ಪ್ರತಿ ವರ್ಷ ಜುಲೈ 16ರಂದು ನಾವು ಕಾರ್ಮಲ್‍ಮಾತೆಯ ಹಬ್ಬವನ್ನು ಆಚರಿಸುತ್ತೇವೆ. ಆದರೆ ಹಲವಾರು ಬಾರಿ ಕಾರ್ಮೆಲ್ ಮಾತೆ ಎಂಬ ಹೆಸರನ್ನು ನಾನು ಕೇಳಿದಾಗ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತಿತ್ತು. ಅದೇನೆಂದರೆ, 'ಕಾರ್ಮೆಲ್' ಎಂಬುವುದು ಒಂದು ಬೆಟ್ಟದ ಹೆಸರು. ಈ ಬೆಟ್ಟದ ಕುರಿತು ನಾವು ಹಳೆಯ ಒಂಡಬಡಿಕೆಯಲ್ಲಿ ಆಲಿಸುತ್ತೇವೆ. ಹೀಗಿರುವಲ್ಲಿ ಮಾತೆ ಮರಿಯಳಿಗೂ ಮತ್ತು ಕಾರ್ಮೆಲ್ ಬೆಟ್ಟಕ್ಕೂ ಇರುವ ಸಂಬಂಧವೇನು? ಎಂಬ ಪ್ರಶ್ನೆ ನನ್ನನು ಕಾಡುತ್ತಿತ್ತು. ಖಂಡಿತವಾಗಲೂ ಇಂತಹ ಪ್ರಶ್ನೆ ನಿಮಗೂ ಸಹ ಮೂಡಿರಬಹುದು. ಇದರ ಹಿನ್ನೆಲೆಯನ್ನು ತಿಳಿಯಲು ನಾನು ಚರಿತ್ರೆಯ ಪುಟಗಳನ್ನು ತಿರುವಿದಾಗ ಇದರ ಮಹತ್ವ ನನಗೆ ತಿಳಿಯಿತು.
ಆದಿಕಾಲದಿಂದಲೂ ಪುಣ್ಯಗಳಿಸುವ ಉದ್ದೇಶದಿಂದ ಕೆಲವು ಮಠವಾಸಿಗಳು ಜನರಿಂದ ದೂರ ಸರಿದು ಬೆಟ್ಟಗುಡ್ಡಗಳಲ್ಲಿ ವಾಸಿಸತೊಡಗಿದ್ದರು. ಕಾರ್ಮೆಲ್ ಬೆಟ್ಟದಲ್ಲೂ ಸಹ ಸನ್ಯಾಸಿಗಳು ಜಪ-ತಪ ಮಾಡುತ್ತಿದ್ದರು ಮತ್ತು ಅವರಿಗೆ ಮಾತೆ ಮರಿಯಮ್ಮನವರಲ್ಲಿ ವಿಶೇಷ ಭಕ್ತಿಯೂ ಸಹ ಇತ್ತು. ಅಲ್ಲಿ ಅವರಿಗೆ ಮರಿಯಮ್ಮನವರ ಮಾತೃ ಸಹಜ ಆದರ ಮತ್ತು ದರ್ಶನವೂ ಲಭಿಸಿತೆಂದು ಕೆಲವು ಬರಹಗಳು ನಮಗೆ ತಿಳಿಸುತ್ತವೆ.
ಕಾರ್ಮೆಲ್ ಮಾತೆಯ ಮಹತ್ವವನ್ನು ಕುರಿತು ನಾವು ಧ್ಯಾನಿಸುವಾಗ ನಾವು ತಿಳಿದುಕೊಳ್ಳಲೇ ಬೇಕಾದ ಮತ್ತೊಂದು ಅಂಶ ಎಂದರೆ ಉತ್ತರಿಕೆ. ಆಂಗ್ಲ ಭಾಷೆಯಲ್ಲಿ ಉತ್ತರಿಕೆಯನ್ನು 'ಸ್ಕಾಪುಲರ್' ಎಂದು ಕರೆಯುತ್ತಾರೆ. ಸ್ಕಾಪುಲರ್ ಎಂದರೆ 'ಭುಜ' ಎಂದು ಅರ್ಥ. ಇದನ್ನು ಧಾರ್ಮಿಕ ವ್ಯಕ್ತಿಗಳು ಧರಿಸುತ್ತಿದ್ದರು. ಇದು ತಮ್ಮ ಮೇಲಂಗಿಯ ಮೇಲೆ ಕುತ್ತಿಗೆಯಿಂದ ಒಳಸೇರಿಸಿ ಭುಜದಿಂದ ಪಾದವನ್ನ ಹಿಂದೆ ಮತ್ತು ಮುಂದೆ ಮುಟ್ಟುವಷ್ಟು ಉದ್ದವಿತ್ತು. ಇದು ಸರಿ ಸುಮಾರು 14 ರಿಂದ 18 ಅಂಗುಲಗಳಷ್ಟು ಅಗಲವಿದ್ದು ಪ್ರಭುಕ್ರಿಸ್ತರ ನೊಗವೆಂದು ಸ್ವೀಕರಿಸಲಾಗುತ್ತಿತ್ತು.
ಇದು ಮೂತ್ತ ಮೊದಲು ಸುಮಾರು 13ರನೇ ಶತಮಾನದಲ್ಲಿ ಕಾರ್ಮೆಲ್ ಮಾತೆಯ ಸಭೆಯ ಶ್ರೇಷ್ಟ ಗರುಗಳಾಗಿದ್ದತಂಹ ಸಂತ ಸ್ಯೆಮನ್ ಸ್ಟೊಕ್‌ರವರು, ಮಾತೆಮರಿಯಳಲ್ಲಿ ಅತಿರೇಕ ಭಕ್ತಿ ಮತ್ತು ವಿಶ್ವಾಸವಿಟ್ಟಿದ್ದಂತಹ ಕಾರಣ ಅವರಿಗೆ ದರ್ಶನವನ್ನು ನೀಡಿ ಈ ಉತ್ತರಿಕೆಯನ್ನು ಯಾರೆಲ್ಲಾ ಧರಿಸುತ್ತಾರೂ ಅವರಿಗೆ ಮೂಕ್ಷಭಾಗ್ಯ ದೊರೆಯುತ್ತದೆ ಎಂಬ ಭರವಸೆಯನ್ನು ನೀಡಿದರು ಎಂಬ ನಂಬಿಕೆ ಇಂದಿಗೂ ಇದೆ.
ದ್ಯೆವಿಕ ಕರುಣೆಯ ಜಪಮಾಲೆಯನ್ನು ಅಸ್ತಿತ್ವಕ್ಕೆ ತಂದ ಸಂತ ಈಡಿತ್ ಸ್ಟೈನ್ ಹೀಗೆಂದಿದ್ದಾರೆ: ಉತ್ತರಿಕೆಯು ಮರಿಯಮ್ಮನವರ ರಕ್ಷಣೆಯ ಸಂಕೇತ ಮತ್ತು ಕಾರ್ಮೆಲ್ ಮಾತೆಯ ಕೃಪಾರಕ್ಷಣೆಯ ಬಾಹ್ಯಾ ಲಕ್ಷಣವಾಗಿದೆ. ಅಂತೆಯೇ ಸಂತ ಜಾನ್ ಪೌಲ್‌ರವರು ಉತ್ತರಿಕೆಯಲ್ಲಿ ಬಹಳ ನಂಬಿಕೆಯನ್ನಿರಿಸಿದ್ದರು. 1981 ರಲ್ಲಿ ಅವರನ್ನು ಕೊಲ್ಲಲು ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡನ್ನು ಹಾರಿಸಿದಾಗ ಅವರ ಕರುಳಿಗೆ ಅಪಾರ ಹಾನಿಯಾಗಿತು. ಆಗ ಅವರನ್ನು ಶಸ್ತ್ರ ಚಿಕಿತ್ಸೆಗೆ ಕೊಂಡೊಯ್ಯುತ್ತಿರುವಾಗ ತಮ್ಮ ಕೊರಳಿನಲ್ಲಿರುವ ಉತ್ತರಿಕೆಯನ್ನು ತೆಗೆಯಬಾರದು ಎಂದು ವಿನಂತಿಸಿದರು. ಅಂತೆಯೇ ಅವರು ಉತ್ತರಿಕೆಯ ಕುರಿತು ಹೀಗೆನ್ನುತ್ತಾರೆ; ಉತ್ತರಿಕೆ ಮರಿಯಮ್ಮನವರ ಭಕ್ತಿಯ ಸಾರಾಂಶವಾಗಿದ್ದು ಅದು ವಿಶ್ವಾಸಿಗಳ ಭಕ್ತಿಯನ್ನು ಪೋಷಿಸುತ್ತದೆ; ಮಾತೆಯ ಪ್ರಸನ್ನತೆ ಅವರಲ್ಲಿ ಸಜೀವವಾಗಿರುತ್ತದೆ ಎಂದು ಸಾರಿದರು.
ಹೀಗಿರುವಲ್ಲಿ ಕಾರ್ಮೆಲ್ ಮಾತೆಯ ಕುರಿತು ಹಳೆಯ ಒಡಂಬಡಿಕೆ ಏನು ಬೋಧಿಸುತ್ತದೆ?
1 ಅರಸರುಗಳ ಗ್ರಂಥ ಅಧ್ಯಾಯ: 18ರಲ್ಲಿ ನಾವು ಕಾರ್ಮೆಲ್ ಬೆಟ್ಟದ ಮಹತ್ವದ ಕುರಿತು ಆಲಿಸುತ್ತೇವೆ. ಇಸ್ರಯೇಲರ ಅರಸನಾದ ಆಹಾಬನು ತನ್ನ ದುಷ್ಟ ಕಾರ್ಯಗಳಿಂದ ದೇವರಿಗೆ ವಿರುದ್ಧವಾಗಿ ನಡೆದನು, ಆದಕಾರಣ ಸರ್ವೇಶ್ವರನ ಆಜ್ಞೆಯಂತೆ ಪ್ರವಾದಿ ಎಲೀಯನು ಆಹಾಬನು ನೆಲಸಿದ್ದಂತಹ ಸಮಾರಿಯ ಪಟ್ಟಣಕ್ಕೆ ಭೀಕರ ಕ್ಷಾಮ ಬರಲಿ ಎಂದು ಶಾಪವನ್ನು ನೀಡಿದನು. ಮೂರು ವರ್ಷಗಳ ನಂತರ ದೇವರ ಆಜ್ಞೆಯಂತೆ ಎಲೀಯನು, ಆಹಾಬನನ್ನು ಕರೆದುಕೂಂಡು ಕಾರ್ಮೆಲ್ ಬೆಟ್ಟದ ತುದಿಗೆ ಹೋಗಿ ಮೊಣಕಾಲೂರಿ ಜಪಿಸಿದನು. ಆಗ ಸಮುದ್ರದಿಂದ ಒಂದು ಚಿಕ್ಕ ಮೋಡವು ಏರಿ ಬರುವುದನ್ನು ಕಂಡರು. ಆ ಒಂದು ಚಿಕ್ಕ ಮೋಡವೇ ಅಂದು ಅವರು ಎದುರುನೋಡುತ್ತಿದ್ದಂತಹ ಲೋಕ ರಕ್ಷಕರ ತಾಯಿ ಎಂದು ಗುರುತಿಸಿ ಅಂದಿನಿಂದ ಬರಲಿರುವ ಲೋಕರಕ್ಷಕರ ತಾಯಿಗಾಗಿ ಪ್ರಾರ್ಥಿಸುತ್ತಿದ್ದರು.
ಹಾಗಾದರೆ ಕಾರ್ಮೆಲ್ ಮಾತೆಗೂ ಮತ್ತು ನಮಗೂ ಇರುವ ಸಂಬಂಧವೇನು? ಕಾರ್ಮೆಲ್ ಮಾತೆ ನಮ್ಮೆಲ್ಲರಿಗೂ ಹೇಗೆ ಮಾತೆಯಾದರು?
ಸಂತ ಪೌಲರು ಗಲಾತ್ಯರಿಗೆ ಬರೆದ ಪತ್ರ ಅಧ್ಯಾಯ 4: 4-7 ರಲ್ಲಿ ನಾವು ಆಲಿಸುತ್ತೇವೆ: ದೇವರು ದೇವಪುತ್ರರ ಪದವಿಯನ್ನು ನಮಗೆ ಒದಗಿಸಿ ಕೊಡುವುದಕ್ಕಾಗಿ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಅಂತೆಯೇ ನೀವು ದೇವರ ಮಕ್ಕಳಾಗಿರುವುದರಿಂದಲೇ, 'ಅಪ್ಪಾ, ತಂದೆಯೇ' ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. ಹಾಗಾದರೆ, ಪ್ರಭು ಕ್ರಿಸ್ತರ ತಂದೆಯನ್ನು 'ಅಪ್ಪಾ ತಂದೆಯೇ ಎಂದು ಕರೆಯುವ ಪ್ರಭು ಕ್ರಿಸ್ತರ ಆತ್ಮ ನಮ್ಮಲ್ಲಿರುವಾಗ ಪ್ರಭು ಕ್ರಿಸ್ತರ ತಾಯಿಯನ್ನು 'ಅಮ್ಮ' ಎಂದು ಕರೆಯಲು ನಾವು ಬಾಧ್ಯಸ್ಥರಲ್ಲವೇ?
ಖಂಡಿತವಾಗಿಯೂ ಹೌದು, ಮಾತೆ ಮರಿಯಳು ನಮ್ಮೆಲ್ಲರ ತಾಯಿ, ಆಕೆ ನಮಗೆ ದೈಹಿಕವಾಗಿ ಜನ್ಮ ನೀಡಿಲ್ಲವಾದರೂ ಆಧ್ಯಾತ್ಮಿಕ ತಾಯಿಯಾಗಿ ನಮ್ಮೆಲ್ಲರನ್ನು ಪೋಷಿಸುತ್ತಿದ್ದಾರೆ.
ಯೊವಾನ್ನ ಶುಭಸಂದೇಶ 19: 25-27ರಲ್ಲಿ ಶಿಲುಬೆಯ ಬಳಿಯಲ್ಲಿ ನಿಂತಿದ್ದಂತಹ ತಮ್ಮ-ತಾಯಿ ಮರಿಯಳನ್ನು ಮತ್ತು ಆಪ್ತ ಶಿಷ್ಯನನ್ನು ನೋಡಿ 'ಅಮ್ಮ, ಇಗೋ ನಿನ್ನ ಮಗ' ಎಂದರು. ಅನಂತರ ತಮ್ಮ ಶಿಷ್ಯನನ್ನು ಕುರಿತು, ಇಗೋ ನಿನ್ನ ತಾಯಿ ಎನ್ನುತ್ತಾರೆ.
ನಮ್ಮಲ್ಲಿ ಹಲವರು, ಶುಭಸಂದೇಶದಲ್ಲಿ ಪ್ರಭುಕ್ರಿಸ್ತರು ತಮ್ಮ ಆಪ್ತ ಶಿಷ್ಯನಿಗೆ ಮಾತ್ರ ಇಗೋ, ನಿನ್ನ ತಾಯಿ ಎಂದು ನುಡಿದಿರುವುದು ಅದು ಹೇಗೆ ನಮ್ಮೆಲ್ಲರಿಗೂ ತಾಯಿ ಆಗಲು ಸಾಧ್ಯ ಎಂದು ಪ್ರಶ್ನಿಸಬಹುದು. ಕ್ರ್ಯೆಸ್ತ ಕಥೋಲಿಕ ಧರ್ಮೋಪದೇಶದ ಸಂಖ್ಯೆ 1213 ರಲ್ಲಿ ನಾವು ಕಾಣುತ್ತೇವೆ, ಜ್ಞಾನ್ನಸ್ನಾನ ಪಡೆದು ಕ್ರೈಸ್ತರಾಗಿರುವ ನಾವೆಲ್ಲರೂ ಪ್ರಭು ಕ್ರಿಸ್ತನ ಯಾತನೆ, ಮರಣ ಮತ್ತು ಪುನರುತ್ಥಾನದಲ್ಲಿ ಪಾಲುಗಾರರಾಗಿದ್ದೇವೆ ಎಂದು. ಆದುದರಿಂದ ನಾವೆಲ್ಲರೂ ಕ್ರಿಸ್ತನ ಹಾದಿಯನ್ನು ಪಾಲಿಸಲು ಕರೆಯಲ್ಪಟ್ಟವರು. ನಾವು ಪ್ರಭು ಕ್ರಿಸ್ತರ ಪರಿಯನ್ನು ಪಾಲಿಸಿದ್ದೇ ಆದಲ್ಲಿ ನಾವು ಕೂಡ ಪ್ರಭು ಕ್ರಿಸ್ತರ ಆಪ್ತರಾಗುತ್ತೇವೆ. ಏಕೆಂದರೆ ಯೊವಾನ್ನನ ಶುಭಸಂದೇಶ 15:14ರಲ್ಲಿ ಪ್ರಭುಕ್ರಿಸ್ತರು ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು ಮತ್ತು ಯೊವಾನ್ನ 15:15ರಲ್ಲಿ ನಾನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ ಬದಲಾಗಿ ಗೆಳೆಯರೆಂದು ಕರೆದಿದ್ದೇನೆ ಎಂದು ನುಡಿಯುತ್ತಾರೆ. ಅದುದರಿಂದ ಕ್ರಿಸ್ತನ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬರೂ ಕ್ರಿಸ್ತನಿಗೆ ಆಪ್ತಶಿಷ್ಯರು ಮತ್ತು ಮಾತೆ ಮರಿಯಳ ಮಕ್ಕಳು ಆಗಿದ್ದೇವೆ.
ಪ್ರಿಯರೇ ಪ್ರತೀ ವರ್ಷ ನಾವು ಕಾರ್ಮೆಲ್ ಮಾತೆಯ ಹಬ್ಬವನ್ನು ಬಹಳ ಅದ್ದೂರಿಯಿಂದ ಅಚರಿಸುತ್ತಿದ್ದೇವೆ, ಆದರೆ ಕಾರ್ಮೆಲ್ ಮಾತೆಯ ಗುಣಗಳನ್ನು ನಮ್ಮ ಜೀವನದಲ್ಲಿ ಕಿಂಚಿತ್ತು ಪಾಲಿಸದ ಹೊರತು ಈ ಹಬ್ಬಕ್ಕೆ ನಿಜವಾದ ಅರ್ಥ ಸಿಗುವುದಿಲ್ಲ. ಅದುದರಿಂದ ಕಾರ್ಮೆಲ್ ಮಾತೆಯ ವಿಶೇಷವಾದ ಈ ಮೂರು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ.
ಮೊದಲನೆಯದಾಗಿ, ಹಳೆಯ ಹೊಡಬಂಡಿಕೆಯಲ್ಲಿ ಇಸ್ರಯೇಲ್ ಜನಾಂಗವು ಕ್ಷಾಮದಿಂದ ತತ್ತರಿಸುತ್ತಿದ್ದತಂಹ ಸಮಯದಲ್ಲಿ ಸಮುದ್ರದಿಂದ ಮೋಡವು ಮಳೆಯನ್ನು ಹೊತ್ತು ತಂದಂತೆ, ನಮ್ಮನ್ನು ಪಾಪದಿಂದ ವಿಮುಕ್ತಗೊಳಿಸಲು ಮಾತೆಮರಿಯಳು ತನ್ನ ಮಗನನ್ನು ಹೊತ್ತು ತಂದರು. ಅಂತಹ ಮಾತೆಯನ್ನು ಪ್ರತಿ ದಿನ ನಮ್ಮ ಮನೆಗಳಲ್ಲಿ, ಪ್ರಾರ್ಥನೆ ಮತ್ತು ಜಪಸರ ಮಾಡುವುದರ ಮೂಲಕ ನಮ್ಮ ಮನೆ ಮತ್ತು ನಮ್ಮ ಮನಗಳಲ್ಲಿ ಮಾತೆಯನ್ನು ಸ್ವೀಕರಿಸೋಣ. ಏಕೆಂದರೆ ಯೊಹಾನ್ನ 2:1-10ರಲ್ಲಿ ಹೇಳುವಂತೆ, 'ಎಲ್ಲಿ ಯೇಸುವನ್ನು ಆಹ್ವಾನಿಸುತ್ತಾರೊ, ಅಲ್ಲಿ ಮಾತೆ ಮರಿಯಳನ್ನು ಆಹ್ವಾನಿಸಲಾಗುವುದು, ಎಲ್ಲಿ ಮಾತೆ ಮರಿಯಳನ್ನು ಸ್ವಾಗತಿಸುತ್ತಾರೊ, ಅಲ್ಲಿ ಪ್ರಭು ಯೇಸುವಿನ ಪ್ರಸ್ನತೆ' ಇರುತ್ತದೆ.
ಎರಡನೇಯದಾಗಿ, ದುಃಖಿತರಿಗೆ, ನೊಂದವರಿಗೆ ಸಾಂತ್ವನವನ್ನು ನೀಡುವವರು ಮಾತೆ ಮರಿಯಮ್ಮನವರು. ಕಾನಾ ಮದುವೆಯಲ್ಲಿ ದ್ರಾಕ್ಷಾರಸವು ಮುಗಿದು ಹೋಗಿ ಕಂಗಾಲಾಗಿದ್ದಾಗ, ಅವರ ಕೊರತೆಯನ್ನು ನೀಗಲು ಬೇಡಿಕೊಂಡವಳು ಮಾತೆಮರಿಯಳು. ಇಂದು ನಾವು ನಮ್ಮ ನೆರೆಹೊರೆಯವರು ಕಷ್ಟದಲ್ಲಿರುವುದನ್ನು ಕಂಡಾಗ ನಮ್ಮ ಪ್ರತಿಕ್ರಿಯೆ ಎಂತಹದ್ದು? ಅನೇಕ ಬಾರಿ ಅವರರ ಕಷ್ಟ ಅವರವರಿಗೆ ಎಂದು ವ್ಯಂಗ್ಯವನ್ನಾಡುತ್ತೇ. ಬದಲಾಗಿ, ಮಾತೆ ಮರಿಯಳಂತೆ ನೊಂದವರಿಗೆ, ಬಡವರಿಗೆ, ಕಷ್ಟದಲ್ಲಿರುವವರಿಗೆ ನಮ್ಮ ಸಹಾಯ ಹಸ್ತವನ್ನು ನೀಡುವಂತವರಾಗೋಣ.
ಮೂರನೆಯದಾಗಿ, ಕ್ರಿಸ್ತನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದವಳು ಮಾತೆ ಮರಿಯಳು. ಅವರು ಕ್ರಿಸ್ತನನ್ನು ಜನನದಿಂದ ಮರಣದವರೆಗೂ ಹಿಂಬಾಲಿಸದರು. ಲೂಕ 12:34ರಲ್ಲಿ ಪ್ರಭು ಕ್ರಿಸ್ತರು ಹೀಗೆಂದಿದ್ದಾರೆ: 'ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ' ಎಂದು. ಮಾತೆಯ ನಿಧಿಯೂ, ಹೃದಯವೂ ಮತ್ತು ಸರ್ವಸ್ವವೂ ಪ್ರಭುಕ್ರಿಸ್ತರಾಗಿದ್ದರು. ಆದರೆ ನಮ್ಮ ನಿಧಿ ಎಲ್ಲಿದೇ? ಪರಿಕ್ಷಿಸಿ ನೋಡಬೇಕಾಗಿದೆ. ಒಂದು ವೇಳೆ ಪ್ರಾಪಂಚಿಕ ವಸ್ತುಗಳಲ್ಲಾದರೆ! ಮಾತೆ ಮರಿಯಳಂತೆ ಎಲ್ಲವನ್ನೂ ತೊರೆದು ಪ್ರಭುಕ್ರಿಸ್ತರನ್ನು ನಮ್ಮ ನಿಧಿಯಾಗಿಸಿಕೊಳ್ಳೋಣ.
*****
No comments:
Post a Comment