- ಅಜಯ್ ರಾಜ್
ಖ್ಯಾತ ಫ್ರೆಂಚ್ ಕಾದಂಬರಿಕಾರ ವಿಕ್ಟರ್ ಹ್ಯೂಗೋನ ಪ್ರಸಿದ್ಧ ``ಲೇ ಮಿಸೆರಾಬ್ಲ್'' ಕೃತಿಯಿಂದ ಪ್ರೇರಿತಗೊಂಡು ಸ್ಕಾಟ್ಲೆಂಡಿನ ನಾಟಕಕಾರ ನಾರ್ಮನ್ ಮ್ಯಾಕಿನೆಲ್ ``ದಿ ಬಿಷಪ್ಸ್ ಕ್ಯಾಂಡಲ್ ಸ್ಟಿಕ್ಸ್'' ಎಂಬ ನಾಟಕವನ್ನು ರಚಿಸಿದ್ದಾನೆ. ಈ ನಾಟಕದಲ್ಲಿನ ಬಿಷಪರು ಕೊಡುಗೈ ದಾನಿ ಮತ್ತು ಜಗದ ಎಲ್ಲಾ ಜೀವಿಗಳಲ್ಲಿಯೂ ಒಳ್ಳೆಯತನವನ್ನು ಕಾಣುವ ಮಾನವತಾವಾದಿ. ಅವರÀ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಅನೇಕರು ಅವರÀಲ್ಲಿದ್ದ ಎಲ್ಲವನ್ನೂ ವಿವಿಧ ಕಾರಣಗಳನ್ನು ಹೇಳಿ ಪಡೆದುಕೊಳ್ಳುತ್ತಿದ್ದರು. ಅದೆಷ್ಟೋ ಬಾರಿ ಬಿಷಪರು ಅಂಥವÀರಿಂದ ಮೋಸ ಹೋಗಿರುತ್ತಾರೆ. ಈ ಕುರಿತು ತನ್ನ ತಂಗಿ ಹೇಳಿದಾಗಲೂ ಸಹ ಬಿಷಪರು ಕೋಪಗೊಳ್ಳುವುದಿಲ್ಲ. ಕೇಳಿಕೊಂಡು ಬಂದ ಯಾರನ್ನೂ ಆತ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಮೋಸ ಮಾಡಿದವರು ದೇವರಿಗೆ ಮತ್ತು ಅವರ ಅಂತರಂಗಕ್ಕೆ ಮೋಸ ಮಾಡುತ್ತಾರೆಯೇ ಹೊರತು ನನಗಲ್ಲ ಎಂಬ ಭಾವನೆಯನ್ನು ತಾಳಿ, ಬಂದವರಿಗೆಲ್ಲಾ ತನ್ನಲಿದ್ದುದ್ದೆಲ್ಲವನ್ನು ಕೊಡುತ್ತಿದ್ದ ಬಿಷಪರ ಬಳಿ ಈಗ ಉಳಿದಿದ್ದು ಮಾತ್ರ ಮರಣಶಯ್ಯೆಯಲ್ಲಿದ್ದ ಆತನ ತಾಯಿ ನೀಡಿದ್ದ ಮೇಣದಬತ್ತಿಗಳನ್ನು ಹಚ್ಚುವ ಕಂಬ.
ಅದೊಂದು ದಿನ ರಾತ್ರಿ ಬಿಷಪರು ಎಂದಿನಂತೆ ಪ್ರಾರ್ಥನೆ ಮಾಡಿ ಮಲಗುವ ಕೋಣೆಗೆ ಹೋಗುವಾಗ ಜೈಲಿನಿಂದ ತಪ್ಪಿಸಿಕೊಂಡ ಕಳ್ಳನೊಬ್ಬ ಕಿಟಕಿಯಿಂದ ಧುಮುಕಿ ಬಂಗಲೆ ಪ್ರವೇಶಿಸುತ್ತಾನೆ. ಕೈಯಲ್ಲಿ ಹರಿತವಾದ ಕತ್ತಿಯನ್ನು ಹಿಡಿದುಕಂಡಿದ್ದ ಅವನನ್ನು ನೋಡಿದರೂ ಬಿಷಪರು ಎದೆಗುಂದದೆ ಅವನನ್ನೇ ದಿಟ್ಟ್ಟಿಸಿ ನೋಡುತ್ತಾರೆ. ಆತನ ಕುರಿತು ವಿಚಾರಿಸಲಾಗಿ ಆತ ಕಾಯಿಲೆಯಿಂದ ನರಳುತ್ತಿರುವ ಹೆಂಡತಿಗಾಗಿ ಕಳ್ಳತನ ಮಾಡಿದನೆಂದೂ ಹಾಗೂ ಆ ಅಪರಾಧಕ್ಕೆ ಹತ್ತು ವರ್ಷಗಳ ಶಿಕ್ಷೆ ನೀಡಿದ್ದರಿಂದ ಈಗ ತಪ್ಪಿಸಿಕೊಂಡು ಬಂದೆನೆಂದೂ ಹೇಳುತ್ತಾನೆ. ಈತನ ಕಥೆ ಕೇಳಿ ಮರುಕಗೊಂಡ ಬಿಷಪರು ತನ್ನಲ್ಲಿದ್ದ ಕೊನೆಯ ವಸ್ತು ಮೇಣದಬತ್ತಿಯ ಕಂಬವನ್ನು ಆತನಿಗೆ ನೀಡುತ್ತಾರೆ.
ಇದಾದ ಕೆಲ ಸಮಯದ ನಂತರ ಪೋಲಿಸರು ಆತನನ್ನು ಹಿಡಿದು, ಆ ಮೇಣದಬತ್ತಿಯ ಕಂಬದೊಂದಿಗೆ ಬಿಷಪ್ಪರ ಬಳಿ ಕರೆತಂದಾಗ ಬಿಷಪರು ಅದನ್ನು ತಾನೇ ನೀಡಿದ್ದಾಗಿಯೂ ಹಾಗೂ ಆತ ತನ್ನ ಸ್ನೇಹಿತನೆಂದೂ ಹೇಳುತ್ತಾರೆ. ಇದನ್ನು ಕೇಳಿದ ಪೊಲೀಸರು ಅಲ್ಲಿಂದ ಹೊರಡುತ್ತಾರೆ. ಆಗ ಆ ಕಳ್ಳ ಬಿಷಪ್ಪರ ಮಾನವೀಯತೆ ಮತ್ತು ಕರುಣೆಯನ್ನು ಕಂಡು ಕಣ್ಣೀರಿಟ್ಟು ಮನತಿರುಗುತ್ತಾನೆ.
ನಮ್ಮ ನೆಲದಲ್ಲೇ ನಡೆದ ಇಂತಹದ್ದೇ ಒಂದು ನೈಜ ಘಟನೆ ಬಹುಶಃ ಯಾರಿಗೂ ತಿಳಿದಿಲ್ಲವೆನಿಸುತ್ತದೆ. ಇದು ಮೈಸೂರಿನ ಖ್ಯಾತ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್ ಚಾಂಡಿಯವರ ಜೀವನದಲ್ಲಿ ನಡೆದ ನೈಜ ಘಟನೆ. ಆಗಷ್ಟೇ ಕಾಲೇಜಿನಲ್ಲಿ ಓದುತ್ತಿದ್ದ ಜೇಕಬ್‍ಗೆ ತನ್ನ ಸಹಪಾಠಿ ಆಶಾ ಎಂಬ ಹುಡುಗಿಯ ಮೇಲೆ ಪ್ರೀತಿ ಮೂಡುತ್ತದೆ. ಇವರಿಬ್ಬರ ಪ್ರೇಮಕತೆ ಅವರ ತಂದೆ ತಾಯಿಗಳಿಗೆ ತಿಳಿದು ವಿರೋಧ ವ್ಯಕ್ತವಾದಾಗ ಜೇಕಬ್ ಚಾಂಡಿ ತಾನು ಮದುವೆಯಾಗಲಿರುವ ಹುಡುಗಿ ಆಶಾಳನ್ನು ಕೇರಳದ ಒಂದು ಕಾನ್ವೆಂಟಿನಲ್ಲಿ ಕೆಲ ದಿನಗಳ ಮಟ್ಟಿಗೆ, ಅಂದರೆ ತನ್ನ ವಿದ್ಯಾಭ್ಯಾಸ ಮುಗಿದು ಒಂದು ನೌಕರಿ ಸಿಗುವವರೆಗೆ ಉಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ, ಆ ``ಕೆಲವು ದಿನಗಳು'' ದಿನೇ ದಿನೇ ಹೆಚ್ಚುತ್ತಾ ಹೋಗುದನ್ನು ಅರಿತ ಜೇಕಬ್‍ನ ಸ್ನೇಹಿತ ಅಶೋಕ್ ಲಾಜರ್ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್‍ನ ತಂದೆ ಪ್ರೊಫೆಸರ್ ವರ್ಗೀಸ್ ಚಾಂಡಿಯವರಿಗೆ ಇವರಿಬ್ಬರ ಪ್ರೇಮವನ್ನು ತಿಳಿಸಿ, ಕೇರಳದಲ್ಲಿ ಆ ಹುಡುಗಿ ಒಬ್ಬಳೇ ಯಾತನೆ ಅನುಭವಿಸುತ್ತಿರುವುದನ್ನು ವಿವರವಾಗಿ ತಿಳಿಸುತ್ತಾರೆ. ಈ ಪತ್ರದ ಒಂದು ಪ್ರತಿಯನ್ನು ಜೇಕಬ್ ಚಾಂಡಿಗೂ ಕಳುಹಿಸುತ್ತಾನೆ.
ಜೇಕಬ್ ಚಾಂಡಿ ತನ್ನ ಸ್ನೇಹಿತ ಕಳುಹಿಸಿದ ಆ ಪತ್ರವನ್ನು ತೆಗೆದುಕೊಂಡು ಅಂದಿನ ರಾತ್ರಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಅತಿ. ವಂ. ಡಾ. ಮಥಿಯಾಸ್ ಫರ್ನಾಂಡಿಸರ ಬಳಿಗೆ ಸಹಾಯಕ್ಕಾಗಿ ಧಾವಿಸುತ್ತಾನೆ. ತನ್ನಲಿದ್ದ ಪತ್ರವನ್ನು ತೋರಿಸಿ, ಈ ಮದುವೆಗೆ ತನ್ನ ತಂದೆಯನ್ನು ಒಪ್ಪಿಸಬೇಕೆಂದು ಬಿಷಪ್ ಮಥಿಯಾಸ್ ಫರ್ನಾಂಡಿಸರನ್ನು ಕೇಳಿಕೊಂಡಾಗ ಅವರು ಒಪ್ಪಿ ಆತನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆತನ ಮನೆಗೆ ತೆರಳುತ್ತಾರೆ. ಅಲ್ಲಿ ಹುಡುಗನ ತಂದೆ ವರ್ಗೀಸ್ ಚಾಂಡಿಯವರನ್ನು ಮಾತನಾಡಿಸಿದ ಬಿಷಪ್ ಮಥಿಯಾಸ್ ಫರ್ನಾಂಡಿಸರು ಜೇಕಬನ ಮದುವೆಗೆ ಒಪ್ಪಿಗೆ ಕೊಡಿ ಎಂದು ಮನವಿ ಮಾಡುತ್ತಾರೆ. ಸ್ವತಃ ಬಿಷಪ್ಪರೇ ತಮ್ಮ ಮನೆಗೆ ಬಂದುದನ್ನು ಕಂಡು ಚಕಿತರಾದ ವರ್ಗೀಸ್ ಚಾಂಡಿಯವರು ನೌಕರಿ ಇಲ್ಲದ ತಮ್ಮ ಮಗನಿಗೆ ಮದುವೆ ಮಾಡಿದರೆ ಆಗುವ ಕಷ್ಟಗಳ ಬಗ್ಗೆ ಬಿಷಪ್ಪರಿಗೆ ವಿವರಿಸುತ್ತಾರೆ. ಇದನ್ನು ಕೇಳಿದ ಬಿಷಪರು ``ನೀವು ಮದುವೆ ಮಾಡಿ. ಉಳಿದೆಲ್ಲವನ್ನು ದಯಾಮಯ ದೇವರು ನೋಡಿಕೊಳ್ಳುತ್ತಾರೆ'' ಎಂದು ಹೇಳಿ ಅಲ್ಲಿಂದ ಜೇಕಬ್ ಚಾಂಡಿಯ ಜೊತೆ ತಮ್ಮ ಬಂಗಲೆಗೆ ಹಿಂತಿರುಗುತ್ತಾರೆ.
ತಮ್ಮ ಬಂಗಲೆಗೆ ಬಂದ ನಂತರ ಬಿಷಪ್ ಮಥಿಯಾಸರು ತಮ್ಮ ಪರ್ಸ್ ಮತ್ತು ಕಿಸೆಯೆಲ್ಲಾ ಹುಡುಕಾಡಿದರೂ ಆ ಹುಡುಗನ ಸಹಾಯಕ್ಕಾಗುವಷ್ಟು ಹಣ ಅವರ ಬಳಿ ಇರುವುದಿಲ್ಲ. ಆಗ ಬಿಷಪ್ ಮಥಿಯಾಸ್ ಫರ್ನಾಂಡಿಸ್ ತಮ್ಮ ಕೊರಳಲ್ಲಿದ್ದ, ಬಿಷಪ್ಪರು ಸಾಂಕೇತಿಕವಾಗಿ ಧರಿಸಿಕೊಳ್ಳುವ ಚಿನ್ನದ ಶಿಲುಬೆಯನ್ನು ಆ ಹುಡುಗನಿಗೆ ನೀಡಿ, ``ಇದನ್ನು ಮಾರಿ, ಬಂದ ಹಣವನ್ನು ನಿನ್ನ ಮದುವೆಗೆ ಬಳಸಿಕೊ'' ಎಂದು ಹೇಳುತ್ತಾರೆ. ಬಿಷಪ್ಪರ ಈ ಮಾತುಗಳನ್ನು ಕೇಳಿದ ಹುಡುಗ ಒಂದು ಕ್ಷಣ ಮಾತೇ ಹೊರಡದೆ ನಿಂತು ಬಿಡುತ್ತಾನೆ. ``ನೋ ಮೈ ಲಾರ್ಡ್, ದಯವಿಟ್ಟು ಹೀಗೆ ಮಾಡಬೇಡಿ. ನೀವು ಧರಿಸಿಕೊಳ್ಳುವ ಪವಿತ್ರವಾದ ಈ ಶಿಲುಬೆಯನ್ನು ನಾನು ನನ್ನ ಅವಶ್ಯಕತೆಗಳಿಗೋಸ್ಕರ ಮಾರುವುದಿಲ್ಲ.'' ಎಂದು ಹೇಳಿ ಹೊರಗೆ ನಿಲ್ಲಿಸಿದ್ದ ತನ್ನ ಸೈಕಲ್ಲನ್ನು ಎತ್ತಿಕೊಳ್ಳಲು ಓಡುತ್ತಾನೆ. ಈತನ ಹಿಂದೆಯೇ ಬಿಷಪ್ ಮಥಿಯಾಸ್ ಫರ್ನಾಂಡಿಸ್ ಸಹ ಓಡಿಬರುವಷ್ಟರಲ್ಲಿ ಆ ಹುಡುಗ ಒಂದೇ ಉಸಿರಿನಲ್ಲಿ ಮನೆಗೆ ತೆರಳಿ ನಡೆದುದೆಲ್ಲವನ್ನು ತನ್ನ ತಂದೆ ತಾಯಿಗೆ ಹೇಳುತ್ತಾನೆ.
ನಡೆದುದೆಲ್ಲವನ್ನು ಕೇಳಿಸಿಕೊಂಡ ನಂತರ ಜೇಕಬ್ ಚಾಂಡಿಯ ಅಮ್ಮ ತನ್ನ ಮಗ ಬಿಷಪ್ಪರ ಶಿಲುಬೆಯನ್ನು ಮುಟ್ಟಲಿಲ್ಲ ಎಂದು ಸಂತೋಷ ಪಡುತ್ತಿರುವಾಗ, ಆತನ ತಂದೆ ವರ್ಗೀಸ್ ಚಾಂಡಿ, ನೀನು ಆ ರೀತಿ ಅವರಿಂದ ಅಗೌರವಯುತವಾಗಿ ಓಡಿ ಬಂದದ್ದು ತಪ್ಪು. ಅವರು ಪ್ರೀತಿಯಿಂದ ಕೊಟ್ಟದ್ದನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿ, ಬಿಷಪ್ಪರಲ್ಲಿ ಕ್ಷಮೆಯಾಚಿಸಿ ಬಾ ಎಂದು ತನ್ನ ಮಗನಿಗೆ ಹೇಳುತ್ತಾರೆ. ಆ ನಡುರಾತ್ರಿಯಲ್ಲೇ ಜೇಕಬ್ ತನ್ನ ಸೈಕಲ್ಲಿನಲ್ಲಿ ಬಿಷಪ್ಪರ ನಿವಾಸಕ್ಕೆ ಬಂದು ಬಿಷಪ್ ಮಥಿಯಾಸ್ ಫರ್ನಾಂಡಿಸರಲ್ಲಿ ಕ್ಷಮೆ ಯಾಚಿಸಿದಾಗ, ಕೋಪದಿಂದಲೇ ಬಿಷಪ್ ಮಥಿಯಾಸ್ ಫರ್ನಾಂಡಿಸರು ಅವರ ಚಿನ್ನದ ಶಿಲುಬೆ ಮತ್ತು ಆಶೀರ್ವಾದವನ್ನು ನೀಡುತ್ತಾರೆ. ಈ ಮೂಲಕ ಜೇಕಬ್ ಚಾಂಡಿಗೆ ``ಶಿಲುಬೆಯ ಭಾರ'' ವರ್ಗಾವಣೆಯಾಗುತ್ತದೆ. ಕ್ರಿಸ್ತನನ್ನೂ ಆತನ ಶಿಲುಬೆಯನ್ನು ಹೊತ್ತುಕೊಳ್ಳುವ ಸಂದಿಗ್ಧಕ್ಕೆ ಆ ಹುಡುಗ ಬೀಳುತ್ತಾನೆ.
ಮರುದಿನವೇ ಕೊಚ್ಚಿನ್‍ಗೆ ಬಸ್ಸು ಹತ್ತಿ ಗೆಳೆಯ ಅಶೋಕನ ಮನೆಗೆ ಜೇಕಬ್ ಧಾವಿಸುತ್ತಾನೆ. ಅಲ್ಲಿಯೂ ಸಹ ಆತನಿಗೆ ಸಮಸ್ಯೆಗಳು ಎದುರಾಗುತ್ತವೆ. ತನ್ನ ಮದುವೆಗಾಗಿ ಬಿಷಪ್ಪರು ನೀಡಿದ ಆ ಚಿನ್ನದ ಶಿಲುಬೆಯನ್ನು ಮಾರಲು ಹೋದಾಗ, ಯಾರೂ ಅದನ್ನು ಕೊಳ್ಳಲು ತಯಾರಿರಲಿಲ್ಲ. ಅದನ್ನು ತನಗೆ ಖುದ್ದು ಬಿಷಪ್ಪರೇ ನೀಡಿದರು ಎಂದು ಹೇಳಿದರೂ ಯಾರೂ ನಂಬುತ್ತಿಲ್ಲ. ಅಲ್ಲಿದ್ದವರೆಲ್ಲಾ ಆ ಶಿಲುಬೆಯನ್ನು ಆತ ಕದ್ದಿದ್ದಾನೆ ಎಂದೇ ಭಾವಿಸುತ್ತಿದ್ದರು. ಮುಂದೇನು ಮಾಡುವುದು ಎಂದು ತೋಚದಿದ್ದಾಗ, ಗೆಳೆಯ ಅಶೋಕ್ ಲಾಜರನ ತಾಯಿ ಶ್ರೀಮತಿ ಲಾಜರ್ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದಾಗಿ ಹೇಳಿ, ಜೇಕಬ್ ಚಾಂಡಿಯ ಮದುವೆಗೆ ಒಂದಷ್ಟು ಹಣವನ್ನು ನೀಡುತ್ತಾರೆ. ಇದಾದ ನಂತರ ದಿನಾಂಕ ಜೂನ್ 19, 1967ರಂದು ಜೇಕಬ್ ಚಾಂಡಿಯ ಮದುವೆ ನಡೆದ ನಂತರ ಆ ಚಿನ್ನದ ಶಿಲುಬೆ ಸುರಕ್ಷಿತವಾಗಿ ಮತ್ತೊಮ್ಮೆ ಮೈಸೂರಿಗೆ ಮರಳುತ್ತದೆ. ಆಗ ಚಾಂಡಿ ಕುಟುಂಬ ಆ ಶಿಲುಬೆಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರಿಗೆ ಗೌರವಪೂರ್ವಕವಾಗಿ ಹಿಂದಿರುಗಿಸುತ್ತದೆ. ಮರಳಿ ತಮ್ಮ ಬಳಿಗೆ ಬಂದ ಆ ``ಶಿಲುಬೆ''ಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರು ಮುಂದಿನ 18 ವರ್ಷಗಳ ಕಾಲ, ಅಂದರೆ ತಾವು ಸಾಯುವವರೆಗೂ ಕೊರಳಲ್ಲಿ ಧರಿಸಿಕೊಂಡಿದ್ದರು. ತಮ್ಮ ಮರಣಶಯ್ಯೆಯಲ್ಲಿ ಮಲಗಿರುವಾಗ ತಮ್ಮ ಖಾಸಗಿ ವೈದ್ಯರಾದ ಡಾ. ಜಾವೇದ್ ನಯೀಮ್‍ರವರಿಗೆ ಆ ಚಿನ್ನದ ಶಿಲುಬೆಯನ್ನು ಕೊಟ್ಟು ಮುಂದಿನ ಮೈಸೂರು ಬಿಷಪ್ಪರಿಗೆ ಹಸ್ತಾಂತರಿಸುವಂತೆ ಕೇಳಿಕೊಳ್ಳುತ್ತಾರೆ. ಅವರ ಮರಣದ ನಂತರ ಸುದೀರ್ಘ ಎರಡೂವರೆ ವರ್ಷಗಳ ನಂತರ ಮೈಸೂರಿಗೆ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬೆಂಗಳೂರಿನ ನಮ್ಮ ಹಾರೋಬೆಲೆಯವರೇ ಆದ ಬಿಷಪ್ ಡಾ. ಫ್ರಾನ್ಸಿಸ್ ಮಿಖೇಲಪ್ಪನವರಿಗೆ ಆ ಚಿನ್ನದ ಶಿಲುಬೆಯನ್ನು ಡಾ. ಜಾವೇದ್ ನಯೀಮ್ ಹಸ್ತಾಂತರಿಸುತ್ತಾರೆ.
-0--0--0--0--0--0-
No comments:
Post a Comment