Friday, 12 July 2019

ನಿನ್ನೊಳಗಿನ ಬೆಳಕು - ಫಾ. ಪಿ ವಿಜಯ ಕುಮಾರ್, ಬಳ್ಳಾರಿ


ದೇವರ ಸೃಷ್ಟಿ ಅನಂತ ಹಾಗೂ ಅಮರ. ಈ ಸೃಷ್ಟಿಯಲ್ಲಿ ಬೆಳಕು ಅತ್ಯುನ್ನತ ಸ್ಥಾನವನ್ನು ಹೊಂದಿದೆ. ಈ ಸೊಗಸಾದ, ಉಜ್ವಲವಾದ ಭೌತಿಕಬೆಳಕು ಸರ್ವರಿಗೂ ದೇವರು ನೀಡಿರುವ ಉಚಿತ ವರದಾನ. ಇದನ್ನು ಯಾರೂ ಯಾರಿಂದಲೂ ಕಿತ್ತುಕೊಳ್ಳಲು ಸಾದ್ಯವಿಲ್ಲ. ಇದು ಎಲ್ಲರಿಗೂ ಉಚಿತ. ಇದಕ್ಕೆ ಮೇಲು ಕೀಳೆಂಬ ಭೇದವಿಲ್ಲ, ಬಡವ ಬಲ್ಲಿದನೆಂಬ ಹಂಗಿಲ್ಲ. ಇದು ಯಾರ ಸೊತ್ತೂ ಅಲ್ಲ. ಈ ಭೌತಿಕ ಬೆಳಕನ್ನು ಕತ್ತಲೆಯು ತಾತ್ಕಾಲಿಕವಾಗಿ ಆವರಿಸಬಹುದು. ಆದರೆ ಆಧ್ಯಾತ್ಮಿಕ ದಿವ್ಯ ಬೆಳಕನ್ನು ಮರೆಮಾಡಲು ಯಾವ ಕತ್ತಲೆಗೂ ಸಾಧ್ಯವಿಲ್ಲ. ಇದು ಎಲ್ಲಾ ಬಾಹ್ಯ ಬೆಳಕನ್ನು ಮೀರಿ ನಿಲ್ಲುವ ದೈವೀಕ ಬೆಳಕು. ಈ ದೈವೀಕ ಬೆಳಕಿನ ಉಗಮ ಕಥೋಲಿಕ ಕ್ರೈಸ್ತರಿಗೆ ಸ್ನಾನದೀಕ್ಷೆಯಲ್ಲಿ ಪ್ರಾರಂಭವಾಗುತ್ತದೆ.
ಸ್ನಾನದೀಕ್ಷೆ ಕಥೋಲಿಕ ಕ್ರೈಸ್ತರ ಏಳು ಪವಿತ್ರ ಸಂಸ್ಕಾರಗಳಲ್ಲಿ ಪ್ರಥಮವಾದುದು. ಈ ಪವಿತ್ರ ಸಂಸ್ಕಾರವನ್ನು ಸ್ವೀಕರಿಸುವ ಮೂಲಕ ಮಾನವರು ತ್ರೈಏಕ ದೇವರ ಆಲಯವಾಗಿ ಮಾರ್ಪಡುತ್ತಾರೆ. ತ್ರೈಏಕ ದೇವರ ಪ್ರಸನ್ನತೆಯ ಬೆಳಕು ಅವರ ಅಂತರಂಗವನ್ನು ಆವರಿಸಿ, ಪ್ರಜ್ವಲಿಸಿ, ಕತ್ತಲೆ (ಪಾಪ) ಯನ್ನು ನಿರ್ನಾಮ ಮಾಡಿ, ಒಳ್ಳೆಯತನ ಪ್ರವರ್ಧಿಸಲು ಪ್ರಾರಂಭಿಸುತ್ತದೆ. ಇದರ ಸಂಕೇತವಾಗಿ ಸ್ನಾನದೀಕ್ಷೆ ನೀಡುವಾಗ ಗುರುಗಳು ಮೇಣದ ಬತ್ತಿಯನ್ನು ಹಚ್ಚಿ ತಂದೆ-ತಾಯಿ ಮತ್ತು ಜ್ಞಾನ ತಂದೆ-ತಾಯಿಯರಿಗೆ ನೀಡುತ್ತಾ ಈ ಬೆಳಕನ್ನು ಸ್ವಿಕರಿಸಿ,ಇದನ್ನು ಆರದಂತೆ ಕಾಪಾಡಿಕೊಳ್ಳಿ ಎನ್ನುತ್ತ ಬೆಳಗುವ ಮೇಣದ ಬತ್ತಿಯನ್ನು ನೀಡುತ್ತಾರೆ.
ಆ ಕ್ಷಣದಿಂದ ಸ್ನಾನದೀಕ್ಷೆ ಪಡೆದ ವ್ಯಕ್ತಿ ಮತ್ತು ತ್ರೈಏಕ ದೇವರ ನಡುವೆ ನವನವೀನವಾದ ಅನಂತ ಸತ್ಸಂಬಂಧ ಪ್ರಾರಂಭವಾಗುತ್ತದೆ. ಇದೊಂದು ಕೊನೆಯಿಲ್ಲದ, ಬಿಡಿಸಲಾರದ ಅನಂತ ಪ್ರೀತಿಯ ನಂಟು. ಈ ಮೂಲಕ ದೈವೀಕ ಬೆಳಕು ಮಾನವನಲ್ಲಿ ಶಾಶ್ವತವಾಗಿ ಮನೆಮಾಡುತ್ತದೆ. ಇದು ಸಾಧಾರಣ ಬೆಳಕಲ್ಲ. ಬೆಳಕಿನ ಮೂಲದ ತ್ರೈಏಕ ದೇವನ ಪ್ರಸನ್ನತೆಯಾಗಿದೆ. ಇದು ಮಾನವನಿಗೆ ಅಜ್ಞಾನವೆಂಬ ಕತ್ತಲೆಯನ್ನು ಕಿತ್ತೊಗೆದು, ಸುಜ್ಞಾನದ ಬೆಳಕಿನ ಕದವನ್ನು ತೆರೆಯುತ್ತದೆ. ಈ ಕಾರಣದಿಂದಲೇ ಕೀರ್ತನೆಕಾರ `ನಿನ್ನಲ್ಲಿದೆ ಜೀವದ ಬುಗ್ಗೆ ನಿನ್ನ ಬೆಳಕಿಂದ ಬೆಳಕೆಮಗೆ' (ಕೀರ್ತನೆ 36:9) ಎನ್ನತ್ತಾನೆ.
ಈ ದೈವೀಕ ಬೆಳಕಿನ ಪ್ರಖರತೆಯು ಪ್ರಜ್ವಲಿಸಿ ಪ್ರವರ್ಧಿಸಲು ಮಾನವ ಸ್ಪಂದಿಸಿದರೆ ಅವನ ವ್ಯಕ್ತಿತ್ವ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ಆದರೆ ಇದು ನಿರಂತರವಾಗಿ ಸಾಗಬೇಕಾದರೆ ಮಾನವ ಕುಲದ ರಕ್ಷಣೆಗಾಗಿ ಮಾನವನಾಗಿ ಜನಿಸಿ ಮಾನವ ಜನಾಂಗದ ಜ್ಯೋತಿಯಾಗಿ ಜೀವಿಸಿದ (ಯೊವಾನ್ನ 1:1), ಈ ಜಗದ ಜ್ಯೋತಿಯಾದ (ಯೊವಾನ್ನ 1:9) ಪ್ರಭು ಕ್ರಿಸ್ತನ ಪಥ ತುಳಿಯಬೇಕು. ಯಾಕೆಂದರೆ ಅವರ ಮಾತುಗಳಲ್ಲೇ ಹೇಳುವುದಾದರೆ ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ (ಯೊವಾನ್ನ 8:12).
ಕತ್ತಲೆ (ಪಾಪ) ಮಾನವರನ್ನು ದಿಕ್ಕು ತಪ್ಪಿಸುತ್ತದೆ. ಆದರೆ ಕ್ರಿಸ್ತನ ಬೆಳಕು ಮಾನವರನ್ನು ಸತ್ಯಪಥದಲ್ಲಿ ನಡೆಸುತ್ತದೆ. ಕ್ರಿಸ್ತನ ಬೆಳಕನ್ನು ಯಾರೂ ನಿಗ್ರಹಿಸಲಾರರು ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ (ಯೊವಾನ್ನ 1:5) ಕ್ರಿಸ್ತನೇ ಮಾನವ ಜನಾಂಗದ ಶಾಶ್ವತ ಬೆಳಕು. "ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲ್ಲಿ, ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲ್ಲಿ ಬಾಳುತ್ತಿದ್ದ ನಾಡಿಗರಿಗೆ" ಎನ್ನತ್ತಾನೆ ಪ್ರವಾದಿ ಯೆಶಾಯ (9:2). 
ಈ ಜ್ಯೋತಿಯನ್ನು ಮರೆತು ತಾವೇ ಶ್ರೇಷ್ಠರೆನ್ನುವವರಿಗೆ ಕೆಟ್ಟದ್ದನ್ನು ಒಳ್ಳೆಯದೆಂದೂ, ಒಳ್ಳೆಯದನ್ನು ಕೆಟ್ಟದ್ದೆಂದೂ ಬೋಧನೆ ಮಾಡುವವರಿಗೆ ಧಿಕ್ಕಾರ! ಕತ್ತಲನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಂದೂ ಸಾಧಿಸುವಂಥವರಿಗೆ ಧಿಕ್ಕಾರ! ಕಹಿಯನ್ನು ಸಿಹಿಯೆಂದೂ, ಸಿಹಿಯನ್ನು ಕಹಿಯೆಂದೂ ವಾದಿಸುವವರಿಗೆ ಧಿಕ್ಕಾರ! ತಮ್ಮ ದೃಷ್ಟಿಯಲ್ಲಿ ತಾವೇ ಜ್ಞಾನಿಗಳೆಂದು, ತಮ್ಮ ಗಣನೆಯಲ್ಲಿ ತಾವೇ ವಿವೇಕಿಗಳೆಂದು ಭಾವಿಸುವವರಿಗೆ ಧಿಕ್ಕಾರ! (5:20) ಎನ್ನುತ್ತಾ ಬನ್ನಿ ಹೋಗೋಣ ಸರ್ವೇಶ್ವರ ಸ್ವಾಮಿಯ ಪರ್ವತಕ್ಕೆ ಇಸ್ರಯೇಲ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು (2:3) ಎನ್ನುತ್ತಾ ಇಸ್ರಯೇಲ್ ಜನತೆಯನ್ನು ನೈಜ ಬೆಳಕಿನೆಡೆಗೆ ಪ್ರವಾದಿ ಯೆಶಾಯ ಕರೆಯುತ್ತಾನೆ.
ಪ್ರಭು ಕ್ರಿಸ್ತನೇ ಮಾನವಕುಲದ ನಿಜವಾದ ಬೆಳಕು. ಮಾನವರು ಕ್ರಿಸ್ತಂಬರರಾದಾಗ ಅವರೂ ಸಹ ಕ್ರಿಸ್ತನ ಬೆಳಕಿನಿಂದ ವಿಶ್ವದ ಬೆಳಕಾಗಿ ಮಾರ್ಪಡುತ್ತಾರೆ. ಇದನ್ನೇ ಕ್ರಿಸ್ತ “ಜಗತ್ತಿಗೆ ನೀವೇ ಜ್ಯೋತಿ” (ಮತ್ತಾ5:13), "ನಿಮ್ಮೊಡನೆ ಇನ್ನೂ ಜ್ಯೋತಿ ಇರುವುದರಿಂದ ಆ ಜ್ಯೋತಿಯಲ್ಲಿ ನಂಬಿಕೆಯಿಡಿ. ಆಗ ನೀವು ಜ್ಯೋತಿಯ ಮಕ್ಕಳಾಗುವಿರಿ" (ಯೊವಾನ್ನ 12:36) ಎನ್ನತ್ತಾರೆ. ಬೆಳಕಿನ ಉಗಮವಾದ ಪ್ರಭುವಿನ ಈ ಕರೆಯನ್ನು ಸ್ವೀಕರಿಸದ ಯೆಹೂದ್ಯ ಮುಖಂಡರು ಹಾಗೂ ಕ್ರಿಸ್ತನ ವಿರೋಧಿಗಳು ಕತ್ತಲೆಗೆ ಜಾರಿದರು. ಕರೆಯನ್ನು ಆಲಿಸಿ ಬೆಳಕಿನೆಡೆಗೆ ಹೆಜ್ಜೆ ಹಾಕಿದ ಸರ್ವರೂ ಬೆಳಕಿನ ಮಕ್ಕಳಾಗಿ ಇಂದಿಗೂ ಜನಮನಗಳಲ್ಲಿ ರಾರಾಜಿಸುತ್ತಿದ್ದಾರೆ. ಹಾಗಾದರೆ ಬೆಳಕಿನ ಮಕ್ಕಳಾಗುವುದು ಹೇಗೆ?

ಬೆಳಕಿನ ಮಕ್ಕಳಾಗಲು ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ, ನಾನಾರಿಗೂ ಅಳುಕೆನು ನನ್ನ ಬಾಳಿಗಾಧಾರ ಪ್ರಭುವೇ, ನಾನಾರಿಗೂ ಅಂಜೆನು(ಕೀರ್ತನೆ27:1) ಎಂದು ಕ್ರಿಸ್ತನನ್ನು ಧರಿಸಿಕೊಂಡು ಅವರ ಸೇವೆಯ ಹೆಜ್ಜೆಗಳಲ್ಲಿ ಹೆಜ್ಜೆ ಹಾಕುತ್ತ, ಈ ಲೋಕದ ಆಶಾಪಾಶಗಳಿಂದ ದೂರವಿದ್ದು, ಅರಿಷಡ್ವರ್ಗಗಳನ್ನು ದಮನ ಮಾಡಬೇಕು. ಆಗ ನಮ್ಮೊಳಗಿನ ಕತ್ತಲೆ ನಿಧಾನವಾಗಿ ಕರಗಿ ಕ್ರಿಸ್ತನ ಬೆಳಕು ಬೆಳಗಲು ಪ್ರಾರಂಭಿಸಿ, ಮಾನವ ಪ್ರೇಮ ಅಂಕುರಿಸುತ್ತದೆ. ಅಲ್ಲಿ ದ್ವೇಷಕ್ಕೆ ಎಡೆ ಇಲ್ಲ, ಮೇಲು-ಕೀಳುಗಳಿಲ್ಲ, ಬಡವ-ಬಲ್ಲಿದನೆಂಬ ತಾರತಮ್ಯವಿರುವುದಿಲ್ಲ. ಸ್ನೇಹ-ಪ್ರೀತಿ ಮನೆಮಾಡುತ್ತದೆ. ಕ್ರಿಸ್ತನ ಬೆಳಕು (ಪ್ರಸನ್ನತೆ) ಎಲ್ಲಾ ಏರು-ಪೇರುಗಳನ್ನು ಹೋಗಲಾಡಿಸಿ ಸಾಮರಸ್ಯವನ್ನು ತರುತ್ತದೆ. 
ಇಂಥಹ ಅತ್ಯದ್ಭುತವಾದ ನಮ್ಮೊಳಗಿನ ಆ ದಿವ್ಯ ಬೆಳಕು ನಂದಿಹೋಗದೆ ನಿರಂತರ ಉರಿಯುತ್ತಿದ್ದರೆ ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; "ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು, ಯುಯುಗಾಂತರಕ್ಕೂ ಅವರು ರಾಜ್ಯವಾಳುವರು" (ಪ್ರಕಟನೆ 22:5) ಎನ್ನುತ್ತಾರೆ ನಮ್ಮ ಜೀವನದ ನೈಜ ಬೆಳಕಾಗಿರುವ ಪ್ರಭು ಕ್ರಿಸ್ತ. ಈ ನಮ್ಮ ಲೋಕದ ಬದುಕು ಸಾಕ್ಷಾತ್ಕಾರವಾಗಬೇಕಾದರೆ ನಮ್ಮೊಳಗಿನ ಕ್ರಿಸ್ತನ ಬೆಳಕು ಬೆಳಗುತ್ತಿರಬೇಕು! 

*****



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...