- ಸಿ ಮರಿಜೋಸೆಫ್
------------------------------------
ಹಿಂದೊಮ್ಮೆ ರೀಡಸ್ರ್ಸ ಡೈಜೆಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಕ್ಯಾಥೀಮೆಲಿಯಾ ಲಿವೈನ್' Kathy Melia Levine CªÀgÀ Sharing a Legacy of Love ಎಂಬ ಇಂಗ್ಲಿಷ್ ಕತೆಯ ಭಾವಾನುವಾದ
----------------------------------------
ಎಂಬತ್ನಾಲ್ಕು ವರ್ಷಗಳ ತುಂಬು ಜೀವನ ನಡೆಸಿದ ನಮ್ಮಮ್ಮ ಇಳಿವಯಸ್ಸಿನಲ್ಲಿ ಯಾರಿಗೂ ಹೊರೆಯಾಗದೆ ಯೇಸುಪಾದ ಸೇರಿದರು. ನನಗೂ ಅಕ್ಕಂದಿರಿಗೂ ಬಹುವಾಗಿ ಹೃದಯ ಕಲಕಿದ ದಿನವದು. ಮಮತೆಯೇ ಮೈವೆತ್ತ ತಾಯಿಮಡಿಲನ್ನು, ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಜಂಜಾಟಗಳ ನಡುವೆಯೂ ಬದುಕನ್ನು ಪ್ರೀತಿಸಿ ಮಕ್ಕಳು ಮೊಮ್ಮಕ್ಕಳ ಮೇಲೆ ವಾತ್ಸಲ್ಯದ ಹೊಳೆ ಹರಿಸಿದಾಕೆಯನ್ನು ಕಳೆದುಕೊಂಡ ಆ ನೋವು ಏನೆಂಬುದು ನಮಗೆ ಮಾತ್ರ ಗೊತ್ತು.
ಕೆಲವು ದಿನಗಳಾದ ಮೇಲೆ, ನಾವೆಲ್ಲ ಮತ್ತೆ ಅಮ್ಮನ ಮನೆಯಲ್ಲಿ ಸೇರಿದೆವು. ತುಳಸಿತೋಟದ ಅಮ್ಮನ ಮನೆ ಬೆಂಗಳೂರು ಪಟ್ಟಣದಲ್ಲಿ ಹಳೆಯ ಮನೆ. ಅದನ್ನು ಮನೆ ಎನ್ನುವುದಕ್ಕಿಂತ ಬಂಗಲೆ ಎನ್ನುವುದೇ ಸರಿ. ಮನೆಯ ಹಿತ್ತಿಲಲ್ಲಿ ನಾವು ಕುಂಟೋಬಿಲ್ಲೆ ಆಡಿದ್ದು, ಅಮ್ಮನಿಗೆ ಉಗುರುಬಣ್ಣ ಹಚ್ಚಿದ್ದು, ಅಕ್ಕಂದಿರೆಲ್ಲ ಚಿಕ್ಕ ತಂಗಿಯಾದ ನನಗೆ ಅಪ್ಪನ ಕೋಟು ಮಕ್ಮಲ್ಲ ಟೋಪಿ ತೊಡಿಸಿ ನಕ್ಕಿದ್ದು, ಸೀಬೇಗಿಡದಲ್ಲಿ ಪೀಚುಕಾಯಿ ಕಿತ್ತು ತಿಂದಿದ್ದು, ಸೀತಾಫಲ ಹಣ್ಣು ತಿನ್ನುವಾಗ ಬೀಜವನ್ನೂ ಕಚ್ಚಿದ್ದು, ಧರ್ಮಾಂಬುಧಿ ಕೆರೆಯ ಅಂಗಳದಲ್ಲಿ ಸದಾರಮೆ ನಾಟಕ ನೋಡಿದ್ದು, ಹೀಗೆ ಹಳೆಯ ಸಂತಸದ ದಿನಗಳನ್ನೆಲ್ಲ ಮೆಲುಕು ಹಾಕುತ್ತಾ ಮನಸಾರೆ ನಕ್ಕೆವು, ಈ ಸಂದರ್ಭದಲ್ಲಿ ಅಮ್ಮನಿಲ್ಲವಲ್ಲಾ ಎಂದು ನೆನಪು ಮರುಕಳಿಸಿ ಉಮ್ಮಳಿಸಿ ಬಿಕ್ಕಿದೆವು. ಹೀಗೇ ಮಾತಾಡುತ್ತಾ, ತಾಯಿಲ್ಲದ ತವರಿಗೆ ಬಂದು ಮಾಡುವುದಾದರೂ ಏನು, ಅಮ್ಮನ ಈ ಮನೆಯನ್ನು ಮಾರಿಬಿಡೋಣ ಎಂಬ ತೀರ್ಮಾನಕ್ಕೆ ಬಂದೆವು. ಇವೊತ್ತು ಆ ಮನೆಗೆ ಕೋಟಿ ಕೋಟಿ ಬೆಲೆ. ಆದರೆ ಬೆಂಗಳೂರಿನಿಂದ ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿ ಸಂಸಾರ ಹೂಡಿರುವ ನಾವು ಇಲ್ಲಿ ಬರುವುದಕ್ಕೆ ಕಾರಣವಾದರೂ ಏನಿದೆ? ಅಮ್ಮ ಇರುವವರೆಗೂ ಇದು ಅಮ್ಮನ ಮನೆ. ಈಗ ..
ಅಮ್ಮನ ಮನೆಯನ್ನೇನೋ ಮಾರಿಬಿಡಲು ತೀರ್ಮಾನವಾಯಿತು. ಆದರೆ ಮನೆಯೊಳಗಿನ ಬೆಲೆಬಾಳುವ ಮರಮಟ್ಟು, ದೇವರ ಪೀಠ ಇತ್ಯಾದಿ ವಸ್ತುಗಳನ್ನು ಮಾರದೇ ಅಮ್ಮನ ನೆನಪಿಗಿರಲೆಂದು ನಾವೇ ಹಂಚಿಕೊಳ್ಳೋಣ ಎಂದುಕೊಂಡೆವು. ಅಮ್ಮನ ಒಂದೊಂದೇ ವಸ್ತುಗಳನ್ನು ನನಗೆ ತನಗೆ ಎಂದು ಒಬ್ಬೊಬ್ಬರೂ ಅಪ್ಯಾಯತೆಯಿಂದ ಎತ್ತಿಟ್ಟುಕೊಳ್ಳುವಾಗ, ಹಳೆಯ ಅದಾವುದೋ ಸಿನಿಮಾದಲ್ಲಿ ಮಕ್ಕಳು ತಮ್ಮ ಅಪ್ಪಅಮ್ಮನ ಆಸ್ತಿಗಾಗಿ ಹೊಡೆದಾಡಿ ಬಡಿದಾಡಿಕೊಂಡ ದೃಶ್ಯ ಕಣ್ಣಮುಂದೆ ಹಾದುಹೋಯಿತು. ಸದ್ಯ, ಇಲ್ಲಿ ಹಾಗೇನೂ ನಡೆಯಲಿಲ್ಲ, ಒಬ್ಬೊಬ್ಬರೂ ತ್ಯಾಗ ಮನೋಭಾವದಿಂದ ಪಾಲಿಗೆ ಬಂದದ್ದೇ ಪಂಚಾಮೃತ ಎಂಬಂತೆ ಕಾಸಿನ ಸರ, ಅಡಿಕೆ ಚೈನು, ಕಿವಿಸರ, ಜುಮುಕಿ, ಡಾಬು, ಬೈತಲೆ ಬೊಟ್ಟು, ವಜ್ರದಬೆಂಡೋಲೆ, ವಜ್ರದ ಮೂಗುತಿ, ಮುತ್ತಿನ ಜೋಡಿಬಳೆ, ಹವಳ ಕೂಡಿಸಿದ ಬಳೆ, ಬಳೀಕಲ್ಲಿನ ಬಳೆ ಮುಂತಾದ ಒಡವೆಗಳನ್ನು, ಹಳೆಯ ಕಾಲದ ಹಲಸಿನಮರದ ಭಾರೀ ರಾಣಿಮಂಚವನ್ನು, ಮೈಸೂರುತೇಗದ ಕಪಾಟು ಮೇಜು ಕುರ್ಚಿಗಳನ್ನು, ಶ್ರೀಗಂಧದಲ್ಲಿ ಕೆತ್ತಿದ ಪವಿತ್ರಶಿಲುಬೆ ಮತ್ತು ಮೇಣದಬತ್ತಿ ಕಂಬಗಳನ್ನೂ ಯಾವುದೇ ಕಿತ್ತಾಟವಿಲ್ಲದೆ ಹಂಚಿಕೊಂಡೆವು. ಬಹುಶಃ ಅಮ್ಮ ಬಿಡಿಸಿದ ಅಂದದ ಕುಸುರಿಕೆಲಸದ ಚಿತ್ರಪಟಗಳ ಸಂದರ್ಭದಲ್ಲಾದರೂ ಜಗಳ ಉಂಟಾಗುವುದೇನೋ ಎಂದು ಬಾವಿಸಿದ್ದೆ. ಆದರೆ ಅದೂ ಕೂಡಾ ಸುಸೂತ್ರವಾಗಿ ನಡೆದುಹೋಯಿತು. ಮನೆಯಲ್ಲಿ ಅಮ್ಮನ ಆತ್ಮವೇ ಸುಳಿದಾಡುತ್ತಾ, ತನ್ನ ನಾಲ್ಕೂ ಹೆಣ್ಣುಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ತನ್ನೆಲ್ಲ ವಸ್ತುಗಳನ್ನು ಸರಿಸಮನಾಗಿ ಹಂಚುತ್ತಿದೆಯೇನೋ ಎಂಬಂತೆ ಎಲ್ಲವೂ ನಾಜೂಕಾಗಿ ನಡೆದವು.
ಅಮ್ಮನ ಪ್ರೀತಿಯ ಸಂದೂಕದಲ್ಲಿ ಕ್ರಿಸ್ಮಸ್ ಗೊಂಬೆಗಳ ಒಂದು ಪೆಟ್ಟಿಗೆಯಿತ್ತು. ಅಪ್ಪ ಅಮ್ಮ ಮದುವೆಯಾದ ಹೊಸದರಲ್ಲಿ ಆತ್ಮೀಯನಾಗಿದ್ದ ಬಡಗಿಯೊಬ್ಬ ಅದನ್ನು ಕ್ರಿಸ್ಮಸ್ ಕೊಡುಗೆಯಾಗಿ ಕೊಟ್ಟಿದ್ದನಂತೆ. ಪ್ರತಿ ಕ್ರಿಸ್ಮಸ್ಸಿನಲ್ಲೂ ಅಮ್ಮ ಅದರ ಬಗ್ಗೆ ಹೇಳದೆ ಇರುತ್ತಿರಲಿಲ್ಲ. ಆದರೆ ನಮ್ಮೆಲ್ಲರಿಗೂ ದೊಡ್ಡವರಾದ ರೀತಕ್ಕ ಅಂದುಕೊಂಡಿರುವುದೇ ಬೇರೆ. ನಮ್ಮ ರಸ್ತೆಯಲ್ಲೇ ವಾಸವಿದ್ದ ಕತರೀನಮ್ಮನವರು ಒಮ್ಮೆ ಯಾಕೋ ಏನೋ ಮನಸು ಕೆಟ್ಟು ಅದನ್ನು ತಿಪ್ಪೆಗೆ ಬಿಸಾಡುವಾಗ ಅಮ್ಮ ನೋಡಿ ಇಸಕೊಂಡರಂತೆ.
ಅಮ್ಮನ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆಯಲ್ಲಿದ್ದದ್ದು ರತ್ನಖಚಿತ ಬಂಗಾರದ ನಕ್ಷತ್ರದ ಹಿಂದೆ ಯಕ್ಷಲೋಕದ ಕಿನ್ನರರಂತೆ ಬೆಳ್ಳನೆಯ ದಿರಿಸು ತೊಟ್ಟು ಗ್ಲೋರಿಯಾ ಎಂದು ಹಾಡುವ ದೇವದೂತರು, ಅಂದಚೆಂದದ ಅಂಗಿ ತೊಟ್ಟ ಕೊಳಲನೂದುವ ಕುರುಬರು, ಮುಗ್ದವಾಗಿ ಕಣ್ಣರಳಿಸಿದ ಆಡು ಕುರಿಮರಿ ದನಕರುಗಳ ಗೊಂಬೆಗಳು, ಮಿರಿಮಿರಿ ಮಿಂಚುವ ಸಿಂಗಾರದ ಬಟ್ಟೆ ತೊಟ್ಟ ಮೂರುರಾಯ ಗೊಂಬೆಗಳು, ಅವರ ಹೊಳೆಹೊಳೆವ ಚಿನ್ನದ ಕಿರೀಟಗಳು ಇವೆಲ್ಲ ಇದ್ದವು ಎಂದುಕೊಳ್ಳಬೇಡಿ. ಏಕೆಂದರೆ ಅದರಲ್ಲಿದ್ದದ್ದು ಬೀಟೆಯ ಮರದಲ್ಲಿ ಸರಳ ಸುಂದರವಾಗಿ ಕೆತ್ತಲಾದ ಹುಲ್ಲಿನ ಗೋದಲಿಯ ಮೇಲೆ ಮಲಗಿದ ಯೇಸುಕಂದ, ಮೊಣಕಾಲೂರಿ ಅವನತ್ತ ಅಕ್ಕರೆಯ ನೋಟ ಬೀರಿದ ಜೋಸೆಫ್ ಮತ್ತು ಮರಿಯಾ ಗೊಂಬೆಗಳು ಮಾತ್ರವೇ. ಜೊತೆಗೆ ಒಂದು ಪುಟ್ಟ ಚಾವಣಿ, ಒಂದು ನೆಲಹಾಸು ಮತ್ತು ಅದರ ಸುತ್ತ ಪುಟ್ಟ ಕಟಾಂಜನ ಅಷ್ಟೇ. ಕಟಾಂಜನದ ಮುಂದಿನ ಗೇಟು ತಿರುಗಣಿ ಕಿತ್ತುಹೋಗಿ ಕೆಳಕ್ಕೆ ಜಾರಿತ್ತು.
ಎಷ್ಟೋ ವರ್ಸಗಳ ನಂತರ ಅಮ್ಮ ಅದರ ಜೊತೆ ಮೂರುರಾಯರು, ಕುರುಬರು, ಕುರಿಮರಿಗಳನ್ನು ಸೇರಿಸಿದಳು. ಚಿಕ್ಕವಯಸ್ಸಿನಲ್ಲಿ ನಾವೆಲ್ಲ ಕ್ರಿಸ್ಮಸ್ ಬಂದರೆ ನಲಿದಾಡುತ್ತ ಕ್ರಿಸ್ಮಸ್ ಅಲಂಕಾರಗಳನ್ನು ಮಾಡುತ್ತಿದ್ದೆವು. ಅಮ್ಮ ತನ್ನ ಸಂದೂಕದಿಂದ ಹುಷಾರಾಗಿ ತೆಗೆದುಕೊಡುತ್ತಿದ್ದ ಆ ಕೊಟ್ಟಿಗೆಯಲ್ಲಿ ನಾಜೂಕಾಗಿ ಯೇಸುಕಂದನನ್ನು ಎತ್ತಿಡುವಾಗ ನಾವೆಲ್ಲ ಪುಳಕಗೊಳ್ಳುತ್ತಿದ್ದೆವು. ಮೊಮ್ಮಕ್ಕಳು ಬಂದ ಮೇಲೆ ಕ್ರಿಸ್ಮಸ್ ಕೊಟ್ಟಿಗೆಯ ಮೆರುಗು ಇನ್ನಷ್ಟು ಹೆಚ್ಚಾಯಿತು. ಪುಟಾಣಿ ಮೊಮ್ಮಕ್ಕಳು ತಮಮ ಆಟಿಕೆಯ ಸುಂದರ ಗೊಂಬೆಗಳನ್ನೂ ತಂದು ಕ್ರಿಸ್ಮಸ್ ಕೊಟ್ಟಿಗೆಯಲ್ಲಿ ಇಡುತ್ತಿದ್ದರು. ಆ ಮೂರು ನಾಯಿಮರಿ ಗೊಂಬೆಗಳು ಬಂದಿದ್ದೂ ಹಾಗೆಯೇ.
ಇದೀಗ ಕ್ರಿಸ್ಮಸ್ ಅಲ್ಲದ ಈ ಸಂದರ್ಭದಲ್ಲಿ ನಾವು ಈ ಪೆಟ್ಟಿಗೆಯನ್ನು ತೆರೆದಾಗ ಇಷ್ಟು ದೊಡ್ಡ ಜಗಳವಾಗುತ್ತದೆಂದು ಅಂದುಕೊಂಡಿರಲೇ ಇಲ್ಲ. ಮೇರಕ್ಕ ತನಗೆ ಈ ಪೆಟ್ಟಿಗೆಯೊಂದೇ ಸಾಕೆಂದೂ ಅಮ್ಮನ ಬೇರಾವ ವಸ್ತುವೂ ಬೇಡವೆಂದೂ ಖಡಾಖಂಡಿತವಾಗಿ ಹೇಳಿಬಿಟ್ಟರು. ಅಷ್ಟರಲ್ಲಾಗಲೇ ರೋಜಕ್ಕ ಅಮೆರಿಕದಲ್ಲಿದ್ದ ತನ್ನ ಮಗಳ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದವಳು ತನ್ನ ಕೈಫೋನಿನ ಸ್ಪೀಕರನ್ನು ಎಲ್ಲರಿಗೂ ಕೇಳಿಸುವಂತೆ ಮಾಡಿದಳು. ಆತ್ಮ್ತಲಿಂದ ಸಹನಾ ಮಾತಾಡುತ್ತಾ ‘ಅಜ್ಜಿ ತಾನು ಸತ್ತ ಮೇಲೆ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆ ತನಗೇ ಸೇರುತ್ತದೆಂದು ಹೇಳಿದ್ದರು' ಎಂದು ಅಳುತ್ತಾ ತನ್ನ ಹಕ್ಕು ಮಂಡಿಸಿದಳು.
ಮೇರಕ್ಕ ರೋಜಕ್ಕ ಈಗ ದೊಡ್ಡದಾಗಿ ಕೂಗಾಡುತ್ತಾ ಜಟಾಪಟಿಗೇ ಇಳಿದುಬಿಟ್ಟರು. ಕ್ರಿಸ್ಮಸ್ ಕೊಟ್ಟಿಗೆ ದೊಡ್ಡ ರಾದ್ಧಾಂತವನ್ನೇ ತಂದಿತೇನೋ ಎಂಬಂತೆ ನಾವೆಲ್ಲ ಪೆಚ್ಚಾದೆವು. ಮೇರಕ್ಕ ರೋಜಕ್ಕ ಇಬ್ಬರಲ್ಲಿ ಯಾರೂ ಸೋಲುವಂತೆ ಕಾಣಲಿಲ್ಲ. ಅವರ ಜಗಳದ ಮಾತಿನ ಭರದಲ್ಲಿ ಇಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದ ಕುಟುಂಬದ ಎಷ್ಟೋ ಗುಟ್ಟುಗಳು ಹೊರಬಿದ್ದು ಚೆಲ್ಲಾಡಿದವು.
ಸಮಸ್ಯೆ ಬಗೆಹರಿಯುವಂತೆ ಕಾಣದಾದಾಗ ರೋಜಕ್ಕ ತಾವೇ ದನಿ ತಗ್ಗಿಸಿ ತಮ್ಮದೊಂದು ಸಲಹೆ ಮುಂದಿಟ್ಟರು. ಅಮ್ಮ ಸತ್ತು ಇನ್ನೂ ತುಂಬಾ ದಿನ ಆಗಿಲ್ಲ, ಇಷ್ಟು ವರ್ಷ ಅನ್ಯೋನ್ಯವಾಗಿದ್ದ ತಾವು ಇಷ್ಟು ಬೇಗ ನಾಯಿ ಬೆಕ್ಕಿನಂತೆ ಕಿತ್ತಾಡುವುದೇಕೆ ಎಂದರು. ನಾವೆಲ್ಲ ಉಸಿರು ಬಿಗಿಹಿಡಿದು ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯತೊಡಗಿದೆವು. ಒಂದು ರೀತಿಯಲ್ಲಿ ನನಗೂ ಆ ಕ್ರಿಸ್ಮಸ್ ಗೊಂಬೆಗಳು ಸಹನಾಗೇ ಸೇರಬೇಕು ಅನಿಸಿತ್ತು. ಆದರೆ ಈಗ ಸಹನಾಳ ಅಮ್ಮ ರೋಜಕ್ಕ ಸುಮ್ಮನಾಗಿದ್ದು ಒಂಥರಾ ಕುತೂಹಲ ಮೂಡಿಸಿತ್ತು.
ವಾತಾವರಣ ತಿಳಿಯಾದಾಗ ರೋಜಕ್ಕ ಮಾತಾಡುತ್ತಾ ತಮಗೆ ಗೊತ್ತಿರುವ ಮರದ ಆಚಾರಿಯ ಹತ್ತಿರ ಸಾಗುವಾನಿ ಮರದಲ್ಲಿ ಅಂಥದ್ದೇ ಇನ್ನೊಂದು ಕ್ರಿಸ್ಮಸ್ ಗೊಂಬೆಗಳನ್ನು ಮಾಡಿಸೋಣ ಎಂದರು. ತಿಗುಳರಪೇಟೇಲಿ ಇರುವ ರಾಯಪ್ಪಾಚಾರಿ ಒಳ್ಳೆಯ ಶಿಲ್ಪಿ. ಮನೆಯ ದೇವರ ಮಂಟಪ, ಪೂಜಾಪೀಠ, ಮರದ ಜಾಗಟೆ, ದಂತ ಕೂರಿಸಿದ ಟೀಪಾಯ್, ಮೇಣದ ಬತ್ತಿಯ ನಿಲುಗಂಬಗಳನ್ನೆಲ್ಲ ಕಲಾತ್ಮಕವಾಗಿ ಮಾಡುತ್ತಿದ್ದ. ಹೊಸದಾಗಿ ಮನೆ ಕಟ್ಟುವವರು ತಮ್ಮ ಮನೆಯ ಮುಂಬಾಗಿಲ ಮೇಲೆ ದೇವರ ಚಿತ್ರಗಳನ್ನು ಕೆತ್ತುವಂತೆ ರಾಯಪ್ಪಾಚಾರಿಗೆ ಬಳಿಗೆ ಹೋಗುತ್ತಿದ್ದರು. ಅವನು ಕೆತ್ತುವ ಚಿತ್ರಗಳಲ್ಲಿ ಜೀವಂತಿಕೆ ಇರುತ್ತಿತ್ತು. ರೋಜಕ್ಕ ಅವನ ಬಳಿ ಹೋಗಿ ಕ್ರಿಸ್ಮಸ್ ಕೊಟ್ಟಿಗೆಗಾಗಿ ಮನೆಯಲ್ಲಿ ನಡೆದ ರಾದ್ಧಾಂತವನ್ನೆಲ್ಲ ಹೇಳಿ, ಅಂಥದೇ ಇನ್ನೊಂದನ್ನು ಮಾಡಿಕೊಡಲು ವಿನಂತಿಸಿದರು.
ಕ್ರಿಸ್ಮಸ್ ಕೊಟ್ಟಿಗೆಯನ್ನೂ ಅದರ ಗೊಂಬೆಗಳನ್ನೂ ಕೈಗೆತ್ತಿಕೊಂಡು ನೋಡಿದ ರಾಯಪ್ಪಾಚಾರಿ ಅದನ್ನು ಅಳೆದು ತೂಗಿ, 'ಈ ಗೊಂಬೆಗಳಿಗೋಸ್ಕರ ಅಷ್ಟೊಂದು ಜಗಳವಾಯ್ತೇ?' ಎಂದು ಜೋರಾಗಿ ನಕ್ಕ. ‘ಅಯ್ಯೋ ಏನಪ್ಪ ಮಾಡೋದು, ನೀನು ಹೇಳೂದು ನಿಜ, ನಮ್ಮಮ್ಮ ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ, ನಾವೆಲ್ಲ ಈ ಗೊಂಬೆಗಳ ಜೊತೇನೇ ನಮ್ಮೆಲ್ಲ ಕ್ರಿಸ್ಮಸ್ಸುಗಳನ್ನು ಕಳೆದಿರೋದು' ಎಂದು ಅಲವತ್ತುಕೊಂಡರು ರೋಜಕ್ಕ. ಅವರ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಯಪ್ಪಾಚಾರಿ, 'ಸರಿಯಮ್ಮ, ಇದನ್ನು ಇಲ್ಲೇ ಬಿಟ್ಟುಹೋಗಿ, ನಾನು ನೋಡ್ತೀನಿ' ಎಂದು ಆಶ್ವಾಸನೆ ಕೊಟ್ಟ. ಸಧ್ಯ, ಬಡಗಿಯಿಂದಾದ್ರೂ ಈ ಜಗಳ ಇತ್ಯರ್ಥವಾಗಲಿ ಎಂದುಕೊಂಡ ರೋಜಕ್ಕ ಮನೆಗೆ ಮರಳಿದರು.
ಒಂದೆರಡು ದಿನಗಳಾದ ಮೇಲೆ ರಾಯಪ್ಪಾಚಾರಿ ಕ್ರಿಸ್ಮಸ್ ಕೊಟ್ಟಿಗೆ ಸಿದ್ದವಾಗಿದೆ ಬಂದು ತಗೊಂಡು ಹೋಗಿ ಎಂದು ಫೋನ್ ಮಾಡಿದ. ರೋಜಕ್ಕನ ಜೊತೆ ನಾನೂ ಆಚಾರಿಯಂಗಡಿ ಕಡೆ ಹೊರಟೆ. ಎರಡು ಕ್ರಿಸ್ಮಸ್ ಕೊಟ್ಟಿಗೆಗಳು ಅಲ್ಲಿದ್ದವು. ಆ ಕೊಟ್ಟಿಗೆಯ ಮುಂದಿನ ಗೇಟು .. ಅದೇ ತಿರುಗಣಿ ಮುರಿದು ವಾಲಿತ್ತಲ್ಲ ಅದು .. ಎರಡರಲ್ಲೂ ಅದು ವಾಲಿಕೊಂಡಿತ್ತು. ಯಾವುದು ಹೊಸದು, ಯಾವುದು ಹಳೆಯದು ಎಂಬುದು ಗೊತ್ತೇ ಆಗುತ್ತಿರಲಿಲ್ಲ.. ರಾಯಪ್ಪಾಚಾರಿ ತನ್ನ ಕೆಲಸದ ಬಗ್ಗೆ ಅಭಿಮಾನದಿಂದ ಮಾತಾಡುತ್ತಾ'ಎರಡೂ ಒಂದೇ ತರಾ ಇರ್ಬೇಕು ಅಂದಿದ್ರಲ್ವಾ, ಅದಕ್ಕೇ ಒಂದರಲ್ಲಿ ಏನೇನು ಊನ ಇತ್ತೋ ಅದನ್ನೆಲ್ಲಾ ಇನ್ನೊಂದರಲ್ಲೂ ಮಾಡಿದೆ' ಎನ್ನುತ್ತಿರುವಾಗ ರೋಜಕ್ಕ ಉದ್ವೇಗದಿಂದ ಕಣ್ದುಂಬಿಕೊಂಡು, 'ಕ್ರಿಸ್ಮಸ್ ಕೊಟ್ಟಿಗೆಯ ಕಾರಣದಿಂದ ಯಾವುದೇ ಮನೆಯಲ್ಲಿ ಜಗಳ ಬರಬಾರದು ಕಣಪ್ಪ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀಯ, ಅದಕ್ಕೇ ನಾವು ನಿನ್ನ ಹತ್ತಿರ ಬಂದಿದ್ದು. ನೀನೆಷ್ಟು ದುಡ್ಡು ಕೇಳಿದ್ರೂಕೇಳಿದ್ರೂ ಕೊಡ್ತೀನಿ,ಎಷ್ಟಾಯತ್ತಪ್ಪಾ' ಎಂದರು.
‘ಅಯ್ಯೋ ಬೇಡಮ್ಮಾ, ಈ ಕೆಲಸ ಸುರು ಮಾಡ್ದಾಗಿಂದ ನನ್ನ ಮನಸಿನಲ್ಲಿ ಏನೋ ಒಂಥರಾ ನೆಮ್ಮದಿ ಕಣಮ್ಮ' ಎಂದ ರಾಯಪ್ಪಾಚಾರಿ, ‘ಮರದಲ್ಲಿ ಏನೂ ಗಂಟು ಟೊಳ್ಳು ಇಲ್ದೇ ಸಲೀಸಾಗಿ ಕೆಲಸ ನಡೆದೋಯ್ತು, ನನಗೆ ಏನೂ ಬೇಡ ಕಣಮ್ಮ, ಈ ಕ್ರಿಸ್ಮಸ್ ಕೊಟ್ಟಿಗೆಯಿಂದ ಒಂದು ಕುಟುಂಬದಲ್ಲಿ ಶಾಂತಿ ಸಮಾಧಾನ ಬರುವುದಾದರೆ ಅಷ್ಟೇ ಸಾಕು' ಎಂದ. ಮರದ ಬೆಲೆನಾದ್ರು ತಗೋ ಅನ್ತ ಎಷ್ಟು ಹೇಳಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ‘ಎಲ್ಲ ಕ್ರಿಸ್ಮಸ್ಸುಗಳಿಗಿಂತ ಈ ಸಲದ ಕ್ರಿಸ್ಮಸ್ ನಿಮಗೆ ತುಂಬಾ ಸಂತೋಷವಾಗಿರಲಿ ಕಣಮ್ಮ' ಎಂದು ಹಾರೈಸಿದ.
ಎರಡೂ ಕ್ರಿಸ್ಮಸ್ ಕೊಟ್ಟಿಗೆಗಳು ಮನೆಗೆ ಬಂದಾಗ ಎಲ್ಲರಿಗೂ ತುಂಬಾ ಖುಶಿಯಾಯಿತು. ಮೇರಕ್ಕ ರೋಜಕ್ಕನ ಕೈ ಹಿಡಿದುಕೊಂಡು ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡಾಗ ಇಬ್ಬರ ಕಣ್ಣಲ್ಲೂ ಹನಿ ತೊಟ್ಟಿಕ್ಕಿತು, ಅಲ್ಲದೆ ಮೇರಕ್ಕ ಹೊಸದಾಗಿ ಮಾಡಿಸಿದ ಕೊಟ್ಟಿಗೆ ತನಗೇ ಇರಲೆಂದೂ, ಸಹನಾಳಿಗೆ ಅಮ್ಮನ ಹಳೆಯ ಕ್ರಿಸ್ಮಸ್ ಕೊಟ್ಟಿಗೆಯನ್ನೇ ಕೊಡಬೇಕೆಂದೂ ಹೇಳಿದರು. ಎಲ್ಲರಿಗೂ ಒಂಥರಾ ನಿರಾಳವೆನಿಸಿತು. ಎರಡು ದಿನಗಳಿಂದ ಸ್ಮಶಾನ ಮೌನ ಆವರಿಸಿದ್ದ ಮನೆಯಲ್ಲಿ ಮತ್ತೆ ಲವಲವಿಕೆಯ ಗಾನ ತೇಲಿಬಂತು.
-0--0--0--0--0--0-
No comments:
Post a Comment