Friday, 12 July 2019

ನೆಲದ ಬನಿಯಲ್ಲಿ ಮಿಂದೆದ್ದ ‘ಏಸು ಸ್ವಾಮಿಯ ಕಥೆ’ - ಫ್ರಾನ್ಸಿಸ್ ನಂದಗಾಂವ 


‘... ಈ ಪ್ರಕಾರವಾಗಿ ಪ್ರಕಾಶಮಾನವಾದ ದೇವತೆಗಳ ಗುಂಪು ಕಾಣಿಸಲು, ಈತನು ನಿಜವಾಗಿಯೂ ದೇವದೂತನೆಂದು ತಿಳಿದು ಕುರುಬರು, ದೇವದೂತನನ್ನು ಕುರಿತು ಜ್ಞಾನಿಯು ಎಲ್ಲಿ ಜನಿಸಿರುವನು, ನಾವು ಅಲ್ಲಿಗೆ ಹೋಗಿ ಆತನನ್ನು ಕಾಣುವೆವು ಎನ್ನಲು ದೇವದೂತನು ಏನೆಂದು ಹೇಳುತ್ತಿರ್ದಾರದೆಂತೆನೆ:

ಭೈರವಿ ರಾಗ || ಜಂಪೆ ತಾಳ ||

ಕೇಳಿರಿ ನೀವು | ಕುರುಬರೆ ಈಗ |

ಪೇಳುವೆನು ನಾನು || ಪಲ್ಲವಿ ||

ಕುರುಬರೆ ಕೇಳಿರಿ | ಪರಿಯನೆಲ್ಲವನೀಗ |
ಪರಮಾತ್ಮ ಬರುವಂತ | ಪರಿಯ ಪೇಳುವೆ ನಾನು ||
ಕೇಳಿರಿ ನೀವು || 1 ||


ಮರಿಯಮ್ಮನೆಂಬುವ | ಪರಮ ಪತಿವ್ರತೆಯ |
ನರಗರ್ಭದಲಿ ಜನಿಸಿ | ಇರುತಿಹನಾತನು |
ಕೇಳಿರಿ ನೀವು || 2 ||


ತಾರಾ ಮಂಡಲದೊಳಗೆ | ಸೇರಿ ಚುಕ್ಕೆಯು ತಾನು |
ಮೀರಿದ ಕಳೆಯಿಂದ | ಸಾರಿ ಬೆಳಗುತಲಿಹುದು |
ಕೇಳಿರಿ ನೀವು || 3 ||


ಜೆರುಸಲೇಮಿಗೆ ತಾನು | ಅರಸನಾಗುವ ಮುಂದೆ |
ಹರುಷದಿಂದಲಿ ಕೇಳಿ | ಬರೆದಿಹೆ ವಿವರವಾ |
ಕೇಳಿರಿ ನೀವು || 4 ||



ಯಾಲಪದ
ಗುಡಿಯ ಗೋಪುರ ಕಟ್ಟಬೇಕು | ದೃಢದಿಂದ ನಡೆಯಬೇಕು |
ಬಿಡದೇ ಬಡವರ ಕಾಯಬೇಕಿನ್ನು | ಓ ಜನರೇ ಕೇಳಿ |
ಬಿಡಬೇಕು ನೀವು ಕೆಡಕು ಕಾರ್ಯಗಳ || 1 ||


ತಾನು ಯಾರು ಎಂದು ಅರಿತು | ಮನ್ನಣೆಯು ಇರಲು ಬೇಕು |
ಇನ್ನು ಕ್ಷಮೆಯು ಶಾಂತಿಯು ಇರಬೇಕು | ಓ ಜನರೇ ಕೇಳಿ |
ತಾನು ಎಂಬುವ ಮದವ ಬಿಡಬೇಕು || 2 ||


ಎಲ್ಲರೊಳಗೆ ಒಬ್ಬನಿರುವ | ಎಲ್ಲದಕ್ಕೂ ತಾನೆ ಕರ್ತ |
ಬಲ್ಲ ಗುರುವಿನೊಳಗೆ ತಿಳಿಯಿರಿ | ಓ ಜನರೇ ಕೇಳಿ |
ಬಲ್ಲ ಗುರುವಿನಲ್ಲಿ ತಿಳಿಯಿರಿ || 3 ||

ಈ ವಿವರಣೆಯ ಮಾತು, ಹಾಡುಗಳನ್ನು ಗಮನಿಸಿದರೆ ಇದು ಕ್ರೈಸ್ತ ಮತದ ಮೂಲ ಪುರುಷ ಸ್ವಾಮಿ ಯೇಸುಕ್ರಿಸ್ತನ ನೆನಪು ತರಿಸುತ್ತದೆ. ಹೌದು ಇದನ್ನು, ‘ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಮೂಡಲಪಾಯ ಯಕ್ಷಗಾನ ಏಸು ಸ್ವಾಮಿಯ ಕಥೆ’ ಹೆಸರಿನ ಹೊತ್ತಿಗೆಯಿಂದ ಉದ್ಧರಿಸಲಾಗಿದೆ.

ಮೂಡಲಪಾಯ ಯಕ್ಷಗಾನ ಕವಿ ಎಚ್. ಎಸ್ . ಸುಬ್ಬರಾಯಪ್ಪ (1923- 1997) ಅವರು 1986ರಲ್ಲಿ ರಚಿಸಿರುವ ಈ ‘ಏಸು ಸ್ವಾಮಿಯ ಕಥೆ’ ಮೂಡಲಪಾಯ ಯಕ್ಷಗಾನವನ್ನು, ಹೆಸರುವಾಸಿ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅವರು ಸಂಪಾದಿಸಿ, 2012ರಲ್ಲಿ ಬೆಂಗಳೂರಿನ ಸಾಗರ್ ಪ್ರಕಾಶನ ಸಂಸ್ಥೆಯ ಮೂಲಕ ಬೆಳಕಿಗೆ ತಂದಿದ್ದಾರೆ.

ಕ್ರೈಸ್ತರ ಪೂಜ್ಯ ಶ್ರೀಗ್ರಂಥ ಬೈಬಲ್ನ ಹೊಸ ಒಡಂಬಡಿಕೆಯಲ್ಲಿನ ನಾಲ್ಕು ಶುಭಸಂದೇಶಗಳಲ್ಲಿ ಯೇಸುಸ್ವಾಮಿಯ ಬೋಧನೆಗಳನ್ನು ಹಾಗೂ ಅವನ ಜೀವನ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಯೊವಾನ್ನ, ಮತ್ತಾಯ, ಮಾರ್ಕ ಮತ್ತು ಲೂಕರು ಬರೆದಿರುವ ಈ ಶುಭಸಂದೇಶಗಳಲ್ಲಿ, ಮತ್ತಾಯನು ಬರೆದ ಶುಭಸಂದೇಶವನ್ನು ಆಧರಿಸಿ ಈ ಹಿರೇಬಳ್ಳಾಪುರದ ಸುಬ್ಬರಾಯಪ್ಪನವರು (ಮೂಡಲಪಾಯ ಯಕ್ಷಗಾನ) ‘ಏಸು ಸ್ವಾಮಿಯ ಕಥೆ’ಯನ್ನು ರಚಿಸಿದ್ದಾರೆ.

ಈ ನೆಲಮೂಲದ ಜಾಯಮಾನದಂತೆ, ದಕ್ಷಿಣ ಮತ್ತು ಉತ್ತರ ಕರ್ನಾಟಕದ ಬಯಲಾಟ (ಮೂಡಲಪಾಯ ಯಕ್ಷಗಾನ)ದ ಸಂಪ್ರದಾಯದಂತೆ, ಈ ಆಟದ ಪ್ರಾರಂಭದಲ್ಲಿ ಶ್ರೀ ವಿಘ್ನೇಶ್ವರ ಅಂದರೆ ವಿಘ್ನ ನಿವಾರಕ, ಸಂಕಷ್ಟಗಳ ನಿವಾರಕ, ಸಂಕಷ್ಟಹರ ಗಣಪತಿಯನ್ನು ಹಾಗೂ ವಿದ್ಯಾಧಿದೇವತೆ ಸರಸ್ವತಿ- ಶಾರದೆಯನ್ನು ಸ್ತುತಿಸಲಾಗಿದೆ. ಈ ಬಗೆಯ ಆಟದ ಸಂಪ್ರದಾಯದಂತೆ ರಚನಕಾರ ಸುಬ್ಬರಾಯಪ್ಪ ಅವರ ಇಷ್ಟದೇವತೆ ದೊಡ್ಡಬಳ್ಳಾಪುರದ ಅಧಿದೇವತೆ ಶ್ರೀ ಸೋಮನಾಥ ದೇವರನ್ನು ನಂತರ ಸದ್ಗುರು ವರನನ್ನು ಸ್ತುತಿಸಲಾಗಿದೆ. ಇಷ್ಟಾದ ನಂತರ ಸಭೆಯ ಜನರನ್ನು ಉದ್ದೇಶಿಸಿ ಮಾತನಾಡುವ ಭಾಗವತ/ಸೂತ್ರಧಾರ/ ಆಟದ ಮಾಸ್ತರು, ಕಪ್ಪುಗೊರಳ(ಶಿವ)ನ ಕರುಣದಿಂದೊರೆವ ಆಟದಲ್ಲಿನ ತಪ್ಪುಗಳನ್ನು ಮನ್ನಿಸುವಂತೆ ಕೋರಿದ ನಂತರ ‘ಏಸು ಸ್ವಾಮಿಯ ಕಥೆ’ ಆರಂಭವಾಗುತ್ತದೆ.

ದೇವಸಭೆಯಲ್ಲಿ ಧರಣಿದೇವಿಯ ಪ್ರಾರ್ಥನೆ:

‘ಪರಮಾತ್ಮ ನೆನೆಸುವ ಯೋಗಪುರುಷ’ನೆಂದು ಗುರುತಿಸಲಾಗುವ ಸರ್ವೇಶ್ವರನ ದೇವ ಕುಲದವರ ಮಹತ್ತರ ದೇವಸಭೆಯಲ್ಲಿ - ಸಮಸ್ತ ದೇವತೆಯರಿಂದೊಡಗೂಡಿದ ಆಸ್ಥಾನದಲ್ಲಿ, ಸರ್ವೇಶ್ವರ ಪರಮಾತ್ಮನು ಭೂಲೋಕದಲ್ಲಿ ಅನ್ಯಾಯ ಅಧರ್ಮಕ್ಕೆ ಎಡೆಗೊಡದೆ ಸತ್ಯಶೀಲರಾಗಿ ಸುಖಿಪರೆ ಎಂದು ವಿಚಾರಿಸುತ್ತಾನೆ. ಆಗ ಭೂದೇವಿ, ಭೂಲೋಕದಲ್ಲಿ ಅನ್ಯಾಯ ಅಧರ್ಮದಲ್ಲಿ ಓಲಾಡುವ ಜನರ ಭಾರವನ್ನು ತಾಳಲಾರೆನು ಎಂದು ಅಲವತ್ತುಕೊಳ್ಳುತ್ತಾಳೆ. ನಂತರ ‘ಹೇ ಸ್ವಾಮಿ ತಾವು ಭೂಲೋಕದಲ್ಲಿ ಅವತರಿಸಿ, ಪರಮ ಪಾಪಿಗಳ ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನ ಮಾರ್ಗವನ್ನು ಬೋಧಿಸಿ, ಭೂ ಹೊರೆಯನ್ನು ಇಳಿಸಿ ಕಾಪಾಡಬೇಕು’ ಎಂದು ಪ್ರಾರ್ಥಿಸುತ್ತಾಳೆ.

ಅದಕ್ಕೆ ಪರಮಾತ್ಮನು, ‘ದುಃಖಿಸದಿರು ಹೇ ಧರಣೀ ದೇವಿ, ನಿರಾಕಾರಿಯಾದ ನಾನು ಆಕಾರವನ್ನು ಧರಿಸಿ, ಪರಮ ಪಾಪಿಗಳ ಅಜ್ಞಾನವನ್ನು ತಪ್ಪಿಸಿ, ಜ್ಞಾನ ಮಾರ್ಗವನ್ನು ಬೋಧಿಸಲು ಮೇರಿಯಮ್ಮ ಎಂಬ ಕನ್ಯೆಯ ಗರ್ಭದಲ್ಲಿ ಯೇಸುದೇವನೆಂಬ ನಾಮಾಂಕಿತದಿಂದ ಭೂಲೋಕದಲ್ಲಿ ಅವತರಿಸುವೆನು’ ಎಂದು ಅಭಯ ನೀಡುತ್ತಾನೆ.

ಮುಂದೆ, ‘ನಾನು ಭೂಲೋಕದಲ್ಲಿ ಅವತರಿಸುವುದನ್ನು ಓರ್ವ ದೂತನೊಡನೆ ಹೇಳಿ ಕಳುಹಿಸುವೆನೆಂದು ಹೇಳಿ, ಓರ್ವ ದೂತನನ್ನು ನಿರ್ಮಿಸಿ, ಓ ದೇವದೂತ ನೀನು ಭೂಲೋಕಕ್ಕೆ ಹೋಗಿ ಪರಮಾತ್ಮನು ಅವತರಿಸುವನೆಂದು ಜ್ಞಾನಿಗಳೊಡನೆ ಪೇಳು’ ಎಂಬುದಾಗಿ ಹೇಳುತ್ತಾನೆ. ಅದರಂತೆ ದೇವದೂತನು ಭೂಮಿಗೆ ಬಂದು, ಅಹಜಾ ರಾಜನ ಅರಮನೆಯಲ್ಲಿ ಆತನನ್ನು ಕಂಡು,

ಹರಿಕಾಂಬೋಧಿ ರಾಗ || ತ್ರಿಪುಡೆ ||


‘ಕೇಳು ಅಹಜಾ ರಾಜ ತೇಜನೆ |
ಪೇಳುವೆನು ನಾ ವಿವರವೆಲ್ಲವ |
ಇಳೆಗೆ ಬರುವನು ದೇವ ದೇವನು | ಕೇಳು ನೀನೀಗ || 1 ||

ಜ್ಞಾನವಿಲ್ಲದ ಮನುಜರಿಗೆ ತಾ |
ಜ್ಞಾನ ಮಾರ್ಗವ ಬೋಧಿಸುವನು |
ಸ್ವಾನುಭವ ಜ್ಞಾನ ಮಾರ್ಗವ | ತಾ ಹೇಳುವನು || 2 ||
ತಿಳಿಸುತ್ತಾನೆ.

ಗುರುವಿಗೊಬ್ಬ ಗುರು ಯೋಹಾನ:

ಮುಂದೆ ಆ ದೂತನು, ‘ಅಹಜಾ ರಾಜನೆ ಕೇಳು ನಿನ್ನ ಸರಿಸಮಾನನಾದ ಯಶೋಫನೆಂಬ ಪರಮಭಕ್ತನಿರುವನು. ಆತನು ಮೇರಿ ಎಂಬ ಕನ್ಯೆಯನ್ನು ವಿವಾಹವಾಗಲು ನಿಶ್ಚಿತಾರ್ಥ ಮಾಡಿಕೊಂಡಿರುವ. ಆಕೆಯ ಗರ್ಭದಲ್ಲಿ ಪರಮಾತ್ಮನು ಜನಿಸುವನು, ಆಕೆಯು ಗರ್ಭ ಧರಿಸಿ ಮೂರು ಮಾಸವಾಗಿರುವುದು. ಆಕೆಯ ವಿಷಯದಲ್ಲಿ ಸಂಶಯ ಪಡುತ್ತಿರುವರು. ಆದ್ದರಿಂದ ಅಲ್ಲಿಗೆ ಹೋಗಿ ಸಂಶಯವನ್ನು ಪರಿಹರಿಸಿ ಇಬ್ಬರಿಗೂ ವಿವಾಹವಾಗುವಂತೆ ಒಪ್ಪಿಸಿ ಬರಲು ಹೋಗುತ್ತೇನೆ’ ಎಂದು ಹೊರಡುತ್ತಾನೆ.

ಯಶೋಪನಿಗೆ ವಿವರ ತಿಳಿಸಿದ ದೇವದೂತನು ನಂತರ ಪುತ್ರ ಸಂತಾನವಿಲ್ಲದೆ ವ್ಯಾಕುಲ ಪಡುತ್ತಿರುವ ಜಕರಿಯ ಮತ್ತು ಎಲಜಬೆತ್ತರಾಣಿ ದಂಪತಿಗಳಲ್ಲಿಗೆ ತೆರಳಿ, ‘ನೀವು ಪರಮಾತ್ಮನನ್ನು ಭಕ್ತಿಯಿಂದ ಪೂಜಿಸಿದರೆ, ನಿಮಗೆ ಪರಮ ಜ್ಞಾನಿಯಾದ ಪುತ್ರನು ಜನಿಸುವನು’ ಎಂದು ತಿಳಿಸುತ್ತಾನೆ. ಇಷ್ಟಾದ ಮೇಲೆ, ತರುಣಿ ಮರಿಯಮ್ಮಳ ಗರ್ಭದಲ್ಲಿ ಪರಮಾತ್ಮನು ಸೇರಿರುವನು. ಪುರುಷರ ಮುಖವನ್ನು ಸಹ ನೋಡದ ತನಗೇಕೆ ಈ ಬಾಧೆಯು ಎಂದು ಮನದಲ್ಲಿ ಆಕೆ ಕೊರಗುತ್ತಿರುವಳು. ಅವಳಿಗೆ ವಿಷಯ ತಿಳಿಸುವೆನೆಂದು ಅಲ್ಲಿಗೆ ತೆರಳುವ ದೇವದೂತ, ‘ವ್ಯಸನವ ಬಿಡು, ಪರಮಾತ್ಮನು ಈ ಲೋಕದಲ್ಲಿ ಜನರಿಗೆ ಜ್ಞಾನವನ್ನು ಬೋಧಿಸಲು ನಿನಗೆ ಸುತನಾಗಿ ಜನಿಸುವನು. ಇದನ್ನು ನಿನ್ನ ಪತಿಯಾಗಲಿರುವ ಯಶೋಫನಿಗೂ ತಿಳಿಸಿದ್ದೇನೆ’ ಎನ್ನುತ್ತಾನೆ. ತದನಂತರ, ‘ಜಕರಿಯ ಮತ್ತು ಎಲಜಬೆತ್ತರಾಣಿಯ ಜ್ಞಾನಿ ಮಗನು ನಿನ್ನ ಸುತನಿಗೆ ದೀಕ್ಷೆ ಬೋಧಿಸುವನು ಅದನ್ನು ಅವರಿಗೆ ತಿಳಿಸು’ ಎಂದ ದೇವದೂತ ಕುರುಬರಿಗೆ ಏಸು ಜನನವನ್ನು ತಿಳಿಸಬೇಕೆಂದು ಹೊರಡುತ್ತಾನೆ.

ಇತ್ತ ಮರಿಯಮ್ಮ, ಜಕರಿಯ ಎಲಜಬೆತ್ತರಾಣಿ ದಂಪತಿಯನ್ನು ಕಂಡು, ‘ನಿಮ್ಮ ಮಗನು ಗುರುವಿಗೆ ಗುರುವಾಗುವನು’ ಎನ್ನುತ್ತಾಳೆ. ನವ ಮಾಸಗಳು ತುಂಬಿ ಎಲಜಬೆತ್ತರಾಣಿಗೆ ಶುಭ ಮಹೂರ್ತದಲ್ಲಿ ಪುತ್ರನ ಜನನವಾಗುತ್ತದೆ. ಹತ್ತನೇ ದಿನದಲ್ಲಿ ಕೂಸಿಗೆ ಪುರೋಹಿತರು ಯೋಹಾನನೆಂದು ನಾಮಕರಣ ಮಾಡುತ್ತಾರೆ. ಅತ್ತ ತರುಣಿ ಮರಿಯಮ್ಮಳಿಗೆ ನವಮಾಸ ತುಂಬಿ ಸೂರ್ಯಚಂದ್ರರ ಕಳೆಯುಳ್ಳ ಸುತನು ಜನಿಸುತ್ತಾನೆ. ಆ ಕಾಲದಲ್ಲಿ ಆಕಾಶದಲ್ಲಿ ಪ್ರಕಾಶಮಾನವಾದ ಒಂದು ನಕ್ಷತ್ರವುಂಟಾಗಿ ಪುಷ್ಪವೃಷ್ಟಿಯಾಗುತ್ತದೆ. ದೇವದೂತನು ಕುರುಬರಿಗೆ ಏಸು ಜನಿಸಿ ಬರುವನೆಂದು ಹೇಳುವಷ್ಟರಲ್ಲಿ ದೇವತೆಗಳ ಗುಂಪು ಕಾಣಿಸುತ್ತದೆ.

ದೇವದೂತನು ಕುರುಬರಿಗೆ, ‘ಹೇ ಕುರುಬರಿರಾ, ಬೆತ್ಲೆಹೇಮಿನಲ್ಲಿ ಮರಿಯಮ್ಮ ಎಂಬುವ ಪರಮ ಪತಿವ್ರತೆಯ ಗರ್ಭದಲ್ಲಿ ಯಹೂದ್ಯರ ಕುಲದಲ್ಲಿ ಪರಮಾತ್ಮನು ಜನಿಸಿರುವನು. ಅಜ್ಞಾನಿಗಳಿಗೆ ಜ್ಞಾನ ಬೋಧಿಸುವನು. ಆತನು ಹುಟ್ಟಿದ ಸ್ಥಳದಲ್ಲಿ ಪ್ರಕಾಶಮಾನವಾದ ಒಂದು ನಕ್ಷತ್ರವು ಹೊಳೆಯುತ್ತಿರುವುದು ನೋಡಿರಿ’ ಎಂದು ತಿಳಿಸುತ್ತಾನೆ.

ಕುರುಬರು ತಾರಾಮಂಡಲದಲ್ಲಿ ಪ್ರಕಾಶಿಸುವ ನಕ್ಷತ್ರದ ಗುರುತನ್ನು ಹಿಡಿದು ಬೆತ್ಲೆಹೇಮಿಗೆ ಬಂದು ಗೋದಲಿಯಲ್ಲಿದ್ದ ಮಗುವನ್ನು ಕಾಣುತ್ತಾರೆ.

ಸಾರಂಗ ರಾಗ || ಜಂಪೆ ತಾಳ ||
ಪರಮ ಪತಿವ್ರತೆ ನೀನು | ಪರಮಾತ್ಮನು ನಿನಗೆ |
ವರಸುತನು ತಾನಾಗಿ | ಜನಿಸಿ ಇರುತಿಹನು || 1 ||

ಈ ರೀತಿಯಾಗಿ ಹಾಡುತ್ತಾ ಶಿಶುವಿಗೆ ವಂದಿಸಿ, ಅವರಿಗೆ ನಮಿಸಿದ ಕುರುಬರನ್ನು ಮರಿಯಮ್ಮ ಮತ್ತು ಯಶೋಫರು ಆಶೀರ್ವದಿಸಿ ಕಳುಹಿಸುತ್ತಾರೆ. ತಮ್ಮ ಮಗುವಿಗೆ ಏಸು ಎಂದು ನಾಮಕರಣ ಮಾಡುತ್ತಾರೆ. ಮೂಡಣ ದೇಶದಲ್ಲಿ ಜೋಯಿಸರು ತಾರಾ ಮಂಡಲದಲ್ಲಿ ಒಂದು ನಕ್ಷತ್ರವು ಪ್ರಕಾಶಿಸುವುದನ್ನು ಕಂಡು, ‘ಅದು ಎಲ್ಲಿ ನಿಲ್ಲುವುದೋ ಅಲ್ಲಿ ಪರಮಾತ್ಮನು ಜನಿಸಿರುವನೆಂದು ಅರಿತು, ಆತನಿಂದ ಸ್ವಾನುಭವ ಜ್ಞಾನವನ್ನು ತಿಳಿಯೋಣ ನಡೆಯಿರಿ’ ಎಂದು ಹೊರಡುತ್ತಾರೆ. ಯರೋದ(ಹೆರೋದ)ನ ರಾಜ್ಯದಲ್ಲಿ ನಕ್ಷತ್ರವು ನಿಂತಾಗ, ಜೆರುಸಲೇಮಿನಲ್ಲಿ ಅರಸನನ್ನು ಭೇಟಿ ಮಾಡಿ, ‘ನಕ್ಷತ್ರವು ನಿನ್ನ ರಾಜ್ಯದಲ್ಲಿ ಚಲಿಸದೇ ನಿಂತಿದೆ. ಈ ನಿನ್ನ ರಾಜ್ಯಕ್ಕೆ ಅರಸನಾಗುವ ಮತ್ತು ಸ್ವಾನುಭವ ಬೋಧಿಸುವ ಪರಮಾತ್ಮನು ಜನಿಸಿರುವನೆಂದು ತಿಳಿಸುತ್ತಾರೆ. ಮನಸ್ಸಿನಲ್ಲಿ ಕಳವಳ ಮೂಡಿದರೂ, ಯರೋದನು ನೀವು ಹುಡುಕುತ್ತಿರುವ ಶಿಶುವು ‘ಅದು ಸಿಕ್ಕಿದ ಮೇಲೆ ತಿಳಿಸಿ, ನಾನು ಬಂದು ಅದಕ್ಕೆ ಅಡ್ಡಬಿದ್ದು ವಂದಿಸಬೇಕು’ ಎಂದು ಸಾಗಹಾಕುತ್ತಾನೆ. ನಕ್ಷತ್ರವು ಬೆತ್ಲೆಹೇಮಿನಲ್ಲಿ ಚಲಿಸದೆ ನಿಲ್ಲಲು ಜೋಯಿಸರು, ಗೋದಲಿಯಲ್ಲಿದ್ದ ಶಿಶುವನ್ನು ಕಂಡು,

ಶಂಕರಾಭರಣ ರಾಗ || ಮಟ್ಟ ತಾಳ ||
ನಮಿಪೆವು ಏಸುಗೆ | ನಮಿಪೆವು ಗುರುವಿಗೆ |
ನಮಿಪೆವು ಶ್ರೀ ಪರ | ಮಾತ್ಮನಿಗೆ ||

ನಮಿಪೆವು ಜಗದೋ | ದ್ಧಾರಗೆ ಧೀರಗೆ |
ನಮಿಪೆವು ಜ್ಞಾನವ | ಬೋಧಿಪಗೆ ||
ಎಂದು ಪ್ರಾರ್ಥಿಸಿ ತಮ್ಮ ಗಂಟುಗಳನ್ನು ಬಿಚ್ಚಿ ಚಿನ್ನ, ಧೂಪ, ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. (ರಕ್ತಬೋಳ ಎಂಬುದು ಔಷಧಿ ಹಾಗೂ ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸುವ ಒಂದು ಅಪರೂಪದ ಮರದ ಲೋಳೆ)

ಕನಸಿನಲ್ಲಿ ಕಾಣಿಸಿಕೊಂಡ ದೇವರು ಜೋಯಿಸರಿಗೆ, ನೀವು ಹೆರೋದನ ಬಳಿಗೆ ಹೋಗಬಾರದೆಂದು ಅಪ್ಪಣೆ ಕೊಡುತ್ತಾರೆ. ಅತ್ತ ಕರ್ತನ ದೂತನು ಯಶೋಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ‘ನೀನು ಎದ್ದು ಈ ಕೂಸನ್ನು, ಇದರ ತಾಯಿಯನ್ನು ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗಿ, ನಾನು ಹೇಳುವ ತನಕ ಅಲ್ಲಿಯೇ ಇರು. ದುರುಳ ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಹುಡುಕುತ್ತಿರುವನು’ ಎಂದು ಹೇಳಿ ಅವರನ್ನು ಐಗುಪ್ತ ದೇಶಕ್ಕೆ ಹೊರಡಿಸುತ್ತಾರೆ.

ನಾವು ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ:

ಜೋಯಿಸರು ಬಾರದಿರುವುದರಿಂದ ಆತಂಕಪಟ್ಟ ಹೆರೋದ, ಜೋಯಿಸರು ತಿಳಿದುಕೊಂಡ ಕಾಲಕ್ಕೆ ಸರಿಯಾಗಿ ಬೆತ್ಲೆಹೇಮಿನಲ್ಲಿ ಮತ್ತು ನೆರೆಹೊರೆಯ ಹಳ್ಳಿಗಳಲ್ಲಿ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನು ವಧಿಸುತ್ತಾನೆ. ಹೆರೋದನು ತೀರಿದ ನಂತರ ದೇವದೂತನ ಆಣತಿಯಂತೆ ಯಶೋಫ, ಮಡದಿ ಮಕ್ಕಳೊಂದಿಗೆ ಇಸ್ರಾಯೇಲ್ ದೇಶಕ್ಕೆ ಹಿಂದಿರುಗಿ ನಜರೇತಿನಲ್ಲಿ ಬಡಗಿ ಕೆಲಸಮಾಡುತ್ತಾ ನೆಲೆಸುತ್ತಾನೆ.

ಅತ್ತ ಜಕರಿಯಾ ಮತ್ತು ಎಲಿಜಬೆತ್ತರಾಣಿಯ ಪುತ್ರ ಯೋಹಾನನು, ಪ್ರಾಣಿಹಿಂಸೆ ಕೂಡದು, ಕಪಟಮೋಸ ತ್ಯಜಿಸಬೇಕು, ದೀನರಲ್ಲಿ ದಯೆ ತೋರಿ, ದಾನಧರ್ಮ ಮಾಡಿ, ಗುರುಹಿರಿಯರನ್ನು ಮಾತಾಪಿತರನ್ನು ಗೌರವಿಸಬೇಕೆನ್ನುತ್ತಾ ಧರ್ಮಸೂಕ್ಷ್ಮವನ್ನು ತಿಳಿಸುತ್ತಾ, ಪರಮಾತ್ಮ ಸ್ವರೂಪನಾದ ದೇವದೇವನು ಏಸುವೆಂಬ ನಾಮಾಭಿದಾನದಿಂದ ಭೂಲೋಕದಲ್ಲಿ ಜನಿಸಿರುವನು, ಅಜ್ಞಾನಿಗಳಿಗೆಲ್ಲಾ ಜ್ಞಾನ ಬೋಧಿಸುವನೆಂದು ಸಾರುತ್ತಿರುತ್ತಾನೆ. ಜನರು ಅವನಿರುವಲ್ಲಿಗೆ ಬಂದು, ‘ಪರಮ ಗುರುವೆ, ಅರಿಯದೇ ಮಾಡಿದ ಪಾಪಗಳನ್ನು ಮನ್ನಿಸುವಂತೆ ದೀಕ್ಷಾಸ್ನಾನ ಮಾಡಿಸಬೇಕು’ ಎಂದು ಕೋರಿದವರಿಗೆಲ್ಲಾ ದೀಕ್ಷಾಸ್ನಾನ ಮಾಡಿಸುತ್ತಿರುತ್ತಾನೆ. ಒಂದು ದಿನ ಏಸುವೂ ಅಲ್ಲಿಗೆ ಬಂದು ನಿಲ್ಲುತ್ತಾನೆ. ಆಗ ಯೋಹಾನನು, ‘ನೀನು ನನ್ನ ಬಳಿಗೆ ಬರುವುದೇನು?’ ಎಂದಾಗ, ‘ನಾವು ಎಲ್ಲಾ ಧರ್ಮವನ್ನು (ಪ್ರವಾದನೆಯನ್ನು) ನೆರವೇರಿಸತಕ್ಕದ್ದಾಗಿದೆ’ ಎಂದು ಸಮಾಧಾನಿಸುತ್ತಾನೆ.

‘ಎಲೈ ಏಸುದೇವನೆ, ಪದ್ಮಾಸನದಲ್ಲಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಶತ್ರುಗಳನ್ನು ಗೆದ್ದು, ತುಳಿದು ಜಾತಿ ಭೇದವಾದಗಳೆಂಬ ಭೇದವಂ ಬಿಟ್ಟು, ಎಲ್ಲರಲ್ಲಿಯೂ ಸರ್ವಾತ್ಮನಾದ ಪರಮಾತ್ಮನೊಬ್ಬನೇ ಇರುವನೆಂದು, ಸರ್ವರಲ್ಲಿಯೂ ಸಾಕ್ಷಿಕನಾದ ಸರ್ವೋತ್ತಮನಿಗೆ, ನಾಮರೂಪ ಭೇದಗಳಿಲ್ಲವೆಂದು ನಿರ್ವಿಕಾರ, ನಿರ್ಮೋಹ, ನಿರ್ಗುಣ, ನಿರಂಜನನೆಂದು ಏಕೋಮನಶ್ಚಿತ್ತ ಭಾವದಿಂದಿರುವುದೇ ದೀಕ್ಷಾಸ್ನಾನ’ ಎಂದು ನುಡಿದು ಯೋಹಾನ ದೀಕ್ಷಾಸ್ನಾನವನ್ನು ನೆರವೇರಿಸುತ್ತಾನೆ.

ಗುರುಮುಖೇನ ಬಂದ ವಿದ್ಯೆ, ಜ್ಞಾನವನ್ನು ಬೋಧಿಸುತ್ತಾ ಸಾಗಿರಲು ಸೈತಾನನು ದೇವ ಮಾರ್ಗವ ಬಿಟ್ಟು, ನನ್ನಂತೆ ನಡೆದರೆ, ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕೊಡುವೆನೆಂದು ಒಡ್ಡಿದ ಆಮಿಷವನ್ನು ತಿರಸ್ಕರಿಸುವ ಏಸು, ಬೆಸ್ತರಿಗೆ ‘ಮಾನವರಾಗಿ ಹುಟ್ಟಿದ ಮೇಲೆ ಎಲ್ಲರ ದೇಹದಲ್ಲಿಯೂ ಒಬ್ಬನಿರುವನಲ್ಲದೇ ಮತ್ತೆ ಬೇರಿಲ್ಲಾ, ಇದೇ ಪರಮಾತ್ಮನ ಪರಿ, ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆ’ ಎಂದಾಗ, ಸೀಮೋನ, ಅವನ ತಮ್ಮ ಅಂದ್ರೇಯ, ನಂತರ ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನರು ಅವನ ಪ್ರಥಮ ಶಿಷರಾಗುತ್ತಾರೆ.

ಗುರು ಜ್ಞಾನಸ್ನಾನಿ ಯೋಹಾನನು ಹೆರೋದನ ಬಳಿಗೆ ಬಂದು, ಅಣ್ಣನ ಹೆಂಡತಿಯನ್ನು ಮದುವೆಯಾದ ಅವನ ಅನಾಚಾರವನ್ನು ಹೀಗಳೆಯುತ್ತಾನೆ. ಸಿಟ್ಟಿಗೇಳುವ ಹೆರೋದ ಅವನನ್ನು ಜೈಲಿಗಟ್ಟುತ್ತಾನೆ. ಹೆರೋಧನ ಹೆಂಡತಿ ಪ್ರಲಾಪಿಸಲು, ಅವಳ ದುಃಖಕ್ಕೆ ಕಾರಣನಾದ ಯೋಹಾನನ ಶಿರವನ್ನು ತಂದು ಅವಳ ಮುಂದೆ ಇರಿಸುವುದಾಗಿ ಅವಳ ಮಗಳು ಪಣತೊಡುತ್ತಾಳೆ. ಮಲತಂದೆ ಚಿಕ್ಕ ತಂದೆಯ ಬಳಿಬಂದು, ನಾಟ್ಯವಾಡಿ ಅವನ ಮನಗೆದ್ದು ಯೋಹಾನನ ಶಿರವನ್ನು ವರವಾಗಿ ಪಡೆಯುತ್ತಾಳೆ.

ದೀಕ್ಷಾಸ್ನಾನಿ ಯೋವಾನ್ನನ ಶಿಷ್ಯರು, ಯೋವಾನ್ನನ ಶವವನ್ನು ಏಸುವಿನ ಬಳಿ ಹೊತ್ತು ತರುತ್ತಾರೆ. ಪರಾತ್ಪರ ಪರಮಾತ್ಮ ಪರಮಪುರುಷ, ಸರ್ವೇಶ, ಸರ್ವಾತ್ಮ, ನಿರ್ವಿಕಾರವೆಂದು ಎಲ್ಲರೂ ಜಯಕಾರ ಹೇಳಿ ಶವವನ್ನು ದಹನ ಸಂಸ್ಕಾರಕ್ಕೆ ಒಳಪಡಿಸುತ್ತಾರೆ. ನಂತರ, ಪೇತ್ರ (ಸಿಮೋನ), ಅಂದ್ರೇಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೋಮಾಯ, ತೋಮ, ಮತ್ತಾಯ, ಯಾಕೋಬ, ತದ್ದಾಯ, ಮತಾಭಿಮಾನಿ ಸಿಮೋನ, ಇಸ್ಕರಿಯೋತ ಯೂದರನ್ನು ಜನರಲ್ಲಿ (ಶುಭಸಂದೇಶವನ್ನು) ಬೋಧಿಸಲು ಏಸು ಕಳುಹಿಸುತ್ತಾನೆ. ಆ ನಂತರ ಏಸು ಪರಮಪವಿತ್ರವಾದ ದೇವಸ್ಥಾನಕ್ಕೆ ಬಂದಾಗ, ಅಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಅಂಗಡಿ ಇಡಬೇಡಿರೆಂದು ಗದರಿಸುತ್ತಾನೆ. ‘ಸರ್ವರೂ ಒಂದೆ. ಸರ್ವರಲ್ಲಿಯೂ ನಿರಾಕಾರಿಯಾದ ಪರಮಾತ್ಮನು ಒಬ್ಬನೇ. ನಾವು ಭೇದಭಾವವನ್ನು ಬಿಟ್ಟು ಜ್ಞಾನ ಮಾರ್ಗದಲ್ಲಿ ನಡೆದರೆ ಪರಮಾತ್ಮನು ನಾನಾ ಜನ್ಮದ ಪಾಪಗಳನ್ನು ನಾಶಮಾಡಿ ತನ್ನಲ್ಲಿ ಐಕ್ಯ ಮಾಡಿಕೊಳ್ಳುವನು. ಯುಗದ ಸಮಾಪ್ತಿಯಲ್ಲಿ ದೇವದೂತರು ಬಂದು ನೀತಿವಂತರಿಂದ ಕೆಟ್ಟವರನ್ನು ಬೇರೆ ಮಾಡಿ, ಕೆಟ್ಟವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು. ಆದ ಕಾರಣ ಜ್ಞಾನ ಮಾರ್ಗದಲ್ಲಿ ನಡೆಯಬೇಕು’ ಎಂದು ಏಸು ಬೋಧಿಸುತ್ತಾನೆ. ‘ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿಮ್ಮ ತಂದೆಯು ನಿಮಗೆ ಫಲ ಕೊಡುವನು. ಬೇರೆಯವರು ನೋಡುವುದಕ್ಕೆ ಪ್ರಾರ್ಥನೆ ಮಾಡಬೇಡಿ. ನೀವು ಜನರ ತಪ್ಪನ್ನು ಕ್ಷಮಿಸಿದರೆ, ದೇವರು ನಿಮ್ಮ ತಪ್ಪನ್ನು ಕ್ಷಮಿಸುವನು. ಬಲಗೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನು ಒಡ್ಡಿರಿ, ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ’ ಎಂದೂ ಏಸು ಬೋಧಿಸುತ್ತಾನೆ.

ತಪ್ಪು ಮಾಡದವ ಮೊದಲ ಕಲ್ಲೆಸೆಯಲಿ:

ಆಗ ಕೆಲವರು, ವೇಶ್ಯೆಯೊಬ್ಬಳನ್ನು ಕರೆದುಕೊಂಡು ಬಂದು, ಯೇಸುವಿನ ಮುಂದೆ ನಿಲ್ಲಿಸಿ, ಧರ್ಮಶಾಸ್ತ್ರದ ಪ್ರಕಾರ ಆಕೆಗೆ ಶಿಕ್ಷೆ ಕೊಡುವಂತೆ ಒತ್ತಾಯಿಸಿದಾಗ, ‘ಯಾರೂ ತಪ್ಪು ಮಾಡದವರು ಮೊದಲ ಕಲ್ಲನ್ನು ಅವಳ ಮೇಲೆ ಎಸೆಯಲಿ’ ಎಂದಾಗ, ಆತ್ಮವಿಮರ್ಶೆಯಲ್ಲಿ ಸೋತ ಜನರು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಾರೆ. ಕೊನೆಗೆ ‘ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ’ ಎಂದು ಏಸು ಅವಳನ್ನು ಕಳುಹಿಸಿಬಿಡುತ್ತಾರೆ. ದಾರಿಹೋಕ ಧರ್ಮಾತ್ಮನನ್ನು ಹೊಡೆದು ಘಾಸಿಗೊಳಿಸುವ ಚೋರರು ಒಡವೆ ವಸ್ತುಗಳನ್ನು ಕೊಳ್ಳೆಹೊಡೆಯುತ್ತಾರೆ. ಉಳಿದ ದಾರಿಹೋಕರು ಯಾರೂ ಬಿದ್ದವನನ್ನು ಎದ್ದು ಕೂಡಿಸುವುದಿಲ್ಲ. ಕೊನೆಗೊಬ್ಬ ಬಂದು ಸಹಾಯ ಹಸ್ತ ಚಾಚುತ್ತಾನೆ. ಇದಕ್ಕೆಲ್ಲಾ ಹಿಂದಿನ ಜನ್ಮದ ಸಂಸ್ಕಾರ ಕಾರಣ. ಅರಿವೆಂಬ ತತ್ವದಲ್ಲಿ ಕಡಿದು ಸರ್ವೇಶ್ವರನೆಂಬ ಶಾಂತಿ, ಕ್ಷಮೆ, ನೇಮಗಳಿಂದ ನಡೆಯುವುದೆ ಸಕಲ ಧರ್ಮದ ಸಾರವೆಂದು ಬಣ್ಣಿಸುವ ಏಸುವಿನ ಯಥೋಚಿತ ಮಾತುಗಳಿಂದ, ಅವನ ಜನಪ್ರಿಯತೆಯಿಂದ ನೊಂದ ಮಹಾಯಾಜಕನ ಪಕ್ಷದವರು ಏಸುವಿನ ಕಡುವಿರೋಧಿಗಳಾಗುತ್ತಾರೆ.

ತದನಂತರ, ಶಿಷ್ಯರೊಂದಿಗಿದ್ದಾಗ, ‘ನಮ್ಮ ಶಿಷ್ಯರಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು. ಆಗ ಅವರು ತಮ್ಮ ದೊರೆಯ ಬಳಿಗೆ ಕರೆದುಕೊಂಡು ಹೋಗಿ ದೂರು ಹೇಳುವರು. ದೊರೆಯು ನನ್ನನ್ನು ನ್ಯಾಯಾಧೀಶರಲ್ಲಿ ಕಳುಹಿಸುವನು. ನಿಮ್ಮಲ್ಲಿ ಒಬ್ಬನು ಲಂಚವನ್ನು ತೆಗೆದುಕೊಂಡು, ಪ್ರೀತಿಯುಳ್ಳವನಂತೆ ನಟಿಸಿ ನನಗೆ ಮುತ್ತಿಡಲು ಬರುವನು. ಆಗ ನನ್ನನ್ನು ಹಿಡಿದುಕೊಂಡು ಶಿಕ್ಷೆ ವಿಧಿಸಲು ಎಳೆದೊಯ್ಯುವರು’ ಎಂದು ಏಸು ಭವಿಷ್ಯ ನುಡಿಯುತ್ತಾನೆ. ಪಸ್ಖ (ಪಾಸ್ಖ) ಹಬ್ಬದ ದಿನ ಶಿಷ್ಯರೊಂದಿಗೆ ಊಟ ಮಾಡುತ್ತಾ, ರೊಟ್ಟಿಯನ್ನು ಮುರಿದು ಶಿಷ್ಯರಿಗೆ ಕೊಡುತ್ತಾ ಇದು ನನ್ನ ದೇಹ ಎನ್ನುತ್ತಾನೆ. ಆಮೇಲೆ ಪಾತ್ರೆಯನ್ನು ತೆಗದುಕೊಂಡು ಸ್ತೋತ್ರಮಾಡಿ ಅವರಿಗೆ ಕುಡಿಯಲು ಕೊಟ್ಟು, ಇದು ನನ್ನ ರಕ್ತ, ಒಡಂಬಡಿಕೆಯ ರಕ್ತ, ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ’ ಎಂದು ಹೇಳುತ್ತಾನೆ.

ಇತ್ತ, ಮಹಾಯಾಜಕರು, ಹಿರಿಯರು, ಶಾಸ್ತ್ರಿಗಳು ದೇಶಾಧಿಪತಿಯ ಬಳಿಗೆ ಹೋಗಿ ‘ಹಿಂದೆ ಹೆರೋದರಸನಿದ್ದಾಗ ಮೂಡಣ ದೇಶದ ಪಂಡಿತರು ಬಂದು ಯೇಸು ದೊರೆಯಾಗುವನೆಂದು ತಿಳಿಸಲು, ಆ ಅರಸನು ಮಕ್ಕಳನ್ನು ಕೊಲ್ಲಿಸಿದ್ದನು. ಯೇಸುವು ಸತ್ತಿರುವನೆಂದು ತಿಳಿದಿದ್ದೆವು. ಆತ ಬದುಕಿರುವ. ಆತನನ್ನು ಹುಡುಕಿ ತರುತ್ತೇವೆ’ ಎಂದು ಹೇಳುತ್ತಾರೆ. ಏಸುವಿನ ಶಿಷ್ಯ ಇಸ್ಕರಿಯೋತ ಯೂದ 30 ರೂಪಾಯಿ ಪಡೆದು ಏಸುವನ್ನು ಹಿಡಿದುಕೊಡುತ್ತಾನೆ. ಏಸುವಿನ ವಿಚಾರಣೆ ನಡೆಸುವ ಮಹಾಯಾಜಕನು, ಯೇಸುವಿನ ಮಾತುಗಳು ದೇವದೂಷಣೆಯ ಮಾತುಗಳು. ಇವನಿಗೆ ಮರಣ ದಂಡನೆಯೆ ಸೂಕ್ತವೆಂದು ನಿರ್ಧರಿಸುತ್ತಾನೆ. ನಂತರ ಏಸುವನ್ನು ದೇಶಾಧಿಪತಿ ಪಿಲಾತನ ಎದುರು ತಂದು ನಿಲ್ಲಿಸುತ್ತಾರೆ. ಪಿಲಾತ, ಶಾಂತಚಿತ್ತನಾದ ಏಸುವಿನಲ್ಲಿ ಜ್ಞಾನ ಮಾರ್ಗವನ್ನು ತಿಳಿದು ತಲೆಬಾಗುತ್ತಾನೆ. ಯಾವ ಅಪರಾಧ ಕಾಣದ ಪಿಲಾತ, ಏಸುವನ್ನು ಗಲಿಲಾಯದವನೆಂದು ತಿಳಿದು ಹೆರೋದನ ಬಳಿಗೆ ಕಳುಹಿಸುತ್ತಾನೆ. ಆದರೆ ಆತ, ಏಸುವನ್ನು ಮತ್ತೆ ಪಿಲಾತನಲ್ಲಿಗೆ ಕಳುಹಿಸುತ್ತಾನೆ. ಪಿಲಾತನಾದರೋ, ಮಹಾಯಾಜಕರು ಮತ್ತು ಶಾಸ್ತ್ರಿಗಳ ದೂರುಗಳನ್ನು ಬದಿಗಿರಿಸಿ, ‘ಈತನು ಎಲ್ಲಿ ನಿಲ್ಲುವನೋ ಅದೇ ಪುಣ್ಯ ಸ್ಥಳವು. ಈತನು ತ್ರಿಕಾಲ ಜ್ಞಾನಿ. ಈತನು ಅಂಗವಿಕಲರಿಗೆ ಕೈಕಾಲು ಕಣ್ಣುಗಳನ್ನು ಕೊಡತಕ್ಕವನು, ಈತನನ್ನು ನಾನು ಕೊಲ್ಲಿಸಲಾರೆ’ ಎಂದು ತನ್ನಷ್ಟಕ್ಕೆ ತಾನೇ ಅಲವತ್ತುಕೊಳ್ಳುತ್ತಾನೆ. ಕೊನೆಗೆ ‘ಬೇಕಾದರೆ ನೀವೇ ಈತನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿಸಿರಿ. ನನಗೆ ಇವನಲ್ಲಿ ಅಪರಾಧವು ಕಾಣಿಸಲಿಲ್ಲ’ ಎನ್ನುತ್ತಾ ಆತನನ್ನು ಉಳಿಸುವ ತನ್ನ ಯತ್ನವೇನು ನಡೆಯದೆಂದು ತಿಳಿದು, ಏಸುವನ್ನು ಅವರಿಗೆ ಒಪ್ಪಿಸುತ್ತಾನೆ. ಇತ್ತ ಜುದಾಸನೆಂಬುವನು, ‘ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ಪಾಪ ಮಾಡಿದೆ’ ಎಂದು ಪಶ್ಚಾತ್ತಾಪ ಪಟ್ಟು, ಉರ್ಲುಹಾಕಿಕೊಂಡು ಪ್ರಾಣ ಬಿಡುತ್ತಾನೆ.

ತಂದೆಯೇ ಅವರನ್ನು ಕ್ಷಮಿಸು:

ಅತ್ತ ಏಸು ಶಿಲುಬೆಯನ್ನು ಹೊತ್ತು ಕಪಾಲ ಸ್ಥಳಕ್ಕೆ ಸಾಗುತ್ತಿದ್ದಾಗ ಜನ ಅಪಹಾಸ್ಯ ಮಾಡುತ್ತಾರೆ. ಕುರೇನ ಪಟ್ಟಣದ ಸೀಮೋನ ಶಿಲುಬೆಯನ್ನು ಬಿಟ್ಟಿಯಾಗಿ ಹೊರುವಂತೆ ಮಾಡುವರು. ಕಪಾಲ ಬೆಟ್ಟದಲ್ಲಿ ಏಸುವನ್ನು ಇಬ್ಬರು ಕಳ್ಳರ ನಡುವೆ ಶಿಲುಬೆಗೆ ಏರಿಸುತ್ತಾರೆ. ‘ತಂದೆಯೆ ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅರಿಯರು’ ಎನ್ನುವ ಏಸು, ಶುಕ್ರವಾರ ಸಾಯಂಕಾಲ 3 ಗಂಟೆಗೆ ‘ಎಲೋಹಿ ಎಲೋಹಿ, ಲಮಾ ಸಬಕ್ತಾನಿ- ನನ್ನ ದೇವರೇ ನನ್ನ ದೇವರೆ, ಯಾಕೆ ನನ್ನನ್ನು ಕೈಬಿಟ್ಟಿದ್ದಿ’ ಎಂದು ಕೂಗಿ ಪ್ರಾಣಬಿಡುತ್ತಾನೆ. ಏಸುವು ಪರಮಾತ್ಮನಲಿ ಐಕ್ಯನಾಗಲು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು. ಆಕಾಶದಿಂದ ನಕ್ಷತ್ರಗಳು ಉರುಳಿದವು. ಭೂಮಿಯು ಅದುರಿತು. ಬಂಡೆಗಳು ಸೀಳಿಹೋದವು. ಭೂಮಿಯನ್ನು ಹೊತ್ತ ದಿಗ್ಗಜಂಗಳು ಬೆದರಿದವು. ಆದಿ ಶೇಷನು ತಲೆದೂಗಿದನು. ಸಮಾಧಿಗಳು ತೆರೆದವು. ನಿದ್ದೆ ಹೋಗಿದ್ದ ಅನೇಕ ಭಕ್ತರ ದೇಹಗಳು ಎದ್ದವು. ಈ ಪರಮಪುರುಷನು, ಪರಾತ್ಪರನಲ್ಲಿ ಸೇರಲು ಅಲ್ಲಿ ಅಂಧಕಾರ ಕವಿದು ಎತ್ತ ನೋಡಲು ಬೆಳಕಿಲ್ಲದಂತಾಯಿತು.

ಜನರೆಲ್ಲರೂ ಏಕೋಮನಚಿತ್ತ ಭಾವದಿಂದ ಯೇಸುದೇವನನ್ನು ಧ್ಯಾನ ಮಾಡಲು, ಆ ಕ್ಷಣದಲ್ಲಿ ಸೂರ್ಯ ಚಂದ್ರ ತಾರೆಗಳು, ಈ ಪರಮಪುರುಷನ ಐಕ್ಯ ಸುದಿನವನ್ನು ನೋಡಲು ಏಕಕಾಲದಲ್ಲಿ ಉದಯಿಸಿದರು ಎಂಬಂತೆ ಬೆಳಕಾಯಿತು. ಸಿಡಿಲು ಮಿಂಚು ಗುಡುಗು ಫಳಫಳನೆ ಶಬ್ದವಾಯಿತು. ಹೂವಿನ ಮಳೆ ಸುರಿಯಿತು. ಸರ್ವದೇವತೆಗಳು ಪ್ರತ್ಯಕ್ಷರಾದರು.

ಏಸುವಿನ ಶಿಷ್ಯ ಅರಿಮತಾಯದ ಯೋಸೇಫನೆಂಬ ಧನವಂತ ಏಸುವಿನ ದೇಹವನ್ನು ಇಳಿಸಿ ಸಮಾಧಿ ಮಾಡುತ್ತಾನೆ. ಮಹಾಯಾಜಕರು ಮೂರುದಿನಗಳಲ್ಲಿ ಏಳುವೆನೆಂದು ಏಸು ಹೇಳಿದ್ದ ಆದ ಕಾರಣ ಸಮಾಧಿಗೆ ಭದ್ರಮಾಡಿ ಕಾವಲುಗಾರರನ್ನು ನೇಮಿಸುತ್ತಾರೆ. ಮೂರುದಿವಸಕ್ಕೆ ಸರಿಯಾಗಿ ಅಂದರೆ ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿವಸ ಅಂದರೆ ಆದಿತ್ಯವಾರ ಏಸು ಎದ್ದಿರುತ್ತಾನೆ. ಸಮಾಧಿ ನೋಡಲು ಬಂದವರಿಗೆ ಕರ್ತನ ದೂತ ಏಸು ಎದ್ದಿರುವನೆಂದು ತಿಳಿಸುತ್ತಾನೆ. ಗೆಲಿಲಿಯಾದಲ್ಲಿ ಶಿಷ್ಯರಿಗೆ ಏಸು ಕಾಣಿಸಿಕೊಳ್ಳುತ್ತಾನೆ. ಏಸು ಅವರಿಗೆ, ‘ಹೆದರಬೇಡಿರಿ, ನಿಮಗೆಲ್ಲರಿಗೂ ಶುಭವಾಗಲಿ' ಎಂದು ಹರಸಿ ಅದೃಶ್ಯನಾಗುತ್ತಾನೆ. ಈ ಸತ್ಯವಂತನಾದ ಏಸುದೇವನ ಕಥೆಯನ್ನು ಬರೆದು ಓದಿ ಅರ್ಥ ಹೇಳಿದ ಜನರಿಗೆ ಪರಮಾತ್ಮನು ಸಕಲ ಸೌಭಾಗ್ಯ ಪುತ್ರ ಮಿತ್ರರನ್ನು ಕರುಣಿಸಿ, ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಸಲಹುವನು ಎಂಬ ಮಾತಿನೊಂದಿಗೆ, 

ಕೇತಾರಗೌಳ ರಾಗ || ಆಟ ತಾಳ ||

ಮಂಗಳಂ ಮಂಗಳಂ | ಯೇಸುವಿಗೆ |
ಮಂಗಳಂ ಮಂಗಳಂ || ಪಲ್ಲವಿ ||

ಮಂಗಳಂ ಏಸುಗೆ | ಮಂಗಳಂ ವಿಶ್ವಗೆ |
ಮಂಗಳಂ ಶಿಷ್ಯರ | ಸಲಹಿದವನಿಗೆ | ಮಂಗಳಂ || 1 ||


ಕಣ್ಣಿಲ್ಲದವರಿಗೆ | ಕಣ್ಣನ್ನು ಕರುಣಿಸಿ |
ಕಣ್ಣು ಮೂರುಳ್ಳವನ | ಕರುಣೆ ಪಡೆದವಗೆ | ಮಂಗಳಂ || 2 ||


ಕೈಕಾಲು ಇಲ್ಲದ | ಅಂಗವಿಕಲರಿಗೆ |
ಕೈ ಕಾಲು ಕರುಣಿಸಿ | ಕೀರ್ತಿ ಪಡೆದವಗೆ | ಮಂಗಳಂ || 3 ||


ಮರಣದ ನಂತರ | ಮೂರು ದಿವಸಕ್ಕೆ |
ದರುಶನವನು ಇತ್ತ | ಪರಮ ಪೂಜ್ಯನಿಗೆ | ಮಂಗಳಂ || 4 ||

ಹಿರಿಯ ಬಳ್ಳಾಪುರ | ವರದ ಸೋಮೇಶನ |
ಕರುಣದಿಂದಲಿ ಮುಕ್ತಿ | ಯನು ಹೊಂದಿದವಗೆ | ಮಂಗಳಂ || 5 ||

ಎಂಬ ಮಂಗಳಾರತಿ ಪದ್ಯದೊಂದಿಗೆ ಈ ಬಯಲಾಟವು ಮುಗಿಯುತ್ತದೆ.

ಸ್ಥೂಲ ಗ್ರಹಿಕೆಯಲ್ಲಿ ಈ ಬಯಲಾಟ: 

ಈ ‘ಏಸು ಸ್ವಾಮಿಯ ಕಥೆ’ ಮೂಡಲಪಾಯ ಬಯಲಾಟವು ತನ್ನ ಓಘದಲ್ಲಿ ಹರಿಕಥೆಯ ಮಾದರಿಯನ್ನು ಅನುಕರಿಸಿದಂತಿದೆ. ಪರಮಾತ್ಮನ ಒಡ್ಡೋಲಗದಿಂದ ಆರಂಭವಾಗುವ ಯಥೋಚಿತ ಪದ್ಯಗದ್ಯಗಳಿಂದ ತುಂಬಿರುವ ಈ ಬಯಲಾಟದಲ್ಲಿ ವಿವಿಧ ಪ್ರಸಂಗಗಳು, ಮುಗಿವಿಲ್ಲದೇ ಒಂದರೊಳಗೊಂದು ಬೆಸೆದುಕೊಂಡಂತೆ ಸರಪಳಿಯಂತೆ ಸಾಗುತ್ತವೆ. ಭಾಗವತನ ಭಾಗವತತನವೇ ಹೆಚ್ಚಾಗಿ, ಪಾತ್ರಗಳು ಗೌಣಗೊಂಡಂತೆ ಅನ್ನಿಸುತ್ತದೆ. ಕರ್ನಾಟಕದ ಬಯಲಾಟ, ಉತ್ತರ ಕರ್ನಾಟಕದಲ್ಲಿನ ದೊಡ್ಡಾಟಗಳಲ್ಲಿ ‘ಪೀಠಿಕಾ ಮಾತು, ನಾಮಾಂಕಿತದ ಮಾತು, ಸಭಾದ ಮಾತು’ ಇತ್ಯಾದಿಗಳು ಆಯಾ ಪಾತ್ರಗಳಿಗೆ ಸಾಕಷ್ಟು ಮುಕ್ತ ಅವಕಾಶಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬಹುದಾಗಿದೆ. ಅದೇ ಬಗೆಯಲ್ಲಿ ಬಯಲಾಟದ ದೂತಿ/ಚಾರ/ಚಾರಕ/ಸಾರಥಿಯಂಥ ಪೋಷಕ ಪಾತ್ರವೂ ಇದರಲ್ಲಿ ಕಾಣೆಯಾಗಿದೆ. ಉತ್ತರ ಕರ್ನಾಟಕದ ಸಾರಥಿಯನ್ನು ದಕ್ಷಿಣ ಕರ್ನಾಟಕದಲ್ಲಿ ಚಾರಕ ಎಂದು ಕರೆಯುತ್ತಾರೆ. ಇದರಲ್ಲೂ ಮಾತು, ವಚನ, ಪದ್ಯ ಹಾಗೂ ಶ್ಲೋಕಗಳಿವೆ.

ಕ್ರೈಸ್ತರು, ಪಿತ ಸುತ ಪವಿತ್ರಾತ್ಮರೆಂಬ ಮೂವರನ್ನು ಸೇರಿಸಿ ತ್ರಿ-ಏಕ ದೇವರನ್ನು ವಿಶ್ವಾಸಿಸುತ್ತಾರೆ. ಕ್ರೈಸ್ತ ಧಾರ್ಮಿಕ ವಿಶ್ವಾಸದಲ್ಲಿ ರೇಖಾ ಗಣಿತದ ತ್ರಿಕೋಣದ ತ್ರಿಭುಜದಂತೆ ಹಾಗೂ ನೀರು, ಹಿಮ ಮತ್ತು ಆವಿಯೂ ಒಂದೇ ಆಗಿರುವಂತೆ ಪಿತ, ಸುತ ಮತ್ತು ಪವಿತ್ರಾತ್ಮರು ಒಂದೇ ಎನ್ನಲಾಗುತ್ತದೆ. ಪಿತನನ್ನು ವಯೋವೃದ್ಧನಂತೆ, ಪವಿತ್ರಾತ್ಮನನ್ನು ಬಿಳಿ ಪಾರಿವಾಳದ ರೂಪದಲ್ಲಿ ಗುರುತಿಸಿದರೆ, ಯೇಸುಸ್ವಾಮಿ ಪಿತನ ಸುತ. ಜನ್ಮಜನ್ಮಾಂತರದ ಕಲ್ಪನೆ ಕ್ರೈಸ್ತರಲ್ಲಿ ಇಲ್ಲವೇ ಇಲ್ಲ. ಮೃತರು ಅಂತಿಮ ನ್ಯಾಯನಿರ್ಣಯದವರೆಗೆ ಕಾಯುತ್ತಲೇ ಇರುತ್ತಾರೆ. ಭಾರತೀಯ ನಂಬುಗೆಯ ಪ್ರಕಾರ ಧರ್ಮಗ್ಲಾನಿ ಉಂಟಾದಾಗಲೆಲ್ಲಾ ಮಾನವ ಜನ್ಮ ತಾಳುವ ದೇವರು, ಕ್ರೈಸ್ತ ನಂಬುಗೆಯಂತೆ ಪಿತನಾದ ಏಕ ದೇವರು ತನ್ನ ಮಗನನ್ನೇ ಕಳುಹಿಸುತ್ತಾರೆ. ಆದರಿಲ್ಲಿ ತನ್ನನ್ನು ನಿರಾಕಾರ ಎಂದು ಗುರುತಿಸಿಕೊಳ್ಳುವ ದೇವರೇ, ಯೇಸುವಿನ ಅವತಾರ ತಾಳಿ ಮಾನವನಂತೆಯೇ ಪುಣ್ಯಸ್ತ್ರೀಯ ಮುಖಾಂತರ ಭೂಮಿಗೆ ಬರುತ್ತಾನೆ.

ದೇವಮಾತೆ ಮರಿಯಳು ಮರಿಯಳೇ ಆಗಿ ಉಳಿದಿದ್ದರೆ, ಆಕೆಯ ಪತಿ ಜೋಸೆಫ್ ಯಶೋಫ/ಪನಾಗಿದ್ದಾನೆ. ದಾಯಾದಿಗಳಾದ ಮಹಮ್ಮದೀಯರಲ್ಲಿ ಜೋಸೆಫ್ ಯೂಸುಫ್ ಆಗಿರುವನು. ಕನ್ನಡ ನಿಘಂಟುಗಳು ಏಸು ಪದಕ್ಕೆ 1. ಬಾಣಪ್ರಯೋಗ ಮಾಡು, ಕೋಲನ್ನು ಇಸು (ನಾ), 2. ಬಾಣ ಪ್ರಯೋಗ ಮಾಡುವುದು, 3. ಹೊಡೆತ; ಪೆಟ್ಟು 4. ಎಷ್ಟು; 5. ಕ್ರೈಸ್ತಮತ ಪ್ರವರ್ತಕ ಎಂದು ಅರ್ಥ ನೀಡಿವೆ. ದಯೆ ಕರುಣೆ ಪ್ರತಿಪಾದಿಸುವ ಯೇಸುವನ್ನು 'ಏಸು' ಎಂದು ಗುರುತಿಸುವುದಕ್ಕಿಂತ ಯೇಸು ಎಂಬ ಬಳಕೆ ಸಾಧುವಾದುದು ಎಂಬ ಭಾವನೆ ಈಚೆಗೆ ಕನ್ನಡ ಮನೆಮಾತಿನ ಕ್ರೈಸ್ತರಲ್ಲಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಏಸು ಮತ್ತು ಯೇಸು ಹೆಸರುಗಳಲ್ಲಿ ಏಸುವಿಗಿಂತ ಯೇಸು ಹೆಸರು ಸೂಕ್ತವಾದ ಬಳಕೆ ಎನ್ನಬಹುದು. ಮತ್ತಾಯನ ಶುಭಸಂದೇಶ (ಸುವಾರ್ತೆ)ವು ಸ್ನಾನಿಕ ಯೋವಾನ್ನನ ಬೋಧನೆಯ ಪ್ರಸ್ತಾಪದೊಂದಿಗೆ ಆರಂಭವಾದರೆ, ಲೂಕನ ಶುಭಸಂದೇಶದಲ್ಲಿನ ಜಕರೀಯ ಮತ್ತು ಎಲಿಜಬೇತಳ ಮಗ ಸ್ನಾನಿಕ ಯೋವಾನ್ನನ ಹುಟ್ಟಿನ ಸಮಾಚಾರ ಇಲ್ಲಿ ಸೇರಿದೆ. ಎಲಿಜಬೇತಳು ಎಲಿಜಬೇತ್ತರಾಣಿ ಆಗಿದ್ದಾಳೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದ ಈ ಕೃತಿಯ ರಚನಾಕಾರ ಸುಬ್ಬರಾಯಪ್ಪನವರಿಗೆ ಎಲಿಜಬೇತರಾಣಿಯು ಹೆಸರು ಅಪ್ಯಾಯಮಾನವಾಗಿ ಕಂಡಿರಬೇಕು. ಅವರು, ಯೋವಾನನ ನಾಮಕರಣಕ್ಕೆ ಪುರೋಹಿತರನ್ನು ಬರಮಾಡಿಕೊಂಡಿದ್ದಾರೆ. ಆದರೆ, ಭಗವಂತನ ಅವತಾರವೆನ್ನುವ ಯೇಸುವಿನ ನಾಮಕರಣದಲ್ಲಿ ಅವರ ಉಪಸ್ಥಿತಿಯೇ ಇಲ್ಲ. ಸ್ನಾನಿಕ ಯೋವಾನ್ನನ ಮುಂಡವನ್ನು ಏಸುವಿನ ಹತ್ತಿರ ತಂದು ಅದನ್ನು ದಹನಮಾಡುವ ಪ್ರಸ್ತಾಪವಿದೆ. ಮುಂಡ ತರುವ ಹಾಗೂ ದಹನದ ವಿಷಯ ಮತ್ತಾಯನ ಶುಭಸಂದೇಶದಲ್ಲಿ ಇಲ್ಲವೇ ಇಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಗುರುಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯದಲ್ಲಿ ಶವ ದಹನ ಪ್ರಚಲಿತವಿದ್ದು, ಗುರುವಾದ ಸ್ನಾನಿಕ ಯೋವಾನನಿಗೂ ದಹನ ಸಂಸ್ಕಾರವನ್ನು ಮಾಡಲಾಯಿತೆಂದು ಕೃತಿ ರಚನಾಕಾರ ಚಿತ್ರಿಸಿರಬಹುದು. ಯಹೂದಿ ಸಾಮಂತ ಅರಸನ ಹೆಸರನ್ನು ಯರೋದ, ಹೆರೋದ ಎಂದು ಬಳಸಲಾಗಿದೆ. ಯೋವಾನ್ನ ಯೋವಾನನಾದರೆ, ಉಳಿದ ಹನ್ನೆರಡು ಶಿಷ್ಯರ ಹೆಸರುಗಳನ್ನು ಮತ್ತಾಯನ ಶುಭಸಂದೇಶದಲ್ಲಿರುವಂತೆಯೇ ಉಳಿಸಿಕೊಳ್ಳಲಾಗಿದೆ.

ಲೂಕನ ಸುವಾರ್ತೆಯಲ್ಲಿ ಗಬ್ರಿಯೇಲ್ ದೂತನು ಮಾತೆ ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದನ್ನು ತಿಳಿಸಿದರೆ, ಮತ್ತಾಯನ ಸುವಾರ್ತೆಯಲ್ಲಿ ದೇವದೂತನ ಹೆಸರಿಲ್ಲ. ಹೀಗಾಗಿ ಈ ಕೃತಿಕಾರ ದೇವದೂತನ ಹೆಸರನ್ನು ಪ್ರಸ್ತಾಪ ಮಾಡಿದಂತಿಲ್ಲ. ಆದರೆ, ದೇವರು ತಾನು ಅವತರಿಸುವೆನೆಂದು ಭೂಲೋಕಕ್ಕೆ ತಿಳಿಸಲು ತಾನು ನಿರ್ಮಿಸಿದ ದೂತನನ್ನು ಅಹಜಾ ರಾಜನಲ್ಲಿಗೆ ಕಳುಹಿಸುತ್ತಾನೆ ಎಂದು ಹೇಳುವ ಕೃತಿಕಾರ, ಮತ್ತಾಯನ ಶುಭಸಂದೇಶದಲ್ಲೂ ಇರದ ಪಾತ್ರವೊಂದನ್ನು ಪರಿಚಯಿಸಿದ ಕಾರಣವೇನಿರಬಹುದು ಎಂಬ ಪ್ರಶ್ನೆ ಕಾಡದಿರದು.

ಪುರಾಣ ಶ್ರವಣ ಮತ್ತು ಪಾರಾಯಣ:

‘ಅಹಜಾ’ ಹೆಸರಿನಂತೆಯೆ ನಾಗರಾಜ - ಆದಿಶೇಷನನ್ನು ಗುರುತಿಸುವ ಅಹಿಪತಿ, ಅಹಿರಾಜ ಹೆಸರುಗಳು ಸಿಗುತ್ತವೆ. ಅಹಿಧರ, ಅಹಿಧಾಮ- (ಸರ್ಪಧರ) ಶಿವನ ಹೆಸರುಗಳಾದರೆ, ಅಹಿಪತಲ್ಪ - ಆದಿಶೇಷನನ್ನು ಹಾಸಿಗೆಯಾಗಿ ಉಳ್ಳ ವಿಷ್ಣುವಿನ ಹೆಸರುಗಳು ದೊರಕುತ್ತವೆ. ಇನ್ನು ಅಹಃಪತಿ ಎಂದರೆ ಹಗಲಿನ ಒಡೆಯ ಸೂರ್ಯ, ಅಹಃಪತಿಸುತ ಎಂದರೆ ಸೂರ್ಯಪುತ್ರ -ಶನಿ, ಕರ್ಣ ಸುಗ್ರೀವ ಎಂಬ ಅರ್ಥಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಮೊದಲ ಹೊತ್ತಿಗೆ ಹೇಳುತ್ತದೆ. ಸರೋವರದಲ್ಲಿ ಹುಟ್ಟಿದ್ದು, ನೀರಿನಲ್ಲಿ ಹುಟ್ಟಿದ್ದು ಕಮಲ- ಸರೋಜ, ನೀರಜ ಎಂಬ ಹೆಸರುಗಳಂತೆ ಅಹಃಜ ಎಂಬ ಹೆಸರೂ ರೂಢಿಗೆ ಬಂದಿರಬಹುದು. ಕಾಲಕ್ರಮೇಣ ಅದು ಅಪಭ್ರಂಶಗೊಂಡು ‘ಅಹಜಾ’ ಆಗಿರಬಹುದೆ? ಇನ್ನೊಂದು ಬಗೆಯಲ್ಲಿ ಯೋಚಿಸಿದರೆ ಅಹಂಗೆ, ಅಹಗೆ ಎಂದರೆ ಹಾಗೆ, ಅಹ ಕ್ರಿಯಾಪದವಾದಾಗ ಅಂತಹ, ಅಂತಪ್ಪ ಎಂದು ರೂಪತಾಳುತ್ತದೆ. ‘ಆಮೆನ್’ ಎಂದರೆ ‘ಹಾಗೇ ಆಗಲಿ’ ‘ತಥಾಸ್ತು’ ಎಂಬುದನ್ನು ಇದು ಸೂಚಿಸಬಹುದೇನೋ? ಆಹ ಎಂದರೆ ಹಿರಿದು ಎಂಬ ಅರ್ಥದ (ವಿದ್ವಾನ್ ಕೋಳಂಬೆ ಪುಟ್ಟಣ್ಣಗೌಡರ ಅಚ್ಚಕನ್ನಡ ನುಡಿಕೋಶ) ಹಿನ್ನೆಲೆಯಲ್ಲಿ ಈ ಹೆಸರು ಬಳಸಲಾಗಿದೆಯೆ? ಇವೆಲ್ಲಾ ಊಹೆಗಳಿಗೆ ಬಿಟ್ಟ ವಿಚಾರ.

ಪುರಾಣ, ಮಹಾಭಾರತ, ರಾಮಾಯಣ ಮೊದಲಾದವುಗಳ ಪಾರಾಯಣ - ಮನಸಿಟ್ಟು ಓದುವುದು ಹಾಗೂ ಶ್ರವಣ - ಮನಸ್ಸಿಟ್ಟು ಕೇಳುವುದು ಪುಣ್ಯ ಸಂಚಯದ, ದೋಷ ನಿವಾರಣೆಯ ಒಂದು ವಿಧಾನ ಎಂಬ ನಂಬಿಕೆಯನ್ನು ಈ ನೆಲದ ಜನಪದರು ಹೊಂದಿದ್ದಾರೆ. ಮನೆಗಳಲ್ಲಿ ಶನಿದೇವರ, ಸತ್ಯನಾರಾಯಣನ ಪೂಜೆ ಮಾಡಿಸುವುದು ಇದೇ ಉದ್ದೇಶದ ನಡವಳಿಕೆ ಎಂದು ಹೇಳಲಾಗುತ್ತದೆ. ಈ ಪೂಜೆಯ ಸಂದರ್ಭಗಳಲ್ಲಿ ಪುರಾಣ ಪ್ರವಚನ ಇದ್ದೇ ಇರುತ್ತದೆ. ಇಲ್ಲಿ ‘ಕೇಳು ಜನಮೇಜಯ’ ನುಡಿಗಟ್ಟು ನೆನಪಾಗುತ್ತದೆ.

ಜನಮೇಜಯ ಮಹಾಭಾರತದ ಒಂದು ಪಾತ್ರ. ಪಂಚಪಾಂಡವರಲ್ಲಿ ಒಬ್ಬನಾದ ಅರ್ಜುನ ಈ ಜನಮೇಜಯನಿಗೆ ತಾತ ಮುತ್ತಾತ. ಮುನಿಯ ಶಾಪದ ದೆಸೆಯಿಂದ ಜನಮೇಜಯನ ತಂದೆ ಪರಿಕ್ಷಿತನನ್ನು ತಕ್ಷಕನೆಂಬ ನಾಗರಾಜ ಸಾಯಿಸಿರುತ್ತಾನೆ. ನಾಗಗಳ ಮೇಲೆ ದ್ವೇಷಸಾಧಿಸುವ ಜನಮೇಜಯ, ಸರ್ಪಯಾಗ ಮಾಡಿ ಅವುಗಳ ಸಂಹಾರಕ್ಕೆ ವೇದಿಕೆ ಸಿದ್ಧಪಡಿಸುತ್ತಾನೆ. ಆಗ ಮಧ್ಯೆ ಪ್ರವೇಶಿಸಿದ ನಾಗಕನ್ಯೆ ಮತ್ತು ಬ್ರಾಹ್ಮಣನಿಗೆ ಹುಟ್ಟಿದ ಬಾಲ ಮುನಿ ಆಸ್ತಿಕ ಮಧ್ಯಸ್ಥಿಕೆ ವಹಿಸಿ, ಅವನಿಗೆ ತಿಳಿಹೇಳಿ ಸಮಾಧಾನಪಡಿಸುತ್ತಾನೆ. ನಾಗರು ಮತ್ತು ಕುರು ವಂಶಸ್ಥರು ವೈಮನಸ್ಸು ಬಿಟ್ಟು ಶಾಂತಿಯಿಂದ ಬಾಳತೊಡಗುತ್ತಾರೆ. ಸರ್ಪದೋಷದಿಂದಾದ ಕುಷ್ಟರೋಗದ ನಿವಾರಣೆಗಾಗಿ ವ್ಯಾಸ ಮಹರ್ಷಿಯು, ತನ್ನ ಶಿಷ್ಯ ವೈಶಂಪಾಯನ ಮುನಿಯಿಂದ ಮಹಾಭಾರತ ಕೇಳಲು ಹೇಳುತ್ತಾನೆ. ಅದರಂತೆ ಜನಮೇಜಯನ ಕೋರಿಕೆಯ ಮೇರೆಗೆ ವೈಶಂಪಾಯನ ಮಹಾಭಾರತ ಕಥೆಯನ್ನು ಪೂರ್ಣವಾಗಿ ಹೇಳುವನು. ಆದರೆ ಸ್ವಲ್ಪ ಕುಷ್ಟರೋಗವು ಇನ್ನೂ ಉಳಿದಾಗ, ಅದಕ್ಕೆ ವ್ಯಾಸನು ಜನಮೇಜಯನ ಕೆಲವು ಸಂದೇಹಗಳ ನಿವಾರಣೆಗೆ ಪುನಃ ಮಹಾಭಾರತವನ್ನು ಕೇಳಲು ಹೇಳುತ್ತಾನೆ. ಆಗ ವ್ಯಾಸರ ಇನ್ನೊಬ್ಬ ಶಿಷ್ಯನಾದ ಜೈಮಿನಿ ಮುನಿಯಿಂದ ವೈಶಂಪಾಯನನು ಪುನಃ ಮಹಾಭಾರತದ ಕತೆಯನ್ನು ವಿಸ್ತಾರವಾಗಿ ಕೇಳಿಸಿಕೊಳ್ಳುತ್ತಾನೆ. ತನ್ನ ವಂಶದ ತಾತ ಮುತ್ತಾತಂದಿರ ಕಥೆಗಳನ್ನು ಕೇಳಿದ ಜನಮೇಜಯ ಕುಷ್ಟರೋಗದಿಂದ ಮುಕ್ತನಾಗುತ್ತಾನೆ. ಆ ಮುನಿಗಳು ಮಹಾಭಾರತ ಕಥೆಯನ್ನು ಹೇಳುವಾಗಲೆಲ್ಲಾ, ‘ಕೇಳು ಜನಮೇಜಯ’ ‘ಕೇಳು ಜನಮೇಜಯ’ ಎಂದು ಅವನನ್ನು ಸಂಬೋಧಿಸುತ್ತಿರುತ್ತಾರೆ. ‘ಕೇಳು ಜನಮೇಜಯ’ದ ಹಾದಿಯಲ್ಲಿಯೇ ಈ ಕೃತಿ ರಚನಾಕಾರ ಆರಂಭಿಸಿರಬಹುದಾದ ಬರಹ, ಮುಂದೆ ಹೊಂದಿಕೊಂಡಿರಲಿಕ್ಕಿಲ್ಲ. ಇದೂ ಒಂದು ಊಹೆ.

ಇಲ್ಲಿ ಪುರಾಣ ಪಠಣ, ಪ್ರವಚನ, ಪಾರಾಯಣ ಅಂದಾಗ, ಹದಿನಾರನೇ ಶತಮಾನದಲ್ಲಿ ಗೋವೆಯಲ್ಲಿ ನೆಲೆಸಿದ್ದ ಯೇಸುಸಭೆಗೆ ಸೇರಿದ ಫಾದರ್ ಥಾಮಸ್ ಸ್ಟೀವನ್ಸ್ ಯೇ.ಸ. (1549-1619) ಅವರ ‘ಕ್ರಿಸ್ತ ಪುರಾಣ’ ಗ್ರಂಥದ ನೆನಪಾಗುತ್ತದೆ. ಅವರು, ಶ್ರೀಗ್ರಂಥ ಹಳೆಯ ಮತ್ತು ಹೊಸ ಒಡಂಬಡಿಕೆಯ ಯೇಸುಸ್ವಾಮಿ ಶುಭಸಂದೇಶದವರೆಗಿನ ಕಥನವನ್ನು ಹಿಂದು ಶಿವ ಪುರಾಣ, ವಿಷ್ಣು ಪುರಾಣ ಮೊದಲಾದ ಪುರಾಣಗಳ ಧಾಟಿಯಲ್ಲಿ ಬರೆದಿದ್ದರು. ಕನ್ನಡ, ಮರಾಠಿ ಮತ್ತು ಕೊಂಕಣಿ ಮಿಶ್ರಿತ ಭಾಷೆಯ ಈ ಕ್ರಿಸ್ತ ಪುರಾಣದಲ್ಲಿ 11,000ಕ್ಕೂ ಅಧಿಕ ಪದ್ಯಗಳಿವೆ ಎನ್ನಲಾಗುತ್ತದೆ. ಇಪ್ಪತ್ತನೇ ಶತಮಾನದ ಆದಿಭಾಗದವರೆಗೂ ಚರ್ಚು ಮತ್ತು ಮನೆಮಠಗಳಲ್ಲಿ ಸಂಕಷ್ಟಗಳ ಸಮಯದಲ್ಲಿ (ಉದಾಹರಣೆಗೆ: ಟಿಪ್ಪುವಿನಿಂದ ಸೆರೆಯಾಳುಗಳಾಗಿ ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಸಾಗುವಾಗ), ಸಾಮಾನ್ಯ ದಿನಮಾನಗಳಲ್ಲೂ ಅದರ ಪಠಣ, ಪಾರಾಯಣ ನಡೆಯತ್ತಿತ್ತು ಎಂದು ಹೇಳಲಾಗುತ್ತದೆ.

ಭಾರತದ ನೆಲದಲ್ಲಿ ಬೇರು ಬಿಟ್ಟ ಗಿಡ:
ಮಧ್ಯಪ್ರಾಚ್ಯ ಪ್ರದೇಶದಲ್ಲಿ ರೂಪತಾಳಿದ ಶ್ರೀಗ್ರಂಥ ಬೈಬಲ್ ಹೊತ್ತಿಗೆಯ [ಹಳೆಯ ಒಡಂಬಡಿಕೆ (Old Testament) ಮತ್ತು ಹೊಸ ಒಡಂಬಡಿಕೆ (New Testament)] ಎರಡನೇ ಭಾಗವಾದ ಸರ್ವೇಶ್ವರ ದೇವರು ಮಾನವಕೋಟಿಯೊಂದಿಗೆ ಮಾಡಿಕೊಳ್ಳುವ ಹೊಸ ಒಡಂಬಡಿಕೆಯ ಕಥನದಲ್ಲಿನ ಯೇಸುಸ್ವಾಮಿಯ ಜೀವನ ಚರಿತ್ರೆ ಹಾಗೂ ಬೋಧನೆಗಳನ್ನು ಶುಭಸಂದೇಶಗಳಲ್ಲಿ ದಾಖಲಿಸಲಾಗಿದೆ. ಮತ್ತಾಯ, ಮಾರ್ಕ, ಲೂಕ ಮತ್ತು ಯೋವಾನ್ನರು ಈ ಶುಭಸಂದೇಶಗಳನ್ನು ಬರೆದಿರುವರು. ಮತ್ತಾಯ (ಮ್ಯಾಥ್ಯು) ಮತ್ತು ಯೋವಾನ್ನ (ಜಾನ್) ಅವರು ಯೇಸುಸ್ವಾಮಿಯ ಹನ್ನೆರಡು ಜನರ ಶಿಷ್ಯಮಂಡಲಿಯ ಸದಸ್ಯರಾಗಿದ್ದವರು. ಮಾರ್ಕ ಮತ್ತು ಲೂಕರು ಯೇಸುವಿನ ನೇರ ಶಿಷ್ಯರಲ್ಲ. ಹನ್ನೆರಡು ಶಿಷ್ಯರಲ್ಲಿ ಪ್ರಧಾನನಾದ ಪೇತ್ರನ ಆಶಯದಂತೆ ಮಾರ್ಕನೂ ಹಾಗೂ ಯೇಸುಸ್ವಾಮಿಯು ಬದುಕಿದ್ದಾಗ ಅವರೊಂದಿಗಿದ್ದ, ಅವರನ್ನು ಕಂಡಿದ್ದ, ಅವರನ್ನು ನೋಡಿದ್ದ ಜನರ ಹೇಳಿಕೆಗಳನ್ನು ಆಧರಿಸಿ ಲೂಕನೂ ಶುಭಸಂದೇಶಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತದೆ. ಈ ನಾಲ್ವರು ಶುಭಸಂದೇಶಕಾರರು ಬರೆದ ಯೇಸುವಿನ ಚರಿತ್ರೆ ಮತ್ತು ಬೋಧನೆಗಳಲ್ಲಿ ಬಹಳಷ್ಟು ಹೋಲಿಕೆಗಳನ್ನು ಕಂಡರೂ ಕೆಲವಷ್ಟು ವ್ಯತ್ಯಾಸಗಳೂ ಇವೆ. ಎಲ್ಲದರಲ್ಲಿನ ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿದಾಗ ಯೇಸುವಿನ ಚರಿತ್ರೆ ಮತ್ತು ಬೋಧನೆಗಳ ಒಟ್ಟು ಚಿತ್ರಣ ಸುಲಭಗ್ರಾಹ್ಯ. ಪ್ರಸ್ತುತ ‘ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಏಸು ಸ್ವಾಮಿಯ ಕಥೆ’ ಗೆ ಈ ಬಯಲಾಟದ ಕರ್ತೃ ಸುಬ್ಬರಾಯಪ್ಪನವರು ಸಂಪೂರ್ಣವಾಗಿ ‘ಮತ್ತಾಯನ ಶುಭಸಂದೇಶ’ವನ್ನು ನೆಚ್ಚಿಕೊಂಡಿರುವರು.
ಈ ಹೊಸ ಒಡಂಬಡಿಕೆಯು ಯೆಹೂದ್ಯ ಮತ್ತು ಕ್ರೈಸ್ತ ಸಂಸ್ಕೃತಿಯಲ್ಲಿ ಹೊರಹೊಮ್ಮಿದ ಕಥನ. ‘ಮೊದಮೊದಲು ಪಿತಾಮಹರ, ನ್ಯಾಯಸ್ಥಾಪಕರ ಹಾಗೂ ಪ್ರವಾದಿಗಳ ಮುಖಾಂತರ ಮಾತನಾಡಿದ ದೇವರು ಕಟ್ಟಕಡೆಗೆ ತಮ್ಮ ಏಕೈಕ ಕುಮಾರ ಯೇಸುಕ್ರಿಸ್ತರ ಮುಖಾಂತರ ಮಾತನಾಡಿದರು ಎನ್ನುತ್ತದೆ ಹೊಸ ಒಡಂಬಡಿಕೆ. ದೇವರ ವಾಕ್ಯ (ವಾಕ್ಕು, ವಾಣಿ, ಮಾತು) ಆದ ಯೇಸು ನಿಶ್ಚಿತ ಕಾಲದಲ್ಲಿ ಮತ್ತು ಗೊತ್ತಾದ ಸ್ಥಳದಲ್ಲಿ ಮನುಷ್ಯರಾದರು. ನರಮಾನವರು ಕರ್ಮ ಸಂಸಾರವೆಂಬ ಪಾಪಸಂಕೋಲೆಯಿಂದ ಮುಕ್ತರಾಗಿ ದೇವರ ಮಕ್ಕಳು, ಅಮರ ಜೀವಿಗಳು ಆಗಲು ಸಾಧ್ಯ ಎಂಬುದನ್ನು ತಮ್ಮ ಜೀವನ, ಬೋಧನೆ ಹಾಗೂ ಸಾಧನೆಯಿಂದ ಸ್ಪಷ್ಟಪಡಿಸಿದರು. ಇಂಥ ಸೌಭಾಗ್ಯ ಒಂದು ಜನಾಂಗಕ್ಕೆ, ಜಾತಿಗೆ, ಕುಲಕ್ಕೆ, ಕಾಲಕ್ಕೆ, ಭಾಷೆಗೆ ಸೀಮಿತವಾಗಿಲ್ಲ; ಪ್ರತಿಯೊಬ್ಬ ಮಾನವನಿಗೂ ಈ ಸೌಭಾಗ್ಯ ತೆರೆದಿಟ್ಟ ಬುತ್ತಿ ಎಂಬ ಶುಭಸಂದೇಶವನ್ನು ಸಾರಲು ತಮ್ಮ ಪ್ರೇಷಿತರನ್ನೂ, ಶಿಷ್ಯರನ್ನೂ ಕೂಡಿಸಿ ಒಂದು ಸಭೆಯನ್ನು ಸ್ಥಾಪಿಸಿದರು’ (ಪವಿತ್ರ ಬೈಬಲ್ - ಸರಳ ಭಾಷಾಂತರ). [ಪ್ರೇಷಿತರು = ದೈವಪ್ರೇರಿತ ಧರ್ಮಪ್ರಚಾರಕರು (ಅಪೋಸ್ತಲರು). ಸಭೆ = ಚರ್ಚ್]

ಈ ನೆಲದ ಪ್ರಮುಖ ರಂಗ ಪ್ರಕಾರವಾದ ಬಯಲಾಟದ ಬಂಧಕ್ಕೆ ಅನುಗುಣವಾಗಿ, ಮತ್ತಾಯನ ಶುಭಸಂದೇಶವನ್ನು ಆಧರಿಸಿ ಈ ಬಯಲಾಟವನ್ನು ರಚಿಸಿರುವ ಸುಬ್ಬರಾಯಪ್ಪನವರು, ಒಂದು ಜನಾಂಗಕ್ಕೆ, ಜಾತಿಗೆ, ಕುಲಕ್ಕೆ, ಕಾಲಕ್ಕೆ, ಭಾಷೆಗೆ ಸೀಮಿತವಾಗದ ಯೇಸುಕ್ರಿಸ್ತನ ಕಥನ ಮತ್ತು ಬೋಧನೆಗಳನ್ನು ಈ ನೆಲದ ಜನಪದರ ಧರ್ಮದ ಸೊಗಡಿನಲ್ಲಿಯೇ ಬಯಲಾಟಕ್ಕೆ ಅಳವಡಿಸಿದ್ದಾರೆ. ಇದೊಂದು ಬಗೆಯಲ್ಲಿ ನೆರೆಮನೆಯ ಅಂದಚೆಂದದ ಹೂ ಬಿಡುವ ಸಸಿಯನ್ನು ತಂದು ನಮ್ಮ ಮನೆಯಲ್ಲಿ ನೆಟ್ಟು ಪೋಷಿಸಿದ ಪರಿಯನ್ನು ಹೋಲುತ್ತದೆ ಎಂದರೆ ಅತಿಶಯೋಕ್ತಿಯಾಗದು. ಈ ನೆಲದ ಅಂದರೆ ಭಾರತದ ಆಧ್ಯಾತ್ಮಿಕ ತಿಳುವಳಿಕೆಯಲ್ಲಿಯೇ ಯೇಸುವನ್ನು ನೋಡುವ, ಶಿವನ (ಕಣ್ಣು ಮೂರುಳ್ಳವನ) ಕರುಣೆ ಪಡೆದವ ಎಂದು ಕರೆದು, ಅವನ ಬೋಧನೆಗಳನ್ನು ಬಿಂಬಿಸುವ ಪ್ರಯತ್ನದಲ್ಲಿ ಅವರು ಯಶ ಕಂಡಿದ್ದಾರೆ. ಯೇಸು ಬೋಧಿಸಿದ್ದು ‘ಸ್ವಾನುಭವ ಜ್ಞಾನ’ವೆಂದು ಹೊಸ ನುಡಿಗಟ್ಟನ್ನು ರಚಿಸಿದ್ದಾರೆ. ಯೇಸುಸ್ವಾಮಿಯ ಚರಿತ್ರೆ ಮತ್ತು ಅವನ ಬೋಧನೆಗಳು ಭಾರತೀಕರಣಗೊಂಡಿವೆ. ಧರ್ಮಗ್ಲಾನಿ ಉಂಟಾದಾಗಲೆಲ್ಲಾ ಅವತರಿಸುವ ಭಾರತದ ದೇವರು, ಇಲ್ಲಿ ಯೇಸುಸ್ವಾಮಿಯಾಗಿ ಅವತರಿಸುತ್ತಾನೆ. ಪದ್ಮಾಸನದಲ್ಲಿ ಕುಳಿತು ಧ್ಯಾನಿಸಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಶತ್ರುಗಳನ್ನು ಗೆಲ್ಲುತ್ತಾನೆ. ಇವೆಲ್ಲಾ ವಿಷಯಾಂತರಗಳು ಕರ್ಮಠ ಕ್ರೈಸ್ತರಿಗೆ, ಅಜ್ಜ ನೆಟ್ಟ ಆಲದಮರಕ್ಕೆ ಜೋತುಬೀಳುವ ಧರ್ಮನಿಷ್ಠೆಯ ಸಾಂಪ್ರದಾಯಿಕ, ಸಂಪ್ರದಾಯ ಶರಣ ಕ್ರೈಸ್ತರಿಗೆ ಪಥ್ಯವಾಗಲಿಕ್ಕಿಲ್ಲ.
‘ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು, ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು...’ ಮುಂತಾದ ಮತ್ತಾಯನ ಶುಭಸಂದೇಶದಲ್ಲಿನ ಬೆಟ್ಟದ ಮೇಲಿನ ಅಷ್ಟಭಾಗ್ಯಗಳ ಬೋಧನೆಯನ್ನು ಪದ್ಯವೊಂದರಲ್ಲಿ ಕಟ್ಟಿಕೊಡಲಾಗಿದೆ.


ಬಿಲ್ಹರಿ ರಾಗ || ಏಕತಾಳ || ಕಮಾಚ್ ರಾಗ ||

ಆತ್ಮದಲಿ ಬಡವರು | ಅವರೇ ಧನ್ಯರು ಕೇಳು |
ಮಾತನಾಡಿದ ರೀತಿ | ನಡೆಯರು ಇನ್ನು || 1 ||

ಕ್ಷಮೆ ದಯೆ ಶಾಂತಿಯು | ನೇಮದಿಂದಿರಬೇಕು |
ಕಾಮಕ್ರೋಧವು ಮೋಹ | ಕಡಿಯಲಿಬೇಕು || 2 ||

ತನ್ನಂತೆ ಸಕಲವು | ಎನ್ನುತ ಮನದೊಳಗೆ |
ಸ್ವಾನುಭವದ ಜ್ಞಾನ | ಇನ್ನೂ ಇರಬೇಕು || 3 ||

ಯೇಸುಕ್ರಿಸ್ತನು ಬೋಧಿಸಿದ್ದು ‘ಸ್ವಾನುಭವ ಜ್ಞಾನ’ ಎಂದು ಈ ಮೂಡಲಪಾಯ ಬಯಲಾಟದಲ್ಲಿ ಬಹಳಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಈ ನೆಲದ ಪುರಾಣ ಕಥನಗಳ ಮಾದರಿಯಲ್ಲಿಯೇ, ಯೇಸು ಸ್ವಾಮಿ ಶಿಲುಬೆ ಮೇಲೆ ಮರಣಿಸಿದಾಗ, ‘ಆಕಾಶದಿಂದ ನಕ್ಷತ್ರಗಳು ಉದುರಿದವು. ಭೂಮಿಯು ಅದುರಿತು. ಬಂಡೆಗಳು ಸೀಳಿಹೋದವು. ಭೂಮಿಯನ್ನು ಹೊತ್ತ ದಿಗ್ಗಜಂಗಳು ಬೆದರಿದವು. ಆದಿಶೇಷನು ತಲೆದೂಗಿದನು’ ಎಂದು ಬಣ್ಣಿಸಲಾಗಿದೆ.

ದಕ್ಷಿಣದ ಬಯಲಾಟದ ಲೋಕಕ್ಕೆ ಮಹದುಪಕಾರ:

ಕರ್ನಾಟಕದ ಕರಾವಳಿಯಲ್ಲಿ ಹಲವಾರು ಮಂದಿ ಯೇಸುಕ್ರಿಸ್ತರ ಜೀವನ ಚರಿತ್ರೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಪ್ರಸಂಗಗಳನ್ನು ಆಡಿಸಿದ್ದಾರೆ. ಅವುಗಳಲ್ಲಿ ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅಗರಿ ಶ್ರೀನಿವಾಸ ಭಾಗವತರ ‘ಭಗವಾನ್ ಯೇಸುಕ್ರಿಸ್ತ ಮಹಾತ್ಮೆ’ ಮತ್ತು ಈಚೆಗೆ ಎರಡನೇ ಮುದ್ರಣ ಕಂಡ ಮುಳಿಯ ಕೇಶವಯ್ಯ ಅವರ ‘ಮಹಾಚೇತನ ಏಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ಪ್ರಸಂಗಗಳನ್ನು ಪ್ರಸ್ತಾಪಿಸದೇ ಇರಲಾಗದು. ಬೆಂಗಳೂರಿನ ಮೈಸೂರು ರಸ್ತೆಯ ಶಾಂತಿ ಸಾಧನ ಸಂಶೋಧನ ಕೇಂದ್ರದಲ್ಲಿ 2003ರ ಏಪ್ರಿಲ್ ತಿಂಗಳಲ್ಲಿ 'ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತರ ಕೊಡುಗೆ’ ಕುರಿತು ನಡೆದ ವಿಚಾರ ಸಂಕಿರಣದ ಸಂದರ್ಭದಲ್ಲಿ, ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಂಸ್ಕೃತಿಕ ಸಂಘವು ಶ್ರೀನಿವಾಸ ಸಾಸ್ತಾನ ಅವರು ಬರೆದ ಯೇಸುಕ್ರಿಸ್ತನ ಕುರಿತ ಪ್ರಸಂಗವೊಂದನ್ನು ಪ್ರದರ್ಶಿಸಿತ್ತು. ಅದೇ ಬಗೆಯಲ್ಲಿ 2005ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಸಂತ ಝೇವಿಯರ್ ಪ್ರಧಾನಾಲಯದಲ್ಲಿ, ಕ್ರಿಸ್ಮಸ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮಾರುತಿ ಯುವಕರ ಯಕ್ಷಗಾನ ಮೇಳವು ‘ಕ್ರಿಸ್ತ ಕಾರುಣ್ಯ’ ಎಂಬ ಹೆಸರಿನ ಯಕ್ಷಗಾನ ಪ್ರಸಂಗವನ್ನು ಆಡಿತ್ತು. ಇವೆಲ್ಲಾ ಕರಾವಳಿಯ ಯಕ್ಷಗಾನ ಪ್ರಸಂಗಗಳು. ಇನ್ನೂ ಈ ವಿಷಯದ ಪ್ರಸಂಗಗಳನ್ನಾಡುವ ಮೇಳಗಳು ಇದ್ದಿರಲೂಬಹುದು.

ಅದೇ ಹಾದಿಯಲ್ಲಿ ಬಯಲು ಸೀಮೆಯ ದಕ್ಷಿಣ ಕರ್ನಾಟಕದ ಮೂಡಲಪಾಯ ಬಯಲಾಟದಲ್ಲಿ ಸುಬ್ಬರಾಯಪ್ಪ ಅವರು ‘ಏಸು ಸ್ವಾಮಿ ಕಥೆ’ಯನ್ನು ರಚಿಸಿದ್ದಾರೆ. ಕ್ರೈಸ್ತರಲ್ಲದವರೇ ಯೇಸುಸ್ವಾಮಿಯ ಕುರಿತು ಯಕ್ಷಗಾನ, ಬಯಲಾಟಗಳನ್ನು ರಚಿಸಿದ್ದು ಈ ರಂಗಕಲೆಯ ಜಾತ್ಯತೀತತೆಯನ್ನು ಸ್ಪಷ್ಟಪಡಿಸುತ್ತದೆ.

ಆದರೆ, ಈ ವಿದ್ಯಮಾನಗಳಿಗೆ ವ್ಯತಿರಿಕ್ತವಾಗಿ ಉತ್ತರ ಕರ್ನಾಟಕದ ರಾಯಚೂರಿನ ಮುದಗಲ್ಲಿನ ಕ್ರೈಸ್ತರು, ಕಳೆದ ಶತಮಾನದ ಅರವತ್ತು ಮತ್ತು ಎಂಬತ್ತರ ದಶಕದಲ್ಲಿ ಶ್ರೀಗ್ರಂಥ ಬೈಬಲ್ನ ಹಳೆಯ ಒಡಂಬಡಿಕೆಯ ‘ದಾವಿದ-ಗೊಲಿಯಾತನ ಕಥೆ’ಯನ್ನು, ಸ್ಥಳೀಯ ಜಾಯಮಾನಕ್ಕೆ ಅಳವಡಿಸಿ ‘ದಾವಿದ ಕಿಮ್ಮೀರ ಯುದ್ಧ - ಬಯಲಾಟ’ ವನ್ನು ಪ್ರದರ್ಶಿಸಿದ್ದು ಒಂದು ಅಪರೂಪದ ಸಂಗತಿ ಎಂಬುದನ್ನೂ ಇಲ್ಲಿ ದಾಖಲಿಸಬೇಕಾಗಿದೆ.

ಹಿಂದೆ ಹಿರೇಬಳ್ಳಾಪುರ ಎಂದು ಗುರುತಿಸಿಕೊಳ್ಳುತ್ತಿದ್ದ ಊರು ಈಗ ಬಳಕೆಯಲ್ಲಿ ದೊಡ್ಡಬಳ್ಳಾಪುರವಾಗಿದೆ. ಈ ಹಿರೇಬಳ್ಳಾಪುರದ ಹಣಬೆ ಮನೆತನದ ಎಚ್. ಎಸ್. ಸುಬ್ಬರಾಯಪ್ಪ ಅವರಿಂದ ರಚಿತವಾದ ಎಂಟು ಮೂಡಲಪಾಯದ ಬಯಲಾಟಗಳಲ್ಲಿ ಒಂದಾದ ‘ಏಸು ಸ್ವಾಮಿಯ ಕಥೆ’ಯನ್ನು ಡಾ.ಚಕ್ಕೆರೆ ಶಿವಶಂಕರ ಅವರು ಸಂಪಾದಿಸಿ, ಅದನ್ನು ಸಾಗರ್ ಪ್ರಕಾಶನದ ಮೂಲಕ ಪ್ರಕಟಿಸಿ ಕನ್ನಡ ಬಯಲಾಟದ ಸಾರಸ್ವತ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ.

ಕಾಲನ ಕಾಲ್ತುಳಿತದಲ್ಲಿ ಅಲಕ್ಷ್ಯತನದಿಂದ ಕಾಣೆಯಾಗಬಹುದಾಗಿದ್ದ, ಇದುವರೆಗೂ ಅಜ್ಞಾತವಾಗಿ ಹಸ್ತಪ್ರತಿ ರೂಪದಲ್ಲಿದ್ದ ಈ ಕೃತಿಯು, ಡಾ. ಚಕ್ಕೆರೆ ಶಿವಶಂಕರ್ ಅವರ ಪರಿಶ್ರಮದಿಂದ ಬೆಳಕು ಕಂಡಿದೆ. ಕಳೆದು ಹೋಗಬಹುದಾಗಿದ್ದ ಅಮೌಲ್ಯ ಕೃತಿಯೊಂದು ಕನ್ನಡಿಗರಿಗೆ ದಕ್ಕುವಂತಾಗಿದೆ. ನೂರಿಪ್ಪತ್ತು ಪುಟಗಳ ಈ ಸಂಪಾದಿತ ಹೊತ್ತಿಗೆಯಲ್ಲಿ, ಮೂವತ್ತನಾಲ್ಕು ಪುಟಗಳ ‘ಪ್ರಸ್ತಾವನೆ’ ಮತ್ತು ‘ಕವಿ ಕಾವ್ಯ ವಿಚಾರ’ಗಳಲ್ಲಿ ಪಡುವಲಪಾಯ ಯಕ್ಷಗಾನ, ಮೂಡಲಪಾಯ - ಬಯಲಾಟ/ದೊಡ್ಡಾಟ ಜನಪದ ರಂಗಪ್ರಕಾರಗಳು ಸಾಗಿಬಂದ ಹಾದಿಯ ಹೆಜ್ಜೆಗುರುತುಗಳನ್ನು ಗುರುತಿಸಿದ್ದಾರೆ. ಆ ಕುರಿತು ಸುಧೀರ್ಘವಾಗಿ ಚರ್ಚಿಸಿ ಬಯಲಾಟದ ಆಸಕ್ತರಿಗೆ ಮತ್ತು ಅಧ್ಯಯನಕಾರರಿಗೆ ಅನುಕೂಲವಾಗುವಂತೆ, ಶಬ್ದ ಸಂಪತ್ತಿನ ಸಾಹಿತ್ಯ ಜ್ಞಾನದ ಜೊತೆಗೆ, ಸಂಗೀತದಲ್ಲೂ ಅಪಾರ ಪರಿಶ್ರಮವನ್ನು ಬೇಡುವ ಮೂಡಲಪಾಯದ ಲಕ್ಷಣಗಳನ್ನು, ಅವುಗಳ ರಚನೆಯ ಚೌಕಟ್ಟುಗಳನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಹಿಂದಿನ, ಇಂದಿನ ಮೂಡಲಪಾಯ ಬಯಲಾಟಗಳ ಸ್ಥಿತಿಗತಿಗಳ ಕುರಿತು ಆಳವಾಗಿ ವಿಮರ್ಶಿಸಿದ್ದಾರೆ, ಭವಿಷ್ಯದ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಸಕಲಿಪ್ಪತ್ತೆಂಟು ಜಾತಿಗಳಿಗೆ ಸೇರಿದ ಜಾತ್ಯತೀತತೆಯನ್ನು ರೂಢಿಸಿಕೊಂಡಿರುವ ಆಯಾ ಜನಸಮುದಾಯದ ಸಾಂಸ್ಕೃತಿಕ ರೂಪಗಳಾದ ಮೂಡಲಪಾಯ ಬಯಲಾಟಗಳ ‘ರಂಗಭೂಮಿಯ ಸಾಧ್ಯತೆಗಳನ್ನು ಅದರ ಎಲ್ಲಾ ಸಾಂಸ್ಕೃತಿಕ ಆಶಯಗಳೊಂದಿಗೆ ಚಿಂತಿಸಬೇಕಾಗಿದೆ. ಅದರ ಭವಿಷ್ಯ ಸಂಬಂಧಿ ತೊಡಕುಗಳನ್ನು ಸಾಂಸ್ಕೃತಿಕ ನೆಲೆಯಲ್ಲಿಯೇ ನಿವಾರಿಸಬೇಕಿದೆ’ ಎಂದೂ ಅವರು ಆಗ್ರಹಿಸಿರುವುದನ್ನು ಅನುಮೋದಿಸದೇ ಇರಲಾಗದು. ಈಗಾಗಲೇ ನೇಪಥ್ಯಕ್ಕೆ ಸರಿದಿರುವ ಬಯಲಾಟ ರಂಗಪ್ರಕಾರದ ಪುನರುಜ್ಜೀವನಕ್ಕೆ ಅಗತ್ಯವಾದ ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿವೆ.


*****



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...