Friday, 12 July 2019

ಯಾಕವ್ವನ ಅಂತರಂಗ - ಜೋವಿ



--------------------------------------------------------------------------------------------------------------

ಏಕೋ ನಿರಾಸಕ್ತಿ ನನ್ನಲ್ಲಿ ಮನೆ ಮಾಡಿ ಕುಳಿತಿದೆ. ಒಂದು ಕಡೆ ಲೋಕಸಭಾ ಚುನಾವಣೆಯ ಏಕಮುಖ ಪಲಿತಾಂಶದಿಂದ ತೀವ್ರ ಅಘಾತಕ್ಕೆ ಒಳಗಾಗಿ ಚೇತರಿಕೊಳ್ಳುವುದರಲ್ಲೇ ನಮ್ಮ ರಾಜ್ಯದ ರಾಜಕೀಯ ಡೊಂಬರಾಟವನ್ನು ನೋಡಿ ಏನೂ ಬರೆಯಲು ಮನಸ್ಸಾಗುತ್ತಿಲ್ಲ. ಸಮಾಜಮುಖಿಯಾಗಿ, ಸಮ ಸಮಾಜದ ಗುರಿಯನ್ನು ಹೊತ್ತುಕೊಂಡು ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಇಂತಹ ಹತಾಶೆಯ ಕ್ಷಣಗಳು ಮೂಡದೆ ಇರುವುದಿಲ್ಲ. ಎಲ್ಲವೂ ಒಂದು ರೀತಿಯ ಕತ್ತಲ ಸುರಂಗವಾಗಿಬಿಟ್ಟಿದೆ. ಆದ್ದರಿಂದ ಹಿಂದೆ ಬರೆದ ನನ್ನ ಲೇಖನವನ್ನೇ ಮತ್ತೊಮ್ಮೆ ಕಳುಹಿಸಿದ್ದೇನೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಹಿನ್ನೆಲೆಯಲ್ಲಿ ಈ ಲೇಖನವನ್ನು ಓದಿಕೊಂಡರೆ, ಇನ್ನು ಸ್ವಲ್ಪ ನಿಮಗೆ ಆಪ್ತವಾಗುವುದೇನೋ !! 
---------------------------------------------------------------------------------------------------------------

ಹಳ್ಳಿಯಿಂದ ಬೇರೆಯೇ ಆಗಿದ್ದ ಒಂದು ದೇವದಾಸಿಯ ಪುಟ್ಟ ಕೊಂಪೆಗೆ ಹೋಗಿದ್ದೆ. ಊರಿನ ಜಾತಿ ವ್ಯವಸ್ಥೆಯಲ್ಲಿ ದನಿ ಕಳೆದುಕೊಂಡು ಕಸದ ಪೊರಕೆಯಂತೆ ಮೂಲೆ ಸೇರಿಬಿಟ್ಟಂತಿದ್ದ ಈ ಕೊಪ್ಪಲು ಯಾರ ಸುದ್ದಿಗೆ ಹೋಗದೆ ತನ್ನ ಪಾಡಿಗೆ ಹಾಸಿಗೆ ಹಾಸಿ ಮಲಗಿದಂತಿತ್ತು. ಇಂತಹ ಕ್ಷುದ್ರ, ಕೊಂಪೆಗೆ ಕಾಲಿಟ್ಟಾಕ್ಷಣ ನನ್ನ ಕಣ್ಣುಗಳನ್ನು ಕುಕ್ಕಿದ್ದು ಆ ಕೇರಿಯಲ್ಲಿ ಸೆಟೆದ್ದು ನಿಂತಿದ್ದ ಕೆಲ ತಾರಸಿ ಮನೆಗಳು. ಹಗ್ಗು ತಗ್ಗಿನ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಆರ್. ಸಿ. ಸಿ ಮನೆಗಳು ಸಾಲು ಬೆಳೆಯಂತೆ ಶಿಸ್ತಾಗಿ ನಿಂತಿದ್ದವು. ಇನ್ನೊಂದೆಡೆ ಊರಿನ ರಾಜರಸ್ತೆಯನ್ನು ಕಾಂಕ್ರೀಟ್ಕರಣಗೊಳಿಸುವ ಕಾರ್ಯ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಮೋರಿಯ ವ್ಯವಸ್ಥೆ ಇನ್ನೂ ಆಗಬೇಕಾಗಿತ್ತು. ಬಲ ಬದಿ ಮನೆಗಳ ಹಿಂಭಾಗ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೃಹದಾಕಾರದ ನೀರಿನ ಟ್ಯಾಂಕ್ ಆಕಾಶಕ್ಕೆ ಮುಖಮಾಡಿ, ನಾಲ್ಕೈದು ಆಧಾರ ಸ್ತಂಭಗಳಿಂದ ನಿಂತುಕೊಂಡಿತ್ತು. ಇವೆಲ್ಲಾ ಆ ಕೊಂಪೆಗೆ ಒಂದು ವ್ಯವಸ್ಥಿತ ಮುದ್ರೆ ಹಾಕಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. 

ಹೌದು, ಎರಡು ಮೂರು ವರ್ಷಗಳ ಹಿಂದೆ ಸಂಭವಿಸಿದ್ದ ನೆರೆಯಿಂದ ಊರಿಗೆ ಊರೇ ಜಲಾವೃತವಾಗಿತ್ತು. ಮನೆಮಠಗಳು ನೆರೆಯ ಕ್ರೂರ ದಾಳಿಗೆ ಕುಸಿದಿದ್ದವು. ಬೆಳೆಗಳು ನೀರುಪಾಲಾಗಿದ್ದವು. ಆಗಿದ್ದ ಸರ್ಕಾರ ಊರು ಮನೆಗಳ ಮರುನಿರ್ಮಾಣದ ಬಗ್ಗೆ ಜೋರಜೋರಾಗಿ ಬೊಬ್ಬೆ ಹೊಡೆಯಿತೇ ವಿನಃ ಏನೂ ಮಾಡಿರಲಿಲ್ಲ. ಊರ ಜನರಂತೂ ಅಸಹಾಯಕತೆಯಿಂದ ಕೈ ಚೆಲ್ಲಿ ಆಕಾಶವನ್ನು ದಿಟ್ಟಿಸಿ ಕೂತಿದ್ದರು. ಊರು ಮತ್ತೊಮ್ಮೆ ಮರು ನಿರ್ಮಾಣವಾಗಬೇಕಿತ್ತು. ಊರಿನ ಜನರಿಗೆ ವಾಸಿಸಲು ಯೋಗ್ಯ ಮನೆಗಳು ಬೇಕಾಗಿತ್ತು. 

ಇಂತಹ ಪರಿಸ್ಥಿತಿಯಲ್ಲಿ ಲೊಯೋಲಾ ಎಂಬ ಖಾಸಗಿ ಸಮಾಜಸೇವಾ ಸಂಸ್ಥೆ ಜನರಿಗೆ ಒತ್ತಾಸೆಯಾಗಿ ಬಂದು ಜನರಿಗೆ ವಾಸಿಸಲು ಯೋಗ್ಯ ಮನೆಗಳನ್ನು ನಿರ್ಮಿಸಿ ಕೊಟ್ಟು ಜನರ ಮನಗಳನ್ನು ತುಂಬಿಕೊಂಡಿತ್ತು. ಊರಿನ ಸಮಸ್ಯೆಯ ನೈಜ ಚಿತ್ರಣ ಅರಿತ ಸಂಸ್ಥೆ, ಊರ ಮಕ್ಕಳಿಗೆ ಅಕ್ಷರದ ರುಚಿ ತೋರಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿತ್ತು. ಜತೆಗೆ ಊರಿನ ಸರ್ವತೋಮುಖ ಅಭಿವೃದ್ಧಿಯ ನೀಲಿನಕ್ಷೆಯನ್ನು ಕೈಯಲ್ಲಿ ಹಿಡಿದುಕೊಂಡು ಶಕ್ತಿಮೀರಿ ದುಡಿಯತೊಡಗಿತು, ಈ ಊರಿನಲ್ಲೊಂದು ಮಹತ್ತರ ಬದಲಾವಣೆಗೆ ಕಾರಣವಾದ ಲೊಯೊಲಾ ಸಂಸ್ಥೆಯನ್ನು ಇಂದೂ ಈ ಊರಿನಲ್ಲಿ ಕಾಣಬಹುದು. ಇದರಿಂದಾಗಿ ದೇವದಾಸಿಯ ಅನಿಷ್ಟ ಪದ್ಧತಿ ಅವಸಾನದ ಹಾದಿ ಹಿಡಿದಿದೆ. ಶೋಷಿತ ಮಹಿಳೆಯರು ಮುಖ್ಯವಾಹಿನಿಯ ಕಡೆ ಮುಖಮಾಡಿದ್ದಾರೆ. ಊರಿನ ಅಷ್ಟೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಮಗ್ನರಾಗಿದ್ದಾರೆ. 

ದೇವದಾಸಿಯೆಂಬ ಶೋಷಣಾತ್ಮಕ ಪದ್ದತಿ ಈ ಊರಿಗೆ ಪಾರಂಪರಿಕವಾಗಿ ಅಂಟಿಕೊಂಡು ಬಂದಿದ್ದ ಶಾಪವೆಂದರೆ ತಪ್ಪಾಗದು. ನೂರಾರು ವರ್ಷಗಳಿಂದ ಈ ರೀತಿಯ ಅನಿಷ್ಟ ಪದ್ಧತಿಯಿಂದ ಜರ್ಜರಿತರಾಗಿರುವ ಮಹಿಳೆಯರು ಈಗ ಸಿಡಿದೆದ್ದಿದ್ದಾರೆಂತಲ್ಲ. ಅವರು ಈಗಲೂ ಆತ್ಮವಿಶ್ವಾಸದ ಕೊರತೆಯಿಂದ ಬದುಕುತ್ತಿದ್ದಾರೆ. ಈ ಪದ್ದತಿಯ ಉಪ ಉತ್ಪನ್ನಗಳಂತೆ ಅಷ್ಟು ಇಷ್ಟು ಮರಿ ಆಚರಣೆಗಳು ಇನ್ನೂ ಚಾಲ್ತಿಯಲ್ಲಿವೆ. ಕೆಲವರಂತೂ ಅದೇ ದುಷ್ಟ ಪದ್ದತಿಯ ಬಾಹುವಿನಲ್ಲಿ ಸಿಲುಕಿಕೊಂಡು, ಹೊರಬರಲಾಗದೆ ಬಲೆಗೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಇವಿಷ್ಟು ಊರ ಬಗೆಗಿನ ಸಂಕ್ಷಿಪ್ತ ಪಕ್ಷಿನೋಟ. 

ಈ ಎಲ್ಲಾ ಹಿನ್ನೆಲೆಯಲ್ಲಿ ನನ್ನ ಮನಸನ್ನು ಸೂರೆಗೊಂಡದ್ದು ಆ ಊರಿನಲ್ಲಿದ್ದ ಮಹಿಳೆಯರ ಮೇಳ/ ಹಾಡು ತಂಡ. ಈ ತಂಡದಲ್ಲಿರುವ ಯಾವೊಬ್ಬ ಮಹಿಳೆಯೂ ಅಕ್ಷರವಂತಳಲ್ಲ. ಆದರೂ ಅವರ ಅನುಭವಗಳಿಗೆ ಮಾತುಗಳ ಪೋಣಿಸಿ, ಲಯ, ಪ್ರಾಸ ರಾಗ ಕಟ್ಟಿ ಹಾಡುವುದರಲ್ಲಿ ಮಾತ್ರ ಎತ್ತಿದ ಕೈ. ನಿಂತಲ್ಲೇ ಹಾಡು ಕಟ್ಟಿಬಿಡುವ ಚಾತುರ್ಯ ಮತ್ತು ಕಲೆಗಾರಿಕೆ ಅವರದು. ಅವರು ಕಟ್ಟಿರುವ ನೂರಾರು ಹಾಡುಗಳ ಒಳಹೊಕ್ಕಾಗ ದಮನಿತರ ತಾತ್ವಿಕ ಲೋಕವೇ ಅನಾವರಣಗೊಂಡು ಬಿಡುತ್ತದೆ. ಆ ಹಾಡುಗಳಲ್ಲಿ ಬದುಕಿನ ಬಗೆ ಬೇಕಾದಷ್ಟು ಆಸಕ್ತಿಯಿದೆ. ವಾಸ್ತವ ಅನುಭವಕ್ಕೆ ಆಕಾರ ಕೊಡುವ ಅಸಲು ಕಲೆಯಿದೆ. ವಾಸ್ತವತೆಯನ್ನು ನೇರ ದೃಷ್ಟಿಯಿಂದ ನೋಡುವ ವಸ್ತುನಿಷ್ಠೆ ಅವುಗಳಲ್ಲಿವೆ. ಅನುಭವಗಳನ್ನು ಕೆದಕಿ ಕೆದಕಿ ನೋಡುವ ವಿಪರೀತ ಕುತೂಹಲ ತುಂಬಿ ತುಳುಕುತ್ತಿವೆ. ಜತೆಗೆ ಭಾವಗಳ ಜತೆಗೆ ಬುದ್ಧಿಗಿತ್ತ ಪ್ರಾಧಾನ್ಯ ಮತ್ತು ಅನುಭವದ ನಿರೂಪಣೆಯಲ್ಲಿ ಪ್ರಾಮಾಣಿಕತೆ ಆ ಹಾಡುಗಳಲ್ಲಿ ಕಂಡುಬರುತ್ತವೆ. 

ಇವ್ಯಾವೂ ಶಿಷ್ಟ ಜಾತಿಗೆ ಸೇರಿದ ಹಾಡುಗಳಲ್ಲ. ಅವು ಅಚ್ಚ ಜನಪದ ಹಾಡುಗಳು. ಶೋಷಣೆಯ ಕುಲುಮೆಯಲ್ಲಿ ಬೆಂದು ಹತಾಶೆ, ಆಕ್ರೋಶಗಳ ಜತೆಗೆ ಭರವಸೆಯನ್ನು ಕೆಂಡದಂತೆ ಉಗುಳುವ ಈ ಹಾಡುಗಳು ಜಾನಪದ ಗಣಿಯೇ ಎನ್ನಬಹುದು. ಈ ಹಾಡುಗಳನ್ನು ಕೇಳುತ್ತಿದ್ದ ನನಗೆ ದಲಿತ ಕವಿ ಡಾ. ಸಿದ್ಧಲಿಂಗಯ್ಯರವರ ಗುಡಿಸಲಿನಲ್ಲಿ ಅರಳುವ ಗುಲಾಬಿಯನ್ನು, ಬದುಕ ಪ್ರೀತಿಸುವ ಬಡವರ ಮಗಳನ್ನು ಕವಿತೆಯಾಗಿಸಿರುವ `ನನ್ನ ಕವಿತೆ' ಎಂಬ ಕವಿತೆಯ ಸಾಲುಗಳು ನೆನಪಾದವು. ಈ ಹಳ್ಳಿಯ ಹಾಡುಗಳು ಕವಿಯ ಸಾಲುಗಳನ್ನೇ ಮತ್ತೊಂದು ದನಿಯಲ್ಲಿ ಹಾಡಿದಂತಿವೆ. 

ಇಂತಹ ನೂರಾರು ಹಾಡುಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು, 'ಯಾಕವ್ವ' ಎಂಬ ಮೃದು ಮತ್ತು ಗಟ್ಟಿ ದನಿಯ ಹಾಡು. ಸಾಧಾರಣ ಜಾನಪದ ರಾಗದಲ್ಲಿ ಕಟ್ಟಿಕೊಂಡಿರುವ ಈ ಹಾಡು ಸಮಾಜದ ಕನ್ನಡಿಯೇ ಎನ್ನಬಹುದೇನೋ. ಒಬ್ಬಳ ಸಂಕಷ್ಟದಲ್ಲಿ ಮಿಂದು ಎದ್ದು ಬಂದಂತಹ ಈ ಹಾಡಿನಲ್ಲಿ ಕಣ್ಣೀರ ವ್ಯಥೆಯಿದೆ. ಆ ಕಣ್ಣೀರಿಗೆ ಕಾರಣವಾದ ವಾಸ್ತವವನ್ನು ನಮಗೆ ಕೇಳಿಸುತ್ತಲೇ ಆ ಕಣ್ಣೀರ ಒರೆಸಿ, ದೃಢ ವಿಶ್ವಾಸವು ಪುಟಿದೇಳುವಂತೆ ಮಾಡುವ ಮಾಂತ್ರಿಕತೆ, ರೋಷ ಆ ಹಾಡಿಗಿದೆ. ಜತೆಗೆ ಜೀವಪರವಲ್ಲದ ಅನ್ಯಾಯವನ್ನು ಧಿಕ್ಕರಿಸುವ ದೈರ್ಯವನ್ನು ಈ ಹಾಡು ಪ್ರಕಟಿಸುತ್ತದೆ. 

ಅದು ಕೇವಲ ಹಾಡಲ್ಲ, ಹಾಡಿನ ರೂಪದಲ್ಲಿರುವ ಪ್ರತಿಭಟನೆಯೂ ಹೌದು. ಅನ್ಯಾಯವನ್ನು ಪ್ರತಿಭಟಿಸುತ್ತಲೇ ನ್ಯಾಯದ ಸಾಕಾರಕ್ಕೆ ಮಾರ್ಗ ತೋರಿಸುವ ಜೀವದನಿಯೂ ಹೌದು. ಯಾಕೋ ನಾನು ಕೇಳಿದ ನೂರಾರು ಹಾಡುಗಳಲ್ಲಿ ಇದು ಮಾತ್ರ ನನ್ನ ಮನದ ತಳವೂರಿ ಕೂತು, ಆಗಾಗ ನನ್ನದೇ ಶೈಲಿಯಲ್ಲಿ ಧ್ವನಿತವಾಗುತ್ತಿದೆ. ಧ್ವನಿತವಾದ ಪ್ರತಿಯೊಂದು ಸಲವೂ ಹಾಡಿನ ಶರೀರದಿಂದ ಆತ್ಮಕ್ಕೆ ಹೋಗಲು ಮನಸ್ಸು ತವಕಿಸುತ್ತಿದೆ. ಹಾಡು ಕೇವಲ ಹಾಡಾಗಿರದೆ, ಅನುಭವ ಕಥನವಾಗಿ ಮಿಡಿಯುತ್ತಿದೆ. ಹಾಡಿನ ಎದೆಯಲ್ಲಿ ಅಡಗಿರುವ ನಾನಾ ರೀತಿಯ ಆಯಾಮಗಳು. ಹೊಳಹು, ಹೊಸದೃಷ್ಟಿಗಳು ಗೋಚರವಾಗುತ್ತಿವೆ. ಪದಗಳು ಹೇಳುವುದನ್ನು ಹಾಡಿನ ಒಳಧ್ವನಿ ಮಿಡಿಯುತ್ತಿದೆ. 

ಬಡವರನ್ನು ಕ್ರೂರತನದಿಂದ ಹಿಂಸಿಸುವ ಮದುವೆಯ ಅತೀವ ಖರ್ಚು, ಬಡವರ ಅಸಹಾಯಕತೆ ಮತ್ತು ಅನಕ್ಷರತೆಯನ್ನು ಬಂಡವಾಳವಾಗಿಸಿಕೊಂಡು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಪರದೇಶಿ ಊರಗೌಡ, ತನಗಾದ ಮೋಸದ ಕುಲುಮೆಯಲ್ಲಿ `ತಿಳುವಳಿಕೆ'ಯನ್ನು ಬೇಯಿಸಿಕೊಳ್ಳುವ ಮಹಿಳೆ, ತಮ್ಮ ತಂಗಿಗಾದ ಅನ್ಯಾಯವನ್ನು ಕಂಡು ಹೋರಾಟ ಮಾಡಲು ಕರೆಕೊಡುವ ಇತರ ಮಹಿಳೆಯರು ಹೀಗೆ ನಾನಾ ರೀತಿಯ ಅಂತರಾರ್ಥ ನೀಡುವ ಯಾಕವ್ವಳ ಹಾಡನ್ನು ಕಲಿತು ಹೋದ ಕಡೆಯೆಲ್ಲಾ ಹಾಡಿ ಹೋರಾಟಕ್ಕೆ ಮುನ್ನಡಿ ಹಾಡಬೇಕೆಂಬ ಬಯಕೆ ನನ್ನನ್ನು ತುಂಬಿ ಕಾಡುತ್ತಿದೆ. 

ಯಾಕವ್ವ ನನ್ ಗೆಳತಿ ಸಪಗ್ಯಾಕ ಕುಂತಿ
ದಳ ದಳ ಕಣ್ಣೀರುರವ ಸುರಸಿ/2/
ನನ್ನ ಮಗಳ ಮದುವೆಗೆ ಗೌಡರ ಮನೆಗೆ ಹೋಗಿ
ಮುನ್ನೂರು ರುಪಾಯಿ ಸಾಲ ತೆಗೆಸಿ/2/
ಮುನ್ನೂರು ರುಪಾಯಿಗೆ ಮೂರುವರೆ ಸಾವಿರ
ಲೆಕ್ಕ ಬರೆದಿಟ್ಟಾನ ಪರದೇಶಿ. /2/
ಹೇಳುವ ಮಾತಲ್ಲ, ಕೇಳುವ ಕತೆಯಲ್ಲ
ಸಮನ ಸಮಜನ ದಾರಿ ತೋರುವೆ/2/
ಹೋರಾಟ ಮಾಡುತ್ತಾ ದನಿ ಎತ್ತಿ ಹಾಡುತ್ತಾ
ಮಹಿಳೆ ಸಂಘವ ಸೇರಿ ಹೋರಾಟ ಮಾಡುವ./2/
ಯಾಕವ್ವ... 
ಮೇಲಿನ ಹಾಡನ್ನು ಒಂದು ಸಾರಿ ಓದಿದ್ದರೆ, ಅದು ಏಕೋ ಪೂರ್ಣಪ್ರಮಾಣದ ಹಾಡಂತೆ ಕಾಣುತ್ತಿಲ್ಲ. ಈ ಹಾಡನ್ನು ಹಾಡಿದ ಮೇಳ ಹಾಡನ್ನು ಇಡಿಯಾಗಿ ನನ್ನ ಮುಂದೆ ಹಾಡಿಲ್ಲವೇನೋ! ಮಗಳ ಮದ್ವೆಗೆ ಸಾಲ ಕೇಳಿ ಮೋಸ ಹೋದ ಮಹಿಳೆಯ ಆರ್ತನಾದ ಸಹ ಸಂಪೂರ್ಣವಾಗಿ ಈ ಹಾಡು ಕೇಳಿಸುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಹಾಡಿನ ಸೃಷ್ಟಿಕರ್ತ ಯಾರೋ? ಇವೆಲ್ಲಾ ಗೊಂದಲಗಳ ಜತೆಗೆ ವಾಸ್ತವಿಕತೆಯ ಹಲವು ಮಗ್ಗಲುಗಳನ್ನು ಅದು ಹಾಸು ಹೊಕ್ಕಾಗಿ ಸೇರಿಸಿಕೊಂಡಿರುವುದು ಅಕ್ಷರಶಃ ನಿಜವೆನ್ನಿಸುತ್ತದೆ. 

ಏಕೆ ಹೆಣ್ಣುಮಗಳ ಕಣ್ಣಲ್ಲಿ ದಳ ದಳ ನೀರು ಸುರಿಯಬೇಕು? ಸಾಲಕ್ಕೆ ಅವಳು ಗೌಡರ ಮರೆಹೊಕ್ಕಿದ್ದೇಕೆ? ಆ ಹೆಣ್ಣು ಮಗು ಯಾಕೆ ಸಾಲ ಕೇಳಬೇಕು? ಮುನ್ನೂರು ರುಪಾಯಿ ಸಾಲ ಕೊಟ್ಟ ಗೌಡ ಮೂರು ಸಾವಿರವೆಂದು ಲೆಕ್ಕ ಬರೆದುದೇಕೆ? ಯಾವ ರೀತಿಯ ಮರು ಪಾವತಿಯನ್ನು ಗೌಡ ಬಯಸಿದ? ಆ ಹೆಂಗಸಿಗೆ ತಾನು ಮೋಸ ಹೋದೆನೆಂಬ ಅರಿವು ಯಾವಾಗಾಯ್ತು ಮತ್ತು ಆ ಗ್ರಹಿಕೆ ಬಂದಿದ್ದಾದರೂ ಹೇಗೆ? ಏಕೆ ಹೆಣ್ಣುಮಕ್ಕಳು ಸಮಾನ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ? ಯಾಕೆ ಮಹಿಳೆಯರೆಲ್ಲಾ ಸೇರಿ ಮಹಿಳಾ ಸಂಘವ ಕಟ್ಟಿ ಹೋರಾಟ ಮಾಡಬೇಕು ಅಂತ ಹೇಳುತ್ತಿದ್ದಾರೆ? ಈ ಹೋರಾಟ ಚಳುವಳಿಗಳು ನಮಗೆ ಬೇಕೇ? ನಮ್ಮಲ್ಲಿರುವ ಇವಿಷ್ಟು ಸಮಸ್ಯೆಗಳಿಗೆ ಹೋರಾಟ ಪರಿಹಾರ ಒದಗಿಸಿಕೊಡ ಬಲ್ಲುದೇ? 

ಹೀಗೆ ಈ ಹಾಡು ಹುಟ್ಟಿಸುವ ಹತ್ತಾರು ಪಶ್ನೆಗಳ ಜಾಡನ್ನು ಹಿಡಿದು ಹೊರಟರೆ, ಇಡೀ ಭಾರತದ ಸಮಸ್ಯೆಗಳೆಲ್ಲಾ ಒಮ್ಮಲೇ ನಮಗೆ ಕಾಣಸಿಗುತ್ತವೆ. ಬಡತನ, ಬ್ಯಾಂಕಿನ ಅವಸ್ಥೆ, ಅನಕ್ಷರತೆ, ಭ್ರಷ್ಟಚಾರ, ಜಾತಿವ್ಯವಸ್ಥೆ, ಜೀತಪದ್ಧತಿ, ದೇವದಾಸಿ, ಭ್ರಷ್ಟ ನಾಯಕರು ಹೀಗೆ ಒಂದು ಮತ್ತೊಂದು ಸೇರಿ, ಅದಕ್ಕೆ ಇನ್ನೊಂದು ಕೂಡಿ ಹುಟ್ಟಿಕೊಂಡಿರುವ ಸಾಲು ಸಾಲು ಸಮಸ್ಯೆಗಳು ಇಡೀ ದೇಶದ ಹೀನತೆ, ಭೀರುತೆ, ಮೂರ್ಖತೆ, ಕಾಪುರುಷತೆಗಳನ್ನೆಲ್ಲಾ ಪ್ರದರ್ಶಿಸಿಬಿಡುತ್ತವೆ. 

ಅಷ್ಟಾಗಿ, ಈ ವಾಸ್ತವ ಮುಗಿದ ವಿಷಯವಲ್ಲ. ಬಡಜನರನ್ನು ಕ್ರೂರವಾಗಿ ಹಿಂಸಿಸುತ್ತಾ ನಮ್ಮ ಹಳ್ಳಿಗಳಲ್ಲಿ ಈಗಲ್ಲೂ ಜೀವಂತವಾಗಿರುವ ಕಟುಸತ್ಯ. ಮೊನ್ನೆ ಇನ್ನೊಂದು ಊರಿನಲ್ಲಿ ನಡೆದ ಘಟನೆಯನ್ನೇ ಕೇಳಿ. ನೊಬಲ್ ರಾಜನ ತಂದೆ, ಮಗಳ ಮದುವೆಗೆಂದು ಊರ ಗೌಡರಿಂದ 40 ಸಾವಿರ ಸಾಲ ಪಡೆದಿದ್ದ. ಅದೂ ಚಕ್ರ ಬಡ್ಡಿಗೆ. ಬಡ್ಡಿಗೆ ಬಡ್ಡಿ ಸೇರಿ, ಕಾಲ ಕೂಡಿ ಬೆಳೆದು ಸಾಲದ ಮೊತ್ತ ಇಮ್ಮಡಿಯಾಗಿ, ಮಳೆ, ಬಿಸಿಲು, ಚಳಿ ಎನ್ನದೆ ಕೆಲಸ ಮಾಡಿ ಬೆಳೆದ ಹತ್ತಿ ಬೆಳೆ ಸಾಲಕ್ಕೆ ಜಮವಾಗಿ, ಬರಿಕೈಯಲ್ಲಿರುವ ನೋಬಲ್ಲನ ತಂದೆ, ಮಗಳ ಕಾಲೇಜ್ ಶುಲ್ಕವನ್ನು ಭರಿಸಲು ಹರಸಾಹಸ ಪಡುತ್ತಿದ್ದಾನೆ. ಅಷ್ಟೇ ಅಲ್ಲ ವಾಸಿಸುವುದಕ್ಕೆ ಒಂದು ಸೂರು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಈ ಮನುಷ್ಯ ನೊಬಲ್ ರಾಜನ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಕಲು ನಿರ್ಧರಿಸಿ ಕುಳಿತಿದ್ದಾನೆ. ಇದೆಲ್ಲಾ ಕಂಡಾಗ, ನನಗೆ ಅನಿಸುತ್ತದೆ ನಾವೆಲ್ಲಾ ಏಕೋ ಒಂದು ದುಷ್ಟ ವರ್ತುಲದಲ್ಲಿ ಸಿಕ್ಕಿಹಾಕಿ ಕೊಂಡಿದ್ದೇವೆ ಅಂತ. ಇಂತಹ ದುಷ್ಟ ವ್ಯೂಹದಿಂದ ಹೊರಬರುವುದು ಹೇಗೆ?

ಈ ಆಲೋಚನೆಗಳ ಹಿನ್ನೆಲೆಯಲ್ಲಿ ಆ ಊರನ್ನು ಮತ್ತೊಮ್ಮೆ ಮುಖಮುಖಿಯಾದಾಗ ಇಡೀ ಊರೇ ಯಾಕವ್ವಳಂತೆ ಕಣ್ಣೀರಿಡುತ್ತಿರುವಂತೆ ಭಾಸವಾಯಿತು. ಜಾತಿವ್ಯವಸ್ಥೆಯ ದುರ್ನೀತಿಯಿಂದ ಮೂಲೆಗುಂಪಾಗಿರುವ ಈ ಊರಿನ ಜನರಲ್ಲಿ ಆತ್ಮಗೌರವ ಬಲಿಯಬೇಕಿದೆ. ಅದಕ್ಕಾಗಿ ನೂರಾರು ವರ್ಷಗಳಿಂದ ಆಚರಣೆಯಲ್ಲಿದ್ದು ಸಾವಿರಾರು ದಲಿತ ಮಹಿಳೆಯರನ್ನು ಶೋಷಿಸಿದ ದೇವದಾಸಿ ಎಂಬ ಅನಿಷ್ಟ ಪದ್ಧತಿ ಸಾವನ್ನು ಕಾಣಬೇಕಾಗಿದೆ; ಸಮಾಜದ ಸುಸಂಸ್ಕೃತ ಮನಸ್ಸು ಇವರನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇವರನ್ನು ಮುಖ್ಯವಾಹಿನಿಗೆ ಕರೆತರುವಂತಹ ಯೋಜನೆಗಳು ಸರ್ಕಾರದಿಂದ ರೂಪಿತಗೊಳ್ಳಬೇಕಾಗಿದೆ. ಬಿಕ್ಷೆ ಬೇಡುವುದನ್ನು ಬಿಟ್ಟು ಸ್ವಾಭಿಮಾನದ ರೋಷವು ಜನರನ್ನು ತುಂಬಿಕೊಳ್ಳಬೇಕಾಗಿದೆ. ಇವೆಲ್ಲಾ ಬದಲಾವಣೆಗೆ ಅತಿ ಅವಶ್ಯಕವಾಗಿರುವ ಅಕ್ಷರ ಕ್ರಾಂತಿ ಊರೆಲ್ಲ ಹರಡಿಕೊಂಡು ಊರಿನ ಜನರಿಂದ ಕ್ರಾಂತಿಗೀತೆಯ ಹಾಡನ್ನು ಬರೆಸಬೇಕಾಗಿದೆ. ಊರಿನ ಪ್ರತಿಯೊಬ್ಬರಿಗೂ ದುಡಿಮೆಗೆ ಅಲ್ಪಸ್ವಲ್ಪ ಭೂಮಿ ಖಂಡಿತ ಬೇಕಾಗಿದೆ. ಈ ಎಲ್ಲಾ ಸಮಾನತೆಯ ಬೇಡಿಕೆಗಳ ಈಡೇರಿಕೆಗೆ ಜಾಗೃತಿ, ಅರಿವು, ಪ್ರತಿಭಟನೆ, ಹೋರಾಟ ಈ ಊರಿಗೆ ತುಂಬಾ ಬೇಕಾಗಿದೆ. ಅದಕ್ಕಾಗಿ ಯಾಕವ್ವಳ ಹಾಡನ್ನು ಕೂಗಿ ಕೂಗಿ ಊರಿಗೇ ಊರು ಹಾಡಬೇಕಾಗಿದೆ; ಅದೇ ಯಾಕವ್ವ ನನ್ ಗೆಳತಿ...

*****



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...