Tuesday, 12 June 2018

ಅಭಿನಂದನೆಗಳು





ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಭಾಜನರಾದ
ಶ್ರೀ ಎಫ್ ಎಂ ನಂದಗಾಂವ್‍ರವರಿಗೆ ದನಿ ಬಳಗದಿಂದ ಅಭಿನಂದನೆಗಳು. ನಿಮ್ಮ ಕೈಯಿಂದ ಕನ್ನಡ ಕಥೋಲಿಕ ಸಾಹಿತ್ಯವು ಶ್ರೀಮಂತಗೊಳ್ಳಲಿ ಎಂಬುವುದು ನಮ್ಮ ಹಾರೈಕೆ.
¨ ದನಿ ಬಳಗ


---------------
ಪ್ರತಿದಿನದ ಶುಭಸಂದೇಶ ಮತ್ತು ವಾಚನಗಳ ಆಧಾರಿತ ಚಿಂತನೆ

ಆತ್ಮೀಯರೇ…
ದನಿ ಬಳಗವು ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಕಥೋಲಿಕ ಆರಾಧನಾವಿಧಿ (
Sacred Liturgy) ಗಳಲ್ಲೇ ಬಹುಮುಖ್ಯವಾದುದು ಬಲಿಪೂಜೆ. ಪ್ರತಿದಿನದ ಬಲಿಪೂಜೆಯ ವಾಚನಗಳನ್ನು (೨೦೧೮) ಆಧರಿಸಿಕೊಂಡು ಪುಟ್ಟ ಚಿಂತನೆಯನ್ನು ದನಿ ಇ-ಮಾಸಿಕದ ರೀತಿಯಲ್ಲೇ ವಾಟ್ಸ್ಆಪ್, ಫೇಸ್ಬುಕ್, ಇಮೇಲ್ ಮುಂತಾದ ಸಾಮಾಜಿಕ ಜಾಲಗಳ ಮೂಲಕ ಕ್ರೈಸ್ತರಿಗೆ ಬಿತ್ತರಿಸುವ ಪ್ರಯತ್ನ ಇದಾಗಿದೆ. ಕ್ರಿಸ್ತನ ನುಡಿಗೆ ಕನ್ನಡಿ ಹಿಡಿಯುವ ಈ ಪ್ರಯತ್ನ ನಮ್ಮನ್ನು ಇನ್ನೂ ಹತ್ತಿರವಾಗಿಸಿ ಆತ್ಮೀಯವಾಗಿಸಲೆಂಬುದು ನಮ್ಮ ಆಶಯ. ನಿಮ್ಮ ಸಹಕಾರವಿಲ್ಲದೆ ನಮ್ಮ ಉದ್ದೇಶಗಳ ಈಡೇರಿಕೆ ಕಷ್ಟಸಾಧ್ಯ.
ನಮ್ಮೊಂದಿಗೆ ಸಹಕರಿಸುವುದೆಂದರೆ ನಮ್ಮ ಕ್ರಿಸ್ತದನಿ ಇ-ಪತ್ರಿಕೆಯ ಪ್ರತಿವಾರದ ಸಂಚಿಕೆಗಳನ್ನು ಜನರಿಗೆ ತಲಪಿಸುವ ಕಾರ್ಯದಲ್ಲಿ ನೆರವಾಗುವುದು, ಪ್ರಕಟಿತ ಚಿಂತನೆಗಳನ್ನು ಓದಿ ಧ್ಯಾನಿಸಿ ಅವುಗಳಿಗೆ ಪ್ರತಿಕ್ರಿಯೆ ನೀಡುವುದು ಇತ್ಯಾದಿ.
ಓದುವ ವಲಯವನ್ನು ವಿಸ್ತರಿಸಿಕೊಳ್ಳಲು ಕ್ರಿಸ್ತದನಿ ಹಂಬಲಿಸುತ್ತಿದೆ. ನಿಮ್ಮ ಸಹಕಾರ, ನೆರವು ಮತ್ತು ಪ್ರಕಾಶನದ ಭಾಗವಾಗುವಿಕೆ ನಮ್ಮ ಪ್ರಯತ್ನಗಳ ಬಲವನ್ನು ಹೆಚ್ಚಿಸುತ್ತದೆ. ಬನ್ನಿ ಕನ್ನಡ ಕ್ರೈಸ್ತ ಸಾಹಿತ್ಯವನ್ನು ಪ್ರಗತಿಯ ಉತ್ತುಂಗಕ್ಕೆ ಕರೆದೊಯ್ಯೋಣ.

 {ಒಂದು ವಾರದ ವಾಚನಗಳ ಅಧಾರಿತ ಚಿಂತನೆಗಳನ್ನು pdf format ನಲ್ಲಿ ಪ್ರತಿ ಶನಿವಾರ ವಾಟ್ಸ್ಆಪ್, ಫೇಸ್ಬುಕ್, ಇಮೇಲ್ ಮೂಲಕ ನಿಮಗೆ ಕಳುಹಿಸಿಕೊಡಲಾಗುವುದು}
ದನಿ ಬಳಗ

-----

ನೀವೂ ನಮ್ಮೊಂದಿಗಿರಿ...
 ಇ-ಮಾಸಿಕ ಸಂಬಂಧಿಸಿ 200 ಪದಗಳಿಗೆ ಮೀರದಂತೆ ನಿಮ್ಮ ಅಭಿಪ್ರಾಯ ಬರೆದು ಕಳುಹಿಸಿ. ಜತೆಗೆ ಈ ಮಾಸಿಕ ಪತ್ರಿಕೆಗೆ ನಿಮ್ಮ ಲೇಖನಗಳನ್ನು ಕಳುಹಿಸುವುದಿದ್ದರೆ, ನಿಮ್ಮ ಬರಹ ಇಮೇಲ್‍ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಇರಲಿ. ನಿಮ್ಮ ಬರಹದ ಜೊತೆಗೆ ಅಗತ್ಯವಾಗಿ ನಿಮ್ಮ ವಿಳಾಸ/ ದೂರವಾಣಿ ಸಂಖ್ಯೆಯೂ ಇರಲಿ.
ನಮ್ಮ ವಿಳಾಸ:
jeevadani2016@gmail.com
ಮೊಬೈಲ್ ಸಂಖ್ಯೆ: +919483493620

-----

ನೀವೂ ಬರೆಯಿರಿ

ನನ್ನ ನೆಚ್ಚಿನ ಫಾದರ್....

ನಿಮಗೆ ಇಷ್ಟವಾದ ಫಾದರ್ ಬಗ್ಗೆ ಸುಮಾರು ೧೫೦೦ ಪದಗಳ ಮಿತಿಯಲ್ಲಿ ಲೇಖನಗಳನ್ನು ಬರೆದು ಬೆರಳಚ್ಚು ಮಾಡಿ ಇಮೇಲ್ ಮೂಲಕ ನಮಗೆ ಕಳುಹಿಸಿಕೊಡಿ. ಉತ್ತಮ ಬರಹಕ್ಕೆ ಆಕರ್ಷಕ ಬಹುಮಾನವಿರುವುದು ಮತ್ತು ಆಯ್ದ ಲೇಖನಗಳನ್ನು ದನಿ ಇ-ಮಾಸಿಕದಲ್ಲಿ ಪ್ರಕಟಿಸಲಾಗುವುದು

ನಮ್ಮಇಮೇಲ್ ವಿಳಾಸ.

jeevadani2016@gmail. Com

ವಾಟ್ಸ್ ಆಪ್ ಸಂಖ್ಯೆ : +919483493620



ಸುಂದರಿ ಮತ್ತು ಸಿಂಹದ ಕಥೆ. . .

ಒಂದು ಸಿಂಹ ಇತ್ತು. ತನ್ನ ಗತ್ತು, ಶೌರ್ಯ, ಗಾಂಭೀರ್ಯಗಳಿಂದ ಇಡೀ ಕಾಡನ್ನು ಹತೋಟಿಯಲ್ಲಿಟ್ಟುಕೊಂಡು ಮೃಗರಾಜನಾಗಿ ಮೆರೆಯುತ್ತಿತ್ತು. ಇಂಥ ಧೀರ ಸಿಂಹ ಒಮ್ಮೆ ಅಪರೂಪದ ಸುಂದರಿಯೊಬ್ಬಳನ್ನು ಕಂಡು ಮನಸೋತುಬಿಟ್ಟಿತು. ಆ ಸುಂದರಿ ತನಗೆ ಬೇಕೇ ಬೇಕು. ಆದರೆ ಹೋಗಿ ಕೇಳದೆ ಅವಳಾಗಿ ಬರುವುದುಂಟೇ? ಸರಿ, ಸಿಂಹ ಸುಂದರಿಯ ಹತ್ತಿರ ಹೋಗಿ 'ನನಗೆ ನೀನು ಬೇಕು' ಅಂತು. 
ಸುಂದರಿ ಅಷ್ಟು ಸುಲಭಕ್ಕೆ ಮಣಿಯುವವಳಲ್ಲ. "ನನಗೆ ನಿನ್ನ ಆಕಾರ, ಉಗುರು ಹಲ್ಲು ನೋಡಿದರೆ ಭಯವಾಗುತ್ತೆ. ನೀನು ನಿನ್ನ ಹಲ್ಲು, ಉಗುರುಗಳನ್ನೆಲ್ಲ ಕಿತ್ತು ಬಂದರೆ ನಾನು ಒಲಿಯಬಹುದು" ಅಂದಳು. ಸರಿ, ಸಿಂಹ ಉಗುರು ಹಲ್ಲು ಎಲ್ಲ ಕಿತ್ತುಕೊಂಡು ಸುಂದರಿಯ ಹತ್ತಿರ ಬಂತು. ಸುಂದರಿ ಆಗಲೂ ಪ್ರಸನ್ನಳಾಗಲಿಲ್ಲ. "ನಿನ್ನ ಕೇಶ ನೋಡಿದರೂ ನನಗೆ ಹೆದರಿಕೆ. ಅದನ್ನೂ ಬೋಳಿಸಿಕೊಂಡು ಬಾ" ಎಂದು ತಾಕೀತು ಮಾಡಿದಳು. ಇಷ್ಟೇ ಮಾಡಿಯಾಗಿದೆ, ಇನ್ನು ಕೇಶ ಒಂದಕ್ಕೆ ಚೌಕಾಶಿಯೇ? ಸಿಂಹ ಅದನ್ನೂ ಬೋಳಿಸಿಕೊಂಡು ಸುಂದರಿಯ ಬಳಿ ಬಂತು. 
ಆದರೆ ಈಗ ಸುಂದರಿ ಪ್ಲೇಟ್ ಚೇಂಜ್ ಮಾಡಿಬಿಟ್ಟಳು! ’ನನಗೂ ನಿನಗೂ ಎಲ್ಲಿಯ ಹೊಂದಾಣಿಕೆ? ನೀನು ನನಗೆ ಬೇಡವೇ ಬೇಡ’ ಅಂದುಬಿಟ್ಟಳು. ಸಿಂಹ ತಬ್ಬಿಬ್ಬಾಯಿತು. ಪರಿಪರಿಯಾಗಿ ಬೇಡಿಕೊಂಡಿತು. ಅವಳು ಒಪ್ಪಲಿಲ್ಲ. ಕಡೆಗೆ ಸಿಂಹ ಕೇಳಿತು - "ನಾನು ನಿನಗೆ ನಿಜಕ್ಕೂ ಬೇಡವಾಗಿದ್ದರೆ ಮೊದಲೇ ಹೇಳಬಹುದಿತ್ತಲ್ಲ? ಆಗ ನನ್ನ ಹಲ್ಲು ಉಗುರುಗಳಾದರೂ ಉಳಿಯುತ್ತಿತ್ತು?" ಆಗ ಸುಂದರಿ ಹೇಳುತ್ತಾಳೆ-"ಹೌದು, ಮೊದಲೇ ನಾನು ನಿರಾಕರಿಸಿದ್ದರೆ ನೀನು ನನ್ನನ್ನು ಕೊಂದು ಹಾಕುತ್ತಿದ್ದೆ. ಅದಕ್ಕೇ ಹಲ್ಲು ಉಗುರು ಕೀಳಲು ಹೇಳಿದ್ದು. ಈಗ ನೀನೇನೂ ಮಾಡಲಾರೆ. . . "
ಅಧಿಕಾರ ರಾಜಕಾರಣದ ಸುಂದರಿ, ಜನಾಂದೋಲನವೆಂಬ ಸಿಂಹವನ್ನು ಆಕರ್ಷಿಸುತ್ತದೆ. ಆದರೆ ಹತ್ತಿರ ಬಂದೊಡನೆ ಸಿಂಹದ ಶಕ್ತಿ, ಸ್ವರೂಪಗಳನ್ನೇ ಕಿತ್ತುಕೊಂಡು ಬೀದಿಪಾಲು (ಕಾಡುಪಾಲು?) ಮಾಡುತ್ತದೆ. ಹೀಗೆ ಅಧಿಕಾರ ಕೇಂದ್ರದ ಹತ್ತಿರ ಬಂದಾಗಲೆಲ್ಲ ಚಳವಳಿಯ ನಿರ್ದಾಕ್ಷಿಣ್ಯ ಸ್ವಾತಂತ್ರ್ಯಕ್ಕೆ ಮಸಿ ಹಿಡಿಯುತ್ತಲೇ ಇರುತ್ತದೆ. 

(ಕೃಪೆ: ಎನ್. ಎಸ್. ಶಂಕರ್ ಅವರ 'ಹುಡುಕಾಟ' ಪುಸ್ತಕದಿಂದ)





ದನಿರೂಪಕ


ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ…
ದಕ್ಷಿಣ ಅಮೆರಿಕ ಹಾಗು ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ಸಾಕ್ಷಿಯಾಗಿ ನೆರೂಡನ ಕವಿತೆಗಳು ಸೃಷ್ಟಿಯಾದವು. ಎಲ್ಲೇ ಹೋದರೂ, ಯಾವ ಹುದ್ದೆಯನ್ನೇ ನಿರ್ವಹಿಸುತ್ತಿದ್ದರೂ ಆತ ಕವಿತೆ ಬರೆಯುವುದು ನಿಲ್ಲಿಸಲಿಲ್ಲ. ಯಾವ ನೆಲದಲ್ಲಿದ್ದನೋ ಅಲ್ಲಿಯ ಸಾರ ಸತ್ವ, ಸಂಕಟಗಳನ್ನೆಲ್ಲ ಹೀರಿಕೊಂಡು ಕವಿತೆ ಬರೆದ ಎಂದೇ ಜನವಿರೋಧಿ ಆಳ್ವಿಕರಿಗೆ ಅವು ಅಪಾಯಕಾರಿಯಾಗಿ ಕಂಡವು. ಒಮ್ಮೆ ಚಿಲಿಯ ಪೋಲಿಸರಿಂದ ಅವನ ಮನೆ ತಪಾಸಣೆಗೊಳಗಾದಾಗ, “ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ” ಎಂದು ಹೇಳಿದ.

ಕವಿಗೇಕೆ ಬೊಂಬೆ?
ಕಪ್ಪುಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಅವನಲ್ಲಿದ್ದವು. ಕವಿಗೇಕೆ ಗೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ”
ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಕಿಚ್ಚಿ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು” ಎಂದು ಹೇಳಿದ. ಜನಪರ ಹೋರಾಟಗಾರನೊಬ್ಬ ಇದಕ್ಕಿಂತ ಉದಾತ್ತವಾಗಿ ತನ್ನ ನೆಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

(ಪಾಬ್ಲೊ ನೆರೂಡ ನೆನಪುಗಳು – ಆತ್ಮಕತೆ, ಕನ್ನಡಕ್ಕೆ ಓ.ಎಲ್.ನಾಗಭೂಷಣ ಸ್ವಾಮಿ)
¨ ಅನು


ನಾ ಬದುಕಿದ ಬದುಕು


ಹರಿಯದೆ ನಿಂತ ಕೊಳಕು ತುಂಬಿದ
ಹಳ್ಳದ ನೀರು ನನ್ನ ಬದುಕು
ಬೇರು ರೆಂಬೆಗಳ ನುಸುಳಿನ ಮುಗ್ಗುಲ್ಲಲೇ
ಬೆಳೆಯ ಬಿಡಬಾರದಿತ್ತು ಸೋಗೆ
ನಾ ಬದುಕಿದ ಬದುಕು

ನನ್ನೀ ಕೈ ಬೇಡಿಗಳಾದವು
ಕೊಳಚೆ ಅನ್ಯಾಯದ ಹೃದಯ ಸ್ಥಾವರಗಳು
ಇವುಗಳ ದಾಟಿ
ಬೇರು ಕವಲುಗಳ ಮೀಟಿ
ನಾ ಬದುಕಿದ ಬದುಕು

ನನ್ನ ಕಣ್ಣೀರೇ ನನ್ನ ಹಾಸಿಗೆ
ನನ್ನ ಬಾಹು ಹುಳುಕೀಟಗಳ ಅಂಗಳ
ಕೆಸರು ನನ್ನ ಮೃಷ್ಟಾನ್ನ
ತಾಯ್ಕೊಂಡಿ ನನ್ನ ಜೀವ ಸಂಚಲನ
ನಾ ಬದುಕಿದ ಬದುಕು

ನನ್ನ ಮೈಯ ಕೊಳಕು ಕಂಡ ಮನಗಳು
ಅರಳುವುದಿರಲಿ ಉಗುಳಿ ದೂಡಿದರು
ನನ್ನ ನೆತ್ತರು ಕೊರಗುವುದರಲ್ಲಿ
ಸೂರ್ಯನು ಪಶ್ಚಿಮದೊಳು ನನ್ನ ಮೆಚ್ಚಿದನು
ನಾ ಬದುಕಿದ ಬದುಕು

ಬೆಚ್ಚನೆ ರವಿಯ ಕಿರಣ ಲಾಲಿತ್ಯ
ದೂಡಲಿಲ್ಲ ನನ್ನ. . . ಭೇದಿಸಲಿಲ್ಲ ಎಂದೂ. . .
ನನ್ನ ರೆಕ್ಕೆ ಮೈಮನಗಳ ಅರಳಿಸುತ್ತಾ
ನಲಿವು ಮೂಡಿಸಿತು ನವೀನ ಮಿತ್ರನಿಗೆ
ನಾ ಬದುಕಿದ ಬದುಕು

ಕೂಡಿದವು ಕಾಂತಿಯೊಳು ಮೈ ಬಣ್ಣ
ದೆನು ದೇವತೆಗಳ ಸನ
ಹುಟ್ಟಿದ್ದು ಕೊಳಚೆಯಾದರೂ
ಕರೆದರು ಸೊಬಗಿನೊಳು ಅರಳಿದ ಕಮಲ
ನಾ ಬದುಕಿದ ಬದುಕು
¨ ನವೀನ್ ಮಿತ್ರ, ಬೆಂಗಳೂರು


ಕೊನೇ ಮಾತು. . .




ಕತಾರು, ಮತ್ಯಾರು?


ಕಳೆದ ಕ್ರಿಸ್ತಜಯಂತಿಯ ಹೊತ್ತಲ್ಲಿ ಕತಾರ್ ದೇಶವನ್ನು ಸುತ್ತಿ ಬರುವ ಅವಕಾಶ ಸಿಕ್ಕಿತು. ಬೆಂಗಳೂರಿನಿಂದ ಐದಾರು ಗಂಟೆಗಳ ಪಯಣ. ವಿಮಾನದಲ್ಲಿ ಕೇಳಿದ್ದೆಲ್ಲವನ್ನೂ ಕೊಡುತ್ತಾರೆ ಎಂಬ ಮಾಹಿತಿ ನಂಬಿ ಕುಳಿತರೆ, ಎದುರಾಗಿದ್ದು ಗುಲಗಂಜಿ. ಮತ್ತೊಮ್ಮೆ ಕೇಳಲು ಸಂಕೋಚ. ಹಾಗಾಗಿ ಅರ್ಧಹೊಟ್ಟೆ! ಕತಾರಿನ ಸಮಯ ಭಾರತಕ್ಕಿಂತ ಎರಡೂವರೆ ತಾಸು ಹಿಂದಿದೆ. ಹಾಗಾಗಿ ನಿದ್ದೆಯಲ್ಲಿ ವ್ಯತ್ಯಾಸವಾಯಿತು. ಸಂಜೆ ನಾಲ್ಕಕ್ಕೆಲ್ಲಾ ಕತ್ತಲು ಕವಿಯುತ್ತಿತ್ತು. ಬೆಳಗ್ಗೆ ಬೇಗನೆ ಬೆಳಗು. ಹನ್ನೊಂದಕ್ಕೆಲ್ಲಾ ಸುಡುಬಿಸಿಲು. ದಾರಿ ಬಿಕೋ ಎನ್ನುತ್ತಿತ್ತು. ನಮ್ಮೂರಿನ ಹಾಗೆ ಕಿಕ್ಕಿರಿದ ಜನಸಂದಣಿಯಿಲ್ಲ. ಜನ ನೋಡಬೇಕೆಂದರೆ ಅಲ್ಲಿನ ಬೆಂಕಿಪೆಟ್ಟಿಗೆಗಳಂಥ ಲೇಬರ್ ಕ್ಯಾಂಪುಗಳನ್ನು ಸುತ್ತಿ ಬರಬೇಕು. ಇಲ್ಲವೇ ಮಾಲ್ ಗಳನ್ನು ಹತ್ತಿಳಿಯಬೇಕು. ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ, ಮಿಕ್ಕ ಮನೆಗಳೆಲ್ಲಾ ಒಂದು ಮಹಡಿಯವೇ ಹಾಗೂ ಇಂತಿಷ್ಟು ವರ್ಷಗಳಲ್ಲಿ ನೆಲಸಮ ಮಾಡಬೇಕೆಂಬ ಷರತ್ತಿದೆ. ಎಲ್ಲ ಮನೆಗಳಿಗೂ ಸಾಮಾನ್ಯವಾಗಿ ಒಂದೇ ಬಣ್ಣ. ಎತ್ತರದ ಕಾಂಪೌಂಡು ಗೋಡೆ. ಕತಾರಿನಲ್ಲಿ ಕತ್ತಲು ಬೆಳಕು ಎನ್ನುವ ವ್ಯತ್ಯಾಸವಿಲ್ಲ. ಬಹುತೇಕ ಎಲ್ಲಾ ಕಟ್ಟಡಗಳು ನೀಲಿ, ಹಳದಿ, ಕೆಂಪು, ಹಸಿರು ಇನ್ನಿತ್ಯಾದಿ ಬಣ್ಣಗಳಿಂದ ನೂರ್ಕಾಲ ಝಗಮಗಿಸುತ್ತಾ ಇರುತ್ತವೆ. ನಗರದ ಒಂದು ಕಡೆಯಲ್ಲಿ ನಿಂತು ನೋಡಿದರೆ ಅರ್ಧರಾತ್ರಿಯಲ್ಲೂ ಅರ್ಧ ಫರ್ಲಾಂಗುವರೆಗೆ ಸ್ಪಷ್ಟ ಕಾಣುವಷ್ಟು ಬೆಳಕಿದೆ. ಕರ್ನಾಟಕದಷ್ಟೇ ವಿಸ್ತೀರ್ಣ ಹೊಂದಿದ್ದರೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಕತಾರ್.
ಇತ್ತೀಚಿನ ಬೆಳವಣಿಗೆಗಳಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಾಗ, ಇಡೀ ಕತಾರ್ ದೇಶವೇ ನಾವಿದ್ದೇವೆಎಂದು ಅಲ್ಲಿನ ರಾಜಕುಮಾರರಿಗೆ ನೈತಿಕ ಬೆಂಬಲ ನೀಡಿತು. ಅದರ ಪರಿಣಾಮವಾಗಿ ಮನೆಗಳಲ್ಲಿ, ಮಹಲ್ಲುಗಳಲ್ಲಿ, ಅಂಗಡಿಗಳಲ್ಲಿ, ಟ್ಯಾಕ್ಸಿಗಳ ಮೇಲೆ, ಎಲ್ಲೆಂದರಲ್ಲಿ ರಾಜಕುಮಾರನ ಚಿತ್ರ ಅಂಟಿಸಿದ್ದಾರೆ. ತರದ ನೈತಿಕ ಬೆಂಬಲ ದೊರೆತ ಮೇಲೆ ಪ್ರಪಂಚದ ಬೆಂಬಲವಿಲ್ಲದಿದ್ದರೂ ಕತಾರ್ ಎಂದಿನದೇ ಸ್ಥಾನದಲ್ಲಿದೆ.
ಕತಾರಿನ ದೋಹಾ ಎಂಬಲ್ಲಿ ಜಪಮಾಲೆ ಮಾತೆಯ ದೇವಾಲಯವಿದೆ. ನಾವು ಚರ್ಚುಗಳನ್ನು ಶಿಲುಬೆ ನೋಡಿ ಗುರುತು ಹಿಡಿಯುತ್ತೇವಲ್ಲಾ, ಅಲ್ಲಿ ಚರ್ಚುಗಳ ಮೇಲೆ ಶಿಲುಬೆ ಇರುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಬಲಿಪೀಠದ ಬಳಿಯಲ್ಲಿರುವ ದೇವದಂಡವನ್ನು ಹೊರತುಪಡಿಸಿದರೆ ಎಲ್ಲಿಯೂ ಶಿಲುಬೆಯ ಸುಳಿವಿಲ್ಲ. ಭಕ್ತಾದಿಗಳು ಶಿಲುಬೆ ಗುರುತು ಹಾಕುವಾಗ ಮಾತ್ರ ಶಿಲುಬೆ ಎಲ್ಲರಲ್ಲೂ ಕಾಣುತ್ತದೆ. ಅವಶ್ಯ ಭದ್ರತೆಯ ಮೇರೆಗೆ ಪ್ರಾರ್ಥಿಸಲು, ಬಲಿಪೂಜೆ ಸಲ್ಲಿಸಲು ಚರ್ಚುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಂಗ್ಲ, ಫಿಲಿಪ್ಪಿಯನ್, ಅರಬ್ಬಿ ಮುಂತಾದ ಭಾಷೆಗಳ ಜೊತೆಯಲ್ಲಿ, ಮಲಯಾಳಂ ಸಹ ಇದೆ. ಶುಭಸಂದೇಶ ಓದುವಾಗ ಮೇಣದ ಬತ್ತಿಯ ಬೆಳಕಿರುತ್ತದೆ. ಶಾಂತಿ ಕೋರುವಾಗ ಅಕ್ಕಪಕ್ಕದವರಿಗೆ ಮಾತ್ರವಲ್ಲದೆ, ತಮ್ಮ ಸುತ್ತಮುತ್ತ ಇರುವ ಎಲ್ಲರಿಗೂ ಶಾಂತಿ ಕೋರಿದ್ದು ವಿಶೇಷವಾಗಿ ತೋರಿತು. ದೇವಾಲಯದಲ್ಲಿ ಶಿಶು ಹಾಗೂ ತಾಯಂದಿರಿಗಾಗಿ ಪ್ರತ್ಯೇಕ ಏಂಜೆಲ್ ರೂಮ್ಕೊಠಡಿ ಇದೆ. ಚಿಕ್ಕ ಕೆಫೆಟೇರಿಯವೂ, ಶೌಚಾಲಯವೂ ಇದೆ. ಲೂರ್ದುಮಾತೆಯ ಗವಿಯಲ್ಲಿ ನೀರ ಹರಿವು ಸದಾಕಾಲ ಇತ್ತು. ಬಲಭಾಗದಲ್ಲಿ ಮೇಣದ ಬತ್ತಿ ಹಚ್ಚಿಡಲು ವ್ಯವಸ್ಥೆಯಿತ್ತು. ಗಾಳಿಗೆ ದೀಪ ಆರಿ ಹೋಗದಂತೆ ಗಾಜಿನ ಕಿಟಕಿ ಇತ್ತು.

¨ ಸಮೀಶಾ


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...