Saturday, 11 January 2020

ಮನಸು


- ಫಾದರ್ ವಿಜಯ ಕುಮಾರ್ ಪಿ, ಬಳ್ಳಾರಿ

ಮನಸು ಮಾನವ ಮಿದುಳಿನಲ್ಲಿ ಹುದುಗಿರುವ ವಿಶೇಷ ಅಂಗ. ಈ ಮನಸು ಸೃಜನಾತ್ಮಕವಾದುದು ಹಾಗೂ ಸದಾ ಕ್ರಿಯಾಶೀಲವಾದುದು. ಈ ಮನಸ್ಸೇ ಮಾನವನ ಸರ್ವ ಒಳಿತು ಕೆಡುಕುಗಳ ಉಗಮಸ್ಥಾನ. ಇದು ಮಾನವನ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. "ಮನಸಿದ್ದರೆ ಮಾರ್ಗ" ಎಂಬ ಉಕ್ತಿಯನ್ನು ನಾವು ಕೇಳಿದ್ದೇವೆ. ಅಂದರೆ ಮನಸ್ಸನ್ನು ಮಾನವ ತನ್ನಿಚ್ಚೆಯಂತೆ ಪಳಗಿಸಬಹುದು ಎಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಈ ಮನಸನ್ನು ಯಾವನು ಕ್ರಮಬದ್ಧವಾಗಿ ಪಳಗಿಸುತ್ತಾನೋ ಅಂತವನು ಯಶಸ್ಸಿನ ಉತ್ತುಂಗ ಶಿಖರವನ್ನೇರಬಹುದು ಹಾಗೆಯೇ ಯಾರು ಅದನ್ನು ಕ್ರಮಬದ್ಧವಾಗಿ ಪಳಗಿಸುವುದಿಲ್ಲವೋ ಅಂತವರು ಆಳವಾದ ಹಾಗೂ ಬುಡವಿಲ್ಲದ ಪ್ರಪಾತಕ್ಕೂ ಬೀಳಬಹುದು. ಈ ಮನಸ್ಸಿನಲ್ಲಿ ಉತ್ತಮವಾದುದನ್ನು ಬಿತ್ತಿದರೆ ಉತ್ತಮವಾದುದನ್ನು ಬೆಳೆಯಬಹುದು. ಮಾನವ ತನ್ನ ಮನಸ್ಸಿನ ಹಿಡಿತದಲ್ಲಿ ಇರಬಾರದು. ಬದಲಾಗಿ ಮನಸು ಮಾನವನ ಹಿಡಿತದಲ್ಲಿರಬೇಕು. ಅದು ಗಾಳಿಗಿಂತಲೂ ಶರವೇಗದಲ್ಲಿ ಚಲಿಸುತ್ತದೆ, ಅದರ ಲಗಾಮು ಮಾನವನ 
ಕೈಯಲ್ಲಿರಬೇಕು!
ಮನಸು "ಮರವನೇರಿದ ಮರ್ಕಟನಂತೆ" ಎಂಬ ಉಕ್ತಿ ಇದೆ. ಇದು ಅಕ್ಷರಶಃ ಸತ್ಯ. ಮರ್ಕಟ ಅಂದರೆ ಮಂಗ, ಕ್ಷಣಮಾತ್ರವೂ ಒಂದು ಕಡೆ ಕುಳಿತುಕೊಳ್ಳುವುದಿಲ್ಲ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಲೇ ಇರುತ್ತದೆ. ಆದರೆ ಅದನ್ನೂ ಸಹ ಮಾನವ ತನ್ನಿಚ್ಛೆಯಂತೆ ಪಳಗಿಸಿ ಆಟವಾಡಿಸುತ್ತಾನೆ. ಅಂದರೆ ಮನಸ್ಸನ್ನು ಉತ್ತಮವಾಗಿ ಪಳಗಿಸಬಹುದು. ಅದು ಬಹಳ ಸೂಕ್ಷ್ಮವಾದುದು ಹಾಗೂ ಮೃದುವಾದುದು. ಅದನ್ನು ಹದವಾಗಿ, ನಯವಾಗಿ ರೂಪಿಸಬೇಕು. ಮನಸ್ಸನ್ನು ಉತ್ತಮವಾಗಿ ರೂಪಿಸಲು ಮಾನವ ಸ್ವಹಿತದ ಚಿಂತೆಬಿಟ್ಟು ಸಮಾಜಮುಖಿಯಾಗಬೇಕು. ಆಗ ಅವನ ಮನಸು ಸಂಕುಚಿತತೆಯಿಂದ ವಿಕಾಸದೆಡೆಗೆ ಮುಖಮಾಡುತ್ತದೆ. ಮಾನವ ತನ್ನ ಮನಸ್ಸನ್ನು ಸಶಕ್ತವಾಗಿ ರೂಪಿಸಲು ಸರ್ವರ ಬದುಕಿಗೆ ಹಿತವನ್ನೀಯುವ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರಥಮವಾಗಿ "ಬೆಳೆಯುವ ಪೈರು ಮೊಳಕೆಯಲ್ಲೇ" ಎಂಬಂತೆ ಮಗು ತಾಯಿಯ ಉದರದಲ್ಲಿರುವಾಗಲೇ ಕಲಿಯಲು ಪ್ರಾರಂಭಿಸುತ್ತದೆ. ಈ ಕಾರಣ ತಾಯಿ-ತಂದೆಯ ಮನಸು ಪ್ರಶಾಂತವಾಗಿಯೂ, ನಿಷ್ಕಲ್ಮಶವಾಗಿಯೂ ಹಾಗೂ ವಿಶಾಲ ಮನೋಭಾವುಳ್ಳದ್ದಾಗಿಯೂ ಇರಬೇಕು. ಸದಾ ಸಕಾರಾತ್ಮಕ ಭಾವನೆಗಳಿಂದ ತಂದೆತಾಯಿಯರ ಮನಸು ತುಂಬಿರಬೇಕು. ತಂದೆತಾಯಿಯರು ಪ್ರಕೃತಿಯ ಸೊಬಗನ್ನು ಸವಿಯುತ್ತ, ಪ್ರಕೃತಿಯಂತೆ ನಾವಿನ್ಯತೆಯಿಂದ ಕೂಡಿರಬೇಕು. ಆಕಾಶದಷ್ಟು ವಿಶಾಲವಾದ ಮನೋಭಾವವನ್ನು ಬೆಳಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪರನಿಂದೆ ಮಾಡದೆ, ಪರಹಿತ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಗುವಿನ ಮನಸು ಹದವಾಗಿಯೂ, ಹಿತವಾಗಿಯೂ ಬೆಳೆದು ಪರಹಿತ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹವಣಿಸುತ್ತದೆ (ಲೂಕ 1:39-56).
ಮನಸು ನಿರಂತರವಾಗಿ ಬೆಳೆಯುವ ಚೈತನ್ಯವುಳ್ಳದ್ದು. ಅದು ಬೆಳೆದಂತೆ ಜ್ಞಾನವು ವೃದ್ಧಿಯಾಗುತ್ತದೆ. "ಜ್ಞಾನವು ಮನುಷ್ಯನ ಮುಖವನ್ನು ಮಾರ್ಪಡಿಸುತ್ತದೆ" ಎನ್ನುತ್ತಾನೆ ಉಪದೇಶಕ (ಉಪದೇಶಕ 8:1). ಅಂತಹ ಜ್ಞಾನವು ಸಕಾರಾತ್ಮಕವಾಗಿಯೂ, ಉಜ್ವಲವಾಗಿಯೂ ಸಂವೃದ್ಧಿಯಾಗಬೇಕಾದರೆ ಉತ್ತಮ ಸಾಹಿತ್ಯದ ಅಧ್ಯಯನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಧಾರ್ಮಿಕ ಗ್ರಂಥಗಳ ಅಧ್ಯಯನದ ಜೊತೆಗೆ ಉತ್ತಮ ಸಾಧಕರ, ಗಣ್ಯವ್ಯಕ್ತಿಗಳ, ನೀತಿಬೋಧೆಗಳ ಸಾಹಿತ್ಯದ ಅಧ್ಯಯನ ನಿರಂತರವಾಗಿ ಸಾಗುತ್ತಿರಬೇಕು. ಇದರಿಂದ ಮನೋವಿಕಾಸವು ಮನಸ್ಸಿನ ಆಳದಲ್ಲಿ ಮನೆಮಾಡಿ ಪ್ರೀತಿಯನ್ನು ಅರಳಿಸುತ್ತದೆ, ದ್ವೇಷವನ್ನು ದಮನಮಾಡುತ್ತದೆ ಹಾಗೂ ಧಾರ್ಮಿಕ ಸಹಿಷ್ಣತೆ ಚಿಗುರೊಡೆದು ಸಹಕಾರ ಮನೋಭಾವ ಮನೆಮಾಡುತ್ತದೆ. ಅಧ್ಯಯನ ಎಂದಾಕ್ಷಣ ಬರಿ ಗ್ರಂಥಗಳನ್ನು ಓದುವುದು ಮಾತ್ರವಲ್ಲ ಉತ್ತಮ ಉಪದೇಶಗಳನ್ನು, ಪ್ರವಚನಗಳನ್ನು ಆಲಿಸಿ ಗ್ರಹಿಸುವುದು ಸಹ ಅಧ್ಯಯನವೇ ಎಂದು ಪರಿಗಣಿಸಬಹುದು. ದೇವರು ಜ್ಞಾನದ ಮೂಲ. "ದೇವರು ತಾವು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳುವಳಿಕೆಯನ್ನೂ, ಸುಖ ಸಂತೋಷವನ್ನೂ ದಯಪಾಲಿಸುತ್ತಾರಲ್ಲವೇ?" ಎನ್ನುತ್ತಾನೆ ಉಪದೇಶಕ (ಉಪದೇಶಕ 2:26). ಅಂಥ ಜ್ಞಾನ ಮಾನವನಿಗೆ ಲಭಿಸಬೇಕಾದರೆ ಮಾನವನು ಏನು ಮಾಡಬೇಕು ಎಂಬುದನ್ನು ಸಿರಾಕನು "ನಿನ್ನ ಇಚ್ಛಾಶಕ್ತಿಗಳಿಗೆ ಬಲಿಯಾಗಬೇಡ, ನಿನ್ನ ಮನದಾಶೆಗೆ ಗುಲಾಮನಾಗಬೇಡ" (ಸಿರಾಕ 5:2) ಎಂದು ಎಚ್ಚರಿಸುತ್ತಾನೆ.
ಮಾನವನ ಮನಸ್ಸನ್ನು ಹದವಾಗಿ ತಿದ್ದಿ ರೂಪಿಸಲು ತರಬೇತಿ ಅತಿ ಅವಶ್ಯಕ. ಇದಕ್ಕೆ ಧ್ಯಾನ ಉತ್ತಮ ಸಾಧನ. ಮನಸ್ಸನ್ನು ಒಂದು ಉತ್ತಮವಾದ, ಫಲಭರಿತವಾದ ಹಾಗೂ ನಿಖರವಾದ ವಿಷಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಧ್ಯಾನ ಎನ್ನಬಹುದು. ಒಂದು ಸ್ಥಳದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಮನಸು ದೈವೀಕ ಹಾಗೂ ಸರ್ವೋತ್ತಮವಾದ ವಿಷಯಗಳನ್ನು ಧ್ಯಾನಿಸುವುದು ಒಂದು ಬಗೆಯ ಧ್ಯಾನವಾದರೆ, ಮಾನವ ತಾನು ಮಾಡುವ ಪ್ರತಿ ಕೆಲಸವನ್ನು ಶ್ರದ್ಧೆ, ಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿಷ್ಠೆಯಿಂದ ಮಾಡಿದರೆ ಅದೂ ಸಹ ಒಂದು ಬಗೆಯ ಉತ್ತಮ ಧ್ಯಾನವೇ ಆಗುತ್ತದೆ. ಸಂತ ಪೌಲನು ಮನಸ್ಸನ್ನು ಹದವಾಗಿ ತಿದ್ದಲು "ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ" (ಫಿಲಿಪ್ಪಿ 4:8) ಎನ್ನುತ್ತಾನೆ. ಧ್ಯಾನವು ಮನಸ್ಸನ್ನು ಹದಗೊಳಿಸಿ, ಹಗುರಗೊಳಿಸಿ ಸಕಾರಾತ್ಮಕವಾಗಿ ವೃದ್ಧಿಯಾಗಲು ಚಾಲನೆ ನೀಡುತ್ತದೆ. ಆದರೆ "ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು" (ಜ್ಞಾನೋಕ್ತಿ 19:21) ಎನ್ನುವುದರಲ್ಲಿ ಸಂಶಯವಿಲ್ಲ.
ಮಾನವನ ಮನಸ್ಸಿನಲ್ಲಿ ಗೊಂದಲಗಳು ಹಲವು. ಹಲವು ಬಾರಿ ಕೆಡುಕು ಕೂಡ ಒಳಿತಿನಂತೆ ಕಾಣಬಹುದು ಆದರೆ ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿದುಕೊಳ್ಳಲು ಸತ್ಯ, ಮಿಥ್ಯಗಳ ಸ್ಪಷ್ಟ ಅರಿವಿರಬೇಕು. ಈ ಅರಿವು ಮನಸ್ಸನ್ನು ಶುದ್ಧೀಕರಿಸಿ ಸ್ಪಷ್ಟ ಅರಿವಿನೆಡೆಗೆ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಿರಂತರವಾಗಿ ಸಾಗಲು ತವಕಿಸುತ್ತದೆ. ಮನಸು ಮಾನವನ ಯೋಚನಾ ಲಹರಿಯ ಕೇಂದ್ರಬಿಂದು. ಇದು ಮಾನವನ ಅತಿ ಬೆಲೆ ಬಾಳುವ ಆತ್ಮ್ಯುತ್ತಮ ಆಸ್ತಿ. ಮನಸ್ಸಿನ ಆಲೋಚನೆ ಸಕಾರಾತ್ಮಕವಾಗಿದ್ದಲ್ಲಿ ಅವನ ಕ್ರಿಯೆಗಳು ಸಹ ಸಕಾರಾತ್ಮಕವಾಗಿರುತ್ತವೆ. ಹಾಗೆಯೇ ಮನಸ್ಸಿನ ಆಲೋಚ£ Éನಕಾರಾತ್ಮಕವಾಗಿದ್ದಲ್ಲಿ ಅವನ ಕ್ರಿಯೆಗಳು ಸಹ ನಕಾರಾತ್ಮಕವಾಗಿರುತ್ತವೆ. ಕಾರಣ ಉತ್ತಮ ಆಲೋಚನೆಗಳ ಕಡೆಗೆ ಮನಸು ತಿರುಗಿಕೊಳ್ಳಬೇಕು. ಮನಸ್ಸಿನ ಅಂತರಾಳದಲ್ಲಿ ಸದ್ಭಾವನೆಗಳು ನೆಲೆನಿಂತರೆ ಅವು ಇತರರ ಬಾಳಿಗೆ ಪ್ರೇರಣೆಯನ್ನು ನೀಡಿ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ನಾಂದಿಯಾಡಬಹುದು. ಬುದ್ಧ ಬಸವ, ಕನಕದಾಸ, ವಿವೇಕಾನಂದ ಹಾಗೂ ಇನ್ನೂ ಅನೇಕರು ಶುದ್ಧ ಹಾಗೂ ಪರಿಪಕ್ವವುಳ್ಳ ಮನಸುಳ್ಳವರಾಗಿದ್ದ ಕಾರಣ ಸಮಾಜದ ಕತ್ತಲನ್ನು (ಅಜ್ಞಾನವನ್ನು) ಅಳಿಸಿ ಬೆಳಕನ್ನು ಚೆಲ್ಲಿದರು. ಇವರಿಂದ ಪ್ರೇರಿತಗೊಂಡ ಹಲವು ಮಂದಿ ಇಂದಿಗೂ ಸಹ ಸಮಾಜದ ಒಳಿತಿಗಾಗಿ ಶ್ರಮಿಸುತ್ತಲೇ ಇದ್ದಾರೆ. ಸಂತ ಪೌಲನು "ಇಹಲೋಕದ ಆಚಾರ ವಿಚಾರಗಳಿಗೆ ಮಾರು ಹೋಗಬೇಡಿ, ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು ಎಂಬುದನ್ನು ಅರಿತುಕೊಳ್ಳುವಿರಿ" (ರೋಮನರಿಗೆ 12:2) ಎನ್ನುತ್ತಾನೆ. ಈ ಕಾರಣ ಮನಸು ಶುದ್ಧವಾಗಿದ್ದರೆ ಮಾನವನ ಭಾವನೆಗಳು ಶುದ್ಧವಾಗಿರಲು ಸಾಧ್ಯ. ಭಾವನೆಗಳು ಶುದ್ಧವಾಗಿದ್ದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಉತ್ತಮ ಸಮಾಜ ನಿರ್ಮಾಣವಾದರೆ ಅಧ್ಯಾತ್ಮ ಚಿಗುರೊಡೆಯಲು ಸಾಧ್ಯ. ಅಧ್ಯಾತ್ಮವು ಚಿಗುರೊಡೆದರೆ ಸಮಾಜದಲ್ಲಿ ದೈವೀ ಪ್ರಸನ್ನತೆ ಮನೆಮಾಡಿ ದ್ವೇಷಾವೇಶಗಳು ಮರೆಯಾಗಿ ಆನಂದಮಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...