ಭಾವನೆಗಳು ನಮ್ಮ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಾವು ಜೀವಿಸುವುದು ಈ ಭಾವನೆಗಳ ಲೋಕದಲ್ಲಿ. ಈ ಭಾವನೆಗಳ ಮೂಲಕವೇ ನಾವು ನಮ್ಮ ನೆರೆಹೊರೆಯವರೊಂದಿಗೆ ಸಂಪರ್ಕ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತೇವೆ. ಭಾವನೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಕಾರ್ಯ ನಿರ್ವಹಿಸುತ್ತವೆ. ಹೀಗೆ ನಮ್ಮ ಜೀವನವು ಸುಗಮವಾಗಿ ಸಾಗಲು ಈ ಭಾವನೆಗಳು ನಮಗೆ ಸಹಾಯ ಮಾಡುತ್ತವೆ. ಭಾವನೆಗಳಿಗೂ ಮತ್ತು ನಮಗೂ ಬಿಡಿಸಲಾರದ ಒಂದು ಸುಂದರವಾದ ಅನುಬಂಧವುಂಟು. ಭಾವನೆಗಳ ಕಣಜವೇ ನಮ್ಮ ಅಂತರಂಗದಲ್ಲಿ ಇದೆ ಎಂದು ನಮಗೆ ತಿಳಿದಿದೆ. ಆದ್ದರಿಂದಲೇ ಸಮಾಜ ನಮ್ಮನ್ನು ಭಾವನಾತ್ಮಕ ಜೀವಿ ಎಂದು ಕರೆದಿರುವುದು.
ಮಾನವರಾದ ನಾವೆಲ್ಲರೂ ಭಾವನಾತ್ಮಕ ಜೀವಿಗಳು. ಭಾವನೆಗಳ ಮೂಲಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವಿಸಬೇಕೆಂಬುದು ನಮಗೆಲ್ಲಾ ತಿಳಿದ ವಿಚಾರ. ಭಾವನೆಗಳ ಮೂಲಕ ನಮ್ಮಲ್ಲಿರುವ ನೋವನ್ನು ಮತ್ತು ನಲಿವನ್ನು ಹೊರಹಾಕಲು ಪ್ರತಿನಿತ್ಯವು ನಾವು ಪ್ರಯತ್ನಿಸುತ್ತೇವೆ. ಹೀಗಿರುವಲ್ಲಿ ಈ ಎಲ್ಲಾ ಭಾವನೆಗಳನ್ನು ನಮ್ಮಲ್ಲಿ ಇರಿಸಿಕೊಂಡು ನಾವು ಯಾವ ರೀತಿ ಅವುಗಳನ್ನು ಈ ಸಮಾಜದಲ್ಲಿ ತೋರ್ಪಡಿಸುತ್ತಿದ್ದೇವೆ ಎಂಬುದು ಚರ್ಚೆಗೊಳಪಡುವ ವಿಚಾರ ತಾನೇ!
ಪ್ರಸ್ತುತ ಸಮಾಜದಲ್ಲಿ ನೋಡುವುದಾದರೆ ನಮ್ಮಲ್ಲಿರುವ ಭಾವನೆಗಳು ಎಷ್ಟರಮಟ್ಟಿಗೆ ಕಾರ್ಯಪ್ರವೃತ್ತವಾಗಿವೆ ಎಂದು ಯೋಚಿಸಿ ನೋಡುವಾಗ ಅಲ್ಲಿ ನಮಗೆ ಕಾಣಸಿಗುವುದು ಅಹಿತಕರ ಫಲಿತಾಂಶವೇ ಹೆಚ್ಚು. ಏಕೆಂದರೆ ಭಾವನೆಗಳನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಏಕೆ ಉಪಯೋಗಿಸಬೇಕು ಎಂಬ ಅಂಶವನ್ನೇ ನಾವು ಮರೆತಂತಿದೆ. ಹಾಗೆಯೇ ಕೆಲವೊಮ್ಮೆ ನಕರಾತ್ಮಕವಾದ ಭಾವನೆಗಳನ್ನು ಸಮಾಜದಲ್ಲಿ ಉಪಯೋಗಿಸುತ್ತ, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಭಾವನಾತ್ಮಕತೆಯಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಲು ನಾವು ಮರೆಯುತ್ತಿದ್ದೇವೆ. ಇನ್ನೂ ಮುಂದುವರಿದು ನೋಡುವುದಾದರೆ ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ನಾವು ಇತರರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ತಿಳಿದಿದ್ದರೂ ಸ್ಪಂದಿಸುತ್ತಿಲ್ಲ. ಒಬ್ಬರ ಸಂತೋಷದಲ್ಲಿ ಪಾಲ್ಗೊಳ್ಳಲು ನಮಗಿರುವ ಕಾಳಜಿ ನಮ್ಮ ನೆರೆಹೊರೆಯವರು ಕಷ್ಟದಲ್ಲಿದ್ದಾಗ ಕಂಡುಬರುತ್ತಿಲ್ಲ. ಬದಲಾಗಿ ನಮ್ಮ ನಮ್ಮ ಪ್ರತಿಷ್ಠೆಯನ್ನು ಎತ್ತಿ ಹಿಡಿಯುತ್ತಾ ಪರರಿಗೂ ಮತ್ತು ಅವರ ಸಮಸ್ಯೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾ ನಮ್ಮ ಬೇಜವಾಬ್ದಾರಿಯನ್ನು ಇಡೀ ಸಮಾಜಕ್ಕೆ ತೋರಿಸುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ಭಾವನಾತ್ಮಕತೆಯನ್ನು ಬದಿಗಿಟ್ಟು ಜೀವಿಸುತ್ತಿವೆ. ಚಿಕ್ಕ ಪುಟ್ಟ ವಿಷಯಗಳಿಗೋಸ್ಕರ ಪ್ರೀತಿ ಎಂಬ ಭಾವನೆಯ ಕಗ್ಗೊಲೆ ನಡೆಯುತ್ತಿದೆ. ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಂಡು ಜೀವಿಸುವ ಬದಲು ಅವುಗಳನ್ನು ಮನಸ್ಸಿನಲ್ಲಿಯೇ ಕೊಲ್ಲುತ್ತಿದ್ದೇವೆ. ಮೊನ್ನೆ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನ್ಮರಣಕ್ಕಾಗಿ ಹೋರಾಡುತ್ತಾ ಸಹಾಯಕ್ಕಾಗಿ ಅಲ್ಲಿದ್ದವರನ್ನು ಬೇಡಿದಾಗ ಅಲ್ಲಿದ್ದ ಬುದ್ಧಿಜೀವಿಗಳೆಲ್ಲಾ ಆ ಅಪಘಾತದ ದೃಶ್ಯವನ್ನು ತಮ್ಮ ಜಂಗಮವಾಣಿಗಳಲ್ಲಿ ಸೆರೆಹಿಡಿಯುತ್ತಾ ನಿಂತರೇ ಹೊರತು ಯಾರೂ ಕೂಡ ಆ ನೊಂದ ವ್ಯಕ್ತಿಯ ಸಹಾಯಕ್ಕೆ ಸ್ಪಂದಿಸಲಿಲ್ಲ. ಮಾನವ ಮಾನವನಿಗೆ ನೆರವು ನೀಡಬೇಕು ಎಂಬ ಅಲ್ಪಜ್ಞಾನವೂ ಅವರಿಗೆ ಇಲ್ಲವಾಯಿತಲ್ಲಾ! ಪ್ರಸ್ತುತ ಈ ಸ್ಥಿತಿಯು ನಾವು ಭಾವನಾರಹಿತ ಜೀವಿಗಳಾಗುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದರೆ ತಪ್ಪಗಲಾರದು. ಅಂತೆಯೇ ಇತ್ತೀಚೆಗಷ್ಟೆ ಒಬ್ಬ ಸಾಹಿತಿಯ ಸಾವಿಗೆ ಸಂತಾಪವನ್ನು ಸೂಚಿಸುವುದನ್ನು ಬಿಟ್ಟು ಅದನ್ನು ಸಂಭ್ರಮಿಸಿದ ಕೆಲವು ವ್ಯಕ್ತಿಗಳ ಸಂಭ್ರಮದ ಪರಿಯನ್ನು ಏನೆಂದು ಹೇಳಲಿ? ಭಾವನೆಗಳಿಗೆ ಬೆಲೆ ಕೊಡಲು ಕಲಿಯುವುದೆಂದು ನಾವು?
ಈ ದುಸ್ತರ ಪರಿಸ್ಥಿತಿಗೆ ಹೊಣೆ ಯಾರು? ಎಂದು ಹುಡುಕಲು ಹೊರಟಾಗ ಅದಕ್ಕೆ ಉತ್ತರ ನಾವುಗಳೇ ಅಲ್ಲವೇ? ತುಸುಕಾಲ ಯೋಚಿಸಿ. ನಾವೆಲ್ಲರೂ ಭಾವನಾತ್ಮಕ ಜೀವಿಗಳಾಗಬೇಕಲ್ಲವೇ? ಇದು ನಮ್ಮ ಆದ್ಯ ಕರ್ತವ್ಯ. ಮುಖ್ಯವಾಗಿ ನಾವು ವಾಸಿಸುತ್ತಿರುವ ಕುಟುಂಬಗಳು ಸಕರಾತ್ಮಕ ಭಾವನೆಗಳ ಸಾಗರದಲ್ಲಿ ತೇಲಿದಾಗ ತಾನೇ ಅದು ಸಮಾಜದಲ್ಲಿ ಕಂಡುಬರುವುದು. ಇತರರ ಭಾವನೆಗಳಿಗೆ ಸ್ಪಂದಿಸುವ ಭಾವುಕ ಜೀವಿಗಳು ನಾವಾದಾಗ ಸಮಾಜವು ಶಾಂತಿಯ ವಾತಾವರಣವು ನಿರ್ಮಾಣವಾಗುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಸಂಧಿಸುತ್ತಾ ಇತರರ ಕಷ್ಟಗಳಿಗೆ ಸ್ಪಂದಿಸುವ ಭಾವನಾತ್ಮಕ ವ್ಯಕ್ತಿಗಳು ನಾವಾಗೋಣ. ಮಾನವ ಸಂಘಜೀವಿ ಎಂಬುದನ್ನು ಮರೆಯದಿರೋಣ. ಸಕರಾತ್ಮಕ ಭಾವನೆಗಳ ಬೆನ್ನುಹತ್ತಿ ಆ ಮನೋಭಾವನೆಯನ್ನು ಸಮಾಜದಲ್ಲಿ ಹುಟ್ಟುಹಾಕಿ ಭಾವನೆಗಳಿಗೆ ಬೆಲೆ ಕೊಡುವ ಮನುಜರು ನಾವು ಎಂಬುದನ್ನು ಸಾಬೀತುಪಡಿಸೋಣ. ಕೊನೆಯದಾಗಿ ಧರ್ಮ ಮೀರಿದ ಮಾನವೀಯತೆ ನಮ್ಮ ಭಾವನೆಗಳಲ್ಲಿ ಎದ್ದು ಕಾಣುತ್ತಾ ನಮ್ಮ ತನುಮನಗಳು ಭಾವನಾತ್ಮಕತೆಯಿಂದ ತುಂಬಿ ಭಾವನೆಗಳ ಬಾಂಧವ್ಯವನ್ನು ಎಲ್ಲೆಡೆ ಪಸರಿಸುವಂತಾಗಲಿ ಎಂಬುದೇ ನನ್ನ ಆಶಯ.
*****
No comments:
Post a Comment