- ಎಫ್.ಎಂ. ನಂದಗಾವ
`ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ.
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ.’
ಇದು ಭರತ ಖಂಡದ ಕನ್ನಡ ನಾಡು ಕಂಡ ಒಬ್ಬ ಮಹಾನ್ ದಾರ್ಶನಿಕ ಬಸವಣ್ಣನವರ ಒಂದು ಖ್ಯಾತ ವಚನ. ಹನ್ನೆರಡನೇ ಶತಮಾನದಲ್ಲಿನ ಶಿವಕೇಂದ್ರಿತ ಭಕ್ತಿ ಚಳುವಳಿಯ ಮುಂಚೂಣಿಯಲ್ಲಿದ್ದ ಅವರು, ಸಮಾನ ವಿಚಾರಧಾರೆಯ ಸಹಚರರೊಂದಿಗೆ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಕಾಯಕ ತತ್ವ ಬೋಧಿಸಿದರು. ಲಿಂಗ, ಸಾಮಾಜಿಕ ತಾರತಮ್ಯ, ಮೂಢನಂಬಿಕೆ ಮೊದಲಾದ ಸಾಮಾಜಿಕ ಅನಿಷ್ಟಗಳನ್ನು ನಿರಾಕರಿಸಿದರು.
ಬಸವಣ್ಣನವರು ಈ `ಇವನಾರವ ಇವನಾರವ..’ ವಚನದಲ್ಲಿ ಮಾನವರು ಎಲ್ಲರೂ ದೇವರ ಮಕ್ಕಳು, ಎಲ್ಲರನ್ನು ನಮ್ಮವರೆಂದು ಕಾಣಬೇಕೆಂದು ಪ್ರತಿಪಾದಿಸಿದ್ದಾರೆ.
ಅದರಂತೆ ಹದಿನೈದನೇ ಶತಮಾನದ ಹಂಪಿಯ ವಿಜಯನಗರ ಅರಸರ ಕಾಲದಲ್ಲಿನ ದಾಸ ಚಳುವಳಿಯಲ್ಲಿ ಪ್ರಮುಖರಾಗಿದ್ದ ಕನಕದಾಸರು, ತಮ್ಮ ಒಂದು ಪದ್ಯದಲ್ಲಿ `ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ? ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ, ಅಟ್ಟು ಉಣ್ಣದ ವಸ್ತುಗಳಿಲ್ಲ. ..ಜಲದ ಕುಲವನೆನಾದರು ಬಲ್ಲಿರಾ?’ ಎನ್ನುತ್ತಾ `ಹರಿಯೆ ಸವೇಶ್ವರ ಹರಿಯೇ ಸರ್ವೋತ್ತಮ’ ಎನ್ನುತ್ತಾರೆ.
ಮಗದೊಂದು ಪದ್ಯದಲ್ಲಿ `ಕುಲ ಕುಲ ವೆನ್ನುತಿಹರು ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ’ ಎಂದು ಪ್ರಶ್ನಿಸಿದ್ದಾರೆ. ಅದೇ ಪದ್ಯದಲ್ಲಿ, `.. ಬಗೆಯಿಂದ ನಾರಾಯಣನಾವ ಕುಲವಯ್ಯ, ಜಗವಲ್ಲಭನಾವ ಕುಲ ಪೇಳಿರಯ್ಯ’ ಎಂದು ಪ್ರಶ್ನಿಸುವ ಅವರು, `ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ವೇಂದ್ರಿಯಗಳ ಕುಲ ಪೇಳಿರಯ್ಯ, ಆತ ಮಹಾತ್ಮನು ನೆಲೆಯಾದಿಕೇಶವ, ಯಾತರ ಕುಲವಯ್ಯ ಆತನೊಲಿದ ಮೇಲೆ’ ಎಂದೂ ಉತ್ತರಿಸಿದ್ದಾರೆ. ಶತಮಾನಗಳ ಹಿಂದೆಯೇ, ದೇವರೊಲಿದ ಮೇಲೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರಿದ್ದಾರೆ.
ಇದು ನಮ್ಮ ಕನ್ನಡ ನಾಡಿನ, ಭಾರತ ದೇಶದ ಸಾಮಾಜಿಕ ಅಂತಃಸತ್ವ. ಅಮೆರಿಕದ ಪ್ರಜ್ಞಾವಂತ ನಾಗರಿಕರು, ಕಪ್ಪು ಬಿಳಿ ಬಣ್ಣದಲ್ಲಿ ಮಾನವರನ್ನು ಗುರುತಿಸಿ ಗೌರವಿಸುವ, ಅವಮಾನಿಸುವ ವರ್ಣಬೇಧ ನೀತಿಯ ವಿರುದ್ಧ ತೀರ ಇತ್ತೀಚೆಗೆ ಧನಿ ಎತ್ತಿರುವರು. ಹತ್ತೊಂಬತ್ತನೇ ಶತಮಾನದಲ್ಲಿ ಕರಿಯ ಜನಾಂಗದ ಪರವಾಗಿ ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರು ಸಮಾನತೆಗಾಗಿ ಮಾನವ ಗೌರವಕ್ಕಾಗಿ ಹೋರಾಟ ನಡೆಸಿದರು. ಆಧುನಿಕ ಕಾಲದಲ್ಲಿ ನಮ್ಮನ್ನಾಳಿದ ವಸಾಹತುಶಾಹಿ ಬ್ರಿಟಿಷರು, ತಮ್ಮ ಒಡೆದಾಳುವ ನೀತಿಯನ್ನು ಅನುಸರಿಸಿ, ದೇಶದ ಅಲ್ಪಸಂಖ್ಯಾತ ಮುಸ್ಲೀಂ ಮತ್ತು ಬಹುಸಂಖ್ಯಾತ ಹಿಂದೂ ಸಮುದಾಯಗಳ ನಡುವೆ ಅಪನಂಬುಗೆ ಮೂಡಿಸಿ, ದ್ವೇಷವ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಂಡ ಪರಿಣಾಮ ಸ್ವತಂತ್ರಗೊಂಡಾಗ, ದೇಶ ಒಡೆದು ಎರಡು ತುಂಡಾಗಬೇಕಾಯಿತು. ಹುಟ್ಟಿನಿಂದ ಸೋದರರು, ಬೆಳೆದಂತೆ ದಾಯಾದಿಗಳು ಎಂಬಂತೆ ಭಾರತ ಉಪಖಂಡವು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಗೊಂಡಿತು.
ಪಾಕಿಸ್ತಾನ ಧರ್ಮಾಧರಿತ ರಾಷ್ಟ್ರವೆಂದು ರೂಪತಾಳಿದರೆ, ಭಾರತವು ಧರ್ಮನಿರಪೇಕ್ಷ ತತ್ವದಡಿ, ಭಾಷೆಗಳ ಆಧಾರದ ವಿವಿಧ ರಾಜ್ಯಗಳ ಒಕ್ಕೂಟದ ಜನತಂತ್ರದ ದೇಶವಾಯಿತು. ಭಾರತದ ಸಂವಿಧಾನವು ಭಾತೃತ್ವ, ಸಮಾನತೆ ಮತ್ತು ಧರ್ಮನಿರಪೇಕ್ಷತೆಯ ಸ್ವರೂಪದಲ್ಲಿ ರೂಪತಾಳಿತು.
ಭಾರತ ಉಪಖಂಡದಲ್ಲಿ, ಹಿಂದೂ ದೇವಾಲಯಗಳಿಗೆ ಮುಸ್ಲೀಂ ಬಾಂಧವರು ನಡೆದುಕೊಳ್ಳುವುದು, ಮುಸ್ಲೀಂ ಸಂತರ ದರ್ಗಾಗಳನ್ನು ಹಿಂದುಗಳು ಆದರಿಸುವುದು ಹಿಂದುಗಳ ಹಬ್ಬಗಳಲ್ಲಿನ ವಿವಿಧ ವಸ್ತುಗಳ ಬೇಡಿಕೆಗಳನ್ನು ಮುಸ್ಲೀಂರು ಪೂರೈಸುವುದು - ಮೊದಲಾದ ಸಾಮರಸ್ಯದ ಜೀವನ ಹೊಂದಿರುವರು.
ಆದರೆ, ಇಂದು ಪ್ರಜಾಪ್ರುಭುತ್ವದ ವ್ಯವಸ್ಥೆಯಲ್ಲಿನ ಬಹುಮತವನ್ನು ಗುರಾಣಿಯಾಗಿಸಿಕೊಂಡ ಅಧಿಕಾರರೂಢ ಪಕ್ಷವು, ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಪೌರತ್ವ (ತಿದ್ದುಪಡಿ) ಮಸೂದೆ-2019ಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ಪಡೆದಿದೆ, ರಾಷ್ಟ್ರಪತಿಗಳ ಅಂಕಿತದೊಂದಿಗೆ ಅದು ಈಗ ಕಾನೂನು ಆಗಿದೆ. ನಮ್ಮ ನೆರೆಯ ದೇಶಗಳಲ್ಲಿ ಧರ್ಮದ ದೆಸೆಯಿಂದ ಶೋಷಣೆಗೊಳಗಾಗಿ ತಮ್ಮ ದೇಶಗಳನ್ನು ತೊರೆದವರಿಗೆ ಆಶ್ರಯ ನೀಡುವುದು ಈ ಕಾನೂನಿನ ಮೂಲ ಉದ್ದೇಶವಾಗಿದ್ದರೂ, ಮುಸ್ಲೀಂ ಸಮುದಾಯದವರನ್ನು ಆ ಶೋಷಿತ ಸಮುದಾಯಗಳಲ್ಲಿ ಸೇರಿಸಿಲ್ಲ. ಇದೊಂದು ಬಗೆಯಲ್ಲಿ ಭಾರತದ ಸಂವಿಧಾನದ ಆಶಯವನ್ನು ಮುಕ್ಕಾಗಿಸಿದಂತಾಗಿದೆ. ನಮ್ಮ ಸಂವಿಧಾನದ ಸರ್ವ ಸಮಾನತೆಯ ಪರಿಕಲ್ಪನೆಗೆ ವಿರುದ್ಧದ ಈ ನಡವಳಿಕೆ, ಇನ್ನೊಂದು ಬಗೆಯಲ್ಲಿ ಆಧುನಿಕ ಕಾಲದ ಪ್ರಗತಿಪರ ಆಲೋಚನೆಯಲ್ಲಿನ ಹಿನ್ನಡೆ ಎನ್ನಿಸದೇ ಇರದು.
ಇಂದಿನ ದಿನಮಾನಗಳಲ್ಲಿ, ರಾಜಕೀಯ ಮತ್ತು ಧರ್ಮದ ದೆಸೆಯಿಂದ ಕಷ್ಟಕೋಟಲೆಗಳನ್ನು ಅನುಭವಿಸಿ ದೇಶಾಂತರವಾಸಿಗಳಾಗಿ ತಮ್ಮ ತಾಯ ನೆಲವನ್ನು ಬಿಟ್ಟು, ಸುರಕ್ಷಿತ ಆಶ್ರಯ ತಾಣಗಳನ್ನು ಅರಸಿಕೊಂಡು ನೆರೆಹೊರೆಯ ದೇಶಗಳಿಗೆ ವಲಸೆ ಬರುವವರ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ.
ಇಪ್ಪತ್ತೊಂದನೇ ಶತಮಾನ ಮಾನವನ ನಾಗರಿಕತೆಯ ಉತ್ತಂಗದಲ್ಲಿರುವ ಕಾಲ ಎನ್ನಲಾಗುವ ಈ ಸಮಯದಲ್ಲಿ ಸುರಕ್ಷಿತ ಆಶ್ರಯ ತಾಣ ಅರಸಿಕೊಂಡು ಬರುವ ವಲಸಿಗರನ್ನು ತಮ್ಮ ತಮ್ಮ ಪ್ರದೇಶಗಳಲ್ಲಿ ಕಾಲಿಡದಂತೆ ಮಾಡಲು ದೇಶಗಳು ತಮ್ಮ ಗಡಿಗಳಲ್ಲಿ ಬೇಲಿಗಳನ್ನು, ತಪ್ಪಿದರೆ ಎತ್ತರದ ಗಡಿ ಗೋಡೆಗಳನ್ನು ಕಟ್ಟಲು ಮುಂದಾಗುತ್ತಿರುವುದು, ಮಾನವೀಯ ಮೌಲ್ಯಗಳ ಅದಃಪತನ ಎನ್ನಬಹುದೇನೋ. ಭಾರತವು ಈಗ ವಲಸಿಗರಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಹೊರಟಿರುವುದೂ ಅಂಥಹದೇ ಹೆಜ್ಜೆಯ ಇನ್ನೊಂದು ರೂಪ.
ಕಳೆದ ಕೆಲವು ವರ್ಷಗಳಿಂದ ಆಫ್ರಿಕಾ ಖಂಡದಲ್ಲಿನ ಕೆಲವು ದೇಶಗಳಲ್ಲಿ ಭುಗಿಲೆದ್ದ ರಾಷ್ಟ್ರೀಯವಾದಿಗಳ ಹುಚ್ಚಾಟಗಳಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ವಲಸಿಗರು ಯುರೋಪಿನ ವಿವಿಧ ದೇಶಗಳಲ್ಲಿ ನುಗ್ಗಿದರು.
ಆತ್ತ್ತ, ಮಧ್ಯ ಅಮೆರಿಕದ ವಲಸಿಗರನ್ನು ತಡೆಯಲು, ಉತ್ತರ ಅಮೆರಿಕ ಸಂಸ್ಥಾನಗಳ ಒಕ್ಕೂಟ ದಕ್ಷಿಣದ ತನ್ನ ಗಡಿಯಲ್ಲಿ ಗೋಡೆಯ ನಿರ್ಮಾಣದಲ್ಲಿ ತೊಡಗಿದೆ. ಇತ್ತ ಏಷ್ಯ ಖಂಡದ ಮೈಯನ್ಮಾರ (ಹಿಂದಿನ ಬರ್ಮಾ) ದೇಶದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಅರಬ ರಾಷ್ಟ್ರಗಳಲ್ಲಿನ ಭಯೋತ್ಪಾದಕರ ಹುಚ್ಚಾಟಗಳ ಪರಿಣಾಮದ ಅನಿಶ್ಚಿತತೆಯ ಕಾರಣ ಅಮಾಯಕರು, ತಮ್ಮ ದೇಶಗಳನ್ನು ತೊರೆದು ದೇಶಾಂತರ ಹೋಗುತ್ತಿದ್ದಾರೆ.
ವಲಸಿಗರ ಅಂತರ್ರಾಷ್ಟ್ರೀಯ ಸಂಸ್ಥೆಯ ಅಂದಾಜಿನಂತೆ ಕಳೆದ ವರ್ಷ ವಿಶ್ವದಾದ್ಯಂತ ಸುಮಾರು 2300 ಜನ ಅಮಾಯಕ ವಲಸಿಗರು ಜೀವ ಕಳೆದುಕೊಂಡಿದ್ದಾರೆ. ವಿಶ್ವದಾದ್ಯಂತ ಯುದ್ಧಗಳ ದೆಸೆಯಿಂದ, ಅನ್ಯಾಯ ಅನಾಚಾರಗಳಿಂದ, ಆರ್ಥಿಕ ಮತ್ತು ಸಾಮಾಜಿಕ ತರತಮಗಳಿಂದ ಬಸವಳಿದ ಅಮಾಯಕ ಜನ, ಅಕ್ರಮ ವಲಸಿಗರಾಗಿ ತಮ್ಮದಲ್ಲದ ತಪ್ಪಿಗಾಗಿ ಬೆಲೆ ತೆರಬೇಕಾಗಿದೆ.
ವಿಶ್ವ ಸಂಸ್ಥೆಯ ಸಮಾನ್ಯ ಸಭೆಯು 1990ರ ಡಿಸೆಂಬರ 18ರಲ್ಲಿ ಸಕಲ ವಲಸಿಗ ಕಾರ್ಮಿಕರ ಮತ್ತು ಅವರ ಕುಟುಂಬದವರ ಹಕ್ಕುಗಳ ರಕ್ಷಣೆಗಾಗಿ ಒಂದು ನಿರ್ಣಯವನ್ನು ಅಂಗೀಕರಿಸಿತ್ತು. ಆ ನಂತರ 2004ರ ಡಿಸೆಂಬರ್ 4ರಂದು, ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳ ಆಗ್ರಹದ ಹಿನ್ನೆಲೆಯಲ್ಲಿ, ಈ ವಿಷಯದ ಬಗೆಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 18ರಂದು ಅಂತರ್ರಾಷ್ಡ್ರೀಯ ವಲಸಿಗರ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿತು.
ದುರ್ಭರ ಪ್ರಸಂಗಗಳಲ್ಲಿ ಒಳ್ಳೆಯ ಬದುಕನ್ನು ಬಯಸಿ ವಲಸೆ ಹೋಗುವ ಪ್ರಕ್ರಿಯೇ ಮಾನವ ಇತಿಹಾಸದಲ್ಲಿ ಎಲ್ಲಾ ಕಾಲಗಳಲ್ಲೂ ನಡೆಯುತ್ತ ಬಂದಿದೆ. ಇಂದಿನ ಜಾಗತೀಕರಣ, ಕೈಗೆಟಕುವ ಸಂಪರ್ಕ ಸಾಧನಗಳು ಮತ್ತು ಸುಲಭ ಪ್ರಯಾಣದ ಅನುಕೂಲಗಳು, ಉತ್ತಮ ಬದುಕು ಅರಸಿ ರಹದಾರಿ ಪಡೆದು ಸಕ್ರಮ ದಾರಿಯಲ್ಲಿ, ಅನಿವಾರ್ಯ ಪ್ರಸಂಗಗಳಲ್ಲಿ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆ ಹೆಚುವಂತೆ ಮಾಡಿದೆ. ಕೆಲವು ಕಡೆ ಈ ವಲಸೆಗಾರರು ವಲಸೆ ಹೋದ ಪ್ರದೇಶಗಳ ಅಭಿವೃಧ್ದಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದನ್ನು ಮರೆಯುವಂತಿಲ್ಲ. ಇದರೊಂದಿಗೆ, ರಾಜಕೀಯ ಹಾಗೂ ಧರ್ಮದ ದಬ್ಬಾಳಿಕೆಗಳ ದೆಸೆಯಿಂದ ಅನಾಥರಾಗಿ, ಸಂತ್ರಸ್ತರಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವುದು, ವಲಸೆ ಬಂದವರಿಗೆ ಅಗತ್ಯ ಸೌಲತ್ತುಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ದೇಶಗಳಲ್ಲಿ ಆತಂಕವನ್ನು ಸೃಷ್ಟಿಸಿರುವುದನ್ನು ತಳ್ಳಿಹಾಕಲಾಗದು.
ಇಡೀ ಜಗತ್ತು ಇದೇ ಬಗೆಯಲ್ಲಿ ಯೋಚಿಸುತ್ತಿಲ್ಲ. ಧಾರ್ಮಿಕ ತಾರತಮ್ಯದಿಂದ ಹಾಗೂ ರಾಜಕೀಯ ಕಾರಣಗಳಿಂದ ಸಂತ್ರಸ್ತರಾದ ವಲಸಿಗರಿಗೆ ಯುರೋಪಿನ ಕೆಲವು ದೇಶಗಳು ತಮ್ಮ ನೆಲದಲ್ಲಿರಲು ಒಪ್ಪದಿದ್ದರೂ, ಬಹುತೇಕ ದೇಶಗಳು ಅವರಿಗೆ ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂಥ ಬೆಳ್ಳಿಯ ಗೆರೆಗಳು, ಸಂತ್ರಸ್ತ ವಲಸಿಗರಿಗೆ ಭರವಸೆಯನ್ನು ಮೂಡಿಸುವಂತಿವೆ.
ಪ್ರಸಕ್ತ ಸಾಲಿನ 2019ರ ಸೆಪ್ಟೆಂಬರ್ 29 ರಂದು, ಕ್ರೈಸ್ತ ಧರ್ಮದ ಜಗದ್ಗುರು, (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್ ಅವರು, ಇಟಲಿಯ ತಮ್ಮ ನಿವಾಸ ಸ್ಥಳ ರೋಮ್ ಪಟ್ಟಣದಲ್ಲಿನ, ವ್ಯಾಟಿಕನ್‍ನ ಸಂತ ಪೇತ್ರರ ಚೌಕಿನಲ್ಲಿ (ಸೆಂಟ್ ಪೀಟರ್ಸ್ ಸ್ಕ್ಯಯರ್), `ಅರಿವಿಗೆ ಬಾರದ ದೇವದೂತರು’ (ಏಂಜಿಲ್ಸ್ ಅನವೆಯರ್) ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು ಅನಾವರಣಗೊಳಿಸಿ ಜಗತ್ತಿನ ವಿವಿಧೆಡೆಯ ಅಕ್ರಮ ವಲಸಿಗರಿಗೆ, ಸಂತ್ರಸ್ತರಿಗೆ ಧೈರ್ಯ ತುಂಬಿದ ಘಟನೆ ನಡೆದಿದೆ. ಅವರು 2013ರಲ್ಲಿ ಪಟ್ಟಕ್ಕೆ ಚುನಾಯಿತರಾದ ದಿನದಿಂದಲೂ, ವಲಸಿಗರ ಪರವಾಗಿ ವಾದಿಸಿ, ಆಯಾ ದೇಶಗಳ ಜನ ಮುಕ್ತಮನಸ್ಸಿನಿಂದ ವಲಸಿಗರನ್ನು ಸ್ವಾಗತಿಸಿ ತಮ್ಮವರೆಂದು ಒಪ್ಪಿಕೊಳ್ಳುವಂತೆ ದೇಶವಾಸಿಗಳ, ನಾಯಕರ ಮನವೊಲಿಸಲು ಶ್ರಮಿಸುತ್ತಿದ್ದಾರೆ.
ರಾಜಕೀಯ ಮತ್ತು ಧರ್ಮದ ಕಾರಣ ತೊಂದರೆಗಳನ್ನು ಅನುಭವಿಸಿ ತಮ್ಮ ಮಾತೃ ಭೂಮಿಯನ್ನು ಬಿಟ್ಟು, ಸುರಕ್ಷಿತ ಆಶ್ರಯ ಸ್ಥಳಗಳನ್ನು ಅರಸಿಕೊಂಡು ಹೋಗುವವರಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಅಕ್ರಮ ವಲಸಿಗರ ಸ್ಮಾರಕಾರ್ಥವಾಗಿ ಸಿದ್ಧಪಡಿಸಲಾದ ಈ ಅಪೂರ್ವ ಕಲಾಕೃತಿಯಲ್ಲಿ ವಲಸೆಗಾರರನ್ನು ಪ್ರತಿನಿಧಿಸುವ ಕಂಚಿನ ಪ್ರತಿಮೆಗಳಿವೆ.
ವ್ಯಾಟಿಕನ್ನಿನÀ ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಳಿಸಿರುವ `ಅರಿವಿಗೆ ಬಾರದ ದೇವದೂತರು’ ಕಂಚಿನ ಪ್ರತಿಮೆಗಳ ಗುಚ್ಛದ ಕಲಾಕೃತಿಯನ್ನು ನಿರ್ಮಸಿದ ಶಿಲ್ಪಿ ಕೆನಡಾ ದೇಶದ ತಿಮೋತಿ. ಪಿ. ಸ್ಮಾಲ್ಝ್.
ಸುಮಾರು ಮೂರೂವರೆ ಟನ್ ಭಾರದ, 20 ಅಡಿ ಎತ್ತರದ ಈ ಕಂಚಿನ ಶಿಲ್ಪದ ಪ್ರತಿಮೆಗಳ ಗುಚ್ಛದಲ್ಲಿ, ವಿವಿಧ ಸಂಸ್ಕøತಿ, ಕಾಲಘಟ್ಟಗಳನ್ನು, ದೇಶಗಳನ್ನು ಪ್ರತಿನಿಧಿಸುವ ಒಟ್ಟು 140 ವಲಸಿಗರ ನಿಂತ ನಿಲುವಿನ ಪ್ರತಿಮೆಗಳನ್ನು ದೋಣಿಯೊಂದರಲ್ಲಿ ಕಡೆದು ನಿಲ್ಲಿಸಲಾಗಿದೆ.
ಅವುಗಳಲ್ಲಿ ನಾಝಿ ಜನರಿಂದ ಅಪಖ್ಯಾತಿ ಹೊಂದಿದ ಜರ್ಮನಿಯಿಂದ ಪಲಾಯನಗೈದ ಯಹೂದಿಗಳಿಂದ ಹಿಡಿದು ಇಂದಿನ ಯುದ್ಧಗಳು ಹಾಗು ಬರಗಾಲಗಳಿಂದ ಬಸವಳಿದ ಸಿರಿಯ ಮತ್ತು ಆಫ್ರಿಕಾ ದೇಶಗಳಿಂದ ಬಂದ, ಆತಂಕದಲ್ಲಿರುವ, ದುಃಖದಲ್ಲಿರುವ, ಆಶಾಭಾವನೆಯ ಮುಖ ಹೊತ್ತ, ಕೊನೆಗೂ ಸುರಕ್ಷಿತ ತಾಣ ಮುಟ್ಟಿದ ಮುಖಭಾವದ ವಲಸಿಗರನ್ನು ಈ ಕಲಾಕೃತಿಯಲ್ಲಿ ಕಾಣಬಹುದಾಗಿದೆ.
`ನಿನ್ನಂತೆಯೇ ನಿನ್ನ ನರೆಹೊರೆಯವರನ್ನು ಪ್ರೀತಿಸು’ ಎಂದು ಸಾರಿದ ಯೇಸುಕ್ರಿಸ್ತರ `ಜೀವನವನ್ನು, ನಂತರದ ಘಟನಾವಳಿಗಳನ್ನು ಕಟ್ಟಿಕೊಡುವ `ಬೈಬಲ್’ನ ಹೊಸ ಒಡಂಬಡಿಕೆಯ `ಹಿಬ್ರಿಯರಿಗೆ ಬರೆದ ಪತ್ರ’ದಲ್ಲಿನ ಸಾಲುಗಳು - `ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೇ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ, ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ, ಅನ್ಯಾಯಕ್ಕೆ ಒಳಗಾಗುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ, ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?’ ಹೇಳುವ ಭಾವದ ಮೂರ್ತ ಸ್ವರೂಪ ಈ ಶಿಲ್ಪ ಎನ್ನಲಾಗುತ್ತದೆ.
ಅತಿಥಿ ಸತ್ಕಾರದಲ್ಲಿ `ಕೆಲವರು ದೇವದೂತರನ್ನು ಉಪಚರಿಸಿದ್ದಾರೆ’ ಎಂಬ ಮಾತಿಗೆ ಪೂರಕವಾಗಿ ಸಂತ ಪೇತ್ರರ ಮಹಾದೇವಾಲಯ(ಬೆಸಿಲಿಕಾ)ದ ಎದುರಿಗಿನ, ಸಂತ ಪೇತ್ರರ ಚೌಕಿನಲ್ಲಿ ನಿಲ್ಲಿಸಲಾಗಿರುವ ಈ ಅಪರೂಪದ ಕಂಚಿನ ಕಲಾಕೃತಿ (`ಅರಿವಿಗೆ ಬಾರದ ದೇವದೂತರು’)ಯ ತುಂಬಿದ ದೋಣಿಯ ಗಿಜಿಗಿಡುವ ಜನರ ಮಧ್ಯದಲ್ಲಿ ಕ್ರೈಸ್ತರು ವಿಶ್ವಾಸಿಸುವ ಪ್ರಧಾನ ದೇವದೂತ, ಕಾವಲು ದೂತ ಸಂತ ಮಿಖೇಲಪ್ಪರೂ ಇದ್ದಾರೆ. ಈ ಪ್ರಧಾನ ದೂತ ತಕ್ಷಣ ಕಣ್ಣಿಗೆ ಕಾಣಿಸುವುದಿಲ್ಲ. ಮಧ್ಯದಲ್ಲಿ ಎದ್ದು ಬಂದಂತಿರುವ ಎರಡು ರೆಕ್ಕೆಗಳು ಪ್ರಧಾನ ದೇವದೂತನ ಅಸ್ತಿತ್ವದ ಸುಳಿವು ನೀಡುತ್ತವೆ. ಹಾರಬಲ್ಲ ದೇವದೂತರು ರೆಕ್ಕೆ ಹೊಂದಿರುವರು ಎಂಬುದು ಕ್ರೈಸ್ತ ವಿಶ್ವಾಸ.
ಪರಸ್ಪರ ಅಂಟಿಕೊಂಡ ಈ ಸಂತ್ರಸ್ತ ವಲಸಿಗರ ಪುತ್ಥಳಿಗಳ ನಡುವೆ, ಯೇಸುಸ್ವಾಮಿ ಹುಟ್ಟಿದ ಸಂದರ್ಭದಲ್ಲಿ, ಹಸುಗೂಸುಗಳ ಕೊಲೆಗೆ ಹೆರೋದ ಅರಸ ಅಪ್ಪಣೆ ಕೊಡಿಸಿದ್ದಾಗ ಇಜಿಪ್ತಿಗೆ ಪಲಾಯನಗೈದ ಮಾತೆ ಮರಿಯಳ, ತಂದೆ ಜೋಸೆಫರ ಸ್ವರೂಪಗಳೂ ಇವೆ. ಅತಿಥಿ ಸತ್ಕಾರದಲ್ಲಿ ಅವರು, ಅಂಥವರು ಅರಿವಿಗೆ ಬಾರದ ದೇವದೂತರು, ಸುಳಿವು ಕೊಡದ ದೇವದೂತರು!
ವಚನಗಳ ಮಾಧ್ಯಮದ ಬಸವಾದಿ ಶರಣರ ಸಾಮಾಜಿಕ ಅನಿಷ್ಠಗಳ, ಡಂಬಾಚಾರಗಳ ವಿರೋಧದ ನಿಲುವು, ಎಲ್ಲರನ್ನೂ ಸಮಾನರನ್ನಾಗಿ ಕಾಣು, ಪ್ರಯೊಬ್ಬರಲ್ಲೂ ದೇವರಿದ್ದಾನೆ (ಶಿವನಿದ್ದಾನೆ) ಎನ್ನುವ ಶರಣ ಧರ್ಮವು ವೀರಶೈವ ಧರ್ಮವಾಗಿ ರೂಪತಾಳಿತು. ಅವರ ಪ್ರಗತಿಪರ ವಿಚಾರಗಳು ಕ್ರಮೇಣ ದೇಶವ್ಯಾಪಿ ಹರಡಿತು, ಭಕ್ತಿ ಚಳುವಳಿ ಹಬ್ಬಿತು. ರಾಮದೇವ, ಸೂರದಾಸ, ರಮಾನಂದ, ಕಬೀರ ಮುಂತಾದವರು ಸೌಹಾರ್ದತೆಯ ಬೀಜಮಂತ್ರಗಳನ್ನು ಹಾಡಿದರು.
ವ್ಯಾಟಕನ್ ಪಟ್ಟಣದಲ್ಲಿ ಸ್ಥಾಪಿತವಾಗಿರುವ ಈ ಶಿಲ್ಪವೂ, ಭಕ್ತಿ ಚಳುವಳಿಯ ನೇತಾರರ, ಆಶಯ ಮತ್ತು ಬಸವಣ್ಣನವರ’ ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ’ ವಚನ ಮತ್ತು ಕನಕದಾಸರ `ಕುಲಕುಲವೆಂದು ಹೊಡೆದಾಡದಿರಿ..’ ಪದ್ಯಗಳ ಮೂರ್ತ ಸ್ವರೂಪವೇ ಎನ್ನಬಹುದು.
------------------------------------------
ವಲಸಿಗರ ನಾಡುಗಳು ಭಾರತ, ಅಮೆರಿಕ
ಸಾವಿಲ್ಲದ ಮನೆಯ ಸಾಸುವೆ ಕಾಳು ಹೇಗೆ ಸಿಗುವುದಿಲ್ಲವೋ, ಅಂತೆಯೇ ವಲಸಿಗರು ಇಲದ್ಲ ನಾಡು ಸಿಗುವುದೇ ಇಲ್ಲ. ಆಯಾ ನಾಡಿನ, ದೇಶದ ಇತಿಹಾಸ ಒಂದೊಂದು ಕಾಲದಲ್ಲಿ ವಲಸೆಯ ಪ್ರಕರಣಗಳು ನಡದೇ ಇರುತ್ತವೆ. ಭಾರತದ ಇತಿಹಾಸವನ್ನು ಬಗೆದರೆ, ಭರತ ಖಂಡದಲ್ಲಿನ ಸಂಪತ್ತನ್ನು ಅರಸಿ ಈ ನಾಡಿಗೆ ಬಂದವರೇ ಢಾಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಆದಿಯಲ್ಲಿ ಐದು ಸಾವಿರ ವರ್ಷಗಳಿಂದಲೂ ಇಜಿಪ್ತ ಮತ್ತು ಮೆಸೆಪೆÇೀÀಟೇಮಿಯಾ ನದಿ ಸಂಸ್ಕøತಿಗಳಂತೆ ಭಾರತವೂ ಒಂದು ಪುರಾತನ ನದಿ ನಾಗರಿಕತೆ ಹೊಂದಿತ್ತು. ಅದನ್ನು ಸಿಂಧು ಮತ್ತು ಈಗ ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಗಳ ಬಯಲಿನಲ್ಲಿನ ಸಿಂಧು ನದಿ ನಾಗರಿಕತೆ ಎಂದು ಗುರುತಿಸಲಾಗುತ್ತದೆ. ಇಂದು ಈ ಸಂಸ್ಕøತಿ ಅಸ್ತಿತ್ವದಲ್ಲಿದ್ದ ಬಹುಪಾಲು ಪ್ರದೇಶ ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಪಾಲಾಗಿದೆ.
ನಂತರ ಮಧ್ಯ ಏಷಿಯಾದಿಂದ ಕುದುರೆಗಳೊಂದಿಗೆ ಆರ್ಯರು ಬಂದರು. ಸ್ಥಳೀಯರೊಂದಿಗೆ ಸಂಘರ್ಷ ನಡೆಯುತ್ತದೆ. ಕಾಲಾಂತರದಲ್ಲಿ ಹೊಂದಾಣಿಕೆಯ ಬದುಕು ಆರಂಭವಾಗುತ್ತದೆ. ಸಂಘರ್ಷದ ಸಂದರ್ಭಗಳಲ್ಲಿ ಮೂಲ ನಿವಾಸಿಗಳು ಅಪಾರ ಪ್ರಮಾಣದಲ್ಲಿ ದಕ್ಷಿಣಕ್ಕೆ ವಲಸೆ ಹೋಗಬೇಕಾಗುತ್ತದೆ. ಅವರನ್ನು ದ್ರಾವಿಡರು ಎಂದು ಗುರುತಿಸಲಾಗುತ್ತದೆ.
ಪರ್ಷಿಯನ್ನರು ಭರತ ಖಂಡದ ವಾಯುವ್ಯ ದಿಕ್ಕಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ. ದಕ್ಷಿಣದ ಪಲ್ಲವರ ಮೂಲ ಪರ್ಷಿಯಾ ಎಂದು ಹೇಳಲಾಗುತ್ತದೆ. ಆನಂತರ ಅಲೆಕ್ಸಾಂಡರನ ನೇತೃತ್ವದಲ್ಲಿ ಗ್ರೀಕರು ಭಾರತದ ಮೇಲೆ ದಂಡತ್ತಿ ಬರುತ್ತಾರೆ. ಮುಂದೆ ಕುಷಾಣರು, ಹೂಣರು ಬರುತ್ತಾರೆ. ಕ್ರಮೇಣ ಇಲ್ಲಿನ ಜನರೊಂದಿಗೆ ಬೆರೆಯುತ್ತಾರೆ. ಅವರ ನಂತರ ಎಂಟನೇ ಶತಮಾನದಲ್ಲಿ ಮುಸ್ಲೀಂರು ಭಾರತಕ್ಕೆ ಲಗ್ಗೆ ಇಡುತ್ತಾರೆ. ಮಹಮ್ಮದ ಬಿನ್ ಕಾಸಿಂ, ಮುಂದೆ ಹತ್ತನೇ ಶತಮಾನದಲ್ಲಿ ಗಜನಿಯ ಮಹಮ್ಮದ ಹದಿನೇಳು ಬಾರಿ ಭರತಖಂಡದ ಮೇಲೆ ದಾಳಿ ನಡೆಸಿ ಲೂಟಿ ಮಾಡುತ್ತಾನೆ. ಅವನ ಹಿಂದೆಯೇ ಬಂದ ಮುಸ್ಲೀಂರು ಭರತಖಂಡದಲ್ಲೇ ನೆಲೆಸಿ ರಾಜ್ಯವಾಳಲು ಆರಂಭಿಸಿ ಈ ನೆಲದವರೇ ಆಗುತ್ತಾರೆ. ಸಿಂಧೂ ನದಿಯ ಈಚೆಗಿನ ಜನರೆಲ್ಲರೂ ಸಿಂಧುನಾಡಿನ ಜನ. ಕ್ರಮೇಣ `ಸ’ಕಾರ ಹಿಂದೆ ಸರಿದು ಅಲ್ಲಿ `ಹ’ಕಾರ ಬಂದಾಗ ಅವರೆಲ್ಲ ಹಿಂದುಗಳಾದರು, ಅವರ ನಾಡು ಹಿಂದುಸ್ತಾನವಾಯಿತು. ಅಂಥ ಹಿಂದುಸ್ತಾನದಲ್ಲಿನ ನೂರಾರು ರಾಜ್ಯಗಳನ್ನು ಸ್ಥಳೀಯ ಹಿಂದೂ ಅರಸರು, ವಲಸೆ ಬಂದು ಸ್ಥಳೀಕರೇ ಆದ ಮುಸ್ಲೀಂ ಅರಸರು/ಸುಲ್ತಾನರು ಆಳತೊಡಗಿದರು. ಆ ಸಂದರ್ಭದಲ್ಲಿ ಬಹುತೇಕ ಉತ್ತರ ಭಾರತದಲ್ಲಿ ಸ್ಥಳೀಯ ಭಾಷೆ ಮತ್ತು ಪರ್ಷಿಯ ಬೆರೆತು ಉರ್ದು ಎಂಬ ಹೊಸ ಭಾಷೆಯ ಉಗಮವಾಯತು. ಪರ್ಷಿಯಾದ ತಾನಪುರಾ ಮತ್ತು ಭಾರತದ ವೀಣೆಗಳ ಸಂಗಮವಾಗಿ ಸಿತಾರ ವಾದ್ಯ ರೂಪತಾಳಿತು! ದಕ್ಷಿಣ ಭಾರತದ ಡೋಲು, ತಬಲಾ ವಾದ್ಯದ ಹುಟ್ಟಿಗೆ ಮೂಲವಾಯಿತು! ಇವು ಒಂದೆರಡು ಉದಾಹರಣೆಗಳು.
ಮುಂದೆ 15ನೇ ಶತಮಾನದಲ್ಲಿ ವ್ಯಾಪಾರಕ್ಕಾಗಿ ಬಂದ ಯುರೋಪಿನ ಜನ ಭಾರತದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡರು. ಇಲ್ಲಿನ ಅರಸರು, ಸುಲ್ತಾನರ ನಡುವಿನ ಒಳಜಗಳಗಳಲ್ಲಿ ತಲೆತೂರಿಸಿ ತಮ್ಮ ಬೇಳೆ ಬೇಯಿಸಿಕೊಂಡ ಬ್ರಿಟಿಷರು ಇಡೀ ನಾಡನ್ನು ತಮ್ಮ ವಸಹಾತು ಮಾಡಿಕೊಂಡರು. ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರು ಒದಗಿಸಿದ ಶಿಕ್ಷಣ ಸೌಲಭ್ಯ ಮೂಡಿಸಿದ ತಿಳುವಳಿಕೆಯಲ್ಲಿ ಭರತಖಂಡದ ಜನರಲ್ಲಿ ಮೂಡಿದ ಸ್ವಾಂತಂತ್ರ್ಯದ ಕನಸು ಮಹಾತ್ಮಾಗಾಂಧಿ ಅವರ ಅಹಿಂಸಾ ಹೋರಾಟದಿಂದ ನನಸಾಯಿತು.
ಬ್ರಿಟಿಷರು 1947ರಲ್ಲಿ ನಮ್ಮ ದೇಶಬಿಟ್ಟು ತೊಲಗಿದಾಗ ಭಾರತ ಸ್ವತಂತ್ರ ದೇಶವಾಯಿತು. (ಆದರೆ, ಬ್ರಿಟಿಷರ ಉಡುಗೆತೊಡುಗೆ, ಆಚಾರವಿಜಾರಗಳು ಸಮಾಜದಲ್ಲಿ ನೆಲೆಯೂರಿದವು. ಅವರ ಇಂಗ್ಲಿಷ್ ಭಾಷೆ ನಾಡಿನ ಆಡಳಿತದ ಎಲ್ಲಾ ಸ್ತರಗಳಲ್ಲೂ ಬೇರು ಬಿಟ್ಟಿತು. ಈಗಂತೂ ಉದ್ಯೋಗದಾತನಾದ ಇಂಗಿಷ್ ಭಾಷೆ ಸ್ಥಳೀಯ ಭಾಷೆಗಳಿಗೆ ಕಂಟಕಪ್ರಾಯವಾಗಿಬಿಟ್ಟಿದೆ, ಹೊಸಬಗೆಯ ದಾಸ್ಯಕ್ಕೆ ದೂಡುತ್ತಿದೆ.) ಭರತ ಖಂಡದ ನೆಲಕ್ಕೆ ಕಾಲಿರಿಸಿದ ಈ ಎಲ್ಲ ಜನರ ಶ್ರಮದಿಂದ ಪ್ರಸಕ್ತ ಭಾರತ ಇಂದಿನ ಸ್ವರೂಪ ಪಡೆಯಲು ಸಾಧ್ಯವಾಯಿತು. ಕಳೆದ 60 ವರ್ಷಗಳಲ್ಲಿ ಭಾರತ ತನ್ನದೇ ಆದ ಛಾಪನ್ನು ಹೊಂದಿದೆ, ಗುರುತನ್ನು ಸ್ಥಾಪಿಸಿಕೊಂಡಿದೆ.
ಭಾರತವು ಪುರಾತನ ಕಾಲದಿಂದಲೂ ತನ್ನನ್ನು ಅರಸಿಕೊಂಡು ಬಂದ ವಲಸಿಗರನ್ನು ಅಪ್ಪಿ ಮುದ್ದಾಡಿದೆ. ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕವನ್ನು (ಉತ್ತರ ಅಮೆರಿಕ ಸಂಸ್ಥಾನಗಳು- ಯು ಎಸ್ ಎ- ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ) ಈ ಮಟ್ಟಕ್ಕೆ ಬೆಳೆಸಿದವರು ಅಲ್ಲಿನ ಮೂಲ ನಿವಾಸಿಗಳಲ್ಲ(ಇಂದು ಅಲ್ಲಿನ ಮೂಲನಿವಾಸಿಗಳನ್ನು ಕೆಲವು ರಾಜ್ಯಗಳಲ್ಲಿ ಮೂಲೆಗುಂಪು ಮಾಡಲಾಗಿದೆ), ಈಚೆಗಿನ ನಾಲ್ಕಾರು ಶತಮಾನಗಳ ಕಾಲ ಯುರೋಪಿನ ವಿವಿಧ ದೇಶಗಳ ವಲಸಿಗರು. ಐಟಿ, ಬಿಟಿಯ ಇಂದಿನ ಯುಗದಲ್ಲಂತೂ ಏಷ್ಯ ಖಂಡದ ಭಾರತೀಯರು ಮತ್ತು ಚೈನಾದಿಂದ ವಲಸೆ ಹೋಗಿರುವ ಯುವಜನತೆಯ ಶ್ರಮದಿಂದಲೇ ಅಮೆರಿಕ ಇಂದು ಜಗತ್ತಿನ ಒಂದು ಶ್ರೀಮಂತ ರಾಷ್ಟ್ರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
-0--0--0--0--0--0-