ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ
ನಾನು ಇಲ್ಲಿಗೆ ಬಂದದ್ದೇ ಸಾಯಿನಾಥ್‌ರನ್ನು ನೋಡಲು, ಅವರ ಮಾತು ಕೇಳಲು. ಹಾಗಾಗಿ ಕೆಲ ನಿಮಿಷಗಳಲ್ಲೇ ಮಾತು ಮುಗಿಸುತ್ತೇನೆ. ನಾನು ಈ ಪತ್ರಿಕಾ ಕ್ಷೇತ್ರದ ಕೌಂಟರ್ ಮೀಡಿಯಾ ಪ್ರಶಸ್ತಿ ಪ್ರದಾನ ಮಾಡಲು ಯಾವ ರೀತಿ ಅರ್ಹನೋ ಗೊತ್ತಿಲ್ಲ. ಪ್ರಜಾವಾಣಿಗೆ ನಾನು ಒಂದು ದಿನದ ಸಂಪಾದಕನಾಗಿದ್ದುದೂ ಕಾರಣವಾಗಿರಬಹುದು. ಆ ಸಂದರ್ಭದಲ್ಲಿ ದಿನೇಶ್ ಅಮೀನಮಟ್ಟು ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ- ಪತ್ರಿಕೆಗಳು ಸಾಯಿನಾಥ್ ಪ್ರವೃತ್ತಿ ಇರುವಂಥಹ ಎಳೆಯರನ್ನು ಹುಡುಕಬೇಕಲ್ಲವೆ ಅಂತ. ಆಗ ಒತ್ತಡದಲ್ಲಿ ಮಾತು ಮುಂದುವರಿಯಲಿಲ್ಲ. ತಮ್ಮ ಬರವಣಿಗೆಯೊಂದರಲ್ಲಿ, ಜಿ. ಎನ್. ಮೋಹನ್‍ಅವರು ಸಾಯಿನಾಥ್ ಹೆಜ್ಜೆಯಲ್ಲೇ ಅಷ್ಟೋ ಇಷ್ಟೋ ಹೆಜ್ಜೆ ಇಡುತ್ತಿರುವ ಎಳೆಯ ಪತ್ರಕರ್ತರನ್ನು ಉದಾಹರಿಸುತ್ತಾರೆ. ಈಗ ಅಂಥವರಿಗೆ ಸಾಯಿನಾಥ್ ಕೌಂಟರ್ ಮೀಡಿಯಾ ಪ್ರಶಸ್ತಿ ಕೊಡುತ್ತಿರುವುದು ಪತ್ರಿಕಾ ಕ್ಷೇತ್ರದಲ್ಲಿ ಕನಸು ಬಿತ್ತುವ ಬಿತ್ತನೆ ಬೀಜದಂತೆ ಕಾಣಿಸುತ್ತದೆ.
ಪತ್ರಕರ್ತರು ವರ್ತಮಾನವನ್ನು ಹಿಡಿಯುವವರು. ಓಡುತ್ತಿರುವ ಕಾಲವನ್ನು ಒಂದು ಟೆಲಿವಿಷನ್ ಜಾಹೀರಾತು ತುಂಬಾ ಚೆನ್ನಾಗಿ ಕಟ್ಟಿಕೊಡುತ್ತದೆ. ಆ ಜಾಹೀರಾತು ಸ್ಪ್ರೈಟ್ ಡ್ರಿಂಕ್ಸು ಅಂತಾರಲ್ಲ ಆ ಕುಡಿತದ್ದು. ಆ ಜಾಹೀರಾತಿನ ಹೆಸರು 'ಚತುರ ಕಾಗೆ' ಅಂತ. ಮೊದಲು ನಾನು ಓದಿದ್ದ ತಿಳಿದಿದ್ದ ಕಾಗೆ ಪರದೆ ಮೇಲೆ ಬರುತ್ತದೆ. ಕಾಗೆಗೆ ಬಾಯಾರಿಕೆ. ಆದರೆ ಒಂದು ಬಾಟಲ್‌ನಲ್ಲಿ ಅರ್ಧದಷ್ಟು ನೀರು ಇರುತ್ತದೆ. ಅದು ಕೊಕ್ಕಿಗೆ ಎಟುಕುತ್ತಿರುವುದಿಲ್ಲ. ಅದು ಸುತ್ತಮುತ್ತಲಿದ್ದ ಕಲ್ಲುಗಳನ್ನು ಹೆಕ್ಕಿ ತಂದು ನೀರನ್ನು ಮೇಲಕ್ಕೆ ಬರಿಸಲು ಪ್ರಯತ್ನಿಸಿ ಸುಸ್ತಾಗಿ ಕೈಚೆಲ್ಲಿ ಕೂರುತ್ತದೆ. ಆಗ ಇನ್ನೊಂದು ಚಿನ್ನದ ಸರದ ಶ್ರೀಮಂತ ದೈತ್ಯ ಕಾಗೆ ಧೂಮಕೇತುವಿನಂತೆ ನೀರಿನ ಬಾಟಲಿ ಹತ್ತಿರ ಬರುತ್ತದೆ. ಅದಕ್ಕೋ ದಾಹ. ಅದು ಪಕ್ಕದಲ್ಲಿದ್ದ ಕಲ್ಲಲ್ಲಿ ಕೊಕ್ಕನ್ನು ಮಸೆದುಕೊಳ್ಳುತ್ತದೆ. ನಂತರ ಅಲ್ಲಿದ್ದ ಸ್ಪ್ರೈಟ್ ಬಾಟಲನ್ನೆ ಕುಕ್ಕಿ ತೂತು ಮಾಡಿ, ಚಿಮ್ಮಿದ ಆ ಡ್ರಿಂಕ್ಸ್ ಕುಡಿದು ಗರ್ವದಿಂದ ಹಾರಿ ಹೋಗುತ್ತದೆ. ಇದು ಈ ಕಾಲದ ಜಾಹೀರಾತು.
ನಾನು ಚಿಕ್ಕವನಾಗಿದ್ದಾಗ ಮೊದಲ ಕಾಗೆಯ ಪಾಠವಿತ್ತು. ಆ ಕಾಗೆಗೂ ನೀರು ಸಿಕ್ಕಿ ಅದು ಕಾಗೆಯ ಜಾಣತನ, ಕಾಗೆಯ ವಿವೇಕ ಎಂಬ ನೀತಿಗೆ ಆ ಕತೆ ಹೆಸರಾಗಿತ್ತು. ಇಂದು ಆ ಜಾಣತನ ವಿವೇಕ ಧ್ವಂಸಗೊಂಡಿವೆ. ಕಾರ್ಪೊರೇಟ್, ಖಾಸಗೀ ದೈತ್ಯ ಕಾಗೆಗಳ ದಾಹ, ನಾಳೆಗೆ ಉಳಿಯದಂತೆ ಯಾವುದನ್ನು ಧ್ವಂಸ ಮಾಡಿಲ್ಲ? ಭೂಮಿ, ಆ ಭೂಮಿಯ ಒಳ ಹೊರಗಿನ ನೀರು, ಕಾಡು, ಅದಿರು, ಬೆಳೆ ಬೆಳೆಯುವ ಹೊಲಗದ್ದೆ, ಕೊನೆಗೆ ಗಾಳಿ ಯಾವುದು ಉಳಿದಿದೆ? ಬಡತನ ರೇಖೆಯನ್ನೇ ಕೆಳಕ್ಕಿಳಿಸಿ ಭಿಕ್ಷುಕರನ್ನು ಇಲ್ಲಿ ಮೇಲೆತ್ತಲಾಗಿದೆ! ಹೀಗಿದ್ದೂ ನಮ್ಮ ಉಳಿವಿಗೆ, ಇಂದು ಬಿಡುಗಡೆಯಾದ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಸಾಯಿನಾಥ್‌ರವರು ಹೇಳಿರುವ 'ಭಾರತದ ಬಡತನದ ಸ್ಥಿತಿಯನ್ನು ಒಂದು 'ಪ್ರಕರಣ'ವಾಗಲ್ಲ; ಬದಲಿಗೆ ಒಂದು 'ಪ್ರಕ್ರಿಯೆ'ಯಾಗಿ ನೋಡಬೇಕು' ಎಂಬ ಒಂದು ಮಾತೂ ದಾರಿ ತೋರಿಸಬಹುದು. ಈ ದೃಷ್ಟಿ ನಮ್ಮ ಕಣ್ಣಿಗೆ ಬಂದರೆ, ಮುಖ್ಯವಾಗಿ ಪತ್ರಿಕೋದ್ಯಮಕ್ಕೆ ಬಂದರೆ, ಉದ್ಯಮಕ್ಕೆ ಕಷ್ಟವೇನೋ? ಆದರೆ ಒಂದಿಷ್ಟು ಪತ್ರಕರ್ತರಿಗಾದರೂ ಬಂದರೂ ಕೂಡ ಆಗುವ ಬದಲಾವಣೆ ಅಷ್ಟಿಷ್ಟಲ್ಲ. ಆಗ ಟಾಲ್‌ಸ್ಟಾಯ್‌ಗೆ ಕಂಡಂತೆ ನಮಗೂ ಕಾಣಿಸಬಹುದು. ಟಾಲ್‌ಸ್ಟಾಯ್ ಹೇಳಿದ್ದು: ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೇ ನಂಬಿಸುತ್ತಿದ್ದಾನೆ! ದುರಂತವೆಂದರೆ ಅದನ್ನೇ ತಾನೂ ನಂಬುತ್ತಿದ್ದಾನೆ!! -ಹೀಗೆ ಟಾಲ್‌ಸ್ಟಾಯ್‌ಗೆ ಕಂಡಂತೆ ನಮಗೂ ಸುಲಿಗೆಯ ಲಕ್ಷಣಗಳು ಗೋಚರಿಸಬಹುದು....
ಎದೆಗೆ ಬಿದ್ದ ಅಕ್ಷರ - ಹೀಗೇ ಮುಂದುವರಿದರೆ / 145
No comments:
Post a Comment