನಾತ್ಮಕ ಗುಣ ಬಹುಶಃ ಅವರಿಗೆ ಹತ್ತು ವರ್ಷಗಳಲ್ಲಿ ಹತ್ತು ಸಂಶೋಧನಾ ಗ್ರಂಥಗಳನ್ನು ಹೊರತರಲು ಪ್ರೇರಕವಾಗಿದ್ದಿರಬಹುದು. ನಮ್ಮ ದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿದೇಶಿ ಪಾದ್ರಿಗಳು ರೋಮಿನ ಪ್ರಧಾನ ಪೀಠಕ್ಕೆ ಸಲ್ಲಿಸುತ್ತಿದ್ದ ವರದಿಗಳನ್ನು ಸಂಗ್ರಹಿಸಿ, ಲ್ಯಾಟಿನ್ ಭಾಷೆಯಿಂದ ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಫಾ.ಅಂತಪ್ಪನವರು ಅವುಗಳನ್ನು ಪ್ರಕಟಿಸಿದ್ದಾರೆ. ‘ಕ್ರೈಸ್ತ ಧರ್ಮದ ಉಗಮ’ ಎಂಬ ಹೆಸರಿನಲ್ಲಿ ಈ ಗ್ರಂಥಗಳು ಹೊರಬಂದಿವೆ. ‘ಬೆಂಗಳೂರು ಸುತ್ತ ಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ’, ‘ಕನಕಪುರ ತಾಲೂಕು ಮತ್ತು ಸುತ್ತ ಮುತ್ತ ಕ್ರೈಸ್ತ ಧರ್ಮದ ಉಗಮ’, ‘ಆನೇಕಲ್ಲು ತಾಲೂಕಿನಲ್ಲಿ ಹಾಗೂ ಸುತ್ತ ಮುತ್ತ ಕ್ರೈಸ್ತ ಧರ್ಮದ ಉಗಮ’, ‘ಕೊಳ್ಳೇಗಾಲ ತಾಲೂಕಿನಲ್ಲಿ ಮತ್ತು ಸುತ್ತ ಮುತ್ತಲಲ್ಲಿ ಕ್ರೈಸ್ತ ಧರ್ಮದ ಉಗಮ’ ಹೀಗೆ ಹಲವು ಗ್ರಂಥಗಳನ್ನು ಫಾದರ್ ಅಂತಪ್ಪ ಹೊರತಂದಿದ್ದಾರೆ. ಈ ಗ್ರಂಥಗಳಲ್ಲಿ ಫಾದರ್ರವರ ಸಂಶೋಧನಾ ಶಕ್ತಿಯನ್ನು, ಅಧ್ಯಯನ ಶೀಲತೆಯನ್ನು, ವಿಶ್ಲೇಷಣೆ, ವಿಮರ್ಶೆ, ನಿರೀಕ್ಷೆ, ಶ್ರಮವನ್ನು ಗುರುತಿಸಬಹುದಾಗಿದೆ. ಈವರೆಗೆ ನಮಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಅವರು ಹೊರತಂದಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಅವಕಾಶ ಕಲ್ಪಿಸಿ ಸನ್ಮಾನಿಸಿತು.
ಹೀಗೆ ಫಾದರ್ ಅಂತಪ್ಪನವರು ಅನೇಕ ವಿಧಿವಿಧಾನಗಳಲ್ಲಿ ಬೆಂಗಳೂರು ಮಹಾಧರ್ಮಪ್ರಾಂತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಮಹಾಧರ್ಮಪ್ರಾಂತ್ಯದ ಧಾರ್ಮಿಕ ಸಲಹೆಗಾರರಾಗಿ, ಶಿಕ್ಷಣ ಸಭೆಯ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳ ಕಾಲ ದುಡಿದಿದ್ದಾರೆ. ಇವರೊಬ್ಬ ಹಠವಾದಿ. ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಕೈಹಾಕಿದರೆ ಅದನ್ನು ಮುಗಿಸುವವರೆಗೂ ಬಿಡುವಿಲ್ಲದೆ ಶ್ರಮಿಸಿದವರು. ಇವರು ಮಹಾಧರ್ಮ ಕ್ಷೇತ್ರದಲ್ಲಿ ಕನ್ನಡ ಭಾಷೆ, ಸಂಸ್ಕøತಿ ನೆಲೆಗೊಳ್ಳುವುದಕ್ಕಾಗಿ ನಡೆಸಿದ ಹೋರಾಟವನ್ನು ಯಾರೂ ಮರೆಯುವಂತಿಲ್ಲ. ಕಳೆದ ಸುಮಾರು 55 ವರ್ಷಗಳಿಂದ ಕನ್ನಡ ನಾಡು ನುಡಿ ಮತ್ತು ಸಂಸ್ಕøತಿಯ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವ ಫಾದರ್ ಅಂತಪ್ಪರವರು ಕ್ರೈಸ್ತ ಕನ್ನಡ ಸಾಹಿತ್ಯ ಕಂಡಿರುವ ಬಹುಮುಖ ಪ್ರತಿಭೆಯ ಅಪರೂಪ ಪಾದ್ರಿ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಲ್ಯಾಟಿನ್, ಹಿಬ್ರೂ, ಗ್ರೀಕ್ ಹಾಗೂ ಇಟಾಲಿಯನ್ ಭಾಷೆಗಳನ್ನು ಬಲ್ಲ ಈ ಗುರುಗಳು ‘ಪವಿತ್ರ ಬೈಬಲ್’ನ ಕರ್ನಾಟಕ ಪ್ರಾದೇಶಿಕ ಭಾಷಾಂತರ ಸಮಿತಿಯ ಕಾರ್ಯದರ್ಶಿಯಾಗಿ ಕ್ಯಾಥೋಲಿಕ್ ಅವತರಣಿಕೆಯೂ ಸೇರಿದಂತೆ ಉಭಯ ಬಳಕೆಯ ಸಮಗ್ರ ಬೈಬಲ್ ಪ್ರಕಟಣೆಯಲ್ಲಿ ತಮ್ಮ ಅಂತಃಸತ್ವವನ್ನು ತೋರಿಸಿದ್ದು ಬಹುವಿಶೇಷ. ಈ ನೂತನ ಪವಿತ್ರ ಬೈಬಲ್ ಭಾಷಾ ದೃಷ್ಟಿಯಿಂದಲೂ, ಶೈಲಿ ಹಾಗೂ ಭಾಷಾ ಸೌಂದರ್ಯ ದೃಷ್ಟಿಯಿಂದಲೂ ಬಹು ವಿಶಿಷ್ಠವಾಗಿರುವ ಈ ಹೊಸ ಭಾಷಾ ಪ್ರಯೋಗದಲ್ಲಿ ಸತ್ಯವೇದದ ಮೂಲದ್ರವ್ಯಕ್ಕೆ ನೋವಾಗದ ಹಾಗೆ ನೋಡಿಕೊಂಡಿದ್ದಾರೆ. ಸದಾ ತಲೆ ತಗ್ಗಿಸಿಕೊಂಡು ಸಂಶೋಧನೆಗಳಲ್ಲಿ ನಿರತರಾಗಿರುವ ಈ ಧರ್ಮಗುರು ಕ್ಯಾಥೋಲಿಕ್ ಧರ್ಮ ಕ್ಷೇತ್ರದಲ್ಲಿ ಕನ್ನಡ ಭಾಷೆ ಸಾಹಿತ್ಯ, ಸಂಸ್ಕøತಿ ಮತ್ತು ಕನ್ನಡ ಕ್ರೈಸ್ತರ ಅಭಿವೃದ್ಧಿಗಾಗಿ ಹೋರಾಟ ಮಾಡುವ ಸಂದರ್ಭಗಳು ಬಂದಾಗಲೆಲ್ಲಾ ಫಾ.ಅಂತಪ್ಪರವರು ತಲೆಯೆತ್ತಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಹೀಗೆ ಕನ್ನಡ ಕ್ರೈಸ್ತಸಾಹಿತ್ಯಕ್ಕೆ ತನ್ನದೆ ಆದಂತಹ ರೀತಿಯಲ್ಲಿ ಸೇವೆ ಸಲ್ಲಿಸಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿರುವ ವಂದನೀಯ ಫಾದರ್ ಅಂತಪ್ಪರವರನ್ನು ವಂದಿಸುವ ಹಾಗು ಭಗವಂತ ಅವರಿಗೆ ಆರೋಗ್ಯವನ್ನು ನೀಡಲೆಂದು ಪ್ರಾರ್ಥಿಸುವಾ.
**********
No comments:
Post a Comment