ಬದುಕು ಎಂದರೇನು ಹುಟ್ಟು ಸಾವಿನ ಮಧ್ಯದ ಹಾದಿಯೇ? ಅಥವಾ ಹೆಸರು ಮತ್ತು ದುಡ್ಡು ಮಾಡಬೇಕೆಂದು ಹಂಬಲಿಸುತ್ತ ನಡೆಸುವ ತಿಕ್ಕಲಾಟವೆ? ಇತರರನ್ನು ಮೆಚ್ಚಿಸಬೇಕೆಂದು ಕಳೆವ ಶೋಕಿಯೇ? ಏನಾದರೂ ಸಾಧಿಸಲು ಮನಷ್ಯನಿಗೆ ಸಿಗುವ ಸಮಯವೇ? ಬದುಕಿಗೆ ಸರಿಯಾದ ಅರ್ಥ ಯಾವುದು? ಸಾವಿನ ಸತ್ಯ ತಿಳಿಯುವವರೆಗೂ ಬದುಕಿನ ಅರ್ಥ ಕಾಣದೆಂದು ಅನಿಸುವಷ್ಟರಲ್ಲಿ ನಾನು ನಮ್ಮೂರ ಸ್ಮಶಾನದ ಗೇಟಿನ ಬಳಿ ಬಂದು ನಿಂತಿದ್ದೆ.
ಅಲ್ಲ ಬದುಕು ಎಂಬ ಪ್ರಶ್ನೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತೇ? ಬದುಕು ಸಾವು ಅದರ ಅರ್ಥ ಅನರ್ಥಗಳ ಕಂಡವರು ಸಿಗುವುದು ಇಲ್ಲೇ ಅಲ್ಲವೇ? ಎಂದೆನ್ನುತ್ತ ಒಳ ನಡೆದೆ.
ಹೊರಗಿನ ಸುಡು ಬಿಸಿಲನ್ನು ಮರೆಸಿ ತಂಪು ನೀಡಲು ಸ್ಮಶಾನದ ಒಳಗಿನ ಸಿಲ್ವರ್ ಓಕ್ ಮರಗಳ ನೆರಳು ನೆಲದ ಮೇಲೆ ಅಂಗಾತ ಮಲಗಿದ್ದವು. ಸತ್ತವರ ಸಾರವನ್ನೆಲ್ಲಾ ಎಳೆದು ಬೆಳೆದು ನಿಂತಿದ್ದ ಆಲದಮರದಿಂದ ಬೇಸತ್ತು ಬಿದ್ದ ಹಣ್ಣೆಲೆಗಳು ಹಾಸಿಗೆಯಂತೆ ಗಾಢವಾಗಿ ಹರಡಿದ್ದವು. ಊರಿನೊಳಗೆ ಮಹಲುಗಳಂತಹ ಮನೆಗಳ ಕಟ್ಟಿಕೊಂಡವರು. ಇಲ್ಲಿ ಆರು ಮೂರಡಿಯ ಗುಂಡಿಯೊಳಗೆ ಎದೆಯ ಮೇಲೆ ಕೈ ಇಟ್ಪು ಮಲಗಿದ್ದಾರೆ. ಸ್ಮಶಾನ ಮೌನವೆಂದರೆ ಇದೇ ಅಲ್ಲವೇ?
ಇನ್ನೂ ಮುಂದಕ್ಕೆ ನಡೆದು ಅಲ್ಲಿದ್ದ ಒಂದು ಗೋರಿಯ ಎದುರು ಕುಳಿತೆ. ಅರೆರೇ! ಇದು ಅವನ ಗೋರಿ ಇಪ್ಪತ್ತು ವರ್ಷಗಳ ಹಿಂದೆ ತನ್ನ ಮೂರನೇ ವಯಸ್ಸಿಗೆ ಅದ್ಯಾವುದೋ ದೊಡ್ಡ ಕಾಯಿಲೆ ಬಂದು ಸತ್ತ ಡೇವಿಡನ ಗೋರಿ. ಅವನೇನಾದರೂ ಇಂದು ಜೀವಂತವಾಗಿದ್ದರೆ ಅವನಿಗೂ ನನ್ನಷ್ಟೆ ವಯಸ್ಸಾಗಿರುತ್ತಿತ್ತು. ಬಡ್ಡಿಮಗ ಸತ್ತು ಬದುಕಿ ಹೋದ. ಬದುಕಿನ ಕಣ್ಣು ತೆರೆಯುವ ಮೊದಲೇ ಕಣ್ಣು ಮುಚ್ಚಿಕೊಂಡ. ಇಲ್ಲದಿದ್ದರೆ ಇವನು ನನ್ನಂತೆ ಬದುಕು, ಭವಿಷ್ಯ, ಸುಖ, ದುಖ, ಪ್ರೇಮ, ಕಾಮಗಳೆಂಬ ಮಾನವ ಸಂಚಿತ ಕರ್ಮಗಳಲ್ಲಿ ದಿನ ದಿನವೂ ಸಾಯುತ್ತಿದ್ದ. ಈಗ ಒಂದೇ ಬಾರಿ ಸತ್ತು ನೆಮ್ಮದಿಯಿಂದಿದ್ದಾನೆ.
ಹಾಗಾದರೇ ಸಾವು ಬರುವವರೆಗೂ ಮನಬಂದಂತೆ ಜೀವಿಸಿ ಬಿಟ್ಟರೆ ಅದು ಬದುಕೇ? ಯಾರು ಉತ್ತರಿಸುವರು ಈ ನನ್ನ ಪ್ರಶ್ನಗಳಿಗೆ? ಈ ಗೋರಿಯ ಕೆಳಗೆ ಮಕಾಡೆ ಮಲಗಿ ಬಿದ್ದಿರುವ ಡೇವಿಡನೇ? ಅವನಿಗೇನು ತಿಳಿದೀತು? ಬೆರಳು ಚೀಪುತ್ತಲೇ ಸತ್ತು ಇಲ್ಲಿಗೆ ಬಂದವನು. ಇವನೇನು ಬದುಕ ಕಂಡ? ಕಂಡವರಿಗೆ ಇನ್ನೂ ಕಾಣದಷ್ಟು ತುಂಬ ಇದೆ! ಏನಿದೆ ಮಣ್ಣು!ಸ್ಮಶಾನದ ಮೌನ ಮುರಿದಂತೆ ಹೊರಗಿನಿಂದಲ್ಲ ಒಳಗಿನಿಂದ ಯಾರೋ ಮಾತನಾಡಿದರು. ಆ ಮಾತು ಹೊರ ಬರುತ್ತಿದಂತೆ ತಣ್ಣನೆಯ ಗಾಳಿ ಎರಡು ನಿಮಿಷ ಬಿರುಸಾಗಿ ಬೀಸಿ ಸುಮ್ಮನಾಯಿತು. ನಿಂತ ಮರಗಳ ಎಲೆಗಳು ಕುಣಿಯ ತೊಡಗಿದವು. ಮಲಗಿದ್ದ ಧೂಳು,ಮಣ್ಣು ಎದ್ದು ಒಂದು ಸುತ್ತು ತಿರುಗಿ ಮತ್ತೆ ನೆಲಗೆ ಬಿದ್ದವು. ಕಣ್ಣ ಮುಂದೆ ಇದ್ದ ಡೇವಿಡನ ಗೋರಿ ಬಿರುಕು ಬಿಟ್ಟಂತಾಯಿತು. ಗೋರಿಯ ಒಳಗೆ ಮಗುವಿನಂತೆ ಮಲಗಿದ ಡೇವಿಡ ನನ್ನ ಸ್ಮೃತಿ ಪಟಲದಲ್ಲಿ ಮಾತನಾಡ ತೊಡಗಿದ. "ಏನಿದೆ ಮಣ್ಣು! ಏನು ನೀವು ಕಂಡಿದ್ದು ಈ ಜಗತ್ತಿನಲ್ಲಿ? ಹೆಸರಿಗಷ್ಟೆ ಬದುಕಿರುವ ನೀವು ಸತ್ತವರಿಗಿಂತ ಹೆಚ್ಚು ನಾರ ತೊಡಗಿದ್ದೀರಿ. ಹೊಲಸು ಹೆಣದ ವಾಸನೆ ಮನುಷ್ಯತ್ವ ಸತ್ತ ಆ ನಿಮ್ಮ ಮನಸ್ಸುಗಳಲ್ಲಿ. ಬದುಕು ಎಂದರೆ ಏನು ಗೊತ್ತೇ? ನೀನು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವುದು. ಇಲ್ಲ! ನಿಮಗೆ ಅದು ಬದುಕಲ್ಲ, ನಿಮ್ಮ ಬದುಕುಗಳು ಇನ್ನೊಬ್ಬರ ಜೀವನ ಕಸಿದು ನೀವು ಸಂತೋಷದಿಂದಿರುವುದು ಅಲ್ಲವೆ? ಹುಟ್ಟುವ ಹಸುಗೂಸುಗಳು ಈ ಜಗತ್ತಿಗೆ ಬರುವ ಮುನ್ನವೇ ಇಕ್ಕಳ ಹಾಕಿ ಹೊರ ತೆಗೆದು ಸುಲಿಗೆ ಮಾಡುವ ಡಾಕ್ಟರಗಳದು ಒಂದು ಬದುಕೇ? ಅನ್ಯಾಯವಾದಾಗ ಲಂಚ ಕಿತ್ತು ಕೆಲಸ ಮಾಡುವ ಪೋಲಿಸರದು ಒಂದು ಬದುಕೇ? ದೇವರ ಹೆಸರಿನಲ್ಲಿ ಭಕ್ತರ ದೋಚುವವರದು ಒಂದು ಬದುಕೇ? ಇವೆಲ್ಲ ಬದುಕೆಂದರೆ ಬದುಕು ಎಂಬ ಪದಕ್ಕೆ ನಾಚಿಕೆಯಾಗುತ್ತಷ್ಟೇ !
ನಾನು ಬದುಕಬೇಕೆಂದು ಎಷ್ಟು ಹಪಹಪಿಸಿದೆ ಗೊತ್ತಾ? ನನ್ನ ಅಮ್ಮ ನನಗಾಗಿ ಕಂಡ ಕಂಡವರ ಮುಂದೆ ಕೈ ಚಾಚಿ ಬೇಡಿಕೊಂಡಳು, ರೋಧಿಸಿದಳು, ಅವಳ ಅಳಲು ಕೇಳಿಸಿದ್ದು ನನಗೆ ಮಾತ್ರ, ಈ ಜಗತ್ತಿಗಲ್ಲ. ಸತ್ತ ನನ್ನ ಆಕೆ ಹೊತ್ತು ತಂದಾಗ ಕೂಡ ಈ ಜಗತ್ತು ಆಕೆಯನ್ನು ಬಿಡಲಿಲ್ಲ. ಮಣ್ಣಿಂದ ಬಂದ ದೇಹ ಮತ್ತೆ ಮಣ್ಣು ಸೇರಲು ಇಲ್ಲಿ ಕೂಲಿ ಕೊಡಬೇಕು. ಇದು ನಿನ್ನ ಜಗತ್ತು. ಇಲ್ಲಿ ನೀನು ಬದುಕಿನ ಪ್ರಶ್ನೆ ಹಾಕುತ್ತಿರುವುದು ಯಾರಿಗೆ? ಇಲ್ಲಿ ಬದುಕಿನ ಅರ್ಥ ಬಲ್ಲವನು ಬದುಕುವ ಯೋಗ್ಯತೆ ಕಳೆದು ಕೊಳ್ಳುತ್ತಾನೆ. ನೀನು ಬದುಕಿನ ಅರ್ಥವನ್ನು ಹುಡುಕುವ ಬದಲು ನಿನ್ನ ಬದುಕನ್ನು ಅರ್ಥಭರಿತವಾಗಿ ಮಾಡಿಕೊ. ಪರರ ನಿಂದಿಸದೆ ಬದುಕು. ಕಷ್ಟ ಪಡುವವರಿಗೆ ಸಹಾಯ ಮಾಡು. ಕಸಿದು ತಿನ್ನುವ ಬದಲು ಹಂಚಿ ತಿನ್ನು. ಇದಕ್ಕಿಂತ ಇನ್ನೇನು ಬೇಕು ನಿನಗೆ ಬದುಕಿನ ಅರ್ಥ. ನನಗೆ ಸಿಗದ ಬದುಕು ನಿನಗೆ ಸಿಕ್ಕಿರೋದು ನಿನ್ನ ಅದೃಷ್ಟ. ಸುಮ್ಮನೇ ಬದುಕು ಅಂದ್ರೆ ಏನು ಅಂತ ವ್ಯರ್ಥ ಕಾಲಹರಣ ಮಾಡದೆ ಹೋಗಿ ಬದುಕು. ನಿನ್ನ ಪಯಣ ಮುಗಿದ ಮೇಲೆ ಮತ್ತೆ ಇಲ್ಲೇ ಸಿಗೋಣ, ಟಾಟಾ" ಎಂದು ಹೇಳಿ ಗೋರಿ ಒಳಗೆ ಹೊರಟ.
ಅಲ್ಲಿಯವರೆಗೂ ಮಂತ್ರಮುಗ್ಧನಾಗಿ ನಿಂತಿದ್ದ ನನಗೆ ಇದೇನು ನಿಜವೋ ಭ್ರಮೆಯೋ ಒಂದು ತಿಳಿಯಲಿಲ್ಲ. ಆದರೆ ಡೇವಿಡನು ಹೇಳಿದ ಮಾತು ಅಕ್ಷರಶಃ ಸತ್ಯವೆನಿಸಿತ್ತು. ಬದುಕು ಒಂದು ಬಹುಮಾನ. ಅದನ್ನು ಅರ್ಥಪೂರ್ಣವಾಗಿಸ ಬೇಕಷ್ಟೇ ಎನ್ನುತ್ತ ಮನೆಯ ಕಡೆ ನಡೆದೆ.
*****
No comments:
Post a Comment