- ಸಿಎಂಜೆ
ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತವಿದ್ದಲ್ಲಿ ಮತ್ತು ಕ್ಷಮೆ ಇರುತ್ತದೆ, ದೇವರು ದಯಾಮಯ ಎಂಥವರನ್ನೂ ಕ್ಷಮಿಸದೆ ಬಿಡಲಾರ, ಪಾಪಿಗಳ ಮೇಲೆ ಅವನಿಗೆ ಪ್ರೀತಿ ಹೆಚ್ಚು, ತೊಂಬತ್ತೊಂಬತ್ತು ನಿಯತ್ತಿನ ಕುರಿಗಳಿಗಿಂತ ತಪ್ಪಿಹೋದ ಒಂದೇ ಕುರಿಯನ್ನು ಹುಡುಕಿ ಕರೆತರುವ ಅವನ ಕಾಳಜಿ ಅನನ್ಯ ಎಂದಿದ್ದಾರೆ ಪ್ರಭುಯೇಸು. ``ದೇವರು ನಮ್ಮಲ್ಲಿರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ'' (ಯಕೋಬ 4: 5) ಆದ್ದರಿಂದ ಕ್ರೈಸ್ತಧರ್ಮದಲ್ಲಿ ಪ್ರಾಯಶ್ಚಿತ್ತಕ್ಕೆ ಒಂದು ಪ್ರಮುಖ ಸ್ಥಾನವಿದೆ. ಯೇಸುಸ್ವಾಮಿಯನ್ನು ಶಿಲುಬೆಗೇರಿಸಿದಾಗ ಅವರ ಬದಿಯಲ್ಲಿ ಮತ್ತಿಬ್ಬರು ಅಪರಾಧಿಗಳನ್ನೂ ಶಿಲುಬೆಗೇರಿಸಲಾಗಿತ್ತು. ಅವರಲ್ಲೊಬ್ಬ ತನ್ನ ತಪ್ಪುಗಳಿಗಾಗಿ ಪ್ರಾಯಶ್ಚಿತ್ತಪಟ್ಟು 'ಸ್ವಾಮೀ ನೀವು ಪರಂಧಾಮದಲ್ಲಿರುವಾಗ ನನ್ನನ್ನು ಜ್ಞಾಪಕ ಮಾಡಿಕೊಳ್ಳಿ' ಎಂದು ಬಿನ್ನವಿಸಿದಾಗ ಯೇಸು ಅವನಿಗೆ ಅಭಯ ನೀಡುತ್ತಾರೆ. ಹೀಗೆ ಬದುಕಿದ್ದಾಗ ಅವನು ಏನೆಲ್ಲ ದುಷ್ಕಾರ್ಯಗಳನ್ನು ಮಾಡಿದ್ದರೂ ಸಾಯುವ ಮುನ್ನ ಪ್ರಾಯಶ್ಚಿತ್ತಪಟ್ಟು ಯೇಸುವಿನಲ್ಲಿ ಪ್ರಾರ್ಥಿಸಿದ ಕಾರಣದಿಂದ ಅವನು ಸ್ವರ್ಗ ಸೇರಿದ. 'ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು’. (ಯೆಜೆಕಿಯೇಲ 18:21-22)
ಮಾನವರಾದ ನಮಗೆಲ್ಲರಿಗೂ ಒಂದಲ್ಲ ಒಂದು ಬಲಹೀನತೆ ಇರುತ್ತದೆ, ಹಾಗಾಗಿ ನಾವು ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪುಗಳಿಗಾಗಿ ನಾವು ದೇವರಲ್ಲಿ ಕ್ಷಮೆ ಯಾಚಿಸಿ ಪ್ರಾಯಶ್ಚಿತ್ತ ಪಟ್ಟು ಮತ್ತೆ ಆ ತಪ್ಪನ್ನು ಮರುಕಳಿಸದಿರುವುದೇ ನಿಜ ಕ್ರೈಸ್ತ ಜೀವನ. (ನೋಡಿ. ಲೂಕ 13: 3)
ಯೇಸು ತಮ್ಮ ಪ್ರೇಷಿತರನ್ನು ಸುವಾರ್ತೆ ಸಾರಲು ಕಳಿಸುತ್ತಾ: ``ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು, ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ ಅವರಿಗೆ ಕ್ಷಮಿಸದೆ ಉಳಿಸಲಾಗುವುದು'' (ಯೊವಾನ್ನ 20:23) ಎಂದಿದ್ದಾರೆ. ಇಂದು ಪ್ರೇಷಿತರ ಪ್ರತಿನಿಧಿಗಳಾಗಿರುವ ಗುರುಸ್ವಾಮಿಯವರ ಬಳಿ ನಾವು ಒಂದು ಗೊತ್ತಾದ ಸಮಯದಲ್ಲಿ ಗೊತ್ತಾದ ವಿಧಾನದಲ್ಲಿ ಪಾಪಗಳನ್ನು ನಿವೇದಿಸುವ ಮೂಲಕ ಅವರು ಸೂಚಿಸುವ ಪ್ರಾಯಶ್ಚಿತ್ತವನ್ನು ಈಡೇರಿಸಿ ಪಾಪಕ್ಷಮೆ ಹೊಂದುತ್ತೇವೆ.
ಇಲ್ಲಿ ಗುರುಗಳು ಯೇಸುಸ್ವಾಮಿಯ ತನ್ಮೂಲಕ ದೇವರ ಪ್ರತಿನಿಧಿಯಾಗಿರುತ್ತಾರಷ್ಟೆ. ಅವರು ಪಾಪನಿವೇದನೆಗೆಂದೇ ವಿಶೇಷವಾಗಿ ನಿರ್ಮಿಸಿದ ಮರದ ಗೂಡಿನಲ್ಲಿ ಆಸೀನರಾಗುತ್ತಾರೆ. ಅವರ ಕಿವಿಗಳ ಕಡೆ ಸಣ್ಣ ಜಾಲಂದ್ರದ ಕಿಟಕಿಯಿರುತ್ತದೆ. ಆಕಡೆಯಿಂದ ಕ್ರೈಸ್ತವಿಶ್ವಾಸಿಗಳು ಒಬ್ಬೊಬ್ಬರಾಗಿ ಬಂದು ಮೊಣಕಾಲೂರಿ ಗುರುಗಳ ಕಿವಿಗೆ ಕೇಳುವಂತೆ ತಮ್ಮ ತಪ್ಪುಗಳನ್ನು ನಿವೇದಿಸುತ್ತಾರೆ. ಅವರ ಮಾತಿಗೆ, ಬಿಕ್ಕುವಿಕೆಗೆ, ಅಳುವಿಗೆ, ಮೌನಕ್ಕೆ ಗುರುಗಳು ಸ್ಥಿತಪ್ರಜ್ಞ ಕಿವಿಯಾಗುತ್ತಾರೆ. ಬಂದವರಾರು, ಅವರ ಹೆಸರುಕುಲಗೋತ್ರಗಳೇನು ಎಂಬುದರ ಚಿಂತೆ ಅವರಿಗಿಲ್ಲ. ಭಕ್ತರು ಎಲ್ಲ ಹೇಳಿ ಮುಗಿಸಿದ ಮೇಲೆ ಅವರು ‘ಪ್ರಾಯಶ್ಚಿತ್ತವಾಗಿ ಮೂರು ಸಲ ನಮೋಮರಿಯಾ ಪ್ರಾರ್ಥನೆ ಹೇಳು, ಒಂದು ಸಾರಿ ಸ್ವರ್ಗದಲ್ಲಿರುವ ನಮ್ಮ ತಂದೆಯೇ ಪ್ರಾರ್ಥನೆ ಹೇಳು' ಎಂದು ಹೇಳಬಹುದು. ಗುರುಮಠಗಳಲ್ಲಿ ಕನ್ಯಾಮಠಗಳಲ್ಲಿ ಕೆಲವೊಮ್ಮೆ ಎಲ್ಲರ ತಟ್ಟೆಲೋಟ ತೊಳೆ, ಗಿಡಗಳಿಗೆ ನೀರು ಹಾಯಿಸು, ಬಟ್ಟೆಗಳಿಗೆ ಇಸ್ತ್ರಿ ಹಾಕು ಎಂದು ಹೇಳಬಹುದು. ಆದರೆ ಇವಾವುವೂ ನಾವು ಮಾಡಿದ ತಪ್ಪುಗಳಿಗೆ ತಕ್ಕನಾದ ಪ್ರಾಯಶ್ಚಿತ್ತವಲ್ಲ, ನಮ್ಮ ಮನದಲ್ಲಿ ಮೂಡುವ ಪಶ್ಚಾತ್ತಾಪದ ಭಾವನೆಯೇ ನಿಜವಾದ ಪ್ರಾಯಶ್ಚಿತ್ತ ಎಂಬುದನ್ನು ಮನಗಾಣಬೇಕು.
ಗುರುಗಳು ನಮ್ಮ ಸಂಬಂಧಿಕರೋ, ನಮ್ಮ ಧರ್ಮಕೇಂದ್ರದವರೋ, ಪರಿಚಿತರೋ ಎಂಬ ಭಾವನೆಯಿಂದ ಕೆಲವರು ಅವರಲ್ಲಿಗೆ ಹೋಗಿ ಪಾಪಗಳನ್ನು ನಿವೇದಿಸಲು ಹಿಂಜರಿಯುತ್ತಾರೆ. ಆದರೆ ಆ ಹಿಂಜರಿಕೆ ಅನಗತ್ಯ. ಏಕೆಂದರೆ ಪಾಪನಿವೇದನೆಯ ಗೂಡಿನಲ್ಲಿ ಗುರುಗಳು ಯಾವ ಪಕ್ಷಪಾತವಿಲ್ಲದೆ ನಿರ್ಲಿಪ್ತರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಾಪನಿವೇದನೆ ಆಲಿಸಲೆಂದೇ ಹೊರವೂರುಗಳಿಂದ ಗುರುಗಳನ್ನು ಆಹ್ವಾನಿಸಲಾಗುತ್ತದೆ. ಹಾಗೂ ಗುರುಗಳು ಪಾಪನಿವೇದನೆ ಕೇಳಲು ಮರದ ಗೂಡಿನ ಬದಲು ದೇವಾಲಯದ ಆವರಣದಲ್ಲೇ ಕುರ್ಚಿಯೊಂದರ ಮೇಲೆ ಕುಳಿತುಕೊಳ್ಳುತ್ತಾರೆ. ಕಳೆದ ಪವಿತ್ರವಾರದಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸರು ವ್ಯಾಟಿಕನ್ನಿನ ಸಂತ ಪೀಟರ್ ಚೌಕದಲ್ಲಿ ಸಾರ್ವಜನಿಕರಿಂದ ಪಾಪನಿವೇದನೆ ಆಲಿಸಲು ಕುರ್ಚಿ ಹಾಕಿ ಕುಳಿತರೆನ್ನುವುದು ಒಳ್ಳೆಯ ಉದಾಹರಣೆಯಾಗಿದೆ.
‘ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡುಬಿಟ್ಟರೆ ಕರುಣೆ ದೊರಕುವುದು' (ಜ್ಞಾನೋಕ್ತಿಗಳು 28:13). ಹಾಗೆಂದು ಎಲ್ಲೆಂದರಲ್ಲಿ ಯಾವಾಗೆಂದರೆ ಆವಾಗ ಪಾಪನಿವೇದನೆ ಸಾಧ್ಯವಿಲ್ಲ. ಪಾಪನಿವೇದನೆ ಆಲಿಸಲು ಸೂಕ್ತ ಅಧಿಕಾರವಿದ್ದ ಗುರುಗಳಲ್ಲಿ ಮಾತ್ರವೇ ಅದರಲ್ಲೂ ಸೂಕ್ತ ಸ್ಥಳ ಮತ್ತು ತಾಣದಲ್ಲಿ ಪಾಪನಿವೇದನೆ ಮಾಡಬೇಕು. ಗುರುಗಳೊಂದಿಗೆ ಲೋಕಾಭಿರಾಮವಾಗಿ ಹರಟುತ್ತಾ ತಪ್ಪುಗಳನ್ನು ಹೇಳಿಕೊಳ್ಳುವುದು ಪಾಪನಿವೇದನೆ ಅನಿಸಿಕೊಳ್ಳುವುದಿಲ್ಲ. ಅದೇ ರೀತಿ ಯಾರಾದರೂ ತಾನು ಪಾಪನಿವೇದನೆ ಮಾಡಬೇಕೆಂದು ವಿನಂತಿಸಿಕೊಂಡರೆ ಗುರುಗಳು ತಮಗೆ ಪ್ರಾಯಶ್ಚಿತ್ತ ನೀಡುವ ಆ ಅಧಿಕಾರ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಿಬಿಡಬೇಕು.
ಅಧಿಕಾರವಿಲ್ಲದೇ ಪಾಪನಿವೇದನೆ ಆಲಿಸುವುದು ಗುರುಗಳಿಗೆ ಘೋರಪಾಪವಾಗುತ್ತದೆ. ಗುರುಗಳು ಯಾಜಕಾಭಿಷೇಕ ಪಡೆದ ನಂತರದ ಕೆಲ ದಿನಗಳು ಧರ್ಮಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಆಮೇಲೆ ಸೂಚಿತ ಗುರುಮಠದಲ್ಲಾಗಲೀ ಧರ್ಮಾಧ್ಯಕ್ಷರಲ್ಲಾಗಲೀ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರೀಕ್ಷೆ ತೇರ್ಗಡೆಯಾದ ನಂತರವಷ್ಟೇ ಅವರಿಗೆ ಆ ಅಧಿಕಾರ ನೀಡಲಾಗುತ್ತದೆ. ಕೆಲವೊಮ್ಮೆ ಆ ಅಧಿಕಾರವನ್ನು ಮತ್ತೆ ಮತ್ತೆ ನವೀಕರಿಸಿಕೊಳ್ಳುವ ಷರತ್ತೂ ಇರುತ್ತದೆ.
ತಪ್ಪು ಮಾಡಿದವನೊಬ್ಬ ತನ್ನಲ್ಲಿ ನಿವೇದಿಸಿಕೊಂಡದ್ದು ಎಂದೂ ಒಡೆಯಲಾಗದ ಗುಟ್ಟಾಗಿ ಗುರುಗಳ ಬಳಿ ಉಳಿಯುತ್ತದೆ. ಪ್ರಾಣಹೋಗುವ ಸಂದರ್ಭ ಬಂದರೂ ಅವರು ಅದನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ, ಹೇಳಿಕೊಳ್ಳಬಾರದು. ಆದ್ದರಿಂದ ಯಾರು ಬೇಕಾದರೂ ನಿಶ್ಚಿಂತರಾಗಿ ಗುರುಗಳ ಬಳಿ ಪಾಪಗಳನ್ನು ಹೇಳಿಕೊಂಡು ಪ್ರಾಯಶ್ಚಿತ್ತಪಟ್ಟು ಮನವನ್ನು ಹಗುರ ಮಾಡಿಕೊಳ್ಳಬಹುದು. ಹಾಗೂ ನಿಜಕ್ರೈಸ್ತರಾಗಿ ಒಳ್ಳೆಯ ಜೀವನ ನಡೆಸಬಹುದು, ಮಾತ್ರವಲ್ಲ ಮನಪರಿವರ್ತನೆಯ ಕಾರಣದಿಂದ ದೇವರೊಂದಿಗೆ ನಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ.
ಪಾಪನಿವೇದನೆಯ ಸಂಸ್ಕಾರವನ್ನು ಕೊಡಮಾಡಲು ವಿಶೇಷವಾದ ಸಂದರ್ಭವೇನೂ ಇರುವುದಿಲ್ಲ. ಬಾಲಕಬಾಲಕಿಯರು ಹೊಸದಾಗಿ ಪರಮಪ್ರಸಾದ ಸ್ವೀಕರಿಸುವ ಮುನ್ನ ಅವರ ಪೂರ್ವಪಾಪಗಳನ್ನು ತೊಳೆದು ಮನವನ್ನು ಪರಿಶುದ್ಧಗೊಳಿಸುವ ಸಲುವಾಗಿ ಹೊಸಪರಮಪ್ರಸಾದದ ಹಿಂದಿನ ಸಂಜೆ ಅವರು ಈ ಸಂಸ್ಕಾರವನ್ನು ತಾವಾಗಿ ಅಳವಡಿಸಿಕೊಳ್ಳುತ್ತಾರೆ.
-0--0--0--0--0--0-
No comments:
Post a Comment