Friday, 12 July 2019

ಕನ್ನಡ ಕಥೋಲಿಕ ಸಾಹಿತ್ಯ - ಸಿ ಮರಿಜೋಸೆಫ್



ಹಸ್ತಪ್ರತಿಗಳಲ್ಲಿ ಅಡಗಿದ್ದ ಕನ್ನಡ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದ ರೆವರೆಂಡ್ ಪರ್ಡಿನೆಂಡ್ ಕಿಟೆಲರು ನಾಗವರ್ಮನ ಛಂದೋಂಬುಧಿಯನ್ನು ಮುದ್ರಣ ರೂಪಕ್ಕೆ ತರುವಾಗ ಅದರಲ್ಲಿ ದೀರ್ಘ ಉಪೋದ್ಘಾತ ಬರೆದು ಕನ್ನಡ ಸಾಹಿತ್ಯ ಚರಿತ್ರೆಯ ಮೊತ್ತ ಮೊದಲ ಹೊಳಹು ಹಾಕಿಕೊಟ್ಟರು. ಆ ನೀಳ ಬರಹದಲ್ಲಿ ಅವರು ಕನ್ನಡ ಸಾಹಿತ್ಯ ಪರಂಪರೆಯನ್ನು ಪಂಪ ರನ್ನರ ಜೈನಯುಗ, ಅಲ್ಲಮ ಚಾಮರಸರ ವೀರಶೈವ ಯುಗ, ಕುಮಾರವ್ಯಾಸಾದಿಗಳ ಬ್ರಾಹ್ಮಣಯುಗ ಮುಂತಾಗಿ ಗುರುತಿಸಿದರು. ಅದನ್ನು ನಮ್ಮ ಕನ್ನಡದ ಸಾಹಿತ್ಯವರೇಣ್ಯರು ಅನುಮೋದಿಸುತ್ತಾರೆ. ಆದರೆ ಹೊಸಗನ್ನಡ ಅರುಣೋದಯದ ಹರಿಕಾರರಾದ ಕ್ರೈಸ್ತ ಮಿಷನರಿಗಳ ಕಾಲವನ್ನು ಕ್ರೈಸ್ತ ಯುಗವೆಂದೇಕೆ ಕರೆಯಬಾರದೆಂದು ಅವರಾರೂ ಚಿಂತಿಸಿದಂತಿಲ್ಲ. ಇತ್ತೀಚೆಗೆ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಕ್ರೈಸ್ತಯುಗ ಪರಂಪರೆಯನ್ನು ಧ್ವನಿಸುವ ಮಾತುಗಳು ಕೇಳಿಬರುತ್ತಿದೆ.

ಮೂಲತಃ ಧರ್ಮಪ್ರಚಾರಕ್ಕಾಗಿ ಆಗಮಿಸಿದ ಮಿಷನರಿಗಳು ತಮ್ಮ ಕ್ಷೇತ್ರಕಾರ್ಯದ ಅಂಗವಾಗಿ ಕ್ರೈಸ್ತ ಧರ್ಮೋಪದೇಶದ ಪುಸ್ತಕಗಳು, ಕ್ರೈಸ್ತ ಧರ್ಮವನ್ನು ಸಮರ್ಥಿಸುವ ವಾದಗಳು, ಕ್ರೈಸ್ತ ಸಂತರ ಪರಿಚಯ ಮುಂತಾದವುಗಳನ್ನು ಯಥೇಚ್ಛವಾಗಿ ಪ್ರಕಟಿಸಿದ್ದಾರೆ. ಇಂಥಾ ಸಾಹಿತ್ಯದಲ್ಲಿ ಅಂದಿನ ಕಾಲದ ಭಾಷಾಪ್ರಯೋಗಗಳನ್ನು ಅರಿಯುವ ವಿಪುಲ ಅವಕಾಶಗಳಿವೆ. ದುರದೃಷ್ಟವಶಾತ್ ಅಂದಿನ ಕಾಲದ ಎಷ್ಟೋ ಕೃತಿಗಳು ಇಂದು ಲಭ್ಯವಿಲ್ಲವಾಗಿದೆ. ಕೆಲವು ಮಾತ್ರವೇ ಇದ್ದರೂ ಅವೆಲ್ಲ ವಿದೇಶದ ಸಂಗ್ರಹಾಲಯಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿವೆ.

ಬೆಂಗಳೂರು ಮಹಾಧರ್ಮಪ್ರಾಂತ್ಯ, ಮೈಸೂರು ಧರ್ಮಪ್ರಾಂತ್ಯ ಮೊದಲುಗೊಂಡು ಕರ್ನಾಟಕದ ಯಾವುದೇ ಕ್ರೈಸ್ತ ಸಂಸ್ಥೆಯು ಇಂತಹ ಹಳೆಯ ಸಾಹಿತ್ಯವನ್ನು ಸಂರಕ್ಷಿಸುವ ಗೋಜಿಗೆ ಹೋಗಿಲ್ಲ ಎಂಬುದು ನಮ್ಮ ದೌರ್ಭಾಗ್ಯ. ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಸಂಘ ಮತ್ತು ಕನ್ನಡ ಯಾಜಕರ ಬಳಗವು ಹೊರತಂದ ಒಂದೂವರೆ ಶತಮಾನದ ಹಿಂದಿನ ಲತೀನ್ ಕನ್ನಡ ನಿಘಂಟು ಹಾಗೂ ಕನ್ನಡ ಲತೀನ್ ಪದನೆರಕೆಗಳ ಮರುಮುದ್ರಣವನ್ನು ಹೊರತುಪಡಿಸಿದರೆ ಉಳಿದ ಕಥೋಲಿಕ ಧಾರ್ಮಿಕ ಸಾಹಿತ್ಯವು ಹಳೆಯದೆಂಬ ಕಾರಣಕ್ಕೆ ಅಥವಾ ಜಿರಲೆಗಳಿಗೆ ಆಹ್ವಾನವೆಂಬ ಕಾರಣಕ್ಕೆ ಬಾವಿಯ ತಳ ಸೇರಿವೆ ಅಥವಾ ಬೂದಿ ಬುಧವಾರದಂದು ಬೂದಿಯಾಗಿವೆ. ಎಲ್ಲೋ ಅಲ್ಲಿ ಇಲ್ಲಿ ಉಳಿದಿರುವ ಈ ಪ್ರಾಚೀನ ಸಾಹಿತ್ಯವನ್ನು ಯಥಾವತ್ತಾಗಿ ಸಂರಕ್ಷಿಸುವ, ಅಥವಾ ಡಿಜಿಟೈಸ್ ಮಾಡುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ಇಲ್ಲವಾದರೆ ಇಂಥದೊಂದು ಪುಸ್ತಕ ಇತ್ತು, ಆದರೆ ಈಗ ಲಭ್ಯವಿಲ್ಲ ಎಂದು ಹೇಳಿ ಸುಮ್ಮನಾಗಬೇಕಾಗುತ್ತದೆ.

ಕನ್ನಡನಾಡಿಗೆ ಮೊತ್ತಮೊದಲಿಗೆ ಆಗಮಿಸಿದ ಧರ್ಮಪ್ರಚಾರಕರು ಮುದ್ರಣಯಂತ್ರವು ಬರುವುದಕ್ಕೆ ಮೊದಲಿನಿಂದಲೂ ತಮ್ಮದೇ ಆದ ರೀತಿಯಲ್ಲಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ ಎಂಬುದು ಇತಿಹಾಸದಲ್ಲಿ ಕಂಡು ಬರುತ್ತದೆ. ಕನ್ನಡನಾಡನ್ನು ಕ್ರಿಸ್ತಶಕ ೧೬೪೮ರಲ್ಲಿ ಶ್ರೀರಂಗಪಟ್ಟಣದ ಮೂಲಕ ಪ್ರವೇಶಿಸಿದ ಜೆಸ್ವಿತ್ ಮಿಷನರಿಗಳಲ್ಲಿ ಮೊದಲಿಗರಾದ ಲಿಯೊನಾರ್ಡೊ ಚಿನ್ನಮಿಯವರು ಸಮಗ್ರ ಜ್ಞಾನೋಪದೇಶ, ಸಂತರ ಜೀವನಚರಿತ್ರೆ ಹಾಗೂ ಧರ್ಮಸಮರ್ಥನೆಯ ಒಂದು ಕೃತಿಯನ್ನು ಬರೆದಿದ್ದರೆಂದು ಇತಿಹಾಸ ಹೇಳುತ್ತದೆ. ಲಿಯೊನಾರ್ಡೊ ಚಿನ್ನಮಿಯವರ ನಂತರ ಕ್ರಿಸ್ತಶಕ ೧೬೪೮ ರಿಂದ ೧೭೭೨ ರವರೆಗಿನ ಅವಧಿಯಲ್ಲಿ ಸ್ವಾಮಿ ಪ್ಲಾಟೆಯವರು ಜಪಮಾಲೆಯ ರಹಸ್ಯ (೧೭೯೧) ಎಂಬ ಪುಸ್ತಕವನ್ನು ಬರೆದರೆಂಬುದೂ ತಿಳಿದು ಬರುತ್ತದೆ. ಅಂದಿನಿಂದ ಇಂದಿನವರೆಗೆ ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯ ಯಥೇಚ್ಛವಾಗಿ ಮೂಡಿ ಬಂದಿದೆ. ಅದರಲ್ಲಿ ಧಾರ್ಮಿಕ ಸಾಹಿತ್ಯದ್ದೇ ಸಿಂಹಪಾಲು ಎನ್ನಬಹುದಾದರೂ ಅವು ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಅಲಕ್ಷಿಸದಂಥ ಛಾಪು ಮೂಡಿಸಿವೆ ಎಂದು ಹೇಳಬಹುದು. ಪ್ರೊಟೆಸ್ಟೆಂಟ್ ಬಾಂಧವರಿಗೆ ಹೋಲಿಸಿದರೆ ಕನ್ನಡ ಕಥೋಲಿಕ ಸಾಹಿತ್ಯ ವಿರಳ ಎನ್ನಬಹುದಾದರೂ ನಗಣ್ಯವೇನಲ್ಲ.

ಇವೆಲ್ಲಕ್ಕಿಂತ ವಿಭಿನ್ನವಾಗಿ ವಿವಿಧ ಜೆಸ್ವಿತ್ ಪಾದ್ರಿಗಳು ತಮ್ಮ ಧರ್ಮಪ್ರಚಾರದ ದಿನಗಳ ದೈನಂದಿನ ಆಗುಹೋಗುಗಳನ್ನು ದಾಖಲಿಸಿ ವರ್ಷಕ್ಕೊಮ್ಮೆ ರೋಮ್ ನಗರದಲ್ಲಿದ್ದ ತಮ್ಮ ವರಿಷ್ಠರಿಗೆ ಕಳಿಸಿದ ವಾರ್ಷಿಕ ವರದಿಗಳಂತೂ ಇತಿಹಾಸದ ಅತ್ಯದ್ಭುತ ದಾಖಲೆಗಳಾಗಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ ಜೆಸ್ವಿತರು ನೇಪಥ್ಯಕ್ಕೆ ಸರಿದು ತಮ್ಮ ಕ್ಷೇತ್ರವನ್ನು ಫ್ರಾನ್ಸ್ ದೇಶದ ಎಂಇಪಿ ಸಂಸ್ಥೆ ಅಂದರೆ ಮಿಸಿಯೋಂ ಎತ್ರಾಂಜೇರ್ ದ ಪಾರೀ ಅಥವಾ ಫ್ರಾನ್ಸಿನ ಹೊರನಾಡ ಧರ್ಮಪ್ರಚಾರ ಸಂಸ್ಥೆಗೆ ಒಪ್ಪಿಸಿ ಹೋದರು. ಈ ಫ್ರೆಂಚ್ ಪಾದ್ರಿಗಳೂ ಸಹ ತಮ್ಮ ಧರ್ಮ ನಡವಳಿಕೆಯ ಕರ್ತವ್ಯದ ಅಂಗವಾಗಿ ಹಲವಾರು ಕೃತಿರಚನೆಗಳನ್ನು ನಡೆಸಿದರು. ಅವರಲ್ಲಿ ಮುಖ್ಯವಾಗಿ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೋ (೧೮೦೬-೧೮೭೩) ಅವರು ಲತೀನೋ ಕನಾರೆನ್ಸ್ ನಿಘಂಟು(೧೮೬೧), ದೈವಪರೀಕ್ಷೆ (ತಮಿಳು ಭಾಷಾಂತರ), ಸತ್ಯವೇದ ಪರೀಕ್ಷೆ(೧೮೫೨), ದಿವ್ಯಮಾತೃಕೆ (೧೮೬೨), ಸುಕೃತ ಮಂತ್ರಗಳು (೧೮೬೬), ದೊಡ್ಡ ಜಪದಪುಸ್ತಕವು (೧೮೬೩) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅದೇ ಸಂಸ್ಥೆಯ ಮತ್ತೊಬ್ಬ ಪಾದ್ರಿಯಾದ ಬುತೆಲೋ ಅವರು ಕಥೋಲಿಕವಲಯದಲ್ಲಿ ಮೊತ್ತಮೊದಲು ಮುದ್ರಣಯಂತ್ರವನ್ನು ಸ್ಥಾಪಿಸಿದ್ದಲ್ಲದೆ ತಾವೇ ಸ್ವತಃ ಅದನ್ನು ನಿರ್ವಹಿಸಿದ ಖ್ಯಾತಿ ಹೊಂದಿದ್ದಾರೆ. ಅವರು ರಚಿಸಿದ ಕೃತಿಗಳಲ್ಲಿ ಕನ್ನಡ ಲತೀನ ಪದಕೋಶ, ಇಂಗ್ಲೆಂಡ್ ಶೀಮೆಯ ಚರಿತ್ರೆ, ಭೂಗೋಳಶಾಸ್ತ್ರ, ಗಣಿತ ಪುಸ್ತಕ, ಆದಿತ್ಯವಾರದ ಅದ್ಭುತವು, ತಿರುಸಭೆಯ ಚರಿತ್ರೆಯು, ಜ್ಞಾನಬೋಧಕ, ಕನ್ನಡ ಜ್ಞಾನೋಪದೇಶವು, ಅರ್ಚಶಿಷ್ಟರ ಚರಿತ್ರೆಯು, ಪತಿತರ ಖಂಡನೆಯು, ತಿರುಸಭೆಯ ಲಕ್ಷಣಗಳು ಮುಂತಾದ ಹಲವು ಪುಸ್ತಕಗಳಿವೆ.

ಕ್ರಿಸ್ತಶಕ ೧೮೫೦ ರಿಂದ ೧೯೪೦ ರ ಅವಧಿಯಲ್ಲಿ ಎಂಇಪಿ ಪಾದ್ರಿಗಳಾದ ಫಾದರ್ ಜೆರ್ಬಿಯೆ, ಫಾದರ್ ದೆಸೆಂ, ಫಾದರ್ ಬಾರೆ ಮುಂತಾದವರು ಈ ಸಾಹಿತ್ಯ ಕೃಷಿಯಲ್ಲಿ ಕೈಯಾಡಿಸಿದರು. ಈ ಧಾರ್ಮಿಕ ಕೃತಿಗಳಲ್ಲಿ ಹೆಚ್ಚಿನವು ತಮಿಳು, ಇಂಗ್ಲಿಷ್, ಫ್ರೆಂಚ್ ಭಾಷೆಗಳಿಂದ ಅನುವಾದಗೊಂಡವು.

ಫ್ರೆಂಚ್ ಮಿಷನರಿ ಫಾದರ್ ಇ. ಮೊರೆಯ್ಯಿನವರ ಪ್ರೇರಣೆಯಿಂದ ಐ ಎಚ್ ಲೋಬೊ ಸ್ವಾಮಿಯವರು “ಜೇಸುನಾಥರ ತಿರು ಹೃದಯದ ದೂತನು” ಎಂಬ ೧೬ ಪುಟಗಳ ಮಾಸಪತ್ರಿಕೆಯನ್ನು ೧೯೨೪ರಲ್ಲಿ ಹೊರತಂದು ಸತತ ೪೭ ವರ್ಷಗಳ ಕಾಲ ನಡೆಸಿದರು. ಮೈಸೂರು ಧರ್ಮಪ್ರಾಂತ್ಯದ ವತಿಯಿಂದ ಈ ಪತ್ರಿಕೆಯು ಇಂದಿಗೂ ಪ್ರಕಟವಾಗುತ್ತಿದ್ದು ಶತಮಾನದತ್ತ ದಾಪುಗಾಲಿಡುತ್ತಿದೆ ಎಂಬುದೇ ಹೆಮ್ಮೆಯ ವಿಷಯ. ಈ ಪತ್ರಿಕೆಯನ್ನು ಮುನ್ನಡೆಸುವಲ್ಲಿ ವಂದನೀಯರಾದ ವಲೇರಿಯನ್ ಸೋಜ, ದಯಾನಂದ ಪ್ರಭು, ಜಿ ಜೋಸೆಫ್, ಎನ್ ಎಸ್ ಮರಿಜೋಸೆಫ್, ಕೆ ಎ ವಿಲಿಯಂ ಮುಂತಾದವರ ಕೊಡುಗೆ ಅನನ್ಯ.

ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಎ ಎಂ ಜೋಸೆಫ್ ಎಂಬ ಶ್ರೀಸಾಮಾನ್ಯರು ತಮ್ಮ ಅಣ್ಣ ಬೆರ್ನಾರ್ಡರೊಂದಿಗೆ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದರು. ಕ್ರಮೇಣ ಅವರು ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ವಸ್ತು ವೈವಿಧ್ಯತೆಯ ದೃಷ್ಟಿಯಿಂದ ನೋಡಿದರೆ ಜೋಸೆಫರ ಕೃತಿಗಳು ಓದುಗರ ಗಮನ ಸೆಳೆಯುತ್ತವೆ. ಅವರು ಬರೆದ 'ಫಬಿಯೋಲೆ' ಕೃತಿಯಂತೂ ಕನ್ನಡ ಕ್ರೈಸ್ತರ ಮನೆಗಳಲ್ಲಿ ಅಮರವಾಗಿದೆ. 

೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರ ಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು.೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ. 

ಎ ಎಂ ಜೋಸೆಫರ ಅಣ್ಣನವರಾದ ಎ ಎಂ ಬೆರ್ನಾರ್ಡ್ನವರು ಬರೆದ `ಆತ್ಮಪರಾಗ' ಎಂಬ ಧರ್ಮೋಪದೇಶದ ಪುಸ್ತಕವು ಇಂದಿಗೂ ಅತ್ಯಂತ ಜನಪ್ರಿಯವಾದ ಕಿರುಪುಸ್ತಿಕೆಯಾಗಿದೆ. ಈ ಇಬ್ಬರೂ ಸೋದರರು ಜನತೆಗೆ ಧರ್ಮಜಾಗೃತಿಯೊಂದಿಗೆ ಲೋಕಜ್ಞಾನವನ್ನೂ ನೀಡಿದ ಮಹನೀಯರಾಗಿದ್ದಾರೆ. 

ಕ್ರಿಸ್ತಶಕ ೧೯೬೦ ರಿಂದೀಚೆಗೆ ಫಾದರ್ ಎನ್ ಎಸ್ ಮರಿಜೋಸೆಫ್, ಫಾದರ್ ಅಂತಪ್ಪ, ಫಾದರ್ ಜಾರ್ಜ್ ಡಿಸೋಜ, ಸ್ವಾಮಿ ಅಮಲಾನಂದ, ಫಾದರ್ ದಯಾನಂದ ಪ್ರಭು, ಸಂತ ರಾಯಪ್ಪರ ಗುರುಮಠದ ಕನ್ನಡ ಸಾಹಿತ್ಯ ಸಂಘ, ಕಥೋಲಿಕ ಕ್ರೈಸ್ತರ ಕನ್ನಡ ಸಾಹಿತ್ಯ ಸಂಘ, ಫಾದರ್ ಫೆಲಿಕ್ಸ್ ನರೋನ, ಫಾದರ್ ಎಲ್ ಅರುಳಪ್ಪ, ಫಾದರ್ ಜೆ ಬಿ ಝೇವಿಯರ್ ಮುಂತಾದವರಿಂದ ಒಟ್ಟಾರೆಯಾಗಿ ಬೈಬಲ್ ಭಾಷಾಂತರ, ಸಂಗೀತ ಪ್ರಸ್ತಾರದೊಂದಿಗೆ ಕ್ರೈಸ್ತಗೀತೆಗಳು, ಧರ್ಮೋಪದೇಶ, ಪೂಜಾಪುಸ್ತಕ, ವಿವಿಧ ಧಾರ್ಮಿಕ ಕ್ರಿಯೆಗಳ ವ್ಯಾಖ್ಯಾನ, ಧರ್ಮಾಧ್ಯಯನ ಪುಸ್ತಕಗಳು, ಧ್ವನಿಸುರುಳಿಗಳು, ನಾಟಕಗಳು, ರೂಪಕಗಳು, ಮಾಧ್ಯಮ ನಿರೂಪಣೆಗಳು ಚಲಾವಣೆಗೆ ಬಂದವು. 

ಫಾದರ್ ದಯಾನಂದ ಪ್ರಭು ಮತ್ತು ಫಾದರ್ ದೇವದತ್ತ ಕಾಮತರು ಕಾವ್ಯಗಳನ್ನು ರಚಿಸಿರುವುದು ಒಂದು ಪ್ರಮುಖ ಉಲ್ಲೇಖವಾಗುತ್ತದೆ. (ನಮ್ಮ ಹಿಂದೂ ಸೋದರರಾದ ಗೋವಿಂದ ಪೈ, ಜಿ ಪಿ ರಾಜರತ್ನಂ, ಬಿಎಸ್ ತಲ್ವಾಡಿ, ಲತಾ ರಾಜಶೇಖರ್, ಆಗುಂಬೆ ಎಸ್ ನಟರಾಜ್, ಬೆಗೋ ರಮೇಶ ಮುಂತಾದವರೂ ಕ್ರಿಸ್ತನ ಕುರಿತು ಬರೆದಿರುವುದನ್ನು ಅಲ್ಲಗಳೆಯಲಾಗದು) 

ಕ್ರೈಸ್ತ ಕಥೋಲಿಕ ಸಾಹಿತಿಗಳಲ್ಲಿ ಶಿಖರಪ್ರಾಯರಾಗಿರುವ ನಾರ್ಬರ್ಟ್ ಡಿಸೋಜರು ತಿರುಗೋಡಿನ ರೈತಮಕ್ಕಳು, ಮುಳುಗಡೆ, ದ್ವೀಪ, ಕುಂಜಾಲು ಕಣಿವೆಯ ಕೆಂಪು ಹೂವು, ಕಾಡಿನ ಬೆಂಕಿ, ಇಗರ್ಜಿ ಸುತ್ತಲಿನ ಮನೆಗಳು ಮುಂತಾದ ಮೂವತ್ತು ಕಾದಂಬರಿಗಳನ್ನೂ ನಿನ್ನುದ್ಧಾರವೆಷ್ಟಾಯ್ತು, ಸ್ವರ್ಗದ ಬಾಗಿಲಲ್ಲಿ ನರಕ ಎಂಬಿತ್ಯಾದಿ ಆರು ಕಥಾಸಂಕಲನಗಳನ್ನೂ ಹಲವಾರು ನಾಟಕ, ಶಿಶುಸಾಹಿತ್ಯ, ಬಾನುಲಿನಾಟಕಗಳನ್ನೂ ರಚಿಸಿ ಪ್ರಖ್ಯಾತರಾಗಿದ್ದಾರೆ. ಕರ್ನಾಟಕದ ಕ್ರೈಸ್ತ ಪ್ರಪಂಚವನ್ನು ಸಮರ್ಥವಾಗಿ ಬಿಂಬಿಸಿದ ಯಶಸ್ವೀ ಲೇಖಕರಿವರು. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಾಡಿಯವರಿಗೆ ಶೀಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್ ಪ್ರದಾನಮಾಡಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಯೂ ಗೌರವಿಸಲಾಗಿದೆ. 

ಕಥೋಲಿಕ ಕ್ರೈಸ್ತ ಸಾಹಿತ್ಯವಲಯದಲ್ಲಿ ಕೇಳಿಬರುವ ಮತ್ತೊಂದು ಪ್ರಮುಖ ಹೆಸರು ಫ್ರಾನ್ಸಿಸ್ ಎಂ ನಂದಗಾಂವ್ ಅವರದು. ಪತ್ರಿಕಾರಂಗದಲ್ಲಿ ಬೆಳೆದ ಇವರು ಹುಬ್ಬಳ್ಳಿ ಸೊಗಡಿನ ಭಾಷೆಯನ್ನು ಬಳಸುತ್ತಾ ಹಲವು ಕತೆಗಳನ್ನು ರಚಿಸಿದ್ದಾರೆ. ಕತೆ, ಸಂಶೋಧನೆ, ವಿಚಾರ, ನಾಟಕ ಇತ್ಯಾದಿಯಾಗಿ ಇವರ ಸುಮಾರು ಮೂವತ್ತು ಕೃತಿಗಳು ಬೆಳಕು ಕಂಡಿವೆ. 

ಧಾರ್ಮಿಕ ಸಾಹಿತ್ಯವನ್ನು ಹೊರತುಪಡಿಸಿದರೆ ಅನುವಾದ, ಅಧ್ಯಯನ, ಚಿಂತನೆ ಮತ್ತು ಇತರೆ ಪ್ರಕಾರಗಳಲ್ಲಿ ಮೈಸೂರಿನ ಡಾ. ಎಡ್ವರ್ಡ್ ನರೋನ, ಫಾದರ್ ದಯಾನಂದ ಪ್ರಭು, ಫಾದರ್ ದೇವಿಕಾಂತ್ ಮರಿಯ ವಿವೇಕ್, ಧಾರವಾಡದ ಡಾ. ವಿಲ್ಯಂ ಮಾಡ್ತ, ಚಿತ್ರದುರ್ಗದ ಫ್ಲೋಮಿನ್ ದಾಸ್, ಬಳ್ಳಾರಿಯ ಫಾದರ್ ಪಿ ವಿಜಯಕುಮಾರ್, ಚಾಮರಾಜನಗರದ ಐ ಸೇಸುನಾಥನ್, ಮಂಗಳೂರಿನ ಫಾದರ್ ಪ್ರಶಾಂತ್ ವಲೇರಿಯನ್ ಮಾಡ್ತ, ಬೆಂಗಳೂರಿನ ಸಿ ಮರಿಜೋಸೆಫ್, ಜಾಕೋಬ್ ಲೋಬೋ, ಕೆ ಜೆ ಜಾರ್ಜ್, ಮೇರಿ ಫಾತಿಮಾ, ವಲ್ಲಿ ವಗ್ಗ, ಸಿಸ್ಟರ್ ಪ್ರೇಮಾ, ಪ್ರಶಾಂತ್ ಇಗ್ನೇಷಿಯಸ್, ಅಜಯ್ ಫ್ರಾನ್ಸಿಸ್, ಪಿಸಿ ಅಂತೋಣಿಸ್ವಾಮಿ, ರೀನಿ ರಿಟಾ ಮುಂತಾದವರು ಅಲ್ಲಲ್ಲಿ ಮಿಂಚುತ್ತಾರೆ. 

ಸೃಜನಶೀಲ ಕೃತಿಕಾರರಲ್ಲಿ ಬಿ ಪ್ರಮೋದ, ಯಜಮಾನ್ ಫ್ರಾನ್ಸಿಸ್, ಸಂತೋಷ್ ಇಗ್ನೇಷಿಯಸ್, ಜಾನ್ ಸುಂಟಿಕೊಪ್ಪ, ಎಂ ಡೇವಿಡ್ ಕುಮಾರ್ ಮುಂತಾದವರು ಮುಂಚೂಣಿಯಲ್ಲಿದ್ದು ಕ್ರೈಸ್ತ ಕಥೋಲಿಕ ಕನ್ನಡ ಸಾಹಿತ್ಯ ರಂಗದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯದ ಓದುಗರ ಸಂಖ್ಯೆ ಕ್ಷಯಿಸುತ್ತಿದ್ದು ಅದೇ ಪ್ರಮಾಣದಲ್ಲಿ ಸಾಹಿತ್ಯಕೃಷಿ ನಡೆಸುವವರ ಸಂಖ್ಯೆಯೂ ಕುಗ್ಗುತ್ತಿದೆ. ಸಾಹಿತ್ಯ ಗಂಧ ಗಾಳಿಯಿಲ್ಲದವರು ತಮಗೆ ತೋಚಿದ್ದನ್ನೇ ಗೀಚಿ ಅದನ್ನೇ ಕಾವ್ಯ, ಕವನ ಇತ್ಯಾದಿಯಾಗಿ ಬಿಂಬಿಸುತ್ತಿರುವುದನ್ನೂ ಕಾಣುತ್ತಿದ್ದೇವೆ. 

ಕೊನೆಯ ಪಕ್ಷ ನಮ್ಮ ಹಿಂದಿನವರು ಬರೆದಿರುವ ಸಾಹಿತ್ಯವನ್ನಾದರೂ ನಾವು ಓದಿ, ನಮ್ಮ ಮುಂದಿನ ಪೀಳಿಗೆಗೂ ದಾಟಿಸುವ ಅನಿವಾರ್ಯದ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. 

***** 




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...