Saturday, 11 January 2020

ಭೂಮಿ ದೇವರು, ಆಕಾಶ ದೇವತೆ ಸೃಷ್ಟಿಯ ಕತೆ (ಭಾಗ 5)




- ಎಫ್ ಎಂ ಎನ್

—————————–—————————-

ಇದು ಪುರಾತನ ಇಜಿಪ್ತಿನ ಹೆಲಿಯೊಪೊಲಿಸ್ ಪಟ್ಟಣದ ಪೂಜಾರಿಗಳ ಐತಿಹ್ಯಗಳ ಪ್ರಭಾವಳಿಯಲ್ಲಿ ರೂಪತಾಳಿದ್ದ ಜಗತ್ತಿನ ಹುಟ್ಟಿನಕತೆ. ಇದಲ್ಲದೇ ಇನ್ನು ಹಲವು ಜಗತ್ತಿನ ಹುಟ್ಟಿನ ಕತೆಗಳು ಇಜಿಪ್ತಿನ ವಿವಿಧೆಡೆ ಕಂಡುಬರುತ್ತವೆ.
———————————————————

ಈ ಜಗತ್ತಿನ ಆರಂಭದಲ್ಲಿ ಏನೂ ಇರಲಿಲ್ಲ. ಎಲ್ಲೆಲ್ಲೂ ಶೂನ್ಯ. ಕತ್ತಲೋಕತ್ತಲು ತುಂಬಿತ್ತು. ಎತ್ತ ನೋಡಿದರತ್ತ ನೀರು ನೀರು. ಒಂದು ಬಗೆಯಲ್ಲಿ ಗೊಂದಲದ ಅವ್ಯವಸ್ಥೆಯ ಪರಿಸ್ಥಿತಿ ಇತ್ತು. ಆ ಆದಿ ಜಲರಾಶಿಯನ್ನು `ನನ್’ ಸಾಗರ ಎಂದು ಗುರುತಿಸಲಾಗುತ್ತದೆ. ಹೀಗಾಗಿ `ನನ್’ ಈಗ ಸಾಗರದೇವತೆ. `ನನ್’ ಸಾಗರದ ಮಧ್ಯದಿಂದ ದಿನ್ನೆಯೊಂದು ಮೇಲೆದ್ದು ಬರುತ್ತದೆ,

ಆ ದಿನ್ನೆಯೇ ಇಂದಿನ ಇಜಿಪ್ತಿನ ಪಿರಾಮಿಡ್ ಗಳ ಅವುಗಳ ಆಕಾರ ಪಡೆಯುವುದಕ್ಕೆ ಕಾರಣ ಎನ್ನಲಾಗುತ್ತದೆ. ಆ ದಿನ್ನೆಯನ್ನು `ಬೆನ್‍ಬೆನ್’ ಎಂದುಕರೆಯಲಾಗುತ್ತದೆ. ಈ `ಬೆನ್ ಬೆನ್’ ದಿನ್ನೆಯಿಂದಲೇ ಮೊದಲ ಬಾರಿ ಸೂರ್ಯ ದೇವರು `ರಾ’ ಜಗತ್ತಿಗೆ ಬೆಳಕು ಕೊಡುವುದಕ್ಕೆ ಮೊದಲ ಮಾಡಿದ್ದ ಎಂದು ಹೇಳಲಾಗುತ್ತದೆ. ಅದೇ ದಿನ್ನೆಯ ಮೇಲೆಯೇ ಮೊದಲ ದೇವರು `ಆಟಮ್’ ನಿಂತುಕೊಂಡಿದ್ದು. `ಆಟಮ್’, `ರಾ’ ದೇವರ ಮಗದೊಂದು ಹೆಸರು ಎಂದು ಹೇಳಲಾಗುತ್ತದೆ.

ಆ `ಆಟಮ್’ ಈ ಜಗತ್ತಿನ ಜೀವಜಾಲದ ಮೂಲ ಪುರುಷ. ಹೀಗಾಗಿ ಅವನು ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿದಾತ. `ಬೆನ್ ಬೆನ್’ ದಿನ್ನೆಯ ಮೇಲೆ ನಿಲ್ಲುವ ಮೊದಲು `ಆಟಮ್’ `ನನ್’ ಸಮುದ್ರದಲ್ಲಿ ದಿಕ್ಕೆದೆಸೆ ಇಲ್ಲದೇ ತೇಲುತ್ತಿದ್ದ. ಅವನಲ್ಲಿ ಗಂಡು ಹೆಣ್ಣು ಎರಡೂ ಅಂಶಗಳಿದ್ದವು. ಒಂದು ಬಾರಿ ಅವನಿಗೆ ತಾನು `ನನ್’ ಸಮುದ್ರದಿಂದ ಹೊರಬಂದು ಜೀವ ಸೃಷ್ಟಿಯನ್ನು ಆರಂಭಿಸಬೇಕು ಎನ್ನಿಸುತ್ತದೆ. ಆಗ ಅವನು ಸಮುದ್ರದಿಂದ ಮೇಲೆ ಎದ್ದುಬಂದು `ಬೆನ್ ಬೆನ್’ ದಿನ್ನೆಯ ಮೇಲೆ ನಿಂತುಕೊಳ್ಳುತ್ತಾನೆ.

`ಆಟಮ್’ ತನ್ನಲ್ಲಿದ್ದ ಹೆಣ್ತನವನ್ನು ಬಳಸಿ ಜೀವ ಸೃಷ್ಟಿಗೆ ಮುಂದಾಗುತ್ತಾನೆ. ಗಾಳಿ ಮತ್ತು ಖಾಲಿ ಜಾಗದ ದೇವರು `ಶೂ’ ಅನ್ನು ಹುಟ್ಟಿಸುತ್ತಾನೆ. ನಂತರ ಮತ್ತು `ಶೂ’ನ ಸೋದರಿ ಹಬೆ ಮತ್ತು ಮಂಜಿನ ದೇವತೆ `ಟೆಫ್ನಟ್’ ಳಿಗೆ ಜನ್ಮ ನೀಡುತ್ತಾನೆ.

ಆತ ತನ್ನ ಎರಡೂ ಕೈಗಳನ್ನು ಕೂಡಿಸಿ, `ನಾನು ನನ್ನ ನೆರಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತೇನೆ. ನನ್ನಲ್ಲಿನ ಹೆಣ್ತನ ಮತ್ತು ಗಂಡುಗಳ ಸಂಯೋಗದಿಂದ ನನ್ನ ಬಾಯಲ್ಲಿ ಬೀಜವು ರೂಪತಾಳಿತು. ಆ ಬೀಜದ ಫಲವತ್ತತೆಯಿಂದ `ಶೂ’ ಮತ್ತು `ಟೆಫ್ನಟ್’ ದೇವರುಗಳು ಹುಟ್ಟಲಿ ಎಂದು ಆಶಿಸುತ್ತಾನೆ’. ಆಗ ಅವರಿಬ್ಬರೂ ಹುಟ್ಟುತ್ತಾರೆ.

ಆದಿ ದೇವರು `ಆಟಮ್’ ಸೀನಿದಾಗ `ಶೂ’ ದೇವರು ಹುಟ್ಟಿದ, ಉಗುಳಿದಾಗ `ಟೆಫ್ನಟ್’ ದೇವತೆ ಜನಿಸುತ್ತಾಳೆ. `ಶೂ’ ಅನ್ನುವುದು ಸೀನಿದಾಗ ಊಂಟಾಗುವ ಸಪ್ಪಳವಾದರೆ, `ಟೆಫ್ನಟ್’ ಅನ್ನುವುದು ಉಗುಳುವಾಗ ಉಂಟಾಗುವ ಶಬ್ದ ಎನ್ನಲಾಗುತ್ತದೆ.

`ಆಟಮ್’ ದೇವರು ಇಬ್ಬರು ಮಕ್ಕಳನ್ನು ಸೃಷ್ಟಿಸಿದ ಮೇಲೆ, ಆಗ ಒಬ್ಬರಲ್ಲ ಒಟ್ಟು ಮೂವರು ದೇವರುಗಳ ಉಪಸ್ಥಿತಿ ಉಂಟಾಗುತ್ತದೆ. ಆಗ, ಕತ್ತಲು, ಗೊಂದಲ ಹೇಳ ಹೆಸರಿಲ್ಲದಂತೆ ಮಾಯವಾಗಿ, ವಿಶ್ವದಲ್ಲಿ ಬೆಳಕು ಮೂಡತೊಡಗುತ್ತದೆ.

ತನ್ನ ಮೊದಲ ಸೃಷ್ಟಿಯ ನಂತರ `ಆಟಮ್’ ದೇವರು ಶ್ರಮದ ಕಾರಣ ದಣಿದಿರುತ್ತಾನೆ. ಅವನ ಬೆವರ ಹನಿ ನೆಲಕ್ಕೆ ಬಿದ್ದಾಗ, ಮೊದಲ ಸೃಷ್ಟಿಯ ಸಂತೋಷದಿಂದ ಅಳತೊಡಗಿದ ಸಂದರ್ಭದಲ್ಲಿ, ಅವನ ಕಣ್ಣೀರ ಹನಿಗಳು ಕೆಳಗೆ ಬಿದ್ದಾಗ, ಅವುಗಳಿಂದ ಮಾನವರು - ಗಂಡಸರು ಹೆಂಗಸರು – ಉಂಟಾಗುತ್ತಾರೆ. ಆದಿ ದೇವರು `ಆಟಮ್’ನ ಮಗದೊಂದು ಹೆಸರು `ರಾ’ ಎಂದು ಹೇಳಲಾಗುತ್ತದೆ. ಹೀಗಾಗಿ, ಪುರಾತನ ಇಜಿಪ್ತಿನ ಜನ ತಮ್ಮನ್ನು ತಾವು `ರಾನ ದನಕರುಗಳು’ ಎಂದು ಕರೆದುಕೊಳ್ಳುತ್ತಿದ್ದರು.

ಇತ್ತ ಇಷ್ಟೆಲ್ಲಾ ನಡೆಯುವಾಗ, ಆತ್ಮ್ತ ಆದಿ ದೇವರ ಮಕ್ಕಳಾದ `ಶೂ’ ಮತ್ತು `ಟೆಫ್ನಟ್’ ಅವರು ಗಂಡ ಹೆಂಡಿರಂತೆ ಜೀವನ ಆರಂಭಿಸುತ್ತಾರೆ. ಅವರಿಗೆ ಒಬ್ಬರು ಮಕ್ಕಳು ಹುಟ್ಟುತ್ತಾರೆ. ಅವರಿಗೆ ಹುಟ್ಟುವ ಆದಿ ದೇವರು `ಆಟಮ್’ನ ಮೊಮ್ಮಕ್ಕಳಿಗೆ `ಗೆಬ್’ ಮತ್ತು `ನಟ್’ ಎಂದು ಹೆಸರಿಡಲಾಗುತ್ತದೆ. ಈ `ಗೆಬ್’ ಭೂದೇವರಾದರೆ, `ನಟ್’ ಆಗಸ ದೇವತೆಯಾಗಿರುತ್ತಾಳೆ.

ಆದರೆ, ಅವರಿಬ್ಬರೂ ಹುಟ್ಟುವಾಗ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಂಟಿಕೊಂಡೇ ಹುಟ್ಟುತ್ತಾರೆ. ಆಗ, ಆ ಇಬ್ಬರು ದೇವರುಗಳ ತಂದೆದೇವರು- ಗಾಳಿ ದೇವರು `ಶೂ’, ಅವರಿಬ್ಬರ ಮಧ್ಯ ನುಸುಳುತ್ತಾನೆ. ಮಗಳು `ನಟ್’ ಇರುಳಿನ ಆಗಸ ದೇವತೆಯನ್ನು ತಂದೆ ದೇವರು `ಶೂ’ ಎತ್ತಿ ಹಿಡಿದು, ಭೂದೇವರು `ಗೆಬ್’ನಿಂದ ಬಿಡಿಸಿ ಮೇಲೆ ತಳ್ಳುತ್ತಾನೆ.

ಭೂದೇವರು `ಗೆಬ್’ ಮತ್ತು ಆಗಸ ದೇವತೆ `ನಟ್’ ಮದುವೆಯಾಗಿ ಸಂಸಾರಿಗಳಾದಾಗ ಅವರಿಗೆ `ಒಸ್ಸಿರಿಸ್’, `ಐಸಿಸ್’ ಮತ್ತು `ಸೆಟ್’ ಹಾಗೂ `ನೆಫಥಿಸ್’ ಹೆಸರಿನ ನಾಲ್ವರು ಮಕ್ಕಳಾಗುತ್ತಾರೆ. ಮುಂದೆ ಒಸ್ಸಿರಿಸ್ ಭೂಮಿಯನ್ನು ಆಳತೊಡಗುತ್ತಾನೆ. `ಒಸ್ಸಿರಿಸ್’ ತನ್ನ ಸಹೋದರಿ `ಐಸಿಸ್’ಳನ್ನು ತನ್ನ ರಾಣಿಯನ್ನಾಗಿ ಸ್ವೀಕರಿಸುತ್ತಾನೆ. ಅವರಿಬ್ಬರು ಬಹುಕಾಲ ರಾಜ್ಯವಾಳುತ್ತಾರೆ. `ಒಸ್ಸಿರಿಸ್’ ಮತ್ತು `ಐಸಿಸ್’ ಫಲವಂತಿಕೆ ಮತ್ತು ಸುವ್ಯವಸ್ಥೆಗಳ ದೇವತೆಗಳು.

`ಸೆಟ್’ ಮತ್ತು `ನೆಫೆಸಸ್’ಳು ದಂಪತಿಗಳು, ಒಳಿತಿನ ಪರವಾಗಿ ನಿಲ್ಲುವ `ಒಸ್ಸಿರಿಸ್’ ಮತ್ತು `ಐಸಿಸ್’ ದೇವರುಗಳ ಕಾರ್ಯಗಳಿಗೆ ಕಡಿವಾಣ ಹಾಕುವ, ಅವ್ಯವಸ್ಥೆಯನ್ನು ಪ್ರತಿಪಾದಿಸುವ ಕೆಡುಕಿನ ದೇವರುಗಳು. `ಹೋರಸ್’ ದೇವರು `ಒಸ್ಸಿರಿಸ್’ ಮತ್ತು `ಐಸಿಸ್’ ದಂಪತಿಗಳ ಮಗ. ಇಜಿಪ್ತಿನ ಪುರಾಣಗಳಲ್ಲಿನ `ಹೊರಸ್’ ದೇವರನ್ನು ಬದಿಗಿಟ್ಟು, ಉಳಿದ ಒಂಬತ್ತು ದೇವರುಗಳನ್ನು `ನವದೇವತೆಗಳು’ ಎಂದು ಗುರುತಿಸಲಾಗುತ್ತದೆ.

-0--0--0--0--0--0-



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...