-------------------------------------
ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರ ಸ್ಥಿತಿ-ಗತಿ ಹಾಗು ಕರ್ನಾಟಕಕ್ಕೆ ಮಿಷನರಿಗಳ ಆಗಮನ ಎಂಬ ವಿಷಯದ ಬಗ್ಗೆ ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮಿಷನ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಗಮಿಸಿದ ಪ್ರಮುಖ ಮಿಷನರಿಗಳ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಮಾಡಿದ್ದೇನೆ.
---------------------------
1. ವಂದನೀಯ ಸ್ವಾಮಿ ಲಿಯೋನಾರ್ಡೊ ಚಿನ್ನಮಿ
ಕ್ರಿಸ್ತಶಕ 1649ರಲ್ಲಿ ಕನ್ನಡ ನಾಡಿಗೆ ಬಂದು ನೆಲೆಸಿದ ಆದ್ಯ ಮಿಷನರಿ ಎಂದರೆ ಕಥೋಲಿಕ ಪಂಥಕ್ಕೆ ಸೇರಿದ ವಂದನೀಯ ಸ್ವಾಮಿ ಲಿಯೋನಾರ್ಡೊ ಚಿನ್ನಮಿಯವರು. ಪೂಜ್ಯರು ಯೇಸು ಸಭೆ ಅಂದರೆ ಸೊಸೈಟಿ ಆಫ್ ಜೀಸಸ್ ಸಂಸ್ಥೆಗೆ ಸೇರಿದವರು. ಇವರು ಕನ್ನಡದ ಮೊದಲ ಲೇಖಕರೂ ಹೌದು. ಕ್ರಿಸ್ತಶಕ 1609ನೇ ಇಸವಿಯಲ್ಲಿ ಇಟಲಿ ದೇಶದ ನೇಪಲ್ಸ್ ನಗರದಲ್ಲಿ ಜನಿಸಿದರು. ಇವರು ಕ್ರಿಸ್ತಶಕ 1647ರಲ್ಲಿ ಯಾಜಕ ದೀಕ್ಷೆಯ ನಂತರ ಗೋವಾ ಮೂಲಕ ಭಾರತಕ್ಕೆ ಆಗಮಿಸಿ ಅಲ್ಲಿಂದ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ನೆಲೆಸಿದರು. ಇವರಿಗೂ ಹಿಂದೆ ಭಾರತಕ್ಕೆ ಬಂದ ಜಸ್ವಿಟ್ ಮಿಷನರಿ ರಾಬರ್ಟ್ ದಿ ನೋಬಿಲಿ ತಮಿಳುನಾಡಿನಲ್ಲಿ (1577-1659) ಹಿಂದೂ ವೇಷದ ಸನ್ಯಾಸಿಯಂತೆ ಆಚಾರ ವಿಚಾರಗಳನ್ನು ಅನುಸರಿಸುತ್ತಾ ಬಂದಿದ್ದರು. ದಿನೋಬಿಲಿಯಂತೆ, ಚಿನ್ನಮಿಯೂ ಹಿಂದೂ ಸನ್ಯಾಸಿಗಳಂತೆ ಕಾವಿಯುಟ್ಟು ಕಮಂಡಲ ಹಿಡಿದು ಮೈಸೂರು ದೇಶದಲ್ಲೆಲ್ಲಾ ಕ್ರೈಸ್ತ ಮತಪ್ರಚಾರ ಮಾಡಿದರು.
ಆ ಕಾಲದಲ್ಲಿ ಅಂದರೆ ಕ್ರಿಸ್ತಶಕ 1634 ರಿಂದ ಕ್ರಿಸ್ತಶಕ 1659ರವರೆಗೂ ರಾಜ್ಯಭಾರ ಮಾಡಿದ ಅಂದಿನ ಮೈಸೂರಿನ ಅಪ್ರತಿಮ ವೀರಾಗ್ರಣಿ ದೊರೆ ರಣಧೀರ ಕಂಠೀರವ ನರಸರಾಜ ಒಡೆಯರನ್ನು ಖುದ್ದಾಗಿ ಸಂಧಿಸಿ, ಅಚ್ಚಗನ್ನಡದಲ್ಲಿ ಅವರೊಡನೆ ಸಂಭಾಷಿಸುತ್ತಾ ನಾನು ಸತ್ಯವನ್ನು ಬೋಧಿಸುತ್ತೇನೆ ಯಾರಿಗೆ ಇಷ್ಟವಿದೆಯೋ ಅವರು ಬರಬಹುದು, ಆದರೆ ಯಾರಿಗೂ ಕಡ್ಡಾಯ ಮಾಡುವುದಿಲ್ಲ ಎಂದು ನಿವೇದಿಸಿಕೊಂಡು ಮಹಾರಾಜರಿಂದ ಮುದ್ರೆಯೊತ್ತಿದ್ದ ತಾಮ್ರಪತ್ರವನ್ನು ಪಡೆದುಕೊಂಡಿದ್ದರು. ತನ್ನ ಇಳಿವಯಸ್ಸಿನವರೆಗೂ ಕರ್ನಾಟಕದಲ್ಲಿದ್ದ ಇವರು ಕನ್ನಡ ಭಾಷೆಯನ್ನು ರೂಢಿಗತ ಮಾಡಿಕೊಂಡು ಕನ್ನಡದಲ್ಲಿ ಕೆಲವು ಧಾರ್ಮಿಕ ಕೃತಿಗಳನ್ನು ರಚಿಸಿದರೆಂದು ನಮಗೆ ತಿಳಿಯುತ್ತದೆ. ಅವು ಯಾವುವೆಂದರೆ:
1. ಕ್ರೈಸ್ತ ಧರ್ಮದ ಮುಖ್ಯ ಧಾರ್ಮಿಕ ತತ್ತ್ವಗಳನ್ನು ಬೋಧಿಸುವ ದೀರ್ಘ ಪ್ರಶ್ನೋತ್ತರಾವಳಿ
2. ಕ್ರೈಸ್ತ ಧರ್ಮದ ಸಾರಸ್ವರೂಪ
3. ಕ್ರೈಸ್ತ ಸಂತರ ಜೀವನ ಚರಿತ್ರೆಗಳು
4. ಕ್ರೈಸ್ತ ಧರ್ಮ ಸಮರ್ಥನೆ
5. ಮೈಸೂರಿನಲ್ಲಿ ಪ್ರಚಲಿತವಿದ್ದ ತಪ್ಪು ಕಲ್ಪನೆಗಳ ಮತ್ತು ಮೌಢ್ಯಗಳ ಖಂಡನೆ.
ಈ ಕೃತಿಗಳ ಜೊತೆಗೆ ಇವರು ಕನ್ನಡ ಶಬ್ದಕೋಶ ಹಾಗೂ ಕನ್ನಡ ವ್ಯಾಕರಣ ಎಂಬ ಕೃತಿಯನ್ನು ರಚಿಸಿರುವುದಾಗಿ ಡಾ. ಶ್ರೀನಿವಾಸ ಹಾವನೂರರು ಉಲ್ಲೇಖಿಸುತ್ತಾರೆ.
2. ಡಾ. ಫರ್ಡಿನಂಡ್ ಕಿಟೆಲ್
ಜೀವನ: ಕಿಟೆಲರು ಜರ್ಮನಿಯ ರಾಸ್ಟರ್ ಹಾಫ್ (Rosterhafe) ಎಂಬಲ್ಲಿ 7ನೆಯ ಏಪ್ರಿಲ್ ಕ್ರಿಸ್ತಶಕ 1832ರಂದು ಜನಿಸಿದರು. ಅವರದು ಸನಾತನ ದೈವಭಕ್ತ ಮನೆತನ. ತಂದೆಯ ಹೆಸರು ಪ್ಯಾಸ್ಟರ್ ಗಾಟ್ ಫ್ರೀಡ್ ಕ್ರಿಶ್ಚಿಯನ್ ಕಿಟೆಲ್, ತಾಯಿಯ ಹೆಸರು ತೆಯೆಡೊವ್ ಹೆಲನ್, ಈ ದಂಪತಿಗಳ ಆರು ಮಕ್ಕಳಲ್ಲಿ ಕಿಟೆಲ್ ಮೊದಲನೆಯವರು. ಕಿಟೆಲರ ಪ್ರಾಥಮಿಕ ವಿದ್ಯಾಭ್ಯಾಸ ರಾಸ್ಟರ್ ಹಾಫೆಯಲ್ಲಿ ನಡೆಯಿತು. ಮುಂದೆ ಅವರು ತನ್ನ ಅಜ್ಜನ ಊರಾದ ಔರೊಕ್ ನಗರದಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿದರು. ತುಂಬಾ ಬುದ್ಧಿವಂತರೂ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದವರೂ ಆಗಿದ್ದ ಇವರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ದೈವಿಕ ವಿಷಯದಲ್ಲಿ ಕವಿತೆ ರಚಿಸಿ ಸ್ನೇಹಿತರ ಮುಂದೆ ಹಾಡುತ್ತಿದ್ದರಂತೆ. ಆಧ್ಯಾತ್ಮಿಕ ವಿಷಯದ ಒಲವಿಗೆ ಕಾರಣ ಅವರ ತಂದೆಯವರು. ಏಕೆಂದರೆ ಅವರೂ ಒಬ್ಬ ಉಪದೇಶಕರಾಗಿದ್ದರು. ತಂದೆಯಂತೆ ತಾನೂ ಒಬ್ಬ ಬೋಧಕನಾಗಬೇಕೆಂಬ ಪ್ರಬಲವಾದ ಧಾರ್ಮಿಕ ತುಡಿತ ಅವರಲ್ಲಿತ್ತು. ಅವರ ಹೃದಯದಲ್ಲಿ ದೈವಭಕ್ತಿ, ಗುರುಭಕ್ತಿಗಳಿಗೆ ಹೆಚ್ಚಿನ ಸ್ಥಾನವಿತ್ತು. ಕನ್ನಡದಲ್ಲಿ ಕಿಟೆಲರ ಸೃಜನಶೀಲ ಸಾಹಿತ್ಯವೆಲ್ಲ ರೂಪುಗೊಂಡಿದ್ದೂ ಅವರ ಆಧ್ಯಾತ್ಮ ಸಾಧನೆಯ ತಳಹದಿಯ ಮೇಲೆ. ಎಳೆಹರೆಯದಿಂದ ಆಧ್ಯಾತ್ಮಿಕ ತುಡಿತ ಅವರಲ್ಲಿದ್ದುದರಿಂದ ಈ ರೀತಿಯ ಕೃತಿಗಳು ಹೊರ ಬರಲು ಸಾಧ್ಯವಾಯಿತು.
ಶಾಲೆಯಲ್ಲಿರುವಾಗ ಕಿಟೆಲರ ಅಂತರ್ಮುಖಿ ಜೀವನದ ಅಭಿವ್ಯಕ್ತಿ ಕಂಡುಬರುತ್ತದೆ. ಜನ್ಮತಃ ಧಾರ್ಮಿಕ ಪ್ರವೃತ್ತಿಯವರಾದ ಕಿಟೆಲರಿಗೆ, ಅಂದಿನ ಕ್ಲಾಸಿಕಲ್ ಲೇಖಕರ ಬರಹಗಳು ರುಚಿಸದಾದವು. ಕಿಟೆಲರ ಆಧ್ಯಾತ್ಮಿಕ ಒಲವನ್ನು ಕಂಡು ಅವರ ತಂದೆಯವರು ಅವರನ್ನು ದೈವಜ್ಞಾನ ಅಭ್ಯಾಸಕ್ಕೆ ಕಳುಹಿಸಲು ನಿರ್ಧರಿಸಿದರು. ಇದರಿಂದ ಕಿಟೆಲರ ಹೃದಯದಲ್ಲಿ ಮೂಡಿದ್ದ ದೈವಭಕ್ತಿಗೆ ಗರಿ ಮೂಡಿದಂತಾಗಿತ್ತು. ತಮ್ಮ ಹದಿನೇಳನೆಯ ವರ್ಷದಲ್ಲಿ ಮಿಷನ್‌ಗೆ ಸೇರಲು ಕಿಟೆಲ್ ನಿರ್ಧರಿಸಿದರು. ಹದಿನೆಂಟು ತುಂಬದ ಕಾರಣ ಮಿಷನ್ ಅಧಿಕಾರಿಗಳು ಪ್ರವೇಶವನ್ನು ನಿರಾಕರಿಸಿದರು. ಹೀಗಿದ್ದಾಗ ಮಿಷನ್‌ಕಾಲೇಜಿನ ಪ್ರಾಂಶುಪಾಲ ರೋಟಾರ್ಟರ ವಿಶೇಷ ಒಪ್ಪಿಗೆ ನೀಡಿದ ಪತ್ರದಿಂದ ಕಿಟೆಲರು ಮಿಷನ್ ಕಾಲೇಜಿಗೆ ಸೇರುವ ಅವಕಾಶ ಒದಗಿತು. ಇದರಿಂದಾಗಿ ಜನವರಿ 16 ರಂದು ಕ್ರಿಸ್ತಶಕ 1850ರಲ್ಲಿ ಮಿಷನ್ ಕಾಲೇಜಿಗೆ ಪ್ರವೇಶ ದೊರೆಯಿತು. ಮಿಷನ್ ಅಧಿಕಾರಿಗಳಿಗೆ ಕಿಟೆಲರೆಂದರೆ ಅಚ್ಚುಮೆಚ್ಚು. ಅವರ ಕುರಿತು, He is good, matured and open minded, and very efficient as scholar. Needless to say that he had always the best marks in langues ಎಂಬ ಪ್ರಶಂಸನೀಯ ಮಾತುಗಳನ್ನು ಡಾ.ಕೆ.ಎಂ ಮ್ಯಾಥ್ಯು ರವರು ಬರೆದಿರುವ ರೆ.ಎಫ್.ಕಿಟೆಲ್ ಎಂಬ ಪುಸ್ತಕದಲ್ಲಿ ನಾವು ಕಾಣಬಹುದು.
ಈ ರೀತಿ ಹದಿ-ಹರೆಯದಿಂದಲೇ ಕಿಟೆಲರು ಭಾಷೆಯಲ್ಲಿ ಆಸಕ್ತಿ ವಹಿಸಿದುದು ಮುಂದಿನ ಅವರ ಬದುಕಿನಲ್ಲಿ ಒಳ್ಳೆಯ ಕೋಶವಿಜ್ಞಾನಿಯಾಗಿ ರೂಪು ಪಡೆಯಲು ಸಾಧ್ಯವಾಯಿತು. ಭಾಷೆಯಲ್ಲಿ ಪ್ರಬುದ್ಧತೆ ಮತ್ತು ವಿಶೇಷತೆ ಇದ್ದುದರಿಂದ ಅವರ ಅಧ್ಯಯನವು ನಿರ್ದಿಷ್ಟ ಅವಧಿಗಿಂತ ಮುಂಚೆಯೇ ಎಂದರೆ ಕ್ರಿಸ್ತಶಕ 1853ನೇ ಏಪ್ರಿಲ್‌ನಲ್ಲಿ ಮುಕ್ತಾಯವಾಯಿತು. ಕಿಟೆಲರು ಕನ್ನಡದ ಆಳವಾದ ಅಭ್ಯಾಸ, ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳ ಅಧ್ಯಯನ ನಡೆಸಿದ್ದೂ ಮಂಗಳೂರಿನಲ್ಲೆ. ಆಗ ಕಾವ್ಯಗಳು ಈಗಿನಂತೆ ಮುದ್ರಣಗೊಂಡು, ಟೀಕೆ, ಟಿಪ್ಪಣಿಗಳೊಡನೆ ಪ್ರಕಟವಾಗಿರಲಿಲ್ಲ. ತಾಳೆಗರಿ, ಕಾಗದ, ಹಸ್ತ ಪ್ರತಿಗಳನ್ನು ಓದಬೇಕಾಗುತ್ತಿತ್ತು. ಕಿಟೆಲರಲ್ಲಿ ಭಾಷೆ ಅಶುದ್ಧವಿರಕೂಡದು ಎಂಬ ಪ್ರಜ್ಞೆ ಆಳವಾಗಿದ್ದಿತು. ಆದ್ದರಿಂದ ಅಶುದ್ಧವಾಗಿರುತ್ತಿದ್ದ ಹಳಗನ್ನಡ ಕಾವ್ಯಗಳ ಶುದ್ಧಪ್ರತಿಯನ್ನು ತಾವೇ ತಯಾರಿಸತೊಡಗಿದರು. ಅವುಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದಂತೆಲ್ಲ ಕನ್ನಡ ಸಾಹಿತ್ಯದ ಬಗ್ಗೆ ಅವರಲ್ಲಿ ಪ್ರೀತಿಯ ಭಾವನೆ ಉಕ್ಕಿತು. ಅದರ ಸತ್ವ ಮತ್ತು ಸೌಂದರ್ಯಗಳ ಅರಿವಾಯಿತು.
ಕಿಟೆಲರು ಕನ್ನಡದ ಸಹೋದರ ಭಾಷೆಗಳಾದ ತಮಿಳು, ತೆಲುಗು, ಮಲಯಾಳಿ ಹಾಗೂ ತುಳು ಭಾಷೆಗಳನ್ನೂ ಅರಿತುಕೊಂಡರು. ಹಿಂದೂಮತದ ತತ್ವಗಳನ್ನು ವಿವರಿಸುವ ಗ್ರಂಥಗಳನ್ನು ಸಹ ಮನನ ಮಾಡಿದರು. ಅನೇಕ ಮಿಷನರಿಗಳು ದೋಷ ಹುಡುಕುವ ಮತ್ತು ಅಪಾರ್ಥ ಹಚ್ಚುವ ದೃಷ್ಟಿಯಿಂದ ಹಿಂದೂ ಕೃತಿಗಳನ್ನು ಓದಿದರೆ, ಕಿಟೆಲರು ದೋಷ ಹುಡುಕುವ ಜೊತೆಗೆ ಅವುಗಳ ಗುಣಗಳನ್ನು ವ್ಯಾಸಂಗ ಮಾಡಿದ್ದಾರೆ. ಇದು ಅವರ ಕೃತಿಗಳ ಅಭ್ಯಾಸದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಹೀಗೆ ಹತ್ತು ವರ್ಷ ಕಾಲ ಅವರ ಈ ಬಗೆಯ ಅಭ್ಯಾಸ ಮುಂದುವರಿಯಿತು. ಕನ್ನಡ ಕಾವ್ಯಗಳ ಅಭ್ಯಾಸ, ಗ್ರಂಥಸಂಪಾದನೆ, ನಿಘಂಟು ತಯಾರಿಕೆ, ಪಠ್ಯಪುಸ್ತಕ ನಿರ್ಮಾಣಕಾರರಾಗಿ ಯಾವಾಗಲೂ ದುಡಿಯುತ್ತಿದ್ದುದರಿಂದ ಅವರ ಕಣ್ಣಿನ ನರಗಳ ಶಕ್ತಿ ಕ್ಷೀಣಿಸತೊಡಗಿತು. ಕ್ರಿಸ್ತಶಕ 1892ರಲ್ಲಿ ಅವರು ಭಾರತವನ್ನು ಬಿಟ್ಟು ವುಟೆಂಬರ್ಗ್ ಜಿಲ್ಲೆಯ ಟ್ಯುಬೆಂಗನ್ ಎಂಬ ಊರಿನಲ್ಲಿ ನೆಲೆಸಿದರು. ತಮ್ಮ ದೀರ್ಘಕಾಲದ ವ್ಯಾಸಂಗದಲ್ಲಿ ಸಂಪಾದಿಸಿದ್ದ ಕನ್ನಡ ಸಾಮಗ್ರಿಗಳನ್ನೆಲ್ಲ ಟ್ಯುಬೆಂಗನ್‌ನಲ್ಲಿ ಕುಳಿತು ಪರಿಷ್ಕರಿಸಿದರು. ಕ್ರಿಸ್ತಶಕ 1894ರಲ್ಲಿ ಅವರ ಜೀವನಾಭ್ಯಾಸದ ಸಾರಸರ್ವಸ್ವವಾದ ಕನ್ನಡ-ಇಂಗ್ಲಿಷ್ ನಿಘಂಟು ಪ್ರಕಟವಾಯಿತು. ಈ ಮಹಾಕೋಶದ ರಚನೆಯನ್ನು ಮೆಚ್ಚಿ ಅವರಿಗೆ ಟ್ಯುಬೆಂಗನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರಶಸ್ತಿಯನ್ನು ಕೊಟ್ಟು ಕ್ರಿಸ್ತಶಕ 1895ರಲ್ಲಿ ಗೌರವಿಸಿತು. ಡಾ.ಫರ್ಡಿನಂಡ್ ಕಿಟೆಲರು 19ನೇ ಡಿಸೆಂಬರ್ ಕ್ರಿಸ್ತಶಕ 1903ರಲ್ಲಿ ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ದೈವಧೀನರಾದರು. ಹೀಗೆ ಸುಮಾರು 40 ವರ್ಷಗಳ ಕಾಲ ದುಡಿದು, ಕನ್ನಡ ವಿದ್ವತ್ತಿಗೆ ಭದ್ರವಾದ ತಳಹದಿಯನ್ನು ಹಾಕಿದ ಇವರು 19ನೇ ಶತಮಾನದ ಭಾರತೀಯ ವಿದ್ವಾಂಸರಲ್ಲಿ ಪ್ರಮುಖರಾಗಿದ್ದರೆಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಮಿಷನರಿಯಾಗಿ ಕಿಟೆಲರು: ಭಾರತಕ್ಕೆ ಬಂದಿರುವ ಹೆಚ್ಚಿನ ಮಿಷನರಿಗಳು ಮತಪ್ರಚಾರದ ಕಾರ್ಯದಲ್ಲಿಯೇ ಮಗ್ನರಾಗಿರುತ್ತಿದ್ದರು. ಆದರೆ ಕಿಟೆಲರು ಇಲ್ಲಿಗೆ ಬಂದ ಆರಂಭದ ಕೆಲವು ವರ್ಷ ಮಾತ್ರ ಮತ ಪ್ರವಚನ ಮಾಡುತ್ತಿದ್ದರು ಎಂದು ಬಾಸೆಲ್ ಮಿಷನ್ ವರದಿಗಳಿಂದ ತಿಳಿದು ಬರುತ್ತದೆ. ಹೆಚ್ಚಿನ ಮಿಷನ್ ವರದಿಗಳಲ್ಲಿ ಅವರು ಸಾಹಿತ್ಯದ ಕೆಲಸದಲ್ಲಿ ಮಗ್ನರಾಗಿದ್ದರು ಎಂದು ಬರೆಯಲಾಗಿದೆ.
ಕಿಟೆಲರ ಸಾಹಿತ್ಯ ಕಾರ್ಯ: ಕಿಟೆಲರ ಸಾಹಿತ್ಯ ಕಾರ್ಯ ಧಾರ್ಮಿಕ ಕೃತಿಗಳಿಂದ ಚಿಗುರೊಡೆಯಿತು. ಅವರು ಕ್ರೈಸ್ತ ಹಾಗೂ ಹಿಂದೂ ಧರ್ಮಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ್ದಾರೆ. ಇತರ ಮಿಷನರಿಗಳ ಹಾಗೆ ಕಿಟೆಲರು ಹಿಂದೂ ಧರ್ಮವನ್ನು ಕುರಿತು ಸಂಸ್ಕೃತದಿಂದ ಜರ್ಮನ್, ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿದ್ದ ಗ್ರಂಥಗಳನ್ನು ಆರಂಭದಲ್ಲಿಯೇ ಮನನ ಮಾಡಿದ್ದರು. ದೋಷಗಳನ್ನು ಹುಡುಕುವುದಕ್ಕಿಂತ ಅವುಗಳ ಅಂತರಾರ್ಥವನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಜೊತೆಗೆ ಕ್ರೈಸ್ತ ಧರ್ಮವನ್ನು ಕುರಿತು ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಈ ಗ್ರಂಥಗಳು ಕಿಟೆಲರಿಗೆ ದೈವಶಾಸ್ತ್ರ (Theology)ವನ್ನು ವಿಶೇಷವಾಗಿ ಅಧ್ಯಯನ ಮಾಡಿದುದರ ಫಲವೆನಿಸಿವೆ. ಕಿಟೆಲರು ಕೆಲವು ಧಾರ್ಮಿಕ ಕೃತಿಗಳನ್ನು ಕೂಡ ರಚಿಸಿದ್ದಾರೆ ಅವುಗಳೆಂದರೆ ಕಥಾಮಾಲೆ, ಖಂಡಕಾವ್ಯ, ಪರಮಾತ್ಮ ಜ್ಞಾನ, ಯೇಸುಕ್ರಿಸ್ತನ ಶ್ರಮೇ ಚರಿತ್ರೆ, ಕ್ರೈಸ್ತ ಸಭಾ ಚರಿತ್ರೆ ಇನ್ನು ಮುಂತಾದವು.
ಪಠ್ಯ ಪುಸ್ತಕಗಳು: ಕಿಟೆಲರು ಕೆಲವು ಪಠ್ಯ ಪುಸ್ತಕಗಳನ್ನು ಶಾಲೆಗಳ ಅಗತ್ಯತೆಗಾಗಿ ರಚಿಸಿದ್ದಾರೆ. ಮದ್ರಾಸ್ ಸರ್ಕಾರವು ಕಿಟೆಲರು ಸಂಪಾದಿಸಿದ ಪಠ್ಯ ಪುಸ್ತಕಗಳನ್ನು ಶಾಲೆಗಳಿಗಾಗಿ ನಿಗದಿಪಡಿಸಿದ್ದಿತು. ಇವರು ಪಂಚತಂತ್ರದ ಕಥೆಗಳನ್ನು ಆಧರಿಸಿ ಕೃತಿ ರಚಿಸಿದ್ದು ಇದರ ಹೊದಿಕೆಯ ಮೇಲೆ ಶಾಲೆಗಳ ಪ್ರಯೋಜನಾರ್ಥಕವಾದದ್ದು ಎಂಬ ವಿಶೇಷಣವಿದೆ. ಇದಕ್ಕೆ ಇಪ್ಪತ್ತು ಪುಟಗಳ ಇಂಗ್ಲೀಷ್ ಭಾಷೆಯ ಮುನ್ನುಡಿ ಇದೆ. ಅದರಲ್ಲಿ ಪಂಚತಂತ್ರಗಳ ಮೂಲವೆಲ್ಲಿಯದು, ಅದಕ್ಕೂ ಈಸೋಪನ ನೀತಿ ಕಥೆಗಳಿಗೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ವಿವೇಚಿಸಿದ್ದಾರೆ.
ಗ್ರಂಥ ಸಂಪಾದನೆ: ಕಿಟೆಲರು ಎರಡು ಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕನ್ನಡದ ಬಹುಪಾಲು ಕೃತಿಗಳು ಅಮುದ್ರಿತವಾಗಿದ್ದಾಗ, ಪ್ರಾಚೀನ ಸಾಹಿತ್ಯದ ಬಗೆಗೆ ಸುತ್ತಣ ಪರಿಸರದಲ್ಲಿ ಅಷ್ಟಾಗಿ ಒಲವು ಇಲ್ಲದಿದ್ದಾಗ, ಪ್ರಾಚೀನ ಕೃತಿಗಳನ್ನು ಹೇಗೆ ಸಂಪಾದಿಸಬೇಕು, ಎಂಬುದರ ಜಾಡು ಇನ್ನೂ ಹೊಳೆಯದಿದ್ದಾಗ ಕೇಶಿರಾಜನ ಶಬ್ದಮಣಿದರ್ಪಣವನ್ನು ಕಿಟೆಲರು ಹೊರತಂದರು. ಇವರು ಶಬ್ದಮಣಿದರ್ಪಣದ ಸಂಪಾದನೆಗಾಗಿ ಒಂಭತ್ತು ಹಸ್ತಪ್ರತಿಗಳನ್ನು ಬಳಸಿದ್ದಾರೆ. ಈ ಕೃತಿಯ ವಿನ್ಯಾಸಕ್ರಮ ಹೀಗಿದೆ. ಸೂತ್ರ, ಅದರ ಎಡಮಗ್ಗುಲಿಗೆ ಇಂಗ್ಲಿಷಿನಲ್ಲಿ ಸ್ಥೂಲವಾದ ಸೂತ್ರಾರ್ಥ, ಸೂತ್ರದ ಕೆಳಗೆ ಕ್ರಮವಾಗಿ ಪದಚ್ಛೇದ, ಅನ್ವಯ, ಟೀಕಾ ವೃತ್ತಿ ಮತ್ತು ಪ್ರಯೋಗಗಳನ್ನು ಕೊಟ್ಟಿದ್ದಾರೆ.
ಕೋಶ ರಚನೆ: ಕಿಟೆಲರ ವಿಷಯದಲ್ಲಿ ವಿಶೇಷ ಗೌರವ ಮತ್ತು ಅಭಿಮಾನವನ್ನಿಟ್ಟುಕೊಂಡಿದ್ದ ಬಾಸೆಲ್ ಮಿಷನಿನವರು ಅವರಿಗೆ ಕ್ರಿಸ್ತಶಕ 1872ರ ಸುಮಾರಿಗೆ ಕನ್ನಡ-ಇಂಗ್ಲಿಷ್ ನಿಘಂಟು ರಚಿಸುವ ಕೆಲಸವನ್ನು ವಹಿಸಿಕೊಟ್ಟರು. ಇತರೆ ಮಿಷನರಿಗಳಿಗಿದ್ದಂತೆ ಮತಪ್ರಸಾರ ಕಾರ್ಯ ಅಥವಾ ದೇಶಿಯ ಕ್ರೈಸ್ತರಿಗೆ ಕೊಡಬೇಕಾದ ಔದ್ಯೋಗಿಕ ಶಿಕ್ಷಣ ಕಾರ್ಯದಲ್ಲಿ ಮಗ್ನರಾಗಿದ್ದರು ಕೂಡ ಕೋಶರಚನಾ ಕಾರ್ಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುವುದರ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಿರುತ್ತಾರೆ.
ಭಾಷಾಶಾಸ್ತ್ರ: ಕನ್ನಡ ಶಬ್ದಕೋಶವನ್ನು ವಿಮರ್ಶಿಸಿದ ಪ್ಲೀಟರು ಸಹಜವಾಗಿಯೇ ಕನ್ನಡಕ್ಕೆ ಕಿಟೆಲರು ಒಂದು ಸಮಗ್ರವಾದ ವ್ಯಾಕರಣ ಗ್ರಂಥ ಯಾಕೆ ಬರೆಯಬಾರದು? ಎಂದು ಸೂಚಿಸಿದ್ದರಂತೆ. ಅದರಂತೆ ಕಿಟೆಲರು ತಮ್ಮ ವಿಶ್ರಾಂತಿಯ ದಿನಗಳನ್ನು ಇಂಗ್ಲಿಷ್‌ನಲ್ಲಿ ವ್ಯಾಕರಣಗ್ರಂಥವನ್ನು ಸಿದ್ಧಪಡಿಸುವುದರಲ್ಲಿ ಕಳೆದರು. ಹಳಗನ್ನಡ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣವನ್ನು ಇದಕ್ಕೆ ತಳಹದಿಯಾಗಿಟ್ಟುಕೊಂಡರು. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ-ಈ ಮೂರು ಅವಸ್ಥೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಗುರುತಿಸಿದ್ದಾರೆ. ತಮಿಳು, ತೆಲುಗು, ಮಲೆಯಾಳಂ, ಭಾಷೆಗಳ ವ್ಯಾಕರಣ ಹೋಲಿಕೆಯನ್ನೂ ಕೊಟ್ಟಿದ್ದಾರೆ. ಇದೊಂದು ಐತಿಹಾಸಿಕ-ತುಲನಾತ್ಮಕ ವ್ಯಾಕರಣ ಗ್ರಂಥವಾಗಿದೆ. ಕನ್ನಡ ವ್ಯಾಕರಣದ ಸಮಗ್ರವಾದ ವಿವೇಚನೆಯನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಮೊದಲ ವ್ಯಾಕರಣ ಕೃತಿ ಇದಾಗಿದೆ. ಅಲ್ಲದೆ ಕಿಟೆಲರು ಕ್ರಿಸ್ತಶಕ 1866ರಲ್ಲಿ ಹಳಗನ್ನಡ ಸಂಕ್ಷೇಪ ವ್ಯಾಕರಣ ಸೂತ್ರಗಳು ಎಂಬ ಕೃತಿಯನ್ನು ಹೊರತಂದಿದ್ದರು. ಶಬ್ದಮಣಿದರ್ಪಣದ ಸಾರಸರ್ವಸ್ವವನ್ನು ಗದ್ಯರೂಪದಲ್ಲಿ ಬರೆದಿರುವ ಕೃತಿಯಿದು. ಬಿಡಿಲೇಖನಗಳು ಮತ್ತು ಪತ್ರಿಕಾ ಸಂಪಾದನೆಯ ಕಾರ್ಯಗಳಲ್ಲೂ ಬಹು ಆಸಕ್ತಿಯಿಂದ ಕಾರ್ಯನಿರತರಾಗಿದ್ದರು ಕಿಟೆಲ್‌ರವರು.
ಮುಂದಿನ ಸಂಚಿಕೆಯಲ್ಲಿ ಇನ್ನಿತರ ಪ್ರಮುಖ ಮಿಷನರಿಗಳ ಬದುಕು ಮತ್ತು ಸಾಧನೆಯನ್ನು ಮುಂದುವರಿಸಲಾಗುವುದು.
******
No comments:
Post a Comment