ಕಳೆದ ಎರಡು ತಿಂಗಳಿಂದ ಮೈಸೂರು ಬಿಷಪರಾದ ಅತಿವಂದನೀಯ ಕಾಣಿಕದಾಸ್ ವಿಲಿಯಂ ಅಂತೋಣಿಯವರ ಮೇಲೆ ಅನೈತಿಕ ಜೀವನದ ಆರೋಪದ ತೂಗುಕತ್ತಿ ತೂಗಾಡುತ್ತಿದೆ. ತಮ್ಮ ಧರ್ಮಕ್ಷೇತ್ರದ ಸಹವರ್ತಿ ಗುರುಗಳೂ ಸೇರಿದಂತೆ ಮೂವತ್ತೇಳು ಮಂದಿ ಅವರ ಮೇಲೆ ಸಾಕ್ಷ್ಯಾಧಾರ ಸಮೇತ ವ್ಯಾಟಿಕನ್ ಪರಮೋಚ್ಛಪೀಠಕ್ಕೆ ದೂರು ಸಲ್ಲಿಸಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಕಾಳಜಿಯುತ ಕಥೋಲಿಕರು ಎಂಬ ಸಂಘವೊಂದು ರಾಬರ್ಟ್ ರೊಸಾರಿಯೋ ಎಂಬುವರ ನೇತೃತ್ವದಲ್ಲಿ ಬಿಷಪರ ಮೇಲೆ ಆರೋಪ ಮಾಡಿದಾಗ ಇಡೀ ಇಂಡಿಯಾದ ಧರ್ಮಸಭೆ ಬೆಚ್ಚಿಬಿದ್ದಿತು.
ಮೈಸೂರು ಧರ್ಮಕ್ಷೇತ್ರದ ಪ್ರಧಾನಗುರುವಾಗಿರುವ ಫಾದರ್ ಲೆಸ್ಲಿ ಮೋರಾಸ್ ಅವರು ತಮ್ಮ ಕಚೇರಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕೊಠಡಿಗೆ ಕರೆಸಿಕೊಂಡು ಕಡತವನ್ನು ನೋಡುವ ನೆವದಲ್ಲಿ ಆಕೆಯ ಮೈಮಾಟವನ್ನು ಕಣ್ದಿಟ್ಟಿಯಲ್ಲೇ ಅಳೆದರೆಂದು ಆಕೆಯೇ ಹೇಳಿಕೊಂಡಿರುವ ಅನುಭವ ಕಥನವು ಚಲನಚಿತ್ರದ ರೂಪದಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಭಾರತೀಯ ಹೆಣ್ಣುಮಗಳೊಬ್ಬಳು ತನ್ನ ಮೈಯ ಬಗ್ಗೆ ಅತೀವ ಜಾಗರೂಕತೆ ವಹಿಸುತ್ತಾಳೆ, ಪರಪುರುಷನೊಬ್ಬನು ತನ್ನನ್ನು ಮುಟ್ಟುವುದಿರಲಿ ಕೇವಲ ಕಾಮುಕ ದೃಷ್ಟಿಯಿಂದ ತನ್ನ ದೇಹವನ್ನು ನೋಡಿದರೂ ಆಕೆ ಇರುಸುಮುರುಸು ಆಗುತ್ತಾಳೆ. ಅಂಥಲ್ಲಿ ಒರ್ವ ಯುವತಿಯು ಕ್ರೈಸ್ತ ಗುರುವೊಬ್ಬರ ಮೇಲೆ ಅಂಥ ಆರೋಪ ಮಾಡಿದ್ದಾಳೆಂದರೆ ಅದನ್ನು ಸುಮ್ಮನೇ ತಳ್ಳಿಹಾಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ದೇಶದ ಕಾನೂನು ತನ್ನ ನಡೆಯನ್ನು ಮುಂದಿಟ್ಟು ಆ ಯುವತಿಯನ್ನು ಖುದ್ದಾಗಿ ಸಂದರ್ಶಿಸಿ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ. ಆ ಪ್ರಕಾರ 2018ರ ಮೇ ತಿಂಗಳಲ್ಲಿ ಮೇಲ್ತಿಳಿಸಿದ ಘಟನೆ ನಡೆಯಿತೆಂದೂ ಆ ನಂತರ ಆಕೆ ತಾನು ಕೆಲಸಕ್ಕಿದ್ದ ಕ್ರೈಸ್ತಸಂಸ್ಥೆಗೆ ರಾಜಿನಾಮೆ ಕೊಟ್ಟು ಹೊರನಡೆದಳೆಂದೂ, ಜುಲೈ 18ರಲ್ಲಿ ಬಿಷಪರ ಕಡೆಯವರೆನ್ನಲಾದ ಒಂದಷ್ಟು ಮಂದಿ ಆಕೆಯನ್ನು ಕಾರಿನಲ್ಲಿ ಅಪಹರಿಸಿ ಆಕೆಯ ಫೋನಿನಲ್ಲಿದ್ದ ಮಾಹಿತಿಯನ್ನೆಲ್ಲ ಅಳಿಸಿ ಬೆದರಿಸಿ ಹೋದರೆಂದೂ ದಾಖಲಾಗಿದೆಯಂತೆ. ಅಲ್ಲದೆ ಆಕೆ ಎಂದೋ ಮಾಡಿದ ಆರೋಪದ ವಿಡಿಯೋವನ್ನು ಮತ್ತೊಬ್ಬ ಗುರುಗಳು ಇಂದು ಬೆಳಕಿಗೆ ತಂದಿದ್ದಾರೆ, ತನ್ನನ್ನು ತನ್ನ ಪಾಡಿಗೆ ಬಿಟ್ಟುಬಿಡಿ ಎಂದೂ ಆಕೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾಳೆ.
ಬಿಷಪರು ಈ ಆರೋಪ ಮಾಡಿದವರಲ್ಲಿ ಭೇದ ಉಂಟುಮಾಡಲು ಪ್ರಯತ್ನಿಸಿ ಅಂಥವರ ಮೇಲೆಯೇ ಪ್ರತಿತಂತ್ರ ಹೂಡಿದರು ಹಾಗೂ ಆ ಯುವತಿಯನ್ನು ಬೆದರಿಸಿದರು ಕೊನೆಗೆ ಹಣದ ಆಮಿಷ ಒಡ್ಡಿದರು ಎನ್ನುವ ಆರೋಪವೂ ಕೇಳಿಬರುತ್ತಿದೆ.
ಬಿಷಪ್ ವಿಲಿಯಮ್ ಅವರ ಮೇಲೆ ಬೆದರಿಕೆ, ಅಪಹರಣದ ಮಾತು ಮಾತ್ರವೇ ಕೇಳಿಬರುತ್ತಿಲ್ಲ. ಆ ಮೂವತ್ತೇಳು ಮಂದಿಯ ಪ್ರಕಾರ 'ಬಿಷಪರು ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳ ಸಖ್ಯ ಹೊಂದಿದ್ದಾರೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ, ಮುಖ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ, ಹಾಗು ಭೂಗತ ಲೋಕದ ನಂಟೂ ಹೊಂದಿದ್ದಾರೆ' ಎಂಬ ಆಪಾದನೆಯೂ ಇದೆ. ಇಷ್ಟಲ್ಲದೆ ಅವರು ಪ್ರಧಾನಾಲಯದ ಗುರುವಾಗಿದ್ದಾಗ ರಾತ್ರಿ ಊಟದ ನಂತರ ಪ್ಯಾಂಟುಶರಟು ಧರಿಸಿ ಹೊರಗೆ ಹೊರಟರೆ ಮತ್ತೆ ಹಿಂದಿರುಗುತ್ತಿದ್ದುದು ಮರುದಿನ ಬೆಳಗ್ಗೆಯೇ ಎಂದು ಸಹ ಪ್ರತ್ಯಕ್ಷದರ್ಶಿಗಳು ಮಾತಾಡುತ್ತಿದ್ದಾರೆ. ಅವರು ಪ್ರತಿರಾತ್ರಿ ಒಂದು ಹೆಂಗಸಿನೊಂದಿಗೆ ತಂಗುತ್ತಿದ್ದರು ಹಾಗೂ ಆ ಸಂಬಂಧದ ಫಲವಾಗಿ ಅವರಿಗೊಬ್ಬ ಮಗನಿದ್ದಾನೆ ಎಂದೂ ಗುರುತರ ಆರೋಪ ಕೇಳಿಬರುತ್ತಿದೆ.
ಬಹುಕಾಲ ಈ ಆರೋಪಗಳ ಬಗ್ಗೆ ಸುಮ್ಮನಿದ್ದ ಬಿಷಪರು ರಾಜಕಾರಣಿಯ ತೆರದಲ್ಲಿ ಕೈಯೆತ್ತಿ ಮುಗಿಯುತ್ತಾ ಸಂಗಡಿಗರ ಸಮೇತ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ದಿಶಾವರಿ ನಗೆ ಬೀರಿ ಆಕೆ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಹೇಳಿದರು. ಈ ಆರೋಪಗಳೆಲ್ಲ ಸುಳ್ಳು ಎಂದೂ ವಾದಿಸಿದರು. ಹಣಕಾಸಿನ ಅವ್ಯವಹಾರದಲ್ಲಿ ತೊಡಗಿದ್ದ ಗುರುಗಳ ಮೇಲೆ ನಾನು ಕ್ರಮ ಕೈಗೊಂಡಿದ್ದರಿಂದ ಅವರು ನನ್ನ ಮೇಲೆ ತಿರುಗಿಬಿದ್ದಿದ್ದಾರೆ ಎಂದೂ ಅವರು ಹೇಳಿದ್ದಾರೆ. ಅವರು ಬಿಷಪರಾಗಿ ನೇಮಕಗೊಂಡು ಅಭಿಷೇಕ ಹೊಂದುವವರೆಗೆ ಒಂದೂವರೆ ತಿಂಗಳ ಸಮಯವಿತ್ತು, ಆಗ ಆರೋಪ ಮಾಡದವರು ಈಗೇಕೆ ಆರೋಪ ಮಾಡುತ್ತಿದ್ದಾರೆ ಎಂದು ಬಿಷಪರ ನಿಷ್ಟರು ಹೇಳುತ್ತಿದ್ದಾರೆ.
ಏನೇ ಇರಲಿ ಕಾನೂನು ತನ್ನ ಪಾತ್ರವನ್ನು ನಿರ್ವಹಸಲಿದೆ, ಆದರೆ ನಮ್ಮ ಧರ್ಮಸಭೆಗೆ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
-0-
ಇತ್ತ ಕೇಂದ್ರ ಸರ್ಕಾರವು ಪೌರತ್ವ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಣದುಬ್ಬರ, ಕಾನೂನು ಅವ್ಯವಸ್ಥೆ, ಹಗರಣಗಳನ್ನು ಮುಚ್ಚಿಹಾಕಲು ಅಥವಾ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಇಂಥ ಸಾಹಸಕ್ಕೆ ಕೈಹಾಕಿದೆ ಎಂದು ವಿಚಾರವಾದಿಗಳು ಹೇಳುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಸುಮಾರು ಹತ್ತೊಂಬತ್ತು ಲಕ್ಷ ನಾಗರಿಕರು ತಮ್ಮ ಪೌರತ್ವ ರುಜುವಾತುಗೊಳಿಸಲು ಸಾಧ್ಯವಾಗದೆ ಬಂಧನ ಕೇಂದ್ರಗಳಲ್ಲಿದ್ದಾರೆ ಎಂಬುದು ಆತಂಕಕಾರಿಯಾಗಿದೆ. ಕರ್ನಾಟಕದಲ್ಲೂ ಪಜಾಪಪಂ ಅಭಿವೃದ್ಧಿಗೆಂದು ಕಟ್ಟಿದ ಕಟ್ಟಡವನ್ನು ಬಂಧನಕೇಂದ್ರವಾಗಿ ಮಾರ್ಪಡಿಸಲಾಗುತ್ತಿದೆ ಎಂಬ ಸುದ್ದಿಯಿದೆ. ಅಲೆಮಾರಿಗಳಿಗೆ, ಆದಿವಾಸಿಗಳಿಗೆ, ಬುಡಕಟ್ಟಿನವರಿಗೆ, ಲಂಬಾಣಿ ತಾಂಡಾಗಳವರಿಗೆ ಹಾಗೂ ಪೌರತ್ವ ನಿರೂಪಿಸುವಂತ ದಾಖಲೆಗಳಾದ ಆಧಾರ್ ಗುರುತಿನ ಚೀಟಿ, ಪಡಿತರಚೀಟಿ, ಮತದಾರಚೀಟಿ ಮುಂತಾದವನ್ನು ಹೊಂದಿಲ್ಲದವರು ಈ ಕಾಯಿದೆಯ ಕೆಟ್ಟದೃಷ್ಟಿಗೆ ಒಳಗಾಗುತ್ತಾರೆ. ಆದರೆ ಅವರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಇತರರನ್ನು ಮಾತ್ರವೇ ಪೌರತ್ವಕ್ಕೆ ತರಲು ಅವಕಾಶ ಇದೆ ಎಂಬುದೇ ಆತಂಕಕಾರಿಯಾದ ವಿಷಯ. ಏಕೆಂದರೆ ನಮ್ಮ ಕಾಯ್ದೆ ಕಟ್ಟಲೆಗಳು ಜಾತಿ ಧರ್ಮಗಳ ಕುರಿತು ಕುರುಡಾಗಿರಬೇಕು ಎಂದು ನಮ್ಮ ಘನ ಸಂವಿಧಾನ ಪ್ರತಿಪಾದಿಸುತ್ತದೆ. ದೇಶಾದ್ಯಂತ ಈ ಪೌರತ್ವ ಕಾಯಿದೆಯ ವಿರುದ್ಧ ಜನ ದಂಗೆಯೆದ್ದು ನಡೆದ ಹಿಂಸಾಚಾರಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ.
-0-
ಇತ್ತೀಚಿನ ಒಂದೆರಡು ದಿನಗಳಲ್ಲಿ ಹಾರೋಬೆಲೆಯಲ್ಲಿ ನಿರ್ಮಾಣವಾಗಲಿರುವ ಯೇಸುಕ್ರಿಸ್ತನ ಅತಿ ಎತ್ತರದ ಪ್ರತಿಮೆಯ ಸುದ್ದಿ ಕಾವು ಪಡೆಯುತ್ತಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಹಳ್ಳಿ. ಅರ್ಕಾವತಿ ನದಿದಂಡೆಯ ಈ ಊರಿನ ಕ್ರೈಸ್ತರಿಗೆ ನಾನೂರು ವರ್ಷಗಳ ಹೆಮ್ಮೆಯ ಇತಿಹಾಸವಿದೆ. ಫ್ರೆಂಚ್ ಮಿಷನರಿಗಳು ಕಟ್ಟಿದ ಜಪಸರಮಾತೆ ದೇವಾಲಯ, ಕನ್ನಡ ಕ್ರೈಸ್ತ ನಾಟಕ ಪಿತಾಮಹ ಲಾಜರ್ ಸ್ವಾಮಿಯವರು, ಜೆಸ್ವಿತ್ ವಾರ್ಷಿಕ ವರದಿಗಳ ಆಧಾರದಲ್ಲಿ ಕರ್ನಾಟಕದ ಇತಿಹಾಸಕ್ಕೆ ಹೊಸ ತಿರುವು ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತಪ್ಪ ಫಾದರ್, ನೂರಾರು ವರ್ಷಗಳ ಇತಿಹಾಸವುಳ್ಳ ಯೇಸುಮಹಿಮೆ ಎಂಬ ಬಯಲುನಾಟಕ, ಊರಿನವರಿಗೆ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಗೂ ಪವಿತ್ರವೆನಿಸಿದ ಕಪಾಲಬೆಟ್ಟ ಹಾಗೂ ಕೃಷಿಕರ ಸೌಭಾಗ್ಯದೇವತೆ ಅರ್ಕಾವತಿ ಅಣೆಕಟ್ಟು ಮುಂತಾದವು ಹಾರೋಬೆಲೆ ಊರಿನೊಂದಿಗೆ ಹಾಸುಹೊಕ್ಕಿವೆ. ಸೌದೆ ಒಲೆಗಳನ್ನು ತ್ಯಜಿಸಿ ಮೊತ್ತಮೊದಲು ಸಮುದಾಯ ಅಡುಗೆ ಅನಿಲ ಒಲೆಗಳನ್ನು ಬಳಸಿದ ಕೀರ್ತಿ ಈ ಗ್ರಾಮದ್ದು. ಸೌರವಿದ್ಯುತ್ ಬಳಸಿ ಪಂಪುಸೆಟ್ಟು ನಡೆಸುವ ಸಾಹಸಕ್ಕೂ ಇಲ್ಲಿನ ಜನ ಕೈಹಾಕಿದ್ದಾರೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಸಾಮುದಾಯಿಕ ಕಾಳಜಿಯ ಫಲವಾಗಿ ಇಲ್ಲಿ ಕುರಿಬ್ಯಾಂಕ್ ಎಂಬ ವಿಶಿಷ್ಟ ಪ್ರಯೋಗ ಕಳೆದ ಐವತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಹಾರೋಬೆಲೆ ಊರಿನ ಆರ್. ಸಿ ಶಾಲೆಯು ಕಳೆದ ಆರು ದಶಕಗಳಿಂದ ಈ ವಲಯದ ಆತ್ಮ್ಯುತ್ತಮ ಶಾಲೆಯೆನಿಸಿದೆ ಮಾತ್ರವಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ಶಿಕ್ಷಣವಂಚಿತ ಮಕ್ಕಳಿಗೆ ಈ ಶಾಲೆ ವರದಾನವಾಗಿದೆ. ಈ ಪ್ರದೇಶದ ಪೂರ್ಣ ಸಾಕ್ಷರತೆಯ ಸಾಧನೆಗೆ ಈ ಶಾಲೆಯೇ ಕಾರಣವೆಂದರೆ ತಪ್ಪಾಗದು.
ಊರಿನ ಈ ಎಲ್ಲಾ ಉತ್ಸಾಹಭರಿತ ಚಟುವಟಿಕೆಗಳ ಹಿಂದೆ ಉತ್ಸಾಹಿ ಯುವಪಡೆಯೇ ಇದೆ. ಅವರೆಲ್ಲ ಸೇರಿ ನೂರಹದಿನಾಲ್ಕು ಅಡಿ ಎತ್ತರದ ಬೃಹತ್ ಯೇಸುಪ್ರತಿಮೆ ಕೆತ್ತಲು ಚಾಲನೆ ನೀಡಿದ್ದಾರೆ. ಕಪಾಲಬೆಟ್ಟ ಎಂಬುದು ಕ್ರೈಸ್ತರಿಗೆ ಒಂದು ಪವಿತ್ರ ತಾಣ. ಕಪಾಲಬೆಟ್ಟ ಅಥವಾ ಗೊಲ್ಗೊಥಾ ಎಂಬಲ್ಲಿ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು ಎಂಬುದು ಜನಜನಿತ ಸತ್ಯ.. ಗೊಲ್ಗೊಥಾ ಎಂದರೆ ಮನುಷ್ಯನ ತಲೆಬುರುಡೆಯ ಆಕಾರದಲ್ಲಿ ಗೋಚರಿಸುವ ಹೆಬ್ಬಂಡೆ. ಅದನ್ನು ಕನ್ನಡದಲ್ಲಿ ಕಪಾಲಬೆಟ್ಟ ಎನ್ನಲಾಗುತ್ತದೆ.
ಆದ್ದರಿಂದ ಶುಭಶುಕ್ರವಾರದಂದು ಜಗತ್ತಿನ ಎಲ್ಲಾ ಕ್ರೈಸ್ತರು ಚರ್ಚುಗಳಿಗೆ ತೆರಳಿ ಕಪಾಲಸ್ಥಳದ ಆ ಘಟನೆಯನ್ನು ಸ್ಮರಿಸುತ್ತಾ ಉಪವಾಸ ಧ್ಯಾನ ಆಚರಿಸುತ್ತಾರೆ. ತಮ್ಮೂರಿಗೆ ಹತ್ತಿರದ ಬೆಟ್ಟ ಗುಡ್ಡಗಳಿಗೆ ಹೋಗಿ ಯೇಸುಕ್ರಿಸ್ತನ ಶಿಲುಬೆಯಾತ್ರೆಯನ್ನು ಅನುಕರಿಸುತ್ತಾರೆ.
ನಾಲ್ಕು ಶತಮಾನಗಳ ಹಿಂದೆ ಐರೋಪ್ಯ ಜೆಸ್ವಿತ್ ಮಿಷನರಿಗಳಿಂದ ಪ್ರಾರಂಭವಾದ ಹಾರೊಬೆಲೆ ಮಿಷನ್ ಕೇಂದ್ರದ ಬಳಿಯಿರುವ ಕಪಾಲಬೆಟ್ಟದ ಶಿಲುಬೆಯಾತ್ರೆಯೂ ಅಷ್ಟೇ ಪ್ರಾಚೀನ. ಮೊದಲೆಲ್ಲ ಈ ಬೆಟ್ಟದಯಾತ್ರೆ ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಕ್ರಮೇಣ ಹಾರೋಬೆಲೆ ಕ್ರೈಸ್ತಭಕ್ತರು ಆ ಬೆಟ್ಟದಲ್ಲಿ ದೈನಂದಿನ ಜಪತಪಧ್ಯಾನಗಳಿಗೆÀ ನಾಂದಿ ಹಾಡಿದರು. ಹೀಗೆ ಹಾರೋಬೆಲೆ ಕ್ರೈಸ್ತರು ಕಳೆದ ಹಲವಾರು ವರ್ಷಗಳಿಂದ ತಮ್ಮೂರಿಗೆ ಹತ್ತಿರದ ಕಪಾಲಬೆಟ್ಟದಲ್ಲಿ ಪ್ರಾರ್ಥನೆ ಮತ್ತು ಶಿಲುಬೆಯಾತ್ರೆಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸುತ್ತಮುತ್ತಲಿನ ಕ್ರೈಸ್ತೇತರ ರೈತಾಪಿ ಜನರು ಸಹ ಈ ಬೆಟ್ಟವನ್ನು ಕಪಾಲಬೆಟ್ಟ ಎಂದು ಕರೆಯುತ್ತಾ ಗೌರವದಿಂದ ಪರಿಭಾವಿಸುತ್ತಿದ್ದಾರೆ.
ತಮ್ಮ ಭಕ್ತಿಯ ದ್ಯೋತಕವಾಗಿ ಹಾರೋಬೆಲೆ ಜನರು ಈ ಬೆಟ್ಟದ ಮೇಲೆ ಯೇಸುಸ್ವಾಮಿಯ ಪ್ರತಿಮೆ ನಿಲ್ಲಿಸಲು ಯೋಜನೆ ಹಾಕಿಕೊಂಡು ತಮ್ಮ ನೆಚ್ಚಿನ ಶಾಸಕ ಶ್ರೀ ಡಿಕೆ ಶಿವಕುಮಾರ್‍ನÀವರಲ್ಲಿ ವಿನಂತಿಸಿಕೊಂಡರ ಫಲವಾಗಿ ತಮ್ಮ ಅಭಿಮಾನಿ ಮತದಾರರ ಮೇಲೆ ವಿಶೇಷ ಕಾಳಜಿ ತೋರಿದ ಮಾನ್ಯ ಶಾಸಕರು ಬೆಟ್ಟದ ಆ ಜಾಗದಲ್ಲಿ ಸುಮಾರು ಹತ್ತು ಎಕರೆಯಷ್ಟು ಜಮೀನನ್ನು ಸ್ವಂತ ಹಣ ನೀಡಿ ಸರ್ಕಾರದಿಂದ ಖರೀದಿಸಿ ಹಾರೋಬೆಲೆ ಜನಕ್ಕೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಅವರು ಶಿಲ್ಪಕೆತ್ತನೆಯ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿ ಅದೇ ವಿವಾದದ ಕಿಡಿಹೊತ್ತಿಸಿತು. ಮೊದಲೇ ಡಿಕೆಶಿ ಮತ್ತು ಕಾಂಗ್ರಸ್ ವಿರುದ್ಧ ಕುದಿಯುತ್ತಿರುವ ಬಿಜೆಪಿ ಪಕ್ಷದ ಮಂತ್ರಿ ಶಾಸಕರೆಲ್ಲ ಈ ಸುದ್ದಿ ಕೇಳಿದ್ದೇ ಕೆಂಡಾಮಂಡಲವಾದರು. ಅವರ ಸಡಿಲ ಮಾತುಗಳಲ್ಲಿ ಯೇಸುಕ್ರಿಸ್ತ, ಸೋನಿಯಾಗಾಂಧಿ, ವ್ಯಾಟಿಕನ್ ನಗರ, ಕ್ರೈಸ್ತ ಸಮುದಾಯಗಳೆಲ್ಲ ಬಂದುಹೋದವು. ಕ್ಷೇತ್ರಕಾರ್ಯವನ್ನೇ ಮಾಡದ ವರದಿಗಾರನೊಬ್ಬ ಕಪಾಲಬೆಟ್ಟವನ್ನು ಕಪಾಲಿಬೆಟ್ಟ ಎಂದು ವರದಿಮಾಡಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಯ್ತು. ಇದೀಗ ಪ್ರಜಾವಾಣಿ ಪತ್ರಿಕೆ ಈ ತಪ್ಪನ್ನು ತಿದ್ದುವ ಕೆಲಸ ಮಾಡಿದೆ. ಮುಖ್ಯಮಂತ್ರಿಗಳು ಸುಮ್ಮನಿದ್ದರೂ ಆಡಳಿತಪಕ್ಷ ಬಿಜೆಪಿಯ ನಾಯಕರು ಪರೋಕ್ಷವಾಗಿ ಕ್ರೈಸ್ತರ ವಿರುದ್ದ ಸಿಡಿಮಿಡಿಗೊಂಡಿದ್ದಾರೆ. ಕಪಾಲಬೆಟ್ಟವನ್ನು ಕಪಾಲಿಬೆಟ್ಟ ಎನ್ನುತ್ತಿರುವ ಇವರು ಈ ಸ್ಥಳದಲ್ಲಿ ಹಿಂದೂ ಸಾಧುಸಂತರು ಧ್ಯಾನ ನಡೆಸಿದ್ದಾರೆ, ಅದನ್ನು ಕ್ರೈಸ್ತಕ್ಷೇತ್ರವಾಗಿ ಮಾಡಲು ಸಾಧ್ಯವಿಲ್ಲ, ಪ್ರತಿಮೆ ಸ್ಥಾಪನೆಗೆ ನೀಡಿರುವ ಗೋಮಾಳದ ಆ ಜಮೀನನ್ನು ಹಿಂಪಡೆಯುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ಆದೇಶ ಮೇರೆಗೆ ರಾಮನಗರ ಜಿಲ್ಲಾಧಿಕಾರಿಯವರು ಈ ತಪೋಭೂಮಿಯ ಸ್ಥಳಪರೀಕ್ಷೆ ನಡೆಸಿದ್ದಾರೆ. ಅವರು ಈ ಕುರಿತ ವಿಸ್ತೃತ ವರದಿ ನೀಡುವ ಮುನ್ನವೇ ಸ್ಥಳೀಯ ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆ ಹಾಗೂ ಕೆತ್ತನೆಯ ಕೆಲಸವನ್ನು ಸ್ಥಗಿತಗೊಳಿಸಲÁಗಿದೆ. ಈ ಎಲ್ಲ ವಿದ್ಯಮಾನಗಳ ಹಿಂದೆ ಪೊಳ್ಳು ಹಿಂದುತ್ವವಾದಿಗಳ ಕುತಂತ್ರವಿದ್ದು ಅವರು ಸರ್ಕಾರಕ್ಕೆ ಹಾಗೂ ಪತ್ರಿಕಾಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎನ್ನುವುದು ನಿಚ್ಚಳವಾಗಿ ಕಾಣುತ್ತಿದೆ.
- ಸಿಎಂಜೆ
-0--0--0--0--0--0-
No comments:
Post a Comment