ಮಠಕ್ಕೂ ಒಂದು ಪತ್ರ
ಮಠಮಾನ್ಯರೇ,
ಬಸವಕಲ್ಯಾಣದಿಂದ ಹೊರಡುವ ದಿನ ನಾನು ಅನುಭವ ಮಂಟಪ ನೋಡಿದೆ. ಅಲ್ಲಿ ಅಲ್ಲಮನ ಬದಲು ಬಸವಣ್ಣ ಹಾಗೂ ಅಕ್ಕಪಕ್ಕದಲ್ಲಿ ನಾಗಲಾಂಬಿಕೆ ಗಂಗಾಂಬಿಕೆ ನೋಡಿ ಅವಕ್ಕಾದೆ. ಶ್ರೀಮತಿ ಮಾತೆ ಮಹಾದೇವಿಯವರು ಬಸವಣ್ಣನವರ ಅಂಕಿತ ತಿದ್ದಿ ದಡ್ಡತನ, ಮೂರ್ಖತನ ತೋರಿಸಿಕೊಂಡಿದ್ದರೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮನ ಸ್ಥಾನದಲ್ಲಿ ಬಸವಣ್ಣನನ್ನು ಇಟ್ಟು ವಚನಯುಗದ ಜೀವ(ಸ್ಪಿರಿಟ್)ತಿದ್ದಿ ವಿರೂಪಗೊಳಿಸಲಾಗಿದೆ ಅನ್ನಿಸಿತು. ಮಾತೆ ಮಹಾದೇವಿಯವರು ಮಾಡಿದ ಕಳಂಕದ ನೂರರಷ್ಟು ಇದು ಅನ್ನಿಸಿತು.
ಆಮೇಲೆ ವಚನಗಳಲ್ಲಿ ಮೂಡುವ ಧರ್ಮಪ್ರವರ್ತಕ ಬಸವಣ್ಣನಿಗೂ ಈಗ ಫೋಟೋಗಳ ಮೂಲಕ ಹೆಚ್ಚು ಪ್ರಚಲಿತಗೊಳಿಸುತ್ತಿರುವ ಕಿರೀಟಿ ಬಸವಣ್ಣನಿಗೂ ಏನೇನೂ ಸಂಬಂಧವಿಲ್ಲ ಅನ್ನಿಸುತ್ತದೆ. ಪಂಚಾಚಾರ್ಯರ ಕಿರೀಟದ ಮುಂದೆ ತಮ್ಮವನದೂ ಕಮ್ಮಿಯಿಲ್ಲ ಎಂಬ ಅಸಹಾಯಕತೆ ಕೀಳರಿಮೆಯಿಂದ ಹುಟ್ಟಿಕೊಂಡ ವ್ಯಕ್ತಿಚಿತ್ರ ಕಿರೀಟಿ ಬಸವಣ್ಣ ಇರಬೇಕು. ಕಿರೀಟದವರು ಈ ಭೂಮಿ ಮೇಲೆ ಕೋಟಿ ಕೋಟಿ ಆಗಿ ಹೋಗಿರಬಹುದು. ಆದರೆ ಉಳಿದಿರುವವರು ಬೆತ್ತಲೆಗೆ ಹತ್ತಿರದವರು ಎಂಬುದು ತಮಗೆ ತಿಳಿದಿದೆ. ನನಗೆ ಕೊಟ್ಟಿದ್ದ ಬಸವಣ್ಣನ ಪೋಟೋ ಅಲ್ಲೆ ಬಿಟ್ಟುಬಂದೆ, ಕ್ಷಮಿಸಿ. ಈ ಸಂದರ್ಭದಲ್ಲಿ, ಅಸಾಧ್ಯವಲ್ಲ ಎಂದುಕೊಂಡು ನನ್ನ ಒಂದೆರಡು ಅನಿಸಿಕೆಗಳನ್ನು ತಮ್ಮ ಮುಂದಿಡುವೆ.
1. ತಮ್ಮ ಸಂಸ್ಥೆಗಳಲ್ಲಿ ಅಂತರ್ಜಾತಿ ವಿವಾಹಿತರು, ಅವರ ಮಕ್ಕಳುಗಳಿಗೆ ಉದ್ಯೋಗ ಶಿಕ್ಷಣದಲ್ಲಿ ಕನಿಷ್ಟ 5%ರಷ್ಟು ಮೀಸಲಾತಿ ತಂದು ಸರ್ಕಾರಕ್ಕೂ ತಾವು ಮಾರ್ಗದರ್ಶಿಯಾಗಲು ಸಾಧ್ಯವೆ?
2. ಹಿಂದೆ ಇಡೀ ಸಮಾಜವನ್ನು ಬ್ರಾಹ್ಮಣ ಮಠಗಳು ಪ್ರತಿನಿಧಿಸುತ್ತಿದ್ದವು. ಇತ್ತೀಚೆಗೆ ಮಧ್ಯಮ ಜಾತಿಗಳ ಮಠಗಳು ಪ್ರಬಲಗೊಂಡು ಬಹುಸಂಖ್ಯಾತ ಜನ ಈ ಮಠಗಳಿಗೆ ನಡೆದುಕೊಳ್ಳುತ್ತಿರುವುದರಿಂದ ಬ್ರಾಹ್ಮಣ ಮಠಗಳ ಅಹಂಗೆ ಪೆಟ್ಟು ಬೀಳುತ್ತಿದೆ ಅನ್ನಿಸುತ್ತಿದೆ. ಅದಕ್ಕಾಗಿ ಬ್ರಾಹ್ಮಣ ಮಠಗಳ ಅಹಂ ಇಡೀ ಸಮಾಜವನ್ನು ತಾನು ಪ್ರತಿನಿಧಿಸಬೇಕೆಂಬ ಮೇಲರಿಮೆ ಹುನ್ನಾರವಾಗಿ ಭಜರಂಗದಳ, ಸಂಘಪರಿವಾರಕ್ಕೆ ಆಶೀರ್ವಾದ ಮಾಡುತ್ತಿರುವಂತೆ ಕಾಣುತ್ತಿದೆ. ಹಿಂದುತ್ವ ಪರಿಕಲ್ಪನೆ ಪ್ರಬಲವಾದರೆ ಭಾರತದ ನೂರಾರು ಧರ್ಮಗಳು ಸಾವಿರಾರು ಸಂಪ್ರದಾಯಗಳು ತಂತಾನೇ ನಾಶವಾಗುವುದರಿಂದ ಮತ್ತೆ ಬ್ರಾಹ್ಮಣಶಾಹಿ ತನ್ನ ಮೇಲರಿಮೆ ಕಾಪಾಡಿಕೊಳ್ಳುವುದರ ಹವಣಿಕೆಯಾಗಿ ಇದು ನನಗೆ ಕಾಣಿಸುತ್ತಿದೆ. ಶ್ರೀ ಪೇಜಾವರರ ಚಲನವಲನಗಳೂ ನನಗೆ ಹೀಗೆ ಅನ್ನಿಸಲು ಕಾರಣವಾಯ್ತು. ಈ ಬಿಕ್ಕಟ್ಟಿನಲ್ಲಿ ಮೂಲಭೂತವಾದಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ಪ್ರತಿಕಾರ್ಯಕ್ರಮ ತೋರಿಸುತ್ತ ಏತಿಗೆ ಪ್ರೇತಿ ಅನ್ನುವುದು ಮೂಲಭೂತಗಳು ನಮ್ಮನ್ನೇ ಆಹಾರವಾಗಿಸಿಕೊಂಡು ಇನ್ನೂ ಕೊಬ್ಬಲು ಕಾರಣವಾಗಬಹುದು. ಬದಲಾಗಿ, ಇಂದು ದಿಕ್ಕಿಲ್ಲದ ನಿರುದ್ಯೋಗಿ ಜನಸಮುದಾಯ ಎತ್ತಗೆ ಬೇಕಾದರೂ ಎಳೆದ ಕಡೆ ಹೋಗುವ ಪರಿಸ್ಥಿತಿ ಇರುವುದರಿಂದ ಹಳ್ಳಿಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಉದಾ: ಆಯಾ ಊರಿನ ಜಲಸಂವರ್ಧನೆ, ಆಯಾ ಊರಿನ ಕಸಗೊಬ್ಬರದ ಪುನರ್ರಚನೆ, ಆಯಾ ಊರಿನ ಗ್ರಂಥಾಲಯ, ಪ್ರಾಥಮಿಕ ಶಿಕ್ಷಣ, ಆಸ್ಪತ್ರೆ-ನಿಗಾ ಕಾರ್ಯಕ್ರಮ; ಆಯಾ ಊರಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಒತ್ತಾಸೆ, ಇತ್ಯಾದಿ, ತಾಲ್ಲೂಕಿಗೆ ಒಂದು ಊರು ಆಯ್ದು ಆರಂಭಿಸಬಹುದು.
ಅನ್ನ ಅಕ್ಷರ ದಾಸೋಹ ಪರಂಪರೆಗೆ ಇದು ಸಾಧ್ಯವಿಲ್ಲವೆ?
- ಎದೆಗೆ ಬಿದ್ದ ಅಕ್ಷರ/ ದೇವನೂರ ಮಹಾದೇವ
ಮತಾಂಧರ ಮೆದುಳೊಳಗೆ / 117
No comments:
Post a Comment