Saturday, 20 June 2020

ಈ ಮ ಯೊ - ಸಾವಿನಲ್ಲೂ ಸಾಂಗತ್ಯ ಬಿಡದ ಸೇಡಿನ ಸೆಳೆತಗಳು

ಎಫ್.ಎಂ. ನಂದಗಾವ್

 

ಸಂಜೆ ಆರರ ಸೂರ್ಯ, ಪಶ್ಚಿಮದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಇಳಿಹೊತ್ತಿನ ಮಬ್ಬು ಕತ್ತಲಲಿ,್ಲ ಕಡಲ ತೀರದಲ್ಲಿ ಬಿಚ್ಚಿಕೊಳ್ಳುತ್ತ ಸಾಗುವ ಒಂದು ಬಡ ಕ್ರೈಸ್ತ ಕುಟುಂಬದ ಸದಸ್ಯರ ದೈನಂದಿನ ಸಂತಸದ ಚಟುವಟಿಕೆಗಳು, ಸಾವಿನೊಂದಿಗೆ ಮುರುಟಿಕೊಂಡು ಬದುಕು ನಿರ್ವಹಣೆಗೆ ರೂಪಿಸಿಕೊಂಡ ನೀತಿ ನಿಯಮಾವಳಿಗಳ ಸಂಕೋಲೆಯ ಸಂಸ್ಕಾರದ ಮಾಘಸ್ನಾನ, ಗಾಳಿ ಮಾತುಗಳು ತಂದಿಡುವ ವಿಪರೀತ ಪರಿಣಾಮದ ಹಿನ್ನೆಲೆಯಲ್ಲಿ, ಮರುದಿನ ಇಳಿ ಮಧ್ಯಾನ್ನದವರೆಗಿನ ಸುತ್ತಮುತ್ತಲಿನ ಸಮಾಜದ ಸದಸ್ಯರ ಬಗೆಬಗೆಯ ಮುಖಗಳ ಅನಾವರಣ ಈ `ಈ ಮ ಯೋ’ ಎಂಬ ದೃಶ್ಯ ಕಾವ್ಯ (ಸಿನಿಮಾ).

  ಕೇವಲ ಎರಡು ಗಂಟೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಅವಧಿಯಲ್ಲಿ, ತಂದೆಯನ್ನು ಕಳೆದುಕೊಳ್ಳುವ ಒಂದು ಬಡ ಕ್ರೈಸ್ತ ಕುಟುಂಬವು, ಗಾಳಿ ಮಾತುಗಳ ಸುಳಿಯಲ್ಲಿ ಸಿಲುಕಿ ಎದುರಿಸುವ ಅನಿರೀಕ್ಷಿತ ಕಠಿಣ ಪ್ರಸಂಗಗಳ ಚಿತ್ರಣವನ್ನು ಕಟ್ಟಿಕೊಡುವ ಲಿಜೊ ಜೋಷ್ ಪೆಲ್ಲಿಷೆರಿ ನಿರ್ದೇಶನದಲ್ಲಿ ಮೂಡಿ ಬಂದ ಈ `ಈ ಮ ಯೊ’ (ಈಶೋ ಮರಿಯಂ ಯೋಸೂಫ್) ಮಲೆಯಾಳಂ ಭಾಷಿಕ ಸಿನಿಮಾ 2018ರ ಸಾಲಿನ, ಗೋವೆಯಲ್ಲಿ ಜರುಗಿದ 49ನೇ ಸಾಲಿನ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಂಡದ್ದು ಅಚ್ಚರಿಯ ಸಂಗತಿಯೇನಲ್ಲ.

 ``ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು, ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು.’’

  ಇವು ಯೇಸುಸ್ವಾಮಿ ಬೆಟ್ಟದ ಮೇಲೆ ನೀಡಿದ ಬೋಧನೆ. ಇವನ್ನು ಅಷ್ಟ ಭಾಗ್ಯಗಳು ಎಂದು ಬಣ್ಣಿಸಲಾಗುತ್ತದೆ. ಸ್ವರ್ಗ ಸಾಮ್ರಾಜ್ಯದ ಅರ್ಹತೆಯ ವಿಚಾರ ಇಲ್ಲಿ ಅಪ್ರಸ್ತುತ ಏನಲ್ಲ. ಆದರೂ, ಅದು ಅವರವರ ವಿಶ್ವಾಸಕ್ಕೆ ಸಂಬಂಧಿಸಿದ ವಿಚಾರ. ಚಿತ್ರದ ಕೊನೆಗೆ ಆಕಸ್ಮಿಕವಾಗಿ, ಸಮಾಧಿಯಲ್ಲಿ ಹೆಣ ಹೂಳಲು ಗುಣಿ ತೋಡುವವ ತಾನು ತೋಡಿದ ಗುಣಿಯಲ್ಲಿ ತಾನೇ ಬಿದ್ದು ಸಾಯುವವನನ್ನು ಪಾದ್ರಿ ವಿಧಿವತ್ತಾಗಿ ಸಮಾಧಿ ಮಾಡಿದರೆ, ತನ್ನನ್ನು ಕೈ ಬಿಟ್ಟ ಚರ್ಚು, ಸಮಾಜದ ಗೊಡವೆಗೆ ಹೋಗದೆ, ಮಗನೇ ತನ್ನ ಮನೆಯ ಮುಂದೆ ತಾನೇ ಗುಣಿ ತೋಡಿ, ದೇವರ ಪೀಠಗಳ ಕಟ್ಟೋಣದಲ್ಲಿ ಪರಿಣಿತನಾದ ತಂದೆ ಮೇಸ್ತ್ರಿ ವಾವಚ್ಚನ್‍ನ ಸಮಾಧಿ ಮಾಡಿದ ನಂತರ, ಸಮಾಧಿಯಾದ ಇಬ್ಬರನ್ನೂ ಆತ್ಮ ಸ್ವರೂಪದಲ್ಲಿ ಸ್ವರ್ಗಕ್ಕೆ ಕರೆತರಲು ಸಮುದ್ರದಲ್ಲಿ ಎರಡು ದೋಣಿಗಳಲ್ಲಿ ದೇವದೂತರು ಬರುವ ಚಿತ್ತಾರವಂತೂ ಮನೋಜ್ಞವಾಗಿದೆ.

  ಮನೆಯವರಿಂದ ಪರಿತ್ಯಕ್ತನಾಗಿದ್ದ ಗುಣಿ ತೋಡುವವನ ಬೆನ್ನು ಬಿಡದ ಸಂಗಾತಿ ನಾಯಿಯೂ ಅವನು ಮೃತಪಟ್ಟಾಗಲೇ ಅಸುನೀಗಿರುತ್ತದೆ. ದೇವದೂತರು ಕರೆದುಕೊಂಡು ಹೋಗಲು ಬಂದಾಗಲೂ ಅದು ಅವನ ಮಡಿಲಲ್ಲಿರುತ್ತದೆ.

  ಅಪ್ಪಟ ಬಿಳಿ ಬಣ್ಣದ ಸಮುದ್ರದ ತೀರದ ಮರಳಿನ ಮೈದಾನದಲ್ಲಿ, ಶ್ರೀಮಂತ ಕ್ರೈಸ್ತರರೊಬ್ಬರ ಶವ ಯಾತ್ರೆಯ ಚಿತ್ರಣವನ್ನು ದೂರದಿಂದಲೇ ಅದರ ಶ್ರೀಮಂತಿಕೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾ ಸಾಗುವ, ಬ್ಯಾಂಡ್ ಸಂಗೀತ ತಂಡದವರು ಮತ್ತು ಭಟರು ಕವಾಯಿತು ನಡೆಸುವ ತರದಲ್ಲಿ ಕಾಣುವ ಶವ ಸಂಪುಟದ ಮೆರವಣಿಗೆಯೊಂದಿಗೆ ಆರಂಭವಾಗುವ ಸಿನಿಮಾದಲ್ಲಿ ಅಲ್ಲಲ್ಲಿ ಸಾವಿನ ಸೂಚಕಗಳೇ ಕಾಣಸಿಗುತ್ತವೆ. ಕಡಲ ತೀರದ ಮೀನುಗಾರರ ನೆಲೆಯಲ್ಲಿ ಸಾವಿನ ಮೆರವಣಿಗೆಯ ಬ್ಯಾಂಡ್‍ನ ಶಹನಾಯಿ ವಾದಕ ಅಪಸ್ವರದಲ್ಲಿ ಹಾಡುವುದು, ಅಲ್ಲಿ ತನ್ನ ಪ್ರೀತಿಯ ನಾಯಿಯ ಜೊತೆಗೆ ಸಮಾಧಿ ಗುಣಿ ತೋಡುವವನ ಉಪಸ್ಥಿತಿ ಇತ್ಯಾದಿ. 

 ಅದೊಂದು ಸಾಧಾರಣ ಬಡ ಕಟುಂಬ. ಸ್ಕೂಟರ್‍ನಲ್ಲಿ ಓಡಾಡುವ, ಸಹಕಾರ ಸಂಘದಲ್ಲಿ ಕೆಲಸ ಮಾಡುವ ವಾವಚ್ಚನ್‍ನ ಮಗ ಈಷೋ, ಮನೆಗೆ ಬರುವಾಗ ಹೆಂಡದ ಅಂಗಡಿಯಲ್ಲಿ ಬ್ರಾಂದಿ ಕೊಂಡರೂ, ರಸ್ತೆ ಬದಿಯ ಹಾಡುಗಾರನಿಗೆ ಸಹಾಯ ಮಾಡಲು ಡಬ್ಬಿ ಹಿಡಿದುಕೊಂಡ ಬಂದವರಿಗೆ ಒಂದಿಷ್ಟು ಕಾಸು ಕೊಡದಷ್ಟು ಕಂಜೂಸಿತನವನ್ನು ಬಡತನ ಅವನಲ್ಲಿ ರೂಢಿಸಿರುತ್ತದೆ.

  ಹೇಳದೇ ಕೇಳದೇ ಆಗಾಗ ಮನೆಬಿಟ್ಟು ಹೋಗುವ, ತಿಂಗಳ ನಂತರ ಮನೆಗೆ ಬಂದ ಗಂಡನಿಗೆ ಹೆಂಡತಿ, `ಮನೆಯ ಹಿರಿಯನಾಗಿ ಇದೇನು ನಿನ್ನ ನಡವಳಿಕೆ?’ ಎನ್ನುತ್ತಾ ತರಾಟೆ ತೆಗೆದುಕೊಂಡು, `ಮದುವೆಯಾಗಿ 35 ವರ್ಷದಿಂದಲೂ ಇದೇ ಕತೆ’ ಎಂದು ಪ್ರೀತಿಯಿಂದ ಗೊಣಗುಟ್ಟುತ್ತಾಳೆ. `ಮಾವ ಮನೆಗೆ ಬಂದಿದ್ದಾನೆ. ಸಮಾಧಾನವಿರಲಿ, ಕೋಳಿ ತಂದಿದ್ದಾನೆ. ಅಡುಗೆ ಮಾಡೋಣ. ಇನ್ನು ಅವನು ಇಲ್ಲೇ ನಮ್ಮೊಂದಿಗೆ ಇರುವಂತೆ ಮಾಡೋಣ’ ಎಂದು ಸೊಸೆ ಅವಳನ್ನು ಸಮಾಧಾನ ಪಡಿಸುತ್ತಾಳೆ. ಎಲ್ಲದಕ್ಕೂ ನಗುಮುಖದಿಂದ ಹೆಂಡತಿಯ ಸಿಟ್ಟು ಸೆಡುವನ್ನು ಸಂಭಾಳಿಸುತ್ತಿದ್ದ ಮೇಸ್ತ್ರಿ ವಾವಚ್ಚನ್, ಈ ಮಾತುಗಳನ್ನು ಆಡಿದ ಒಂದರ್ಧ ಗಂಟೆಯಲ್ಲಿ ಸಾಯುವುದು, ಹಲವು ಪ್ರಹಸನಗಳ ನಂತರ, ಮಗ ತಂದೆಯ ಸಮಾಧಿಯನ್ನು ಮನೆಯ ಅಂಗಳದಲ್ಲೇ ಮಾಡುವುದು - ವಿಚಿತ್ರವೆನಿಸಿದರೂ ಅತಿರೇಕದ ಪ್ರಕರಣಗಳಲ್ಲಿ ಘಟಿಸಬಹುದಾದ ಘಟನೆ. 

  ಸಿನಿಮಾದ ಪ್ರಥಮ ದೃಶ್ಯ ಬಡ ಕುಟುಂಬದ ಯಜಮಾನನಾದ ಮೇಸ್ತ್ರಿ ವಾವಚ್ಚನ್‍ನ ಬಸ್ಸಿನಲ್ಲಿ ತನ್ನ ಊರಿನತ್ತ ಬರುವುದರೊಂದಿಗೆ ಆರಂಭವಾಗುತ್ತದೆ. ಮಗಳು, ಇಳಿಹೊತ್ತಿನಲ್ಲಿ ಸಮುದ್ರ ತೀರದಲ್ಲಿ ದೋಣಿಯೊಂದರ ಪಕ್ಕದಲ್ಲಿ ಅವಿತಿಟ್ಟು ತನ್ನ ಪ್ರಿಯಕರನೊಂದಿಗೆ ಲಲ್ಲೆ ಹೊಡೆಯುತ್ತಿರುವುದು, ಅವಳ ನೆರೆಮನೆಯ ಹಿರಿಯನ ಗಮನಕ್ಕೆ ಬರುತ್ತದೆ, ಆತ, ತನ್ನ ವಾರಿಗೆಯ ವಾವಚ್ಚನ್ನ ಮೇಸ್ತ್ರಿ ತಿಂಗಳ ನಂತರ ಕೈ ಚೀಲದಲ್ಲಿ ಕೋಳಿಯೊಂದನ್ನು ಹಿಡಿದುಕೊಂಡು ಬಸ್ಸಿನಿಂದ ಇಳಿದು ಮನೆಗೆ ಹಿಂದಿರುಗುವಾಗ ತಡೆದು ನಿಲ್ಲಿಸಿ, ಅವನ ಮಗಳ ಬಗ್ಗೆ ಹಗುರವಾಗಿ ಮಾತನಾಡಿಸಿ ತನ್ನ ಬಾಯಿಚಪಲ ತೀರಿಸಿಕೊಳ್ಳುತ್ತಾನೆ. ಸಿಟ್ಟಿಗೆದ್ದು ಕೋಳಿ ಮತ್ತು ತಾನು ಉಳಿತಾಯ ಮಾಡಿ ಕೂಡಿಟ್ಟಿದ್ದ ನೋಟಿನ ಕಂತೆಗಳಿದ್ದ ಕೈ ಚೀಲ ಬೀಳಿಸಿದ ವಾವಚ್ಚನ್, ಅವನು ಕೆಳಗೆ ಬೀಳುವಂತೆ ಕೆನ್ನೆಗೆ ಹೊಡೆಯುತ್ತಾನೆ.

  ಬಿರು ನಡಿಗೆಯಲ್ಲಿ ತಿಂಗಳ ನಂತರ ಮನೆಗೆ ಬಂದ ಮೇಸ್ತ್ರಿ, ಹೆಂಡತಿಯ ಕೈಗೆ ಕೋಳಿಕೊಟ್ಟು ಅಡುಗೆ ಮಾಡುವಂತೆ ಹೇಳಿ ಮನೆ ಹೊರಗೆ ಗಾಳಿಗೆ ಕುಳಿತುಕೊಳ್ಳುತ್ತಾನೆ. ಮಗನೊಂದಿಗೆ ಮಾತನಾಡಬೇಕೆಂಬ ತುರಾತುರಿ ಅವನಿಗೆ. ಅವನು ಕುಡಿಯಲು ಸಾರಾಯಿ ತಂದಿರುತ್ತಾನೆ. ಅಷ್ಟರಲ್ಲಿ ಮನೆಗೆ ಬರುವ ಮಗ ಈಷೋನೂ ಬರುವಾಗ ಹೆಂಡದ ಅಂಗಡಿಯಿಂದ ಬ್ರಾಂದಿ ತಂದಿರುತ್ತಾನೆ. ಅಪ್ಪ ಮನೆಗೆ ಬಂದ ಸಂತೋóಷ ಒಂದು ಕಡೆ ಇದ್ದರೆ, ಮನೆ ಬಿಟ್ಟು ಆಗಾಗ ನಾಪತ್ತೆಯಾಗುವ ಕೆಟ್ಟ ಚಾಳಿಯ ಬಗೆಗೆ ಮಗನಿಗೆ ಬೇಸರ. ಈಗ ಮನೆಗೆ ಬರುವಾಗ ದಾರಿಯಲ್ಲಿ ಒಬ್ಬನನ್ನು ಹೊಡೆದು ಎಡವಟ್ಟು ಮಾಡಿಕೊಂಡಿದ್ದ ಸಂಗತಿ ಗೊತ್ತಾದರೂ, ಇಬ್ಬರೂ ಕುಳಿತು ಕುಡಿಯುತ್ತ ಪಟ್ಟಂಗ ಹೊಡೆಯುತ್ತಿರುತ್ತಾರೆ.

  ತಂದೆ ಇದ್ದಕಿದ್ದಂತೆ `ನನ್ನ ಸಾವಿನ ನಂತರ ನನ್ನ ಅಂತ್ಯಕ್ರಿಯೆಯನ್ನು ಧಾಮಧೂಮ ಮಾಡಬೇಕು. ಭಾಷೆ ಕೊಡು’ ಎಂದು ಮಗನಿಗೆ ದುಂಬಾಲು ಬೀಳುತ್ತಾನೆ. `ಎಂದೋ ಬರುವ ಸಾವಿಗೆ ಇಂದೇಕೆ ಚಿಂತೆ?’ ಎನ್ನುತ್ತಾ,`ನಿಮ್ಮ ಕೊನೆಯ ಆಸೆ ಖಂಡಿತವಾಗಿ ಈಡೇರಿಸುವೆ’ ಎಂದು ಆಣೆ ಇಡುತ್ತಾನೆ.

 `ನೀನು, ನನ್ನ ತಂದೆಯ ಶವ ಯಾತ್ರೆಯ ಮೆರವಣಿಗೆ ನೋಡಬೇಕಿತ್ತು. ಏನು ಜನ! ಏನು ಕತೆ! ಸಂಗೀತ ಮೇಳದವರಿದ್ದರು, ಮೇತ್ರಾಣಿಗಳು ಬಂದು ಆಶೀರ್ವದಿಸಿದರು. ಅದನ್ನು ನೀನು ನೋಡಬೇಕಿತ್ತು. ಅದನ್ನು ಆಗ ಮಾಡಿದ ನನಗೇ ನಾನೇಕೆ ಸಾಯಬಾರದು ಎಂಬ ಯೋಚನೆ ಮೂಡಿತ್ತು’ ಎಂದು ವಾವಚ್ಚನ್ ಬಣ್ಣಿಸುತ್ತಾನೆ. ಆಗ, ಮಗ ಈಶೊ `ನಾನು ನಿನ್ನ ಮಗ. ನಿನ್ನ ಶವ ಸಾಗಿಸಲು ಅತ್ಯತ್ತುಮ ಪ್ರಥಮ ದರ್ಜೆ ಶವ ಪೆಟ್ಟಿಗೆ ಮಾಡಿಸುವೆ, ಶವಯಾತ್ರೆಯಲ್ಲಿ ಬ್ಯಾಂಡ್ ಬಾರಿಸುವವರನ್ನು ಕರೆಸುವೆ, ಕುದುರೆ ಬಾಲದ ಕೂದಲಿನ ಚಾಮರ, ನವಿಲುಗರಿಗಳ ಬೀಸಣಿಗೆಗಳಿಂದ ಗಾಳಿ ಹಾಕಿಸುವೆ, ಸಂಭ್ರಮದ ಬಾಣಬಿರುಸುಗಳ ಪಟಾಕಿ ಹಾರಿಸುವ ವ್ಯವಸ್ಥೆ ಮಾಡುವೆ, ಮೆರವಣಿಗೆಯಲ್ಲಿ ಮುಂದೆ ಬೆಳ್ಳಿಯದಲ್ಲ ಬಂಗಾರದ ಶಿಲುಬೆಯನ್ನು ಹಿಡಿಯುವರು. ಮೇತ್ರಾಣಿಗಳು ಬಂದು ಆಶೀರ್ವಚನ ನೀಡುವಂತೆ ನೋಡಿಕೊಳ್ಳುವೆ’ ಎಂದು ಭಾಷೆ ಕೊಡುತ್ತಾನೆ.

  ಆಗ ವಾವಚ್ಚನ್, `ಅದಕ್ಕಾಗಿ ನನ್ನಲ್ಲಿದ್ದುದಿಷ್ಟೇ’ ಎಂದು ಐನೂರರ ನೋಟುಗಳ ಕಂತೆಯನ್ನು ಮಗನ ಕೈಗೆ ಇಡುತ್ತಾನೆ. ಆದರೆ, ಅವು ಹಳೆಯ ಐನೂರರ ನೋಟುಗಳು. ಸರ್ಕಾರ ಅವನ್ನು ಆಗಲೇ ಅಮಾನ್ಯಗೊಳಿಸಿರುತ್ತದೆ. `ಕವಡೆ ಕಿಮ್ಮತ್ತೂ ಇಲ್ಲದ ಅವು ಸುಡಲಷ್ಟೇ’ ಎಂದು ತಮಾಷೆ ಮಾಡುತ್ತಾನೆ.

  `ಮತ್ತೆ ಹೇಗೆ?’ ಎಂಬ ಮಾತಿಗೆ `ಅಪ್ಪಾ, ನಾನು ನಿನ್ನ ಮಗ. ಅಪ್ಪಾ, ನಿನ್ನ ಇಚ್ಛೆಯಂತೆಯೇ ಚಕ್ರಚರ್ತಿ ಶವಯಾತ್ರೆಯ ಮಾದರಿಯಲ್ಲಿಯೇ, ನಿನ್ನ ಶವಯಾತ್ರೆಯು ನಡೆಯುವುದು. ಅದು ಸಂತ ಚೌರಪ್ಪರ ಹಬ್ಬದ ಸಂಭ್ರಮದಂತೆಯೇ ಇರುತ್ತದೆ. ಪೀಠದಲ್ಲಿರುವ ಗೀವರ್ಗೀಸ್ (ಸಂತ ಜಾರ್ಜ್) ಅವರ ಮೇಲೆ ಆಣೆ’ ಎಂದು ಭರವಸೆ ಕೊಡುತ್ತಾನೆ. ಕೇರಳದಲ್ಲಿನ ಕ್ರೈಸ್ತರು ಸಂತ ಜಾರ್ಜರ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿದ್ದಾರೆ

  ಮಗ ಕೊಟ್ಟ ಭಾಷೆಯಿಂದ ಸಂತೋಷಗೊಂಡು, ಕುಡಿದ ಅಮಲಿನಲ್ಲಿ, ತನ್ನ ಯೌವ್ವನದ ಕಾಲದಲ್ಲಿನ ಸಂಜೆಯಿಂದ ಬೆಳಗಿನ ಜಾವದವರೆಗೆ ಆಡುತ್ತಿದ್ದ, ಮುಂಡವೇಲು ಚರ್ಚಿನ ಪಾದ್ರಿಗಳು ಬಂದು ನಿಲ್ಲಿಸಬೇಕಾಗುತ್ತಿದ್ದ ಕ್ರೈಸ್ತ ಜನಪದ ರಂಗಭೂಮಿಯ `ಚುಟ್ಟು ನಾಟಕಂ’ಗಳಲ್ಲಿನ ಚಕ್ರವರ್ತಿ ಚಾರ್ಲ್ ಮಾಗ್ನ ಪಾತ್ರದ ಸಂಭಾಷಣೆಗಳನ್ನು ಒಪ್ಪಿಸುತ್ತಾ ಕುಣಿಯುತ್ತಾ ವಾವಚ್ಚನ್ ಸಂಭ್ರಮಿಸುತ್ತಾನೆ,

ತಂದೆ ಕುಡುಕನಲ್ಲ ಎನ್ನುವ ಮಗ, ಅಡುಗೆ ಮನೆ ಕಡೆಗೆ ಹೋದಾಗ ನೋಡಿದ ಆ ಔಷಧಿಯನ್ನು ಬಿಸಾಡುತ್ತಾನೆ. ಇಷ್ಟಕ್ಕೂ ಮೊದಲು ವಾವಚ್ಚನ್ ಕುಡಿತವನ್ನು ಬಿಡುವಂತೆ ಮಾಡಲು ಅವನ ಹೆಂಡತಿ ಮತ್ತು ಸೊಸೆ ಸೇರಿಕೊಂಡು ಸರಾಯಿಯಲ್ಲಿ ಮತ್ತು ಅಡುಗೆಯಲ್ಲಿ ಔಷಧಿಯನ್ನು ಬೆರೆಸಿರುತ್ತಾರೆ. ಸೊಸೈಟಿಯ ಸಾಲದ ಸಂಬಂಧ ಒಬ್ಬರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಾ ಮಗ ಅತ್ತ ಹೋದಾಗ, ಪಡಸಾಲೆಯಲ್ಲಿ ಸಾರಾಯಿ ಬಾಟಲಿಯೊಂದಿಗೆ ಕುಣಿಯುತ್ತಿದ್ದವ ಹಿಂಜೋಲಿಯಾಗಿ ನೆಲಕ್ಕೆ ಬೀಳುವ ಮೇಸ್ತ್ರಿ ವಾವಚ್ಚನ್ನನ ಹಿಂತಲೆಗೆ ಪೆಟ್ಟಾಗುತ್ತದೆ. ರಕ್ತ ಸೋರತೊಡಗುತ್ತದೆ. ಮಾತು ನಿಂತಿರುತ್ತದೆ. ಅಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿರುತ್ತದೆ.

 ತಿಂಗಳ ನಂತರ ಮನೆಯ ಯಜಮಾನ ಮನೆಗೆ ಬಂದಿದ್ದ. ಅದರಿಂದ ಕಳೆಗಟ್ಟಿದ ಸಂತೋಷದ ಬುಗ್ಗೆಯಲ್ಲಿ ಓಲಾಡುತ್ತಿದ್ದ ಕುಟುಂಬದ ಸದಸ್ಯರಿಗೆ, ಯಜಮಾನ ಮೇಸ್ತ್ರಿ ವಾವಚ್ಚನ್‍ನ ಸಾವು ಬರ ಸಿಡಿಲು ಎರಗಿದಂತಾಗುತ್ತದೆ.

 ಕ್ಷಣದ ಹಿಂದಿನ ಸಂತೋಷ, ನೆಮ್ಮದಿ, ಸಂಭ್ರಮ ಎಲ್ಲವೂ ಮಾಯವಾಗಿ ದುಃಖ ಮಡುಗಟ್ಟುತ್ತದೆ. ಮನೆಮಂದಿಯ ಗೋಳಾಟ ಹೇಳತೀರದು. ಮಗಳು ನೆರಮನೆಯವರ ಬಾಗಿಲು ತಟ್ಟುತ್ತಾಳೆ, ಅವರು ಓಡಿ ಬರುತ್ತಾರೆ. ಸಂತೈಸುತ್ತಲೇ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಸಹಾಯ ಹಸ್ತ ನೀಡಲು ಮುಂದಾಗುತ್ತಾರೆ. ನೆಲದ ಮೇಲಿದ್ದ ಶವವನ್ನು ಎತ್ತಿ ಮಂಚದ ಮೇಲೆ ಮಲಗಿಸುತ್ತಾರೆ. ಸಂಬಂಧಿಕರಿಗೆ ಸುದ್ದಿ ತಿಳಿಸಲು ಮುಂದಾಗುತ್ತಾರೆ. ಒಬ್ಬರು ಸಮಾಧಿ ಕಾರ್ಡ ಸಿದ್ಧಪಡಿಸಲು ಮುದ್ರಣಾಲಯವನ್ನು ಸಂಪರ್ಕಿಸಿ ವಿಷಯ ತಿಳಿಸುತ್ತಾರೆ. ನಿಧಾನವಾಗಿ ವಿಘ್ನ ಸಂತೋಷಿಗಳು ಅಲ್ಲಲ್ಲಿ ಸಂಶಯದ ಬೀಜಗಳನ್ನು ಬಿತ್ತಲು ಹಿಂದೆ ಮುಂದೆ ನೋಡುವುದಿಲ್ಲ.

 `ಮನೆಯಲ್ಲಿನ ಸಹಜ ಸಾವಾದರೂ, ಈಗ ನೇರಾ ನೇರ ಸಮಾಧಿ ಮಾಡಲಾಗದು. ಈಗ ಇಂಥದಕ್ಕೆಲ್ಲಾ ವೈದ್ಯರ ದೃಢಿಕರಣ ಪತ್ರ ಬೇಕು’ ಎಂದು ಪ್ರಸ್ತಾಪಿಸುವ ಗ್ರಾಮ ಪಂಚಾಯ್ತಿ ಸದಸ್ಯ ಅಯ್ಯಪ್ಪ, ರಾತ್ರಿ ಮಗನನ್ನು ಕರೆದುಕೊಂಡು ವೈದ್ಯರ ಮನೆ ಬಾಗಿಲು ತಟ್ಟಿದರೆ, ಅವರು ಸಿಗುವುದಿಲ್ಲ, `ಆಸ್ಪತ್ರೆಯ ಮುಖ್ಯದಾದಿ ಶವ ನೋಡಿದರೆ ಸಾಕು, ಬೆಳಿಗ್ಗೆ ವೈದ್ಯರಿಂದ ಸಾವಿನ ದೃಢೀಕರಣ ಪತ್ರ ಪಡೆಯಬಹುದು’ ಎಂಬ ಆಸೆಯಿಂದ ಅವಳನ್ನು ಕರೆದುಕೊಂಡು ಬಂದರೆ, ಅವಳು ತಲೆಗೆ ಗಾಯವಾಗಿದ್ದರ ಬಗ್ಗೆ, ತನಿಖೆಗೆ ಮುಂದಾಗುತ್ತಾಳೆ. ಸುತ್ತೆಲ್ಲಾ ಸಾರಾಯಿ ವಾಸನೆಯನ್ನು ಗಮನಿಸುತ್ತಾಳೆ. `ನಾನು ವೈದ್ಯರ ಗಮನಕ್ಕೆ ತರುತ್ತೇನೆ, ನಾಳೆ ಅವರೇ ಪತ್ರದ ಬಗ್ಗೆ ನಿರ್ಧರಿಸುತ್ತಾರೆ’ ಎನ್ನುತ್ತಾ ಕುಟುಂಬದವರು ಸಾವಿನ ಬಗೆಗೆ ಕೊಡುವ ವಿವರಣೆಯ ಕುರಿತು ಅನುಮಾನಿಸುತ್ತಾಳೆ.

 ಮುಖ್ಯ ದಾದಿಯನ್ನು ಕರೆಯಲು ಹೋದವರ ಮೋಟಾರ್ ಸೈಕಲ್ಲಿನಲ್ಲಿ ದಾದಿ ಮೃತ ವಾವಚ್ಚನ್ ಮೇಸ್ತ್ರಿಯ ಮನೆಗೆ ಹೋಗಿರುತ್ತಾಳೆ. ಅವಳ ಮನೆಗೆ ಹೋದವರು, ನಡೆದು ಚರ್ಚಿನ ಪಾದ್ರಿಯ (ವಿಚಾರಣಾ ಗುರುಗಳ) ಮನೆಗೆ ಹೋಗಿ ಬಾಗಿಲು ತಟ್ಟಿ ಎಬ್ಬಿಸಿ, ಸಾವಿನ ಸುದ್ದಿ ಮುಟ್ಟಿಸುತ್ತಾರೆ. ಇಬ್ಬರಲ್ಲೊಬ್ಬ ವಾವಚ್ಚನ್ ಸಾವಿನ ಬಗೆಗೆ ಸಂಶಯ ವ್ಯಕ್ತಪಡಿಸುತ್ತಾನೆ. ವಾವಚ್ಚನ ನ್ನು ಯಾರೋ ಸಾಯಿಸಿದ್ದಾರೆ ಎಂದು ಮಾತಿಗೆ ತೊಡಗುತ್ತಾನೆ. ಜೊತೆಗಾರ ಅಂಥದ್ದೂ ಇಲ್ಲವೆಂದರೂ ಕೇಳುವುದಿಲ್ಲ, `ತಿಂಗಳುಗಟ್ಟಲೇ ಮನೆಯಿಂದ ಮಾಯವಾಗುತ್ತಿದ್ದ ಆತನ ಬಗ್ಗೆ ಬೇಸರಗೊಂಡಿರುವ ಹೆಂಡತಿ ವಿಷ ಉಣಿಸಿರಬಹುದು’ ಎನ್ನುತ್ತಾನೆ. `ಮನೆಯಲ್ಲಿ ಏನೋ ಗಲಾಟೆಯಾಗಿರಬೇಕು. ನೆಲಕ್ಕೆ ಬಿದಿದ್ದ. ಸಾರಾಯಿ ವಾಸನೆ ಬರುತ್ತಿತ್ತು. ಅವನ ತಲೆಗೆ ಪೆಟ್ಟು ಬಿದ್ದಿತ್ತು’ ಎಂದೆಲ್ಲಾ ಹೇಳುವಾಗ, ಇನ್ನೊಬ್ಬ `ಹಾಗೇನು ಇಲ್ಲ’ ಎಂದಾಗ, ಅವನ ಬಾಯಿ ಮುಚ್ಚಿಸುವ ಪಾದ್ರಿ, ನಡೆದ ಸಂಗತಿಗಳಿಗೆ ಉಪ್ಪುಖಾರ ಹಚ್ಚಿ, ಇಲ್ಲಸಲ್ಲದ್ದನ್ನು ತಾನೇ ಕಣ್ಣಾರೆ ಕಂಡಂತೆ ಒಪ್ಪಿಸುತ್ತಿದ್ದವನಿಂದ ಮತ್ತಷ್ಟು ವಿವರವನ್ನ ಕೆದಕುತ್ತಾರೆ. ಪಾದ್ರಿ ಮನೆಯಿಂದ ಹೊರಗೆ ಬಂದ ನಂತರ ಇನ್ನೊಬ್ಬ `ಹೀಗೇಕೆ ಸುಳ್ಳು ಹೇಳಿದೆ?’ ಎಂದಾಗ, ಪಾದ್ರಿಯ ತಲೆಯಲ್ಲಿ ಸಂಶಯದ ಹುಳವನ್ನು ಬಿಟ್ಟವ, ನಿರ್ಲಜ್ಜೆ ನಿರ್ಲಿಪ್ತತೆಯಿಂದ `ಸುಮ್ಮನೇ ತಮಾಷೆಗೆ ಹೇಳ ಬೇಕೆನ್ನಿಸಿತು, ಹೇಳಿದೆ’ ಎನ್ನುತ್ತಾನೆ!

  ಬೆಳಿಗ್ಗೆ ಹೋಗುವುದಾಗಿ ತಿಳಿಸಿ ಸಾವಿನ ಸುದ್ದಿ ತಂದವರನ್ನು ಸಾಗ ಹಾಕಿ, ರಾತ್ರಿಯೇ ಮೃತನ ಮನೆಗೆ ಭೇಟಿ ಕೊಡಲು ಹೊರಟಿದ್ದ ವಿಚಾರಣಾ ಗುರುಗಳಿಗೆ, ದಾರಿಯಲ್ಲಿಯೇ ಸಿಗುವ ದಾದಿಯು ತನ್ನ ಅನುಮಾನಗಳನ್ನು ದಾಟಿಸುತ್ತಾಳೆ. ವಾವಚ್ಚನ್‍ನ ಮನೆಯ ಹತ್ತಿರ ಕೆಲವರು ಸಾವಿನ ಬಗೆಗೆ ಆಡುತ್ತಿದ್ದ ಅನುಮಾನದ ಮಾತುಗಳನ್ನು ಕೇಳಿಸಿಕೊಂಡ ಪಾದ್ರಿ, ಮೃತನ ಮನೆಯಲ್ಲಿ ಪ್ರಾರ್ಥಿಸುವ ಮೊದಲು ಪ್ರಾರ್ಥನಾ ಪುಸ್ತಕದಲ್ಲಿನ ಹಾಳೆಯೊಂದನ್ನು ಬೇಕಂತಲೆ ಕೆಡವಿ, ಅದನ್ನು ಎತ್ತಿಕೊಳ್ಳುವ ನೆಪದಲ್ಲಿ ಮಲಗಿಸಿದ ಶವದ ಹಿಂತಲೆಗೆ ಆದ ಗಾಯವನ್ನು ಸಾಕಷ್ಟು ಸಮೀಪದಿಂದ ನೋಡಲು ಪ್ರಯತ್ನಿಸುತ್ತಾರೆ.

  ಮೇಸ್ತ್ರಿಯ ಸಾವು ಸಹಜ ಸಾವಾದರೂ, ಅವನಿಂದ ಏಟು ತಿಂದ ವ್ಯಕ್ತಿ ಮೃತನ ಅಂತ್ಯಕ್ರಿಯೆಯ ವಿವಿಧ ಚಟುವಟಿಕೆಗಳಲ್ಲಿ ನೆರವು ನೀಡುತ್ತಾ, ಮೃತನ ಮೇಲೆ ತನಗೆ ಎಳ್ಳಷ್ಟೂ ದ್ವೇಷವಿಲ್ಲವೆಂದು ಹೆಣದ ಮುಂದೆ ಸಾರಿ, ಹೊರಗೆ ಬಂದು ಅವನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸತೊಡಗುತ್ತಾನೆ. `ಆಗಾಗ ಮನೆಯಿಂದ ಒಮ್ಮಿಂದೊಮ್ಮಿಲೇ ಮಾಯವಾಗಿರುತ್ತಿದ್ದ, ಗದ್ದಲ ನಡೆದಿರಬೇಕು, ಮನೆಯವರೇ ಏನೋ ಮಾಡಿರಬೇಕು’ ಎಂದು ನೆರೆಹೊರೆಯವರೊಂದಿಗೆ ತನ್ನ ಸಂಶಯವನ್ನು ಹೊರಗೆಡಹುತ್ತಾನೆ.

 ದೇವರ ಪೀಠವನ್ನು ಅಂದವಾಗಿ ಕಟ್ಟುವ ಆದರೆ, ಸರಿಯಾಗಿ ಭಾನುವಾರದ ಪೂಜೆಗೆ ಬಾರದ ಮೇಸ್ತ್ರಿ ವಾವಚ್ಚನ್ ಬಗೆಗೆ ಪಾದ್ರಿಗೂ ಅಷ್ಟೇನೂ ಒಳ್ಳೆಯ ಅಭಿಪ್ರಾಯವಿರುವುದಿಲ್ಲ. ಕಾನೂನು ತೊಡಕು ಬೇಡ, ಸಂಶಯ ಪರಿಹಾರವಾಗಿ ಪ್ರಕರಣ ತಾರ್ಕಿಕ ಅಂತ್ಯ ಕಂಡರೆ ಒಳ್ಳೆಯದು ಎಂದು ಸರಿ ರಾತ್ರಿಯೇ ತಮ್ಮ ಪರಿಚಯದ ಸರ್ಕಲ್ ಇನ್ಸಪೆಕ್ಟರ್‍ರಿಗೆ ಟೆಲಿಫೋನ್ ಕರೆ ಮಾಡಿ. `ಚರ್ಚಿನ ವಿಚಾರಣೆಯ ವ್ಯಾಪ್ತಿಗೆ ಸೇರಿರುವ ಒಬ್ಬನ ಸಾವಾಗಿದೆ. ಒಂದಿಷ್ಟು ಗೊಂದಲಗಳಿವೆ ಸ್ವಲ್ಪ ನೋಡಿ’ ಎಂದು ಕೋರಿಕೊಳ್ಳುತ್ತಾರೆ. `ಈಗ ಸರಿ ರಾತ್ರಿ, ನಾಳೆ ನೋಡುವೆ’ ಎಂದು ಹೇಳುವ ಅವರು, ನಂತರ ಮರೆತು ಬಿಡುತ್ತಾರೆ.

  ಮಧ್ಯ ರಾತ್ರಿಯಿಂದಲೇ ಶವ ಸಂಸ್ಕಾರದ ವಿವಿಧ ಸಿದ್ಧತೆಗಳಿಗೆ ಮುಂದಾಗುವ ಮಗ, ತಂದೆಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಅಪ್ಪನ ಬಯಕೆಯಿಂತೆ ಅದ್ಧೂರಿಯಿಂದ ಸಮಾಧಿ ಕೆಲಸಗಳನ್ನು ನಿರ್ವಹಿಸಬೇಕೆಂಬ ಒತ್ತಾಸೆಯಿಂದ, ಹೆಂಡತಿಯು ನಿರಾಕರಿಸಿದರೂ ಅವಳ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಬಲವಂತದಿಂದ ಇಸಿದುಕೊಂಡು ಅಡ ಇಡಲು ಮುಂದಾಗುತ್ತಾನೆ. ಸರಿ ರಾತ್ರಿಯಲ್ಲಿ ಹಣ ಕೇಳಿ ಮನೆಗೆ ಬಂದವರನ್ನು ಹೊರಗೆ ನಿಲ್ಲಿಸಿ, `ಅಡವಿಟ್ಟ ಒಡವೆ ನಿಮಗೆ ಬಿಡಿಸಿಕೊಳ್ಳಲಾಗದು, ನಾನು ಹೇಳಿದ ಬೆಲೆಗೆ ಮಾರಿ’ ಎಂದು ಬಂಗಾರದ ಸರವನ್ನು ಕೊಂಡುಕೊಳ್ಳುತ್ತಾನೆ. ಅತ್ತ ಆತನ ಹೆಂಡತಿ, `ಸಾವಿನ ಸುದ್ದಿ ಕೇಳಿ ತವರು ಮನೆಯವರು ಬಂದಾಗ ಬರಿಗೊರಳಿನಲ್ಲಿ ಇರಬಾರದು, ಮರ್ಯಾದೆಗೇಡು’ ಎಂದುಕೊಂಡು ನೆರೆಮನೆಯವರ ಕೊರಳಲ್ಲಿದ್ದ ಬಂಗಾರದ ಸರ ಇಸಿದುಕೊಂಡು ಕೊರಳಲ್ಲಿ ಹಾಕಿಕೊಳ್ಳುತ್ತಾಳೆ, ಗಂಡನ ಮನೆಯ ಮಾನ ಉಳಿಸಿಕೊಳ್ಳುತ್ತಾಳೆ!

 ಶವ ಪೆಟ್ಟಿಗೆಗಳನ್ನು ಮಾರುವವನನ್ನು ಹುಡುಕಿಕೊಂಡು ಹೋದಾಗ, ಜೊತೆಗಿದ್ದವನು ಚೌಕಾಶಿ ಮಾಡಿದರೂ, ಅವನನ್ನು ದೂರ ಸರಿಸಿ ಮಗ ಈಶೋ, ತಂದೆಯ ಕೊನೆಯ ಆಸೆ ಈಡೇರಿಸುವ ಉದ್ದೇಶದಿಂದ 40,000 ಸಾವಿರ ರೂಪಾಯಿ ಕೊಟ್ಟು ಸುಂದರವಾದ ಗಟ್ಟಿ ಮರದ ಶವಪೆಟ್ಟಿಗೆ ಮತ್ತು ಶವಕ್ಕೆ ತೊಡಿಸುವ ಕೈಗ್ಲವುಸು, ಉಡಿಸುವ ಬಿಳಿ ಬಣ್ಣದ ಬಟ್ಟೆಬರೆಗಳನ್ನು ಖರೀದಿಸಿ ಕೈ ಬರಿದುಮಾಡಿಕೊಳ್ಳುತ್ತಾನೆ.

 ಬೆಳಗಾಗುತ್ತಿದ್ದಂತೆ ಜನ ಬರತೊಡಗುತ್ತಾರೆ. ಬ್ಯಾಂಡಿನವರು ಬಂದಿರುತ್ತಾರೆ. ಛಾಯಗ್ರಾಹಕನೂ ಬಂದಿರುತ್ತಾನೆ. ಹೊತ್ತೇರತೊಡಗುತ್ತಿದ್ದಂತೆ ಮಳೆ ಬರತೊಡಗುತ್ತದೆ. ಹಾಕಿದ್ದ ಪೆಂಡಾಲ ಕುಸಿಯತೊಡಗುತ್ತದೆ. ಶವವನ್ನು ಮೀಯಿಸಿ ಹೊರಗೆ ತರುವಾಗ ಶವ, ಶವಪೆಟ್ಡಿಗೆಯಿಂದ ಕೆಳಗೆ ಉರುಳುತ್ತದೆ. ಅಲ್ಲಿದ್ದವರು ತಲೆಗೊಬ್ಬರಂತೆ ಮಾತನಾಡುತ್ತಾರೆ. ಚರ್ಚಿನ ಪಾದ್ರಿ ಸಮಾಧಿ ಪೂಜೆ ಯಾವಾಗ ಎಂಬುದನ್ನು ತಿಳಿಸಿರುವುದಿಲ್ಲ. ಅದಕ್ಕಾಗಿ ಕಾಯುತ್ತಿದ್ದ ಸಮಾಧಿ ಕಾರ್ಡ್ ಅಚ್ಚು ಮಾಡುವವನ ಟೆಲಿಫೋನ್ ಕರೆ, ಪದೇಪದೇ ಕಿರಿಕಿರಿ ತಂದೊಡ್ಡುತ್ತದೆ. ಸಮಾಧಿಯ ಸಮಯದ ಬಗ್ಗೆ ಕೇಳಲು ಬಂದ ಮಗನಿಂದ, ಪಾದ್ರಿ ಸಾವಿನ ವಿವರ ಕೆದಕುತ್ತಾರೆ. ಧಾರಾಕಾರ ಮಳೆಯಲ್ಲಿಯೇ ಸಮಾಧಿ ಬಯಲಲ್ಲಿ ಶವ ಹೂಳಲು ಗುಣಿ ತೋಡುತ್ತಿದ್ದವ ಅದೇ ಗುಣಿಯಲ್ಲಿ ಕೊನೆಯುಸಿರು ಎಳೆದಿರುತ್ತಾನೆ.

  ಮನೆಯಲ್ಲಿನ ಶವಸಂಸ್ಕಾರದ ಪ್ರಾರಂಭಿಕ ವಿಧಿವಿಧಾನಗಳು ಒಂದೊಂದಾಗಿ ಮುಗಿಯುತ್ತಿದ್ದಂತೆಯೇ ಮಹಿಳೆಯೊಬ್ಬಳು ತನ್ನ ಅಲ್ಲಿಗೆ ಧಾವಿಸಿ ಬಂದು ತಾನು ಮೃತ ಮೇಸ್ತ್ರಿ ವಾವಚ್ಚನ್‍ನ ಹೆಂಡತಿ ಎಂದು ಗೋಳಾಡ ತೊಡಗುತ್ತಾಳೆ. ಅವಳೊಂದಿಗೆ ಅವಳ ಇತರ ಸಂಬಂಧಿಗಳೂ ಬಂದಿರುತ್ತಾರೆ. `ನೀವಾರು?’ ಎಂದು ಅವರನ್ನು ದೂರ ಸರಿಸುವ ಪ್ರಯತ್ನಗಳು ನಡೆಯತ್ತವೆ. ಗದ್ದಲ ಆರಂಭವಾಗುತ್ತದೆ. ಆ ಮಹಿಳೆ, ತನ್ನ ಗಂಡನನ್ನು ಸಾಯಿಸಲಾಗಿದೆ, `ಇದು ಸಹಜ ಸಾವಲ್ಲ’ ಎಂದು ಆರೋಪಿಸುತ್ತಾಳೆ. ಅದಕ್ಕೆ ಈಷೋ ಮತ್ತು ಅವನ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನಂತರ ಪರಸ್ಪರ ದೂಷಿಸುತ್ತಾ ಗುದ್ದಾಡತೊಡಗುತ್ತಾರೆ.

 ಅಷ್ಟರಲ್ಲಿ ಪಾದ್ರಿ ಅಲ್ಲಿಗೆ ಆಗಮಿಸುತ್ತಾರೆ. ಗದ್ದಲ ನಿಲ್ಲಿಸುವ ಪಾದ್ರಿಗೆ, ಪಟ್ಟನಿ ನಡುಗಡ್ಡೆಯಿಂದ ಬಂದ ಆ ಮಹಿಳೆಯು `ತಲೆಗೆ ಕಟ್ಟಿದ ಕಟ್ಟು ಬಿಚ್ಚಿ ನೋಡಿ, ತಲೆಗೆ ದೊಡ್ಡ ಗಾಯವಾಗಿದೆ’ ಎಂದು ದೂರಿದಾಗ, ದೂರನ್ನು ಅನುಸರಿಸಿ, ಪಾದ್ರಿ ಕಟ್ಟು ಬಿಚ್ಚಿಸಿ, ಅಲ್ಲಿನ ಗಾಯ ನೋಡುತ್ತಾರೆ `ಪೊಲೀಸರು ಬರಲಿ, ಈ ಶವ ಪರೀಕ್ಷೆ ನಡೆಯಲಿ’ ಎಂದು ಹಿಂದೆ ಸರಿಯತೊಡಗುತ್ತಾರೆ. ಅಷ್ಟರಲ್ಲಿ ಮಳೆ ಮತ್ತಷ್ಟು ಜೋರಾಗಿ ಸುರಿಯತೊಡಗುತ್ತದೆ. ದುಃಖದುಮ್ಮಾನದ ಪರಿಸರದಲ್ಲಿ, ಗದ್ದಲ ಪರಸ್ಪರ ದೋಷಾರೋಪಣೆ ತಳ್ಳಾಟ ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ, ಪಾದ್ರಿಯೊಂದಿಗೆ ವಾದಕ್ಕಿಳಿದ ತಂದೆಯಂತೆಯೇ ಮುಂಗೋಪದ ಈಷೋ, ತಾಳ್ಮೆ ಕಳೆದುಕೊಂಡು, `ಸಮಾಧಿ ಸ್ಥಳ ನಿಮ್ಮಪ್ಪನ ಮನೆಯದ್ದಾ?’ ಎನ್ನುತ್ತಾ ಪಾದ್ರಿಯ ಕೆನ್ನೆಗೆ ಹೊಡೆದು ನೆಲಕ್ಕೆ ಬೀಳಿಸುತ್ತಾನೆ. ಸಾವರಿಸಿಕೊಂಡು ಎದ್ದು, `ಫಾದರ್ ಮೇಲೆ ಕೈ ಮಾಡಿದ್ದೀಯಾ? ನಾನಿರುವವರೆಗೂ ಈ ಶವದ ಸಂಸ್ಕಾರ ನಡೆಯುವುದಿಲ್ಲ’ ಎಂದು ಬುಸುಗುಡುತ್ತಾ ಪಾದ್ರಿ ಅಲ್ಲಿಂದ ಹೊರಟುಹೋಗಿ ಗುಣಿ ತೋಡಿದವನ ಶವ ಸಂಸ್ಕಾರವನ್ನು, ಮೇಸ್ತ್ರಿ ವಾವಚ್ಚನ್‍ಗಾಗಿ ತೋಡಿದ ಗುಣಿಯಲ್ಲೇ ನೆರವೇರಿಸಿಬಿಡುತ್ತಾರೆ.

 ರಾತ್ರಿಯಿಂದಲೂ ಎಲ್ಲ ಕೆಲಸಗಳಲ್ಲೂ ಈಶೋನ ಜೊತೆಗಿರುವ ಪಂಚಾಯ್ತಿ ಸದಸ್ಯ ಅಯ್ಯಪ್ಪ, ಪೊಲೀಸರ ಸಹಾಯ ಪಡೆಯಲು ಸ್ಟೇಷನ್ ಮೆಟ್ಟಿಲು ಹತ್ತಿದಾಗ, ಅಲ್ಲಿ ಸಿಬ್ಬಂದಿಯೊಬ್ಬರ ಬಿಳ್ಕೋಡುಗೆ ಸಮಾರಂಭ ನಡೆದಿರುತ್ತದೆ. ಅವನ ಅಹವಾಲು ಕೇಳದೇ ಅಲ್ಲಿ ಭಾಷಣ ಮಾಡಲು ಒತ್ತಾಯ ಹೇರಿದಾಗ, ಆತ ಒಂದೆರಡು ಮಾತು ಹೇಳಿ ಬಿಕ್ಕಿ ಬಿಕ್ಕಿ ಅತ್ತು ಹೊರನಡೆಯುತ್ತಾನೆ. ತಕ್ಷಣ ಅವನನ್ನು ಸಮಾಧಾನ ಪಡಿಸುವ ಪೊಲೀಸ ಅಧಿಕಾರಿ ಸರ್ಕಲ್ ಇನ್ಸಪೆಕ್ಟರ್ ತನ್ನ ಜೀಪಿನಲ್ಲಿ ಅವನನ್ನು ಹತ್ತಿಸಿಕೊಂಡು ಮೇಸ್ತ್ರಿ ವಾವಚ್ಚನ್ ಮನೆಯ ಹತ್ತಿರ ಬರುತ್ತಾರೆ. ಈಶೋನನ್ನು ಪರಿಚಯಿಸುವ, ಅಯ್ಯಪ್ಪ, `ಇವರು ಫಾದರ್ ಕೋರಿಕೆಯ ಮೇರೆಗೆ` ಬಂದಿದ್ದಾರೆ ಎಂದು ತಿಳಿಸುತ್ತಾನೆ.

  ಪೊಲೀಸ್ ಅಧಿಕಾರಿ `ದೂರು ಬಂದಿದೆ’ ಎನ್ನುತ್ತಾ ಶವದ ಹತ್ತಿರ ಸಾಗಿದಾಗ, ಪಟ್ಟನಿಯ ಮಹಿಳೆ ಮತ್ತು ಸಂಗಡಿಗರು `ನೋಡಿ ಸಾರ್, ಸಾಯಿಸಿಬಿಟ್ಟಿದ್ದಾರೆ’ ಎಂದು ಕೂಗಾಡತೊಡಗುತ್ತಾರೆ. `ಪ್ರಕರಣ ದಾಖಲಿಸುತ್ತೀರಾ?’ ಎಂದು ಅಲ್ಲಿಯೇ ಇದ್ದ ವೈದ್ಯ ಪೊಲಿಸ್ ಅಧಿಕಾರಿಯನ್ನು ಕೇಳಿದಾಗ, `ವೈದ್ಯರೆ, ನೀವು ಶವವನ್ನು ಪರೀಕ್ಷಿಸಿದ್ದೀರಾ?’ ಎಂದು ಆತ ಮರುಪ್ರಶ್ನೆ ಹಾಕುತ್ತಾನೆ. `ಹೌದು, ಆತನಿಗೆ ನಾನೇ ಚಿಕಿತ್ಸೆ ನೀಡುತ್ತಿದ್ದೆ. ಅವನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು, ಹೃದಯಕ್ಕೆ ಬದಲಿ ರಕ್ತನಾಳ ಅಳವಡಿಸುವ ಶಸ್ತ್ರ ಚಿಕಿತ್ಸೆಗೆ ಒಳಗಾಗು ಎಂದು ಹೇಳಿದ್ದೆ, ಈಗ ಹೃದಯಾಘಾತದಿಂದ ಸತ್ತಿರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. `ತಲೆಯ ಪೆಟ್ಟು?’ ಎಂದಾಗ, `ಅದು ನೆಲಕ್ಕೆ ಬಿದ್ದಾಗ ಆದ ಚಿಕ್ಕ ಪೆಟ್ಟು’ ಎಂಬ ವೈದ್ಯರ ಮಾತು ಕೇಳಿದ ಪೊಲೀಸ್ ಅಧಿಕಾರಿ, `ನನ್ನ ಆಧೀನ ಅಧಿಕಾರಿಯೂ ಅದನ್ನೇ ಹೇಳಿದ್ದು, ಆದರೆ, ಫಾದರ್ ಹಠ ಹಿಡಿದಿದ್ದಾರೆ, ಸದ್ಯಕ್ಕೆ ಏನನ್ನೂ ಮಾಡಲಾಗದು’ ಎಂದು ಕೈ ಚೆಲ್ಲುತ್ತಾನೆ. `ನೀವು ಮತ್ತು ಫಾದರ್ ನಿಮ್ಮ ನಿಮ್ಮ ಉದ್ಯೋಗದ ಸಮವಸ್ತ್ರದ ಬಟ್ಟೆಗಳನ್ನು ಅದಲುಬದಲು ಮಾಡಿಕೊಳ್ಳಬೇಕು’ ಎಂದು ವೈದ್ಯರು ಬೇಸರದಿಂದ ಗೊಣಗುತ್ತಾರೆ.

 ಪೊಲೀಸರ ಮನವೊಲಿಸುವ ಪ್ರಯತ್ನಗಳೂ ಯಶ ನೀಡದೇ ಹೋದಾಗ, ಈಷೋನಿಗೆ ಹತಾಶೆ ಕಾಡತೊಡಗುತ್ತದೆ. ತಂದೆ ಕರೆದು ವಿಚಾರಿಸಿದಂತಾಗುತ್ತದೆ. ತಾಳ್ಮೆ ತಾಳದ ಆತ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವನಂತೆ ಆಡತೊಡಗುತ್ತಾನೆ. ತಂದೆಯ ಕೊನೆಯ ಆಸೆಯಂತೆ ಅದ್ಧೂರಿ ಸಮಾಧಿ ಮಾಡುವುದಾಗಿ ಮಾತು ಕೊಟ್ಟದ್ದು ಕಣ್ಮುಂದೆ ಬಂದು, ತಾನು ಅದನ್ನು ಪಾಲಿಸಲಾಗುತ್ತಿಲ್ಲವಲ್ಲ ಎಂಬ ನೋವು ತೀವ್ರವಾಗಿ ಕಾಡತೊಡಗುತ್ತದೆ. ಅದ್ಧೂರಿಯ ಶವಯಾತ್ರೆಯ ಮೆರವಣಿಗೆ ದೂರದ ಮಾತು, ಈಗ ಚರ್ಚ ಸಂಸ್ಕಾರದ ಸಮಾಧಿಯೂ ನಡೆಯದಂತಾಗಿದೆ ಎಂಬ ಅನಿಸಿಕೆ ಅವನನ್ನು ಮತ್ತಷ್ಟು ಅಧೀರನನ್ನಾಗಿ ಮಾಡುತ್ತದೆ.

  ಧಾರಾಕಾರವಾಗಿ ಕುಂಭದ್ರೋಣ ಮಳೆ ಸುರಿಯುತ್ತಿರುತ್ತದೆ. ಕೋಪ, ತಾಪ ಹತಾಶೆಗಳಿಂದ ಏನೂ ಮಾಡಲಾಗುತ್ತಿಲ್ಲ ಎಂಬ ನೋವು ಎಲ್ಲವೂ ಮುಪ್ಪರಿಗೊಂಡು ಅವನು ಶುದ್ಧ ಹುಚ್ಚನಂತೆ ಆಗಿಬಿಡುತ್ತಾನೆ. `ಹಂದಿಗಳೇ ದೂರ ಸರಿಯಿರಿ’ ಎಂದು ಬುಸುಗುಟ್ಟುತ್ತಾ ಎಲ್ಲರನ್ನು ತನ್ನ ತಂದೆಯ ಸಮಾಧಿ ಪೆಟ್ಟಿಗೆಯಿಂದ ದೂರ ಸರಿಸುತ್ತಾನೆ. ದೊಣ್ಣೆ ಹಿಡಿದುಕೊಂಡು, ತನಗೆ ತಡೆಯ ಬಂದವರನ್ನೆಲ್ಲಾ ಮನಸೋ ಇಚ್ಛೆ ಹೊಡೆಯುತ್ತಾ ಎಲ್ಲರನ್ನೂ ಶವಪೆಟ್ಟಿಗೆಯಿಂದ ಆಚೆ ದೂರಹೋಗಿ ನಿಲ್ಲುವಂತೆ ಮಾಡುತ್ತಾನೆ.

 ಅವನು ಏನು ಮಾಡುತ್ತಿದ್ದಾನೆ? ಎಂಬುದು ಉಳಿದವರಿಗೆ ಅರ್ಥವಾಗುವ ಮುಂಚೆಯೇ, ತಾಯಿ, ಹೆಂಡತಿ, ಸೋದರಿಯರನ್ನು ಮನೆಯೊಳಗೆ ತಳ್ಳಿ ಚಿಲಕ ಹಾಕುತ್ತಾನೆ. ಪಿಕಾಸಿ ಹಿಡಿದುಕೊಂಡು, ಮನೆಯವರು ಬೇಡ ಬೇಡ ಎಂದು ಕೂಗುತ್ತಿದ್ದರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ಅಂಗಳದಲ್ಲೇ ಗುಣಿ ತೋಡುತ್ತಾನೆ. ತಾನೊಬ್ಬನೇ ಅದರಲ್ಲಿ ತನ್ನ ಶಂದೆಯ ಶವದ ಪೆಟ್ಟಿಗೆಯನ್ನು ಇಳಿಸಿ ಸಮಾಧಿ ಮಾಡುತ್ತಾನೆ! ಮನೆಯಲ್ಲಿ ಬಂದಿಯಾಗಿದ್ದ ಮನೆಯ ಮಂದಿ, ನೆರೆಹೊರೆಯವರು, ನೆಂಟರು, ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದ ಜನ ಅಸಹಾಯಕರಾಗಿ ದೂರ ನಿಂತು ನೋಡುತ್ತಿರುತ್ತಾರೆ. ಎಲ್ಲೆಲ್ಲೂ ವಿಷಾದ ವಿಷಾದವೇ ಹುಚ್ಚೆದ್ದು ಕುಣಿಯುತ್ತದೆ. ಇದೊಂದು ದುರಂತ ಕಥಾನಕ.

 ಈ ಸಿನಿಮಾದ ಕೊನೆಯ ದೃಶ್ಯದಲಿ,್ಲ ಕುಡಿತದ ಹಿನ್ನೆಲೆಯಲ್ಲಿ ಮೃತರಾಗಿ, ಒಬ್ಬರು ನಿಗದಿತ ಚರ್ಚಿನ ಸಮಾಧಿಯಲ್ಲಿ ಸಂಸ್ಕಾರಗೊಂಡಿರುವವ, ಇನ್ನೊಬ್ಬರು ಯಾವ ಸಂಸ್ಕಾರವೂ ಇಲ್ಲದೆ ಮನೆಯ ಮುಂದೆ ಸಮಾಧಿ ಸೇರಿರುವವ - ಇಬ್ಬರನ್ನೂ ಪರಲೋಕಕ್ಕೆ ಕರೆದುಕೊಂಡು ಹೋಗಲು ಎರಡು ದೋಣಿಗಳಲ್ಲಿ ದೇವದೂತರ ಆಗಮನವಾಗುತ್ತದೆ.

 ಎಲ್ಲೆಲ್ಲೂ ನಾಟಕೀಯತೆಯನ್ನು ತೋರುಗಾಣದ ಈ ಸಿನಿಮಾ, ಅದರಲ್ಲಿನ ಸರಳ ನೇರ ನಿರೂಪಣೆಯಿಂದ ನೋಡುಗರನ್ನು ತುಂಬಾ ಸರಳವಾಗಿ ಆಪ್ತವಾಗಿ ಕಾಡತೊಡಗುತ್ತದೆ. ಸುಮಾರು ಹದಿನಾರು ಗಂಟೆಗಳಷ್ಟು ಕಾಲ ನಡೆಯುವ ಸಕಲ ಸಂಗತಿಗಳನ್ನು ಎಳ್ಳಷ್ಟೂ ಬಿಡದೇ ಎರಡು ಗಂಟೆಗಳಲ್ಲಿ ಕಟ್ಟಿಕೊಟ್ಟಿರುವುದು ಇದರ ವಿಶೇಷತೆ. ನಿಜ ಜೀವನದಲ್ಲಿ ನಡೆಯುವಂತೆಯೇ, ಪ್ರತಿಯೊಬ್ಬರ ನಡೆನುಡಿಯಲ್ಲಿ ಆಯಾ ಸಮಯದಲ್ಲಿ ತೆರೆಯ ಮೇಲೆ ಪ್ರತ್ಯಕ್ಷವಾಗುವ ವ್ಯಕ್ತಿಯ ಅಭಿಪ್ರಾಯ, ಅನಿಸಿಕೆಗಳನ್ನು ನಡವಳಿಕೆಗಳನ್ನು ನೇರವಾಗಿಯೇ ಬಿಡಿಸಿಡಲಾಗಿದೆ.

  ಮೇಸ್ತ್ರಿ ವಾವಚ್ಚನ್‍ನಿಂದ ಹೊಡೆತ ತಿಂದು ಅವಮಾನಿತನಾದ ವ್ಯಕ್ತಿ ಸುತ್ತ ಇದ್ದ ನೆರೆಹೊರೆಯವರಲ್ಲಿ ಸಂಶಯದ ಬೀಜ ಬಿತ್ತಿ, ಅದು ಮರವಾಗುವುದರ ಕನಸು ಕಾಣುವ ಪರಿ, ಸಾವಿನಲ್ಲೂ ಪ್ರತಿಕಾರ ಸೇಡಿನ ಸೆಳೆತ ಮಾನವ ಕುತ್ಸಿತ ಮನದ ಅನಾವರಣ. ಮೇಸ್ತ್ರಿ ವಾವಚ್ಚನ್‍ನ ಮಗ ಈಶೋ, ತಂದೆಯನ್ನು ಕಳೆದುಕೊಂಡ ಎಂಬ ವಿಷಯವನ್ನು ಕೊಲೆಯೆಂಬಂತೆ ಬಿಂಬಿಸಿ ಪಾದ್ರಿಗೆ ದಾಟಿಸಿದ ಅದಕ್ಕೂ ಮೊದಲು ಈಶೋನಲ್ಲಿ ಹಣ ಕೇಳಿದ ವ್ಯಕ್ತಿಯ ಪ್ರತಿಕ್ರಿಯೇ ಅದೇ ಧಾಟಿಯದ್ದು. ಎಂದೂ ಚರ್ಚಿಗೆ ಬಾರದ, ತಮಗೆ ಮುಖತೋರದ ವ್ಯಕ್ತಿಯ ಬಗೆಗೆ ಪಾದ್ರಿಗೆ ಸಹಜವಾಗಿಯೇ ಅನಾಸ್ಥೆ ಅನಾದರ ಇದ್ದೇ ಇರುತ್ತದೆ. ತಮ್ಮ ಮೇಲೆ ಮೃತನ ಮಗ ಈಶೋ ಕೈ ಮಾಡಿದಾಗ ಸಿಡಮಿಡಿಗೊಳ್ಳುವ, ಮೃತ ವಾವಚ್ಚನ್‍ಗಾಗಿ ತೋಡಿದ ಗುಣಿಯಲ್ಲಿಯೇ ಇನ್ನೊಬ್ಬನ ಸಮಾಧಿ ಮಾಡಲು ಸಿದ್ಧವಾಗುವ ಪಾದ್ರಿಯ ಮನಸ್ಸು, ಅವರ ಅವರಿಗರಿವಿಲ್ಲದ ತಕ್ಷಣದ ಪ್ರತಿಕ್ರಿಯೆಯ ನಡೆ, ಸೇಡು ತೀರಿಸಿಕೊಳ್ಳುವ ಪರಿಯ ಇನ್ನೊಂದು ಸಾತ್ವಿಕ ಸ್ವರೂಪ ಎಂದರೆ ತಪ್ಪಾಗಲಿಕ್ಕಿಲ್ಲ.

 ಮಾತನಾಡಿಸಿಕೊಂಡು ಹೋಗಲು ಮಗನ ಹೆಂಡತಿಯ ಮನೆಯವರು ಬಂದಾಗ, ಮತ್ತೆ ದುಃಖ ತರಿಸಿಕೊಂಡು ಹೆಣದ ಎದುರಲ್ಲೇ ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಮಾಡಿದ್ದನ್ನು ಪ್ರಸ್ತಾಪಿಸುವ ತಾಯಿಯ ಗೋಳಾಟ, ಸಾವಿನ ಸಮಯದಲ್ಲೂ ನಿರ್ದಯವಾಗಿ ನಡೆದುಕೊಳ್ಳುವ ವೈದ್ಯನ ಹೆಂಡತಿ ಮತ್ತು ದಾದಿಯ ನಡವಳಿಕೆ, ಈ ಸಿನಿಮಾ ನೋಡುವ ಕಥೋಲಿಕ ಕ್ರೈಸ್ತ ಸಮುದಾಯಕ್ಕೆ ಸೇರಿದ ಎಲ್ಲರಿಗೂ ಅವರವರ ಜೀವಮಾನದಲ್ಲೊಮ್ಮೆ ನಡೆದ ಅಥವಾ ನೋಡಿದ ಘಟನೆಗಳ ಪ್ರತಿರೂಪದಂತೆಯೇ ಸಹಜವಾಗಿ ಮೂಡಿಬಂದಿವೆ. ಈ ಸಿನಿಮಾ ನೋಡಿದಾಗ ಒಂದು ಕ್ಷಣ, ಧರ್ಮಸಭೆಯ ಹಿರಿಯ ಅಧಿಕಾರಿಗಳಿಂದ ಚರ್ಚು ಮುಚ್ಚುವ ಶಿಕ್ಷೆಗೆ ಒಳಗಾದ ಬೆಂಗಳೂರಿನ ನಾಗನಹಳ್ಳಿಯ ಕಥೋಲಿಕ ಕ್ರೈಸ್ತ ಕುಟುಂಬಗಳ ಕೆಲವು ಮೃತ ವಿಶ್ವಾಸಿಕರು ಚರ್ಚ ಸಂಸ್ಕಾರದ ಸಮಾಧಿ ಕಾಣದೇ ಹೋದ ಸಂಗತಿ ನೆನಪಿಗೆ ಬಾರದೆ ಇರಲಾರದು. ಧರ್ಮದ ಉದಾತ್ತ ಬೋಧನೆಗಳು ಒಂದು ಕಡೆ ನಿಂತರೆ, ಧರ್ಮದ ವ್ಯವಸ್ಥೆಯ ಕರಿನೆರಳು ಇನ್ನೊಂದು ಕಡೆ ಹೊಂಚುಹಾಕುತ್ತ ನಿಂತಿರುತ್ತದೆಯೋ ಏನೋ? ಇದು ಅರ್ಥವಾಗದ ಸಂಗತಿ..

 ಪಣಜಿಯಲ್ಲಿ 2018ರಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ `ಈ ಮ ಯೊ’ (ಈಷೊ ಮರಿಯಂ ಯೋಸೆಫ್) ಚಿತ್ರದ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಷೆರಿ ಅವರಿಗೆ ಅತ್ತುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ 15 ಲಕ್ಷ ರೂ ನಗದು ಮತ್ತು ರಜತ ಮಯೂರ ಲಾಂಛನ ಒಳಗೊಂಡಿದೆ. ಮಗ ಈಷೊ ಪಾತ್ರ ನಿರ್ವಹಿಸಿದ ನಟ ಚೆಂಬನ್ ವಿನೋದ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಅವರಿಗೂ 10 ಲಕ್ಷ ರೂ ನಗದು ಮತ್ತು ರಜತ ಮಯೂರ ಲಾಂಛನ ನೀಡಲಾಗಿದೆ. ಆಸಕ್ತರು ಈ ಸಿನಿಮಾವನ್ನು ಯೂ ಟೂಬ್, ಅಮೆಜಾನ್ ಪ್ರೈಮ್ ಗಳಲ್ಲಿ ವೀಕ್ಷಿಸಬಹುದು.

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...