ಶ್ರೀಯುತ ನಾ.ಡಿಸೋಜ ಕರ್ನಾಟಕದ ಅಗ್ರಗಣ್ಯ ಸಾಹಿತಿಗಳಲ್ಲೊಬ್ಬರು. ಇವರು ಕಿಟೆಲ್'ರವರ ನಂತರ ಕನ್ನಡ ಸಾಹಿತ್ಯಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದ ಕ್ರೈಸ್ತ ಸಾಹಿತಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಕ್ರೈಸ್ತ ಧರ್ಮದ ಆಚಾರ ವಿಚಾರಗಳು, ಸಂಸ್ಕೃತಿ, ಬದುಕು, ಶೈಲಿ, ಸವಾಲುಗಳು, ತಲ್ಲಣಗಳು, ಮುಗ್ಧತೆ, ಹತಾಶೆ, ಮೌನ ಇನ್ನು ಮುಂತಾದ ಆಯಾಮಗಳನ್ನು ತಮ್ಮ ಕಾದಂಬರಿಗಳ ಚೌಕಟ್ಟನ್ನಾಗಿರಿಸಿಕೊಂಡಿರುವ ನಾ.ಡಿಸೋಜರವರು ಸುಮಾರು 110ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಕಾದಂಬರಿಗಳು ಇಂಗ್ಲಿಷ್, ತಮಿಳು, ಮರಾಠಿ ಮತ್ತು ಇತರ ಭಾಷೆಗಳಿಗೂ ಅನುವಾದಗೊಂಡಿವೆ. ದ್ವೀಪ, ಸುಣ್ಣ ಬಳಿದ ಸಮಾಧಿಗಳು, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ನೆಲೆ, ಮುಳುಗಡೆ, ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ತ್ರಿಕೋನ ಇವರ ಪ್ರಧಾನ ಕೃತಿಗಳು. 80ರ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಶ್ರೀಯುತರು ಮೊನ್ನೆ ಶಿವಮೊಗ್ಗದ ಸಾಗರದಲ್ಲಿ ಮಾತಿಗೆ ಸಿಕ್ಕರು. ನನ್ನ ಮತ್ತು ಅವರ ನಡುವೆ ಸುಮಾರು ಒಂದು ಗಂಟೆಯ ಕಾಲ ನಡೆದ ಸಂಭಾಷಣೆಯನ್ನು ಸಂದರ್ಶನದ ರೂಪದಲ್ಲಿ ಯಥಾವತ್ತಾಗಿ ನಿರೂಪಿಸಲು ಪ್ರಯತ್ನಿಸಿದ್ದೇನೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.
ಸಹಕಾರ: ಗೆಳೆಯ, ಸುಜಯ್ ಕಾಣಿಕ್ ರಾಜ್
ಪ್ರಶ್ನೆ: ಸರ್, ನಮಸ್ಕಾರ! ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷ. ನಿಮ್ಮ ಸಾಹಿತ್ಯದ ಪಯಣ ಪ್ರಾರಂಭವಾಗಿದ್ದು ಯಾವಾಗ ಎಂದು ನಮ್ಮೊಂದಿಗೆ ಹಂಚಿಕೊಳ್ಳುವಿರಾ?
ನಾ.ಡಿಸೋಜ: ನಮಸ್ಕಾರ! ನೀವು ಬಂದಿದ್ದು ಬಹಳ ಸಂತೋಷ. ಮೊದಲಿಗೆ, ನಾನು ಹುಟ್ಟಿದ್ದು ೧೯೩೭ರಲ್ಲಿ. ನನ್ನ ಸಾಹಿತ್ಯ ಕೃಷಿ ಆರಂಭವಾಗಿದ್ದು ೧೯೫೩ರಲ್ಲಿ. ಪ್ರಾರಂಭದಲ್ಲಿ ಸಣ್ಣ ಕಥೆ, ಕವನಗಳನ್ನು ಬರೆಯುತ್ತಿದ್ದೆನಾದರೂ, ನಾನು ಪೂರ್ಣ ಪ್ರಮಾಣದ ಲೇಖಕನಾಗಿದ್ದು ಮಾತ್ರ ೧೯೫೯ರಲ್ಲಿ.
ಪ್ರಶ್ನೆ. ನಿಮ್ಮ ಮೊದಲ ಕಾದಂಬರಿ ಯಾವುದು? ಅದಕ್ಕೆ ಮೂಲ ಪ್ರೇರಣೆ ಏನು?
ನಾ.ಡಿಸೋಜ: ನನ್ನ ಮೊದಲ ಕಾದಂಬರಿ "ಬಂಜೆ ಬೆಂಕಿ." ನಾನು ಈ ಕಾದಂಬರಿ ಬರೆಯಲು ಕಾರಣ, ಸುಮಾರು ೫೦ ವರ್ಷಗಳ ಹಿಂದೆ ನಡೆದ ಒಂದು ಘಟನೆ. ನಾನು ಆಗ ಶರಾವತಿ ಡ್ಯಾಂ ಪ್ರಾಜೆಕ್ಟ್'ನಲ್ಲಿ ಸ್ಟೆನೋಗ್ರಾಫರಾಗಿ ಕೆಲಸ ಮಾಡುತ್ತಿದ್ದೆ. ಆಗ ಒಂದು ಹುಡುಗಿ, ನೋಡನೋಡುತ್ತಿದ್ದಂತೆಯೇ ಶರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು. ಆಗ ನನ್ನನ್ನು ಬಹಳವಾಗಿ ಕಾಡಿದ್ದು ಆ ಚಿಕ್ಕ ವಯಸ್ಸಿನಲ್ಲಿ ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಕಾರಣವಾದರೂ ಏನು ಅಂತ. ಮನಸ್ಸಿನಲ್ಲಿ ಎಡೆಬಿಡದೆ ಕೊರೆಯುತ್ತಿದ್ದ ಪ್ರಶ್ನೆಗಳೇ ಆ ಕಾದಂಬರಿಯ ಕಥಾವಸ್ತುವಾಗಿ ಮಾರ್ಪಟ್ಟಿತು.
ಪ್ರಶ್ನೆ: ನೀವು ಪ್ರಧಾನವಾಗಿ ಬರೆದಿದ್ದು ಕ್ರೈಸ್ತ ಧರ್ಮದ ಜನಜೀವನದ ಮೇಲೆ. ಈ ನಿಟ್ಟಿನಲ್ಲಿ ನಿಮ್ಮ ಕೃತಿಗಳನ್ನು ಪ್ರಕಟಿಸುವ ವೇಳೆ ನೀವು ಎದುರಿಸಿದ ಸವಾಲುಗಳು ಯಾವುವು? Was publishing your works a cakewalk or...?
ನಾ.ಡಿಸೋಜ: ಕೃತಿಗಳನ್ನು ಪ್ರಕಟಿಸುವುದು ಸುಲಭದ ಕೆಲಸವೇನಲ್ಲ. ಎಷ್ಟೋ ಬಾರಿ ಪ್ರಕಾಶಕರು ನನ್ನ ಕಾದಂಬರಿಗಳನ್ನು ಪ್ರಕಟಿಸುವುದಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿರುತ್ತವೆ. ಹಾಗಾಗಿ ಒಬ್ಬ ಪ್ರಕಾಶಕ ಅವನಿಗಾಗುವ ಲಾಭ ನಷ್ಟಗಳನ್ನು ಪರಿಗಣಿಸಿ ಮುಂದಿನ ಹೆಜ್ಜೆ ಇಡುತ್ತಾನೆ.
ಪ್ರಶ್ನೆ: ನೀವು ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಎಂಬುದು ತಿಳಿದಾಗ ಯಾವ ರೀತಿ ಪ್ರತಿಕ್ರಿಯಿಸಿದಿರಿ?
ನಾ.ಡಿಸೋಜ: ಆ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಆ ಸಮ್ಮೇಳನ ನಡೆದಿದ್ದು ಮಡಿಕೇರಿಯಲ್ಲಿ. ವಿಷಯ ತಿಳಿದ ನಂತರ ಸಾಕಷ್ಟು ಜನ ಮನೆಗೆ ಬಂದು ಶುಭಕೋರಿದರು. ರಾಜಕಾರಣಿಗಳೂ ಬಂದರು. ನಮ್ಮ ಮನೆಯ ಅಕ್ಕಪಕ್ಕದಲ್ಲಿ ಹಾಗು ಊರಿನಲ್ಲಿ ಸಂಭ್ರಮದ ವಾತಾವರಣ ಇತ್ತು.
ಪ್ರಶ್ನೆ: ಚರ್ಚಿನ ವಿಷಯಕ್ಕೆ ಬರೋಣ. ಭಾರತದ ಚರ್ಚು, ಅದರಲ್ಲೂ ಕರ್ನಾಟಕದ ಧರ್ಮ ಸಭೆ ಕೇವಲ ಮೇಲ್ವರ್ಗದವರ ಹಿಡಿತದಲ್ಲಿದೆ. ಈ ಬಗ್ಗೆ ನೀವೇನಂತೀರಿ?
ನಾ.ಡಿಸೋಜ: ಹೌದು. ಚರ್ಚು ಬಹುತೇಕ ಬ್ರಾಹ್ಮಣಶಾಹಿಯ ಹಿಡಿತದಲ್ಲಿದೆ. ಈ ಹಿಂದೆ ಸಾಹಿತ್ಯ ಅಕಾಡೆಮಿ ಕ್ರೈಸ್ತರ ಸ್ಥಿತಿಗತಿಗಳ ಬಗ್ಗೆ ಸಂಶೋಧನೆ ಮಾಡುತ್ತಿರುವ ಸಂಶೋಧಕರ ವಿಚಾರಗೋಷ್ಠಿಗೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಅಲ್ಲಿ ನಾನು ಹೇಳಿದ್ದೂ ಇದನ್ನೆ. ಕೊಂಕಣಿ ಮಾತಾಡುವವರು ಮಾತ್ರ ಕ್ರೈಸ್ತರು ಎಂಬ ತಪ್ಪು ಅಭಿಪ್ರಾಯ ಈಗಲೂ ಚಾಲ್ತಿಯಲ್ಲಿದೆ. ಈ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೋರಾಡಬೇಕಿದೆ.
ಪ್ರಶ್ನೆ: ಕರ್ನಾಟಕದಲ್ಲಿ ಕನ್ನಡ ಬಲಿಪೂಜೆ ಕೇಳುವುದು ತಪ್ಪೇ?
ನಾ.ಡಿಸೋಜ: ಕನ್ನಡ ನೆಲದಲ್ಲಿ ಕನ್ನಡವೇ ಪ್ರಧಾನ. ಕನ್ನಡದಲ್ಲಿ ಪೂಜೆ ಕೇಳುವುದು ನಮ್ಮ ಹಕ್ಕು. ಕನ್ನಡ ಕ್ರೈಸ್ತರು ಕರ್ನಾಟಕದಲ್ಲಿ ಇತರೆ ಯಾವುದೇ ಭಾಷೆಯಲ್ಲಿ ಪೂಜೆ ನಡೆಯುತ್ತಿದ್ದರೆ, ನಮ್ಮ ಪ್ರಾರ್ಥನೆಯ ಉತ್ತರಗಳು ಮಾತ್ರ ಕನ್ನಡದಲ್ಲಿಯೇ ಇರಬೇಕು. ಈ ರೀತಿಯಲ್ಲಿ ನಾವು ಮುಂದುವರಿದರೆ ನಮ್ಮ ಗುರಿ ತಲುಪಲು ಸಾಧ್ಯ. ನನ್ನ ಪ್ರಕಾರ ಇದೇ ಈ ಸಮಸ್ಯೆಗೆ ಪರಿಹಾರ.
ಪ್ರಶ್ನೆ: ೫೦ ವರ್ಷಗಳಿಗೂ ಹೆಚ್ಚಿನ ಕಾಲ ನೀವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದೀರಿ. ಅನೇಕ ಬಾರಿ ನಿಮಗೆ ಪ್ರಶಸ್ತಿಗಳು ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಸಹ ಲಭಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ನಾ.ಡಿಸೋಜ: ಮಕ್ಕಳ ಸಾಹಿತ್ಯಕ್ಕೆ ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರ ಲಭಿಸಿದೆ. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳೂ ಬಂದಿದೆ. ನನ್ನ ಕಾದಂಬರಿಗಳು ಸಮಾಜದಲ್ಲಿನ ಹುಳುಕು ಹಾಗು ರೋಗಗಳಿಗೆ ಚಿಕಿತ್ಸೆಯಾಗಲಿ ಎಂಬ ಉದ್ದೇಶದಿಂದ ನಾನು ಇಷ್ಟೂ ವರ್ಷಗಳು ಬರೆದಿದ್ದು.
ಪ್ರಶ್ನೆ: ಸಾಹಿತ್ಯ ಕ್ಷೇತ್ರದಲ್ಲಿ ನಿಮಗೆ ಮರೆಯಲಾಗದಂತಹ ನೆನಪು ಯಾವುದು?
ನಾ.ಡಿಸೋಜ: ಹಲವಾರು ವರ್ಷಗಳ ಹಿಂದೆ, ಸಾಗರದಲ್ಲಿ ನಡೆದ ಸಮಾರಂಭವೊಂದಕ್ಕೆ ರಾಷ್ಟ್ರಕವಿ ಕುವೆಂಪು ಅವರು ಬಂದಿದ್ದರು. ಆಗ ನಾನು ದೂರದಲ್ಲಿ ನಿಂತಿದ್ದನ್ನು ನೋಡಿದ ಅವರು ನನ್ನನ್ನು ಹತ್ತಿರಕ್ಕೆ ಕರೆದು ಮಾತಾಡಿಸಿದರು. "ಡಿಸೋಜ, ನಿಮ್ಮ ಕಾದಂಬರಿಗಳನ್ನು ಓದಿದ್ದೇನೆ. ಅವು ನನಗೆ ಇಷ್ಟವಾಗಿವೆ. ಹೀಗೆ ಮುಂದುವರೆಸಿ," ಎಂದಿದ್ದು ಇಂದಿಗೂ ಮರೆಯಲಾಗದ ನೆನಪು. ಆಗ ನನ್ನ ಜೊತೆ ಕೆ.ಎಸ್.ನಿಸಾರ್ ಅಹಮದ್ ಸಹ ಇದ್ದರು.
ಇದೊಂದು ಅಧಿಕೃತ ಸಂದರ್ಶನವಾಗಿದ್ದರೆ ಇನ್ನಷ್ಟು ಪ್ರಶ್ನೆಗಳನ್ನು ಡಾ.ನಾ.ಡಿಸೋಜರಿಗೆ ಕೇಳ ಬಹುದಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. ಇದ್ದ ಕೊಂಚ ಸಮಯದಲ್ಲಿ ಅವರ ಜೊತೆ ಮಾತನಾಡಿದನ್ನು ಹೆಕ್ಕಿ ಸಂದರ್ಶನದ ರೂಪದಲ್ಲಿ ಪ್ರಸ್ತುತ ಪಡಿಸಿದ್ದೇನೆ. ●●●