Saturday, 11 January 2020

ಯಾರು ನಿನ್ನವರು?


- ಎಲ್. ಚಿನ್ನಪ್ಪ, ಬೆಂಗಳೂರು

ಎಷ್ಟೋ ಸಲ ನಾವನ್ಕಂಡಿರ್ತೇವೆ, ನಾನಿಲ್ಲದಿದ್ರೆ ನನ್ನ ಹೆಂಡ್ತಿ, ಮಕ್ಕಳು ತಂದೆ-ತಾಯಿ ಗತಿಯೇನು? ಅವರೆಲ್ಲ ನನ್ನಲ್ಲೇ ಪ್ರಾಣ ಇಟ್ಕೊಂಡಿದ್ದಾರೆ, ನಾನಿಲ್ಲದಿದ್ರೆ ಅವಳು ಬದುಕೋದೇ ಇಲ್ಲ. ಹೀಗೆ ನಮ್ಮ ಜೀವನದ ಹೋರಾಟ ನಡೀತಾ ಇರ್ತದೆ. ಆದರೆ ಅದರ ಸತ್ಯಾನೇ ಬೇರೆ. ಒಂದು ಸಲ ಒಬ್ಬ ಗುರು ಮತ್ತು ಶಿಷ್ಯನ ನಡುವೆ ಒಂದು ವಾಗ್ವಾದ ನಡಿಯಿತು. ಗುರು ಶಿಷ್ಯನಿಗೆ, ‘ಜಗತ್ತು ಕೇವಲ ಒಂದು ಭ್ರಮೆ, ದೇವರೊಬ್ಬರನ್ನು ಬಿಟ್ಟು ನಿನ್ನನ್ನು ನಿಜವಾಗಿ ಪ್ರೀತಿಸೋರು ಯಾರೂ ಇಲ್ಲಪ್ಪ’ ಎಂದು ಶಿಷ್ಯನಿಗೆ ಹೇಳಿದ. ಅದರ ಬಗ್ಗೆ ವಾದ ಜರುಗಿತು. 
ಶಿಷ್ಯ: ನಿಮಗೆ ಗೊತ್ತಿಲ್ಲ ಬಿಡಿ ಸ್ವಾಮಿ, ನನ್ನ ಹೆಂಡ್ತಿ ನನ್ನನ್ನ ತುಂಬಾ ಪ್ರೀತಿಸ್ತಾಳೆ, ನನ್ನ ತಾಯಿಗೆ ನಾನಿಲ್ಲದಿದ್ರಂತೂ ಆಗೋದೇ ಇಲ್ಲ. ನನ್ನ ಮಕ್ಳೂ ನನ್ನನ್ನ ಚೆನ್ನಾಗಿ ಗಮನಿಸ್ತಾರೆ, ಗೌರವಿಸ್ತಾರೆ. ನನ್ನ ವ್ಯಾಪಾರ ಪರಿಸ್ಥಿತಿ, ಹಣ ಕಾಸು ಎಲ್ಲಾ ತುಂಬಾ ಚೆನ್ನಾಗಿದೆ. ಹೀಗಿರುವಾಗ ಇದು ಕಲ್ಪನೆ ಹೇಗಾಗುತ್ತೇ ಸ್ವಾಮಿ?
ಸ್ವಾಮೀಜಿ: ನಿಮ್ಮ ಹೆಂಡ್ತಿ ಪ್ರೀತಿ, ನಿಮ್ಮ ತಾಯಿ ಪ್ರೀತಿ, ನಿಮ್ಮ ಮಕ್ಕಳ ಗೌರವ, ಇವೆಲ್ಲಾ ಭ್ರಮೆ
ಶಿಷ್ಯ: ಇದು ಭ್ರಮೆ ಹೇಗಾಗುತ್ತೆ ಸ್ವಾಮಿ, ಪ್ರತಿ ದಿನ ನಡೆಯೋದನ್ನ ಯಾರಾದರೂ ಕಲ್ಪಿಸಿಕೊಂಡು ಹೇಳೋಕಾಗುತ್ತಾ? ನಾನು ಇಷ್ಟು ದಿನ ಅವರ ಜೊತೆ ಇದ್ದೀನಿ, ಯಾರ್ಯಾರು ಏನೇನು ಅಂತ ನನಗೆ ಚೆನ್ನಾಗಿ ಗೊತ್ತಿದೆ ಸ್ವಾಮೀಜಿ, ಇದನ್ನೆಲ್ಲ, ಕಲ್ಪನೆ, ಭ್ರಮೆ ಕನಸು ಅಂತ ಹೇಳೋಕಾಗಲ್ಲ, ಬಿಡಿ ಸ್ವಾಮಿ. 
ಸ್ವಾಮೀಜಿ: ಒಂದು ಪಕ್ಷ ನೀವಂದುಕೊಂಡಿರುವುದೆಲ್ಲ ಸುಳ್ಳು ಅಂತ ತೋಚಿದ್ರೆ ಹಾಗೇನ್ಮಾಡ್ತೀರಿ?
ಶಿಷ್ಯ: ಹಾಗೇನಾದ್ರು ಆದ್ರೆ ನಾನು ಖಂಡಿತ ನಿಮ್ಮ ಹಿಂದೆ ಬಂದ್ಬಿಡ್ತೀನಿ ಸ್ವಾಮೀಜಿ.
ಸ್ವಾಮೀಜಿ: ಖಂಡಿತವಾಗಿ...?
ಶಿಷ್ಯ: ಖಂಡಿತ ಸ್ವಾಮಿ
ಸ್ವಾಮೀಜಿ: ಸರಿಯಾಗಿ ಯೋಚ್ನೆ ಮಾಡಿ, ಸಂನ್ಯಾಸಿ ಆಗ್ಬೇಕಾಗುತ್ತೆ...
ಶಿಷ್ಯ: ಆಗ್ಲಿ ಬಿಡಿ ಸ್ವಾಮಿ.
ಸ್ವಾಮೀಜಿ: ಸಂನ್ಯಾಸಿ ಆಗೋದೇನೂ ಬೇಡ. ನೋಡಿ, ತಗೋಳಿ, ಇದನ್ನ ಮನೆಗೆ ಹೋದ ಮೇಲೆ ತಗೋಳಿ. ತಗೊಂಡ್ರೆ ನೀವು ಸತ್ತ ಹಾಗೆ ಮಲಕೊಂಡಿರ್ತೀರಿ. ಆದರೆ ಸತ್ತಿರಲ್ಲ, ನೀವು ಸತ್ತಿದ್ದೀರಿ ಅಂತ ಗೊತ್ತಾದ್ಮೇಲೆ, ನಿಮ್ಮನೇಲಿ ಯಾರ್ಯಾರು ಯಾವ ರೀತಿ ನಡ್ಕೋಂತಾರೆ ಅನ್ನೋದು ನಿಮಗೇ ಕೇಳ್ಸುತ್ತೆ, ಸರಿಯಾದ ಸಮಯಕ್ಕೆ ನಾನು ಬರ್ತೀನಿ.
ಶಿಷ್ಯ: ಆದರೆ ಇದರಿಂದ ಏನೂ ತೊಂದ್ರೆ ಇಲ್ವಲ್ಲ ಸ್ವಾಮಿ...?
ಸ್ವಾಮೀಜಿ: ಏನೂ ಇಲ್ಲ. 
ಶಿಷ್ಯ: ಯಾಕಂದ್ರೆ ಇನ್ನೂ ಬೇಕಾದಷ್ಟು ಜವಾಬ್ದಾರಿ ಇದೆ, ಸ್ವಾಮಿ. 
ಸ್ವಾಮೀಜಿ: ಏನೂ ಹೆದರ್ಕೋ ಬೇಡಿ, ಜೀವಕ್ಕೆ ಏನೂ ಭಯ ಇಲ್ಲ, ಹೋಗ್ಬಿಟ್ಟು ಬನ್ನಿ. 
ಶಿಷ್ಯ: ಆಯ್ತು ಸ್ವಾಮಿ, ನಾನು ಬರ್ತೀನಿ, ನಮಸ್ಕಾರ ! ಮನೆಗೆ ಬಂದು ಸ್ವಾಮೀಜಿ ಕೊಟ್ಟ ಔಷಧಿಯನ್ನು ತೆಗೆದುಕೊಂಡು ಶಿವಪ್ಪ ಮಲಕ್ಕೊಂಡ. ಅವನು ಸತ್ತೋಗಿದ್ದಾನೆ ಅಂತ ಅವನ ಮನೆಯಲ್ಲಿ ಎಲ್ಲರೂ ದುಃಖಪಡ್ತಾ ಇದ್ದಾರೆ. 
ಹೆಂಡತಿ: ಅಯ್ಯೋ, ಅಯ್ಯೋ ! ನಾನೇನ್ಮಾಡ್ಲಿ, ನಾನೇನ್ಮಾಡ್ಲಿ...?
ಅತ್ತೆ: (ಶಿವಪ್ಪನ ತಾಯಿ) ಸಮಾಧಾನ ಮಾಡ್ಕೋಳೇ ತಾಯಿ, ಸಮಾಧಾನ ಮಾಡ್ಕೋ. ನೋಡಿ, ನನ್ನ ಕರ್ಮ ಇದು. ಆ ದೇವರು ನನ್ನನ್ನ ಕರ್ಕೋಳೋ ಬದಲು ನನ್ನ ಮಗನ್ನೇ ಕರ್ಕೊಂಡ್ಬಿಟ್ಟಿದ್ದಾನೆ, ಪಾಪಿ ಮುಂಡೇ ಮಗ...
ಬಂಧುಗಳು: ಎಲ್ರೂ ಸಮಾಧಾನ ಮಾಡ್ಕೋಬೇಕ್ರಮ್ಮ... 
ಅಷ್ಟರಲ್ಲಿ ಸ್ವಾಮೀಜಿಗಳು ಮನೆಗೆ ಬರುತ್ತಾರೆ.
ತಾಯಿ: ನೋಡಿ ಸ್ವಾಮಿಗಳೇ ಅನ್ಯಾಯಾನಾ. ಬೆಳಿಗ್ಗೆ ಚೆನ್ನಾಗೇ ಇದ್ದ, ಎಲ್ಲೋ ಹೋಗಿ ಬಂದು ಮಲಕ್ಕೊಂಡ, ಆಮೇಲೇ ಹೀಗಾಗ್ಬಿಟ್ಟ ನೋಡಿ...
ಸ್ವಾಮೀಜಿ: (ಸ್ವಾಮೀಜಿ ಶಿವಣ್ಣನ ಕೈ ಹಿಡಿದು ಪರೀಕ್ಷಿಸುತ್ತ) ಶಿವಣ್ಣ ಇನ್ನೂ ಬದುಕೇ ಇದ್ದಾನೆ 
ಹೆಂಡತಿ: ಹಾಗಾದೆ ನನ್ನ ಗಂಡನ್ನ ಹೇಗಾದ್ರೂ ಉಳ್ಸಿ ಸ್ವಾಮಿ.
ಸ್ವಾಮೀಜಿ: ಆದರೆ, ಇವರನ್ನ ಉಳ್ಸೋದ್ರಲ್ಲಿ ಒಂದು ಕಷ್ಟ ಇದೆ....?
ಹೆಂಡತಿ: ಏನದು ಸ್ವಾಮಿ?
ಸ್ವಾಮೀಜಿ: ಆಕೆಗೆ ಒಂದು ಔಷಧವನ್ನು ಕೊಟ್ಟು ‘ಇದನ್ನ ನೀರಿನಲ್ಲಿ ಕದಡಿ ಕುಡಿಸಿದ್ರೆ, ಇವನು ಬದುಕ್ತಾನೆ’
ಹೆಂಡತಿ: ಅಷ್ಟೇ ತಾನೇ, ಕೊಡಿ ಸ್ವಾಮಿ, ನಾನು ಕುಡಿಸ್ತೇನೆ.
ಸ್ವಾಮೀಜಿ: ಆದರೆ, ತಾಯಿ, ಇದನ್ನ ಮೊದಲು ಅವರಿಗೆ ಕುಡ್ಸೋಕೆ ಮುಂಚೆ, ನೀವು ಕುಡಿಬೇಕಾಗುತ್ತೆ.
ಹೆಂಡತಿ: ಅಷ್ಟೇ ತಾನೇ ಸ್ವಾಮಿ? ನಾನು ಕುಡಿತೀನಿ.
ಸ್ವಾಮೀಜಿ: ಆದರೆ ಸ್ವಲ್ಪ ಕಷ್ಟ ಇದೆ ತಾಯಿ. ಇದನ್ನ ಮೊದಲು ನೀವು ಕುಡಿದ್ರೆ ಸಾಯ್ತೀರಿ. ಆಗ ಮಾತ್ರ ಅವರು ಬದುಕುತ್ತಾರೆ. ಒಂದು ಜೀವ ತಗೊಂಡ್ಮೇಲೇನೇ, ಇನ್ನೊಂದು ಜೀವ ಕೋಡೋದು, ಇದೇ ಔಷಧಿಯ ಸತ್ವ. ಈಗ ಹೇಳಿ ಕುಡಿತೀರಾ...? ಯಾಕೆ ತಾಯಿ ನೀವು ಕುಡಿಯೋದಿಲ್ವ? ನಿಮ್ಮ ಗಂಡನ್ನ ಬದುಕಿಸಬೇಕಂತ ನಿಮಗಿಷ್ಟ ಇಲ್ಲವಾ? ಇಷ್ಟೇನಾ ನಿಮ್ಮ ಗಂಡನ್ನ ಪ್ರೀತಿ ಮಾಡೋದು?
ಹೆಂಡತಿ: ಪ್ರೀತಿ ಇಲ್ಲ ಅಂತ ಯಾರು ಹೇಳಿದ್ದು ಗುರುಗಳೇ? ನಾನು ಸತ್ರೆ ನಮ್ಮ ಮಕ್ಕಳನ್ನ, ಅತ್ತೆಯನ್ನ ಯಾರು ನೋಡ್ಕೋತಾರೆ? 
ಸ್ವಾಮೀಜಿ: ನಿಮ್ಮ ಗಂಡ ಬದುಕುತ್ತಾನಲ್ಲ, ಅವನು ನೋಡ್ಕೋತಾನೆ. ಅವರ ತಾಯಿ ನಿಮ್ಮ ಮಕ್ಕಳು, ಇಬ್ಬರನ್ನೂ.
ಹೆಂಡತಿ: ಅವರು ಬದುಕಿದರೆ, ಅವರ ತಾಯನ್ನ ನೋಡ್ಕೋತಾರೆ. ನನ್ನ ಮಕ್ಕಳ ಗತಿ? ನಾನು ಸತ್ತ ಮೇಲೆ ಇನ್ನೊಂದು ಮದುವೆÀ ಮಾಡ್ಕೋತಾರೆ. ಆಗ ಬರೋಳು ನನ್ನ ಮಕ್ಕಳನ್ನ ಚೆನ್ನಾಗಿ ನೋಡ್ಕೋತಾಳ? ...ಆಗಲ್ಲ, ಗುರುಗಳೇ, ನನ್ನ ಕೈಯಲ್ಲಿ ಆಗಲ್ಲ. 
ಸ್ವಾಮೀಜಿ: ಶಿವ, ಶಿವ ! ಇದೇ ಸತ್ಯ...! 
ಹೆಂಡತಿ: ಗುರುಗಳೇ, ಇದನ್ನ ನಮ್ಮ ಅತ್ತೇನೇ ಕುಡೀಲಿ. ಅವರು ಮಾಡೋದಾದ್ರೂ ಏನಿದೆ? ಅವರು ಕುಡಿದು ಅವರ ಮಗನ್ನ ಉಳಿಸಿಕೊಡಲಿ.
ಸ್ವಾಮೀಜಿ: ‘ನಿಮ್ಮ ಕೈಯಲ್ಲಾಗ್ಲಿಲ್ವಲ್ಲ?’ ಎನ್ನುತ್ತ, ಸ್ವಾಮೀಜಿ ಔಷಧಿಯ ಲೋಟವನ್ನು ಎತ್ತಿ ತಾಯಿಗೆ ಕೊಡುತ್ತ, ‘ತಾಯಿ, ತಗೊಳ್ಳಿ. ಜಗತ್ತಿನಲ್ಲಿ ಯಾವುದೇ ತಾಯಿ ಆಗಲಿ ತನ್ನ ಪ್ರಾಣ ಕೊಟ್ಟಾದ್ರೂ ಮಗನನ್ನು ಬದುಕಿಸಿಕೊಳ್ಳೋಕೆ ಪ್ರಯತ್ನ ಪಡ್ತಾಳಂತೆ. ತಗೊಳ್ಳಿ ನೀವು ಕುಡೀರಿ, ನಿಮ್ಮ ಪ್ರಾಣ ಹೋಗಲೀ, ನಿಮ್ಮ ಮಗನ ಪ್ರಾಣ ಬರ್ಲಿ’
ತಾಯಿ: ‘ಸ್ವಾಮಿಗಳೇ, ನನ್ನ ಮೊಮ್ಮಕ್ಕಳು ನನ್ನನ್ನು ತುಂಬಾ ಹಚ್ಕೊಂಬಿಟ್ಟಿದ್ದಾರೆ, ನಾನು ಸತ್ತೋದ್ರೆ ಅವರನ್ನ ನೋಡ್ಕೊಳ್ಳೋರು ಯಾರು?...’ ಅತ್ತೆ ಸೊಸೆಯ ಮುಖ ನೋಡಿ, ‘ಅಮ್ಮ ತಾಯಿ, ನೀನೇ ಅದನ್ನ...’
ಹೆಂಡತಿ: ನನ್ನ ಕಷ್ಟಾನೂ ಅರ್ಥಮಾಡ್ಕೋಳಿ ಅತ್ತೆ, ನಾನೂ ಸಾಯೋಕಾಗಲ್ಲ
ಸ್ವಾಮೀಜಿ: ‘ಅಂತೂ ಕೊನೆಗೆ ಶಿವಣ್ಣನನ್ನು ಬದುಕಿಸೋಕೆ ಯಾರೂ ಮುಂದೆ ಬರ್ಲಿಲ್ಲ. ಔಷಧಿ ಸತ್ವ ಹೊರಟು ಹೋಯಿತು. ಶಿವಣ್ಣಾನೂ ಹೊರಟು ಹೋದ. ಇನ್ನು ಆತ್ಮ್ತು ಪ್ರಯೋಜನವಿಲ್ಲ. ತಗೊಂಡು ನಡೀರಿ’ ಎಂದರು. ಅಲ್ಲಿದ್ದವರು ಮಂಚದ ಸಮೇತ ಶಿವಣ್ಣನನ್ನು ಎತ್ತಿ ಹೊರ ಹೊಯ್ಯಲು ಮುಂದಾದರು. 
ತಾಯಿ: ಅಯ್ಯಯ್ಯೋ ! ಮಂಚ ಒಯ್ಬೇಡಿ !
ಸ್ವಾಮೀಜಿ: ಯಾಕೆ ತಾಯಿ, ಏನಾಯ್ತು? 
ತಾಯಿ: ಮಗನೂ ಹೊರಟು ಹೋದ, ನನ್ನ ಗಂಡನ ನೆನಪಾಗಿ ಇರೋದು, ಅದೊಂದೇ. 
ಸ್ವಾಮೀಜಿ: ಮಗಾನೇ ಹೋದ್ಮೇಲೆ ಇನ್ನು ಮಂಚಕ್ಕೇಕೆ ಒದ್ದಾಡ್ತೀರಿ...? ತಗೊಂಡು ಬನ್ರಪ್ಪ...
ಬಂಧುಗಳು: ಬಾಗಿಲು ಚಿಕ್ಕದು ಇರೋದ್ರಿಂದ ಆಚೆ ತರೋಕೆ ಆಗ್ತಾ ಇಲ್ಲ ಸ್ವಾಮಿ 
ಸ್ವಾಮೀಜಿ: ಬಾಗಿಲು ಚೌಕಟ್‍ನ ಒಡೆದು ಹಾಕ್ಬಿಡಿ. ಆಗ ತಗೊಂಡು ಹೋಗ್ಬೋದು
ಹೆಂಡತಿ: ಅಯ್ಯೋ...! ಬೇಡ, ಬೇಡ ! ಬಾಗಿಲು ಮಾತ್ರ ಮುರ್ದಾಕ್ಬೇಡಿ. ಅವರು ಬೇರೆ ಇಲ್ಲ, ನನ್ನ ಕೈಯಲ್ಲಿ ಸರಿ ಮಾಡ್ಸೋಕೆ ಆಗೋಲ್ಲ.
ಸ್ವಾಮೀಜಿ: ತಾಯಿ, ಮಂಚದಿಂದ ದೇಹಾನ ಇಳ್ಸೋಕೆ ಆಗೋದಿಲ್ಲ. ಮಂಚದಲ್ಲೇ ಇರ್ಬೇಕು. ದೇಹ ಸೆಟೆದುಕೊಂಡು ಬಿಟ್ಟಿದೆ. ಮಂಚದಿಂದ ದೇಹಾನ ಹೊರಗೆ ತೆಗೆದ್ರೆ, ದೇಹದ ಭಾಗಗಳಿಗೆ ಊನ ಆಗಬಹುದು. ನಿಮ್ಮ ಗಂಡನ ಕೈಯ್ಯೋ, ಕಾಲೋ ಮುರೀಬಹುದು, ಆಗ ಬಹುದಾ...?
ಹೆಂಡತಿ: ಏನಾದ್ರೂ ಆಗ್ಲಿ, ಆದರೆ ಬಾಗಿಲು ಮಾತ್ರ ಮುರಿಬೇಡಿ. 
ತಾಯಿ: ಮಂಚ ಮಾತ್ರ ತಗೊಂಡು ಹೋಗಬೇಡಪ್ಪ. 
ಶಿವಣ್ಣ: ಮಂಚದಿಂದ ಎದ್ದು ಕುಳಿತು, ಹೆಂಡತಿ ಮುಖ ನೋಡಿ ‘ಏನಾದ್ರೂ ಪರವಾಗಿಲ್ವಾ?’ ಹಾಗೆಯೇ ತಾಯಿಯತ್ತ ತಿರುಗಿ, ‘ಏನಮ್ಮ ನನಗಿಂತ ನಿನಗೆ ಮಂಚಾನೇ ಹೆಚ್ಚಾಯ್ತಾ?’ ‘ಏನೇ, ನನಗಿಂತ ಈ ಬಾಗಿಲುಗಳು, ಈ ಮನೆ, ಇವೇ ಹೆಚ್ಚ ನಿನಗೆ?’ ತಾವು ಹೇಳಿದ್ದು ಸತ್ಯ ಗುರುಗಳೇ. ಎಲ್ಲಾ ತಮ್ಮ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರನ್ನು ಪ್ರೀತಿಸುತ್ತಾರೆ. ಸತ್ಯ ಏನಂತ ಈಗ ಚೆನ್ನಾಗಿ ಗೊತ್ತಾಯಿತು’ 

ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ. ಜಗತ್ತಿನ ಜನ ಎಲ್ಲಿವರೆಗೆ ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳೋಕೆ ಅಡ್ಡಿ ಆಗೋದಿಲ್ಲವೋ, ಅಲ್ಲಿವರೆಗೂ ಸ್ನೇಹಿತರ ತರಾನೇ ಇರುತ್ತಾರೆ. ಸಾಧಕ ಅಂತ ಅನ್ನಿಸಿಕೊಂಡವನು ತನ್ನ ಜೀವನದ ಘಟನೆಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ‘ದೇವರು ಒಬ್ಬರು ಮಾತ್ರ ನಿಜವಾಗಿ ನನ್ನನ್ನು ಪ್ರೀತಿಸೋನು’ ಅಂತ ಅರ್ಥ ಮಾಡಿಕೊಳ್ಳುತ್ತಾನೆ. 

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...