Friday, 12 July 2019

ಮೋಡಗಳ ಮುನಿಸು - ಡೇವಿಡ್ ಕುಮಾರ್. ಎ.



ಕಾಣೆಯಾದ ಕಾಡ ಮೇಲೆ
ಕರಿಮೋಡದ ಮುನಿಸು
ಮಳೆಬಿಲ್ಲು ಬಾಗುವುದೇ
ಬೋಳು ಗುಡ್ಡದ ಮ್ಯಾಲೆ ?


ಬೆವರ ಹನಿಗಳು ಆವಿಯಾಗಿ
ಮೋಡಗಳ ಹಿಂಡಾಗಿ
ಆಕಾಶ ಮೈದಾನದಲಿ
ದಿಕ್ಕಿಲ್ಲದ ಓಟ, ಚೆಲ್ಲಾಟ !

ಮುಂಗಾರಿನ ಆಸೆಯಲಿ
ಬಾಡಿ ಹೋದ ಕನಸುಗಳು
ಹಿಂಗಾರಿನ ಬಯಕೆಯಲಿ
ಬೆಂಕಿಯಾದ ಒಡಲು !

ಹಸಿರಿಲ್ಲದ ಕಣಿವೆಯಲಿ 
ಮಳೆ ಇಲ್ಲದ ಮೋಡಗಳು
ಒಣಭೂಮಿಯ ದೂಳಿನಲಿ
ಉತ್ತರವಿಲ್ಲದ ಪ್ರಶ್ನೆಗಳು





ಕೊನೇ ಮಾತು - ಆನಂದ್

ಪ್ರೀತಿಯ ಅನುಗೆ ನಮಸ್ಕಾರಗಳು. ನಿನಗೊಂದು ಪತ್ರ ಬರೆಯಬೇಕೆಂಬ ಅನೇಕ ದಿನಗಳ ಆಸೆಯ ಕಾವು ಇಂದು ಬೆಳಕಾಗುತ್ತಿದಂತೆ ನನ್ನೊಳಗಿನ ಆಳದ ತೀಕ್ಷ್ಣ ಭಾವನೆಗಳನ್ನು ಮಾತುಗಳು ಕೈಹಿಡಿಯುತ್ತಿವೆ. 

ತಂದೆತಾಯಿಗಳನ್ನು ಕಳೆದುಕೊಂಡಾಗ ದೇವರನ್ನೇ ಕಳೆದುಕೊಂಡಂತಹ ಅನುಭವ ನಮ್ಮಲ್ಲಿ ಕೆಲವರಿಗಾಗುವುದು ತೀರಾ ಸ್ವಾಭಾವಿಕ. ನನ್ನ ತಾಯಿ ತೀರಿಕೊಂಡಾಗ ನನಗೂ ಈ ರೀತಿ ಅನ್ನಿಸಿದ್ದು ಸುಳ್ಳಲ್ಲ. ಬಹುಶಃ ನನ್ನ ಈ ಅನಿಸಿಕೆ ನಿಮಗೆ ಅತೀರೇಕ ಎನ್ನಿಸಬಹುದಾದರೂ ಇದು ನನ್ನ ಅನುಭವಾತ್ಮಕ ದೃಢ ಮಾತೆನ್ನಿಸುತ್ತದೆ. ಕವಿ ಲಂಕೇಶ್ ತಮ್ಮ ಅವ್ವ ಎಂಬ ಕವಿತೆಯಲ್ಲಿ ಹೇಳುವಂತೆ ನನ್ನ ತಾಯಿ ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟು ಹೋಗಲಿಲ್ಲ.

ನಿರಾಕಾರ ದೇವರನ್ನು ಪ್ರತಿಯೊಂದರಲ್ಲೂ ನೆನಪಿಸಿ ಸಾಕ್ಷಾತ್ಕರಿಸಿದ ನಮ್ಮ ತಂದೆತಾಯಿಗಳು ದೇವರ ನೆರಳಚ್ಚುಗಳಂತನೇ ಹೇಳಬಹುದು. ನಿಜವಾಗಿ ಹೇಳಬೇಕೆಂದರೆ, ಧೀಮಂತರ ಪ್ರವಚನಗಳಿಂದ ನಾನು ದೇವರನ್ನು ತಿಳಿಯಲಿಲ್ಲ. ನನ್ನ ತಂದೆತಾಯಿಗಳ ಮೂಲಕ ದೇವರನ್ನು ಆರ್ಥಮಾಡಿಕೊಂಡಿರುವ ಸಾವಿರಾರು ಜನರಲ್ಲಿ ನಾನು ಒಬ್ಬ. ಯಾರೂ ದೇವರನ್ನು ಕಂಡವರಿಲ್ಲ ತಂದೆತಾಯಿಗಳ ಎಲ್ಲಾ ಒಳೆತನದಲ್ಲಿ, ನಡೆನುಡಿಗಳಲ್ಲಿ, ಕಾರ್ಯದಕ್ಷತೆ, ಆರೈಕೆ ಭಾವಣಿಕೆಗಳಲ್ಲಿ, ಅಂತಃಕರಣದಲ್ಲಿ ಜತೆಗೆ ವಿಶ್ವಾಸದ ದೃಢತೆಯಲ್ಲಿ ಎಲ್ಲೋ ಒಂದು ಕಡೆ ನಮ್ಮ ಗ್ರಹಿಕೆಯ ದೇವರನ್ನು ನೆನಪಿಸುತ್ತಾ ಅವರು ಕೆಲವೊಮ್ಮೆ ಅವರೇ ದೇವರು ಎಂಬ ಭಾವ ನಮ್ಮಲ್ಲಿ ಬಾರದಿರಲಿಲ್ಲ. ಈ ಒಂದು ಕಾರಣಕ್ಕೇನೋ ದೇವರನ್ನು ತಂದೆತಾಯಿಗಳಂತೆ ಕಾಣಿಸುವ ನೂರಾರು ಪ್ರತಿಮೆಗಳ ಉಪಮೆಗಳ ಸಿರಿ ಸಂಪತ್ತುಗಳು ಪವಿತ್ರ ಗ್ರಂಥಗಳಲ್ಲಿ, ಹಾಡುಗಳಲ್ಲಿ, ಸಾಹಿತ್ಯಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ. 

ಹೌದು, ನನ್ನ ತಾಯಿ ತೀರಿಕೊಂಡಾಗ ನಾನು ಅತೀವ ದುಃಖದಿಂದ, ಸಣ್ಣ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜ. ಏನೋ ನನ್ನ ಬದುಕಿನ ಒಂದು ಭಾಗವೇ ಕಳೆದುಕೊಂಡಂತಹ ವ್ಯಾಕುಲದ ಭಾವ ಹತ್ತಾರು ತಿಂಗಳು ನನ್ನನ್ನು ಕಾಡದೆ ಬಿಡಲಿಲ್ಲ. ಜತೆಗೆ ಅಮ್ಮನನ್ನು ಕಳೆದುಕೊಂಡ ಕೊರಗು ನನ್ನ ಹಿಂಡಿದ ಪರಿಯಂತೂ ಇಲ್ಲಿ ಹೇಳಲು ನನ್ನಿಂದ ಅಸಾಧ್ಯ. 

ಈ ಅನುಭವದ ಒಳಹೊಕ್ಕು ನೋಡಿದಾಗ ನನ್ನ ಗ್ರಹಿಕೆಗೆ ಬಂದಿದ್ದು ಇದು. ಹೌದು ಅಮ್ಮ ಸತ್ತಾಗ ಅಮ್ಮನನ್ನು ನೆನಪಿಸುವ ಸಾವಿರಾರು ನೆನಪುಗಳು ನಿಯಂತ್ರಣಶಕ್ತಿ ಕಳೆದುಕೊಂಡು ಭಾವೋದ್ವೇಗದಲ್ಲಿ ದಾಳಿ ಮಾಡುತ್ತಾ ಎಲ್ಲೆಂದರಲ್ಲಿ ಕಲ್ಲು ತೂರುತ್ತಾ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶಮಾಡುವ ದೊಂಬಿಯಂತೆ (riot) ನನ್ನ ಮನಸ್ಸನ್ನು ಪುಡಿಪುಡಿ ಮಾಡಿಬಿಟ್ಟಿತ್ತು. ಅಮ್ಮ ಮತ್ತು ನನ್ನ ನಡುವಿದ್ದ ಅಂತಃಕರಣವನ್ನು ಧನಾತ್ಮಕವಾಗಿಸಿ ಧೈರ್ಯ ಹೇಳಬೇಕಾದ ನೆನಪುಗಳು, ಋಣಾತ್ಮಕವಾಗಿ ನನ್ನನ್ನು ಮಾನಸಿಕವಾಗಿ ಒಂಟಿತನದ ರೂಮಿನಲ್ಲಿ ಕೂಡಿ ಹಾಕಿ ಆಶಾಶೂನ್ಯನಾಗಿಸಿಬಿಟ್ಟಿತ್ತು. ಆಗ ನಾನು ನನ್ನ ವಿವೇಚನೆಯೇ ಕೆಲಸಮಾಡಲಾಗದಷ್ಟು ಭಾವೋದ್ರಿಕ್ತನಾಗಿಬಿಟ್ಟಿದ್ದೆ. ಆದರೆ ನನ್ನನ್ನು ಹತ್ತಾರು ತಿಂಗಳು ಕಾಡಿದ ನೋವು, ಕೊರಗು, ಖಿನ್ನತೆ, ನನ್ನ ಸ್ವಾರ್ಥದ ಫಲಗಳೇ ಎಂಬುದು ಗ್ರಹಿಕೆಗೆ ಬಾರದಿರಲಿಲ್ಲ. ಅಮ್ಮ ತನ್ನ ಹಾತ್ತಾರು ವರ್ಷಗಳ ನೋವಿನಿಂದ ಬಿಡುಗಡೆಗೊಂಡು ದೇವರ ಅನಂತತೆಯ ಅತಿಥಿಯಾಗಿ ಹೋಗಿದ್ದನ್ನು ಸಂಭ್ರಮಿಸುವುದನ್ನು ಬಿಟ್ಟು ನನ್ನ ಚಿಂತೆಯಲ್ಲೇ ನಾನು ಸ್ವಾರ್ಥಿ ಆಗಿಬಿಟ್ಟಿದ್ದೆ. 

ಒಬ್ಬ ಅನುಭವಿ ಹೇಳುತ್ತಾನೆ, ಸಾವೆಂಬುವುದು ಆತ್ಮವನ್ನು ಆವರಿಸಿರುವ ಹೊದಿಕೆಯ ಕಣ್ಮರೆಯಷ್ಟೇ, ಆತ್ಮಕ್ಕೆ ಸಾವಿಲ್ಲ ಅಂತ. ಇನ್ನೂಬ್ಬ ಜ್ಞಾನಿ ಹೇಳುತ್ತಾನೆ, “ಮನುಷ್ಯ ಚಿರಂಜೀವಿ. ಸಾವು ಎಂದರೆ ಜೀವನದ ರೂಪಾಂತರ ಅಷ್ಟೆ” ಅಂತ. ಕ್ರೈಸ್ತರಾದ ನಾವು ಕೂಡ ಕ್ರಿಸ್ತನ ಪುನರುತ್ಥಾನದಲ್ಲಿ ಉತ್ಥಾನರಾಗುತ್ತೇವೆಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತೇವೆ. ಉತ್ಥಾನರಾದವರು ವಿಭಿನ್ನ ರೂಪದಲ್ಲಿ ನಮ್ಮಲ್ಲಿರುತ್ತಾರೆಂಬ ವಿಶ್ವಾಸದ ವಿಸ್ತರಣೆಯೂ ಹೌದು. ಬಾಹ್ಯ ಕಣ್ಣುಗಳಿಗೆ ಕಾಣದ ನಮ್ಮ ಆಂತರಿಕ ಕಣ್ಣುಗಳಿಗೆ ಮಾತ್ರ ಗೋಚರಿಸುವಂತಹ ಮಹಿಮಾ ಇರುವಿಕೆ ಅದು. ಅವರ ಆತ್ಮಗಳು ಸದಾ ನಮ್ಮ ಜೊತೆಯಲ್ಲಿರಲಿ ಮತ್ತು ನಮ್ಮನ್ನು ನಡೆಸಲಿ ಎಂದು ಬೇಡಿಕೊಳ್ಳೋಣ. 

ನೀವು ವಿಜ್ಞಾನ ವಿಷಯವನ್ನು ಓದಿಕೊಂಡಿರುವವರು ಸಾಲದ್ದಕ್ಕೆ ವೃತ್ತಿಯಲ್ಲಿ ವೈದ್ಯರು ಬೇರೆ. ನಾವು ನಮ್ಮ ತಂದೆ ತಾಯಿಗಳಿಂದ ಏನೇನು ಎಷ್ಟೆಷ್ಟು ಬಳುವಳಿ ಪಡೆದಿರುತ್ತೇವೆಂಬ ಲೆಕ್ಕಾಚಾರ ನಿಮಗೆ ಗೊತ್ತಿರುವಂತದ್ದು. ಆದರಲ್ಲೂ ಒಂದು ತಾಯಿ ಒಂದು ಮಗುವಿಗೆ ಜನ್ಮ ಕೊಡುವಾಗ ಅನುಭವಿಸುವ ನೋವಿನ ತೂಕ ನಿಮಗೆ ತಿಳಿದೇ ಇದೆ. ಮಗುವಿಗೆ ಜನ್ಮ ಕೊಟ್ಟು ಮಗುವಿನ ಮುಖ ನೋಡಿದಾಕ್ಷಣ ಅವಳ ನೋವು ಅವಳಿಗೆ ನಗಣ್ಯವಾಗಿ ಬಿಡುತ್ತದೆ. ಅದೇ ತಾಯಿಯ ಅಂತಃಕರಣ. 

ಈ ಅಂತಃಕರಣವು ಜನ್ಮಕೊಟ್ಟ ಗಳಿಗೆಗೆ ಕೊನೆಗೊಳ್ಳಲಿಲ್ಲ. ಅದು ನಿತ್ಯ ನಿರಂತರವಾಗಿತ್ತು. ತಂದೆತಾಯಿಗಳ ಉದಾತ್ತ ಸೇವೆಯಲ್ಲಿ ಅದು ದೇಹರೂಪ ಪಡೆಯಲಾರಂಭಿಸಿತ್ತು. ಅಶಕ್ತ ಮಗುವಿಗೆ ಹಾಲು ಉಣಿಸಿತ್ತು. ಕಕ್ಕ ಮಾಡಿಕೊಂಡಾಗ ಅಸಹ್ಯ ಪಡೆದುಕೊಳ್ಳದೆ ಒರೆಸಿ ಶುಚಿಗೊಳಿಸಿ ಶುಭ್ರ ಬಟ್ಟೆ ತೊಡಿಸಿತ್ತು, ಅತ್ತಾಗ ಮಡಿಲಲ್ಲಿರಿಸಿಕೊಂಡು ಜೋಗುಳ ಹಾಡಿತ್ತು, ಚಾಚಿದ ಕಾಲುಗಳ ಮೇಲಿರಿಸಿ ಬಿಸಿ ನೀರ ಸ್ನಾನ ಮಾಡಿಸಿ, ಸಾಂಬ್ರಾಣಿ ಸುವಾಸನೆಯನ್ನು ಮೈಗೆ ಘಮಿಸಿ, ಮೈಗೆ ಪೌಡರ್ ಹಚ್ಚಿ, ದೃಷ್ಟಿ ಬೊಟ್ಟು ಹಾಕಿಸಿತ್ತು. ಮಗುವಿನ ರಾತ್ರಿಯ ನಿರಾಂತಕ ಸವಿ ನಿದ್ರೆಗೆ ನಿದ್ರಾಹೀನ ರಾತ್ರಿಗಳ ಕಳೆದಿತ್ತು. ಅದು ನಮ್ಮ ಹೆಜ್ಜೆಗಳಿಗೆ ಕಾಲಾಗಿತ್ತು, ಬೆಳವಣಿಗೆಗೆ ನೀರುಣಿಸಿತ್ತು, ಕನಸುಗಳ ಬೆಳೆಗೆ ಭೂಮಿತಾಯಾಗಿತ್ತು, ನಮ್ಮ ವಿಶ್ವಾಸವಾಗಿತ್ತು, ಓದಿಸಿತ್ತು, ಕಣೀರಿಗೆ ಸಾಂತ್ವನ ಹೇಳಿತ್ತು, ಏಕತನದ ಖಾಲಿ ಮನೆಯಲ್ಲಿ ಆತ್ಮೀಯತೆಯ ತುಂಬಿಸಿತ್ತು. ನಮ್ಮ ಅನಾರೋಗ್ಯದಲ್ಲಿ ಆರೋಗ್ಯವನ್ನು ಬೇಡಿತ್ತು. ನಮ್ಮ ಹಿಗ್ಗುವಿಕೆಯಲ್ಲಿ ತನ್ನನೇ ಕುಗ್ಗಿಸಿಕೊಂಡಿತ್ತು. ಕೊನೆಗೆ ನಮ್ಮ ತುಂಬು ಜೀವದ ಖಾತರಿಗಾಗಿ ತನ್ನ ಜೀವವನ್ನೇ ಅಡವಿಟ್ಟವಿಟ್ಟಿತ್ತು. ಯೋಚಿಸಿ ನೋಡಿ ಮೇಲಿನ ಅಂತಃಕರಣದ ಕೆಲವೊಂದು ಕಾರ್ಯಗಳಿಗೆ ಪ್ರರ್ಯಾಯವೆಂಬುವುದೇ ಇಲ್ಲ. ಒಬ್ಬ ಸಾಹಿತಿ ಅಮ್ಮನನ್ನು ಕುರಿತು ಹೀಗೆ ಹಾಡುತ್ತಾನೆ: ದೇವರಿಗೆ ನಾನು ದಿನ ಮುಗಿಯುವುದಿಲ್ಲ. ಅಮ್ಮನನ್ನು ಜಪಿಸುವುದ ಮರೆಯುವುದಿಲ್ಲ. ನನಗೆ ಅಳು ಬಂದರೆ ಅವಳು ಅತ್ತು ಕರೆಯುವಳು. ನನಗೆ ನಗು ಬಂದರೆ ಅವಳು ನೋವ ಮರೆವಳು. ...

ಕೆಲವೊಮ್ಮೆ ಮೌನಕ್ಕೆ ಶರಣಾದಾಗ. ನನ್ನ ಪ್ರತಿಯೊಂದು ನೆನೆಪಿನ ಹಾಳೆಯಲ್ಲೂ ತಂದೆತಾಯಿಗಳ ಮಾಸದ ಅಚ್ಚಿರುವುದು ನನ್ನಲ್ಲಿ ದೃಢವಾಗುತ್ತದೆ. ಕಾಲದ ರಬ್ಬರ್ ಕೂಡ ಅಳಿಸಲಾಗದ ಬದುಕಿನ ಪುಸ್ತಕ ದಾಖಲಾಗಿರುವ ಈ ನೆನಪುಗಳು ಅದು ನಮ್ಮ ಬದುಕಿನ ಬಲವಾದ ಸಶಕ್ತ ನೆನಪುಗಳೆಂದೇ ಹೇಳಬಹುದು. ಅವರ ಪ್ರತಿಯೊಂದು ಮಾತು, ನಡವಳಿಕೆ, ವಿಶ್ವಾಸ, ರೀತಿನೀತಿ, ದೃಷ್ಟಿ, ತತ್ವ ಸದಾ ನಮ್ಮಲ್ಲಿ ಹಸಿರಾಗಿ ನಮ್ಮ ನಡೆಸುವ, ರೂಪಿಸುವ, ನಡೆಯಲು ದಾರಿತೋರುವ, ತಾಳ್ಮೆ ಹೇಳುವ, ದೃಢವಾಗಿಸುವ ನೆನಪುಗಳಾಗಿವೆ. ಆದರಿಂದಲೇ ಆ ನೆನಪುಗಳನ್ನು ನಾವು ಬದುಕಿನ ಆಧಾರ ನೆನಪುಗಳು ಅಂತನೇ ಹೇಳಬಹುದು. ಒಂದಂತೂ ಸತ್ಯ, ಅವರ ಒಡಲಿನಿಂದಲೇ ಕುಡಿಯೊಡೆದಿರುವ ನಾವು ಅವರ ನೆನಪುಗಳು ಇಲ್ಲದೇ ಬದುಕಲು ಅಸಾಧ್ಯ ಅಂತ. ಅದು ಒಂದು ರೀತಿಯಲ್ಲಿ ವೀಣೆಯಲ್ಲಿರುವ ಸಂಗೀತದಂತೆ. 

ನಾವೆಲ್ಲಾ ಅವರ ಗಿಡದ ಹೂವುಗಳಾಗಿ ಮತ್ತೊಂದು ಬೀಜಗಳಾಗಲು ಕಾರಣವೇ ನಮ್ಮ ತಂದೆತಾಯಿಗಳು. ಆವರ ಗಿಡಗಳಲ್ಲಿ ಆರಳಿದ ನಾವು ಅವರ ಫಲಗಳು, ಅವರ ಅನುರೂಪಿಗಳು. ಅ ಗಿಡಗಳನ್ನು ಅನಂತವಾಗಿಸುವ ಸಂತತಿಯ ಬೀಜಗಳು ಹೌದು. ಆದ್ದರಿಂದ ನಮ್ಮ ಆತ್ಮೀಯ ತಂದೆ ತಾಯಿಗಳನ್ನು ಕಳೆದುಕೊಳ್ಳುವುದೆಂದರೆ ಜೀವದ ಮೂಲವನ್ನೇ ಕಳೆದುಕೊಂಡ ಅನುಭವ. ಅದು ಹೂವು ತನ್ನ ತಾಯಿಬೇರನ್ನೇ ಕಳೆದುಕೊಂಡಂತೆ. ಇದು ನಿಮ್ಮ ಅನುಭವವೂ ಕೂಡ ಅಂತ ನನ್ನ ಭಾವನೆ. ಆದರೂ ತಂದೆತಾಯಿಗಳನ್ನು ಬಿಟ್ಟು ನಾವು ಮತ್ತೊಂದು ಗಿಡಗಳಾಗಿ ಮರಗಳಾಗಬೇಕು. ಅದು ಪ್ರಕೃತಿಯ ನಿಯಮ. ಹೌದು ಅಕ್ಕ ನಾನು ಇಲ್ಲಿ ತಂದೆತಾಯಿಗಳ ಬಗ್ಗೆ ಯಾವ ಪ್ರಬಂಧ ಬರೆಯಲು ಕೂತಿಲ್ಲ. ಅದನ್ನು ಬರೆಯುವ ಸಾಮರ್ಥ್ಯವು ನನಗಿಲ್ಲ. ಏನೋ ನನ್ನ ಒಡಲಾಳ ಮಾತುಗಳು. ಅಕ್ಷರಗಳಾಗುತ್ತಿವೆ ಅಷ್ಟೇ. 

ಅಕ್ಕ, ನಿಮ್ಮ ತಂದೆಯ ಬಗೆಗಿನ ನನ್ನ ಮಾಹಿತಿ ಅಷ್ಟಕಷ್ಟೆ. ಅವರು ಬದುಕಿನ ತುತ್ತತುದಿಯ ಶಿಖರದ ಮೇಲಿದ್ದಾಗ, ನಾನು ಕಣ್ಣು ಕಣ್ಣು ಬಿಡುತ್ತಾ ಆಗತಾನೆ ಲೋಕಕ್ಕೆ ತೆರೆದುಕೊಳ್ಳುತ್ತಿದ್ದ ಚಿಕ್ಕ ಪೋರ. ಅದ್ದರಿಂದ ಅಪ್ಪನ ಬಗ್ಗೆ ಒಂದೇ ಒಂದು ಮಾತು ಮಾತ್ರ ಹೇಳಬಲ್ಲೇ. ಬಡತನವೆಂಬ ಬಂಡುಕೋರನಿಗೆ ಮಂಡಿಯೂರದೆ ಬಡತನವನ್ನು ಮೆಟ್ಟಿ ನಿಂತ ಸ್ವಾಭಿಮಾನಿ ಅಂತ, ಗಿಡಕ್ಕೆ ಹೂವೇ ಸಾಕ್ಷಿ ಎಂಬಂತೆ, ನಿಮ್ಮಲ್ಲಿ ಹುದುಗಿರುವ ಆ ಸ್ವಾಭಿಮಾನವೇ ನನ್ನ ಮಾತಿನ ಕೋರ್ಟಿನಲ್ಲಿ ಸಾಕ್ಷಿಯಾಗಿ ನಿಲ್ಲಬಹುದೇನೋ! 

ಅಮ್ಮ ಅಂದ್ರೆ ನನ್ನ ಅತ್ತೆ. ಮುಗ್ಧ ಮನಸ್ಸಿನ ಮಗು,ಬೇಧ ಭಾವ, ಲಾಭನಷ್ಟ ಲೆಕ್ಕಚಾರಗಳನ್ನು ತಿಪ್ಪೆಗೆಸೆದಿದ್ದ ಉದಾರಿ. ಎಲ್ಲರನೂ ತನ್ನ ಮಕ್ಕಳಂತೆ ಕಾಣುವಂತಹ ಮನೋಭಾವದಿಂದ ತನ್ನ ಕುಟುಂಬವನ್ನು ಬಲೂನಂತೆ ಉಬ್ಬಿಸಿಕೊಂಡಿದ್ದ ಅವರು ಪ್ರತಿಯೊಬ್ಬರ ಶ್ರೇಯಸ್ಸಿಗೆ ದಿನಂಪ್ರತಿ ಪ್ರಾರ್ಥಿಸಿದ ಉದಾತ್ತ ವ್ಯಕ್ತಿಯೂ ಹೌದು. ಇಂತಹ ವೈಶಾಲ್ಯತೆಯ ಹೃದಯವು ಎಂದೂ ಲಾಭನಷ್ಟದ ಲೆಕ್ಕಚಾರದ ಸುದ್ದಿಗೆ ಹೋಗಲೇ ಇಲ್ಲ. ಅವರು ಲೆಕ್ಕಚಾರದಿಂದೆನಾದರೂ ಬಂಧಿಯಾಗಿದ್ದಿದ್ದರೆ, ಅವರ ಆತಿಥ್ಯವನ್ನು ಸ್ವೀಕರಿಸುವ ಅವಕಾಶಗಳು ನಮಗೆಲ್ಲಿರುತಿತ್ತು? ಜತೆಗೆ ಹತ್ತಾರು ರೀತಿಯ ತಿಂಡಿತಿನಿಸುಗಳ ರುಚಿಸುವ ಸೌಭಾಗ್ಯ ನಮಗೆಲ್ಲಿ ಸಿಗುತಿತ್ತು? ನಿಮಗೆ ಗೊತ್ತಿದ್ಯೋ ಇಲ್ವೋ. ಅವರ ಆತಿಥ್ಯದಲ್ಲಿ ಯಾವುದೇ ಬಗೆಯ ತೋರಿಕೆಯಾಗಲಿ, ವ್ಯಾವಹಾರಿಕ ನಿರೀಕ್ಷೆಗಳಾಗಲೀ, ಹೋಟೆಲ್ಲಿನ ವ್ಯಾಪಾರವಾಗಲೀ ಇರಲಿಲ್ಲ. ಆತಿಥ್ಯವನ್ನು ಆತಿಥ್ಯಕ್ಕಾಗಿಯೇ ಮಾಡುತ್ತಿದ್ದ ಒಬ್ಬ ಸಜ್ಜನ ಆತಿಥೇಯ ಅವರಾಗಿದ್ದರು. ವ್ಯಕ್ತಿಯ ಶ್ರೇಷ್ಠತೆಯ ಗುಟ್ಟು ಇರುವುದು ಕೂಡಿಕೆಯಲ್ಲಲ್ಲ ಕೊಡುವಿಕೆಯಲ್ಲಿ, ಅದು ಉದಾರಿ ಹೃದಯದ ಮೂರ್ತ ರೂಪವೂ ಕೂಡ. ಒಂದು ಮಾತಿನಲ್ಲಿ ಹೇಳುವುದಾದರೆ, ಅಮೂರ್ತ ಉದಾರತೆಯ ಮೂರ್ತ ರೂಪವೇ ಅವರಾಗಿದ್ದರು. 

ಎರಡನೇದು, ಎಲ್ಲದರಲ್ಲೂ ಗುಣಾತ್ಮಕ ಅಂಶಗಳನ್ನು ಕಾಣುವುದು ಅವರ ಜಾಯಮಾನವಾಗಿತ್ತು. ಒಂದ್ಗಳಿಗೆ ಅವರ ಬದುಕಿಗೆ ದೃಷ್ಟಿಯಾಯಿಸಿ ನೋಡಿ… ಅವರು ಎಂದೂ ಯಾರನ್ನೂ ದೂಷಿಸಿದವರಲ್ಲ, ಯಾರ ಬಗ್ಗೆಯೂ ಅವಹೇಳನ ಮಾತುಗಳನ್ನಾಡಿದವರಲ್ಲ, ತಮ್ಮ ಬಗೆಗಿನ ಚಾಡಿ ಮಾತಿಗೆ ಯಾವತ್ತೂ ಪ್ರತಿಕ್ರಿಯಿಸಿದರಲ್ಲ, ಮುನಿಸಿಕೊಂಡವರಲ್ಲ. ಇವೆಲ್ಲಾವೂ ಪಕ್ವ ಮನಸ್ಸಿನ ಚಿತ್ರಣವೇ ಅಂತನೇ ಹೇಳಬಹುದು. ಕಸದಲ್ಲೂ ರಸವನ್ನು ಕಾಣುವುದು ಅವರ ಹುಟ್ಟು ಗುಣವಾಗಿತ್ತು. ಲೋಕವೆಲ್ಲಾ ಕತ್ತಲೆಂದು ದೂಷಿಸುತ್ತಿದ್ದರೆ, ಕತ್ತಲೆಗೆ ದೀಪ ಹಿಡಿಯುವ ಪಕ್ವ ಮನಸ್ಸು ಅವರದಾಗಿತ್ತು, ಅಂತಹ ಮೇರುವ್ಯಕ್ತಿಯು ನನ್ನ ಅತ್ತೆ ಆಗಿದ್ದರು ಎಂಬುವುದೇ ನನ್ನ ಹೆಮ್ಮೆ.

ಇನ್ನೊಂದು ಕಡೆ, ಅವರದು ಪಾದರಸದಂತಹ ಚುರುಕುತನ. ಅವರನ್ನು ಎಂದೂ ಸೋಮಾರಿಯಾಗಿ ಕೂತಿದಾಗಲೀ, ಮಲಗಿದ್ದಾಗಲೀ ನಾನು ಕಂಡೇ ಇಲ್ಲ. ಸದಾ ಕೆಲಸ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳುವುದರಲ್ಲಿ ಅವುಗಳನ್ನು ತದೇಕಚಿತ್ತದಿಂದ ನಿರ್ವಹಿಸುತ್ತಿದ್ದುದು ನಿಜವಾಗಲೂ ಶ್ಲಾಘನೀಯ. ಕೆಲಸ ಅವರಿಗೆ ಎಂದೂ ಹೊರೆಯಾಗಿರಲಿಲ್ಲ. ಅವು ವ್ಯಕ್ತಿಯ ಬಗೆಗಿನ ಅವರ ಆಂತರಿಕ ಪ್ರೀತಿ ಮತ್ತು ಆರೈಕೆಯ ಅಭಿವ್ಯಕ್ತಿಗಳಾಗಿದ್ದವು. ಎಂತಹ ಕೆಲಸವನ್ನೂ ನಿಭಾಯಿಸಬಲ್ಲೆ ಎಂಬ ಆತ್ಮಶಕ್ತಿ ಅವರಲ್ಲಿ ತುಂಬಿ ತುಳುಕುತ್ತಿತ್ತು, ಬದುಕಿನ ಸಂದಿಗ್ಧ ಪರಿಸ್ಥಿತಿಗಳನ್ನು ಅವಕಾಶಗಳ ಮೆಟ್ಟಿಲುಗಳಾಗಿಸಿಕೊಂಡು ಬದುಕಿನ ಏಣಿಯನ್ನು ಏರಿದವರು ಅವರು. ಒಂದು ಹಳ್ಳಿಯಿಂದ ಬಂದ ಮುಗ್ಧೆ ಹೇಗೆ ಪಟ್ಟಣದಲ್ಲಿ ತನ್ನ ಸಾಂಸಾರಿಕ ಜವಬ್ಧಾರಿಯನ್ನು ಅತ್ಯಂತ ಶ್ರದ್ಧೆಯಿಂದ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯ್ತು? ಕೊನೆಗೆ ತನ್ನ ಇಳಿ ವಯಸ್ಸಿನಲ್ಲೂ ಇನ್ನೊಬ್ಬರಿಗಾಗಿ ಬಾಳಿದ ತ್ಯಾಗಿಮಯಿ ಅವರು. ಒಂದು ಮಾತಿನಲ್ಲಿ ಹೇಳುವುದಾದರೆ, ಕ್ರಿಸ್ತನ ಶಿಲುಬೆಯ ಅರ್ಥಕ್ಕೆ ವ್ಯಾಖ್ಯಾನವೇ ಆಗಿಬಿಟ್ಟಿತ್ತು ಅವರ ತುಂಬು ಬದುಕು. ಕುಟುಂಬದ ಇಂತಹ ಮೇರುವ್ಯಕ್ತಿಗಳ ಬದುಕಿನ ವ್ಯಾಖ್ಯಾನದಲ್ಲಿ ನಮ್ಮ ಬದುಕಿನ ಅರ್ಥ ತಿಳಿದುಕೊಳ್ಳೋಣವೇ?

ಕೊನೆಗೆ ಹೇಳಲೇಬೇಕಾದ ಒಂದೇ ಒಂದು ಮಾತು:

ನನ್ನಮ್ಮ, ನನ್ನತ್ತೆ ಸಮೀಪಿಸಿದಷ್ಟು ದೂರವಾಗುವ ಕಾಲುದಾರಿಗಳು, ಗ್ರಹಿಕೆಗೆ ಪ್ರಯಾಸ ಕೇಳುವ ಪುಸ್ತಕಗಳು, ತಮ್ಮ ಚಿಕ್ಕಪುಟ್ಟ ಆಟಗಳಲ್ಲಿ ಹಾಸುಹೊಕ್ಕ ಪುಟ್ಟ ಬಾಲಕಿಯರು, ಬರಹಗಾರರಿಗೆ ಆಗಬಹುದಾದ ಒಂದು ಹಿಡಿ ಕಾದಂಬರಿಗಳು. 

ಅವರ ಆತ್ಮಕ್ಕೆ ಶಾಂತಿ ನಿತ್ಯವಾಗಲಿ.



ಕಥಾದನಿ

ನಾನು ನಡೆಯುತ್ತಾ ಅವಳನ್ನು ನೋಡುತ್ತಿದ್ದೆ…
ಇಬ್ಬರು ಯುವ ಸನ್ಯಾಸಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿದಂತೆ ಅವರು ನಡೆಯುತ್ತಿದ್ದ ದಿಕ್ಕಿಗೆ ವಿರುದ್ಧವಾಗಿ ಒಂದು ಸುಂದರ ಯುವತಿ ನಡೆದುಕೊಂಡು ಬರುತ್ತಿದ್ದನ್ನು ಕಂಡ ಸನ್ಯಾಸಿಗಳ ಕಣ್ಣುಗಳು ಆ ಹುಡುಗಿಯ ಮೇಲೆ ನಾಟಿತ್ತು. ಹುಡುಗಿಯನ್ನು ನೋಡುತ್ತಾ ನಡೆಯುತ್ತಿದ್ದ ಒಬ್ಬ ಸನ್ಯಾಸಿ ಎಡವಿ ಬಿದ್ದನು. ಎಡವಿ ಬಿದ್ದ ಸನ್ಯಾಸಿ ಇನ್ನೊಬ್ಬ ಸನ್ಯಾಸಿಯನ್ನು ಕೇಳಿದ;

ಅಲ್ಲ ನಾವಿಬ್ಬರೂ ಆ ಹುಡುಗಿಯನ್ನು ನೋಡುತ್ತಾ ನಡೆಯುತ್ತಿದ್ದೇವು, ಆದರೆ ನಾನು ಮಾತ್ರ ಎಡವಿ ಬಿದ್ದೆ, ನೀನು ಎಡವಿ ಬೀಳಲಿಲ್ಲ. ಅದು ಹೇಗೆ” ಎಂದು ಪ್ರಶ್ನಿಸಿದ. ಪ್ರತ್ಯುತ್ತರವಾಗಿ ಇನ್ನೊಬ್ಬ ಸನ್ಯಾಸಿ ಹೇಳಿದ… ”ನೀನು ಅವಳನ್ನು ನೋಡುತ್ತಾ ನಡೆದೆ, ನಾನು ನಡೆಯುತ್ತಾ ಅವಳನ್ನು ನೋಡುತ್ತಿದ್ದೆ…”

ಮಾತನಾಡುವಾಗ ಎಚ್ಚರ ವಹಿಸು

ಒಬ್ಬ ರೈತ ತನ್ನ ನೆರೆಮನೆಯವರಿಗೆ ಬಾಯಿಗೆ ಬಂದಂತೆ ಬೈದ. ಅನಂತರ ತಪ್ಪಿನ ಅರಿವಾಗಿ ಚರ್ಚಿನ ಪಾದ್ರಿಯ ಬಳಿಗೆ ತೆರಳಿ ಕ್ಷಮೆ ಕೋರಿದ. ಪಾದ್ರಿ ಅವನಿಗೆ, ಒಂದು ಚೀಲದ ತುಂಬ ಗರಿಗಳನ್ನು ತುಂಬಿ ನಗರದ ಮಧ್ಯಭಾಗದಲ್ಲಿ ಸುರಿಯುವಂತೆ ಹೇಳಿದ. ರೈತ ಹಾಗೇ ಮಾಡಿದ. ಮತ್ತೆ ಆ ಗರಿಗಳನ್ನು ಆಯ್ದು ಚೀಲಕ್ಕೆ ತುಂಬುವಂತೆ ಪಾದ್ರಿ ಸೂಚಿಸಿದ. ಮಾತಿನಂತೆ ನಡೆದುಕೊಳ್ಳಲು ಯತ್ನಿಸಿದನಾದರೂ ಗರಿಗಳೆಲ್ಲ ಗಾಳಿಯಲ್ಲಿ ಹಾರಿ ಹೋಗಿದ್ದರಿಂದ ವಿಫಲನಾದ. ಖಾಲಿ ಚೀಲದಲ್ಲಿ ಮರಳಿದ ರೈತನಿಗೆ ಪಾದ್ರಿ ಹೇಳಿದ – “ನೀನು ಆಡಿದ ಮಾತುಗಳೂ ಹೀಗೆಯೇ. ಮಾತುಗಳನ್ನೇನೋ ಆಡಿದ್ದೀಯ. ಆದರೆ ಅವನ್ನೆಲ್ಲ ವಾಪಸ್ ಪಡೆಯಲು ಈಗ ಸಾಧ್ಯವೇ? ಆದ್ದರಿಂದ ಮಾತನಾಡುವಾಗ ಎಚ್ಚರ ವಹಿಸು”

ಸಂಗ್ರಹ - ಇನ್ನಾ



ಕಾರ್ಮೆಲ್ ಮಾತೆಯ ಮಹತ್ವ - ಸಹೋ. ಡೇವಿಡ್ ಕುಮಾರ್ , ಬೆಂಗಳೂರು ಮಹಾಧರ್ಮಕ್ಷೇತ್ರ


ಪ್ರತಿ ವರ್ಷ ಜುಲೈ 16ರಂದು ನಾವು ಕಾರ್ಮಲ್‍ಮಾತೆಯ ಹಬ್ಬವನ್ನು ಆಚರಿಸುತ್ತೇವೆ. ಆದರೆ ಹಲವಾರು ಬಾರಿ ಕಾರ್ಮೆಲ್ ಮಾತೆ ಎಂಬ ಹೆಸರನ್ನು ನಾನು ಕೇಳಿದಾಗ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತಿತ್ತು. ಅದೇನೆಂದರೆ, 'ಕಾರ್ಮೆಲ್' ಎಂಬುವುದು ಒಂದು ಬೆಟ್ಟದ ಹೆಸರು. ಈ ಬೆಟ್ಟದ ಕುರಿತು ನಾವು ಹಳೆಯ ಒಂಡಬಡಿಕೆಯಲ್ಲಿ ಆಲಿಸುತ್ತೇವೆ. ಹೀಗಿರುವಲ್ಲಿ ಮಾತೆ ಮರಿಯಳಿಗೂ ಮತ್ತು ಕಾರ್ಮೆಲ್ ಬೆಟ್ಟಕ್ಕೂ ಇರುವ ಸಂಬಂಧವೇನು? ಎಂಬ ಪ್ರಶ್ನೆ ನನ್ನನು ಕಾಡುತ್ತಿತ್ತು. ಖಂಡಿತವಾಗಲೂ ಇಂತಹ ಪ್ರಶ್ನೆ ನಿಮಗೂ ಸಹ ಮೂಡಿರಬಹುದು. ಇದರ ಹಿನ್ನೆಲೆಯನ್ನು ತಿಳಿಯಲು ನಾನು ಚರಿತ್ರೆಯ ಪುಟಗಳನ್ನು ತಿರುವಿದಾಗ ಇದರ ಮಹತ್ವ ನನಗೆ ತಿಳಿಯಿತು. 

ಆದಿಕಾಲದಿಂದಲೂ ಪುಣ್ಯಗಳಿಸುವ ಉದ್ದೇಶದಿಂದ ಕೆಲವು ಮಠವಾಸಿಗಳು ಜನರಿಂದ ದೂರ ಸರಿದು ಬೆಟ್ಟಗುಡ್ಡಗಳಲ್ಲಿ ವಾಸಿಸತೊಡಗಿದ್ದರು. ಕಾರ್ಮೆಲ್ ಬೆಟ್ಟದಲ್ಲೂ ಸಹ ಸನ್ಯಾಸಿಗಳು ಜಪ-ತಪ ಮಾಡುತ್ತಿದ್ದರು ಮತ್ತು ಅವರಿಗೆ ಮಾತೆ ಮರಿಯಮ್ಮನವರಲ್ಲಿ ವಿಶೇಷ ಭಕ್ತಿಯೂ ಸಹ ಇತ್ತು. ಅಲ್ಲಿ ಅವರಿಗೆ ಮರಿಯಮ್ಮನವರ ಮಾತೃ ಸಹಜ ಆದರ ಮತ್ತು ದರ್ಶನವೂ ಲಭಿಸಿತೆಂದು ಕೆಲವು ಬರಹಗಳು ನಮಗೆ ತಿಳಿಸುತ್ತವೆ. 

ಕಾರ್ಮೆಲ್ ಮಾತೆಯ ಮಹತ್ವವನ್ನು ಕುರಿತು ನಾವು ಧ್ಯಾನಿಸುವಾಗ ನಾವು ತಿಳಿದುಕೊಳ್ಳಲೇ ಬೇಕಾದ ಮತ್ತೊಂದು ಅಂಶ ಎಂದರೆ ಉತ್ತರಿಕೆ. ಆಂಗ್ಲ ಭಾಷೆಯಲ್ಲಿ ಉತ್ತರಿಕೆಯನ್ನು 'ಸ್ಕಾಪುಲರ್' ಎಂದು ಕರೆಯುತ್ತಾರೆ. ಸ್ಕಾಪುಲರ್ ಎಂದರೆ 'ಭುಜ' ಎಂದು ಅರ್ಥ. ಇದನ್ನು ಧಾರ್ಮಿಕ ವ್ಯಕ್ತಿಗಳು ಧರಿಸುತ್ತಿದ್ದರು. ಇದು ತಮ್ಮ ಮೇಲಂಗಿಯ ಮೇಲೆ ಕುತ್ತಿಗೆಯಿಂದ ಒಳಸೇರಿಸಿ ಭುಜದಿಂದ ಪಾದವನ್ನ ಹಿಂದೆ ಮತ್ತು ಮುಂದೆ ಮುಟ್ಟುವಷ್ಟು ಉದ್ದವಿತ್ತು. ಇದು ಸರಿ ಸುಮಾರು 14 ರಿಂದ 18 ಅಂಗುಲಗಳಷ್ಟು ಅಗಲವಿದ್ದು ಪ್ರಭುಕ್ರಿಸ್ತರ ನೊಗವೆಂದು ಸ್ವೀಕರಿಸಲಾಗುತ್ತಿತ್ತು. 

ಇದು ಮೂತ್ತ ಮೊದಲು ಸುಮಾರು 13ರನೇ ಶತಮಾನದಲ್ಲಿ ಕಾರ್ಮೆಲ್ ಮಾತೆಯ ಸಭೆಯ ಶ್ರೇಷ್ಟ ಗರುಗಳಾಗಿದ್ದತಂಹ ಸಂತ ಸ್ಯೆಮನ್ ಸ್ಟೊಕ್‌ರವರು, ಮಾತೆಮರಿಯಳಲ್ಲಿ ಅತಿರೇಕ ಭಕ್ತಿ ಮತ್ತು ವಿಶ್ವಾಸವಿಟ್ಟಿದ್ದಂತಹ ಕಾರಣ ಅವರಿಗೆ ದರ್ಶನವನ್ನು ನೀಡಿ ಈ ಉತ್ತರಿಕೆಯನ್ನು ಯಾರೆಲ್ಲಾ ಧರಿಸುತ್ತಾರೂ ಅವರಿಗೆ ಮೂಕ್ಷಭಾಗ್ಯ ದೊರೆಯುತ್ತದೆ ಎಂಬ ಭರವಸೆಯನ್ನು ನೀಡಿದರು ಎಂಬ ನಂಬಿಕೆ ಇಂದಿಗೂ ಇದೆ. 

ದ್ಯೆವಿಕ ಕರುಣೆಯ ಜಪಮಾಲೆಯನ್ನು ಅಸ್ತಿತ್ವಕ್ಕೆ ತಂದ ಸಂತ ಈಡಿತ್ ಸ್ಟೈನ್ ಹೀಗೆಂದಿದ್ದಾರೆ: ಉತ್ತರಿಕೆಯು ಮರಿಯಮ್ಮನವರ ರಕ್ಷಣೆಯ ಸಂಕೇತ ಮತ್ತು ಕಾರ್ಮೆಲ್ ಮಾತೆಯ ಕೃಪಾರಕ್ಷಣೆಯ ಬಾಹ್ಯಾ ಲಕ್ಷಣವಾಗಿದೆ. ಅಂತೆಯೇ ಸಂತ ಜಾನ್ ಪೌಲ್‌ರವರು ಉತ್ತರಿಕೆಯಲ್ಲಿ ಬಹಳ ನಂಬಿಕೆಯನ್ನಿರಿಸಿದ್ದರು. 1981 ರಲ್ಲಿ ಅವರನ್ನು ಕೊಲ್ಲಲು ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡನ್ನು ಹಾರಿಸಿದಾಗ ಅವರ ಕರುಳಿಗೆ ಅಪಾರ ಹಾನಿಯಾಗಿತು. ಆಗ ಅವರನ್ನು ಶಸ್ತ್ರ ಚಿಕಿತ್ಸೆಗೆ ಕೊಂಡೊಯ್ಯುತ್ತಿರುವಾಗ ತಮ್ಮ ಕೊರಳಿನಲ್ಲಿರುವ ಉತ್ತರಿಕೆಯನ್ನು ತೆಗೆಯಬಾರದು ಎಂದು ವಿನಂತಿಸಿದರು. ಅಂತೆಯೇ ಅವರು ಉತ್ತರಿಕೆಯ ಕುರಿತು ಹೀಗೆನ್ನುತ್ತಾರೆ; ಉತ್ತರಿಕೆ ಮರಿಯಮ್ಮನವರ ಭಕ್ತಿಯ ಸಾರಾಂಶವಾಗಿದ್ದು ಅದು ವಿಶ್ವಾಸಿಗಳ ಭಕ್ತಿಯನ್ನು ಪೋಷಿಸುತ್ತದೆ; ಮಾತೆಯ ಪ್ರಸನ್ನತೆ ಅವರಲ್ಲಿ ಸಜೀವವಾಗಿರುತ್ತದೆ ಎಂದು ಸಾರಿದರು. 

ಹೀಗಿರುವಲ್ಲಿ ಕಾರ್ಮೆಲ್ ಮಾತೆಯ ಕುರಿತು ಹಳೆಯ ಒಡಂಬಡಿಕೆ ಏನು ಬೋಧಿಸುತ್ತದೆ? 

1 ಅರಸರುಗಳ ಗ್ರಂಥ ಅಧ್ಯಾಯ: 18ರಲ್ಲಿ ನಾವು ಕಾರ್ಮೆಲ್ ಬೆಟ್ಟದ ಮಹತ್ವದ ಕುರಿತು ಆಲಿಸುತ್ತೇವೆ. ಇಸ್ರಯೇಲರ ಅರಸನಾದ ಆಹಾಬನು ತನ್ನ ದುಷ್ಟ ಕಾರ್ಯಗಳಿಂದ ದೇವರಿಗೆ ವಿರುದ್ಧವಾಗಿ ನಡೆದನು, ಆದಕಾರಣ ಸರ್ವೇಶ್ವರನ ಆಜ್ಞೆಯಂತೆ ಪ್ರವಾದಿ ಎಲೀಯನು ಆಹಾಬನು ನೆಲಸಿದ್ದಂತಹ ಸಮಾರಿಯ ಪಟ್ಟಣಕ್ಕೆ ಭೀಕರ ಕ್ಷಾಮ ಬರಲಿ ಎಂದು ಶಾಪವನ್ನು ನೀಡಿದನು. ಮೂರು ವರ್ಷಗಳ ನಂತರ ದೇವರ ಆಜ್ಞೆಯಂತೆ ಎಲೀಯನು, ಆಹಾಬನನ್ನು ಕರೆದುಕೂಂಡು ಕಾರ್ಮೆಲ್ ಬೆಟ್ಟದ ತುದಿಗೆ ಹೋಗಿ ಮೊಣಕಾಲೂರಿ ಜಪಿಸಿದನು. ಆಗ ಸಮುದ್ರದಿಂದ ಒಂದು ಚಿಕ್ಕ ಮೋಡವು ಏರಿ ಬರುವುದನ್ನು ಕಂಡರು. ಆ ಒಂದು ಚಿಕ್ಕ ಮೋಡವೇ ಅಂದು ಅವರು ಎದುರುನೋಡುತ್ತಿದ್ದಂತಹ ಲೋಕ ರಕ್ಷಕರ ತಾಯಿ ಎಂದು ಗುರುತಿಸಿ ಅಂದಿನಿಂದ ಬರಲಿರುವ ಲೋಕರಕ್ಷಕರ ತಾಯಿಗಾಗಿ ಪ್ರಾರ್ಥಿಸುತ್ತಿದ್ದರು. 

ಹಾಗಾದರೆ ಕಾರ್ಮೆಲ್ ಮಾತೆಗೂ ಮತ್ತು ನಮಗೂ ಇರುವ ಸಂಬಂಧವೇನು? ಕಾರ್ಮೆಲ್ ಮಾತೆ ನಮ್ಮೆಲ್ಲರಿಗೂ ಹೇಗೆ ಮಾತೆಯಾದರು? 

ಸಂತ ಪೌಲರು ಗಲಾತ್ಯರಿಗೆ ಬರೆದ ಪತ್ರ ಅಧ್ಯಾಯ 4: 4-7 ರಲ್ಲಿ ನಾವು ಆಲಿಸುತ್ತೇವೆ: ದೇವರು ದೇವಪುತ್ರರ ಪದವಿಯನ್ನು ನಮಗೆ ಒದಗಿಸಿ ಕೊಡುವುದಕ್ಕಾಗಿ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಅಂತೆಯೇ ನೀವು ದೇವರ ಮಕ್ಕಳಾಗಿರುವುದರಿಂದಲೇ, 'ಅಪ್ಪಾ, ತಂದೆಯೇ' ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. ಹಾಗಾದರೆ, ಪ್ರಭು ಕ್ರಿಸ್ತರ ತಂದೆಯನ್ನು 'ಅಪ್ಪಾ ತಂದೆಯೇ ಎಂದು ಕರೆಯುವ ಪ್ರಭು ಕ್ರಿಸ್ತರ ಆತ್ಮ ನಮ್ಮಲ್ಲಿರುವಾಗ ಪ್ರಭು ಕ್ರಿಸ್ತರ ತಾಯಿಯನ್ನು 'ಅಮ್ಮ' ಎಂದು ಕರೆಯಲು ನಾವು ಬಾಧ್ಯಸ್ಥರಲ್ಲವೇ? 

ಖಂಡಿತವಾಗಿಯೂ ಹೌದು, ಮಾತೆ ಮರಿಯಳು ನಮ್ಮೆಲ್ಲರ ತಾಯಿ, ಆಕೆ ನಮಗೆ ದೈಹಿಕವಾಗಿ ಜನ್ಮ ನೀಡಿಲ್ಲವಾದರೂ ಆಧ್ಯಾತ್ಮಿಕ ತಾಯಿಯಾಗಿ ನಮ್ಮೆಲ್ಲರನ್ನು ಪೋಷಿಸುತ್ತಿದ್ದಾರೆ. 

ಯೊವಾನ್ನ ಶುಭಸಂದೇಶ 19: 25-27ರಲ್ಲಿ ಶಿಲುಬೆಯ ಬಳಿಯಲ್ಲಿ ನಿಂತಿದ್ದಂತಹ ತಮ್ಮ-ತಾಯಿ ಮರಿಯಳನ್ನು ಮತ್ತು ಆಪ್ತ ಶಿಷ್ಯನನ್ನು ನೋಡಿ 'ಅಮ್ಮ, ಇಗೋ ನಿನ್ನ ಮಗ' ಎಂದರು. ಅನಂತರ ತಮ್ಮ ಶಿಷ್ಯನನ್ನು ಕುರಿತು, ಇಗೋ ನಿನ್ನ ತಾಯಿ ಎನ್ನುತ್ತಾರೆ. 

ನಮ್ಮಲ್ಲಿ ಹಲವರು, ಶುಭಸಂದೇಶದಲ್ಲಿ ಪ್ರಭುಕ್ರಿಸ್ತರು ತಮ್ಮ ಆಪ್ತ ಶಿಷ್ಯನಿಗೆ ಮಾತ್ರ ಇಗೋ, ನಿನ್ನ ತಾಯಿ ಎಂದು ನುಡಿದಿರುವುದು ಅದು ಹೇಗೆ ನಮ್ಮೆಲ್ಲರಿಗೂ ತಾಯಿ ಆಗಲು ಸಾಧ್ಯ ಎಂದು ಪ್ರಶ್ನಿಸಬಹುದು. ಕ್ರ್ಯೆಸ್ತ ಕಥೋಲಿಕ ಧರ್ಮೋಪದೇಶದ ಸಂಖ್ಯೆ 1213 ರಲ್ಲಿ ನಾವು ಕಾಣುತ್ತೇವೆ, ಜ್ಞಾನ್ನಸ್ನಾನ ಪಡೆದು ಕ್ರೈಸ್ತರಾಗಿರುವ ನಾವೆಲ್ಲರೂ ಪ್ರಭು ಕ್ರಿಸ್ತನ ಯಾತನೆ, ಮರಣ ಮತ್ತು ಪುನರುತ್ಥಾನದಲ್ಲಿ ಪಾಲುಗಾರರಾಗಿದ್ದೇವೆ ಎಂದು. ಆದುದರಿಂದ ನಾವೆಲ್ಲರೂ ಕ್ರಿಸ್ತನ ಹಾದಿಯನ್ನು ಪಾಲಿಸಲು ಕರೆಯಲ್ಪಟ್ಟವರು. ನಾವು ಪ್ರಭು ಕ್ರಿಸ್ತರ ಪರಿಯನ್ನು ಪಾಲಿಸಿದ್ದೇ ಆದಲ್ಲಿ ನಾವು ಕೂಡ ಪ್ರಭು ಕ್ರಿಸ್ತರ ಆಪ್ತರಾಗುತ್ತೇವೆ. ಏಕೆಂದರೆ ಯೊವಾನ್ನನ ಶುಭಸಂದೇಶ 15:14ರಲ್ಲಿ ಪ್ರಭುಕ್ರಿಸ್ತರು ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು ಮತ್ತು ಯೊವಾನ್ನ 15:15ರಲ್ಲಿ ನಾನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ ಬದಲಾಗಿ ಗೆಳೆಯರೆಂದು ಕರೆದಿದ್ದೇನೆ ಎಂದು ನುಡಿಯುತ್ತಾರೆ. ಅದುದರಿಂದ ಕ್ರಿಸ್ತನ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬರೂ ಕ್ರಿಸ್ತನಿಗೆ ಆಪ್ತಶಿಷ್ಯರು ಮತ್ತು ಮಾತೆ ಮರಿಯಳ ಮಕ್ಕಳು ಆಗಿದ್ದೇವೆ. 

ಪ್ರಿಯರೇ ಪ್ರತೀ ವರ್ಷ ನಾವು ಕಾರ್ಮೆಲ್ ಮಾತೆಯ ಹಬ್ಬವನ್ನು ಬಹಳ ಅದ್ದೂರಿಯಿಂದ ಅಚರಿಸುತ್ತಿದ್ದೇವೆ, ಆದರೆ ಕಾರ್ಮೆಲ್ ಮಾತೆಯ ಗುಣಗಳನ್ನು ನಮ್ಮ ಜೀವನದಲ್ಲಿ ಕಿಂಚಿತ್ತು ಪಾಲಿಸದ ಹೊರತು ಈ ಹಬ್ಬಕ್ಕೆ ನಿಜವಾದ ಅರ್ಥ ಸಿಗುವುದಿಲ್ಲ. ಅದುದರಿಂದ ಕಾರ್ಮೆಲ್ ಮಾತೆಯ ವಿಶೇಷವಾದ ಈ ಮೂರು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. 

ಮೊದಲನೆಯದಾಗಿ, ಹಳೆಯ ಹೊಡಬಂಡಿಕೆಯಲ್ಲಿ ಇಸ್ರಯೇಲ್ ಜನಾಂಗವು ಕ್ಷಾಮದಿಂದ ತತ್ತರಿಸುತ್ತಿದ್ದತಂಹ ಸಮಯದಲ್ಲಿ ಸಮುದ್ರದಿಂದ ಮೋಡವು ಮಳೆಯನ್ನು ಹೊತ್ತು ತಂದಂತೆ, ನಮ್ಮನ್ನು ಪಾಪದಿಂದ ವಿಮುಕ್ತಗೊಳಿಸಲು ಮಾತೆಮರಿಯಳು ತನ್ನ ಮಗನನ್ನು ಹೊತ್ತು ತಂದರು. ಅಂತಹ ಮಾತೆಯನ್ನು ಪ್ರತಿ ದಿನ ನಮ್ಮ ಮನೆಗಳಲ್ಲಿ, ಪ್ರಾರ್ಥನೆ ಮತ್ತು ಜಪಸರ ಮಾಡುವುದರ ಮೂಲಕ ನಮ್ಮ ಮನೆ ಮತ್ತು ನಮ್ಮ ಮನಗಳಲ್ಲಿ ಮಾತೆಯನ್ನು ಸ್ವೀಕರಿಸೋಣ. ಏಕೆಂದರೆ ಯೊಹಾನ್ನ 2:1-10ರಲ್ಲಿ ಹೇಳುವಂತೆ, 'ಎಲ್ಲಿ ಯೇಸುವನ್ನು ಆಹ್ವಾನಿಸುತ್ತಾರೊ, ಅಲ್ಲಿ ಮಾತೆ ಮರಿಯಳನ್ನು ಆಹ್ವಾನಿಸಲಾಗುವುದು, ಎಲ್ಲಿ ಮಾತೆ ಮರಿಯಳನ್ನು ಸ್ವಾಗತಿಸುತ್ತಾರೊ, ಅಲ್ಲಿ ಪ್ರಭು ಯೇಸುವಿನ ಪ್ರಸ್ನತೆ' ಇರುತ್ತದೆ. 

ಎರಡನೇಯದಾಗಿ, ದುಃಖಿತರಿಗೆ, ನೊಂದವರಿಗೆ ಸಾಂತ್ವನವನ್ನು ನೀಡುವವರು ಮಾತೆ ಮರಿಯಮ್ಮನವರು. ಕಾನಾ ಮದುವೆಯಲ್ಲಿ ದ್ರಾಕ್ಷಾರಸವು ಮುಗಿದು ಹೋಗಿ ಕಂಗಾಲಾಗಿದ್ದಾಗ, ಅವರ ಕೊರತೆಯನ್ನು ನೀಗಲು ಬೇಡಿಕೊಂಡವಳು ಮಾತೆಮರಿಯಳು. ಇಂದು ನಾವು ನಮ್ಮ ನೆರೆಹೊರೆಯವರು ಕಷ್ಟದಲ್ಲಿರುವುದನ್ನು ಕಂಡಾಗ ನಮ್ಮ ಪ್ರತಿಕ್ರಿಯೆ ಎಂತಹದ್ದು? ಅನೇಕ ಬಾರಿ ಅವರರ ಕಷ್ಟ ಅವರವರಿಗೆ ಎಂದು ವ್ಯಂಗ್ಯವನ್ನಾಡುತ್ತೇ. ಬದಲಾಗಿ, ಮಾತೆ ಮರಿಯಳಂತೆ ನೊಂದವರಿಗೆ, ಬಡವರಿಗೆ, ಕಷ್ಟದಲ್ಲಿರುವವರಿಗೆ ನಮ್ಮ ಸಹಾಯ ಹಸ್ತವನ್ನು ನೀಡುವಂತವರಾಗೋಣ. 

ಮೂರನೆಯದಾಗಿ, ಕ್ರಿಸ್ತನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದವಳು ಮಾತೆ ಮರಿಯಳು. ಅವರು ಕ್ರಿಸ್ತನನ್ನು ಜನನದಿಂದ ಮರಣದವರೆಗೂ ಹಿಂಬಾಲಿಸದರು. ಲೂಕ 12:34ರಲ್ಲಿ ಪ್ರಭು ಕ್ರಿಸ್ತರು ಹೀಗೆಂದಿದ್ದಾರೆ: 'ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ' ಎಂದು. ಮಾತೆಯ ನಿಧಿಯೂ, ಹೃದಯವೂ ಮತ್ತು ಸರ್ವಸ್ವವೂ ಪ್ರಭುಕ್ರಿಸ್ತರಾಗಿದ್ದರು. ಆದರೆ ನಮ್ಮ ನಿಧಿ ಎಲ್ಲಿದೇ? ಪರಿಕ್ಷಿಸಿ ನೋಡಬೇಕಾಗಿದೆ. ಒಂದು ವೇಳೆ ಪ್ರಾಪಂಚಿಕ ವಸ್ತುಗಳಲ್ಲಾದರೆ! ಮಾತೆ ಮರಿಯಳಂತೆ ಎಲ್ಲವನ್ನೂ ತೊರೆದು ಪ್ರಭುಕ್ರಿಸ್ತರನ್ನು ನಮ್ಮ ನಿಧಿಯಾಗಿಸಿಕೊಳ್ಳೋಣ. 

*****



ಒಂದೇ ಒಂದು ಕ್ಷಣ




ಒಂದೇ ಒಂದು ಕ್ಷಣ ನಿನ್ನ ಬದಿ 
ಕೂರಲನುಗ್ರಹಿಸು ಸ್ವಾಮಿ,
ನನ್ನ ಕೈಯೊಳಗಿನ ಕೆಲಸವನ್ನೆಲ್ಲ 
ಆಮೇಲೆ ಮುಗಿಸುವೆ

ನಿನ್ನ ಮುಖ ಮರೆಯಾದರದೋ, 
ನನ್ನೆದೆ ಡವಗುಟ್ಟುವುದು,
ದುಡಿಮೆಯದು ದಡಕಾಣದ ಕಡಲಲಿ 
ಮುಗಿಯದ ಜೀತವಾಗುವುದು,

ಇಂದೆನ್ನ ಕಿಟಕಿಯಲಿ ಬೇಸಿಗೆಯು ನುಸುಳಿದೆ 
ನಿಟ್ಟುಸಿರು ಗೊಣಗಾಟವನೊತ್ತು;
ಹೂದೋಟದಿ ದುಂಬಿಗಳು ಎಡಬಿಡದೆ ಕಿರುಲುತಿವೆ 
ಶೋಕಗೀತೆಯ ಸುತ್ತು.

ಇದುವೇ ತಕ್ಕ ಸಮಯ, ಈ ನೀರವದ 
ನಿಡಿದಾದ ಬಿಡುವಿನಲಿ,
ನಿನಗೆದುರುಬದುರಾಗಿ ಸುಮ್ಮನೆ ಕುಳಿತು, 
ಬದುಕಲು ಪಣತೊಡುವೆ.



(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ
I ask for a moment's indulgence to sit by thy side 
ಪದ್ಯದ ಅನುವಾದ ಸಿ ಮರಿಜೋಸೆಫ್ ನವರಿಂದ)



ಸ್ಮಶಾನ ಮಾತು - ಆಜು (ಮರಿಯಾಪುರ)


ಬದುಕು ಎಂದರೇನು ಹುಟ್ಟು ಸಾವಿನ ಮಧ್ಯದ ಹಾದಿಯೇ? ಅಥವಾ ಹೆಸರು ಮತ್ತು ದುಡ್ಡು ಮಾಡಬೇಕೆಂದು ಹಂಬಲಿಸುತ್ತ ನಡೆಸುವ ತಿಕ್ಕಲಾಟವೆ? ಇತರರನ್ನು ಮೆಚ್ಚಿಸಬೇಕೆಂದು ಕಳೆವ ಶೋಕಿಯೇ? ಏನಾದರೂ ಸಾಧಿಸಲು ಮನಷ್ಯನಿಗೆ ಸಿಗುವ ಸಮಯವೇ? ಬದುಕಿಗೆ ಸರಿಯಾದ ಅರ್ಥ ಯಾವುದು? ಸಾವಿನ ಸತ್ಯ ತಿಳಿಯುವವರೆಗೂ ಬದುಕಿನ ಅರ್ಥ ಕಾಣದೆಂದು ಅನಿಸುವಷ್ಟರಲ್ಲಿ ನಾನು ನಮ್ಮೂರ ಸ್ಮಶಾನದ ಗೇಟಿನ ಬಳಿ ಬಂದು ನಿಂತಿದ್ದೆ.
ಅಲ್ಲ ಬದುಕು ಎಂಬ ಪ್ರಶ್ನೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತೇ? ಬದುಕು ಸಾವು ಅದರ ಅರ್ಥ ಅನರ್ಥಗಳ ಕಂಡವರು ಸಿಗುವುದು ಇಲ್ಲೇ ಅಲ್ಲವೇ? ಎಂದೆನ್ನುತ್ತ ಒಳ ನಡೆದೆ.
ಹೊರಗಿನ ಸುಡು ಬಿಸಿಲನ್ನು ಮರೆಸಿ ತಂಪು ನೀಡಲು ಸ್ಮಶಾನದ ಒಳಗಿನ ಸಿಲ್ವರ್ ಓಕ್ ಮರಗಳ ನೆರಳು ನೆಲದ ಮೇಲೆ ಅಂಗಾತ ಮಲಗಿದ್ದವು. ಸತ್ತವರ ಸಾರವನ್ನೆಲ್ಲಾ ಎಳೆದು ಬೆಳೆದು ನಿಂತಿದ್ದ ಆಲದಮರದಿಂದ ಬೇಸತ್ತು ಬಿದ್ದ ಹಣ್ಣೆಲೆಗಳು ಹಾಸಿಗೆಯಂತೆ ಗಾಢವಾಗಿ ಹರಡಿದ್ದವು. ಊರಿನೊಳಗೆ ಮಹಲುಗಳಂತಹ ಮನೆಗಳ ಕಟ್ಟಿಕೊಂಡವರು. ಇಲ್ಲಿ ಆರು ಮೂರಡಿಯ ಗುಂಡಿಯೊಳಗೆ ಎದೆಯ ಮೇಲೆ ಕೈ ಇಟ್ಪು ಮಲಗಿದ್ದಾರೆ. ಸ್ಮಶಾನ ಮೌನವೆಂದರೆ ಇದೇ ಅಲ್ಲವೇ?
ಇನ್ನೂ ಮುಂದಕ್ಕೆ ನಡೆದು ಅಲ್ಲಿದ್ದ ಒಂದು ಗೋರಿಯ ಎದುರು ಕುಳಿತೆ. ಅರೆರೇ! ಇದು ಅವನ ಗೋರಿ ಇಪ್ಪತ್ತು ವರ್ಷಗಳ ಹಿಂದೆ ತನ್ನ ಮೂರನೇ ವಯಸ್ಸಿಗೆ ಅದ್ಯಾವುದೋ ದೊಡ್ಡ ಕಾಯಿಲೆ ಬಂದು ಸತ್ತ ಡೇವಿಡನ ಗೋರಿ. ಅವನೇನಾದರೂ ಇಂದು ಜೀವಂತವಾಗಿದ್ದರೆ ಅವನಿಗೂ ನನ್ನಷ್ಟೆ ವಯಸ್ಸಾಗಿರುತ್ತಿತ್ತು. ಬಡ್ಡಿಮಗ ಸತ್ತು ಬದುಕಿ ಹೋದ. ಬದುಕಿನ ಕಣ್ಣು ತೆರೆಯುವ ಮೊದಲೇ ಕಣ್ಣು ಮುಚ್ಚಿಕೊಂಡ. ಇಲ್ಲದಿದ್ದರೆ ಇವನು ನನ್ನಂತೆ ಬದುಕು, ಭವಿಷ್ಯ, ಸುಖ, ದುಖ, ಪ್ರೇಮ, ಕಾಮಗಳೆಂಬ ಮಾನವ ಸಂಚಿತ ಕರ್ಮಗಳಲ್ಲಿ ದಿನ ದಿನವೂ ಸಾಯುತ್ತಿದ್ದ. ಈಗ ಒಂದೇ ಬಾರಿ ಸತ್ತು ನೆಮ್ಮದಿಯಿಂದಿದ್ದಾನೆ.
ಹಾಗಾದರೇ ಸಾವು ಬರುವವರೆಗೂ ಮನಬಂದಂತೆ ಜೀವಿಸಿ ಬಿಟ್ಟರೆ ಅದು ಬದುಕೇ? ಯಾರು ಉತ್ತರಿಸುವರು ಈ ನನ್ನ ಪ್ರಶ್ನಗಳಿಗೆ? ಈ ಗೋರಿಯ ಕೆಳಗೆ ಮಕಾಡೆ ಮಲಗಿ ಬಿದ್ದಿರುವ ಡೇವಿಡನೇ? ಅವನಿಗೇನು ತಿಳಿದೀತು? ಬೆರಳು ಚೀಪುತ್ತಲೇ ಸತ್ತು ಇಲ್ಲಿಗೆ ಬಂದವನು. ಇವನೇನು ಬದುಕ ಕಂಡ? ಕಂಡವರಿಗೆ ಇನ್ನೂ ಕಾಣದಷ್ಟು ತುಂಬ ಇದೆ! ಏನಿದೆ ಮಣ್ಣು!ಸ್ಮಶಾನದ ಮೌನ ಮುರಿದಂತೆ ಹೊರಗಿನಿಂದಲ್ಲ ಒಳಗಿನಿಂದ ಯಾರೋ ಮಾತನಾಡಿದರು. ಆ ಮಾತು ಹೊರ ಬರುತ್ತಿದಂತೆ ತಣ್ಣನೆಯ ಗಾಳಿ ಎರಡು ನಿಮಿಷ ಬಿರುಸಾಗಿ ಬೀಸಿ ಸುಮ್ಮನಾಯಿತು. ನಿಂತ ಮರಗಳ ಎಲೆಗಳು ಕುಣಿಯ ತೊಡಗಿದವು. ಮಲಗಿದ್ದ ಧೂಳು,ಮಣ್ಣು ಎದ್ದು ಒಂದು ಸುತ್ತು ತಿರುಗಿ ಮತ್ತೆ ನೆಲಗೆ ಬಿದ್ದವು. ಕಣ್ಣ ಮುಂದೆ ಇದ್ದ ಡೇವಿಡನ ಗೋರಿ ಬಿರುಕು ಬಿಟ್ಟಂತಾಯಿತು. ಗೋರಿಯ ಒಳಗೆ ಮಗುವಿನಂತೆ ಮಲಗಿದ ಡೇವಿಡ ನನ್ನ ಸ್ಮೃತಿ ಪಟಲದಲ್ಲಿ ಮಾತನಾಡ ತೊಡಗಿದ. "ಏನಿದೆ ಮಣ್ಣು! ಏನು ನೀವು ಕಂಡಿದ್ದು ಈ ಜಗತ್ತಿನಲ್ಲಿ? ಹೆಸರಿಗಷ್ಟೆ ಬದುಕಿರುವ ನೀವು ಸತ್ತವರಿಗಿಂತ ಹೆಚ್ಚು ನಾರ ತೊಡಗಿದ್ದೀರಿ. ಹೊಲಸು ಹೆಣದ ವಾಸನೆ ಮನುಷ್ಯತ್ವ ಸತ್ತ ಆ ನಿಮ್ಮ ಮನಸ್ಸುಗಳಲ್ಲಿ. ಬದುಕು ಎಂದರೆ ಏನು ಗೊತ್ತೇ? ನೀನು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವುದು. ಇಲ್ಲ! ನಿಮಗೆ ಅದು ಬದುಕಲ್ಲ, ನಿಮ್ಮ ಬದುಕುಗಳು ಇನ್ನೊಬ್ಬರ ಜೀವನ ಕಸಿದು ನೀವು ಸಂತೋಷದಿಂದಿರುವುದು ಅಲ್ಲವೆ? ಹುಟ್ಟುವ ಹಸುಗೂಸುಗಳು ಈ ಜಗತ್ತಿಗೆ ಬರುವ ಮುನ್ನವೇ ಇಕ್ಕಳ ಹಾಕಿ ಹೊರ ತೆಗೆದು ಸುಲಿಗೆ ಮಾಡುವ ಡಾಕ್ಟರಗಳದು ಒಂದು ಬದುಕೇ? ಅನ್ಯಾಯವಾದಾಗ ಲಂಚ ಕಿತ್ತು ಕೆಲಸ ಮಾಡುವ ಪೋಲಿಸರದು ಒಂದು ಬದುಕೇ? ದೇವರ ಹೆಸರಿನಲ್ಲಿ ಭಕ್ತರ ದೋಚುವವರದು ಒಂದು ಬದುಕೇ? ಇವೆಲ್ಲ ಬದುಕೆಂದರೆ ಬದುಕು ಎಂಬ ಪದಕ್ಕೆ ನಾಚಿಕೆಯಾಗುತ್ತಷ್ಟೇ ! 
ನಾನು ಬದುಕಬೇಕೆಂದು ಎಷ್ಟು ಹಪಹಪಿಸಿದೆ ಗೊತ್ತಾ? ನನ್ನ ಅಮ್ಮ ನನಗಾಗಿ ಕಂಡ ಕಂಡವರ ಮುಂದೆ ಕೈ ಚಾಚಿ ಬೇಡಿಕೊಂಡಳು, ರೋಧಿಸಿದಳು, ಅವಳ ಅಳಲು ಕೇಳಿಸಿದ್ದು ನನಗೆ ಮಾತ್ರ, ಈ ಜಗತ್ತಿಗಲ್ಲ. ಸತ್ತ ನನ್ನ ಆಕೆ ಹೊತ್ತು ತಂದಾಗ ಕೂಡ ಈ ಜಗತ್ತು ಆಕೆಯನ್ನು ಬಿಡಲಿಲ್ಲ. ಮಣ್ಣಿಂದ ಬಂದ ದೇಹ ಮತ್ತೆ ಮಣ್ಣು ಸೇರಲು ಇಲ್ಲಿ ಕೂಲಿ ಕೊಡಬೇಕು. ಇದು ನಿನ್ನ ಜಗತ್ತು. ಇಲ್ಲಿ ನೀನು ಬದುಕಿನ ಪ್ರಶ್ನೆ ಹಾಕುತ್ತಿರುವುದು ಯಾರಿಗೆ? ಇಲ್ಲಿ ಬದುಕಿನ ಅರ್ಥ ಬಲ್ಲವನು ಬದುಕುವ ಯೋಗ್ಯತೆ ಕಳೆದು ಕೊಳ್ಳುತ್ತಾನೆ. ನೀನು ಬದುಕಿನ ಅರ್ಥವನ್ನು ಹುಡುಕುವ ಬದಲು ನಿನ್ನ ಬದುಕನ್ನು ಅರ್ಥಭರಿತವಾಗಿ ಮಾಡಿಕೊ. ಪರರ ನಿಂದಿಸದೆ ಬದುಕು. ಕಷ್ಟ ಪಡುವವರಿಗೆ ಸಹಾಯ ಮಾಡು. ಕಸಿದು ತಿನ್ನುವ ಬದಲು ಹಂಚಿ ತಿನ್ನು. ಇದಕ್ಕಿಂತ ಇನ್ನೇನು ಬೇಕು ನಿನಗೆ ಬದುಕಿನ ಅರ್ಥ. ನನಗೆ ಸಿಗದ ಬದುಕು ನಿನಗೆ ಸಿಕ್ಕಿರೋದು ನಿನ್ನ ಅದೃಷ್ಟ. ಸುಮ್ಮನೇ ಬದುಕು ಅಂದ್ರೆ ಏನು ಅಂತ ವ್ಯರ್ಥ ಕಾಲಹರಣ ಮಾಡದೆ ಹೋಗಿ ಬದುಕು. ನಿನ್ನ ಪಯಣ ಮುಗಿದ ಮೇಲೆ ಮತ್ತೆ ಇಲ್ಲೇ ಸಿಗೋಣ, ಟಾಟಾ" ಎಂದು ಹೇಳಿ ಗೋರಿ ಒಳಗೆ ಹೊರಟ.
ಅಲ್ಲಿಯವರೆಗೂ ಮಂತ್ರಮುಗ್ಧನಾಗಿ ನಿಂತಿದ್ದ ನನಗೆ ಇದೇನು ನಿಜವೋ ಭ್ರಮೆಯೋ ಒಂದು ತಿಳಿಯಲಿಲ್ಲ. ಆದರೆ ಡೇವಿಡನು ಹೇಳಿದ ಮಾತು ಅಕ್ಷರಶಃ ಸತ್ಯವೆನಿಸಿತ್ತು. ಬದುಕು ಒಂದು ಬಹುಮಾನ. ಅದನ್ನು ಅರ್ಥಪೂರ್ಣವಾಗಿಸ ಬೇಕಷ್ಟೇ ಎನ್ನುತ್ತ ಮನೆಯ ಕಡೆ ನಡೆದೆ.

*****





ಸಂತ ಯೊವಾನ್ನರ ಶುಭಸಂದೇಶ – 11 - ಸಹೋ. ವಿನಯ್ ಕುಮಾರ್ ಚಿಕ್ಕಮಗಳೂರು


ಕಳೆದ ಬಾರಿ ನಾವು ಐತಿಹಾಸಿಕ ಸನ್ನಿವೇಶ ಸಮುದಾಯದ ಹೊರಗಡೆಯಿಂದ ಹೇಗೆ ಶುಭ ಸಂದೇಶಕ್ಕೆ ತನ್ನದೇ ಆದ ರೀತಿಯಲ್ಲಿ ಛಾಪನ್ನು ಮೂಡಿಸಿದೆ ಎಂದು ನೋಡಿದೆವು. ಈಗ ಎರಡನೆಯ ವಿಷಯ ಐತಿಹಾಸಿಕ ಸನ್ನಿವೇಶ ಸಮುದಾಯದ ಒಳಗಡೆಯಿಂದ ಹೇಗೆ ಉದ್ಭವಿಸಿ ಅದು ಶುಭ ಸಂದೇಶವನ್ನು ಪ್ರೇರೇಪಿಸಿದೆ ಎಂದು ನೋಡೋಣ.


ಸಮುದಾಯದೊಳಗಿನ ಐತಿಹಾಸಿಕ ಸನ್ನಿವೇಶಗಳು ಹೇಗೆ ಶುಭಸಂದೇಶವನ್ನು ಪ್ರೇರೇಪಿಸಿತು ಎಂದು ತಿಳಿಯೋಣ. ಕನ್ನಡದಲ್ಲಿ ಒಂದು ಮಾತಿದೆ ಊರೆಂದರೆ ಹೊಲಗೇರಿ ಇದ್ದೇ ಇರುತ್ತೆ ಎಂದು. ಹಾಗೂ ಸಮುದಾಯ ಎಂದ ಮೇಲೆ ಅದರದೇ ಆದಂತಹ ಕಷ್ಟ, ತೊಂದರೆ, ಸವಾಲುಗಳು ಇದ್ದೇ ಇರುತ್ತವೆ. ಯೊವಾನ್ನರ ಸಮುದಾಯದಲ್ಲೂ ಕೆಲ ತೊಂದರೆಗಳು ಗೊಂದಲಗಳು ಮತ್ತು ಹತಾಶೆಗಳು ಇದ್ದವು. ಅದಕ್ಕೆ ಎರಡು ಮುಖ್ಯ ಕಾರಣಗಳು.

ಮೊದಲನೆಯ ಕಾರಣ - ಯೊವಾನ್ನರ ಶುಭಸಂದೇಶ ಬರುವ ಹೊತ್ತಿಗಾಗಲೇ ಪ್ರೇಷಿತರೆಲ್ಲ ಮರಣ ಹೊಂದುತ್ತಿದ್ದರು. ಪ್ರೇಷಿತರ ಮರಣದಿಂದಾಗಿ ಸಮುದಾಯದಲ್ಲಿ ಗೊಂದಲಗಳು ಪ್ರಾರಂಭವಾಗಲು ಕಾರಣವಾಗಿತ್ತು. ಏಕೆಂದರೆ ನಾಯಕತ್ವದ ಬದಲಾವಣೆ ಸಹ ಆಗಬೇಕಿತ್ತು. ಕೆಲವರು ಪ್ರೇಷಿತರು, ಪ್ರೇಷಿತರ ಪ್ರತಿನಿಧಿಗಳಿಗೆ ಸಾವಿಲ್ಲ ಎಂಬ ನಂಬಿಕೆಯಿಂದ ಜೀವಿಸುತ್ತಿದ್ದರು. ಈ ರೀತಿಯಾದಂತಹ ನಂಬಿಕೆ ಅವರಲ್ಲಿ ಗಾಳಿ ಸುದ್ದಿಯಂತೆ ಪ್ರಚಲಿತವಾಗಿತ್ತು. ಇದಕ್ಕೆ ಪೂರಕವೆಂಬಂತೆ ಯೊವಾನ್ನರ ಶುಭಸಂದೇಶದಲ್ಲಿ 21:23 ರಲ್ಲಿ ನಾವು ಕಾಣುತ್ತೇವೆ "ಇದರಿಂದಾಗಿ ಆ ಶಿಷ್ಯನಿಗೆ ಸಾವು ಇಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತ್ತು. ಯೇಸು ತಾವು ಬರುವ ತನಕ ಅವನು ಹಾಗೆಯೇ ಇರಬೇಕೆಂದು ನನ್ನ ಬಯಕೆ ಆದರೆ ಅದರಿಂದ ನಿನಗೇನಾಗಬೇಕು? ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಪ್ರೇಷಿತನಿಗೆ ಸಾವಿಲ್ಲ ಎಂದುಕೊಂಡರು. ಎರಡನೆಯ ಕಾರಣ - ಶುಭಸಂದೇಶ ಸಂಯೋಜಿಸುವ ಸಮಯದಲ್ಲಿ ಸಮುದಾಯದಲ್ಲಿ ಕಂಡುಬಂದಂತಹ ಧರ್ಮವಿರೋಧಿ/ತತ್ವವಿರೋಧಿ ಗುಂಪುಗಳ ತತ್ವಗಳು ಮತ್ತು ವ್ಯಾಖ್ಯಾನಗಳು. ಅವು ಯಾವುವೆಂದರೆ: 

1. ಚೇರಿಂತಿಯನಿಸಂ. (Cherinthianism), 
2. ಡೋಸೆಟಿಸಂ (Docetism),
3. ನೊಸ್ಟೀಸಿಸಂ (Gnosticism)

1. ಚೇರಿಂತಿಯನಿಸಂ. (Cherinthianism) - ಇದೊಂದು ಪಾಷಂಡವಾದ ಇದು ಚೇರಿಂತಿಯನ್ ಅವರ ಹೆಸರಿನಿಂದ ಬಂದಿದೆ. ಈ ಗುಂಪು ಯೇಸು ಸ್ವಾಮಿಯ ದೈವತ್ವವನ್ನು ನಿರಾಕರಿಸಿತು, ದೇವರು ಈ ಲೋಕವನ್ನು ಸೃಷ್ಟಿಸಿದ್ದಾರೆ ಎನ್ನುವುದನ್ನು ಕೂಡ ನಿರಾಕರಿಸಿತು. ಆ ಪ್ರಕಾರ ಯೇಸುಕ್ರಿಸ್ತ ಎನ್ನುವವರು ಮಾನವ ಮಾತ್ರ, ಯೇಸು ಎನ್ನುವವರ ಮೇಲೆ ದೀಕ್ಷಾಸ್ನಾನದ ಸಮಯದಲ್ಲಿ ಕ್ರಿಸ್ತ (ಅಭಿಷಿಕ್ತ ಲೋಕೋದ್ಧಾರಕ) ಇಳಿದುಬಂದ. ಇದೇ ಕ್ರಿಸ್ತ ಯೇಸುವಿನ ಮರಣಕ್ಕೆ ಮುನ್ನ ಆರಿಹೋದ ಎಂದು ತಿಳಿಸುತ್ತಾರೆ. ಇದಕ್ಕೆ ಅವರು ಯೋವಾನ್ನರ ಶುಭಸಂದೇಶದ ವಾಚನ 19:30 ಅನ್ನು ಆಧಾರವಾಗಿಟ್ಟುಕೊಂಡು ಹೀಗೆನ್ನುತ್ತಾರೆ "ಯೇಸು ಹುಳಿರಸವನ್ನು ಸೇವಿಸುತ್ತಲೇ 'ಎಲ್ಲಾ ನೆರವೇರಿತು', ಎಂದು ನುಡಿದು ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿದರು". ಈ ವಾಚನವನ್ನು ಆದರಿಸಿ ಅವರ ತತ್ವಕ್ಕೆ ಸತ್ವವನ್ನಾಗಿಸಿಕೊಂಡಿದ್ದಾರೆ. ಈ ದೈವತ್ವದ ಕ್ರಿಸ್ತನ ಇರುವಿಕೆ ಕೇವಲ ಕ್ಷಣಿಕ ಎಂದು ಬೋಧಿಸುತ್ತಾರೆ.

ಆದರೆ ಯೊವಾನ್ನರ ಶುಭ ಸಂದೇಶವು ಕ್ರಿಸ್ತನ ದೈವತ್ವವನ್ನು ದೃಢೀಕರಿಸುತ್ತದೆ. ಅವರ ದೈವತ್ವವು ಅವರು ಬರುವ ಮುಂಚೆಯೂ, ಅವರು ಭೂಲೋಕದಲ್ಲಿ ಜೀವಿಸುತ್ತಿದ್ದಾಗಲೂ, ಅವರ ಮರಣದ ನಂತರವೂ ಇದೆ ಎಂದು ಪ್ರತಿಪಾದಿಸಿತು. ಯೊವಾನ್ನರ ಶುಭಸಂದೇಶ 1:1 ರಲ್ಲಿ ದೈವತ್ವವನ್ನು ತಮ್ಮ ದೈಹಿಕ ಅಸ್ತಿತ್ವಕ್ಕಿಂತ ಮುಂಚೆಯೇ ಇತ್ತು ಎಂಬುದನ್ನು ನೋಡಬಹುದು. 5:18ರಲ್ಲಿ ಯಹೂದ್ಯರ ಆರೋಪ ಸತ್ಯವಾಗಿದೆ. 20:28ರಲ್ಲಿ ತೋಮನ ವಿಶ್ವಾಸ ಪ್ರಕಟಣೆಯು ಸತ್ಯವಾಗಿದೆ. ಸಂತ ಯೊವಾನ್ನರ ಶುಭಸಂದೇಶವು 1:3ರಲ್ಲಿ " ದಿವ್ಯ ವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದು ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ. ಈ ವಚನದಲ್ಲಿ ಮೇಲೆ ಕಂಡ ಸಿದ್ದಾಂತವನ್ನು ಸುಳ್ಳೆಂದು ನಿರೂಪಿಸುತ್ತದೆ. ವಿದ್ವಾಂಸರ ಪ್ರಕಾರ ಈ ಪಂಗಡದವರು 19:30 ಅನ್ನು ಇವರು ತಪ್ಪಾಗಿ ಗ್ರಹಿಸಿಕೊಂಡರು. ಈ ಪಂಗಡದವರ ವಿರುದ್ಧವಾಗಿ ಶುಭ ಸಂದೇಶವು ಯೇಸುಸ್ವಾಮಿಯ ದೈವತ್ವವನ್ನು ದೃಡಪಡಿಸುತ್ತದೆ. ಇದಕ್ಕೆ ಉದಾಹರಣೆ. 1:1, 5:18, 10:30, 14:9 ಮತ್ತು 21:28. ಈ ವಚನಗಳಲ್ಲಿ ಶುಭ ಸಂದೇಶವು ಕ್ರಿಸ್ತನ ದೈವತ್ವವನ್ನು ದೃಢೀಕರಿಸಿ ಪಾಷಾಂಡವಾದದ ವಿರುದ್ಧ ಹೋರಾಡುತ್ತದೆ.

2. ಡೋಸೆಟಿಸಂ ( Docetism) - ಈ ಪದದ ಮೂಲ ಅರ್ಥ 'ಕಾಣುವ ಹಾಗೆ' ಎಂದು. ಈ ಗುಂಪಿನ ವಾದ ಯೇಸುಸ್ವಾಮಿ ಮಾನವರಾಗಿರಲಿಲಲ್ಲ ಬದಲಾಗಿ ಮಾನವರಂತೆ ಕಂಡರು. ಅವರು ನಿಜವಾಗಿಯೂ ಮಾನವರಾಗಿರಲಿಲ್ಲ ಬದಲಾಗಿ ದೈವ ಸಂಭೂತರಾಗಿದ್ದರು. ಇದಕ್ಕೆ ಅವರು ಫಿಲಿಪ್ಪಿಯವರಿಗೆ ಬರೆದ ಪತ್ರ 2:7 ತಮ್ಮ ವಾದಕ್ಕೆ ಸಾಕ್ಷಿಯಾಗಿ ಇಟ್ಟುಕೊಂಡಿದ್ದರು. "ತನ್ನನ್ನೇ ಬರಿದು ಮಾಡಿಕೊಂಡು, ದಾಸನ ರೂಪವನ್ನು ಧರಿಸಿಕೊಂಡು, ಮನುಜನ ಆಕಾರದಲ್ಲಿ ಕಾಣಿಸಿಕೊಂಡು, ಮಾನವರಿಗೆ ಸರಿಸಮನಾದ" ಮನುಜನ ಆಕಾರದಲ್ಲಿ - ಇಲ್ಲಿ ಅವರು ಈ ವಿಷಯವನ್ನು ಅಧಾರಿಸಿಕೊಂಡು ತಮ್ಮ ಸಿದ್ಧಾಂತವನ್ನು ರೂಪಿಸಿಕೊಳ್ಳುತ್ತಾರೆ.

ಆದರೆ ಶುಭಸಂದೇಶವು ಈ ಸಿದ್ಧಾಂತದ ವಿರೋಧವಾಗಿ ಯೇಸುಸ್ವಾಮಿ ನಿಜವಾಗಿಯೂ ಮನುಷ್ಯರಾದರು ಎನ್ನುವುದನ್ನು ನಿರೂಪಿಸುತ್ತದೆ. 1:14 "ವಾರ್ತೆ ಎಂಬುವರು ಮನುಷ್ಯರಾದರು ಮತ್ತು ನಮ್ಮಲ್ಲಿ ವಾಸಮಾಡಿದರು". 4:6 - ಇಲ್ಲಿ ಬಳಲಿದ್ದ ಯೇಸುವನ್ನು ಕಂಡು ಆತನ ಮಾನವೀಯ ಗುಣಗಳನ್ನು ನಾವು ಹೇಳಬಹುದು. 11:35 - ಯೇಸು ಕಣ್ಣೀರಿಟ್ಟರು. ಹೀಗೆ ಈ ಸಿದ್ಧಾಂತದ ವಿರೋಧವಾಗಿ ಶುಭಸಂದೇಶವು ಯೇಸು ಸ್ವಾಮಿಯ ಮನುಷ್ಯತ್ವವನ್ನು, ಮಾನವೀಯತೆಯನ್ನು, ಮಾನವೀಯ ಗುಣಗಳನ್ನು ಪ್ರತಿಪಾದಿಸುತ್ತದೆ.



*****



ಮೌನದ ದನಿ

ನೀನು ಪ್ರೀತಿಸದಿದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
ನಾನೂ...
ನನ್ನೊಳಗಿನ ರಾಕ್ಷಸ ವಿಲಾ(ಳಾ)ಸವೂ
ಕೇಳಿ ಅವಳೆಂದಳು:
ಮೆಚ್ಚಿಸಲಾಡುವ ಮಾತಿಗೆ
ತುಟಿಯಲಿರುವಷ್ಟೇ ಆಯಸ್ಸ!
ಎದೆಯ ಭಾಷೆಯಷ್ಟೇ ಸರ್ವಕಾಲದದ ಸತ್ಯ
---------
ಹೊತ್ತು ಹೊತ್ತಿಗೆ
ಸೂರ್ಯನ ಸ್ವರೂಪ ಬದಲಾದರೇನು
ಬೆಳಕಿನ ರೂಪ ಒಂದೇನೇ
ಬೇಲಿ ಸುತ್ತಿಟ್ಟರೂ
ಬೆರತ ಮನಸುಗಳ ಹಾಗೆ
ನೀರು ಎಲ್ಲಿಟ್ಟರೇನು
ನೀರಿನ ಗುಣವು ಒಂದೇನೇ
-----
ಈ ದಿನ ಯಾವುದನ್ನು ಆಚರಿಸಲಿ
ಕೂಸಿನ ಹುಟ್ಟನ್ನೊ ಅವಳ ತಿಥಿಯನ್ನೊ
ಬೊಗಸೆ ಕಡು ಕಹಿ ಸಿಹಿ
ಒಟ್ಟಿಗೆ ಹಾಕಿದ ಬದುಕು
ನನಗಿತ್ತ ಕಾಣಿಕೆ ಇದೊಂದೇ

¨ ಬಸೂ



ದನಿ ರೂಪಕ

ಅಷ್ಟ ಭಾಗ್ಯಗಳು
ಅಷ್ಟ ಭಾಗ್ಯಗಳು ಎಂಬ ಪಠ್ಯದಲ್ಲಿ ಪುನರಾವರ್ತನೆಗೊಂಡಿರುವ ಭಾಗ್ಯವಂತರು ಎಂಬ ಪದವು ಆಂಗ್ಲ ಭಾಷೆಯ Blessed ಎಂಬ ಪದದ ಕನ್ನಡ ಅವತರಣಿಕೆ. ಆಂಗ್ಲ ಭಾಷೆಯ ಶುಭಸಂದೇಶದಲ್ಲಿ ಈ ಸಂಪೂರ್ಣ ಪಠ್ಯವನ್ನು Beatitude ಎಂಬ ಶಿರ್ಷಿಕೆಯಡಿಯಲ್ಲಿ ಕೊಡಲಾಗಿದೆ. ಈ ಪಠ್ಯವು beatitudes ಅಂತಾಲೇ ಜಗತ್ಪಸಿದ್ಧ. Beatitude ಅನ್ನೊದು ಗ್ರೀಕ್‍ಪದವಾದ macarius ಎಂಬ ಪದದಿಂದ ಭಾಷಾಂತರಗೊಂಡಂತಹ ಆಂಗ್ಲ ರೂಪ. Macarius ಎಂಬ ಪದವು ಪರಮಸುಖ ಹಾಗೂ ಭಾಗ್ಯವೆಂಬ ಸಂಯೋಗ ಅರ್ಥವನ್ನು ನೀಡುತ್ತದೆ. ಆದ್ದರಿಂದ beatitude‍ ಎಂಬ ಪಠ್ಯ ಪರಮಸುಖದ ಸೌಭಾಗ್ಯ ಜೀವನಕ್ಕೆ ಬೇಕಾದ ಮೂಲಭೂತ ಮನೋಭಾವ, ಮನೋಸ್ಥಿತಿ ಮತ್ತು ಬದುಕ ರೀತಿಯನ್ನು ತಿಳಿಹೇಳುವ ಪಠ್ಯ. ಒಂದು ಮಾತಿನಲ್ಲಿ ಹೇಳಬೇಕಾದರೆ, ಈ ಪಠ್ಯವು ಭಾಗ್ಯವಂತ ಸುಖಭರಿತ ಕ್ರೈಸ್ತ ಜೀವನಕ್ಕೆ ಅಥವಾ ಕ್ರಿಸ್ತನೊಂದಿಗಿನ ಒಡನಾಟದ ಸಂಬಂಧಕ್ಕೆ ಆಯಕಟ್ಟು ಹಾಗೂ ರೀತಿನೀತಿಗಳನ್ನು ನಿರ್ದೇಶಿಸುವ ಸಂವಿಧಾನ. 

ಅಮರ ಜೀವನ ಪಡೆಯಲು ಪೂರೈಸಬೇಕಾದ ಬೇಡಿಕೆಗಳನ್ನು, ಸ್ವರ್ಗಲೋಕವನ್ನು ಪ್ರವೇಶಿಸಲು ಬದುಕಬೇಕಾದಂತಹ ಯೋಗ್ಯ ಜೀವನವನ್ನು ನಾವು ಕ್ರಿಸ್ತನಿಂದ ಕೇಳಿದ್ದೇವೆ. ಅಮರ ಜೀವನದ ಪ್ರಾಪ್ತಿಗೆ ಧನಿಕನು ಕಟ್ಟಳೆಗಳನ್ನು ಪಾಲಿಸುವುದರೊಂದಿಗೆ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡವರಿಗೆ ಹಂಚಿ, ಕ್ರಿಸ್ತನನ್ನು ಹಿಂಬಾಲಿಸಲೇಬೇಕು. ಇನ್ನೊಂದು ಕಡೆ, ಸ್ವರ್ಗ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿಸಿಕೊಳ್ಳಬೇಕಾದರೆ, ಹಸಿದಿದ್ದವನಲ್ಲಿ, ಬಾಯಾರಿದವನಲ್ಲಿ ಅಪರಿಚಿತನಲ್ಲಿ, ಬಟ್ಟೆಬರೆಯಿಲ್ಲದವನಲ್ಲಿ, ರೋಗಿಯಲ್ಲಿ, ಬಂಧಿಯಾದವನಲ್ಲಿ ಕ್ರಿಸ್ತನನ್ನು ಕಂಡು ಆರೈಕೆ ಮಾಡಲೇಬೇಕು. ಕ್ರಿಸ್ತನ ಈ ಬೇಡಿಕೆಗಳು ಮೂಲಭೂತವಾಗಿ ಪಾಲಿಸಬೇಕಾದಂತವುಗಳೇ. ಇವುಗಳಿಗೆ ಪರ್ಯಾಯ ಅಥವಾ ಬದಲಿ ಎಂಬುವುದಿಲ್ಲ. 

ಅಂತಯೇ ಕ್ರೈಸ್ತ ಪರಮಸುಖ ಸೌಭಾಗ್ಯದ ಬದುಕಿಗೆ, ಕಿಸ್ತನೊಂದಿಗಿನ ಅನನ್ಯ ಬದುಕಿಗೆ ಮೂಲಭೂತವಾಗಿ ಇರಬೇಕಾದ ಮನಸ್ಥಿತಿ, ಮನೋಭಾವವನ್ನು ಕ್ರಿಸ್ತನ ಸಂಪೂರ್ಣ ಬೋಧನೆಯ ಸಾರವೆಂದೇ ಕರೆಯಲ್ಪಡುವ ಆಷ್ಟಭಾಗ್ಯಗಳು ಎಂಬ ಪಠ್ಯವು ನಮಗೆ ತಿಳಿಹೇಳುತ್ತದೆ. ಒಟ್ಟಾರೆ, ಒಬ್ಬನು ತಾನು ಭಾಗ್ಯವಂತನಾಗಬೇಕಾದರೆ ತನ್ನಲ್ಲಿ ಇರಿಸಿಕೊಳ್ಳಬೇಕಾದ ಮನೋಸ್ಠಿತಿಯನ್ನು ಅನಾವರಣಗೊಳಿಸುತ್ತದೆ ಈ ವಚನ: 

¨ ತನ್ನ ಸಂಪೂರ್ಣ ಅಸಹಾಯಕತೆಯನ್ನು ಅರಿತು, ದೇವರ ಮೇಲೆ ಪೂರ್ಣ ಅವಲಂಬಿತನಾಗಿ ಬಾಳಬೇಕಾದ ಪಾರಮಾರ್ಥಿಕ/ ಆಧ್ಯಾತ್ಮಿಕ ಬಡತನ,

¨ ಜಗತ್ತಿನ ದುಷ್ಟತೆಯಿಂದ ನೊಂದು ಬೆಂದವರ ನೋವಿಗೆ ಮರುಗುತ್ತಲೇ ತಾನು ಮಾಡಿದ ಪಾಪಗಳಿಗೂ ದುಃಖಿಸುವ ಸಂತೈಸುವ ಮೃದು ಮನಸ್ಸು

¨ ಹಿಂಸಾತ್ಮಕ ಪರಿಸ್ಥಿತಿಯಲ್ಲೂ ಸೌಮ್ಯತೆಯಿಂದ ಅಹಿಂಸಿಯಾಗಿ ತನ್ನುನ್ನು ದೇವರ ಅಧೀನಕ್ಕೆ ಒಳಪಡಿಸಲು ಹಿಂಜರಿಯದ ವಿನಯ,

¨ ನ್ಯಾಯನೀತಿಗೆ ಹಸಿದು ಹಾತೊರೆಯುವ ಸಾಮಾಜಿಕ ಕಾಳಜಿ, 

¨ ಸಕಲ ಸೃಷ್ಟಿಗೂ ದೇವರ ದಯೆಯನ್ನು ಬಿಂಬಿಸುವ ಅಂತಃಕರಣ,

¨ ಒಡಕಿನ ಸಮಾಜದಲ್ಲಿ ಶಾಂತಿಯ ಸ್ಥಾಪನೆಗೆ ಶಕ್ತಿಮೀರಿ ಶ್ರಮಿಸಬೇಕಾದ ಮನೋಧರ್ಮ

¨ ಎಲ್ಲವನ್ನೂ ಎಲ್ಲರನ್ನೂ ಶುದ್ಧಮನಸ್ಸಿನಿಂದ ಕಾಣುವ ನಿರ್ಮಲ ಕಣ್ಣು

¨ ನ್ಯಾಯನೀತಿಯ ಸ್ಥಾಪನೆಯ ಹಾದಿಯಲ್ಲಿ ಒದಗಿ ಬರುವ ಹಿಂಸೆಯನ್ನು ಸಹಿಸಲು, ಅನುಭವಿಸಲು ದೃಢ ಸಂಕಲ್ಪ.

ಇವೆಲ್ಲವೂ ಕ್ರೈಸ್ತ ಬದುಕಿಗೆ ಆಧಾರ ಮತ್ತು ಮಾರ್ಗಸೂಚಿಗಳು. ಕ್ರೈಸ್ತತೆಯನ್ನು ಕ್ರೈಸ್ತತತ್ವವನ್ನು ಸಾದರ ಪಡಿಸುವಂತಹ ಪ್ರಣಾಳಿಕೆಯಿದು. ಒಬ್ಬನು ಕ್ರೈಸನಾಗಬೇಕಾದರೆ / ಕ್ರೈಸ್ತನೆಂದೆನ್ನಿಸಿ ಕೊಳ್ಳಬೇಕಾದರೆ ಮೇಲಿನ ಅಷ್ಟಭಾಗ್ಯಗಳನ್ನು ಅವನು ತನ್ನ ಬದುಕಾಗಿಸಿ ಕೊಳ್ಳಲೇಬೇಕು. ಇದಕ್ಕೆ ಪರ್ಯಾಯವೆನ್ನುವುದೇ ಇಲ್ಲ. 

ಇವುಗಳನ್ನು ಅನುಸರಿವುದು ದೇವರ ಹತ್ತು ಆಜ್ಞೆಗಳನ್ನು ಪಾಲಿಸಿದಷ್ಟು ಸುಲಭವಲ್ಲ. ಕೆಲವೊಮ್ಮೆ ಆಜ್ಞೆಗಳ ಮೂಲ ಉದ್ದೇಶಗಳ ಗ್ರಹಿಕೆಯಿಲ್ಲದೆ ಪ್ರೀತಿಯಿಲ್ಲದೆಯೂ ನಮ್ಮ ಸ್ವಾರ್ಥ ಅಥವಾ ಸ್ವಹಿತಕ್ಕಾಗಿ ನಾವು ಅವುಗಳನ್ನು ಪಾಲಿಸಿಬಿಡಬಹುದು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅಷ್ಟಭಾಗ್ಯಗಳೆಂಬುದು ಅಜ್ಞೆಗಳಲ್ಲ; ಪಾಲಿಸಬೇಕಾದ ನಿಯಮಗಳಲ್ಲ. ಇದು ಕ್ರೈಸ್ತನಲ್ಲಿ ಇರಲೇಬೇಕಾದ ಮನೋಭಾವ. ಕ್ರೈಸ್ತ ಬದುಕಿನ ಸಾರಂಶ ಮತ್ತು ವ್ಯಾಖ್ಯಾನ. ದೇವರಲ್ಲಿ ಮತ್ತು ಪರರಲ್ಲಿ ಅಪಾರ ಪ್ರೀತಿ ಇರಿಸಿಕೊಂಡವನ್ನು ಮಾತ್ರ ಈ ಅಷ್ಟಭಾಗ್ಯಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ಇಲ್ಲದೆ ಹೋದರೆ, ನಾವು ಬೆಟ್ಟವನ್ನು ಮೇಲೆಕೆಳಗೆ ಮಾಡಿದರೂ ಅವು ನಮ್ಮ ಬದುಕಾಗುವುದಿಲ್ಲ. ಇಂದು ಆಷ್ಟಭಾಗ್ಯಗಳ ಪಠ್ಯದ ನೆರಳಲ್ಲಿ ನಮ್ಮ ಬದುಕನ್ನು ವಿಮರ್ಶಿಸಿಕೊಳ್ಳಬೇಕಾಗಿದೆ. ಇಂತಹ ವಿಮರ್ಶೆ ಖಂಡಿತವಾಗಿ ನಾವು ಕ್ರಿಸ್ತನ ಹಿಂಬಾಲಕನೋ ಇಲ್ಲವೋ ಎಂಬುವುದನ್ನು ಸ್ಪಷ್ಟವಾಗಿ ನಮಗೆ ತಿಳಿಸಿಬಿಡುತ್ತದೆ. 





ವೇಶ್ಯೆಯ ಪ್ರಸಂಗ


(ಮೂಲ: ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ’ಏಸು ಸ್ವಾಮಿಯ ಕಥೆ’ ಎಂಬ ಮೂಡಲಪಾಯ ಯಕ್ಷಗಾನ]

... ಶಾಸ್ತ್ರಿಗಳು ಒಬ್ಬ ವೇಶ್ಯೆಯನ್ನು ಎಳೆದುಕೊಂಡು ಬಂದು ಏನೆಂದು ಪೇಳುತ್ತಿರ್ದಾರದೆಂತೆನೇ |

ಹರಿಕಾಂಭೋದಿ ರಾಗ ||ತ್ರಿಪುಡೆ||
ಸಾರಿ ಹೇಳುವೆ ಕೇಳಿರೀಕೆಯು |
ಮಾರಿಯಂತೆ ಊರ ಹುಡುಗರ |
ಮಾರ ತಾಪಕೆ ಸೇರಿಸುವಳು | ದಾರಿ ಕೆಡಿಸುವಳು || 1 ||

ಹಿಂದೆ ಮೋಶೆಯ ಆಜ್ಞೆಯಂತೆ |
ಬಂಧನವನು ಇಂದು ಮಾಡಿಸು |
ಚಂದದಿಂದಲೇ ಮರಕೆ ಕಟ್ಟಿಸಿ | ಇಂದು ಕೊಲ್ಲಿಪುದು || 2 ||

ಪೂರ್ವ ಕಾಲದ ಮೋಶೆ ಮಾರ್ಗವ |
ಮೀರದಂತೆ ವೇಶ್ಯೆ ಈಕೆಗೆ |
ಭಾರಿ ಶಿಕ್ಷೆಯ ಮಾಡಿಸೆಂದು | ಸಾರಿ ಪೇಳಿದನು || 3 ||

ವಚನ

ಈ ಪ್ರಕಾರವಾಗಿ ಶಾಸ್ತ್ರಿಗಳು ಆ ವೇಶ್ಯೆಯನ್ನು ಯೇಸುದೇವನ ಬಳಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ, ಈಕೆಯು ಮಹಾ ವ್ಯಭಿಚಾರಿಣಿ, ಈಕೆಯು ಬಡ ಹುಡಗರಿಗೆಲ್ಲ ವ್ಯಭಿಚಾರ ಕಲಿಸಿ, ತಂದೆ ತಾಯಿಗಳ ಮಾತುಗಳನ್ನು ಕೇಳದೆ, ಹುಡುಗರು ದುರ್ಮಾರ್ಗ ಪ್ರವರ್ತಕರಾಗಿ ಗುರುಹಿರಿಯರೆಂದು ತಿಳಿಯದೆ ನಿಂದಿಸುವರು. ಹಿಂದೆ ಮೋಶೆ ಹೇಳಿರುವ ಧರ್ಮಶಾಸ್ತ್ರದಂತೆ ಮಾಡಿಸೆನಲು ವೇಶ್ಯೆಯು ಏನೆನುತ್ತಿರ್ದಳದೆಂತೆನೆ ||

ಅರಿಯದೆ ಮಾಡಿದೆ | ಗುರುವೆ ಈ ಕಾರ್ಯವ | ಯೇಸುದೇವ |
ಅರಿತು ಮನ್ನಿಸಬೇಕು | ಗುರುವರನಾಗಿಹ | ಯೇಸುದೇವ || 1 ||

ಚರಣವ ಪಿಡಿದೀಗ | ಪರಿ ಪರಿ ಬೇಡುವೆ | ಯೇಸುದೇವ |
ಕರುಣೆಯ ತೋರಿಸು | ಶರಣೆಂದು ಬೇಡುವೆ | ಯೇಸುದೇವ || 2 ||

ನಾನು ಮಾಡುವುದಿಲ್ಲ | ಹೀನ ಕಾರ್ಯವ ಇನ್ನು | ಯೇಸುದೇವ |
ನೀನು ಮನ್ನಿಸಿ ಎನ್ನ | ಮಾನವ ರಕ್ಷಿಸು | ಯೇಸುದೇವ || 3 ||

ವಚನ
ಈ ಪ್ರಕಾರವಾಗಿ ಆ ವ್ಯಭಿಚಾರಿಣಿಯು ಯೇಸುದೇವನ ಪಾದ ಕಮಲಗಳಿಗೆ ನಮಸ್ಕರಿಸಿ ತಾನು ಮಾಡಿರುವ ತಪ್ಪನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳಲು ಯೇಸುದೇವನು ಆ ಶಾಸ್ತ್ರಿಗಳೊಡನೆ ಏನೇನ್ನತ್ತಿರ್ದಾನದೆಂತೆನೇ |

ಯಾಲಪದ
ಅಂತು ಇಂತು | ಎಂತ ನೋಡೆ | ಅಂತರಂಗದಿ | ತಿಳಿದುನೋಡೆ |
ಭ್ರಾಂತಿ ಅಳಿದು | ಬಯಲು ತೋರ್ಪುದು | ಓ ಶಾಸ್ತ್ರಿಗಳಿರಾ |
ಚಿಂತೆ ಎಂಬ ಭ್ರಾಂತಿ ಇಲ್ಲವು || 1 ||

ಸಕಲ ಜೀವಗಳಿಗೆ ಎಲ್ಲಾ | ಸಕಲೇಶ್ವರನು | ತಾನಾಗಿರುವ |
ಸಕಲ ಜೀವಕೆ ಒಬ್ಬನೆ ಕರ್ತನು | ಓ ಶಾಸ್ತ್ರಿಗಳಿರಾ |
ಸಕಲವನ್ನು ಸಲಹುವಾತನು || 2 ||

ಮೋಶೆ ಧರ್ಮವನ್ನು ನೋಡೆ | ಘಾಸಿಯಲ್ಲವೆ ಜಗಕೆ ಇನ್ನೂ |
ನಾಶಗೈವುದು | ಮೋಸವಲ್ಲವೇ | ಓ ಶಾಸ್ತ್ರಿಗಳಿರಾ |
ಲೇಸು ಮಾತ್ರವು ಸತ್ಯವಿಲ್ಲವು || 3 ||

ವಚನ
ಈ ಪ್ರಕಾರವಾಗಿ ಯೇಸುದೇವನು ಶಾಸ್ತ್ರಿಗಳಿಗೆ, ಮೋಶೆ ಧರ್ಮವನ್ನು ಅನುಸರಿಸಿ ನೋಡಿದರೆ, ಸಕಲ ಚರಾಚರಾತ್ಮಕವಾದ ಪ್ರಾಣಿಗಳಲ್ಲಿಯೂ ಒಬ್ಬಾತ್ಮನೇ ಎಂದು ಸಾರುತ್ತಿರುವಲ್ಲಿ ಈಕೆಯನ್ನು ಮರಕ್ಕೆ ನೇತುಹಾಕಿ, ಕಲ್ಲುಗಳಿಂದ ಹೊಡೆಯಬೇಕೆಂದು ಹೇಳುವುದು ಧರ್ಮವೇ ಎಂದು ಹೇಳಿ, ನಿಮ್ಮಲ್ಲಿ ಪಾಪವಿಲ್ಲದೆ ಪರಮಾತ್ಮನಂತೆ ನಡೆನುಡಿ ಉಳ್ಳವರು ಯಾರೋ, ಆತನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಲು, ಆ ಮಾತನ್ನು ಕೇಳಿ, ತಾವುಗಳೇ ಪಾಪಿಗಳೆಂದು ಮನಸ್ಸಿನಲ್ಲಿ ತಿಳಿದುಕೊಂಡು ಹಿರಿಯರು ಮೊದಲ್ಗೊಂಡು ಕಿರಿಯರವರೆಗೂ ಎಲ್ಲರೂ ತಮ್ಮ ಕೈಯಲ್ಲಿದ್ದ ಕಲ್ಲುಗಳನ್ನು ಬಿಸುಟು, ಒಬ್ಬರ ಹಿಂದೊಬ್ಬರು ಹೊರಗೆ ಹೋದರು. ನಂತರ ಯೇಸುದೇವನು ಆ ಸ್ತ್ರೀಯನ್ನು ಕುರಿತು ಏನೆಂದು ಪೇಳುತ್ತಿರ್ದಾರದೆಂತೆನೆ |


ಬಿಲ್ಹರಿ ರಾಗ || ಏಕ ತಾಳ || ಕಮಾಚ್ ರಾಗ ||

ಕಾಮಿನಿ ಮಣಿಯೇ ಕೇಳು | ಕಾಮ ಎಂಬುವದದು |
ಪ್ರೇಮದ ಆಶೆಯು | ನೇಮ ಕೆಡಿಸುವುದು || 1 ||

ಸೋಮ ಸೂರ್ಯಾದಿಗಳ | ನೇಮ ತಪ್ಪಿಸುವುದು |
ಭಾಮಿನಿ ನೀ ಕೇಳು | ಕಾಮವು ಭ್ರಾಂತಿ || 2 ||

ತರುಣಿಯೇ ನೀ ಕೇಳು | ಚಿರಕಾಲ ನಿನ್ನೊಳಿಹ |
ಸ್ಥಿರವಾದ ಆತ್ಮನ | ಅರಿತು ಬಾಳಮ್ಮ || 3 ||

ವಚನ
ಈ ಪ್ರಕಾರವಾಗಿ ಏಸುದೇವನು ಆ ಸ್ತ್ರೀಯ ಕೂಡೆ ‘ಕಾಮ ವಿಕಾರವು ಜನ್ಮಗಳನ್ನು ಎತ್ತುವಂತೆ ಮಾಡಿ ನರಕ ಕೂಪದಲ್ಲಿ ತಿರುಗಿಸುತ್ತಿರುವುದು. ಆದ್ದರಿಂದ ಕಾಮ ತಾಪಕ್ಕೆ ತಾಳಲಾರದೆ ಮೋಹಾಂಧಕಾರದಲ್ಲಿ ನರಳುತ್ತಿರುವರು. ನೀನು ಸದಾ ಕಾಲದಲ್ಲಿಯೂ ಪರಮಾತ್ಮನ ಧ್ಯಾನ ಮಾಡುತ್ತಿರು’ ಎಂದು ಹೇಳಿ, ಆಕಗೆ - ಅಮ್ಮಾ ನಿನ್ನ ಮೇಲೆ ತಪ್ಪು ಹೊರಿಸುವವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆಯನ್ನು ವಿಧಿಸಲಿಲ್ಲವೋ ಎನ್ನಲು, ಆಗ ಆಕೆಯು ಯಾರೂ ವಿಧಿಸಲಿಲ್ಲ ಎಂದು ಹೇಳಲು, ಯೇಸುಸ್ವಾಮಿಯು ಆಕೆಗೆ - ನಾನೂ ನಿನಗೆ ಶಿಕ್ಷೆಯನ್ನು ವಿಧಿಸುವುದಿಲ್ಲ ಹೋಗು, ಇನ್ನುಮೇಲೆ ಪಾಪ ಮಾಡಬೇಡ ಎಂದು ಹೇಳಿ ಆಕೆಯನ್ನು ಕಳುಹಿಸಿ ಎನೆನ್ನುತ್ತಿರ್ದಾರದೆಂತೆನೇ |

*****



ಭಾವನಾತ್ಮಕ ಜೀವಿಗಳಾಗಬೇಕಲ್ಲವೇ? - ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ) ಎಂ. ದಾಸಾಪುರ


ಭಾವನೆಗಳು ನಮ್ಮ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಾವು ಜೀವಿಸುವುದು ಈ ಭಾವನೆಗಳ ಲೋಕದಲ್ಲಿ. ಈ ಭಾವನೆಗಳ ಮೂಲಕವೇ ನಾವು ನಮ್ಮ ನೆರೆಹೊರೆಯವರೊಂದಿಗೆ ಸಂಪರ್ಕ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತೇವೆ. ಭಾವನೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಕಾರ್ಯ ನಿರ್ವಹಿಸುತ್ತವೆ. ಹೀಗೆ ನಮ್ಮ ಜೀವನವು ಸುಗಮವಾಗಿ ಸಾಗಲು ಈ ಭಾವನೆಗಳು ನಮಗೆ ಸಹಾಯ ಮಾಡುತ್ತವೆ. ಭಾವನೆಗಳಿಗೂ ಮತ್ತು ನಮಗೂ ಬಿಡಿಸಲಾರದ ಒಂದು ಸುಂದರವಾದ ಅನುಬಂಧವುಂಟು. ಭಾವನೆಗಳ ಕಣಜವೇ ನಮ್ಮ ಅಂತರಂಗದಲ್ಲಿ ಇದೆ ಎಂದು ನಮಗೆ ತಿಳಿದಿದೆ. ಆದ್ದರಿಂದಲೇ ಸಮಾಜ ನಮ್ಮನ್ನು ಭಾವನಾತ್ಮಕ ಜೀವಿ ಎಂದು ಕರೆದಿರುವುದು.

ಮಾನವರಾದ ನಾವೆಲ್ಲರೂ ಭಾವನಾತ್ಮಕ ಜೀವಿಗಳು. ಭಾವನೆಗಳ ಮೂಲಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವಿಸಬೇಕೆಂಬುದು ನಮಗೆಲ್ಲಾ ತಿಳಿದ ವಿಚಾರ. ಭಾವನೆಗಳ ಮೂಲಕ ನಮ್ಮಲ್ಲಿರುವ ನೋವನ್ನು ಮತ್ತು ನಲಿವನ್ನು ಹೊರಹಾಕಲು ಪ್ರತಿನಿತ್ಯವು ನಾವು ಪ್ರಯತ್ನಿಸುತ್ತೇವೆ. ಹೀಗಿರುವಲ್ಲಿ ಈ ಎಲ್ಲಾ ಭಾವನೆಗಳನ್ನು ನಮ್ಮಲ್ಲಿ ಇರಿಸಿಕೊಂಡು ನಾವು ಯಾವ ರೀತಿ ಅವುಗಳನ್ನು ಈ ಸಮಾಜದಲ್ಲಿ ತೋರ್ಪಡಿಸುತ್ತಿದ್ದೇವೆ ಎಂಬುದು ಚರ್ಚೆಗೊಳಪಡುವ ವಿಚಾರ ತಾನೇ! 

ಪ್ರಸ್ತುತ ಸಮಾಜದಲ್ಲಿ ನೋಡುವುದಾದರೆ ನಮ್ಮಲ್ಲಿರುವ ಭಾವನೆಗಳು ಎಷ್ಟರಮಟ್ಟಿಗೆ ಕಾರ್ಯಪ್ರವೃತ್ತವಾಗಿವೆ ಎಂದು ಯೋಚಿಸಿ ನೋಡುವಾಗ ಅಲ್ಲಿ ನಮಗೆ ಕಾಣಸಿಗುವುದು ಅಹಿತಕರ ಫಲಿತಾಂಶವೇ ಹೆಚ್ಚು. ಏಕೆಂದರೆ ಭಾವನೆಗಳನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಏಕೆ ಉಪಯೋಗಿಸಬೇಕು ಎಂಬ ಅಂಶವನ್ನೇ ನಾವು ಮರೆತಂತಿದೆ. ಹಾಗೆಯೇ ಕೆಲವೊಮ್ಮೆ ನಕರಾತ್ಮಕವಾದ ಭಾವನೆಗಳನ್ನು ಸಮಾಜದಲ್ಲಿ ಉಪಯೋಗಿಸುತ್ತ, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಭಾವನಾತ್ಮಕತೆಯಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಲು ನಾವು ಮರೆಯುತ್ತಿದ್ದೇವೆ. ಇನ್ನೂ ಮುಂದುವರಿದು ನೋಡುವುದಾದರೆ ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ನಾವು ಇತರರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ತಿಳಿದಿದ್ದರೂ ಸ್ಪಂದಿಸುತ್ತಿಲ್ಲ. ಒಬ್ಬರ ಸಂತೋಷದಲ್ಲಿ ಪಾಲ್ಗೊಳ್ಳಲು ನಮಗಿರುವ ಕಾಳಜಿ ನಮ್ಮ ನೆರೆಹೊರೆಯವರು ಕಷ್ಟದಲ್ಲಿದ್ದಾಗ ಕಂಡುಬರುತ್ತಿಲ್ಲ. ಬದಲಾಗಿ ನಮ್ಮ ನಮ್ಮ ಪ್ರತಿಷ್ಠೆಯನ್ನು ಎತ್ತಿ ಹಿಡಿಯುತ್ತಾ ಪರರಿಗೂ ಮತ್ತು ಅವರ ಸಮಸ್ಯೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾ ನಮ್ಮ ಬೇಜವಾಬ್ದಾರಿಯನ್ನು ಇಡೀ ಸಮಾಜಕ್ಕೆ ತೋರಿಸುತ್ತಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ಭಾವನಾತ್ಮಕತೆಯನ್ನು ಬದಿಗಿಟ್ಟು ಜೀವಿಸುತ್ತಿವೆ. ಚಿಕ್ಕ ಪುಟ್ಟ ವಿಷಯಗಳಿಗೋಸ್ಕರ ಪ್ರೀತಿ ಎಂಬ ಭಾವನೆಯ ಕಗ್ಗೊಲೆ ನಡೆಯುತ್ತಿದೆ. ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಂಡು ಜೀವಿಸುವ ಬದಲು ಅವುಗಳನ್ನು ಮನಸ್ಸಿನಲ್ಲಿಯೇ ಕೊಲ್ಲುತ್ತಿದ್ದೇವೆ. ಮೊನ್ನೆ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನ್ಮರಣಕ್ಕಾಗಿ ಹೋರಾಡುತ್ತಾ ಸಹಾಯಕ್ಕಾಗಿ ಅಲ್ಲಿದ್ದವರನ್ನು ಬೇಡಿದಾಗ ಅಲ್ಲಿದ್ದ ಬುದ್ಧಿಜೀವಿಗಳೆಲ್ಲಾ ಆ ಅಪಘಾತದ ದೃಶ್ಯವನ್ನು ತಮ್ಮ ಜಂಗಮವಾಣಿಗಳಲ್ಲಿ ಸೆರೆಹಿಡಿಯುತ್ತಾ ನಿಂತರೇ ಹೊರತು ಯಾರೂ ಕೂಡ ಆ ನೊಂದ ವ್ಯಕ್ತಿಯ ಸಹಾಯಕ್ಕೆ ಸ್ಪಂದಿಸಲಿಲ್ಲ. ಮಾನವ ಮಾನವನಿಗೆ ನೆರವು ನೀಡಬೇಕು ಎಂಬ ಅಲ್ಪಜ್ಞಾನವೂ ಅವರಿಗೆ ಇಲ್ಲವಾಯಿತಲ್ಲಾ! ಪ್ರಸ್ತುತ ಈ ಸ್ಥಿತಿಯು ನಾವು ಭಾವನಾರಹಿತ ಜೀವಿಗಳಾಗುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದರೆ ತಪ್ಪಗಲಾರದು. ಅಂತೆಯೇ ಇತ್ತೀಚೆಗಷ್ಟೆ ಒಬ್ಬ ಸಾಹಿತಿಯ ಸಾವಿಗೆ ಸಂತಾಪವನ್ನು ಸೂಚಿಸುವುದನ್ನು ಬಿಟ್ಟು ಅದನ್ನು ಸಂಭ್ರಮಿಸಿದ ಕೆಲವು ವ್ಯಕ್ತಿಗಳ ಸಂಭ್ರಮದ ಪರಿಯನ್ನು ಏನೆಂದು ಹೇಳಲಿ? ಭಾವನೆಗಳಿಗೆ ಬೆಲೆ ಕೊಡಲು ಕಲಿಯುವುದೆಂದು ನಾವು?

ಈ ದುಸ್ತರ ಪರಿಸ್ಥಿತಿಗೆ ಹೊಣೆ ಯಾರು? ಎಂದು ಹುಡುಕಲು ಹೊರಟಾಗ ಅದಕ್ಕೆ ಉತ್ತರ ನಾವುಗಳೇ ಅಲ್ಲವೇ? ತುಸುಕಾಲ ಯೋಚಿಸಿ. ನಾವೆಲ್ಲರೂ ಭಾವನಾತ್ಮಕ ಜೀವಿಗಳಾಗಬೇಕಲ್ಲವೇ? ಇದು ನಮ್ಮ ಆದ್ಯ ಕರ್ತವ್ಯ. ಮುಖ್ಯವಾಗಿ ನಾವು ವಾಸಿಸುತ್ತಿರುವ ಕುಟುಂಬಗಳು ಸಕರಾತ್ಮಕ ಭಾವನೆಗಳ ಸಾಗರದಲ್ಲಿ ತೇಲಿದಾಗ ತಾನೇ ಅದು ಸಮಾಜದಲ್ಲಿ ಕಂಡುಬರುವುದು. ಇತರರ ಭಾವನೆಗಳಿಗೆ ಸ್ಪಂದಿಸುವ ಭಾವುಕ ಜೀವಿಗಳು ನಾವಾದಾಗ ಸಮಾಜವು ಶಾಂತಿಯ ವಾತಾವರಣವು ನಿರ್ಮಾಣವಾಗುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಸಂಧಿಸುತ್ತಾ ಇತರರ ಕಷ್ಟಗಳಿಗೆ ಸ್ಪಂದಿಸುವ ಭಾವನಾತ್ಮಕ ವ್ಯಕ್ತಿಗಳು ನಾವಾಗೋಣ. ಮಾನವ ಸಂಘಜೀವಿ ಎಂಬುದನ್ನು ಮರೆಯದಿರೋಣ. ಸಕರಾತ್ಮಕ ಭಾವನೆಗಳ ಬೆನ್ನುಹತ್ತಿ ಆ ಮನೋಭಾವನೆಯನ್ನು ಸಮಾಜದಲ್ಲಿ ಹುಟ್ಟುಹಾಕಿ ಭಾವನೆಗಳಿಗೆ ಬೆಲೆ ಕೊಡುವ ಮನುಜರು ನಾವು ಎಂಬುದನ್ನು ಸಾಬೀತುಪಡಿಸೋಣ. ಕೊನೆಯದಾಗಿ ಧರ್ಮ ಮೀರಿದ ಮಾನವೀಯತೆ ನಮ್ಮ ಭಾವನೆಗಳಲ್ಲಿ ಎದ್ದು ಕಾಣುತ್ತಾ ನಮ್ಮ ತನುಮನಗಳು ಭಾವನಾತ್ಮಕತೆಯಿಂದ ತುಂಬಿ ಭಾವನೆಗಳ ಬಾಂಧವ್ಯವನ್ನು ಎಲ್ಲೆಡೆ ಪಸರಿಸುವಂತಾಗಲಿ ಎಂಬುದೇ ನನ್ನ ಆಶಯ. 


*****





ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

-------------------------------------
ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರ ಸ್ಥಿತಿ-ಗತಿ ಹಾಗು ಕರ್ನಾಟಕಕ್ಕೆ ಮಿಷನರಿಗಳ ಆಗಮನ ಎಂಬ ವಿಷಯದ ಬಗ್ಗೆ ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮಿಷನ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಗಮಿಸಿದ ಪ್ರಮುಖ ಮಿಷನರಿಗಳ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಮಾಡಿದ್ದೇನೆ.
---------------------------


1. ವಂದನೀಯ ಸ್ವಾಮಿ ಲಿಯೋನಾರ್ಡೊ ಚಿನ್ನಮಿ

ಕ್ರಿಸ್ತಶಕ 1649ರಲ್ಲಿ ಕನ್ನಡ ನಾಡಿಗೆ ಬಂದು ನೆಲೆಸಿದ ಆದ್ಯ ಮಿಷನರಿ ಎಂದರೆ ಕಥೋಲಿಕ ಪಂಥಕ್ಕೆ ಸೇರಿದ ವಂದನೀಯ ಸ್ವಾಮಿ ಲಿಯೋನಾರ್ಡೊ ಚಿನ್ನಮಿಯವರು. ಪೂಜ್ಯರು ಯೇಸು ಸಭೆ ಅಂದರೆ ಸೊಸೈಟಿ ಆಫ್ ಜೀಸಸ್ ಸಂಸ್ಥೆಗೆ ಸೇರಿದವರು. ಇವರು ಕನ್ನಡದ ಮೊದಲ ಲೇಖಕರೂ ಹೌದು. ಕ್ರಿಸ್ತಶಕ 1609ನೇ ಇಸವಿಯಲ್ಲಿ ಇಟಲಿ ದೇಶದ ನೇಪಲ್ಸ್ ನಗರದಲ್ಲಿ ಜನಿಸಿದರು. ಇವರು ಕ್ರಿಸ್ತಶಕ 1647ರಲ್ಲಿ ಯಾಜಕ ದೀಕ್ಷೆಯ ನಂತರ ಗೋವಾ ಮೂಲಕ ಭಾರತಕ್ಕೆ ಆಗಮಿಸಿ ಅಲ್ಲಿಂದ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ನೆಲೆಸಿದರು. ಇವರಿಗೂ ಹಿಂದೆ ಭಾರತಕ್ಕೆ ಬಂದ ಜಸ್ವಿಟ್ ಮಿಷನರಿ ರಾಬರ್ಟ್ ದಿ ನೋಬಿಲಿ ತಮಿಳುನಾಡಿನಲ್ಲಿ (1577-1659) ಹಿಂದೂ ವೇಷದ ಸನ್ಯಾಸಿಯಂತೆ ಆಚಾರ ವಿಚಾರಗಳನ್ನು ಅನುಸರಿಸುತ್ತಾ ಬಂದಿದ್ದರು. ದಿನೋಬಿಲಿಯಂತೆ, ಚಿನ್ನಮಿಯೂ ಹಿಂದೂ ಸನ್ಯಾಸಿಗಳಂತೆ ಕಾವಿಯುಟ್ಟು ಕಮಂಡಲ ಹಿಡಿದು ಮೈಸೂರು ದೇಶದಲ್ಲೆಲ್ಲಾ ಕ್ರೈಸ್ತ ಮತಪ್ರಚಾರ ಮಾಡಿದರು. 

ಆ ಕಾಲದಲ್ಲಿ ಅಂದರೆ ಕ್ರಿಸ್ತಶಕ 1634 ರಿಂದ ಕ್ರಿಸ್ತಶಕ 1659ರವರೆಗೂ ರಾಜ್ಯಭಾರ ಮಾಡಿದ ಅಂದಿನ ಮೈಸೂರಿನ ಅಪ್ರತಿಮ ವೀರಾಗ್ರಣಿ ದೊರೆ ರಣಧೀರ ಕಂಠೀರವ ನರಸರಾಜ ಒಡೆಯರನ್ನು ಖುದ್ದಾಗಿ ಸಂಧಿಸಿ, ಅಚ್ಚಗನ್ನಡದಲ್ಲಿ ಅವರೊಡನೆ ಸಂಭಾಷಿಸುತ್ತಾ ನಾನು ಸತ್ಯವನ್ನು ಬೋಧಿಸುತ್ತೇನೆ ಯಾರಿಗೆ ಇಷ್ಟವಿದೆಯೋ ಅವರು ಬರಬಹುದು, ಆದರೆ ಯಾರಿಗೂ ಕಡ್ಡಾಯ ಮಾಡುವುದಿಲ್ಲ ಎಂದು ನಿವೇದಿಸಿಕೊಂಡು ಮಹಾರಾಜರಿಂದ ಮುದ್ರೆಯೊತ್ತಿದ್ದ ತಾಮ್ರಪತ್ರವನ್ನು ಪಡೆದುಕೊಂಡಿದ್ದರು. ತನ್ನ ಇಳಿವಯಸ್ಸಿನವರೆಗೂ ಕರ್ನಾಟಕದಲ್ಲಿದ್ದ ಇವರು ಕನ್ನಡ ಭಾಷೆಯನ್ನು ರೂಢಿಗತ ಮಾಡಿಕೊಂಡು ಕನ್ನಡದಲ್ಲಿ ಕೆಲವು ಧಾರ್ಮಿಕ ಕೃತಿಗಳನ್ನು ರಚಿಸಿದರೆಂದು ನಮಗೆ ತಿಳಿಯುತ್ತದೆ. ಅವು ಯಾವುವೆಂದರೆ: 

1. ಕ್ರೈಸ್ತ ಧರ್ಮದ ಮುಖ್ಯ ಧಾರ್ಮಿಕ ತತ್ತ್ವಗಳನ್ನು ಬೋಧಿಸುವ ದೀರ್ಘ ಪ್ರಶ್ನೋತ್ತರಾವಳಿ

2. ಕ್ರೈಸ್ತ ಧರ್ಮದ ಸಾರಸ್ವರೂಪ

3. ಕ್ರೈಸ್ತ ಸಂತರ ಜೀವನ ಚರಿತ್ರೆಗಳು

4. ಕ್ರೈಸ್ತ ಧರ್ಮ ಸಮರ್ಥನೆ

5. ಮೈಸೂರಿನಲ್ಲಿ ಪ್ರಚಲಿತವಿದ್ದ ತಪ್ಪು ಕಲ್ಪನೆಗಳ ಮತ್ತು ಮೌಢ್ಯಗಳ ಖಂಡನೆ. 

ಈ ಕೃತಿಗಳ ಜೊತೆಗೆ ಇವರು ಕನ್ನಡ ಶಬ್ದಕೋಶ ಹಾಗೂ ಕನ್ನಡ ವ್ಯಾಕರಣ ಎಂಬ ಕೃತಿಯನ್ನು ರಚಿಸಿರುವುದಾಗಿ ಡಾ. ಶ್ರೀನಿವಾಸ ಹಾವನೂರರು ಉಲ್ಲೇಖಿಸುತ್ತಾರೆ.

2. ಡಾ. ಫರ್ಡಿನಂಡ್ ಕಿಟೆಲ್

ಜೀವನ: ಕಿಟೆಲರು ಜರ್ಮನಿಯ ರಾಸ್ಟರ್ ಹಾಫ್ (Rosterhafe) ಎಂಬಲ್ಲಿ 7ನೆಯ ಏಪ್ರಿಲ್ ಕ್ರಿಸ್ತಶಕ 1832ರಂದು ಜನಿಸಿದರು. ಅವರದು ಸನಾತನ ದೈವಭಕ್ತ ಮನೆತನ. ತಂದೆಯ ಹೆಸರು ಪ್ಯಾಸ್ಟರ್ ಗಾಟ್ ಫ್ರೀಡ್ ಕ್ರಿಶ್ಚಿಯನ್ ಕಿಟೆಲ್, ತಾಯಿಯ ಹೆಸರು ತೆಯೆಡೊವ್ ಹೆಲನ್, ಈ ದಂಪತಿಗಳ ಆರು ಮಕ್ಕಳಲ್ಲಿ ಕಿಟೆಲ್ ಮೊದಲನೆಯವರು. ಕಿಟೆಲರ ಪ್ರಾಥಮಿಕ ವಿದ್ಯಾಭ್ಯಾಸ ರಾಸ್ಟರ್ ಹಾಫೆಯಲ್ಲಿ ನಡೆಯಿತು. ಮುಂದೆ ಅವರು ತನ್ನ ಅಜ್ಜನ ಊರಾದ ಔರೊಕ್ ನಗರದಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿದರು. ತುಂಬಾ ಬುದ್ಧಿವಂತರೂ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದವರೂ ಆಗಿದ್ದ ಇವರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ದೈವಿಕ ವಿಷಯದಲ್ಲಿ ಕವಿತೆ ರಚಿಸಿ ಸ್ನೇಹಿತರ ಮುಂದೆ ಹಾಡುತ್ತಿದ್ದರಂತೆ. ಆಧ್ಯಾತ್ಮಿಕ ವಿಷಯದ ಒಲವಿಗೆ ಕಾರಣ ಅವರ ತಂದೆಯವರು. ಏಕೆಂದರೆ ಅವರೂ ಒಬ್ಬ ಉಪದೇಶಕರಾಗಿದ್ದರು. ತಂದೆಯಂತೆ ತಾನೂ ಒಬ್ಬ ಬೋಧಕನಾಗಬೇಕೆಂಬ ಪ್ರಬಲವಾದ ಧಾರ್ಮಿಕ ತುಡಿತ ಅವರಲ್ಲಿತ್ತು. ಅವರ ಹೃದಯದಲ್ಲಿ ದೈವಭಕ್ತಿ, ಗುರುಭಕ್ತಿಗಳಿಗೆ ಹೆಚ್ಚಿನ ಸ್ಥಾನವಿತ್ತು. ಕನ್ನಡದಲ್ಲಿ ಕಿಟೆಲರ ಸೃಜನಶೀಲ ಸಾಹಿತ್ಯವೆಲ್ಲ ರೂಪುಗೊಂಡಿದ್ದೂ ಅವರ ಆಧ್ಯಾತ್ಮ ಸಾಧನೆಯ ತಳಹದಿಯ ಮೇಲೆ. ಎಳೆಹರೆಯದಿಂದ ಆಧ್ಯಾತ್ಮಿಕ ತುಡಿತ ಅವರಲ್ಲಿದ್ದುದರಿಂದ ಈ ರೀತಿಯ ಕೃತಿಗಳು ಹೊರ ಬರಲು ಸಾಧ್ಯವಾಯಿತು.

ಶಾಲೆಯಲ್ಲಿರುವಾಗ ಕಿಟೆಲರ ಅಂತರ್ಮುಖಿ ಜೀವನದ ಅಭಿವ್ಯಕ್ತಿ ಕಂಡುಬರುತ್ತದೆ. ಜನ್ಮತಃ ಧಾರ್ಮಿಕ ಪ್ರವೃತ್ತಿಯವರಾದ ಕಿಟೆಲರಿಗೆ, ಅಂದಿನ ಕ್ಲಾಸಿಕಲ್ ಲೇಖಕರ ಬರಹಗಳು ರುಚಿಸದಾದವು. ಕಿಟೆಲರ ಆಧ್ಯಾತ್ಮಿಕ ಒಲವನ್ನು ಕಂಡು ಅವರ ತಂದೆಯವರು ಅವರನ್ನು ದೈವಜ್ಞಾನ ಅಭ್ಯಾಸಕ್ಕೆ ಕಳುಹಿಸಲು ನಿರ್ಧರಿಸಿದರು. ಇದರಿಂದ ಕಿಟೆಲರ ಹೃದಯದಲ್ಲಿ ಮೂಡಿದ್ದ ದೈವಭಕ್ತಿಗೆ ಗರಿ ಮೂಡಿದಂತಾಗಿತ್ತು. ತಮ್ಮ ಹದಿನೇಳನೆಯ ವರ್ಷದಲ್ಲಿ ಮಿಷನ್‌ಗೆ ಸೇರಲು ಕಿಟೆಲ್ ನಿರ್ಧರಿಸಿದರು. ಹದಿನೆಂಟು ತುಂಬದ ಕಾರಣ ಮಿಷನ್ ಅಧಿಕಾರಿಗಳು ಪ್ರವೇಶವನ್ನು ನಿರಾಕರಿಸಿದರು. ಹೀಗಿದ್ದಾಗ ಮಿಷನ್‌ಕಾಲೇಜಿನ ಪ್ರಾಂಶುಪಾಲ ರೋಟಾರ್ಟರ ವಿಶೇಷ ಒಪ್ಪಿಗೆ ನೀಡಿದ ಪತ್ರದಿಂದ ಕಿಟೆಲರು ಮಿಷನ್ ಕಾಲೇಜಿಗೆ ಸೇರುವ ಅವಕಾಶ ಒದಗಿತು. ಇದರಿಂದಾಗಿ ಜನವರಿ 16 ರಂದು ಕ್ರಿಸ್ತಶಕ 1850ರಲ್ಲಿ ಮಿಷನ್ ಕಾಲೇಜಿಗೆ ಪ್ರವೇಶ ದೊರೆಯಿತು. ಮಿಷನ್ ಅಧಿಕಾರಿಗಳಿಗೆ ಕಿಟೆಲರೆಂದರೆ ಅಚ್ಚುಮೆಚ್ಚು. ಅವರ ಕುರಿತು, He is good, matured and open minded, and very efficient as scholar. Needless to say that he had always the best marks in langues ಎಂಬ ಪ್ರಶಂಸನೀಯ ಮಾತುಗಳನ್ನು ಡಾ.ಕೆ.ಎಂ ಮ್ಯಾಥ್ಯು ರವರು ಬರೆದಿರುವ ರೆ.ಎಫ್.ಕಿಟೆಲ್ ಎಂಬ ಪುಸ್ತಕದಲ್ಲಿ ನಾವು ಕಾಣಬಹುದು. 

ಈ ರೀತಿ ಹದಿ-ಹರೆಯದಿಂದಲೇ ಕಿಟೆಲರು ಭಾಷೆಯಲ್ಲಿ ಆಸಕ್ತಿ ವಹಿಸಿದುದು ಮುಂದಿನ ಅವರ ಬದುಕಿನಲ್ಲಿ ಒಳ್ಳೆಯ ಕೋಶವಿಜ್ಞಾನಿಯಾಗಿ ರೂಪು ಪಡೆಯಲು ಸಾಧ್ಯವಾಯಿತು. ಭಾಷೆಯಲ್ಲಿ ಪ್ರಬುದ್ಧತೆ ಮತ್ತು ವಿಶೇಷತೆ ಇದ್ದುದರಿಂದ ಅವರ ಅಧ್ಯಯನವು ನಿರ್ದಿಷ್ಟ ಅವಧಿಗಿಂತ ಮುಂಚೆಯೇ ಎಂದರೆ ಕ್ರಿಸ್ತಶಕ 1853ನೇ ಏಪ್ರಿಲ್‌ನಲ್ಲಿ ಮುಕ್ತಾಯವಾಯಿತು. ಕಿಟೆಲರು ಕನ್ನಡದ ಆಳವಾದ ಅಭ್ಯಾಸ, ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳ ಅಧ್ಯಯನ ನಡೆಸಿದ್ದೂ ಮಂಗಳೂರಿನಲ್ಲೆ. ಆಗ ಕಾವ್ಯಗಳು ಈಗಿನಂತೆ ಮುದ್ರಣಗೊಂಡು, ಟೀಕೆ, ಟಿಪ್ಪಣಿಗಳೊಡನೆ ಪ್ರಕಟವಾಗಿರಲಿಲ್ಲ. ತಾಳೆಗರಿ, ಕಾಗದ, ಹಸ್ತ ಪ್ರತಿಗಳನ್ನು ಓದಬೇಕಾಗುತ್ತಿತ್ತು. ಕಿಟೆಲರಲ್ಲಿ ಭಾಷೆ ಅಶುದ್ಧವಿರಕೂಡದು ಎಂಬ ಪ್ರಜ್ಞೆ ಆಳವಾಗಿದ್ದಿತು. ಆದ್ದರಿಂದ ಅಶುದ್ಧವಾಗಿರುತ್ತಿದ್ದ ಹಳಗನ್ನಡ ಕಾವ್ಯಗಳ ಶುದ್ಧಪ್ರತಿಯನ್ನು ತಾವೇ ತಯಾರಿಸತೊಡಗಿದರು. ಅವುಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದಂತೆಲ್ಲ ಕನ್ನಡ ಸಾಹಿತ್ಯದ ಬಗ್ಗೆ ಅವರಲ್ಲಿ ಪ್ರೀತಿಯ ಭಾವನೆ ಉಕ್ಕಿತು. ಅದರ ಸತ್ವ ಮತ್ತು ಸೌಂದರ್ಯಗಳ ಅರಿವಾಯಿತು. 

ಕಿಟೆಲರು ಕನ್ನಡದ ಸಹೋದರ ಭಾಷೆಗಳಾದ ತಮಿಳು, ತೆಲುಗು, ಮಲಯಾಳಿ ಹಾಗೂ ತುಳು ಭಾಷೆಗಳನ್ನೂ ಅರಿತುಕೊಂಡರು. ಹಿಂದೂಮತದ ತತ್ವಗಳನ್ನು ವಿವರಿಸುವ ಗ್ರಂಥಗಳನ್ನು ಸಹ ಮನನ ಮಾಡಿದರು. ಅನೇಕ ಮಿಷನರಿಗಳು ದೋಷ ಹುಡುಕುವ ಮತ್ತು ಅಪಾರ್ಥ ಹಚ್ಚುವ ದೃಷ್ಟಿಯಿಂದ ಹಿಂದೂ ಕೃತಿಗಳನ್ನು ಓದಿದರೆ, ಕಿಟೆಲರು ದೋಷ ಹುಡುಕುವ ಜೊತೆಗೆ ಅವುಗಳ ಗುಣಗಳನ್ನು ವ್ಯಾಸಂಗ ಮಾಡಿದ್ದಾರೆ. ಇದು ಅವರ ಕೃತಿಗಳ ಅಭ್ಯಾಸದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಹೀಗೆ ಹತ್ತು ವರ್ಷ ಕಾಲ ಅವರ ಈ ಬಗೆಯ ಅಭ್ಯಾಸ ಮುಂದುವರಿಯಿತು. ಕನ್ನಡ ಕಾವ್ಯಗಳ ಅಭ್ಯಾಸ, ಗ್ರಂಥಸಂಪಾದನೆ, ನಿಘಂಟು ತಯಾರಿಕೆ, ಪಠ್ಯಪುಸ್ತಕ ನಿರ್ಮಾಣಕಾರರಾಗಿ ಯಾವಾಗಲೂ ದುಡಿಯುತ್ತಿದ್ದುದರಿಂದ ಅವರ ಕಣ್ಣಿನ ನರಗಳ ಶಕ್ತಿ ಕ್ಷೀಣಿಸತೊಡಗಿತು. ಕ್ರಿಸ್ತಶಕ 1892ರಲ್ಲಿ ಅವರು ಭಾರತವನ್ನು ಬಿಟ್ಟು ವುಟೆಂಬರ್ಗ್ ಜಿಲ್ಲೆಯ ಟ್ಯುಬೆಂಗನ್ ಎಂಬ ಊರಿನಲ್ಲಿ ನೆಲೆಸಿದರು. ತಮ್ಮ ದೀರ್ಘಕಾಲದ ವ್ಯಾಸಂಗದಲ್ಲಿ ಸಂಪಾದಿಸಿದ್ದ ಕನ್ನಡ ಸಾಮಗ್ರಿಗಳನ್ನೆಲ್ಲ ಟ್ಯುಬೆಂಗನ್‌ನಲ್ಲಿ ಕುಳಿತು ಪರಿಷ್ಕರಿಸಿದರು. ಕ್ರಿಸ್ತಶಕ 1894ರಲ್ಲಿ ಅವರ ಜೀವನಾಭ್ಯಾಸದ ಸಾರಸರ್ವಸ್ವವಾದ ಕನ್ನಡ-ಇಂಗ್ಲಿಷ್ ನಿಘಂಟು ಪ್ರಕಟವಾಯಿತು. ಈ ಮಹಾಕೋಶದ ರಚನೆಯನ್ನು ಮೆಚ್ಚಿ ಅವರಿಗೆ ಟ್ಯುಬೆಂಗನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರಶಸ್ತಿಯನ್ನು ಕೊಟ್ಟು ಕ್ರಿಸ್ತಶಕ 1895ರಲ್ಲಿ ಗೌರವಿಸಿತು. ಡಾ.ಫರ್ಡಿನಂಡ್ ಕಿಟೆಲರು 19ನೇ ಡಿಸೆಂಬರ್ ಕ್ರಿಸ್ತಶಕ 1903ರಲ್ಲಿ ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ದೈವಧೀನರಾದರು. ಹೀಗೆ ಸುಮಾರು 40 ವರ್ಷಗಳ ಕಾಲ ದುಡಿದು, ಕನ್ನಡ ವಿದ್ವತ್ತಿಗೆ ಭದ್ರವಾದ ತಳಹದಿಯನ್ನು ಹಾಕಿದ ಇವರು 19ನೇ ಶತಮಾನದ ಭಾರತೀಯ ವಿದ್ವಾಂಸರಲ್ಲಿ ಪ್ರಮುಖರಾಗಿದ್ದರೆಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. 

ಮಿಷನರಿಯಾಗಿ ಕಿಟೆಲರು: ಭಾರತಕ್ಕೆ ಬಂದಿರುವ ಹೆಚ್ಚಿನ ಮಿಷನರಿಗಳು ಮತಪ್ರಚಾರದ ಕಾರ್ಯದಲ್ಲಿಯೇ ಮಗ್ನರಾಗಿರುತ್ತಿದ್ದರು. ಆದರೆ ಕಿಟೆಲರು ಇಲ್ಲಿಗೆ ಬಂದ ಆರಂಭದ ಕೆಲವು ವರ್ಷ ಮಾತ್ರ ಮತ ಪ್ರವಚನ ಮಾಡುತ್ತಿದ್ದರು ಎಂದು ಬಾಸೆಲ್ ಮಿಷನ್ ವರದಿಗಳಿಂದ ತಿಳಿದು ಬರುತ್ತದೆ. ಹೆಚ್ಚಿನ ಮಿಷನ್ ವರದಿಗಳಲ್ಲಿ ಅವರು ಸಾಹಿತ್ಯದ ಕೆಲಸದಲ್ಲಿ ಮಗ್ನರಾಗಿದ್ದರು ಎಂದು ಬರೆಯಲಾಗಿದೆ. 

ಕಿಟೆಲರ ಸಾಹಿತ್ಯ ಕಾರ್ಯ: ಕಿಟೆಲರ ಸಾಹಿತ್ಯ ಕಾರ್ಯ ಧಾರ್ಮಿಕ ಕೃತಿಗಳಿಂದ ಚಿಗುರೊಡೆಯಿತು. ಅವರು ಕ್ರೈಸ್ತ ಹಾಗೂ ಹಿಂದೂ ಧರ್ಮಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ್ದಾರೆ. ಇತರ ಮಿಷನರಿಗಳ ಹಾಗೆ ಕಿಟೆಲರು ಹಿಂದೂ ಧರ್ಮವನ್ನು ಕುರಿತು ಸಂಸ್ಕೃತದಿಂದ ಜರ್ಮನ್, ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿದ್ದ ಗ್ರಂಥಗಳನ್ನು ಆರಂಭದಲ್ಲಿಯೇ ಮನನ ಮಾಡಿದ್ದರು. ದೋಷಗಳನ್ನು ಹುಡುಕುವುದಕ್ಕಿಂತ ಅವುಗಳ ಅಂತರಾರ್ಥವನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಜೊತೆಗೆ ಕ್ರೈಸ್ತ ಧರ್ಮವನ್ನು ಕುರಿತು ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಈ ಗ್ರಂಥಗಳು ಕಿಟೆಲರಿಗೆ ದೈವಶಾಸ್ತ್ರ (Theology)ವನ್ನು ವಿಶೇಷವಾಗಿ ಅಧ್ಯಯನ ಮಾಡಿದುದರ ಫಲವೆನಿಸಿವೆ. ಕಿಟೆಲರು ಕೆಲವು ಧಾರ್ಮಿಕ ಕೃತಿಗಳನ್ನು ಕೂಡ ರಚಿಸಿದ್ದಾರೆ ಅವುಗಳೆಂದರೆ ಕಥಾಮಾಲೆ, ಖಂಡಕಾವ್ಯ, ಪರಮಾತ್ಮ ಜ್ಞಾನ, ಯೇಸುಕ್ರಿಸ್ತನ ಶ್ರಮೇ ಚರಿತ್ರೆ, ಕ್ರೈಸ್ತ ಸಭಾ ಚರಿತ್ರೆ ಇನ್ನು ಮುಂತಾದವು.

ಪಠ್ಯ ಪುಸ್ತಕಗಳು: ಕಿಟೆಲರು ಕೆಲವು ಪಠ್ಯ ಪುಸ್ತಕಗಳನ್ನು ಶಾಲೆಗಳ ಅಗತ್ಯತೆಗಾಗಿ ರಚಿಸಿದ್ದಾರೆ. ಮದ್ರಾಸ್ ಸರ್ಕಾರವು ಕಿಟೆಲರು ಸಂಪಾದಿಸಿದ ಪಠ್ಯ ಪುಸ್ತಕಗಳನ್ನು ಶಾಲೆಗಳಿಗಾಗಿ ನಿಗದಿಪಡಿಸಿದ್ದಿತು. ಇವರು ಪಂಚತಂತ್ರದ ಕಥೆಗಳನ್ನು ಆಧರಿಸಿ ಕೃತಿ ರಚಿಸಿದ್ದು ಇದರ ಹೊದಿಕೆಯ ಮೇಲೆ ಶಾಲೆಗಳ ಪ್ರಯೋಜನಾರ್ಥಕವಾದದ್ದು ಎಂಬ ವಿಶೇಷಣವಿದೆ. ಇದಕ್ಕೆ ಇಪ್ಪತ್ತು ಪುಟಗಳ ಇಂಗ್ಲೀಷ್ ಭಾಷೆಯ ಮುನ್ನುಡಿ ಇದೆ. ಅದರಲ್ಲಿ ಪಂಚತಂತ್ರಗಳ ಮೂಲವೆಲ್ಲಿಯದು, ಅದಕ್ಕೂ ಈಸೋಪನ ನೀತಿ ಕಥೆಗಳಿಗೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ವಿವೇಚಿಸಿದ್ದಾರೆ.

ಗ್ರಂಥ ಸಂಪಾದನೆ: ಕಿಟೆಲರು ಎರಡು ಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕನ್ನಡದ ಬಹುಪಾಲು ಕೃತಿಗಳು ಅಮುದ್ರಿತವಾಗಿದ್ದಾಗ, ಪ್ರಾಚೀನ ಸಾಹಿತ್ಯದ ಬಗೆಗೆ ಸುತ್ತಣ ಪರಿಸರದಲ್ಲಿ ಅಷ್ಟಾಗಿ ಒಲವು ಇಲ್ಲದಿದ್ದಾಗ, ಪ್ರಾಚೀನ ಕೃತಿಗಳನ್ನು ಹೇಗೆ ಸಂಪಾದಿಸಬೇಕು, ಎಂಬುದರ ಜಾಡು ಇನ್ನೂ ಹೊಳೆಯದಿದ್ದಾಗ ಕೇಶಿರಾಜನ ಶಬ್ದಮಣಿದರ್ಪಣವನ್ನು ಕಿಟೆಲರು ಹೊರತಂದರು. ಇವರು ಶಬ್ದಮಣಿದರ್ಪಣದ ಸಂಪಾದನೆಗಾಗಿ ಒಂಭತ್ತು ಹಸ್ತಪ್ರತಿಗಳನ್ನು ಬಳಸಿದ್ದಾರೆ. ಈ ಕೃತಿಯ ವಿನ್ಯಾಸಕ್ರಮ ಹೀಗಿದೆ. ಸೂತ್ರ, ಅದರ ಎಡಮಗ್ಗುಲಿಗೆ ಇಂಗ್ಲಿಷಿನಲ್ಲಿ ಸ್ಥೂಲವಾದ ಸೂತ್ರಾರ್ಥ, ಸೂತ್ರದ ಕೆಳಗೆ ಕ್ರಮವಾಗಿ ಪದಚ್ಛೇದ, ಅನ್ವಯ, ಟೀಕಾ ವೃತ್ತಿ ಮತ್ತು ಪ್ರಯೋಗಗಳನ್ನು ಕೊಟ್ಟಿದ್ದಾರೆ.

ಕೋಶ ರಚನೆ: ಕಿಟೆಲರ ವಿಷಯದಲ್ಲಿ ವಿಶೇಷ ಗೌರವ ಮತ್ತು ಅಭಿಮಾನವನ್ನಿಟ್ಟುಕೊಂಡಿದ್ದ ಬಾಸೆಲ್ ಮಿಷನಿನವರು ಅವರಿಗೆ ಕ್ರಿಸ್ತಶಕ 1872ರ ಸುಮಾರಿಗೆ ಕನ್ನಡ-ಇಂಗ್ಲಿಷ್ ನಿಘಂಟು ರಚಿಸುವ ಕೆಲಸವನ್ನು ವಹಿಸಿಕೊಟ್ಟರು. ಇತರೆ ಮಿಷನರಿಗಳಿಗಿದ್ದಂತೆ ಮತಪ್ರಸಾರ ಕಾರ್ಯ ಅಥವಾ ದೇಶಿಯ ಕ್ರೈಸ್ತರಿಗೆ ಕೊಡಬೇಕಾದ ಔದ್ಯೋಗಿಕ ಶಿಕ್ಷಣ ಕಾರ್ಯದಲ್ಲಿ ಮಗ್ನರಾಗಿದ್ದರು ಕೂಡ ಕೋಶರಚನಾ ಕಾರ್ಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುವುದರ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಿರುತ್ತಾರೆ.

ಭಾಷಾಶಾಸ್ತ್ರ: ಕನ್ನಡ ಶಬ್ದಕೋಶವನ್ನು ವಿಮರ್ಶಿಸಿದ ಪ್ಲೀಟರು ಸಹಜವಾಗಿಯೇ ಕನ್ನಡಕ್ಕೆ ಕಿಟೆಲರು ಒಂದು ಸಮಗ್ರವಾದ ವ್ಯಾಕರಣ ಗ್ರಂಥ ಯಾಕೆ ಬರೆಯಬಾರದು? ಎಂದು ಸೂಚಿಸಿದ್ದರಂತೆ. ಅದರಂತೆ ಕಿಟೆಲರು ತಮ್ಮ ವಿಶ್ರಾಂತಿಯ ದಿನಗಳನ್ನು ಇಂಗ್ಲಿಷ್‌ನಲ್ಲಿ ವ್ಯಾಕರಣಗ್ರಂಥವನ್ನು ಸಿದ್ಧಪಡಿಸುವುದರಲ್ಲಿ ಕಳೆದರು. ಹಳಗನ್ನಡ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣವನ್ನು ಇದಕ್ಕೆ ತಳಹದಿಯಾಗಿಟ್ಟುಕೊಂಡರು. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ-ಈ ಮೂರು ಅವಸ್ಥೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಗುರುತಿಸಿದ್ದಾರೆ. ತಮಿಳು, ತೆಲುಗು, ಮಲೆಯಾಳಂ, ಭಾಷೆಗಳ ವ್ಯಾಕರಣ ಹೋಲಿಕೆಯನ್ನೂ ಕೊಟ್ಟಿದ್ದಾರೆ. ಇದೊಂದು ಐತಿಹಾಸಿಕ-ತುಲನಾತ್ಮಕ ವ್ಯಾಕರಣ ಗ್ರಂಥವಾಗಿದೆ. ಕನ್ನಡ ವ್ಯಾಕರಣದ ಸಮಗ್ರವಾದ ವಿವೇಚನೆಯನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಮೊದಲ ವ್ಯಾಕರಣ ಕೃತಿ ಇದಾಗಿದೆ. ಅಲ್ಲದೆ ಕಿಟೆಲರು ಕ್ರಿಸ್ತಶಕ 1866ರಲ್ಲಿ ಹಳಗನ್ನಡ ಸಂಕ್ಷೇಪ ವ್ಯಾಕರಣ ಸೂತ್ರಗಳು ಎಂಬ ಕೃತಿಯನ್ನು ಹೊರತಂದಿದ್ದರು. ಶಬ್ದಮಣಿದರ್ಪಣದ ಸಾರಸರ್ವಸ್ವವನ್ನು ಗದ್ಯರೂಪದಲ್ಲಿ ಬರೆದಿರುವ ಕೃತಿಯಿದು. ಬಿಡಿಲೇಖನಗಳು ಮತ್ತು ಪತ್ರಿಕಾ ಸಂಪಾದನೆಯ ಕಾರ್ಯಗಳಲ್ಲೂ ಬಹು ಆಸಕ್ತಿಯಿಂದ ಕಾರ್ಯನಿರತರಾಗಿದ್ದರು ಕಿಟೆಲ್‌ರವರು.

ಮುಂದಿನ ಸಂಚಿಕೆಯಲ್ಲಿ ಇನ್ನಿತರ ಪ್ರಮುಖ ಮಿಷನರಿಗಳ ಬದುಕು ಮತ್ತು ಸಾಧನೆಯನ್ನು ಮುಂದುವರಿಸಲಾಗುವುದು. 

******



ನೆಲದ ಬನಿಯಲ್ಲಿ ಮಿಂದೆದ್ದ ‘ಏಸು ಸ್ವಾಮಿಯ ಕಥೆ’ - ಫ್ರಾನ್ಸಿಸ್ ನಂದಗಾಂವ 


‘... ಈ ಪ್ರಕಾರವಾಗಿ ಪ್ರಕಾಶಮಾನವಾದ ದೇವತೆಗಳ ಗುಂಪು ಕಾಣಿಸಲು, ಈತನು ನಿಜವಾಗಿಯೂ ದೇವದೂತನೆಂದು ತಿಳಿದು ಕುರುಬರು, ದೇವದೂತನನ್ನು ಕುರಿತು ಜ್ಞಾನಿಯು ಎಲ್ಲಿ ಜನಿಸಿರುವನು, ನಾವು ಅಲ್ಲಿಗೆ ಹೋಗಿ ಆತನನ್ನು ಕಾಣುವೆವು ಎನ್ನಲು ದೇವದೂತನು ಏನೆಂದು ಹೇಳುತ್ತಿರ್ದಾರದೆಂತೆನೆ:

ಭೈರವಿ ರಾಗ || ಜಂಪೆ ತಾಳ ||

ಕೇಳಿರಿ ನೀವು | ಕುರುಬರೆ ಈಗ |

ಪೇಳುವೆನು ನಾನು || ಪಲ್ಲವಿ ||

ಕುರುಬರೆ ಕೇಳಿರಿ | ಪರಿಯನೆಲ್ಲವನೀಗ |
ಪರಮಾತ್ಮ ಬರುವಂತ | ಪರಿಯ ಪೇಳುವೆ ನಾನು ||
ಕೇಳಿರಿ ನೀವು || 1 ||


ಮರಿಯಮ್ಮನೆಂಬುವ | ಪರಮ ಪತಿವ್ರತೆಯ |
ನರಗರ್ಭದಲಿ ಜನಿಸಿ | ಇರುತಿಹನಾತನು |
ಕೇಳಿರಿ ನೀವು || 2 ||


ತಾರಾ ಮಂಡಲದೊಳಗೆ | ಸೇರಿ ಚುಕ್ಕೆಯು ತಾನು |
ಮೀರಿದ ಕಳೆಯಿಂದ | ಸಾರಿ ಬೆಳಗುತಲಿಹುದು |
ಕೇಳಿರಿ ನೀವು || 3 ||


ಜೆರುಸಲೇಮಿಗೆ ತಾನು | ಅರಸನಾಗುವ ಮುಂದೆ |
ಹರುಷದಿಂದಲಿ ಕೇಳಿ | ಬರೆದಿಹೆ ವಿವರವಾ |
ಕೇಳಿರಿ ನೀವು || 4 ||



ಯಾಲಪದ
ಗುಡಿಯ ಗೋಪುರ ಕಟ್ಟಬೇಕು | ದೃಢದಿಂದ ನಡೆಯಬೇಕು |
ಬಿಡದೇ ಬಡವರ ಕಾಯಬೇಕಿನ್ನು | ಓ ಜನರೇ ಕೇಳಿ |
ಬಿಡಬೇಕು ನೀವು ಕೆಡಕು ಕಾರ್ಯಗಳ || 1 ||


ತಾನು ಯಾರು ಎಂದು ಅರಿತು | ಮನ್ನಣೆಯು ಇರಲು ಬೇಕು |
ಇನ್ನು ಕ್ಷಮೆಯು ಶಾಂತಿಯು ಇರಬೇಕು | ಓ ಜನರೇ ಕೇಳಿ |
ತಾನು ಎಂಬುವ ಮದವ ಬಿಡಬೇಕು || 2 ||


ಎಲ್ಲರೊಳಗೆ ಒಬ್ಬನಿರುವ | ಎಲ್ಲದಕ್ಕೂ ತಾನೆ ಕರ್ತ |
ಬಲ್ಲ ಗುರುವಿನೊಳಗೆ ತಿಳಿಯಿರಿ | ಓ ಜನರೇ ಕೇಳಿ |
ಬಲ್ಲ ಗುರುವಿನಲ್ಲಿ ತಿಳಿಯಿರಿ || 3 ||

ಈ ವಿವರಣೆಯ ಮಾತು, ಹಾಡುಗಳನ್ನು ಗಮನಿಸಿದರೆ ಇದು ಕ್ರೈಸ್ತ ಮತದ ಮೂಲ ಪುರುಷ ಸ್ವಾಮಿ ಯೇಸುಕ್ರಿಸ್ತನ ನೆನಪು ತರಿಸುತ್ತದೆ. ಹೌದು ಇದನ್ನು, ‘ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಮೂಡಲಪಾಯ ಯಕ್ಷಗಾನ ಏಸು ಸ್ವಾಮಿಯ ಕಥೆ’ ಹೆಸರಿನ ಹೊತ್ತಿಗೆಯಿಂದ ಉದ್ಧರಿಸಲಾಗಿದೆ.

ಮೂಡಲಪಾಯ ಯಕ್ಷಗಾನ ಕವಿ ಎಚ್. ಎಸ್ . ಸುಬ್ಬರಾಯಪ್ಪ (1923- 1997) ಅವರು 1986ರಲ್ಲಿ ರಚಿಸಿರುವ ಈ ‘ಏಸು ಸ್ವಾಮಿಯ ಕಥೆ’ ಮೂಡಲಪಾಯ ಯಕ್ಷಗಾನವನ್ನು, ಹೆಸರುವಾಸಿ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅವರು ಸಂಪಾದಿಸಿ, 2012ರಲ್ಲಿ ಬೆಂಗಳೂರಿನ ಸಾಗರ್ ಪ್ರಕಾಶನ ಸಂಸ್ಥೆಯ ಮೂಲಕ ಬೆಳಕಿಗೆ ತಂದಿದ್ದಾರೆ.

ಕ್ರೈಸ್ತರ ಪೂಜ್ಯ ಶ್ರೀಗ್ರಂಥ ಬೈಬಲ್ನ ಹೊಸ ಒಡಂಬಡಿಕೆಯಲ್ಲಿನ ನಾಲ್ಕು ಶುಭಸಂದೇಶಗಳಲ್ಲಿ ಯೇಸುಸ್ವಾಮಿಯ ಬೋಧನೆಗಳನ್ನು ಹಾಗೂ ಅವನ ಜೀವನ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಯೊವಾನ್ನ, ಮತ್ತಾಯ, ಮಾರ್ಕ ಮತ್ತು ಲೂಕರು ಬರೆದಿರುವ ಈ ಶುಭಸಂದೇಶಗಳಲ್ಲಿ, ಮತ್ತಾಯನು ಬರೆದ ಶುಭಸಂದೇಶವನ್ನು ಆಧರಿಸಿ ಈ ಹಿರೇಬಳ್ಳಾಪುರದ ಸುಬ್ಬರಾಯಪ್ಪನವರು (ಮೂಡಲಪಾಯ ಯಕ್ಷಗಾನ) ‘ಏಸು ಸ್ವಾಮಿಯ ಕಥೆ’ಯನ್ನು ರಚಿಸಿದ್ದಾರೆ.

ಈ ನೆಲಮೂಲದ ಜಾಯಮಾನದಂತೆ, ದಕ್ಷಿಣ ಮತ್ತು ಉತ್ತರ ಕರ್ನಾಟಕದ ಬಯಲಾಟ (ಮೂಡಲಪಾಯ ಯಕ್ಷಗಾನ)ದ ಸಂಪ್ರದಾಯದಂತೆ, ಈ ಆಟದ ಪ್ರಾರಂಭದಲ್ಲಿ ಶ್ರೀ ವಿಘ್ನೇಶ್ವರ ಅಂದರೆ ವಿಘ್ನ ನಿವಾರಕ, ಸಂಕಷ್ಟಗಳ ನಿವಾರಕ, ಸಂಕಷ್ಟಹರ ಗಣಪತಿಯನ್ನು ಹಾಗೂ ವಿದ್ಯಾಧಿದೇವತೆ ಸರಸ್ವತಿ- ಶಾರದೆಯನ್ನು ಸ್ತುತಿಸಲಾಗಿದೆ. ಈ ಬಗೆಯ ಆಟದ ಸಂಪ್ರದಾಯದಂತೆ ರಚನಕಾರ ಸುಬ್ಬರಾಯಪ್ಪ ಅವರ ಇಷ್ಟದೇವತೆ ದೊಡ್ಡಬಳ್ಳಾಪುರದ ಅಧಿದೇವತೆ ಶ್ರೀ ಸೋಮನಾಥ ದೇವರನ್ನು ನಂತರ ಸದ್ಗುರು ವರನನ್ನು ಸ್ತುತಿಸಲಾಗಿದೆ. ಇಷ್ಟಾದ ನಂತರ ಸಭೆಯ ಜನರನ್ನು ಉದ್ದೇಶಿಸಿ ಮಾತನಾಡುವ ಭಾಗವತ/ಸೂತ್ರಧಾರ/ ಆಟದ ಮಾಸ್ತರು, ಕಪ್ಪುಗೊರಳ(ಶಿವ)ನ ಕರುಣದಿಂದೊರೆವ ಆಟದಲ್ಲಿನ ತಪ್ಪುಗಳನ್ನು ಮನ್ನಿಸುವಂತೆ ಕೋರಿದ ನಂತರ ‘ಏಸು ಸ್ವಾಮಿಯ ಕಥೆ’ ಆರಂಭವಾಗುತ್ತದೆ.

ದೇವಸಭೆಯಲ್ಲಿ ಧರಣಿದೇವಿಯ ಪ್ರಾರ್ಥನೆ:

‘ಪರಮಾತ್ಮ ನೆನೆಸುವ ಯೋಗಪುರುಷ’ನೆಂದು ಗುರುತಿಸಲಾಗುವ ಸರ್ವೇಶ್ವರನ ದೇವ ಕುಲದವರ ಮಹತ್ತರ ದೇವಸಭೆಯಲ್ಲಿ - ಸಮಸ್ತ ದೇವತೆಯರಿಂದೊಡಗೂಡಿದ ಆಸ್ಥಾನದಲ್ಲಿ, ಸರ್ವೇಶ್ವರ ಪರಮಾತ್ಮನು ಭೂಲೋಕದಲ್ಲಿ ಅನ್ಯಾಯ ಅಧರ್ಮಕ್ಕೆ ಎಡೆಗೊಡದೆ ಸತ್ಯಶೀಲರಾಗಿ ಸುಖಿಪರೆ ಎಂದು ವಿಚಾರಿಸುತ್ತಾನೆ. ಆಗ ಭೂದೇವಿ, ಭೂಲೋಕದಲ್ಲಿ ಅನ್ಯಾಯ ಅಧರ್ಮದಲ್ಲಿ ಓಲಾಡುವ ಜನರ ಭಾರವನ್ನು ತಾಳಲಾರೆನು ಎಂದು ಅಲವತ್ತುಕೊಳ್ಳುತ್ತಾಳೆ. ನಂತರ ‘ಹೇ ಸ್ವಾಮಿ ತಾವು ಭೂಲೋಕದಲ್ಲಿ ಅವತರಿಸಿ, ಪರಮ ಪಾಪಿಗಳ ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನ ಮಾರ್ಗವನ್ನು ಬೋಧಿಸಿ, ಭೂ ಹೊರೆಯನ್ನು ಇಳಿಸಿ ಕಾಪಾಡಬೇಕು’ ಎಂದು ಪ್ರಾರ್ಥಿಸುತ್ತಾಳೆ.

ಅದಕ್ಕೆ ಪರಮಾತ್ಮನು, ‘ದುಃಖಿಸದಿರು ಹೇ ಧರಣೀ ದೇವಿ, ನಿರಾಕಾರಿಯಾದ ನಾನು ಆಕಾರವನ್ನು ಧರಿಸಿ, ಪರಮ ಪಾಪಿಗಳ ಅಜ್ಞಾನವನ್ನು ತಪ್ಪಿಸಿ, ಜ್ಞಾನ ಮಾರ್ಗವನ್ನು ಬೋಧಿಸಲು ಮೇರಿಯಮ್ಮ ಎಂಬ ಕನ್ಯೆಯ ಗರ್ಭದಲ್ಲಿ ಯೇಸುದೇವನೆಂಬ ನಾಮಾಂಕಿತದಿಂದ ಭೂಲೋಕದಲ್ಲಿ ಅವತರಿಸುವೆನು’ ಎಂದು ಅಭಯ ನೀಡುತ್ತಾನೆ.

ಮುಂದೆ, ‘ನಾನು ಭೂಲೋಕದಲ್ಲಿ ಅವತರಿಸುವುದನ್ನು ಓರ್ವ ದೂತನೊಡನೆ ಹೇಳಿ ಕಳುಹಿಸುವೆನೆಂದು ಹೇಳಿ, ಓರ್ವ ದೂತನನ್ನು ನಿರ್ಮಿಸಿ, ಓ ದೇವದೂತ ನೀನು ಭೂಲೋಕಕ್ಕೆ ಹೋಗಿ ಪರಮಾತ್ಮನು ಅವತರಿಸುವನೆಂದು ಜ್ಞಾನಿಗಳೊಡನೆ ಪೇಳು’ ಎಂಬುದಾಗಿ ಹೇಳುತ್ತಾನೆ. ಅದರಂತೆ ದೇವದೂತನು ಭೂಮಿಗೆ ಬಂದು, ಅಹಜಾ ರಾಜನ ಅರಮನೆಯಲ್ಲಿ ಆತನನ್ನು ಕಂಡು,

ಹರಿಕಾಂಬೋಧಿ ರಾಗ || ತ್ರಿಪುಡೆ ||


‘ಕೇಳು ಅಹಜಾ ರಾಜ ತೇಜನೆ |
ಪೇಳುವೆನು ನಾ ವಿವರವೆಲ್ಲವ |
ಇಳೆಗೆ ಬರುವನು ದೇವ ದೇವನು | ಕೇಳು ನೀನೀಗ || 1 ||

ಜ್ಞಾನವಿಲ್ಲದ ಮನುಜರಿಗೆ ತಾ |
ಜ್ಞಾನ ಮಾರ್ಗವ ಬೋಧಿಸುವನು |
ಸ್ವಾನುಭವ ಜ್ಞಾನ ಮಾರ್ಗವ | ತಾ ಹೇಳುವನು || 2 ||
ತಿಳಿಸುತ್ತಾನೆ.

ಗುರುವಿಗೊಬ್ಬ ಗುರು ಯೋಹಾನ:

ಮುಂದೆ ಆ ದೂತನು, ‘ಅಹಜಾ ರಾಜನೆ ಕೇಳು ನಿನ್ನ ಸರಿಸಮಾನನಾದ ಯಶೋಫನೆಂಬ ಪರಮಭಕ್ತನಿರುವನು. ಆತನು ಮೇರಿ ಎಂಬ ಕನ್ಯೆಯನ್ನು ವಿವಾಹವಾಗಲು ನಿಶ್ಚಿತಾರ್ಥ ಮಾಡಿಕೊಂಡಿರುವ. ಆಕೆಯ ಗರ್ಭದಲ್ಲಿ ಪರಮಾತ್ಮನು ಜನಿಸುವನು, ಆಕೆಯು ಗರ್ಭ ಧರಿಸಿ ಮೂರು ಮಾಸವಾಗಿರುವುದು. ಆಕೆಯ ವಿಷಯದಲ್ಲಿ ಸಂಶಯ ಪಡುತ್ತಿರುವರು. ಆದ್ದರಿಂದ ಅಲ್ಲಿಗೆ ಹೋಗಿ ಸಂಶಯವನ್ನು ಪರಿಹರಿಸಿ ಇಬ್ಬರಿಗೂ ವಿವಾಹವಾಗುವಂತೆ ಒಪ್ಪಿಸಿ ಬರಲು ಹೋಗುತ್ತೇನೆ’ ಎಂದು ಹೊರಡುತ್ತಾನೆ.

ಯಶೋಪನಿಗೆ ವಿವರ ತಿಳಿಸಿದ ದೇವದೂತನು ನಂತರ ಪುತ್ರ ಸಂತಾನವಿಲ್ಲದೆ ವ್ಯಾಕುಲ ಪಡುತ್ತಿರುವ ಜಕರಿಯ ಮತ್ತು ಎಲಜಬೆತ್ತರಾಣಿ ದಂಪತಿಗಳಲ್ಲಿಗೆ ತೆರಳಿ, ‘ನೀವು ಪರಮಾತ್ಮನನ್ನು ಭಕ್ತಿಯಿಂದ ಪೂಜಿಸಿದರೆ, ನಿಮಗೆ ಪರಮ ಜ್ಞಾನಿಯಾದ ಪುತ್ರನು ಜನಿಸುವನು’ ಎಂದು ತಿಳಿಸುತ್ತಾನೆ. ಇಷ್ಟಾದ ಮೇಲೆ, ತರುಣಿ ಮರಿಯಮ್ಮಳ ಗರ್ಭದಲ್ಲಿ ಪರಮಾತ್ಮನು ಸೇರಿರುವನು. ಪುರುಷರ ಮುಖವನ್ನು ಸಹ ನೋಡದ ತನಗೇಕೆ ಈ ಬಾಧೆಯು ಎಂದು ಮನದಲ್ಲಿ ಆಕೆ ಕೊರಗುತ್ತಿರುವಳು. ಅವಳಿಗೆ ವಿಷಯ ತಿಳಿಸುವೆನೆಂದು ಅಲ್ಲಿಗೆ ತೆರಳುವ ದೇವದೂತ, ‘ವ್ಯಸನವ ಬಿಡು, ಪರಮಾತ್ಮನು ಈ ಲೋಕದಲ್ಲಿ ಜನರಿಗೆ ಜ್ಞಾನವನ್ನು ಬೋಧಿಸಲು ನಿನಗೆ ಸುತನಾಗಿ ಜನಿಸುವನು. ಇದನ್ನು ನಿನ್ನ ಪತಿಯಾಗಲಿರುವ ಯಶೋಫನಿಗೂ ತಿಳಿಸಿದ್ದೇನೆ’ ಎನ್ನುತ್ತಾನೆ. ತದನಂತರ, ‘ಜಕರಿಯ ಮತ್ತು ಎಲಜಬೆತ್ತರಾಣಿಯ ಜ್ಞಾನಿ ಮಗನು ನಿನ್ನ ಸುತನಿಗೆ ದೀಕ್ಷೆ ಬೋಧಿಸುವನು ಅದನ್ನು ಅವರಿಗೆ ತಿಳಿಸು’ ಎಂದ ದೇವದೂತ ಕುರುಬರಿಗೆ ಏಸು ಜನನವನ್ನು ತಿಳಿಸಬೇಕೆಂದು ಹೊರಡುತ್ತಾನೆ.

ಇತ್ತ ಮರಿಯಮ್ಮ, ಜಕರಿಯ ಎಲಜಬೆತ್ತರಾಣಿ ದಂಪತಿಯನ್ನು ಕಂಡು, ‘ನಿಮ್ಮ ಮಗನು ಗುರುವಿಗೆ ಗುರುವಾಗುವನು’ ಎನ್ನುತ್ತಾಳೆ. ನವ ಮಾಸಗಳು ತುಂಬಿ ಎಲಜಬೆತ್ತರಾಣಿಗೆ ಶುಭ ಮಹೂರ್ತದಲ್ಲಿ ಪುತ್ರನ ಜನನವಾಗುತ್ತದೆ. ಹತ್ತನೇ ದಿನದಲ್ಲಿ ಕೂಸಿಗೆ ಪುರೋಹಿತರು ಯೋಹಾನನೆಂದು ನಾಮಕರಣ ಮಾಡುತ್ತಾರೆ. ಅತ್ತ ತರುಣಿ ಮರಿಯಮ್ಮಳಿಗೆ ನವಮಾಸ ತುಂಬಿ ಸೂರ್ಯಚಂದ್ರರ ಕಳೆಯುಳ್ಳ ಸುತನು ಜನಿಸುತ್ತಾನೆ. ಆ ಕಾಲದಲ್ಲಿ ಆಕಾಶದಲ್ಲಿ ಪ್ರಕಾಶಮಾನವಾದ ಒಂದು ನಕ್ಷತ್ರವುಂಟಾಗಿ ಪುಷ್ಪವೃಷ್ಟಿಯಾಗುತ್ತದೆ. ದೇವದೂತನು ಕುರುಬರಿಗೆ ಏಸು ಜನಿಸಿ ಬರುವನೆಂದು ಹೇಳುವಷ್ಟರಲ್ಲಿ ದೇವತೆಗಳ ಗುಂಪು ಕಾಣಿಸುತ್ತದೆ.

ದೇವದೂತನು ಕುರುಬರಿಗೆ, ‘ಹೇ ಕುರುಬರಿರಾ, ಬೆತ್ಲೆಹೇಮಿನಲ್ಲಿ ಮರಿಯಮ್ಮ ಎಂಬುವ ಪರಮ ಪತಿವ್ರತೆಯ ಗರ್ಭದಲ್ಲಿ ಯಹೂದ್ಯರ ಕುಲದಲ್ಲಿ ಪರಮಾತ್ಮನು ಜನಿಸಿರುವನು. ಅಜ್ಞಾನಿಗಳಿಗೆ ಜ್ಞಾನ ಬೋಧಿಸುವನು. ಆತನು ಹುಟ್ಟಿದ ಸ್ಥಳದಲ್ಲಿ ಪ್ರಕಾಶಮಾನವಾದ ಒಂದು ನಕ್ಷತ್ರವು ಹೊಳೆಯುತ್ತಿರುವುದು ನೋಡಿರಿ’ ಎಂದು ತಿಳಿಸುತ್ತಾನೆ.

ಕುರುಬರು ತಾರಾಮಂಡಲದಲ್ಲಿ ಪ್ರಕಾಶಿಸುವ ನಕ್ಷತ್ರದ ಗುರುತನ್ನು ಹಿಡಿದು ಬೆತ್ಲೆಹೇಮಿಗೆ ಬಂದು ಗೋದಲಿಯಲ್ಲಿದ್ದ ಮಗುವನ್ನು ಕಾಣುತ್ತಾರೆ.

ಸಾರಂಗ ರಾಗ || ಜಂಪೆ ತಾಳ ||
ಪರಮ ಪತಿವ್ರತೆ ನೀನು | ಪರಮಾತ್ಮನು ನಿನಗೆ |
ವರಸುತನು ತಾನಾಗಿ | ಜನಿಸಿ ಇರುತಿಹನು || 1 ||

ಈ ರೀತಿಯಾಗಿ ಹಾಡುತ್ತಾ ಶಿಶುವಿಗೆ ವಂದಿಸಿ, ಅವರಿಗೆ ನಮಿಸಿದ ಕುರುಬರನ್ನು ಮರಿಯಮ್ಮ ಮತ್ತು ಯಶೋಫರು ಆಶೀರ್ವದಿಸಿ ಕಳುಹಿಸುತ್ತಾರೆ. ತಮ್ಮ ಮಗುವಿಗೆ ಏಸು ಎಂದು ನಾಮಕರಣ ಮಾಡುತ್ತಾರೆ. ಮೂಡಣ ದೇಶದಲ್ಲಿ ಜೋಯಿಸರು ತಾರಾ ಮಂಡಲದಲ್ಲಿ ಒಂದು ನಕ್ಷತ್ರವು ಪ್ರಕಾಶಿಸುವುದನ್ನು ಕಂಡು, ‘ಅದು ಎಲ್ಲಿ ನಿಲ್ಲುವುದೋ ಅಲ್ಲಿ ಪರಮಾತ್ಮನು ಜನಿಸಿರುವನೆಂದು ಅರಿತು, ಆತನಿಂದ ಸ್ವಾನುಭವ ಜ್ಞಾನವನ್ನು ತಿಳಿಯೋಣ ನಡೆಯಿರಿ’ ಎಂದು ಹೊರಡುತ್ತಾರೆ. ಯರೋದ(ಹೆರೋದ)ನ ರಾಜ್ಯದಲ್ಲಿ ನಕ್ಷತ್ರವು ನಿಂತಾಗ, ಜೆರುಸಲೇಮಿನಲ್ಲಿ ಅರಸನನ್ನು ಭೇಟಿ ಮಾಡಿ, ‘ನಕ್ಷತ್ರವು ನಿನ್ನ ರಾಜ್ಯದಲ್ಲಿ ಚಲಿಸದೇ ನಿಂತಿದೆ. ಈ ನಿನ್ನ ರಾಜ್ಯಕ್ಕೆ ಅರಸನಾಗುವ ಮತ್ತು ಸ್ವಾನುಭವ ಬೋಧಿಸುವ ಪರಮಾತ್ಮನು ಜನಿಸಿರುವನೆಂದು ತಿಳಿಸುತ್ತಾರೆ. ಮನಸ್ಸಿನಲ್ಲಿ ಕಳವಳ ಮೂಡಿದರೂ, ಯರೋದನು ನೀವು ಹುಡುಕುತ್ತಿರುವ ಶಿಶುವು ‘ಅದು ಸಿಕ್ಕಿದ ಮೇಲೆ ತಿಳಿಸಿ, ನಾನು ಬಂದು ಅದಕ್ಕೆ ಅಡ್ಡಬಿದ್ದು ವಂದಿಸಬೇಕು’ ಎಂದು ಸಾಗಹಾಕುತ್ತಾನೆ. ನಕ್ಷತ್ರವು ಬೆತ್ಲೆಹೇಮಿನಲ್ಲಿ ಚಲಿಸದೆ ನಿಲ್ಲಲು ಜೋಯಿಸರು, ಗೋದಲಿಯಲ್ಲಿದ್ದ ಶಿಶುವನ್ನು ಕಂಡು,

ಶಂಕರಾಭರಣ ರಾಗ || ಮಟ್ಟ ತಾಳ ||
ನಮಿಪೆವು ಏಸುಗೆ | ನಮಿಪೆವು ಗುರುವಿಗೆ |
ನಮಿಪೆವು ಶ್ರೀ ಪರ | ಮಾತ್ಮನಿಗೆ ||

ನಮಿಪೆವು ಜಗದೋ | ದ್ಧಾರಗೆ ಧೀರಗೆ |
ನಮಿಪೆವು ಜ್ಞಾನವ | ಬೋಧಿಪಗೆ ||
ಎಂದು ಪ್ರಾರ್ಥಿಸಿ ತಮ್ಮ ಗಂಟುಗಳನ್ನು ಬಿಚ್ಚಿ ಚಿನ್ನ, ಧೂಪ, ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. (ರಕ್ತಬೋಳ ಎಂಬುದು ಔಷಧಿ ಹಾಗೂ ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸುವ ಒಂದು ಅಪರೂಪದ ಮರದ ಲೋಳೆ)

ಕನಸಿನಲ್ಲಿ ಕಾಣಿಸಿಕೊಂಡ ದೇವರು ಜೋಯಿಸರಿಗೆ, ನೀವು ಹೆರೋದನ ಬಳಿಗೆ ಹೋಗಬಾರದೆಂದು ಅಪ್ಪಣೆ ಕೊಡುತ್ತಾರೆ. ಅತ್ತ ಕರ್ತನ ದೂತನು ಯಶೋಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ‘ನೀನು ಎದ್ದು ಈ ಕೂಸನ್ನು, ಇದರ ತಾಯಿಯನ್ನು ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗಿ, ನಾನು ಹೇಳುವ ತನಕ ಅಲ್ಲಿಯೇ ಇರು. ದುರುಳ ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಹುಡುಕುತ್ತಿರುವನು’ ಎಂದು ಹೇಳಿ ಅವರನ್ನು ಐಗುಪ್ತ ದೇಶಕ್ಕೆ ಹೊರಡಿಸುತ್ತಾರೆ.

ನಾವು ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ:

ಜೋಯಿಸರು ಬಾರದಿರುವುದರಿಂದ ಆತಂಕಪಟ್ಟ ಹೆರೋದ, ಜೋಯಿಸರು ತಿಳಿದುಕೊಂಡ ಕಾಲಕ್ಕೆ ಸರಿಯಾಗಿ ಬೆತ್ಲೆಹೇಮಿನಲ್ಲಿ ಮತ್ತು ನೆರೆಹೊರೆಯ ಹಳ್ಳಿಗಳಲ್ಲಿ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನು ವಧಿಸುತ್ತಾನೆ. ಹೆರೋದನು ತೀರಿದ ನಂತರ ದೇವದೂತನ ಆಣತಿಯಂತೆ ಯಶೋಫ, ಮಡದಿ ಮಕ್ಕಳೊಂದಿಗೆ ಇಸ್ರಾಯೇಲ್ ದೇಶಕ್ಕೆ ಹಿಂದಿರುಗಿ ನಜರೇತಿನಲ್ಲಿ ಬಡಗಿ ಕೆಲಸಮಾಡುತ್ತಾ ನೆಲೆಸುತ್ತಾನೆ.

ಅತ್ತ ಜಕರಿಯಾ ಮತ್ತು ಎಲಿಜಬೆತ್ತರಾಣಿಯ ಪುತ್ರ ಯೋಹಾನನು, ಪ್ರಾಣಿಹಿಂಸೆ ಕೂಡದು, ಕಪಟಮೋಸ ತ್ಯಜಿಸಬೇಕು, ದೀನರಲ್ಲಿ ದಯೆ ತೋರಿ, ದಾನಧರ್ಮ ಮಾಡಿ, ಗುರುಹಿರಿಯರನ್ನು ಮಾತಾಪಿತರನ್ನು ಗೌರವಿಸಬೇಕೆನ್ನುತ್ತಾ ಧರ್ಮಸೂಕ್ಷ್ಮವನ್ನು ತಿಳಿಸುತ್ತಾ, ಪರಮಾತ್ಮ ಸ್ವರೂಪನಾದ ದೇವದೇವನು ಏಸುವೆಂಬ ನಾಮಾಭಿದಾನದಿಂದ ಭೂಲೋಕದಲ್ಲಿ ಜನಿಸಿರುವನು, ಅಜ್ಞಾನಿಗಳಿಗೆಲ್ಲಾ ಜ್ಞಾನ ಬೋಧಿಸುವನೆಂದು ಸಾರುತ್ತಿರುತ್ತಾನೆ. ಜನರು ಅವನಿರುವಲ್ಲಿಗೆ ಬಂದು, ‘ಪರಮ ಗುರುವೆ, ಅರಿಯದೇ ಮಾಡಿದ ಪಾಪಗಳನ್ನು ಮನ್ನಿಸುವಂತೆ ದೀಕ್ಷಾಸ್ನಾನ ಮಾಡಿಸಬೇಕು’ ಎಂದು ಕೋರಿದವರಿಗೆಲ್ಲಾ ದೀಕ್ಷಾಸ್ನಾನ ಮಾಡಿಸುತ್ತಿರುತ್ತಾನೆ. ಒಂದು ದಿನ ಏಸುವೂ ಅಲ್ಲಿಗೆ ಬಂದು ನಿಲ್ಲುತ್ತಾನೆ. ಆಗ ಯೋಹಾನನು, ‘ನೀನು ನನ್ನ ಬಳಿಗೆ ಬರುವುದೇನು?’ ಎಂದಾಗ, ‘ನಾವು ಎಲ್ಲಾ ಧರ್ಮವನ್ನು (ಪ್ರವಾದನೆಯನ್ನು) ನೆರವೇರಿಸತಕ್ಕದ್ದಾಗಿದೆ’ ಎಂದು ಸಮಾಧಾನಿಸುತ್ತಾನೆ.

‘ಎಲೈ ಏಸುದೇವನೆ, ಪದ್ಮಾಸನದಲ್ಲಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಶತ್ರುಗಳನ್ನು ಗೆದ್ದು, ತುಳಿದು ಜಾತಿ ಭೇದವಾದಗಳೆಂಬ ಭೇದವಂ ಬಿಟ್ಟು, ಎಲ್ಲರಲ್ಲಿಯೂ ಸರ್ವಾತ್ಮನಾದ ಪರಮಾತ್ಮನೊಬ್ಬನೇ ಇರುವನೆಂದು, ಸರ್ವರಲ್ಲಿಯೂ ಸಾಕ್ಷಿಕನಾದ ಸರ್ವೋತ್ತಮನಿಗೆ, ನಾಮರೂಪ ಭೇದಗಳಿಲ್ಲವೆಂದು ನಿರ್ವಿಕಾರ, ನಿರ್ಮೋಹ, ನಿರ್ಗುಣ, ನಿರಂಜನನೆಂದು ಏಕೋಮನಶ್ಚಿತ್ತ ಭಾವದಿಂದಿರುವುದೇ ದೀಕ್ಷಾಸ್ನಾನ’ ಎಂದು ನುಡಿದು ಯೋಹಾನ ದೀಕ್ಷಾಸ್ನಾನವನ್ನು ನೆರವೇರಿಸುತ್ತಾನೆ.

ಗುರುಮುಖೇನ ಬಂದ ವಿದ್ಯೆ, ಜ್ಞಾನವನ್ನು ಬೋಧಿಸುತ್ತಾ ಸಾಗಿರಲು ಸೈತಾನನು ದೇವ ಮಾರ್ಗವ ಬಿಟ್ಟು, ನನ್ನಂತೆ ನಡೆದರೆ, ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕೊಡುವೆನೆಂದು ಒಡ್ಡಿದ ಆಮಿಷವನ್ನು ತಿರಸ್ಕರಿಸುವ ಏಸು, ಬೆಸ್ತರಿಗೆ ‘ಮಾನವರಾಗಿ ಹುಟ್ಟಿದ ಮೇಲೆ ಎಲ್ಲರ ದೇಹದಲ್ಲಿಯೂ ಒಬ್ಬನಿರುವನಲ್ಲದೇ ಮತ್ತೆ ಬೇರಿಲ್ಲಾ, ಇದೇ ಪರಮಾತ್ಮನ ಪರಿ, ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆ’ ಎಂದಾಗ, ಸೀಮೋನ, ಅವನ ತಮ್ಮ ಅಂದ್ರೇಯ, ನಂತರ ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನರು ಅವನ ಪ್ರಥಮ ಶಿಷರಾಗುತ್ತಾರೆ.

ಗುರು ಜ್ಞಾನಸ್ನಾನಿ ಯೋಹಾನನು ಹೆರೋದನ ಬಳಿಗೆ ಬಂದು, ಅಣ್ಣನ ಹೆಂಡತಿಯನ್ನು ಮದುವೆಯಾದ ಅವನ ಅನಾಚಾರವನ್ನು ಹೀಗಳೆಯುತ್ತಾನೆ. ಸಿಟ್ಟಿಗೇಳುವ ಹೆರೋದ ಅವನನ್ನು ಜೈಲಿಗಟ್ಟುತ್ತಾನೆ. ಹೆರೋಧನ ಹೆಂಡತಿ ಪ್ರಲಾಪಿಸಲು, ಅವಳ ದುಃಖಕ್ಕೆ ಕಾರಣನಾದ ಯೋಹಾನನ ಶಿರವನ್ನು ತಂದು ಅವಳ ಮುಂದೆ ಇರಿಸುವುದಾಗಿ ಅವಳ ಮಗಳು ಪಣತೊಡುತ್ತಾಳೆ. ಮಲತಂದೆ ಚಿಕ್ಕ ತಂದೆಯ ಬಳಿಬಂದು, ನಾಟ್ಯವಾಡಿ ಅವನ ಮನಗೆದ್ದು ಯೋಹಾನನ ಶಿರವನ್ನು ವರವಾಗಿ ಪಡೆಯುತ್ತಾಳೆ.

ದೀಕ್ಷಾಸ್ನಾನಿ ಯೋವಾನ್ನನ ಶಿಷ್ಯರು, ಯೋವಾನ್ನನ ಶವವನ್ನು ಏಸುವಿನ ಬಳಿ ಹೊತ್ತು ತರುತ್ತಾರೆ. ಪರಾತ್ಪರ ಪರಮಾತ್ಮ ಪರಮಪುರುಷ, ಸರ್ವೇಶ, ಸರ್ವಾತ್ಮ, ನಿರ್ವಿಕಾರವೆಂದು ಎಲ್ಲರೂ ಜಯಕಾರ ಹೇಳಿ ಶವವನ್ನು ದಹನ ಸಂಸ್ಕಾರಕ್ಕೆ ಒಳಪಡಿಸುತ್ತಾರೆ. ನಂತರ, ಪೇತ್ರ (ಸಿಮೋನ), ಅಂದ್ರೇಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೋಮಾಯ, ತೋಮ, ಮತ್ತಾಯ, ಯಾಕೋಬ, ತದ್ದಾಯ, ಮತಾಭಿಮಾನಿ ಸಿಮೋನ, ಇಸ್ಕರಿಯೋತ ಯೂದರನ್ನು ಜನರಲ್ಲಿ (ಶುಭಸಂದೇಶವನ್ನು) ಬೋಧಿಸಲು ಏಸು ಕಳುಹಿಸುತ್ತಾನೆ. ಆ ನಂತರ ಏಸು ಪರಮಪವಿತ್ರವಾದ ದೇವಸ್ಥಾನಕ್ಕೆ ಬಂದಾಗ, ಅಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಅಂಗಡಿ ಇಡಬೇಡಿರೆಂದು ಗದರಿಸುತ್ತಾನೆ. ‘ಸರ್ವರೂ ಒಂದೆ. ಸರ್ವರಲ್ಲಿಯೂ ನಿರಾಕಾರಿಯಾದ ಪರಮಾತ್ಮನು ಒಬ್ಬನೇ. ನಾವು ಭೇದಭಾವವನ್ನು ಬಿಟ್ಟು ಜ್ಞಾನ ಮಾರ್ಗದಲ್ಲಿ ನಡೆದರೆ ಪರಮಾತ್ಮನು ನಾನಾ ಜನ್ಮದ ಪಾಪಗಳನ್ನು ನಾಶಮಾಡಿ ತನ್ನಲ್ಲಿ ಐಕ್ಯ ಮಾಡಿಕೊಳ್ಳುವನು. ಯುಗದ ಸಮಾಪ್ತಿಯಲ್ಲಿ ದೇವದೂತರು ಬಂದು ನೀತಿವಂತರಿಂದ ಕೆಟ್ಟವರನ್ನು ಬೇರೆ ಮಾಡಿ, ಕೆಟ್ಟವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು. ಆದ ಕಾರಣ ಜ್ಞಾನ ಮಾರ್ಗದಲ್ಲಿ ನಡೆಯಬೇಕು’ ಎಂದು ಏಸು ಬೋಧಿಸುತ್ತಾನೆ. ‘ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿಮ್ಮ ತಂದೆಯು ನಿಮಗೆ ಫಲ ಕೊಡುವನು. ಬೇರೆಯವರು ನೋಡುವುದಕ್ಕೆ ಪ್ರಾರ್ಥನೆ ಮಾಡಬೇಡಿ. ನೀವು ಜನರ ತಪ್ಪನ್ನು ಕ್ಷಮಿಸಿದರೆ, ದೇವರು ನಿಮ್ಮ ತಪ್ಪನ್ನು ಕ್ಷಮಿಸುವನು. ಬಲಗೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನು ಒಡ್ಡಿರಿ, ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ’ ಎಂದೂ ಏಸು ಬೋಧಿಸುತ್ತಾನೆ.

ತಪ್ಪು ಮಾಡದವ ಮೊದಲ ಕಲ್ಲೆಸೆಯಲಿ:

ಆಗ ಕೆಲವರು, ವೇಶ್ಯೆಯೊಬ್ಬಳನ್ನು ಕರೆದುಕೊಂಡು ಬಂದು, ಯೇಸುವಿನ ಮುಂದೆ ನಿಲ್ಲಿಸಿ, ಧರ್ಮಶಾಸ್ತ್ರದ ಪ್ರಕಾರ ಆಕೆಗೆ ಶಿಕ್ಷೆ ಕೊಡುವಂತೆ ಒತ್ತಾಯಿಸಿದಾಗ, ‘ಯಾರೂ ತಪ್ಪು ಮಾಡದವರು ಮೊದಲ ಕಲ್ಲನ್ನು ಅವಳ ಮೇಲೆ ಎಸೆಯಲಿ’ ಎಂದಾಗ, ಆತ್ಮವಿಮರ್ಶೆಯಲ್ಲಿ ಸೋತ ಜನರು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಾರೆ. ಕೊನೆಗೆ ‘ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ’ ಎಂದು ಏಸು ಅವಳನ್ನು ಕಳುಹಿಸಿಬಿಡುತ್ತಾರೆ. ದಾರಿಹೋಕ ಧರ್ಮಾತ್ಮನನ್ನು ಹೊಡೆದು ಘಾಸಿಗೊಳಿಸುವ ಚೋರರು ಒಡವೆ ವಸ್ತುಗಳನ್ನು ಕೊಳ್ಳೆಹೊಡೆಯುತ್ತಾರೆ. ಉಳಿದ ದಾರಿಹೋಕರು ಯಾರೂ ಬಿದ್ದವನನ್ನು ಎದ್ದು ಕೂಡಿಸುವುದಿಲ್ಲ. ಕೊನೆಗೊಬ್ಬ ಬಂದು ಸಹಾಯ ಹಸ್ತ ಚಾಚುತ್ತಾನೆ. ಇದಕ್ಕೆಲ್ಲಾ ಹಿಂದಿನ ಜನ್ಮದ ಸಂಸ್ಕಾರ ಕಾರಣ. ಅರಿವೆಂಬ ತತ್ವದಲ್ಲಿ ಕಡಿದು ಸರ್ವೇಶ್ವರನೆಂಬ ಶಾಂತಿ, ಕ್ಷಮೆ, ನೇಮಗಳಿಂದ ನಡೆಯುವುದೆ ಸಕಲ ಧರ್ಮದ ಸಾರವೆಂದು ಬಣ್ಣಿಸುವ ಏಸುವಿನ ಯಥೋಚಿತ ಮಾತುಗಳಿಂದ, ಅವನ ಜನಪ್ರಿಯತೆಯಿಂದ ನೊಂದ ಮಹಾಯಾಜಕನ ಪಕ್ಷದವರು ಏಸುವಿನ ಕಡುವಿರೋಧಿಗಳಾಗುತ್ತಾರೆ.

ತದನಂತರ, ಶಿಷ್ಯರೊಂದಿಗಿದ್ದಾಗ, ‘ನಮ್ಮ ಶಿಷ್ಯರಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು. ಆಗ ಅವರು ತಮ್ಮ ದೊರೆಯ ಬಳಿಗೆ ಕರೆದುಕೊಂಡು ಹೋಗಿ ದೂರು ಹೇಳುವರು. ದೊರೆಯು ನನ್ನನ್ನು ನ್ಯಾಯಾಧೀಶರಲ್ಲಿ ಕಳುಹಿಸುವನು. ನಿಮ್ಮಲ್ಲಿ ಒಬ್ಬನು ಲಂಚವನ್ನು ತೆಗೆದುಕೊಂಡು, ಪ್ರೀತಿಯುಳ್ಳವನಂತೆ ನಟಿಸಿ ನನಗೆ ಮುತ್ತಿಡಲು ಬರುವನು. ಆಗ ನನ್ನನ್ನು ಹಿಡಿದುಕೊಂಡು ಶಿಕ್ಷೆ ವಿಧಿಸಲು ಎಳೆದೊಯ್ಯುವರು’ ಎಂದು ಏಸು ಭವಿಷ್ಯ ನುಡಿಯುತ್ತಾನೆ. ಪಸ್ಖ (ಪಾಸ್ಖ) ಹಬ್ಬದ ದಿನ ಶಿಷ್ಯರೊಂದಿಗೆ ಊಟ ಮಾಡುತ್ತಾ, ರೊಟ್ಟಿಯನ್ನು ಮುರಿದು ಶಿಷ್ಯರಿಗೆ ಕೊಡುತ್ತಾ ಇದು ನನ್ನ ದೇಹ ಎನ್ನುತ್ತಾನೆ. ಆಮೇಲೆ ಪಾತ್ರೆಯನ್ನು ತೆಗದುಕೊಂಡು ಸ್ತೋತ್ರಮಾಡಿ ಅವರಿಗೆ ಕುಡಿಯಲು ಕೊಟ್ಟು, ಇದು ನನ್ನ ರಕ್ತ, ಒಡಂಬಡಿಕೆಯ ರಕ್ತ, ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ’ ಎಂದು ಹೇಳುತ್ತಾನೆ.

ಇತ್ತ, ಮಹಾಯಾಜಕರು, ಹಿರಿಯರು, ಶಾಸ್ತ್ರಿಗಳು ದೇಶಾಧಿಪತಿಯ ಬಳಿಗೆ ಹೋಗಿ ‘ಹಿಂದೆ ಹೆರೋದರಸನಿದ್ದಾಗ ಮೂಡಣ ದೇಶದ ಪಂಡಿತರು ಬಂದು ಯೇಸು ದೊರೆಯಾಗುವನೆಂದು ತಿಳಿಸಲು, ಆ ಅರಸನು ಮಕ್ಕಳನ್ನು ಕೊಲ್ಲಿಸಿದ್ದನು. ಯೇಸುವು ಸತ್ತಿರುವನೆಂದು ತಿಳಿದಿದ್ದೆವು. ಆತ ಬದುಕಿರುವ. ಆತನನ್ನು ಹುಡುಕಿ ತರುತ್ತೇವೆ’ ಎಂದು ಹೇಳುತ್ತಾರೆ. ಏಸುವಿನ ಶಿಷ್ಯ ಇಸ್ಕರಿಯೋತ ಯೂದ 30 ರೂಪಾಯಿ ಪಡೆದು ಏಸುವನ್ನು ಹಿಡಿದುಕೊಡುತ್ತಾನೆ. ಏಸುವಿನ ವಿಚಾರಣೆ ನಡೆಸುವ ಮಹಾಯಾಜಕನು, ಯೇಸುವಿನ ಮಾತುಗಳು ದೇವದೂಷಣೆಯ ಮಾತುಗಳು. ಇವನಿಗೆ ಮರಣ ದಂಡನೆಯೆ ಸೂಕ್ತವೆಂದು ನಿರ್ಧರಿಸುತ್ತಾನೆ. ನಂತರ ಏಸುವನ್ನು ದೇಶಾಧಿಪತಿ ಪಿಲಾತನ ಎದುರು ತಂದು ನಿಲ್ಲಿಸುತ್ತಾರೆ. ಪಿಲಾತ, ಶಾಂತಚಿತ್ತನಾದ ಏಸುವಿನಲ್ಲಿ ಜ್ಞಾನ ಮಾರ್ಗವನ್ನು ತಿಳಿದು ತಲೆಬಾಗುತ್ತಾನೆ. ಯಾವ ಅಪರಾಧ ಕಾಣದ ಪಿಲಾತ, ಏಸುವನ್ನು ಗಲಿಲಾಯದವನೆಂದು ತಿಳಿದು ಹೆರೋದನ ಬಳಿಗೆ ಕಳುಹಿಸುತ್ತಾನೆ. ಆದರೆ ಆತ, ಏಸುವನ್ನು ಮತ್ತೆ ಪಿಲಾತನಲ್ಲಿಗೆ ಕಳುಹಿಸುತ್ತಾನೆ. ಪಿಲಾತನಾದರೋ, ಮಹಾಯಾಜಕರು ಮತ್ತು ಶಾಸ್ತ್ರಿಗಳ ದೂರುಗಳನ್ನು ಬದಿಗಿರಿಸಿ, ‘ಈತನು ಎಲ್ಲಿ ನಿಲ್ಲುವನೋ ಅದೇ ಪುಣ್ಯ ಸ್ಥಳವು. ಈತನು ತ್ರಿಕಾಲ ಜ್ಞಾನಿ. ಈತನು ಅಂಗವಿಕಲರಿಗೆ ಕೈಕಾಲು ಕಣ್ಣುಗಳನ್ನು ಕೊಡತಕ್ಕವನು, ಈತನನ್ನು ನಾನು ಕೊಲ್ಲಿಸಲಾರೆ’ ಎಂದು ತನ್ನಷ್ಟಕ್ಕೆ ತಾನೇ ಅಲವತ್ತುಕೊಳ್ಳುತ್ತಾನೆ. ಕೊನೆಗೆ ‘ಬೇಕಾದರೆ ನೀವೇ ಈತನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿಸಿರಿ. ನನಗೆ ಇವನಲ್ಲಿ ಅಪರಾಧವು ಕಾಣಿಸಲಿಲ್ಲ’ ಎನ್ನುತ್ತಾ ಆತನನ್ನು ಉಳಿಸುವ ತನ್ನ ಯತ್ನವೇನು ನಡೆಯದೆಂದು ತಿಳಿದು, ಏಸುವನ್ನು ಅವರಿಗೆ ಒಪ್ಪಿಸುತ್ತಾನೆ. ಇತ್ತ ಜುದಾಸನೆಂಬುವನು, ‘ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ಪಾಪ ಮಾಡಿದೆ’ ಎಂದು ಪಶ್ಚಾತ್ತಾಪ ಪಟ್ಟು, ಉರ್ಲುಹಾಕಿಕೊಂಡು ಪ್ರಾಣ ಬಿಡುತ್ತಾನೆ.

ತಂದೆಯೇ ಅವರನ್ನು ಕ್ಷಮಿಸು:

ಅತ್ತ ಏಸು ಶಿಲುಬೆಯನ್ನು ಹೊತ್ತು ಕಪಾಲ ಸ್ಥಳಕ್ಕೆ ಸಾಗುತ್ತಿದ್ದಾಗ ಜನ ಅಪಹಾಸ್ಯ ಮಾಡುತ್ತಾರೆ. ಕುರೇನ ಪಟ್ಟಣದ ಸೀಮೋನ ಶಿಲುಬೆಯನ್ನು ಬಿಟ್ಟಿಯಾಗಿ ಹೊರುವಂತೆ ಮಾಡುವರು. ಕಪಾಲ ಬೆಟ್ಟದಲ್ಲಿ ಏಸುವನ್ನು ಇಬ್ಬರು ಕಳ್ಳರ ನಡುವೆ ಶಿಲುಬೆಗೆ ಏರಿಸುತ್ತಾರೆ. ‘ತಂದೆಯೆ ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅರಿಯರು’ ಎನ್ನುವ ಏಸು, ಶುಕ್ರವಾರ ಸಾಯಂಕಾಲ 3 ಗಂಟೆಗೆ ‘ಎಲೋಹಿ ಎಲೋಹಿ, ಲಮಾ ಸಬಕ್ತಾನಿ- ನನ್ನ ದೇವರೇ ನನ್ನ ದೇವರೆ, ಯಾಕೆ ನನ್ನನ್ನು ಕೈಬಿಟ್ಟಿದ್ದಿ’ ಎಂದು ಕೂಗಿ ಪ್ರಾಣಬಿಡುತ್ತಾನೆ. ಏಸುವು ಪರಮಾತ್ಮನಲಿ ಐಕ್ಯನಾಗಲು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು. ಆಕಾಶದಿಂದ ನಕ್ಷತ್ರಗಳು ಉರುಳಿದವು. ಭೂಮಿಯು ಅದುರಿತು. ಬಂಡೆಗಳು ಸೀಳಿಹೋದವು. ಭೂಮಿಯನ್ನು ಹೊತ್ತ ದಿಗ್ಗಜಂಗಳು ಬೆದರಿದವು. ಆದಿ ಶೇಷನು ತಲೆದೂಗಿದನು. ಸಮಾಧಿಗಳು ತೆರೆದವು. ನಿದ್ದೆ ಹೋಗಿದ್ದ ಅನೇಕ ಭಕ್ತರ ದೇಹಗಳು ಎದ್ದವು. ಈ ಪರಮಪುರುಷನು, ಪರಾತ್ಪರನಲ್ಲಿ ಸೇರಲು ಅಲ್ಲಿ ಅಂಧಕಾರ ಕವಿದು ಎತ್ತ ನೋಡಲು ಬೆಳಕಿಲ್ಲದಂತಾಯಿತು.

ಜನರೆಲ್ಲರೂ ಏಕೋಮನಚಿತ್ತ ಭಾವದಿಂದ ಯೇಸುದೇವನನ್ನು ಧ್ಯಾನ ಮಾಡಲು, ಆ ಕ್ಷಣದಲ್ಲಿ ಸೂರ್ಯ ಚಂದ್ರ ತಾರೆಗಳು, ಈ ಪರಮಪುರುಷನ ಐಕ್ಯ ಸುದಿನವನ್ನು ನೋಡಲು ಏಕಕಾಲದಲ್ಲಿ ಉದಯಿಸಿದರು ಎಂಬಂತೆ ಬೆಳಕಾಯಿತು. ಸಿಡಿಲು ಮಿಂಚು ಗುಡುಗು ಫಳಫಳನೆ ಶಬ್ದವಾಯಿತು. ಹೂವಿನ ಮಳೆ ಸುರಿಯಿತು. ಸರ್ವದೇವತೆಗಳು ಪ್ರತ್ಯಕ್ಷರಾದರು.

ಏಸುವಿನ ಶಿಷ್ಯ ಅರಿಮತಾಯದ ಯೋಸೇಫನೆಂಬ ಧನವಂತ ಏಸುವಿನ ದೇಹವನ್ನು ಇಳಿಸಿ ಸಮಾಧಿ ಮಾಡುತ್ತಾನೆ. ಮಹಾಯಾಜಕರು ಮೂರುದಿನಗಳಲ್ಲಿ ಏಳುವೆನೆಂದು ಏಸು ಹೇಳಿದ್ದ ಆದ ಕಾರಣ ಸಮಾಧಿಗೆ ಭದ್ರಮಾಡಿ ಕಾವಲುಗಾರರನ್ನು ನೇಮಿಸುತ್ತಾರೆ. ಮೂರುದಿವಸಕ್ಕೆ ಸರಿಯಾಗಿ ಅಂದರೆ ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿವಸ ಅಂದರೆ ಆದಿತ್ಯವಾರ ಏಸು ಎದ್ದಿರುತ್ತಾನೆ. ಸಮಾಧಿ ನೋಡಲು ಬಂದವರಿಗೆ ಕರ್ತನ ದೂತ ಏಸು ಎದ್ದಿರುವನೆಂದು ತಿಳಿಸುತ್ತಾನೆ. ಗೆಲಿಲಿಯಾದಲ್ಲಿ ಶಿಷ್ಯರಿಗೆ ಏಸು ಕಾಣಿಸಿಕೊಳ್ಳುತ್ತಾನೆ. ಏಸು ಅವರಿಗೆ, ‘ಹೆದರಬೇಡಿರಿ, ನಿಮಗೆಲ್ಲರಿಗೂ ಶುಭವಾಗಲಿ' ಎಂದು ಹರಸಿ ಅದೃಶ್ಯನಾಗುತ್ತಾನೆ. ಈ ಸತ್ಯವಂತನಾದ ಏಸುದೇವನ ಕಥೆಯನ್ನು ಬರೆದು ಓದಿ ಅರ್ಥ ಹೇಳಿದ ಜನರಿಗೆ ಪರಮಾತ್ಮನು ಸಕಲ ಸೌಭಾಗ್ಯ ಪುತ್ರ ಮಿತ್ರರನ್ನು ಕರುಣಿಸಿ, ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಸಲಹುವನು ಎಂಬ ಮಾತಿನೊಂದಿಗೆ, 

ಕೇತಾರಗೌಳ ರಾಗ || ಆಟ ತಾಳ ||

ಮಂಗಳಂ ಮಂಗಳಂ | ಯೇಸುವಿಗೆ |
ಮಂಗಳಂ ಮಂಗಳಂ || ಪಲ್ಲವಿ ||

ಮಂಗಳಂ ಏಸುಗೆ | ಮಂಗಳಂ ವಿಶ್ವಗೆ |
ಮಂಗಳಂ ಶಿಷ್ಯರ | ಸಲಹಿದವನಿಗೆ | ಮಂಗಳಂ || 1 ||


ಕಣ್ಣಿಲ್ಲದವರಿಗೆ | ಕಣ್ಣನ್ನು ಕರುಣಿಸಿ |
ಕಣ್ಣು ಮೂರುಳ್ಳವನ | ಕರುಣೆ ಪಡೆದವಗೆ | ಮಂಗಳಂ || 2 ||


ಕೈಕಾಲು ಇಲ್ಲದ | ಅಂಗವಿಕಲರಿಗೆ |
ಕೈ ಕಾಲು ಕರುಣಿಸಿ | ಕೀರ್ತಿ ಪಡೆದವಗೆ | ಮಂಗಳಂ || 3 ||


ಮರಣದ ನಂತರ | ಮೂರು ದಿವಸಕ್ಕೆ |
ದರುಶನವನು ಇತ್ತ | ಪರಮ ಪೂಜ್ಯನಿಗೆ | ಮಂಗಳಂ || 4 ||

ಹಿರಿಯ ಬಳ್ಳಾಪುರ | ವರದ ಸೋಮೇಶನ |
ಕರುಣದಿಂದಲಿ ಮುಕ್ತಿ | ಯನು ಹೊಂದಿದವಗೆ | ಮಂಗಳಂ || 5 ||

ಎಂಬ ಮಂಗಳಾರತಿ ಪದ್ಯದೊಂದಿಗೆ ಈ ಬಯಲಾಟವು ಮುಗಿಯುತ್ತದೆ.

ಸ್ಥೂಲ ಗ್ರಹಿಕೆಯಲ್ಲಿ ಈ ಬಯಲಾಟ: 

ಈ ‘ಏಸು ಸ್ವಾಮಿಯ ಕಥೆ’ ಮೂಡಲಪಾಯ ಬಯಲಾಟವು ತನ್ನ ಓಘದಲ್ಲಿ ಹರಿಕಥೆಯ ಮಾದರಿಯನ್ನು ಅನುಕರಿಸಿದಂತಿದೆ. ಪರಮಾತ್ಮನ ಒಡ್ಡೋಲಗದಿಂದ ಆರಂಭವಾಗುವ ಯಥೋಚಿತ ಪದ್ಯಗದ್ಯಗಳಿಂದ ತುಂಬಿರುವ ಈ ಬಯಲಾಟದಲ್ಲಿ ವಿವಿಧ ಪ್ರಸಂಗಗಳು, ಮುಗಿವಿಲ್ಲದೇ ಒಂದರೊಳಗೊಂದು ಬೆಸೆದುಕೊಂಡಂತೆ ಸರಪಳಿಯಂತೆ ಸಾಗುತ್ತವೆ. ಭಾಗವತನ ಭಾಗವತತನವೇ ಹೆಚ್ಚಾಗಿ, ಪಾತ್ರಗಳು ಗೌಣಗೊಂಡಂತೆ ಅನ್ನಿಸುತ್ತದೆ. ಕರ್ನಾಟಕದ ಬಯಲಾಟ, ಉತ್ತರ ಕರ್ನಾಟಕದಲ್ಲಿನ ದೊಡ್ಡಾಟಗಳಲ್ಲಿ ‘ಪೀಠಿಕಾ ಮಾತು, ನಾಮಾಂಕಿತದ ಮಾತು, ಸಭಾದ ಮಾತು’ ಇತ್ಯಾದಿಗಳು ಆಯಾ ಪಾತ್ರಗಳಿಗೆ ಸಾಕಷ್ಟು ಮುಕ್ತ ಅವಕಾಶಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬಹುದಾಗಿದೆ. ಅದೇ ಬಗೆಯಲ್ಲಿ ಬಯಲಾಟದ ದೂತಿ/ಚಾರ/ಚಾರಕ/ಸಾರಥಿಯಂಥ ಪೋಷಕ ಪಾತ್ರವೂ ಇದರಲ್ಲಿ ಕಾಣೆಯಾಗಿದೆ. ಉತ್ತರ ಕರ್ನಾಟಕದ ಸಾರಥಿಯನ್ನು ದಕ್ಷಿಣ ಕರ್ನಾಟಕದಲ್ಲಿ ಚಾರಕ ಎಂದು ಕರೆಯುತ್ತಾರೆ. ಇದರಲ್ಲೂ ಮಾತು, ವಚನ, ಪದ್ಯ ಹಾಗೂ ಶ್ಲೋಕಗಳಿವೆ.

ಕ್ರೈಸ್ತರು, ಪಿತ ಸುತ ಪವಿತ್ರಾತ್ಮರೆಂಬ ಮೂವರನ್ನು ಸೇರಿಸಿ ತ್ರಿ-ಏಕ ದೇವರನ್ನು ವಿಶ್ವಾಸಿಸುತ್ತಾರೆ. ಕ್ರೈಸ್ತ ಧಾರ್ಮಿಕ ವಿಶ್ವಾಸದಲ್ಲಿ ರೇಖಾ ಗಣಿತದ ತ್ರಿಕೋಣದ ತ್ರಿಭುಜದಂತೆ ಹಾಗೂ ನೀರು, ಹಿಮ ಮತ್ತು ಆವಿಯೂ ಒಂದೇ ಆಗಿರುವಂತೆ ಪಿತ, ಸುತ ಮತ್ತು ಪವಿತ್ರಾತ್ಮರು ಒಂದೇ ಎನ್ನಲಾಗುತ್ತದೆ. ಪಿತನನ್ನು ವಯೋವೃದ್ಧನಂತೆ, ಪವಿತ್ರಾತ್ಮನನ್ನು ಬಿಳಿ ಪಾರಿವಾಳದ ರೂಪದಲ್ಲಿ ಗುರುತಿಸಿದರೆ, ಯೇಸುಸ್ವಾಮಿ ಪಿತನ ಸುತ. ಜನ್ಮಜನ್ಮಾಂತರದ ಕಲ್ಪನೆ ಕ್ರೈಸ್ತರಲ್ಲಿ ಇಲ್ಲವೇ ಇಲ್ಲ. ಮೃತರು ಅಂತಿಮ ನ್ಯಾಯನಿರ್ಣಯದವರೆಗೆ ಕಾಯುತ್ತಲೇ ಇರುತ್ತಾರೆ. ಭಾರತೀಯ ನಂಬುಗೆಯ ಪ್ರಕಾರ ಧರ್ಮಗ್ಲಾನಿ ಉಂಟಾದಾಗಲೆಲ್ಲಾ ಮಾನವ ಜನ್ಮ ತಾಳುವ ದೇವರು, ಕ್ರೈಸ್ತ ನಂಬುಗೆಯಂತೆ ಪಿತನಾದ ಏಕ ದೇವರು ತನ್ನ ಮಗನನ್ನೇ ಕಳುಹಿಸುತ್ತಾರೆ. ಆದರಿಲ್ಲಿ ತನ್ನನ್ನು ನಿರಾಕಾರ ಎಂದು ಗುರುತಿಸಿಕೊಳ್ಳುವ ದೇವರೇ, ಯೇಸುವಿನ ಅವತಾರ ತಾಳಿ ಮಾನವನಂತೆಯೇ ಪುಣ್ಯಸ್ತ್ರೀಯ ಮುಖಾಂತರ ಭೂಮಿಗೆ ಬರುತ್ತಾನೆ.

ದೇವಮಾತೆ ಮರಿಯಳು ಮರಿಯಳೇ ಆಗಿ ಉಳಿದಿದ್ದರೆ, ಆಕೆಯ ಪತಿ ಜೋಸೆಫ್ ಯಶೋಫ/ಪನಾಗಿದ್ದಾನೆ. ದಾಯಾದಿಗಳಾದ ಮಹಮ್ಮದೀಯರಲ್ಲಿ ಜೋಸೆಫ್ ಯೂಸುಫ್ ಆಗಿರುವನು. ಕನ್ನಡ ನಿಘಂಟುಗಳು ಏಸು ಪದಕ್ಕೆ 1. ಬಾಣಪ್ರಯೋಗ ಮಾಡು, ಕೋಲನ್ನು ಇಸು (ನಾ), 2. ಬಾಣ ಪ್ರಯೋಗ ಮಾಡುವುದು, 3. ಹೊಡೆತ; ಪೆಟ್ಟು 4. ಎಷ್ಟು; 5. ಕ್ರೈಸ್ತಮತ ಪ್ರವರ್ತಕ ಎಂದು ಅರ್ಥ ನೀಡಿವೆ. ದಯೆ ಕರುಣೆ ಪ್ರತಿಪಾದಿಸುವ ಯೇಸುವನ್ನು 'ಏಸು' ಎಂದು ಗುರುತಿಸುವುದಕ್ಕಿಂತ ಯೇಸು ಎಂಬ ಬಳಕೆ ಸಾಧುವಾದುದು ಎಂಬ ಭಾವನೆ ಈಚೆಗೆ ಕನ್ನಡ ಮನೆಮಾತಿನ ಕ್ರೈಸ್ತರಲ್ಲಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಏಸು ಮತ್ತು ಯೇಸು ಹೆಸರುಗಳಲ್ಲಿ ಏಸುವಿಗಿಂತ ಯೇಸು ಹೆಸರು ಸೂಕ್ತವಾದ ಬಳಕೆ ಎನ್ನಬಹುದು. ಮತ್ತಾಯನ ಶುಭಸಂದೇಶ (ಸುವಾರ್ತೆ)ವು ಸ್ನಾನಿಕ ಯೋವಾನ್ನನ ಬೋಧನೆಯ ಪ್ರಸ್ತಾಪದೊಂದಿಗೆ ಆರಂಭವಾದರೆ, ಲೂಕನ ಶುಭಸಂದೇಶದಲ್ಲಿನ ಜಕರೀಯ ಮತ್ತು ಎಲಿಜಬೇತಳ ಮಗ ಸ್ನಾನಿಕ ಯೋವಾನ್ನನ ಹುಟ್ಟಿನ ಸಮಾಚಾರ ಇಲ್ಲಿ ಸೇರಿದೆ. ಎಲಿಜಬೇತಳು ಎಲಿಜಬೇತ್ತರಾಣಿ ಆಗಿದ್ದಾಳೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದ ಈ ಕೃತಿಯ ರಚನಾಕಾರ ಸುಬ್ಬರಾಯಪ್ಪನವರಿಗೆ ಎಲಿಜಬೇತರಾಣಿಯು ಹೆಸರು ಅಪ್ಯಾಯಮಾನವಾಗಿ ಕಂಡಿರಬೇಕು. ಅವರು, ಯೋವಾನನ ನಾಮಕರಣಕ್ಕೆ ಪುರೋಹಿತರನ್ನು ಬರಮಾಡಿಕೊಂಡಿದ್ದಾರೆ. ಆದರೆ, ಭಗವಂತನ ಅವತಾರವೆನ್ನುವ ಯೇಸುವಿನ ನಾಮಕರಣದಲ್ಲಿ ಅವರ ಉಪಸ್ಥಿತಿಯೇ ಇಲ್ಲ. ಸ್ನಾನಿಕ ಯೋವಾನ್ನನ ಮುಂಡವನ್ನು ಏಸುವಿನ ಹತ್ತಿರ ತಂದು ಅದನ್ನು ದಹನಮಾಡುವ ಪ್ರಸ್ತಾಪವಿದೆ. ಮುಂಡ ತರುವ ಹಾಗೂ ದಹನದ ವಿಷಯ ಮತ್ತಾಯನ ಶುಭಸಂದೇಶದಲ್ಲಿ ಇಲ್ಲವೇ ಇಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಗುರುಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯದಲ್ಲಿ ಶವ ದಹನ ಪ್ರಚಲಿತವಿದ್ದು, ಗುರುವಾದ ಸ್ನಾನಿಕ ಯೋವಾನನಿಗೂ ದಹನ ಸಂಸ್ಕಾರವನ್ನು ಮಾಡಲಾಯಿತೆಂದು ಕೃತಿ ರಚನಾಕಾರ ಚಿತ್ರಿಸಿರಬಹುದು. ಯಹೂದಿ ಸಾಮಂತ ಅರಸನ ಹೆಸರನ್ನು ಯರೋದ, ಹೆರೋದ ಎಂದು ಬಳಸಲಾಗಿದೆ. ಯೋವಾನ್ನ ಯೋವಾನನಾದರೆ, ಉಳಿದ ಹನ್ನೆರಡು ಶಿಷ್ಯರ ಹೆಸರುಗಳನ್ನು ಮತ್ತಾಯನ ಶುಭಸಂದೇಶದಲ್ಲಿರುವಂತೆಯೇ ಉಳಿಸಿಕೊಳ್ಳಲಾಗಿದೆ.

ಲೂಕನ ಸುವಾರ್ತೆಯಲ್ಲಿ ಗಬ್ರಿಯೇಲ್ ದೂತನು ಮಾತೆ ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದನ್ನು ತಿಳಿಸಿದರೆ, ಮತ್ತಾಯನ ಸುವಾರ್ತೆಯಲ್ಲಿ ದೇವದೂತನ ಹೆಸರಿಲ್ಲ. ಹೀಗಾಗಿ ಈ ಕೃತಿಕಾರ ದೇವದೂತನ ಹೆಸರನ್ನು ಪ್ರಸ್ತಾಪ ಮಾಡಿದಂತಿಲ್ಲ. ಆದರೆ, ದೇವರು ತಾನು ಅವತರಿಸುವೆನೆಂದು ಭೂಲೋಕಕ್ಕೆ ತಿಳಿಸಲು ತಾನು ನಿರ್ಮಿಸಿದ ದೂತನನ್ನು ಅಹಜಾ ರಾಜನಲ್ಲಿಗೆ ಕಳುಹಿಸುತ್ತಾನೆ ಎಂದು ಹೇಳುವ ಕೃತಿಕಾರ, ಮತ್ತಾಯನ ಶುಭಸಂದೇಶದಲ್ಲೂ ಇರದ ಪಾತ್ರವೊಂದನ್ನು ಪರಿಚಯಿಸಿದ ಕಾರಣವೇನಿರಬಹುದು ಎಂಬ ಪ್ರಶ್ನೆ ಕಾಡದಿರದು.

ಪುರಾಣ ಶ್ರವಣ ಮತ್ತು ಪಾರಾಯಣ:

‘ಅಹಜಾ’ ಹೆಸರಿನಂತೆಯೆ ನಾಗರಾಜ - ಆದಿಶೇಷನನ್ನು ಗುರುತಿಸುವ ಅಹಿಪತಿ, ಅಹಿರಾಜ ಹೆಸರುಗಳು ಸಿಗುತ್ತವೆ. ಅಹಿಧರ, ಅಹಿಧಾಮ- (ಸರ್ಪಧರ) ಶಿವನ ಹೆಸರುಗಳಾದರೆ, ಅಹಿಪತಲ್ಪ - ಆದಿಶೇಷನನ್ನು ಹಾಸಿಗೆಯಾಗಿ ಉಳ್ಳ ವಿಷ್ಣುವಿನ ಹೆಸರುಗಳು ದೊರಕುತ್ತವೆ. ಇನ್ನು ಅಹಃಪತಿ ಎಂದರೆ ಹಗಲಿನ ಒಡೆಯ ಸೂರ್ಯ, ಅಹಃಪತಿಸುತ ಎಂದರೆ ಸೂರ್ಯಪುತ್ರ -ಶನಿ, ಕರ್ಣ ಸುಗ್ರೀವ ಎಂಬ ಅರ್ಥಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಮೊದಲ ಹೊತ್ತಿಗೆ ಹೇಳುತ್ತದೆ. ಸರೋವರದಲ್ಲಿ ಹುಟ್ಟಿದ್ದು, ನೀರಿನಲ್ಲಿ ಹುಟ್ಟಿದ್ದು ಕಮಲ- ಸರೋಜ, ನೀರಜ ಎಂಬ ಹೆಸರುಗಳಂತೆ ಅಹಃಜ ಎಂಬ ಹೆಸರೂ ರೂಢಿಗೆ ಬಂದಿರಬಹುದು. ಕಾಲಕ್ರಮೇಣ ಅದು ಅಪಭ್ರಂಶಗೊಂಡು ‘ಅಹಜಾ’ ಆಗಿರಬಹುದೆ? ಇನ್ನೊಂದು ಬಗೆಯಲ್ಲಿ ಯೋಚಿಸಿದರೆ ಅಹಂಗೆ, ಅಹಗೆ ಎಂದರೆ ಹಾಗೆ, ಅಹ ಕ್ರಿಯಾಪದವಾದಾಗ ಅಂತಹ, ಅಂತಪ್ಪ ಎಂದು ರೂಪತಾಳುತ್ತದೆ. ‘ಆಮೆನ್’ ಎಂದರೆ ‘ಹಾಗೇ ಆಗಲಿ’ ‘ತಥಾಸ್ತು’ ಎಂಬುದನ್ನು ಇದು ಸೂಚಿಸಬಹುದೇನೋ? ಆಹ ಎಂದರೆ ಹಿರಿದು ಎಂಬ ಅರ್ಥದ (ವಿದ್ವಾನ್ ಕೋಳಂಬೆ ಪುಟ್ಟಣ್ಣಗೌಡರ ಅಚ್ಚಕನ್ನಡ ನುಡಿಕೋಶ) ಹಿನ್ನೆಲೆಯಲ್ಲಿ ಈ ಹೆಸರು ಬಳಸಲಾಗಿದೆಯೆ? ಇವೆಲ್ಲಾ ಊಹೆಗಳಿಗೆ ಬಿಟ್ಟ ವಿಚಾರ.

ಪುರಾಣ, ಮಹಾಭಾರತ, ರಾಮಾಯಣ ಮೊದಲಾದವುಗಳ ಪಾರಾಯಣ - ಮನಸಿಟ್ಟು ಓದುವುದು ಹಾಗೂ ಶ್ರವಣ - ಮನಸ್ಸಿಟ್ಟು ಕೇಳುವುದು ಪುಣ್ಯ ಸಂಚಯದ, ದೋಷ ನಿವಾರಣೆಯ ಒಂದು ವಿಧಾನ ಎಂಬ ನಂಬಿಕೆಯನ್ನು ಈ ನೆಲದ ಜನಪದರು ಹೊಂದಿದ್ದಾರೆ. ಮನೆಗಳಲ್ಲಿ ಶನಿದೇವರ, ಸತ್ಯನಾರಾಯಣನ ಪೂಜೆ ಮಾಡಿಸುವುದು ಇದೇ ಉದ್ದೇಶದ ನಡವಳಿಕೆ ಎಂದು ಹೇಳಲಾಗುತ್ತದೆ. ಈ ಪೂಜೆಯ ಸಂದರ್ಭಗಳಲ್ಲಿ ಪುರಾಣ ಪ್ರವಚನ ಇದ್ದೇ ಇರುತ್ತದೆ. ಇಲ್ಲಿ ‘ಕೇಳು ಜನಮೇಜಯ’ ನುಡಿಗಟ್ಟು ನೆನಪಾಗುತ್ತದೆ.

ಜನಮೇಜಯ ಮಹಾಭಾರತದ ಒಂದು ಪಾತ್ರ. ಪಂಚಪಾಂಡವರಲ್ಲಿ ಒಬ್ಬನಾದ ಅರ್ಜುನ ಈ ಜನಮೇಜಯನಿಗೆ ತಾತ ಮುತ್ತಾತ. ಮುನಿಯ ಶಾಪದ ದೆಸೆಯಿಂದ ಜನಮೇಜಯನ ತಂದೆ ಪರಿಕ್ಷಿತನನ್ನು ತಕ್ಷಕನೆಂಬ ನಾಗರಾಜ ಸಾಯಿಸಿರುತ್ತಾನೆ. ನಾಗಗಳ ಮೇಲೆ ದ್ವೇಷಸಾಧಿಸುವ ಜನಮೇಜಯ, ಸರ್ಪಯಾಗ ಮಾಡಿ ಅವುಗಳ ಸಂಹಾರಕ್ಕೆ ವೇದಿಕೆ ಸಿದ್ಧಪಡಿಸುತ್ತಾನೆ. ಆಗ ಮಧ್ಯೆ ಪ್ರವೇಶಿಸಿದ ನಾಗಕನ್ಯೆ ಮತ್ತು ಬ್ರಾಹ್ಮಣನಿಗೆ ಹುಟ್ಟಿದ ಬಾಲ ಮುನಿ ಆಸ್ತಿಕ ಮಧ್ಯಸ್ಥಿಕೆ ವಹಿಸಿ, ಅವನಿಗೆ ತಿಳಿಹೇಳಿ ಸಮಾಧಾನಪಡಿಸುತ್ತಾನೆ. ನಾಗರು ಮತ್ತು ಕುರು ವಂಶಸ್ಥರು ವೈಮನಸ್ಸು ಬಿಟ್ಟು ಶಾಂತಿಯಿಂದ ಬಾಳತೊಡಗುತ್ತಾರೆ. ಸರ್ಪದೋಷದಿಂದಾದ ಕುಷ್ಟರೋಗದ ನಿವಾರಣೆಗಾಗಿ ವ್ಯಾಸ ಮಹರ್ಷಿಯು, ತನ್ನ ಶಿಷ್ಯ ವೈಶಂಪಾಯನ ಮುನಿಯಿಂದ ಮಹಾಭಾರತ ಕೇಳಲು ಹೇಳುತ್ತಾನೆ. ಅದರಂತೆ ಜನಮೇಜಯನ ಕೋರಿಕೆಯ ಮೇರೆಗೆ ವೈಶಂಪಾಯನ ಮಹಾಭಾರತ ಕಥೆಯನ್ನು ಪೂರ್ಣವಾಗಿ ಹೇಳುವನು. ಆದರೆ ಸ್ವಲ್ಪ ಕುಷ್ಟರೋಗವು ಇನ್ನೂ ಉಳಿದಾಗ, ಅದಕ್ಕೆ ವ್ಯಾಸನು ಜನಮೇಜಯನ ಕೆಲವು ಸಂದೇಹಗಳ ನಿವಾರಣೆಗೆ ಪುನಃ ಮಹಾಭಾರತವನ್ನು ಕೇಳಲು ಹೇಳುತ್ತಾನೆ. ಆಗ ವ್ಯಾಸರ ಇನ್ನೊಬ್ಬ ಶಿಷ್ಯನಾದ ಜೈಮಿನಿ ಮುನಿಯಿಂದ ವೈಶಂಪಾಯನನು ಪುನಃ ಮಹಾಭಾರತದ ಕತೆಯನ್ನು ವಿಸ್ತಾರವಾಗಿ ಕೇಳಿಸಿಕೊಳ್ಳುತ್ತಾನೆ. ತನ್ನ ವಂಶದ ತಾತ ಮುತ್ತಾತಂದಿರ ಕಥೆಗಳನ್ನು ಕೇಳಿದ ಜನಮೇಜಯ ಕುಷ್ಟರೋಗದಿಂದ ಮುಕ್ತನಾಗುತ್ತಾನೆ. ಆ ಮುನಿಗಳು ಮಹಾಭಾರತ ಕಥೆಯನ್ನು ಹೇಳುವಾಗಲೆಲ್ಲಾ, ‘ಕೇಳು ಜನಮೇಜಯ’ ‘ಕೇಳು ಜನಮೇಜಯ’ ಎಂದು ಅವನನ್ನು ಸಂಬೋಧಿಸುತ್ತಿರುತ್ತಾರೆ. ‘ಕೇಳು ಜನಮೇಜಯ’ದ ಹಾದಿಯಲ್ಲಿಯೇ ಈ ಕೃತಿ ರಚನಾಕಾರ ಆರಂಭಿಸಿರಬಹುದಾದ ಬರಹ, ಮುಂದೆ ಹೊಂದಿಕೊಂಡಿರಲಿಕ್ಕಿಲ್ಲ. ಇದೂ ಒಂದು ಊಹೆ.

ಇಲ್ಲಿ ಪುರಾಣ ಪಠಣ, ಪ್ರವಚನ, ಪಾರಾಯಣ ಅಂದಾಗ, ಹದಿನಾರನೇ ಶತಮಾನದಲ್ಲಿ ಗೋವೆಯಲ್ಲಿ ನೆಲೆಸಿದ್ದ ಯೇಸುಸಭೆಗೆ ಸೇರಿದ ಫಾದರ್ ಥಾಮಸ್ ಸ್ಟೀವನ್ಸ್ ಯೇ.ಸ. (1549-1619) ಅವರ ‘ಕ್ರಿಸ್ತ ಪುರಾಣ’ ಗ್ರಂಥದ ನೆನಪಾಗುತ್ತದೆ. ಅವರು, ಶ್ರೀಗ್ರಂಥ ಹಳೆಯ ಮತ್ತು ಹೊಸ ಒಡಂಬಡಿಕೆಯ ಯೇಸುಸ್ವಾಮಿ ಶುಭಸಂದೇಶದವರೆಗಿನ ಕಥನವನ್ನು ಹಿಂದು ಶಿವ ಪುರಾಣ, ವಿಷ್ಣು ಪುರಾಣ ಮೊದಲಾದ ಪುರಾಣಗಳ ಧಾಟಿಯಲ್ಲಿ ಬರೆದಿದ್ದರು. ಕನ್ನಡ, ಮರಾಠಿ ಮತ್ತು ಕೊಂಕಣಿ ಮಿಶ್ರಿತ ಭಾಷೆಯ ಈ ಕ್ರಿಸ್ತ ಪುರಾಣದಲ್ಲಿ 11,000ಕ್ಕೂ ಅಧಿಕ ಪದ್ಯಗಳಿವೆ ಎನ್ನಲಾಗುತ್ತದೆ. ಇಪ್ಪತ್ತನೇ ಶತಮಾನದ ಆದಿಭಾಗದವರೆಗೂ ಚರ್ಚು ಮತ್ತು ಮನೆಮಠಗಳಲ್ಲಿ ಸಂಕಷ್ಟಗಳ ಸಮಯದಲ್ಲಿ (ಉದಾಹರಣೆಗೆ: ಟಿಪ್ಪುವಿನಿಂದ ಸೆರೆಯಾಳುಗಳಾಗಿ ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಸಾಗುವಾಗ), ಸಾಮಾನ್ಯ ದಿನಮಾನಗಳಲ್ಲೂ ಅದರ ಪಠಣ, ಪಾರಾಯಣ ನಡೆಯತ್ತಿತ್ತು ಎಂದು ಹೇಳಲಾಗುತ್ತದೆ.

ಭಾರತದ ನೆಲದಲ್ಲಿ ಬೇರು ಬಿಟ್ಟ ಗಿಡ:
ಮಧ್ಯಪ್ರಾಚ್ಯ ಪ್ರದೇಶದಲ್ಲಿ ರೂಪತಾಳಿದ ಶ್ರೀಗ್ರಂಥ ಬೈಬಲ್ ಹೊತ್ತಿಗೆಯ [ಹಳೆಯ ಒಡಂಬಡಿಕೆ (Old Testament) ಮತ್ತು ಹೊಸ ಒಡಂಬಡಿಕೆ (New Testament)] ಎರಡನೇ ಭಾಗವಾದ ಸರ್ವೇಶ್ವರ ದೇವರು ಮಾನವಕೋಟಿಯೊಂದಿಗೆ ಮಾಡಿಕೊಳ್ಳುವ ಹೊಸ ಒಡಂಬಡಿಕೆಯ ಕಥನದಲ್ಲಿನ ಯೇಸುಸ್ವಾಮಿಯ ಜೀವನ ಚರಿತ್ರೆ ಹಾಗೂ ಬೋಧನೆಗಳನ್ನು ಶುಭಸಂದೇಶಗಳಲ್ಲಿ ದಾಖಲಿಸಲಾಗಿದೆ. ಮತ್ತಾಯ, ಮಾರ್ಕ, ಲೂಕ ಮತ್ತು ಯೋವಾನ್ನರು ಈ ಶುಭಸಂದೇಶಗಳನ್ನು ಬರೆದಿರುವರು. ಮತ್ತಾಯ (ಮ್ಯಾಥ್ಯು) ಮತ್ತು ಯೋವಾನ್ನ (ಜಾನ್) ಅವರು ಯೇಸುಸ್ವಾಮಿಯ ಹನ್ನೆರಡು ಜನರ ಶಿಷ್ಯಮಂಡಲಿಯ ಸದಸ್ಯರಾಗಿದ್ದವರು. ಮಾರ್ಕ ಮತ್ತು ಲೂಕರು ಯೇಸುವಿನ ನೇರ ಶಿಷ್ಯರಲ್ಲ. ಹನ್ನೆರಡು ಶಿಷ್ಯರಲ್ಲಿ ಪ್ರಧಾನನಾದ ಪೇತ್ರನ ಆಶಯದಂತೆ ಮಾರ್ಕನೂ ಹಾಗೂ ಯೇಸುಸ್ವಾಮಿಯು ಬದುಕಿದ್ದಾಗ ಅವರೊಂದಿಗಿದ್ದ, ಅವರನ್ನು ಕಂಡಿದ್ದ, ಅವರನ್ನು ನೋಡಿದ್ದ ಜನರ ಹೇಳಿಕೆಗಳನ್ನು ಆಧರಿಸಿ ಲೂಕನೂ ಶುಭಸಂದೇಶಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತದೆ. ಈ ನಾಲ್ವರು ಶುಭಸಂದೇಶಕಾರರು ಬರೆದ ಯೇಸುವಿನ ಚರಿತ್ರೆ ಮತ್ತು ಬೋಧನೆಗಳಲ್ಲಿ ಬಹಳಷ್ಟು ಹೋಲಿಕೆಗಳನ್ನು ಕಂಡರೂ ಕೆಲವಷ್ಟು ವ್ಯತ್ಯಾಸಗಳೂ ಇವೆ. ಎಲ್ಲದರಲ್ಲಿನ ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿದಾಗ ಯೇಸುವಿನ ಚರಿತ್ರೆ ಮತ್ತು ಬೋಧನೆಗಳ ಒಟ್ಟು ಚಿತ್ರಣ ಸುಲಭಗ್ರಾಹ್ಯ. ಪ್ರಸ್ತುತ ‘ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಏಸು ಸ್ವಾಮಿಯ ಕಥೆ’ ಗೆ ಈ ಬಯಲಾಟದ ಕರ್ತೃ ಸುಬ್ಬರಾಯಪ್ಪನವರು ಸಂಪೂರ್ಣವಾಗಿ ‘ಮತ್ತಾಯನ ಶುಭಸಂದೇಶ’ವನ್ನು ನೆಚ್ಚಿಕೊಂಡಿರುವರು.
ಈ ಹೊಸ ಒಡಂಬಡಿಕೆಯು ಯೆಹೂದ್ಯ ಮತ್ತು ಕ್ರೈಸ್ತ ಸಂಸ್ಕೃತಿಯಲ್ಲಿ ಹೊರಹೊಮ್ಮಿದ ಕಥನ. ‘ಮೊದಮೊದಲು ಪಿತಾಮಹರ, ನ್ಯಾಯಸ್ಥಾಪಕರ ಹಾಗೂ ಪ್ರವಾದಿಗಳ ಮುಖಾಂತರ ಮಾತನಾಡಿದ ದೇವರು ಕಟ್ಟಕಡೆಗೆ ತಮ್ಮ ಏಕೈಕ ಕುಮಾರ ಯೇಸುಕ್ರಿಸ್ತರ ಮುಖಾಂತರ ಮಾತನಾಡಿದರು ಎನ್ನುತ್ತದೆ ಹೊಸ ಒಡಂಬಡಿಕೆ. ದೇವರ ವಾಕ್ಯ (ವಾಕ್ಕು, ವಾಣಿ, ಮಾತು) ಆದ ಯೇಸು ನಿಶ್ಚಿತ ಕಾಲದಲ್ಲಿ ಮತ್ತು ಗೊತ್ತಾದ ಸ್ಥಳದಲ್ಲಿ ಮನುಷ್ಯರಾದರು. ನರಮಾನವರು ಕರ್ಮ ಸಂಸಾರವೆಂಬ ಪಾಪಸಂಕೋಲೆಯಿಂದ ಮುಕ್ತರಾಗಿ ದೇವರ ಮಕ್ಕಳು, ಅಮರ ಜೀವಿಗಳು ಆಗಲು ಸಾಧ್ಯ ಎಂಬುದನ್ನು ತಮ್ಮ ಜೀವನ, ಬೋಧನೆ ಹಾಗೂ ಸಾಧನೆಯಿಂದ ಸ್ಪಷ್ಟಪಡಿಸಿದರು. ಇಂಥ ಸೌಭಾಗ್ಯ ಒಂದು ಜನಾಂಗಕ್ಕೆ, ಜಾತಿಗೆ, ಕುಲಕ್ಕೆ, ಕಾಲಕ್ಕೆ, ಭಾಷೆಗೆ ಸೀಮಿತವಾಗಿಲ್ಲ; ಪ್ರತಿಯೊಬ್ಬ ಮಾನವನಿಗೂ ಈ ಸೌಭಾಗ್ಯ ತೆರೆದಿಟ್ಟ ಬುತ್ತಿ ಎಂಬ ಶುಭಸಂದೇಶವನ್ನು ಸಾರಲು ತಮ್ಮ ಪ್ರೇಷಿತರನ್ನೂ, ಶಿಷ್ಯರನ್ನೂ ಕೂಡಿಸಿ ಒಂದು ಸಭೆಯನ್ನು ಸ್ಥಾಪಿಸಿದರು’ (ಪವಿತ್ರ ಬೈಬಲ್ - ಸರಳ ಭಾಷಾಂತರ). [ಪ್ರೇಷಿತರು = ದೈವಪ್ರೇರಿತ ಧರ್ಮಪ್ರಚಾರಕರು (ಅಪೋಸ್ತಲರು). ಸಭೆ = ಚರ್ಚ್]

ಈ ನೆಲದ ಪ್ರಮುಖ ರಂಗ ಪ್ರಕಾರವಾದ ಬಯಲಾಟದ ಬಂಧಕ್ಕೆ ಅನುಗುಣವಾಗಿ, ಮತ್ತಾಯನ ಶುಭಸಂದೇಶವನ್ನು ಆಧರಿಸಿ ಈ ಬಯಲಾಟವನ್ನು ರಚಿಸಿರುವ ಸುಬ್ಬರಾಯಪ್ಪನವರು, ಒಂದು ಜನಾಂಗಕ್ಕೆ, ಜಾತಿಗೆ, ಕುಲಕ್ಕೆ, ಕಾಲಕ್ಕೆ, ಭಾಷೆಗೆ ಸೀಮಿತವಾಗದ ಯೇಸುಕ್ರಿಸ್ತನ ಕಥನ ಮತ್ತು ಬೋಧನೆಗಳನ್ನು ಈ ನೆಲದ ಜನಪದರ ಧರ್ಮದ ಸೊಗಡಿನಲ್ಲಿಯೇ ಬಯಲಾಟಕ್ಕೆ ಅಳವಡಿಸಿದ್ದಾರೆ. ಇದೊಂದು ಬಗೆಯಲ್ಲಿ ನೆರೆಮನೆಯ ಅಂದಚೆಂದದ ಹೂ ಬಿಡುವ ಸಸಿಯನ್ನು ತಂದು ನಮ್ಮ ಮನೆಯಲ್ಲಿ ನೆಟ್ಟು ಪೋಷಿಸಿದ ಪರಿಯನ್ನು ಹೋಲುತ್ತದೆ ಎಂದರೆ ಅತಿಶಯೋಕ್ತಿಯಾಗದು. ಈ ನೆಲದ ಅಂದರೆ ಭಾರತದ ಆಧ್ಯಾತ್ಮಿಕ ತಿಳುವಳಿಕೆಯಲ್ಲಿಯೇ ಯೇಸುವನ್ನು ನೋಡುವ, ಶಿವನ (ಕಣ್ಣು ಮೂರುಳ್ಳವನ) ಕರುಣೆ ಪಡೆದವ ಎಂದು ಕರೆದು, ಅವನ ಬೋಧನೆಗಳನ್ನು ಬಿಂಬಿಸುವ ಪ್ರಯತ್ನದಲ್ಲಿ ಅವರು ಯಶ ಕಂಡಿದ್ದಾರೆ. ಯೇಸು ಬೋಧಿಸಿದ್ದು ‘ಸ್ವಾನುಭವ ಜ್ಞಾನ’ವೆಂದು ಹೊಸ ನುಡಿಗಟ್ಟನ್ನು ರಚಿಸಿದ್ದಾರೆ. ಯೇಸುಸ್ವಾಮಿಯ ಚರಿತ್ರೆ ಮತ್ತು ಅವನ ಬೋಧನೆಗಳು ಭಾರತೀಕರಣಗೊಂಡಿವೆ. ಧರ್ಮಗ್ಲಾನಿ ಉಂಟಾದಾಗಲೆಲ್ಲಾ ಅವತರಿಸುವ ಭಾರತದ ದೇವರು, ಇಲ್ಲಿ ಯೇಸುಸ್ವಾಮಿಯಾಗಿ ಅವತರಿಸುತ್ತಾನೆ. ಪದ್ಮಾಸನದಲ್ಲಿ ಕುಳಿತು ಧ್ಯಾನಿಸಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಶತ್ರುಗಳನ್ನು ಗೆಲ್ಲುತ್ತಾನೆ. ಇವೆಲ್ಲಾ ವಿಷಯಾಂತರಗಳು ಕರ್ಮಠ ಕ್ರೈಸ್ತರಿಗೆ, ಅಜ್ಜ ನೆಟ್ಟ ಆಲದಮರಕ್ಕೆ ಜೋತುಬೀಳುವ ಧರ್ಮನಿಷ್ಠೆಯ ಸಾಂಪ್ರದಾಯಿಕ, ಸಂಪ್ರದಾಯ ಶರಣ ಕ್ರೈಸ್ತರಿಗೆ ಪಥ್ಯವಾಗಲಿಕ್ಕಿಲ್ಲ.
‘ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು, ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು...’ ಮುಂತಾದ ಮತ್ತಾಯನ ಶುಭಸಂದೇಶದಲ್ಲಿನ ಬೆಟ್ಟದ ಮೇಲಿನ ಅಷ್ಟಭಾಗ್ಯಗಳ ಬೋಧನೆಯನ್ನು ಪದ್ಯವೊಂದರಲ್ಲಿ ಕಟ್ಟಿಕೊಡಲಾಗಿದೆ.


ಬಿಲ್ಹರಿ ರಾಗ || ಏಕತಾಳ || ಕಮಾಚ್ ರಾಗ ||

ಆತ್ಮದಲಿ ಬಡವರು | ಅವರೇ ಧನ್ಯರು ಕೇಳು |
ಮಾತನಾಡಿದ ರೀತಿ | ನಡೆಯರು ಇನ್ನು || 1 ||

ಕ್ಷಮೆ ದಯೆ ಶಾಂತಿಯು | ನೇಮದಿಂದಿರಬೇಕು |
ಕಾಮಕ್ರೋಧವು ಮೋಹ | ಕಡಿಯಲಿಬೇಕು || 2 ||

ತನ್ನಂತೆ ಸಕಲವು | ಎನ್ನುತ ಮನದೊಳಗೆ |
ಸ್ವಾನುಭವದ ಜ್ಞಾನ | ಇನ್ನೂ ಇರಬೇಕು || 3 ||

ಯೇಸುಕ್ರಿಸ್ತನು ಬೋಧಿಸಿದ್ದು ‘ಸ್ವಾನುಭವ ಜ್ಞಾನ’ ಎಂದು ಈ ಮೂಡಲಪಾಯ ಬಯಲಾಟದಲ್ಲಿ ಬಹಳಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಈ ನೆಲದ ಪುರಾಣ ಕಥನಗಳ ಮಾದರಿಯಲ್ಲಿಯೇ, ಯೇಸು ಸ್ವಾಮಿ ಶಿಲುಬೆ ಮೇಲೆ ಮರಣಿಸಿದಾಗ, ‘ಆಕಾಶದಿಂದ ನಕ್ಷತ್ರಗಳು ಉದುರಿದವು. ಭೂಮಿಯು ಅದುರಿತು. ಬಂಡೆಗಳು ಸೀಳಿಹೋದವು. ಭೂಮಿಯನ್ನು ಹೊತ್ತ ದಿಗ್ಗಜಂಗಳು ಬೆದರಿದವು. ಆದಿಶೇಷನು ತಲೆದೂಗಿದನು’ ಎಂದು ಬಣ್ಣಿಸಲಾಗಿದೆ.

ದಕ್ಷಿಣದ ಬಯಲಾಟದ ಲೋಕಕ್ಕೆ ಮಹದುಪಕಾರ:

ಕರ್ನಾಟಕದ ಕರಾವಳಿಯಲ್ಲಿ ಹಲವಾರು ಮಂದಿ ಯೇಸುಕ್ರಿಸ್ತರ ಜೀವನ ಚರಿತ್ರೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಪ್ರಸಂಗಗಳನ್ನು ಆಡಿಸಿದ್ದಾರೆ. ಅವುಗಳಲ್ಲಿ ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅಗರಿ ಶ್ರೀನಿವಾಸ ಭಾಗವತರ ‘ಭಗವಾನ್ ಯೇಸುಕ್ರಿಸ್ತ ಮಹಾತ್ಮೆ’ ಮತ್ತು ಈಚೆಗೆ ಎರಡನೇ ಮುದ್ರಣ ಕಂಡ ಮುಳಿಯ ಕೇಶವಯ್ಯ ಅವರ ‘ಮಹಾಚೇತನ ಏಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ಪ್ರಸಂಗಗಳನ್ನು ಪ್ರಸ್ತಾಪಿಸದೇ ಇರಲಾಗದು. ಬೆಂಗಳೂರಿನ ಮೈಸೂರು ರಸ್ತೆಯ ಶಾಂತಿ ಸಾಧನ ಸಂಶೋಧನ ಕೇಂದ್ರದಲ್ಲಿ 2003ರ ಏಪ್ರಿಲ್ ತಿಂಗಳಲ್ಲಿ 'ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತರ ಕೊಡುಗೆ’ ಕುರಿತು ನಡೆದ ವಿಚಾರ ಸಂಕಿರಣದ ಸಂದರ್ಭದಲ್ಲಿ, ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಂಸ್ಕೃತಿಕ ಸಂಘವು ಶ್ರೀನಿವಾಸ ಸಾಸ್ತಾನ ಅವರು ಬರೆದ ಯೇಸುಕ್ರಿಸ್ತನ ಕುರಿತ ಪ್ರಸಂಗವೊಂದನ್ನು ಪ್ರದರ್ಶಿಸಿತ್ತು. ಅದೇ ಬಗೆಯಲ್ಲಿ 2005ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಸಂತ ಝೇವಿಯರ್ ಪ್ರಧಾನಾಲಯದಲ್ಲಿ, ಕ್ರಿಸ್ಮಸ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮಾರುತಿ ಯುವಕರ ಯಕ್ಷಗಾನ ಮೇಳವು ‘ಕ್ರಿಸ್ತ ಕಾರುಣ್ಯ’ ಎಂಬ ಹೆಸರಿನ ಯಕ್ಷಗಾನ ಪ್ರಸಂಗವನ್ನು ಆಡಿತ್ತು. ಇವೆಲ್ಲಾ ಕರಾವಳಿಯ ಯಕ್ಷಗಾನ ಪ್ರಸಂಗಗಳು. ಇನ್ನೂ ಈ ವಿಷಯದ ಪ್ರಸಂಗಗಳನ್ನಾಡುವ ಮೇಳಗಳು ಇದ್ದಿರಲೂಬಹುದು.

ಅದೇ ಹಾದಿಯಲ್ಲಿ ಬಯಲು ಸೀಮೆಯ ದಕ್ಷಿಣ ಕರ್ನಾಟಕದ ಮೂಡಲಪಾಯ ಬಯಲಾಟದಲ್ಲಿ ಸುಬ್ಬರಾಯಪ್ಪ ಅವರು ‘ಏಸು ಸ್ವಾಮಿ ಕಥೆ’ಯನ್ನು ರಚಿಸಿದ್ದಾರೆ. ಕ್ರೈಸ್ತರಲ್ಲದವರೇ ಯೇಸುಸ್ವಾಮಿಯ ಕುರಿತು ಯಕ್ಷಗಾನ, ಬಯಲಾಟಗಳನ್ನು ರಚಿಸಿದ್ದು ಈ ರಂಗಕಲೆಯ ಜಾತ್ಯತೀತತೆಯನ್ನು ಸ್ಪಷ್ಟಪಡಿಸುತ್ತದೆ.

ಆದರೆ, ಈ ವಿದ್ಯಮಾನಗಳಿಗೆ ವ್ಯತಿರಿಕ್ತವಾಗಿ ಉತ್ತರ ಕರ್ನಾಟಕದ ರಾಯಚೂರಿನ ಮುದಗಲ್ಲಿನ ಕ್ರೈಸ್ತರು, ಕಳೆದ ಶತಮಾನದ ಅರವತ್ತು ಮತ್ತು ಎಂಬತ್ತರ ದಶಕದಲ್ಲಿ ಶ್ರೀಗ್ರಂಥ ಬೈಬಲ್ನ ಹಳೆಯ ಒಡಂಬಡಿಕೆಯ ‘ದಾವಿದ-ಗೊಲಿಯಾತನ ಕಥೆ’ಯನ್ನು, ಸ್ಥಳೀಯ ಜಾಯಮಾನಕ್ಕೆ ಅಳವಡಿಸಿ ‘ದಾವಿದ ಕಿಮ್ಮೀರ ಯುದ್ಧ - ಬಯಲಾಟ’ ವನ್ನು ಪ್ರದರ್ಶಿಸಿದ್ದು ಒಂದು ಅಪರೂಪದ ಸಂಗತಿ ಎಂಬುದನ್ನೂ ಇಲ್ಲಿ ದಾಖಲಿಸಬೇಕಾಗಿದೆ.

ಹಿಂದೆ ಹಿರೇಬಳ್ಳಾಪುರ ಎಂದು ಗುರುತಿಸಿಕೊಳ್ಳುತ್ತಿದ್ದ ಊರು ಈಗ ಬಳಕೆಯಲ್ಲಿ ದೊಡ್ಡಬಳ್ಳಾಪುರವಾಗಿದೆ. ಈ ಹಿರೇಬಳ್ಳಾಪುರದ ಹಣಬೆ ಮನೆತನದ ಎಚ್. ಎಸ್. ಸುಬ್ಬರಾಯಪ್ಪ ಅವರಿಂದ ರಚಿತವಾದ ಎಂಟು ಮೂಡಲಪಾಯದ ಬಯಲಾಟಗಳಲ್ಲಿ ಒಂದಾದ ‘ಏಸು ಸ್ವಾಮಿಯ ಕಥೆ’ಯನ್ನು ಡಾ.ಚಕ್ಕೆರೆ ಶಿವಶಂಕರ ಅವರು ಸಂಪಾದಿಸಿ, ಅದನ್ನು ಸಾಗರ್ ಪ್ರಕಾಶನದ ಮೂಲಕ ಪ್ರಕಟಿಸಿ ಕನ್ನಡ ಬಯಲಾಟದ ಸಾರಸ್ವತ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ.

ಕಾಲನ ಕಾಲ್ತುಳಿತದಲ್ಲಿ ಅಲಕ್ಷ್ಯತನದಿಂದ ಕಾಣೆಯಾಗಬಹುದಾಗಿದ್ದ, ಇದುವರೆಗೂ ಅಜ್ಞಾತವಾಗಿ ಹಸ್ತಪ್ರತಿ ರೂಪದಲ್ಲಿದ್ದ ಈ ಕೃತಿಯು, ಡಾ. ಚಕ್ಕೆರೆ ಶಿವಶಂಕರ್ ಅವರ ಪರಿಶ್ರಮದಿಂದ ಬೆಳಕು ಕಂಡಿದೆ. ಕಳೆದು ಹೋಗಬಹುದಾಗಿದ್ದ ಅಮೌಲ್ಯ ಕೃತಿಯೊಂದು ಕನ್ನಡಿಗರಿಗೆ ದಕ್ಕುವಂತಾಗಿದೆ. ನೂರಿಪ್ಪತ್ತು ಪುಟಗಳ ಈ ಸಂಪಾದಿತ ಹೊತ್ತಿಗೆಯಲ್ಲಿ, ಮೂವತ್ತನಾಲ್ಕು ಪುಟಗಳ ‘ಪ್ರಸ್ತಾವನೆ’ ಮತ್ತು ‘ಕವಿ ಕಾವ್ಯ ವಿಚಾರ’ಗಳಲ್ಲಿ ಪಡುವಲಪಾಯ ಯಕ್ಷಗಾನ, ಮೂಡಲಪಾಯ - ಬಯಲಾಟ/ದೊಡ್ಡಾಟ ಜನಪದ ರಂಗಪ್ರಕಾರಗಳು ಸಾಗಿಬಂದ ಹಾದಿಯ ಹೆಜ್ಜೆಗುರುತುಗಳನ್ನು ಗುರುತಿಸಿದ್ದಾರೆ. ಆ ಕುರಿತು ಸುಧೀರ್ಘವಾಗಿ ಚರ್ಚಿಸಿ ಬಯಲಾಟದ ಆಸಕ್ತರಿಗೆ ಮತ್ತು ಅಧ್ಯಯನಕಾರರಿಗೆ ಅನುಕೂಲವಾಗುವಂತೆ, ಶಬ್ದ ಸಂಪತ್ತಿನ ಸಾಹಿತ್ಯ ಜ್ಞಾನದ ಜೊತೆಗೆ, ಸಂಗೀತದಲ್ಲೂ ಅಪಾರ ಪರಿಶ್ರಮವನ್ನು ಬೇಡುವ ಮೂಡಲಪಾಯದ ಲಕ್ಷಣಗಳನ್ನು, ಅವುಗಳ ರಚನೆಯ ಚೌಕಟ್ಟುಗಳನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಹಿಂದಿನ, ಇಂದಿನ ಮೂಡಲಪಾಯ ಬಯಲಾಟಗಳ ಸ್ಥಿತಿಗತಿಗಳ ಕುರಿತು ಆಳವಾಗಿ ವಿಮರ್ಶಿಸಿದ್ದಾರೆ, ಭವಿಷ್ಯದ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಸಕಲಿಪ್ಪತ್ತೆಂಟು ಜಾತಿಗಳಿಗೆ ಸೇರಿದ ಜಾತ್ಯತೀತತೆಯನ್ನು ರೂಢಿಸಿಕೊಂಡಿರುವ ಆಯಾ ಜನಸಮುದಾಯದ ಸಾಂಸ್ಕೃತಿಕ ರೂಪಗಳಾದ ಮೂಡಲಪಾಯ ಬಯಲಾಟಗಳ ‘ರಂಗಭೂಮಿಯ ಸಾಧ್ಯತೆಗಳನ್ನು ಅದರ ಎಲ್ಲಾ ಸಾಂಸ್ಕೃತಿಕ ಆಶಯಗಳೊಂದಿಗೆ ಚಿಂತಿಸಬೇಕಾಗಿದೆ. ಅದರ ಭವಿಷ್ಯ ಸಂಬಂಧಿ ತೊಡಕುಗಳನ್ನು ಸಾಂಸ್ಕೃತಿಕ ನೆಲೆಯಲ್ಲಿಯೇ ನಿವಾರಿಸಬೇಕಿದೆ’ ಎಂದೂ ಅವರು ಆಗ್ರಹಿಸಿರುವುದನ್ನು ಅನುಮೋದಿಸದೇ ಇರಲಾಗದು. ಈಗಾಗಲೇ ನೇಪಥ್ಯಕ್ಕೆ ಸರಿದಿರುವ ಬಯಲಾಟ ರಂಗಪ್ರಕಾರದ ಪುನರುಜ್ಜೀವನಕ್ಕೆ ಅಗತ್ಯವಾದ ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿವೆ.


*****



ಕನ್ನಡ ಕಥೋಲಿಕ ಸಾಹಿತ್ಯ - ಸಿ ಮರಿಜೋಸೆಫ್



ಹಸ್ತಪ್ರತಿಗಳಲ್ಲಿ ಅಡಗಿದ್ದ ಕನ್ನಡ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದ ರೆವರೆಂಡ್ ಪರ್ಡಿನೆಂಡ್ ಕಿಟೆಲರು ನಾಗವರ್ಮನ ಛಂದೋಂಬುಧಿಯನ್ನು ಮುದ್ರಣ ರೂಪಕ್ಕೆ ತರುವಾಗ ಅದರಲ್ಲಿ ದೀರ್ಘ ಉಪೋದ್ಘಾತ ಬರೆದು ಕನ್ನಡ ಸಾಹಿತ್ಯ ಚರಿತ್ರೆಯ ಮೊತ್ತ ಮೊದಲ ಹೊಳಹು ಹಾಕಿಕೊಟ್ಟರು. ಆ ನೀಳ ಬರಹದಲ್ಲಿ ಅವರು ಕನ್ನಡ ಸಾಹಿತ್ಯ ಪರಂಪರೆಯನ್ನು ಪಂಪ ರನ್ನರ ಜೈನಯುಗ, ಅಲ್ಲಮ ಚಾಮರಸರ ವೀರಶೈವ ಯುಗ, ಕುಮಾರವ್ಯಾಸಾದಿಗಳ ಬ್ರಾಹ್ಮಣಯುಗ ಮುಂತಾಗಿ ಗುರುತಿಸಿದರು. ಅದನ್ನು ನಮ್ಮ ಕನ್ನಡದ ಸಾಹಿತ್ಯವರೇಣ್ಯರು ಅನುಮೋದಿಸುತ್ತಾರೆ. ಆದರೆ ಹೊಸಗನ್ನಡ ಅರುಣೋದಯದ ಹರಿಕಾರರಾದ ಕ್ರೈಸ್ತ ಮಿಷನರಿಗಳ ಕಾಲವನ್ನು ಕ್ರೈಸ್ತ ಯುಗವೆಂದೇಕೆ ಕರೆಯಬಾರದೆಂದು ಅವರಾರೂ ಚಿಂತಿಸಿದಂತಿಲ್ಲ. ಇತ್ತೀಚೆಗೆ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಕ್ರೈಸ್ತಯುಗ ಪರಂಪರೆಯನ್ನು ಧ್ವನಿಸುವ ಮಾತುಗಳು ಕೇಳಿಬರುತ್ತಿದೆ.

ಮೂಲತಃ ಧರ್ಮಪ್ರಚಾರಕ್ಕಾಗಿ ಆಗಮಿಸಿದ ಮಿಷನರಿಗಳು ತಮ್ಮ ಕ್ಷೇತ್ರಕಾರ್ಯದ ಅಂಗವಾಗಿ ಕ್ರೈಸ್ತ ಧರ್ಮೋಪದೇಶದ ಪುಸ್ತಕಗಳು, ಕ್ರೈಸ್ತ ಧರ್ಮವನ್ನು ಸಮರ್ಥಿಸುವ ವಾದಗಳು, ಕ್ರೈಸ್ತ ಸಂತರ ಪರಿಚಯ ಮುಂತಾದವುಗಳನ್ನು ಯಥೇಚ್ಛವಾಗಿ ಪ್ರಕಟಿಸಿದ್ದಾರೆ. ಇಂಥಾ ಸಾಹಿತ್ಯದಲ್ಲಿ ಅಂದಿನ ಕಾಲದ ಭಾಷಾಪ್ರಯೋಗಗಳನ್ನು ಅರಿಯುವ ವಿಪುಲ ಅವಕಾಶಗಳಿವೆ. ದುರದೃಷ್ಟವಶಾತ್ ಅಂದಿನ ಕಾಲದ ಎಷ್ಟೋ ಕೃತಿಗಳು ಇಂದು ಲಭ್ಯವಿಲ್ಲವಾಗಿದೆ. ಕೆಲವು ಮಾತ್ರವೇ ಇದ್ದರೂ ಅವೆಲ್ಲ ವಿದೇಶದ ಸಂಗ್ರಹಾಲಯಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿವೆ.

ಬೆಂಗಳೂರು ಮಹಾಧರ್ಮಪ್ರಾಂತ್ಯ, ಮೈಸೂರು ಧರ್ಮಪ್ರಾಂತ್ಯ ಮೊದಲುಗೊಂಡು ಕರ್ನಾಟಕದ ಯಾವುದೇ ಕ್ರೈಸ್ತ ಸಂಸ್ಥೆಯು ಇಂತಹ ಹಳೆಯ ಸಾಹಿತ್ಯವನ್ನು ಸಂರಕ್ಷಿಸುವ ಗೋಜಿಗೆ ಹೋಗಿಲ್ಲ ಎಂಬುದು ನಮ್ಮ ದೌರ್ಭಾಗ್ಯ. ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಸಂಘ ಮತ್ತು ಕನ್ನಡ ಯಾಜಕರ ಬಳಗವು ಹೊರತಂದ ಒಂದೂವರೆ ಶತಮಾನದ ಹಿಂದಿನ ಲತೀನ್ ಕನ್ನಡ ನಿಘಂಟು ಹಾಗೂ ಕನ್ನಡ ಲತೀನ್ ಪದನೆರಕೆಗಳ ಮರುಮುದ್ರಣವನ್ನು ಹೊರತುಪಡಿಸಿದರೆ ಉಳಿದ ಕಥೋಲಿಕ ಧಾರ್ಮಿಕ ಸಾಹಿತ್ಯವು ಹಳೆಯದೆಂಬ ಕಾರಣಕ್ಕೆ ಅಥವಾ ಜಿರಲೆಗಳಿಗೆ ಆಹ್ವಾನವೆಂಬ ಕಾರಣಕ್ಕೆ ಬಾವಿಯ ತಳ ಸೇರಿವೆ ಅಥವಾ ಬೂದಿ ಬುಧವಾರದಂದು ಬೂದಿಯಾಗಿವೆ. ಎಲ್ಲೋ ಅಲ್ಲಿ ಇಲ್ಲಿ ಉಳಿದಿರುವ ಈ ಪ್ರಾಚೀನ ಸಾಹಿತ್ಯವನ್ನು ಯಥಾವತ್ತಾಗಿ ಸಂರಕ್ಷಿಸುವ, ಅಥವಾ ಡಿಜಿಟೈಸ್ ಮಾಡುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ಇಲ್ಲವಾದರೆ ಇಂಥದೊಂದು ಪುಸ್ತಕ ಇತ್ತು, ಆದರೆ ಈಗ ಲಭ್ಯವಿಲ್ಲ ಎಂದು ಹೇಳಿ ಸುಮ್ಮನಾಗಬೇಕಾಗುತ್ತದೆ.

ಕನ್ನಡನಾಡಿಗೆ ಮೊತ್ತಮೊದಲಿಗೆ ಆಗಮಿಸಿದ ಧರ್ಮಪ್ರಚಾರಕರು ಮುದ್ರಣಯಂತ್ರವು ಬರುವುದಕ್ಕೆ ಮೊದಲಿನಿಂದಲೂ ತಮ್ಮದೇ ಆದ ರೀತಿಯಲ್ಲಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ ಎಂಬುದು ಇತಿಹಾಸದಲ್ಲಿ ಕಂಡು ಬರುತ್ತದೆ. ಕನ್ನಡನಾಡನ್ನು ಕ್ರಿಸ್ತಶಕ ೧೬೪೮ರಲ್ಲಿ ಶ್ರೀರಂಗಪಟ್ಟಣದ ಮೂಲಕ ಪ್ರವೇಶಿಸಿದ ಜೆಸ್ವಿತ್ ಮಿಷನರಿಗಳಲ್ಲಿ ಮೊದಲಿಗರಾದ ಲಿಯೊನಾರ್ಡೊ ಚಿನ್ನಮಿಯವರು ಸಮಗ್ರ ಜ್ಞಾನೋಪದೇಶ, ಸಂತರ ಜೀವನಚರಿತ್ರೆ ಹಾಗೂ ಧರ್ಮಸಮರ್ಥನೆಯ ಒಂದು ಕೃತಿಯನ್ನು ಬರೆದಿದ್ದರೆಂದು ಇತಿಹಾಸ ಹೇಳುತ್ತದೆ. ಲಿಯೊನಾರ್ಡೊ ಚಿನ್ನಮಿಯವರ ನಂತರ ಕ್ರಿಸ್ತಶಕ ೧೬೪೮ ರಿಂದ ೧೭೭೨ ರವರೆಗಿನ ಅವಧಿಯಲ್ಲಿ ಸ್ವಾಮಿ ಪ್ಲಾಟೆಯವರು ಜಪಮಾಲೆಯ ರಹಸ್ಯ (೧೭೯೧) ಎಂಬ ಪುಸ್ತಕವನ್ನು ಬರೆದರೆಂಬುದೂ ತಿಳಿದು ಬರುತ್ತದೆ. ಅಂದಿನಿಂದ ಇಂದಿನವರೆಗೆ ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯ ಯಥೇಚ್ಛವಾಗಿ ಮೂಡಿ ಬಂದಿದೆ. ಅದರಲ್ಲಿ ಧಾರ್ಮಿಕ ಸಾಹಿತ್ಯದ್ದೇ ಸಿಂಹಪಾಲು ಎನ್ನಬಹುದಾದರೂ ಅವು ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಅಲಕ್ಷಿಸದಂಥ ಛಾಪು ಮೂಡಿಸಿವೆ ಎಂದು ಹೇಳಬಹುದು. ಪ್ರೊಟೆಸ್ಟೆಂಟ್ ಬಾಂಧವರಿಗೆ ಹೋಲಿಸಿದರೆ ಕನ್ನಡ ಕಥೋಲಿಕ ಸಾಹಿತ್ಯ ವಿರಳ ಎನ್ನಬಹುದಾದರೂ ನಗಣ್ಯವೇನಲ್ಲ.

ಇವೆಲ್ಲಕ್ಕಿಂತ ವಿಭಿನ್ನವಾಗಿ ವಿವಿಧ ಜೆಸ್ವಿತ್ ಪಾದ್ರಿಗಳು ತಮ್ಮ ಧರ್ಮಪ್ರಚಾರದ ದಿನಗಳ ದೈನಂದಿನ ಆಗುಹೋಗುಗಳನ್ನು ದಾಖಲಿಸಿ ವರ್ಷಕ್ಕೊಮ್ಮೆ ರೋಮ್ ನಗರದಲ್ಲಿದ್ದ ತಮ್ಮ ವರಿಷ್ಠರಿಗೆ ಕಳಿಸಿದ ವಾರ್ಷಿಕ ವರದಿಗಳಂತೂ ಇತಿಹಾಸದ ಅತ್ಯದ್ಭುತ ದಾಖಲೆಗಳಾಗಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ ಜೆಸ್ವಿತರು ನೇಪಥ್ಯಕ್ಕೆ ಸರಿದು ತಮ್ಮ ಕ್ಷೇತ್ರವನ್ನು ಫ್ರಾನ್ಸ್ ದೇಶದ ಎಂಇಪಿ ಸಂಸ್ಥೆ ಅಂದರೆ ಮಿಸಿಯೋಂ ಎತ್ರಾಂಜೇರ್ ದ ಪಾರೀ ಅಥವಾ ಫ್ರಾನ್ಸಿನ ಹೊರನಾಡ ಧರ್ಮಪ್ರಚಾರ ಸಂಸ್ಥೆಗೆ ಒಪ್ಪಿಸಿ ಹೋದರು. ಈ ಫ್ರೆಂಚ್ ಪಾದ್ರಿಗಳೂ ಸಹ ತಮ್ಮ ಧರ್ಮ ನಡವಳಿಕೆಯ ಕರ್ತವ್ಯದ ಅಂಗವಾಗಿ ಹಲವಾರು ಕೃತಿರಚನೆಗಳನ್ನು ನಡೆಸಿದರು. ಅವರಲ್ಲಿ ಮುಖ್ಯವಾಗಿ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೋ (೧೮೦೬-೧೮೭೩) ಅವರು ಲತೀನೋ ಕನಾರೆನ್ಸ್ ನಿಘಂಟು(೧೮೬೧), ದೈವಪರೀಕ್ಷೆ (ತಮಿಳು ಭಾಷಾಂತರ), ಸತ್ಯವೇದ ಪರೀಕ್ಷೆ(೧೮೫೨), ದಿವ್ಯಮಾತೃಕೆ (೧೮೬೨), ಸುಕೃತ ಮಂತ್ರಗಳು (೧೮೬೬), ದೊಡ್ಡ ಜಪದಪುಸ್ತಕವು (೧೮೬೩) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅದೇ ಸಂಸ್ಥೆಯ ಮತ್ತೊಬ್ಬ ಪಾದ್ರಿಯಾದ ಬುತೆಲೋ ಅವರು ಕಥೋಲಿಕವಲಯದಲ್ಲಿ ಮೊತ್ತಮೊದಲು ಮುದ್ರಣಯಂತ್ರವನ್ನು ಸ್ಥಾಪಿಸಿದ್ದಲ್ಲದೆ ತಾವೇ ಸ್ವತಃ ಅದನ್ನು ನಿರ್ವಹಿಸಿದ ಖ್ಯಾತಿ ಹೊಂದಿದ್ದಾರೆ. ಅವರು ರಚಿಸಿದ ಕೃತಿಗಳಲ್ಲಿ ಕನ್ನಡ ಲತೀನ ಪದಕೋಶ, ಇಂಗ್ಲೆಂಡ್ ಶೀಮೆಯ ಚರಿತ್ರೆ, ಭೂಗೋಳಶಾಸ್ತ್ರ, ಗಣಿತ ಪುಸ್ತಕ, ಆದಿತ್ಯವಾರದ ಅದ್ಭುತವು, ತಿರುಸಭೆಯ ಚರಿತ್ರೆಯು, ಜ್ಞಾನಬೋಧಕ, ಕನ್ನಡ ಜ್ಞಾನೋಪದೇಶವು, ಅರ್ಚಶಿಷ್ಟರ ಚರಿತ್ರೆಯು, ಪತಿತರ ಖಂಡನೆಯು, ತಿರುಸಭೆಯ ಲಕ್ಷಣಗಳು ಮುಂತಾದ ಹಲವು ಪುಸ್ತಕಗಳಿವೆ.

ಕ್ರಿಸ್ತಶಕ ೧೮೫೦ ರಿಂದ ೧೯೪೦ ರ ಅವಧಿಯಲ್ಲಿ ಎಂಇಪಿ ಪಾದ್ರಿಗಳಾದ ಫಾದರ್ ಜೆರ್ಬಿಯೆ, ಫಾದರ್ ದೆಸೆಂ, ಫಾದರ್ ಬಾರೆ ಮುಂತಾದವರು ಈ ಸಾಹಿತ್ಯ ಕೃಷಿಯಲ್ಲಿ ಕೈಯಾಡಿಸಿದರು. ಈ ಧಾರ್ಮಿಕ ಕೃತಿಗಳಲ್ಲಿ ಹೆಚ್ಚಿನವು ತಮಿಳು, ಇಂಗ್ಲಿಷ್, ಫ್ರೆಂಚ್ ಭಾಷೆಗಳಿಂದ ಅನುವಾದಗೊಂಡವು.

ಫ್ರೆಂಚ್ ಮಿಷನರಿ ಫಾದರ್ ಇ. ಮೊರೆಯ್ಯಿನವರ ಪ್ರೇರಣೆಯಿಂದ ಐ ಎಚ್ ಲೋಬೊ ಸ್ವಾಮಿಯವರು “ಜೇಸುನಾಥರ ತಿರು ಹೃದಯದ ದೂತನು” ಎಂಬ ೧೬ ಪುಟಗಳ ಮಾಸಪತ್ರಿಕೆಯನ್ನು ೧೯೨೪ರಲ್ಲಿ ಹೊರತಂದು ಸತತ ೪೭ ವರ್ಷಗಳ ಕಾಲ ನಡೆಸಿದರು. ಮೈಸೂರು ಧರ್ಮಪ್ರಾಂತ್ಯದ ವತಿಯಿಂದ ಈ ಪತ್ರಿಕೆಯು ಇಂದಿಗೂ ಪ್ರಕಟವಾಗುತ್ತಿದ್ದು ಶತಮಾನದತ್ತ ದಾಪುಗಾಲಿಡುತ್ತಿದೆ ಎಂಬುದೇ ಹೆಮ್ಮೆಯ ವಿಷಯ. ಈ ಪತ್ರಿಕೆಯನ್ನು ಮುನ್ನಡೆಸುವಲ್ಲಿ ವಂದನೀಯರಾದ ವಲೇರಿಯನ್ ಸೋಜ, ದಯಾನಂದ ಪ್ರಭು, ಜಿ ಜೋಸೆಫ್, ಎನ್ ಎಸ್ ಮರಿಜೋಸೆಫ್, ಕೆ ಎ ವಿಲಿಯಂ ಮುಂತಾದವರ ಕೊಡುಗೆ ಅನನ್ಯ.

ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಎ ಎಂ ಜೋಸೆಫ್ ಎಂಬ ಶ್ರೀಸಾಮಾನ್ಯರು ತಮ್ಮ ಅಣ್ಣ ಬೆರ್ನಾರ್ಡರೊಂದಿಗೆ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದರು. ಕ್ರಮೇಣ ಅವರು ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ವಸ್ತು ವೈವಿಧ್ಯತೆಯ ದೃಷ್ಟಿಯಿಂದ ನೋಡಿದರೆ ಜೋಸೆಫರ ಕೃತಿಗಳು ಓದುಗರ ಗಮನ ಸೆಳೆಯುತ್ತವೆ. ಅವರು ಬರೆದ 'ಫಬಿಯೋಲೆ' ಕೃತಿಯಂತೂ ಕನ್ನಡ ಕ್ರೈಸ್ತರ ಮನೆಗಳಲ್ಲಿ ಅಮರವಾಗಿದೆ. 

೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರ ಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು.೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ. 

ಎ ಎಂ ಜೋಸೆಫರ ಅಣ್ಣನವರಾದ ಎ ಎಂ ಬೆರ್ನಾರ್ಡ್ನವರು ಬರೆದ `ಆತ್ಮಪರಾಗ' ಎಂಬ ಧರ್ಮೋಪದೇಶದ ಪುಸ್ತಕವು ಇಂದಿಗೂ ಅತ್ಯಂತ ಜನಪ್ರಿಯವಾದ ಕಿರುಪುಸ್ತಿಕೆಯಾಗಿದೆ. ಈ ಇಬ್ಬರೂ ಸೋದರರು ಜನತೆಗೆ ಧರ್ಮಜಾಗೃತಿಯೊಂದಿಗೆ ಲೋಕಜ್ಞಾನವನ್ನೂ ನೀಡಿದ ಮಹನೀಯರಾಗಿದ್ದಾರೆ. 

ಕ್ರಿಸ್ತಶಕ ೧೯೬೦ ರಿಂದೀಚೆಗೆ ಫಾದರ್ ಎನ್ ಎಸ್ ಮರಿಜೋಸೆಫ್, ಫಾದರ್ ಅಂತಪ್ಪ, ಫಾದರ್ ಜಾರ್ಜ್ ಡಿಸೋಜ, ಸ್ವಾಮಿ ಅಮಲಾನಂದ, ಫಾದರ್ ದಯಾನಂದ ಪ್ರಭು, ಸಂತ ರಾಯಪ್ಪರ ಗುರುಮಠದ ಕನ್ನಡ ಸಾಹಿತ್ಯ ಸಂಘ, ಕಥೋಲಿಕ ಕ್ರೈಸ್ತರ ಕನ್ನಡ ಸಾಹಿತ್ಯ ಸಂಘ, ಫಾದರ್ ಫೆಲಿಕ್ಸ್ ನರೋನ, ಫಾದರ್ ಎಲ್ ಅರುಳಪ್ಪ, ಫಾದರ್ ಜೆ ಬಿ ಝೇವಿಯರ್ ಮುಂತಾದವರಿಂದ ಒಟ್ಟಾರೆಯಾಗಿ ಬೈಬಲ್ ಭಾಷಾಂತರ, ಸಂಗೀತ ಪ್ರಸ್ತಾರದೊಂದಿಗೆ ಕ್ರೈಸ್ತಗೀತೆಗಳು, ಧರ್ಮೋಪದೇಶ, ಪೂಜಾಪುಸ್ತಕ, ವಿವಿಧ ಧಾರ್ಮಿಕ ಕ್ರಿಯೆಗಳ ವ್ಯಾಖ್ಯಾನ, ಧರ್ಮಾಧ್ಯಯನ ಪುಸ್ತಕಗಳು, ಧ್ವನಿಸುರುಳಿಗಳು, ನಾಟಕಗಳು, ರೂಪಕಗಳು, ಮಾಧ್ಯಮ ನಿರೂಪಣೆಗಳು ಚಲಾವಣೆಗೆ ಬಂದವು. 

ಫಾದರ್ ದಯಾನಂದ ಪ್ರಭು ಮತ್ತು ಫಾದರ್ ದೇವದತ್ತ ಕಾಮತರು ಕಾವ್ಯಗಳನ್ನು ರಚಿಸಿರುವುದು ಒಂದು ಪ್ರಮುಖ ಉಲ್ಲೇಖವಾಗುತ್ತದೆ. (ನಮ್ಮ ಹಿಂದೂ ಸೋದರರಾದ ಗೋವಿಂದ ಪೈ, ಜಿ ಪಿ ರಾಜರತ್ನಂ, ಬಿಎಸ್ ತಲ್ವಾಡಿ, ಲತಾ ರಾಜಶೇಖರ್, ಆಗುಂಬೆ ಎಸ್ ನಟರಾಜ್, ಬೆಗೋ ರಮೇಶ ಮುಂತಾದವರೂ ಕ್ರಿಸ್ತನ ಕುರಿತು ಬರೆದಿರುವುದನ್ನು ಅಲ್ಲಗಳೆಯಲಾಗದು) 

ಕ್ರೈಸ್ತ ಕಥೋಲಿಕ ಸಾಹಿತಿಗಳಲ್ಲಿ ಶಿಖರಪ್ರಾಯರಾಗಿರುವ ನಾರ್ಬರ್ಟ್ ಡಿಸೋಜರು ತಿರುಗೋಡಿನ ರೈತಮಕ್ಕಳು, ಮುಳುಗಡೆ, ದ್ವೀಪ, ಕುಂಜಾಲು ಕಣಿವೆಯ ಕೆಂಪು ಹೂವು, ಕಾಡಿನ ಬೆಂಕಿ, ಇಗರ್ಜಿ ಸುತ್ತಲಿನ ಮನೆಗಳು ಮುಂತಾದ ಮೂವತ್ತು ಕಾದಂಬರಿಗಳನ್ನೂ ನಿನ್ನುದ್ಧಾರವೆಷ್ಟಾಯ್ತು, ಸ್ವರ್ಗದ ಬಾಗಿಲಲ್ಲಿ ನರಕ ಎಂಬಿತ್ಯಾದಿ ಆರು ಕಥಾಸಂಕಲನಗಳನ್ನೂ ಹಲವಾರು ನಾಟಕ, ಶಿಶುಸಾಹಿತ್ಯ, ಬಾನುಲಿನಾಟಕಗಳನ್ನೂ ರಚಿಸಿ ಪ್ರಖ್ಯಾತರಾಗಿದ್ದಾರೆ. ಕರ್ನಾಟಕದ ಕ್ರೈಸ್ತ ಪ್ರಪಂಚವನ್ನು ಸಮರ್ಥವಾಗಿ ಬಿಂಬಿಸಿದ ಯಶಸ್ವೀ ಲೇಖಕರಿವರು. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಾಡಿಯವರಿಗೆ ಶೀಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್ ಪ್ರದಾನಮಾಡಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಯೂ ಗೌರವಿಸಲಾಗಿದೆ. 

ಕಥೋಲಿಕ ಕ್ರೈಸ್ತ ಸಾಹಿತ್ಯವಲಯದಲ್ಲಿ ಕೇಳಿಬರುವ ಮತ್ತೊಂದು ಪ್ರಮುಖ ಹೆಸರು ಫ್ರಾನ್ಸಿಸ್ ಎಂ ನಂದಗಾಂವ್ ಅವರದು. ಪತ್ರಿಕಾರಂಗದಲ್ಲಿ ಬೆಳೆದ ಇವರು ಹುಬ್ಬಳ್ಳಿ ಸೊಗಡಿನ ಭಾಷೆಯನ್ನು ಬಳಸುತ್ತಾ ಹಲವು ಕತೆಗಳನ್ನು ರಚಿಸಿದ್ದಾರೆ. ಕತೆ, ಸಂಶೋಧನೆ, ವಿಚಾರ, ನಾಟಕ ಇತ್ಯಾದಿಯಾಗಿ ಇವರ ಸುಮಾರು ಮೂವತ್ತು ಕೃತಿಗಳು ಬೆಳಕು ಕಂಡಿವೆ. 

ಧಾರ್ಮಿಕ ಸಾಹಿತ್ಯವನ್ನು ಹೊರತುಪಡಿಸಿದರೆ ಅನುವಾದ, ಅಧ್ಯಯನ, ಚಿಂತನೆ ಮತ್ತು ಇತರೆ ಪ್ರಕಾರಗಳಲ್ಲಿ ಮೈಸೂರಿನ ಡಾ. ಎಡ್ವರ್ಡ್ ನರೋನ, ಫಾದರ್ ದಯಾನಂದ ಪ್ರಭು, ಫಾದರ್ ದೇವಿಕಾಂತ್ ಮರಿಯ ವಿವೇಕ್, ಧಾರವಾಡದ ಡಾ. ವಿಲ್ಯಂ ಮಾಡ್ತ, ಚಿತ್ರದುರ್ಗದ ಫ್ಲೋಮಿನ್ ದಾಸ್, ಬಳ್ಳಾರಿಯ ಫಾದರ್ ಪಿ ವಿಜಯಕುಮಾರ್, ಚಾಮರಾಜನಗರದ ಐ ಸೇಸುನಾಥನ್, ಮಂಗಳೂರಿನ ಫಾದರ್ ಪ್ರಶಾಂತ್ ವಲೇರಿಯನ್ ಮಾಡ್ತ, ಬೆಂಗಳೂರಿನ ಸಿ ಮರಿಜೋಸೆಫ್, ಜಾಕೋಬ್ ಲೋಬೋ, ಕೆ ಜೆ ಜಾರ್ಜ್, ಮೇರಿ ಫಾತಿಮಾ, ವಲ್ಲಿ ವಗ್ಗ, ಸಿಸ್ಟರ್ ಪ್ರೇಮಾ, ಪ್ರಶಾಂತ್ ಇಗ್ನೇಷಿಯಸ್, ಅಜಯ್ ಫ್ರಾನ್ಸಿಸ್, ಪಿಸಿ ಅಂತೋಣಿಸ್ವಾಮಿ, ರೀನಿ ರಿಟಾ ಮುಂತಾದವರು ಅಲ್ಲಲ್ಲಿ ಮಿಂಚುತ್ತಾರೆ. 

ಸೃಜನಶೀಲ ಕೃತಿಕಾರರಲ್ಲಿ ಬಿ ಪ್ರಮೋದ, ಯಜಮಾನ್ ಫ್ರಾನ್ಸಿಸ್, ಸಂತೋಷ್ ಇಗ್ನೇಷಿಯಸ್, ಜಾನ್ ಸುಂಟಿಕೊಪ್ಪ, ಎಂ ಡೇವಿಡ್ ಕುಮಾರ್ ಮುಂತಾದವರು ಮುಂಚೂಣಿಯಲ್ಲಿದ್ದು ಕ್ರೈಸ್ತ ಕಥೋಲಿಕ ಕನ್ನಡ ಸಾಹಿತ್ಯ ರಂಗದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯದ ಓದುಗರ ಸಂಖ್ಯೆ ಕ್ಷಯಿಸುತ್ತಿದ್ದು ಅದೇ ಪ್ರಮಾಣದಲ್ಲಿ ಸಾಹಿತ್ಯಕೃಷಿ ನಡೆಸುವವರ ಸಂಖ್ಯೆಯೂ ಕುಗ್ಗುತ್ತಿದೆ. ಸಾಹಿತ್ಯ ಗಂಧ ಗಾಳಿಯಿಲ್ಲದವರು ತಮಗೆ ತೋಚಿದ್ದನ್ನೇ ಗೀಚಿ ಅದನ್ನೇ ಕಾವ್ಯ, ಕವನ ಇತ್ಯಾದಿಯಾಗಿ ಬಿಂಬಿಸುತ್ತಿರುವುದನ್ನೂ ಕಾಣುತ್ತಿದ್ದೇವೆ. 

ಕೊನೆಯ ಪಕ್ಷ ನಮ್ಮ ಹಿಂದಿನವರು ಬರೆದಿರುವ ಸಾಹಿತ್ಯವನ್ನಾದರೂ ನಾವು ಓದಿ, ನಮ್ಮ ಮುಂದಿನ ಪೀಳಿಗೆಗೂ ದಾಟಿಸುವ ಅನಿವಾರ್ಯದ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. 

***** 




ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...